ವಿಷಯದ ವಿವರಗಳಿಗೆ ದಾಟಿರಿ

ಜನವರಿ 8, 2016

ಪ್ರವಾಸಿಗರ ಸ್ವರ್ಗ ಮಧ್ಯ ಯೂರೋಪ್‍ನ ಸುಂದರ ನಗರಗಳ ಪ್ರವಾಸ

‍ನಿಲುಮೆ ಮೂಲಕ

– ಅಗರ ಪ್ರಸಾದ್‍ರಾವ್

ಪ್ರಾಗ್ಈ ಬಾರಿಯ ಬೇಸಿಗೆ ಪ್ರವಾಸವನ್ನು ಯೂರೋಪ್‍ನಲ್ಲಿ ಕಳೆಯಲೆಂದು ನಾನು ಮತ್ತು ಕುಟುಂಬ ವರ್ಗದವರು ಹಾಗೂ ಸ್ನೇಹಿತರೊಂದಿಗೆ ತೀರ್ಮಾನಿಸಿ ಮೇ 2015 ತಿಂಗಳಲ್ಲಿ ಮಧ್ಯ ಯೂರೋಪ್‍ನ ದೇಶಗಳಾದ ಸಿ-ಝೆಕ್, ಸ್ಲೊವೊಕಿಯ, ಹಂಗೇರಿ ಮತ್ತು ಆಸ್ಟ್ರಿಯ ಪ್ರವಾಸವನ್ನು (ಭಾರತೀಯರು ಅತಿ ಕಡಿಮೆ ವೀಕ್ಷಿಸುವ ದೇಶಗಳು) ಬೆಂಗಳೂರಿನಿಂದ ಆರಂಭಿಸಿ ಮುಂಬೈ, ಅಬುದಾಬಿ ಮುಖಾಂತರ ಆಸ್ಟ್ರಿಯ ರಾಜಧಾನಿಯಾದ ವಿಯೆನ್ನಾ ತಲುಪಿ ಅಲ್ಲಿಂದ ನಮ್ಮ ಪ್ರವಾಸವನ್ನು ಆರಂಭಿಸಿದೆವು.

ಮೊದಲನೆ ದಿನ, ವಿಯೆನ್ನಾದಿಂದ ಬಸ್ಸಿನಲ್ಲಿ ನಮ್ಮ ಪ್ರಯಾಣವನ್ನು ಸಿ-ಝೆಕ್ ನ ರಾಜಧಾನಿಯಾದ “ಪ್ರಾಗ್” (ಪ್ರಾಹ) ಕ್ಕೆ ಮುಂದುವರೆಸಿದ ನಮಗೆ ರಸ್ತೆಯ ಇಕ್ಕೆಲಗಳ ಆ ಸುಂದರ ಹಸಿರಿನಿಂದ ಮತ್ತು ಹಳದಿ ಬಣ್ಣದಿಂದ ಕೂಡಿದ ಸಾಸಿವೆ, ಬಾರ್ಲಿ ಮತ್ತು ಗೋಧಿ ಹೊಲಗಳು ಕಣ್ಣಿಗೆ ಹಬ್ಬವೆನಿಸಿ ನಾವು ಎಂದೋ ನೋಡಿದ ಹಿಂದಿ ಸಿನೆಮಾಗಳ ಹಾಡುಗಳು ನೆನಪಾಗುತ್ತಿದ್ದವು.ಎಷ್ಟು ನೋಡಿದರೂ ಕಣ್ತಣಿಯದ ಹಾಗೂ ಸಮಯದ ಪರಿವೆಯಿಲ್ಲದೆಯೇ 6 ಗಂಟೆಗಳ ಪ್ರಯಾಣ ಮುಗಿಸಿದ ನಾವುಗಳು ಪ್ರಾಗ್‍ನ ಹೋಟೆಲ್ ಕೋಣೆಯ ಕಿಟಿಕಿಯನ್ನು ತೆರೆದಾಗ ನಾವು ಅದೆಷ್ಟು ಸುಂದರ ಸ್ಥಳದಲ್ಲಿ ಇದ್ದವೆಂದು ಪುಳಕಿತವಾಯಿತು.

ಮುಂದಿನ ದಿನ ನಮ್ಮ ಪ್ರಯಾಣ ಪ್ರಾಗ್‍ನ ಸುಂದರ ಸ್ಥಳಗಳ ವೀಕ್ಷಣೆ, ಅದರಲ್ಲಿ ಮುಖ್ಯವಾದ “ ಓಲ್ಡ್ ಟೌನ್ ಚೌಕ, 600 ವರ್ಷಗಳಷ್ಟು ಹಳೆಯದಾದ ಮತ್ತು ಇಂದಿಗೂ ಚಲಿಸುತ್ತಿರುವ ಖಗೋಳ ಗಡಿಯಾರ, ವೆನ್‍ಸೆಲಾಸಸ್ ಚೌಕ ಮತ್ತು ಓಟಾವ ನದಿಗೆ ಅಡ್ಡಲಾಗಿ ಕಟ್ಟಿರುವ ಚಾರ್ಲಸ್ ಸೇತುವೆ, ಇನ್‍ಫೆಂಟ್ ಜೀಸಸ್ ಆಫ್ ಪ್ರಾಗ್ ಮತ್ತು ಪ್ರಾಗ್‍ನ ಹಳೆಯ ಕಾಲದ ಮನೆಗಳು ಮತ್ತು ಮಹಲ್‍ಗಳು, ಜರ್ಮನಿಯ ಹಿಡಿತದಿಂದ ಬೇರ್ಪಡೆಗೊಂಡು ಯುಗೋಸ್ಲಾವಕಿಯ ಪುನರ್ ವಿಂಗಡಣೆಗೊಂಡು (ವೆಲ್‍ವೆಟ್ ಕ್ರಾಂತಿಯೊಂದಿಗೆ) ಝೆಕ್ ಮತ್ತು ಸ್ಲೋವೋಕಿಯ ಸ್ವತಂತ್ರ ದೇಶಗಳಾಗಿ ಇಬ್ಭಾಗವಾದಾಗ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟು ಇಂದಿಗೂ ಜೀವನ ಶೈಲಿಯಲ್ಲಿ ಅದೇ ನೀತಿ ಅಳವಡಿಸಿಕೊಂಡಿರುವ ಜನರು ತುಂಬ ಶಿಸ್ತು ಮತ್ತು ಸಂಯಮದಿಂದ ಕೂಡಿರುತ್ತಾರೆ.ಪ್ರಾಗ್‍ನ ಸುಂದರ ಮತ್ತು 600 ವರ್ಷಗಳಿಗೂ ಹಳೆಯದಾದ ಕಟ್ಟಡಗಳನ್ನು ಇಂದಿಗೂ ಅತ್ಯಂತ ಸುಸ್ಥಿತಿ ಮತ್ತು ಸುಂದರವಾಗಿ ನಿರ್ವಹಣೆ ಮಾಡಿರುವ ಬಗೆ ನೋಡಿದರೆ ಎಂತವರಿಗೂ ಅಚ್ಚರಿ ಮತ್ತು ಅಸೂಯೆ ಮೂಡುತ್ತದೆ(ನಾವೇಕೆ ಈ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು).ಆ ಸುಂದರ ಹಳೆಯ ಕಟ್ಟಡಗಳು ಸ್ವಚ್ಛ ಮತ್ತು ಕಿರಿದಾದ ರಸ್ತೆಗಳು, ಶಿಸ್ತಿನ ಜನ ಮತ್ತು ಎಲ್ಲಿ ನೋಡಿದರೂ ಹಸಿರು ನಿಜಕ್ಕೂ ಅದ್ಭುತವೆನಿಸುತ್ತದೆ ಮತ್ತು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಈ ನಗರ ಸ್ಥಾನ ಪಡೆದಿದೆ.

ನಮ್ಮ ಮುಂದಿನ ಪಯಣ ಅಲ್ಲಿಂದ ಅತೀ ಹತ್ತಿರ ಇರುವ ಸ್ಲೊವೊಕಿಯಾ ರಾಜಧಾನಿಯಾದ ಬ್ರಾಟಿಸಲ್ವಾ ಎಂಬ ಪುಟ್ಟ ನಗರ 5 ಲಕ್ಷದಷ್ಟು ಜನಸಂಖ್ಯೆ ಇರುವ ಈ ನಗರ ಅತೀ ಚಿಕ್ಕ, ಚೊಕ್ಕ ಮತ್ತು ಸುಂದರ ನಗರವೆಂದರೆ ಅತಿಶಯೋಕ್ತಿಯಾಗಲಾರದು.ಈ ನಗರವು ಡ್ಯಾನುಬ್ ಎಂಬ ಯೂರೋಪ್‍ನ ಅತಿ ದೊಡ್ಡ ನದಿಯ ತಟದಲ್ಲಿದೆ.  ಇಲ್ಲಿನ ಸುಂದರ ಹಳೆಯ ಕಾಲದ ಕಟ್ಟಡಗಳು, ನಗರದಾಚೆಗಿನ ವೈನ್‍ಯಾಡ್‍ಗಳು ಮತ್ತು ಗತಕಾಲದ ಯೂರೋಪ್‍ನ ಸಂಸ್ಕೃತಿಯನ್ನು ತಿಳಿಸುವ ಓಲ್ಡ್ ಸಿಟಿ ಮ್ಯೂಸಿಯಂ ನೋಡಲೇಬೇಕಾದ ಸ್ಥಳಗಳು.ನೀರಿಗಿಂತ ಜಾಸ್ತಿ ಬಿಯರ್ ಸೇವಿಸುವ ಇಲ್ಲಿನ ಜನರು ಅದಕ್ಕಾಗಿ ಪ್ರತಿ ವರ್ಷ 15 ದಿನಗಳ ಬಿಯರ್ ಉತ್ಸವವನ್ನು ಆಚರಿಸುತ್ತಾರೆ.ಬ್ರಾಟಿಸಲ್ವಾದಿಂದ ಹೊರಟು ನಾವುಗಳು ಹಂಗೇರಿಯ ರಾಜಧಾನಿಯಾದ ಬುಡಾಪೆಸ್ಟ್‍ಗೆ ತಲುಪಿದಾಗ ಸರಿಸುಮಾರು ರಾತ್ರಿ 9 ಗಂಟೆಯಾಗಿತ್ತು.ಆಗ ತಾನೇ ಸೂರ್ಯ ಮುಳುಗಿ ಚಂದ್ರ ಕಾಣತೊಡಗಿದ್ದ (ಬೇಸಿಗೆಯಲ್ಲಿ ಯೂರೋಪ್‍ನಲ್ಲಿ ಸೂರ್ಯೋದಯ ಬೆಳಿಗ್ಗೆ 4-30 ಕ್ಕೆ ಮತ್ತು ಸೂರ್ಯಾಸ್ತ ರಾತ್ರಿ 8-30 ಕ್ಕೆ ಆಗುತ್ತದೆ.  ನಾವುಗಳು ನಮ್ಮ ಗೈಡ್‍ನ ಕೋರಿಕೆಯ ಮೇರೆಗೆ ಅಲ್ಲಿನ ಡ್ಯಾನುಬ್ ನದಿಯಲ್ಲಿ ಒಂದು ಗಂಟೆಯ ದೋಣಿ ಪಯಣಕ್ಕೆ ಹೊರಟೆವು.

ಆ ರಾತ್ರಿಯ ದೋಣಿ ಪಯಣವು ನಮ್ಮ ಜೀವನದ ಒಂದು ಸುಂದರ ಮತ್ತು ಮರೆಯಲಾರದ ಕ್ಷಣ ಅಂದರೆ ತಪ್ಪಾಗಲಾರದು.ನದಿಯ ಇಕ್ಕೆಲಗಳಲ್ಲೂ ಹಳೆಯ ನಗರವಾದ ಬುಡ ಮತ್ತು ನವೀನ ನಗರವಾದ ಪೆಸ್ಟ್ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿಕೊಂಡು ಬಳುಕುವ ಮದುವಣಗಿತ್ತಿಯಂತೆ ಕಂಡುಬರುತ್ತಿತ್ತು.ರಾತ್ರಿ ದೀಪಾಲಂಕಾರದಲ್ಲಿ ನೋಡಿದಂತಹ ಕಟ್ಟಡಗಳನ್ನು ಬೆಳಕಿನಲ್ಲಿ ನೋಡಿ ಆನಂದಿಸುವ ಸಮಯ, ಈ ನಗರವೂ ಸಹ ಯೂನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.ಕಾರಣ ಇಲ್ಲಿನ 800 ವರ್ಷಗಳಷ್ಟು ಹಳೆಯದಾದ ಇಂದಿಗೂ ಜನರು ವಾಸಿಸುವ ಸುಂದರ ಕಟ್ಟಡಗಳು ಮತ್ತು ಹಳೆಯ ಕಾಲದ ಕಿರಿದಾದ ಮತ್ತು ಸ್ವಚ್ಛ ಮತ್ತು ಸುಂದರ ರಸ್ತೆಗಳು ಡ್ಯಾನುಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಬರ್ಟಿ ಸೇತುವೆ, ಮಾರ್ಗರೆಟ್ ಸೇತುವೆ ಮತ್ತು ಕಬ್ಬಿಣದ ಸರಪಳಿಗಳಿಂದ 1849 ರಲ್ಲಿ ನಿರ್ಮಿಸಿದ ಸರಪಳಿ ಸೇತುವೆ, ನದಿಯ ದಡದಲ್ಲಿರುವ ದೊಡ್ಡ ದೊಡ್ಡ ಸುಂದರ ಹಳೆಯ ಭವನಗಳು, ಅಲ್ಲಿನ ಸುಂದರ ರೋಮನ್ ಶಿಲ್ಪಕಲೆಯನ್ನು ಒಳಗೊಂಡಿರುವ ಮನೆಗಳು, ಅರಮನೆ, ಅಲೆಕ್ಸಾಂಡರ್ ಅರಮನೆ ಮತ್ತು ರಾಷ್ಟ್ರಪತಿ ಭವನ ಎಲ್ಲವನ್ನು ಅತಿ ಹತ್ತಿರದಿಂದ ವೀಕ್ಷಿಸಿದೆವು.  ಇಲ್ಲಿನ ಟ್ರಿನಿಟಿ ಸ್ಕ್ವೇರ್ ಅತ್ಯಂತ ಸುಂದರ ಕಟ್ಟಡ ಹಾಗೆಯೇ ಮಥಾಯಿಸ್ ಚರ್ಚ್ 700 ವರ್ಷಗಳಷ್ಟು ಹಳೆಯದಾದ ಮತ್ತು ನಮ್ಮ ಬೆಂಗಳೂರಿನ ಟೌನ್‍ಹಾಲ್‍ನ್ನೇ ಹೋಲುವ ಟೌನ್‍ಹಾಲ್ ಮತ್ತು ಅಲ್ಲಿನ ಹೀರೋ ಸ್ಕ್ವೇರ್ ನೋಡಲೇಬೇಕಾದ ಸ್ಥಳಗಳು, ಇಲ್ಲಿನ ಕಟ್ಟಡಗಳ ಕುಶಲ ಕಲೆಗಳು ಮತ್ತು ನಿರ್ಮಿಸಿರುವ ರೀತಿ ಇಂದಿಗೂ ನವಪೀಳಿಗೆಯ ಅನೇಕ ವಾಸ್ತು ಪರಿಣಿತರಿಗೊಂದು ಸವಾಲೇ ಸರಿ ಮತ್ತು ನೂರಕ್ಕೂ ಹೆಚ್ಚಿನ ಬಿಸಿನೀರಿನ ಬುಗ್ಗೆಗಳನ್ನು ಹೊಂದಿರುವ ವಿಶ್ವದ ಏಕೈಕ ನಗರ ಬುಡಾಪೆಸ್ಟ್.

ನಮ್ಮ ಮುಂದಿನ ಪಯಣ ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾ.ಆಸ್ಟ್ರಿಯಾದ ಸುಂದರ ಆಲ್ಪ್ಸ್ ಪರ್ವತಗಳ ಮಧ್ಯ ಮತ್ತು ನೆರೆಯ ದೇಶಗಳಾದ ಜರ್ಮನಿ, ಸೆ-ಝೆಕ್, ಹಂಗೇರಿ ಮತ್ತು ಸೋವೆನಿಯಾ, ಇಟಲಿ ಮತ್ತು ಸ್ವಿಟ್ಜರ್‍ಲ್ಯಾಂಡ್ ಗಳ ಗಡಿ ಹೊಂದಿರುವ ರಾಜಧಾನಿಯಾದ ವಿಯೆನ್ನಾದಲ್ಲಿ ಹಳೆಯ ಕಾಲದ ಮರದ ಮನೆಗಳು ಮತ್ತು ಮನೆಯ ಮೇಲಿನ ದೊಡ್ಡ ಗಾತ್ರದ ಗಿಡಮರಗಳು ನೋಡುಗರಿಗೆ ಅಚ್ಚರಿ ಮೂಡಿಸುತ್ತವೆ.ಹಾಗೆಯೇ ಇಲ್ಲಿನ ಕಲಾತ್ಮಕವಾದ ಸೆಂಟ್ ಸ್ಟೀಫನ್ ಕೆಥಡ್ರೆಲ್ ಚರ್ಚ್ ಮತ್ತು 5 ಕಿ.ಮೀ. ಉದ್ದವಿರುವ ರಿಂಗ್‍ಸ್ಟ್ರೆಸ್  ರಸ್ತೆ ಮತ್ತು ಇಕ್ಕೆಲಗಳಲ್ಲಿರುವ ಅರಮನೆ, ಮ್ಯೂಸಿಯಂ ಮತ್ತು ಸರ್ಕಾರಿ ಕಛೇರಿಗಳು, ಇಲ್ಲಿನ ಓಪೇರ ಹಾಲ್, ಸ್ಟಾಕ್ ಎಕ್ಸ್‍ಚೇಂಚ್ ಇಲ್ಲಿನ ವಾಸ್ತುಕಲೆಯನ್ನು ತೋರಿಸುತ್ತದೆ.
ಹಾಗೆಯೇ 13ನೇ ಶತಮಾನದ ಸುಂದರ ಇಂಪೀರಿಯಲ್ ಅರಮನೆ ಮತ್ತು 1441 ಕೊಠಡಿಗಳುಳ್ಳ ಶೊಹೊಬ್ರನ್ ಅರಮನೆ ನೋಡಲೇಬೇಕಾದ ಸ್ಥಳಗಳು.

ಎಂಟು ದಿನಗಳ ಪ್ರವಾಸ ಮುಗಿಸಿದ ನಮಗೆ ಒಂದು ಸಂಗತಿ ಗೋಚರವಾಗುವುದು ಏನೆಂದರೆ, ಅಲ್ಲಿನ ಜನರು ಪಾಲಿಸುವ ಶಿಸ್ತು, ಸಂಯಮ, ಸ್ವಚ್ಛತೆ, ಅವರಿಗಿರುವ ಸಾರ್ವಜನಿಕ ಸ್ವತ್ತುಗಳ ಬಗೆಗಿನ ಕಾಳಜಿಯು ಹತ್ತಾರು ಸಣ್ಣ ಮತ್ತು 2 ವಿಶ್ವಯುದ್ಧಗಳಿಂದ ನಡುಗಿದ ಈ ದೇಶಗಳು ಇಂದಿಗೂ ಯೂರೋಪ್‍ನ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅಲ್ಲಿನ ಜನರೇ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು.

ಮಾಹಿತಿ:
ದೇಶಗಳು: ಆಸ್ಟ್ರಿಯಾ, ಸ್ಲೊವೋಕಿಯಾ, ಸಿ-ಝೆಕ್, ಹಂಗೇರಿ
ಆಹಾರ:  ಮಾಂಸಾಹಾರ ಮತ್ತು ಬಿಯರ್ ಸೇವೆ ಸ್ಥಳೀಯರಿಗೆ ಸರ್ವೆ ಸಾಮಾನ್ಯ ಆದಾಗ್ಯೂ ತಿಳಿಸಿದ ಎಲ್ಲ ನಗರಗಳಲ್ಲಿ ಉತ್ತಮ ಉತ್ತರ ಭಾರತೀಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ರೆಸ್ಟೋರೆಂಟ್‍ಗಳು ಲಭ್ಯವಿದೆ.ಅಲ್ಲದೇ ನಮ್ಮದೇ ರೆಡಿ ಟು ಈಟ್ ಆಹಾರ ಕೊಂಡೊಯ್ಯಬಹುದು.
ಸುರಕ್ಷತೆ : ರಸ್ತೆ ನಿಯಮಗಳನ್ನು ಪಾಲಿಸಿದರೆ ಅಲ್ಲಿನ ಓಡಾಟ ಅತಿ ಸುರಕ್ಷೆ.ಭಯಪಡುವ ಅಗತ್ಯವೇನಿಲ್ಲ.
ಭಾಷೆ  :  ಹೆಚ್ಚಾಗಿ ಸ್ಥಳೀಯ ಭಾಷೆಗಳನ್ನು ಮಾತನಾಡುವ ಜನ ಇಂಗ್ಲೀಷನ್ನು ಅರ್ಥ ಮಾಡಿಕೊಂಡು ವ್ಯವಹರಿಸುತ್ತಾರೆ.
ಹಣ ಮತ್ತು ವ್ಯವಹಾರ: ಎಲ್ಲ ದೇಶಗಳಲ್ಲೂ ಅವರದೇ ಆದ ಕರೆನ್ಸಿ ಚಲಾವಣೆಯಲ್ಲಿದೆ.  ಆದರೂ ಎಲ್ಲ ಕಡೆಯಲ್ಲೂ ಯೂರೋ ಗಳನ್ನು ಚಲಾವಣೆ ಮಾಡಬಹುದು.
ಹವಾಮಾನ : ಬೇಸಿಗೆ ಕಾಲವಾದ ಮೇ ನಿಂದ ಆಗಸ್ಟ್ ವರೆಗೆ ಉಷ್ಣಾಂಶ 18’ ಇಂದ 25’ ಡಿಗ್ರಿ ವರೆಗೂ ಇರುತ್ತದೆ ಮತ್ತು ಪ್ರವಾಸಕ್ಕೆ ಉತ್ತಮ ಕಾಲವಾಗಿರುತ್ತದೆ.
ಖರ್ಚು : ಈಗಿನ ರೂಪಾಯಿ ಮೌಲ್ಯದೊಂದಿಗೆ ಸರಿಸುಮಾರು 70 ರಿಂದ 80 ಸಾವಿರ ಒಬ್ಬರಿಗೆ ಆಹಾರ ಹೊರತುಪಡಿಸಿ
ಕೊನೆಯ ಮಾತು: ನಿರ್ದಿಷ್ಟ ಜೀವನ ಶೈಲಿಯ ಯೂರೋಪಿಯನ್ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಏಕೆ ಮಾಡಬೇಕು ಎನಿಸಿದರೆ ಸ್ವೇಚ್ಛೆ ಜೀವನ ಶೈಲಿಯ ನಾವುಗಳು ಗಲೀಜು ಮಾಡಿದರೆ ಏನಾಗುತ್ತದೆ ಎಂದು ಪ್ರಶ್ನಿಸುತ್ತೇವೆ.

ಚಿತ್ರಕೃಪೆ :praguepost.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments