ವಿಷಯದ ವಿವರಗಳಿಗೆ ದಾಟಿರಿ

ಜನವರಿ 8, 2016

2

ಫ್ರೀ ಬೇಸಿಕ್ಸ್ ಅಸಲಿತನ

‍ನಿಲುಮೆ ಮೂಲಕ

– ಲಹರಿ ಎಂ.ಹೆಚ್

ನೆಟ್ ನ್ಯೂಟ್ರಾಲಿಟಿಆ ಆಫೀಸಲ್ಲಿ ನಿಯಮವೊಂದಿತ್ತು. ಯಾರಾದರೂ ಕೆಲಸಕ್ಕೆ ರಜಾ ಹಾಕಿದ್ದಲ್ಲಿ ರಜಾ ಮುಗಿಸಿ ಕೆಲಸಕ್ಕೆ ಮರಳಿದ ನಂತರ ಅದಕ್ಕೆ ಕಾರಣವನ್ನು ಪುಸ್ತಕವೊಂದರಲ್ಲಿ ನಮೂದಿಸಬೇಕಾಗಿತ್ತು. ಒಮ್ಮೆ ಒಬ್ಬಳು ಮಹಿಳಾ ಉದ್ಯೋಗಿ ಮೂರು ದಿನಗಳ ರಜಾ ತೆಗೆದುಕೊಂಡಿದ್ದಳು. ಕೆಲಸಕ್ಕೆ ಮರಳಿದ ದಿನವೇ ಅವಳು ಪುಸ್ತಕದಲ್ಲಿ ಕಾರಣವನ್ನು ನಮೂದಿಸಿದಳು, ‘ಮುಟ್ಟಿನಿಂದಾಗಿ ಹೊಟ್ಟೆ ನೋವು’.

ಆ ಅವಧಿಯಲ್ಲಿ ಬೇರೆ ಕೆಲವು ಉದ್ಯೋಗಿಗಳೂ (ಪುರುಷರೂ ಕೂಡ) ಕಾರಣವಿಲ್ಲದೇ ಕೆಲಸಕ್ಕೆ ಚಕ್ಕರ್ ಹಾಕಿದ್ದರು. ಅವರೆಲ್ಲರಿಗೂ ಯಾವ ಕಾರಣವನ್ನು ಕೊಟ್ಟು ತಪ್ಪಿಸಿಕೊಳ್ಳುವುದು ಎಂದು ಬಗೆಹರಿಯಲಿಲ್ಲ. ಯಾವ ಉಪಾಯವೂ ಹೊಳೆಯದೇ ಹೀಗೆ ಮಾಡುವುದೇ ಒಳಿತೆನಿಸಿ ಪುಸ್ತಕದಲ್ಲಿ ‘ನಮ್ಮದೂ ಅದೇ’ ಎಂದು ಬರೆದು ಆ ಮಹಿಳೆಯ ಕೊಟ್ಟ ಕಾರಣವನ್ನೇ ಎಲ್ಲರೂ ನಕಲಿಸಿದರು. ಅವಳು ಬರೆದುದಾದರೂ ಏನು ಎಂಬುದನ್ನು ಯಾರೊಬ್ಬರೂ ಓದುವ ಗೋಜಿಗೆ ಹೋಗಲಿಲ್ಲ.

ಪ್ರತಿದಿನ ಫೇಸ್ ಬುಕ್ ತೆರೆದಾಗಲೂ ಒಂದು ನೋಟಿಫಿಕೇಷನ್ ‘chek out, chek out’ ಎಂದು ಕುಣಿಯುತ್ತಿರುತ್ತದೆ. ಅದೇನೆಂದು ಓದಹೋದರೆ ಕಾಣಿಸಿವುದು ಇಷ್ಟು, “A, B and 15 others sent message to TRAI about digital equality in India. You can too.” ನಮ್ಮಲ್ಲಿ ಈಗ ಹೊಸದೊಂದು ಚಟ ಶುರುವಾಗಿದೆ. ಕೈ, ಕಾಲು, ಗಂಟಲುಗಳಿಗೆ ಕೆಲಸ ಸಿಗಲೆನ್ನುವಷ್ಟು ಉತ್ಸಾಹ ಇದ್ದವರೂ ಬೀದಿಗಿಳಿದು ಪ್ರತಿಭಟನೆ, ಬಂದ್ ಎನ್ನುತ್ತಾ ಹೋರಾಟ ಮಾಡಿದರೆ, ಇದೆಲ್ಲದಕ್ಕೂ ಆಲಸಿತನ ತೋರುವವರು ಮೊಬೈಲ್, ಟ್ಯಾಬ್ಲೆಟ್, ಪಿಸಿಗಳಲ್ಲಿ ಪಿಟಿಷನ್, ಮೆಸೇಜ್ ಕಳಿಸುತ್ತಾ ಹೋರಾಡುತ್ತಾರೆ. ಹೇಗೆ ಹೋರಾಡುವವರಲ್ಲಿ ೭೫% ಮಂದಿಗೆ ಯಾತಕ್ಕಾಗಿ ಈ ಪ್ರತಿಭಟನೆ, ಬಂದ್, ಪಿಟಿಷನ್ ಎನ್ನುವ ಅಸಲಿ ಸಂಗತಿಯೇ ಗೊತ್ತಿರುವುದಿಲ್ಲ. ಒಬ್ಬರು ಮಾಡಿದರೆಂದು ಇನ್ನೊಬ್ಬರು ಮಾಡುತ್ತಾರೆ. ಅಲ್ಲಿಗೆ ಹೋರಾಟವೆನ್ನುವುದು ಹಾರಾಟವಾಗುತ್ತದೆ. ಪ್ರಸ್ತುತ TRAI ಗೆ ಸಂದೇಶ ಕಳಿಸುವ ವಿಚಾರದಲ್ಲಿ ೯೦% ಜನರದ್ದು ಮೇಲೆ ಉದಾಹರಿಸಿದ ‘ನಮ್ಮದೂ ಅದೇ’ ಎನ್ನುತ್ತಾ ಆ ಮಹಿಳೆಯನ್ನು ನಕಲು ಹೊಡೆದ ಸಹೋದ್ಯೋಗಿಗಳ ಕತೆಯೇ ಆಗಿದೆ.

ಆ ನೋಟಿಫಿಕೇಶನಿನಲ್ಲಿ ಇರುವುದಾದರೂ ಏನು..?? ಅದನ್ನು ಕ್ಲಿಕ್ ಮಾಡಿದ ಕೂಡಲೇ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲೇನು ಬರೆದಿದೆ..?? “Act Now to Save Free Basics in India. …………….. Send a message to the Telecom Regulatory Authority of India (TRAI) and tell them you support Free Basics in India.” ನಂತರದಲ್ಲಿ ಹೆಸರು, ಸಂದೇಶ ಎಂಬ ಕಾಲಮ್ಮುಗಳು. ಅದರ ಕೆಳಗಡೆ send email ಎಂಬ ಬಟನ್. ಅದನ್ನು ಒತ್ತಿದರೆ ಸಾಕು. ಫ್ರೀ ಬೇಸಿಕ್ಸ್ ಗೆ ನಮ್ಮ ಬೆಂಬಲವಿದೆ ಎನ್ನುವ ಸಂದೇಶ TRAI ಗೆ ರವಾನೆಯಾಗುತ್ತದೆ.

ಸುಮಾರು ಕಳೆದೊಂದು ತಿಂಗಳಿನಿಂದ ಅದೆಷ್ಟು ಮಂದಿ ಈ ಒಂದು ಸಂದೇಶವನ್ನು TRAI ಗೆ ಕಳಿಸಿದ್ದಾರೋ ಏನೋ. ಅವರೆಲ್ಲರಿಗೂ ಬಹುಶಃ ಹೆಮ್ಮೆಯೆನಿಸಿರುತ್ತದೆ. ‘ತಾನು ಅದ್ಯಾವುದಕ್ಕೋ ಬೆಂಬಲ ಕೊಟ್ಟೆನಲ್ಲ’ ಎಂದುಕೊಳ್ಳುತ್ತಾ ಒಂದು ಬಗೆಯ ತೃಪ್ತಿ ಹೊಂದಿರುತ್ತಾರೆ. ಆದರೆ ಸ್ವಾಮಿ, ನೀವು ಬೆಂಬಲ ನೀಡಿದ್ದು ನಮ್ಮ ದೇಶದ ಸರ್ಕಾರಕ್ಕೆ ವಿರುದ್ಧವಾಗಿ, ದೇಶದ ಜನತೆಯ ಹಿತರಕ್ಷಣೆಯ ವಿರುದ್ಧವಾಗಿ ಎಂಬ ಅರಿವು ನಿಮಗಿದೆಯೇ..?? ಎಂಥ ಅನಕ್ಷರಸ್ಥರಾದರೂ ಸರಿ, ಬೋರ್ಡ್ ಓದಲು ಬರದಿದ್ದರೂ ಬಸ್ ಹತ್ತುವ ಮುನ್ನ ಇನ್ನೊಬ್ಬರ ಬಳಿ ಈ ಬಸ್ ಎಲ್ಲಿಗೆ ಹೋಗುತ್ತದೆ ಎಂದು ಕೇಳುತ್ತಾರಲ್ಲವೇ..?? ಈಗಿನ ಮುಂದುವರೆದ ಜನರಿಗೆ ಆ ಸಂದೇಶವನ್ನು ಕಳಿಸಬೇಕಾದದ್ದು ಯಾವ್ ಪುರುಷಾರ್ಥಕ್ಕೆ ಎಂದು ಓದುವ ತಾಳ್ಮೆಯೂ ಇರಲಿಲ್ಲ, ಅದರ ತಲೆಬುಡವೇನೆಂದು ಇನ್ನೊಬ್ಬರ ಬಳಿ ಕೇಳಿ ತಿಳಿಯುವ ವ್ಯವಧಾನವೂ ಇರಲಿಲ್ಲ. ಬಸವನ ಮೂಗಿನಲ್ಲಿ ಬೆರಳು ಹಾಕಿದಂತೆ ಎನ್ನುವ ಗಾದೆಯಂತೆ ಎಲ್ಲರೂ ನಡೆದುಕೊಂಡರು.

ಫೇಸ್ ಬುಕ್ ನ ಹೊಸ ಯೋಜನೆಯಾದ ಈ ಫ್ರೀ ಬೇಸಿಕ್ಸ್ ಎಂಬುದು ಮೂಲ ಸೌಕರ್ಯವನ್ನು ಒದಗಿಸುವ ಸೋಗಿನಲ್ಲಿ ಹಣ ಮಾಡುವ, ಅದಕ್ಕಿಂತಲೂ ಹೆಚ್ಚಾಗಿ ಇಂಟರ್ ನೆಟ್ ಪೂರೈಕೆದಾರರ ಮೇಲೆ ತನ್ನ ಏಕ ಸಾಮ್ಯ ಪ್ರಭುತ್ವ ಸ್ಥಾಪಿಸುವ ಹುನ್ನಾರವಷ್ಟೆ. ಇದರ ಕುರಿತು ಪೂರ್ಣ ಅರಿವು ಹೊಂದಿರುವ ಭಾರತ ಸರಕಾರ ಫ್ರೀ ಬೇಸಿಕ್ಸ್ ಅನ್ನು ದೇಶದಲ್ಲಿ ನಿಷೇಧಿಸಿದೆ. ನಂತರದಲ್ಲಿ ದೇಶದ ಜನಾಭಿಪ್ರಾಯವನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡಬಹುದೆಂದು TRAI ಗೆ ಸಂದೇಶ ಕಳಿಸುವ ಅವಕಾಶವನ್ನು ಪ್ರಾರಂಭಿಸಿತು. ಇನ್ನು ಆರು ದಿನಗಳ ಕಾಲ ಅಂದರೆ ಜನೆವರಿ ೧೪ರ ತನಕ ಹೀಗೆ ಸಂದೇಶ ಕಳಿಸಲು ಅವಕಾಶವಿದೆ. ಬಹುಶಃ ಭಾರತೀಯರು ಸಾಕಷ್ಟು ಬುದ್ಧಿವಂತರು, ಅವರು ತಮಗೆ ವಿರುದ್ಧವಾಗಿ ಫ್ರೀ ಬೇಸಿಕ್ಸ್ ಗೆ ಬೆಂಬಲ ನೀಡಲಾರರು ಎಂದುಕೊಂಡಿತ್ತೇನೋ ನಮ್ಮ ಕೇಂದ್ರ ಸರಕಾರ. ಆದರೆ ಫೇಸ್ ಬುಕ್ ನ ಅಪ್ಪನಿಗೆ ಗೊತ್ತಿತ್ತು, ಭಾರತೀಯರು ಅಳಲೆಕಾಯಿ ಪಂಡಿತರೆಂದು. ಹಾಗಾಗಿ ಆತ ಈ ಸಂದೇಶ ಕಳಿಸುವ ಅವಕಾಶವನ್ನು ಸಮರ್ಥವಾಗಿ ತನ್ನ ಪರವಾಗಿ ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾದ. to support digital equality in India ಎಂದು ಓದಿದ್ದೇ ಜನರಿಗೆಲ್ಲಾ ಪ್ರಧಾನ ಮಂತ್ರಿ ಮೋದಿಯವರ Digital India ಯೋಜನೆ ಕಣ್ಣ ಮುಂದೆ ಕುಣಿಯಿತೇನೋ. ತಡಮಾಡದೇ ಸಂದೇಶ ಕಳಿಸಿಯೇ ಬಿಟ್ಟರು.

ದೇಶದಲ್ಲಿ ಫ್ರೀ ಬೇಸಿಕ್ಸ್ ಏನಾದರೂ ಜಾರಿಗೆ ಬಂದಿದ್ದೇ ಆದಲ್ಲಿ ಏನಾದೀತು ಗೊತ್ತೇ…??
೧. ಫೇಸ್ ಬುಕ್ ಗೆ ಇಂಟರ್ ನೆಟ್ ಪೂರೈಕೆಯಲ್ಲಿ ಸರ್ವಾಧಿಕಾರ ದೊರೆಯುತ್ತದೆ. ಅದರಿಂದಾಗಿ ಹಣದ ಹೊಳೆಯೇ ಫೇಸ್ ಬುಕ್ ಗೆ ಹರಿದು ಬರುತ್ತದೆ.
೨. ವಿದೇಶಿ ಕಂಪೆನಿಯೊಂದು ಹೇಗೆ ಮತ್ತು ಎಷ್ಟರ ಮಟ್ಟಿಗೆ ಇಂಟರ್ ನೆಟ್ ಬಳಸಬಹುದೆಂದು ಭಾರತೀಯರನ್ನು ನಿಯಂತ್ರಿಸುವಂತಾಗುತ್ತದೆ.
೩. ಲಾಭವೆಲ್ಲಾ ಫೇಸ್ ಬುಕ್ ಮತ್ತು ಇತರ ವಿದೇಶಿ ಷೇರುದಾರ ಕಂಪೆನಿಗಳಿಗೆ ಸೇರುವುದರಿಂದ ಭಾರತದ ಆರ್ಥಿಕತೆ ಕುಸಿಯುತ್ತದೆ.
೪. ಫ್ರೀ ಬೇಸಿಕ್ಸ್ ಜಾರಿಗೆ ಬಂದಿದ್ದೇ ಆದಲ್ಲಿ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ಫೇಸ್ ಬುಕ್ ಘೋಷಿಸಿರುವುದರಲ್ಲಿ ಹುರುಳಿಲ್ಲ. ಯಾಕೆಂದರೆ ಜಾಹೀರಾತುಗಳ ಬೆಂಬಲವಿಲ್ಲದೇ ಫೇಸ್ ಬುಕ್ ತನ್ನ ಕಾಲ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ.
೫. ದೇಶದ ಜನತೆಯ ಇಂಟರ್ ನೆಟ್ ಬಳಕೆಯನ್ನು ನಿಯಂತ್ರಿಸುವ ಯೋಜನೆಯಾದ ಫ್ರೀ ಬೇಸಿಕ್ಸ್ ನೆಟ್ ನ್ಯೂಟ್ರಾಲಿಟಿಯ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ.
೬. ಫ್ರೀ ಬೇಸಿಕ್ಸ್ ನಿಂದಾಗಿ ದೇಶದ ಗ್ರಾಮೀಣ ಜನತೆಗೆ ನಯಾ ಪೈಸೆ ಉಪಯೋಗವೂ ಇಲ್ಲ.

ನಮಗೆಲ್ಲರಿಗೂ ಫೇಸ್ ಬುಕ್ ಮತ್ತು ಟ್ವಿಟರ್ ನ ಟ್ರೆಂಡ್ ಎಂದು ಬಿಂಬಿಸಿಕೊಳ್ಳುವ ಕೆಲಸಕ್ಕೆ ಬಾರದ ವಿಷಯಗಳ ಕುರಿತಾಗಿ ಪೋಸ್ಟ್ಸ್, ಕಮೆಂಟ್ಸ್, ಸ್ಟೇಟಸ್ ಹಾಕುವುದರಲ್ಲೇ ಮುಳುಗಿಹೋಗುವುದರಲ್ಲೇ ಸಾರ್ಥಕ ಭಾವ. ಜೊತೆಗೆ ನೆಟ್ ನ್ಯೂಟ್ರಾಲಿಟಿಯ ಕುರಿತು ಎಲ್ಲಾ ಕಡೆಯೂ ಟ್ರೆಂಡ್ ಹುಟ್ಟಿಕೊಂಡರೂ ಫ್ರೀ ಬೇಸಿಕ್ಸ್ ಕುರಿತಾಗಿ ಎಲ್ಲಿಯೂ ಯಾವ ಟ್ರೆಂಡ್ ಕೂಡ ಹುಟ್ಟಿಕೊಳ್ಳದಂತೆ ಫೇಸ್ ಬುಕ್ ಜಾಗರೂಕತೆ ವಹಿಸಿತು. ಜುಕರ್ ಬರ್ಗ್ ಬಲು ಬುದ್ಧಿವಂತ. ಭಾರತೀಯರು (ಜನ ಸಾಮನ್ಯರು ಮತ್ತು ಮಾಧ್ಯಮದವರು ಎಲ್ಲರೂ) ಬೇಡದ ಸಂಗತಿಗಳನ್ನೇ ಎತ್ತಿ ಕುಣಿಯುವ, ಕಿರುಚುವ ವಾಸ್ತವ ಅವನಿಗೆ ಚೆನ್ನಾಗಿ ಗೊತ್ತು. ಅವುಗಳ ನೆರಳಲ್ಲಿ ಗಮನ ಹರಿಸಬೇಕಾದ ಗಂಭೀರ ವಿಷಯಗಳನ್ನು ಮರೆಮಾಚಿಸಬಹುದೆನ್ನುವ ಸತ್ಯವನ್ನೂ ಅವನು ಬಲ್ಲ. ಈ ಸತ್ಯ ಮತ್ತು ವಾಸ್ತವಗಳನ್ನು ಚೆನ್ನಾಗಿಯೇ ಬಳಸಿಕೊಂಡ.

ಇನ್ನು ಮುಂದಾದರೂ ದಯವಿಟ್ಟು ಯಾರೊಬ್ಬರೂ TRAI ಗೆ ಸಂದೇಶ ಕಳಿಸಬೇಡಿ. ಫ್ರೀ ಬೇಸಿಕ್ಸ್ ನ ಅಸಲಿತನವನ್ನು ನೀವೂ ಅರಿತುಕೊಳ್ಳಿ, ಇತರರಿಗೂ ಅರಿವು ಮೂಡಿಸಿ.

ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನಲ್ಲಿ ಫ್ರೀ ಬೇಸಿಕ್ಸ್ ನ ಕುರಿತಾದ ಮಾಹಿತಿಯಿದೆ. ದಯವಿಟ್ಟು ಒಮ್ಮೆ ನೋಡಿ

ಚಿತ್ರಕೃಪೆ : dontcomply.com

2 ಟಿಪ್ಪಣಿಗಳು Post a comment
 1. ಸತೀಶ ಎಸ್. ಕೆ.
  ಜನ 8 2016

  ಇರಬಹುದು. ನೀವು ಸತ್ಯವನ್ನೇ ಹೆಳುತ್ತಿರಬಹುದು. ಆದರೆ ನೀವು ಇಲ್ಲಿ ಬರೆದಿದ್ದು ಒಂದು ಸೈಡ್ ಮಾತ್ರ ಎಂದು ಹೇಳ ಬಯಸುತ್ತೇನೆ. ನೀವು ಮೊಬೈಲ್ ನಿಂದ ಯಾವತ್ತಾದರೂ ಒಂದು ಬಾರಿ FB ಉಪಯೋಗಿಸಿರಬಹುದು. ಅಲ್ಲಿಗೆ ನಿಮ್ಮ ಎಲ್ಲ ಕಾಂಟಾಕ್ಟ್ ಲಿಸ್ಟ್ ಜುಕೆರ್ಬರ್ಗ್ ಬಳಿ ಇವೆ ಅಂತಲೇ ಅರ್ಥ. ಬೇಡ ಅನ್ನೋದಾದ್ರೆ ಎಫ್ ಬಿ ಯನ್ನೇ ಬೇಡ ಅನ್ನಬೆಕಿತ್ತು.

  ಉತ್ತರ
 2. ರವಿ
  ಜನ 8 2016

  ಲಹರಿ ನೀವು ನಿಮ್ಮ ಹೋರಾಟ ಮುಂದುವರೆಸಿ, ನಾವು ಫ್ರೀ ಬೇಸಿಕ್ಸ್ ಅನ್ನು ಬೆಂಬಲಿಸುತ್ತೇವೆ. ಕೊನೆಗೆ ಯಾವುದು ಒಳ್ಳೆಯದೋ ಅದೇ ಗೆಲ್ಲುತ್ತದೆ. ನೆಟ್ ನ್ಯುಟ್ರಾಲಿಟಿ ಬೆಂಬಲಿಗರು ಆರೋಪಿಸುವಷ್ಟು ಕೆಟ್ಟದಾಗಿಲ್ಲ ಫ್ರೀ ಬೇಸಿಕ್ಸ್. ಇಂಟರ್ನೆಟ್ ಹಳ್ಳಿ ಹಳ್ಳಿಗೆ ಬಂದರೆ ಮೋದಿ ಬೆಂಬಲಿಗರು ಜಾಸ್ತಿಯಾಗ್ತಾರೆ ಅಲ್ವೇ, ಅದಕ್ಕೆ ಕೆಲವರಿಗೆ ಉರಿ. ಹಣ ಪಾವತಿ ಮಾಡಿ ಇಂಟರ್ನೆಟ್ ಬಳಸಲಿ ನೆಟ್ ನ್ಯೂಟ್ರಾಲಿಟಿ ಬೆಂಬಲಿಗರು. ಫೇಸ್ಬುಕ್ ಜೊತೆ ಒಪ್ಪಂದ ಇಲ್ಲದ ಕಾರ್ಪೊರೇಟ್ ಕಂಪನಿಗಳು ಈ ನೆಟ್ ನ್ಯುಟ್ರಾಲಿಟಿ ನಾಟಕ ಮಾಡುತ್ತಿರುವುದು. ಹಾಗೆ ನೋಡಿದರೆ ಎಲ್ಲಿದೆ ನಿಜದಲ್ಲಿ ಸ್ವಾತಂತ್ರ್ಯ? ಈ ಕಂಪನಿಗಳು ಮ್ಯಾಗಿ ನೂಡಲ್ ಕೆಟ್ಟದು ಎಂದೂ ನಂಬಿಸುತ್ತಾರೆ, ಈಗ ಯಾವತ್ತೂ ಕೆಟ್ಟದಾಗಿರಲಿಲ್ಲವೆಂದೂ ನಂಬಿಸುತ್ತಾರೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments