ವಿಷಯದ ವಿವರಗಳಿಗೆ ದಾಟಿರಿ

ಜನವರಿ 11, 2016

3

ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು : ಭಾಗ ೧

‍ನಿಲುಮೆ ಮೂಲಕ

– ಪ್ರೇಮ ಶೇಖರ

ಅಯ್ಯೋ!  ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?

ಖಾಲಿ ತಲೆಮನುಷ್ಯನ ಕ್ಷುದ್ರತನದ ಬಗ್ಗೆ ಮಾತಾಡುವುದು, ಬರೆಯುವುದು ನನಗೆ ಖುಶಿ ನೀಡದ ಸಂಗತಿ.  ಆದರೆ ಒಬ್ಬ ಅಂಕಣಕಾರನಾಗಿ ವೈವಿಧ್ಯಮಯ ವಸ್ತುವಿಷಯಗಳಲ್ಲಿ ನಾನು ಕೈಯಾಡಿಸ- ಬೇಕಾಗುತ್ತದೆ. ಇದು ಅಗತ್ಯವಾಗುವುದು ಬರಹಗಳ ಸಮಕಾಲೀನತೆ, ಉಪಯುಕ್ತತೆ ಹಾಗೂ ಒಟ್ಟಾರೆ ನಿರಂತರ ಚಲನಶೀಲ ಬೌದ್ಧಿಕ ಬೆಳವಣಿಗೆಯ ಪ್ರಕ್ರಿಯೆಗೆ ಅವುಗಳ ಕೊಡುಗೆಯ ಕುರಿತಾದ ನಿರೀಕ್ಷೆಗಳಿಗನುಗುಣವಾಗಿ.  ಈ ‘ನಿರೀಕ್ಷೆ’ಗಳನ್ನು ಪರಿಗಣಿಸಿ ಇಂದು ನಾನು ವಿಶ್ಲೇಷಣೆಗೆತ್ತಿಕೊಳ್ಳುತ್ತಿರುವ ವಿಷಯ ಇಂಗ್ಲಿಷ್ನಲ್ಲಿ Political Correctiveness ಅಥವಾ “Political Correctitude” ಮತ್ತು ಇವೆರಡನ್ನೂ ಚಿಕ್ಕದಾಗಿಸಿ PC ಎಂದು ಕರೆಯಲಾಗುವ ಮನುಷ್ಯಸ್ವಭಾವ.ಇದು ಸಂಭಾಷಣೆಯಲ್ಲಿ ಹಾಗೂ ಬರವಣಿಗೆಯಲ್ಲಿ “politically correct” ಆಗಿ ಮಾತಾಡುವುದು, “ಜಾಣತನದ ಹೇಳಿಕೆ ನೀಡುವುದು” ಎಂದು ಬಳಕೆಯಾಗುತ್ತದೆ.  ಇದು ಸೂಚಿಸುವ “ವಾಸ್ತವವನ್ನು, ನಿಜವನ್ನು ಮರೆಮಾಚುವುದು” ಎಂಬ ಅರ್ಥವಂತೂ ಈ ದಿನದ ವಾಸ್ತವವನ್ನು ಢಾಳಾಗಿ ಪ್ರತಿಬಿಂಬಿಸುತ್ತದೆ.

ಈ PCಯ ಮೂಲವನ್ನು ಶೋಧಿಸಹೊರಟರೆ ನಾವು ಸ್ಟ್ಯಾಲಿನ್ ಯುಗಕ್ಕೆ ಹೋಗಿ ನಿಲ್ಲುತ್ತೇವೆ.ಆತನ ಕಮ್ಯೂನಿಸ್ಟ್ ಸರಕಾರ ಏನೇ ಮಾಡಿದರೂ ಅದೆಲ್ಲವೂ ಸರಿಯೇ ಎಂದು ವಾದಿಸುವ ಪರಿಪಾಠ ಮೂವತ್ತರ ದಶಕದಲ್ಲಿ ಸೋವಿಯೆತ್ ಯೂನಿಯನ್ನಲ್ಲಿ ಕಾಣಿಸಿಕೊಂಡಿತು.  ಇದು ಅವಾಸ್ತವಿಕ ವರ್ತನೆಯೇನೋ ನಿಜ, ಆದರೆ ಇದರ ಹಿಂದಿದ್ದ ಸದಾಶಯವನ್ನು ನಾವು ಗುರುತಿಸಲೇಬೇಕು.ಸ್ಟ್ಯಾಲಿನ್ನ ನೀತಿಗಳು ಆ ದಿನಕ್ಕೆ ತಪ್ಪಾಗಿ, ಕ್ರೂರವಾಗಿ ಕಂಡರೂ, ಭವಿಷ್ಯದಲ್ಲಿ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಸರಿಯಾಗಿಯೇ ಇವೆ ಎಂಬ ಸದಾಶಯ ಅದಾಗಿತ್ತು.  ಯುದ್ಧಕಾಲದಲ್ಲಿ ಅದು ಅಮೆರಿಕಾಗೂ ತಲುಪಿತು.ಜರ್ಮನ್ ಪೈಶಾಚಿಕ ಧಾಳಿಯ ವಿರುದ್ಧ ಮಹಾನ್ ದೇಶಾಭಿಮಾನಿ ಯುದ್ಧದಲ್ಲಿ ಧೀಮಂತವಾಗಿ ಸೆಣಸುತ್ತಿದ್ದ ಸೋವಿಯೆತ್ ಯೂನಿಯನ್, ಆ ಮೂಲಕ ಅಮೆರಿಕಾಗೆ ಸ್ಟ್ಯಾಲಿನ್ ನೀಡುತ್ತಿದ್ದ ಸಹಕಾರ ಅಮೆರಿಕನ್ ಬುದ್ಧಿಜೀವಿಗಳಿಗೆ, ಮಾಧ್ಯಮದ ಒಂದು ವರ್ಗಕ್ಕೆ ಪ್ರಿಯವಾದದ್ದು ಸಹಜವೇ.  ಆದರೆ ಎಡಪಂಥೀಯ ಬುದ್ಧಿಜೀವಿಗಳು ಇದನ್ನು ಅತಿಯಾಗಿ ಉಪಯೋಗಿಸತೊಡಗಿ ಎಲ್ಲ ವಿಷಯದಲ್ಲೂ “politically correct” ಆಗಿ ಮಾತಾಡುವುದು ಅಂದರೆ ಜಾಣತನದ ಹೇಳಿಕೆ ನೀಡುವುದು ಅವರ ಅಭ್ಯಾಸವಾಗಿಹೋಯಿತು.ಇದು ಮುಖ್ಯವಾಹಿನಿ ಮಾಧ್ಯಮದಲ್ಲೂ ಪ್ರಧಾನವಾಗಿ ಕಾಣಿಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ.  ಅಂದರೆ ವಾಸ್ತವಕ್ಕೆ ವಿರುದ್ಧವಾಗಿ ಮಾತಾಡುವುದು, ಅದೇ ಪರಮಸತ್ಯವೆಂದು ವಾದಿಸುವುದು ಬುದ್ಧಿಜೀವಿ ವರ್ಗದ ಜಾಯಮಾನವಾಗಿಹೋಯಿತು.ಅತಿಯಾದರೆ ಹಾಲೂ ಹಾಲಾಹಲವಾಗುತ್ತದಂತೆ.  PC ವಿಷಯದಲ್ಲಿ ಆದದ್ದೂ ಅದೇ.

ಹೀಗೆ, ಮೂಲತಃ ಸದಾಶಯವನ್ನೇ ಸೂಚಿಸುತ್ತಿದ್ದ, ಒಳ್ಳೆಯ ಅರ್ಥವನ್ನೇ ಹೊಂದಿದ್ದ PC ಅತಿಯಾದ ದುರುಪಯೋಗದಿಂದಾಗಿ 1940ರ ದಶಕದಲ್ಲಿ ಅಮೆರಿಕಾದಲ್ಲಿ ಋಣಾತ್ಮಕ ಅರ್ಥವನ್ನು ಪಡೆದುಕೊಂಡಿತು.  ಇದನ್ನು ಅಮೆರಿಕಾ ‘ಅಧಿಕೃತ’ವಾಗಿ ಗುರುತಿಸಿದ ಪ್ರಕರಣವನ್ನು ನಿಮಗೆ ಪರಿಚಯಿಸುತ್ತೇನೆ.  ಓದು, ಬರಹದಲ್ಲಿ ಮಡಿವಂತಿಕೆ ಬಯಸುವವರಿಗೆ ಸ್ವಲ್ಪ ಮುಜುಗರವಾಗಬಹುದು.  ಸಹಿಸಿಕೊಳ್ಳಿ, ವಿಧಿಯಿಲ್ಲ.  ದಿನಬೆಳಗಾದರೆ ಜಾಣತನದ ಹೇಳಿಕೆಗಳನ್ನು ಕೇಳಿಕೇಳಿ ಅಭ್ಯಾಸವಾಗಿರುವ ನಿಮಗೆ ಅದು ಕಷ್ಟವಾಗಲಾರದು.

ಇಲ್ಲಿ ನಾನು ಉದಾಹರಿಸಹೊರಟಿರುವುದು ನಾಲ್ಕು ಟೆಲಿಗ್ರಾಂಗಳು.  ಸೆಪ್ಟೆಂಬರ್ 2, 1945ರಂದು ಜಪಾನ್ ಎರಡನೆಯ ಮಹಾಯುದ್ಧದಲ್ಲಿ ಸೋತು ಅಮೆರಿಕಾ ಜತೆ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿತಷ್ಟೆ.  ಅದರ ಮುನ್ನಾದಿನ ಟೋಕಿಯೋದಲ್ಲಿದ್ದ ಅಮೆರಿಕನ್ ಸೇನೆಯ ಮುಖ್ಯಸ್ಥ ಜನರಲ್ ಡಗ್ಲಾಸ್ ಮೆಕಾರ್ಥರ್ ಮತ್ತು ವಾಷಿಂಗ್ಟನ್ನಲ್ಲಿದ್ದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ನಡುವೆ ರವಾನೆಯಾದ ಟೆಲಿಗ್ರಾಂಗಳಿವು.  ಇವು ಹೇಗಿದ್ದವೋ ಹಾಗೇ ನಿಮ್ಮ ಮುಂದಿಡುತ್ತಿದ್ದೇನೆ.  ನಾನು ಮಾಡಿರುವ ಏಕೈಕ ಬದಲಾವಣೆಯೆಂದರೆ ಅವುಗಳನ್ನು ಕನ್ನಡಕ್ಕೆ ಅನುವಾದಿಸಿರುವುದು.ಇವು ನಿಮ್ಮ ಮನರಂಜಿಸುವುದಷ್ಟೇ ಅಲ್ಲ, ಬುದ್ಧಿಜೀವಿ ವರ್ಗದಲ್ಲಿ ಕಾಣಿಸಿಕೊಂಡ ಆಷಾಡಭೂತಿತನವೆಂಬ ದುರಂತವನ್ನೂ ತೆರೆದಿಡುತ್ತವೆ.

ಟೆಲಿಗ್ರಾಂ 1
ಟೋಕಿಯೋ, ಜಪಾನ್
1800-ಸೆಪ್ಟೆಂಬರ್ 1, 1945
ಗೆ: ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್
ಇಂದ: ಜನರಲ್ ಡಿ ಎ ಮೆಕಾರ್ಥರ್
ನಾಳೆ ನಾವು ಆ ಹಳದೀ ಹೊಟ್ಟೆಯ ಸೂಳೆಮಕ್ಕಳನ್ನು ಭೇಟಿಯಾಗಲಿದ್ದೇವೆ ಮತ್ತು ಶರಣಾಗತಿಯ ಕಾಗದಪತ್ರಗಳಿಗೆ ಸಹಿ ಹಾಕಲಿದ್ದೇವೆ, ಏನಾದರೂ ಕೊನೇ ಗಳಿಗೆಯ ಸೂಚನೆಗಳು!

ಟೆಲಿಗ್ರಾಂ 2
ವಾಷಿಂಗ್ಟನ್ ಡಿ ಸಿ
1300-ಸೆಪ್ಟೆಂಬರ್ 1, 1945
ಗೆ: ಡಿ ಎ ಮೆಕಾರ್ಥರ್
ಇಂದ: ಹೆಚ್ ಎಸ್ ಟ್ರೂಮನ್
ಅಭಿನಂದನೆಗಳು, ಸರಿಯಾಗಿ ಕರ್ತವ್ಯ ನಿಭಾಯಿಸಿದ್ದೀರಿ, ಆದರೆ ಶರಣಾಗತಿಯ ಷರತ್ತುಗಳನ್ನು ಪತ್ರಕರ್ತರೊಡನೆ ಚರ್ಚಿಸುವಾಗ ಜಪಾನೀಯರ ಬಗ್ಗೆ ನಿಮ್ಮಲ್ಲಿ ಎದ್ದುಕಾಣುವ ಅಸಹ್ಯ ಭಾವನೆಯನ್ನು ತಗ್ಗಿಸಬೇಕು, ಯಾಕೆಂದರೆ ನಿಮ್ಮ ಕೆಲವು ಮಾತುಗಳು ಮೂಲಭೂತವಾಗಿ not politically correct!

ಟೆಲಿಗ್ರಾಂ 3
ಟೋಕಿಯೋ, ಜಪಾನ್
1640-ಸೆಪ್ಟೆಂಬರ್ 1, 1945
ಗೆ: ಅಧ್ಯಕ್ಷ ಹೆಚ್ ಎಸ್ ಟ್ರೂಮನ್
ಇಂದ: ಡಿ ಎ ಮೆಕಾರ್ಥರ್ ಮತ್ತು ಸಿ ಹೆಚ್ ನಿಮಿಟ್ಜ್
ಸರಿ ಸರ್, ಆದರೆ ಚೆಸ್ಟರ್ ಮತ್ತು ನನಗೆ ಒಂದು ಬಗೆಯ ಗೊಂದಲವಾಗಿದೆ, politically correct ಅಂದರೆ ಸ್ಪಷ್ಟವಾಗಿ ಏನು ಅರ್ಥ ಅಂತ?

ಟೆಲಿಗ್ರಾಂ 4
ವಾಷಿಂಗ್ಟನ್ ಡಿ ಸಿ
2120-ಸೆಪ್ಟೆಂಬರ್ 1, 1945
ಗೆ: ಡಿ ಎ ಮೆಕಾರ್ಥರ್/ಸಿ ಹೆಚ್ ನಿಮಿಟ್ಜ್
ಇಂದ: ಹೆಚ್ ಎಸ್ ಟ್ರೂಮನ್
ಇತ್ತೀಚೆಗೆ ಹಾದಿ ತಪ್ಪಿದ, ಅತಾರ್ಕಿಕ ಅಲ್ಯಸಂಖ್ಯಾತ ಗುಂಪೊಂದು ಅಪ್ಪಿಕೊಂಡಿರುವ, ರೋಗಗ್ರಸ್ತ ಮುಖ್ಯವಾಹಿನಿ ಮಾಧ್ಯಮದಿಂದ ಪ್ರಚಾರಗೊಳ್ಳುತ್ತಿರುವ ಒಂದು ಸಿದ್ಧಾಂತ ಈ Political Correctness, ಇದು ಪ್ರತಿಪಾದಿಸುವುದೇನೆಂದರೆ ಮಲದ ತುಂಡೊಂದನ್ನು ಅದರ ಶುದ್ಧ ತುದಿಯಿಂದ ಹಿಡಿದೆತ್ತಬಹುದು ಎಂದು!

ಮುಂದಿನ ಮೂರು ದಶಕಗಳೊಳಗೆ PC ಉದಾತ್ತ ಸಮಾಜಮುಖಿ ಅರ್ಥವನ್ನು ಪುನಃ ಗಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು.  ಅದರ ಪ್ರಕಾರ ಯಾವುದೇ ಬಗೆಯಲ್ಲಿ ಅಲ್ಪಸಂಖ್ಯಾತರಾಗಿರುವವರಲ್ಲಿ, ಬಲಹೀನರಾಗಿರುವವರಲ್ಲಿ ಕೀಳರಿಮೆಯನ್ನುಂಟುಮಾಡಬಾರದು.  ಲಿಂಗ, ವರ್ಣ, ಜನಾಂಗ, ದೈಹಿಕ ನ್ಯೂನತೆಗಳನ್ನೆತ್ತಿಕೊಂಡು ವ್ಯಕ್ತಿಯನ್ನು ಅಥವಾ ವ್ಯಕ್ತಿಗಳ ಸಮುದಾಯವನ್ನು ಋಣಾತ್ಮಕವಾಗಿ ಬಿಂಬಿಸಬಾರದು ಎನ್ನುವುದು ಎಲ್ಲರೂ ಒಪ್ಪತಕ್ಕ ನಿಲುವೇ.  ಈ ಪ್ರಕಾರವಾಗಿಯೇ ಅಮೆರಿಕಾದಲ್ಲಿ ರೆಡ್ ಇಂಡಿಯನ್ನರನ್ನು “ಮೂಲ ಅಮೆರಿಕನ್ನರು” ಎಂದೂ, ಕೆನಡಾದಲ್ಲಿ “ಪ್ರಥಮ ರಾಷ್ಟ್ರ”ವೆಂದೂ ಕರೆಯಲಾಯಿತು.  ಕಪ್ಪುಜನರ ವಿಷಯಕ್ಕೆ ಬಂದರೆ ಅಮೆರಿಕಾದಲ್ಲಿ ಆಲ್ಲಿಯವರೆಗೆ ಬಳಕೆಯಲ್ಲಿದ್ದ “ನೀಗ್ರೋ” ವಿಶೇಷಣವನ್ನು ತೊರೆದು ಆಫ್ರಿಕನ್-ಅಮೆರಿಕನ್ಸ್ ಎಂದು ಕರೆಯಲಾಯಿತು.  ಬ್ರಿಟನ್ನಲ್ಲಿ ಇವರು ಆಫ್ರೋ-ಕೆರಿಬಿಯನ್ಸ್ ಎಂದು ಕರೆಯಲ್ಪಡತೊಡಗಿದರು.    “ಹಳದೀ ಜನರು” ಅಥವಾ “ಹಳದೀ ಕೆಡುಕುಗಳು” ಎಂದು ಲೇವಡಿಗೊಳಗಾಗುತ್ತಿದ್ದ ಚೀನೀ, ಜಪಾನೀ, ಪಿಲಿಫೀನೀ ಮುಂತಾದ ಮಂಗೋಲಾಯ್ಡ್ ಜನರು “ಈಸ್ಟ್ ಏಶಿಯನ್ಸ್” ಎಂದು ಗೌರವಪೂರ್ಣ ಬಿರುದಾಂಕಿತರಾದರು.  ಈ ಬದಲಾವಣೆಗೆ ಧಾರ್ಮಿಕ ತಾರತಮ್ಯಸೂಚಕಗಳೂ ಹೊರತಾಗಲಿಲ್ಲ.  “ಕ್ರಿಸ್ಮಸ್ ರಜಾದಿನಗಳು” ಧರ್ಮನಿರಪೇಕ್ಷಗೊಂಡು “ಛಳಿಗಾಲದ ರಜಾದಿನ”ಗಳಾದವು.  ದೈಹಿಕನ್ಯೂನತೆಗಳನ್ನೂ ಸಹಾ ವ್ಯಕ್ತಿವಿಶೇಷಣ ಪದಬಳಕೆಗಳಿಂದ ಹೊರಗಟ್ಟುವ ಕ್ರಮವಾಗಿ ಬುದ್ಧಿಮಾಂದ್ಯರನ್ನು Intellectually Impaired (ಬೌದ್ಧಿಕಾಶಕ್ತ), ದೃಷ್ಟಿಹೀನರನ್ನು visually impaired (ದೃಶ್ಯಾಶಕ್ತ), ಕಿವುಡರನ್ನು hearing impaired (ಶ್ರವಣಾಶಕ್ತ) ಎಂದು ಕರೆಯಲಾಯಿತು.  ಲಿಂಗಸಮಾನತಾ ಆಂದೋಲನದ ಪರಿಣಾಮವಾಗಿ ವೃತ್ತಿಗಳಿಗೂ ಹಬ್ಬಿದ ಈ ಮರುನಾಮಕರಣ ಪ್ರಕ್ರಿಯೆ ನಟಿಸುವವರೆಲ್ಲರನ್ನೂ “Actor” (ನಟ)ರನ್ನಾಗಿಸಿತು.  ಹಾಗೇ ಮುಂದುವರೆದು, ಬರೆಯುವವವರೆಲ್ಲರೂ Writer (ಲೇಖಕ), ಕವಿತೆ ರಚಿಸುವವರೆಲ್ಲರೂ “Poet” (ಕವಿ)ಯಾದರು.  ಇದು ಹೀಗೇ ಮುಂದುವರೆದು ಇತರ ವೃತ್ತಿಗಳಲ್ಲೂ ಲಿಂಗಸೂಚಕ ವೃತ್ತಿವಿಷೇಷಣಗಳು ಹೊರದೂಡಲ್ಪಟ್ಟವು.  ಇದೆಲ್ಲದರ ಉದ್ದೇಶ ನಮ್ಮ ದೈನಂದಿನ ಜೀವನದಲ್ಲಿ ನಮ್ಮ ನಡೆನುಡಿಗಳು ತಾರತಮ್ಯರಹಿತವಾಗಿರಬೇಕು ಎಂಬ ಮಾನವಪರ ಕಾಳಜಿ.

ಹೀಗೆ PCಯ ಬಳಕೆ ಸಮಾಜದ ಎಲ್ಲ ರಂಗಗಳಿಗೂ ಪ್ರವೇಶಿಸಿದರೂ ಅದು ಬಹುಸಂಖ್ಯಾತವಿರೋಧಿಯಾಗಲಿಲ್ಲ.   ಟೀಕಾಕಾರರು “ಅತಿಯಾದ ಸಂವೇದನೆ” ಎಂದು ಮೂಗುಮುರಿದರೂ, ಇತರ ಧರ್ಮೀಯರನ್ನು ಸಂತೈಸುವ ಭರದಲ್ಲಿ PCಯಿಂದಾಗಿ ಪಶ್ಚಿಮದ ಪ್ರಮುಖ ಧರ್ಮವಾದ ಕ್ರಿಶ್ಚಿಯಾನಿಟಿ ಲೇವಡಿಗೊಳಗಾಗಲಿಲ್ಲ, ಕ್ರಿಶ್ಚಿಯನ್ ಸಂಕೇತಗಳು ಅವಮಾನಕ್ಕೊಳಗಾಗಲಿಲ್ಲ.  ಸ್ತ್ರೀಸಮಾನತೆಯ ಪ್ರತಿಪಾದನೆಯಲ್ಲಿ ಪುರುಷ ಅವಮಾನಕ್ಕೊಳಗಾಗಲಿಲ್ಲ.  ಆದರೆ ನಮ್ಮಲ್ಲಿ PC ತನ್ನೆಲ್ಲಾ ಋಣಾತ್ಮಕ ಮುಖಗಳೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಧಾಂಗುಡಿ ಇಡತೊಡಗಿದೆ.  ನನಗೆ ಅಚ್ಚರಿ, ಬೇಸರ ಮೂಡಿಸುವುದು ಹಾಗೂ ಒಂದು ಬೌದ್ಧಿಕ ದುರಂತದಂತೆ ಕಾಣುವುದು ಆರೇಳು ದಶಕಗಳ ಹಿಂದೆ ಅಮೆರಿಕಾದಲ್ಲಿ PC ಗಳಿಸಿಕೊಂಡಿದ್ದ ಋಣಾತ್ಮಕ ಸ್ವರೂಪದಿಂದಲೇ ನಮ್ಮಲ್ಲಿ ಈಗ ಪ್ರಚಲಿತವಾಗಿರುವುದು ಮತ್ತು ಅ ಮೂಲಕ “ಜಾಣತನದ ಹೇಳಿಕೆ” ಎಂಬ ಅಷ್ಟೇನೂ ಗೌರವವಿಲ್ಲದ ಹಣೆಪಟ್ಟಿ ಹಚ್ಚಿಸಿಕೊಂಡಿರುವುದು!  ಈ ನಿಟ್ಟಿನಲ್ಲಿ, 1940ರ ದಶಕದ ಅಮೆರಿಕಾಗೆ ಇಂದಿನ ಭಾರತ, ನಮಗೆ ಮುಖ್ಯವಾಗಿ ಕರ್ನಾಟಕ, ಸಮಾನವಾಗಿ ನಿಂತಿರುವುದು ಭಯಹುಟ್ಟಿಸುತ್ತದೆ. Political Correctness ಅಂದರೆ ಆಷಾಡಭೂತಿತನ ಎಂದಾಗಿದೆ.  ಹಿಂದೂಗಳನ್ನು ಕ್ರಿಶ್ಚಿಯಾನಿಟಿಗೆ ಮತಾಂತರಿಸಿದರೆ ತಪ್ಪಲ್ಲ, ಆದರೆ ಅವರನ್ನು ಮತ್ತೆ ಹಿಂದೂಧರ್ಮಕ್ಕೆ ತರುವುದು ತಪ್ಪು ಎಂದಾಗಿದೆ.  ನಲವತ್ತೇಳರ ದುರಂತಕ್ಕೆ ಬ್ರಿಟಿಷರ ಮತ್ತು ಮುಸ್ಲಿಂ ಲೀಗ್ನ ಹುನ್ನಾರಗಳು ಮೂಲಭೂತವಾಗಿ ಕಾರಣವಾದದ್ದು, ಅದರಿಂದಾಗಿ ಕೋಮುವಾದವೆಂಬ ರಕ್ಕಸ ಜನ್ಮತಾಳಿದ್ದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದರೂ ಎಲ್ಲಾ ಅನಾಹುತಗಳಿಗೆ ಹಿಂದೂಗಳನ್ನು ದೂಷಿಸಲಾಗುತ್ತಿದೆ.  ಬಸವಣ್ಣನ ತತ್ವಗಳ ಪ್ರಚಾರ ಹಾಗೂ ಅನುಷ್ಟಾನಕ್ಕೆ ಮಹತ್ವ ಕೊಡುವ ಬದಲಾಗಿ ಅವನು ಮಾದಿಗನೋ ಅಥವಾ ಬ್ರಾಹ್ಮಣನೋ ಎಂದು ತಲೆಕೆಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುವ ಪ್ರಯತ್ನಗಳು ಸಂಶೋಧನೆಯ ಹೆಸರಿನಲ್ಲಿ ನಡೆಯುತ್ತಿವೆ.  ತಮ್ಮ ಪಾತ್ರಗಳಿಂದ ತಾವಾಡಿಸುವ ಮಾತುಗಳಿಗಾಗಿ ಈ ಕಾಲದ ಭೈರಪ್ಪನವರಿಂದ ಹಿಡಿದು ಏಳೆಂಟು ಶತಮಾನಗಳ ಹಿಂದೆಯೇ ಕಾಲವಾಗಿಹೋದ ಕುಮಾರವ್ಯಾಸನೂ, ಅದೆಂದೋ ಇದ್ದ ವಾಲ್ಮೀಕಿ, ವ್ಯಾಸರೂ ಭಾನುವಾರ ಬೆಳಿಗ್ಗೆ ನಾರಿಕೇಳದೊಂದಿಗೆ ವಿಮರ್ಶೆಯೆಂಬ ಮಿಕ್ಸಿಯಲ್ಲಿ ಅರೆಸಿಕೊಳ್ಳುತ್ತಿದ್ದಾರೆ.  ಅಮರ್ತ್ಯ ಭಗವದ್ಗೀತೆಗೆ ಮರ್ತ್ಯರು ಬೆಂಕಿಹಚ್ಚಿ ಮೈಕಾಯಿಸಿಕೊಳ್ಳಹೊರಟಿದ್ದಾರೆ.  ಹೀಗೆ ಮಾಡುವುದರ ಮೂಲಕ ನಮ್ಮ ಚಿಂತಕರು, ಏಳು ದಶಕಗಳ ಹಿಂದೆ ಅಧ್ಯಕ್ಷ ಟ್ರೂಮನ್ ಬಣ್ಣಿಸಿದಂತೆ, ಮಲವನ್ನು ಅದರ ಶುದ್ದ ತುದಿಯಿಂದ ಮೇಲೆತ್ತಿ ಹಿಡಿಯಬಹುದೆಂದು ಉಗ್ರವಾಗಿ ಪ್ರತಿಪಾದಿಸುತ್ತಿದಾರೆ, ಹಿಡಿದೆತ್ತಿಯೇ ಇದ್ದೇವೆಂದೂ, ತಮ್ಮ ಕೈ ಶುದ್ಧವಾಗಿಯೇ ಇದೆಯೆಂದು ನಮ್ಮನ್ನು ನಂಬಿಸಲು ಹವಣಿಸುತ್ತಿದ್ದಾರೆ.  ಆದರೆ ಅವರ ನಂಬಿಕೆ ಸುಳ್ಳೆಂದೂ, ಅವರ ಕೈ ಹೊಲಸಾಗಿದೆಯೆಂದೂ ನಮಗೆಲ್ಲರಿಗೂ ಸ್ಪಷ್ಟವಾಗಿಯೇ ಕಾಣುತ್ತಿದೆ.  ನೀವು ಭ್ರಮಾಲೋಕದಲ್ಲಿದ್ದೀರಿ, ವಾಸ್ತವಕ್ಕೆ ಹತ್ತಿರಾಗಿ ಎಂದು ಇವರಿಗೆ ಯಾರಾದರೂ ಹೇಳಬೇಕಾಗಿದೆ.

ಹೊಸಹೊಸ ಬಗೆಯ ಉಡುಪುಗಳನ್ನು ತೊಡುವ ತೆವಲಿದ್ದ ರಾಜನೊಬ್ಬ ಅದ್ಭುತವಾದ ಹೊಸ ಉಡುಪು ತೊಟ್ಟಿದ್ದೇನೆಂದು ಮೆರೆಯುತ್ತಾ ಮೆರವಣಿಗೆ ಹೋಗುತ್ತಿದ್ದಾಗ ಅವನ ‘ಹೊಸ ಉಡುಪನ್ನು’ ಇಷ್ಟಪಟ್ಟು ಮನರಂಜಿಸಿಕೊಳ್ಳುತ್ತಲೋ, ಅಥವಾ ಇಷ್ಟವಾಗದೇ, ಅದನ್ನು ಹೇಳಲಾಗದೇ ಹೆದರಿ ಬಾಯಿ ಮುಚ್ಚಿಕೊಂಡೋ, ಇಲ್ಲದ ಉಸಾಬರಿ ನಮಗ್ಯಾಕೆ ಅಂತಲೋ, ಅಥವಾ ರಾಜನ ಹೊಸ ಉಡುಪಿನಿಂದ ನಮಗೇನಾದರೂ ಲಾಭವಾಗುತ್ತದೋ ಎಂದು ಲೆಕ್ಕಾಚಾರದಲ್ಲಿ ತೊಡಗಿಯೋ ಎಲ್ಲರೂ ಸುಮ್ಮನಿದ್ದಾಗ ಮುಗ್ಧ ಮಗುವೊಂದು “ಅಯ್ಯೋ!  ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?” ಎಂದು ಉದ್ಗರಿಸಿ ರಾಜನದನ್ನೂ ಸೇರಿಸಿ ಎಲ್ಲರ ಕಣ್ಣು ತೆರೆಸಿದ ಕಥೆಯಿದೆ.  ನನಗೀಗ ಆ ಕಥೆ ಗಾಢವಾಗಿ ನೆನಪಾಗುತ್ತಿದೆ.  ಆ ಮಗು ಹುಟ್ಟಿಬರಬೇಕು ಅನಿಸುತ್ತಿದೆ.  ಅಥವಾ ನಾನೇ ಆ ಮಗುವಾದರೆ ಹೇಗೆ?

ಮುಂದುವರೆಯುವುದು….

3 ಟಿಪ್ಪಣಿಗಳು Post a comment
  1. Shiva Prakash
    ಜನ 11 2016
  2. Devu Hanehalli
    ಜನ 11 2016

    Sir, Anyway, enjoy the losing game!!

    ಉತ್ತರ
  3. ಜನ 11 2016

    As long as hindus are divided on caste line ,nothing will do.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments