ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2016

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೊಂದು ಬಹಿರಂಗ ಪತ್ರ

‍ನಿಲುಮೆ ಮೂಲಕ

– ನಾಗರಾಜ್ ಹೆತ್ತೂರು
ಕಾರ್ಯಾಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ

ಮಾಲತಿ ಪಟ್ಟಣಶೆಟ್ಟಿವಿಷಯ: ಅಕಾಡೆಮಿ ಪ್ರಶಸ್ತಿ ಮೌಲ್ಯವನ್ನು ಉಳಿಸಲು ಮತ್ತು ವಾಪಾಸು ಮಾಡಿದ ಪ್ರಶಸ್ತಿಗಳನ್ನು ಆಯಾ ಸಾಲಿನ ಪ್ರಶಸ್ತಿ ವಂಚಿತ ಪ್ರತಿಭಾವಂತರಿಗೆ ನೀಡಲು ಒತ್ತಾಯ

ನಮ್ಮೆಲ್ಲರ ಪ್ರೀತಿಯ ಸಾಹಿತಿಗಳೂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿಪಟ್ಟಣಶೆಟ್ಟಿ ಅವರಿಗೆ ನಮಸ್ಕಾರಗಳು. ತಾವು ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ಇತರೆ ಎಲ್ಲಾ ಅಕಾಡೆಮಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಕೆಲವು ತಿಂಗಳಿಂದ ದೇಶದಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮೊಳಗಿನ ಪ್ರಮುಖ ಚಿಂತಕರಾದ ಕಲಬುರ್ಗಿ ಅವರ ಹತ್ಯೆ ನಂತರ ರಾಜ್ಯದಲ್ಲಿ ಈ ಕುರಿತು ದೊಡ್ಡ ಜನಾಭಿಪ್ರಾಯ ರೂಪಿತವಾಗಿದ್ದು ಕೆಲವು ಸಾಹಿತಿಗಳು ಪ್ರಶಸ್ತಿ ವಾಪಾಸ್ ನೀಡುವ ಮೂಲಕ ಪ್ರತಿಭಟನಾತ್ಮಕ ನಡೆ ಇಟ್ಟಿದ್ದಾರೆ. ಈಚೆಗೆ ಅಕಾಡೆಮಿ ಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕಿರಿಯ ಸಾಹಿತಿಯೊಬ್ಬರು ಪ್ರಶಸ್ತಿ ಬಹಿಷ್ಕರಿಸಿ, ನಿಮಗೆ ಮತ್ತು ಮಾಧ್ಯಮಗಳಲ್ಲಿ ಪತ್ರ ಬರೆದಿದ್ದನ್ನು ಗಮನಿಸಿದ್ದೇವೆ. ಅವರ ಪ್ರತಿಭಟನೆ ಹಕ್ಕನ್ನು ಗೌರವಿಸುತ್ತೇವೆ. ಕಲಬುರ್ಗಿ ಸೇರಿದಂತೆ ದೇಶದಲ್ಲಿ ನಡೆದ ಸಾಹಿತಿಗಳ ಅವರ ಹತ್ಯೆಯನ್ನು ಖಂಡಿಸುತ್ತೇವೆ ಮತ್ತು ಈ ಸಂಬಂಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ ಎಂಬುದನ್ನು ನಿಮಗೆ ನೆನಪಿಸುತ್ತಲೇ ಪ್ರಶಸ್ತಿ ವಾಪಾಸತಿ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಅಕಾಡೆಮಿ ಕೆಲವು ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.

ಈಗಾಗಲೇ ಗೊತ್ತಿರುವಂತೆ ಪ್ರಶಸ್ತಿ ಕೊಡುವ ಅಧಿಕಾರ ಇರುವಂತೆಯೇ ವಾಪಾಸ್ ಪಡೆದುಕೊಳ್ಳಲು ಇರುವ ಮಾನದಂಡವೇನು..? ವಾಪಾಸ್ ಮಾಡಿರುವ ಪ್ರಶಸ್ತಿಗಳ ಕತೆ ಏನು..? ಕಲಬುರ್ಗಿ ಹತ್ಯೆ ಹಂತಕರು ಸಿಕ್ಕಿದ ನಂತರ ಇವರು ನೀಡುವ ಪ್ರಶಸ್ತಿಗಳನ್ನು ವಾಪಾಸ್ ಮಾಡಲಾಗುತ್ತದೆಯೇ…? ಪ್ರಶಸ್ತಿಯೊಂದಿಗೆ ವಾಪಾಸು ನೀಡಿದ ಹಣವನ್ನು ಯಾವುದಕ್ಕೆ ಬಳಸುತ್ತಿದ್ದೀರಿ..?
ಅಕಾಡೆಮಿ ಪ್ರಶಸ್ತಿಗಳಿಗೆ ತನ್ನದೇ ಆದ ಘನತೆ ಇದೆ. ಪ್ರತಿಭಾವಂತರನ್ನು ಹೊಸ-ಎಲೆಮರೆಯ-ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಠಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಯಾ ಸಾಲಿನಲ್ಲಿ ಪ್ರಶಸ್ತಿ ಆಯ್ಕೆಗೆ ಸಮಿತಿ ಮಾಡಲಾಗುತ್ತದೆ. ಸಮಿತಿಯಲ್ಲಿ ನಿಜವಾದ ಸಾಹಿತಿಗಳನ್ನು ಗುರುತಿಸುವ ಕೆಲಸ ನಡೆಯುತ್ತದೆ (ಒತ್ತಡ-ಲಾಬಿ) ನಡುವೆಯೂ ಪ್ರಶಸ್ತಿ ಆಯ್ಕೆ ನಡೆಯುತ್ತದೆ. ಇದು ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸಲು ಒಳ್ಳೆಯ ಬೆಳವಣಿಗೆ ಇಂತಹುದೊಂದು ಪ್ರಶಸ್ತಿಗಾಗಿ ಅದೆಷ್ಟೋ ವರ್ಷಗಳಿಂದ ಅರ್ಜಿ ಸಲ್ಲಿಸಿಕೊಂಡು ಕಾಯುವ ಸಾಹಿತಿಗಳ ವಲಯವಿದೆ. ಪ್ರತಿಭೆಗೆ ಪುರಸ್ಕಾರ ಬಯಸುವುದು ಸಹಜ ಗುಣ. ಇದಕ್ಕಾಗಿ ಸಾವಿರಾರು ಜನ ಅರ್ಜಿ ಸಲ್ಲಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರಶಸ್ತಿ ವಾಪಾಸ್ ಬೆಳವಣಿಗೆಯಿಂದ ಇಂದು ಪ್ರಶಸ್ತಿಗಳ ಬಗ್ಗೆ ಇರುವ ಮೌಲ್ಯ ಕಡಿಮೆಯಾಗುತ್ತಿದೆ ಎನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಶಸ್ತಿ ವಾಪಾಸ್ ಮಾಡಿದವರು ಹಕ್ಕನ್ನು ಗೌರವಿಸುತ್ತಲೇ ಕೆಲವು ಒತ್ತಾಯಗಳನ್ನು ಮಾಡುತ್ತೇವೆ.

1) ಪ್ರಶಸ್ತಿ ವಾಪಾಸು ಮಾಡಿದ ವ್ಯಕ್ತಿ ಹಕ್ಕನ್ನು ಗೌರವಿಸುತ್ತಲೇ ಆಯಾ ಸಾಲಿನಲ್ಲಿ ಇವರೊಂದಿಗೆ ಸ್ಪರ್ದೆಯಲಿದ್ದ 2 ನೇ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀವೇ ಕರೆದು ಪ್ರಶಸ್ತಿ ನೀಡಬೇಕು. ಈ ಮೂಲಕ ಪ್ರಶಸ್ತಿ ವಂಚನೆಯಿಂದ ತಪ್ಪಿಸಬಹುದು. ಪ್ರಶಸ್ತಿ ಗೌರವವನ್ನೂ ಉಳಿಸಬಹುದು

2) ಹೊಸ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭ `ವಾಪಾಸು ಮಾಡುವ ವ್ಯಕ್ತಿಗಳನ್ನು ಆಯ್ಕೆಗೆ ಪರಿಗಣಿಸುವುದು ಬೇಡ’ ಈ ಬಗ್ಗೆ ಸ್ಪಷ್ಟ ನಿರ್ದೇಶನ ಹೊರಡಿಸಬೇಕು (ಇದರಿಂದ ತಿರಸ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಬಹುದು). ಒಂದು ವೇಳೆ ಅರ್ಜಿ ಸಲ್ಲಿಸಿದರೆ ವಾಪಾಸ್ ಮಾಡುವುದಿಲ್ಲ ಎಂಬ ಪ್ರಮಾಣ ಪತ್ರ ನೀಡಲಿ

3) ಪ್ರಶಸ್ತಿ ವಾಪಾಸ್ ಮಾಡಿದವರ ಹೆಸರನ್ನು ಸರಕಾರ ನೀಡುವ ಉಳಿದ ಪ್ರಶಸ್ತಿಗಳಿಂದ ಹೊರಗಿಡಬೇಕು ಇದರಿಂದ ಹೊಸ ಪ್ರತಿಭೆಗಳಿಗಾದರೂ ಪ್ರಶಸ್ತಿ ಅವಕಾಶ ಸಿಗಲಿ. ಪ್ರತಿಭೆಗೆ ಅವಕಾಶ ಸಿಗಲಿ. ಎಲ್ಲಕ್ಕೂ ಮಿಗಿಲಾಗಿ ಅನಾವಶ್ಯಕ ಕಿತ್ತಾಟ ತಪ್ಪಿಸಬಹುದು.

4) ಪ್ರಶಸ್ತಿ ವಾಪಾಸು ಮಾಡಿದವರು ತಮ್ಮ ಹೆಸರಿನ ಮುಂದೆ (…………… ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಎಂಬುದನ್ನು ಬಳಸಿಕೊಳ್ಳದಂತೆ ಸೂಚನೆ ನೀಡಿ)

ಈಗಾಗಲೇ ಹೇಳಿರುವಂತೆ ಪ್ರಶಸ್ತಿ ವಾಪಾಸತಿ ಅವರ ಹಕ್ಕು. ಹಾಗೆಯೇ ಅಕಾಡೆಮಿ ಗೆ ಅದರದೇ ಆದ ಕರ್ತವ್ಯಗಳಿವೆ. ಪ್ರಶಸ್ತಿ ಬಗ್ಗೆ ಜನ ತಿರಸ್ಕಾರ ತೋರುವ ಈ ಸಂದರ್ಭದಲ್ಲಿ ಪ್ರಶಸ್ತಿಗಳೆಂದರೆ ನಗೆಪಾಟಲಿಗೀಡಾಗುತ್ತಿರುವ ವೇಳೆಯಲ್ಲಿ ಅಕಾಡೆಮಿ ಈ ನಿಟ್ಟಿನಲ್ಲಿ ಪ್ರಶಸ್ತಿಗಳ ಮೌಲ್ಯ ಉಳಿವಿಗೆ ಕ್ರಮ ಕೈಗೊಳ್ಳುವುದು ಅತ್ಯಂತ ಸೂಕ್ತ. ಈ ನಿಟ್ಟಿನಲ್ಲಿ ನಮ್ಮ ಕೆಲವು ಸಂದೇಹಗಳಿಗೆ ಉತ್ತರಿಸುವ ಮೂಲಕ ಮುಂದೆ ಪ್ರಶಸ್ತಿಗೆ ಅರ್ಜಿ ಸಲ್ಲಿಸುವರು ಸಲ್ಲಿಸಬೇಕೆ ಬೇಡವೇ..? ಎಂಬ ಬಗ್ಗೆ ಸ್ಪಷ್ಟತೆ ಪಡೆದು ಅರ್ಜಿ ಸಲ್ಲಿಸಲು ಸಹಾಯಕವಾಗುತ್ತದೆ. ವೈಯಕ್ತಿಕವಾಗಿ ನಾನು ಕೂಡ ಸಾಹಿತ್ಯ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಬಗ್ಗೆ ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ನಾನು ಮತ್ತು ನಮ್ಮಂತಹ ಹಲವಾರು ಸಾಹಿತಿಗಳು.

ಇಂತಿ ತಮ್ಮ ವಿಶ್ವಾಸಗಳೊಂದಿಗೆ
ನಾಗರಾಜ್ ಹೆತ್ತೂರು,ಹಾಸನ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments