ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2016

6

ಭಾರತೀಯ ಆಹಾರ ಶೈಲಿಗಳ ಕುರಿತು ಒಂದು ವೈಜ್ಞಾನಿಕ ಚಿತ್ರಣ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಭಾರತೀಯ ಆಹಾರ ವೈಶಿಷ್ಟ್ಯಆಹಾರದ ಶೈಲಿಗಳಲ್ಲಿ ಎಷ್ಟು ಪ್ರಕಾರಗಳು ಎಂಬ ಪ್ರಶ್ನೆಗೆ ಎಲ್ಲರೂ ಉತ್ತರಿಸುವದು ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಬಗ್ಗೆ. ಪಾಶ್ಚಿಮಾತ್ಯ ಲೋಕದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಕುರಿತು ಅನೇಕ ಚರ್ಚೆಗಳು ವಾದ ವಿವಾದಗಳಾಗಿವೆ. ನಮ್ಮ ದೇಶದಲ್ಲಿಯೂ ಸಂತರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುವ ಕೃತಿಗಳು ಕಾಣುತ್ತವೆ. ಆದರೂ ಸಸ್ಯಾಹಾರ v/s ಮಾಂಸಾಹಾರದಲ್ಲಿ ಯಾವದು ಸರಿ ಎಂಬಂಥ ಚರ್ಚೆಗಳು ಹಿಂದೆಂದೂ ಆದಂತೆ ಕಾಣುವದಿಲ್ಲವಾದರೂ ಈಗ ಅಂಥ ಚರ್ಚೆಗಳು ಚೆನ್ನಾಗಿಯೇ ನಡೆಯುತ್ತಿವೆ. ಇಂದು ನಮ್ಮ ದೇಶದಲ್ಲಿರುವ ಹೋಟೆಲ್ಲುಗಳ ರಚನೆಗಳು ಬಹುತೇಕ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಮೇಲೆಯೇ ಆಗಿರುತ್ತವೆ.

ನಮ್ಮ ದೇಶದ ಬುದ್ಧಿಜೀವಿಗಳು ಚರಿತ್ರೆಯಲ್ಲಿ ಆಗಿ ಹೋದ ಶ್ರೇಷ್ಠ ಸಂತರ ಜಾತಿ-ವಿರೋಧೀ ವಾಕ್ಯಗಳನ್ನು ಸಾಮಾಜಿಕ ಕ್ರಾಂತಿಗೆ ಸಮೀಕರಿಸಿ ಸಮಾನತೆ ಸ್ವಾತಂತ್ರ್ಯದ ಹಕ್ಕುಗಳ ಕಲ್ಪನೆ ಅವರಲ್ಲಿತ್ತು ಎಂದು ಹೇಳುತ್ತಾರಾದರೂ, ಅದೇ ಸಂತರು ವಿಧಿಸುವ ಆಹಾರ ಪದ್ಧತಿಯ ಕುರಿತು ದಿವ್ಯ ಮೌನವನ್ನು ತಾಳುತ್ತಾರೆ. ಕಾರಣ ಅದೇ ತರ್ಕದ ಅಡಿಯಲ್ಲಿ ಆ ವಿಧಿಯು ಹೇರಿಕೆಯಾಗಿ ಬಿಡುತ್ತದೆ ಇಲ್ಲವೇ ಸ್ವಾತಂತ್ರ್ಯದ ಹರಣವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಅದು ಬುದ್ಧಿಜೀವಿಗಳಿಗೆ ಇಷ್ಟವಿಲ್ಲ. ಪಾಶ್ಚಾತ್ಯರ ವಸಾಹತು ಶಿಕ್ಷಣ ಪಡೆದು ಹಿಂದೂ ಎಂಬ ರಿಲಿಜನ್ನನ್ನು ಒಪ್ಪಿಕೊಂಡ ಸಸ್ಯಾಹಾರಿಗೂ ಹಿಂದೂ ರಿಲಿಜನ್ನಿನ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಮಾಂಸಾಹಾರದ ಉಲ್ಲೇಖಗಳು ವಿಚಿತ್ರವಾಗಿ ಕಾಣುತ್ತವೆ.

ಹಾಗಿದ್ದರೆ ಭಾರತೀಯ ಆಹಾರ ಶೈಲಿ ಏನು? ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಎರಡು ರೀತಿಯಲ್ಲಿ ವಿಂಗಡಿಸಿ ಹೊರಟರೆ ನಮ್ಮ ಸಂಪ್ರದಾಯಗಳ ಆಹಾರದ ಶೈಲಿಗಳನ್ನು ವಿವರಿಸಬಲ್ಲದೇ? ಸಮರ್ಪಕವಾಗಿ ವಿವರಿಸುವ ಚಿತ್ರಣವನ್ನೇ ತಾನೇ ವೈಜ್ಞಾನಿಕವೆಂದು ಕರೆಯಲು ಸಾಧ್ಯ. ಆದ್ದರಿಂದ ಮೊದಲು ಈಗಿರುವ ಸಸ್ಯಾಹಾರ ಮತ್ತು ಮಾಂಸಾಹಾರವೆಂಬ ವಿಭಾಗಗಳ ಚಿತ್ರಣವನ್ನು ಮೊದಲು ಅವಲೋಕಿಸೋಣ. ಅದು ನಮ್ಮ ಸಂಪ್ರದಾಯಗಳ ಆಹಾರ ಪದ್ಧತಿಯನ್ನು ವಿವರಿಸಲು ಸಾಧ್ಯವೇ ಎಂಬುದನ್ನು ಅರಿಯೋಣ. ಇಲ್ಲವಾದಲ್ಲಿ ನಮ್ಮ ಸಂಪ್ರದಾಯಗಳಲ್ಲಿರುವ ವಿವಿಧ ಆಹಾರದ ಶೈಲಿಗಳನ್ನು ವಿವರಿಸುವ ಚಿತ್ರಣವನ್ನು ರಚಿಸಲು ಸಾಧ್ಯವೇ ಎನ್ನುವದನ್ನು ಚರ್ಚಿಸೋಣ.

ನಮ್ಮ ಸಮಾಜದಲ್ಲಿರುವ ಜಾತಿಗಳನ್ನು ಸಸ್ಯಾಹಾರಿ ಅಥವಾ ಮಾಂಸಾಹಾರಿ ಎಂದು ವಿಂಗಡಿಸಲು ಸಾಧ್ಯವೇ? ಉದಾಹರಣೆಗೆ ಲಿಂಗಾಯತರು ಸಸ್ಯಾಹಾರಿಗಳು. ಜೈನರೂ ಸಸ್ಯಾಹಾರಿಗಳೇ. ಆದರೆ ಇದು ಸಮರ್ಪಕ ಚಿತ್ರಣವಲ್ಲ. ಕಾರಣ ಜೈನರು ಈರುಳ್ಳಿ ಬೆಳ್ಳುಳ್ಳಿಗಳನ್ನು ತಿನ್ನುವದಿಲ್ಲ. ಆದ್ದರಿಂದ ಜೈನರು ಸಸ್ಯಾಹಾರಿಗಳು ಎಂಬ ವಿವರಣೆಯು ಜೈನರ ಆಹಾರ ಶೈಲಿಯನ್ನು ಸಂಪೂರ್ಣವಾಗಿ ವಿವರಿಸುವದಿಲ್ಲ. ಬಂಗಾಳದ ಅಥವಾ ಗೌಡಸಾರಸ್ವತ ಬ್ರಾಹ್ಮಣರ ಆಹಾರಶೈಲಿಯಲ್ಲಿ ಮಾಂಸಾಹಾರವು ಕಂಡು ಬರುತ್ತದೆ. ಹಾಗಂತ ಎಲ್ಲ ಗೌಡಸಾರಸ್ವತ ಬ್ರಾಹ್ಮಣರೂ ಮಾಂಸಾಹಾರಿಗಳಲ್ಲ. ಭಾರತದ ಕೆಲವು ಸಂಪ್ರದಾಯಸ್ಥ ಮಾಂಸಾಹಾರಿಗಳು ಹಾವು, ಗೋವು, ಮಂಗ ಮುಂತಾದ ಪ್ರಾಣಿಗಳನ್ನು ತಿನ್ನುವದಿಲ್ಲ. ನಮ್ಮ ಬುದ್ಧಿಜೀವಿಗಳು ಹೇಳುವಂತೆ “ಮೇಲ್ವರ್ಗದವರು ಸಸ್ಯಾಹಾರಿಗಳು, ಬಹುಸಂಖ್ಯಾತ ಕೆಳವರ್ಗದವರ ಆಹಾರ ಮಾಂಸಾಹಾರ” ಎಂಬುದು ವೈಜ್ಞಾನಿಕ ವಿವರಣೆಯಲ್ಲ. ಕಾರಣ ಇದು ಭಾರತೀಯ ಆಹಾರ ಶೈಲಿಗಳ ವಿಧಿ-ನಿಷೇಧಗಳ ಚಿತ್ರಣವನ್ನು ಪರಿಪೂರ್ಣವಾಗಿ ಕಟ್ಟಿಕೊಡುವದಿಲ್ಲ.

ಚರ್ಚೆಯನ್ನು ಮುಂದುವರೆಸುವ ಮೊದಲು ನಮಗೆ ಏನು ಬೇಕಾಗಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಂಡು ಬಿಡೋಣ. ಸಸ್ಯಾಹಾರ ಶ್ರೇಷ್ಠವೋ, ಮಾಂಸಾಹಾರ ಸರಿಯೋ ಎಂಬ ಅನಾದಿ-ಅನಂತ ಚರ್ಚೆ ಇಲ್ಲಿ ಮಾಡುತ್ತಿಲ್ಲ. ಭಾರತದಲ್ಲಿಯ ಸಂಪ್ರದಾಯಗಳಲ್ಲಿ ಯಾವ ಸಂಪ್ರದಾಯದ ಆಹಾರ ಶೈಲಿ ಸರಿಯಾದದ್ದು ಎಂಬುದೂ ಇಲ್ಲಿ ಚರ್ಚೆಯ ವಿಷಯವಲ್ಲ. ಒಂದೊಂದು ಸಂಪ್ರದಾಯವು ಒಂದೊಂದು ಆಹಾರಶೈಲಿಯನ್ನು ಅನುಸರಿಸಲು ಕಾರಣವೇನು ಎಂಬುದೂ ಇಲ್ಲಿ ವಿಷಯವಲ್ಲ. ಯುಗಾದಿಗೆ ಬೇವು ತಿನ್ನುವದರ ಹಿಂದಿನ ಆರೋಗ್ಯದ ಲಾಭಗಳೇನು, ಆಹಾರ ಶೈಲಿಗಳ ವೈಜ್ಞಾನಿಕತೆಯೇನು ಎಂಬುದೂ ಇಲ್ಲಿ ವಿಷಯವಲ್ಲ. ಯಾವ ಯಾವ ಕೆಲಸ ಮಾಡುವವರು ಯಾವ ಯಾವ ಆಹಾರ ತಿನ್ನುತ್ತಾರೆ ಎಂಬ ಅಧ್ಯಯನವೂ ಇಲ್ಲಿನ ಚರ್ಚೆಯಲ್ಲ.
ಪ್ರತಿಯೊಂದು ಸಂಪ್ರದಾಯವೂ ಒಂದೊಂದು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಕುರಿತು ಒಂದು ವೈಜ್ಞಾನಿಕ ಚಿತ್ರಣ ಕಟ್ಟಿಕೊಡಲು ಸಾಧ್ಯವೇ ಎಂಬುದು ಪ್ರಶ್ನೆ. ಲಿಂಗಾಯತರು ಮಾಂಸವನ್ನು ನಿಷೇಧಿಸಿದ್ದಾರೆ. ಜೈನರು ಮಾಂಸದ ಜೊತೆಗೆ ಈರುಳ್ಳಿ ಬೆಳ್ಳುಳ್ಳಿ ಕೂಡ ನಿಷೇಧಿಸಿದ್ದಾರೆ. ಕೆಲವು ದಿನಗಳಂದು ಎಲ್ಲ ಆಹಾರಗಳೂ ವರ್ಜಿಸಲ್ಪಟ್ಟಿರುತ್ತದೆ. ಸಂತೋಷಿ ವ್ರತ ಹಿಡಿದವರು ಹುಳಿಯಿಲ್ಲದ ಆಹಾರ ತಿನ್ನುತ್ತಾರೆ. ಅಯ್ಯಪ್ಪನ ವ್ರತ ಹಿಡಿದವರು ಕಠಿಣ ಆಹಾರದ ವ್ರತವನ್ನು ಪಾಲಿಸುತ್ತಾರೆ. ಉಳಿದ ದಿನಗಳಲ್ಲಿ ತಿನ್ನುವ ಮಾಂಸಾಹಾರವು ವಿಶೇಷ ದಿನಗಳಲ್ಲಿ ಹೇಗೆ ವರ್ಜ್ಯವಾಗುತ್ತದೆ? ನಮ್ಮ ಆಹಾರದ ಸಂಪ್ರದಾಯಗಳಲ್ಲಿ ಈ ರೀತಿಯ ನೂರಾರು ಪ್ರಕಾರಗಳ ವಿಧಿ ನಿಷೇಧಗಳ ಸೃಷ್ಟಿಗಳ ಹಿಂದಿರುವ ರಚನೆಯ ಚಿತ್ರಣವೇ ನಮಗೆ ಬೇಕಾಗಿರುವದು.

ಇಲ್ಲಿ ಒಂದು ಊಹಾಸಿದ್ಧಾಂತವನ್ನು ಮಾಡೋಣ. “ಪ್ರತಿಯೊಂದು ಸಂಪ್ರದಾಯವು ಅಧ್ಯಾತ್ಮದ ಹಿನ್ನೆಲೆಯಲ್ಲಿ ತನ್ನ ಆಹಾರದ ಶೈಲಿಯನ್ನು ರೂಪಿಸಿಕೊಳ್ಳುತ್ತದೆ. ಆಹಾರದಲ್ಲಿ ಮೂರು ಸ್ತರಗಳನ್ನು ಸೃಷ್ಟಿಸಿಕೊಳ್ಳುತ್ತದೆ – ಮೊದಲನೆಯದು ಯಾವಾಗಲೂ ವರ್ಜ್ಯವಾಗಿರುವ ಆಹಾರಗಳು, ಎರಡನೆಯದು ವಿಶೇಷ ದಿನಗಳಲ್ಲಿ ವರ್ಜ್ಯವಾಗಿರುವವು ಮತ್ತು ವಿಶೇಷ ದಿನಗಳಲ್ಲಷ್ಟೇ ಗ್ರಾಹ್ಯವಾಗಿರುವವು, ಮೂರನೆಯದು ಎಲ್ಲ ಕಾಲದಲ್ಲಿ ಗ್ರಾಹ್ಯವಾಗಿರುವ ಮತ್ತು ವಿಶೇಷ ದಿನಗಳಂದು ವಿಧಿಸಲ್ಪಟ್ಟ ಆಹಾರಗಳು.” ಇದನ್ನು ಕ್ರಮವಾಗಿ ವರ್ಜ್ಯ, ವಿವರ್ಜ್ಯ (ವಿಶೇಷವಾಗಿ ವರ್ಜಿಸಲ್ಪಟ್ಟಿರುವದು) ಮತ್ತು ಅವರ್ಜ್ಯ ಎಂದು ಸದ್ಯಕ್ಕೆ ಕರೆಯೋಣ. ಈ ಊಹಾಸಿದ್ಧಾಂತಕ್ಕೆ ಇನ್ನೆರಡು ವಾಕ್ಯವನ್ನು ಜೋಡಿಸಿಕೊಳ್ಳೋಣ. “ಒಂದು ಆಹಾರವು ಯಾವ ಸ್ತರದಲ್ಲಿ ಇರಬೇಕು ಎನ್ನುವದು ಆಯಾ ಸಂಪ್ರದಾಯವೇ ತನ್ನ ಪರಂಪರೆಯ ಆಧಾರದಲ್ಲಿ ಕಂಡುಕೊಳ್ಳುತ್ತದೆ ಮತ್ತು ಅದು ಸಂಪ್ರದಾಯಸ್ಥರಿಗೆ ಅಧ್ಯಾತ್ಮದಲ್ಲಿ ಮುಂದುವರೆಯಲು ಸಾಧ್ಯವಾದಷ್ಟೂ ತಮ್ಮ ಆಹಾರದ ಶೈಲಿಯನ್ನು ಅವರ್ಜ್ಯದೆಡೆಗೆ ಸಾಗುವಂತೆ ಪ್ರೋತ್ಸಾಹಿಸುತ್ತದೆ”

ಈ ನಾಲ್ಕು ವಾಕ್ಯಗಳ ಊಹಾಸಿದ್ಧಾಂತವು ನಮ್ಮ ಭಾರತೀಯ ಆಹಾರದ ಶೈಲಿಗಳನ್ನು ವಿವರಿಸಬಹುದೇ? ಮೊದಲನೇಯದಾಗಿ ಸಸ್ಯಾಹಾರಿ ಬ್ರಾಹ್ಮಣರ ಆಹಾರಶೈಲಿಗಳನ್ನು ವಿವರಿಸಬಹುದೇ? ಹೌದು. ಬಹುಶಃ ನೀವು ಊಹಾ ಸಿದ್ಧಾಂತವನ್ನು ಓದಿ “ಏನ್ರೀ, ಏನೋ ವೈಜ್ಞಾನಿಕ ವಿವರಣೆ ನೀಡುತ್ತೇನೆ ಎಂದು ಸೊಂಟದ ಮೇಲೆ ಕೈಯಿಟ್ಟು ಕೊಚ್ಚಿಕೊಂಡು ಈಗ ಬ್ರಾಹ್ಮಣರು ಹೇಳುವ ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಆಹಾರ ಎಂಬ ಪ್ರಕಾರಗಳನ್ನೇ ನೀವು ಬೇರೊಂದು ಹೆಸರಲ್ಲಿ ಹೇಳುತ್ತಿದ್ದೀರಲ್ಲ?” ಎಂದು ಕೇಳಬಹುದು. ನಿಜ. ನಿಮ್ಮ ಆರೋಪವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಸಾತ್ವಿಕ, ರಾಜಸಿಕ ಶಬ್ದಗಳು ಒಂದು ಸ್ಪಷ್ಟವಾದ ಕಲ್ಪನೆಯನ್ನು ಕೊಡುವಲ್ಲಿ ಸಫಲವಾಗದೇ ಇರಬಹುದು ಅಥವಾ ಇದಕ್ಕೆ ಇಂಗ್ಲೀಷಿನಲ್ಲಿ ಸಂವೇದೀ ಶಬ್ದಗಳು ಸಿಗದೇ ಹೋಗಬಹುದು. ಅದಕ್ಕಾಗಿ ಒಂದು ಸ್ಪಷ್ಟವಾದ ಕಲ್ಪನೆಯನ್ನು ನೀಡುವ ಶಬ್ದಗಳೊಂದಿಗೆ ವಿವರಣೆ ನೀಡಲು ಇದು ಮುಖ್ಯವಾದದ್ದು.

ಬುದ್ಧಿಜೀವಿಗಳಂತೂ ಈ ಊಹಾ ಸಿದ್ಧಾಂತವನ್ನು ಪುರೋಹಿತಶಾಹಿ ಹುನ್ನಾರಗಳ ಹಿಂಬಾಗಿಲ ಪ್ರವೇಶ ಎಂದೇ ಘೋಷಿಸುತ್ತಾರೆ. ಇದರಲ್ಲೇನೂ ಸಂಶಯವಿಲ್ಲ. ಅದರ ಬದಲು ಈ ಊಹಾಸಿದ್ಧಾಂತದಲ್ಲಿರುವ ವಾಕ್ಯಗಳಿಗೆ ವಿರುದ್ಧವಾದ ವಾಸ್ತವವನ್ನೇನಾದರೂ ನಮ್ಮ ಸಮಾಜದಲ್ಲಿ ತೋರಿಸಿ ಪುಣ್ಯ ಕಟ್ಟಿಕೊಂಡರೆ ಈ ಊಹಾಸಿದ್ಧಾಂತವನ್ನು ಕಸದ ತಿಪ್ಪೆಗೆಸೆಯುವದೇನೂ ದೊಡ್ಡ ಕೆಲಸವಲ್ಲ. ಆದರೆ ಅವರು ಹಾಗೆ ಮಾಡುವರೆಂಬ ಯಾವ ನಂಬಿಕೆಯೂ ಉಳಿದುಕೊಂಡಿಲ್ಲ. ಇರಲಿ ಸದ್ಯಕ್ಕೆ ಈ ಊಹಾಸಿದ್ಧಾಂತವು ನಮಗೆ ಈಗಾಗಲೇ ಗೊತ್ತಿರುವ ಸಂಪ್ರದಾಯಗಳ ಆಹಾರದ ಶೈಲಿಗಳನ್ನು ವಿವರಿಸಬಲ್ಲದೇ ಎಂಬುದನ್ನು ಗಮನಿಸೋಣ. ಮೊದಲು ಸ್ಮಾರ್ತ ಬ್ರಾಹ್ಮಣ ಪಂಥಕ್ಕೆ ಸೇರಿದ ನನ್ನ ಮನೆಯ ಸಂಪ್ರದಾಯವನ್ನೇ ತೆಗೆದುಕೊಳ್ಳುತ್ತೇನೆ.
ನನ್ನ ಸಂಪ್ರದಾಯವು ಮಾಂಸ, ಮೊಟ್ಟೆ, ಅಣಬೆಗಳನ್ನು ವರ್ಜ್ಯವನ್ನಾಗಿ ಪರಿಗಣಿಸುತ್ತದೆ. ಕೆಲವು ದಿನಗಳಂದು ಅನ್ನ ವರ್ಜ್ಯವಾಗಿದೆ, ಉಪ್ಪು-ಹುಳಿ-ಖಾರಗಳಿರುವ ಆಹಾರಗಳು, ಈರುಳ್ಳಿ ಬೆಳ್ಳುಳ್ಳಿಗಳಂಥ ಪದಾರ್ಥಗಳು ಕೆಲ ದಿನಗಳಂದು ವರ್ಜ್ಯ. ಶ್ರಾದ್ಧಕ್ಕೆ ಮಾಡುವ ಲಾಡುವನ್ನು ಉಳಿದ ದಿನಗಳಂದು ಮಾಡುವಂತೆಯೇ ಇಲ್ಲ. ಇವುಗಳೆಲ್ಲವನ್ನೂ ವಿವರ್ಜ್ಯ ಎಂದು ಪರಿಗಣಿಸಬಹುದು. ಹಣ್ಣುಗಳು, ಹಾಲು ಮುಂತಾದ ಕೆಲವೇ ಆಹಾರಗಳು ಯಾವ ಕಾಲದಲ್ಲಿಯೂ ಸೇವಿಸಬಹುದಾದ ಅವರ್ಜ್ಯವಾಗಿರುವ ಆಹಾರ. ಯುಗಾದಿಯಂದು ಸೇವಿಸುವ ಬೇವನ್ನು ನಾನು ವಿವರ್ಜ್ಯ ಎನ್ನುವ ಬದಲು ಅವರ್ಜ್ಯ ಎಂಬುದಾಗಿ ನಾನು ಭಾವಿಸುತ್ತೇನೆ. ಕಾರಣ ಬೇವನ್ನು ಉಳಿದ ದಿನಗಳಂದು ವರ್ಜಿಸಬೇಕು ಎಂಬ ನಿಯಮ ನಮ್ಮಲ್ಲಿಲ್ಲ. ಆದರೆ ಶ್ರಾದ್ಧಕ್ಕೆ ಮಾಡುವ ಲಾಡುವನ್ನು ಉಳಿದ ದಿನ ಮಾಡುವದನ್ನು ನಿಷೇಧಿಸಲಾಗಿದೆ. ಹೀಗಾಗಿ ಶ್ರಾದ್ಧದ ಲಾಡು ವಿವರ್ಜ್ಯ. ಯುಗಾದಿಯ ಬೇವು ಅವರ್ಜ್ಯ. ಈ ವ್ಯತ್ಯಾಸ ಗಮನದಲ್ಲಿಟ್ಟುಕೊಂಡು ನಾವು ಆಹಾರದಲ್ಲಿನ ಮೂರು ಸ್ತರಗಳನ್ನು ಕಂಡುಕೊಳ್ಳಬಹುದಾಗಿದೆ.

ಜೈನ ಸಂಪ್ರದಾಯವು ಬ್ರಾಹ್ಮಣ ಸಂಪ್ರದಾಯಕ್ಕಿಂತಲೂ ಹೆಚ್ಚಿನ ಕಠಿಣ ಆಹಾರದ ಶೈಲಿಯನ್ನು ಪಾಲಿಸುತ್ತದೆ. ಈರುಳ್ಳಿ ಬೆಳ್ಳುಳ್ಳಿಗಳನ್ನೂ ವರ್ಜ್ಯವೆನ್ನುವ ಈ ಸಂಪ್ರದಾಯವು ಬಹುತೇಕ ಗ್ರಾಹ್ಯವಾದ ಆಹಾರಗಳನ್ನು ವಿವರ್ಜ್ಯದ ಗುಂಪಿಗೇ ಸೇರಿಸಿಕೊಳ್ಳುತ್ತದೆ. ಸಂಪೂರ್ಣ ನಿರಾಹಾರವನ್ನು ಈ ಸಂಪ್ರದಾಯವು ಅವರ್ಜ್ಯ ಎಂದು ಕರೆಯುತ್ತದೆ. ಆದ್ದರಿಂದ ಸಲ್ಲೇಖನವು ಜೈನರಿಗೆ ಒಂದು ಆದರ್ಶವಾಗಿದೆ. ನಿರಾಹಾರವೂ ಒಂದು ಆಹಾರಶೈಲಿ ಎಂಬುದು ಇಲ್ಲಿ ಗಮನಾರ್ಹ. ಕೇವಲ ಅಧ್ಯಾತ್ಮದ ಸಂದರ್ಭದಲ್ಲಿ ಮಾತ್ರ ಇದು ಸರಿಯಾದ ಅರ್ಥ ಪಡೆಯಲು ಸಾಧ್ಯ. ಹೀಗಾಗಿ ಜೈನ ಸಂಪ್ರದಾಯಗಳು ಸಲ್ಲೇಖನಕ್ಕೆ ಪ್ರೋತ್ಸಾಹ ಕೊಡುತ್ತದೆ. ಕಾರಣ ಸಂಪ್ರದಾಯಗಳು ತನ್ನ ಸಂಪ್ರದಾಯಸ್ಥರಿಗೆ ವಿವರ್ಜ್ಯದಿಂದ ಅವರ್ಜ್ಯದೆಡೆಗೆ ಸಾಗುವಂತೆ ಹೇಳುತ್ತದೆ.
ಲಿಂಗಾಯತ ಸಂಪ್ರದಾಯಗಳು ವರ್ಜ್ಯವಾಗಿರುವ ಆಹಾರವನ್ನು ಸ್ಪಷ್ಟವಾಗಿ ನಿರ್ದೇಶಿಸುತ್ತವೆ. ಒಂದು ಆದರ್ಶಯುತವಾದ ಆಹಾರ ಶೈಲಿಯ ಕಲ್ಪನೆಗಳನ್ನೂ ಕಟ್ಟಿಕೊಡುತ್ತವೆ.  ಬೌದ್ಧ ಸಂಪ್ರದಾಯಗಳಲ್ಲೂ ನಾವು ಇದನ್ನು ಕಾಣಬಹುದು. ಇನ್ನು ಕೆಲವು ಸಂಪ್ರದಾಯಗಳು ಹಬ್ಬಗಳಂದು ಮಾಂಸವನ್ನು ನಿಷೇಧಿಸುತ್ತವೆ. ಅವುಗಳೂ ಕೂಡ ಅಧ್ಯಾತ್ಮದ ಹಾದಿಯಲ್ಲಿ ಮುಂದುವರೆದಂತೆ ಮಾಂಸವನ್ನು ತ್ಯಜಿಸುವ ಆದರ್ಶವನ್ನು ಕಟ್ಟಿಕೊಡುತ್ತವೆ. ಚಟ್ಟದಲ್ಲಿ ಉರಿಯುತ್ತಿರುವ ನರದೇಹವನ್ನು ಎಳೆದುಕೊಂಡು ನರಮಾಂಸ ತಿಂದು ಭಂಗಿ ಏರಿಸುವ ಅಘೋರಿಗಳ ಸಂಪ್ರದಾಯವನ್ನೂ ನಾವು ಈ ವಿವರಣೆಯೊಂದಿಗೆ ವಿವರಿಸಬಹುದು. ನಮ್ಮ ಸಂಪ್ರದಾಯಗಳು ಹಾಕಿಕೊಳ್ಳುವ ಆಹಾರದ ಶೈಲಿಗಳು ಅಧ್ಯಾತ್ಮವನ್ನೇ ಆಧಾರವಾಗಿಟ್ಟುಕೊಂಡಿವೆ ಎಂಬ ಈ ಊಹಾಸಿದ್ಧಾಂತ ನಮಗೆ ನಮ್ಮ ಸಂಪ್ರದಾಯಗಳು ಆಹಾರದ ಶೈಲಿಗಳನ್ನು ಹೇಗೆ ಸೃಷ್ಟಿಸಿಕೊಂಡಿವೆ ಎಂಬುದರ ಚಿತ್ರಣ ನೀಡುತ್ತದೆ.

ಭಾರತೀಯ ಸಂಪ್ರದಾಯಸ್ಥ ದೇವಸ್ಥಾನದಲ್ಲಿ ಎತ್ತನ್ನು ಕಡಿಯುತ್ತಾನೆ ಆದರೆ ಆಕಳನ್ನು ತಿನ್ನುವದಿಲ್ಲ. ಪಾಶ್ಚಿಮಾತ್ಯರಿಗೆ ಇದು ಅರ್ಥವಾಗುವದಿಲ್ಲ. ಕಾರಣ ಅವರು ಬೀಫ್ ಎಂಬ ಶಬ್ದದಲ್ಲಿ ಎತ್ತು ಮತ್ತು ಆಕಳ ಎರಡರ ಮಾಂಸವನ್ನು ಒಂದೇ ಎಂದು ತಿಳಿಯುತ್ತಾರೆ. ನಮ್ಮ ಸಂಪ್ರಾದಯಗಳು ಜಗತ್ತಿನಲ್ಲಿರುವ ಎಲ್ಲರಿಗೂ ಸರಿಯಾಗಿ ಅರ್ಥವಾಗಬೇಕಾದರೆ ಒಂದು ಸಮರ್ಪಕವಾದ ವಿವರಣೆ ನೀಡುವ ಚಿತ್ರಣ ಬೇಕಾಗುತ್ತದೆ. ಜಾತಿಗಳನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳೆಂದು ವಿಭಾಗಿಸುವ ಈಗಿನ ಬುದ್ಧಿಜೀವಿಗಳ ಚಿತ್ರಣವು ಸಮರ್ಪಕ ವಿವರಣೆ ನೀಡುವಲ್ಲಿ ಸೋಲುತ್ತದೆ. ಕಾರಣ ಆಹಾರವನ್ನು ಸಂಪೂರ್ಣವಾಗಿ ಇಲ್ಲವೇ ತಾತ್ಕಾಲಿಕವಾಗಿ ನಿಷೇಧಿಸುವದು ಸ್ವಾತಂತ್ರ್ಯದ ಹಕ್ಕಿಗೆ ವಿರೋಧವಾಗಿ ಕಾಣುತ್ತದೆ. ಹೀಗಾಗಿ ಅಂಥ ವಾಕ್ಯಗಳನ್ನು ಹೇಳಿರುವ ಸಂತರು ಆಹಾರದ ಹಕ್ಕನ್ನು ವಿರೋಧಿಸುವ ರಾಕ್ಷಸರಂತೆ ಕಾಣಿಸುತ್ತಾರೆ.

ಬಹುಶಃ ಈ ಚಿತ್ರಣವು ಇಂದು ಆಹಾರದ ಶೈಲಿಯ ಕುರಿತು ನಮ್ಮ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದು ಎಂದು ನನ್ನ ಅನಿಸಿಕೆ. ಗೋಹತ್ಯೆ ನಿಷೇಧ ಮತ್ತು ಗೋಮಾಂಸ ನಿಷೇಧಗಳ ಕುರಿತಾದ ಬೇಡಿಕೆ ಮತ್ತು ವಿರೋಧಗಳ ಸಮಸ್ಯೆಯನ್ನು ಅರಿತು ಒಂದು ಪರಿಹಾರವನ್ನು ತಿಳಿಯುವಲ್ಲಿ ಸಹಾಯವಾಗಬಹುದು. ಸಾಂಪ್ರದಾಯಿಕ ಹಬ್ಬಗಳಲ್ಲಿ ಯಾವ ಆಹಾರ ಪದಾರ್ಥಗಳ ಬೇಡಿಕೆ ಯಾವ ಪ್ರದೇಶಗಳಲ್ಲಿ ಹೆಚ್ಚಬಹುದು ಎಂಬುದನ್ನು ತಿಳಿಯಲು ಇದು ಸಹಾಯಕಾರಿ. ಹಿಂದಿನ ವೈದಿಕ ಸಂಪ್ರದಾಯಗಳಲ್ಲಿ ಮಾಂಸಾಹಾರವಿದ್ದರೂ, ವೈದಿಕ ಕರ್ಮಗಳಲ್ಲಿ ಮಾಂಸವು ವಿನಿಯೋಗವಾಗುತ್ತಿದ್ದರೂ ಈಗ ಅವು ನಿಂತಿರುವದು ಮತ್ತು ಅದಕ್ಕೆ ಪರ್ಯಾಯ ವ್ಯವಸ್ಥೆಗಳು ಬಂದಿರುವ ಸಂಗತಿಗಳನ್ನು ವಿವರಿಸಲೂ ಇದು ಸಹಾಯಕವಾಗಬಹುದು. ಪಾಶ್ಚಿಮಾತ್ಯರಿಗೆ ನಮ್ಮ ಸಂಪ್ರದಾಯದ ಆಹಾರ ಪದ್ಧತಿಗಳು ವಿಧಿ/ನಿಷೇಧಗಳು ಅರ್ಥವಾಗುವಂತೆ ವಿವರಿಸಬಹುದು.

ಈ ಚಿತ್ರಣದಲ್ಲಿ ಏನಾದರೂ ಲೋಪಗಳಿವೆಯೇ? ಯಾವುದಾದರೂ ಸಂಪ್ರದಾಯವು ಇದರಲ್ಲಿನ ಊಹಾಸಿದ್ಧಾಂತಗಳಿಗೆ ಮತ್ತು ಇದರ ವಿವರಣೆಗಳಿಗೆ ವಿರುದ್ಧ ವಾಸ್ತವವನ್ನು ನೀಡುತ್ತದೆಯೇ? ಇರಬಹುದು. ಅದರ ಕುರಿತು ಇನ್ನಷ್ಟು ಹೆಚ್ಚಿನ ದತ್ತಾಂಶಗಳನ್ನು ಸಂಗ್ರಹಿಸುವ ಅಗತ್ಯತೆ ಇದೆ. ಎಲ್ಲ ಆಹಾರವನ್ನೂ ವರ್ಜಿಸುವ ಸಲ್ಲೇಖನ ವ್ರತಸ್ಥರು ಒಂದೆಡೆಯಾದರೆ, ಯಾವುದನ್ನೂ ವರ್ಜಿಸದ ಅಘೋರಿಗಳು ಇನ್ನೊಂದೆಡೆ. ನಮ್ಮ ದೇಶದಲ್ಲಿರುವ ಎಲ್ಲ ಸಂಪ್ರದಾಯಗಳು ಈ ಎರಡು ಅತಿರೇಕಗಳ ನಡುವೆ ಹರಡಿಕೊಂಡಿವೆ. ಆದರೆ ಸದ್ಯಕ್ಕೆ ನನ್ನ ಸೀಮಿತ ಜ್ಞಾನದ ಪರಿಧಿಯಲ್ಲಿ ಹೇಳುವದಾದರೆ ಈ ಚಿತ್ರಣವು ಒಂದು ಸಮರ್ಪಕ ವಿವರಣೆ ನೀಡುವಲ್ಲಿ ಮೊದಲ ಹೆಜ್ಜೆ ಎನ್ನಬಹುದು. ಹೀಗಾಗಿ ಈ ಚಿತ್ರಣದ ಊಹಾಸಿದ್ಧಾಂತಗಳನ್ನು ಇನ್ನೊಮ್ಮೆ ಬರೆದು ಚರ್ಚೆಗೆ ಮುಕ್ತವಾಗಿರಿಸುತ್ತೇನೆ.

“ಪ್ರತಿಯೊಂದು ಸಂಪ್ರದಾಯವು ಅಧ್ಯಾತ್ಮದ ಹಿನ್ನೆಲೆಯಲ್ಲಿ ತನ್ನ ಆಹಾರದ ಶೈಲಿಯನ್ನು ರೂಪಿಸಿಕೊಳ್ಳುತ್ತದೆ. ಆಹಾರದಲ್ಲಿ ಮೂರು ಸ್ತರಗಳನ್ನು ಸೃಷ್ಟಿಸಿಕೊಳ್ಳುತ್ತದೆ – ಮೊದಲನೇಯದು ಯಾವಾಗಲೂ ವರ್ಜ್ಯವಾಗಿರುವ ಆಹಾರಗಳು, ಎರಡನೇಯದು ವಿಶೇಷ ದಿನಗಳಲ್ಲಿ ವರ್ಜ್ಯವಾಗಿರುವವು ಮತ್ತು ವಿಶೇಷ ದಿನಗಳಲ್ಲಷ್ಟೇ ಗ್ರಾಹ್ಯವಾಗಿರುವವು, ಮೂರನೇಯದು ಎಲ್ಲ ಕಾಲದಲ್ಲಿ ಗ್ರಾಹ್ಯವಾಗಿರುವ ಮತ್ತು ವಿಶೇಷ ದಿನಗಳಂದು ವಿಧಿಸಲ್ಪಟ್ಟ ಆಹಾರಗಳು. ಒಂದು ಆಹಾರವು ಯಾವ ಸ್ತರದಲ್ಲಿ ಇರಬೇಕು ಎನ್ನುವದು ಆಯಾ ಸಂಪ್ರದಾಯವೇ ತನ್ನ ಪರಂಪರೆಯ ಆಧಾರದಲ್ಲಿ ಕಂಡುಕೊಳ್ಳುತ್ತದೆ. ಮತ್ತು ಅದು ಸಂಪ್ರದಾಯಸ್ಥರಿಗೆ ಅಧ್ಯಾತ್ಮದಲ್ಲಿ ಮುಂದುವರೆಯಲು ಸಾಧ್ಯವಾದಷ್ಟೂ ತಮ್ಮ ಆಹಾರದ ಶೈಲಿಯನ್ನು ಅವರ್ಜ್ಯದೆಡೆಗೆ ಸಾಗುವಂತೆ ಪ್ರೋತ್ಸಾಹಿಸುತ್ತದೆ.”

6 ಟಿಪ್ಪಣಿಗಳು Post a comment
  1. hemapathy
    ಜನ 12 2016

    ಕಾಡುಗಳಲ್ಲಿ ಯಥೇಚ್ಛವಾಗಿ ಸಿಗುವ ಸಸ್ಯಾಹಾರ ತಿಂದು ಬದುಕುವ ಪ್ರಾಣಿಗಳಿದ್ದರೂ ಕೂಡ, ಅವುಗಳನ್ನೇ ಕೊಂದು ತಿನ್ನುವ ಮಾಂಸಾಹಾರಿ ಪ್ರಾಣಿಗಳೂ ಏಕೆ ಇವೆ ಎಂಬುದನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇದನ್ನು ನನ್ನ ರೀತಿಯಲ್ಲೇ ಹೇಳುವುದಾದರೆ, ಪ್ರಕೃತಿ ನಮಗೆ ಬುದ್ಧಿ ಕಲಿಸಲೆಂದೇ ಮಾಡಿರುವ/ತೋರಿಸಿರುವ ‘ಸರಿದೂಗಿಸುವ’ ಉಪಾಯವಿರಬಹುದು [Mother Nature’s balancing act] ಎಂದು ಹೇಳಲು ಬಯಸುತ್ತೇನೆ. ಇಲ್ಲಿ ಒಂದು ಮಾತನ್ನು ಮರೆಯದೇ ಹೇಳಲೇಬೇಕಿದೆ. ಅದೇನೆಂದರೆ, ಮಾನವರಿಗೆ ಪ್ರಕೃತಿ ನೀಡಿರುವ ದವಡೆ ಮೆಲಕು ಹಾಕುವಂತಹ ದವಡೆಯಾದ್ದರಿಂದ, ನಮಗೆ ಮಾಂಸಾಹಾರ ನಿಷಿದ್ಧ. ಅದಕ್ಕೇ ಮಾಂಸಾಹಾರ ತಿನ್ನುವವರು ನಾಯಿ ನರಿಗಳಂತೆ ಸಿಗಿದು ತಿನ್ನಲು ಸಾಧ್ಯವಾಗದೇ, ಅದನ್ನು ಬೇಯಿಸಿ, ಮಸಾಲೆ ಸೇರಿಸಿ, ನಾಲಿಗೆಗೆ ರುಚಿ ಬರುವಂತೆ ಮಾಡಿಕೊಂಡು ತಿನ್ನುತ್ತಿದ್ದಾರೆ. ಮಾನವನಿಗೂ, ಮಾಂಸಕ್ಕೂ ಬಲುದೂರ ಹಾಗೂ ಸುತರಾಂ ಸಂಬಂಧವೇ ಇಲ್ಲ.

    ಉತ್ತರ
  2. ಜನ 12 2016

    “ಹಿಂದಿನ ವೈದಿಕ ಸಂಪ್ರದಾಯಗಳಲ್ಲಿ ಮಾಂಸಾಹಾರವಿದ್ದರೂ, ವೈದಿಕ ಕರ್ಮಗಳಲ್ಲಿ ಮಾಂಸವು ವಿನಿಯೋಗವಾಗುತ್ತಿದ್ದರೂ” — ಇದು ಕಪೋಲ ಕಲ್ಪಿತ ವಾಕ್ಯ. ಒಂದೇ ಒಂದು ವೇದ ಮಂತ್ರದಲ್ಲೂ ಮಾಂಸಾಹಾರವನ್ನು ಹೇಳಿಲ್ಲ!! ಇನ್ನು ವಿಕೃತ ಆಚರಣೆಗಳಿಗೆ ವೇದದ ಹೆಸರು ಕೊಡುವುದು ತಪ್ಪು.

    ಇನ್ನು ಅಘೋರಿಗಳನ್ನು ಈಗಿನ ಮಾದ್ಯಮದವರು ನೋಡಿಯೇ ಇಲ್ಲ! ಅಘೋರ ಸಿದ್ಧಾಂತವು ಅವರಿಗೆ ತಿಳಿದೇ ಇಲ್ಲ. ವೇಷಧಾರಿಗಳನ್ನು ಅಘೋರಿಗಳೆಂದು ತಿಳಿದು ಏನಕ್ಕೇನೋ ಅಪಾರ್ಥ ಮಾಡಿಕೊಂಡಿದ್ದಾರೆ. ಘೋರವೆಂದರೆ ಭಯಾನಕವಾದದ್ದು, ಅಘೋರವೆಂದರೆ ಅತೀ ಸಾತ್ವಿಕವಾದದ್ದು.

    ಮೂಲ ಜೈನ ಸಂಪ್ರದಾಯವು ವೇದಾಧಾರಿತ ನಾಥ ಸಂಪ್ರದಾಯದಿಂದ ಹುಟ್ಟಿದ್ದು. ಆ ನಿಟ್ಟಿನಲ್ಲಿ ವೈದಿಕ-ಜೈನ ಸಮನ್ವಯವಿದೆ. ಅಘೋರವೂ ನಾಥ ಸಂಪ್ರದಾಯದ ಕವಲು. ನಾಥ ಸಂಪ್ರದಾಯದ ಮೂಲ ಪ್ರವರ್ತಕರು ದತ್ತಾತ್ರೇಯರು. ಅಲ್ಲಿಂದ ಮುಂದೆ ಶೈವ ಪಂಥ, ಜಂಗಮ, ಲಿಂಗಾಯತ ಇತ್ಯಾದಿ ಬೆಳೆದವು. ಎಷ್ಟೇ ಕವಲುಗಳಾದರೂ ಮೂಲ ವೈದಿಕ ಆಶಯಗಳನ್ನು ಬಿಟ್ಟಿರುವುದಿಲ್ಲ.

    ಇನ್ನು ವೇದದಲ್ಲಿ ಆಹಾರ ಕ್ರಮವು ಯಾವುದೇ ಸಂಪ್ರದಾಯಕ್ಕಾಗಿ ಮಾಡಿದ್ದಲ್ಲ. ಅದು ದೇಹಶಾಸ್ತ್ರದ ರೀತ್ಯ ಅತ್ಯುನ್ನತ ವೈಜ್ಞಾನಿಕ ವಿಮರ್ಷೆಯೊಂದಿಗೆ ಮಂಡಿಸಲ್ಪಟ್ಟಿದೆ. ಮೂಲ ಸೂತ್ರವೆಂದರೆ ದೇಶ-ಕಾಲ ಆಧರಿಸಿದ ಜೀವನ ಕ್ರಮ ಹಾಗೂ ಆಹಾರ ಪದ್ಧತಿ. ಅದನ್ನು ಅಧ್ಯಯನ ಮಾಡಿದ ಸೂತ್ರಕಾರರು ಇಡೀ ಭೂಮಂಡಲವನ್ನು ೨೭ ವಿಭಾಗ ಮಾಡಿ ಇಂತಿಂತಹಾ ಪ್ರದೇಶಕ್ಕೆ ಇಂತಿಂತಹಾ ಜೀವನ ವಿಧಾನ ಸೂಕ್ತವೆಂದು ದಾಖಲಿಸಿದ್ದಾರೆ. ದೇಹಶಾಸ್ತ್ರ ಆಧರಿಸಿ ಆಯಾ ಪ್ರಾದೇಶಿಕ ಸೂತ್ರ ಹೊಂದಾಣಿಕೆಯಾಗುತ್ತದೆಯೇ ಹೊರತು ಯಾವುದೇ ಸಂಪ್ರದಾಯ ಆಧರಿತವಾಗಿಯಲ್ಲ.

    ಉತ್ತರ
    • ಜನ 12 2016

      ಬೃಹದಾರಣ್ಯಕ ಉಪನಿಷತ್ತು ೬-೪-೧೮

      ಅಥ ಯ ಇಚ್ಛೇತ್ ಪುತ್ರೋ ಮೇ ಪಣ್ಡಿತೋ ವಿಗೀತಃ ಸಮಿತಿಂಗಮಃ ಶುಶ್ರೂಷಿತಾಂ ವಾಚಂ ಭಾಷಿತಾ ಜಾಯೇತ ಸರ್ವಾನ್ ವೇದಾನನುಬ್ರುವೀತ ಸರ್ವಮಾಯುರಿಯಾದಿತಿ ಮಾಗ್ಂ ಸೌದನಂ ಪಾಚಯಿತ್ವಾ ಸರ್ಪಿಷ್ಮಂತಮಶ್ನೀಯಾತಾಮೀಶ್ವರೌ ಜನಯಿತವಾ ಔಕ್ಷೇಣ ವಾರ್ಷಭೇಣ ವಾ ||

      ಇನ್ನು ಯಾವನು ’ನನಗೆ ಪಂಡಿತನೂ ವಿಗೀತನೂ ಸಮಿತಿಂಗಮನೂ ಕೇಳಬೇಕೆಂಬ ವಾಕ್ಕನ್ನು ಆಡುವವನೂ ಆದ ಪುತ್ರನುಂಟಾಗಲಿ ಸರ್ವವೇದಗಳನ್ನೂ ಅಧ್ಯಯನ ಮಾಡಲಿ ಸರ್ವಾಯಸ್ಸನ್ನು ಪಡೆಯಲಿ!’ ಎಂದು ಇಚ್ಛಿಸುವನೋ ಅವನು ಹೋರಿಯ ಅಥವಾ ಎತ್ತಿನ ಮಾಂಸದನ್ನವನ್ನು ಬೇಯಿಸಿ ತುಪ್ಪದೊಡನೆ (ದಂಪತಿಗಳಿಬ್ಬರೂ) ತಿನ್ನಬೇಕು. (ಅಂಥವನನ್ನು) ಹುಟ್ಟಿಸುವದಕ್ಕೆ ಸಮರ್ಥರಾಗುವರು.

      ಹಿಂದಿನ ವೈದಿಕ ಸಂಪ್ರದಾಯಗಳಲ್ಲಿ ಮಾಂಸಾಹಾರವಿದ್ದದ್ದು ಮತ್ತು ವೈದಿಕ ಕರ್ಮಗಳಲ್ಲಿ ವಿನಿಯೋಗವಾಗುತ್ತಿದ್ದುದು ಕಪೋಲಕಲ್ಪಿತವಲ್ಲ ಎಂಬುದಕ್ಕೆ ನಾನು ಬೃಹದಾರಣ್ಯಕ ಉಪನಿಷತ್ತಿನ ವಾಕ್ಯವನ್ನು ನೀಡಿದ್ದೇನೆ. ಹೀಗಾಗಿ ಇದು ಕಪೋಲ ಕಲ್ಪಿತವಾಕ್ಯವಲ್ಲ ಎಂದು ನೀವು ಒಪ್ಪಿಕೊಳ್ಳುವದಾದರೆ ಮುಂದಿನ ಆಕ್ಷೇಪಣೆಯನ್ನು ಕೈಗೆತ್ತಿಕೊಳ್ಳುತ್ತೇನೆ.

      ಉತ್ತರ
      • ಜನ 13 2016

        ನೀವು ಕೇಳಿದ, ಕೇಳಬಹುದಾದ ಬಹುತೇಕ ಪ್ರಶ್ನೆಗಳಿಗೆ ಈ ಬ್ಲಾಗ್ ಲೇಖನದಲ್ಲಿ ಉತ್ತರಿಸಿ ಆಗಿದೆ. ಓದಿಕೊಳ್ಳಿ http://veda-vijnana.blogspot.in/2013/03/blog-post_31.html

        ಉತ್ತರ
        • ಜನ 13 2016

          ಧನ್ಯವಾದಗಳು ಸರ್.. ಈ ಬ್ಲಾಗಿನ ಲೇಖಕರು ಉಪನಿಷತ್ತುಗಳನ್ನು “ಸನಾತನ ಧರ್ಮದ ತಳಹದಿ ವೇದಗಳೇ ಹೊರತು ಉಪನಿಷತ್ತುಗಳಲ್ಲ” ಎಂದು ಹೇಳಿದ್ದಾರೆ. ಆದರೆ ಈ ವಾಕ್ಯಗಳು ಯಾವ ಪುರಾತನ ಗ್ರಂಥಗಳಲ್ಲೂ ನಾನು ನೋಡಿಲ್ಲ. “ಶ್ರುತಿ ಮತ್ತು ಸ್ಮೃತಿಗಳಲ್ಲಿ ವಿರೋಧಾಭಾಸಗಳು ಕಂಡರೆ ಶ್ರುತಿಯನ್ನೇ ಪ್ರಮಾಣವಾಗಿ ತೆಗೆದುಕೊಳ್ಳಬೇಕು” ಎಂಬಂಥ ವಾಕ್ಯಗಳು ಶಂಕರಾಚಾರ್ಯರ ಭಾಷ್ಯದಲ್ಲಿದೆ ನಿಜ. ಆದರೆ ಈ ವಾಕ್ಯದಲ್ಲಿ ಅವರು ಉಪನಿಷತ್ತುಗಳನ್ನು ಶ್ರುತಿ ಎಂದೇ ಪರಿಗಣಿಸುತ್ತಾರೆ ಹೊರತು ಸ್ಮೃತಿ ಎಂದು ಪರಿಗಣಿಸಿಲ್ಲ. ಮಂತ್ರಬ್ರಾಹ್ಮಣಾತ್ಮಕ ವೇದಗಳು ಕರ್ಮಕಾಂಡಕ್ಕೆ ಹೇಗೆ ಪ್ರಮಾಣವೋ ಹಾಗೆಯೇ ಆರಣ್ಯಕ-ಉಪನಿಷತ್ತುಗಳನ್ನೊಳಗೊಂಡ ವೇದಾಂತವು ಜ್ಞಾನಕಾಂಡಕ್ಕೆ ಪ್ರಮಾಣ ಎಂಬುದು ಶಂಕರಾಚಾರ್ಯರ ಮತ್ತು ನಂತರದ ಕೃತಿಗಳಲ್ಲಿ ಕಾಣಬಹುದು.

          ಬೃಹದಾರಣ್ಯಕದಲ್ಲಿ ಬರುವ ಮಾಂಸ, ಔಕ್ಷ ವಾರ್ಷಭ ಶಬ್ದಗಳಿಗೆ ಈ ಬ್ಲಾಗಿನ ಲೇಖಕರು ಹೊಸ ಅರ್ಥಗಳನ್ನು ಕಲ್ಪಿಸುತ್ತಾರಾದರೂ ಯಾವ ಉಪನಿಷತ್ತಿನ ಭಾಷ್ಯಕಾರನೂ ತನ್ನ ಭಾಷ್ಯದಲ್ಲಿ ಆ ಅರ್ಥವನ್ನು ಉಪಯೋಗಿಸಿಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ. ಶಂಕರಾಚಾರ್ಯರು ಸ್ವತಃ ಸಾತ್ವಿಕಾಹಾರಿಗಳಾಗಿದ್ದುಕೊಂಡು, ಅನೇಕ ಶಕ್ತಿಪೀಠಗಳಲ್ಲಿ ನಡೆಯುತ್ತಿದ್ದ ತಾಮಸ ಪೂಜೆಗಳನ್ನು ನಿಲ್ಲಿಸಿ ಸಾತ್ವಿಕ ಪೂಜಾಪದ್ಧತಿಯನ್ನು ಸ್ಥಾಪಿಸಿದವರು. ಅವರೂ ಕೂಡ ಈ ಉಪನಿಷತ್ತಿಗೆ ಭಾಷ್ಯ ಬರೆಯುವಾಗ ಮಾಂಸ ಸೇವನೆ ವೇದಗಳಲ್ಲಾಗಲೀ ಉಪನಿಷತ್ತುಗಳಲ್ಲಾಗಲೀ ಇದೆಯೇ, ಇಲ್ಲವೇ ಎಂಬ ಚರ್ಚೆಯನ್ನು ಮಾಡಿಲ್ಲ. ಬ್ರಿಟೀಷರು ಬರುವ ಪೂರ್ವದಲ್ಲಿದ್ದ ಯಾವದೇ ವಿದ್ವಾಂಸನು ವೇದಗಳಲ್ಲಿ ಮಾಂಸಾಹಾರವಿದೆಯೇ? ಮಾಂಸಾಹಾರ ನಿಷೇಧಿಸಲಾಗಿದೆಯೇ ಎಂಬ ಚರ್ಚೆಯನ್ನೇ ಮಾಡಿಲ್ಲ. ಆ ಚರ್ಚೆ ಶುರುವಾಗಿದ್ದೇ ಬ್ರಿಟೀಷರು ಬಂದ ಮೇಲೆ. ನಿಮ್ಮ ಸನಾತನ ಧರ್ಮದ ಗ್ರಂಥಗಳಾದ ವೇದಗಳಲ್ಲಿ ಮಾಂಸಾಹಾರವಿದೆ. ಬ್ರಾಹ್ಮಣರೇಕೆ ಮಾಂಸ ತಿನ್ನುವದಿಲ್ಲ ಎಂಬ ಪ್ರಶ್ನೆ ಬಂದಾಗ ವೇದಗಳಲ್ಲಿ ಮಾಂಸಾಹಾರವಿಲ್ಲ ಎಂಬುದನ್ನು ತೋರಿಸುವ ಅಗತ್ಯತೆ ದಯಾನಂದ ಸರಸ್ವತಿಯವರಿಗೆ ಬಂದಿತು. ಯಾಸ್ಕರಿಂದ ಹಿಡಿದು ಸಾಯಣರತನಕ ಒಬ್ಬ ವೈದಿಕ ಭಾಷ್ಯಕಾರನಾಗಲೀ, ಗೌಡಪಾದರಿಂದ-ಮಧ್ವಾಚಾರ್ಯರತನಕ ಒಬ್ಬ ಉಪನಿಷತ್ತಿನ ಭಾಷ್ಯಕಾರನಾಗಲೀ ಸ್ವತಃ ಸಸ್ಯಾಹಾರಿಗಳಾಗಿದ್ದುಕೊಂಡರೂ ಕೂಡ, ವೇದಗಳಲ್ಲಿ ಯಾವ ಆಹಾರಪದ್ಧತಿ ಇದೆ ಎಂಬ ಚರ್ಚೆಯನ್ನೇ ಮಾಡದಿದ್ದುದು ಏಕೆ ಎಂಬುದನ್ನು ಮೊದಲು ಚಿಂತಿಸಬೇಕಾಗುತ್ತದೆ.

          ಇನ್ನು ಋಗ್ವೇದದ ೧ನೇ ಮಂಡಲದ ೧೬೨ನೇ ಸೂಕ್ತ ಇರುವದೇ ಅಶ್ವಮೇಧಯಾಗದ ಕುದುರೆಯ ಬಗ್ಗೆ. ಸ್ವತಃ ಸಾಯಣಾಚಾರ್ಯರು ಇದಕ್ಕೆ ಭಾಷ್ಯವನ್ನು ಬರೆಯುವಾಗ ಯಾಸ್ಕರ ಭಾಷ್ಯವನ್ನು ಆಧಾರವಾಗಿ ತೆಗೆದುಕೊಳ್ಳುತ್ತ ಕುದುರೆಯನ್ನು ಹವಿಸ್ಸನಾಗಿ ಅರ್ಪಿಸುವದರ ಕುರಿತು ಇರುವ ಮಂತ್ರಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಅಲ್ಲಿ ಬರುವ “ಕುದುರೆಯ ಮಾಂಸ ಮೆದ್ದಲು ಬಂದ ನೊಣಗಳೂ ಕೂಡ ದೇವತೆಗಳಿಗೆ ಹವಿಸ್ಸಾಗಲಿ” ಎಂಬಂಥ ಮಂತ್ರಗಳನ್ನು ಹಾಗೆಯೇ ಭಾಷ್ಯದಲ್ಲಿ ಬರೆದಿದ್ದಾರೆ. ಆದರೆ ಸ್ವತಃ ಸಾತ್ವಿಕಾಹಾರಿಗಳಾಗಿದ್ದ ಅವರು ಮಾಂಸದ ಹವಿಸ್ಸು ನೀಡಬೇಕೆ ಬೇಡವೇ ಎಂಬುದರ ಕುರಿತು ಚರ್ಚೆಯನ್ನೇಕೆ ಮಾಡಲಿಲ್ಲ? ಯಾಸ್ಕರಿಂದ ಹಿಡಿದು ಯಾವ ವೈದಿಕ ಮತಾಚಾರ್ಯನೂ ಕೂಡ ವೇದಗಳಲ್ಲಿರುವ ಮಾಂಸಾಹಾರದ ಕುರಿತು “ಇಲ್ಲಿ ಮಾಂಸದ ಚರ್ಚೆಯಿಲ್ಲ. ಇದರ ಅರ್ಥ ಬೇರೇನೋ ಇದೆ” ಎಂದೇಕೆ ಹೇಳಲಿಲ್ಲ? ಕಾರಣ ಇಷ್ಟೇ. ಆಗಿನ ಋಷಿಗಳು ಮಾಂಸ ತಿನ್ನುತ್ತಿದ್ದರೇ ಇಲ್ಲವೇ ಎನ್ನುವದು ವೈದಿಕ ವಿದ್ವಾಂಸರಿಗೆ ಪ್ರಸ್ತುತವೇ ಆಗಿರಲಿಲ್ಲ. ವೈದಿಕ ಮಂತ್ರಗಳು ಇರುವದೇ ಅವುಗಳನ್ನು ಸ್ವರಬದ್ಧವಾಗಿ ಉಚ್ಚರಿಸುತ್ತ ದೇವತಾ ಸ್ತುತಿಯನ್ನು ಮಾಡಲು ಮತ್ತು ಯಜ್ಞದಲ್ಲಿ ಒಂದಾನೊಂದು ರೀತಿಯಲ್ಲಿ ವಿನಿಯೋಗವಾಗಲು. ಹೊರತು ವೈದಿಕ ಕಾಲದ ಜನರ ಜೀವನ, ಆಹಾರವ್ಯವಸ್ಥೆಗಳ ಕುರಿತು ಪ್ರಬಂಧ ಬರೆಯಲು ವೇದಗಳು ಎಂದಿಗೂ ವಿನಿಯೋಗವಾಗಿರಲೇ ಇಲ್ಲ.

          ಕೊನೆಯದಾಗಿ ಹೇಳುವದಾದರೆ, ದಯಾನಂದ ಸರಸ್ವತಿಯವರಿಂದ ಹಿಡಿದು ವಸಾಹತುಶಾಹಿಯ ನಂತರ ಬಂದ ಬಹುತೇಕ ವಿದ್ವಾಂಸರು ಬ್ರಿಟೀಷರು ಹೇಳಿಕೊಟ್ಟ ಪಾಠವನ್ನು ಒಪ್ಪಿಕೊಂಡು ಬಿಟ್ಟಿದ್ದರು. ನಮ್ಮ ಸನಾತನ ಧರ್ಮಕ್ಕೆ ವೇದಗಳೇ ಧರ್ಮಗ್ರಂಥಗಳು ಎಂಬುದನ್ನು ಸತ್ಯಾರ್ಥಪ್ರಕಾಶದಲ್ಲಿ ನಾವು ಕಾಣಬಹುದಾಗಿದೆ. ಹೀಗಾಗಿ ಅವರು ಸಸ್ಯಾಹಾರವನ್ನು ವೇದಗಳಲ್ಲಿ ಸಮರ್ಥಿಸಬೇಕಾದ ಅಗತ್ಯತೆಯನ್ನು ಕಂಡುಕೊಂಡರು. ಹೀಗಾಗಿ ಅಶ್ವಮೇಧದ ಸೂಕ್ತಗಳಿಗೆ ಸಂಪ್ರದಾಯದಲ್ಲಿಲ್ಲದ ಅರ್ಥಗಳನ್ನು ಅವರು ಕಲ್ಪಿಸಬೇಕಾಯಿತು. ಅವರ ಮಾತನ್ನು ಒಪ್ಪುವದಾದರೆ ಕ್ರಿ.ಪೂ.ದಲ್ಲಿದ್ದ ಯಾಸ್ಕರಿಂದ ಹಿಡಿದು ಸಾಯಣಾಚಾರ್ಯರ ತನಕ ಎಲ್ಲ ವೈದಿಕ ವಿದ್ವಾಂಸರೂ ತಪ್ಪು ಕಲ್ಪನೆಯಲ್ಲೇ ಇದ್ದರು, ಎರಡು-ಮೂರುಸಾವಿರ ವರ್ಷಗಳ ನಂತರ ದಯಾನಂದ ಸರಸ್ವತಿಯವರೇ ಮೊಟ್ಟಮೊದಲು ವೇದವನ್ನು ಸರಿಯಾಗಿ ಅರ್ಥೈಸಿಕೊಂಡವರು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. ಹೀಗಾಗಿಯೇ ವೇದಗಳಲ್ಲಿಲ್ಲದ ಮೂರ್ತಿಪೂಜೆಯನ್ನು ಅವರು ಒಪ್ಪಿಕೊಳ್ಳುವದಿಲ್ಲ. ಆದರೆ ಮೂರ್ತಿಪೂಜೆಗಳು ನಮ್ಮ ಸಂಪ್ರದಾಯದಲ್ಲಿವೆ.

          ವೇದಗಳು ನಮ್ಮ ಧರ್ಮಗ್ರಂಥಗಳಲ್ಲ. ನಮಗೆ ರಿಲಿಜನ್ನು ಇಲ್ಲ. ರಿಲಿಜನ್ನಿಗೆ ಧರ್ಮಗ್ರಂಥಗಳು ಬೇಕಾಗುತ್ತವೆ. ನಮ್ಮ ದೇಶದಲ್ಲಿ ಕಂಡುಬರುವದು ಸಂಪ್ರದಾಯಗಳು. ವೇದಪ್ರಾಮಾಣ್ಯವನ್ನು ಒಪ್ಪಿಕೊಂಡ ಬ್ರಾಹ್ಮಣ ಸಂಪ್ರದಾಯಗಳು ವೇದ ಹೇಳಿದಂತೆಯೇ ಮಾಡಬೇಕೆಂದೇನೂ ಇಲ್ಲ.ವ್ ವೇದಪ್ರಾಮಾಣ್ಯಕ್ಕೆ ಆ ಅರ್ಥವೂ ಇಲ್ಲ. ವೇದಗಳಲ್ಲಿನ ಅಶ್ವಮೇಧದ ಮಂತ್ರಗಳನ್ನು ಒಪ್ಪಿಕೊಂಡೇ, ಶಂಕರಾಚಾರ್ಯರಾದಿಯಾಗಿ ಎಲ್ಲರೂ ಪ್ರಾಣಿಬಲಿಗಳನ್ನು ನಿಲ್ಲಿಸಿ, ಪೂಜೆಗಳನ್ನು ಸಾಧ್ಯವಾದಷ್ಟು ಸಾತ್ವಿಕೀಕರಣಗೊಳಿಸಿದ್ದಾರೆ. ಆದರೆ ಅವರೆಲ್ಲಿಯೂ ಅಶ್ವಮೇಧದ ಮಂತ್ರಗಳನ್ನು ಧಿಕ್ಕರಿಸಿದ್ದಾಗಲೀ, ಬೇರೆ ಅರ್ಥ ಕಲ್ಪಿಸಿದ್ದಾಗಲೀ ಮಾಡಿಲ್ಲ. ನಿಮಗೆ ಬೇಕಾದರೆ ಅಶ್ವಮೇಧದ ಕುದುರೆಯನ್ನು ಹವಿಸ್ಸನ್ನಾಗಿ ಅರ್ಪಿಸುವ ಮಂತ್ರಗಳನ್ನು ಅದಕ್ಕೆ ಬರೆದ ಸಾಯಣ ಭಾಷ್ಯಗಳನ್ನು ಬೇಕಾದರೆ ನೀಡುತ್ತೇನೆ.

          ಉತ್ತರ
          • ಜನ 13 2016

            ವೈದಿಕ ಸಾಹಿತ್ಯವನ್ನು ಕೆಲವರು ಶೃತಿ ಹಾಗೂ ಸ್ಮೃತಿ ಎಂದು ವಿಭಜಿಸಿಕೊಂಡಿದ್ದಾರೆ. ಅದರ ಪ್ರಕಾರ ಶೃತಿ ಎಂದರೆ ವೇದ ಸಂಹಿತೆಗಳು ಮಾತ್ರ. ವೇದಗಳು ಮಾತ್ರ ಅನೂಚಾನವಾಗಿ ಗುರು-ಶಿಷ್ಯ ಪರಂಪರೆಯಲ್ಲಿ ಬಾಯಿಯಿಂದ ಬಾಯಿಗೆ ವಾಗ್ರೂಪದಲ್ಲಿ, ನಾದರೂಪದಲ್ಲಿ ಉಳಿದುಕೊಂಡು ಬಂದಿರುವ ಶೃತಿ. ಇನ್ಯಾವುದೇ ಸಾಹಿತ್ಯವು ಅದರ ಭಾಗವಲ್ಲ! ಉಳಿದೆಲ್ಲವೂ ಸ್ಮೃತಿ. ಉಪನಿಷತ್ತುಗಳಲ್ಲಿ ಈಶೋಪನಿಷತ್ ಮಾತ್ರ ವೇದ ಮಂತ್ರಗಳನ್ನು ಉಳಿಸಿಕೊಂಡಿದೆ (ಯಜುರ್ವೇದ ೪೦) ಹಾಗಾಗಿ ಅಲ್ಲಿ ಶೃತಿಯ ಅಧಾರವಿದೆ. ಇಲ್ಲವಾದರೆ ಉಳಿದೆಲ್ಲವೂ ಸ್ಮೃತಿಗಳೇ ಎಂಬುದು ಅನೂಚಾನ ವಿಚಾರ. ಉಪನಿಷತ್ತುಗಳನ್ನು ವೇದವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಹುಟ್ಟಿದಂತಹವು. ಬಹುಶಃ ಪ್ರಾಚ್ಯ ವಿಧ್ಯಾ ಪ್ರಾಕಾರದಲ್ಲಿ ವೇದ ಪಾಠ ಹೊಂದದವರಿಗೆ ಉಪನಿಷತ್ತು ವೇದದಿಂದ ಹುಟ್ಟಿದ್ದು ಎಂದು ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ. ಪ್ರಾಚ್ಯ ವಿಧ್ಯಾ ಪ್ರಾಕಾರದಲ್ಲಿ ಸ್ಪಷ್ಟವಾಗಿ ದಶೋಪನಿಷತ್ತುಗಳು ಯಾವ್ಯಾವ ವೇದ ಮಂತ್ರದಿಂದ ಹೇಗೆ ಉತ್ಪನ್ನವಾಯಿತು, ಮೂಲತಃ ಏನನ್ನು ವಿವರಿಸುತ್ತದೆ ಎಂದೆಲ್ಲ ಪಾಠಗಳಿವೆ.

            ಆ ರೀತಿ ಪಾಠಗಳು ಈಗಲೂ ಋಷ್ಯಾಶ್ರಮಗಳಲ್ಲಿ ನಡೆಯುತ್ತಲೇ ಬಂದಿದೆ. ಅದನ್ನು ನೀವು ಕಂಡಿಲ್ಲ, ಕೇಳಿಲ್ಲ ಎಂದ ಮಾತ್ರಕ್ಕೆ ಸುಳ್ಳಾಗುವುದಿಲ್ಲ. ವೇದ ಕಲಿಯುವುದಕ್ಕೆ ಈಗಿನ ಹೆಚ್ಚಿನವರಿಗೆ ಸೋಂಬೇರಿತನ. ಆಗ ಪೂಜೆ, ಪಾಠ, ಉಪನ್ಯಾಸ, ವಿರೋಧಾಭಾಸಕ್ಕೆ ಬೇಕಾದ ವೇದಭಾಗ ಮಾತ್ರ ಬಳಸುತ್ತಾರೆ. ಇನ್ನು ಕೆಲ ಯಜ್ಞ-ಯಾಗಾಗಿ ಮಾಡುವವರು ಆ ಕರ್ಮಕಾಂಡದ ಜ್ಞಾನ ಮಾತ್ರ ಉಳಿಸಿಕೊಂಡಿರುತ್ತಾರೆ.

            ಇನ್ನು ವೇದಗಳು ಸಂಸ್ಕೃತದಲ್ಲಿ ಇಲ್ಲವೇ ಇಲ್ಲ ಎಂಬುದು ಸತ್ಯ. (http://veda-vijnana.blogspot.in/2011/11/vedic-language-brahmi.html) ಬ್ರಾಹ್ಮಿ ಭಾಷೆಯಲ್ಲಿರುವ ವೇದದ ಒಂದೋ ಎರಡೋ ಮಂತ್ರವನ್ನು ವಿವರಿಸುವ ನಿಟ್ಟಿನಲ್ಲಿ ಒಂದು ಉಪನಿಷತ್ತು ಸಂಶೋಧನೆಯಾಗುತ್ತದೆ. ಅದನ್ನೂ ಅರ್ಥ ಮಾಡಿಕೊಳ್ಳಲಾಗದಿದ್ದಾಗ ಅದಕ್ಕೊಂದು ಭಾಷ್ಯ ರಚಿಸುತ್ತಾರೆ. ಅದೂ ಕಠಿಣವಾದಾಗ ಅದಕ್ಕೂ ಭಾಷ್ಯ ಬರೆಯುತ್ತಾರೆ. ಈ ರೀತಿ ಉಪನಿಷತ್ತುಗಳ ನಿಜ ಕಥೆ. ಇನ್ನು ಭಾರತದ ಮೇಲೆ ವಿದೇಶೀ ದಾಳಿ ಆದಾಗ ಎಷ್ಟೆಷ್ಟೋ ಗ್ರಂಥಗಳನ್ನು ತಿದ್ದಿಸಿದ್ದಾರೆ. ಅದಕ್ಕೆ ದಾಖಲೆಗಳೂ ಇವೆ. ದೊಡ್ಡ ದೊಡ್ಡ ಪಂಡಿತರ ಹೆಸರು ಹಾಕಿ ಪ್ರಕಟಿಸುತ್ತಿದ್ದರು. ಅದನ್ನು ಪ್ರಸಿದ್ಧ ವೇದಪಾಠಶಾಲೆಗಳ ಗ್ರಂಥಾಲಯಗಳಲ್ಲಿ ಉಚಿತವಾಗಿ ಹಂಚುತ್ತಿದ್ದರು. ಹಾಗೆ ಎಷ್ಟೋ ಭಾಷ್ಯಾಂತರಗಳನ್ನು ಹೊಂದಿದೆ. ಇನ್ನು ಶಂಕರಾಚಾರ್ಯರು, ಸಾಯಣಾಚಾರ್ಯರು ಬರೆದರು ಎಂದು ಹೇಳಿದರೆ ಜನ ನಂಬುತ್ತಾರೆ ಎಂಬುದು ಬ್ರಿಟೀಷರ ಕುತಂತ್ರ. ಶಂಕರಾಚಾರ್ಯರು ಬರೆಯದೇ ಇರುವ ಎಷ್ಟೆಷ್ಟೋ ಕೃತಿಗಳನ್ನು ಅವರ ಹೆಸರಿನಲ್ಲಿ ಯಾರ್ಯಾರೋ ಪ್ರಕಟಿಸಿದ್ದಾರೆ. ಅದಕ್ಕೆ ಆಚಾರ್ಯರು ಜವಾಬ್ದಾರರಲ್ಲ. ಸಾಯಣಾಚಾರ್ಯರ ಭಾಷ್ಯವೇ ಸರ್ವೋತ್ಕೃಷ್ಟವಲ್ಲ. ಅವರು ಒಬ್ಬರೇ ಕುಳಿತು ಭಾಷ್ಯ ಬರೆದದ್ದೂ ಅಲ್ಲ. ಸಮಕಾಲೀನ ಪಂಡಿತರನ್ನು ಸೇರಿಸಿಕೊಂಡು ಸಮಕಾಲೀನ ವಿಚಾರಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ವೇದದ ಒಂದಿಷ್ಟು ಪರಿಚಯವಾಗುವ ನಿಟ್ಟಿನಲ್ಲಿ ಈ ಭಾಷ್ಯವನ್ನು ಪ್ರಕಟಿಸಲಾಗುತ್ತಿದೆ ಎಂಬ ಆಶಯವನ್ನು ಅವರ ತಾಳೇಗರಿಯ ಭಾಷ್ಯಭೂಮಿಕೆಯಲ್ಲಿ ಉಲ್ಲೇಖಿಸಿದ್ದಾರೆ.
            ಜ್ಞಾನಕಾಂಡವಾಗಲೀ ಕರ್ಮಕಾಂಡವಾಗಲೀ ಹುಟ್ಟಿದ್ದು ವೇದದಿಂದ. ನೀವು ತೋರಿಸುವ ಯಾವುದೇ ಉಪನಿಷತ್ತು ವೇದದ ಯಾವುದೋ ಮಂತ್ರ ಪುಂಜದಿಂದಲೇ ಹುಟ್ಟಿರುತ್ತದೆ. ಅಷ್ಟೇ ಅಲ್ಲ ಪುರಾಣಗಳೂ ಕೂಡ ವೇದದ ವಿಚಾರಗಳನ್ನು ಸಮಕಾಲೀನ ಘಟನಾವಳಿಗಳ ಮೂಲಕ ಆಖ್ಯಾಯಿಕೆಗಳಲ್ಲಿ ರಹಸ್ಯವಡಗಿಸಿ ವಿವರಿಸಿಕೊಂಡು ಬಂದಿವೆ. ಅಷ್ಟೇ ಏಕೆ 3,500 ವರ್ಷಗಳ ಹಿಂದೆಯೇ ಕುಮುದೇಂದು ಎಂಬ ಕನ್ನಡದ ಓರ್ವ ಜೈನ ಮುನಿಯು ತನ್ನ ಸಿರಿಭೂವಲಯ ಎಂಬ ಗಣಿತಾತ್ಮಕ ಕನ್ನಡ ಕಾವ್ಯದಲ್ಲಿ ಸಕಲಕ್ಕೂ ಋಗ್ವೇದವೇ ಮೂಲ ಎಂದು ಘಂಟಾಘೋಷವಾಗಿ ಹಾಡಿ ಹೊಗಳಿದ್ದಾನೆ. (http://veda-vijnana.blogspot.in/2014/11/blog-post_12.html) ಅದನ್ನೆಲ್ಲ ತಿದ್ದಿ ಬರೆಯಲು ಬ್ರಿಟೀಷರ ಗುಲಾಮರಾಗಿ ದುಡ್ಡು ಪಡೆದು ಗ್ರಂಥ ತಿದ್ದುತ್ತಿದ್ದ ಮೂರ್ಖ ವಿದ್ವಾಂಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಒಂದಿಷ್ಟು ಸತ್ಯಾಂಶ ಅಲ್ಲಲ್ಲಿ ಉಳಿದಿದೆ. ಇನ್ನು ಮೂಲ ಬ್ರಾಹ್ಮೀ ಭಾಷೆಯ ಸಾವಿರಾರು ವರ್ಷದ ಹಿಂದಿನ ತಾಳೇಗರಿಗಳಲ್ಲಿ ವೇದದ ಸತ್ಯಾರ್ಥ ಪ್ರಕಾಶವಾಗಿದೆ. ದಯಾನಂದ ಸರಸ್ವತಿ ಭಾಷ್ಯವೂ ಏನು ಪರಿಪೂರ್ಣವಲ್ಲ. ಆದರೆ ವಿದೇಶೀ ದಾಳಿಗೆ ಒಳಪಟ್ಟು ಬದಲಾದ ಕೆಲವೊಂದಿಷ್ಟು ವಿಚಾರಗಳನ್ನು ಪುನಾರೂಪಿಸಲು ಮಾಡಿದ ಪ್ರಯತ್ನ ಮಾತ್ರ ಶ್ಲಾಘನೀಯ.

            ಬೃಹದಾರಣ್ಯಕಕ್ಕೆ ವಿದೇಶೀ ಬಂಡುಕೋರರು ತಿದ್ದಿ ಬರೆಸಿದ ಭಾಷ್ಯ ಈ ಮಾಂಸಹಾರೀ ವಿಚಾರವು ಹಲವು ವಾದಿಗಳಿಗೆ ರುಚಿಸುತ್ತದೆ. ಆದರೆ ವೇದ ನಾದದ ನಿಜ ಭಾರತೀಯ ಅಹಿಂಸಾ ವಾದ ರುಚಿಸುವುದಿಲ್ಲ. ಸ್ವಾಮೀ, ಬ್ರಾಹ್ಮೀ ಹೇಳಿದರೆ ಅರ್ಥವಾಗಲಿಕ್ಕಿಲ್ಲ ಎಂದು ನಿಮ್ಮ ಸಂಸ್ಕೃತ ಪದಕೋಶದಲ್ಲಿ ಇದ್ದ ಸಮಾನಾರ್ಥಕ ಪದಗಳನ್ನೇ ಬಳಸಿ ಹಲವು ವಿದ್ವಾಂಸರ ಒಕ್ಕೂಟವು ಉತ್ತರ ಭಾರತದಲ್ಲಿ ನೀಡಿರುವ ಉತ್ತರವನ್ನು ಬ್ಲಾಗಿನ ಪ್ರಸಕ್ತ ಲೇಖನದಲ್ಲಿ ದಾಖಲಿಸಿದ್ದೇನೆ. ಸತ್ಯ ಯಾವತ್ತೂ ಕಹಿಯಾಗಿರುತ್ತದೆ. ನಾವು ನೋಡಿದ್ದೇ, ಕೇಳಿದ್ದೇ, ಓದಿದ್ದು ಮಾತ್ರ ಸತ್ಯ ಎಂಬುದು ಕೂಪಮಂಡೂಕ ವಾದ. ವಿಶಾಲತೆಯನ್ನು ಬೆಳಸಿಕೊಂಡರೆ ಮಾತ್ರ ವೇದವು ವೇದ್ಯವಾಗಲಿಕ್ಕೆ ಸಾಧ್ಯ. ಇದನ್ನು ವೈದಿಕ ನ್ಯಾಯಶಾಸ್ತ್ರವೂ ಸಮ್ಮತಿಸಿ ಘೋಷಿಸಿದೆ.

            ಇನ್ನು ಯಾಸ್ಕರೆಂದರೆ ಯಾರು? ಅವರ ತಂದೆ-ತಾಯಿ-ಗುರು-ಪಾಠಶಾಲ-ಜನ್ಮಸ್ಥಳ-ಜನ್ಮಕಾಲ ಇವುಗಳ ಬಗ್ಗೆ ನನಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ದಯವಿಟ್ಟು ನಿಮ್ಮಲ್ಲಿ ಯಾಸ್ಕರ ಬಗ್ಗೆ ಈ ದಾಖಲೆಗಳು ಇದ್ದರೆ ಒದಗಿಸಿಕೊಡಿ ಎಂದು ವಿನಮ್ರ ಬೇಡಿಕೆ. ನಮಗೆ ದೊರಕಿರುವ ದಾಖಲೆಗಳ ಆಧಾರದಲ್ಲಿ ಯಾಸ್ಕರ ನಿರುಕ್ತವು ನಿರುಪಯೋಗಿ ಎಂದು ಪರಿಷತ್ತಿನಲ್ಲಿ ಹಿಂದೆಯೇ ನಿರ್ಣಯವಾಗಿ ಹೋಗಿದೆ. ಅದು ಕಲಿಯುಗದ ಆರಂಭದಲ್ಲಿ ರಚಿಸಲ್ಪಟ್ಟದ್ದು. ಕಲಿಯೆಂಬ ಅಜ್ಞಾನದಿಂದ ದೂಷಿತವಾದದ್ದು ಎಂದು ಮೀಮಾಂಸಕರೇ ಸಾಧಿಸಿ ತೋರಿಸಿದ್ದಾರೆ. ಪರಿಷತ್ತು ಎಂದರೆ ಇಂದಿನದ್ದಲ್ಲ, ಹಿಂದಿನದ್ದು. ಆಗ ಅಲ್ಲಿ ದುಡ್ಡಿಗಾಗಿ ಕೃತಿ ತಿದ್ದುವವರಿರಲಿಲ್ಲ. ಇದೊಂದೇ ನಿರುಕ್ತವಲ್ಲ ಸ್ವಾಮಿ. ಒಟ್ಟು ಪ್ರಾಚ್ಯ ವಿಧ್ಯಾ ಗ್ರಂಥ ಭಂಡಾರದಲ್ಲಿ ೧೧೬ ನಿರುಕ್ತಾದಿ ವ್ಯಾಕರಣ ಗ್ರಂಥಗಳಿವೆ. (http://veda-vijnana.blogspot.in/2012/08/light-on-vedic-heritage.html) ಅದರಲ್ಲಿ ಕಾತ್ಯಾಯನಾ, ದಾಲ್ಭ್ಯ, ಗೌತಮ, ಗೋಬಿಲ, ಶಕ್ತಿ, ಪುರುಕುತ್ಸ, ಖರ, ರಾವಣ, ಪ್ರದೂಷ, ಬಾಣ ಇತ್ಯಾದಿ ಹಲವರು ಬ್ರಾಹ್ಮೀ ನಿರುಕ್ತ ರಚಿಸಿದ್ದಾರೆ. ಹಾಗೆ ವೇದಕ್ಕೆ ರಾವಣ ಭಾಷ್ಯವೂ ಇದೆ ಎಂಬುದನ್ನು ಮರೆಯಬಾರದು. ಅಲ್ಲೆಲ್ಲಿಯೂ ಹಿಂಸೆಗೆ ಅವಕಾಶವೇ ಇರಲಿಲ್ಲ. ಇನ್ನು ಸಾಯಣಾಚಾರ್ಯರ ಬಗ್ಗೆ ಅಪಾರ ಗೌರವವಿದೆ. ಅವರು ವೇದಕ್ಕೆ ಭಾಷ್ಯ ರಚಿಸಿದ್ದರೆ, ಅದರಲ್ಲಿ ಎಲ್ಲಿಯೂ ಹಿಂಸೆಯು ಇರಲು ಸಾಧ್ಯವೇ ಇಲ್ಲ. ಇನ್ನು ಯಾರ್ಯಾರೋ ಬರೆದು ಪ್ರಕಟಿಸಿದಕ್ಕೆ ಸಾಯಣಾಚಾರ್ಯರು ಹೊಣೆಯಲ್ಲ.

            ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಾಗ, ಗೋಮೇಧ ಯಜ್ಞ, ಅಜಮೇಧ ಯಜ್ಞ, ಪಿತೃಮೇಧ ಯಜ್ಞ, ನರಮೇಧ ಇತ್ಯಾದಿ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೇ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ. ವೇದದಲ್ಲಿ ಹೇಳಿದ ಮೇಧವೇ ಬೇರೆ ನೀವು ದೇಹಶಾಸ್ತ್ರದಲ್ಲಿ ಹೇಳುವ ಕೊಬ್ಬಿನಾಂಶವುಳ್ಳ ಮೇದ(ಧ)ಸ್ಸೇ ಬೇರೆ.

            ಆಪಾದನೆ:- ಯಜುರ್ವೇದ ೨೫.೩೪-೩೫ ಭೂಮಿ ಅಥವ ಹುಲ್ಲುಗಾವಲಲ್ಲಿದ್ದ ಸಾವಿರಾರು ಕಾಯವನ್ನು ಕುದಿಸಿ, ಮಾಂಸವ ರೋಸ್ಟ್ ಮಾಡಿ ಸುಟ್ಟು ಭಗವಂತನಿಗೆ ಅರ್ಪಿಸುವುದು. ಋಗ್ವೇದ ೧.೧೬೨.೧೧-೧೨ ಅಶ್ವಪಾಲಕರನ್ನು ಕರೆದು ಹೇಳು- ಅದರ ದುರ್ಗಂಧವನ್ನು ತೆಗೆದು, ಮಾಂಸ ಬಗೆದು, ಹಂಚಲಿಕ್ಕೆ ಕಾಯಿರಿ, ಪ್ರಧಾನರಿಂದ ಆಜ್ಞೆ ದೊರೆತೊಡನೆ ಹಂಚಿರಿ. ಇವುಗಳಿಂದ ಯಜ್ಞದಲ್ಲಿ ಅಶ್ವ ಹತ್ಯೆಯು ಸಿದ್ಧವಾಗುತ್ತದೆ.

            ಸತ್ಯಾಂಶ:- ಇದು ವೇದವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಗ್ರಿಫಿತ್‌ನ ಕಪೋಲ ಕಲ್ಪಿತ ವಾಕ್ಯಗಳು. ಮೊದಲನೆಯ ಮಂತ್ರದಲ್ಲಿ ಅಶ್ವದ ಉಲ್ಲೇಖವೇ ಇಲ್ಲ. ಅದೊಂದು ಚಿಕಿತ್ಸಾ ಪ್ರಕ್ರಿಯೆ. ಏರಿದ ಜ್ವರವನ್ನು ಉಪಶಮನ ಗೈಯಲು ಬೇಕಾದ ಪರಿಹಾರೋಪಾಯಗಳನ್ನು ವೈದ್ಯನಿಗಾಗಿ ಹೇಳಲಾಗಿದೆಯೇ ಹೊರತು ಅಲ್ಲ್ಯಾವುದೇ ಪ್ರಾಣಿ ವಿಚಾರವೇ ಇಲ್ಲ. ಎರಡನೆಯ ಮಂತ್ರದಲ್ಲಿ ವಾಜಿನಮ್ ಎಂದರೆ ಕುದುರೆ ಮಾತ್ರವಲ್ಲದೆ ವೀರತ್ವ, ಶೂರತ್ವ, ಧೀರತ್ವ, ಖಗ, ಮನುಷ್ಯತ್ವ, ಯೋಧ, ಬಾಣ ಪ್ರಯೋಗ, ಪೌರುಷತ್ವ, ವೇಗ ಇತ್ಯಾದಿ ಹಲವು ಅರ್ಥ ಕೊಡುತ್ತದೆ. ಹಾಗಾಗಿ ವೇಗ, ವೀರ, ಶೂರತ್ವಕ್ಕೆ ಸರಿಸಾಟಿಯಾದ ಕುದುರೆಯನ್ನೂ ವಾಜಿನಮ್ ಎಂದರು. ನಿರುಕ್ತದ ಯಾವುದೇ ಅರ್ಥವನ್ನು ನೋಡಿದರೂ ಯಜ್ಞದಲ್ಲಿ ಅಶ್ವ ಹತ್ಯೆ ಎನ್ನುವ ಅಪಾರ್ಥವನ್ನು ಬಿಂಬಿಸುವುದೇ ಇಲ್ಲ. ಎರಡನೆಯ ಮಂತ್ರದಲ್ಲಿ ಅದನ್ನು ಕುದುರೆ ಎಂದೇ ಗ್ರಹಿಸಿದರೆ ಅಲ್ಲಿ ಅಶ್ವವಧೆಯನ್ನು ಹತ್ತಿಕ್ಕಬೇಕು ಎಂಬ ಭಾವ ಬಿಂಬಿತವಾಗುತ್ತದೆಯೇ ಹೊರತು ಕೊಲ್ಲಲಿಕ್ಕಲ್ಲ.

            ಈ ಸೂಕ್ತವು ದೀರ್ಘತಮಾ ಔಚಥ್ಯರದ್ದು. ಅಂದರೆ ದೀರ್ಘವಾದ ಕತ್ತಲು ಆವೃತವಾದ ಧ್ರುವ ಪ್ರದೇಶದಲ್ಲಿಯೇ ಕಲ್ಪಾಂತರಗಳಿಂದ ವಾಸಿಸುತ್ತಾ ಬಂದಿರುವ ಹಲವು ಋಷಿಗಳ ಸಮೂಹವದು. ಅವರು ಈ ಸೂಕ್ತದಲ್ಲಿ ಅಶ್ವವನ್ನು ವಿವರಿಸಿದ್ದಾರೆ. ಅದಕ್ಕೆ ಬ್ರಾಹ್ಮಿ ಶಬ್ದೋತ್ಪತ್ತಿಯನ್ನು ಅವರೇ ತಮ್ಮ ಪ್ರಬಂಧದಲ್ಲಿ ನೀಡಿದ್ದಾರೆ. ಅದರಂತೆ ಅಶ್ವಎಂದರೆ “ಆತ್ಯಂತಿಕ ಶ್ವಸಿತೈಃ ಇತಿ ಅಶ್ವಃ”. ಸಾಧ್ಯವಾದರೆ ಇದನ್ನು ಮೊದಲು ಅರ್ಥಮಾಡಿಕೊಳ್ಳಿ. ಈ ಸೂಕ್ತದಲ್ಲಿ ಆ ಅಶ್ವ ಶಕ್ತಿಯನ್ನು (HP = Horse Power) ಬಳಸುವ ವಿಧಾನವನ್ನು ಸೂಚಿಸಿದ್ದಾರೆ. ಸಾಧ್ಯವಾದರೆ ಅದನ್ನು ಸಂಶೋಧಿಸಿ ಸಮಾಜಕ್ಕೆ ನೀಡಿರಿ. (ಆಧಾರ:- http://veda-vijnana.blogspot.in/2014/06/1.html) ಅದನ್ನು ಅದು ಬಿಟ್ಟು ವಿದೇಶೀಯರ ಪ್ರಭಾವದಿಂದ ತಿದ್ದಿ ತೀಡೀರುವ ಸಾಯಣ ಭಾಷ್ಯ, ದಯಾನಂದರ ಅಪರಿಪೂರ್ಣ ಭಾಷ್ಯವಾಗಲೀ ಸಂಪೂರ್ಣ ಮಾನ್ಯವಲ್ಲ. ಇನ್ನು ಮ್ಯಾಕ್ಸ ಮುಲ್ಲರ್, ಗ್ರಿಫಿತ್, ಮಹೀಧರ, ವಿಲ್ಸನ್, ಇತ್ಯಾದಿ ವೇದ ಭ್ರಷ್ಟರು ತಿದ್ದಿ ತೀಡಿದ ವ್ಯಾಖ್ಯಾನಗಳನ್ನು ನಂಬಬೇಡಿ ಎಂದು ಕಳಕಳಿಯ ವಿನಂತಿ.

            ಒಂದು ಶಬ್ದಕ್ಕೆ ಸಂಸ್ಕೃತ ಶಬ್ದಕೋಶವು ಹಲವು ಸಮಾನಾರ್ಥಕ ಪದಗಳನ್ನು ನೀಡುತ್ತದೆ. ನಿರುಕ್ತವೂ ನೀಡುತ್ತದೆ. ಇನ್ನು ನೀವು ಹೇಳಿದಂತೆ ಸಾಯಣಾಚಾರ್ಯರ ಹೆಸರಿನಲ್ಲಿ ಪ್ರಕಟವಾಗಿರುವ ಭಾಷ್ಯವೇ ಪರಮ ಸತ್ಯವಾಗಿದ್ದರೆ ಈಗಿರುವ ಎಲ್ಲ ಸಂಸ್ಕೃತ ಪದಕೋಶಗಳನ್ನು ಸಾಮೂಹಿಕವಾಗಿ ಸುಟ್ಟುಹಾಕಬೇಕಾಗುತ್ತದೆ ಎಂಬುದು ನಿಮ್ಮ ವಾದದಿಂದ ದೃಢಪಡುತ್ತದೆ. ಅಥವಾ ಸಾಯಣಾಚಾರ್ಯರ ಹೆಸರಿನಲ್ಲಿ ಪ್ರಕಟವಾಗಿರುವ ಭಾಷ್ಯದಲ್ಲಿ ನೀಡಿರುವ ಪದವು ಮಾತ್ರ ಸಮಾನರ್ಥಕ ಪದವೆಂದು ಸಾಧಿಸಿದಂತಾಗುತ್ತದೆ. ಇನ್ಯಾವುದೇ ಸಮಾನಾರ್ಥಕ ಪದಗಳು ಶಾಸ್ತ್ರೀಯವಲ್ಲ ಎಂದು ನೀವೇ ಸಾಧಿಸಿದಂತಾಗುತ್ತದೆ. ತನ್ಮೂಲಕ ಆ ಪದಕೋಶಗಳ ಬಹುತೇಕ ಪದಗಳು ಬ್ರಿಟೀಷ ಅಥವಾ ಇನ್ಯಾರಿಂದಲೋ ತಿದ್ದಿ ಬರೆಸಿದವು ಎಂದು ನೀವೇ ಸಾಧಿಸಿದಂತಾಗುತ್ತದೆ. ಇದರಿಂದ ಹೊರಬರುವ ಸತ್ಯವೇನೆಂದರೆ ಒಂದೋ ಪುಸ್ತಕ ರೂಪದಲ್ಲಿ ಪ್ರಕಟಿತ ಭಾಷ್ಯಗಳು ಅಶಾಸ್ತ್ರೀಯ ಅಥವಾ ಪ್ರಸಕ್ತ ಶಬ್ದಕೋಶಗಳೇ ಪ್ರಕ್ಷಿಪ್ತ.

            ಕೊನೆಯದಾಗಿ ವಾದಕ್ಕಾಗಿಯಲ್ಲ ಮುಕ್ತ ಮನಸ್ಸಿನಿಂದ ಒಂದು ಮಾತು ಹೇಳುತ್ತೇನೆ. ಬ್ರಿಟೀಷರು ಸಂಸ್ಕೃತ ಶಬ್ದಕೋಶಗಳನ್ನೂ ತಿದ್ದಿಸಿದ್ದಾರೆ. ಇತಿಹಾಸ, ಪುರಾಣ, ಉಪನಿಷತ್, ಬ್ರಾಹ್ಮಣ, ಅರಣ್ಯಕ, ಇತ್ಯಾದಿ ಎಲ್ಲವನ್ನೂ ತಿದ್ದಿಸಿದ್ದಾರೆ. ಆದರೆ ಅವರಿಗೆ ವೇದವನ್ನು ಮುಟ್ಟಲು ಆಗಲಿಲ್ಲ. ಕಾರಣ ಅದು ಶೃತಿ. ಬರೆದಿಟ್ಟು, ಓದಿ ಕಲಿತದ್ದಲ್ಲ. ದೇಹದ ವಾಚ್ಯ-ಶ್ರವಣ ನರಗಳಲ್ಲಿ ಮೌಖಿಕವಾಗಿ ದಾಖಲಾಗುತ್ತಾ ನಿರಂತರತೆಯನ್ನು ಸಾಧಿಸಿಕೊಂಡು ಬಂದಿರುವ ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ. ಅದನ್ನು ಅರ್ಥಮಾಡಿಕೊಳ್ಳಲು “ಮಂಥನ, ಪ್ರಯೋಗ, ಚಿಕಿತ್ಸಾ, ಜ್ಞಾನ, ಪರಿಣಾಮ, ಪ್ರಾಗಾಥ, ಪರಿಣಯ, ವಿಶೇಷಣ, ಪರಿಚಯ, ಪೂರ್ಣತಾ” ಎಂಬ ದಶವಿಧ ಪಾಠ ವಿಧಾನದ ಅಗತ್ಯತೆ ಇದೆ. ಸುಮ್ಮನೆ ಯಾವುದೋ ಭಾಷ್ಯದ ಪುಸ್ತಕವನ್ನಾಗಲೀ, ನಿರುಕ್ತವನ್ನಾಗಲೀ, ಶಬ್ದಕೋಶವನ್ನಾಗಲೀ ಕೊಂಡುಕೊಂಡು ಅರ್ಥೈಸುವುದಲ್ಲ. ವೇದವನ್ನು “ಅಧ್ಯಯನ, ಜಪ, ಅನುಷ್ಠಾನ, ಉಪಾಸನಾ, ಪ್ರಯೋಗ, ಉಪಸಂಹಾರ” ಎಂಬ ಷಟ್ಕರ್ಮಗಳಿಂದ ವೇದ್ಯಗೊಳಿಸಿಕೊಳ್ಳಬೇಕು.

            ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments