ವಿಷಯದ ವಿವರಗಳಿಗೆ ದಾಟಿರಿ

ಜನವರಿ 14, 2016

3

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨

‍ನಿಲುಮೆ ಮೂಲಕ

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧

– ಪ್ರೇಮಶೇಖರ

ಶ್ರೀಯುತ ದಿನೇಶ್ ಅಮೀನ್,

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.

ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.

ಇತಿಹಾಸದ ಕಾಲದಲ್ಲಿ ಆಕ್ರಮಣಕ್ಕೆ, ಲೂಟಿಗೆ ಕತ್ತಿಯ ಬಳಕೆಯ ಬಗ್ಗೆ ಹೇಳುತ್ತಾ “ಅದು ಆ ಕಾಲ-ದೇಶದ ಸಂಗತಿ. ಅಂತಹದ್ದೊಂದು ತೀರ್ಮಾನಕ್ಕೆ ಅವರಿಗೆ ಅವರದ್ದೇ ಆಗಿರುವ ಕಾರಣಗಳಿರಬಹುದು. ಆ ಕಾಲದ ನ್ಯಾಯ-ಅನ್ಯಾಯಗಳನ್ನು ಈ ಕಾಲದ ತುದಿಯಲ್ಲಿ ನಿಂತು ವಿಶ್ಲೇಷಿಸುವುದರಿಂದ ಏನು ಫಲ ಪ್ರೇಮಶೇಖರ್ ಅವರೇ?” ಎಂದು ಕೇಳಿದ್ದೀರಿ. ಹೌದು ಅಮೀನರೇ, ಏನು ಫಲ ಎಂದು ನಾನೂ ಅಂದುಕೊಂಡದ್ದಿದೆ. ಅದನ್ನೇ ಎಂಟೊಂಬತ್ತು ವರ್ಷಗಳ ಹಿಂದೆಯೇ ಹೀಗೆ ದಾಖಲಿಸಿದ್ದೇನೆ: “…ಲೈಂಗಿಕ ಆಮಿಷವನ್ನೊಡ್ಡಿ ಮುಸ್ಲಿಮರಲ್ಲದವರನ್ನು ಕೊಲ್ಲಲು ಪ್ರಚೋದಿಸುವ ಅಗತ್ಯ ಸಾವಿರದ ನಾನೂರು ವರ್ಷಗಳ ಹಿಂದೆ ಇತ್ತು. ಪೈಗಂಬರರು ಇಸ್ಲಾಂ ಧರ್ಮದ ಸ್ಥಾಪಕರಲ್ಲದೇ ಅರಬ್ ಸಾಮ್ರಾಜ್ಯದ ಸಂಸ್ಥಾಪಕರೂ ಸಹಾ ಎಂಬುದು ಐತಿಹಾಸಿಕ ಸತ್ಯ. ಇತರ ಧರ್ಮಸಂಸ್ಥಾಪಕರಾದ ಬುದ್ಧ, ಮಹಾವೀರ, ಜೀಸಸ್ ಮುಂತಾದವರಿಗೂ ಪೈಗಂಬರರಿಗೂ ಇರುವ ಪ್ರಮುಖ ವ್ಯತ್ಯಾಸ ಇದು. ತನ್ನ ಕೊರೆಶ್ ಬುಡಕಟ್ಟು ಇಡೀ ಅರೇಬಿಯಾದ ಮೇಲೆ ರಾಜಕೀಯ ಪ್ರಭುತ್ವ ಸ್ಥಾಪಿಸಲು ತನ್ಮೂಲಕ ಇಸ್ಲಾಂ ಧರ್ಮವನ್ನು ಅರೇಬಿಯಾದ ಸಾರ್ವತ್ರಿಕ ಹಾಗೂ ಏಕೈಕ ಧರ್ಮವನ್ನಾಗಿ ಬೆಳೆಸಲು ಅಗತ್ಯವಾದ ಸೈನ್ಯವನ್ನು ಕಟ್ಟಬೇಕಾದರೆ ಸೈನಿಕರಿಗೆ ಇಂತಹ ಪ್ರಲೋಭನೆಗಳನ್ನೊಡ್ಡುವ ಅಗತ್ಯವನ್ನು ಪೈಗಂಬರರು ಮನಗಂಡಿದ್ದರು. ಆಗಿನ ಅರೇಬಿಯಾದಲ್ಲಿದ್ದ ಅರೆನಾಗರಿಕ ಪುರುಷವರ್ಗದ ಉತ್ಕಟ ಸ್ತ್ರೀವ್ಯಾಮೋಹ ಹಾಗೂ ಧನಲಾಲಸೆಯ ಸ್ಪಷ್ಟ ಅರಿವಿದ್ದ ಅವರು ಆ ಜನರಿಗೆ ಜಿಹಾದ್ ಕೈಗೊಂಡರೆ ಈ ಜನ್ಮದಲ್ಲಿ ಸಿಗುವ ಧನಲಾಭ ಹಾಗೂ ಸತ್ತನಂತರ ಸ್ವರ್ಗದಲ್ಲಿ ಸಿಗುವ ಇಂದ್ರಿಯ ಸುಖಗಳ ಆಮಿಷವನ್ನೊಡ್ಡದಿದ್ದರೆ ಬಲಶಾಲೀ ಸೈನ್ಯವನ್ನು ಕಟ್ಟುವುದು ಸಾಧ್ಯವೇ ಇಲ್ಲ ಎಂದು ಅರಿತಿದ್ದರು. ಅಷ್ಟೇ ಅಲ್ಲ, ಅದನ್ನು ಆಚರಣೆಗೆ ತಂದರೂ ಕೂಡಾ. ತಾವು ಕೈಗೊಂಡ ಹಲವಾರು ಯುದ್ಧಗಳಲ್ಲಿ ಸೋತ ಬುಡಕಟ್ಟುಗಳ ಹೆಂಗಸರನ್ನು ತಮ್ಮ ಸೈನಿಕರಿಗೆ ಹಂಚುತ್ತಿದ್ದರು. ಒಂದು ಸಂದರ್ಭದಲ್ಲಂತೂ ಸೆರೆ ಸಿಕ್ಕಿದ ಮೂವರು ಸುಂದರಿಯರನ್ನು ತಮ್ಮ ಅಳಿಯಂದಿರಾದ ಆಲಿ ಮತ್ತು ಉಸ್ಮಾನ್ ಹಾಗೂ ತಮ್ಮ ಮಾವ ಒಮರ್ಗೆ ಒಪ್ಪಿಸಿದರು. ಪೈಗಂಬರರ ಈ ಕೃತ್ಯಗಳ ಬಗ್ಗೆ ನಾವು ಅಸಹ್ಯ ಪಡಬೇಕಾಗಿಲ್ಲ. ಪ್ರಾಚೀನ ಮಧ್ಯಏಶಿಯಾದಲ್ಲಿ ಇದು ತೀರಾ ಸಾಮಾನ್ಯವಾದ ಆಚರಣೆಯಾಗಿತ್ತು. ಪೈಗಂಬರರು ಅದನ್ನು ಮುಂದುವರೆಸಿ ಅರೇಬಿಯಾದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಸ್ಥಾಪಿಸಿದರಷ್ಟೇ. ಹೀಗೆ ಇಸ್ಲಾಮನ್ನು ಮೊದಲು ಅರೇಬಿಯಾದಲ್ಲಿ ನಂತರ ಇಡೀ ಜಗತ್ತಿಗೆ ಹರಡುವ ಉದ್ದೇಶದಿಂದಾಗಿ ಜಿಹಾದ್ ಪರಿಕಲ್ಪನೆಯನ್ನು ರೂಪಿಸಿದರು. ಒಂದು ಸಾವಿರ ವರ್ಷಗಳವರೆಗೆ ಪ್ರಾರ್ಥನೆ ಮಾಡುವುದಕ್ಕಿಂತ ಕೇವಲ ಒಂದುದಿನ ಅಲ್ಲಾನ ಸೈನಿಕನಾಗುವುದು ಶ್ರೇಷ್ಟ ಎಂದು ಹೇಳಿದರು. ಧರ್ಮಕ್ಕಾಗಿ ಪ್ರಾಣ ಕೊಡಬಲ್ಲಂತಹ ಸೈನಿಕರನ್ನು ತಯಾರು ಮಾಡಲು ಸ್ವರ್ಗ ಮತ್ತಲ್ಲಿ ದೊರೆಯುವ ವೈಭೋಗಗಳ ಚಿತ್ರಣ ನೀಡಿದರು. ಅದೆಲ್ಲವೂ ಆ ಕಾಲದ ಅಗತ್ಯವಾಗಿತ್ತು. ಹಾಗೆ ಮಾಡದಿದ್ದರೆ ಇಸ್ಲಾಂ ಅರೇಬಿಯಾದಲ್ಲೂ ಗಟ್ಟಿಯಾಗಿ ನೆಲೆಯೂರುತ್ತಿರಲಿಲ್ಲ… ಪೈಗಂಬರರು ಮಾಡಿದ್ದು, ಔರಂಗಜೇಬ್ ಅಥವಾ ಪಶ್ಚಿಮ ಏಶಿಯಾ, ಮಧ್ಯ ಏಶಿಯಾ ಹಾಗೂ ಭಾರತದ ಇನ್ನಾವುದೇ ಇಸ್ಲಾಮಿಕ್ ಅರಸ ಮಾಡಿದ್ದು ಐತಿಹಾಸಿಕ ಸತ್ಯ, ನಮ್ಮ ಇತಿಹಾಸದ ಒಂದು ಅವಿಭಾಜ್ಯ ಭಾಗ. ಇತಿಹಾಸವನ್ನು ವಸ್ತುನಿಷ್ಟ ದೃಷ್ಟಿಕೋನದಿಂದ ನೋಡಿ “ಅವರೆಲ್ಲರೂ ಆ ಕಾಲದ ಅಗತ್ಯಕ್ಕನುಗುಣವಾಗಿ ಹಾಗೆ ಮಾಡಿದರು ಅಷ್ಟೇ” ಎಂದು ನಾವು ಅರಿತರೆ ಸಾಕು. ಅವರ ಕೃತ್ಯಗಳಿಗೆ ಈಗಿನ ಮುಸ್ಲಿಮರನ್ನು ಜವಾಬ್ದಾರರನ್ನಾಗಿ ಅಥವಾ ಉತ್ತರದಾಯಿಗಳನ್ನು ಮಾಡುವ ಮೂರ್ಖತನವನ್ನಂತೂ ನಾವು ಮಾಡಬಾರದು.”

ನೀವು ಮತ್ತೊಂದು ಪ್ರಶ್ನೆ ಕೇಳಿದ್ದೀರಿ. “ವಿಶ್ವದ ಸುಮಾರು ೫೦ ದೇಶಗಳಲ್ಲಿ ಇಸ್ಲಾಂ ಧರ್ಮ ಆಧಿಪತ್ಯ ಹೊಂದಿದೆ. ಇದು ಕತ್ತಿಯ ಬಲದಿಂದಲೇ ಸಾಧ್ಯವಾಗಿದ್ದರೆ ಆ ದೇಶಗಳಲ್ಲಿದ್ದ ಅನ್ಯ ಧರ್ಮಾವಲಂಬಿಗಳೆಲ್ಲ ಹೇಡಿಗಳು ಮತ್ತು ಅಜ್ಞಾನಿಗಳಾಗಿದ್ದರೇ?” ಅಂತ. ಭಾರತದಲ್ಲಿ ಇಸ್ಲಾಂ ಹರಡಲು ಸೂಫಿಗಳ ಕೊಡುಗೆಯನ್ನು ನೆನಪು ಮಾಡಿದ್ದೀರಿ. ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಇತಿಹಾಸದ ಪುಟಗಳಲ್ಲಿ ಯಥೇಚ್ಛವಾಗಿ ದೊರೆಯುತ್ತದೆ, ಲೆವಾಂಟ್ ಸೇರಿದಂತೆ ಪಶ್ಚಿಮ ಏಶಿಯಾ ಹಾಗೂ ಮಧ್ಯಏಶಿಯಾದಲ್ಲಿ ಇಸ್ಲಾಂ ಹರಡಿದ್ದು ಭೀಕರ ಕ್ರೌರ್ಯದ ಮೂಲಕ ಎಂದು ಹೇಳಿ ಸುಮ್ಮನಾಗಿಬಿಡಬಹುದಾಗಿತ್ತು. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಕೆಲಮಾತುಗಳನ್ನು ಹೇಳಲೇಬೇಕೆನಿಸುತ್ತದೆ. ಇಸ್ಲಾಂ ಭಾರತದಲ್ಲಿ ಹರಡಿದ್ದರಲ್ಲಿಯೂ ಕತ್ತಿಯ ಅಂದರೆ ಯಶಸ್ವಿ ಆಕ್ರಮಣದ ಬಗೆಗಿನ ವಿವರಗಳು ಆ ಕಾಲದ ಅರೇಬಿಕ್ ಮತ್ತು ಪರ್ಶಿಯನ್ ಲಿಖಿತ ದಾಖಲೆಗಳಲ್ಲಿ ಲಭ್ಯವಿವೆ ಎನ್ನುವುದನ್ನು ನಿಮಗೆ ನೆನಪು ಮಾಡಿಕೊಡುತ್ತಲೇ, ಕಾಶ್ಮೀರದ ಹೊರತಾಗಿ ದಕ್ಷಿಣ ಏಶಿಯಾದಲ್ಲಿ ಇಸ್ಲಾಂನ ಪ್ರಸರಣದಲ್ಲಿ ಸೂಫಿಗಳ ಕೊಡುಗೆ ಗಣನೀಯವಲ್ಲ ಎಂಬ ಐತಿಹಾಸಿಕ ವಾಸ್ತವವನ್ನೂ ಗಮನಿಸುತ್ತಲೇ ಸೂಫಿಸಂನ ಬೆಳವಣಿಗೆಗೆ ಇತರೆಲ್ಲಾ ನಾಡುಗಳಿಗಿಂತಲೂ ಭಾರತ ಉಪಖಂಡವೇ ಏಕೆ ಹೆಚ್ಚು ಫಲವತ್ತಾದ ನೆಲವಾಯಿತು ಎಂಬ ಪ್ರಶ್ನೆಗೆ ಉತ್ತರವನ್ನು ಶೋಧಿಸಬೇಕು. ಈ ಶೋಧವೇ ಒಂದು ಆಸಕ್ತಿಕರ ಹಾಗೂ ಅಮೂಲ್ಯ ವಿಷಯವನ್ನೂ ನನ್ನ ಅರಿವಿಗೆ ತಂದದ್ದರ ಬಗ್ಗೆ ನನಗೆ ಈಗಲೂ ಬೆರಗು, ಸಂತೋಷ ಎಲ್ಲವೂ ಇದೆ. ಅದನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. (ನಿಮ್ಮೊಂದಿಗೆ ಇತರ ಆಸಕ್ತರೂ ಓದುತ್ತಾರೆ, ಹೇಗೂ ಇದನ್ನು ನಾನು ಎಲ್ಲರಿಗೂ ಕಾಣುವಂತೆಯೇ ಪ್ರಕಟಿಸುತ್ತಿದ್ದೇನಲ್ಲ.)

ಸತ್ಯ ಮತ್ತು ಅಹಿಂಸೆ ಬಲು ಪುರಾತನವಾದುವು (Truth and non-violence are as old as Hills) ಎನ್ನುವುದು ಮಹಾತ್ಮಾ ಗಾಂಧಿಯವರ ಒಂದು ಬಹುಉಲ್ಲೇಖಿತ ಹೇಳಿಕೆ. ಇಲ್ಲಿ ಸತ್ಯವನ್ನು ಪಕ್ಕಕ್ಕಿರಿಸಿ, ಅಹಿಂಸೆ ಮತ್ತದರ ಅವಳಿಯಾದ ಶಾಂತಿ ಭಾರತದಲ್ಲಿ ಎಷ್ಟು ಪುರಾತನವಾಗಿದ್ದಿರಬಹುದು ಎಂಬುದನ್ನು ಶೋಧಿಸಹೊರಟರೆ ಅದರ ಪ್ರಥಮ ಕುರುಹುಗಳು ಉಪಖಂಡದ ಪ್ರಪ್ರಥಮ ನಾಗರೀಕತೆಯ ತೊಟ್ಟಿಲಾದ ಸಿಂಧೂಕಣಿವೆಯಲ್ಲೇ ದೊರೆಯುತ್ತವೆ. ಸಿಂಧ್ ಕೊಳ್ಳದ ಯಾವುದೇ ಉತ್ಖನನ ಸ್ಥಳದಲ್ಲಿ ಆಯುಧಗಳು ಅಥವಾ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ. ಯಥೇಚ್ಛವಾಗಿ ದೊರಕಿರುವುದು ದೈನಂದಿನ ಬದುಕಿಗೆ ಅಗತ್ಯವಾದ ಉಪಕರಣಗಳು. ಇದು ಸೂಚಿಸುವುದು ಸಿಂಧೂ ಕಣಿವೆಯ ನಾಗರಿಕತೆಯ ಜನರು ಅಹಿಂಸಾವಾದಿಗಳಾಗಿದ್ದಿರಬಹುದು ಅಂದರೆ ಶಾಂತಿಪ್ರಿಯರಾಗಿದ್ದಿರಬಹುದು ಎನ್ನುವುದನ್ನು. ಇದನ್ನು ನಂತರದ ಲಿಖಿತ ಇತಿಹಾಸಕಾಲದಲ್ಲೂ ಕಾಣಬಹುದು. ಭಾರತದಂತೆಯೇ ತುರ್ಕಿ, ಪರ್ಶಿಯಾ, ಅಫ್ಘಾನಿಸ್ತಾನದ ಜನರು ಆರ್ಯ ಜನಾಂಗಕ್ಕೆ ಸೇರಿದವರು. ಆದರೆ ಭಾರತೀಯ ಆರ್ಯರಿಗೂ, ಇತರ ನಾಡುಗಳ ಆರ್ಯರಿಗೂ, ಅವರುಗಳು ಯಾವುದೇ ಧರ್ಮಕ್ಕೆ ಸೇರಿರಲಿ, ಒಂದು ಆಶ್ಚರ್ಯಕರ ವ್ಯತ್ಯಾಸವಿದೆ. ಭಾರತೀಯ ಆರ್ಯರು ಕ್ಷಾತ್ರಗುಣಗಳನ್ನು ಕಳೆದುಕೊಂಡು ಅಹಿಂಸಾಮಾರ್ಗ ಹಿಡಿದು ಶಾಂತಿಪ್ರಿಯರಾದರೆ ಇತರ ನಾಡುಗಳ ಆರ್ಯರು ಕ್ಷಾತ್ರಗುಣಗಳನ್ನು ಉಳಿಸಿ ಬೆಳಿಸಿ ಹೊಸಹೊಸ ಮಾರಕಾಸ್ತ್ರಗಳನ್ನು ಅವಿಷ್ಕರಿಸುತ್ತಾ ನಡೆದರು. ಇದಾದದ್ದು ಹೇಗೆ? ಅದು ಈ ನೆಲದ ಮಹಿಮೆ ಎಂದು ಹೇಳಿ ಸುಮ್ಮನಿದ್ದುಬಿಡುವ ಬದಲು ಈ ನಿಟ್ಟಿನಲ್ಲಿ ನಾನು ಸ್ವಲ್ಪ ಅಧ್ಯಯನ ಕೈಗೊಂಡೆ. ನನಗೆ ಉತ್ತರ ದೊರೆತದ್ದು ಭೂಗೋಳ ಮತ್ತು ಅರ್ಥಶಾಸ್ತ್ರದಲ್ಲಿ.

ಸಂಪನ್ಮೂಲಗಳ ಕೊರತೆ ಇರುವಾಗ, ಸೀಮಿತ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ನಿರ್ವಹಿಸುವ ಖಾಯಂ ರಾಜಕೀಯ ಹಾಗೂ ಕಾನೂನು ವ್ಯವಸ್ಥೆ ಇಲ್ಲದಿದ್ದಾಗ ತಮ್ಮಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವುದು, ಅವಕಾಶ ಸಿಕ್ಕಿದಾಗ ಇತರರ ವಸ್ತುಗಳನ್ನು ಕಸಿದುಕೊಳ್ಳುವುದು ಮನುಷ್ಯನ ಸ್ವಭಾವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನ ಅನುಕ್ಷಣವೂ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಜಾಗರೂಕತೆಯನ್ನು ಕಾಪಾಡಿಕೊಂಡಿರಬೇಕಾಗುತ್ತದೆ. ಹಾಗಿಲ್ಲದಿದ್ದ ಪಕ್ಷದಲ್ಲಿ ತಮ್ಮ ವಸ್ತುಗಳನ್ನೂ, ಜೀವವನ್ನೂ ಕಾಪಾಡಿಕೊಳ್ಳುವುದರಲ್ಲಿ ಅವರು ಸಫಲರಾಗಲಾರರು.

ಸಂಪನ್ಮೂಲಗಳ ತೀವ್ರ ಕೊರತೆ ಇದ್ದ ಪಶ್ಚಿಮ ಮತ್ತು ಮಧ್ಯ ಏಶಿಯಾದ ನಾಡುಗಳಲ್ಲಿ ನೆಲೆಸಿದ್ದ ಆರ್ಯರು ಸ್ವಾಭಾವಿಕವಾಗಿಯೇ ತಮ್ಮ ಜೀವ ಹಾಗೂ ವಸ್ತುಗಳ ರಕ್ಷಣೆಗಾಗಿ ಕ್ಷಾತ್ರಗುಣವನ್ನು ಉಳಿಸಿಕೊಂಡರು. ಪ್ರತಿದಿನದ ಬದುಕೂ ಒಂದು ಸಂಘರ್ಷವಾಗಿದ್ದ ಆ ಪ್ರದೇಶಗಳಲ್ಲಿ ಅದು ಅಗತ್ಯವಾಗಿತ್ತು. ಆದರೆ ಸಂಪನ್ಮೂಲಗಳು ಯಥೇಚ್ಛವಾಗಿದ್ದ ಭಾರತದಲ್ಲಿ ಜೀವಕ್ಕಾಗಲೀ, ಆಸ್ತಿಪಾಸ್ತಿಗಾಗಲೀ ಯಾವ ಅಪಾಯವೂ ಇರಲಿಲ್ಲ. ಎಲ್ಲರಿಗೂ ಎಲ್ಲವೂ ಸಿಗುವಾಗ ಮತ್ತೊಬ್ಬನನ್ನು ಕೊಂದು ಅವನ ಆಸ್ತಿಯನ್ನು ಕಸಿಯುವ ಮನೊಭಾವದ ಅಗತ್ಯವಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅನುಕ್ಷಣವೂ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಚಾಗರೂಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಹೀಗಾದಾಗ ತಲೆಮಾರುಗಳು ಉರುಳಿದಂತೆ ಕ್ಷಾತ್ರಗುಣವೂ ಕ್ರಮೇಣ ನಶಿಸಿಹೋಗುತ್ತದೆ. ಇದರ ತಾರ್ಕಿಕ ಮುಂದುವರಿಕೆಯಾಗಿ ಶಾಂತಿಯ ಮನೋಭಾವನೆ ಸಾರ್ವತ್ರಿಕವಾಗಿ ಜನಮನದಲ್ಲಿ, ಸಂಸ್ಕೃತಿ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗುತ್ತದೆ. ಕ್ಷಾತ್ರಗುಣ ಕುಗ್ಗಿದಂತೆ “ಶಾಂತಿ” ಸಾಮುದಾಯಿಕ ಅಗತ್ಯವಾಗುವುದು ಸ್ವಾಭಾವಿಕ. ದೈನಂದಿನ ಬದುಕಿನಲ್ಲಿ ಆಕ್ರಮಣಶೀಲತೆ ಕಡಿಮೆಯಾದಂತೆ ಧಾರ್ಮಿಕ ಮೌಲ್ಯಗಳು ಮತ್ತು ಆಚರಣೆಗಳೂ ಸಹಾ ಆಕ್ರಮಣಶೀಲತೆಯನ್ನು ದೂರವಿರಿಸುತ್ತವೆ, ಅಂದರೆ ಶಾಂತಿಯುತವಾಗುತ್ತದೆ. ಹೀಗೆ ಈ “ಶಾಂತಿಪ್ರಿಯತೆ” ಈ ನೆಲದಲ್ಲಿ ಉದ್ಭವವಾದ ಎಲ್ಲ ಜೀವನಮೌಲ್ಯಗಳ, ಧರ್ಮಗಳ ಮೂಲಮಂತ್ರವೂ ಆಯಿತು.

ಹೀಗೆ ಕ್ಷಾತ್ರಗುಣವನ್ನು ಕಳೆದುಕೊಂಡ ಭಾರತೀಯರು ಅದೇ ಕ್ಷಾತ್ರಗುಣಗಳನ್ನು ಉಳಿಸಿಕೊಂಡ ಹೊರಗಿನವರೆದುರು ಸೋಲೊಪ್ಪಿದ್ದು ಈ ದೇಶದ ಹಿಂದೂ ಯುಗದಿಂದಲೇ ಆರಂಭವಾಗುತ್ತದೆ. ಮೊದಲಿಗೆ ಪರ್ಶಿಯಾದ ಆರ್ಯರಿಗೆ ಸೋಲೊಪ್ಪಿದ ಭಾರತೀಯ ಹಿಂದೂ ಆರ್ಯರು ನಂತರ, ಮೊದಲು ಮುಸ್ಲಿಂ ಅರಬ್ಬರ ಅನಂತರ ಮುಸ್ಲಿಂ ಟರ್ಕೋ-ಅಫ್ಘನ್ನರೆದುರು ಮಂಡಿಯೂರಿದರು. ನಂತರ ಭಾರತವನ್ನು ತಮ್ಮ ವಾಸಸ್ಥಾನವಾಗಿಸಿಕೊಂಡ ಮುಸ್ಲಿಂ ಆರ್ಯರೂ ಅದೇ ಹಣೆಬರಹಕ್ಕೊಳಗಾದರು. ಆ ಇತಿಹಾಸದ ಇಣುಕುನೋಟ ಅಗತ್ಯವೆನಿಸುತ್ತದೆ.

ಭಾರತದ ಹೃದಯಭಾಗದಲ್ಲಿ ಮುಸ್ಲಿಂ ಶಾಸನವನ್ನು ಸ್ಥಾಪಿಸಿ ಈ ನೆಲದಲ್ಲಿ ಮುಸ್ಲಿಂ ಸಾಮ್ರಾಜ್ಯವಾದಕ್ಕೆ ಬುನಾದಿ ಹಾಕಿದ್ದು ನಿಮಗೆ ಗೊತ್ತೇ ಇರುವಂತೆ ಟರ್ಕೋ-ಅಘ್ಘನ್ ಅರಸ ಮಹಮದ್ ಘೋರಿ, ೧೧೯೨ರಲ್ಲಿ. ನಂತರ ಇಡೀ ಉತ್ತರ ಭಾರತ ಟರ್ಕೋ-ಅಫ್ಟನ್ ಮುಸ್ಲಿಂ ಶಾಸನಕ್ಕೆ ಒಳಗಾಗಲು ತಗಲಿದ್ದು ಕೇವಲ ಹನ್ನೊಂದು ವರ್ಷಗಳು. ೧೨೦೨-೦೩ರಲ್ಲಿ ಗಂಗಾ ಬಯಲಿನಲ್ಲಿ ವಾಯುವೇಗದಲ್ಲಿ ಸಂಚರಿಸಿದ ಬಕ್ತಿಯಾರ್ ಖಿಲ್ಜಿ ಕೇವಲ ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಗೆದ್ದುಕೊಂಡ ಎಂದು ಇತಿಹಾಸ ಹೇಳುತ್ತದೆ. ಮಹಮದ್ ಘೋರಿ, ಕುತ್ಬುದ್ದೀನ್ ಐಬಕ್, ಬಕ್ತಿಯಾರ್ ಖಿಲ್ಜಿ ಮತ್ತವರ ಸೈನಿಕರೆಲ್ಲರೂ ಆರ್ಯರೇ. ನಂತರದ ಮೂರು ಶತಮಾನಗಳವರೆಗೆ ಭಾರತ ಕಂಡದ್ದು ಟರ್ಕೋ-ಅಫ್ಟನ್ ಮುಸ್ಲಿಂ ಸೇನಾ ಪ್ರಾಬಲ್ಯ. ಪಂಜಾಬ್ನಿಂದ ಮಧುರೈವರೆಗಿನ ವಿಶಾಲ ಪ್ರದೇಶದಲ್ಲಿ ಸತತ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ಮತ್ತೆಮತ್ತೆ ಜಯಶೀಲರಾದ ಟರ್ಕೋ-ಅಫ್ಟನ್ ಮುಸ್ಲಿಂ ಆರ್ಯರು ಉಪಖಂಡದ ಆಚೆಗಿನ ಜನಾಂಗಗಳ ಮೇಲೆ ರಣಾಂಗಣದಲ್ಲಿ ವಿಜಯ ಸಾಧಿಸಿದ ಉದಾಹರಣೆಗಳು ಅಪರೂಪ. ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಕೈವಶ ಮಾಡಿಕೊಂಡ ಬಕ್ತಿಯಾರ್ ಖಿಲ್ಜಿ ಮೂರು ವರ್ಷಗಳ ನಂತರ ಟಿಬೆಟ್ನಲ್ಲಿ ವಿಫಲನಾದ. ಆ ವೈಫಲ್ಯವೇ ಅವನಿಗೆ ಮಾರಣಾಂತಿಕವೂ ಆಯಿತು. ಮಲಿಕ್ ಕಾಫರ್ನ ಮೂಲಕ ದೇವಗಿರಿ, ವಾರಂಗಲ್, ದ್ವಾರಸಮುದ್ರ, ಮಧುರೈಗಳ ಮೇಲೆ ಅಭೂತಪೂರ್ವ ವಿಜಯ ಸಾಧಿಸಿದ ಅಲ್ಲಾವುದ್ದೀನ್ ಖಿಲ್ಜಿಗೆ ಉಪಖಂಡದ ಹೊರಗೆ ದಕ್ಕಿದ ಏಕಮಾತ್ರ ಮಹತ್ವದ ವಿಜಯವೆಂದರೆ ಘಾಜಿ ಖಾನ್ನ ನೇತೃತ್ವದ ಗಡಿಸೇನೆ ಹೂಣರನ್ನು ಖೈಬರ್ನಾಚೆಗಿನ ಅಫ್ಘಾನಿಸ್ತಾನಕ್ಕೆ ಅಟ್ಟಿದ್ದು. ಮಂಗೋಲರ ವಿರುದ್ಧ ಭಾರತದ ಮುಸ್ಲಿಂ ಅರಸರ ಪರಾಕ್ರಮ ಅಲ್ಲಿಗೆ ನಿಂತುಹೋಯಿತು. ಕೊನೆಗೆ ಅದೆಲ್ಲಿಗೆ ತಲುಪಿತೆಂದರೆ ಮಂಗೋಲ್-ಟರ್ಕಿಷ್ ಮಿಶ್ರರಕ್ತದ ಮೊಗಲರು ೧೫೨೬-೫೬ರಲ್ಲಿ ಉತ್ತರ ಭಾರತದ ಸಾರ್ವಭೌಮರಾದರು. ಬಾಬರನ ನಂತರ ಅಫ್ಘಾನಿಸ್ತಾನದಲ್ಲಿ ನೆಲೆ ಕಳೆದುಕೊಂಡ ಮೊಗಲರು ತಮ್ಮ ಸೇನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದೆಲ್ಲವೂ ಉಪಖಂಡದ ಎಲ್ಲೆಯೊಳಗೇ. ಅದರಾಚೆಗೆ ಅವರ ಆಟ ನಡೆಯಲಿಲ್ಲ. ಇಲ್ಲಿ ನಾನೇನು ವಿಶದಪಡಿಸಲು ಯತ್ನಿಸುತ್ತಿದ್ದೇನೆಂದರೆ ಮೊದಲಿಗೆ ಭಾರತದ ಹಿಂದೂ ಆರ್ಯರು ಹೊರಗಿನ ಆರ್ಯರೆದುರು ಸೋಲೊಪ್ಪಿದರು, ನಂತರ ಹನ್ನೆರಡು-ಹದಿಮೂರನೆಯ ಶತಮಾನಗಳ ಸಂಧಿಕಾಲದಲ್ಲಿ ಭಾರತದ ಹಿಂದೂ ಆರ್ಯರನ್ನು ಸೋಲಿಸಿ ಈ ದೇಶವನ್ನು ಗೆದ್ದು ಆಳತೊಡಗಿದ ಅಫ್ಘನ್ ಮುಸ್ಲಿಂ ಆರ್ಯರು ಮೂರು ಶತಮಾನಗಳು ಉರುಳುವಷ್ಟರಲ್ಲಿ ತಮ್ಮ ಕಲಿತನವನ್ನು ಕಳೆದುಕೊಂಡು ಮಧ್ಯಏಶಿಯಾದಿಂದ ಬಂದ ಮೊಗಲರಿಗೆ ಸೋತು ಶರಣಾದರು ಮತ್ತು ಎರಡು ಶತಮಾನಗಳ ನಂತರ ಮೊಗಲರೂ ಸಹಾ ಹಿಂದೂ ಮತ್ತು ಸಿಖ್ ಪ್ರತಿರೋಧವನ್ನು ನಿಗ್ರಹಿಸುವುದರಲ್ಲಿ ವಿಫಲರಾದರು ಮತ್ತು ಇರಾನಿಯನ್ ಮುಸ್ಲಿಂ ಆರ್ಯರ ಮುಂದೆ ಸೋಲೊಪ್ಪಿದರು. ಹೀಗೆ ಹೊರಗಿನಿಂದ ಬಂದ ಮುಸ್ಲಿಂ ಆರ್ಯರ ಕ್ಷಾತ್ರಗುಣವೂ ಕೆಲ ತಲೆಮಾರುಗಳ ನಂತರ ಅದೆಷ್ಟು ಕ್ಷೀಣಿಸಿತೆಂದರೆ ತಾವು ಬಿಟ್ಟುಬಂದಿದ್ದ ಪ್ರದೇಶಗಳಲ್ಲಿ, ಕೊನೇಪಕ್ಷ ಭಾರತಕ್ಕೆ ಭೌಗೋಳಿಕವಾಗಿ ಹತ್ತಿರವಾಗಿದ್ದ ಅಫ್ಘಾನಿಸ್ತಾನದಲ್ಲಿಯೂ ಸಹಾ, ತಮ್ಮ ಪರಾಕ್ರಮವನ್ನು ಮತ್ತೊಮ್ಮೆ ಮೆರೆಯುವಲ್ಲಿ ವಿಫಲರಾದವು ಮತ್ತು ತಮ್ಮ ಸೇನಾಪ್ರಾಬಲ್ಯವನ್ನು, ಶಾಸನವನ್ನು ಕೇವಲ ಭಾರತದ ಎಲ್ಲೆಯೊಳಗಷ್ಟೇ ಸೀಮಿತಗೊಳಿಸುವ ಹಣೆಬರಹಕ್ಕೊಳಗಾದವು.

ಇದರಿಂದ ವಿಶದವಾಗುವುದೇನೆಂದರೆ ಭಾರತವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡ ಜನಾಂಗಗಳೆಲ್ಲವೂ ಕೆಲ ತಲೆಮಾರುಗಳ ನಂತರ ಈ ನೆಲದ ಭೌಗೋಳಿಕ ಅಂಶಗಳು ಮತ್ತು ಅವು ಒದಗಿಸಿದ ಆರ್ಥಿಕ ಅನುಕೂಲತೆ, ತತ್ಪರಿಣಾಮವಾಗಿ ದಕ್ಕಿದ ನಿರಾಳತೆಯಿಂದಾಗಿ ತನ್ನ ಕಲಿತನವನ್ನು ಕಳೆದುಕೊಂಡು ಹೊಸ ಧಾಳಿಕಾರರ ಮುಂದೆ ಮಂಡಿಯೂರಿದವು. ಆದರೆ ಬದುಕೊಂದು ಸಂಘರ್ಷವಾಗಿದ್ದ ಪಶ್ಚಿಮ ಏಶಿಯಾದ ಜನಾಂಗಗಳು ಆದಿಕಾಲದಿಂದಲೂ ತಂತಮ್ಮ ಕ್ಷಾತ್ರಗುಣಗಳನ್ನು ಉಳಿಸಿ ಬೆಳೆಸಿ ಯುದ್ಧಕಲೆಯನ್ನು ಕರಗತಗೊಳಿಸಿಕೊಳ್ಳುತ್ತಾ ಸಾಗಿದವು. ಕಾಲಕಾಲಕ್ಕೆ ಆ ನೆಲದಲ್ಲಿ ಪ್ರಭಾವಶಾಲಿಯಾಗಿದ್ದ ಯೆಹೂದಿ, ಹಿಂದೂ, ಪಾರ್ಸೀ ಮತ್ತು ಅಂತಿಮವಾಗಿ ಮುಸ್ಲಿಂ ಜನತೆಗಳೆಲ್ಲವೂ ಆ ನಿರ್ವಾಹವಿಲ್ಲದೇ ಆ ಪ್ರಕ್ರಿಯೆಗೆ ಒಳಗಾದವು.

ಹೊರಗಿನಿಂದ ಉಪಖಂಡಕ್ಕೆ ಬಂದ ಜನಾಂಗಗಳು ಯಾವ ಕ್ಷಾತ್ರಗುಣಗಳಿಂದ ಈ ನೆಲದ ಅಧಿಪತಿಗಳಾದರೋ ಅದೇ ಕ್ಷಾತ್ರಗುಣಗಳಿಂದಾಗಿ ಅವರ ಅಸ್ತಿತ್ವಕ್ಕೆ ಇಲ್ಲಿ ಸವಾಲುಗಳು ಉತ್ಪನ್ನವಾಗಲಿಲ್ಲ. ಕಾಲಕಾಲಕ್ಕೆ ಭಾರತದ ಅಧಿಪತಿಗಳಾಗಿ ಮೆರೆದ ಹಿಂದೂ ಅಥವಾ ಮುಸ್ಲಿಂ ಅರಸುಮನೆತನಗಳ ಅಸ್ತಿತ್ವಕ್ಕೆ ತೀವ್ರತರದ ಅಪಾಯ ಎದುರಾಗುತ್ತಿದ್ದುದು ಹೊರಗಿನಿಂದ ಮಾತ್ರ. ಹೀಗಾಗಿ ಹೊರಗಿನ ಶತ್ರುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅಸ್ತಿತ್ವದ ಪ್ರಶ್ನೆಯಾದ ಕಾರಣ ಅಂತರಿಕ ಕ್ಷೇತ್ರದಲ್ಲಿ ಪರಸ್ಪರ ರಾಜಿ, ಸಹಿಷ್ಟುತೆ, ಶಾಂತಿ ಮುಖ್ಯವೆನಿಸಿದವು.

ಇದೇ ನೆಲೆಯಲ್ಲಿ ಇತಿಹಾಸದ ಯಾವುದೇ ಹಂತದಲ್ಲೂ ಉಪಖಂಡದಲ್ಲಿ ಸಾರಾಸಗಟು ಮತಾಂತರ ನಡೆಯದೇ ಹೋದುದನ್ನೂ ವಿವರಿಸಬಹುದು. ಭಾರತದ ಭೌಗೋಳಿಕ ಹಾಗೂ ಆರ್ಥಿಕ ಅಂಶಗಳು ಜೀವನಮೌಲ್ಯಗಳನ್ನೂ, ಧಾರ್ಮಿಕ ರೀತಿರಿವಾಜುಗಳನ್ನೂ ಬದಲಾಯಿಸುವುದು ಹಿಂದೂಗಳಿಗಷ್ಟೇ ಸೀಮಿತವಾಗಿರಲಿಲ್ಲ. ಆ ಪ್ರಕ್ರಿಯೆಗೆ ಮುಸ್ಲಿಮರೂ ಸಹಾ ಒಳಗಾಗಿದ್ದಾರೆ. ಸಂಪನ್ಮೂಲಗಳ ಕೊರತೆ ಇರುವಲ್ಲಿ ಪಕ್ಕದಲ್ಲಿ ‘ಅನ್ಯ’ನ ಅಸ್ತಿತ್ವ ಆರ್ಥಿಕ ಪ್ರಶ್ನೆಗಳನ್ನು ಜಟಿಲಗೊಳಿಸುತ್ತದೆ. ಹೀಗಾಗಿ ಅಲ್ಲಿ ಅಸಹನೆ ಒಡಮೂಡುತ್ತದೆ. ಎಲ್ಲರನ್ನೂ ‘ತಮ್ಮವ’ರನ್ನಾಗಿ ಮಾಡಿಕೊಳ್ಳುವುದರಿಂದ ಆ ಪ್ರಶ್ನೆಗಳನ್ನು ನಿವಾರಿಸಬಹುದೆಂಬ ನಿರೀಕ್ಷೆಯೇ ಇರಾನ್, ಟರ್ಕಿ, ಮಧ್ಯ ಏಶಿಯಾಗಳಲ್ಲಿ ಸಾರಾಸಗಟಾಗಿ ಎಲ್ಲರನ್ನೂ ಇಸ್ಲಾಂಗೆ ಮತಾಂತರಗೊಳಿಸುವ ಪ್ರಕ್ರಿಯೆಗೆ ಕಾರಣವಾಯಿತು. ಈ ಮತಾಂತರವೇ ಆ ಪ್ರದೇಶದಲ್ಲಿ ಹಿಂದಿನ ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಹೆಚ್ಚು ಪ್ರಬಲವಾಗಲು, ವ್ಯಾಪಕವಾಗಲು ಹಾಗೂ ದೀರ್ಘಾಯುಷಿವಾಗಲು ಕಾರಣವಾಯಿತು. ಭೌಗೋಳಿಕ ಹಾಗೂ ಆರ್ಥಿಕ ವಾಸ್ತವಗಳನ್ನು ನಿರ್ಲಕ್ಷಿಸಿದ್ದೇ ಪಶ್ಚಿಮ ಏಶಿಯಾದ ಯೆಹೂದಿ, ಪಾರ್ಸಿ ಮುಂತಾದ ಧರ್ಮಗಳಿಗೂ ಮುಳುವಾಯಿತು.

ಆದರೆ ಉಪಖಂಡದ ಪರಿಸ್ಥಿತಿ ಬೇರೆ. ತೀವ್ರತರದ ಅರ್ಥಿಕ ಸವಾಲುಗಳಿಲ್ಲದ ಭಾರತ ಉಪಖಂಡದಲ್ಲಿ ನಾವು ಮತ್ತು ಅವರುಗಳ ನಡುವಿನ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಬೆಳೆದುನಿಲ್ಲಲಿಲ್ಲ. ಪರಿಣಾಮವಾಗಿ ಪರಸ್ಪರ ಸಹನೆ, ಸಹಿಷ್ಟುತೆ ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಹಾಸುಹೊಕ್ಕಾದವು. ಹೀಗಾಗಿಯೇ, ಹಿಂದೆಯೇ ಹೇಳಿದಂತೆ, ಇಲ್ಲಿ ಹುಟ್ಟಿದ ಧರ್ಮಗಳೆಲ್ಲವೂ ಶಾಂತಿಮಂತ್ರವನ್ನು ಪಠಿಸುತ್ತಲೇ ಹುಟ್ಟಿದವು ಮತ್ತು ಹೊರಗಿನಿಂದ ಬಂದ ಇಸ್ಲಾಮಿನ ಉದಾರ ರೂಪವಾದ ಸೂಫಿಸಂ ಇಲ್ಲಿನ ಜನತೆಯಿಂದ ಸ್ವೀಕರಿಸಲ್ಪಟ್ಟಿತು.

ನೀವು ಎತ್ತಿರುವ ೨೦೦೨ರ ಗುಜರಾತ್ ರಕ್ತಪಾತದ ಬಗ್ಗೆ ನಿಮಗೆ ಕೆಲವು ವಿವರಗಳನ್ನು ಕೊಡಬೇಕು. ೨೦೦೨ರ ಫೆಬ್ರವರಿ ೨೭, ಮಾರ್ಚ್ ೧, ೨ರಂದು ಗುಜರಾತ್ನಲ್ಲಿ ನಡೆದ ರಕ್ತಪಾತ ಖಂಡಿತವಾಗಿಯೂ ಅಕ್ಷಮ್ಯ, ನಾಗರಿಕ ಸಮಾಜದ ಒಂದು ಕಪ್ಪುಚುಕ್ಕೆ. ಆದರೆ ಇದಕ್ಕೆ ಪ್ರೇರಕವಾದದ್ದು ಫೆಬ್ರವರಿ ೨೭ರಂದು ಘಟಿಸಿದ ಗೋಧ್ರಾ ಹತ್ಯಾಕಾಂಡ. ಇದನ್ನು ನೀವು ಪ್ರಸ್ತಾಪಿಸುವುದೇ ಇಲ್ಲ. ಗೋಧ್ರಾ ಹತ್ಯಾಕಾಂಡಕ್ಕಾಗಿ ಹಿಂದಿನ ಸಂಜೆಯೇ ಆ ಪ್ರದೇಶದ ಘಾಂಚಿ ಮುಸ್ಲಿಮರು ೬೦೦ ಲೀಟರ್ ಪೆಟ್ರೋಲ್ನೊಂದಿಗೆ ಸಜ್ಜಾಗಿದ್ದರು ಎಂದು ಸುಪ್ರೀಮ್ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ದಲ (ಎಸ್ಐಟಿ) ಹೇಳಿದೆ. ಅದರಲ್ಲಿ ಹಲವರು ಘಟನಾನಂತರ ಪಾಕಿಸ್ತಾನಕ್ಕೆ ಓಡಿಹೋದರು ಎಂದೂ ತನಿಖಾದಳ ಹೇಳುತ್ತದೆ.ಇಷ್ಟಾಗಿಯೂ ಸ್ವಭಾವತಃ ಶಾಂತಮತಿಗಳಾದ ಸಾಮಾನ್ಯ ಗುಜರಾತಿಗಳು ಮತೀಯವಾಗಿ ಇಷ್ಟೇಕೆ ಉದ್ರಿಕ್ತರಾದರು ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ.

ಪರ್ಶಿಯಾದ ಅಗ್ನಿ ಆರಾಧಕರ ಮೇಲೆ ಅರಬ್ಬರು ಇಸ್ಲಾಮನ್ನು ಹೇರಿದ್ದು ಕ್ರೂರ ವಿಧಾನಗಳ ಮೂಲಕ. ಅದರಿಂದ ತಪ್ಪಿಸಿಕೊಂಡು ಓಡಿಬಂದ ಪಾರ್ಸಿಗಳಿಂದ ಇಸ್ಲಾಂನ ಕ್ರೌರ್ಯದ ಮೊದಲ ಪರಿಚಯ ಏಳನೆಯ ಶತಮಾನದಲ್ಲೇ ಗುಜರಾತಿಗಾಯಿತು. ಮುಂದಿನ ಐದಾರು ದಶಕಗಳಲ್ಲಿ ನೆರೆಯ ಸಿಂಧ್ ಅರಬ್ಬರ ವಶವಾದಾಗ ತಾನು ಹಿಂದೂಧರ್ಮದ ಗಡಿ ಎಂಬ ಅರಿವು ಆ ನಾಡಿಗಾಯಿತು. ನಂತರ ಇಸ್ಲಾಂನ ಹಿಂಸಾತ್ಮಕ ಮುಖದ ಸ್ವಾನುಭವ ಗುಜರಾತಿಗಾದದ್ದು ೧೦೧೭ರಲ್ಲಿ. ಆ ವರ್ಷ ಘಜನಿಯ ಸುಲ್ತಾನ ಮಹಮದ್ ಸೋಮನಾಥ ದೇವಾಲಯದ ಮೇಲೆ ನಡೆಸಿದ ಧಾಳಿಯ ಹಿಂದಿದ್ದ ಮುಖ್ಯ ಕಾರಣ ಲೂಟಿಯೇ ಎಂದು ಒಪ್ಪಿಕೊಂಡರೂ ಲೂಟಿಗಾರ ಮಹಮದ್ ಸೋಮನಾಥದ ಶಿವಲಿಂಗಕ್ಕೆ ಎಸಗಿದ ಅಪಚಾರ ಇಸ್ಲಾಂನಿಂದ ಒದಗಬಹುದಾದ ಹಾನಿಯ ನೇರ ಪರಿಚಯವನ್ನು ಗುಜರಾತಿಗಳಿಗೆ ಮಾಡಿಕೊಟ್ಟಿತು. ಇದು ಗುಜರಾತಿಗಳ ಇಸ್ಲಾಂ-ವಿರೋಧಿ ಮನೋಭಾವ ಬೆಳೆದುಬಂದ ಬಗೆ. ಜತೆಗೇ ಹಿಂದೂಧರ್ಮದ ಬಗ್ಗೆ ತೀವ್ರ ಸಂವೇದನಾಶೀಲತೆಯನ್ನೂ ಅವರು ರೂಢಿಸಿಕೊಂಡರು. ಹೀಗಾಗಿಯೇ ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಸ್ವಭಾವತಃ ಶಾಂತಮತಿಗಳಾದ ಗುಜರಾತಿಗಳು ಪ್ರಚೋದನೆಗೊಂಡಾಗ ತೀವ್ರವಾಗಿ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದು ಆಗಾಗ್ಗೆ ನಡೆದುಕೊಂಡೇ ಬಂದಿದೆ. ಸ್ವಾತಂತ್ರ್ಯಾನಂತರ ಪಾಕಿಸ್ತಾನದ ಭೂದಾಹದಿಂದಾಗಿ ತನ್ನ ಒಂದಷ್ಟು ನೆಲವನ್ನು ಕಳೆದುಕೊಂಡ ಭಾರತದ ಏಕೈಕ ರಾಜ್ಯ ಗುಜರಾತ್. ಸಿಂಧ್ ಪ್ರಾಂತ್ಯಕ್ಕೆ ಹೊಂದಿಕೊಂಡ ಗುಜರಾತಿನ ಕಛ್ಛ್ನ ರಣ್ ಪ್ರದೇಶದಲ್ಲಿ ಅರ್ಧದಷ್ಟನ್ನು ತನ್ನದೆಂದು ಪಾಕಿಸ್ತಾನ ೧೯೬೫ರಲ್ಲಿ ತಗಾದೆ ತೆಗೆಯಿತು. ಅಷ್ಟೇ ಅಲ್ಲ, ಅಮೆರಿಕಾದಿಂದ ಪಡೆದುಕೊಂಡಿದ್ದ (ಅ ಕಾಲದ) ಅತ್ಯಾಧುನಿಕ ಪ್ಯಾಟನ್ ಟ್ಯಾಂಕ್ಗಳ ಸಹಾಯದಿಂದ ಪಾಕಿಸ್ತಾನಿ ಸೇನೆ ಭಾರತೀಯ ಪ್ರದೇಶದೊಳಗೆ ನುಗ್ಗಿಬಂತು. ಆಗ ನಡೆದ ಹಲವು ಚಕಮುಕಿಗಳಲ್ಲಿ ಭಾರತೀಯ ಸೇನೆ ಹಿಮ್ಮೆಟ್ಟಿತು. ಕೊನೆಗೆ ಅಂತರರಾಷ್ಟ್ರೀಯ ಮಧ್ಯಪ್ರವೇಶದಿಂದ ಘರ್ಷಣೆ ನಿಂತು ಟ್ರಿಬ್ಯೂನಲ್ ಒಂದಕ್ಕೆ ಸಮಸ್ಯೆಯನ್ನೊಪ್ಪಿಸಲಾಯಿತು. ಸುಮಾರು ಎಂಟುನೂರು ಚದರ ಕಿಲೋಮೀಟರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡುವಂತೆ ಟ್ರಿಬ್ಯೂನಲ್ ೧೯೬೮ರಲ್ಲಿ ಭಾರತಕ್ಕೆ ಆದೇಶಿಸಿತು. ಅದನ್ನು ನಿರಾಕರಿಸದೇ ಪಾಲಿಸಿದ ಭಾರತ ಅಷ್ಟೂ ಪ್ರದೇಶವನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿತು. ಇದು ಗುಜರಾತಿಗಳಿಗೆ ಮತ್ತೊಂದು ಆಘಾತ. ತಮ್ಮ ನೆಲವನ್ನು ಕಬಳಿಸಿದ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ ಎನ್ನುವುದು ಬಹುತೇಕ ಗುಜರಾತಿ ಹಿಂದೂಗಳಲ್ಲಿ ಮತ್ತಷ್ಟು ಅಸಹನೆಯನ್ನುಂಟುಮಾಡಿತು.

ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆಯೊಂದಿಗೆ ಗೋಧ್ರಾ ರೈಲು ಹತ್ಯಾಕಾಂಡ ಸೃಷ್ಟಿಸಿದ ಪ್ರಚೋದನೆಯಿಂದಾಗಿ ಭುಗಿಲೆದ್ದ ಉಗ್ರ ಮುಸ್ಲಿಂ-ವಿರೋಧಿ ಭಾವನೆಯನ್ನು ಶಮನಗೊಳಿಸಲು ಮೋದಿಯವರ ಬಿಜೆಪಿ ಸರಕಾರವಿರಲಿ, ಕಾಂಗ್ರೆಸ್ ಸರಕಾರಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಕೆಲ ಉದಾಹರಣೆಗಳನ್ನು ನೀಡಬಲ್ಲೆ. ಸ್ವಾತಂತ್ರೋತ್ತರ ಗುಜರಾತ್ ಅತೀ ಭೀಕರ (೨೦೦೨ಕ್ಕಿಂತಲೂ ಭೀಕರ) ಮತೀಯ ಮಾರಣಹೋಮವನ್ನು ಕಂಡದ್ದು ೧೯೬೯ರಲ್ಲಿ. ಆಗ ಅಹ್ಮದಾಬಾದ್ ನಗರವೊಂದರಲ್ಲೇ ಐದುಸಾವಿರ ಮುಸ್ಲಿಮರು ಹತರಾದರಂತೆ. ಆ ಬಗ್ಗೆ ಒಂದು ಚಾರ್ಚ್ಶೀಟ್ ಸಹಾ ಫೈಲ್ ಆಗಲಿಲ್ಲ! ಆಗ ಗುಜರಾತ್ನಲ್ಲಿದ್ದದ್ದು ಹಿತೇಂದ್ರಭಾಯಿ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಕೇಂದ್ರದಲ್ಲಿ ಇಂದಿರಾ ಗಾಂಧಿಯವರ ಸರ್ಕಾರ. ಗುಜರಾತ್ ಮತ್ತೊಮ್ಮೆ ಮತೀಯ ದಳ್ಳುರಿಗೆ ಸಿಲುಕಿದ್ದು ೧೯೮೫ರಲ್ಲಿ, ಆಗಲೂ ಅಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಮುಖ್ಯಮಂತ್ರಿಯಾಗಿದ್ದದ್ದು ಮಾಧವ ಸೋಲಂಕಿ, ಪ್ರಧಾನಿಯಾಗಿದ್ದದ್ದು ರಾಜೀವ್ ಗಾಂಧಿ. ಮತ್ತೆ ಎರಡು ವರ್ಷಗಳ ನಂತರ ೧೮೮೭ರಲ್ಲಿ ಕಾಂಗ್ರೆಸ್ನದೇ ಅಮರ್ ಸಿಂಗ್ ಚೌಧರಿ, ಕೇಂದ್ರದಲ್ಲಿ ಅದೇ ರಾಜೀವ್ ಗಾಂಧಿ ಇದ್ದಾಗ ಗುಜರಾತ್ನಲ್ಲಿ ಅದೆಂತಹ ಕೋಮುಗಲಭೆಗಳಾದವೆಂದರೆ ಅಹ್ಮದಾಬಾದ್ ನಗರದಲ್ಲಿ ಇನ್ನೂರು ದಿನಗಳವರೆಗೆ ಕರ್ಫ್ಯೂ ಇತ್ತು! ಮತ್ತೆ ೧೯೯೦ರಲ್ಲಿ ಗುಜರಾತ್ ಮತ್ತೊಮ್ಮೆ ಕೋಮುಗಲಭೆಯ ದಳ್ಳುರಿಗೆ ಸಿಲುಕಿತು. ಆಗಲೂ ಅಲ್ಲಿದ್ದದ್ದು ಕಾಂಗ್ರೆಸ್ ಸರ್ಕಾರವೇ. ಮುಖ್ಯಮಂತ್ರಿಯಾಗಿದ್ದವರು ಚಿಮನ್ಭಾಯಿ ಪಟೇಲ್. ಅದನ್ನೆಲ್ಲಾ ಮರೆತು ನೀವು ಕೇವಲ ಬಿಜೆಪಿ ಆಡಳಿತಾವಧಿಯಲ್ಲಿ ಘಟಿಸಿದ ರಕ್ತಪಾತದ ಬಗ್ಗೆ ಮಾತ್ರ ಮಾತಾಡುತ್ತೀರಿ. ಅದಕ್ಕೆ ಕಾರಣವೂ ಇದೆ ಬಿಡಿ. ೨೦೦೨ರ ಗಲಭೆಗಳು ಬಿಜೆಪಿ ಆಡಳಿತವಿದ್ದ ರಾಜ್ಯದಲ್ಲಿ ಘಟಿಸಿದ್ದು ಆಗ ರಾಜ್ಯದಲ್ಲೂ, ಕೇಂದ್ರದಲ್ಲೂ ಅಧಿಕಾರದಿಂದ ವಂಚಿತವಾಗಿದ್ದ ಕಾಂಗ್ರೆಸ್ಗೆ ವರದಾನವಾಗಿ ಪರಿಣಮಿಸಿದ್ದು ನಿಜವಲ್ಲವೇ? ಇಡೀ ಘಟನೆಗಳನ್ನು ಇನ್ನೆರಡು ವರ್ಷಗಳಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆಗಳಿಗೆ ಬಳಸಿಕೊಳ್ಳಲು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಿದ್ಧತೆ ನಡೆಸಿತಲ್ಲವೇ? ಇದಕ್ಕೆ ಕೈಗೂಡಿಸಿದವರು ಲಾಗಾಯ್ತಿನಿಂದಲೂ ಕಾಂಗ್ರೆಸ್ನ ಸಮರ್ಥಕರಾಗಿದ್ದ, ತಲೆಮಾರುಗಳಿಂದಲೂ ಆಂಗ್ಲ ಶಿಕ್ಷಣದ ಹಿನ್ನೆಲೆಯಿದ್ದ, ಉದಾರವಾದಿ ಮೌಲ್ಯಗಳುಳ್ಳ ಹಿಂದೂ ಉಚ್ಚವರ್ಗಗಳ ಪತ್ರಕರ್ತರ ತಂಡ. ಇದಕ್ಕೆ ಹಣ ಬಂದದ್ದು ಪಶ್ಚಿಮ ಏಶಿಯಾದ ದೇಶವೊಂದರಿಂದ. ಹಣ ಅಂದರೆ ಹಣ ಅಷ್ಟೇ. ಅದಕ್ಕೆ ಧರ್ಮ ಅಥವಾ ಸಿದ್ಧಾಂತದ ಹಂಗಿರುವುದಿಲ್ಲ.

ಇನ್ನು ಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಎರಡು ಮಾತು. ಗೋಧ್ರಾ ರೈಲು ಹತ್ಯಾಕಾಂಡಕ್ಕೆ ಪ್ರತಿಯಾಗಿ ಗುಜರಾತ್ ಹೊತ್ತಿ ಉರಿಯತೊಡಗಿದಾಗ ಅದರ ಶಮನಕ್ಕೆ ಅಗತ್ಯವಾದ ಕ್ರಮಗಳನ್ನು ಮೋದಿ ಸರಕಾರ ತಕ್ಷಣವೇ ಕೈಗೊಂಡ ಬಗ್ಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ಆಯೋಗ (ಎಸ್ಐಟಿ) ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಮೋದಿ ಮತ್ತವರ ಸರಕಾರದ ಮೇಲೆ ಕಾಂಗ್ರೆಸ್, ಸೆಕ್ಯೂಲರ್ ಮಾಧ್ಯಮಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಡಿದ ಆರೋಪಗಳಲ್ಲಿ ಯಾವ ಹುರುಳೂ ಇಲ್ಲ ಎನ್ನುವುದನ್ನೂ ಎಸ್ಐಟಿ ಘಂಟಾಘೋಷವಾಗಿ ಸಾರಿದೆ. ಈ ಸುಳ್ಳು ಆರೋಪಗಳಲ್ಲಿ ಪ್ರಮುಖವಾದುವು ಗಲಭೆಗಳನ್ನು ತಡೆಯಲು ಮೋದಿ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ ಮತ್ತು ಗೋಧ್ರಾ ರೈಲು ಹತ್ಯಾಕಾಂಡದಲ್ಲಿ ಸುಟ್ಟುಹೋದ ಹಿಂದೂಗಳ ಶವಗಳನ್ನು ಅಹಮದಾಬಾದ್ಗೆ ಕೊಂಡೊಯ್ದು ಹಿಂದೂಗಳನ್ನು ಉದ್ರೇಕಿಸಲಾಯಿತು ಎನ್ನುವುವು. ಅದೇ ಎಸ್ಐಟಿ ಮತ್ತೊಂದು ಮುಚ್ಚಿಟ್ಟ ಸತ್ಯವನ್ನೂ ಬಯಲಿಗೆಳೆದಿದೆ. ತನ್ನ ಸುರಕ್ಷಾ ಪಡೆಗಳಿಂದ ಗಲಭೆಯ ಹತೋಟಿ ಸಾಧ್ಯವಿಲ್ಲ ಎಂದು ಅರಿವಾದೊಡನೇ ಮೋದಿ ಸರಕಾರ ಸಹಾಯಕ್ಕಾಗಿ ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನ್ ಸರಕಾರಗಳಿಗೆ ಅಧಿಕೃತ ಲಿಖಿತ ವಿನಂತಿ ಮಾಡಿಕೊಂಡಿತು. ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳಿದ್ದವು ಎನ್ನುವುದನ್ನು ನೆನಪಿಡಿ. ಮಹಾರಾಷ್ಟ್ರ ಅಲ್ಪಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಗಳ ಪೂರೈಕೆ ಮಾಡಿದರೆ ಮಧ್ಯಪ್ರದೇಶ ಮತ್ತು ರಾಜಾಸ್ಥಾನ ಯಾವುದೇ ಸಹಕಾರ ನೀಡಲು ನಿರಾಕರಿಸಿದವು! ಹೀಗೆ ಕಾಂಗ್ರೆಸ್ ಗುಜರಾತಿನಲ್ಲಿ ಮುಸ್ಲಿಮರ ಹತ್ಯೆಯನ್ನು ತಡೆಯಲು ಸಹಕರಿಸಲು ಹಿಂದೆಗೆಯಿತು! ಅದಕ್ಕೆ ಕಾರಣ ಇಷ್ಟೇ- ಗುಜರಾತಿನಲ್ಲಿ ಕೆಲವು ಸಾವಿರ ಮುಸ್ಲಿಮರ ಜೀವಗಳನ್ನು ಬಲಿಕೊಡುವುದರಿಂದ ಇನ್ನೆರಡು ವರ್ಷಗಳಲ್ಲಿ ದೇಶದಾದ್ಯಂತ ಕೋಟಿಕೋಟಿ ಸಂಖ್ಯೆಯಲ್ಲಿ ಗಳಿಸಬಹುದಾದ ಮುಸ್ಲಿಂ ಮತಗಳ ಲೆಕ್ಕಾಚಾರ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿತ್ತು! ಆ ಲೆಕ್ಕಾಚಾರದ ಪರಿಣಾಮವೇ ಸೋನಿಯಾ ಗಾಂಧಿಯವರು ಮೋದಿಯವರನ್ನು “ಸಾವಿನ ವ್ಯಾಪಾರಿ” ಎಂದು ಬಣ್ಣಿಸುತ್ತಾ, ಆ ಮೂಲಕ ಮುಸ್ಲಿಮರನ್ನು ಉದ್ರೇಕಿಸುತ್ತಾ ಸಾಗಿದ್ದು.

ಮೋದಿಯವರ ಮೇಲಿರುವ ಮತ್ತೊಂದು ಆರೋಪವೆಂದರೆ ಗಲಭೆಯಲ್ಲಿ ಮೃತರಾದ ಮುಸ್ಲಿಮರ ಬಗ್ಗೆ ಮೋದಿ ಅಸಂವೇದನಾಶೀಲರಾಗಿ ಮಾತಾಡಿದರು ಎಂದು. ಮೊದಲಿಗೆ ಝೀ ಟಿವಿಯ ಸುಧೀರ್ ಚೌಧರಿ ಮಾಡಿದ ಆಪಾದನೆಯನ್ನು ಎಲ್ಲ ಮಾಧ್ಯಮಗಳೂ ಪುನರುಚ್ಚರಿಸಿದವು. ಆ ಆಪಾದನೆ ಸತ್ಯದೂರ, ವಾಸ್ತವವಾಗಿ ಝೀ ಟಿವಿ ಮತ್ತು ಟೈಂಸ್ ಆಫ್ ಇಂಡಿಯಾ ಮೋದಿಯವರ ಹೇಳಿಕೆಯನ್ನು ತಿರುಚಿದ್ದವು ಎಂದು ಎಸ್ಐಟಿ ತನ್ನ ವರದಿಯಲ್ಲಿ ಹೇಳಿದೆ (ಪುಟ ೧೮೮-೮೯) ಇದೇ ಎಸ್ಐಟಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಸೇರಿದಂತೆ ಮಾಧ್ಯಮ ಮೋದಿಯವರ ವಿರುದ್ಧ ಮಾಡಿದ ಯಾವ ಆಪಾದನೆಯಲ್ಲೂ ಹುರುಳಿಲ್ಲ ಎಂದೂ ಹೇಳಿದೆ. ಆ ಎಸ್ಐಟಿಯನ್ನು ನೇಮಿಸಿದ್ದು ಸುಪ್ರೀಂ ಕೋರ್ಟ್, ಅದೂ ಯುಪಿಎ ಆಡಳಿತಾವಧಿಯಲ್ಲಿ ಎಂಬುದನ್ನು ಮರೆಯಬೇಡಿ. ಇನ್ನೊಮ್ಮೆ ಮೋದಿಯವರ ವಿರುದ್ಧ ಆಪಾದನೆ ಹೊರಿಸುವ ಮೊದಲು ಎಸ್ಐಟಿ ವರದಿಯನ್ನೊಮ್ಮೆ ಓದಿ.

ಇಷ್ಟು ಸಾಕು ಅನಿಸುತ್ತದೆ.

ಕೊನೆಯ ಮಾತು: ನಮ್ಮ ಧರ್ಮ, ಜಾತಿ, ಸಿದ್ಧಾಂತ ಏನೇ ಇದ್ದರು ನಾವೆಲ್ಲಾ ಮೂಲತಃ ಮನುಷ್ಯರು, ಆ ಕಾರಣದಿಂದಾಗಿಯೇ ನಮ್ಮಲ್ಲಿರುವ ನಂಬುಗೆಗಳ, ವೈಚಾರಿಕ ಭಿನ್ನತೆಗಳು ನಮ್ಮ ನಡುವಿನ ಪರಸ್ಪರ ಗೌರವಕ್ಕೆ, ಪ್ರೀತಿಗೆ ಅಡ್ಡಿಯಾಗಬಾರದು ಎನ್ನುವುದು ನಾನು ನಂಬಿ ಅನುಸರಿಸಿಕೊಡು ಬಂದಿರುವ ಜೀವನಮೌಲ್ಯ. ಆದರಂತೇ ನಿಮ್ಮನ್ನೂ ಗೌರವಿಸಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತಿನಲ್ಲಿನ ಮಾತುಗಳಿಂದಾಗಿ ನೀವು ಗೌರವಕ್ಕೆ ಅರ್ಹರಾದ ಮನುಷ್ಯರೇ ಎಂಬ ಅನುಮಾನ ನನಗಾಗುತ್ತಿದೆ. ತಮ್ಮನ್ನು ತಾವು ಸೆಕ್ಯೂಲರ್ಗಳೆಂದು ಕರೆದುಕೊಳ್ಳುವವರು ಧರ್ಮಧರ್ಮಗಳ ನಡುವೆ ಸಾಮರಸ್ಯದ ಮಾತಾಡುತ್ತಲೇ ಸಮಾಜವನ್ನು ಜಾತಿಜಾತಿಗಳಾಗಿ ನೂರೊಂದು ತುಂಡುಗಳಾಗಿ ವಿಭಾಗಿಸಿ ಏಕತೆಗೆ ಮಾರಕವಾಗುವವರು ಎಂಬ ನನ್ನ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಯಿತು. ನೀನು ದಲಿತ, ‘ಅವರ’ ಜತೆ ಸೇರಬೇಡ, ಇತ್ತ ಬಾ ಎಂದು ಹೇಳುತ್ತಾ “ಇಲ್ಲಿರುವುದು ನಿಮ್ಮ ಮನೆ, ಅಲ್ಲಿರುವುದು ಸುಮ್ಮನೆ” ಎಂದು ನನಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದ್ದೀರಿ, ಹಹ್ಹಹ್ಹಾ! ನಿಮಗೆ ಗೊತ್ತೇ ಅಮೀನರೇ, ನನ್ನ ನಂಬಿಕೆಯ ಪ್ರಕಾರ ಭೂಮಿಯ ಮೇಲಿನ ಈ ಬದುಕೇ ನಶ್ವರ, “ಅಲ್ಲಿಹುದು ನಮ್ಮನೆ, ಇಲ್ಲಿರುವುದು ಸುಮ್ಮನೆ!” ತಾತ್ಕಾಲಿಕವಾಗಿ ಇಲ್ಲಿ ಇರುವವರೆಗೂ ಇಲ್ಲಿನ ಎಲ್ಲವೂ ನನ್ನ ತಾತ್ಕಾಲಿಕ ಮನೆಗಳೇ. ನಿಮ್ಮ ಮಾತಿನಂತೆ ನನ್ನ ಸುತ್ತ ದ್ವೇಷದ, ಅಪನಂಬಿಕೆಯ, ಅಸಹನೆಯ ಮುಳ್ಳುಬೇಲಿಗಳನ್ನು ಕಟ್ಟಿಕೊಂಡು ನಾನೂ ನೋಯುತ್ತಾ ಇತರರನ್ನೂ ನೋಯಿಸಲಾರೆ. ನಿರಾತಂಕವಾಗಿ, ನಿರಾಳವಾಗಿ ನಾನು ಎಲ್ಲರ ಬಳಿಗೂ ಹೋಗುತ್ತೇನೆ, ಎಲ್ಲರೂ ನನ್ನ ಬಳಿಗೆ ಬರುತ್ತಾರೆ. ಎಲ್ಲರೂ ನನ್ನವರೇ, ನಾನು ಎಲ್ಲರವನೇ. ಇದುವರೆಗೆ ನಾನು ಬದುಕಿದ್ದು ಈ ಬಗೆಯಾಗಿ. ಇನ್ನು ಮುಂದೆಯೂ ಹೀಗೇ ಬದುಕುತ್ತೇನೆ. ಈ ಬಗೆಯ ಬದುಕು ನನಗೆ ಎಲ್ಲೆಡೆಯಿಂದಲೂ ಸ್ನೇಹ, ಪ್ರೀತಿಯನ್ನು ಅಗಾಧವಾಗಿ ತಂದುಕೊಟ್ಟಿದೆ. ಈ ಬದುಕಿಗೆ ಇಷ್ಟು ಸಾಕು ಅಮೀನರೇ. ಅಷ್ಟೇ ಅಲ್ಲ, ನಿಮ್ಮ ಮಾತುಗಳಿಗೆ ಬಂದಿರುವ ಪ್ರತಿಕ್ರಿಯೆಗಳು ನನ್ನ ಜನರ, ಒಟ್ಟಾರೆ ಮಾನವತೆಯ ಮೇಲಿನ ನನ್ನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ನಾನಿಂದು ಮೊದಲಿಗಿಂತಲೂ ಖುಷಿಯಿಂದ ನೆಮ್ಮದಿಯಿಂದ ಇದ್ದೇನೆ.

“ಪ್ರಾಯಶ್ಚಿತ್ತಕ್ಕೆ ಪಾಪಗಳನ್ನು ತೊಳೆಯುವ ಶಕ್ತಿ ಇದೆಯಂತೆ” ಎಂಬ ನಿಮ್ಮ ಮಾತನ್ನು ನಿಮಗೇ ಹೇಳಿಕೊಂಡು ಬದಲಾಗಿ ಅಮೀನ್. ನೆನಪಿಡಿ: “ಅಲ್ಲಿಹುದು ನಮ್ಮನೆ, ಇಲ್ಲಿರುವುದು ಸುಮ್ಮನೆ.”

ನಿಮ್ಮ ಮುಂದಿನ ಯಾವ ಕಂತನ್ನೂ ನಾನು ಗಮನಿಸಲು ಹೋಗುವುದಿಲ್ಲ. ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ, ಅರಿವಿನ ವಿಕಾಸಕ್ಕೆ ಸಹಕಾರಿಯಾಗುವಂತಹದು ನಿಮ್ಮ ಮಾತುಗಳಲ್ಲಿ ಏನೂ ಇರುವುದಿಲ್ಲ ಎಂದು ನನಗೀಗ ಗೊತ್ತಾಗಿದೆ. ನಿಮ್ಮ ಚಿಂತನೆಗಳಲ್ಲಿ ಅಸಹನೆ, ಅಸಹಿಷ್ಣುತೆ, ದ್ವೇಷ ಎಂದಾದರೂ ಮಾಯವಾದರೆ, ಎಂದಾದರೊಂದು ದಿನ ನೀವು ಎಲ್ಲರನ್ನೂ ಪ್ರೀತಿ ಗೌರವದಿಂದ ನೋಡುವಂತಾದರೆ ಅಂದು ನಮ್ಮ ಸಂವಾದವನ್ನು ಮತ್ತೆ ಆರಂಭಿಸೋಣ. ಇಲ್ಲವಾದಲ್ಲಿ ಇಲ್ಲ.

ನಮಸ್ಕಾರ.

3 ಟಿಪ್ಪಣಿಗಳು Post a comment
  1. rajaram hegde
    ಜನ 15 2016

    ಪ್ರೇಮಶೇಖರ ಅವರೆ, ಮಧ್ಯ ಯುಗದ ಕುರಿತು ನೀವು ಮಂಡಿಸಿದ ವಿಚಾರಗಳು ಯೋಚನೆ ಮಾಡುವಂತಿವೆ. ಅದಕ್ಕಿಂತ ನಿಮ್ಮ ಉತ್ತರದ ಧಾಟಿ ಹಾಗೂ ನಿಲುವುಗಳು ಗೌರವ ಮೂಡಿಸುವಂತಿವೆ.

    ಉತ್ತರ
    • Anonymous
      ಜನ 16 2016

      +೧

      ಪ್ರೇಮಶೇಖರ ಅವರ ಧಾಟಿಗೂ ಅಮೀನರ ಧಾಟಿಗೂ ಇರುವ ಭಿನ್ನತೆಯೇ ಸಾರಿ ಹೇಳಿದೆ ಸಂಸ್ಕಾರ ಹಾಗೂ ವಿನಯದ ತೀವ್ರ ಕೊರತೆ ಯಾರಲ್ಲಿದೆ ಅಂತ. ಪ್ರೇಮಶೇಖರ ಅವರ ಬಗ್ಗೆ ಗೌರವ ಇಮ್ಮಡಿಯಾಗಿದೆ.

      ಉತ್ತರ
  2. Kriahna
    ಜನ 25 2016

    Atheee utthama vishaya prasthaapisiddheeri
    Yogyarige arthavaadheethu
    Ayogyarige??????????

    jaathyaatheetha jaathivaadhigalige?????????????
    prema shekarare innoo ee rithiya vishaya (athi upayuktha, mathu sathyadha) nimmanthaha vyakthigalinda baruvanthaagali.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments