ವಿಷಯದ ವಿವರಗಳಿಗೆ ದಾಟಿರಿ

ಜನವರಿ 16, 2016

ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧

ಮೊಳಗಿತು ಕಂಚಿನ ಕಂಠ

Swami Vivekanandaಅಂದು, ಸೆಪ್ಟೆಂಬರ್ 11ನೇ ತಾರೀಖು, ಶಿಕಾಗೋದಲ್ಲಿ ಜಮಾಯಿಸಿದ್ದ ಧರ್ಮಜಿಜ್ಞಾಸುಗಳೆದುರು ಸರ್ವಧರ್ಮ ಸಂಸತ್ತಿನ ವೇದಿಕೆಯಲ್ಲಿ ನಿಂತ ವಿವೇಕಾನಂದರ ಮಾತು ಶುರುವಾಗಿದ್ದು “ಅಮೆರಿಕದ ಸೋದರ ಸೋದರಿಯರೇ” ಎಂಬ ಶಕ್ತಿಶಾಲಿಯಾದ ಪದಗಳ ಮೂಲಕ. ತನ್ನೆದುರು ಕೂತಿದ್ದ ಅಷ್ಟೂ ಜನರನ್ನು  ಹಾಗೆ ಒಂದೇ ಉಸಿರಿನಲ್ಲಿ ತನ್ನವರನ್ನಾಗಿ ಮಾಡಿಕೊಂಡ ಯಾವ ಧರ್ಮಗುರುವೂ ಅಲ್ಲಿರಲಿಲ್ಲ. ಹಾಗಿದ್ದಾಗ ವಿವೇಕಾನಂದರು ಸೋದರ-ಸೋದರಿಯರೇ ಎಂದಿದ್ದೇ ತಡ ಇಡೀ ಸಭಾಂಗಣದಲ್ಲಿ ವಿದ್ಯುತ್ಸಂಚಾರವಾಯಿತು! ಸಭಿಕರು ಎದ್ದು ಮೂರ್ನಾಲ್ಕು ನಿಮಿಷಗಳ ದೀರ್ಘ ಕರತಾಡನ ಮಾಡಿದರು. ತನ್ನ ಕೇವಲ ಹದಿನೈದು ನಿಮಿಷಗಳ ಪುಟ್ಟ ಭಾಷಣದಲ್ಲಿ ವಿವೇಕಾನಂದರು ಭಾರತದ ಸನಾತನ ಸಂಸ್ಕøತಿಯ ಮೂಲ ಆಶಯವನ್ನು ಅನಾವರಣ ಮಾಡಿದ್ದರು. ಮರುದಿನದ ಪತ್ರಿಕೆಗಳಲ್ಲಿ ದೂರದ ಹಿಂದೂಸ್ತಾನದಿಂದ ಬಂದ ಈ ಯುವ ಸಂನ್ಯಾಸಿಯ ಸಿಂಹಗರ್ಜನೆಯದ್ದೇ ಸುದ್ದಿ! ದ ನ್ಯೂಯಾಕ್ ಹೆರಾಲ್ಡ್ ಪತ್ರಿಕೆ, “ಧರ್ಮ ಸಂಸತ್ತಿನ ಅತ್ಯಂತ ಪ್ರಮುಖ ಆಕರ್ಷಣೆ ಭಾರತದಿಂದ ಬಂದ ಸ್ವಾಮಿ ವಿವೇಕಾನಂದರು. ಅವರ ಮಾತುಗಳನ್ನು ಕೇಳಿದ ಮೇಲೆ, ಆ ಪುಣ್ಯಭೂಮಿಯತ್ತ ನಾವು ಮಿಷನರಿಗಳನ್ನು ಧರ್ಮಪ್ರಚಾರಕ್ಕಾಗಿ ಕಳಿಸುತ್ತಿರುವುದು ಅದೆಷ್ಟು ಹಾಸ್ಯಾಸ್ಪದ ಕಾರ್ಯ ಎಂಬುದು ಅರಿವಾಗುತ್ತದೆ” ಎಂದು ಬರೆಯಿತು. ಇನ್ನೊಂದು ಪತ್ರಿಕೆ, “ಜನರು ಉಳಿದವರ ಗಂಟೆಗಟ್ಟಲೆ ಉಪನ್ಯಾಸಗಳನ್ನು ಕೂಡ ಸಹಿಸಿಕೊಂಡು ಈ ಸ್ವಾಮೀಜಿಯ ಹದಿನೈದು ನಿಮಿಷಗಳ ಚಿಕ್ಕ ಭಾಷಣವನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದರು” ಎಂದು ವಿಮರ್ಶೆ ಬರೆದಿತ್ತು. ತನ್ನ ಹನ್ನೆರಡು ವರ್ಷಗಳ ಕಠಿಣ ತಪಸ್ಸು, ಸಾಧನೆ, ಅಧ್ಯಯನ, ಚಿಂತನಗಳಿಂದ ವಿವೇಕಾನಂದರು ಈಗ “ರಾತ್ರಿಬೆಳಗಾಗುವುದರಲ್ಲಿ” ತಾರೆಯಾಗಿದ್ದರು! ಭಾರತದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಕೂಡ ಅಮೆರಿಕನ್ ಪತ್ರಕರ್ತರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದವು. ವಿವೇಕಾನಂದರ ಅಮೆರಿಕಾ ದಿಗ್ವಿಜಯ ಭಾರತದಲ್ಲಿ ಬಲುದೊಡ್ಡ ಸುದ್ದಿಯಾಯಿತು. ರಾಮಕೃಷ್ಣ ಮಠದಲ್ಲಂತೂ ಸಂಭ್ರಮವೇ ಸಂಭ್ರಮ ಮನೆಮಾಡಿತು. ಅಮೆರಿಕೆಯ ಹತ್ತುಹಲವಾರು ಕಡೆಗಳಲ್ಲಿ ಸ್ವಾಮೀಜಿಯ ಭಾಷಣ ಏರ್ಪಾಟಾಯಿತು. ಭಾರತದ ಸನಾತನ ಧರ್ಮದ ಬಗ್ಗೆ ಅರಿಯುವ ಆಸಕ್ತಿ ಅಲ್ಲಿನ ಬಿಳಿತೊಗಲಿನ ಜಿಜ್ಞಾಸುಗಳಿಗೆ ಹೆಚ್ಚಾಯಿತು.

ಇದೇ ಸಂದರ್ಭದಲ್ಲಿ ವಿವೇಕಾನಂದರನ್ನು ಭೇಟಿ ಮಾಡಿದ ಇಬ್ಬರು ವ್ಯಕ್ತಿಗಳನ್ನು ನಾವು ವಿಶೇಷವಾಗಿ ಪರಿಗಣಿಸಬೇಕು. ಒಬ್ಬರು – ಅಮೆರಿಕಾದ ಆ ಕಾಲದ ಅತ್ಯಂತ ಪ್ರಸಿದ್ಧ ಬ್ಯುಸಿನೆಸ್‍ಮ್ಯಾನ್ ಆಗಿದ್ದ ಜಾನ್ ರಾಕೆಫೆಲ್ಲರ್. ತಮ್ಮಿಬ್ಬರ ಮೊದಲ ಭೇಟಿಯಲ್ಲಿ, ಸ್ವಾಮೀಜಿ “ನಿಮ್ಮ ಸಂಪತ್ತಿನ ಒಂದಷ್ಟು ಭಾಗವನ್ನು ಸಮಾಜೋದ್ಧಾರಕ್ಕಾಗಿ ದಾನ ಮಾಡಿ” ಎಂದದ್ದು ರಾಕೆಫೆಲ್ಲರ್‍ರಿಗೆ ರುಚಿಸಲಿಲ್ಲವಂತೆ. “ನೀವು ಸಿರಿವಂತರಾಗಿರಬಹುದು. ಆದರೆ ಅದೆಲ್ಲವೂ ನಿಮಗೆ ಸಮಾಜದಿಂದಲೇ ಸಿಕ್ಕಿದ್ದು. ಧನಿಕ ತನ್ನನ್ನು ಸಮಾಜದ ದುಡ್ಡಿನ ಟ್ರಸ್ಟಿ ಎಂದುಕೊಳ್ಳಬೇಕೇ ಹೊರತು ಅದೆಲ್ಲಕ್ಕೂ ತಾನೇ ಒಡೆಯ ಎಂಬ ಭಾವನೆ ಇಟ್ಟುಕೊಳ್ಳಬಾರದು” ಎನ್ನುವುದು ವಿವೇಕರ ಖಚಿತ ನುಡಿಯಾಗಿತ್ತು. ಸಂವಾದವೇನೋ ಔಪಚಾರಿಕವಾಗಿ ಮುಗಿಯಿತು. ರಾಕೆಫೆಲ್ಲರ್ ಅಮೆರಿಕದ ಬಂಡವಾಳಶಾಹಿ ಉದ್ಯಮಿ; ಭೇಟಿಯ ಬಳಿಕ ಆತ ತನ್ನ ಮಾತುಗಳನ್ನು ಪಕ್ಕಕ್ಕಿಟ್ಟಿರುತ್ತಾರೆಂದು ಸ್ವಾಮೀಜಿ ಬಗೆದರು. ಆದರೆ ಅವರಿಗೇ ಅಚ್ಚರಿಯಾಗುವಂತೆ, ಒಂದೆರಡು ವಾರಗಳು ಕಳೆದ ಬಳಿಕ ಒಂದು ದಿನ ರಾಕೆಫೆಲ್ಲರ್ ತನ್ನ ದಾನಧರ್ಮದ ಯೋಜನೆಯೊಂದಿಗೆ ಬಂದು ನಿಂತೇಬಿಟ್ಟರು ಸ್ವಾಮೀಜಿಯ ಎದುರು! ಮುಂದೆ, ಈ ವ್ಯಕ್ತಿ ಅಮೆರಿಕದ ಅತ್ಯಂತ ಪ್ರಸಿದ್ಧ ದಾನಿಯಾದದ್ದು; ತನ್ನ ಸಂಪತ್ತೆಲ್ಲವನ್ನೂ ಸಮಾಜದ ಒಳಿತಿಗಾಗಿ ವಿನಿಯೋಗಿಸಿದ್ದು, ಮಾತ್ರವಲ್ಲ ಅಮೆರಿಕದ ಉಳಿದ ಉದ್ಯಮಿಗಳನ್ನೂ ದಾನಕಾರ್ಯದಲ್ಲಿ ದೊಡ್ಡಮಟ್ಟದಲ್ಲಿ ತೊಡಗಿಸಿದ್ದು ಇತಿಹಾಸದಲ್ಲಿ ದಾಖಲಾಗಿಹೋಗಿರುವ ವಿಸ್ಮಯ.

ವಿವೇಕಾನಂದರನ್ನು ಭೇಟಿ ಮಾಡಿದ ಇನ್ನೋರ್ವ ಪ್ರತಿಭಾನ್ವಿತ, ವಿಜ್ಞಾನಿ ಮತ್ತು ತಂತ್ರಜ್ಞನಾಗಿದ್ದ ನಿಕೋಲಾ ಟೆಸ್ಲಾ. ಬಹುಶಃ ಅನೇಕರಿಗೆ ಗೊತ್ತಿರಲಾರದು, ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ಆಲ್ಟರ್ನೇಟಿಂಗ್ ಕರೆಂಟ್ (ಪರ್ಯಾಯಕ ಪ್ರವಾಹ), ಅಂದರೆ ನಮ್ಮ ಮನೆ ಬೀದಿಗಳನ್ನೆಲ್ಲ ಬೆಳಗುವ ವಿದ್ಯುತ್ತನ್ನು ಕಂಡುಹಿಡಿದವನು ಟೆಸ್ಲಾ. ಹತ್ತೊಂಬತ್ತನೆ ಶತಮಾನದ ಅತಿದೊಡ್ಡ ಮೇಧಾವಿ ಈತ. ಥಾಮಸ್ ಆಲ್ವ ಎಡಿಸನ್‍ನ ಬಹುಪಾಲು ಪೇಟೆಂಟ್‍ಗಳ ಹಿಂದೆ ಕೆಲಸ ಮಾಡಿದ್ದ ಮಿದುಳು ಟೆಸ್ಲಾನದು. ಅಂಥ ಟೆಸ್ಲಾ ವೇದಾಂತದಿಂದ ಆಕರ್ಷಿತನಾಗಿ ದ್ರವ್ಯ ಮತ್ತು ಶಕ್ತಿಗಳ ನಡುವಿನ ಸಂಬಂಧಕ್ಕೆ ವೇದಾಂತದಲ್ಲಿ ಉತ್ತರ ಸಿಗಬಲ್ಲುದೆಂದು, ಅಂಥ ಮಹತ್ವಪೂರ್ಣ ಅಂಶವನ್ನು ವಿವೇಕಾನಂದರಷ್ಟೇ ತನಗೆ ಕಾಣಿಸಬಲ್ಲರೆಂದು ತಿಳಿದು ಅವರ ಬಳಿ ಬಂದಿದ್ದ. ಟೆಸ್ಲಾ ಬಗ್ಗೆ ವಿವೇಕಾನಂದರು ಒಂದೆಡೆ ಹೀಗೆ ಬರೆದಿದ್ದಾರೆ: “ತನ್ನ ಊಟನಿದ್ದೆಗಳನ್ನು ಮಾಡಲಿಕ್ಕೂ ಪುರುಸೊತ್ತಿಲ್ಲದಂತೆ ದುಡಿಯುತ್ತಿದ್ದ; ದಿನದ ಇಪ್ಪತ್ತನಾಲ್ಕು ಗಂಟೆಗಳನ್ನೂ ಸಂತೋಷದಿಂದ ಪ್ರಯೋಗಶಾಲೆಯಲ್ಲಿ ಕಳೆಯಬಲ್ಲವನಾಗಿದ್ದ ಆ ವಿಜ್ಞಾನಿ ಧರ್ಮ ಸಂಸತ್ತಿನಲ್ಲಿ ನನ್ನ ಭಾಷಣ ಕೇಳಲು ಗಂಟೆಗಟ್ಟಲೆ ನಿಂತು ಕಾಯುತ್ತಿದ್ದರು. ವಿಜ್ಞಾನದ ಯಾವುದೋ ನಿಗೂಢ ಸತ್ಯವನ್ನು ವೇದಾಂತ ಹೇಳಿದೆ ಎಂಬುದನ್ನು ಅವರು ಆಗಲೇ ಕಂಡುಕೊಂಡಿದ್ದರು”.

ಕೊಲಂಬೋದಿಂದ ಅಲ್ಮೋರಾವರೆಗೆ

ಸ್ವಾಮಿ ವಿವೇಕಾನಂದರ ಭಾಷಣ, ಉಪನ್ಯಾಸಗಳು ವಿಸ್ಕಾನ್‍ಸಿನ್, ಮಿಶಿಗನ್, ಶಿಕಾಗೋ, ಅಯೋವಾ ಮುಂತಾದ ಹಲವು ಕಡೆಗಳಲ್ಲಿ ಏರ್ಪಟ್ಟವು. ದೇಶದ ಯಾವುದಾದರೂ ರಾಜ್ಯಕ್ಕೆ ಭೇಟಿ ಕೊಟ್ಟಾಗ, ಪರಿಚಯವಿಲ್ಲದ ಸ್ಥಳೀಯರು ಫಕೀರನೆಂದು ಉಪೇಕ್ಷಿಸಿ ಅವಮಾನಿಸಿದರೂ ಮರುದಿನ ಸ್ವಾಮೀಜಿಯ ಭಾಷಣದ ತುಣುಕುಗಳನ್ನು ಪತ್ರಿಕೆಗಳಲ್ಲಿ ಓದಿ ಕೂಡಲೇ ಅವರಿದ್ದಲ್ಲಿ ಓಡಿಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳುತ್ತಿದ್ದರು. ಒಬ್ಬನಂತೂ “ಸ್ವಾಮೀಜಿ, ನಿಮ್ಮನ್ನು ಬಣ್ಣ ಕಳೆದುಕೊಂಡ ಕಾವಿಬಟ್ಟೆಯಲ್ಲಿ ಕಂಡಾಗ ಗುರುತು ಹಿಡಿಯುವುದು ಕಷ್ಟವಾಯಿತು. ಜಂಟಲ್‍ಮನ್ ಉಡುಗೆ ಧರಿಸಬಾರದೇ?” ಎಂದು ಕೇಳೇಬಿಟ್ಟ! “ಜಂಟಲ್‍ಮನ್ ಆಗುವುದು ದರ್ಜಿ ರೂಪಿಸಿದ ಉಡುಪಿನಿಂದಲ್ಲ; ನಾವಾಗಿ ರೂಪಿಸಿಕೊಂಡ ವ್ಯಕ್ತಿತ್ವದಿಂದ ಎಂದು ನಾನು ಭಾವಿಸಿದ್ದೆ” ಎಂದು ಇದಿರೇಟನ್ನು ಅವನು ನುಂಗಬೇಕಾಯಿತು. 1895ರಲ್ಲಿ ವಿವೇಕಾನಂದರು ನ್ಯೂಯಾರ್ಕ್ ನಗರದಲ್ಲಿ ಜ್ಞಾನಯೋಗ ಮತ್ತು ರಾಜಯೋಗಗಳ ಮೇಲೆ ವಿಶೇಷ ಉಪನ್ಯಾಸಗಳನ್ನು ನಡೆಸಿದರು; ತನ್ನ ಶಿಷ್ಯರಾಗಿ ಸೇರಿಕೊಂಡವರಿಗೆ ನಿಯತವಾಗಿ ತರಗತಿಗಳನ್ನು ಏರ್ಪಡಿಸಿದರು. ನ್ಯೂಯಾರ್ಕಿಂದ ಇಂಗ್ಲೆಂಡಿಗೆ ಪ್ರಯಾಣಿಸಿ ಅಲ್ಲಿಯೂ ಹಲವು ವಿಶೇಷ ವ್ಯಕ್ತಿಗಳನ್ನು ಭೇಟಿಯಾದರು. ವಿವೇಕಾನಂದರ ಕೀರ್ತಿ ಅಮೆರಿಕಾ ಮತ್ತು ಯುರೋಪುಗಳಲ್ಲಿ ಸಮಾನವಾಗಿ ಹರಡಿತು. ಇಂಗ್ಲೆಂಡಿನಲ್ಲಿ ಅವರನ್ನು ಭೇಟಿಯಾದ ಮಾರ್ಗರೆಟ್ ನೋಬಲ್ ಎಂಬ ಯುವತಿ ಸನಾತನ ಧರ್ಮದ ಸೆಳೆತಕ್ಕೆ ಸಿಕ್ಕಿ ವಿವೇಕರ ಶಿಷ್ಯೆಯಾಗಿ ನಿವೇದಿತಾ ಎಂಬ ಭಾರತೀಯ ಹೆಸರಿಟ್ಟುಕೊಂಡು ಭಾರತೀಯಳೇ ಆಗಿಹೋದಳು. ಅಮೆರಿಕಾ ಮತ್ತು ಯುರೋಪಿನಲ್ಲಿ ಸಾಕಷ್ಟು ಕೀರ್ತಿ ಮತ್ತು ಶಿಷ್ಯರನ್ನು ಸಂಪಾದಿಸಿ 1897ರಲ್ಲಿ ಭಾರತಕ್ಕೆ ವಾಪಸು ಬಂದ ವಿವೇಕಾನಂದರಿಗೆ ಭವ್ಯ ಸ್ವಾಗತ ಸಿಕ್ಕಿತು. ಕೊಲಂಬೋದಲ್ಲಿ ಬಂದಿಳಿದ ವಿವೇಕಾನಂದರು ಅಲ್ಲಿಂದ ಭಾರತ ಪ್ರವೇಶಿಸಿ ದೇಶದ ಉದ್ದಗಲ ಸಂಚರಿಸಿ ಉಪನ್ಯಾಸಗಳನ್ನು ಕೊಟ್ಟು ಸನಾತನ ಧರ್ಮದ ಅಗ್ಗಳಿಕೆಯನ್ನು ಪ್ರಚಾರ ಮಾಡಿದರು. ಸ್ವಾಮೀಜಿಯ ಆ ಎಲ್ಲಾ ಉಪನ್ಯಾಸಗಳನ್ನು “ಲೆಕ್ಚರ್ಸ್ ಫ್ರಮ್ ಕೊಲಂಬೋ ಟು ಅಲ್ಮೋರಾ” ಎಂಬ ಕೃತಿಯಲ್ಲಿ ನಾವು ಓದಬಹುದು.

ಅದಾಗಿ ಎರಡು ವರ್ಷಗಳ ತರುವಾಯ, 1899ರಲ್ಲಿ ವಿವೇಕಾನಂದರು ಅಮೆರಿಕೆಗೆ ಎರಡನೆ ಬಾರಿ ಭೇಟಿ ಕೊಟ್ಟರು. ವ್ಯಾಂಕೋವರ್, ಸ್ಯಾನ್‍ಫ್ರಾನ್ಸಿಸ್ಕೋಗಳಂಥ ಪಶ್ಚಿಮ ದಂಡೆಯ ನಗರಗಳನ್ನೂ ನ್ಯೂಯಾರ್ಕ್‍ನಂಥ ಪೂರ್ವ ನಗರಗಳನ್ನೂ ಭೇಟಿ ಮಾಡಿ ತನ್ನ ಹಳೆ ಶಿಷ್ಯರನ್ನು ಮಾತಾಡಿಸಿದರು. ಹೊಸಬರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡರು. ಯುರೋಪ್ ಮತ್ತು ಜಪಾನ್‍ಗಳನ್ನೂ ಸಂದರ್ಶಿಸಿದರು. ಧರ್ಮ ಸಮ್ಮೇಳನಗಳು ನಡೆಯುತ್ತಿದ್ದಲ್ಲಿ ಭಾಗವಹಿಸಿ ಭಾರತೀಯ ಪರಂಪರೆಯ ಬಗ್ಗೆ ಉದ್ದಾಮ ಪಾಂಡಿತ್ಯಪೂರ್ಣ ಭಾಷಣಗಳನ್ನು ಮಾಡಿದರು. 1901ರಲ್ಲಿ ಭಾರತಕ್ಕೆ ವಾಪಸಾದರು. ಎರಡನೆ ಪ್ರವಾಸದ ವೇಳೆಗೆ ಸ್ವಾಮೀಜಿಗೆ ಹಳೆಯ ತಾರುಣ್ಯ ಇರಲಿಲ್ಲ. ದೇಹವನ್ನು ಮನೆಮಾಡಿಕೊಂಡ ಅಸ್ತಮಾ ಮತ್ತು ಸಕ್ಕರೆ ಕಾಯಿಲೆ ಇನ್ನಿಲ್ಲದಂತೆ ಬಾಧಿಸಿದವು. ಆಗಾಗ ಮರುಕಳಿಸುತ್ತಿದ್ದ ಜ್ವರವನ್ನೂ ಲೆಕ್ಕಿಸದೆ ಹಗಲಿರುಳೆನ್ನದೆ ಪ್ರಯಾಣಿಸಿ ದೇಹ ದಂಡಿಸಿಕೊಂಡದ್ದರಿಂದ ನಿಶ್ಶಕ್ತಿಯುಂಟಾಗಿತ್ತು. ಇದರ ಜೊತೆಗೆ ಅವರನ್ನು ಮೊದಲಿಂದಲೂ ಕಾಡುತ್ತಿದ್ದ ಒಂದು ಸಮಸ್ಯೆಯೆಂದರೆ ನಿದ್ರಾಹೀನತೆ. ರಾತ್ರಿಯೆಲ್ಲ ಎಚ್ಚರಿದ್ದು ವೇದ-ಪುರಾಣ-ಕಾವ್ಯಗಳನ್ನು ಅಧ್ಯಯನ ಮಾಡುತ್ತಿದ್ದ ದಿನಗಳಿಂದಲೂ ಈ ಸಮಸ್ಯೆ ಅವರನ್ನು ಬಾಧಿಸತೊಡಗಿತ್ತು. ಅದು ಕೊನೆಗೆ ಹೆಚ್ಚಾಗಿ 1899ರ ವೇಳೆಗೆ ವಿವೇಕಾನಂದರಿಗೆ ದಿನದಲ್ಲಿ ಕೇವಲ ಎರಡು-ಮೂರು ಗಂಟೆಗಳಷ್ಟೇ ಮಲಗಲು ಸಾಧ್ಯವಾಗುತ್ತಿತ್ತು. ಇದರಿಂದಾಗಿ ಕಣ್ಣುಗಳು ನವೆಯುತ್ತಿದ್ದವು. ರಕ್ತಗಟ್ಟಿ ಕೆಂಪಾಗುತ್ತಿದ್ದವು. ನಿದ್ರೆಯ ಕೊರತೆಯಿಂದ ಆಗಾಗ ತಲೆನೋವೂ ಪೀಡಿಸುತ್ತಿತ್ತು. ಮೂವತ್ತೈದನೆಯ ವಯಸ್ಸಿಗೆಲ್ಲ ಅವರ ಬಲಗಣ್ಣಿನಲ್ಲಿ ದೃಷ್ಟಿಯ ತೊಂದರೆ ಕಾಣಿಸಿಕೊಂಡಿತು. ತಮಾಷೆ ಮತ್ತು ದುಃಖದ ಮಾತೆಂದರೆ, ವಿವೇಕಾನಂದರಿಗೆ ಮೂವತ್ತೊಂದು ಬಗೆಯ ಕಾಯಿಲೆಗಳಿದ್ದವು ಎಂದು ಹೇಳಿ ಅವರ ಬಗ್ಗೆ ಜನಸಾಮಾನ್ಯರು ಅನುಮಾನ ಪಡುವಂತೆ ಬರೆದವರು ಆ ಕಾಯಿಲೆಗಳ ಪಟ್ಟಿಯಲ್ಲಿ ಏನೇನೆಲ್ಲ ಸೇರಿಸಿದ್ದಾರೆ ಗೊತ್ತೆ? ಮೈಗ್ರೇನ್, ಟಾನ್ಸಿಲೈಟಿಸ್, ಅಸ್ತಮಾ, ಟೈಫಾಯ್ಡ್, ಮಲೇರಿಯ, ಕತ್ತಿನ ನೋವು, ಬಲಗಣ್ಣಿನ ದೃಷ್ಟಿದೋಷ, ನಿದ್ರಾಹೀನತೆ, ಕಣ್ಣು ಕೆಂಪಾಗುವುದು, ಅಧಿಕ ಉಷ್ಣತೆಯನ್ನು ತಾಳಲಾಗದ ದೇಹಪ್ರಕೃತಿ, ಅಕಾಲ ಕೂದಲನರೆತ, ಹೃದಯದ ಕಾಯಿಲೆ, ಮಧುಮೇಹ, ಸೀ ಸಿಕ್‍ನೆಸ್ (ಬಹುಕಾಲ ಸಮುದ್ರದಲ್ಲಿ ಪ್ರಯಾಣಿಸಿದರೆ ಕಾಣಿಸಿಕೊಳ್ಳುವ ಒಂದು ಮನೋಸ್ಥಿತಿ) – ಹೀಗೆ ಎಲ್ಲವನ್ನೂ ಸೇರಿಸಿ ಪಟ್ಟಿಯನ್ನು ಬೆಳೆಸಿದ್ದಾರೆ! ಅಲ್ಲದೆ ವಿವೇಕಾನಂದರಿಗೆ ಚಿಕ್ಕಂದಿನಿಂದ ಬಂದುಹೋದ ಹಲವು ಸಣ್ಣಪುಟ್ಟ ಜ್ವರಗಳನ್ನೆಲ್ಲ ಪಟ್ಟಿಗೆ ಹಾಕಿ ಕೈತೊಳೆದುಕೊಂಡಿದ್ದಾರೆ! ಇವನ್ನೆಲ್ಲ ಪಟ್ಟಿ ಮಾಡಿ ವಿವೇಕಾನಂದರಿಗೆ ಇಷ್ಟೊಂದು ಕಾಯಿಲೆಗಳಿದ್ದವು ಎಂದು ತೋರಿಸುವ ಮೂಲಕ ಇವರು ಹೇಳಬಯಸಿದ್ದೇನು? ಪಟ್ಟಿಯ ಎಷ್ಟು ಕಾಯಿಲೆಗಳಿಗೆ ವಿವೇಕಾನಂದರು ನೇರ ಹೊಣೆಯಾಗುತ್ತಾರೆ? ಅಮೆರಿಕಾ ಪ್ರವಾಸ ಮಾಡಬೇಕಾದರೆ ಆ ಕಾಲದಲ್ಲಿ ತಿಂಗಳುಗಟ್ಟಲೆ ಸಮುದ್ರಮಾರ್ಗದಲ್ಲಿ ಸಂಚರಿಸಲೇ ಬೇಕಾಗಿದ್ದದ್ದು ಅನಿವಾರ್ಯತೆ. ಹಾಗಾಗಿ ಅವರಲ್ಲಿ ಸೀ ಸಿಕ್‍ನೆಸ್ ಕಾಣಿಸಿಕೊಂಡದ್ದರಲ್ಲಿ ವಿಶೇಷವೇನಿದೆ? ಇನ್ನು ಇಂಥ ತೊಂದರೆಗಳು ವಿವೇಕಾನಂದರನ್ನು ಸದಾ ಸರ್ವದಾ ಕಾಡಿದ್ದವೇ? ನಮ್ಮ ಬಾಲ್ಯದಿಂದ ಇದುವರೆಗೆ ಬಂದುಹೋದ ಕಾಯಿಲೆಗಳ ಪಟ್ಟಿ ಮಾಡಿದರೆ ಅದು ಮೂವತ್ತೊಂದನ್ನು ಮೀರಿ ಬೆಳೆಯುವುದಿಲ್ಲವೆ?

ವಿವೇಕಾನಂದರು ದೇಶವಿದೇಶಗಳಲ್ಲಿ ಸನಾತನ ಧರ್ಮದ ಹಿರಿಮೆಯನ್ನು ಸಾರಿ ಸಾವಿರಾರು ಹೃದಯಗಳನ್ನು ಗೆದ್ದರೇನೋ ನಿಜ. ಆದರೆ ಅವರಿಗೆ ತನ್ನ ಕುಟುಂಬದ ಆಸ್ತಿವ್ಯಾಜ್ಯವನ್ನು ಮಾತ್ರ ಕೊನೆವರೆಗೂ ಗೆಲ್ಲಲಾಗಲಿಲ್ಲ ಎಂಬುದು ವಿಧಿಯ ಕ್ರೂರ ವ್ಯಂಗ್ಯ. ಸುಮಾರು ಹದಿನಾಲ್ಕು ವರ್ಷಗಳಷ್ಟು ದೀರ್ಘಕಾಲ ಕೋರ್ಟಿನಲ್ಲಿ ದಾವೆ ನಡೆಸಿದರೂ ಕೊನೆಗೆ ಅವರ ಕುಟುಂಬ ಸೋತು ಒಂದಷ್ಟು ಪರಿಹಾರಧನ ಕೊಟ್ಟು ಕೇಸನ್ನು ಮುಗಿಸಬೇಕಾಯಿತು. ವಿವೇಕಾನಂದರು ತೀರಿಕೊಳ್ಳುವ ಕೇವಲ ಆರು ದಿನಗಳ ಹಿಂದಷ್ಟೇ ವ್ಯಾಜ್ಯಕ್ಕೆ ಎಳ್ಳುನೀರು ಬಿಡಲಾಯಿತು. ಇದರಿಂದಾಗಿ ವಿವೇಕರ ಕುಟುಂಬ ತನ್ನ ಆಸ್ತಿಯ ಬಹುಪಾಲನ್ನು ಕಳೆದುಕೊಳ್ಳಬೇಕಾಯಿತು. ವಿವೇಕರ ಮರಣಾನಂತರ ಅವರ ಅನಾಥ ತಾಯಿಗೆ ಬಹುವರ್ಷಗಳ ಕಾಲ ಖೇತ್ರಿಯ ಮಹಾರಾಜ ಅಜಿತ್ ಸಿಂಗ್ ಮಾಹೆಯಾನ ನೂರು ರುಪಾಯಿ ಸಹಾಯಧನ ಕಳಿಸುತ್ತಿದ್ದರು. ವಿವೇಕರನ್ನು ಕಳೆದುಕೊಂಡ ಬಳಿಕ ಆ ಮಹಾತಾಯಿ ಒಂಬತ್ತು ವರ್ಷ ಬದುಕಿದ್ದು 1911ರಲ್ಲಿ ತೀರಿಕೊಂಡರು. ಜಗತ್ತನ್ನೆಲ್ಲ ತನ್ನ ಅಸ್ಖಲಿತ ವಿಚಾರವಾಣಿಯಿಂದ ಗೆದ್ದುಬಂದಿದ್ದ ವೀರಸಂನ್ಯಾಸಿಯ ಕುಟುಂಬ ಮಾತ್ರ ಕೊನೆವರೆಗೂ ಬಡತನದಲ್ಲೇ ಬದುಕಬೇಕಾಯಿತು ಎಂಬುದು ದುರಂತ. ಮನಸ್ಸು ಮಾಡಿದ್ದರೆ ಅವರು ಅಮೆರಿಕಾ ಯುರೋಪುಗಳಲ್ಲಿ ಸಾಕಷ್ಟು ದುಡ್ಡು ಸಂಗ್ರಹಿಸಿ ತನ್ನವರನ್ನು ಸುಖದ ಸುಪ್ಪತ್ತಿಗೆಯಲ್ಲಿ ಇಡಬಹುದಾಗಿತ್ತು. ಆದರೆ ಸಂನ್ಯಾಸಿಯಾದವನು ಭಿಕ್ಷೆಯಿಂದಲೇ ಬದುಕಬೇಕು; ನಾಳಿನ ಕೂಳಿಗಾಗಿ ಒಂದು ರುಪಾಯಿಯನ್ನೂ ಕೂಡಿಡಬಾರದು ಎಂಬ ದೃಢಸಂಕಲ್ಪವನ್ನು ವಿವೇಕಾನಂದರು ದೀಕ್ಷೆ ತೊಟ್ಟ ದಿನದಿಂದ ಕೊನೆಯುಸಿರಿನವರೆಗೂ ನಿಷ್ಠೆಯಿಂದ ಪಾಲಿಸಿದರಲ್ಲ!

ನೇರ ದಾರಿ; ತಪ್ಪದ ಗುರಿ

ವಿವೇಕಾನಂದರ ಬಗ್ಗೆ ಇರುವ ಕತೆಗಳು, ದೃಷ್ಟಾಂತಗಳು ಅನೇಕ. ಅವರಿನ್ನೂ ತರುಣರಾಗಿದ್ದ ಸಮಯದಲ್ಲಿ, ಒಮ್ಮೆ ಯಾವುದೋ ಕೆಲಸಕ್ಕಾಗಿ ನಡೆದುಕೊಂಡು ಹೋಗುತ್ತಿದ್ದಾಗ ಕೋತಿಗಳ ದೊಡ್ಡ ಗುಂಪನ್ನು ಕಂಡರು. ವಿವೇಕರು ನಡೆಯುತ್ತಿದ್ದ ಓಣಿ ಕಿರಿದು. ಸರಿದು ಹೋಗುವಷ್ಟು ಜಾಗವೂ ಇರಲಿಲ್ಲ. ತಮಗೆದುರಾದ ಶತ್ರುವನ್ನು ಕಂಡು ಕೋತಿಗಳಿಗೂ ಉತ್ಸಾಹ ಬಂದಿರಬೇಕು! ವಿವೇಕರು ಅಲ್ಲಿಂದ ಹಿಂದೆಗೆದು ಓಡಹತ್ತಿದರು. ಹುರುಪುಗೊಂಡ ಕೋತಿಗಳು ಕೂಡ ಅವರ ಹಿಂದೆ ಓಡಿಸಿಕೊಂಡು ಬಂದವು. ಈ ಆಟ ನೋಡಿದ ಹಿರಿಯ ಸಂನ್ಯಾಸಿಯೊಬ್ಬರು ವಿವೇಕಾನಂದರಿಗೆ, “ಓಡಬೇಡ. ದೃಢವಾಗಿ ನಿಂತು ಹಿಂತಿರುಗಿ ಅವುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡು” ಎಂದರು. ಅವರು ಹಾಗೇ ಮಾಡಿದಾಗ ಅವಾಕ್ಕಾದ ಕೋತಿಗಳು ತಮಗೇ ಗಂಡಾಂತರ ಬಂದಿದೆಯೆಂದು ಭಾವಿಸಿ ಅಲ್ಲಿಂದ ಕಾಲ್ಕಿತ್ತವಂತೆ. ಸ್ವಾಮೀಜಿ ಅಂದು ಬದುಕಿನ ಬಹುದೊಡ್ಡ ಪಾಠವನ್ನು ಕಲಿತೆ ಎಂದು ಕೃತಜ್ಞತೆಯಿಂದ ಆ ಹಿರಿಯರಿಗೆ ನಮಸ್ಕರಿಸಿದರಂತೆ. ವಿವೇಕಾನಂದರು ಅಮೆರಿಕಾದಲ್ಲಿದ್ದಾಗ ನಡೆಯಿತೆನ್ನಲಾದ ಒಂದು ದೃಷ್ಟಾಂತ ಪ್ರಸಿದ್ಧ. ಕೆಲವು ಹುಡುಗರು ಸೇತುವೆಯ ಮೇಲಿಂದ ಕೆಳಗೆ ಹರಿಯುತ್ತಿದ್ದ ನದಿಯಲ್ಲಿದ್ದ ತೇಲುಬುರುಡೆಗಳಿಗೆ ಬಂದೂಕಿನಿಂದ ಹೊಡೆಯುತ್ತಿದ್ದರು. ಆದರೆ ಪ್ರತಿಸಲವೂ ಗುರಿ ತಪ್ಪಿ ಗುಂಡು ನೀರುಪಾಲಾಗುತ್ತಿತ್ತು. ಇದನ್ನು ನೋಡುತ್ತ ನಿಂತಿದ್ದ ಸ್ವಾಮಿ ವಿವೇಕಾನಂದರು ಅಲ್ಲಿಗೆ ಬಂದು ಆ ಹುಡುಗರಲ್ಲಿ ಒಂದು ಬಂದೂಕು ಪಡೆದು 12 ಸಲ ಹೊಡೆದರಂತೆ. ಪ್ರತಿ ಸಲವೂ ಅದು ಬುರುಡೆಗಳಿಗೆ ತಾಗಿ ಅವುಗಳನ್ನು ತಲೆಕೆಳಗಾಗಿಸಿತು. ಯಾವುದೋ ಫಕೀರ ತೆವಲಿಗಾಗಿ ಬಂದೂಕು ಹಿಡಿದ ಎಂದು ಭಾವಿಸಿದ್ದ ಹುಡುಗರು ಈಗ ಬೆಕ್ಕಸಬೆರಗಾಗಿ ನೋಡುತ್ತಿದ್ದರು. ವಿವೇಕಾನಂದರು ಹಿಂದೆಂದೂ ಬಂದೂಕು ಹಿಡಿದವರಲ್ಲ. ಆದರೆ ಅಚಲ ಏಕಾಗ್ರತೆಯಿದ್ದರೆ ಎಂಥ ಸಾಧನೆಯನ್ನೂ ಮಾಡಿತೋರಿಸಬಹುದು ಎಂಬುದನ್ನು ಅಂದು ಅವರು ಮಾತಿನಿಂದಲ್ಲ; ಕೃತಿಯಿಂದ ತೋರಿಸಿಕೊಟ್ಟಿದ್ದರು.

ಒಮ್ಮೆ ಅಮೆರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಕೈಯಲ್ಲಿ (ಧನಿಕರ್ಯಾರೋ ಕೊಟ್ಟಿದ್ದ) ಬೆಲೆಬಾಳುವ ಒಂದು ವಾಚು ಇದ್ದದ್ದನ್ನು ಕಂಡ ಒಂದಷ್ಟು ಹುಡುಗಿಯರು ಈ ಸಂನ್ಯಾಸಿಯನ್ನು ಬೇಸ್ತು ಬೀಳಿಸಬೇಕೆಂದು ಯೋಚಿಸಿದರಂತೆ. “ಈ ವಾಚು ನಮಗೆ ಕೊಡು; ಇಲ್ಲವಾದರೆ ನೀನು ನಮ್ಮನ್ನು ಬಲಾತ್ಕರಿಸಿದೆ ಅಂತ ಪೋಲೀಸರನ್ನು ಕರೆಯುತ್ತೇವೆ” ಎಂದರು ಹುಡುಗಿಯರು. ಅದನ್ನು ನೋಡಿ ವಿವೇಕಾನಂದರು ತಾನು ಕಿವುಡ; ಏನು ಹೇಳಬೇಕೆಂದಿದ್ದೀರೋ ಅದನ್ನು ಕಾಗದದಲ್ಲಿ ಬರೆದುಕೊಡಿ ಎಂಬಂತೆ ಸನ್ನೆ ಮಾಡಿದರಂತೆ. ಹುಡುಗಿಯರು ಹಾಗೆಯೇ ಮಾಡಿ, ಚೀಟಿಯನ್ನು ಸ್ವಾಮೀಜಿಗೆ ಕೊಟ್ಟಾಗ ಅವರು “ಸರಿ, ಈಗ ಪೋಲೀಸರನ್ನು ಕರೆಯಿರಿ. ನನಗೊಂದು ದೂರು ಕೊಡಬೇಕಾಗಿದೆ” ಎಂದು ಹೇಳಿ ಹುಡುಗಿಯರು ಮುಖ ಮುಚ್ಚಿಕೊಳ್ಳುವಂತೆ ಮಾಡಿದರಂತೆ. ಅಮೆರಿಕಾದಲ್ಲಿ ಸ್ವಾಮೀಜಿ ಬಹುಕಷ್ಟದ ದಿನಗಳನ್ನು ಕಳೆಯುತ್ತಿದ್ದ ಸಂದರ್ಭದಲ್ಲಿ ಅನೇಕ ಶ್ರೀಮಂತ ವರ್ಗದ ಮಹಿಳೆಯರು ಈ ಗಟ್ಟಿಮುಟ್ಟಾದ ಸುಂದರ ಯುವಕನನ್ನು ಕಂಡು, ನೀನು ನಿನ್ನ ಸಂನ್ಯಾಸ ತ್ಯಜಿಸಿ ನನ್ನೊಡನೆ ಬರುವುದಾದರೆ ಬೇಕಾದ ಎಲ್ಲ ಸೌಕರ್ಯವನ್ನೂ ಒದಗಿಸಿಕೊಡುತ್ತೇವೆಂದು ಬಲೆ ಬೀಸುತ್ತಿದ್ದರು. ಅಂಥ ಹೆಂಗಸರಿಗೆ ವಿವೇಕರು ನಯವಾಗಿ ಆದರೆ ಸ್ಪಷ್ಟವಾಗಿ ಹೇಳುತ್ತಿದ್ದ ಮಾತು: ಊಟ ವಸತಿಯಿಲ್ಲದೆ ಹಸಿಯುತ್ತ ಚಳಿಯಿಂದ ನಡುಗುತ್ತ ಸತ್ತೇನು; ಆದರೆ ಸಂನ್ಯಾಸಧರ್ಮಕ್ಕೆ ದ್ರೋಹ ಬಗೆಯಲಾರೆ. ಅವರ ಧರ್ಮಶ್ರದ್ಧೆ ಮತ್ತು ಭಾರತೀಯತೆಯ ಬಗ್ಗೆ ಇದ್ದ ಅದಮ್ಯ ಪ್ರೀತಿಗೆ ಒಂದು ಉದಾಹರಣೆ ಇದು: ಒಂದು ಉಪನ್ಯಾಸ ಮಾಡುತ್ತಿದ್ದಾಗ ವಿವೇಕಾನಂದರ ಪ್ರತಿಸ್ಪರ್ಧಿ ಭಗವದ್ಗೀತೆಯನ್ನು ಕೆಳಗಿಟ್ಟು ಅದರ ಮೇಲೆ ತನ್ನ ಮತಗ್ರಂಥವನ್ನಿಟ್ಟಿದ್ದನಂತೆ. ಅದನ್ನು ಗಮನಿಸಿದ ಸ್ವಾಮೀಜಿ, “ಎಂದಿಗೂ ತಾಯಿ ತನ್ನ ಮಗುವನ್ನು ಹೊರುತ್ತಾಳಲ್ಲದೆ ಮಗು ತಾಯಿಯನ್ನಲ್ಲ. ಎಲ್ಲಕ್ಕೂ ಆಧಾರಭೂತವಾದದ್ದು ಎಲ್ಲಕ್ಕಿಂತ ಕೆಳಗಿರುವುದು ಸರಿಯಾಗಿಯೇ ಇದೆ. ಯಾಕೆಂದರೆ ಅದು ಎಲ್ಲವನ್ನೂ ಹೊತ್ತು ನಿಂತಿದೆ” ಎಂದರು.

ಚಹಾ ಕೇಸು ಗೆದ್ದರು!

ಸ್ವಾಮೀಜಿ ಮಾಂಸಾಹಾರ ಸೇವನೆ ಮಾಡುತ್ತಿದ್ದರು ಎಂಬುದೂ ಅವರ ಜೀವನದ ಸಂಗತಿಗಳನ್ನು ಉತ್ಪ್ರೇಕ್ಷೆಗೊಳಿಸುವವರ ಒಂದು ಅಸ್ತ್ರ. ಬಂಗಾಳದ ಬ್ರಾಹ್ಮಣರು ಮೀನು ತಿನ್ನುವುದಷ್ಟೇ ಅಲ್ಲ ತಮ್ಮ ಕಾಳಿದೇವಿಗೂ ಮೀನಿನ ಸಮರ್ಪಣೆ ಮಾಡಿ ಆಕೆಯನ್ನೂ ತಮ್ಮ ವರ್ಗಕ್ಕೆ ಸೇರಿಸಿಕೊಂಡುಬಿಟ್ಟಿದ್ದಾರೆ! ಹಿಂದೂಗಳಷ್ಟೇ ಏಕೆ, ಅಹಿಂಸಾ ಪರಮೋ ಧರ್ಮ ಎಂದು ಬೋಧಿಸುವ ಬೌದ್ಧಮತದ ಭಿಕ್ಷುಗಳು ಶ್ರೀಲಂಕಾದಲ್ಲಿ ಮೀನು-ಮಾಂಸಗಳ ಸೇವನೆ ಮಾಡುತ್ತಾರೆ. ಕಾಳಿಮಾತೆಯ ಉಪಾಸಕರೂ ದೇವಸ್ಥಾನದ ಪ್ರಧಾನ ಅರ್ಚಕರೂ ಆಗಿದ್ದ ರಾಮಕೃಷ್ಣ ಪರಮಹಂಸರು ಕೂಡ ಮೀನು ತಿನ್ನುತ್ತಿದ್ದರು. ಅದರಲ್ಲೂ ಮಳೆಗಾಲದ ಸಮಯದಲ್ಲಿ ಗಂಗೆಯಲ್ಲಿ ಕಾಣಿಸಿಕೊಳ್ಳುವ ಹಿಲ್ಸಾ ಮೀನು ಬಂಗಾಳಿಗಳಿಗೆ ಪರಮಪ್ರಿಯ. ತನ್ನ ಗುಣಧರ್ಮಗಳಲ್ಲಿ ನೂರಕ್ಕೆ ನೂರು ಬಂಗಾಳಿಯಾಗಿದ್ದ ವಿವೇಕಾನಂದರು ಹಿಲ್ಸಾ ಮೀನು ತಿನ್ನುತ್ತಿದ್ದರು ಎಂಬುದು ಅದೆಂಥ ಆಘಾತದ ಸಂಗತಿಯೋ ನಾ ಕಾಣೆ! ಮಾಂಸಭೋಜ್ಯದ ಜೊತೆಗೆ ವಿವೇಕಾನಂದರಿಗಿದ್ದ ಇನ್ನೊಂದು ಖಯಾಲಿ ಚಹಾ ಸೇವನೆಯದ್ದು. ಅವರ ಶಿಷ್ಯರು ಬರೆದಿಟ್ಟ ದಾಖಲೆಗಳ ಪ್ರಕಾರ, ಸ್ವಾಮೀಜಿ ದಿನಕ್ಕೆ ಇಪ್ಪತ್ತು ಸಲ ಚಹಾ ಕುಡಿಯುತ್ತಿದ್ದರಂತೆ! ಅದರಲ್ಲೂ ಹತ್ತುಹಲವು ಬಗೆಯ ಚಹಾಗಳ ಬಗ್ಗೆ ಒಂದು ಮಿನಿ ಸಂಶೋಧನೆಯನ್ನೇ ಅವರು ಮಾಡಿದ್ದರು. ಭಿಕ್ಷುಗಳು ಚಹಾ ಕುಡಿಯುವುದು ನಮಗೆ ಅಂಥ ವಿಶೇಷವೆಂದು ಅನಿಸದಿದ್ದರೂ ಹತ್ತೊಂಬತ್ತನೇ ಶತಮಾನದಲ್ಲಿ ಅದು ಧರ್ಮನಿಷ್ಟರಿಗೆ ಅದೆಂಥ ಆಘಾತಕಾರಿ ಸಂಗತಿಯಾಗಿತ್ತೆಂದು ನೆನೆದರೆ ವಿವೇಕಾನಂದರು ಒಬ್ಬ ಕ್ರಾಂತಿಕಾರಿಯಂತೆ ಕಂಡುಬರುತ್ತಾರೆ! ರಾಮಕೃಷ್ಣ ಮಠದಲ್ಲಿ ಚಹಾ ಸೇವನೆ ನಡೆಯುತ್ತದೆ ಎಂಬ ಕಾರಣಕ್ಕೇ ಅಲ್ಲಿನ ಮುನ್ಸಿಪಾಲಿಟಿ, “ಇದು ಮಠವಲ್ಲ; ಒಂದು ಖಾಸಗಿ ಕ್ಲಬ್ಬು. ಆದ್ದರಿಂದ ಇಲ್ಲಿ ಹೆಚ್ಚಿನ ತೆರಿಗೆ ವಿಧಿಸಬೇಕು” ಎಂಬ ನೋಟಿಸ್ ಕಳಿಸಿತು. ಚಹಾ ಕುಡಿಯುತ್ತೇವೆಂಬ ಒಂದೇ ಕಾರಣಕ್ಕೆ ನಮ್ಮದು ಮಠವಲ್ಲ ಎಂದು ಹೇಳುವುದು ಮೂರ್ಖತನ ಎಂದು ಸ್ವತಃ ವಿವೇಕಾನಂದರೇ ಮುಂದಾಗಿ ಮುನ್ಸಿಪಾಲಿಟಿಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ವಾದ-ವಿವಾದ ನಡೆದು ಪರಿಶೀಲನೆಗಾಗಿ ಒಂದು ಬ್ರಿಟಿಷ್ ಅಧಿಕಾರಿಯನ್ನು ನೇಮಿಸಲಾಯಿತು. ಬ್ರಿಟಿಷರಿಗೋ ಚಹಾವೇ ಕುಲದೇವತೆ! ಆತ ಮಠಕ್ಕೆ ಬಂದವನೇ ಹಲಬಗೆಯ ಚಹಗಳ ಲೋಟಗಳಲ್ಲಿ ಮುಳುಗೆದ್ದು ಸಂಪ್ರೀತನಾಗಿ ಮುನ್ಸಿಪಾಲಿಟಿಯನ್ನೇ ತರಾಟೆಗೆ ತೆಗೆದುಕೊಂಡುಬಿಟ್ಟ! ಪುಣ್ಯವಶಾತ್ ಮಠದಲ್ಲಿ ಚಹಾಸೇವೆ ಅಬಾಧಿತವಾಗಿ ಮುಂದುವರಿಯಿತು.ಒಮ್ಮೆ, ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರೇ ಚಹದ ಎಲೆ, ಏಲಕ್ಕಿ, ಲವಂಗ, ಕೇಸರಿ ಇತ್ಯಾದಿಗಳನ್ನು ತಂದು ಮಠದಲ್ಲಿ ಮುಘಲಾಯಿ ಚಹಾ ತಯಾರಿಸಿ ವಿವೇಕಾನಂದರಿಗೂ ಇತರ ಶಿಷ್ಯರಿಗೂ ಕುಡಿಸಿದ್ದುಂಟು!

ಇಂಥ ನೂರಾರು ಘಟನೆಗಳನ್ನು ಒಟ್ಟಾಗಿ ಇಟ್ಟು ನೋಡಿದರಷ್ಟೇ ವಿವೇಕಾನಂದರ ವ್ಯಕ್ತಿತ್ವದ ಸಮಗ್ರಚಿತ್ರಣ ನಮಗೆ ಸಿಗಲು ಸಾಧ್ಯ. ತನ್ನ ಬಾಲ್ಯದ ದಿನಗಳಿಂದಲೂ ವಿವೇಕರು ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಿಕೊಂಡವರೇ ಅಲ್ಲ. ಪುಟ್ಟ ಹುಡುಗನಾಗಿದ್ದಾಗ ಸಂಪಿಗೆ ಮರ ಕಲಿಸಿದ ಪಾಠವನ್ನು ಅವರು ಕೊನೆಯವರೆಗೂ ಮರೆಯಲಿಲ್ಲ. ಯಾರೂ ಹುಟ್ಟಿನಿಂದ ಸಂನ್ಯಾಸಿ ಅಥವಾ ಬ್ರಾಹ್ಮಣನಾಗುವುದಿಲ್ಲ; ಬ್ರಹ್ಮಜ್ಞಾನೇನ ಬ್ರಾಹ್ಮಣಃ ಎಂಬುದನ್ನು ಬದುಕಿ ತೋರಿಸಿದವರು ಅವರು. ಕಾವಿ ಧರಿಸಿದ ಮಾತ್ರಕ್ಕೆ ಯಾರೂ ತನ್ನ ಹಳೆಯ ವ್ಯಕ್ತಿತ್ವವನ್ನು, ಅದು ಒಳ್ಳೆಯದೇ ಆಗಿದ್ದರೆ, ಕಳಚಿ ಹೊಸದನ್ನು ಧರಿಸಬೇಕಾಗಿಲ್ಲ ಎಂಬುದನ್ನೂ ಅವರು ತನ್ನ ಜೀವಿತದ ಮೂಲಕವೇ ತೋರಿಸಿದರು. ಯತಿಯಾದರೂ ಅವರು ತನ್ನ ಮಾತೃಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಹಾಗಂತ, ತನ್ನ ಕುಟುಂಬ ಬಂಧಗಳು ತನ್ನ ಸಂನ್ಯಾಸಾಶ್ರಮಕ್ಕೆ ತೊಂದರೆಯಾಗುವಂತೆ ಎಂದೂ ಬಿಟ್ಟುಕೊಳ್ಳಲಿಲ್ಲ. ಮಠದಲ್ಲಿ ಒಮ್ಮೆ ಜ್ವರದಲ್ಲಿ ಮಲಗಿದ್ದಾಗ ಶಿಷ್ಯರು ತಾಯಿಯನ್ನು ಕರೆದುತಂದು ಕೂರಿಸಿದ್ದಕ್ಕೆ ವಿವೇಕಾನಂದರು ತೀವ್ರ ಕುಪಿತರಾಗಿದ್ದರು. ಅಮೆರಿಕಾದಲ್ಲಿರುವಾಗಲೂ ಅಷ್ಟೇ, ಅವರು ತನ್ನ ಶಿಷ್ಯರೆಲ್ಲರ ಮನೆಗಳಿಗೆ ಹೋಗುತ್ತಿದ್ದರು. ಅಲ್ಲಿ ಉಳಿದುಕೊಳ್ಳುತ್ತಿದ್ದರು. ಅವರು ಕೊಟ್ಟ ಆಹಾರ ಸೇವನೆ ಮಾಡುತ್ತಿದ್ದರು. ಬಗೆಬಗೆಯ ಅಡುಗೆ ಮಾಡಿ ಬಡಿಸುತ್ತಲೂ ಇದ್ದರು. ಸಂನ್ಯಾಸಿ ಎಂದರೆ ಎಲ್ಲದರಿಂದ ವಿಮುಖನಾದವನು ಎಂದು ಅರ್ಥವಲ್ಲ; ಎಲ್ಲ ಸುಖಗಳನ್ನು ಅನುಭವಿಸಿಯೂ ಅವುಗಳಿಂದ ವಿರಕ್ತನಾದವನು ಎಂದರ್ಥ ಎಂದು ಹೇಳುತ್ತಿದ್ದರು. ಸ್ವಾಮಿಯಾದವನು ತನ್ನ ಭಾವನೆಗಳನ್ನು ಹದ್ದುಬಸ್ತಿನಲ್ಲಿಡಬೇಕು; ಯಾರೊಂದಿಗೂ ಯಾವ ಭಾವನೆಗಳನ್ನೂ ತೋಡಿಕೊಳ್ಳಬಾರದು ಎಂಬ ಅಲಿಖಿತ ನಿಯಮಕ್ಕೆ ಅವರು ಅತೀತರಾಗಿದ್ದರು.

ತನ್ನ ಶಿಷ್ಯರಿಗೆ ಅವರು ಬರೆದ ಪತ್ರಗಳಲ್ಲಿ ಭಾವವೇ ಪ್ರಧಾನ. ತನ್ನ ದೈಹಿಕ ಸಮಸ್ಯೆಗಳು, ಇನ್ನಷ್ಟು ಉಮೇದಿನಿಂದ ಕೆಲಸ ಮಾಡಲಾಗದ ಹತಾಶೆ, ವೈಯಕ್ತಿಕ ಬದುಕಿನ ಏಳುಬೀಳುಗಳು, ಆರ್ಥಿಕ ಮುಗ್ಗಟ್ಟುಗಳು, ಕುಟುಂಬದ ಸಮಸ್ಯೆಗಳು ಇತ್ಯಾದಿ ಎಲ್ಲವನ್ನೂ ಅವರು ಪತ್ರಗಳಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ತಾನ ನಲವತ್ತನೇ ವಯಸ್ಸನ್ನು ನೋಡುವುದಿಲ್ಲ ಎಂದೇ ಆಪ್ತರಲ್ಲಿ ಅವರು ಹೇಳುತ್ತಿದ್ದರಂತೆ. “ಯೌವನದ ದಿನಗಳಲ್ಲಿ ನಾನು ಕಾಡೆಮ್ಮೆಯಂತೆ ಜೀವನ ಸವೆಸಿದೆ. ನನಗೊಂದು ದೇಹವೂ ಇದೆ; ಅದರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಕಡೆ ಪರಿವೆಯೇ ಇರಲಿಲ್ಲ. ನನ್ನ ದೇಹವನ್ನು ನನ್ನದಲ್ಲವೆಂಬಂತೆ ದಂಡಿಸಿದೆ. ಅದರ ಫಲವನ್ನು ಈಗ ಉಣ್ಣುತ್ತಿದ್ದೇನೆ. ಆದ್ದರಿಂದ ದೇಹಾರೋಗ್ಯದ ವಿಷಯದಲ್ಲಿ ಇತರರಿಗೆ ಹೇಳುವ ಅರ್ಹತೆ ನನಗೀಗ ಬಂದಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಬುದ್ಧಿಯಂತೆಯೇ ದೇಹವನ್ನೂ ಪ್ರೀತಿಸಿ” ಎಂದು ವಿವೇಕಾನಂದರು ತನ್ನ ಶಿಷ್ಯರಿಗೆ ಹೇಳಿದರು. ಅವರ ಜೀವನದ ಉತ್ತುಂಗ ಸಾಧನೆಯ ಕಾಲಘಟ್ಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಮಾತುಗಳ ಅಂತರಾರ್ಥವನ್ನು ಗ್ರಹಿಸಬಹುದು. ಒಂದು ಸುಂದರ ಮೂರ್ತಿಯಾಗಲು ಸಾವಿರಾರು ಉಳಿಯೇಟುಗಳನ್ನು ತಿಂದುಂಡ ಕಲ್ಲಿನಂತೆ ವಿವೇಕಾನಂದರು ತನ್ನ ಬದುಕನ್ನು ರೂಪಿಸಿಕೊಂಡರು. ಇವನ್ನೆಲ್ಲ ನೋಡದೆ ಅವರ ರೋಗಗಳ ಪಟ್ಟಿ ಮಾಡುವವರಿಗೆ ಒಬ್ಬ ರೋಗಿಷ್ಠ ಮುನಿಯಷ್ಟೇ ಅಲ್ಲಿ ಗೋಚರಿಸಿಯಾನು! ಯದ್ಭಾವಂ ತದ್ಭವತಿ ಎನ್ನುವುದು ಅದಕ್ಕೇ ಅಲ್ಲವೆ?

ತನ್ನ ಗುರುವನ್ನು ತಂದೆಯಂತೆ ಪ್ರೀತಿಸಿದ ವಿವೇಕಾನಂದರು ರಾಮಕೃಷ್ಣ ಮಠವನ್ನಷ್ಟೇ ಅಲ್ಲದೆ; ಧರ್ಮಪ್ರಸಾರಕ್ಕಾಗಿ ರಾಮಕೃಷ್ಣ ಮಿಶನ್ ಎಂಬ ಪ್ರಚಾರಸಂಸ್ಥೆಯನ್ನೂ ಹುಟ್ಟುಹಾಕಿದರು. ರಾಮಕೃಷ್ಣರು ಮತ್ತು ವಿವೇಕಾನಂದರ ವಿಚಾರಗಳನ್ನು ಜಗತ್ತಿಗೆ ತಿಳಿಸಿಕೊಡಲು ಈ ಸಂಸ್ಥೆ ವಹಿಸಿದ ಆಸ್ಥೆ ಅದ್ವಿತೀಯ. 1902ನೇ ಇಸವಿಯ ಜುಲೈ 4ರಂದು ಮಹಾಸಮಾಧಿ ಹೊಂದಿ ವಿವೇಕಾನಂದರು ಭೌತಿಕವಾಗಿ ಕಣ್ಮರೆಯಾದರೂ ತನ್ನ ವಿಚಾರಗಳ ಮೂಲಕ ಅವರಿಂದೂ ನಮ್ಮನಡುವೆ ಇದ್ದಾರೆ. ನೂರ ಹದಿನೈದು ವರ್ಷಗಳ ನಂತರವೂ ಈ ಮಹಾನ್ ಚೇತನ ನಮ್ಮ ಒಳಗನ್ನು ಎಚ್ಚರಿಸುತ್ತ, ಬುದ್ಧಿಯನ್ನು ಉದ್ಧೀಪಿಸುತ್ತ, ಹೃದಯವನ್ನು ಪರಿಶುದ್ಧಗೊಳಿಸುತ್ತ; ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಯುವಕರಿಗೂ ಪ್ರಸ್ತುತ ಅನ್ನಿಸುತ್ತ ನಿಂತಿದೆ ಎಂದರೆ ಅದಕ್ಕಿಂತ ಇನ್ನೇನು ಬೇಕು! “ಏಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ” ಎಂದು ಕರೆಕೊಟ್ಟರು ವಿವೇಕಾನಂದರು. ಎಂದೆಂದೂ ಮುಟ್ಟಲಾಗದಷ್ಟು ಎತ್ತರಕ್ಕೆ ಗುರಿಯನ್ನಿಟ್ಟು ಅದನ್ನು ಮುಟ್ಟುವುದಷ್ಟೇ ಗುರಿಯಾಗುವಂತೆ ಬದುಕನ್ನು ರೂಪಿಸಿಕೊಳ್ಳುವುದೇ ನಾವು ಅವರಿಗೆ ತೋರಬಹುದಾದ ಅರ್ಥಪೂರ್ಣ ಶ್ರದ್ಧಾಂಜಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments