ಮಾಲ್ಡಾ ಗಲಭೆ ಮತ್ತು ಬಾಂಗ್ಲಾ ನುಸುಳುಕೋರರೆಂಬ ಟೈಂ ಬಾಂಬ್
– ರಾಕೇಶ್ ಶೆಟ್ಟಿ
ನಾಲಗೆಯನ್ನು ಎಕ್ಕಡದಂತೆ ಬಳಸುವ ರಾಜಕಾರಣಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಸಮಾಜವಾದಿ ಪಕ್ಷದ ಅಜಂ ಖಾನ್. ಇತ್ತೀಚೆಗೆ ಆರೆಸ್ಸಿನ ನಾಯಕರ ಲೈಂಗಿಕತೆಯ ಬಗ್ಗೆ ಈತ ಕೆಟ್ಟದಾಗಿ ಮಾತನಾಡಿದ್ದರು. ಈತನಿಗಿಂತ ನಾನೇನೂ ಕಮ್ಮಿಯೆಂಬಂತೆ ಕಮಲೇಶ್ ತಿವಾರಿಯೆಂಬ ಹಿಂದೂ ಮಹಾಸಭದ ವ್ಯಕ್ತಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಟೀಕೆ ಮಾಡಿದ್ದರು. ಮುಸ್ಲಿಮರು ಬೀದಿಗಿಳಿದರು,ತಿವಾರಿಯನ್ನು ಗಲ್ಲಿಗೇರಿಸಿ ಎಂದರು. ತಿವಾರಿಯ ಬಂಧನವಾಯಿತು.ಇದೆಲ್ಲಾ ನಡೆದಿದ್ದು ಕಳೆದ ಡಿಸೆಂಬರ್ ತಿಂಗಳಿನಲ್ಲಿ.
ಆದರೆ ಕಳೆದ ವಾರ ಜನವರಿ ೩ನೇ ತಾರೀಖು,ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾ ಚಕ್ ಪ್ರದೇಶದಲ್ಲಿ ಈದ್ರಾ-ಈ-ಶರಿಯಾ ಎಂಬ ಸಂಘಟನೆ ಕಮಲೇಶನ ಹೇಳಿಕೆಯನ್ನು ಖಂಡಿಸಲೆಂದು ಪ್ರಚೋದನಕಾರಿ ಕರಪತ್ರವೊಂದನ್ನು ಹಂಚಿದೆ ಹಾಗೂ 3ನೇ ತಾರೀಖಿನ ಭಾನುವಾರ ಸುಮಾರು ಎರಡೂವರೆ ಲಕ್ಷದಷ್ಟು ಸಂಖ್ಯೆಯಲ್ಲಿದ್ದ ಗುಂಪು ಪ್ರತಿಭಟನೆಯಲ್ಲಿ ಹೊರಟಿದೆ.ಹಾಗೇ ಹೊರಡುವ ಮುನ್ನ ಪ್ರಚೋದನಕಾರಿ ಭಾಷಣವನ್ನು ಅವರ ತಲೆಗೆ ತುಂಬಲಾಗಿದೆ.ಮಾರಕಾಸ್ತ್ರಗಳನ್ನು ಹಿಡಿದು ಹೊರಟ ಉದ್ರಿಕ್ತ ಗುಂಪು ಕಾಲಿಯಾ ಚಕ್ ಪ್ರದೇಶದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಡುತ್ತ,ಮನೆಗಳಿಗೆ ದಾಳಿಯಿಡುತ್ತ,ಪೋಲಿಸ್ ಠಾಣೆಗೆ ನುಗ್ಗಿ ಅಲ್ಲಿದ್ದ ದಾಖಲೆಗಳು, ಪೋಲಿಸ್ ವಾಹನಗಳಿಗೂ ಬೆಂಕಿಯಿಟ್ಟು ದಾಂಧಲೆ ಮಾಡಿದ್ದರೆ.ಖುದ್ದು ಪೋಲಿಸರೇ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.ಮತಾಂಧರು ದಾಳಿಯೆಬ್ಬಿಸಿ ಹೋದ ಎರಡು ದಿನಗಳ ನಂತರ ಪೋಲಿಸರು ಬೀದಿಗಿಳಿರುವುದಾಗಿ ಅಲ್ಲಿನ ಜನರು ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ.
ದಾದ್ರಿಯಲ್ಲಿ ನಡೆದ ಹತ್ಯೆಯೊಂದನ್ನು ಹಿಡಿದುಕೊಂಡು ದೇಶದ ಹೆಸರಿಗೆ ಮಸಿಬಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಬುದ್ಧಿಜೀವಿಗಳು,ಸೆಕ್ಯುಲರ್ ಮೀಡಿಯಾಗಳು ಮಾಲ್ಡಾದ ಘಟನೆಯ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ.ಮೊದಲಿಗೆ ಬಾಯಿಬಿಟ್ಟಿದ್ದು ಜೀ ನ್ಯೂಸಿನ ಸುಧೀರ್ ಚೌದರಿ,ಆ ನಂತರವೇ ಉಳಿದ ಚಾನೆಲ್ಲುಗಳು ಅನಿವಾರ್ಯವಾಗಿ ಬಾಯಿ ತೆರೆದವು.ಇಷ್ಟಾದರೂ ಬುದ್ಧಿಜೀವಿಗಳು ಬಾಯಿ ತೆಗೆಯಲಿಲ್ಲ.
ಈ ಘಟನೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ/ಬರಹಗಳಿಗೆ ಜನರ ಪ್ರತಿಕ್ರಿಯೆಗಳು ತಕ್ಷಣಕ್ಕೇ ಬರುತ್ತವೆಯೇ ಹೊರತು,ಒಂದೆರಡು ತಿಂಗಳು ಕೋಪವನ್ನು ಹಿಡಿದಿಟ್ಟುಕೊಂಡಲ್ಲ. ಅದರಲ್ಲೂ ತನ್ನ ಧರ್ಮದ ಕುರಿತು ಯಾವುದೇ ರೀತಿಯ ಟೀಕೆಯನ್ನು ಕೇಳಿಸಿಕೊಳ್ಳಲಾಗದ ಇಸ್ಲಾಂ ಅನುಯಾಯಿಗಳು ಒಂದು ತಿಂಗಳು ಸುಮ್ಮನಿದ್ದು ಬೀದಿಗಿಳಿಯುವ ಪ್ರಕ್ರಿಯೆಯ ಆಯಾಮ ಬೇರೆ ಇದ್ದಿರಲಿಕ್ಕೇ ಬೇಕು.ಹಾಗಿದ್ದರೇ,ಮಾಲ್ಡಾದ ಘಟನೆಗೆ ನಿಜಕ್ಕೂ ತಿವಾರಿಯ ಹೇಳಿಕೆ ಕಾರಣವೇ?
ಮಾಲ್ಡಾದ ಗಲಭೆಯ ಮುನ್ನ ನಡೆದ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಬೇಕು.ಅಕ್ಟೋಬರ್ ತಿಂಗಳಿನಲ್ಲಿ 8 ದಿನಗಳ ಅಂತರದಲ್ಲಿ ಮಾಲ್ಡಾ ಜಿಲ್ಲೆಯ 2 ಕಡೆ ಬಾಂಬ್ ಸ್ಪೋಟವಾಗಿತ್ತು. ಅದು ಉಗ್ರರು ಬಾಂಬ್ ಇಟ್ಟು ಸ್ಪೋಟಿಸಿದ್ದಲ್ಲ.ಬಾಂಬ್ ತಯಾರಿಸುವಾಗ ಆಕಸ್ಮಿಕವಾಗಿ ಸ್ಪೋಟಿಸಿದ್ದು.ಬಾಂಬ್ ತಯಾರಿಕೆಯ ಜೊತೆಗೆ ಇಲ್ಲಿ ಗಾಂಜಾ,ಅಫೀಮು ಮಾರಾಟದ ದೊಡ್ಡ ಜಾಲವಿದೆ. ಜೊತೆಗೆ ಖೋಟಾ ನೋಟು ಜಾಲವೂ ಇತ್ತು.NIA ಹೇಳುವ ಪ್ರಕಾರ ದೇಶದಲ್ಲಿ ಚಲಾವಣೆಯಾಗುತ್ತಿರುವ ಖೋಟಾ ನೋಟಿನ 90% ಮಾಲ್ಡಾ ಜಿಲ್ಲೆಯಿಂದಲೇ ರವಾನೆಯಾಗುತ್ತಿದೆ.
ಮೇಲ್ ಟುಡೇಯಲ್ಲಿ ಬಂದಿರುವ ವರದಿಯ ಪ್ರಕಾರ ಮಾಲ್ಡಾದ ಗೋಪಾಲ್ ಗಂಜ್ ನಲ್ಲಿ ಗಾಂಜಾ-ಅಫೀಮು ಬೆಳೆಯುವ ಜಾಗಗಳಿವೆ.ಅಲ್ಲಿಯ ಹಸಿರು ತುಂಬಿದ ಜಾಗವನ್ನು ನೋಡಲಿಕ್ಕೆ ಹೋದರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.ಸ್ಥಳೀಯ ಸರ್ಕಾರವನ್ನು ಕೇರ್ ಮಾಡದೇ ಅಲ್ಲಿ ಮಾದಕ ದ್ರವ್ಯವನ್ನು ಬೆಳೆಯುವುದು ಮಾತ್ರವಲ್ಲ,ಗನ್ನು-ಪಿಸ್ತೂಲುಗಳನ್ನಿಡಿದು ಅದರ ಪಹರೆಯನ್ನು ಕಾಯಲಾಗುತ್ತದೆ.ಇಲ್ಲಿಂದ ಇತರೆಡೆಗಳಿಗೆ ಕಳ್ಳ ಸಾಗಣೆಯಾಗುವ ಈ ಮಾದಕ ದ್ರವ್ಯದಿಂದ ಬರುವ ಹಣದಿಂದ ಅಕ್ರಮ ಮದರಾಸಗಳು,ಶಸ್ತ್ರಾಸ್ತ್ರಗಳಿಗೆ ಬಳಸಲಾಗುತ್ತದೆ. ಬಾಂಗ್ಲಾದೇಶದ ಗಡಿ ಭಾಗವಾದ ಈ ಮಾಲ್ಡಾ ದೇಶ ವಿದ್ರೋಹಿ ಕೆಲಸಗಳಿಗೆ ದೊಡ್ಡ ತಾಣವಾಗಿ ಬದಲಾಗಿದೆ.ಇತ್ತೀಚೆಗೆ ಪೋಲಿಸರು ಈ ಖೋಟಾನೋಟು,ಮಾದಕ ದ್ರವ್ಯದ ಕಳ್ಳ ಸಾಗಣೆಯ ಜಾಲದ ನಡು ಮುರಿದು ದೊಡ್ಡ ಪೆಟ್ಟು ನೀಡಿದ್ದರು.ತಮ್ಮ ವ್ಯವಹಾರಕ್ಕೆ ಕೊಳ್ಳಿಯಿಟ್ಟ ಪೋಲಿಸ್ ಹಾಗೂ ಸ್ಥಳೀಯ ಆಡಳಿತದ ಆತ್ಮಸ್ಥೈರ್ಯವನ್ನು ಅಡಗಿಸುವ ಜೊತೆಗೆ ನಮ್ಮೊಂದಿಗೆ ನಿಮ್ಮ ಕಾನೂನಿನಾಟ ನಡೆಯುವುದಿಲ್ಲವೆಂಬ ಎಚ್ಚರಿಕೆಯನ್ನು ದೇಶದ್ರೋಹಿ ಶಕ್ತಿಗಳು ನೀಡಲು ಬಯಸಿವೆ.ಆಗ ಅವರಿಗೆ ಗುರಾಣಿಯಾಗಿ ಸಿಕ್ಕಿದ್ದು ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೇಳಿಕೆ ಹಾಗೂ ಸುಲಭವಾಗಿ ಪ್ರಚೋದನೆಗೊಳಗಾಗಿ ಹಿಂಸಾಚಾರಕ್ಕಿಳಿಯಬಲ್ಲ ಗುಂಪು. ಅವರ ಮುಖ್ಯ ಟಾರ್ಗೆಟ್ ಆಗಿದ್ದು,ದೇಶದ್ರೋಹಿ ಚಟುವಟಿಕೆಯ ದಾಖಲೆಗಳಿರುವ ಕಾಲಿಯಾ ಚಕ್ ಪೋಲಿಸ್ ಠಾಣೆ.
ಇತ್ತೀಚೆಗೆ ಉಗ್ರರ ದಾಳಿ ನಡೆದ ಪಂಜಾಬಿನ ಪಟಾಣ್ ಕೋಟ್ ಹಾಗೂ ಬಂಗಾಳದ ಮಾಲ್ಡಾ ಜಿಲ್ಲೆಗಳಿಗಿರುವ ಸಾಮ್ಯತೆ ಮಾದಕ ದ್ರವ್ಯದ ಅವ್ಯವಹಾರದ್ದು.ಪಂಜಾಬಿನಲ್ಲೂ,ಬಂಗಾಳದಂತೆಯೇ ಮಾದಕ ದ್ರವ್ಯದ ಕಳ್ಳ ಸಾಗಣೆ ಅವ್ಯಾಹತವಾಗಿದೆ. ಸ್ಥಳೀಯ ಸರ್ಕಾರಗಳ ನಿಷ್ಕ್ರೀಯತೇ,ಅಪವಿತ್ರ ಮೈತ್ರಿಗಳಿಲ್ಲದೇ ಇವೆಲ್ಲ ಸಾಧ್ಯವಾಗಲಿಕ್ಕಿಲ್ಲ. ಹೆಸರು ಹೇಳಲಿಚ್ಚಿಸದ ಟಿಎಂಸಿ ಮುಖಂಡರೊಬ್ಬರು ನೀಡಿರುವ ಹೇಳಿಕೆ ಮಾಲ್ಡಾ ಸ್ಥಿತಿಗೆ ಕನ್ನಡಿಯಿದ್ದಂತಿದೆ “ಮಾಲ್ಡಾ ಮಿನಿ ಅಫ್ಘಾನಿಸ್ಥಾನದಂತಾಗಿದೆ. ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ,ನಾನು ಹೇಳಬಹುದಾದ್ದು ಕಾಲಿಯ ಚಕ್ ಪ್ರದೇಶದ ಪರಿಸ್ಥಿತಿ ಎಚ್ಚರಿಕೆಯ ಕರೆಗಂಟೆ” ಎಂದಷ್ಟೇ.ಆದರೆ,ವಾಸ್ತವವಾಗಿ ಎಚ್ಚರಿಕೆ ಗಂಟೆ ಬಾರಿಸುತ್ತಿರುವುದು ಕೇವಲ ಮಾಲ್ಡಾದಲ್ಲಿ ಮಾತ್ರವಲ್ಲಿ ಇಡೀ ಪಶ್ಚಿಮ ಬಂಗಾಳದಲ್ಲಿ.
ಬಾಂಗ್ಲಾದಿಂದ ನಿರಂತರವಾಗಿ ಹರಿದು ಬರುತ್ತಿರುವ ಮುಸ್ಲಿಮ್ ನುಸುಳುಕೋರರಿಂದ, ಹಿಂದೂಗಳು ಅಲ್ಪಸಂಖ್ಯಾತರಾಗುತಿದ್ದಾರೆ.ದೇಶ ವಿಭಜನೆಯಾಗುವಾಗ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮ್ ಜನಸಂಖ್ಯೆ ೧೨%ರಷ್ಟಿದ್ದರೇ,ಬಾಂಗ್ಲಾದೇಶದ ಹಿಂದೂ ಜನ ಸಂಖ್ಯೆ ೩೦%ನಷ್ಟಿತ್ತು.ಇವತ್ತಿಗೆ ಪಶ್ಚಿಮ ಬಂಗಾಳದ ಮುಸ್ಲಿಮ್ ಜನ ಸಂಖ್ಯೆ ೨೭% ಅನ್ನೂ ಮೀರಿದೆ (ಕೆಲವು ಜಿಲ್ಲೆಗಳಲ್ಲಿ ೬೩% ರಷ್ಟು!). ಆದರೇ,ಇದೇ ಸಮಯದಲ್ಲಿ ಬಾಂಗ್ಲಾದ ಹಿಂದೂಗಳ ಜನಸಂಖ್ಯೆ ೮%ಗೆ ಇಳಿದಿದೆ! ಮಾಲ್ಡಾ ಜಿಲ್ಲೆಯಿರಬಹುದು ಅಥವಾ ಬಂಗಾಳ,ಅಸ್ಸಾಂನಲ್ಲಿ ನಡೆಯುತ್ತಿರುವ ಅಕ್ರಮ ಖೋಟಾ ನೋಟು,ಮಾದಕ ದ್ರವ್ಯ ಕಳ್ಳ ಸಾಗಣೆಯಲ್ಲಿ ಈ ಬಾಂಗ್ಲಾದ ನುಸುಳುಕೋರರದ್ದೇ ಪ್ರಾಬಲ್ಯ.ಅಷ್ಟಕ್ಕೇ ಮಾತ್ರ ನಿಲ್ಲುವುದಿಲ್ಲ.ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಬ್ಯಾನರಿನಲ್ಲಿ ಒಂದಾಗಿ ಪ್ರತಿಭಟಿಸಿ ಅಂತಿಮವಾಗಿ ದಾಂಧಲೆಯಲ್ಲಿ ತೊಡಗಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಮಾಡೀ,ಪೋಲಿಸರ ಮೇಲೆ ಹಲ್ಲೆ ಮಾಡುತ್ತಾ ತಾವು ಕಾನೂನಿಗಿಂತ ದೊಡ್ಡವರು ಎಂಬ ಸಂದೇಶ ರವಾನಿಸುತಿದ್ದಾರೆ!
’ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ’ ಎನ್ನುವ ಕಾಲವೊಂದಿತ್ತು.ಇರದೇ ಏನು ಹೇಳಿ.ರಾಮಕೃಷ್ಣರು,ವಿವೇಕಾನಂದರು,ರವೀಂದ್ರನಾಥ್ ಟ್ಯಾಗೋರ್,ಸುಭಾಷ್ ಚಂದ್ರ ಬೋಸ್,ಪರಮಹಂಸ ಯೋಗಾನಂದ,ಜಗದೀಶ್ ಚಂದ್ರ ಬೋಸ್,ಶ್ಯಾಂ ಪ್ರಸಾದ್ ಮುಖರ್ಜಿ.ಹೀಗೆ ಖ್ಯಾತ ನಾಮ ಬಂಗಾಳಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಈಗ, “ಭಾರತ ಇಂದು ಸಾಧಿಸುವುದನ್ನು ಬಂಗಾಳ ನಾಳೆ ಸಾಧಿಸಬಲ್ಲದೇ?” ಎಂದು ಕೇಳಿಕೊಳ್ಳುವ ಸಮಯ ಬಂಗಾಳಿಗಳಿಗೇ ಬಂದಿದೆ.ಮುಸ್ಲಿಮರನ್ನು ಅತಿಯಾಗಿ ಓಲೈಸುವ ಕಮುನಿಸ್ಟರು ಮತ್ತು ಮಮತಾ ಬ್ಯಾನರ್ಜಿಯಂತಹ ರಾಜಕಾರಣಿಗಳ ಕೈಯಲ್ಲಿ ಸಿಕ್ಕ ಬಂಗಾಳ ಶತಮಾನಗಳಷ್ಟು ಹಿಂದಕ್ಕೆ ಸಾಗುತ್ತಿದೆ.
ಇನ್ನೊಂದೆಡೆ ಇದು ಕೇವಲ ಬಂಗಾಳ ರಾಜ್ಯದ ಸಮಸ್ಯೆಯೆಂದು ಕೈ ಕಟ್ಟಿ ಕೂರುವಂತೆಯೂ ಇಲ್ಲ. ಮಾಲ್ಡಾ,ಮುರ್ಶಿದಬಾದ್,ದಿಂಜಾಪುರ ಹೀಗೆ ಬಂಗಾಳ,ಬಿಹಾರದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಬಾಂಗ್ಲಾ ನುಸುಳುಕೋರರಿಗೆ ಕಡಿವಾಣ ಹಾಕದಿದ್ದರೇ, ಬಂಗಾಳದ ಹಿಂದೂಗಳಿಗೆ ಕಾಶ್ಮೀರಿ ಪಂಡಿತರ ಸ್ಥಿತಿ ಬಂದರೇ ಆಶ್ಚರ್ಯವಿಲ್ಲ.ಅಂತದ್ದೊಂದು ದಿನ ಬರದಂತೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸ ಬೇಕಿದೆ ಮತ್ತು ಧಾರ್ಮಿಕ ಭಾವನೆಯ ನೆಪದಲ್ಲಿ ಇಂತ ದುಷ್ಟ ಆಟಾಟೋಪಗಳಲ್ಲಿ ತೊಡಗುವವರಿಗೆ ಸ್ಥಳೀಯ ಸರ್ಕಾರಗಳು ಕಠಿಣ ಶಿಕ್ಷೆ ಕೊಡುವ ಮೂಲಕ ಕಡಿವಾಣ ಹಾಕದಿದ್ದರೇ ಈ ಮನಸ್ಥಿತಿ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ.ಸಮಾಜದ ಹಿತದೃಷ್ಟಿಯಿಂದ ಇದು ಅನಾಹುತಕಾರಿಯಾದ ಬೆಳವಣಿಗೆ.
ಇವರು ಗುಂಪುಗೂಡಿ ಪ್ರತಿಭಟನೆಗಿಳಿದಾಗಲೆಲ್ಲ ಹೀಗೇಕೆ ದಾಂಧಲೆ/ಗಲಭೆಗಳಾಗುತ್ತವೆ ಎನ್ನುವ ಪ್ರಶ್ನೆಯೊಂದನ್ನು ಅವರದೇ ಸಮುದಾಯದ ಹಿರಿಯರು ಕೇಳಿಕೊಳ್ಳಬೇಕಿದೆ.ನಮ್ಮ ಮುಂದೆ ಹಲವು ಉದಾಹರಣೆಗಳಿವೆ.ಶಿವಮೊಗ್ಗ-ಹಾಸನದಲ್ಲಿ ಶುರುವಾದ ಪ್ರತಿಭಟನೆಯಿದ್ದಿರಬಹುದು.ಅಥವಾ ಇತ್ತೀಚೆಗೆ ಸಂಘಟನೆಯೊಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡ ಮೆರವಣೆಯಿದ್ದಿರಬಹುದು, ಕೊಡಗಿನಲ್ಲಿ ನಡೆದ ಟಿಪ್ಪು ಜಯಂತಿಯ ಮೆರವಣಿಗೆಯಿದ್ದಿರಬಹುದು. ಮಾಲ್ಡಾವೇ ಇರಬಹುದು ಅಥವಾ ಮುಂಬೈನ ಆಜಾದ್ ಮೈದಾನವೇ ಇರಬಹುದು.ಈ ಬಗ್ಗೆ ಮುಸ್ಲಿಂ ಬುದ್ಧಿಜೀವಿಗಳು, ಮುಖಂಡರೇಕೆ ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ? ಮುಸ್ಲಿಮರಲ್ಲಿ ಇನ್ನು ದೊಡ್ಡ ವರ್ಗವೊಂದು ಹೊಸ ಶಿಕ್ಷಣಕ್ಕೇ ತೆರೆದುಕೊಳ್ಳದೇ,ಧಾರ್ಮಿಕ ಶಿಕ್ಷಣಕ್ಕೇ (ಧಾರ್ಮಿಕ/ಬಡತನ ಹಾಗೂ ಸಮುದಾಯಕ್ಕೆ ಕಟ್ಟು ಬಿದ್ದು) ಜೋತು ಬಿದ್ದಿರುವುದೂ ಒಂದು ಪ್ರಮುಖ ಕಾರಣವಿದ್ದಿರಬಹುದು.ಜೊತೆಗೆ ಓಲೈಕೆ ಮಾಡುವ ಸೆಕ್ಯುಲರ್ ರಾಜಕಾರಣಿಗಳು ಇವರನ್ನು ವೋಟ್ ಬ್ಯಾಂಕಿನಂತಷ್ಟೇ ಬಳಸಿಕೊಳ್ಳುತಿದ್ದಾರೆ.ಈ ಕಾರಣದಿಂದಾಗಿಯೇ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಶಿಕ್ಷಣ,ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು.ಕಾರಣಗಳು ಏನೇ ಇದ್ದಿರಲಿ, ತಮ್ಮದೇ ಸಮುದಾಯದ ಯುವಕರು ಹೇಗೆ ದುಷ್ಟ ಶಕ್ತಿಗಳ ಬಳಿ ದಾಳವಾಗುತಿದ್ದಾರೆ ಎಂಬುದನ್ನೂ ಅರಿತೂ ಸುಮ್ಮನಿರುವ ಮುಸ್ಲಿಂ ಬುದ್ಧಿಜೀವಿಗಳು, ಮುಖಂಡರು ನಿಜಕ್ಕೂ ಆ ಸಮುದಾಯಕ್ಕೆ ಅನ್ಯಾಯ ಮಾಡುತಿದ್ದಾರೆ.
(ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ)