ವಿಷಯದ ವಿವರಗಳಿಗೆ ದಾಟಿರಿ

ಜನವರಿ 22, 2016

1

ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ

‍ನಿಲುಮೆ ಮೂಲಕ

– ಸಂದೀಪ್ ಶರ್ಮಾ ಮೂಟೇರಿ

ಕನ್ನಡ ಪತ್ರಿಕೆಗಳುವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು ಎಂದು ತಿಳಿದು ಮೊಗಸಾಲೆಗೆ ಹೋಗಿ ನೋಡಿದರು ಪತ್ರಿಕೆಯ ಸುಳಿವಿಲ್ಲ. ಧರ್ಮಪತ್ನಿ ಒಗೆದಿದ್ದ ಬಟ್ಟೆಯನ್ನು ಹರಗಲು ಮೊಗಸಾಲೆಗೆ ಆಗಮಿಸಿದಾಗ ನಾನು ಪತ್ರಿಕೆಯವನಿಗಾಗಿ ಕಾಯುತ್ತಿರುವುದನ್ನು ಕಂಡು “ಏನು ಇಲ್ಲಿ ನಿಂತಿದ್ದೀರಿ?” ಎಂದು ಪ್ರಶ್ನಿಸಿದಳು. ನಾನು “ಪತ್ರಿಕೆಯವ ಇನ್ನು ಬರಲಿಲ್ಲವಲ್ಲ” ಎಂದೆ, ಅವಳು ಪುನರುಚ್ಚಿಸಿದಳು “ಎಲ್ರೀ ಬರ್ತಾನೆ, ಇವತ್ತು ಪತ್ರಿಕೆ ಬರೊಲ್ವಲ್ಲ, ನೆನ್ನೆ ಆಯುಧ ಪೂಜೆ ನಿಮಿತ್ತ ರಜೆ ಅಲ್ವೆ? ” ಎಂದಳು. ಹೌದಲ್ಲ, ನೆನ್ನೆ ತಾನೆ ಓದಿದ್ದ ನಾನು ಅಷ್ಟು ಬೇಗ ಮರೆತೆನೆ? ಎಂದು ಹಿಂದಿನ ದಿನದ ಬೆಳಗಿನ ಜಾವದ ಸಂದರ್ಭವನ್ನು ನೆನೆಸಿಕೊಂಡು ಒಳಗೆ ಬಂದೆ. ಬೆಳಗಿನ ಜಾವದ ಅಭ್ಯಾಸಬಲದಿಂದ ಮೊದಲು ಹುಡುಕುವುದೆ ಆ ದಿನದ ದಿನಪತ್ರಿಕೆಯನ್ನು, ವಾಚಕನ ದಿನಚರಿಯೆ ಹಾಗಲ್ಲವೆ?

ಒಳಗೆ ಬಂದರೆ ಕುಳಿತುಕೊಳ್ಳಲಾಗುತ್ತಿಲ್ಲ, ಕಾಫಿ ಹೀರುತ್ತಿದ್ದರು ಅದರ ರುಚಿಯು ಮನಸ್ಸಿಗೆ ನಾಟುತ್ತಿಲ್ಲ, ಅಂತರ್ಜಾಲ ಮೂಲಕ ಈ – ಪೇಪರ್ ಮೂಲಕವಾದರು ಸುದ್ದಿಗಳನ್ನು ತಿಳಿಯೋಣವೆಂದರೆ ಅಲ್ಲಿಯು ಇಲ್ಲ. ಸುದ್ದಿಗಳು ಜಾಲತಾಣದಲ್ಲಿ ದೊರಕುವುದರು ಕೂಡ ಪತ್ರಿಕೆಯನ್ನು ಕೈಯಲ್ಲಿ ಹಿಡಿದಷ್ಟು ಸಂತುಷ್ಟ ಮನೋಭಾವ ಹೊಂದಲು ಸಾಧ್ಯವೇ ಇಲ್ಲ. ವಿಧಿಯಿಲ್ಲದೆ ಹತ್ತು ದಿನಗಳ ಹಿಂದಿನ ಪತ್ರಿಕೆಯನ್ನು ಓದೋಣವೆಂದು ಅಂದುಕೊಂಡು ಹಳೆಯ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಸಕಲ ಸುದ್ದಿಗಳು ಮನನ ಮಾಡಿದಂತೆ ಅದರ ಪದಗಳ ಲಾಲಿತ್ಯವು ಮನಸ್ಸಿಗೆ ನಾಟುತ್ತಿತ್ತು. ಕೂಡಲೇ ಎತ್ತಿಟ್ಟೆ. ನನ್ನ ತೊಳಲಾಟ ನೋಡಲಾರದೆ “ಏನ್ರಿ ! ಮುಖ್ಯವಾದ ವಸ್ತುವನ್ನು ಕಳೆದುಕೊಂಡವರ ತರಹ ಅತೃಪ್ತಿಯನ್ನು ಹೊಂದಿರುವವರಂತೆ ಕಾಣುತ್ತೀರಿ” ಎಂದಳು. “ಇವತ್ತಿನ ದಿನಪತ್ರಿಕೆ ಇಲ್ಲವಲ್ಲೆ” ಎಂದೆ. “ಅಯ್ಯೋ, ನೀವೋ…ನಿಮ್ಮ ದಿನಪತ್ರಿಕೆಯೋ..”ಎಂದು ಮೂದಲಿಸಿದಳು. “ನಿನಗೇನೆ ಗೊತ್ತು ಬಿಸಿ ಬಿಸಿ ಸುದ್ಧಿ ಹೇಳುವ ದಿನಪತ್ರಿಕೆಯ ತೂಕದ ವಿಷಯಗಳು” ಎಂದೆ. ತಲೆಚಚ್ಚಿಕೊಂಡು ತನ್ನ ಕೆಲಸದಲ್ಲಿ ಮಗ್ನಳಾದಳು. ನಾನು ನಿಂತಲ್ಲಿಯೆ ನಿಂತೆ ತೊಳಲಾಟವನ್ನು ಸಹಿಸಿಕೊಂಡು.

ದಿನವೂ ಬೆಳಿಗ್ಗೆ ಎದ್ದ ಕೂಡಲೇ ನಾವು ಕಣ್ಣಾಡಿಸುವುದು ಪತ್ರಿಕೆಯ ಮುಖ್ಯಾಂಶಗಳಲ್ಲಿ, ಸ್ನಾನ ಮಾಡುವಾಗಲು ಕೂಡ ಒಮ್ಮೊಮ್ಮೆ ಆ ಮುಖ್ಯಾಂಶದ ಒಳ ತಿರುಳುಗಳ ಯೋಚನೆ ಏನಿರಬಹುದು ಎಂದು. ಕೂಡಲೆ ಸಿದ್ಧವಾಗಿ ಪತ್ರಿಕೆಯನ್ನು ಹಿಡಿದುಕೊಂಡು ಸುದ್ದಿಗಳನ್ನು ಓದುತ್ತ ಕುಳಿತರೆ ಒಂದು ಘಂಟೆಗು ಮಿಗಿಲಾಗಿ ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ, ಗಡಿಯಾರ ನೋಡಿಕೊಂಡು ಗಬಗಬನೆ ತಿಂಡಿ ತಿಂದು ದಡದಡನೆ ಮನೆ ಬಿಡುವ ಸಂದರ್ಭ ಹಲವು ಬಾರಿ ನನಗೆ ಸಂಘಟಿಸಿದೆ. ಯಾರಿಗೆ ಈ ರೀತಿಯ ಅನುಭವವಾಗುವುದಿಲ್ಲ? ಹೇಳಿ.

“ಆಯುಧ ಪೂಜೆ ಪ್ರಯುಕ್ತ ನಮ್ಮ ಕಾರ್ಯಾಲಯಕ್ಕೆ ಬಿಡುವು ಆದ್ದರಿಂದ ನಾಳಿನ ಸಂಚಿಕೆಯು ಪ್ರಕಟವಾಗುವುದಿಲ್ಲ” ಎಂದು ಓದುತ್ತಿದ್ದಂತೆ ಮನಸ್ಸಿಗೆ ತಿವಿದ ಹಾಗೆ ನೋವು, ನಾಳೆ ಪತ್ರಿಕೆಯನ್ನು ಕಳೆದುಕೊಳ್ಳಬೇಕಲ್ಲ ಎಂದು. ದಸರಾ ಹಬ್ಬ ರಜೆಯೊಂದೆ ಅಲ್ಲ, ದೀಪಾವಳಿ ಹಬ್ಬವಾಗಲಿ, ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕೂಡ ದಿನಪತ್ರಿಕೆಯನ್ನು ಕಳೆದುಕೊಳ್ಳುವ ಪ್ರಸಂಗವು ಬರುತ್ತದೆ. ಆ ಸಮಯದಲ್ಲೂ ಕೂಡ ಹಿಂಸೆ, ದಿನವೂ ಕಾಫಿ ಲೋಟವನ್ನು ಹಿಡಿದು ಪತ್ರಿಕೆಯನ್ನು ಓದುತ್ತಿದ್ದರೆ ಅದರಲ್ಲಿ ಸಿಗುವ ಮಜವೇ ಬೇರೆ. ಕಾಫಿ ಹೀರುತ್ತ ಪತ್ರಿಕೆಯಲ್ಲಿರುವ ಸುದ್ದಿಗಳತ್ತ ಕಣ್ಣಾಡಿಸುತ್ತಿದ್ದರೆ ಬೆಳಗಿನ ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ. ಅಪರಾಧದ ಸುದ್ದಿಗಳು, ರಾಜಕಾರಣಿಗಳ ಹಗರಣಗಳು, ಸಂಪಾದಕೀಯ, ವಾಚಕರ ಪತ್ರಗಳು, ಅನಿಸಿಕೆ, ಅಭಿಪ್ರಾಯಗಳು ಹೀಗೆ ಹಲವಾರು ಸುದ್ದಿಗಳು ಮನಸ್ಸಿಗೆ ಕಾಫಿಯ ಜೊತೆಗೆ ಅರಗದಿದ್ದರೆ ಆ ದಿನವು ಉದಾಸೀನದಿಂದ ಕಳೆಯಬೇಕಾಗುತ್ತದೆ. ಯಾವುದಕ್ಕೂ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ತೆರಳಿ ಕೆಲಸ ಶುರುಮಾಡಲು ಕಷ್ಟ, ಒತ್ತಿಕೊಂಡು ಬರುವ ಹಿಂಸೆ ಯಾರ ಬಳಿಯು ಹೇಳಲಾಗುವುದಿಲ್ಲ. ಮುನ್ನೂರ ಅರವತ್ತೈದು ದಿನಗಳಲ್ಲಿ ನಾಲ್ಕು ದಿನದ ಮಟ್ಟಿಗೆ ಪತ್ರಿಕಾಲಯಕ್ಕೆ ಬಿಡುವಿದ್ದರೆ ನನ್ನಂತಹ ವಾಚಕರಿಗೆ ಆ ಮುನ್ನೂರ ಅರವತ್ತೈದು ದಿನವೂ ಪತ್ರಿಕೆಯು ಬರಲಿಲ್ಲವೇನೋ ಎಂಬಂತೆ ಗ್ರಾಸವಾಗುತ್ತದೆ. ನಿಜಕ್ಕೂ ಇಡೀ ವಾಚಕರಿಗು ಈ ಹಿಂಸೆಯು ಅನಿಸಿರಲಿಕ್ಕೂ ಸಾಕು. ಅನಿಸಿಯೇ ಅನಿಸಿರುತ್ತದೆ, ಹೇಳಿಕೊಳ್ಳಲು ಕಷ್ಟ ಅಷ್ಟೆ. ಮಾಸ ಪತ್ರಿಕೆಗಳು ಕೂಡ ಓದಿ ಮುಗಿಸಿದ್ದರು ಕೂಡ ದಿನಪತ್ರಿಕೆ ಓದೆ ತೀರಬೇಕು ಎನ್ನುವ ಹಂಬಲ.

ಕಾರ್ಯಾಲಯವು ಬಿಡುವು ಪಡೆದು ಪುನಃ ಕೆಲಸವನ್ನು ಶುರುಮಾಡಿ ಎಂದಿನಂತೆ ಪತ್ರಿಕೆಯನ್ನು ಪ್ರಕಟಿಸಿದ ದಿನ ಮುಂಜಾನೆಯು ಪತ್ರಿಕೆಯನ್ನು ಹಿಡಿಯುತ್ತಿದ್ದಂತೆ ಸುದ್ದಿಗಳನ್ನು ಓದುವಾಗ ಉಪವಾಸ ಮುಗಿಸಿ ಔತಣಕೂಟದಲ್ಲಿ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದಂತಹ ಅನುಭವ, ಅಷ್ಟೂ ಸುದ್ದಿಗಳನ್ನು ಪತ್ರಿಕೆಯು ಓದಿಸುತ್ತದೆ. ಸುಮ್ಮನೆ ಪತ್ರಿಕೆಗಳನ್ನು ಹೊರ ತರುವ ಸಿಬ್ಬಂದಿ ವರ್ಗದವರನ್ನು ಹೊಗಳುತ್ತಿಲ್ಲ ಅವರುಗಳು ನೀಡುವ ಮಾಹಿತಿ, ಬಿಸಿ ಬಿಸಿ ಸುದ್ದಿಗಳಿಗೆ ವಾಚಕನು ಮಾರುಹೋಗುತ್ತಾನೆ. ಎಂತಹ ಪರಿಸ್ಥಿತಿ ನನ್ನಂತಹ ವಾಚಕನಿಗೆ ಒದಗಿದೆ ಎಂದರೆ ಅವತ್ತಿನ ದಿನಪತ್ರಿಕೆ ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟಿಗೆ ಬಂದು ತಲುಪಿದೆ, ಇಂತಹ ಪರಿಸ್ಥಿತಿಗೆ ಅವಾಚಕರು (ಪತ್ರಿಕೆಯನ್ನು ಓದದೆ ಇರುವವರು) ಮನಸ್ಸಿನಲ್ಲೆ ಆಡಿಕೊಳ್ಳುವುದು ಹೆಚ್ಚು, ಅದು ನಮಗೆಲ್ಲ ತಿಳಿದದ್ದೆ. ಹೇಗೆ ಬೆಳಗಿನ ಕರಿ ಕಷಾಯವನ್ನು ತ್ಯಜಿಸಲು ಆಗುವುದಿಲ್ಲವೋ ಹಾಗೆಯೇ ನೆಚ್ಚಿನ ದಿನಪತ್ರಿಕೆಯನ್ನು ಓದದೆ ಇರಲಾಗುವುದಿಲ್ಲ. ಓದಿಕೊಂಡವನಿಗೆ ಗೊತ್ತು ಜ್ಞಾನ ಮತ್ತು ವಿವೇಕದ ಮರ್ಮ, ನೀವೇನಂತೀರಿ?

Read more from ಲೇಖನಗಳು
1 ಟಿಪ್ಪಣಿ Post a comment
  1. Goutham
    ಜನ 23 2016

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments