ವಿಷಯದ ವಿವರಗಳಿಗೆ ದಾಟಿರಿ

ಜನವರಿ 25, 2016

1

ರೋಹಿತಾಶ್ವನು ಅಲ್ಲಿಂದ ಬರೆದ ಪತ್ರ

‍ನಿಲುಮೆ ಮೂಲಕ

– ವಿಕ್ರಂ ಜೋಷಿ

ಕೊನೆಯ ಪತ್ರನೀವು ಇನ್ನೂ ನನ್ನ ಗುಂಗಿನಲ್ಲೇ ಇದ್ದೀರಂತ ಗೊತ್ತು. ನನ್ನ ಹೆಸರುವಾಸಿ ಮಾಡಿ, ನನ್ನ ವಂಶವನ್ನು ರಸ್ತೆಯಮೇಲೆ ತಂದ ಮಾಧ್ಯಮದವರಿಗೆ,ವೈಚಾರಿಕ ರಾಜಕಾರಣಿಗಳಿಗೇ ಧನ್ಯವಾದಗಳು. ನನ್ನಂತಹವರ ಸಾವಿಗೇ ಕ್ಯಾಮರಾ ಕಟ್ಟಿಕೊಂಡು ಕಾಯುತ್ತಿರುತ್ತಾರೆ.ನಿಜ ಬಯಲಿಗೆ ಬರಲಿ,ನೀವೆಲ್ಲಾ ಓದಲಿ ಅಂತ ಈ ಶೋಕ ಪತ್ರ ಬರೆದಿದ್ದು. ನನಗೆ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ತುಂಬಾ ಬೇಸರವಿದೆ.ನನ್ನದು ನಿಜವಾಗಿಯೂ ಆತ್ಮಹತ್ಯೆ ಅಲ್ಲ, ಕೊಲೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಿರುವ ಈ ದೇಶದ ವಿರುದ್ಧ ಕೆಲ ದೇಶದ್ರೋಹಿಗಳು ಮಾಡುತ್ತಿರುವ ಸಂಚಿಗೆ ನಾನೂ ಒಬ್ಬ ಬಲಿ.ಕಡೆಗಾಲದಲ್ಲಿ ನನಗೆ ಸತ್ಯ ಅರಿವಾದರೂ, ಕಾಲ ಮಿಂಚಿ ಹೋಗಿತ್ತು. ಒಮ್ಮೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವ ಪ್ರವೃತ್ತಿ ನನ್ನದಲ್ಲ, ಇದನ್ನು ನೋಡಿಯೇ ಅಂದು ನನಗೆ ನೀನು ನಮ್ಮ ಮುಂದಿನ ನಾಯಕ ಎಂಬ ಮಹಾದಾಶೆ ತೋರಿಸಿದ್ದರಬೇಕು.

ಕಾಲೇಜಿಗೆ ಸೇರಿದಾಗಿನಿಂದ ನನಗೆ ಒಂದು ದಿನವೂ ಓದಲು ಅವಕಾಶ ಸಿಕ್ಕಿಲ್ಲ.”ನೀನು ಹಿಂದುಳಿದವ ಹಿಂದುಳಿದವ ಹೋರಾಡಬೇಕು”ಎಂಬ ಮಾತನ್ನು ಹೇಳಿ ಹೇಳಿ ನನ್ನ ಮನಸ್ಸು ತಿರುಗಿಸಿ ಬಿಟ್ಟರು,ಮೊದಲೇ ಬಿಸಿ ರಕ್ತದ ಯುವಕ.ನಾನು ನಂಬಿ ಕೆಟ್ಟೆ.ಕಾಲೇಜಿನಲ್ಲಿ ಓದುವುದನ್ನು ನಿಲ್ಲಿಸಿ ಹೀಗೆ ಹೋರಾಡುವುದನ್ನೇ ಮುಖ್ಯ ಭಾಗವಾಗಿ ಪರಿಗಣಿಸತೊಡಗಿದೆ, ಹೋರಾಡಿದ್ದಕ್ಕೆ ಬೇಸರವಿಲ್ಲ ಆದರೆ ಯಾಕೆ ಹೋರಾಡಿದೆ? ಯಾರಿಗೆ ಹೋರಾಡಿದೆ? ಯಾರು ಲಾಭ ಪಡೆದುಕೊಂಡರು? ಇಂದು ನನಗೆ ಅರ್ಥವಾಗುತ್ತಿದೆ, ಇಲ್ಲಿಯ ಮೆಟ್ಟಿಲಿನ ಮೇಲೆ ಕೂತು ನೋಡಿದಾಗ.

ಪತ್ರಿಕೆಗಳಲ್ಲಿ ಬಂದ ಹಾಗೆ ಹುಟ್ಟಾ ನಾನೊಬ್ಬ ದಲಿತ ಅಲ್ಲ, ಬ್ರಾಹ್ಮಣ ಅಲ್ಲ,ಆ ಜಾತಿ ಈ ಜಾತಿಗೆ ಸೇರಿದವನಲ್ಲ. ನಾನೊಬ್ಬ ಮಗುವಾಗಿದ್ದೆ. ನನಗೂ ಕನಸುಗಳಿತ್ತು. ಆದರೇನು ಮಾಡುವುದು ಶಾಲೆಗೆ ಸೇರಿದಾಗಿನಿಂದ ಈ ಕೆಳಜಾತಿ, ಮೇಲುಜಾತಿಯ ಬೇಧದ ರುಚಿ ಹತ್ತಿಬಿಟ್ಟಿತು. ಅಂಬೇಡ್ಕರ್ ಎಂತಹ ಮಹಾನ್ ವ್ಯಕ್ತಿ, ಸಂವಿಧಾನ ಶಿಲ್ಪಿ. ಅವರ ಹೆಸರನ್ನು ಬಳಸಿಕೊಂಡು ಕೆಲವು ಸಂಘಟನೆಗಳು ಇಂದು ಸ್ವಾರ್ಥ ಸಾಧನೆಗೆ ಹೊರಟಿದ್ದಾರೆ. ಕಾಲಕಾಲಕ್ಕೆ ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೆ, ಆದರೆ ಅವರು ‘ಇತಿಹಾಸ’ವನ್ನು ತಿರುಚಲಾಗಿದೆ ಎನ್ನುತ್ತಿದ್ದರು. ವಾಸ್ತವಿಕವಾಗಿ ಇವರುಗಳೇ ಇತಿಹಾಸವನ್ನು ತಿರುಚಿದ್ದು. ಇಂದು ಗುರುತ್ವಾಕರ್ಷಣವನ್ನು ಮೀರಿ ಬಂದು ಕಾಲಾತೀತವಾದಾಗ ನನಗೆ ಅದು ಕಾಣಿಸುತ್ತಿದೆ. ಹಾಗೆಯೆ ಇತಿಹಾಸವನ್ನು ನೋಡಿದಾಗ, ಇತ್ತು …ಈ ಅಸ್ಪೃಶ್ಯತೆ ಇತ್ತು. ಆದರೆ ಇಂದು ಅದು ಸಮಾಜದಲ್ಲಿ ಉಳಿದಿಲ್ಲ ಎಂಬ ಕಹಿ ಸತ್ಯ ಸಾಕಷ್ಟು ಮಂದಿಗೆ ಜೀರ್ಣವಾಗುವುದಿಲ್ಲ. ಆದರೆ ನನಗೆ ಆ ಕಹಿ ಸತ್ಯ ವನ್ನು ಹೇಳಲೂ ಯಾರೂ ಬಿಡಲಿಲ್ಲ. ನನ್ನ ವಿದ್ಯಾರ್ಥಿವೇತನ, ಮೀಸಲಾತಿ ಎಲ್ಲದಕ್ಕೂ ಧಕ್ಕೆ ಬರುವುದು ಎಂಬ ಹೆದರಿಕೆ ಮೂಡಿಸಿದ್ದರು.

ಇಂದು, ವಿದ್ಯಾರ್ಥಿ ಜೀವನದಲ್ಲಿ ಕಾಲೇಜು/ಶಾಲೆ ಸೇರುವಾಗ ಅರ್ಜಿಯಲ್ಲಿ ಬಿಟ್ಟರೆ ಮತ್ತೆಲ್ಲಿ ಯಾವ ಜಾತಿ, ಮತ, ಪಂಥ ಎಂಬ ಭೇದಬಾವ ಇದೆ? ಗೆಳೆತನ ಮಾಡುವಾಗ, ಪಕ್ಕದಲ್ಲಿ ಕೂತಿಕೊಳ್ಳುವಾಗ, ಊಟ ಮಾಡುವಾಗ, ವಿದ್ಯಾರ್ಥಿನಿಲಯದಲ್ಲಿ ಇರುವಾಗ ಎಲ್ಲಾದರೂ ಯಾರಾದರೂ ಕೇಳುತ್ತಾರೆಯೇ? ನಿಮ್ಮ ಜಾತಿ ಯಾವುದು …ದಲಿತನೋ, ಓಬಿಸಿಯೋ, ಲಿಂಗಾಯತನೋ, ಅಥವಾ ಬ್ರಾಹ್ಮಣನೋ ಎಂದು. ನಾವು ಅನವಶ್ಯಕವಾಗಿ ಒಂದು ವಿಜ್ಞಾನಿಯಾಗುವ ಕನಸನ್ನು ಕಳೆದುಕೊಂಡೆ, ವಿಜ್ಞಾನ ಎಂದೂ ಹೇಳಲಿಲ್ಲ ನೀನು ಆ ಜಾತಿಯವು ನಿನಗೆ ನಾನು ಕಲಿಸುವುದಿಲ್ಲ ಎಂದು. ನನ್ನ ‘ಆ’ ಪತ್ರದ ಕೊನೆಯಸಾಲುಗಳು ವಿವೇಕಾನಂದರ ಮಾತುಗಳೇ – I am responsible for whatever I am now.

ಇಲ್ಲಿ ಬಂದು ಸೇರಿದ್ದೇನೆ, ಹೀಗಾಗಿ ಬಿಡುವಿನಲ್ಲಿ ಬರೆದ ಪತ್ರ. ಜಾಸ್ತಿ ಸಮಯವಿಲ್ಲ.ನನ್ನಂತಹ ಕನಸುಗಳನ್ನು ಹೊತ್ತ ಯುವಕರಿಗೆ ಒಂದೆರಡು ಹಿತನುಡಿ ಹೇಳಬಯಸುತ್ತೇನೆ. ಮೊದಲನೆಯದು: ಯಾವುದಾದರೂ ಒಂದು ರಂಗವನ್ನು ಆರಿಸಿಕೊಳ್ಳಿ. ನನ್ನಹಾಗೆ ವಿಜ್ಞಾನಿಯಾಗಬೇಕು ಎಂದು ಕನಸುಕಂಡು, ಯಾವುದೋ ಅರೆ ಅರಿತ ತತ್ವವಾದಿಗಳ ಜೊತೆ ಬೆರೆತು, ರಾಜಕೀಯದಲ್ಲಿ ಹೀರೋ ಆಗುತ್ತೇನೆ ಎಂದು ಹೋದರೆ, ಅಲ್ಲಿ ಸಿಗುವುದು ತಪ್ಪಿಸಿಕೊಳ್ಳಲಾಗದ ನಿರಾಶೆಯ ಹೊಂಡ ಮಾತ್ರ. ಭಾರತದಲ್ಲಿ ಪ್ರಶಸ್ತಿಗಳ ದಾಹಕ್ಕೆ, ರಾಜಕೀಯ ರಂಗಕ್ಕೆ ಮಾತ್ರ ಈ ಜಾತಿ,  ಮತ, ಪಂಥಗಳ ಅವಶ್ಯಕತೆ ಇದೆಯೇ ಹೊರತು ಒಳ್ಳೆಯ ಲೇಖಕನಾಗಲು, ವಿಜ್ಞಾನಿಯಾಗಲು, ಎಲ್ಲಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ನಾಗರಿಕನಾಗಲು ಅದು ಬೇಡ, ಬರೀ ಸಂವಿಧಾನ ಸಾಕು.

ಎರಡನೆಯದಾಗಿ, ಈ ಕೇಸರಿಕರಣ, ಹಸಿರುಕರಣ, ಬಿಳಿಕರಣ ನನ್ನ ಜೀವನದ ದೊಡ್ಡ ಭ್ರಮೆಗಳು. ನಿಜವಾಗಿ ನನಗೆ ದೇಶಪ್ರೇಮ ಬಡಿದು ಎಚ್ಚೆತ್ತುಕೊಂಡಿದ್ದರೆ ಈ ಮೂರು ಬಣ್ಣಗಳನ್ನು ಒಂದೇ ಭಾವುಟದಲ್ಲಿ ನೋಡುತ್ತಿದ್ದೆ. ಸಾಧ್ಯವಾದರೇ,ನೀವು ನೋಡಿ. ಎಲ್ಲರೂ ತಮ್ಮ ತಮ್ಮ ಸ್ವಾರ್ಥಕ್ಕೆ ತಮ್ಮ ತಮ್ಮ ಬಣ್ಣಗಳ ಪರವಾಗಿ ನಡೆಯುತ್ತಾರೆ, ನೀವು ನಡೆಯಿರಿ. ಆದರೆ ಆ ಬಣ್ಣಗಳು ಚೆಲ್ಲಿ ಕನಸಿನ ಚಿತ್ರಗಳು ಅಳಿಸಿಹೋಗಬಾರದು. ನನ್ನಲ್ಲಾದಂತಹ ದ್ವಂದ್ವವನ್ನು ತೊರೆಯಿರಿ. ನನ್ನಂತಹ ಬಲಹೀನ ಮುಗ್ಧರನ್ನೇ ಈ ರಾಜಕೀಯ ಪಿಶಾಚಿಗಳು ಬಲಿತೆಗೆದುಕೊಳ್ಳುವದು ತಮ್ಮ ಸಾಮ್ರಾಜ್ಯವನ್ನು ವಿಸ್ತಾರಮಾಡಲಿಕ್ಕೆ. ಜೋಷ್ ಜೊತೆ ಸ್ವಲ್ಪ ಜಾಗ್ರತೆ ಇರಲಿ.

ಕೊನೆಯದಾಗಿ, ನನ್ನಂತಾಗದಿರಿ. ನಾನು ಮಾಡಿದ್ದು ತಪ್ಪು. ಇವತ್ತಿಗೂ ಅದೇ ಹೇಳುತ್ತಿದ್ದೇನೆ- ಒಂದು ಯಾಕೂಬನನ್ನು ಗಲ್ಲಿಗೆ ಹಾಕಿ, ನೂರು ಯಾಕೂಬರು ಹುಟ್ಟುತ್ತಾರೆ. ಆದರೆ ಈಗ ಹೇಳುವ ಅರ್ಥ ಬೇರೆ. ಯಾಕೂಬ ನೂರು ಹುಟ್ಟಿದರೇನು? ಬೆಳೆಯಲು ಕೊಡಬೇಡಿರಿ. ನಮ್ಮಲ್ಲೇ ಒಬ್ಬರು ಹೀಗೆ ಯಾಕುಬ್ ಆಗುವುದು.ಒಂದು ಮುಗ್ಧ ಸಾವಿನ ಕಥೆ, ವ್ಯಥೆ ನನಗೆ ಗೊತ್ತು,  ಅವನು ನೂರಾರು ಮುಗ್ಧ ಜೀವಗಳನ್ನು ಕೊಂದ ಪಾಪಿ. ಇಲ್ಲೇ ಕೊಳೆಯುತ್ತಿದ್ದಾನೆ, ನರಕದಲ್ಲಿ. (ಅ)ವಿಚಾರವಾದಿಗಳು,  (ಅರೆ)ತತ್ವಜ್ಞಾನಿಗಳ ಆಳವನ್ನು ಅರಿಯಿರಿ. ಅವರ ಆಳದಲ್ಲಿ ಏನು ಇಲ್ಲ, ಹೊರಗಡೆ ಸಮೋಸ ಒಳಗಡೆ ಕಕ್ಕಸ. ಯುವಜನಗರೇ ಜಾಗೃತರಾಗಿರಿ. ನನ್ನ ಸಾವು ತಪ್ಪು ದಾರಿಯನ್ನು ತಪ್ಪಿಸಲಿ. ಐಡಿಯಾಲಜಿಯ ಅಫೀಮು ಕುಡಿದವರುನಮ್ಮನ್ನು ಕಬ್ಬಿನ ಹಾಗೆ ಜಗಿದು ಹೀರಿ ಬೀಸಾಡುವರು ಎಂಬ ಸತ್ಯದ ಅರಿವಿರಲಿ. ನಾನು ರೋಹಿತಾಶ್ವ, ನನ್ನ ವಿನಾಶಕ್ಕೆ ನಾನೇ ಕಾರಣ.  ಬದುಕಿನ ಉದ್ದೇಶ ಏನೋ ಗೊತ್ತಿಲ್ಲ,  ಆದರೆ ಸಾವಿನ ಉದ್ದೇಶ -ನನ್ನ ಹಾಗೆ ಆಗದಿರಲಿ ನಿಮ್ಮ ಬದುಕು ಎಂಬುದು.

ಇಂತಿ,
ರೋಹಿತಾಶ್ವ

Read more from ಲೇಖನಗಳು
1 ಟಿಪ್ಪಣಿ Post a comment
  1. Samanya praje
    ಫೆಬ್ರ 1 2016

    Tumba manognavada mattu arthapurna lekhana…

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments