ನನ್ನ ಅನ್ನಭಾಗ್ಯ
– ಪ್ರೇಮಶೇಖರ
ಅದು ಆಗಸ್ಟ್ 1984. ಹದಿನೈದಿಪ್ಪತ್ತು ಕಿಲೋಮೀಟರ್ ದೂರದ ಡೆಲ್ಲಿ ಯೂನಿವರ್ಸಿಟಿಯಲ್ಲಿ ಎಂ.ಎ. ಮುಗಿಸಿ, ಮನೆಯಿಂದ ಐದಾರು ನಿಮಿಷಗಳ ನಡಿಗೆಯಷ್ಟು ಹತ್ತಿರದಲ್ಲಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಸೇರಿದ್ದೆ, ಎಂ.ಫಿಲ್.ಗಾಗಿ. ಕ್ಲಾಸುಗಳು ಆರಂಭವಾಗಿದ್ದವು.ಮನೆಯಲ್ಲಿ ನಾನೊಬ್ಬನೇ.ಉಳಿದವರೆಲ್ಲಾ ಮೈಸೂರಿಗೆ ಹೋಗಿದ್ದರಿಂದ ಹಾಗೂ ಇನ್ನೊಂದು ತಿಂಗಳವರೆಗೆ ದೆಹಲಿಗೆ ಹಿಂತಿರುಗುವ ಯೋಚನೆ ಅವರ್ಯಾರಲ್ಲೂ ಇಲ್ಲದ್ದರಿಂದ ಅಲ್ಲಿಯವರೆಗೆ ನನ್ನ ಏಕಾಂತವಾಸ ನಿರ್ವಿಘ್ನವಾಗಿ ಸಾಗುವುದು ನಿಶ್ಚಿತವಾಗಿತ್ತು.ಏಕಾಂತವಾಸವೇನೋ ನನಗಿಷ್ಟವೇ.ಓದುತ್ತಾ, ಚಿತ್ರ ಬಿಡಿಸುತ್ತಾ ಕೂತುಬಿಟ್ಟೆನೆಂದರೆ ನನಗೆ ಸುತ್ತಲ ಪ್ರಪಂಚದ ಪರಿವೇ ಇರುತ್ತಿರಲಿಲ್ಲ. ಆದರೆ ಈಗೊಂದು ಪ್ರಾಬ್ಲಂ. ಸುತ್ತಲ ಜಗತ್ತಿನ ಪರಿವೇ ಇಲ್ಲದಂತೆ ನನ್ನ ಜಗತ್ತಿನಲ್ಲಿ ನಾನಿರಲು ಅವಕಾಶ ಮಾಡಿಕೊಡುತ್ತಿದ್ದುದು ಅಕ್ಕ,ಕಾಲಕಾಲಕ್ಕೆ ಊಟತಿಂಡಿ ಚಾಯ್ ನಿಂಬುಪಾನಿಗಳನ್ನು ಸಪ್ಲೈ ಮಾಡುತ್ತಾ. ಈಗ…?
ಆದರೆ ಪವಾಡವೊಂದು ಘಟಿಸಿಬಿಟ್ಟಿತು!
ನನ್ನ ಹೊಟ್ಟೆಪಾಡಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಕ್ಕೆ ಮೊದಲೇ ನೆರೆಯ ಮೂವರು ದಯಾದ್ರ ಮಹಿಳೆಯರು ಅಕ್ಕ ಹಿಂತಿರುಗುವವರೆಗೆ ನನ್ನನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಸ್ವಇಚ್ಚೆಯಿಂದ ತೆಗೆದುಕೊಂಡುಬಿಟ್ಟರು. ಮೂವರೂ ಸೇರಿ ಸಮಾಲೋಚನೆ ನಡೆಸಿ ಮಾಸಿಕ (ಅದರಾಚೆಗೂ ವಿಸ್ತರಿಸಲನುಕೂಲವಾದ ಫ್ಲೆಕ್ಸಿಬಿಲಿಟಿ ಅನುಚ್ಚೇದಗಳನ್ನೊಳಗೊಂಡ) ಯೋಜನೆಯೊಂದನ್ನು ರೂಪಿಸಿಬಿಟ್ಟರು.ಎಲ್ಲ ನಿರ್ಧರಿಸಿಕೊಂಡ ಮೇಲೇ ನನಗೆ ಹೇಳಿದ್ದು.
ಈ ಯೋಜನೆಯ ಪ್ರಕಾರ, ನಾನು ಪ್ರತಿದಿನ ಬೆಳಿಗ್ಗೆ ನನ್ನ ಹನ್ನೆರಡು ತಾಸುಗಳ “ಫಾಸ್ಟ್” ಅನ್ನು ತಮ್ಮ ಊಟದ ಮೇಜಿನಲ್ಲಿ “ಬ್ರೇಕ್” ಮಾಡಬೇಕೆಂದು ನಮ್ಮ ಬಾಗಿಲಿಗೆ ಆರೇ ಅಡಿ ದೂರದಲ್ಲಿದ್ದ ಬಾಗಿಲಿನೊಳಗಿದ್ದ ಪಾಲ್ಘಾಟ್‍ನ ತಮಿಳು ಪೆಣ್ಮಣಿ ತಿರುಮತಿ ಜಾನಕಿ ಸೀತಾರಾಮನ್ ಕಟ್ಟಪ್ಪಣೆ ಮಾಡಿದರು.ಅವರ ಅಪ್ಪಣೆಯ ಘೋಷಣೆ ಮುಗಿಯುತ್ತಿದ್ದಂತೇ,ನನ್ನ ಲಂಚ್ ತಮ್ಮ ಅಡುಗೆಮನೆಯಲ್ಲಿ ತಯಾರಾಗುವುದಾಗಿ ಎಡಬದಿಯ ಫ್ಲಾಟ್‍ನಲ್ಲಿದ್ದ ಶಿವಮೊಗ್ಗಾದ ಕಲಾಕಾರ್ತಿ ಶ್ರೀಮತಿ ರಮಾ ಭಟ್ ತಮ್ಮ ಎಂದಿನ ಮುಗುಳುನಗೆಯೊಂದಿಗೆ ಘೋಷಿಸಿಬಿಟ್ಟರು.ನಿಮ್ಮದೆಲ್ಲಾ ಮುಗಿಯಿತಾ ಎನ್ನುವಂತೆ ಉಳಿದಿಬ್ಬರ ಕಡೆ ನೋಡಿದ ಮೇಲಿನ ಫ್ಲಾಟ್‍ನ ಬೆಂಗಳೂರಿನ ತಾಯಿಹೃದಯದ ಶ್ರೀಮತಿ ಮನೋರಮಾ ರಾವ್ ನನ್ನತ್ತ ತಿರುಗಿ ಎಂದಿನ ಮೃದುದನಿಯಲ್ಲಿ ನಿರ್ಣಯವನ್ನು ಪ್ರಕಟಿಸಿದರು: “ನಿನ್ನ ರಾತ್ರಿಯ ಊಟವನ್ನು ಸರಿಯಾಗಿ ಎಂಟೂವರೆ ಗಂಟೆಗೆ ಪ್ರತಿಮಾ ನಿನ್ನ ಊಟದ ಮೇಜಿನ ಮೇಲಿಡುತ್ತಾಳೆ.”
ಬ್ರೇಕ್‍ಫಾಸ್ಟ್ಗೆ ಇಡ್ಲಿ ಅಥವಾ ದೋಸೆ ಅಥವಾ ಅಪ್ಪಂ ಅಥವಾ ಉಪ್ಪಿಟ್ಟು, ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಐಟಂಗಳು! ಮಧ್ಯಾಹ್ನ ರೋಟಿ, ಎರಡು ಮೂರು ಬಗೆಯ ಸಬ್ಜಿಗಳು, ಅನ್ನ ಸಾಂಬಾರ್! ಹೊಟ್ಟೆ ತುಂಬಿಯೇ ಇದೆ ಅನಿಸುತ್ತಿರುವಾಗಲೇ ರಾತ್ರಿಯಾಗಿ ಅನ್ನ, ಸಾಂಬಾರು, ರಸಂ, ಮೊಸರು ಮತ್ತು ಹಪ್ಪಳ ನನ್ನ ಟೇಬಲ್ ಅಲಂಕರಿಸಿಬಿಡುತ್ತಿದ್ದವು! ಯಾರಿಗುಂಟು ಯಾರಿಗಿಲ್ಲ ಈ ಸೌಭಾಗ್ಯ!
ದಿನಗಳು ರೆಕ್ಕೆ ಕಟ್ಟಿಕೊಂಡು ಹಾರತೊಡಗಿದವು…
* * *
ಎರಡುಮೂರು ವರ್ಷಗಳ ನಂತರ ಚಳಿಗಾಲದ ಒಂದು ದಿನ. ಯಾವುದೆಂದು ನೆನಪಿಲ್ಲ, ಏನೋ ಒಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮಥುರಾ ರಸ್ತೆಯಲ್ಲಿನ ಡೆಲ್ಲಿ ಪಬ್ಲಿಕ್ ಸ್ಕೂಲ್‍ಗೆ ಹೋಗಿದ್ದೆ.ಗೆಳೆಯರ ಗುಂಪಿನಲ್ಲಿ ಅಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದವನೆಂದರೆ ನಾನು ಮಾತ್ರ.ಅವರಿಗೆಲ್ಲಾ ಜೆಎನ್‍ಯುಗೆ ಹತ್ತಿರದಲ್ಲಿನ ಪರೀಕ್ಷಾ ಕೇಂದ್ರಗಳೇ ಸಿಕ್ಕಿದ್ದವು.
ಹನ್ನೆರಡು ಗಂಟೆಗೆ ಮೊದಲ ಪೇಪರ್ ಮುಗಿಯಿತು.ಎರಡನೆಯ ಪೇಪರ್‍ಗೆ ಎರಡು ದೀರ್ಘ ತಾಸುಗಳ ಬಿಡುವು.ಲಾನ್‍ಗೆ ಕಾಲಿಟ್ಟೆ.ಅಲ್ಲಲ್ಲಿ ಗುಂಪುಗಳು.ಗಟ್ಟಿ ಗಂಟಲಿನಲ್ಲಿ ಕೊಚ್ಚಿಕೊಳ್ಳುತ್ತಿದ್ದ ಯುವಕರು,ಚಿಲಿಪಿಲಿಗುಟ್ಟುತ್ತಿದ್ದ ಯುವತಿಯರು,ಎರಡೂ ಕಲರವಗಳಿದ್ದ ಕೆಲವು. ತಲೆತಗ್ಗಿಸಿ ಕಾಲೆಳೆಯುತ್ತಾ ಎಲ್ಲ ಗುಂಪುಗಳನ್ನೂ ದಾಟಿ ಲಾನ್‍ನ ಅಂಚಿಗೆ ಹೋಗಿ ಏಕಾಂಗಿಯಾಗಿ ಕುಳಿತೆ. ಓದಲು ಮನಸ್ಸಿರಲಿಲ್ಲ. ಪರೀಕ್ಷೆಗಳ ನಡುವೆ ಓದುವುದು ನನ್ನ ಅಭ್ಯಾಸವೇ ಅಲ್ಲ. ಎರಡು ಬಸ್ ಹತ್ತಿ ಇಲ್ಲಿಗೆ ತಲುಪಬೇಕಾಗಿದ್ದರಿಂದ ಬೆಳಿಗ್ಗೆ ಬೇಗನೆ ಹೊರಟುಬಂದಿದ್ದೆ. ಹೀಗಾಗಿ ಬೆಳಗಿನ ತಿಂಡಿಯೂ ಸರಿಯಾಗಿ ಆಗಿರಲಿಲ್ಲ. ಪರೀಕ್ಷೆ ಬರೆಯುವಾಗ ಕಾಣಿಸಿಕೊಳ್ಳದ ಹಸಿವು ಈಗ ಭುಗಿಲೆದ್ದಿತ್ತು. ಅಪರಿಚಿತ ಸ್ಥಳದಲ್ಲಿ ಹೋಟೆಲ್ ಹುಡುಕಿಕೊಂಡು ಹೋಗುವುದೆಲ್ಲಿ ಎಂದುಕೊಂಡು ಹಸಿವನ್ನು ಮರೆಯಲು ದೆಹಲಿಯ ಚಳಿಗಾಲದ ನಡುಹಗಲಿನ ಹಿತವಾದ ಬಿಸಿಲಿಗೆ ಮೈಯೊಡ್ದಿ ತಲೆತಗ್ಗಿಸಿ, ಕಣ್ಣುಮುಚ್ಚಿ ಕುಳಿತುಬಿಟ್ಟೆ.
ಹತ್ತಿರದಲ್ಲೇ ಹೆಚ್ಚೆ ಸಪ್ಪಳ ಕೇಳಿಸಿತು.ತಲೆಯೆತ್ತಿದೆ.ಅಷ್ಟೇನೂ ಎತ್ತರವಲ್ಲದ ಗುಂಡುಗುಂಡನೆಯ ಮನುಷ್ಯನೊಬ್ಬ ಭಾರದ ಚೀಲವನ್ನು ಹೆಗಲಲ್ಲಿ ಹೊತ್ತು ನನ್ನತ್ತ ನಿಧಾನವಾಗಿ ನಡೆದುಬರುತ್ತಿದ್ದ. ನನ್ನಂತೇ ಏಕಾಂಗಿಯಾಗಿರಬೇಕು, ಲಾನ್‍ನ ಉದ್ದಗಲಕ್ಕೂ ಹರಡಿಕೊಂಡಿದ್ದ ಗದ್ದಲದ ಗುಂಪುಗಳಿಂದ ದೂರ ಇರಬಯಸಿ ಇತ್ತ ಪಾದ ಬೆಳೆಸಿದ್ದಾನೆ.ಮತ್ತೆ ತಲೆತಗ್ಗಿಸಿ ಕಣ್ಣುಮುಚ್ಚಿದೆ.ಹೆಜ್ಜೆಗಳು ನನ್ನನ್ನು ದಾಟಿ ಮುಂದೆ ಹೋಗುತ್ತವೆಂದು ನಿರೀಕ್ಷಿಸಿದೆ.
ಹೆಜ್ಜೆಗಳು ಹತ್ತಿರಾದವು, ಇನ್ನಷ್ಟು, ಮತ್ತಷ್ಟು. ಅತಿ ಸನಿಹದಲ್ಲಿ ಥಟಕ್ಕನೆ ನಿಂತುಹೋದವು.
ತಲೆಯೆತ್ತಿ ಕಣ್ಣುಬಿಟ್ಟೆ.
ಹೆಗಲ ಚೀಲವನ್ನು ನೆಲಕ್ಕಿಳಿಸಿ ನನ್ನ ಮುಂದೆ ಅಂಡೂರುತ್ತಿದ್ದ ಅವನು. ನನಗೆ ಅಚ್ಚರಿಗಿಂತಲೂ ಹೆಚ್ಚಿನ ಬೇಸರ. ಅವನಿಗೆ ಅದರತ್ತ ಪರಿವೆಯಿರಲಿಲ್ಲ. ಅತ್ಯಂತ ಸಮಾಧಾನದ್ದೆನ್ನಿಸುವ ನಿಟ್ಟುಸಿರೊಂದನ್ನು ಹೊರಹಾಕಿ ನನ್ನಡೆ ಮೌನನಗೆ ಚೆಲ್ಲಿದ. ಪರಿಚಯ ಹೇಳಿಕೊಂಡ.
ಪಕ್ಕದ ಹರಿಯಾಣಾದ ಹಳ್ಳಿಯೊಂದರವನು ಆತ.ಮದುವೆಯಾಗಿ ಎರಡು ಮಕ್ಕಳೂ ಇವೆಯಂತೆ.ಇನ್ನುಳಿದ ವಿವರಗಳು ನನ್ನದರಂತೇ. ನನ್ನಂತೆಯೇ ಪರೀಕ್ಷಾರ್ಥಿ, ನನ್ನಂತೆಯೇ ಏಕಾಂಗಿ. ಯಾರದೂ ಪರಿಚಯವಿಲ್ಲ. ಅವನ ಪ್ರಶ್ನೆಗಳಿಗೆ ತುಂಡುತುಂಡಾಗಿ ನನ್ನ ಪರಿಚಯ ಹೇಳಿಕೊಳ್ಳಹೊರಟೆ. ಅವನಿಗೆ ಅದರತ್ತ ಗಮನವಿರಲಿಲ್ಲ. ನನ್ನ ಮಾತನ್ನು ಕತ್ತರಿಸಿದ: “ನಿನ್ನ ಲಂಚ್ ಹೇಗೆ?” ಅಂದ ತಲೆಯೆತ್ತದೇ. ಕೈಗಳು ಚೀಲದೊಳಗಿಂದ ದಪ್ಪ ಪೊಟ್ಟಣವೊಂದನ್ನು ಹೊರಗೆಳೆಯುತ್ತಿದ್ದವು. ಅಪರಿಚಿತರ ಮುಂದೆ ಎಲ್ಲರೂ ಮಾಡುವಂತೆ ನಾನು “ನನಗೆ ಹಸಿವಿಲ್ಲಾ…” ಎಂದು ಶುರುಮಾಡಿದೆ.ಪೊಟ್ಟಣವನ್ನು ಬಿಚ್ಚುತ್ತಾ ಅವನು ಮತ್ತೆ ನನ್ನ ಮಾತನ್ನು ಕತ್ತರಿಸಿದ: “ಅದು ಹೇಗೆ ಸಾಧ್ಯ? ಏನಾದರೂ ತಿನ್ನಬೇಕು ನೀನು.” ಮಂದಗತಿಯಲ್ಲಿ ಹರಿದುಬಂದ ಆ ಮೃದುದನಿಯಲ್ಲಿ ಒತ್ತಾಯದ ಲೇಪವನ್ನು ನಾನು ಅಚ್ಚರಿಯಿಂದ ಗುರುತಿಸಿದೆ.ಬಿಚ್ಚಿದ ಪೊಟ್ಟಣದಲ್ಲಿ ಪರೋಟಾಗಳು, ಮಂದ, ಗಮಗಮ.
ಒಂದು ಕಾಗದದ ತಟ್ಟೆಯಲ್ಲಿ ನಾಲ್ಕು ಪರೋಟಾಗಳನ್ನು ಪೇರಿಸಿ ನನ್ನ ಮುಂದಿಟ್ಟ. ಪ್ಲಾಸ್ಟಿಕ್ ಡಬ್ಬವೊಂದನ್ನು ತೆರೆದ. ಅದರಲ್ಲಿದ್ದ ನಸುಬಿಳುಪು ಗುಡ್ಡವನ್ನು ದೊಡ್ಡ ಚಮಚದಿಂದ ಅಗೆದು ಕಾಲು ಕಿಲೋದಷ್ಟು ಎತ್ತಿ ನನ್ನ ಮುಂದಿದ್ದ ಪರೋಟಾಗಳ ಮೇಲೆ ಒಗೆದ.ಗಟ್ಟಿ ಬೆಣ್ಣೆ! ಮರಿಯಾನೆಗಾತ್ರದ ಜಗತ್ಪ್ರಸಿದ್ಧ ಹರಿಯಾಣಾ ಎಮ್ಮೆಗಳ ಗಟ್ಟಿ ಕೆನೆಹಾಲಿನಿಂದ ತೆಗೆದದ್ದು, ನಿಸ್ಸಂದೇಹವಾಗಿ!
“ತಿನ್ನು ತಿನ್ನು.ನೀನು ಹಸಿದುಕೊಂಡಿರಬಾರದು.ಮನೆಯದ್ದೇ ಇದು.ನನ್ನ ಹೆಂಡತಿ ಮಾಡಿದ್ದು. ಬೆಳಿಗ್ಗೆ ತುಂಬಾ ಬೇಗನೆ, ಎರಡು ಗಂಟೆಗೇ, ಎದ್ದು ಮಾಡಿದಳು, ನನಗಾಗಿ. ರುಚಿಯಾಗಿದೆ, ತಿನ್ನು.”
ಅವನ ಮಾತು ಅಕ್ಷರಶಃ ಸತ್ಯವಾಗಿತ್ತು. ಗಟ್ಟಿ ಬೆಣ್ಣೆ, ಮಂದ ಪರೋಟಾ. ರುಚಿರುಚಿರುಚಿ…
* * *
ಎರಡು ದಶಕಗಳು ಸರಿದುಹೋದವು. ನನ್ನ ಸುತ್ತಲಿನ ಪ್ರಪಂಚದಲ್ಲಿ ಊಹಿಸಲಾಗದಷ್ಟು ಬದಲಾವಣೆಗಳು ಘಟಿಸಿಹೋದವು.ಬಲಾಢ್ಯ ಸೋವಿಯೆತ್ ಯೂನಿಯನ್ ಸೊರಗಿ ಸಿಡಿದು ಚೂರುಚೂರಾಗಿಹೋಯಿತು, ಶೀತಲ ಸಮರ ಅಂತ್ಯಗೊಂಡಿತು, ಸಾಮ್ಯುಯೆಲ್ ಹಂಟಿಂಗ್‍ಟನ್‍ನ ನಾಗರೀಕತೆಗಳ ಸಮರ ಆರಂಭವಾಯಿತು. ಅದು ಮನೆಗೆ ತೀರಾ ಹತ್ತಿರಕ್ಕೇ, ಅಫ್ಘಾನಿಸ್ತಾನಕ್ಕೆ, ಬಂದುಬಿಟ್ಟಿತು…ನನ್ನ ಬದುಕಿನಲ್ಲೂ ಏನೇನೋ ಬದಲಾವಣೆಗಳು.ಮನೆಯನ್ನು ಬಾಡಿಗೆಗೆ ಕೊಟ್ಟು ಅಕ್ಕ ಮೈಸೂರಿಗೂ, ಕೈಬೀಸಿ ಕರೆದ ಪಾಂಡಿಚೆರಿಗೆ ನಾನೂ ಹೊರಟುಹೋದೆವು. ನಾನೊಂದು ಮದುವೆಯನ್ನೂ ಮಾಡಿಕೊಂಡೆ, ಒಬ್ಬ ಮಗನೂ ಹುಟ್ಟಿದ.ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಅದು ಹೊತ್ತಿ ಧಗಧಗನೆ ಉರಿಯುವುದನ್ನು ನೋಡಿ ಖುಶಿಯಿಂದ ಮೈಕಾಯಿಸಿಕೊಳ್ಳುತ್ತಾ ಆನಂದದಿಂದಿದ್ದಾಗ ಒಂದು ದಿನ…
ಎಲ್ಲ ಸವಿಗನಸುಗಳೂ ಮುಗಿದೇಹೋಗುತ್ತವಂತೆ.
ಡಿಸೆಂಬರ್ 2006ರಲ್ಲಿ ಅರುಂಧತಿಗೆ ದೆಹಲಿಗೆ ವರ್ಗಾವಣೆಯಾಯಿತು. ಆ ವರ್ಷದ ಶಾಲೆ ಮುಗಿಯುವುದನ್ನು ಕಾದು ಆರುತಿಂಗಳ ನಂತರ ಆದಿತ್ಯನೂ ದೆಹಲಿಯತ್ತ ಮುಖ ಮಾಡಿದ. ಮನೆಯ ಎಲ್ಲ ಸಾಮಾನುಗಳನ್ನೂ ಟ್ರಕ್ಕಿನಲ್ಲಿ ತುಂಬಿಸಿ ದೆಹಲಿಗೆ ಸಾಗಿಸಿದೆ, ಪುಸ್ತಕಗಳು, ಅವುಗಳ ಕಪಾಟುಗಳು, ಕಾರೂ ಸಹಾ.ಉಳಿಸಿಕೊಂಡದ್ದು ಒಂದಷ್ಟು ಪುಸ್ತಕಗಳು, ಒಂದು ಬೆತ್ತದ ಮಂಚ, ಒಂದು ತಟ್ಟೆ, ಒಂದು ಲೋಟ, ಒಂದು ಚಮಚ… ಒಂಟಿ ಬದುಕಿಗೆ ಅಷ್ಟು ಸಾಕು.
ಎಲ್ಲವನ್ನೂ ದೆಹಲಿಗೆ ಸಾಗಿಸಿ ಅವು ತಲುಪುವ ಹೊತ್ತಿಗೆ ನಾನೂ ದೆಹಲಿ ಸೇರಿ, ಅಲ್ಲಿ ಎಲ್ಲವನ್ನೂ ಅಣಿಮಾಡಿಟ್ಟು… ಪಾಂಡಿಚೆರಿಗೆ ಹಿಂತಿರುಗಿದೆ.ಆ ರಾತ್ರಿ ನನ್ನ ಬದುಕಿನ ಅತ್ಯಂತ ಯಾತನಾಮಯ ರಾತ್ರಿಯಾಗಿತ್ತು…ಬೆಳಿಗ್ಗೆ ಎದ್ದು ಸುಮ್ಮನೆ ಕೂತೆ. ಖಾಲಿ ಮನೆ ಮನಸ್ಸನ್ನೂ ಖಾಲಿಖಾಲಿಯಾಗಿಸಿಬಿಟ್ಟಿತ್ತು. ಹೊಟ್ಟೆಯಂತೂ ನಿನ್ನೆಯಿಂದಲೂ ಖಾಲಿ. ಅಷ್ಟಾಗಿಯೂ, ಟೀ ಮಾಡಿಕೊಳ್ಳಲೂ ಮನಸ್ಸಾಗಲಿಲ್ಲ.ಕೆಲಸದ ಕಾಮಾಕ್ಷಿ ಬಂದಳು. ತನ್ನ ಮಾಮೂಲಿ ಸ್ವಭಾವದಂತೆ ಮಾತಿಲ್ಲದೇ ಮನೆ ಶುಚಿಗೊಳಿಸಿದಳು, ಇದ್ದ ಒಂದೆರಡು ಬಟ್ಟೆ ಒಗೆದಳು… ಅಡಿಗೆಮನೆಯತ್ತ ಒಮ್ಮೆ ಇಣುಕಿ ಸರ್ರನೆ ಮುಖ ತಿರುಗಿಸಿಕೊಂಡು ಹೊರಟುಹೋದಳು. ನಾನು ಕುಳಿತೇ ಇದ್ದೆ. ಹಸಿವಾಗುತ್ತಿತ್ತು. ಇಡೀ ಒಂದು ದಿನದ ಹಸಿವು ಅದು. ಏನು ಮಾಡಬೇಕೆಂದು ತೋಚದೇ ಸುಮ್ಮನೆ ಕುಳಿತೇ ಇದ್ದೆ.
ಕರೆಗಂಟೆ ಬಾರಿಸಿತು.
ಬೇಸರ, ನಿರಾಸಕ್ತಿಯಿಂದ ಎದ್ದುಹೋಗಿ ಬಾಗಿಲು ತೆರೆದೆ. ಕಾಮಾಕ್ಷಿ ನಿಂತಿದ್ದಳು.
ಅರೆ, ಇವಳಿಗೆ ಇನ್ನೇನು ಕೆಲಸವಿದೆ ಇಲ್ಲಿ ಇಂದು?
ಅವಳು ನನ್ನನ್ನು ಸರಿಸಿ ಒಳಬಂದಳು. ನೇರ ಅಡಿಗೆಮನೆಗೆ ಹೋದ ಅವಳ ಕೈಯಲ್ಲೇನೋ ಬಿಳೀ ಪ್ಲಾಸ್ಟಿಕ್ ಚೀಲವಿದ್ದಂತಿತ್ತು. ಏನಾದರೂ ಮಾಡಿಕೊಳ್ಳಲಿ ಅಂದುಕೊಂಡು ನನ್ನ ಪಾಡಿಗೆ ನಾನು ಕೂತೆ. ನಿಮಿಷವೂ ಕಳೆಯಲಿಲ್ಲ.
“ಅಣ್ಣಾ” ಕರೆ ಕೇಳಿ ತಲೆಯೆತ್ತಿದೆ.
ಎದುರಿಗೆ ಕಾಮಾಕ್ಷಿ ನಿಂತಿದ್ದಳು. ಕೈಯಲ್ಲಿ ತಟ್ಟೆ, ಅದರಲ್ಲಿ ಸಾಂಬಾರಿನಲ್ಲಿ ತೋಯ್ದ ನಾಲ್ಕು ಇಡ್ಲಿಗಳು, ಒಂದು ವಡೆ…
“ಅಣ್ಣಾ, ನೀನು ಹಸಿದುಕೊಂಡಿರಬಾರದು.” ಕಾಮಾಕ್ಷಿ ಹೇಳಿದಳು.
ಆ ಕಾಳಜಿ ನೀಡಿದ ಮರುಜೀವದೊಂದಿಗೆ ಹೊರಹೋಗಿ ಹಾಲು, ತರಕಾರಿ ತಂದೆ… ಒಂಟಿಬದುಕು ಆರಂಭವಾಯಿತು…
* * *
ಮತ್ತೆ ಮೂರೂವರೆ ವರ್ಷಗಳು ಸರಿದುಹೋದವು. ಅದು 2010ರ ಡಿಸೆಂಬರ್ ಕೊನೆಯವಾರ. ಮರುದಿನದಿಂದ ನನಗೆ ಚಳಿಗಾಲದ ರಜೆ ಅರಂಭವಾಗುತ್ತಿತ್ತು. ದೆಹಲಿಗೆ ಹಾರಲು ಅಂದು ಸಂಜೆಯ ಫ್ಲೈಟ್‍ಗೆ ಟಿಕೆಟ್ ಬುಕ್ ಮಾಡಿದ್ದೆ. ಮನೆಗೆ ಹೋಗುವ ಉತ್ಸಾಹ. ಅದರೆ ಒಂದೇ ತೊಡಕು. ಬೇಡಿಕೆಯ ಮೇರೆಗೆ ಬರೆಯುತ್ತಿದ್ದ ಪಾಕಿಸ್ತಾನದ ರಾಜಕೀಯದ ಬಗೆಗಿನ ಇಂಗ್ಲಿಷ್ ಲೇಖನ ಮುಗಿಯುತ್ತಲೇ ಇಲ್ಲ. ಹನುಮಂತನ ಬಾಲದಂತೆ ಬೆಳೆಯುತ್ತಾ ಹತ್ತುಸಾವಿರ ಪದಗಳನ್ನು ದಾಟಿದೆ! ಲೇಖನದ ಗಾತ್ರದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವ ಅಗತ್ಯವೇನೂ ಇರಲಿಲ್ಲ. ನನಗೆ ಸವಾಲಾಗಿ ನಿಂತದ್ದು ಸಮಯ. ಎರಡುಗಂಟೆಯ ಹೊತ್ತಿಗೆ ಚೆನ್ನೈ ಏರ್ಪೋಟಿಗೆ ಹೊರಡುವ ಮೊದಲು ಅದನ್ನು ಮುಗಿಸಿ ಮೇಲ್ ಮಾಡಲೇಬೇಕಿತ್ತು. ಹಸಿವಾಗುತ್ತಿದ್ದರೂ ಅಡಿಗೆಮನೆಗೆ ಹೋಗಲು ಸಮಯವಿರಲೇ ಇಲ್ಲ. ಏರ್ಪೋಟ್ ಬಸ್ ಹತ್ತುವ ಮೊದಲು ಒಂದು ಪ್ಯಾಕೆಟ್ ಗುಡ್‍ಡೇ ಬಿಸ್ಕೆಟ್ ತೆಗೆದು ಬ್ಯಾಗಿಗೆ ತುರುಕಿಕೊಂಡರಾಯಿತು. ಎರಡು ಮೂರು ಸಲ ಟೀ ಮಾಡಿ ಹಸಿವನ್ನು ತಣಿಸಿ ಕೀಬೋರ್ಡ್ ಮೇಲೆ ಪಟಪಟ ಕುಟ್ಟುತ್ತಾ ಹೋದೆ. ಬಂದ ಹಲವು ಪೋನ್ ಕಾಲ್‍ಗಳಿಗೆ ಉತ್ತರಿಸಲೇ ಇಲ್ಲ. “ಈವ್‍ನಿಂಗ್ ಬರ್ತಿದೀಯ ಅಲ್ವಾ ಅಪ್ಪಾಜೀ” ಅಂತ ಅದಿತ್ಯ ಎರಡು ಸಲ ಕೇಳಿದ ಪ್ರಶ್ನೆಗೆ ಮಾತ್ರ ಎರಡು ಸಲವೂ “ಹ್ಞೂಂ ಪಾಪೂಜೀ” ಎಂದು ನಗುತ್ತಾ ಆಶ್ವಾಸನೆ ನೀಡಿದೆ.
ಒಂದುಗಂಟೆ ಸಮೀಪಿಸುವ ಹೊತ್ತಿಗೆ ಲೇಖನ ಹದಿಮೂರು ಸಾವಿರ ಪದ ದಾಟಿತ್ತು. ಇನ್ನು ನೂರೋ ಇನ್ನೂರೋ ಪದಗಳಲ್ಲಿ ಮುಗಿದೇಹೋಗುತ್ತದೆ! ಆಮೇಲೆ ಪ್ಯಾಕಿಂಗ್. ಅದೇನೂ ಭಾರಿಯದಲ್ಲ. ಪುಟ್ಟ ಹೆಗಲ ಚೀಲದಲ್ಲಿ ಓದುವ ಕನ್ನಡಕ, ಮೊಬೈಲ್ ಫೋನ್ ಚಾರ್ಜರ್, ಪೆನ್‍ಡ್ರೈವ್, ಪುಟ್ಟ ಸೋನಿ ಟ್ರಾನ್ಸಿಸ್ಟರ್, ಅರ್ಧ ಓದಿದ ಯಾವುದಾದರೂ ಪುಸ್ತಕವಿದ್ದರೆ ಅದು… ಉಳಿದೆಲ್ಲವೂ ದೆಹಲಿಯ ಮನೆಯಲ್ಲೇ ಇವೆ. ಅದು ನನ್ನ ಮನೆ.ಪೋನ್ ರಿಂಗಾಯಿತು.ಅತ್ತ ತಿರುಗಲಿಲ್ಲ.ಎರಡು ನಿಮಿಷದಲ್ಲಿ ಮತ್ತೊಮ್ಮೆ. ನೋಡಿದರೆ ಹಳೆಯ ವಿದ್ಯಾರ್ಥಿನಿ ಉಮಾ. ಇವಳದೇನು ಗೋಳು ಈಗ? ಸರ್ರನೆ ಮುಖ ಹೊರಳಿಸಿ ಸ್ಕ್ರೀನ್‍ನಲ್ಲಿ ಕಣ್ಣುನೆಟ್ಟೆ. ಬೆರಳುಗಳು ಕಿಬೋರ್ಡ್ ಮೇಲೆ ಅತುರಾತುರವಾಗಿ ಕುಣಿಯತೊಡಗಿದವು…ಮತ್ತೆ ಪೋನಿನ ಕಿರಿಕಿರಿ. ಅದೇ ಉಮಾ. ನನಗೆ ರೇಗಿಹೋಯಿತು. ಈ ರಗಳೆ ಮುಗಿದೇಹೋಗಲಿ. “ನೋಡೂ, ನಾನು ಅರ್ಜೆಂಟ್‍ನಲ್ಲಿದೀನಿ. ಡೆಲ್ಲೀಗೆ ಹೊರಡೋ ಮೊದಲು ಈ ಆರ್ಟಿಕಲ್ ಮುಗಿಸಬೇಕು. ಆಮೇಲೆ ಮಾತಾಡೋಣವಾ?” ಕೂಗಿಬಿಟ್ಟೆ.
“ಓಕೆ ಓಕೆ ಓಕೆ.” ಅವಳ ನಿಧಾನದ, ಸಮಾಧಾನದ ಅನುಮೋದನೆ.ನಿಮಿಷಗಳು ಸರಿದೋಡಿದವು.
ಲೇಖನ ಕೊನೆಗೂ ಮುಗಿಯಿತು.ಹಿಂದೆಯೆ ಹಸಿವು ತಲೆಯೆತ್ತಿತು.ಅದನ್ನು ಬದಿಗೊತ್ತಿ ಕೊನೆಯ ಅಡಿಟಿಪ್ಪಣಿಯಲ್ಲಿ ಬಿಟ್ಟುಹೋಗಿದ್ದ ಫರ್ಜಾನಾ ವಾರ್ಸ್ನಿಯ “Interrupted Journey” ಪುಸ್ತಕದ ಪುಟಸಂಖ್ಯೆಯನ್ನು ಹುಡುಕಲೆಂದು ಬೋರಲಾಗಿದ್ದ ಆ ಪುಸ್ತಕವನ್ನು ಎತ್ತಿಕೊಳ್ಳಲು ಕೈಚಾಚುತ್ತಿದ್ದಂತೇ ಕರೆಗಂಟೆ ಬಾರಿಸಿತು. ಅದು ನನ್ನ ಸಹನೆಯ ಪರೀಕ್ಷೆ.ಕಾಲುಗಳನ್ನು ನೆಲಕ್ಕೆ ಧಪಧಪ ಬಡಿಯುತ್ತಾ ಹೋಗಿ ಬಾಗಿಲು ತೆರೆದೆ. ತಲೆಯನ್ನು ಒಂದು ಪಕ್ಕಕ್ಕೆ ವಾಲಿಸಿಕೊಂಡು ನಿಂತಿದ್ದಳು ಉಮಾ.
“ಬಾ, ಎರಡು ನಿಮಿಷ ಕೂರು. ಆರ್ಟಿಕಲ್ ಮುಗೀತು. ಮೇಲ್ ಮಾಡಿಬಿಡ್ತೀನಿ.” ಮತ್ತೇನು ಹೇಳಿದೆನೆಂದು ಈಗ ನೆನಪಿಲ್ಲ. ಆದರೆ, ನಾನು ಸಹನಶೀಲ ಅಧ್ಯಾಪಕ, ನಾಗರಿಕ ಮನುಷ್ಯ ಎಂಬ ಅವಳ ಗಟ್ಟಿ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಂಡೆ ಅಂತ ಮಾತ್ರ ನೆನಪು.
ಮುಂದಿನ ಕ್ಷಣ ಅವಳು ಮರೆತುಹೋದಳು. ಜಿಮೇಲ್ ತೆರೆದು, ಒಂದೇ ಸಾಲಿನ ನೋಟ್ ಹಾಕಿ ಆರ್ಟಿಕಲ್ ಅಟ್ಯಾಚ್ ಮಾಡಿ, ಸೆಂಡ್ ಒತ್ತಿ…” ಅಹ್! ಈಗ ಕೊನೇಪಕ್ಷ ಒಂದು ಟೀ! ಅದಕ್ಕೆ ಸಮಯವಿದೆಯೇ?
ಪಕ್ಕಕ್ಕೆ ಹೊರಳಿದೆ. ಕುಳಿತಿದ್ದ ಅವಳು ಥಟಕ್ಕನೆ ಮೇಲೆದ್ದಳು. ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲ ಬಿಡಿಸಿದಳು. ಜಾದೂ ಮಾಡುವಂತೆ ಗುಂಡನೆಯ ಎರಡು ಪ್ಲಾಸ್ಟಿಕ್ ಡಬ್ಬಗಳನ್ನು ಹೊರತೆಗೆದು ಮುಂದಿಟ್ಟಳು. ಅವುಗಳ ಮೇಲೊಂದು ಪ್ಲಾಸ್ಟಿಕ್ ಚಮಚವನ್ನಿಟ್ಟಳು… “ಹೀಗೆ ಬರೀತಾ ಕೂತಾಗ ನೀವು ಆಡಿಗೆಯೇನೂ ಮಾಡಿಕೊಂಡಿರಲ್ಲ ಅಂತ ನೆನಪಾಯ್ತು.” ನಿಧಾನವಾಗಿ, ಅತ್ಯಂತ ಸಹಜವಾಗಿ ಮಾತು ಹರಿಸಿದಳು. ನಾನು ಅವಳನ್ನೇ ಬೆರಗುಹತ್ತಿ ನೋಡಿದೆ.
“ಒಂದರಲ್ಲಿ ಸಾರನ್ನ ಇದೆ, ಇನ್ನೊಂದು ಮೊಸರನ್ನ. ಓಪನ್ ಮಾಡಿ. ನಾನು ನೀರು ತರ್ತೀನಿ” ಎನ್ನುತ್ತಾ ಕಿಚನ್‍ನತ್ತ ಹೊರಳಿದಳು.
* * *
ಈ ಬದುಕಿನಲ್ಲಿ ನಾನು ಎಷ್ಟೊಂದು ದೇವದೂತರನ್ನು ಕಂಡಿದ್ಡೇನೆ!
ಚಿತ್ರಕೃಪೆ: ww.itimes.com
Awesome 😄 😄 😄 😄 😄 ಅನ್ನದಾತ ಸುಖೀಭವ
ಇದನ್ನು ಓದಿದಾಗ ೧೯೯೮ರ ಒಂದು ಘಟನೆ ನೆನಪಾಗುತ್ತದೆ. ಆ ಅನ್ನ ಭ್ರಹ್ಮನ ಸ್ಮರಣೆ ಮಾದಬೆಕು ಅನಿಸಿತು. ನಾನು ಮತ್ತು ಇಬ್ಬರು ಮಕ್ಕಳು( ಅವರು ಭೀಮ ಸಂಘ ಎನ್ನುವ ದುಡಿಯುವ ಮಕ್ಕಳ ಸಂಘಟನೆಯ ಸದಸ್ಯರು) ನಾವು ಸೆನೆಗಾಲ್ ರಾಜಧಾನಿ ಡಕಾರ್ಗೆ ಹೋಗುವುದಿತ್ತು. ನಮ್ಮ ಟ್ರಾವೆಲಿಂಗ್ ಏಜೆಂಟ್ ರ ಪ್ರಮಾದದಿಂದ ನಮಗೆ ವಿಮಾನ ತಪ್ಪಿತು. ನಾವು ರಾತ್ರಿಯೆಲ್ಲಾ ನಿದ್ದೆಗೆಟ್ಟು ಹೈರಾಣಾಗಿದ್ದೆವು. ಮುಂದಿನ ವಿಮಾನ ಇನ್ನೆರಡು ದಿನದ ನಂತರ. ಈಗ ಮಾಡಿದ ಟೆಕೆಟ್ ಆಗ ಬರುವುದಿಲ್ಲ ಅಂದರೆ??? ಈ ತರಹದ ನೂರಾರು ಗೊಂದಲಗಳೊಂದಿಗೆ ಇಥಿಯೋಪಿಯನ್ ಏರ್ ಲೈನ್ಸ್ ನ ಕಚೇರಿಗೆ ನಮ್ಮ ಮಣ ಭಾರದ ಲಗ್ಗೇಜ್ ನೊಂದಿಗೆ ಹೋದಾಗ ನಮ್ಮನ್ನು ಕಂಡ ಆ ಮಹಾ ಪುರುಷ ನಾವು ಮಾತನಾಡುವ ಮೊದಲೇ ನಮಗೆ ಬೆಳಗಿನ ತಿಂಡಿ ಆಗಿದೆಯಾ ಎಂದು ಕೇಳಿದ್ದು!! ತಕ್ಷಣ ನಮಗೆ ನೀರು ಕೊಟ್ಟುದ್ದು. ತಿಂಡಿ ತಿನ್ನುವ ವರೆಗೆ ಏನೂ ಹೇಳದೆ ಮುಂದಿನ ವಿಮಾನಕ್ಕೆ ನಮಗೆ ಬೋರ್ಡಿಂಗ್ ಪಾಸ್ ಸಹ . ನೀಡಿದ್ದು. ನಮಗೆ ಕಾರ್ಮಿಕ ಇಲಾಖೆಯ ಅನುಮೋದನೆ ಪ್ರಪಂಚದ ಕೆಲ ದೇಶಗಳಿಗೆ ಹೋಗಲು ಅಗತ್ಯವಿತ್ತು( ಇದಕ್ಕೆ ಇ.ಸಿ.ಎನ್, ಆರ್ ಅಂತ ಕರೆಯುತ್ತಿದ್ದರು). ಈಗ ಈ ಪದ್ದತಿ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅನುಮತಿ ಸಿಕ್ಕ ನಿರ್ದಿಷ್ಟ ಅವಧಿಯಲ್ಲಿ ದೇಷ ಬೀಡಬೇಕು. ಇಲ್ಲ ಅಂದರೆ ಪುನಃ ಅದು ಆಗಬೇಕಿತ್ತು. ನಾನು ಆ ಕಚೇರಿ ಎಲ್ಲಿ ಇದೆ ಎಂದು ಕೇಳಿದ್ದಕ್ಕೆ ನನಗೆ ಟ್ಯಾಕ್ಸಿ ಗೊತ್ತುಪಡಿಸಿ ಕೆಲಸ ಂಆದ ನಂತ ನಾವು ಹೇಳಿದ ಸ್ಥಳಕ್ಕೆ ಬಿಡಲು ತಾಕೀತು ಮಾಡಿದರು. ನಾವು ಎಷ್ಟೇ ಧನ್ಯವಾದ ಅಂತ ಹೇಳಿದರು ಆತ ಹೇಳಿದ್ದು ಇದು ನನ್ನ ಕೆಲಸ ಎಂದು! ಜಾತಿ ಮತ ದೇಶಗಳನ್ನು ಮೀರಿ ನಡೆದುಕೊಂಡ ಆತ ನಿಜಕ್ಕೂ ನಮಗೆ ಅನ್ನ ಬ್ರಹ್ಮ
ಗಣಪತಿ.ಎಂ.ಎಂ