ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 5, 2016

2

ಭಾರತದಲ್ಲಿ ವಿದ್ಯಾರ್ಥಿ ಆಂದೋಲನಗಳು – ಒಂದು ವಿಮರ್ಶೆ

‍ನಿಲುಮೆ ಮೂಲಕ

– ಬಿ.ಜಿ.ಕುಲಕರ್ಣಿ,ಸಹಾಯಕ ಪ್ರಾಧ್ಯಾಪಕರು
ರಾಜ್ಯಶಾಸ್ತ್ರ ವಿಭಾಗ,ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯ,ಚಿಕ್ಕೋಡಿ, ಜಿ.ಬೆಳಗಾವಿ                                                                   

ದೆಹಲಿ ಪ್ರತಿಭಟನೆಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖವಾದ ಪಾತ್ರವಹಿಸಿರುವದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಸ್ವಾತಂತ್ರ್ಯ ನಂತರ ಶಿಕ್ಷಣ ಸುಧಾರಣೆಯ ರೂಪುರೇಷೆಗಳನ್ನು ಸಿದ್ಧಪಡಿಸುವಾಗ ಕೂಡ ಅವರು ಗಮನಾರ್ಹವಾದ ಪ್ರಭಾವವನ್ನು ಬೀರಿದ್ದಾರೆ.  ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಕೂಡ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. 1975-77ರ ತುರ್ತುಪರಿಸ್ಥಿತಿಯ ಅವಧಿಯನ್ನು ಹೊರತುಪಡಿಸಿ ಉಳಿದೆಲ್ಲ ಸಂದರ್ಭಗಳಲ್ಲಿಯೂ ವಿದ್ಯಾರ್ಥಿ ಸಂಘಟನೆಗಳು ತುಂಬಾ ಸಕ್ರೀಯವಾಗಿರುವದನ್ನು ನಾವು ಕಾಣಬಹುದಾಗಿದೆ. ರಾಜ್ಯಶಾಸ್ತ್ರದ ಆಧುನಿಕ ಪರಿಕಲ್ಪನೆಗಳಾದ ಸ್ವಾತಂತ್ರ್ಯ,ಸಮಾನತೆ ಮತ್ತು ಸಹೋದರತ್ವದ ಮಹತ್ವವನ್ನು ಸಾಮಾನ್ಯ ಜನರಲ್ಲಿ ಈ ವಿದ್ಯಾರ್ಥಿ ಸಂಘಟನೆಗಳು ಮೂಡಿಸಿವೆ. ರಾಜಕೀಯ ಅಭಿವೃದ್ಧಿ ಮತ್ತು ಆಧುನೀಕರಣ ಪ್ರಕ್ರಿಯೆಯ ಅಧ್ಯಯನ ಮಾಡುವಾಗ ವಿದ್ಯಾರ್ಥಿ ರಾಜಕೀಯವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಜಾಗತಿಕ ಮಟ್ಟದಲ್ಲಿ ಇಂದು ವಿದ್ಯಾರ್ಥಿ ಚಳುವಳಿಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಕ್ರಿಯಾಶೀಲತೆಯ ಬಗ್ಗೆ  ಇಲ್ಲಿ ಚರ್ಚಿಸುವದು  ಸೂಕ್ತ.

ಕ್ರಾಂತಿಕಾರಿ ಚಳವಳಿಗಳು ಯಾವತ್ತೂ ಆದರ್ಶಗಳನ್ನು ಹೊಂದಿರುವ ಹಾಗು ಅವುಗಳನ್ನು ಅನುಷ್ಠಾನಗೊಳಿಸಬೇಕೆಂಬ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳ ಬೆಂಬಲವನ್ನು ಬಯಸುತ್ತವೆ. ಅದಕ್ಕಾಗಿಯೇ ಸಿ. ರೈಟ್ ಮೀಲ್ಸ್ ಎಂಬ ವಿದ್ವಾಂಸರು “ಹೊಸ ಕ್ರಾಂತಿಕಾರಿ ಚಳವಳಿಗೆ ಬುದ್ಧಿಜೀವಿಗಳು ಹಾಗು ವಿದ್ಯಾರ್ಥಿಗಳು ಮಾತ್ರ ಒಂದು ಭದ್ರವಾದ ಅಡಿಪಾಯ ಹಾಕುತ್ತಾರೆ” ಎಂದಿದ್ದಾರೆ. ಇವರ ವಿಚಾರಗಳಿಗೆ ಪೂರಕವಾಗಿ ಎಸ್.ಎಮ್.ಲಿಪ್‍ಸೆಟ್ “ಭವಿಷ್ಯತ್ತಿನ ರಾಜಕೀಯವನ್ನು ವಿಶ್ಲೇಷಣೆ ಮಾಡುವಾಗ ವಿದ್ಯಾರ್ಥಿಗಳನ್ನು ಕಡೆಗಣಿಸುವುದು ಮಹಾ ಪ್ರಮಾದಕ್ಕೆ ದಾರಿ ಮಾಡಿ ಕೊಡುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಲೀಬ್‍ಮ್ಯಾನ್ ವಾಕರ್ ಮತ್ತು ಗ್ಲೇಜರ್ ಜಗತ್ತಿನಾದ್ಯಂತ ಶಾಂತಿ ಕದಡುವ, ಸಾಂಪ್ರದಾಯಿಕ ಮೌಲ್ಯಗಳನ್ನು ಹಾಗು ಅಸ್ತಿತ್ವದಲ್ಲಿರುವ ಸರಕಾರಗಳನ್ನು ಪ್ರಶ್ನಿಸುವ ಎರಡೇ ಎರಡು ಗುಂಪುಗಳೆಂದರೆ ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿಗಳು” ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ.

1955ರಲ್ಲಿ ಅರ್ಜಂಟೀನಾದ ಪೆರೋನನ್ನು ಉರುಳಿಸುವಲ್ಲಿ, 1958ರಲ್ಲಿ ವೆನೆಜ್ಯುವೇಲಾದ ಪೆರೋಜ್ ಜೆಮೆನೇಜ್‍ನ ಅಧಃಪತನ, 1963ರಲ್ಲಿ ವಿಯಟ್ನಾಂ ಮೇಲೆ ಅಮೇರಿಕೆಯ ದಾಳಿಯನ್ನು ಉಗ್ರವಾಗಿ ಪ್ರತಿಭಟಿಸಿದ್ದು, 1960ರಲ್ಲಿ ಜಪಾನ-ಅಮೇರಿಕೆಯ ಮಧ್ಯ ಆದ ಭದ್ರತಾ ಒಪ್ಪಂದದ ವಿರುದ್ಧದ ಪ್ರತಿಭಟನೆ, ಅದು ಕಿಶಿ ಸರಕಾರದ ಅಧ:ಪತನಕ್ಕು ಕಾರಣವಾಯಿತು, 1966ರಲ್ಲಿ ಸುಕಾರ್ನೊ ವಿರುದ್ಧ ಇಂಡೋನೇಷ್ಯಾದಲ್ಲಿನ ಚಳವಳಿ, 1969ರಲ್ಲಿ ಪಾಕಿಸ್ತಾನದಲ್ಲಿ ಅಯೂಬಖಾನನ ಅಧಃಪತನ ಮತ್ತು ಜೇಕೊಸ್ಲಾವಾಕೀಯಾದಲ್ಲಿ ಉದಾರೀಕರಣಕ್ಕಾಗಿ ನಡೆದ ತೀವೃತರವಾದ ಚಳವಳಿಗಳಲ್ಲಿ ವಿದ್ಯಾರ್ಥಿಗಳು ವಹಿಸಿದ ನಿರ್ಣಾಯಕ ಪಾತ್ರವೆ ಈ ಮೇಲಿನ ವಿದ್ವಾಂಸರ ಹೇಳಿಕೆಗಳಿಗೆ ಸಮರ್ಥನೆ ನೀಡುತ್ತವೆ.

ಜಗತ್ತಿನಾದ್ಯಂತ ಇಂದು ಉನ್ನತ ಶಿಕ್ಷಣದ ಆವರಣಗಳು ಸಂಕ್ರಮಣ ಮತ್ತು ಪ್ರಕ್ಷುಬ್ಧ ಕಾಲದಲ್ಲಿವೆ.ಸಮಾಜ ವಿಜ್ಞಾನಿಗಳು ವಿದ್ಯಾರ್ಥಿ ಪ್ರತಿಭಟನೆಗೆ ಹಲವಾರು ವಿವರಣೆಗಳನ್ನು ನೀಡಿದ್ದಾರೆ.ಬೇಕ್ ಮತ್ತು ಡೊಗ್ಲಸ್ (1970) ಮಾನವ ಜೀವನದ ಎಲ್ಲ ಪ್ರಕಾರಗಳಲ್ಲಾದ ಜ್ಞಾನ ಸ್ಫೋಟವು ಅವನ ದೃಷ್ಟಿಕೋನವನ್ನು ತೀವ್ರವಾಗಿ ಬದಲಾಯಿಸಿತು.ಹೀಗಾಗಿ ವ್ಯಕ್ತಿ ಪ್ರತಿಯೊಂದನ್ನು ಪ್ರಶ್ನಿಸಲು ಪ್ರಾರಂಭಿಸಿದ.ಸಾಮಾನ್ಯ ಜನರ ದೃಷ್ಟಿಕೋನದಲ್ಲಾದ ಬದಲಾವಣೆ ಪ್ರತಿಭಟನೆಗೆ ಮೂಲ ಕಾರಣವಾಯಿತು ಎಂದು ಹೇಳಿದರೆ, ಮೋರಿಸ್ (1976) ರವರ ಪ್ರಕಾರ ಇದು ಕೇವಲ ಜ್ಞಾನದ ಪರಾಕಾಷ್ಠೆ ಮಾತ್ರವಲ್ಲ, ಹೊಸ ಜ್ಞಾನದ ಮದ್ಯಸ್ಥಿಕೆಯು ಸಾಂಪ್ರದಾಯಿಕ ಮೌಲ್ಯಗಳು ಮತ್ತು ವ್ಯಕ್ತಿಯ ಅಂತರ್ಗತ ಸಂಬಂಧಗಳ ಮೇಲೆ ಪ್ರಬಲವಾದ ನಿರ್ಬಂಧ ಹೇರಿತು ಎಂದಿದ್ದಾರೆ.ಇನ್ನು ಪೋಪ್ಪಮ್: ಮನುಷ್ಯ ಇಂದು ಮುಕ್ತವಾಗಿದ್ದಾನೆ ಸಮಾಜಜೀವನದಲ್ಲಿ ಇಂದು ರಹಸ್ಯ ಮತ್ತು ನಿಯಂತ್ರಣಗಳು ಮಿಥ್ಯಗಳಾಗಿವೆ ಎಂದಿದ್ದಾರೆ.ರೋಲ್ವಿನ್ ಮತ್ತು ಸೀನಿ (1973) ಮನುಷ್ಯ ಇಂದು ಬಹಳ ಅನ್ವೇಷಣಾಶೀಲನಾಗಿದ್ದಾನೆ ಮತ್ತು ಮೂಲಭೂತ ಸಮಸ್ಯೆಗೂ ತಕ್ಷಣ ಪರಿಹಾರಕ್ಕಾಗಿ ಹಾತೊರೆಯುತ್ತಾನೆ ಎಂದಿದ್ದಾರೆ.ಈ ಮೇಲಿನ ಸಮಾಜ ವಿಜ್ಞಾನಿಗಳ ವಾದವೇನೆಂದರೆ, ದೃಷ್ಟಿಕೋನದಲ್ಲಾದ ಬದಲಾವಣೆ ಮತ್ತು ಸಮಾಜ ವ್ಯವಸ್ಥೆಯಲ್ಲಿ ವ್ಯಕ್ತಿಯ ಅಂತಸ್ತಿನಲ್ಲಾದ ಬದಲಾವಣೆ ಕ್ಯಾಂಪಸ್ ಅಶಾಂತಿಗೆ ಕಾರಣಗಳು  ಎಂದು ಗುರುತಿಸಿರುತ್ತಾರೆ.

ವಿದ್ಯಾರ್ಥಿ ಅಶಾಂತಿಗೆ ಮೇಲೆ ನೀಡಿದ ವಿವರಣೆಗಳು ಆ ದಿನಗಳಲ್ಲಿ ಯಥೋಚಿತವಾಗಿದ್ದವು.ಆದರೆ ಇಂದು ಇವುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ.ಅದಕ್ಕಾಗಿಯೇ ಈ ಸಾರ್ವತ್ರಿಕ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳಲು ಹೊಸ ವಿವರಣೆಗಳನ್ನು ಇಂದು ನೀಡಲಾಗುತ್ತಿದೆ.ಇಂದು ಪಶ್ಚಿಮ ದೇಶಗಳಲ್ಲಿ ವಿದ್ಯಾರ್ಥಿ ಅಶಾಂತಿಗೆ ಸಂಬಂಧಿಸಿದಂತೆ ಎರಡು ಸಿದ್ಧಾಂತಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿವೆ.ಮೊದಲನೆಯದು ತಲೆಮಾರು ಸಂಘರ್ಷ ಸಿದ್ಧಾಂತ.ಇದನ್ನು ಓಡಿಪಲ್ ರೆಬೆಲಿಯನ್ ಎಂದು ಕೂಡ ಕರೆಯಲಾಗುತ್ತದೆ.ಈ ಸಿದ್ಧಾಂತವನ್ನು ಪ್ರತಿಪಾಸಿದವರು ಲೆವಿಸ್ ಎಸ್. ಫಿವರರ್.ಎರಡನೆಯದು ಐತಿಹಾಸಿಕ ಅಪ್ರಾಸಂಗಿಕ ಸಿದ್ಧಾಂತ.ಈ ಸಿದ್ಧಾಂತವನ್ನು ಜೆಬ್ನಿವ್ ಬ್ರೆಜ್ನಿಸ್ಕಿ ಮತ್ತು ಡೇನಿಯಲ್ ಬೆಲ್ ಪ್ರತಿಪಾದಿಸಿದ್ದಾರೆ.ಒಡಿಪಲ್ ರೆಬೆಲಿಯನ್ ಸಿದ್ಧಾಂತವು ಸಾಮಾನ್ಯವಾಗಿ ಹಳೆ ತಲೆಮಾರಿನವರು ವಿದ್ಯಾರ್ಥಿಗಳನ್ನು ದ್ವೇಷಿಸುವದರಿಂದ ಇದು ವಿದ್ಯಾರ್ಥಿ ಪ್ರತಿಭಟನೆಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರತಿಪಾದಿಸುತ್ತದೆ.ಐತಿಹಾಸಿಕ ಅಪ್ರಾಸಂಗಿಕ ಸಿದ್ಧಾಂತವು ಪ್ರಸ್ತುತ ಸಮಾಜವು ನಮ್ಮನ್ನು ನಿರ್ಲಕ್ಷಿಸುತ್ತಿದೆ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುವದರಿಂದ ಅವರು ಪ್ರತಿಭಟನೆಯಲ್ಲಿ ತೊಡಗುತ್ತಾರೆ ಎಂದು ಪ್ರತಿಪಾದಿಸುತ್ತದೆ.ಮೊದಲನೆಯ ಸಿದ್ಧಾಂತವು ವಿದ್ಯಾರ್ಥಿಗಳ ಅಶಾಂತಿಗೆ ಮಾನಸಿಕ ಕಾರಣಗಳನ್ನು ಪರಿಗಣಿಸಿದರೆ ಎರಡನೆಯ ಸಿದ್ಧಾಂತವು ಸಾಮಾಜಿಕ ಕಾರಣಗಳಿಗೆ ಹೆಚ್ಚು ಒತ್ತು ನೀಡಿದೆ.

ಭಾರತದಲ್ಲಿ ವಿದ್ಯಾರ್ಥಿ ಚಳವಳಿಗೆ ಸಂಬಂದಿಸಿದಂತೆ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಕೆಲವರು ಭಾರತದಲ್ಲಿ ಅಂಥಹ ಚಳವಳಿ ಅಸ್ತಿತ್ವದಲ್ಲಿದೆಯೇ? ಎಂದು ಪ್ರಶ್ನಿಸುತ್ತಾರೆ. ಈ ಮೇಲಿನ ವಾದದಲ್ಲಿ ಸತ್ಯಾಂಶವಿದ್ದರೂ, ಭಾರತದಲ್ಲಿ ವಿದ್ಯಾರ್ಥಿ ಚಳವಳಿಗಳೇ ನಡೆಯಲಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಇಂದು ವಿದ್ಯಾರ್ಥಿಗಳು ತೀವೃ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದ ನಿಜವಾದ ಸಮಸ್ಯೆ ವಿದ್ಯಾರ್ಥಿ ಅಶಿಸ್ತು,ಭ್ರಷ್ಟಾಚಾರ ಅಥವಾ ಪಕ್ಷ ರಾಜಕೀಯವಲ್ಲ. ನಿಜವಾದ ಸಮಸ್ಯೆ ಆಳವಾಗಿ ಬೇರುರಿರುವುದು ಸಮಾಜ ಬದಲಾವಣೆಯಲ್ಲಿ. ದೇಶದಲ್ಲಿ ವಿದ್ಯಾರ್ಥಿ ಚಳವಳಿಯು ರಾಷ್ಟೀಯ ಚಳವಳಿಯ ಭಾಗವಾಗಿರುವದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು.1942 ಭಾರತ ಬಿಟ್ಟು ತೊಲಗಿ ಚಳವಳಿಯು ವಿದ್ಯಾರ್ಥಿ ಕ್ರಿಯಾಶೀಲತೆಗೆ ತಕ್ಕ ಉದಾಹರಣೆಯಾಗಿದೆ.

ಒಂದು ಸರಳ ಸತ್ಯವೆನೆಂದರೆ ಭಾರತದಲ್ಲಿ ವಿದ್ಯಾರ್ಥಿಗಳು ಸುಧಾರಣೆಗಳಿಗಾಗಿ ಪ್ರತಿಭಟಿಸುವದಿಲ್ಲ. ಅವರು ಯಾವುದೇ ದೂರಗಾಮಿ ಉದ್ದೇಶಗಳನ್ನು ಹೊಂದಿರುವದಿಲ್ಲ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿಯ ಮೇಲೆ ಹಲ್ಲೆ ಮಾಡುತ್ತಾರೆ ಆದರೆ ಅವರ ಅಧಿಕಾರ ಕಡಿತಗೊಳಿಸಬೇಕೆಂದು ಪ್ರತಿಭಟಿಸುವದಿಲ್ಲ. ಹಾಗೆಯೇ ಪೊಲೀಸ್ ಮೇಲೆ ಆಕ್ರಮಣ ಮಾಡುತ್ತಾರೆ ಆದರೆ ಪೊಲೀಸ್ ಕಾರ್ಯವಿಧಾನದ ಬದಲಾವಣೆಗಾಗಿ ಹೋರಾಟ ಮಾಡುವದಿಲ್ಲ. ಬಂಡಾಯ ವಿದ್ಯಾರ್ಥಿಗಳು ಪ್ರಭುತ್ವದ ಕುರಿತು ಗೌರವ ಇಟ್ಟುಕೊಂಡಿರುವದಿಲ್ಲ. ಏಕೆಂದರೆ ವ್ಯವಸ್ಥೆ ಭ್ರಷ್ಟ ಮತ್ತು ಅಸಮರ್ಥವಾಗಿದೆ ಎನ್ನುವದು ಅವರ ಭಾವನೆ. ಹಿಗಾಗಿ ಪ್ರಭುತ್ವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ಬದಲು ಅವುಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತದೆ. ಇದರ ಒಟ್ಟು ಫಲಿತಾಂಶವೆನೆಂದರೆ ವಿದ್ಯಾರ್ಥಿ ಪ್ರತಿಭಟನೆಯು ವಿದ್ಯಾರ್ಥಿ ಚಳವಳಿಯಾಗಿ ರುಪುಗೊಳ್ಳುವಲ್ಲಿ ವಿಫಲವಾಗುತ್ತದೆ. ವ್ಯವಸ್ಥೆಯ ಬದಲಾವಣೆ ಈ ಪ್ರತಿಭಟನೆಗಳಿಂದ ಸಾಧ್ಯವಾಗುವದಿಲ್ಲ.
ಕಳೆದ ಶತಮಾನ, ಭಾರತದಲ್ಲಿ ವಿದ್ಯಾರ್ಥಿ ಚಳವಳಿಯೂ ಬೇರೆ ಬೇರೆ ಹಂತಗಳಲ್ಲಿ ವಿಕಾಸಗೊಂಡಿದೆ. 19ನೇ ಶತಮಾನದ ಮೊದಲ ಅರ್ಧ ಭಾಗದಲ್ಲಿ ಭಾರತದಲ್ಲಿ ಅನೇಕ ಸಾಮಾಜಿಕ ಸುಧಾರಣೆಯ ಚಳುವಳಿಗಳು ನಡೆದಿದ್ದು, ಅದರಲ್ಲಿ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಸಮಾಜ ಸುಧಾರಣೆಯ ಉದ್ದೇಶವನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಸಂಘಟನೆಗಳನ್ನು ಸ್ಥಾಪಿಸಿಕೊಂಡರು.

1857ರ ಸಿಪಾಯಿ ದಂಗೆಯ ನಂತರ, ಭಾರತೀಯ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಜಾಗ್ರತವಾಯಿತು ಮತ್ತು ವಿದ್ಯಾರ್ಥಿ ಸಮುದಾಯವು ಅದರಿಂದ ಪ್ರಭಾವಿತವಾಯಿತು. 1875ರಲ್ಲಿ ಆನಂದ ಮೋಹನ ಭೋಸ್ ಎಂಬುವವರು ‘ಸ್ಟುಡೆಂಟ್ ಅಸೋಸಿಯೆಷನ್’ ಎಂಬ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಮೆಟ್ರೋ ಪಾಲಿಟನ್ ಕಾಲೇಜಿನ ಅಧ್ಯಾಪಕರಾದ ಸುರೇಂದ್ರನಾಥ ಬ್ಯಾನರ್ಜಿ ರಾಷ್ಟ್ರದ ಹಿತ ದೃಷ್ಟಿಯಿಂದ ವಿದ್ಯಾರ್ಥಿ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಪ್ರಯತ್ನಿಸಿದರು. ನಂತರ 1893ರಲ್ಲಿ ಅಶುತೋಷ ಮುಖರ್ಜಿಯವರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ಸುರೇಂದ್ರನಾಥ ಬ್ಯಾನರ್ಜಿಯವರ ನ್ಯಾಯ ವಿಚಾರಣೆಯನ್ನು ವಿರೋಧಿಸಿ ಸಂಪು ಹೂಡಿದರು. 1885ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಕಾಂಗ್ರೆಸಿನ ಮೃದು ಧೋರಣೆಗಳಿಗೆ ಬಂಗಾಳದ ಯುವಕರು ಅದರಲ್ಲೂ ವಿದ್ಯಾರ್ಥಿಗಳು ಅತೃಪ್ತರಾಗಿದ್ದರು. ಕ್ರಾಂತಿಕಾರಿ ಮಾರ್ಗದಿಂದ ಮಾತ್ರ ದೇಶದ ಸ್ವಾತಂತ್ರ್ಯ ಗಳಿಸಬಹುದು ಎಂದು ಅವರು ಬಲವಾಗಿ ನಂಬಿದ್ದರು.

1905ರಲ್ಲಿ ಬ್ರಿಟಿಷರು ಬಂಗಾಳವನ್ನು ಧರ್ಮದ ನೆಲೆಯಲ್ಲಿ ವಿಭಜಿಸುವುದನ್ನು ವಿದ್ಯಾರ್ಥಿಗಳು ಉಗ್ರವಾಗಿ ಪ್ರತಿಭಟಿಸಿದರು. ಬಂಗಾಳ ವಿಭಜನೆ ವಿರೋಧದ ಹೋರಾಟ 20ನೇ ಶತಮಾನದ ವಿದ್ಯಾರ್ಥಿ ಕ್ರೀಯಾಶೀಲತೆಯ ಮಹಾ ಸಾಧನೆ ಅಥವಾ ಹೆಗ್ಗುರುತು ಎಂದು ಪರಿಗಣಿಸಲಾಗಿದೆ. ಕಲ್ಕತ್ತಾ ಈಡನ್ ಹಿಂದೂ ಹಾಸ್ಟೆಲಿನ ವಿದ್ಯಾರ್ಥಿಗಳು ಲಾರ್ಡ ಕರ್ಜನ್‍ರವರ ಪ್ರತಿಕೃತಿಯನ್ನು ದಹಿಸಿದರಲ್ಲದೆ, ಪರೀಕ್ಷೆಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. ಬಂಗಾಳ ವಿಭಜನೆ ವಿರೋಧಿ ಚಳುವಳಿಯೂ ವಿದ್ಯಾರ್ಥಿಗಳ ಸಕ್ರೀಯ ಭಾಗವಹಿಸುವಿಕೆಯಿಂದ ಒಂದು ಸ್ಪಷ್ಟ ಸ್ವರೂಪ ಪಡೆದುಕೊಂಡಿತ್ತು.

ಇನ್ನು  ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಚಳವಳಿಗೆ ಅರ್ಥ ಪೂರ್ಣವಾದ ಕೊಡುಗೆಯನ್ನು ನೀಡಿದ್ದಾರೆ. ಬಾಲ ಗಂಗಾಧರ ತಿಲಕ ಮತ್ತು ಮಹಾತ್ಮ ಗಾಂಧೀಯವರ ನೇತ್ರತ್ವದಲ್ಲಿ ವಿದ್ಯಾರ್ಥಿ ಸಮುದಾಯ ಮಾಸ್ ಪೊಲಿಟಿಕ್ಸಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಭಾರತದ ವಿದ್ಯಾರ್ಥಿಗಳು 1917ರಲ್ಲಿ ರಷಿಯಾದಲ್ಲಿ ಸಂಭವಿಸಿದ ಅಕ್ಟೋಬರ್ ಕ್ರಾಂತಿಯಿಂದ ತುಂಬಾ ಪ್ರಭಾವಿತಕ್ಕೊಳಗಾಗಿದ್ದರು.ಅಷ್ಟೇ ಅಲ್ಲದೆ ಯುರೋಪಿನ ವಿಚಾರಧಾರೆಗಳಿಂದಲೂ ಸಾಕಷ್ಟು ಪ್ರಭಾವಕ್ಕೊಳಗಾಗಿ ಉದಾತ್ತ ಕಾರಣಗಳಿಗಾಗಿ ಹೋರಾಡಲು ಕಂಕಣ ಬದ್ಧರಾದರು. ಇದಕ್ಕೆ 1920ರ ಅಸಹಕಾರ ಚಳುವಳಿ, 1919ರ ಜಾಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು 1942ರ ಭಾರತ ಬಿಟ್ಟು ತೊಲಗಿ ಚಳುವಳಿಗಳೆ ಸಾಕ್ಷಿ. ವಿದ್ಯಾರ್ಥಿ ಸಮುದಾಯದ ರಾಜಕೀಯ ಜೀವನಕ್ಕೆ ಈ ಚಳುವಳಿಗಳು ಹೊಸ ತಿರುವು ನೀಡಿದವು. ರಾಷ್ಟ್ರೀಯ ಕಾಂಗ್ರೆಸ್ಸ್ಸಿನ ನಾಯಕರು ಬಹಿರಂಗವಾಗಿ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಅಷ್ಟೇ ಅಲ್ಲದೆ ಕಾಂಗ್ರೆಸ್ಸಿನ ನಾಯಕರು ಬಂಧನಕ್ಕೊಳಗಾದಾಗ, ವಿದ್ಯಾರ್ಥಿಗಳು ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡರು. ಅಸಹಕಾರ ಚಳುವಳಿಯು ಭಾರತದಲ್ಲಿ ‘ನ್ಯಾಷನಲ್ ಸ್ಟುಡೆಂಟ್ ಫೆಡರೆಷನ್’ ಎಂಬ ಸಂಘಟನೆ ರಚಿಸಲು ಪ್ರಚೋದಿಸಿತ್ತು.ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ ಕಾಲೇಜು ವಿದ್ಯಾರ್ಥಿಗಳ ಸಮ್ಮೇಳನವನ್ನು ಲಾಲಾ ಲಜಪತರಾಯ್ ಅವರ ಅಧ್ಯಕ್ಷತೆಯಲ್ಲಿ 1920ರಲ್ಲಿ ನಾಗಪೂರದಲ್ಲಿ ಸಂಘಟಿಸಲಾಯಿತು.ಇದೇ ವೇಳೆಗೆ ಪ್ರಾದೇಶಿಕ ವಿದ್ಯಾರ್ಥಿ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.ಈ ವಿದ್ಯಾರ್ಥಿ ಸಮ್ಮೇಳನಗಳ ಅಧ್ಯಕ್ಷತೆಯನ್ನು ಆಗಿನ ಪ್ರಮುಖ ವ್ಯಕ್ತಿಗಳಾದ ಲಾಲಾ ಲಜಪತರಾಯ್, ಸರೋಜಿನಿ ನಾಯ್ಡು, ಭಗವಾನದಾಸ, ಸಿ.ಆರ್.ದಾಸ್. ಮತ್ತು ಜವಹರಲಾಲ ನೆಹರು ವಹಿಸಿದ್ದರು ಎಂಬುದು ಗಮನಾರ್ಹವಾದ ವಿಷಯ. “ಆ ಅವಧಿಯಲ್ಲಿ ಭಾರತದ ರಾಜಕೀಯ ಜೀವನದಲ್ಲಿ ವಿದ್ಯಾರ್ಥಿ ಚಳುವಳಿಯು ಅತ್ಯಂತ ಮಹತ್ವವಾದ ಮೂಲಾಂಶವಾಗಿತ್ತು” ಎಂದು ಅಲ್ತಬಷ್ ಜಿ ಫೀಲಿಫ್ ಅಭಿಪ್ರಾಯ ಪಡುತ್ತಾರೆ.

ದೇಶ ಸ್ವಾತಂತ್ರ್ಯಗಳಿಸಿದ ನಂತರ, ವಿದ್ಯಾರ್ಥಿ ಚಳುವಳಿಯೂ ತನ್ನ ತೀವೃತೆಯನ್ನು ಕಳೆದುಕೊಂಡಿತ್ತು.ಸ್ವಾತಂತ್ರ್ಯ ನಂತರ,ವಿದ್ಯಾರ್ಥಿ ಚಳುವಳಿಯಲ್ಲಿ ಸಾಕಷ್ಟು ಗಮನಾರ್ಹವಾದ ಬದಲಾವಣೆಗಳಾದವು.1950ರಲ್ಲಿ ಕಾಂಗ್ರೆಸ್ಸ್ ನಾಯಕತ್ವವು ವಿದ್ಯಾರ್ಥಿಗಳು ಪಕ್ಷ ರಾಜಕೀಯದಿಂದ ದೂರ ಉಳಿಯಬೇಕು ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಲು ಪ್ರಾರಂಭಿಸಿದರು. ಪಂಡಿತ ಜವಾಹರಲಾಲ ನೆಹರು ಅವರು “ವಿದ್ಯಾರ್ಥಿಗಳು ರಾಜಕೀಯ ಅಧ್ಯಯನ ಮಾಡಬೇಕು, ದೇಶದಲ್ಲಿ ಸಂಭವಿಸುತ್ತಿರುವ ರಾಜಕೀಯ ವಿದ್ಯಮಾನಗಳ ಅರಿವು ಇರಬೇಕು ಆದರೆ ಅವರು ಅನವಶ್ಯಕವಾಗಿ ರಾಜಕೀಯದಲ್ಲಿ ಭಾಗವಹಿಸಬಾರದು.ಅವರು ತಮ್ಮ ಹೆಚ್ಚಿನ ಸಮಯವನ್ನು ಓದಿನಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ಹೇಳಿದ ನೆಹರು ಸ್ವಾತಂತ್ರ್ಯ ನಂತರ ತಮ್ಮ ನಿಲುವು ಬದಲಾಯಿಸಿದ್ದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಡುತ್ತದೆ.

ಸ್ವಾತಂತ್ರ್ಯ ನಂತರ ವಿದ್ಯಾರ್ಥಿ ಪ್ರತಿಭಟನಾ ಚಳುವಳಿಯು ಅರಾಜಕೀಯಕರಣ ಮತ್ತು ಪ್ರತ್ಯೇಕಿಕರಣಗೊಳಿಸಲಾಯಿತು.ಈ ಪ್ರವೃತಿಗೆ ಹಲವಾರು ಕಾರಣಗಳನ್ನು ಗುರುತಿಸಬಹುದಾಗಿದೆ. ಮೊದಲನೆಯದಾಗಿ ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚುತ್ತಿರುವ ವೈವಿಧ್ಯತೆ. ಈ ಕಾರಣದಿಂದಾಗಿ ಇಂದು ವಿದ್ಯಾರ್ಥಿಗಳಲ್ಲಿ ಏಕತೆ ಇಲ್ಲದಂತಾಗಿದೆ. ಎರಡನೆಯದಾಗಿ ಉದಾತ್ತ ಕಾರಣಗಳಿಗಾಗಿ ಸ್ವಾರ್ಥತ್ಯಾಗ ಮತ್ತು ಬದ್ಧತೆಯ ಉತ್ಸಾಹ ಸ್ವಾತಂತ್ರ್ಯ ನಂತರ ಕಣ್ಮರೆಯಾಗಿರುವುದು ಮತ್ತು ಇಂದು ರಾಜಕೀಯ ನಾಯಕರು ರಾಷ್ಟ್ರಪುನರ್‍ನಿರ್ಮಾಣಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ನಿರೀಕ್ಷಣೆಯಲ್ಲಿರುವುದು. ಮೂರನೆಯದಾಗಿ ರಾಷ್ಟ್ರದ ರಾಜಕೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಸ್ಥಿರತೆಯು ವಿದ್ಯಾರ್ಥಿ ರಾಜಕೀಯವು ರಾಷ್ಟ್ರ ರಾಜಕೀಯದ ಮೇಲೆ ಪ್ರಭಾವ ಬೀರುವುದನ್ನು ಕಡಿಮೆಮಾಡಿತ್ತು. ನಾಲ್ಕನೆಯದಾಗಿ ಸ್ವಾತಂತ್ರ್ಯ ಪೂರ್ವ ವಿಶ್ವವಿದ್ಯಾಲಯಗಳು ಕಲಾ ಮತ್ತು ಸಮಾಜ ವಿಜ್ಞಾನಗಳಿಗೆ ಹೆಚ್ಚಿನ ಆದ್ಯತೆ ನೀಡಿದವು. ಈ ವಿಭಾಗದ ವಿದ್ಯಾರ್ಥಿಗಳು ಬೌದ್ಧಿಕ ಚಟುವಟಿಕೆಗಳಿಗೆ ಮತ್ತು ರಾಜಕೀಯ ವಿದ್ಯಮಾನಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ವೈಚಾರಿಕ ಪ್ರತಿಭಟನೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು.ಆದರೆ ಸ್ವಾತಂತ್ರ್ಯ ನಂತರ ಪೃತ್ತಿಪರ ಕೋರ್ಸಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಈ ವಿಭಾಗದ ವಿದ್ಯಾರ್ಥಿಗಳು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ತೀರಾ ಕಡಿಮೆ. ಹೀಗಾಗಿ ಸ್ವಾತಂತ್ರ್ಯ ನಂತರ ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸುವುದು ಕಡಿಮೆಯಾಯಿತು.

2 ಟಿಪ್ಪಣಿಗಳು Post a comment
 1. Rajkumar.V.Kulkarni
  ಫೆಬ್ರ 5 2016

  ಚಳವಳಿ ಅಥವಾ ಆಂದೋಲನಗಳು ಯಶಸ್ವಿಯಾಗುವಲ್ಲಿ ವಿದ್ಯಾರ್ಥಿ ಸಮೂಹದ ಕೊಡುಗೆ ಬಹಳಷ್ಟಿದೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ರೂಪಿಸುವ ಬಹುಮಹತ್ವದ ಕೇಂದ್ರಗಳು. ಆದರೆ ಕಾಲಾನಂತರ ಎಡಪಂಥೀಯರ ವಿಚಾರಧಾರೆಯ ಶಕ್ತಿ ಕೇಂದ್ರಗಳಾಗಿ ಪರಿವರ್ತಿತವಾದ ನಮ್ಮ ವಿಶ್ವವಿದ್ಯಾಲಯಗಳು ಚಳವಳಿ ಅಥವಾ ಆಂದೋಲನದ ವಿಷಯವಾಗಿ ವಿದ್ಯಾರ್ಥಿಗಣದಲ್ಲಿ ರಾಷ್ಟ್ರವಿಭಜಕ ಚಿಂತನೆಯನ್ನು ಬಿತ್ತತೊಡಗಿದವು. ಇದು ವ್ಯವಸ್ಥೆಯೊಂದರ ಕ್ರೂರ ವ್ಯಂಗ್ಯ. ಲೇಖಕರಾದ ಶ್ರೀ ಬಿ.ಜಿ.ಕುಲಕರ್ಣಿ ಅವರ ಈ ವಿಮರ್ಶಾ ಲೇಖನ ವಸ್ತುನಿಷ್ಠವಾಗಿದ್ದು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿರುವರು. ಅವರೇ ಹೇಳುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಕೋರ್ಸುಗಳಿಗೆ ಪ್ರಾಧ್ಯಾನ್ಯತೆ ದೊರೆತು ವಿದ್ಯಾರ್ಥಿಗಳಲ್ಲಿ ಒಂದು ಸಾಮಾಜಿಕ ಚಿಂತನೆಯನ್ನು ಬೆಳೆಸುವ ಕಾರ್ಯಕ್ಕೆ ಹಿನ್ನೆಡೆಯಾಯಿತು ಎನ್ನುವ ಅವರ ಮಾತು ಒಪ್ಪಿಕೊಳ್ಳುವಂಥದ್ದು.

  ಉತ್ತರ
 2. Nethrak
  ಫೆಬ್ರ 17 2017

  It helped me lot to my essay thank you.good writing to in Kannada good job

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments