ಗುರುತ್ವದ ಅಲೆಗಳಲ್ಲಿ ಕೇಳುವ ಬ್ರಹ್ಮಾಂಡದ ಸಂಗೀತ
– ವಿನಾಯಕ ಹಂಪಿಹೊಳಿ
ನೀವು ಅಂತರಿಕ್ಷದ ಆಕಾಶನೌಕೆಯೊಂದರಲ್ಲಿದ್ದೀರಿ ಎಂದು ಭಾವಿಸಿ. ಆ ನೌಕೆಯು ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಚಲಿಸಲಾರಂಭಿಸಿತು ಎಂದಿಟ್ಟುಕೊಳ್ಳಿ. ಆ ನೌಕೆಯ ಕಿಟಕಿ ಬಾಗಿಲುಗಳೆಲ್ಲವೂ ಮುಚ್ಚಿವೆ ಎಂದು ಊಹಿಸಿ. ಆಗ ಅದು ವೇಗೋತ್ಕರ್ಷದಿಂದ ಚಲಿಸುತ್ತಿರುವ ಅನುಭವ ನಿಮಗೆ ನೇರವಾಗಿ ಆಗುವದಿಲ್ಲ. ಅದನ್ನು ಹೇಗೆ ತಿಳಿಯುತ್ತೀರಿ? ಸುಲಭ. ಆಗ ನಿಮ್ಮ ಕೈಯಲ್ಲಿನ ಚೆಂಡನ್ನು ಬಿಟ್ಟು ಬಿಡಿ. ಒಂದು ವೇಳೆ ನೌಕೆಯು ಏಕವೇಗದಿಂದ ಹೋಗುತ್ತಿದ್ದರೆ ಆ ಚೆಂಡು ಅಲ್ಲೇ ಇರುತ್ತದೆ. ನೌಕೆ ವೇಗೋತ್ಕರ್ಷವನ್ನು ಹೊಂದುತ್ತಿದ್ದರೆ ಚೆಂಡು ಮತ್ತು ನೌಕೆಯ ತಳದ ಅಂತರ ಕಡಿಮೆಯಾಗುತ್ತ ಸಾಗಿ ಕೊನೆಗೆ ನಿಮ್ಮ ಕಾಲ ಬಳಿ ಬಂದು ನೌಕೆಯ ತಳ ಭಾಗಕ್ಕೆ ಬಡಿಯುತ್ತದೆ. ಆಗ ನಿಮಗೆ ಚೆಂಡು ಕೆಳಗೆ ಬಿದ್ದಂತೆ ಕಾಣುತ್ತದೆ.
ಸರಿ. ಈ ಕಾಲ್ಪನಿಕ ಪ್ರಯೋಗದ ಲಾಭವೇನು? ತುಂಬಾ ಇದೆ. ಹೊರಗಡೆಯ ಸಂಪರ್ಕವೇ ಇಲ್ಲದ ಅಂಥ ನೌಕೆ ೯.೮ ಮೀ/ಸೆ೨ ವೇಗೋತ್ಕರ್ಷದಿಂದ ಮುನ್ನುಗ್ಗುತ್ತಿದ್ದರೆ, ನಿಮಗೆ ಭೂಮಿಯ ಮೇಲೆ ಇದ್ದ ಅನುಭವವೇ ಆಗುತ್ತಿರುತ್ತದೆ. ಎಲ್ಲಿಯವರೆಗೆ ನೀವು ಕಿಟಕಿ ತೆರೆದು ಹೊರಜಗತ್ತನ್ನು ನೋಡುವದಿಲ್ಲವೋ ಅಲ್ಲಿಯವರೆಗೂ ನಿಮಗೆ ಆಕಾಶದಲ್ಲಿದ್ದೇವೆ ಎಂದೇ ಅನಿಸುವದಿಲ್ಲ. ಹಾಗೆ ಅನ್ನಿಸಬೇಕಾದರೆ ನೀವು ಮುಚ್ಚಿರುವ ನೌಕೆಯಿಂದ ಆಚೆಗಿನ ಜಗತ್ತಿನೆಡೆ ಕಣ್ಣು ಹಾಯಿಸಬೇಕು. ಆಗಲೇ “ಒಹೋ! ಭೂಮಿಯ ಮೇಲಿಲ್ಲ!!” ಎಂಬ ಅನುಭವ ಬರುತ್ತದೆ. ಕನಸನ್ನು ಕಾಣುತ್ತಿರುವಾಗ ಈ ಕನಸು ಸುಳ್ಳು ಎಂದು ಎಂದಾದರೂ ಅನಿಸಿದೆಯೇ? “ಒಹೋ! ಕನಸಾ!!” ಎಂಬ ಸುಳ್ಳಿನ ಅರಿವು ಉಂಟಾಗುವದು ಎಚ್ಚರವಾದ ಮೇಲೇ ಅಲ್ಲವೇ? ಹಾಗೇ ಇದು.
ವೇಗೋತ್ಕರ್ಷಕ್ಕೊಳಪಟ್ಟ ಅವಕಾಶ ಮತ್ತು ಗುರುತ್ವಕ್ಕೆ ಒಳಪಟ್ಟ ಅವಕಾಶಗಳಲ್ಲಿ ಪರಿಣಾಮ ಸಾಮ್ಯತೆಯನ್ನು ಕಾಣಬಹುದು. ಅಂದರೆ ವೇಗೋತ್ಕರ್ಷಕ್ಕೆ ಒಳಪಟ್ಟ ಅವಕಾಶದಲ್ಲಿ ಕಾಣುವ ಅನುಭವ ಗುರುತ್ವದ ಅವಕಾಶದಲ್ಲಿ ಕಾಣುವ ಅನುಭವಕ್ಕೆ ಸಮಾನವಾಗಿರುತ್ತವೆ. ಈಗ ನಾವು ನೂರು ವರ್ಷಗಳ ಹಿಂದೆ ಐನ್ಸ್ಟೈನ್ ತನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದಲ್ಲಿ ಏನು ಊಹಾಸಿದ್ಧಾಂತವನ್ನು ಮಾಡಿದ್ದಾನೋ ಅಲ್ಲಿಗೆ ಬಂದಿದ್ದೇವೆ. ಎರಡು ಪ್ರೋಟಾನುಗಳು ಅತ್ಯಂತ ಹೆಚ್ಚಿನ ಗುರುತ್ವದಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಯಲು ಅಷ್ಟು ಗುರುತ್ವವಿರುವ ಗ್ರಹವನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅಷ್ಟೇ ಪ್ರಮಾಣದ ವೇಗೋತ್ಕರ್ಷಕ್ಕೆ ಒಳಪಟ್ಟ ಅವಕಾಶದಲ್ಲಿಯೇ ಅದರ ವರ್ತನೆಯನ್ನು ಕಂಡುಕೊಂಡು ಅರಿತುಕೊಳ್ಳಬಹುದು.
ಐನ್ಸ್ಟೈನ್ ಗುರುತ್ವಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದನು. ಸೀರೆಯನ್ನು ನೇಯುವಾಗ ನೂಲುಗಳನ್ನು ಪರಸ್ಪರ ಲಂಬವಾಗಿರಿಸಿ ನೇಯುತ್ತೇವಲ್ಲವೇ? ಹಾಗೆಯೇ ಪ್ರಕೃತಿಯು ದೇಶಕಾಲಗಳೆಂಬ ನೂಲುಗಳನ್ನು ಪರಸ್ಪರ ಲಂಬವಾಗಿಟ್ಟು ನೇಯ್ದು ಈ ಅವಕಾಶವನ್ನು ನಿರ್ಮಿಸಿದೆ ಎಂಬುದು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ. ಅಂದರೆ ಈ ಆಕಾಶವು ಪ್ರಕೃತಿ ಮಾತೆ ತೊಟ್ಟ ದೇಶಕಾಲಗಳ ನೂಲಿನ ೪ ಆಯಾಮಗಳ ಸೀರೆ ಎನ್ನೋಣವೇ? ಖಂಡಿತ ನಿಮ್ಮ ಕಾವ್ಯಲಹರಿ ಸರಿಯಾದದ್ದೇ. ಸೀರೆಯನ್ನು ೪ ಜನ ಹಿಡಿದು ಮಧ್ಯದಲ್ಲಿ ಭಾರವಾದ ವಸ್ತು ಹಾಕಿದರೆ ಏನಾಗುತ್ತದೆ? ಸೀರೆಯ ನೂಲುಗಳು ವಾಲುತ್ತವೆ. ಆಗ ಚಿಕ್ಕ ಬಟಾಣಿ ಕಾಳೊಂದನ್ನು ನೀವು ಸೀರೆಯ ಮೇಲೆ ಚಲಿಸಲು ಬಿಟ್ಟರೆ ಅದು ಹೇಗೆ ಹೋಗುತ್ತದೆ? ಭಾರ ವಸ್ತುವಿನತ್ತ ವಾಲುತ್ತ ಸಾಗುತ್ತದೆ. ವೇಗ ಜಾಸ್ತಿಯಿದ್ದರೆ ತಪ್ಪಿಸಿಕೊಳ್ಳುತ್ತದೆ. ಇಲ್ಲವಾದರೆ ಸುತ್ತುಬಳಸುತ್ತ ಆ ಭಾರವಾದ ವಸ್ತುವಿಗೆ ಬಂದು ಬೀಳುತ್ತದೆ. ಇದು ಮುಂದೆ ಹೇಳಲಿರುವ ವಿಷಯವನ್ನು ಅರ್ಥೈಸಿಕೊಳ್ಳಲು ಬೇಕಾಗಿರುವ ಕಲ್ಪನೆ ಅಷ್ಟೇ.
ಐನ್ಸ್ಟೈನ್ ಗುರುತ್ವಾಕರ್ಷಣೆಗೆ ನೀಡಿದ ಹೊಸ ವ್ಯಾಖ್ಯಾನ ಏನು? ದ್ರವ್ಯರಾಶಿಯು ದೇಶಕಾಲಗಳ ನೂಲನ್ನು ವಾಲುವಂತೆ ಮಾಡುತ್ತವೆ. ಬೆಳಕು ಈ ದೇಶಕಾಲಗಳ ನೂಲಿನ ಮೂಲಕ ಪ್ರಸಾರವಾಗುವಾಗ ವಾಲಿಕೊಂಡು ಹೋಗುತ್ತದೆ. ಹೀಗಾಗಿ ಬೆಳಕೂ ಕೂಡ ತಕ್ಕ ಮಟ್ಟಿಗೆ ಗುರುತ್ವಕ್ಕೆ ಒಳಪಟ್ಟು ವಾಲುತ್ತದೆ. ಸೂರ್ಯನ ದ್ರವ್ಯರಾಶಿಯು ತನ್ನ ಸುತ್ತಮುತ್ತಲಿನ ದೇಶಕಾಲಗಳ ನೂಲುಗಳನ್ನು ಎಷ್ಟು ವಾಲಿಸಿವೆಯೆಂದರೆ ಭೂಮಿಯಂಥ ಅತಿ ಚಿಕ್ಕ ಕಾಯಗಳು ತಮ್ಮ ಅತ್ಯಲ್ಪವೇಗದಿಂದ ತಪ್ಪಿಸಿಕೊಳ್ಳಲಾಗದೇ ಸೂರ್ಯನ ಮೇಲೆ ಸುತ್ತು ಹಾಕುತ್ತ ಮುಂದೊಂದು ದಿನ ಸೂರ್ಯನ ಮೇಲೆ ಬೀಳಲಿವೆ. ಅಂದರೆ ಗುರುತ್ವವನ್ನು ಐನ್ಸ್ಟೈನ್ ದೇಶಕಾಲದ ನೂಲುಗಳ ಮೂಲಕ ಸಾಗುವ ಅಲೆ ಎಂದು ಊಹಿಸುತ್ತಾರೆ. ಸೀರೆಯನ್ನು ಕೊಡವಿದಾಗ ನೂಲುಗಳು ಅಲೆಯ ಪ್ರಸಾರ ಮಾಡುವಂತೆ.
ಈ ಅಲೆಗಳು ಬೆಳಕಿನ ವೇಗದಲ್ಲಿ ಪ್ರಸಾರವಾಗುತ್ತವೆ. ಉದಾಹರಣೆಗೆ ಸೂರ್ಯ ಇದ್ದಕ್ಕಿದ್ದ ಹಾಗೇ ಸ್ಫೋಟಿಸಿ ಎರಡು ಹೋಳಾದ ಎಂದಿಟ್ಟುಕೊಳ್ಳಿ. ಆಗ ಅದರ ದ್ರವ್ಯರಾಶಿಯಲ್ಲಿ ಬದಲಾವಣೆಯಾಗುತ್ತದೆ. ಅದರ ಪರಿಣಾಮ ಭೂಮಿಯ ಮೇಲೆ ತತ್ ಕ್ಷಣವೇ ಆಗುತ್ತದೆಯೇ? ಇಲ್ಲ. ಆಗ ಆದ ಸ್ಫೋಟ ದೇಶಕಾಲಗಳ ಸೀರೆಯನ್ನು ಚೆನ್ನಾಗಿ ಕೊಡವುತ್ತದೆ. ಆ ನೂಲುಗಳು ಆ ಕಂಪನವನ್ನು ಪ್ರಸಾರ ಮಾಡುತ್ತ ಬೆಳಕಿನ ವೇಗದಲ್ಲಿ ಭೂಮಿಗೆ ಏಳೂವರೆ ನಿಮಿಷಗಳ ನಂತರ ಬಂದು ತಲುಪಿಸುತ್ತದೆ. ಆಗ ಅದು ಭೂಮಿಯ ಚಲನೆಯಲ್ಲಿ ಬದಲಾವಣೆಯನ್ನು ಉಂಟು ಮಾಡುತ್ತದೆ. ಇದು ಗುರುತ್ವದ ಅಲೆಗಳ ಲಕ್ಷಣವನ್ನು ತಿಳಿಸಲು ಐನ್ಸ್ಟೈನ್ ಕೊಡುವ ವಿವರಣೆ. ಹೀಗೆ ಗುರುತ್ವವನ್ನು ಸಾಮಾನ್ಯ ಸಾಪೇಕ್ಷತೆಯ ಊಹಾಸಿದ್ಧಾಂತಗಳ ಅಡಿ ಪುನರ್ವ್ಯಾಖ್ಯಾನಿಸಬಹುದಾಗಿದೆ.
ಹಾಗಿದ್ದರೆ ಈ ಗುರುತ್ವದ ಅಲೆಗಳನ್ನು ಅನುಭವದಲ್ಲಿ ಕಂಡುಕೊಳ್ಳಲು ಸಾಧ್ಯವಿದೆಯೇ? ಈ ಉತ್ತರಕ್ಕಾಗಿ ನೂರು ವರ್ಷಗಳಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. ಆ ಅಲೆಗಳ ಅಸ್ತಿತ್ವದ ಅನುಭವವನ್ನು ಪ್ರಯೋಗಗಳ ಮೂಲಕ ಕಂಡುಕೊಳ್ಳಲು ಸಾಧ್ಯವಾದರೆ ಭೌತಶಾಸ್ತ್ರದ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ. ಕಾರಣ ನಮಗಿಂತ ಸೂಕ್ಷ್ಮ ಕಿವಿ ಹೊಂದಿರುವ ಪ್ರಾಣಿಗಳು ಭೂಮಿಯ ಅಂತರಾಳದಲ್ಲಾದ ಕಂಪನಗಳನ್ನು ಮೊದಲೇ ಅರಿತು ಸುನಾಮಿ, ಭೂಕಂಪಗಳಂಥ ಪ್ರಾಕೃತಿಕ ಅವಘಡಗಳಿಂದ ತಪ್ಪಿಸಿಕೊಳ್ಳುವದನ್ನು ನೋಡಿದ್ದೇವೆ. ಹಾಗೆಯೇ ಇಂಥ ಗುರುತ್ವದ ಕಂಪನಗಳು ಟೆಲಿಸ್ಕೋಪಿಗೆ ಕಾಣದ ಕೃಷ್ಣರಂಧ್ರದ ಜಗತ್ತಿನ ಆಗುಹೋಗುಗಳ ಕುರಿತು ನಿಖರ ಮಾಹಿತಿ ನೀಡಬಲ್ಲದು. ಜಗತ್ತಿನ ಆರಂಭದಲ್ಲಿ ನಡೆದ ಮಹಾಸ್ಫೋಟದ ಕುರಿತು ಮಾಹಿತಿ ನೀಡಬಹುದು. ಗುರುತ್ವದ ಅಲೆ ಎನ್ನುವದು ಪ್ರಕೃತಿಯ ನೇರಪ್ರಸಾರ ಕಾರ್ಯಕ್ರಮ. ಅದನ್ನು ಹಿಡಿದಿಡುವ ಆಂಟೆನಾ ಬೇಕಷ್ಟೇ.
ಅಂಥ ಆಂಟೆನಾವೊಂದನ್ನು ಸಿದ್ಧಪಡಿಸಲಾಗಿತ್ತು. ಅದರ ಹೆಸರು ಲಿಗೋ (LIGO – Laser Interferometer Gravitational-wave Observatory). ಅದು ಕಳೆದ ವರ್ಷ ಸಪ್ಟೆಂಬರ್ ೧೪ರಂದು ಬೆಳಿಗ್ಗೆ ೪ ಗಂಟೆ ಸುಮಾರಿಗೆ (ಆ ಉಪಕರಣವಿರುವ ಜಾಗದ ಸಮಯ) ಅತ್ಯಂತ ವಿಶೇಷ ಅಂಶಗಳನ್ನು ದಾಖಲಿಸಿತು. ಕಾರಣ ಆ ಅಲೆಗಳು ಸಾಧಾರಣ ಅಲೆಗಳಾಗಿರಲಿಲ್ಲ. ಬಿಲಿಯನ್ ವರ್ಷಗಳ ಹಿಂದೆ ಎರಡು ಕೃಷ್ಣರಂಧ್ರಗಳು ಬೆಳಕಿಗಿಂತ ತುಸು ಕಡಿಮೆ ವೇಗದಲ್ಲಿ ಪರಸ್ಪರ ಸುರುಳಿ ಸುತ್ತುತ್ತಾ ಓಡಿಬಂದು ಏಕವಾಗಿದ್ದ ಸಂದರ್ಭದಲ್ಲಿ ಉಂಟಾಗಿದ್ದ ದೇಶಕಾಲನೂಲುಗಳ ಕಂಪನಗಳಾಗಿದ್ದವು. ಅದು ದಾಖಲಿಸಿದ ಗುರುತ್ವದ ಅಲೆಗಳು ಪ್ರಕೃತಿಯ ಅತ್ಯಂತ ರಹಸ್ಯಮಯವಾದ ಘಟನೆಯೊಂದರ ಕುರಿತು ಮಾಹಿತಿಯನ್ನು ನೀಡಿತು. ಕೃಷ್ಣರಂಧ್ರಗಳು ಇವೆ ಅಷ್ಟೇ ಅಲ್ಲ, ಗೆಲಾಕ್ಸಿಗಳ ಮಧ್ಯಭಾಗದಲ್ಲಿ ಕೃಷ್ಣರಂಧ್ರಗಳು ಹೇಗೆ ನಿರ್ಮಾಣವಾಗಿವೆ ಎಂಬುದರ ಕುರಿತು ನಿಖರ ಮಾಹಿತಿ ನೀಡಿದವು. ಈ ಕಲ್ಪನೆಯ ಆಧಾರದ ಮೇಲೆ ಸದ್ಯದಲ್ಲೇ ಹಾಲಿವುಡ್ ನಿರ್ದೇಶಕರು ಇಂಥ ಗುರುತ್ವದ ಅಲೆಗಳು ಅಮೇರಿಕವನ್ನು ನಾಶ ಮಾಡಲು ಬರುತ್ತಿರುವಂತೆ ಸೈಫಿ ಚಲನಚಿತ್ರವನ್ನೂ ಮಾಡಬಹುದೇನೋ??
ಲಿಗೊ ಬಿಡುಗಡೆ ಮಾಡಿರುವ ಲೇಖನದಲ್ಲಿ, ಎರಡು ಕೃಷ್ಣರಂಧ್ರಗಳು ಹೇಗೆ ಸೇರಿಕೊಂಡವು ಎನ್ನುವದರ ಕುರಿತು ಕಾಲ್ಪನಿಕ ವಿಡಿಯೋ ಒಂದನ್ನು ನೋಡಬಹುದು. ಆಗ ಆದ ಘಟನೆ ಉಂಟು ಮಾಡಿದ ಅಲೆಗಳನ್ನು ಸಂಸ್ಕರಿಸಿ, ಮನುಷ್ಯನ ಕಿವಿಗೆ ಕೇಳುವಂತೆ ಮಾಡಿದರೆ ಹೇಗಾಗುತ್ತದೆ ಎನ್ನುವದನ್ನೂ ಆ ವಿಡೀಯೋ ತೋರಿಸಿದೆ. ಮೂರು ಸ್ವರಗಳಲ್ಲಿ ಕೇಳಿ ಬರುವ ಈ ಸಂಗೀತ ಬಿಲಿಯನ್ ವರ್ಷಗಳ ಹಿಂದೆ ಪ್ರಕೃತಿ ನಡೆಸಿದ ಸಂಗೀತ ಕಾರ್ಯಕ್ರಮದ ನೇರಪ್ರಸಾರ. ಬಹುಶಃ ಎಲ್ಲ ಗೆಲಾಕ್ಸಿಗಳಿಂದ ಬರುತ್ತಿರುವ ಇಂಥ ಗುರುತ್ವದ ಅಲೆಗಳನ್ನು ಕೇಳುವಷ್ಟು ಶಕ್ತಿಶಾಲೀ ಉಪಕರಣಗಳು ಬಂದರೆ ಬ್ರಹ್ಮಾಂಡದಲ್ಲಿ ಅಖಂಡವಾಗಿ ನಡೆಯುತ್ತಿರುವ ಸಂಗೀತವನ್ನು ಆಲಿಸಬಹುದು. ಈ ಅಲೆಗಳು ಹೊತ್ತು ತರುವ ಮಾಹಿತಿಗಳಂತೂ ಬ್ರಹ್ಮಾಂಡದ ಅನೇಕ ರಹಸ್ಯಗಳನ್ನು ತೆರೆದಿಡಬಹುದು. “ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ!” ಎಂಬ ಹಾಡು ಜ್ಞಾಪಕಕ್ಕೆ ಬರುತ್ತಿದೆ ತಾನೇ?
ಎಲ್ಲ ಸರಿ, ಬೆಳಕನ್ನು ಮೊದಲು ತರಂಗ ಎಂದಿರಿ ಆಮೇಲೆ ಫೋಟೋನ್ ಎಂದು ಮತ್ತೆ ಹೇಳಿದಿರಿ. ಇದೇ ಗತಿ ಎಲೆಕ್ಟ್ರಾನಿಗೂ ಬಂತು. ಈ ಗುರುತ್ವದ ಅಲೆಯನ್ನೂ ಮುಂದೊಂದು ದಿನ ಕಣವೆಂದು ಭಾವಿಸಬೇಕಾದ ಪ್ರಸಂಗ ಬರಬಹುದೇ? ಎಂಬ ಪ್ರಶ್ನೆ ನೀವು ಕೇಳಬಹುದು. ಹೌದು. ಖಂಡಿತವಾಗಿಯೂ. ಇದನ್ನು ಐನ್ಸ್ಟೈನ್ ಈಗಾಗಲೇ ಹೇಳಿದ್ದಾರೆ. ಕೃಷ್ಣರಂಧ್ರದಲ್ಲಿ ಅತಿ ಹೆಚ್ಚು ಸಾಂದ್ರತೆ ಇರುತ್ತದೆ. ಆಗ ಎರಡು ಪ್ರೋಟಾನುಗಳ ಮಧ್ಯೆ ಅದೆಷ್ಟು ಕಮ್ಮಿ ಜಾಗ ಇರುತ್ತದೆ ಎಂದರೆ ಆಗ ಪಾರಮಾಣ್ವಿಕ ಬಲಗಳ ಜೊತೆ, ಗುರುತ್ವದ ಬಲವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆಗ ಆ ಕಣಗಳ ನಡುವಿನ ಗುರುತ್ವದ ವಿನಿಮಯವನ್ನು ಗ್ರಾವಿಟನ್ ಎಂಬ ಗುರುತ್ವದ ಕಣದೊಂದಿಗೆ ವಿವರಿಸಬೇಕಾದ ಸಂದರ್ಭ ಬಂದೇ ಬರುತ್ತದೆ. ಆ ಪ್ರಸಂಗ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಗುರುತ್ವದ ಅಲೆಗಳ ಸಂಗೀತದ ಆನಂದವನ್ನು ಅನುಭವಿಸೋಣ.
ಆಗಸವಿದು ಬರಿಯಾಗಸವಲ್ಲವೋ,ಗುರುತ್ವದ ಅಲೆ ಕಾಣೋ
ಆಗಸವಿದು ಬರಿ ಬರಿದಲ್ಲವೋ, ಆ ಭ್ರಾಂತಿಯ ಮಾಣೋ
ಆನಂದಮಯ ಈ ಜಗಹೃದಯ
(ಕುವೆಂಪುರವರ ಕ್ಷಮೆ ಕೋರುತ್ತಾ)
ಚಿತ್ರಕೃಪೆ : ನಾಸಾ
ಗುರುತ್ವದ ಅಲೆಗಳ ಬಗ್ಗೆ ಸರಳವಾದ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಬರೆದ ಶ್ರೀ ವಿನಾಯಕ ಹಂಪಿಹೊಳಿಯವರಿಗೆ ಧನ್ಯವಾದಗಳು.
ವಿಜ್ಞಾನದ ವಿಷಯಗಳನ್ನು ಅದರಲ್ಲೂ ಕಪ್ಪುರಂದ್ರದಂಥಹ ನಮ್ಮೆ ಕಲ್ಪನಗುೂ ಊಹಿಸಲು ಕಷ್ಟವಿರುವ ವಿಷಯ ಸರಳವಾಗಿಿ ಹೇಳದ ಹಂಪಿಯವರಗೆ ಧನ್ಯವಾದಗಳು
It is claimed that the LIGO and LISA projects will detect Einstein’s gravitational waves. The existence of these waves is entirely theoretical. Over the past forty years or so no Einstein gravitational waves have been detected. Now there was a pressure on the research team to either show the results or return the funds back. So came up with a great fiction of the decade which would be qualified for Noble prize also.
Now India is also running behind this fictitious research and may invest at great expense to the public purse: http://www.gw-indigo.org/ligo-india There is a need for Indian spiritual community to protest against this in upcoming days with their convincing intellectual arguments.
LIGO experiment concludes the appearance of magical gravitational wave that originated by the combination of two black holes that happened 1.3 billion years ago. If this is the truth, then the mainstream scientists are ought to accept the VEDIC ASTROLOGY. It can become a strongest argument against people who argue Vedic Astrology is a superstition!
It is a very old fact for even a beginner in Vedic Astrology that waves coming from distant objects viz. stars & planets have prominent effects on Earth. Sages have measured, applied, modified & played with these waves.
Let us not waste our time to convince main stream scientists about the Vedic theories. Even they are not eligible to understand Vedic theories. So some of the refutations against these modern experiments are compiled in my blog with the help of other international refuters. This is for your kind reference:
Link:- http://veda-vijnana.blogspot.in/2016/02/ligos-discovery-is-fallacy.html
ಅತ್ಯುತ್ತಮವಾದ ಲೇಖನ.