ಜೆಎನ್‍ಯು : ಯೂನಿವರ್ಸಿಟಿಯ ಹೆಸರಲ್ಲೇ ದೋಷ ಇರಬಹುದೆ?!
– ರೋಹಿತ್ ಚಕ್ರತೀರ್ಥ
ನೇರಾನೇರವಾಗಿ ವಿಷಯಕ್ಕೆ ಬರೋಣ. ಜವಹರ್‍ಲಾಲ್ ನೆಹರೂ ಹೆಸರಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮೊನ್ನೆ ಫೆಬ್ರವರಿ 9ನೇ ತಾರೀಖು ಡಿಎಸ್‍ಯು (ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್) ಎಂಬ ಸಂಘಟನೆಯ ವಿದ್ಯಾರ್ಥಿಗಳು ಎರಡು ವರ್ಷದ ಹಿಂದೆ ನೇಣುಗಂಬವೇರಿದ್ದ ಒಬ್ಬ ಭಯೋತ್ಪಾದಕನ “ಪುಣ್ಯತಿಥಿ”ಯನ್ನು ಆಚರಿಸಲು ನಿರ್ಧರಿಸಿದ್ದರು. ಕಾರ್ಯಕ್ರಮಕ್ಕೆ ಅವರು ಕೊಟ್ಟಿದ್ದ ಹೆಸರು “ಅಫ್ಜಲ್ ಗುರು ಮತ್ತು ಮಖ್‍ಬೂಲ್ ಭಟ್‍ರ ನ್ಯಾಯಾಂಗ ಹತ್ಯೆಯ ನೆನಪಿನಲ್ಲಿ” ನಡೆಸುವ ಕಾರ್ಯಕ್ರಮ ಎಂದು. ಈ ಡಿಎಸ್‍ಯು ಒಂದು ಮಾವೋವಾದಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ. ದೇಶದೊಳಗಿನ ಮಾವೋವಾದಿ ನಕ್ಸಲರಿಗೆ ಗುಟ್ಟಿನಿಂದಲ್ಲ, ಓಪನ್ ಆಗಿ ಬೆಂಬಲ ಸೂಚಿಸುವ ಸಂಘಟನೆ ಇದು! ಆದರೆ, ಎಲ್ಲಿಯವರೆಗೆ ಈ ಸಂಘಟನೆಯ ವಿದ್ಯಾರ್ಥಿಗಳು ತಾವಾಗಿ ಬಂದೂಕು ಹಿಡಿದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ತಿರುಗಾಡುವುದಿಲ್ಲವೋ ಅಲ್ಲಿಯವರೆಗೂ ಅವರನ್ನು ಸಹಿಸಿಕೊಳ್ಳಬಹುದು ಎಂಬುದು ವಿವಿಯ ಉದಾರ ಧೋರಣೆ. ಫೆಬ್ರವರಿ 9ರಂದು ಆಯೋಜನೆಯಾಗಿದ್ದ ಕಾರ್ಯಕ್ರಮದ ಬಗ್ಗೆ ಕಣ್ಮುಚ್ಚಿ ಕುಳಿತಿದ್ದ (ಅಸಲಿಗೆ ಮಾಹಿತಿಯೇ ಇರದಿದ್ದ) ವಿವಿಯ ಆಡಳಿತ ಮಂಡಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒಂದು ಪತ್ರ ಬರೆದು “ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಸಾರವಾಗಿ ಶಿಕ್ಷೆಗೊಳಪಟ್ಟ ಒಬ್ಬ ಉಗ್ರನ ಹೆಸರಲ್ಲಿ ಅವನ ಪುಣ್ಯತಿಥಿಯನ್ನು ಕ್ಯಾಂಪಸ್ ಒಳಗೆ ಆಚರಿಸುವುದು ಸರಿಯೇ? ಇದು ನ್ಯಾಯಾಂಗ ನಿಂದನೆ ಮಾತ್ರವಲ್ಲ; ದೇಶದ ಸಮಗ್ರತೆಯನ್ನೇ ಪ್ರಶ್ನಿಸುವ ಕೆಲಸ. ಇಂಥ ಅನರ್ಥಗಳು ನಡೆಯದಂತೆ ವಿವಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಕೇಳಿಕೊಂಡಿತು. ಬಹುಶಃ ಆಗ ವಿವಿಗೂ ಈ ಸಂಗತಿ ಮುಂದೆ ಹೇಗೆಲ್ಲ ಕವಲೊಡೆಯಬಹುದು, ಎಷ್ಟು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂಬ ಅಂದಾಜು ಸಿಕ್ಕಿರಬೇಕು. ಕೂಡಲೇ ಅದು ಡಿಎಸ್‍ಯು ಸಂಘಟನೆಯ ಮುಖಂಡರನ್ನು ಕರೆದು, ಇಂಥಾದ್ದನ್ನೆಲ್ಲ ಇಲ್ಲಿ ಇಟ್ಟುಕೊಳ್ಳಬೇಡಿ; ಕ್ಯಾಂಪಸ್ ಹೊರಗೆ ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಸ್ಪಷ್ಟ ಸೂಚನೆ ಕೊಟ್ಟಿತು.
ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಸೂಚಿಸಿದ್ದೂ ಹಾಲು ಅನ್ನ ಅಂದಹಾಗಾಯಿತು ನೋಡಿ ಈಗ. ಡಿಎಸ್‍ಯು ವಿದ್ಯಾರ್ಥಿಗಳಿಗೆ ಬೇಕಾಗಿದ್ದದ್ದು ಬಿಟ್ಟಿ ಪ್ರಚಾರ. ಇಲ್ಲವಾದರೆ, ಕಾರ್ಯಕ್ರಮ ಮಾಡಲು ನಮ್ಮ ದೇಶಕ್ಕಾಗಿ ದುಡಿದ ಮಡಿದ ನೂರಾರು ನಾಯಕರ ಹೆಸರು ಅವರಿಗೆ ಸಿಗುತ್ತಿರಲಿಲ್ಲವೇ? ಎಲ್ಲವನ್ನೂ ಬಿಟ್ಟು, ಒಬ್ಬ ಪರಮ ಉಗ್ರಗಾಮಿ; ಸಂಸತ್ ಭವನಕ್ಕೇ ಬಾಂಬ್ ಇಟ್ಟಿದ್ದ ಪರಾಕ್ರಮಿಯನ್ನು ಆರಾಧಿಸುವ ದೈನೇಸಿತನವನ್ನು ಅವರು ತೋರುತ್ತಿದ್ದರೇ? ವಿವಿಯ ಮಾತುಗಳಿಗೆ ಜಗ್ಗಲೊಪ್ಪದ ಡಿಎಸ್‍ಯು ಕೂಡಲೇ ಜವಹರ್‍ಲಾಲ್ ನೆಹರೂ ಸ್ಟೂಡೆಂಟ್ಸ್ ಯೂನಿಯನ್‍ನ ಬಾಗಿಲು ತಟ್ಟಿತು. ವಿಷಯ ತಿಳಿದದ್ದೇ ತಡ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‍ಎಫ್‍ಐ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಚುರುಕಾದವು. ನಾವು ನಿಮ್ಮ ಜೊತೆಗಿದ್ದೇವೆ; ಈ ಕಾರ್ಯಕ್ರಮವನ್ನು ಶತಾಯ ಗತಾಯ ಮಾಡಲೇಬೇಕು; ಆ ಮೂಲಕ ಅಫ್ಜಲ್ ಗುರುವನ್ನು ರಾಷ್ಟ್ರೀಯ ಹೀರೋ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದವು. ಕಾರ್ಯಕ್ರಮದಲ್ಲಿ ಸ್ವತಂತ್ರ ಕಾಶ್ಮೀರಕ್ಕಾಗಿ ಒತ್ತಾಯಪಡಿಸುವ ಅಜೆಂಡಾ ಕೂಡ ಸೇರಿಸಲಾಯಿತು. ಕಾರ್ಯಕ್ರಮವನ್ನು ವಿವಿಯ ಆಜ್ಞೆಯನ್ನು ಧಿಕ್ಕರಿಸಿ ಕ್ಯಾಂಪಸ್ ಒಳಗಿನ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆಸಲು ಈ ಮೂರೂ ಸಂಘಟನೆಯ ವಿದ್ಯಾರ್ಥಿಗಳು ನುಗ್ಗಿದರು. ಈ ಸುದ್ದಿಯ ಮಾಹಿತಿಯನ್ನು ಮೊದಲೇ ಪಡೆದಿದ್ದ ವಿವಿ ಆಡಳಿತ ಮಂಡಳಿ, ಅಲ್ಲಿಗೆ ಸೆಕ್ಯುರಿಟಿ ಗಾರ್ಡ್‍ಗಳನ್ನು ಕಳಿಸಿ ವಿದ್ಯಾರ್ಥಿಗಳು ಪ್ರವೇಶಿಸದಂತೆ ನಿರ್ಬಂಧಿಸಿತು. ಜಿದ್ದಿಗೆ ಬಿದ್ದಿದ್ದ ವಿದ್ಯಾರ್ಥಿಗಳು ಹತ್ತಿರದಲ್ಲಿದ್ದ ಒಂದು ಧಾಬಾದ ಬಳಿ ಸೇರಿ ಕಾರ್ಯಕ್ರಮ ಶುರುಮಾಡಿಯೇಬಿಟ್ಟರು.
ತಮಾಷೆಯೆಂದರೆ, ಈ ಸೋಕಾಲ್ಡ್ “ಸಾಂಸ್ಕೃತಿಕ ಕಾರ್ಯಕ್ರಮ”ದಲ್ಲಿ ಸಾಂಸ್ಕೃತಿಕ ಎಂಬುದಾಗಲೀ ಕಾರ್ಯಕ್ರಮ ಎಂದು ಹೇಳುವಂಥಾದ್ದಾಗಲೀ ಏನೂ ಇರಲಿಲ್ಲ! “ಎಷ್ಟು ಜನ ಅಫ್ಜಲ್ ಗುರುಗಳನ್ನು ಬಂಧಿಸುತ್ತೀರಿ? ಪ್ರತಿ ಮನೆಯಿಂದ ಇನ್ನೊಬ್ಬ ಅಫ್ಜಲ್ ಹುಟ್ಟಿಬರುತ್ತಾನೆ!”, “ಇಂಡಿಯಾ ಗೋ ಬ್ಯಾಕ್”, “ಪಾಕಿಸ್ತಾನ್ ಜಿಂದಾಬಾದ್”, “ಭಾರತವನ್ನು ನಾಶ ಮಾಡುವವರೆಗೂ ನಮ್ಮ ಹೋರಾಟ ನಿಲ್ಲದು” ಎಂಬಂಥ ಘೋಷಣೆಗಳು ಅಲ್ಲಿ ಮೊಳಗಿದವು! ನೂರಾರು ಪ್ರತಿಭಟನೆಕಾರರು ಅಫ್ಜಲ್‍ನ ಫೋಟೋ ಹಿಡಿದು ಅವನೇನೋ ದೇಶಭಕ್ತನೆಂಬಂತೆ ಕುಣಿಯುತ್ತಿದ್ದರು. “ಇದೊಂದು ಫ್ಯಾಸಿಸ್ಟ್ ಸರಕಾರ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಅಫ್ಜಲ್ ಗುರುವಿನಂಥ ನೂರಾರು ಅಮಾಯಕರು ಇಂದು ಭಯದಲ್ಲಿ ಬದುಕುವಂತಾಗಿದೆ. ಅವರ ಕೊರಳಿಗೆ ಈ ಸರಕಾರ ನೇಣುಹಗ್ಗ ಬಿಗಿದು ವಿರೋಧಗಳನ್ನೇ ಇಲ್ಲವಾಗಿಸುತ್ತಿದೆ” ಎಂಬ ಕ್ರಾಂತಿಕಾರಿ ಭಾಷಣಗಳೂ ನಡೆದವು. ಕಾರ್ಯಕ್ರಮ ನಡೆದು ಒಂದೇ ದಿನದಲ್ಲಿ ಅದು ಮಾಧ್ಯಮಗಳ ಮೂಲಕ ಬಿತ್ತರವಾಗಿ “ವೈರಲ್” ಆಯಿತು. ಈ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಿ. ಜೆಎನ್‍ಯು-ವನ್ನು ಮುಚ್ಚಿಬಿಡಿ. ದೇಶವಾಸಿಗಳ ತೆರಿಗೆ ದುಡ್ಡಲ್ಲಿ ಮಜಾ ಮಾಡುವ ವಿದ್ಯಾರ್ಥಿಗಳು ದೇಶವನ್ನು ಬರ್ಬಾದ್ ಮಾಡುವ ಮಾತುಗಳನ್ನು ಕೇಳಿಸಿಕೊಂಡಮೇಲೂ ನಾವು ಸುಮ್ಮನಿರಬೇಕೆ? ಇಂಥಾ ದರಿದ್ರ ವಿಶ್ವವಿದ್ಯಾಲಯ ಇದ್ದರೆಷ್ಟು ಬಿದ್ದರೆಷ್ಟು? ಎಂದು ಲಕ್ಷಾಂತರ ಜನ ತಮ್ಮ ಕೋಪವನ್ನು ಜಾಲತಾಣಗಳಲ್ಲಿ ಹರಿಯಬಿಟ್ಟರು. ವಿವಾದ ಭುಗಿಲೆದ್ದು ಮೂರು ದಿನಗಳ ಬಳಿಕ ಕೇಂದ್ರ ಗೃಹ ಸಚಿವರು “ದೇಶದ ಸಮಗ್ರತೆಯನ್ನು ಪ್ರಶ್ನಿಸುವವರು ಯಾರೇ ಆಗಿರಲಿ, ನಾವು ಸುಮ್ಮನಿರುವುದು ಸಾಧ್ಯವಿಲ್ಲ. ಅಂಥವರಿಗೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಬೇಕು” ಎಂಬ ಮಾತುಗಳನ್ನಾಡಿದರು. ದೆಹಲಿ ಪೊಲೀಸರು ಬಂದು ಜೆಎನ್‍ಯು ವಿದ್ಯಾರ್ಥಿಸಂಸತ್‍ನ ನಾಯಕ ಕನ್ನಯ್ಯನನ್ನು ಬಂಧಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡರು. ಎಲ್ಲ ವಿವಾದ ತಣ್ಣಗಾಯಿತು ಅಂದಿರಾ? ಶುರುವಾಯಿತು ನೋಡಿ ಆಗ ನಾಟಕದ ಎರಡನೇ ಅಂಕ!
ದೇಶದಲ್ಲಿ ಆಗುಹೋಗುವ ಎಲ್ಲಾ ಘಟನಾವಳಿಗಳಿಗೂ ತಮ್ಮ ಅಭಿಪ್ರಾಯವನ್ನು ದಾಖಲಿಸಲೇಬೇಕು ಎಂದು ಹದ್ದುಗಳಂತೆ ಹಾರಾಡುತ್ತ ಕಾಯುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಜಿಗಿದೇಬಿಟ್ಟರು ಅಖಾಡಾಕ್ಕೆ! “ಅಮಾಯಕರನ್ನು ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿ ಕುಣಿಕೆ ಹಾಕುತ್ತಿರುವ ಈ ಭಯಾನಕ ಸರಕಾರವನ್ನು ನಾವೆಲ್ಲ ಸೇರಿ ಕೂಡಲೇ ಕಿತ್ತೊಗೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಪಾವಿತ್ರ್ಯವನ್ನು ಮರುಸ್ಥಾಪಿಸಬೇಕು” – ಬಂತು ರಾಹುಲ್ ಹೇಳಿಕೆ. “ನಿಷ್ಪಾಪಿ ಹುಡುಗರನ್ನು ಬಂಧಿಸಿ ಜೈಲಿಗೆ ಅಟ್ಟುತ್ತಿರುವುದು ಮೋದಿ ಸರಕಾರಕ್ಕೆ ದುಬಾರಿಯಾಗಿ ಪರಿಣಮಿಸಲಿದೆ” – ಕೇಜ್ರಿವಾಲ್ ಗುಡುಗಾಟ ಶುರುವಾಯಿತು. ಇವರಿಬ್ಬರ ಜೊತೆ ಮಹಾನ್ ದೇಶಭಕ್ತರಾದ ಸಾಗರಿಕಾ ಘೋಷ್, ರಾಜದೀಪ್ ಸರ್ದೇಸಾಯಿ, ಬರ್ಕಾ ದತ್‍ರಂಥ ಆಷಾಢಭೂತಿಗಳು ಕೂಡ ಟ್ವಿಟ್ಟರ್ ಯುದ್ಧ ಶುರುಮಾಡಿದರು. ಎಲ್ಲರ ರೋದನವೂ ಒಂದೇ. ವಿದ್ಯಾರ್ಥಿಗಳು ಅಮಾಯಕರು. ಅವರನ್ನು ಬಂಧಿಸಿದ್ದು ಮೋದಿ. ತನ್ನ ವಿರೋಧಿಗಳನ್ನು ಹತ್ತಿಕ್ಕುವುದೇ ಈ ಬಂಧನದ ಉದ್ಧೇಶ. ಜೈಲಿಗೆ ಹೋಗಿರುವ ಕನ್ನಯ್ಯ ಭಗತ್‍ಸಿಂಗ್‍ನಂಥ ದೇಶಭಕ್ತ… ಇತ್ಯಾದಿ ಅದೇ ಹಳಸಲು ಬಿರಿಯಾನಿ; ಮಾಸಲು ಘೋಷಣಾಪತ್ರ.
ಈಗ ನಮ್ಮ ಮುಂದಿರುವ ಪ್ರಶ್ನೆಗಳು ಇವು:
1) ಅಫ್ಜಲ್ ಗುರುವಿನ ನ್ಯಾಯ ವಿಚಾರಣೆ ನಡೆದದ್ದು, ಸುಪ್ರೀಂ ಕೋರ್ಟು ತೀರ್ಪು ಹೊರಬಿದ್ದದ್ದು, ಆತ ನೇಣುಗಂಬಕ್ಕೇರಿದ್ದು – ಎಲ್ಲವೂ ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ! ಹಾಗಾದರೆ ಅಫ್ಜಲ್‍ಗೂ ಮೋದಿ ಸರಕಾರಕ್ಕೂ ಏನು ಸಂಬಂಧ? ರಾಹುಲ್ ಗಾಂಧಿಗೆ ತಾನೇನು ಮಾತಾಡುತ್ತಿದ್ದೇನೆಂಬ ಪರಿವೆಯಾದರೂ ಇದೆಯೇ?
2) ಕೇಜ್ರಿವಾಲ್, ಬಂಧನದ ಕ್ರಮ ಮೋದಿ ಸರಕಾರಕ್ಕೆ ದುಬಾರಿಯಾಗಲಿದೆ ಎಂಬ ಎಚ್ಚರಿಕೆ ಮತ್ತು ಬೆದರಿಕೆ ಹಾಕಿದ್ದಾರೆ. ಅಂದರೆ, ಈ ವಿವಾದವನ್ನು ಇಟ್ಟುಕೊಂಡು ಮುಂದೆ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸೂಚನೆ ಕೊಡುತ್ತಿದ್ದಾರೆಯೇ ಅವರು? 3) ಇವರೆಲ್ಲ ಬಾಯಿ ಬಡಿದುಕೊಳ್ಳುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿಜವಾಗಿಯೂ ಏನು? ಸಂವಿಧಾನದ ಆರ್ಟಿಕಲ್ 19 (ಎ), ಭಾರತದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಸ್ಪಷ್ಟಮಾತುಗಳಲ್ಲಿ ಹೇಳುತ್ತದೆ. ಮುಂದುವರಿದು ಅದೇ ಆರ್ಟಿಕಲ್‍ನ (ಬಿ) ಸೆಕ್ಷನ್‍ನಲ್ಲಿ, “ಆದರೆ ದೇಶದ ಸಮಗ್ರತೆಯನ್ನು ಪ್ರಶ್ನಿಸುವ, ಇನ್ನೊಬ್ಬರನ್ನು ತುಚ್ಛೀಕರಿಸುವ, ದೇಶದ ನಾಯಕರನ್ನು ಹೀನಾಮಾನ ಮಾಡುವ, ದೇಶಕ್ಕೆ ಅಗೌರವ ಸೂಚಿಸುವ ಯಾವುದೇ ಸಂಗತಿ ಈ ಸ್ವಾತಂತ್ರ್ಯದ ಪರಿಧಿಗೆ ಬರುವುದಿಲ್ಲ” ಎಂದೂ ಹೇಳಲಾಗಿದೆ. ಪ್ರತಿಭಟನೆಕಾರರು ಸಂವಿಧಾನವನ್ನು ಪೂರ್ತಿಯಾಗಿ ಓದಿಕೊಂಡಿದ್ದಾರೆಯೇ?
4) ಬಂಧನದ ಸುದ್ದಿ ತಿಳಿಯುತ್ತಲೇ ಕನ್ನಯ್ಯ ಜೆಎನ್‍ಯು ಕ್ಯಾಂಪಸ್ಸಿನಲ್ಲಿ ತನ್ನ ಒಂದಷ್ಟು ಬೆಂಬಲಿಗರನ್ನು ಸೇರಿಸಿ ಉಗ್ರವಾದ ಭಾಷಣ ಮಾಡಿದ. ಮಾತಿನ ಪ್ರತಿ ವಾಕ್ಯದಲ್ಲೂ ಕಡ್ಡಾಯವೆಂಬಂತೆ ಕಾಣುತ್ತಿದ್ದ ಹೆಸರು: ಬಾಬಾಸಾಹೇಬ್ ಅಂಬೇಡ್ಕರ್! ಅಫ್ಜಲ್ ಗುರುವನ್ನು ಬೆಂಬಲಿಸಿ ಕಾರ್ಯಕ್ರಮ ನಡೆಸಿದವನು ತನ್ನ ಬಂಧನವಾಗುತ್ತದೆ ಎಂಬುದು ಗೊತ್ತಾದೊಡನೆ ಅಂಬೇಡ್ಕರ್ ಹೆಸರನ್ನು ಮೇಲಿಂದ ಮೇಲೆ ಉದ್ಧರಿಸಿ ಮಾತಾಡಲು ಕಾರಣ ಏನು? ಸ್ಪಷ್ಟವಿದೆ: ಇನ್ನು ಕೆಲವೇ ತಿಂಗಳಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶದಗಳ ಅಸೆಂಬ್ಲಿ ಚುನಾವಣೆಗಳು ಘೋಷಣೆಯಾಗಲಿವೆ. ಎರಡೂ ರಾಜ್ಯಗಳಲ್ಲಿ ದಲಿತರ ಬಹುದೊಡ್ಡ ಓಟ್‍ಬ್ಯಾಂಕ್ ಇದೆ. ಪಂಜಾಬ್‍ನ ಮತದಾರರ ಪೈಕಿ 31% ದಲಿತರಿದ್ದಾರೆ. ಅಂಬೇಡ್ಕರ್‍ರನ್ನು ಅಟ್ಟದಲ್ಲಿಟ್ಟು ಮೋದಿ ಸರಕಾರವನ್ನು ಹೀನಾಯವಾಗಿ ತೆಗಳಿದರೆ ಯಾವ ಪಕ್ಷಕ್ಕೆ ನೇರವಾದ ಲಾಭವಾಗಲಿದೆ ಎಂಬುದು ಗುಟ್ಟಾಗುಳಿದಿರುವ ಸಂಗತಿಯೇನೂ ಅಲ್ಲ. ಕನ್ನಯ್ಯನನ್ನು ಸರಿಯಾಗಿ ವಿಚಾರಿಸಿಕೊಂಡರೆ, ಪೊಲೀಸರಿಗೆ, ಆತನ ಹಿಂದಿರುವ ಕಾಣದ ಕೈಗಳ ಬಗ್ಗೆ ವಿವರವಾದ ಮಾಹಿತಿ ಸಿಕ್ಕೀತು.
5) ಇತ್ತೀಚೆಗಷ್ಟೇ ಡೇವಿಡ್ ಹೆಡ್ಲಿ ತನ್ನ ವಿಚಾರಣೆಯಲ್ಲಿ, ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಮುಸ್ಲಿಮ್ ಭಯೋತ್ಪಾದಕರು ಏನೆಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆಂಬುದನ್ನು ವಿಸ್ತೃತವಾಗಿ ಹೇಳಿದ್ದಾನೆ. ಅಫ್ಜಲ್ ಗುರುವಿನ ಪುಣ್ಯತಿಥಿ ಮಾಡುವವರು ಇದೇ ಅಜೆಂಡಾದ ಒಂದು ಭಾಗವಲ್ಲ ಎಂದು ಹೇಳುವುದು ಹೇಗೆ? ಸಂಸತ್ ಭವನವನ್ನು ನೆಲಸಮ ಮಾಡಲು ಹೊರಟಿದ್ದವನೊಬ್ಬ ಸತ್ತು ಎರಡು ವರ್ಷಗಳೇ ಕಳೆದರೂ ನಮ್ಮವರಿಗೆ ಇನ್ನೂ ಹೀರೋ ಆಗಿ ಕಾಣಲು ಕಾರಣ ಏನು? ಹೊರಗಿನಿಂದ ಭಯೋತ್ಪಾದಕರನ್ನು ಗಡಿ ನುಗ್ಗಿಸಿ ಭಾರತದೊಳಕ್ಕೆ ಕಳಿಸುವುದಕ್ಕಿಂತ, ಈ ನೆಲದ ಅನ್ನ ಉಂಡ, ಈ ನೆಲದ ನೀರು ಕುಡಿದ ಭಾರತೀಯರನ್ನೇ ಭಯೋತ್ಪಾದಕರನ್ನಾಗಿ ಮಾರ್ಪಡಿಸುವುದು ಉಗ್ರಗಾಮಿ ಸಂಘಟನೆಗಳ ಹೊಸ ಉಪಾಯ ಇರಬಹುದು.
ಜವಹರ್‍ಲಾಲ್ ನೆಹರೂ ಎಂಬ ಈ ದೇಶದ ಪ್ರಥಮ ಪ್ರಧಾನಿಯ ಹೆಸರಿನ ಸಂಸ್ಥೆಯಲ್ಲೇ ಈ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದು ವಿಪರ್ಯಾಸ. ಈ ವಿವಿಯ ಹೆಸರನ್ನು ಸುಭಾಸ್‍ಚಂದ್ರ ಭೋಸ್ ಅಥವಾ ಭಗತ್ ಸಿಂಗ್ ವಿವಿ ಎಂದು ಬದಲಾಯಿಸಿ, ಇಲ್ಲಿ ದೇಶಭಕ್ತರನ್ನು ರೂಪಿಸಿ ಸಮಾಜಕ್ಕೆ ಕೊಡುವ ಹೊಸ ಕಾರ್ಯಯೋಜನೆಯನ್ನು ಸರಕಾರ ಅತಿಶೀಘ್ರವಾಗಿ ಹಾಕಬೇಕಾಗಿದೆ. ಮಿಂಚಿಹೋದರೆ ಚಿಂತಿಸಿ ಫಲವಿಲ್ಲ.
ಈ ಲೇಖನದ ವಸ್ತುವಿಗೆ ಸಂಭಂದವೇ ಇಲ್ಲದ ಜವಹರ್‍ಲಾಲ್ ನೆಹರೂರವರ ಹೆಸರನ್ನು ಪ್ರಸ್ತಾಪಿಸಿ, ಲೇಖಕರು ನೆಹರೂರವರ ಮೇಲಿನ ತಮಗಿರುವ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಅಸಹನೆಯಿಂದ ಲೇಖಕರಿಗೆ ಯುನಿವರ್ಸಿಟಿಯ ಹೆಸರಿನಲ್ಲಿ ದೋಷ ಕಾಣುತ್ತಿದೆ. ಮುಂದುವರೆದ ಅಸಹಿಷ್ಣುತೆ.
ಇಲ್ಲಿನ ಕೆಲವರಿಗೆ ಆಪತ್ತಿಗೆಲ್ಲ ಶನೀಶ್ವರನೇ ಕಾರಣ ಅನ್ನುವ ಗಾದೆಯಂತೆ ಈ ದೇಶದಲ್ಲಿ ನಡೆಯುವ ಎಲ್ಲಾ ಅಹಿತಕರ ಘಟನೆಗಳಿಗೆ ನೆಹರೂ ಗಾಂಧಿಯೇ ಕಾರಣ ಎಂಬ ವಾದ….ಇವರದೊಂತರ ಕಲುಷಿತ ವೈಚಾರಿಕ ಭಯೋತ್ಪಾದನೆ…..
ವಿಶ್ವ ವಿದ್ಯಾಲಯಕ್ಕೆ ಲೇಖಕರ ಹೆಸರನ್ನೇ ಇಟ್ಟರಾಯಿತು ಬಿಡಿ….