ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2016

2

ಯಕ್ಷಗಾನ ಕರಾವಳಿಯ ಜನರ ತಲೆಕೆಡಿಸಿ ವಾತಾವರಣ ಕಲುಷಿತಗೊಳಿಸಿದೆಯೇ?

‍ನಿಲುಮೆ ಮೂಲಕ

ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

ಯಕ್ಷಗಾನಈ ಪ್ರಶ್ನೆ ಬಂದಿದ್ದು ತಮ್ಮನ್ನು ತಾವು ಮಹಾನ್ ಲೇಖಕ ಎಂದು ಬಿಂಬಿಸಿಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯೊಬ್ಬನ ಪೇಸ್ಬುಕ್ ಗೋಡೆ ಬರಹದಿಂದಾಗಿ.  ಕೆಲವರು ತಾನು ಬರೆದ ಕೆಲ ಪುಸ್ತಕಗಳಿಗೆ ಬಿಟ್ಟಿ ಪ್ರಚಾರಕೊಡಲು ಅಥವಾ ಅವಾರ್ಡು ಬಾಚಿಕೊಳ್ಳಲು ಮುಖ್ಯ ಅಸ್ತ್ರವಾಗಿ ಬಳಸುವುದು ಹಿಂದೂ ಧರ್ಮ ಅಥವಾ ಈ ನೆಲದ ಕಲೆ, ಸಂಸ್ಕೃತಿಯ ಅವಹೇಳನ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಅದೇ ರೀತಿ ಅದಕ್ಕೆ ಪೂರಕವಾದ ಧೋರಣೆ ಹೊಂದಿರುವ ಸರಕಾರವೂ ಇರುವುದರಿಂದ ಇದು ಅವರನ್ನು ಮೆಚ್ಚಿಸುತ್ತೆ . ಧಾರ್ಮಿಕ ಭಾವನೆಯನ್ನು ಕೆರಳಿಸಿ ಪ್ರಚಾರ ಪಡೆಯುವುದು ಬಹಳ ಸುಲಭದ ದಾರಿ .ಯಾಕೆಂದರೆ ಮೊನ್ನೆ ತಾನೆ  ಪ್ರೊಫೆಸರ್ ಭಗವಾನರು ಮಾಡಿದ್ದು ಇದನ್ನೇ ,ಇಲ್ಲದೇ ಹೋದಲ್ಲಿ ಅತ್ಯಂತ ಕೆಟ್ಟದಾಗಿ ಅನುವಾದ ಮಾಡಿದ ಲೇಖಕನೊಬ್ಬನಿಗೆ ಪ್ರಶಸ್ತಿ ಬರುವುದು ಸಾಧ್ಯವಿತ್ತೇ? ಇರಲಿ ಬಿಡಿ ಇಲ್ಲಿ ಋಣಾತ್ಮಕ ವಿಚಾರಗಳಿಗೆ ಮಹತ್ವ ಜಾಸ್ತಿನೇ ಸಿಗೋದು ಆದರೆ ಕರಾವಳಿಯ ಗಂಡುಕಲೆ  ಯಕ್ಷಗಾನದ ಬಗೆಗಿನ ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯೆ  ಕೊಡಬೇಕೆನಿಸಿತು.ಯಾಕೆಂದರೆ ನಾನೊಬ್ಬ ಯಕ್ಷಗಾನದ ಅಭಿಮಾನಿ.

ನನ್ನ ಊರು ಕೊಣಾಜೆ, ನನ್ನ ಮನೆಯ ಪಕ್ಕದಲ್ಲಿ ವರ್ಷಂಪ್ರತಿ ಯಕ್ಷಗಾನ ನಡೆಯುತ್ತೆ. ಅದನ್ನು ನಡೆಸುವುದು ದುರ್ಗಾಪರಮೇಶ್ವರಿ ಸೇವಾ ಸಮಿತಿಯವರು ಅಲ್ಲಿರುವ ಸದಸ್ಯರು ಎಲ್ಲರೂ ಸೇರಿ ದುಡ್ಡು ಹಾಕಿ ಆ ಯಕ್ಷಗಾನ ನಡೆಸುವಂತದ್ದು. ಆ ಸಮಿತಿಯಲ್ಲಿ ೬೦ ಜನ ಹಿಂದೂಗಳ ಜೊತೆ ಮೂರು ಮಂದಿ ಮುಸ್ಲಿಂ ಸದಸ್ಯರು ಸೇರಿ, ನಮ್ಮ ಜೊತೆ ಕೂಡಿಕೊಂಡು ಕೆಲಸ ಮಾಡಿ ಯಕ್ಷಗಾನ ಮಾಡಿಸುವುದು ಹಲವು ವರ್ಷದಿಂದ ನಡೆದುಕೊಂಡು ಬಂದದ್ದು .ಇದೇ ರೀತಿ ಮಂಗಳೂರು ನಗರಭಾಗದಲ್ಲಿ ಕ್ರಿಶ್ಚನ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ವರು ಅತೀ ವೈಭವಯುತವಾಗಿ ನಡೆಸುವ ಯಕ್ಷಗಾನವು ಕೂಡಾ ಕರಾವಳಿಯ ಸೌಹಾರ್ದತೆಗೆ ಹಿಡಿದ ಕನ್ನಡಿ. ಆಟ ನಡೆಯುವ ಬಯಲಿನಲ್ಲಿ ವ್ಯಾಪಾರಿಗಳು ನಡೆಸುವ ಬುರ್ಜಿ ,ಸುಕುನಪ್ಪ ,ನೈಯಪ್ಪ ,ಸೋಜಿ ,ಕುರ್ಲಾರಿ ಮಾರಾಟದಲ್ಲಿ ಅನ್ಯಮತೀಯರೇ ಜಾಸ್ತಿ .ಇಲ್ಲಿ ಯಾವ ವಾತಾವರಣ ಹೇಗೆ ಕಲುಷಿತ ವಾಯಿತು ? ಎಂದು ಆ ‘ಲೇಖಕ’ರೇ  ಹೇಳಬೇಕು

ಇನ್ನೊಂದು ಉದಾಹರಣೆಯ ಬಗ್ಗೆ ಹೇಳುವುದಾದರೆ, ತುಳುನಾಡಿನ ಪ್ರಸಿದ್ಧ ದೇವೀ ಕ್ಷೇತ್ರ ಬಪ್ಪನಾಡಿನ ಇತಿಹಾಸವನ್ನು ವರ್ಣಿಸಿದ್ದು ಇದೇ ಯಕ್ಷಗಾನ. ನಾನಂತೂ ಈ ವಿಚಾರವನ್ನು ಪುಸ್ತಕದ ಮೂಲಕ ತಿಳಿದುಕೊಂಡಿಲ್ಲ ಯಕ್ಷಗಾನದ ಮೂಲಕ ತಿಳಿದು ಆಮೇಲೆ ಕ್ಷೇತ್ರದಲ್ಲಿ ಕಂಡುಕೊಂಡಿದ್ದು. ಈ ಬಪ್ಪ ಬ್ಯಾರಿ ವಂಶಸ್ಥರು ಇಂದಿಗೂ ಜಾತ್ರೆಯ ಸಂಧರ್ಭ ಬಂದು ಧ್ವಜ ಸ್ತಂಭಕ್ಕೆ ಕೈ ಹಿಡಿಯುವ ಪದ್ದತಿ ಚಾಲ್ತಿಯಲ್ಲಿದೆ .ಯಕ್ಷಗಾನದಲ್ಲಿ ಬಪ್ಪ ಬ್ಯಾರಿಯು ಬರುವ ಸನ್ನಿವೇಶ ಬಹಳ ಸ್ವಾರಸ್ಯಕರವಾಗಿಯೂ ಇರುತ್ತೆ. ಈ ಯಕ್ಷಗಾನ  ಪ್ರಸಂಗದ ಮೂಲಕ ಒಂದಷ್ಟು ಸೌಹಾರ್ದ ವಾತಾವರಣ ಗಟ್ಟಿಗೊಳಿಸಲು ಯತ್ನಿಸಿದ್ದು ,ನಮ್ಮ ಕರಾವಳಿಯ ಯಕ್ಷಗಾನ ಕಲಾವಿದರು.ಇನ್ನು ಶಬರಿಮಲೆ ಕ್ಷೇತ್ರದ ಮಹಿಮೆಯನ್ನು ಸಾರುವಾಗ ಬರುವ ವಾವರನ ಪಾತ್ರ.ಈತನ ಪಾತ್ರವನ್ನು ಮಾಡುವ ಕಲಾವಿದನಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತಾನೆ ಯಾಕೆಂದರೆ ಅಲ್ಲಿ ಅಪಹಾಸ್ಯವಿರುವುದಿಲ್ಲ ಬದಲಿಗೆ ಶುಧ್ದ ಹಾಸ್ಯವಿರುತ್ತದೆ. ಈ ಕಥೆಯನ್ನು ಮೊದಲು ತಿಳಿಸಿದ್ದು ಯಕ್ಷಗಾನ. ಈಗ ಹೇಳಿ ವಾತಾವರಣ ಹೇಗೆ  ಕಲುಷಿತವಾಯಿತು?

ಯಕ್ಷಗಾನದ ಕಲಾವಿದರ ಪ್ರತಿಭೆಯ ಬಗ್ಗೆ ಅರಿಯಬೇಕಾದರೆ ರಂಗಸ್ಥಳದ ಬಳಿ ಇರುವ ಚೌಕಿಯ ಒಳಹೊಕ್ಕು ನೋಡಬೇಕು. ರಾಕ್ಷಸ, ಸ್ತ್ರೀ ವೇಷ, ಹಾಸ್ಯಗಾರ , ದೇವತೆ ಹೀಗೆ ಹತ್ತು ಹಲವು ಪಾತ್ರಗಳ ವೇಷಗಳನ್ನು ತಾವೇ ಸ್ವತಃ ಮೇಕಪ್ ಹಚ್ಚಿ ಸೃಷ್ಟಿಸಿಕೊಳ್ಳುತ್ತಾರೆ. ಅದೇ ರೀತಿ ಸ್ತ್ರೀ ವೇಷಧಾರಿಗಳು ಸೀರೆ ಉಡುವ ಶೈಲಿಯಂತೂ ಮಹಿಳೆಯರಿಗೂ ಸವಾಲೆಸೆಯುವಂತೆ ಇರುತ್ತೆ .ರಂಗಸ್ಥಳಕ್ಕೆ ಬಂದಾಗ ಪಾತ್ರಕ್ಕೆ ತಕ್ಕಂತೆ ಧ್ವನಿಗಳ ಬದಲಾವಣೆಯಂತೂ ತುಂಬಾನೇ ಆಶ್ಚರ್ಯಗೊಳಿಸುತ್ತೆ . ಒಬ್ಬ ಕಲಾವಿದ ಎರಡು ಮೂರು ಪಾತ್ರ ನಿರ್ವಹಿಸುವ ಚಾಕಚಕ್ಯತೆ ಹೊಂದಿರುತ್ತಾನೆ. ಅದೇ ರೀತಿ ಪುರಾಣದ  ಸಂಭಾಷಣೆಗಳು ವರ್ತಮಾನದ ಪರಿಸ್ಥಿತಿಗೆ ಹೊಂದುವಂತೆ ಮಾರ್ಪಾಡುಗೊಳಿಸಿ ರಂಜಿಸುವ ನೈಪುಣ್ಯತೆ ಯಾವ ಪೌರಾಣಿಕ ನಾಟಕಗಳಲ್ಲೂ ಕಾಣಸಿಗದು.ರಾಜಕೀಯ ವಿಚಾರಗಳ ಬಗ್ಗೆ ದೇವಿ ಮಹಾತ್ಮೆಯ  ಒಂದು ಸನ್ನಿವೇಶ ಬಹಳ ಪ್ರಸಿದ್ದಿ ,ಬ್ರಹ್ಮ -ವಿಷ್ಣು-ಮಹೇಶ್ವರರಲ್ಲಿ ಯಾರು ದೊಡ್ಡವರು ಎಂಬ ವಾದ ಬಂದಾಗ ನಡೆಯುವ ಸಂಭಾಷಣೆಗಳಲ್ಲಿ ಕರ್ಣಾಟಕದ ರಾಜಕೀಯ ಪರಿಸ್ಥಿತಿಯನ್ನು ಬಹಳ ರಸವತ್ತಾಗಿ ವಿಢಂಬಿಸುವುದು ನಾನು ಅನೇಕಬಾರಿ ನೋಡಿದ್ದೇನೆ ಅದೇ ರೀತಿ ರಕ್ಕಸರ ರಾಯಭಾರಿಯಾಗಿ ಬರುವ ಹಾಸ್ಯ ಕಲಾವಿದರು ಆಂಗ್ಲ ಪದಗಳನ್ನು ಹಾಗೂ ಕನ್ನಡ ಪದಗಳನ್ನು ವಿಭಿನ್ನ ಶೈಲಿಯಲ್ಲಿ ಬಳಸಿ ನಗಿಸುವುದು ಸಾಮಾನ್ಯ. ಉದಾಹರಣೆಗೆ ನೀನು ನನ್ನ ಬಳಿ  permanent ಆಗಿರಬೇಕು ಅನ್ನುವುದನ್ನು ಪರಮನೆಂಟನಾಗಿ ಇರಬೇಕು ಎಂದು ಬಳಸುವುದು ,ಹೀಗೆ ಹತ್ತು ಹಲವು ಪದಗಳನ್ನು ಬಳಸುತ್ತಾರೆ. ಇಂತಹ ಹಲವು ವೈಶಿಷ್ಟ್ಯಪೂರ್ಣ ಕಲಾಪ್ರಕಾರವಾದ ಯಕ್ಷಗಾನವನ್ನು ಟೀಕಿಸಿದ ‘ಲೇಖಕ’ರು ಯಕ್ಷಗಾನವನ್ನೊಮ್ಮೆ ನೋಡಲೇಬೇಕು.

ಇನ್ನು ಆರ್ಥಿಕ ವಿಚಾರಕ್ಕೆ ಬಂದರೆ ಅನೇಕ ಕಲಾವಿದರ ಬದುಕು ಸಾಗುತ್ತಿರುವುದು ಈ ಯಕ್ಷಗಾನವೆಂಬ ಕಲೆಯಲ್ಲಿ. ಕಲಾವಿದರಷ್ಟೇ ಅಲ್ಲದೇ ಸಿಡಿಮದ್ದು ತಯಾರಕರು, ಹೂವಿನ ವ್ಯಾಪಾರಿಗಳು, ಧ್ವನಿ ವರ್ದಕ ಗಳ ಬಾಡಿಗೆ ನೀಡುವವರು, ಕುರ್ಚಿ, ಶಾಮಿಯಾನಗಳ ಬಾಡಿಗೆ ನೀಡುವವರು, ರಿಕ್ಷಾ ಚಾಲಕರು , ಅಡುಗೆ ತಯಾರಕರು ,ಹಾಲೆ ಬಟ್ಟಲು ತಯಾರಕರು ,ಸಂತೆ ವ್ಯಾಪಾರಿಗಳಿಗೆ ದುಡಿಮೆ ಒದಗಿಸುತ್ತದೆ. ಇಷ್ಟೊಂದು ವೃತ್ತಿಗಳಿಗೆ ಅವಕಾಶ ಮಾಡಿ ಕೊಡುವ ಕಲಾಪ್ರಕಾರ ಬಹುಷಃ ಬೇರೆ ಇರಲಿಕ್ಕಿಲ್ಲ ಅದೇ ರೀತಿ ಮೇಲಿನ ವೃತ್ತಿಯನ್ನು ನೆಚ್ಚಿಕೊಂಡಿರುವವರು ಒಂದೇ ಧರ್ಮದವರು ಖಂಡಿತಾ ಅಲ್ಲ .ಇಲ್ಲಿ ಯಾವ ವಾತಾವರಣ ಕಲುಷಿತವಾಯಿತು?

ಯಕ್ಷಗಾನದ ಬಗ್ಗೆ ಕೆಲವರು  ಟೀಕಿಸುವುದು ಇದು ಮೊದಲೇನಲ್ಲ, ಈ ಹಿಂದೆ ವಾರ್ತಾಭಾರತಿ ಎಂಬ ಪತ್ರಿಕೆಯಲ್ಲಿ ಗೋವಿನ ಬಗೆಗೆ ಯಕ್ಷಗಾನದಲ್ಲಿ ವೈಭವೀಕರಿಸಲಾಗುತ್ತೆ ಎಂಬ ಲೇಖನ ಬಂದಿದ್ದನ್ನು ಮೈಸೂರಿನ ಪಂಡಿತರೊಬ್ಬರ ಫೇಸ್ಬುಕ್ ವಾಲ್ ಮೂಲಕ ಓದಿದ್ದೆ .ಅದನ್ನು ಬರೆದಿದ್ದ ಲೇಖಕರ ಪ್ರಕಾರ ಶ್ರೀನಿವಾಸ ಕಲ್ಯಾಣದಲ್ಲಿ ಉಲ್ಲೇಖಿತ  ಚೋಳಮಹಾರಾಜನ ಆಡಳಿತದಲ್ಲಿ  ಪ್ರಜೆಯೊಬ್ಬ ಗೋಹತ್ಯೆ ಮಾಡಿದಕ್ಕಾಗಿ ರಾಜನೇ ಪಿಶಾಚಿಯಾಗುವಂತೆ ಶಾಪ ದೊರಕುವ ಸನ್ನಿವೇಶವನ್ನು ವಿವರಿಸಿದನ್ನೇ ಗೋ ರಾಜಕೀಯವನ್ನು ಯಕ್ಷಗಾನಕ್ಕೆ ತರಲಾಗುತ್ತದೆ ಎಂದು ವಾದ ಮಂಡಿಸಿ ಯಕ್ಷಗಾನವು ದಾರಿ ತಪ್ಪುತ್ತಿದೆ ಎಂಬುದಾಗಿ ಬರೆದಿದ್ದರು ಅಸಲಿಗೆ ಇದು ಚಲನಚಿತ್ರವೊಂದರಲ್ಲಿ ಕೂಡಾ ಉಲ್ಲೇಖವಾಗಿದೆ. ಶ್ರೀನಿವಾಸನಿಗೆ ಹಾಲುಣಿಸಿದಕ್ಕಾಗಿ ಗೋವಿನ ಮೇಲೆ ಹಲ್ಲೆ ಮಾಡಲು ಹೊರಡುವ ಗೋಮಾಲಿಕನ ವಿಚಾರ ಶ್ರೀನಿವಾಸ ಕಲ್ಯಾಣದಲ್ಲಿ ಉಲ್ಲೇಖವಾಗಿರುವುದು ನಿಜ ಆದರೆ ತಾವೇ ಮಹಾನ್ ಪಂಡಿತರೆಂದು ತಿಳಿದುಕೊಂಡಿರುವವರ ಜೊತೆ ವಾದಕ್ಕಿಳಿಯುವುದು ಶೂನ್ಯ ಎಂದು ಆಗ ಸುಮ್ಮನೆ ಕುಳಿತಿದ್ದೆ ಆದರೆ ಈಗಿನ ಟೀಕೆಗೆ ಉತ್ತರ ಕೊಡಲೇಬೇಕೆಂದು ನಿರ್ಧರಿಸಿದೆ.

ಯಕ್ಷಗಾನದಲ್ಲಿ ಚರ್ಚೆಗೊಳಪಡುವ ವಿಚಾರವಿಲ್ಲವೆಂದೇನಿಲ್ಲ ಇದೆ ಅದು ವೈಷ್ಣವ ಹಾಗೂ ಶೈವ ಮತದ ಬಗ್ಗೆ ಅಥವಾ ಭಾಗವತರ ಶೈಲಿಯ ಬಗ್ಗೆ ಕೆಲವೇ ಕೆಲವು ಉನ್ನತ ವ್ಯಕ್ತಿಗಳ ಮಧ್ಯೆ ಇರುವ ವಾದ ಆದರೆ ಸಾಮಾನ್ಯ ಕಲಾವಿದ ಅಥವಾ ಪ್ರೇಕ್ಷಕನಿಗೆ ಇದರ ಬಗ್ಗೆ ಅರಿವಿಗೆ ಬರೋಲ್ಲ. ಕೋಮು ವಾತಾವರಣ ಕೆಡಿಸುತ್ತದೆ ಎಂದು ವಾದ ಮಾಡುವುದು ಈ ವಿವಾದವನ್ನು ಹುಟ್ಟು ಹಾಕಿದ ಲೇಖಕನ ಮೂರ್ಖತನದ ಪರಮಾವಧಿ . ಇನ್ನೊಂದು ವಿಚಾರವೆಂದರೆ ಸದಾ ಶುದ್ದ ಕನ್ನಡವನ್ನು ಬಳಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕಾರ್ಯವನ್ನೂ ಯಕ್ಷಗಾನ ಮಾಡುತ್ತಿದೆ ಆದರೆ  ಯಕ್ಷಗಾನವನ್ನು ನೋಡದೆ ಬಾಯಿಗೆ ಬಂದ ಹಾಗೆ ಮಾತಾಡುವ ವ್ಯಕ್ತಿಗೆ  ಕ್ಷಮಿಸಿ ಮಹಾನ್ ಲೇಖಕರಿಗೆ ಭಾಷೆಯ ಮೇಲೆ ಎಷ್ಟು ಪ್ರಭುತ್ವ ಇದೆ? ದಲಿತರು ,ಸವರ್ಣಿಯರು ಎಂದು ಜಾತಿ ಹೆಸರಿನಲ್ಲಿ  ಸಮಾಜ ಒಡೆದು ಪುಸ್ತಕ ಬರೆದು ಯಾರಾದರು ತನ್ನನ್ನು ಬೈದರೆ ಜಾತಿನಿಂದನೆ ಕೇಸು ಹಾಕುವುದಾಗಿ ಹೆದರಿಸುವ  ಶ್ರೀ ಶ್ರೀ ಮಹಾನ್ ಲೇಖಕರು ತಮ್ಮ ಘನತೆಯನ್ನು ಉಳಿಸಿಕೊಳ್ಳಬೇಕು ಅದೇ ರೀತಿ ಅವರು ದಯವಿಟ್ಟು ಕರಾವಳಿಗೆ ತಮ್ಮ ಪಾದಬೆಳೆಸಿ ಯಕ್ಷಗಾನವನ್ನು ನೋಡಿ, ಜೊತೆಗೆ ಪಂಕ್ತಿಭೇಧವಿರದೆ ಹೊಟ್ಟೆಗೆ ಒಂದು ಚೂರು ಲಡ್ಡು ,ಪಾಯಸದ ಜೊತೆಗಿನ ಅನ್ನಸಂತರ್ಪಣೆಯನ್ನು ಸ್ವೀಕರಿಸಿ ಶ್ರೀ ದೇವಿಯ ಹಾಗೂ ಕರಾವಳಿಗರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಮಹಾನ್ ‘ಲೇಖಕ’ರಲ್ಲಿ  ವಿನಂತಿ.

2 ಟಿಪ್ಪಣಿಗಳು Post a comment
 1. Ajay Shastry
  ಫೆಬ್ರ 22 2016

  ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ?

  ಉತ್ತರ
 2. Devu Hanehalli
  ಫೆಬ್ರ 2 2018

  Could you please tag or add that `original thinker’s’ article or facebook comment?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments