ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 22, 2016

1

ವೋಟ್ ಬ್ಯಾಂಕ್ ಮದ್ದಾನೆಗೆ ಸಿಲುಕಿ ನರಳಿದ ಸಿಸಿಸಿ

‍ನಿಲುಮೆ ಮೂಲಕ

– ಅನಿರುದ್ಧ ವಸಿಷ್ಟ,ಭದ್ರಾವತಿ

ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ

ಸಮಾನ ನಾಗರೀಕ ಸಂಹಿತೆವ್ಯಾಪಾರಕ್ಕೆಂದು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲದೇ, ದೇಶವನ್ನು ದಾಸ್ಯದ ಸಂಕೋಲೆಯಲ್ಲಿ ಬೀಳಿಸಿ, ಅಬ್ಬರಿಸಿದ ಬ್ರಿಟೀಷರ ಒಡೆದಾಳುವ ನೀತಿಯ ಮನಸ್ಥಿತಿ, ಭಾರತೀಯ ವಂಶವಾಹಿಯಲ್ಲಿ ಸೇರಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಆದರೆ,ಇವರನ್ನು ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂದು ಬೀಗುವ ಅಹಿಂಸಾವಾದಿ(?)ಗಳ ಕಾಂಗ್ರೆಸ್, ಎಲ್ಲ ಕ್ರೆಡಿಟ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡದ್ದು ಮಾತ್ರವಲ್ಲದೇ, ಬ್ರಿಟೀಷರ ಒಡೆದಾಳುವ ನೀತಿಯನ್ನೇ ಮೈಗೂಡಿಸಿಕೊಂಡಿತು. ಭಾರತೀಯ ಸ್ವಾತಂತ್ರ್ಯದ ಜನಕ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಲು ಆರಂಭಿಸಿದ ಜವಹರಲಾಲ್ ನೆಹರೂ,ತಮ್ಮಿಚ್ಚೆಗೆ ಬಂದಂತೆ ಸರ್ಕಾರ ನಡೆಸಲು ಆರಂಭಿಸಿದ್ದು ಮಾತ್ರವಲ್ಲದೇ, ದೇಶದ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿ, ಶಾಶ್ವತಗೊಳಿಸಲು ಯೋಚಿಸಿ, ವೋಟ್ ಬ್ಯಾಂಕ್ ಎಂಬ ಅನಿಷ್ಟ ಪದ್ದತಿಯನ್ನು ಭಾರತದ ರಾಜಕಾರಣಕ್ಕೆ ಕೊಡುಗೆಯನ್ನಾಗಿ ನೀಡಿದರು.

ಇದರ ಪರಿಣಾಮ, ಬ್ರಿಟೀಷರಂತೆ ಒಡೆದಾಳುವ ನೀತಿಯನ್ನು ೬೦ ವರ್ಷಗಳ ಕಾಲ ಕಾಂಗ್ರೆಸ್ ಅನುಸರಿಸಿಕೊಂಡು ಬಂದದ್ದಲ್ಲದೇ, ಜಾತ್ಯತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕೇವಲ ಸಂವಿಧಾನದ ಪೀಠಿಕೆಗೆ ಮಾತ್ರ ಸೀಮಿತವಾಗಿಸಿ, ಓಲೈಕೆ ರಾಜಕಾರಣದ ವಿಷಬೀಜವನ್ನು ಬಿತ್ತಿ, ಹೆಮ್ಮರವನ್ನಾಗಿ ಬೆಳೆಸಿದೆ. ಪರಿಣಾಮ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ, ಧರ್ಮಗಳೇ ಇಂದು ಎಲ್ಲ ಕ್ಷೇತ್ರಗಳ ಪ್ರಮುಖ ವಿಚಾರ ಹಾಗೂ ವಿವಾದಗಳಾಗಿ ಪರಿವರ್ತನೆಯಾಗಿದ್ದು, ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರಿದ ಭಾರತದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿತ್ತು. ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಈ ವಿಚಾರಗಳು ಸಂವಿಧಾನದ ಮೂಲ ಆಶಯ ಹಾಗೂ ಈ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಉಲ್ಲಂಘಿಸುವ ಮಟ್ಟಕ್ಕೆ ಧರ್ಮಾಧಾರಿತ ಕಾನೂನು ಹಾಗೂ ವ್ಯವಸ್ಥೆಗಳನ್ನು ರೂಪಿಸಿ, ಬೀಗಲು ಅವಕಾಶ ಮಾಡಿಕೊಟ್ಟಿದೆ.ಅಭಿವೃದ್ಧಿಶೀಲ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು, ಭಾರತವನ್ನು ವಿಶ್ವಗುರುನ್ನಾಗಿಸುವತ್ತ ಹೊರಳಿಸುತ್ತಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಈ ವಿಚಾರಕ್ಕೆ ದೇಶದೊಳಗಿರುವ ಇಂತಹ ಅನಿಷ್ಟ ಪದ್ದತಿಗಳು ತೊಡಕಾಗುತ್ತವೆ.ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಮಾನ ನ್ಯಾಯ ಒದಗಿಸಲು ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಭಾರತ ಸಂವಿಧಾನ ಪೀಠಿಕೆಯಲ್ಲಿ ಹೇಳಿರುಂತೆ ಜಾತ್ಯತೀತ ಹಾಗೂ ಸಮಾನತೆಯನ್ನು ದೇಶದಲ್ಲಿ ವಾಸ್ತವವಾಗಿ ಜಾರಿಗೊಳಿಸಬೇಕಾದರೆ, ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು.

ಏನಿದು ಸಂಹಿತೆ?
ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಪ್ರಸ್ತುತ ಕಾಣೆಯಾಗಿರುವ ಜಾತ್ಯತೀತತೆಯನ್ನು ಮರುಸ್ಥಾಪಿಸಲು ಹಾಗೂ ಸಮಾನ ನ್ಯಾಯ ಒದಗಿಸಲು ಏಕ ರೂಪದ ನಾಗರಿಕ ಸಂಹಿತೆಯ ಅಗತ್ಯವಿದೆ. ಅಂದರೆ, ದೇಶವಾಸಿಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ವಿವಾಹ, ವಿಚ್ಚೇಧನ, ದತ್ತು ತೆಗೆದುಕೊಳ್ಳುವುದು ಹಾಗೂ ಪಿತ್ರಾರ್ಜಿತ ಸ್ವತ್ತುಗಳ ವಿಚಾರಗಳಿಗೆ ಅನ್ವಯಿಸುವಂತಗೆ ಒಂದೇ ರೂಪದ ಕಾನೂನನ್ನು ರೂಪಿಸುವುದಾಗಿದೆ.ಪ್ರಸ್ತುತ ಮುಸ್ಲಿಂ ಸೇರಿದಂತೆ ಕೆಲವು ಧರ್ಮದ ವೈಯಕ್ತಿಕ ಕಾನೂನಿನಿಂದ ದೇಶದಲ್ಲಿ ತಾರತಮ್ಯ ನಡೆಯುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಮುಸಲ್ಮಾನ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂಬ ಅಂಶಗಳು ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸಮಾನ ನ್ಯಾಯ ಒದಗಿಸಿ, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ತುರ್ತು ಅಗತ್ಯವಿದ್ದು, ಈ ಕುರಿತಂತೆ ಹೆಚ್ಚಿನ ಜಾಗೃತಿ ಮೂಡುವ ಅವಶ್ಯಕತೆಯಿದೆ.

 ಸಂಹಿತೆ ಬಂದರೆ ಏತಕ್ಕೆ ಸಹಕಾರಿ?
*ಜಾತ್ಯತೀತ ರಾಷ್ಟ್ರವನ್ನಾಗಿಸಲು – ಸಂವಿಧಾನ ಪೀಠಿಕೆಯ ಆಶಯದಂತೆ ಜಾತ್ಯತೀತತೆಯನ್ನು ಸಾಕಾರಗೊಳಿಸಲು ಸಿಸಿಸಿ ಅಗತ್ಯವಿದೆ. ಪ್ರಸ್ತುತ ರಾಷ್ಟ್ರದಲ್ಲಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ನೆಲೆಸಿರುವ ವ್ಯತ್ಯಾಸವನ್ನು ಅಳಿಸಬೇಕಿದೆ. ಧರ್ಮಗಳ ಒಳಗೆ ವಿಧಿಸಿರುವ ಕಾನೂನು ಧರ್ಮಕ್ಕಷ್ಟೇ ಸೀಮಿತವಾಗಿರಬೇಕು. ಬದಲಾಗಿ, ದೇಶದ ವ್ಯವಸ್ಥೆಯಲ್ಲಿ ಅನ್ವಯವಾಗಬಾರದು. ಹೀಗಾಗಿ, ಇದನ್ನು ಹೋಗಲಾಡಿಸಿ, ಧರ್ಮಾಧಾರಿತ ಜಾತ್ಯತೀತ(?)ವನ್ನು ಹೋಗಲಾಡಿಸಲು ಸಿಸಿಸಿ ಅಗತ್ಯವಿದೆ.
*ನ್ಯಾಯಾಂಗದ ಮೇಲಿನ ಹೊರೆಯನ್ನು ಕಡಿತಗೊಳಿಸಲು – ವಿವಿಧ ಧರ್ಮ ಹಾಗೂ ಜಾತಿ ಆಧಾರದಲ್ಲಿ ನಿಯಮಾವಳಿಗಳನ್ನು ಮಾಡಿಕೊಳ್ಳುವುದರಿಂದ ಉಂಟಾಗುತ್ತಿರುವ ಕಾನೂನು ತೊಡಕುಗಳನ್ನು ಸರಿದೂಗಿಸಿ, ನ್ಯಾಯಾಂಗದ ಮೇಲಿನ ಹೊರೆಯನ್ನು ಕಡಿತಗೊಳಿಸಬಹುದು. ಹಲವು ವೈಯಕ್ತಿಕ ಕಾನೂನುಗಳಲ್ಲಿ ಇರುವಂತಹ ಲೋಪದೋಷಗಳನ್ನು ತೊಡೆದು ಹಾಕಿ, ದೇಶಕ್ಕೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ, ಸಮಾನ ನ್ಯಾಯ ಒದಗಿಸಬಹುದು.
*ಸಮಾನತೆಯನ್ನು ಸಾರಬಹುದು – ದೇಶದ ಅಭಿವೃದ್ಧಿಗೆ ತೊಡಕಾಗಿರುವ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ, ಅಭಿವೃದ್ಧಿಗೆ ಪೂರಕವಾಗಿ ಎಲ್ಲರಿಗೂ ಒಂದೇ ಎಂಬ ನ್ಯಾಯವನ್ನು ಒದಗಿಸಲು ಸಾಧ್ಯ.
*ವೈಯಕ್ತಿಕ ಸಂಹಿತೆಯಿಂದಾಗುವ ತೊಂದರೆ ತಪ್ಪಲಿದೆ – ಧರ್ಮ ರಕ್ಷಣೆ ಹಾಗೂ ಅನುಯಾಯಿಗಳ ರಕ್ಷಣೆ ಹೆಸರಿನಲ್ಲಿ ರೂಪಿಸಲಾಗಿರುವ ಹಲವಾರು ವೈಯಕ್ತಿಕ ಕಾನೂನುಗಳು ವಾಸ್ತವವಾಗಿ, ಆ ಧರ್ಮದ ಅನುಯಾಯಿಗಳಿಗೆ ನಿಜವಾದ ಸ್ವಾತಂತ್ರ್ಯವನ್ನು ಒದಗಿಸಿಲ್ಲ. ಕೆಲವೊಂದು ಧರ್ಮದಲ್ಲಿ ಅದರಲ್ಲೂ ಪ್ರಮುಖವಾಗಿ ಶಾಂತಿಯನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿಕೊಳ್ಳುವ ಭಾರತದ ಅಲ್ಪಸಂಖ್ಯಾತ(?)ರಾಗಿರುವ ಧರ್ಮದ ವೈಯಕ್ತಿಕ ಕಾನೂನಿನಿಂದ ಆ ಧರ್ಮೀಯರೇ ಯಾತನೆ ಅನುಭವಿಸುತ್ತಿರುವುದು ಅನೇಕ ಪ್ರಸಂಗಗಳಲ್ಲಿ ಸಾಬೀತಾಗಿದೆ. ಇಂತಹ ಪದ್ದತಿಗಳನ್ನು ತೊಡೆಯಲು ಸಹಕಾರಿ.
*ಮುಸ್ಲಿಂ ಮಹಿಳೆರಿಗೆ ಸಹಕಾರಿ – ಏಕಪತ್ನಿತ್ವ ಭಾರತೀಯ ಸಂಪ್ರದಾಯದಲ್ಲಿ ನಡೆದುಬಂದ ಧರ್ಮಾತೀತ ವ್ಯವಸ್ಥೆ. ಆದರೆ, ಮುಸ್ಲಿಮರಲ್ಲಿ ಬಹುಪತ್ನಿತ್ವ ಇರುವ ಕಾರಣ, ಆ ಮಹಿಳೆಯರು ಅನ್ಯಾಯಕ್ಕೊಳಗಾಗಿದ್ದಾರೆ ಎನ್ನುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಹೀಗಾಗಿ, ಏಕರೂಪ ನಾಗರಿಕ ಜಾರಿಗೊಳಿಸಿದ್ದೇ ಆದಲ್ಲಿ, ಇಂತಹ ಅನ್ಯಾಯಗಳನ್ನು ತಡೆಗಟ್ಟಬಹುದು. ಇದರೊಂದಿಗೆ ಪ್ರಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಕ್ಕು ಪಡೆಯುತ್ತಾರೆ. ಯಾವುದೇ ಧರ್ಮ ಏಳ್ಗೆಗೆ ಆ ಧರ್ಮದ ಮಹಿಳಾ ಪ್ರಾತನಿಧ್ಯ ಮುಖ್ಯ. ಹೀಗಾಗಿ, ಈ ಸಂಹಿತೆಯಿಂದ ಸಮಾನ ನ್ಯಾಯ ದೊರಕುವುದು ಸಾಧ್ಯ.
*ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಲಿದೆ – ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಎನ್ನುವ ಅನಿಷ್ಠ ಪದ್ದತಿ ಬೇರೂರಿದೆ. ಇದರ ಪರಿಣಾಮ ದೇಶದ ರಾಜಕೀಯ ಪಕ್ಷಗಳು ಮತಕ್ಕಾಗಿ ಒಂದು ಸಮುದಾಯವನ್ನು ಓಲೈಸುವ, ಅದೇ ಸಮುದಾಯವನ್ನು ಆರೈಕೆ ಮಾಡುವ ಕಾರ್ಯ ಮಾಡುತ್ತಾ, ಮತ್ತೊಂದು ಸಮುದಾಯವನ್ನು ನಿರ್ಲಕ್ಷಿಸುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದದ್ದೇ ಆದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅಂತ್ಯ ಹಾಡಲು ಸಹಕಾರಿಯಾಗುತ್ತದೆ.

ಸಂಹಿತೆ ಏಕೆ ಬೇಕು?
*ಭಾರತ ಸಂವಿಧಾನದ ೪೪ನೆಯ ಅನುಚ್ಛೇದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹೇಳಿದೆ. ಆದರೆ, ರಾಜ್ಯನೀತಿ ನಿರ್ದೇಶಕ ತತ್ವದ ಅಂಶಗಳ ಅಡಿಯಲ್ಲಿ ಇದು ಕಡ್ಡಾಯವಲ್ಲ ಎಂದಿರುವ ಕಾರಣ ಈ ಅನುಚ್ಛೇದವನ್ನು ಜಾರಿಗೆ ತರದೇ ದೇಶವನ್ನಾಳಿದ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದ ಸರಕನ್ನಾಗಿ ಮಾಡಿಕೊಂಡಿದೆ.
*ಇನ್ನು, ಸಂವಿಧಾನದ ಆಶಯದಂತೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಹಲವು ಬಾರಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಪ್ರಮುಖವಾಗಿ ಷಾ ಬಾನು ಪ್ರಕರಣ ಹಾಗೂ ೧೯೯೫ರ ಸರಳಾ ಮುಗ್ದಾಲ್ ಪ್ರಕರಣದಲ್ಲಿ ಸುಪ್ರೀಂ ಹೇಳಿದೆ. ಅಂದರೆ, ಸಂಹಿತೆಯನ್ನು ಜಾರಿಗೆ ತರಬೇಕು ಎನ್ನುವುದು ನ್ಯಾಯಾಂಗದ ಆಶಯವೂ ಆಗಿದೆ.
*ಧರ್ಮಾಧಾರಿತವಾಗಿ ನಡೆಯುವ ಕಾನೂನಿನ ದೌರ್ಜನ್ಯಗಳನ್ನು ತಡೆಗಟ್ಟಲು ಈ ಸಂಹಿತೆ ಬೇಕು.
*ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ವ್ಯತ್ಯಾಸವನ್ನು ಹೋಗಲಾಡಿಸಲು ಪೂರಕವಾಗಿ ಇದು ಬೇಕು. ಇದು ಎಲ್ಲ ಧರ್ಮ ಹಾಗೂ ಜಾತಿಗಳೂ ಒಂದೇ ಎನ್ನುವ ಭಾವನೆಯನ್ನು ಮೂಡಿಸಲು ಸಹಕಾರಿ.
*ಧರ್ಮಾಧಾರಿತ ಕಾನೂನಿನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಪೂರಕ.
*ಸಂವಿಧಾನದ ಅನುಚ್ಛೇದ ೨೫ ಹಾಗೂ ೨೬ ದೇಶವಾಸಿಗಳಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದು, ಸಿಸಿಸಿಯಿಂದ ಇದು ಉಲ್ಲಂಘನೆಯಾಗುವುದಿಲ್ಲ ಎನ್ನುವುದನ್ನು ಅರಿಯಬೇಕು.

ಏತಕ್ಕಾಗಿ ಜಾರಿಯಾಗುತ್ತಿಲ್ಲ?
ದೇಶದ ಎಲ್ಲ ನಾಗರಿಕರಿಗೆ ಧರ್ಮ ಹಾಗೂ ಜಾತಿಯನ್ನು ಮೀರಿ ಸಮಾನ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಿದೆ. ಆದರೆ, ಧರ್ಮ ಹಾಗೂ ಜಾತಿಯನ್ನೇ ಮುಂದು ಮಾಡಿಕೊಂಡು ರಾಜಕೀಯ ಮಾಡುವ ಕೀಳುಮಟ್ಟದ ಸಂಸ್ಕೃತಿಯನ್ನು ಹಿಂದೆಯೇ ಕಾಂಗ್ರೆಸ್ ಹುಟ್ಟು ಹಾಕಿದೆ. ಪರಿಣಾಮ ವೋಟ್ ಬ್ಯಾಂಕ್ ರಾಜಕಾರಣ ಎಂಬ ವಿಷಜಂತು ಬೃಹದಾಕಾರವಾಗಿ ಬೆಳೆದುನಿಂತಿದೆ.ಹೀಗಾಗಿ, ರಾಜಕೀಯ ಸ್ವಾರ್ಥ ಹಿತಾಸಕ್ತಿಯೇ ಈ ಸಂಹಿತೆ ಜಾರಿಯಾಗದೇ ಇರಲು ಮೂಲ ಕಾರಣ ಎನ್ನಬಹುದು. ಪ್ರಮುಖವಾಗಿ ಈ ಸಂಹಿತೆ ಜಾರಿಯಾದರೆ, ವೈಯಕ್ತಿಕ ಕಾನೂನುಗಳು ನಿಷ್ಕ್ರಿಯಗೊಂಡು ಎಲ್ಲರೂ ಒಂದೇ ಕಾನೂನಿನ ಅಡಿ ಒಳಪಡಬೇಕಾಗುತ್ತದೆ. ಇದರಿಂದ ಒಂದು ಧರ್ಮವನ್ನೇ ವೋಟ್ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ರಾಜಕೀಯವಾಗಿ ಹೊಡೆತ ಬೀಳುತ್ತದೆ ಎನ್ನುವುದು ಅವರ ಚಿಂತನೆ.ನರೇಂದ್ರ ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಹಿಂದೆಯೇ ಹೇಳಿತ್ತು. ಆದರೆ, ಇಂದಿನವರೆಗೂ ಆ ವಿಚಾರವನ್ನು ಕೇಂದ್ರ ಪ್ರಸ್ತಾಪಿಸಿಲ್ಲ. ಹೀಗಾಗಿ, ಮೋದಿ ಸರ್ಕಾರ ಇದನ್ನು ಕೂಡಲೇ ಜಾರಿಗೊಳಿಸುವ ನಿರ್ಧಾರವನ್ನು ಕೈಗೊಳ್ಳಬೇಕಿದೆ.

1 ಟಿಪ್ಪಣಿ Post a comment
  1. Vijayananda .N
    ಫೆಬ್ರ 23 2016

    ಹೌದು, ನಮ್ಮ ದೇಶದಲ್ಲಿ ಮೊದಲು “ಮೀಸಲಾತಿ” ಎಂಬುದನ್ನು ಒಂದು ಹಂತವಾದ ನಂತರವಾದರೂ ಬುಡಸಮೇತ ಕಿತ್ತೊಗೆಯಬೇಕು. ಅಲ್ಲಾ ಸ್ವಾಮೀ, ಮೀಸಲಾತಿಯನ್ನು ಪಡೆದುಕೊಳ್ಳುವ ವರ್ಗದವರಿಗೆ ಪದವಿಯವರೆಗೂ ಮೀಸಲಾತಿಯನ್ನು ಕೊಡಬಹುದು, ಆನಂತರ ಪದವಿ ಪಡೆದವರು ಎಲ್ಲರಂತೆಯೇ ಸಮಾನರು ತಾನೆ? ಸಮಾನತೆ ಬಂದ ನಂತರ ಯಾಕೆ ಸ್ವಾಮಿ ಎಲ್ಲಾ ಕ್ಷೇತ್ರದಲ್ಲಿ ಮತ್ತು ಉದ್ಯೋಗದಲ್ಲಿ “ಮೀಸಲಾತಿ” ಎಂಬುದನ್ನು ಕೊಡುತ್ತೀರಾ?? ನೀವು 15 ವರ್ಷಗಳಿಂದ ಮೀಸಲಾತಿಯಲ್ಲಿ ಕೊಟ್ಟ ವಿದ್ಯಾಭ್ಯಾಸದ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಅಥವಾ ಮೀಸಲಾತಿಯಲ್ಲಿ ಶಿಕ್ಷಣ ಪಡೆದವರು ಪದವಿಯ ನಂತರವೂ ಅವಿದ್ಯಾವಂತರೇ??

    ಮೀಸಲಾತಿಯನ್ನು ಕೊಡಲೇಬೇಕಾದಲ್ಲಿ ಪೆಟ್ರೋಲ್ ಬೆಲೆಯನ್ನು ಜಾತಿ ಆಧಾರದ ಮೇಲೆ ಕೊಡಿ. SC/ST ಗೆ 75% ರಿಯಾಯಿತಿ, OBC ಗೆ 50% ರಿಯಾಯಿತಿ, GM ಗೆ 0% ರಿಯಾಯಿತಿ. ಇದೇ ಆಧಾರದಲ್ಲಿ ರೈಲು, ಬಸ್ ಹಾಗೂ ವಿಮಾನ ಪ್ರಯಾಣದಲ್ಲಿ ಆಸನಗಳ ಹಂಚಿಕೆಯನ್ನೂ ಕೊಟ್ಟುಬಿಡಿ..!

    ನಮ್ಮ ದೇಶ ಉದ್ಧಾರ…!!!!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments