ಟಿಪ್ಪು ಜಯಂತಿಗೆ ಕೊಡವರ ಭರ್ಜರಿ ಗಿಫ್ಟ್ “ಕಾಂಗ್ರೆಸ್ ಮುಕ್ತ ಕೊಡಗು”
– ಅನಿರುದ್ಧ ಎಸ್.ಆರ್ , ಭದ್ರಾವತಿ
ಕೋಮುವಾದಿ”ಗಳಿಗೆ ಕೊಡವರ ಗಿಫ್ಟ್ – ಓಲೈಕೆ ರಾಜಕಾರಣವೆಂಬ ರಕ್ತ ಬೀಜಾಸುರನ ಸಂಹಾರ ಆರಂಭ
ಓಲೈಕೆ ರಾಜಕಾರಣ ಎಂಬ ರಕ್ತಬೀಜಾಸುರನನ್ನು ಸ್ವಚ್ಛಂದವಾಗಿ ಬೆಳೆಸಿ, ಒಡೆದಾಳುವ ನೀತಿಯೇ ತಮ್ಮ ಧ್ಯೇಯವೆಂಬಂತೆ ನಡೆದುಕೊಂಡು ಬರುತ್ತಿರುವ ನೆಹರೂ ಕುಟುಂಬ ಅಂದರೆ ಸೋ ಕಾಲ್ಡ್ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ರಾಷ್ಟ್ರ ರಾಜಕಾರಣದಲ್ಲಿ ಎಬ್ಬಿಸಿರುವ ಹೊಲಸನ್ನು ತೊಳೆಯಲು ಇನ್ನೆಷ್ಟು ದಶಕಗಳು ಬೇಕೋ. ಆದರೆ, ತನ್ನ ಸ್ವಾರ್ಥಕ್ಕಾಗಿ ಅಮಾಯಕರನ್ನು ಬಲಿ ಕೊಡುವ, ಅಸಹಾಕಯಕರನ್ನೇ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಇವರ ಪರಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ಮಾನ ಮೂರಾಬಟ್ಟೆಯಾಗಿದೆ.
ಆರಂಭದಲ್ಲಿ ಹೇಳಿದ ರಕ್ತಬೀಜಾಸುರನ ಪ್ರಸ್ತಾಪಕ್ಕೆ ಉದಾಹರಣೆ ಟಿಪ್ಪು ಜಯಂತಿಯ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಮೆರವಣಿಗೆ ಹಾಗೂ ಅದರ ಮೂರ್ತ ರೂಪ ಗಲಭೆ. ಹಿಂದೂ ಸಂಘಟನೆ ಹಾಗೂ ರಾಜ್ಯದ ನಾಗರಿಕರ ತೀವ್ಯ ವಿರೋಧದ ನಡೆವೆಯೂ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿಗೆ ಅನುಮತಿ ನೀಡಿದ ಸಿದ್ಧರಾಮಯ್ಯ ಸರ್ಕಾರದ ನೀಚ ಕೃತ್ಯಕ್ಕೆ ವಿಎಚ್ ಪಿ ಮುಖಂಡ ದೇವದಂಡ ಕುಟ್ಟಪ್ಪ ಬಲಿಯಾಗಿದ್ದರು. ಅಂದು ನಡೆದ ಗಲಭೆಯಲ್ಲಿ ಎಲ್ಲಿಂದಲೋ ಬಂದವರು ಅಟ್ಟಹಾಸ ಮೆರೆದು, ತಮ್ಮ ವಿಕೃತ ಮನಸ್ಥಿತಿಯ ಸುಖಕ್ಕಾಗಿ ಅಮಾಯಕನನ್ನು ಕೊಂದರು. ಪ್ರಕರಣ ಕುರಿತಂತೆ ಇತ್ತೀಚಿಗೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಕುಟ್ಟಪ್ಪ ಸಾವು ಆಕಸ್ಮಿಕವಲ್ಲ ಕೊಲೆ ಎನ್ನುವುದನ್ನು ಸ್ಪಷ್ಟೀಕರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹತ್ತು ಮಂದಿಯ ವಿರುದ್ಧ ದೋಷಾರೋಪವನ್ನು ಹೊರಿಸಲಾಗಿದೆ. ಆದರೆ, ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 302ರ ಬದಲಾಗಿ 304ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಂದರೆ, 302 ಆಗಿದ್ದರೆ ಉದ್ದೇಶ ಪೂರ್ವಕ ಅಥವಾ ನನ್ನ ಕೃತ್ಯದಿಂದ ವ್ಯಕ್ತಿಯೊಬ್ಬ ಸಾಯುತ್ತಾನೆ ಎಂದು ತಿಳಿದಿದ್ದರೂ ಕೃತ್ಯ ಎಸಗುವುದು ಅಪರಾಧವಾಗಿದ್ದು, ಇದಕ್ಕಾಗಿ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದು. ಆದರೆ, 304 ರ ಅನ್ವಯ ನೋಡುವುದಾದರೆ, ತಾನು ಎಸಗುತ್ತಿರುವ ಕೃತ್ಯದಿಂದ ವ್ಯಕ್ತಿ ಸಾಯುವುದಿಲ್ಲ ಎಂದು ಭಾವಿಸಿ ಹಲ್ಲೆ ನಡೆಸಿ, ಅಕಸ್ಮಾತ್ ಆತ ಸತ್ತರೆ, ಅದು ಉದ್ದೇಶ ಪೂರ್ವಕ ಕೊಲೆಯಲ್ಲ ಎಂದು ಕಾನೂನು ಹೇಳುತ್ತದೆ. ಅಂದರೆ, 304 ರ ಅನ್ವಯ ಗಂಭೀರ ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಪ್ರಕರಣವನ್ನು ಸೂಕ್ಷ್ಮವಾಗಿ ನೋಡುವುದಾದರೆ ತೀರಾ ಬುದ್ಧಿವಂತಿಕೆಯಿಂದ ಆರೋಪಿಗಳನ್ನು ವ್ಯವಸ್ಥಿತವಾಗಿ ಪಾರು ಮಾಡುವ ಹುನ್ನಾರ ಕಾಣುತ್ತದೆ.
ಇದರ ಹಿಂದೆ ಸೋ ಕಾಲ್ಡ್ ಕೈ ಪಕ್ಷದ ಕೃಪಾಕಟಾಕ್ಷ ಇಲ್ಲದಿಲ್ಲ ಎನ್ನುವುದನ್ನು ಅರಿಯದಷ್ಟು ದಡ್ಡರಿಲ್ಲ ಜನ.
ಇರಲಿ…
ಕಾಂಗ್ರೆಸ್ ಸರ್ಕಾರದ ನೀಚ ಬುದ್ದಿಯನ್ನು ಒತ್ತಟ್ಟಿಗಿಟ್ಟರೂ, ಸಾಮಾನ್ಯ ಜನ ಯಾವುದನ್ನೂ ಅರಿಯದಷ್ಟು ದಡ್ಡರಲ್ಲ. ಟಿಪ್ಪು ಜಯಂತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೆರವಣಿಗೆಗೆ ಹಾಗೂ ಆಚರಣೆ ನಡೆಸಬಾರದು ಎಂದು ರಾಜ್ಯದ ಜನ ಇನ್ನಿಲ್ಲದಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಆದರೆ, ಸಿದ್ಧರಾಮಯ್ಯರ ಸರ್ಕಾರಕ್ಕೆ ಓಟ್ ಬ್ಯಾಂಕ್ ರಾಜಕಾರಣ ಮುಖ್ಯವೇ ಹೊರತು, ಟಿಪ್ಪು ಜಯಂತಿಯನ್ನು ವಿರೋಧಿಸಿದ್ದ ಜನರ ಮನೋಭಾವನೆ ಮುಖ್ಯವಾಗಲಿಲ್ಲ. ಪರಿಣಾಮ ಮಡಿಕೇರಿಗೆ ಮಡಿಕೇರಿಯೇ ಕಂಗೆಟ್ಟು ಹೋಗಿ, ಕುಟ್ಟಪ್ಪ ಅನ್ಯಾಯವಾಗಿ ಸಾವನ್ನಪ್ಪಿದರು. ಆದರೆ, ಇವೆಲ್ಲವನ್ನೂ ಗಮನಿಸಿದ್ದ ಅಲ್ಲಿಯ ಮಂದಿ ಈಗ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ನೀಚ ಬುದ್ದಿಗೆ ಸರಿಯಾದ ಬುದ್ಧಿ ಕಲಿಸಿದ್ದು, ಮುಟ್ಟಿ ನೋಡಿಕೊಳ್ಳುವಂತಹ ಹೊಡೆತ ನೀಡಿದ್ದಾರೆ. ಕೊಡಗು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ನ ಎಲ್ಲಾ ಕ್ಷೇತ್ರಗಳಲ್ಲಿ ಅಲ್ಲಿನ ಪ್ರಜ್ಞಾವಂತ ಮತದಾರ ಬಿಜೆಪಿಯನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಗೆ ಹಚಾ ಎಂದಿದ್ದಾರೆ.
*ಕೊಡಗು ಸಂಸದ ಬಿಜೆಪಿಯವರು
*ಕೊಡಗು ಎಂಎಲ್ಎಗಳು ಬಿಜೆಪಿಯವರು
*ಕೊಡಗು ವಿಧಾನಪರಿಷತ್ ಸದಸ್ಯರು ಬಿಜೆಪಿಯವರು
*ಕೊಡಗು ಜಿಲ್ಲಾ ಪಂಚಾಯತ್ ಬಿಜೆಪಿ ಪಾಲು
*ಕೊಡಗು ತಾಲೂಕು ಪಂಚಾಯತ್ ಬಿಜೆಪಿ ಪಾಲು
ಹೀಗೆ ಕೊಡಗಿಗೆ ಕೊಡಗೇ ಬಿಜೆಪಿಯನ್ನು ಎತ್ತಿ ಮೆರೆಸಿದ್ದು, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳನ್ನು ಧೂಳಿಪಟ ಮಾಡಿದೆ. ಅಂದರೆ, ನಾವು ಬೇಕಾದ್ದು ಮಾಡಿಯೂ ಗೆಲ್ಲುತ್ತೇವೆ ಎಂಬ ನಿಲುವು ಈಗ ನಡೆಯುವುದಿಲ್ಲ ಎನ್ನುವುದು ಸಾಬೀತಾಗಿದೆ. ಹಿಂದೂಗಳ ವಿರೋಧ ಕಟ್ಟಿಕೊಂಡು ಅಲ್ಪ ಸಂಖ್ಯಾತರ ಓಲೈಕೆಗಾಗಿ ಕೈಗೊಂಡ ನಿರ್ಧಾರದ ಕಾರಣ ಕಾಂಗ್ರೆಸ್ ಈ ಬಾರೀ ಬೆಲೆಯನ್ನು ತೆತ್ತಿದೆ.
ಮತ್ತೊಂದು ಆಯಾಮದಿಂದ ನೋಡುವುದಾದರೆ, ಕಾಂಗ್ರೆಸ್ನ ಈ ಪರಿಸ್ಥಿತಿ ಮುಂದಿನ ದಿಕ್ಸೂಚಿಯೂ ಹೌದೆನ್ನಬಹುದು.ಇನ್ನೊಂದು ಆಯಾಮದಲ್ಲಿ ಕೊಡಗು ಮಾದರಿ ರಾಜ್ಯದ ಎಲ್ಲ ಕಡೆಗೂ ಅನ್ವಯವಾಗುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ, ಯಾವುದೇ ರೀತಿಯ ಜನವಿರೋಧಿ ನೀತಿಯನ್ನು ಮತದಾರ ಸಹಿಸುವುದಿಲ್ಲ, ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸುತ್ತಾನೆ ಎನ್ನುವುದನ್ನು ಕೊಡಗಿನ ವೀರರು ಸಾಬೀತು ಮಾಡಿದ್ದಾರೆ.
ಸರ್ಕಾರವನ್ನು ಸುಭದ್ರ ಮಾಡಿಕೊಳ್ಳಲು ಜನಪ್ರಿಯ ಯೋಜನೆಗಳ ಬೆನ್ನು ಬಿದ್ದಿರುವ ಸಿದ್ಧರಾಮಯ್ಯ ಸರ್ಕಾರ, ಜನವಿರೋಧಿ ಹಾಗೂ ಹಿಂದೂ ವಿರೋಧಿ ಕೃತ್ಯಗಳನ್ನು ಮಾಡುತ್ತಾ, ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಈ ಎಲ್ಲಾ ನಿರ್ಧಾರಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಾರೀ ಬೆಲೆಯನ್ನು ತೆರುವುದು ನಿಶ್ಚಿತ.
ಅದಕ್ಕೆ ಉದಾಹರಣೆ ಕಾಂಗ್ರೆಸ್ ಮುಕ್ತ ಕೊಡಗು.
ಈ ದೇಶದ ನಿಜವಾದ ಭಾರತೀಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯಾನು ಎಚ್ಚರ ಕಾಂಗ್ರೆಸ್ಸಿಗರೇ, ಬುಜೀಗಳೆ ಹಾಗೂ ಸೋ ಕಾಲ್ಡ್ ಪ್ರಪಗಳೇ ಎಚ್ಚರ. ಇನ್ನಾದರೂ ಬದಲಾಗಲು ಪ್ರಯತ್ನಿಸಿ. ಇಲ್ಲವೇ ಓಲೈಕೆ ರಾಜಕಾರಣವೆಂಬ ರಕ್ತ ಬೀಜಾಸುರನ ಸಂಹಾರ ಕೊಡಗಿನಿಂದಲೇ ಆರಂಭವಾಗಬಹುದು.
ಕೊನೆಯಲ್ಲಿ ನೆನಪಾಗುವ ಫೇಸ್ಬುಕ್ನಲ್ಲಿ ಕಂಡ ಸಾಲು :
ಟಿಪ್ಪು ಜಯಂತಿಗೆ ಕೊಡವರು ಕೊಟ್ಟ ಭರ್ಜರಿ ಗಿಫ್ಟ್ “ಕಾಂಗ್ರೆಸ್ ಮುಕ್ತ ಕೊಡಗು”