ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 28, 2016

6

ಬರ್ನಾಲ್ ಗೋಸ್ವಾಮಿ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

“ನೀನು, ನಿನ್ನಂಥವರು ಈ ವಿಶ್ವವಿದ್ಯಾಲ17-Arnab-Goswamiಯದಲ್ಲಿ ಸೇರಿಕೊಂಡು ಗಬ್ಬೆಬ್ಬಿಸುತ್ತಿದ್ದೀರಿ. ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗುವಾಗ ನಿನಗೆ ಆತ್ಮಸಾಕ್ಷಿ ಚುಚ್ಚಬೇಕಾಗಿತ್ತು. ಆದರೆ ಅದರ ಲವಲೇಶವೂ ನಿನಗೆ ಇರುವ ಹಾಗಿಲ್ಲ. ಹೇಳು, ನಿನ್ನಂಥ ದೇಶದ್ರೋಹಿಗಳಿಗೆ ನಾವ್ಯಾಕೆ ತೆರಿಗೆ ದುಡ್ಡು ಕಟ್ಟಿ ಓದಿಸಬೇಕು? ಅಲ್ಲಿ ಹದಿನೈದು ಸಾವಿರ ಅಡಿ ಎತ್ತರದಲ್ಲಿ, ಮೈನಸ್ 50 ಡಿಗ್ರಿ ಉಷ್ಣಾಂಶದಲ್ಲಿ ನಿಂತು ದೇಶ ಕಾಯುತ್ತಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಇಂದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಅವರ ಬದಲು ನಿನ್ನಂಥವರು ಇಂದು ದೇಶದ ದಾರಿತಪ್ಪಿದ ಯುವಕರಿಗೆ ರೋಲ್ ಮಾಡೆಲ್ ಆಗುತ್ತಿದ್ದೀರಲ್ಲ, ದುರಂತ! ದುರಂತ ಇದು!” ಎಂದು ಅಬ್ಬರಿಸುತ್ತಿದ್ದನಾತ. ಹಾಗೆ ಭಾರತದ ಎಲ್ಲ ದೇಶಭಕ್ತರ ಪರವಾಗಿ ಆತ ಗುಡುಗುತ್ತಿದ್ದರೆ ಉತ್ತರಿಸಬೇಕಿದ್ದ ಉಮರ್ ಖಾಲಿದ್‍ನಿಗೆ ಉಸಿರುಕಟ್ಟಿದಂತಾಗಿತ್ತು. “ಬಾಯ್ತೆಗೆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತೀರಿ. ನಿಮ್ಮ ಸ್ವಾತಂತ್ರ್ಯ ಕೂಡ ಸೆಲೆಕ್ಟಿವ್. ಬೇಕಾದವರ ಪರವಾಗಿ ಮಾತಾಡಲು ಮಾತ್ರ ಅದನ್ನು ಬಳಸುತ್ತೀರಿ. ಅದೇ ನಿಮ್ಮ ಶತ್ರುಗಳ ಪರವಾಗಿ ಬೇರೆಯವರು ಮಾತಾಡಿದಾಗ ಅವರ ಮೇಲೆ ಹಲ್ಲೆಗೆ ಮುಂದಾಗುತ್ತೀರಿ. ಬೆಂಕಿಬಿತ್ತು ನಿಮ್ಮ ಸ್ವಾತಂತ್ರ್ಯಕ್ಕೆ!” ಎಂದು ಆತ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರೆ ಗಲಭೆ ಎಬ್ಬಿಸಿದ್ದ ವಿದ್ಯಾರ್ಥಿಗಳ ಪರ ವಾದಿಸಲು ಬಂದಿದ್ದ ಮಂದಿ ಬಾಲ ಸುಟ್ಟ ಬೆಕ್ಕಿನಂತಾಗಿದ್ದರು.

       ಅವನು ಅರ್ಣಬ್ ಗೋಸ್ವಾಮಿ. ಚುಟುಕಾಗಿ ಹೇಳಬೇಕೆಂದರೆ ಕರ್ಣಪಿಶಾಚಿ. ಟೈಮ್ಸ್ ನೌ ಎಂಬ ಆಂಗ್ಲ ಸುದ್ದಿವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಆತನ “ನ್ಯೂಸ್ ಅವರ್” ಕಾರ್ಯಕ್ರಮ ಪ್ರಸಾರವಾಗುತ್ತದೆ. ಇದರ ವಿಶೇಷತೆಯೇನೆಂದರೆ ಕಾರ್ಯಕ್ರಮದ ಮೊದಲ ಐದು ನಿಮಿಷದಲ್ಲಿ ಅರ್ಣಬ್ ಅಂದಿನ ಚರ್ಚೆಯ ಪ್ರಮುಖ ವಿಷಯ ಏನು ಎಂಬುದನ್ನು ತಿಳಿಸುತ್ತಾನೆ. ನಂತರದ ಐವತ್ತೈದು ನಿಮಿಷ ಸುಮಾರು ಹತ್ತು-ಹನ್ನೆರಡು ಜನ ತಾರಕ ಸ್ವರದಲ್ಲಿ ವಾಕ್ಸಮರ ನಡೆಸಿಕೊಳ್ಳುತ್ತಾರೆ. ಒಟ್ಟಿಗೆ ತಂದುಹಾಕಿದರೆ, ಕೇವಲ ಎರಡೇ ನಿಮಿಷದಲ್ಲಿ ಅವರೆಲ್ಲರೂ ಪರಸ್ಪರರನ್ನು ಗುದ್ದಿ ನೆಲಕ್ಕೆ ಕೆಡವಿ ಚೂರಿ ಹಾಕಿ ಬೆಂಕಿ ಕೊಟ್ಟುಕೊಂಡು ಸರ್ವನಾಶವಾಗುತ್ತಾರೆ ಅನ್ನಿಸುವಷ್ಟು ಭೀಕರವಾಗಿ ಅವರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ನ್ಯೂಸ್ ಅವರೋ ನಾಯ್ಸ್ ಅವರೋ ಎಂಬ ಗೊಂದಲ ಕಾರ್ಯಕ್ರಮದ ಪ್ರತಿ ವೀಕ್ಷಕನಲ್ಲಿ ಮೂಡುವಂತಿರುತ್ತದೆ. ಶಬ್ದವನ್ನು ಡೆಸಿಬಲ್‍ಗಳಲ್ಲಿ ಅಳೆಯುತ್ತಾರೆ; ಕರ್ಕಶತೆಯನ್ನು ಅರ್ಣಬ್ ಎಂಬ ಮಾನದಲ್ಲಿ ಅಳೆಯುತ್ತಾರೆ ಎಂಬ ಜೋಕಿದೆ. ಆತನ “ನೇಷನ್ ವಾಂಟ್ಸ್ ಟು ನೋ” ಎಂಬ ಪದಪುಂಜ ಬಹಳ ಪ್ರಸಿದ್ಧ. ದೇಶಕ್ಕೆ ಖಂಡಿತಾ ಬೇಕಾಗಿಲ್ಲ; ಉತ್ತರ ಬೇಕಾಗಿರುವುದು ನಿನಗೆ ಮಾತ್ರ. ಹಾಗಾಗಿ ನಿನ್ನ ರೆಡಿಮೇಡ್ ಡೈಲಾಗನ್ನು ಬದಲಾಯಿಸಿ ಅರ್ಣಬ್ ವಾಂಟ್ಸ್ ಟೂ ನೋ ಅನ್ನು ಮಾರಾಯ ಎಂದು ಹೇಳಿದವರುಂಟು. ಈತ ರಾಜಕೀಯದ ಹಲವು ಆಷಾಢಭೂತಿ ಮುಖಗಳನ್ನು ಹೊರಗೆಳೆದ; ಹಲವರ ನಿಜಬಣ್ಣ ಬಯಲು ಮಾಡಿದ; ಇಂಥವರು ಮಾಧ್ಯಮದಲ್ಲಿ ಬೇಕು ಎನ್ನುವವರದ್ದು ಒಂದು ಗುಂಪಾದರೆ ಈತನಿಂದಾಗಿಯೇ ಮಾಧ್ಯಮದ ಪಾವಿತ್ರ್ಯ ಹೋಯಿತು; ಅರಚಾಟ – ದೋಷಾರೋಪಣೆಗಳೇ ಸಂವಾದವೆನ್ನುವ ಭ್ರಮೆ ಹಿಡಿಸಿ ಆರೋಗ್ಯಕರ ಚರ್ಚೆಯನ್ನು ಹಳ್ಳ ಹಿಡಿಸಿದ ಭೂಪನೀತ ಎನ್ನುವವರಿದ್ದಾರೆ. ನೀವು ಒಪ್ಪುತ್ತೀರೋ ಬಿಡುತ್ತೀರೋ, ಅದು ಅರ್ಣಬ್‍ನಿಗೆ ಮುಖ್ಯವಲ್ಲ. ವಿಮರ್ಶಕರು “ಅದೊಂದು ಡಬ್ಬಾ ಸಿನೆಮ” ಎಂದು ಹುಯಿಲೆಬ್ಬಿಸಿದರೂ ಮುನ್ನೂರು ಕೋಟಿ ಬಾಚುವ ಸಲ್ಮಾನ್‍ಖಾನ್ ಸಿನೆಮಗಳಂತೆ ಅರ್ಣಬ್‍ನ ಟಿವಿ ಕಾರ್ಯಕ್ರಮ. ಹಾಗಾಗಿ ಟೀಕಾಕಾರರತ್ತ ಅವನದ್ದು ಡೋಂಟ್ ಕೇರ್.

             2014ರಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲಿ ಅರ್ಣಬ್ ಒಂದು ಐತಿಹಾಸಿಕ ಸಂದರ್ಶನ ಮಾಡಿದ. ಒಂದು ದಶಕದಿಂದ ಯಾವ ಪತ್ರಕರ್ತನಿಗೂ ಮಾತಿಗೆ ಸಿಕ್ಕಿರದಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮೊದಲ ಬಾರಿಗೆ ಅರ್ಣಬ್‍ನಿಗೆ ಸಿಕ್ಕಿದ್ದರು. ತನ್ನ ಎಂದಿನ ಆರ್ಭಟ, ಹಾರಾಟಗಳನ್ನು ಬದಿಗಿಟ್ಟು ಅತ್ಯಂತ ಸಂಯಮದಿಂದ ಪ್ರಶ್ನೆ ಕೇಳುತ್ತ ಹೋದ ಅರ್ಣಬ್, ರಾಹುಲ್ ಗಾಂಧಿಯ ಟೊಳ್ಳುತನವನ್ನು ಜಗತ್ತಿನ ಮುಂದಿಟ್ಟ. ದೇಶದ ಮಾತು ಹೋಗಲಿ, ಹೆಂಡತಿ ಮಕ್ಕಳ ಒಂದು ಮನೆಯನ್ನು ಕೂಡ ನಿರ್ವಹಿಸಲಾರದ ಅನನುಭವಿ ತಾನು ಎಂಬುದನ್ನು ರಾಹುಲ್ ಈ ಸಂದರ್ಶನದಲ್ಲಿ ತಾನಾಗಿ ಅನಾವರಣಗೊಳಿಸಿದ್ದರು. ಈ ಸಂದರ್ಶನದಲ್ಲಿ ಮುಖಕ್ಕೆ ಬಳಿಸಿಕೊಂಡ ಮಸಿಯನ್ನು ಉಜ್ಜಿ ತೆಗೆಯಲು ಇಡೀ ಕಾಂಗ್ರೆಸ್ ಪಕ್ಷವೇ ಬಟ್ಟೆ, ಪೌಡರು ಹಿಡಿದು ರಾಹುಲ್ ಎದುರು ನಿಲ್ಲಬೇಕಾದ ಪರಿಸ್ಥಿತಿ ಬಂತು. “ನಾನು ಹೆಚ್ಚಾಗಿ ನನ್ನ ಕಾರ್ಯಕ್ರಮಗಳಲ್ಲಿ ಎದುರಾಳಿಯ ಮಾತಿಗೆ ಅವಕಾಶ ಕೊಡುವುದಿಲ್ಲ. ಆದರೆ ಕೊಟ್ಟಾಗ ಮಾತ್ರ ಅದೊಂದು ಅವಿಸ್ಮರಣೀಯ ಘಟನೆಯಾಗುವಂತೆ ನೋಡಿಕೊಳ್ಳುತ್ತೇನೆ” ಎಂಬ ಮೀಮ್ ಅರ್ಣಬ್‍ನ ಹೆಸರಲ್ಲಿ ಚಲಾವಣೆಯಲ್ಲಿತ್ತು. ಆತನ ಈ ಸಂದರ್ಶನ, ಚುನಾವಣೆಯ ದಿಕ್ಕನ್ನು ಬದಲಿಸಿಹಾಕಿತು ಎಂದರೂ ಅತಿಶಯೋಕ್ತಿಯೇನಲ್ಲ.
            ಅರ್ಣಬ್‍ನ ಓರ್ವ ಅಜ್ಜ ಅಸ್ಸಾಂ ಅಸೆಂಬ್ಲಿಯಲ್ಲಿ ವಿರೋಧಪಕ್ಷದ (ಕಮ್ಯುನಿಸ್ಟ್ ಪಾರ್ಟಿ) ನಾಯಕರಾಗಿದ್ದರು. ಇನ್ನೊಬ್ಬರು ಕಾಂಗ್ರೆಸ್ ನೇತಾರನಾಗಿದ್ದರು. ತಂದೆ ಕರ್ನಲ್ ಮನೋರಂಜನ್ ಗೋಸ್ವಾಮಿ ಬಿಜೆಪಿ ಪಕ್ಷದಿಂದ ಗುವಾಹಟಿ ಕ್ಷೇತ್ರದ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹಾಗಾಗಿ ಮನೆ ಪಾಠಶಾಲೆಯಲ್ಲ, ಸಂಸತ್ ಭವನ ಅರ್ಣಬ್ ಪಾಲಿಗೆ! ಈತ ಹುಟ್ಟಿಬೆಳೆದಿದ್ದು ಅಸ್ಸಾಂನಲ್ಲಿ. ಓದಿದ್ದು ದೆಹಲಿಯ ಪ್ರತಿಷ್ಠಿತ  ಹಿಂದು ಕಾಲೇಜಿನಲ್ಲಿ. ಸಮಾಜಶಾಸ್ತ್ರದಲ್ಲಿ ಬಿ.ಎ. ಆನರ್ಸ್ ಪಡೆದ ನಂತರ ಅರ್ಣಬ್ ಆಕ್ಸ್‍ಫರ್ಡ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ. ಈತನಿಗೆ ಕರ್ನಾಟಕದ ಜೊತೆಗೂ ಬಾದರಾಯಣ ಸಂಬಂಧವೊಂದಿದೆ! ಅದೇನೆಂದರೆ ಕೇಂಬ್ರಿಡ್ಜ್ ವಿವಿಯಲ್ಲಿ ಅರ್ಣಬ್ ಕೆಲವು ವರ್ಷಗಳ ಕಾಲ ಡಿ.ಸಿ. ಪಾವಟೆ ಫೆಲೋ ಆಗಿ ಭೋಧಕವೃತ್ತಿಯನ್ನು ನಡೆಸಿದ್ದಿದೆ. ಪಾವಟೆ ಕನ್ನಡಿಗರು; ಗಣಿತ ವಿದ್ವಾಂಸರು; ಕರ್ನಾಟಕ ವಿಶ್ವವಿದ್ಯಾಲಯವನ್ನು ಕಟ್ಟಿಬೆಳೆಸಿದವರು; ಅದರ ಉಪಕುಲಪತಿಗಳೂ ಆಗಿ ಸೇವೆ ಸಲ್ಲಿಸಿದವರು. ಬೋಧನೆಯಿಂದ ಪತ್ರಕರ್ತ ವೃತ್ತಿಗೆ ಜಿಗಿದ ಅರ್ಣಬ್ ಮೊದಲ ಒಂದಷ್ಟು ತಿಂಗಳು ಕೋಲ್ಕತ್ತದ ಟೆಲಿಗ್ರಾಫ್ ಪತ್ರಿಕೆಯಲ್ಲಿ ಪತ್ರಕರ್ತನಾಗಿ ತನ್ನ ಅದೃಷ್ಟಪರೀಕ್ಷೆ ಮಾಡಿದ. ನಂತರ 1995ರಲ್ಲಿ ಎನ್‍ಡಿಟಿವಿ ಸುದ್ದಿವಾಹಿನಿಗೆ ಕಾಲಿಟ್ಟ ಬಳಿಕ ತಿರುಗಿನೋಡಿದ್ದಿಲ್ಲ. ಈಗಂತೂ ಆತ ಟೈಮ್ಸ್ ನೌ ಚಾನೆಲ್ಲಿನ ಅವಿಭಾಜ್ಯ ಅಂಗ. ಆತನಿಲ್ಲದ ಆ ಸುದ್ದಿವಾಹಿನಿಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ವ್ಯಕ್ತಿಯೇ ಒಂದು ಸಂಸ್ಥೆಯಾಗಿ ಬೆಳೆಯುವುದು ಆರೋಗ್ಯಕರ; ಆದರೆ ಒಂದು ಸಂಸ್ಥೆಯನ್ನು ಹೀಗೆ ಏಕವ್ಯಕ್ತಿ ಆವರಿಸಿಕೊಂಡುಬಿಡುವುದು ಅಷ್ಟೇನೂ ಒಳ್ಳೆಯ ಬೆಳವಣಿಗೆಯಲ್ಲ; ಇರಲಿ.
              ಅರ್ಣಬ್‍ನ ನ್ಯೂಸ್ ಅವರ್ ಶುರುವಾಗುವ ಮೊದಲು ಭಾರತದ ಸುದ್ದಿವಾಹಿನಿಗಳಿಗೆ ಸುದ್ದಿಯ ಹಪಹಪಿ ಅಷ್ಟೊಂದಿರಲಿಲ್ಲವೆಂದು ಕಾಣುತ್ತದೆ. ಆದರೆ ಈತನ ಕಾರ್ಯಕ್ರಮ ದಿನದಿನವೂ ಜನಪ್ರಿಯತೆಯ ಗ್ರಾಫ್‍ನಲ್ಲಿ ಮೇಲುಮೇಲಕ್ಕೆ ಹೋಗುತ್ತಿದ್ದಹಾಗೆ, ತಮ್ಮ ಟಿಆರ್‍ಪಿ ಕುಸಿಯುತ್ತಿದ್ದ ಹಾಗೆ, ಉಳಿದವರಿಗೆ ಆತಂಕ ಶುರುವಾಯಿತು. ದೂರದರ್ಶನದ ಏಕತಾರಿಯಂತಿದ್ದ ಸುದ್ದಿನಿರೂಪಣೆಯಿಂದ ಬೇಸರಗೊಂಡಿದ್ದ ಜನರಿಗೆ ಈ ಹೊಸಬಗೆಯ ಅರಚು-ಕಿರುಚಾಟಗಳ ಸುದ್ದಿನಿರ್ವಹಣೆ ಆ ಕ್ಷಣಕ್ಕೆ ಖುಷಿ ಕೊಟ್ಟಿರಬೇಕು! ಆದರೆ, ಅರ್ಣಬ್‍ನ ಕಾರ್ಯಕ್ರಮದಲ್ಲಿ ಎದ್ದುಕಾಣುವ ಕೆಲವೊಂದು ಸಮಸ್ಯೆಗಳಿವೆ. ಒಂದು – ನ್ಯಾಯನಿರ್ಣಯ. ಅಂದರೆ, ಆತ ತನ್ನ ಕಾರ್ಯಕ್ರಮದ ಮೊತ್ತಮೊದಲಿಗೇನೇ ಸುದ್ದಿಯನ್ನು ಚುಟುಕಾಗಿ ಹೇಳಿ, ಅದರ ಮೇಲೆ ತನ್ನ ಅಂತಿಮ ನಿರ್ಣಯವನ್ನೂ ಬರೆದು, ನಂತರ ಚರ್ಚೆಗೆ ಹೊರಡುತ್ತಾನೆ. ಉತ್ತರ ಬರೆದು ನಂತರ ಪ್ರಶ್ನೆ ನೋಡಿದ ಹಾಗೆ! ಒಂದು ಸಮಸ್ಯೆಯ ಹಲವು ಆಯಾಮಗಳನ್ನು ವಿಶ್ಲೇಷಿಸಿ ಅಂತಿಮವಾಗಿ ನಿರ್ಣಯ ಕೊಡುವ ಬದಲು, ದಲಿಗೇ ಇದಮಿತ್ಥಂ ಎಂದುಬಿಟ್ಟರೆ ಚರ್ಚೆ ನಡೆಸಬೇಕಾದರೂ ಯಾಕೆ ಎಂಬ ಪ್ರಶ್ನೆ ವೀಕ್ಷಕನಲ್ಲಿ ಏಳುತ್ತದೆ. ಎರಡನೆಯದಾಗಿ, ಮಿತಿಮೀರಿದ ಅರಚಾಟ. ರಸ್ತೆಯಲ್ಲಿ ಸತ್ತುಬಿದ್ದ ಇಲಿಯನ್ನಿಟ್ಟುಕೊಂಡೂ ಈತ ಅದನ್ನೊಂದು ರಾಷ್ಟ್ರೀಯ ಸುದ್ದಿಯೆಂಬಂತೆ ಬಿಂಬಿಸುವುದು, ಅದಕ್ಕಾಗಿ ರಂಪರಾಮಾಯಣ ಎಬ್ಬಿಸುವುದನ್ನು ಕಂಡಾಗ ನಗು ಬರುತ್ತದೆ. ಸಾವಧಾನದ ಚರ್ಚೆಗೆ, ಮುಕ್ತಸಂವಾದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಕಿವಿಗಳಿಗಲ್ಲ, ಬಾಯಿಗಷ್ಟೇ ಇಲ್ಲಿ ಕೆಲಸ. ತಾನು ಮೌನವಾಗಿ ಕೂತರೆ ಉಳಿದವರು ತನ್ನನ್ನು ಓವರ್‍ಟೇಕ್ ಮಾಡಿಬಿಡುತ್ತಾರೆ; ತಾನು ಸಿಕ್ಕ ಅವಕಾಶವನ್ನು ಕಳೆದುಕೊಂಡ ಸುಪ್ಪಂಡಿಯಾಗುತ್ತೇನೆಂಬ ಭಯದಿಂದ ಚರ್ಚೆಯಲ್ಲಿ ಭಾಗವಹಿಸಿದವರೆಲ್ಲರೂ ಕಿರುಚಾಡುವುದಕ್ಕೆ ಶುರುಮಾಡುತ್ತಾರೆ. ದಿನವಿಡೀ ದುಡಿದು ಹೈರಾಣಾಗಿ ಮನೆಗೆ ಬಂದ ಪ್ರೇಕ್ಷಕನನ್ನು ಒಂಬತ್ತು ಗಂಟೆಗೆ ಇಂಥದೊಂದು ರಣರಂಗ ಸ್ವಾಗತಿಸುತ್ತದೆ! ಮೂರನೆಯದಾಗಿ, ವಿಷಯದ ಕೊರತೆ ಅರ್ಣಬ್‍ನ ಕಾರ್ಯಕ್ರಮದ ಮುಖ್ಯಲಕ್ಷಣ. ಆತ ಎತ್ತಿಕೊಳ್ಳುವ ಅವೆಷ್ಟೋ ವಿಷಯಗಳಲ್ಲಿ ಚರ್ಚೆ ಮಾಡುವಂಥಾದ್ದು ಏನೂ ಇರುವುದಿಲ್ಲ. ದೂರಗಾಮಿ ಚಿಂತನೆಯಿರುವ, ಸಮಸ್ಯೆಯನ್ನು ಸಮಗ್ರದೃಷ್ಟಿಯಿಂದ ನೋಡುವ, ಆಳವಾಗಿ ಚರ್ಚಿಸುವ ಅಂಶಗಳ ಪ್ರಮಾಣ ಕಡಿಮೆ. ಸಂತೆಯ ಗಡಿಬಿಡಿಯಲ್ಲಿ ಮೂರುಮೊಳ ನೇಯ್ದು ಯಾರದೋ ಕೊರಳಿಗೆ ಹಾಕಿಹೋದರೆ ಸಾಕು ಎಂಬ ಧಾವಂತವೇ ಎದ್ದುಕಾಣುತ್ತದೆ. ನಾಲ್ಕನೆಯದಾಗಿ, ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಜನಸಂಖ್ಯಾಸ್ಫೋಟ! ಅವನು “ದಿಸ್ ಈಸ್ ಆನ್ ಓಪನ್ ಡಿಬೇಟ್” ಅಂದಿದ್ದೇತಡ, ಪ್ಯಾನೆಲ್‍ನಲ್ಲಿ ಕೂತ ಒಂದು ಡಜನ್ ಚರ್ಚಾಪಟುಗಳು ಸೂರೆಗೆ ಬಿಟ್ಟ ಸಂಪತ್ತನ್ನು ಬಾಚಿಕೊಳ್ಳಲು ನುಗ್ಗಿದ ಆಕಾಂಕ್ಷಿಗಳಂತೆ ತಂತಮ್ಮ ವಾಗ್ಝರಿಯನ್ನು ಹರಿಯಬಿಡುತ್ತಾರೆ. ಎಲ್ಲರೂ ಮಾತಾಡುವವರೇ ಆದರೆ ಕೇಳುವವರು ಯಾರು!
            ಇಷ್ಟೆಲ್ಲ ಅಧ್ವಾನಗಳ ನಡುವೆಯೂ ಅರ್ಣಬ್‍ನ ಕಾರ್ಯಕ್ರಮ ಟಿಆರ್‍ಪಿ ಉಳಿಸಿಕೊಂಡಿದೆ. ದೇಶದ ಪ್ರಮುಖ ವಿಷಯಗಳು ಇಲ್ಲಿ ಚರ್ಚೆಗೊಳಪಡುತ್ತವೆ. ಗೋಸುಂಬೆ ಪಂಡಿತರ ನಿಜಬಣ್ಣಗಳು ಅನಾವರಣವಾಗುತ್ತವೆ. ದೇಶದ್ರೋಹಿಗಳ ಮುಖಪರದೆಗಳು ಹರಿದೆಸೆಯಲ್ಪಡುತ್ತವೆ. ರಾಷ್ಟ್ರದ ಭರವಸೆಯ ನಾಯಕರೆಂದು ಬಿಂಬಿಸಿಕೊಂಡವರ ಅಸಲಿಯತ್ತುಗಳನ್ನು ಅರ್ಣಬ್ ಜಗತ್ತಿನೆದುರು ತೆರೆದಿಡುತ್ತಾನೆ. ಯಾವ ಪಕ್ಷವೇ ಇರಲಿ, ಯಾವ ರಾಜಕಾರಣಿಯೇ ಇರಲಿ; ಅವರನ್ನೆಲ್ಲ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದಂತೆ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆಗರೆದು ಬೆತ್ತಲೆ ಮಾಡುತ್ತಾನೆ. ಆಡಳಿತಪಕ್ಷಕ್ಕೆ ವಿರೋಧಿಯಾಗುತ್ತಾನೆ; ವಿರೋಧಪಕ್ಷಕ್ಕೆ ಶತ್ರುವಾಗುತ್ತಾನೆ. ಸುಳ್ಳುಬುರುಕರ ಚಮಡ ಸುಲಿಯುವ ಈತ ಬರ್ನಾಲ್ ಗೋಸ್ವಾಮಿಯೂ ಹೌದು; ಕಿವಿ ಕೆಪ್ಪಾಗುವಂತೆ ಅರಚಿ ಬೊಬ್ಬಿರಿಯುವ ಈತ ಗರ್ನಾಲ್ ಗೋಸ್ವಾಮಿಯೂ ಹೌದು!
6 ಟಿಪ್ಪಣಿಗಳು Post a comment
 1. shankaranarayana p
  ಫೆಬ್ರ 29 2016

  sooper lekhana. arnab goswamiya vishaya thilisiddhkke dhanyavadha galu. eethana rajkiya niluvenu sir? left?right?

  ಉತ್ತರ
 2. ಫೆಬ್ರ 29 2016

  ಅದ್ಭುತ ಬರಹ… ಸಮತೋಲಿತವಾಗಿದ್ದು ಮಾಹಿತಿಪೂರ್ಣವಾಗಿದೆ. ಧನ್ಯವಾದಗಳು

  ಉತ್ತರ
 3. jahnavi
  ಫೆಬ್ರ 29 2016

  ಒಳ್ಳೆಯ ಲೇಖನ.

  ಉತ್ತರ
 4. suresh
  ಮಾರ್ಚ್ 1 2016

  ಉತ್ತಮ ಬರಹ

  ಉತ್ತರ
 5. ಮಾರ್ಚ್ 3 2016

  ಅರ್ಣವ ಗೋಸ್ವಾಮಿಯ ಒಳಹೊರಗನ್ನು ಚೆನ್ನಾಗಿ ಚಿತ್ರಿಸಲಾಗಿದೆ.

  ಉತ್ತರ

Trackbacks & Pingbacks

 1. ಬರ್ನಾಲ್ ಗೋಸ್ವಾಮಿ | ಪಂಚ್ ಲೈನ್ - Punch Line

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments