ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 29, 2016

ಸುಳ್ಸುದ್ದಿ: ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಮೇಲೆ ಅಮೀರ್ ಖಾನ್ ಕಣ್ಣು!

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್ ಮಾವಿನಕಾಡು
sulsuddi      ಅಸಹಿಷ್ಣುತೆ ಹೇಳಿಕೆಯಿಂದ ಸ್ನ್ಯಾಪ್ ಡೀಲ್ ನ ಜಾಹೀರಾತಿನಿಂದ ಹೊರಹಾಕಲ್ಪಟ್ಟಿದ್ದ ಬಾಲಿವುಡ್ ನಟ ಅಮೀರ್ ಖಾನ್ ಕಣ್ಣು ಇದೀಗ ಇದುವರೆಗೂ ಅಬ್ಬಾಸ್ ನಟಿಸುತ್ತಿದ್ದ ಹಾರ್ಪಿಕ್ ಜಾಹೀರಾತಿನ ಮೇಲೆ ಬಿದ್ದಿದೆ! ಜಾಹೀರಾತಿನಲ್ಲಿ ದೇಶದ ಪರವಾಗಿ ಮಾತನಾಡುವ ವ್ಯಕ್ತಿ ಹೊರಗೆ ದೇಶದ ಮಾನ ತೆಗೆಯುವ ಮಾತನ್ನಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಇನ್ಕ್ರೆಡಿಬಲ್ ಇಂಡಿಯಾ ಜಾಹೀರಾತಿನಿಂದಲೂ ಹೊರ ಹಾಕಲ್ಪಟ್ಟ ನಂತರ ಅಮೀರ್ ಖಾನ್,ಮೊದಲ ಬಾರಿಗೆ ತನ್ನ ಕೈಯಲ್ಲಿ ಯಾವುದೇ ಜಾಹೀರಾತಿಲ್ಲದೇ ಕುಳಿತುಕೊಳ್ಳುವಂತಾಗಿದೆ.

ಇದೇ ಸಮಯದಲ್ಲಿ ನಟ ಅಬ್ಬಾಸ್ ನೊಂದಿಗಿನ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನ ಒಪ್ಪಂದದ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಕಾರಣ ಶತಾಯ ಗತಾಯ ಹಾರ್ಪಿಕ್ ಕಂಪನಿಯ ರಾಯಭಾರಿಯಾಗಲೇಬೇಕೆಂದು ನಿರ್ಧರಿಸಿರುವ ಅಮೀರ್,ತನ್ನ ಕಾರ್ಯದರ್ಶಿಯ ಮೂಲಕ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.ದಂಗಾಲ್ ಹೀರೋನ ಈ ನಡೆಯಿಂದ ಕಂಗಾಲ್ ಆಗಿರುವ ಹಾರ್ಪಿಕ್ ಹೀರೋ ಜಾಹೀರಾತನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

      ಈ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್,ನಾನು ಇದುವರೆಗೂ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ.ಇನ್ನು ಮುಂದೆಯೂ ನಟಿಸುತ್ತೇನೆ.ನಾನು ಮತ್ತು ನನ್ನ ಕುಟುಂಬ ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇವೆ.ನಾವು ಈ ದೇಶವನ್ನು ಬಿಟ್ಟು ಹೋಗುವ ಬಗ್ಗೆ ಯಾವುದೇ ನಿದ್ದೆ ಬಾರದ ರಾತ್ರಿಯಲ್ಲೂ ಸಮಾಲೋಚಿಸಿಲ್ಲ.ಒಂದು ವೇಳೆ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನಲ್ಲಿ ನಟಿಸುವ ಅವಕಾಶ ದೊರೆತರೆ ಅದರಿಂದ ಬರುವ ಸಂಭಾವನೆಯ ಶೇ.೫೦ ರಷ್ಟು ಮೊತ್ತವನ್ನು ಪಾಕೀಸ್ತಾನದಲ್ಲಿ ಬಾಂಬ್ ದಾಳಿಯಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ಬಳಸುವುದಾಗಿ ಹೇಳಿದರು.

ಈ ನಡುವೆ ಬೆಂಗಳೂರಿನ ಜಾತ್ಯಾತೀತ ಶಾಸಕ ಜಮೀರ್ ಅಹಮ್ಮದ್ ಅವರನ್ನು ಭೇಟಿಯಾದ ಅಬ್ಬಾಸ್,ಈ ವಿಷಯದಲ್ಲಿ ತನಗೆ ಸಹಾಯ ಮಾಡಬೇಕೆಂದು ಕೋರಿದರು.ಅವರಿಗೆ ಪ್ರತಿಕ್ರಿಯಿಸಿದ ಜಮೀರ್,ಜಾತ್ಯಾತೀತರ ನಡುವೆ ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ.ನಮ್ಮ ಹಿರಿಯರ ಮುಂದೆ ಈ ವಿಷಯವನ್ನಿಟ್ಟು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.ಎಲ್ಲಾ ಜಾತ್ಯಾತೀತರ ಕಂಪನಿಗಳ ಉತ್ಪನ್ನಗಳ ಪ್ರಚಾರಕ್ಕೂ ರಾಯಭಾರಿಗಳನ್ನಾಗಿ ಜಾತ್ಯಾತೀತರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಫ಼ತ್ವಾ ಹೊರಡಿಸುವ ಬಗ್ಗೆ ತಾನು ಈಗಾಗಲೇ ನಮ್ಮ ವೈಯುಕ್ತಿಕ ಕಾನೂನು ಮಂಡಳಿ ಮತ್ತು ಶಾಹಿ ಇಮಾಂ ಬುಖಾರಿಯವರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಬಗ್ಗೆ ಫ಼ತ್ವಾ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನಮ್ಮ ದೇಶದ ಸಂವಿಧಾನದಲ್ಲಿ ಫ಼ತ್ವಾಗಳಿಗೆ ಮಾನ್ಯತೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಮೀರ್,ನಮ್ಮ ವೈಯುಕ್ತಿಕ ಕಾನೂನಿನಲ್ಲಿ ಸಂವಿಧಾನಕ್ಕೇ ಮಾನ್ಯತೆಯಿಲ್ಲ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದರು.

ಮುಂದಿನ ಶುಕ್ರವಾರ ಡಿ.ಎಸ್.​ಯು.ಮುಖಂಡ ಉಮರ್ ಖಾಲಿದ್ ನ ನೇತೃತ್ವದಲ್ಲಿ ಬನಾರಸ್ ಹಿಂದೂ ವಿ.ವಿ.ಸೇರಿದಂತೆ ದೇಶದ ಹದಿನೆಂಟು ವಿಶ್ವವಿದ್ಯಾಲಯಗಳಲ್ಲಿ ಅಮೀರ್ ಖಾನ್ ಪರ ಘೋಷಣೆ ಕೂಗಿ ಹಾರ್ಪಿಕ್ ಜಾಹೀರಾತಿನಲ್ಲಿ ನಟಿಸಲು ಅವರಿಗೆ ಬೆಂಬಲ ವ್ಯಕ್ತಪಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಪಾಕೀಸ್ತಾನದ ಪ್ರಧಾನಿ ನವಾಜ್ ಷರೀಫ್‌ ಲಾಹೋರ್ ನಲ್ಲಿ ಇಂದು ಮಾತನಾಡುತ್ತಾ,ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಪರಮಾಣು ಶೃಂಗಸಭೆಯಲ್ಲಿ ಈ ವಿಷಯದ ಬಗ್ಗೆ ಅಲ್ಲಿನ ಅಧ್ಯಕ್ಷರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

    ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಲವು ಪ್ರಗತಿಪರ ಸಂಘಟನೆಗಳು ‘ದೇಶದಲ್ಲಿ ಜಾತ್ಯಾತೀತರ ನಡುವೆ ನಡೆಯುತ್ತಿರುವ ಈ ರೀತಿಯ ಅನಾರೋಗ್ಯಕರ ಸ್ಪರ್ಧೆಗೆ ಮೋದಿ ಸರ್ಕಾರದ ಷಡ್ಯಂತ್ರವೇ ಕಾರಣ’ ಎಂದು ಆರೋಪಿಸಿದ್ದು,ಮುಂದಿನ ಸೋಮವಾರದಂದು ಖಾಸಗಿ ಜಾಹೀರಾತಿನಲ್ಲಿ ಜಾತ್ಯಾತೀತರಿಗೆ ಮೀಸಲಾತಿಗೆ ಒತ್ತಾಯಿಸಿ ದೇಶದಾದ್ಯಂತ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿವೆ.ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕಾನೂನು ತರದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಅವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ!

ಒಟ್ಟಿನಲ್ಲಿ ಎಲ್ಲವೂ ಅಮೀರ್ ಖಾನ್ ಅಂದುಕೊಂಡಂತೆಯೇ ಆದರೆ ಇನ್ನು ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಕೂಡಾ ಅಬ್ಬಾಸ್ ನಂತೆಯೇ ನೇರವಾಗಿ ನಿಮ್ಮ ಶೌಚಾಲಯ ಕೋಣೆಗೆ ನುಗ್ಗುವ ದಿನ ದೂರವಿಲ್ಲ!!

*ವಿ.ಸೂ:ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿಯೇ ಹೊರತೂ ಯಾರನ್ನೂ ನೋಯಿಸುವ ಅಥವಾ ಅವಮಾನಿಸುವ ಉದ್ದೇಶದ್ದಲ್ಲ. 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments