ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 6, 2016

3

ಅಗ್ನಿರಾಜನ ಪ್ರಕರಣ

‍ನಿಲುಮೆ ಮೂಲಕ

 

 

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ 

1058749_10154099009590649_1296063247_nಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.

ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.

ಇಲ್ಲೊಂದು ಮಜಬೂತಾದ ಕಥೆ ಇದೆ. ಆಧುನಿಕ ಮನೋವಿಜ್ಞಾನದಲ್ಲಿ ಇನ್ನೂ ಹೆಸರಿಸದಿರುವ ಮಾನವನ ವಿಚಿತ್ರ ವರ್ತನೆಯ ಕಥೆ ಇದು. ಇದೊಂದು ಆಘಾತಕಾರಿಯೂ ಅನೂಹ್ಯವೂ ಆದ ವಿಶಿಷ್ಟ ಕಥೆ. ಜಾಗತಿಕ ಸಾಹಿತ್ಯದಲ್ಲಿ ಮಾತ್ರವಲ್ಲ, ಆಧುನಿಕ ಮನೋವಿಜ್ಞಾನ ಕೂಡ ‘ಹೀಗೂ ಉಂಟೇ?’ ಎಂದು ಹುಬ್ಬೇರಿಸುವ ಕಥನ.

ವಡ್ಡಾರಾಧನೆ ಕನ್ನಡ ಸಾಹಿತ್ಯದ ಮೊದಲ ಗದ್ಯ ಗ್ರಂಥ. ಕ್ರಿ.ಶ. 920ರ ಕಾಲದ ಇದನ್ನು ಶಿವಕೋಟ್ಯಾಚಾರ್ಯ ರಚಿಸಿದನೆಂದು ಡಿ ಎಲ್ ನರಸಿಂಹಾಚಾರ್ ಆದಿಯಾಗಿ ಹಲವರೂ ಭ್ರಾಜಿಷ್ಣು ರಚಿಸಿದನೆಂದು ಹಂ ಪ ನಾಗರಾಜಯ್ಯನವರೂ ಹೇಳುತ್ತಾರೆ. ಇದರಲ್ಲಿ 19 ಕಥೆಗಳು ಅಡಕವಾಗಿವೆ. 1930ರಲ್ಲಿ ಡಿ ಎಲ್ ನರಸಿಂಹಾಚಾರ್ ಇದರಲ್ಲಿನ ಕಥೆಗಳನ್ನು ಸಾಹಿತ್ಯಪರಿಷತ್ ಪತ್ರಿಕೆಯಲ್ಲಿ ಸರಣಿಯೋಪಾದಿಯಲ್ಲಿ ಪ್ರಕಟಿಸಿದ ಮೇಲೆ ಇದಕ್ಕೆ ಎಲ್ಲಿಲ್ಲದ ಮಹತ್ತ್ವ ಪ್ರಾಪ್ತವಾಯಿತು. ಅಂದಿನಿಂದಲೂ ಇಲ್ಲಿನ ಕಥೆಗಳು ಒಂದಲ್ಲ ಒಂದು ರೀತಿಯಲ್ಲಿ ಗಮನಸೆಳೆಯುತ್ತಲೇ ಇವೆ. ಸದ್ಯ ಇಲ್ಲಿ ಗಮನಿಸುತ್ತಿರುವುದು ಈ ಸಂಕಲನದಲ್ಲಿ ಹನ್ನೊಂದನೆಯದಾದ ‘ಕಾರ್ತಿಕ ಋಷಿಯ ಕಥೆ’.

ಕಥೆ ಇರುವುದು ಸಂಕ್ಷಿಪ್ತವಾಗಿ ಇಷ್ಟು: ಕೃತ್ತಿಕಾಪುರದ ಅರಸು ಅಗ್ನಿರಾಜ. ವೀರಮತಿ ಅವನ ಪತ್ನಿ. ಇವರಿಗೆ ಆರುಮಂದಿ ಹೆಣ್ಣುಮಕ್ಕಳು. ಕೊನೆಯವಳು ಕೃತ್ತಿಕೆ. ಒಮ್ಮೆ ಪೂಜೆ ಮುಗಿಸಿದ ಈ ಆರೂ ಜನ ಪ್ರಸಾದ ಕೊಡಲು ಅಪ್ಪ ಅಮ್ಮಂದಿರ ಬಳಿ ಬಂದು ಹೋಗುವಾಗ ಅಪ್ಪನ ಕಣ್ಣು ಕೃತ್ತಿಕೆಯ ಮೇಲೆ ಬಿದ್ದು ‘ಆಕೆಯ ರೂಪುಂ ತೇಜಮುಂ ಗಾಡಿಯುಮಂ ಕಂಡು ಆಕೆಗೆ ಆಟಿಸಿದ ( ಬಯಸಿದ )’. ಅವಳನ್ನು ಪಡೆಯುವ ಬಯಕೆಯಿಂದ ರಾಜ್ಯದಲ್ಲಿರುವ ಅತ್ಯುತ್ತಮ ವಸ್ತು ಯಾರಿಗೆ ಸೇರಬೇಕು ಎಂದು ಮಂತ್ರಿ, ಮಾಗಧರನ್ನೆಲ್ಲ ಕೇಳಿದ. ಅವರೆಲ್ಲ ಹಿಂದು ಮುಂದೆ ನೋಡದೇ ರಾಜನಾದ ನಿನ್ನದೇ ಅಂದರು. ಮುನಿಗಳನ್ನು ಕೇಳಿದ. ನೀನು ಯಾವ ವಸ್ತು ಬಯಸಿದ್ದೀಯಾ ಅದನ್ನು ಮೊದಲು ಹೇಳು; ಆಗ ಅದು ನಿನಗೆ ಸೇರತಕ್ಕದ್ದೇ ಅಲ್ಲವೇ ಎಂದು ಹೇಳುತ್ತೇವೆ ಅಂದರು. ಇವರೆಲ್ಲ ತಲೆಹರಟೆಗಳು ಊರಿಂದ ಹೊರಗಟ್ಟಿ ಎಂದ ರಾಜ. ಹಾಗೇ ಆಯಿತು. ತಾನು ಏನು ಬಯಸಿದ್ದೇನೆಂದು ತಿಳಿಸದೇ ತನ್ನ ಮಾತು ಕೇಳುವ ಜನರಿಂದ ಶ್ರೇಷ್ಠ ವಸ್ತುಗಳೆಲ್ಲ ರಾಜನಿಗೇ ಸೇರಬೇಕು ಎಂದು ಮೂರು ಬಾರಿ ಹೇಳಿಸಿ ತನ್ನಿಷ್ಟಕ್ಕೆ ಜನರ ಒಪ್ಪಿಗೆ ಇದೆ ಎಂದು ಭ್ರಮಿಸಿ, ಪತ್ನಿಯನ್ನು ‘ಕೋರಿ’ ಮಗಳನ್ನು ಮದುವೆಯಾದ. ವೀರಮತಿ ವ್ರತ ಕೈಗೊಂಡು ಬದುಕಿನಿಂದ ವಿಮುಖಳಾದಳು.

ಅಗ್ನಿರಾಜ-ಕೃತ್ತಿಕೆಗೆ ಕಾರ್ತಿಕ ಮತ್ತು ವೀರಶ್ರೀ ಎಂಬ ಮಕ್ಕಳಾದವು. ವಿದ್ಯಾಭ್ಯಾಸ ಮಾಡುತ್ತಿದ್ದಾಗ ಒಮ್ಮೆ ಕಾರ್ತಿಕನೊಬ್ಬನನ್ನು ಹೊರತುಪಡಿಸಿ ಮತ್ತೆಲ್ಲ ಸಹಪಾಠಿಗಳಿಗೆ ಅವರ ಅಜ್ಜನ ಮನೆಯಿಂದ ತಿಂಡಿ ಬಂದಿತು. ಆಗ ಆತ ಚಿಂತಿತನಾಗಿ ತನ್ನ ಅಜ್ಜ ಯಾರೆಂದು ತಾಯಿಯನ್ನು ಕೇಳಿದ. ವಿಚಲಿತಳಾದ ಕೃತ್ತಿಕೆ “ಮಗನೆ ನಿನಗೆ ತಂದೆಯಪ್ಪಾತನೆನಗಂ ತಂದೆ” ಎಂದು ಸತ್ಯವನ್ನು ಹೇಳಿದಳು. ಜೀವನದ ಬಗ್ಗೆ ಜುಗುಪ್ಸೆ ಹುಟ್ಟಿದ ಕಾರ್ತಿಕ ಸಂನ್ಯಾಸ ಸ್ವೀಕರಿಸಿದ. ವೀರಶ್ರೀಯನ್ನು ಕ್ರೌಂಚನೆಂಬ ಕೋಗಳಿಯ ರಾಜನಿಗೆ ಮದುವೆಮಾಡಿಕೊಟ್ಟಿದ್ದರು. ಸಂನ್ಯಾಸಿಯಾದ ಕಾರ್ತಿಕ ಒಮ್ಮೆ ಭಿಕ್ಷೆಗೆ ಬಂದಾಗ ಆತ ತನ್ನ ಅಣ್ಣನೆಂದು ಗುರುತಿಸಿದ ವೀರಶ್ರೀ ಆತನನ್ನು ತನ್ನ ಮನೆಗೆ ಬರುವಂತೆ ಬೇಡಿಕೊಳ್ಳುತ್ತಿದ್ದುದನ್ನು ಕಂಡ ಕ್ರೌಂಚ ರಾಜ ಇವರಿಬ್ಬರ ಸಂಬಂಧವನ್ನು ತಪ್ಪಾಗಿ ಅರ್ಥೈಸಿ ಆಕೆಯನ್ನು ದರದರನೆ ಎಳೆದು ಬಿಸಾಡಿ ಕಾರ್ತಿಕನನ್ನು ಕತ್ತಿಯಿಂದ ತಿವಿದು ಕೊಂದ. ಆಘಾತಕ್ಕೊಳಗಾದ ವೀರಶ್ರೀಗೆ ಮಾತು ನಿಂತಿತು. ಇದನ್ನು ಸರಿಪಡಿಸಲು ರಾಜ ಉತ್ಸವ ಏರ್ಪಡಿಸಿದ. ಅಂದಿನಿಂದ ಬಾದುಬ್ಬೆ ಹಬ್ಬ ಆಚರಣೆಗೆ ಬಂದಿತು. ಕಾರ್ತಿಕ ಮುನಿ ಸಮಾಧಿಯಾದ ಸ್ಥಳದಲ್ಲಿ ವೀರಶ್ರೀ ಬಸದಿ ಕಟ್ಟಿಸಿದಳು.

ತನ್ನ ಮಗಳನ್ನೇ ಮೋಹಿಸಿ ನೀಚ ಸಂಪ್ರದಾಯ ಹಾಕಿದ ಅಗ್ನಿರಾಜನನ್ನು ಕಂಡು ಜನ ರಾಜ ಧರ್ಮಿಷ್ಠನಾದರೆ ಪ್ರಜೆಗಳೂ ಧರ್ಮಾತ್ಮರಾಗುವರು, ರಾಜ ಪಾಪಿಷ್ಠನಾದರೆ ಜನರೂ ಪಾಪಿಷ್ಠರಾಗುವರು. ರಾಜ ಹೇಗೋ ಪ್ರಜೆಗಳೂ ಹಾಗೇ ಎಂದು ಮರುಗಿದರು. ರಾಜನಂತೆಯೇ ಆ ಊರಿನ ಜನರೂ ಸಂಬಂಧಗಳಿಗೆ ಬೆಲೆ ಕೊಡದೇ ದುರ್ಜನರಾದರು. ಇದರಿಂದ ನೆರೆ ಊರಿನ ಜನ ಅದನ್ನು ‘ಭೋಗಂಕಾರೋಹಣ’ ಎಂದು ಕರೆದರು.

ಬಸದಿ ನಿರ್ಮಾಣದ ದಾಖಲೆ ಮಾತ್ರವಲ್ಲದೇ ಬಳ್ಳಾರಿಯ ಕೊಟ್ಟೂರಿನ 1020ರ ಶಾಸನವೊಂದು ಇದೊಂದು ಹಾಳೂರು ಎಂದೂ ಸಂಬಂಧಕ್ಕೆ ಬೆಲೆ ಕೊಡದ ಜನ ಅವರೆಂದೂ ಹೇಳುತ್ತದೆ! ಹೀಗಾಗಿ ಅಗ್ನಿರಾಜನ ಪ್ರಕರಣ ನಿಜವೇ ಇರಬೇಕು. ಅದೇನೇ ಇರಲಿ. ಮನುಷ್ಯನ ವಿಚಿತ್ರ ವರ್ತನೆ ಹೀಗೂ ಇರುತ್ತದೆ ಎಂಬುದನ್ನು ಸಾವಿರ ವರ್ಷಗಳ ಹಿಂದೆಯೇ ಕನ್ನಡದ ಕಥೆಯೊಂದು ಬಣ್ಣಿಸಿದ ಬಗೆ ಮಾತ್ರ ವಿಸ್ಮಯಕರ. ಪೂರ್ಣ ಕಥೆಯ ಬಿಗು, ಬಂಧಗಳನ್ನು ಮೂಲದಲ್ಲೇ ಓದಿ ಆಸ್ವಾದಿಸಬೇಕು.

ಸಾಮಾನ್ಯವಾಗಿ ಸಾಹಿತ್ಯ, ಮನೋವಿಜ್ಞಾನ, ಸಮಾಜವಿಜ್ಞಾನ ಹಾಗೂ ವೈದ್ಯಕೀಯ ಓದಿದವರಿಗೆ ಮನುಷ್ಯನ ಕೆಲವು ವಿಚಿತ್ರ ವರ್ತನೆಗಳು ಹಾಗೂ ಅವುಗಳನ್ನು ಗುರುತಿಸುವ ಹೆಸರುಗಳು ತಿಳಿದಿರುತ್ತವೆ. ಉದಾಹರಣೆಗೆ ಪಾಲಕರ ಬಗೆಗಿನ ಮಕ್ಕಳ ಲೈಂಗಿಕ ವ್ಯಾಮೋಹ (ಗಂಡುಮಗು ತಾಯಿಯನ್ನೂ ಹೆಣ್ಣು ಮಗು ಅಪ್ಪನನ್ನೂ ಹೆಚ್ಚಾಗಿ ಮೆಚ್ಚುವುದು): ಈಡಿಪಸ್ ಕಾಂಪ್ಲೆಕ್ಸ್; ತಾಯಿಗೆ ಸ್ಪರ್ಧೆ ಒಡ್ಡುವಂತೆ ಹೆಣ್ಣು ಮಗಳು ತನ್ನ ಅಪ್ಪನನ್ನು ಆಕರ್ಷಿಸುವುದು: ಇಲೆಕ್ಟ್ರಾ ಕಾಂಪ್ಲೆಕ್ಸ್; ಮಗಳನ್ನು ಯಾರಿಗೂ ಮದುವೆಯಾಗಲು ಕೊಡದೇ ತಾನೇ ಜಾಗ್ರತೆಯಿಂದ ಕಾಪಾಡುವುದು:ಗ್ರಿಸೆಲ್ಡಾ ಕಾಂಪ್ಲೆಕ್ಸ್; ಮಕ್ಕಳ ಬಗ್ಗೆ ತಾಯಿಯೇ ತಾತ್ಸಾರ ತಾಳುವುದು: ಮೀಡಿಯ ಕಾಂಪ್ಲೆಕ್ಸ್; ತಾಯಿಯ ಬಂಧನದಿಂದ ಬಿಡಿಸಿಕೊಳ್ಳಲು ಮಗ ಯತ್ನಿಸುವುದು: ಆರೆಸ್ಟಸ್ ಕಾಂಪ್ಲೆಕ್ಸ್ ಇತ್ಯಾದಿ. ಆದರೆ ಇವು ಯಾವುದೂ ಈ ಕಥೆಯಲ್ಲಿ ಬರುವ ವರ್ತನೆಯನ್ನು ಬಿಂಬಿಸುವುದಿಲ್ಲ. ಅಷ್ಟೇ ಅಲ್ಲ, ಇಂಥ ವರ್ತನೆಗೆ ಆಧುನಿಕ ಮನೋವಿಜ್ಞಾನದಲ್ಲಿ ಯಾವ ಕಾಂಪ್ಲೆಕ್ಸಿನ ಹೆಸರೂ ಇಲ್ಲ. ಆದರೆ ಇಂಥ ವರ್ತನೆ ನಮ್ಮ ಸುತ್ತ ನಡೆಯುತ್ತಲೇ ಇರುತ್ತದೆ-‘ಅಪ್ಪನಿಂದ ಮಗಳ ಮೇಲೆ ಅತ್ಯಾಚಾರ’; ‘ಮಗಳ ಮೇಲೆ ಲೈಂಗಿಕ ದೌರ್ಜನ್ಯ:ಗಂಡನ ವಿರುದ್ಧ ದೂರು ನೀಡಿದ ತಾಯಿ’-ಇಂಥ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಮನುಷ್ಯ ಸಮಾಜದಲ್ಲಿರುವ ಇಂಥ ವಿಚಿತ್ರ ವರ್ತನೆಗೆ ಕನ್ನಡಿ ಹಿಡಿಯುವ ಕಥೆ ಇದು. ಇದರ ‘ಖಳ ನಾಯಕ’ ಅಗ್ನಿರಾಜ. ಹೀಗಾಗಿ ಇಂಥ ವರ್ತನೆಯನ್ನು ನಾವು ‘ಅಗ್ನಿರಾಜ ಕಾಂಪ್ಲೆಕ್ಸ್’ ಎಂದು ಕರೆಯಬಹುದೇನೋ? ಇದನ್ನು ಆಧುನಿಕ ಮನೋವಿಜ್ಞಾನ ಇನ್ನೂ ಗಮನಿಸಬೇಕಷ್ಟೇ.

3 ಟಿಪ್ಪಣಿಗಳು Post a comment
 1. ಮಾರ್ಚ್ 7 2016

  ಈ ಬರಹ ಓದುತ್ತಿದ್ದರೆ ಮನಸ್ಸಿಗೆ ತುಂಬಾ ಹಿಂಸೆ ಆಗುತ್ತಿದೆ. ಸಾವಿರಾರು ವಷ೯ಗಳ ಹಿಂದೆಯೇ ತಾನು ಮಾಡಿದ್ದೇ ಸರಿ ಎಂದು ಪ್ರತಿಪಾದಿಸಿಕೊಳ್ಳುವ ಜನರಿದ್ದರು ಅನ್ನುವಾಗ ಕೆಲವೊಮ್ಮೆ ಪುರಾಣದ ಕಥೆಗಳ ಬಗ್ಗೆ ಸಂಶಯ ಉಂಟಾಗುತ್ತದೆ. ಅಲ್ಲಿಯೂ ಮನುಷ್ಯ ತನಗೆ ಬೇಕಾದಂತೆ ಕಥೆ ಹೆಣೆದಿರಬಹುದೇ?

  ತುಂಬಾ ಚೆನ್ನಾಗಿ ಬರೆದಿದ್ದೀರಾ. ಧನ್ಯವಾದಗಳು ಸರ್.

  ಉತ್ತರ
  • shripad
   ಮಾರ್ಚ್ 7 2016

   “ಸಾವಿರಾರು ವಷ೯ಗಳ ಹಿಂದೆಯೇ ತಾನು ಮಾಡಿದ್ದೇ ಸರಿ ಎಂದು ಪ್ರತಿಪಾದಿಸಿಕೊಳ್ಳುವ ಜನರಿದ್ದರು” ಎಂಬುದಷ್ಟೇ ಅಲ್ಲ. ಅಗ್ನಿರಾಜ ಇಂದಿನ ರಾಜಕಾರಣಿಗಳು ಏನು ಮಾಡುತ್ತಾರೋ ಅದನ್ನು ಅಂದೇ ಮಾಡಿದ್ದ. ಆತ ತನ್ನ ಉದ್ದೇಶವನ್ನು ತಿಳಿಸದೇ ತನ್ನ ಅಧೀನರಾದ ಮಂತ್ರಿ ಮಾಗಧರನ್ನು ‘ಬೇರೆ ಬೇರೆಯಾಗಿ ಕರೆದು ಏಕಾಂತದಲ್ಲಿ” ಅವರ ಒಪ್ಪಿಗೆ ಪಡೆಯುತ್ತಾನೆ! ಅನಂತರ ಅದನ್ನು ಮೂರು ಬಾರಿ ಹೇಳಿಸುತ್ತಾನೆ. ಆದರೆ ಯಾರ ಅಂಕೆಗೂ ಸಿಗದ ಮುನಿಗಳು “ಶ್ರೇಷ್ಠವಾದ ವಸ್ತುಗಳು ಯಾರಿಗೆ ಸೇರಬೇಕು” ಎಂಬ ಅವನ ಪ್ರಶ್ನೆಗೆ “ಏನು ಬಯಸುತ್ತಿದ್ದೀಯಾ ಅದನ್ನು ಮೊದಲು ಹೇಳು, ಆ ಮೇಲೆ ಅದು ನಿನಗೆ ಸೇರುತ್ತದೋ ಇಲ್ಲವೋ ಎಂದು ಹೇಳುತ್ತೇವೆ” ಅಂದಾಗ ಇವರೆಲ್ಲ ಬಹು ಪ್ರಲಾಪಿಗಳು-ರಾಜ್ಯದಿಂದ ಹೊರಗಟ್ಟಿ ಎಂದು ಓಡಿಸುತ್ತಾನೆ!
   ಆದರೆ ಪತ್ನಿ ವೀರಮತಿಯಲ್ಲಿ ಆತ ಹಿಂಜರಿಕೆಯಿಂದ “ಕೋರುತ್ತಾನೆ” ಎಂಬುದನ್ನು ಗಮನಿಸಿ. ಸಣ್ಣ ಆದರೆ ವಿಪರೀತ ಬಿಗಿಯುಳ್ಳ ಅದ್ಭುತ ಕಥೆ ಇದು.
   ಇನ್ನು “ಕೆಲವೊಮ್ಮೆ ಪುರಾಣದ ಕಥೆಗಳ ಬಗ್ಗೆ ಸಂಶಯ ಉಂಟಾಗುತ್ತದೆ. ಅಲ್ಲಿಯೂ ಮನುಷ್ಯ ತನಗೆ ಬೇಕಾದಂತೆ ಕಥೆ ಹೆಣೆದಿರಬಹುದೇ?” ಅಂದಿದ್ದೀರಿ.
   ಇದು ಕೇವಲ ಕಥೆ-ಪುರಾಣವೇ ಆಗಿರಬೇಕಿಲ್ಲ. ಇದು ನೈಜವಿರಬಹುದು ಎಂಬುದಕ್ಕೆ ಶಾಸನಾಧಾರವಿದೆ ಎಂದಿದ್ದೇನೆ-ಇದು ಒಂದು. ಮತ್ತೊಂದು ಸಂಗತಿ ಅಂದರೆ…ಇಂಥ ಅನುಮಾನಗಳು ಹುಟ್ಟುವ ಕಾರಣದಿಂದಲೇ ಪುರಾಣ-ಕಥೆಗಳಲ್ಲಿ ಇತಿಹಾಸವನ್ನು ಯೂರೋಪಿನ ಸಮಾಜ ಅರ್ಥೈಸುವಂತೆ ನಾವು ನಮ್ಮ ಸಮಾಜದ ಕಥೆ-ಪುರಾಣವನ್ನು ನೋಡಲು ಬರುವುದಿಲ್ಲ. ನಾವು ಇತಿಹಾಸವಲ್ಲ, ‘ಗತ’ವನ್ನು ಬದುಕುತ್ತೇವೆ, ಹೇಗೆ ಬದುಕುತ್ತೇವೆ ಎಂದು ನಮಗೆ ಬೇಕಿರುವುದು ಇತಿಹಾಸವೋ ಗತವೋ ಎಂಬ ಲೇಖನದಲ್ಲಿ ಬಾಲು ಅದ್ಭುತವಾಗಿ ಚರ್ಚಿಸುತ್ತಾರೆ. ಸಾಧ್ಯವಾದರೆ ಓದಿ.

   ಉತ್ತರ
   • ಮಾರ್ಚ್ 29 2016

    ಆದರೆ ಸದ್ಯದ ಸಮಾಜದ ನಡುವೆ ಬದುಕುತ್ತಿರುವ ನಮ್ಮಂತವರಿಗೆ ಅಂದರೆ ಸತ್ಯದ ಹುಡುಕಾಟದಲ್ಲಿ ಜೀವನ ಸವೆದು ಹೋಗುತ್ತಿದೆ ಅಷ್ಟೆ. ನಂಬಿಕೆ ಅನ್ನುವ ಪದಕ್ಕೆ ಯಾವ ಅಥ೯ವೂ ಇಲ್ಲವೆನೊ ಅನಿಸುತ್ತಿದೆ. ಇತಿಹಾಸವೆ ಇರಲಿ ಅಥವಾ ಗತಕಾಲವೇ ಇರಲಿ ಮನುಷ್ಯ ಕೇವಲ ಸ್ವಾಥಿ೯. ಎಲ್ಲ ಅವನ ಮೂಗಿನ ನೇರಕ್ಕೆ ನಡೆಯಬೇಕು ಅನ್ನುವ ಜನ ಆಗಲೂ ಇದ್ದರು. ಈಗಲೂ ಇದ್ದಾರೆ. ಆದರೆ ಆಗ ದಬ್ಬಾಳಿಕೆ ಈಗ ದುಡ್ಡಿನ ಮದ,ಬೆಂಗಾವಲಿಗೆ ರಾಜಕೀಯದವರ ಕೈವಾಡವಿದ್ದರಂತೂ ಕೇಳುವುದೆ ಬೇಡ. ಸತ್ಯ ಕಣ್ಣೆದುರಿಗೆ ಕಾಣುತ್ತಿದ್ದರೂ ಕಣ್ಣೀದ್ದೂ ಕುರುಡರಂತೆ ಬದುಕ ಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ.
    ತುಂಬಾ ಚೆನ್ನಾಗದೆ ಬರಹ. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮಿಸಿ‌.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments