ಗುರುವಾಗುವುದು ಇಷ್ಟು ಕಷ್ಟವೇ?
– ಶ್ರೀಕಾಂತ. ಎನ್, ಸಂಶೋಧನಾ ವಿದ್ಯಾರ್ಥಿ ಕುವೆಂಪು ವಿ.ವಿ
ನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.
ಸ್ಟಾಫ್ ರೂಮ್ಗೆ ಬಂದಾಗ, ಮೊದಲ ಅನುಭವ ಕೇಳಲು ಕಾಯುತ್ತಿದ್ದ ಸೀನಿಯರ್ಸ್ ಗಳ ಬಳಿ ನನ್ನ ಮರ್ಯಾದೆ ಹೋಗಬಾರದೆಂದು ಹೆಚ್ಚಾಗಿ ಏನೂ ಹೇಳದೇ ಹಾಗೇ ಬಂದು ಕುಳಿತೆ. ನಂತರ ಒಂದೆರಡು ತಿಂಗಳುಗಳ ಕಾಲ ಕಷ್ಟವೆನಿಸಿದರೂ ನಿಧಾನವಾಗಿ ಇಷ್ಟವಾಗುತ್ತಾ ಹೋಯಿತು. ದಿನೇ ದಿನೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹುಡುಗರನ್ನು ನನ್ನ ಪಾಠದ ಕಡೆ ಆಕರ್ಷಿಸಲು ಪ್ರಯತ್ನ ಜೋರಾಗಿಯೇ ನಡೆದಿತ್ತು. ಸರ್ ಸ್ವಲ್ಪ ಫಾಸ್ಟ್, ಸರ್ ಕ್ಲಾಸ್ ಲಿ ಹಿಂದೆ ತುಂಬ ಗಲಾಟೆ ಮಾಡ್ತಾರೆ, ಸರ್ ತುಂಬಾ ಹೇಳ್ತಾರೆ ಎಂಬ ಚಾಳಿಗಳು ಸ್ವಲ್ಪ ಮನ ಕೆಡಿಸಿದರೂ ಸವಾಲಾಗಿ ತೆಗೆದುಕೊಂಡೆ. ಸ್ಟಾಫ್ ರೂಮೇ ನನಗೆ ಸರಿಯಾದ ದಾರಿ ತೋರಲು ಸಾಧ್ಯ ಎಂದು ಅರಿತ ನಾನು, ಕಾರಿಡಾರ್ನಲ್ಲಿ ಹೋಗುತ್ತಾ ಬರುತ್ತಾ ಸಹೋದ್ಯೋಗಿಗಳು ಹೇಗೆ ಮಾಡುತ್ತಾರೆ, ಅವರ ಎಡವು ತೊಡವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮನಸ್ಥಿತಿಯನ್ನು ಜ್ಞಾಪಿಸಿಕೊಂಡು, ಹಾಗೆಯೇ ವಿದ್ಯಾರ್ಥಿಗಳಿಂದ ಅವರಿಗರಿಯದೇ ಅವರು ಏನು ಬಯಸುತ್ತಾರೆ ಎಂದು ತಿಳಿದು, ಪ್ಲಾನ್ ಮಾಡಲು ಪ್ರಾರಂಭಿಸಿದೆ. ಅದುವರೆಗೂ ಸಂಪಾದಿಸಿದ ವಿಜ್ಞಾನದ ಅನೇಕ ವಿಷಯಗಳನ್ನು ಸಮಯಕ್ಕೆ ತಕ್ಕಂತೆ ಗಣಿತದ ಜೊತೆ ಕೂಡಿಸಿ ಹೇಳುತ್ತಿದ್ದಾಗ ಆಗುತ್ತಿದ್ದ ಸೂಜಿ ಬಿದ್ದರೂ ಕೇಳುವಷ್ಟು ಮೌನ, ಕ್ಲಾಸ್ ರೂಮ್ ನಲ್ಲಿ ಆದ ಬದಲಾವಣೆಗಳು ನನ್ನ ವೃತ್ತಿಯ ಶ್ರೇಷ್ಠತೆ ಹಾಗು ಸವಾಲಿನ ಪರಿಕಲ್ಪನೆ ತಿಳಿಸುತ್ತಾ ಬಂದಿತು. ಈಗಿನ ವಿದ್ಯಾರ್ಥಿಗಳಿಗೂ ಕೋಲು ಹಿಡಿದು, ಹೊಡೆದು ಬಡೆದು, ಬಯ್ದು ಹೆದರಿಸಿ ಹೇಳಿ ಕೊಡುವ ಶಿಕ್ಷಕರಿಗಿಂತ ಅವರ ಮನ ಗೆಲ್ಲುವ, ಕ್ಲಾಸ್ ರೂಮ್ನಲ್ಲಿ ಒಂದು ಮಟ್ಟಿಗೆ ಸ್ವೇಚ್ಛೆಯಾಗಿರಲು ಬಿಡುವ ಶಿಕ್ಷಕರನ್ನೇ ಹೆಚ್ಚು ಇಷ್ಟಪಡುತ್ತಾರೆ.
ಅಂತೂ ವರ್ಷಾಂತ್ಯದಲ್ಲಿ ನನ್ನ ಕ್ಲಾಸ್ ಇಷ್ಟ ಪಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ವೃತ್ತಿಯ ಮೇಲೆ ಇದ್ದ ಗೌರವ ಹಾಗು ಪ್ರೀತಿ ಜಾಸ್ತಿ ಆಗುತ್ತಾ ಬಂದಿತು. ಕ್ಲಾಸ್ ರೂಮ್ನಲ್ಲಿ ನಡೆಸುತ್ತಿದ್ದ ವಿಷಯಗಳ ವಾಗ್ವಾದಗಳು ವಿದ್ಯಾರ್ಥಿಗಳನ್ನು ಹೆಚ್ಚು ಓದಿನತ್ತ ತೊಡಗಿಸಿಕೊಳ್ಳಲು ಸಹಾಯವಾಗುತ್ತಿತ್ತು. ನಾನು ಗಣಿತವೇ ಶ್ರೇಷ್ಠ ಎಂದು ಹೇಳಿದರೆ, ಹುಡುಗರು ನನ್ನನ್ನು ಸೋಲಿಸಲಿಕ್ಕಾದರೂ ಹುಡುಕಿ ತರುತ್ತಿದ್ದ ಬೇರೆ ವಿಷಯಗಳ ಅಂಶಗಳು ನನ್ನ ಜ್ಞಾನ ಹೆಚ್ಚಿಸುವುದರ ಜೊತೆಗೆ ನನ್ನ ಮನಸ್ಸಿನ ಖುಶಿಗೆ ಮೂಲವಾಗುತ್ತಿತ್ತು. ನನ್ನ ಮಾತು ಕೇಳುವ ನೂರಾರು ಕಿವಿಗಳಿವೆ ಎಂದುಕೊಂಡಾಗ ಆಗುವ ಗರ್ವ, ಸಂತೋಷ, ಜವಾಬ್ದಾರಿಯ ಪ್ರಜ್ಞೆ ಅನುಭವಿಸದೇ ಅರಿವಿಗೆ ಬಾರದು. ಕ್ಲಾಸ್ ಗೆ ಶರ್ಟಿನ ತೋಳು ಮಡಚುತ್ತಾ, ಒಂದು ಕೈಲಿ ಡಸ್ಟರ್ ನ ಧೂಳು ಕೊಡವುತ್ತಾ ಕ್ಲಾಸ್ ರೂಮ್ಗೆ ಹೋಗಿ ಪಾಠ ಮುಗಿಸಿ ಹೊರ ಬರುವಾಗ ನನ್ನ ಆಯಸ್ಸು 1 ಘಂಟೆ ಹೆಚ್ಚಾದಂತೆ ಅನಿಸುತ್ತಿತ್ತು.
ಗುರಿ ಮುಂದೆ, ಗುರು ಹಿಂದೆ ಎಂಬಂತೆ ನನ್ನ ಹಿಂದೆ ನಿಂತು ನನ್ನ ನೂರಾರು ವಿದ್ಯಾರ್ಥಿಗಳ ಮುಂದೆ ದೂಡಿ ಮಾರ್ಗದರ್ಶನ ಮಾಡಿದ ಗುರುಗಳಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು. ನನ್ನ ರೂಪಿಸಿದ ಗುರುಗಳ ಪಟ್ಟಿ ದೊಡ್ಡದು. ಒಂದಕ್ಷರ ಕಲಿಸಿದಾತಂ ಗುರು ಎಂದು ತಲೆಯಲ್ಲಿ ತುಂಬಿದ, ಇಷ್ಟೊಂದು ಬರೆಯುವುದಕ್ಕೂ ಮೊದಲು ನನ್ನ ಮೊದಲ, ತೊದಲು ನುಡಿ ಕೇಳಿ ಖುಷಿ ಪಟ್ಟು ಮಾತು ಕಲಿಸಿದ ನನ್ನ ಮೊದಲ ಗುರು ತಾಯಿ, ಇದು resistor, transistor ಎಂದು ಮನೆಯಲ್ಲಿಯ TV, radio ಗಳನ್ನು ಬಿಚ್ಚುವಾಗ ಕೂರಿಸಿಕೊಂಡು, ಗ್ರಹಣಗಳು, ಹಗಲು ರಾತ್ರಿ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆ ಅರಿವು ಮೂಡಿಸಿ ನನ್ನಲ್ಲಿ ಸೃಜನಶೀಲತೆ ಬೆಳಸಿದ ನನ್ನ ತಂದೆ, ಮನೆಯ ಕಡಪ ಕಲ್ಲಿನ ಮೇಲೆ trigonometry derivations ಹೇಳಿಕೊಟ್ಟು ಗಣಿತದ ಕಡೆ ಒಲವು ಮೂಡಿಸಿದ ನನ್ನಣ್ಣ, ಅಜ್ಜಿಯ ಕನ್ನಡಕ, ಅಪ್ಪನ ಪಂಚೆ, ಥಿಯೇಟರ್ಗಳ ಪಕ್ಕ ಬಿದ್ದ advertisement ರೀಲ್ ಇಂದ film ಬಿಡುವ, ಅಗರಬತ್ತಿ ಕೊಳವೆಯಲ್ಲಿ telescope ಮಾಡಲು ಸಹಾಯ ಮಾಡಿದ್ದ ಬಾಲ್ಯ ಸ್ನೇಹಿತರು, ಶಿಕ್ಷಕ ವೃತ್ತಿಯಲ್ಲಿ ಬೆಳೆಯಲು ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದ ಸಹೋದ್ಯೋಗಿಗಳು ಎಲ್ಲರೂ ನನ್ನ ಗುರುಗಳೇ. ಶಿಕ್ಷಕ ವೃತ್ತಿಗಿಂತಲೂ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಸಮಾಧಾನ, ಸಂತೃಪ್ತಿ, ಪ್ರೀತಿ, ಗೌರವ ಎಲ್ಲವೂ ಸಿಗುವುದು ಶಿಕ್ಷಕನ ಕೆಲಸದಲ್ಲಿ.
ಇಂಜಿನಿಯರಿಂಗ್ ಓದಲು ನಾ ಮುಂದು ತಾ ಮುಂದು ಎಂದು ಓಡುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಸಲಹೆ ಅಷ್ಟೇ, ಹಾಗಂತ ಇಂಜಿನಿಯರಿಂಗ್ ಅನ್ನು ಯಾವುದೇ ಕಾರಣಕ್ಕೂ ಕಡಿಮೆ ಎನ್ನುತ್ತಿಲ್ಲ, ಎಲ್ಲಾ ವೃತ್ತಿಗಳಿಗೂ ತನ್ನದೇ ಆದ ಸ್ಥಾನಮಾನಗಳಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಿಸುವ ಶಿಕ್ಷಕರು ಬೇಕಾಗಿದ್ದಾರೆ. ಚಾಣಕ್ಯ ಹೇಳಿದಂತೆ ‘ರಾಜ ತನ್ನ ಕರ್ತವ್ಯದ ದಾರಿ ತಪ್ಪಿದಾಗ, ರಾಜ್ಯವನ್ನು ನಡೆಸುವ ಜವಾಬ್ದಾರಿ ಶಿಕ್ಷಕನ ಕೈಯಲ್ಲಿರುತ್ತದೆ’. ಮೊನ್ನೆ ಯಾವುದೋ ಬೇರೆ ಊರಿನಲ್ಲಿ ಒಬ್ಬ ಹುಡುಗ ಬಂದು ಸರ್ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಂಡಾಗ ಸಿಕ್ಕ ಖುಷಿ ಮತ್ತೆಲ್ಲಿ ಸಿಗುತ್ತದೆ ಹೇಳಿ. ‘ಸ್ವರಾಷ್ಟ್ರೇ ಪೂಜ್ಯಾತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||’ ದೇಶದಲ್ಲಿ ಮಾತ್ರ ರಾಜನಿಗೆ ಗೌರವ, ಆದರೆ ಜ್ಞಾನಿಗಳಿಗೆ ಎಲ್ಲಾ ಕಡೆಯಲ್ಲೂ ಗೌರವ ಸಿಗುತ್ತದೆ. ಅಂತಹ ಜ್ಞಾನವನ್ನು ಕೊಡುವ ವೃತ್ತಿಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳಸಿಕೊಳ್ಳಲಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಅರಿವು ಮೂಡಿಸುವಂತವರಾಗಲಿ. ದೇಶದಲ್ಲಿ ಒಳ್ಳೆ ಶಿಕ್ಷಕರಿದ್ದರೆ ‘ಹರ್ ಘರ್ ಸೆ ಅಫ್ಜಲ್ ನಹಿ ಚಾಣಕ್ಯ/ಕೌಟಿಲ್ಯ/ಆರ್ಯಭಟ/ಸುಶ್ರುತ/ನರೇಂದ್ರ ನಿಕಲೇಗ’.
ಚಿತ್ರಕೃಪೆ :- http://www.123rf.com/
ಓದುತ್ತ ಹೋದಂತೆ ಹಳೆಯ ನೆನಪುಗಳು ಕಣ್ಣ ಮುಂದೆ ಬಂತು.
ಆಗಿನ್ನೂ ಹೈಸ್ಕೂಲ್ ಒಂಬತ್ತನೇ ಕ್ಲಾಸಿನಲ್ಲಿದ್ದೆ. ಹೊಸದಾಗಿ ಬಂದ ಇಂಗ್ಲೀಷ್ ಮಾಸ್ಟರ್. ಮೊದಲ ದಿನದ ಪಾಠ. ಹುಡುಗಿಯರ ಕ್ಲಾಸು. ಸ್ವಲ್ಪ ನಾಚಿಕೆ ಸ್ವಬಾವ. ತಲೆ ತಗ್ಗಿಸಿಯೇ ಅವರ ಪಾಠ. ಅವರ ಕ್ಲಾಸು ಮುಗಿದ ಮೇಲೆ ನಾವೆಲ್ಲ “ಏಯ್ ಅವರ ಕಾಲು ಪ್ಯಾಂಟೊಳಗೆ ನಡಗುತ್ತಿತ್ತು. ಗೊತ್ತಾ?” ಮಾತಾಡಿ ನಮ್ಮೆಲ್ಲರ ಜೋರಾದ ನಗು.
ಬರ್ತಾ ಬರ್ತಾ ಅವರ ಕ್ಲಾಸೂ ಇಷ್ಟ ಆಯ್ತು; ಅವರ ಮೆಚ್ಚಿನ ಶಿಷ್ಯೆ ಆದೆ, ನನ್ನ ಬರವಣಿಗೆ ಬೆಳಕಿಗೆ ತಂದ ಗುರು ಅವರು.
ಬರಹ ಇಷ್ಟ ಆಯ್ತು. ಧನ್ಯವಾದಗಳು.
ಗುರುವಾಗುವುದು ಇಷ್ಟು ಕಷ್ಟವೇ?? ನಾನೀಗಲು ಕೇಳಿ ಕೊಳ್ಳುವ ಪ್ರಶ್ನೆ ಅದು.. ಜೀವನದಲ್ಲಿ ಅದೇ ಆಗ ಬೇಕಾದರೆ ಆಗುತ್ತೇನೆ .. ಲೇಖನ ತುಂಬಾ ಚೆನ್ನಾಗಿತ್ತು