ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 9, 2016

6

ನನ್ನಿ- ತಾತ್ವಿಕ ಒಳಸುಳಿಗಳ ವಿಶ್ಲೇಷಣೆ.

‍ನಿಲುಮೆ ಮೂಲಕ

ನವೀನ ಗಂಗೋತ್ರಿ

12122868_977678548941892_2941475822589158080_nಗಂಭೀರ ಓದುಗರು, ನೋಡುಗರು, ಕನ್ನಡದಲ್ಲಿ ಕಡಿಮೆಯಾದ್ದರಿಂದಲೇ ಕಡಮೆ ದರ್ಜೆಯ ಪತ್ರಿಕೆಗಳು, ಸಿನಿಮಾಗಳು, ಕಾದಂಬರಿಗಳು ನಮ್ಮಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎನ್ನುವ ಮಾತನ್ನು ಆಗಾಗ ನಿರಾಶಾವಾದಿ ವಿಮರ್ಶಕರೂ, ತಮ್ಮ ಕಣ್ಣೀರಿನ ಕಾರ್ಯಕ್ರಮಗಳ ಸಮರ್ಥಕರಾದ ಚಾನೆಲ್ಗಳೂ ಹೇಳಿಕೊಂಡು ಬಂದಿವೆ. ಸಕಾರಾತ್ಮಕ ಧೋರಣೆಯ ಕೆಲವು ಬರಹಗಾರರು, ಚಿಂತಕರು ಓದುಗರನ್ನು ಇಷ್ಟು ತಳಮಟ್ಟದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಘನವಾದ ಕೃತಿಗಳನ್ನು ಕೊಡುವುದು ಅವರಿಗೆ ಇಂದಿಗೂ ಸಾಧ್ಯವಾಗುತ್ತಿದೆ.

ಕರ್ಮ ಕಾದಂಬರಿಯ ಮೂಲಕ ಕರಣಂ ಪವನ್ ಪ್ರಸಾದ್ ಹಾಗೊಬ್ಬ ಆಳ ಚಿಂತನೆಯ ಕಾದಂಬರಿಕಾರರಾಗುವ ಭರವಸೆಯನ್ನು ಹುಟ್ಟಿಸಿದ್ದರು. ತಾತ್ತ್ವಿಕ ಎತ್ತರವನ್ನು ಅಡಕಗೊಳಿಸಿಕೊಂಡಿದ್ದರೂ ಕರ್ಮದ ಓಘದಲ್ಲಿ ಇನ್ನೊಂದಿಷ್ಟು ನೈಪುಣ್ಯವನ್ನು ಬಯಸಿದ್ದ ಓದುಗ, ಇದೀಗ ಅವರ ಹೊಸ ಕಾದಂಬರಿ ’ನನ್ನಿ’ಯ ಮೂಲಕ ಹೆಚ್ಚು ಕುಶಲಿಯಾದ ಮತ್ತು ಪ್ರಭಾವಿಯಾದ ಕಾದಂಬರಿಕಾರನನ್ನು ಕಂಡಿದ್ದಾರೆ. ಎರಡುವಾರದ ಹಿಂದೆ ಬಿಡುಗಡೆಯಾದ ನನ್ನಿ ಅದಾಗಲೇ ಎರಡುಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆನ್ ಲೈನ್ ನ್ಯೂಸ್ ಪೋರ್ಟಲ್ಗಳಲ್ಲಿ ಸುದ್ದಿಯಾಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಹೊತ್ತಿ ಉರಿವ ಬೆಂಕಿಯಂತಲ್ಲದೆ, ಚಾಪೆಯಡಿಗೆ ಹರಿವ ನೀರಿನಂತೆ ಓದುಗನನ್ನು ಆಂತವಾಗಿ ತಲುಪುತ್ತಿದೆ. ಅದ್ಯಾಕೆ ಹಾಗೆ ತಲುಪುತ್ತಿದೆ ಎನ್ನುವುದಕ್ಕೆ ನನ್ನಿ ಕಾದಂಬರಿಯ ಸಾಮರ್ಥ್ಯವೇ ಉತ್ತರ.

ಪೂರ್ವಗ್ರಹೀತಗಳನ್ನು ಮೀರಿ, ಮಾನವ ಬದುಕಿನ ನಿತ್ಯ ಸತ್ಯಗಳನ್ನು ಮತ್ತು ತಾತ್ತ್ವಿಕ ಹೊಯ್ದಾಟಗಳನ್ನು ಕಲಾತ್ಮಕವಾಗಿ ಸಂಧಿಸುವ ಯಾವುದೇ ಕೃತಿಯನ್ನು ಪ್ರಜ್ಞಾವಂತ ಓದುಗರೂ ಅಷ್ಟೇ ಮುಕ್ತವಾಗಿ ಸ್ವೀಕರಿಸುತ್ತಾರೆಂಬುದು ನನ್ನಿಯ ಮೂಲಕ ಇನ್ನೊಮ್ಮೆ ಸಿದ್ಧವಾದ ಸತ್ಯ. ನನ್ನಿ ಕಾದಂಬರಿಯ ಕಥೆಯನ್ನು ಸ್ಪರ್ಷಿಸದೆಯೇ ಅದು ಎಬ್ಬಿಸುವ ಚಿಂತನೆಯ ಅಲೆಯನ್ನು, ತತ್ತ್ವದ ಸಂಘರ್ಷವನ್ನು ಮಾತ್ರವೇ ಈ ಬರಹಕ್ಕೆ ಆಯ್ದುಕೊಳ್ಳುತ್ತೇನೆ.

ಸೇವೆಯೆಂಬುದು ಐಡಿಯಾಲಜಿಕಲ್ ಆದ, ವಾಸ್ತವದಲ್ಲಿ ಸಾಧ್ಯವಲ್ಲದ ಪರಿಕಲ್ಪನೆ ಎಂಬುದು ಕಾದಂಬರಿಯ ಒಂದು ಭಾಗದ ಚಿಂತನೆ. ಸೇವೆಯ ಬದಲಿಗೆ ಸಹಕಾರ ಎನ್ನುವುದು ಸರಿಯಾದ ಪರಿಕಲ್ಪನೆಯಾಗಬಹುದು, ಯಾಕೆಂದರೆ ಮಾನವನು ಪರಸ್ಪರ ಸಹಕಾರದಿಂದ ಮಾತ್ರವೇ ಸಮಾಜವನ್ನು ಕಟ್ಟಿಕೊಳ್ಳಬಲ್ಲವನು. ಸೇವೆಯಂತೆ ಸಹಕಾರವು ಪ್ರತಿಫಲಾಪೇಕ್ಷೆಯಿಲ್ಲದ ಕೆಲಸವಲ್ಲ. ಸೇವೆ ಮತ್ತು ಸಹಕಾರ ಭಿನ್ನವಾಗಿ ನಿಲ್ಲುವುದೇ ಇಲ್ಲಿ ಎನ್ನುವ ತರ್ಕವನ್ನೇ ಕಾದಂಬರಿ ಬೆಳೆಸಿಕೊಂಡು ಹೋಗುತ್ತದೆ. ಸೇವೆಯ ಹೆಸರಿನಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಭಾರೀ ಲಾಭದ ವ್ಯವಹಾರದ ಸಾಮಾಜಿಕ ಮತ್ತು ಇಂಡಿವಿಜುವಲ್ ಮಟ್ಟದಲ್ಲಿ ಸೈಕಾಲಜಿಕಲ್ ಆದ ಪರಿಣಾಮಗಳನ್ನು ಎಳೆ ಎಳೆಯಾಗಿ ನಿರೂಪಿಸುತ್ತದೆ ನನ್ನಿ. ’ಸೇವೆಯಿಂದಲೇ ಸದ್ಗತಿ’ ಎನ್ನುವ ಉಪದೇಶವು ಸೇವೆಯನ್ನು ಗೈಯಲು ಬಯಸುವ ಮತ್ತು ಅದನ್ನು ಪಡೆಯಲು ಬಯಸುವ ಜನಗಳನ್ನು ಅದು ಹೇಗೆ ಶತಮಾನಗಳವರೆಗೆ ಆಳುತ್ತ ಬಂದಿದೆ, ಇವತ್ತಿಗೂ ಉಳಿದುಕೊಂಡಿದೆ ಎನ್ನುವುದನು ಕಂಡರೆ ಅಚ್ಚರಿಯಾಗುತ್ತದೆ. ವಸ್ತುತಃ ಸಾಧ್ಯವಿಲ್ಲದ ‘ನಿರಪೇಕ್ಷ’ (Absolute) ಆದ ಸಂಗತಿಯೊಂದನ್ನ ಮಾನವ ಬದುಕಿನಲ್ಲಿ ಸತ್ಯಗೊಳಿಸುವ ಹುಸಿ ನಟನೆಯಡಿಯಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದು ನನ್ನಿಯ ಧ್ವನಿಯಲ್ಲಿ ಸಾಮಾಜಿಕ ಪ್ರಶ್ನೆಗಿಂತ ಹೆಚ್ಚಾಗಿ ವ್ಯಕ್ತಿಯ ಬದುಕು ಮತ್ತು ಮನಸುಗಳ ಪ್ರಶ್ನೆಯಾಗಿದೆ.

ರೋಣ- ದುರ್ಗೆಯಾಗಿದ್ದಾಕೆ- ಸೇವೆಗೈಯುವ ಬಯಕೆಯಿಂದ ಈ ವ್ಯೂಹಕ್ಕೆ ಸಿಕ್ಕವಳು. ಅದನ್ನೊಂದು ವ್ಯೂಹವೆನ್ನದೆ ಗತಿಯಿಲ್ಲ, ಯಾಕೆಂದರೆ ರೋಣಳ ಬದುಕಿನ ಅನುಭವ ಅದನ್ನೇ ಹೇಳುತ್ತದೆ. ಅವಳ ಬದುಕಿನಲ್ಲಿ ಸಂಭವಿಸಿದ್ದೆಲ್ಲವೂ ಸೇವೆಯ ತಪ್ಪುಬಳಕೆಯಿಂದ ಆದ್ದಲ್ಲ, ಆದರೆ ಅವಳ ಆದರ್ಶಗಳನ್ನು ಕಟ್ಟಿಕೊಟ್ಟಿದು ಸೇವೆಯೇ. ಮತ್ತದನ್ನು ಅದರ ಶುದ್ಧರೂಪದಲ್ಲಿ ಮಾನವ ಬದುಕುಗಳು ಪಾಲಿಸಲು ಸಾಧ್ಯವಾಗದ್ದನ್ನು ಕಂಡಾಗ, ಕೊನೆಗೆ ತಾನೇ ಪಾಲಿಸಲು ಶಕ್ತಳಾಗದ್ದನ್ನು ಅನುಭವಿಸಿ ತಿಳಿದಾಗ ಅವಳ ತರ್ಕ ಶಕ್ತಿಯನ್ನು ಕದಲಿಸುವ, ಸಿದ್ಧಾಂತವನ್ನು ಬದಲಿಸುವ ಮನುಷ್ಯನೊಬ್ಬ ಬರುತ್ತಾನೆ.

ವ್ಯಕ್ತಿ ಯಾವುದೇ ಸ್ತರದಲ್ಲಿರಲಿ ಅವನಿಗೊಂದು ಸಿದ್ಧಾಂತವಿರುತ್ತದೆ, ಮತ್ತು ಆ ಸಿದ್ಧಾಂತವು ಅವನಿಗೆ ಸರಿಯೆನ್ನಿಸುವ ತರ್ಕಗಳನ್ನು ಆಧರಿಸಿ ಇದ್ದಿರುತ್ತದೆ. ರಾಯಪ್ಪ, ರೋಣ, ಸೋಮಶೇಖರರಾವ್, ಶರೀಫ್ – ಯಾರೇ ಆಗಿರಲಿ ಅವರ ಬದುಕಿನ ಸಿದ್ಧಾಂತಗಳು ಅವರವರಿಗೆ ಇವೆ. ಈ ಸಿದ್ಧಾಂತಕ್ಕೆ ಆಧಾರವಾದ ತರ್ಕವು ಕದಲದೆ ಉಳಿದಲ್ಲಿ ಅವರೆಲ್ಲರ ಬದುಕು ಸಿದ್ಧಾಂತಕ್ಕನುಗುಣವಾಗಿಯೇ ಬದುಕಿ ಮುಗಿಯುತ್ತದೆ. ಆದರೆ, ಒಮ್ಮೆ ತರ್ಕದ ನೆಲೆ ತಪ್ಪಿತೋ, ಅಲ್ಲಿಗೆ ಎಲ್ಲ ಬದಲಾವಣೆ ಶುರುವಾಗುತ್ತದೆ. ನೈತಿಕ ನೆಲೆಗಳನ್ನು, ನಮ್ಮ ಬದುಕಿನ ಮೌಲ್ಯಗಳನ್ನು ಹಿಡಿದಿಟ್ಟಿದ್ದೇ ತರ್ಕ. ರೋಣಳಿಗೂ ಸಿದ್ಧಾಂತವಿತ್ತು, ತರ್ಕಗಳಿತ್ತು, ಸರಿ ತಪ್ಪಿನ ಅವಳದೇ ಆದ ಕಲ್ಪನೆಯಿತ್ತು. ಆದರೆ ಫಾಬ್ರಿಗಾಸ್ ಅನ್ನುವ ಮಹಾ ಬುದ್ಧಿವಂತನ, ವ್ಯವಹಾರನಿಷ್ಠನ ತರ್ಕದ ದಾಳಿಯ ಧೂಳಿನಲ್ಲಿ ಆಕೆ ತನ್ನ ಸಿದ್ಧಾಂತಗಳನ್ನು ಮತ್ತು ತರ್ಕವನ್ನು ಮೀರುತ್ತಾಳೆ. ಅದೊಂದು ಆನಂದವೂ ಆಗಿರುತ್ತದೆ, ಹಾಗೆಯೇ ಬಹುಶಃ ಅವಳ ಬದುಕಿನ ನೋವಿನ ಸರಣಿಯ ಇನ್ನೊಂದು ಮಜಲು ಅಲ್ಲಿಂದ ಶುರುವಾಗುತ್ತದೆ. ತರ್ಕಶಕ್ತಿಯಿರುವ ಒಬ್ಬ ಮನುಷ್ಯ ತನ್ನ ಬಲೆಗೆ ಹೆಣ್ಣನ್ನು ಅದುಹೇಗೆ ಸಹಜವಾಗಿ ಮತ್ತು ಅವಳ ಅನುಮತಿ ಸಹಿತವಾಗಿ ಬೀಳಿಸಿಕೊಳ್ಳುತ್ತಾನೆ ಅನ್ನುವುದರ ಸಮರ್ಥ ಚಿತ್ರಣ ಅದು.

ತನ್ನ ತರ್ಕದ ನೆಲೆ ತಪ್ಪುವಿಕೆಗೆ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆಯದೇ ಬಗೆಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಸ್ವತಂತ್ರವಾದಂತೆ, ಕೆಲವರು ಉಗ್ರವಾಗಿ, ಕೆಲವರು ಹತಾಶವಾಗಿ… ಹೀಗೆ ಭಿನ್ನ ಭಿನ್ನವಾಗಿ. ರಾಯಪ್ಪನಂಥವರ ತರ್ಕ ಬರೀ ಸರ್ವೈವಲ್ ಮಾತ್ರವನ್ನು ಉದ್ದೇಶವಾಗಿಟ್ಟುಕೊಂಡು ಸರಳವಾಗಿ ಕಾಣುವಂಥದು. ಅದಕ್ಕೆ ಧಕ್ಕೆ ಬಂದಾಗ ಆ ವ್ಯಕ್ತಿ ಪ್ರತಿಕ್ರಿಯಿಸುವ ರೀತಿ ಅದ್ಯಾವ ಮಟ್ಟದ್ದು ಅನ್ನುವುದನ್ನು ಕಾದಂಬರಿ ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ. ಸರ್ವೈವಲ್ ಒಂದೇ ಅಲ್ಲದೆ ಅದಕ್ಕಿಂತ ಮುಂದಿನ ಹಂತಗಳಲ್ಲಿರುವ ಎಲಿಸಾರಂತಹ ’ಸ್ಪಿರಿಚುವಲ್ ಸೈಕೋ’ ಜನಗಳ ತರ್ಕ ಇನ್ನೂ ಸಂಕೀರ್ಣ. ಹೊರ ಹೊರಗೆಲ್ಲ ಅದು ಶಾಂತ ಮತ್ತು ಪ್ರತಿಕ್ರಿಯೆ ತೋರದ ಗಾಂಭೀರ್ಯ. ಆದರೆ ಅದು ತನ್ನಕಾಲಬುಡಕ್ಕೆ ಬರುವ ಯಾವುದೇ ಅಪಾಯವನ್ನು ನಿರ್ವಹಿಸುವ ಪರಿಯೇ ಹೃದಯಹೀನಸ್ವರೂಪದ್ದು. ರೋಣ ಇವೆರಡರ ನಡುವಿನ ಮಿಶ್ರತರ್ಕದ ಹೆಣ್ಣು ಮಗಳು. ಆಕೆಯ ತರ್ಕದ ನೆಲೆ ತಪ್ಪುವ ಸಂಗತಿಯ ನಿರೂಪಣೆಯೇ ವಸ್ತುತಃ ನನ್ನಿ.

ತುಂಬಾ ತುಂಬಾ ಕಾಡಬಹುದಾದ ಸಂಗತಿಯೆಂದರೆ ಈ ಜಗತ್ತಿನಲ್ಲಿ ತರ್ಕ ಮತ್ತು ’ಉಳಿಕೆಯ ಹಾದಿಯ ಅನ್ವೇಷಣೆ’ ಗಳನ್ನು ಬಿಟ್ಟು ಉಳಿದದ್ದೆಲ್ಲ ಸುಳ್ಳೇ?’ ಎನ್ನುವ ಪ್ರಶ್ನೆ. ರಾಯಪ್ಪನ ಬದುಕಿನ ಚಿತ್ರದಲ್ಲಿ ಇದು ಕಾಣಬಹುದಾದಷ್ಟು ಸರಳವಾಗಿ ಬಂದಿದ್ದರೆ, ಉಳಿದ ಜಟಿಲ ತತ್ತ್ವದ ಪಾತ್ರಗಳ ಬದುಕಿನಲ್ಲಿ ಅಷ್ಟು ಢಾಳಾಗಿ ಕಾಣುವಂತಿಲ್ಲ. ಹಾಗಿದ್ದೂ ಉತ್ತರ ಮಾತ್ರ ಸ್ಪಷ್ಟ- ’ಹೌದು, ಉಳಿದದ್ದೆಲ್ಲ ಸುಳ್ಳೇ’ ಅನ್ನುವುದು. ಆದರ್ಶಗಳಿಗೆ ಅನುಗುಣವಾಗಿ ಯಾರೇ ಬದುಕಿದರೂ ಆ ವ್ಯಕ್ತಿ ದೇವರಷ್ಟು ದೊಡ್ಡವನಾಗುತ್ತಾನೆ.

ನಾಗರಿಕತೆ ಮತ್ತು ತಂತ್ರಜ್ಞಾನದ ಹಾದಿಯಲ್ಲಿ ಮಾನವ ಎಷ್ಟೇ ಮುಂದುವರಿದವ ಅನ್ನಿಸಿದ್ದರೂ ಇವತ್ತಿಗೂ ಅವನನ್ನು ಕಾಡುವ ಮೌಲ್ಯದ ಪ್ರಶ್ನೆಗಳೇ ಹಲವಿವೆ. ಇವತ್ತಿಗೂ ಆ ಮೌಲ್ಯಗಳ ಸಂಘರ್ಷ ಮತ್ತು ಮಾನವನ ಸೈದ್ಧಾಂತಿಕ ಹೊಯ್ದಾಟಗಳನ್ನು ಕಥೆಯಲ್ಲಿ ಅಳವಡಿಸಿಕೊಳ್ಳಬಲ್ಲ ಕೃತಿಯೇ ಜನರಲ್ಲಿ ಅಳಿಯದ ನೆನಪಾಗಿ ಉಳಿಯುವಂಥದ್ದು. ನನ್ನಿ ಆಪಾತತಃ ಅಂಥಾದ್ದೇ ಒಂದು ಕೃತಿ. ಬದುಕು ಎನ್ನುವುದು ಶ್ರದ್ಧೆಯಲ್ಲಿದೆ ಎಂದು ಒಬ್ಬ ಥೀಯಿಸ್ಟ್ ಹೇಳಿದರೆ, ಬದುಕೆನ್ನುವುದು ಕುರುಡು ನಂಬುಗೆಯಲ್ಲಿದೆ ಅಂತ ಅಥೀಯಿಸ್ಟ್ ಹೇಳಬಹುದು. ವಸ್ತುತಃ ಎರಡರಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಆ ಇಬ್ಬರೂ ಸತ್ಯವನ್ನು ಬುಡ ಸಮೇತ ಹಿಡಿದು ಸಾಕ್ಷಾತ್ಕಾರ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಪ್ರಾಯಃ ಅವರಿಬ್ಬರೂ ಸಹಜವಾದ ಬದುಕೊಂದನ್ನು ಬದುಕುತ್ತಾರೆ. ಆದರೆ ಇದೆರಡನ್ನೂ ಬಿಟ್ಟು ಶ್ರದ್ಧೆಯ ಜಾಗವನ್ನು ಖಾಲಿ ಮಾಡಿಕೊಂಡು fact (ತಪ್ಪಾಗಿ ಇದೇ ಸತ್ಯವೆಂದು ಕೆಲವೊಮ್ಮೆ ಭಾಸವಾಗುತ್ತದೆ) ಅನ್ನು ಹಿಡಿಯುವ ಮೂರ್ಖ ಕೆಲಸಕ್ಕೆ ಮನುಷ್ಯ ತೊಡಗಿಕೊಳ್ಳುತ್ತಾನೆ. ಅದು ನೆಮ್ಮದಿಯನ್ನು ಕೆಡಿಸುತ್ತದೆ, ಬದುಕನ್ನು ಕಲಕುತ್ತದೆ. Fact ಅನ್ನು ಬೆನ್ನಟ್ಟಿ ಹೋಗುವುದಾದರೆ ಅದಕ್ಕೆ ಸೂರ್ಯನನ್ನು ಹತ್ತಿರದಿಂದ ಎದುರಿಸಲು ಬೇಕಾಗುವಂಥಾದ್ದೇ ಶಕ್ತಿ ಇರಬೇಕು ಅಂತ ಕಾದಂಬರಿಯ ಅಭಿಮತ. ವಸ್ತುತಃ ಸತ್ಯವೊಂದೇ ಅಲ್ಲದೆ, ಸೌಂದರ್ಯಕ್ಕೂ ಅನ್ವಯವಾಗುವ ಸಂಗತಿ ಇದು. ಕರ್ಮ ಕಾದಂಬರಿಲ್ಲಿ ಶ್ರದ್ಧೆಯ ಪರ ವಹಿಸುವ ಲೇಖಕರು ಈ ಕಾದಂಬರಿಯಲ್ಲೂ ಸೂಚ್ಯವಾಗಿ ಶ್ರದ್ಧೆಯ ಜಾಗವನ್ನು ಶ್ರದ್ಧೆಗೆ ಬಿಟ್ಟರೇನೆ ಬದುಕು ನೆಮ್ಮದಿಯಾಗಿರುತ್ತದೆ ಅನ್ನುವಂತಿದೆ.

ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಇವತ್ತಿಗೆ ನಡೆಯುತ್ತಿರುವ ಚರ್ಚೆ ಗೋಮಾಂಸದ್ದು. ಅದು ಅಷ್ಟೆಲ್ಲ ದೊಡ್ಡಸಂಗತಿ ಯಾಕೆಂದರೆ ಅದರಲ್ಲಿ ಧರ್ಮಕ್ಕೆ ಮತ್ತು ರಾಜಕೀಯಕ್ಕೆ ಅವಕಾಶ ಇದೆಯಾದ್ದರಿಂದ. ನನ್ನಿ ಕಾದಂಬರಿಯಲ್ಲಿ ತತ್ತ್ವತಃ ಈ ವಿಚಾರ ಬಂದಿರುವುದು ಕಾಕತಾಳೀಯ ಇರಬಹುದು, ಆದರೆ ಚಿಂತನಯೋಗ್ಯವಾದ ಸಂಗತಿಗಳನ್ನು ಕೃತಿ ಎತ್ತಿದೆ. ಇವತ್ತಿನ ಸಂದರ್ಭಕ್ಕೆ ಅದಿನ್ನಷ್ಟು ಹೊಂದಿಕೆಯಾಗುವಂಥದ್ದು. ಎರಿಕ್ ಬರ್ಗ್ ನ ಪುಸ್ತಕದಲ್ಲಿ ಬರುವ ಮಾನವ ಆಹಾರದ ಚರ್ಚೆ, ಇವತ್ತು ಭಾರತದಲ್ಲಾದಂತೆ ಸಾಮಾಜಿಕ ನೆಲೆಯಲ್ಲಿ, ರಾಜಕೀಯದ ರಂಗಿನಲ್ಲಿ ಕಳೆದುಹೋಗದೆ, ಶುದ್ಧ ಮಾನವ ಪ್ರವೃತ್ತಿಯನ್ನು ವಿವರಿಸುವಂತಿದೆ. ನನಗೆ ಅನ್ನಿಸುವಂತೆ, ಮನುಷ್ಯನಲ್ಲಿರುವ ಹಿಂಸೆಗೆ ಮರುಕಪಡುವ ಗುಣ ಕೂಡ ನಿರಪೇಕ್ಷವಲ್ಲ ಎಂಬುದನ್ನೇ ಕಾದಂಬರಿಕಾರ ಹೇಳ ಹೊರಟಿದ್ದಾರೆ. ಅಂದರೆ, ಯಾವೆಲ್ಲ ಹಿಂಸೆಯ ಉತ್ಪನ್ನಗಳಿರುತ್ತವೋ ಅಲ್ಲೆಲ್ಲ ಮನುಷ್ಯ ಮರುಕಪಡುವುದಿಲ್ಲ; ಬದಲಿಗೆ ಉತ್ಪನ್ನವನ್ನು ಭೋಗಿಸುತ್ತಾನೆ. ಅದು ಮಾಂಸಕ್ಕಾಗಿ ನಡೆಯುವ ಪ್ರಾಣಿ ಕೊಲೆಯಿರಬಹುದು, ಅಥವಾ ಕಾಸ್ಮೆಟಿಕ್ಸ್, ಬ್ಯಾಗ್ ತಯಾರಿಕೆಗಾಗಿ ಕೊಲ್ಲಲ್ಪಡುವ ಪ್ರಾಣಿಗಳಿರಬಹುದು- ಆ ಪ್ರಾಣಿಯ ವೇದನೆ ತನಗೆ ವ್ಯಕ್ತವಾಗಿ ಕಾಣುವಂತಿದ್ದರೆ ಮಾತ್ರ ಮರುಕವೆಂಬುದು ಮನುಷ್ಯನಲ್ಲಿ ಮೂಡುತ್ತದೆ. ಅದಿಲ್ಲದಿದ್ದರೆ ಇಲ್ಲ. ಮನುಷ್ಯ ಆ ಮಟ್ಟದ ಇನ್ಸೆನ್ಸಿಟಿವಿಟಿಯನ್ನು ತನ್ನದೇ ಗುಣವಾಗಿ ಹೊಂದಿದ್ದಾನೆ.

ಮನುಷ್ಯನ ಈ ಗುಣವೇ ಸಮಾಜದಲ್ಲೂ ಪ್ರತಿಫಲಿಸಬೇಕಷ್ಟೆ. ಇನ್ಸ್ಟಿಟ್ಯೂಶನಲ್ ರಿಲಿಜನ್ನುಗಳು ಮುಗ್ಧರನ್ನು ನಂಬುಗೆ, ಶ್ರದ್ಧೆ, ಸೇವೆ ಎಂಬೆಲ್ಲ ಕಣ್ಣಿಗೆ ಕಾಣದ ಕೈಗೆ ಸಿಗದ ಆದರ್ಶಗಳ ಮರೆಯಲ್ಲಿ ಕೆಟ್ಟದಾಗಿ ಬಳಸುವುದರ ಹಿನ್ನೆಲೆಯಲ್ಲೂ ಸಹಜವೇ ಆದ ಇನ್-ಸೆನ್ಸಿಟಿವಿಟಿಯೇ ಇದೆ ಅನ್ನುವುದು ಕಾದಂಬರಿ ಘಟನೆಗಳ ಮಧ್ಯೆ ಹೊಳೆದುಕಾಣುವ ಸತ್ಯ. ಒಟ್ಟಿನಲ್ಲಿ ಮಾನವ ತನ್ನೂಳಗಿನಿಂದಲೂ, ಸಮಾಜದ ಮಟ್ಟದಲ್ಲಿಯೂ ವಿಕೃತಿಗಳ ಕಂತೆಯೇ ಆಗಿದ್ದಾನೆ. ಈ ವಿಕೃತಿಗಳನ್ನು ಮೀರುವ ಚಿಂತನೆಯೆಲ್ಲೂ ಸ್ಪಷ್ಟಮಾತುಗಳಲ್ಲಿ ಕಾದಂಬರಿಯಲ್ಲಿ ಕಂಡಿಲ್ಲ. ಆದರೂ, ಕೆಲವು ಸಹಜ ಬದುಕುಗಳ, ಅತಿ ಗಹನವಾದ ತರ್ಕದ ಗೊಡವೆಯಿಲ್ಲದ, ಅತ್ಯಾದರ್ಶಗಳ ಹೊರೆಯಿಲ್ಲದ ಪಾತ್ರಗಳು- ಸೋಮಶೇಖರ, ಷರೀಫ್ ಸಾಹೇಬರು- ಅಲ್ಪಸ್ವಲ್ಪ ಏರುಪೇರುಗಳೊಂದಿಗೆ ಸುಂದರವಾದ ಬದುಕನ್ನೇ ಬದುಕುವಾಗ, ಆ ವಿಕೃತಿಯನ್ನು ಮೀರುವುದಲ್ಲದಿದ್ದರೂ ಪಳಗಿಸುವ ಕುರಿತು ಕಾದಂಬರಿ ದನಿಯಾದಂತಿದೆ ಅನ್ನಿಸಿತು.

ತನ್ನ ಈ ಒಳನೋಟಗಳಿಂದಾಗಿ ಕನ್ನಡ ಕಾದಂಬರಿ ಲೋಕದಲ್ಲಿ ಇತ್ತೀಚೆಗೆ ಬಂದ ಕಾದಂಬರಿಗಳ ಸಾಲಿನಲ್ಲಿ ಭಿನ್ನವಾಗಿಯೂ ಅನನ್ಯವಾಗಿಯೂ ನಿಲ್ಲುವ ಕಾದಂಬರಿ ನನ್ನಿ. ಓದುಗರನ್ನು ಒಳಗೊಳ್ಳುತ್ತ, ಭಾವದ ಮತ್ತು ಚಿಂತನೆಯ ಒರತೆಯನ್ನು ಉತ್ತೇಜಿಸುವ ಈ ಕೃತಿಯನ್ನು ಗಾಢತೆಯ ಬಯಕೆಯ, ರಸೋನ್ನತಿಯ ಬಯಕೆಯ, ಯಾರೇ ಓದುಗ ಓದಬಹುದಾಗಿದೆ. ಯಾರನ್ನೋ ಹಳಿಯದೆ ಬದುಕಲೇ ಆಗದು ಅನ್ನುವ ಸ್ಥಿತಿಯನ್ನು ಕಟ್ಟಿಕೊಡುತ್ತಿರುವ ಇವತ್ತಿನ ಸಾರಸ್ವತ ಅಪಸವ್ಯಗಳ ಮಧ್ಯೆ ಈ ಪ್ರಯತ್ನವೊಂದು ಆಶಾವಾದ. ಜನಸಾಮಾನ್ಯನಿಗೆ ಬೇಕಾದ್ದು ಅವನನ್ನು ಏಕಾಂತದಲ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡು ರಸೋನ್ನತಿಯನ್ನು ಕರುಣಿಸುವ, ಓದಿ ಕೆಳಗಿಡುವಾಗ ಚಿಂತನೆಯನ್ನು ಮತ್ತು ತತ್ತ್ವಗಳ ಅಂತರ್ದರ್ಶನವನ್ನು ಹೊತ್ತಿಸುವ ಒಂದು ಹೊತ್ತಗೆ. ಆ ಕೆಲಸದಲ್ಲಿ ನನ್ನಿ ಬಹುಮಟ್ಟಿಗೆ ಸಶಕ್ತವಾಗಿದೆಯೆಂಬುದು ನನ್ನ ಅಭಿಮತ.

6 ಟಿಪ್ಪಣಿಗಳು Post a comment
 1. ಮಾರ್ಚ್ 9 2016

  ಆಳಕ್ಕೆ ಹೊಕ್ಕು ಗಂಭೀರ ವಿಶ್ಲೇಷಣೆ ನಡೆಸಿ ಒಳಸೂಕ್ಷ್ಮಗಳನ್ನು ಪರಿಚಯಿಸಿಕೊಟ್ಟ ಬಗ್ಗೆ ಮನೋಜ್ಞವಾಗಿದೆ. ಧನ್ಯವಾದಗಳು.

  ಉತ್ತರ
 2. ಮಾರ್ಕ್ಸ್ ಮಂಜು
  ಮಾರ್ಚ್ 10 2016

  ಮಹರ್ಷಿ ಮಾರ್ಕ್ಸ್ ಬಗ್ಗೆ ಒಂದು ಕಾದಂಬರಿ ಬರೆಯುವುದರ ಕುರಿತು ನೀವುಗಳು ಯೋಚಿಸಿ

  ಉತ್ತರ
 3. shripad
  ಮಾರ್ಚ್ 10 2016

  “ಮಹರ್ಷಿ ಮಾರ್ಕ್ಸ್ ಬಗ್ಗೆ ಒಂದು ಕಾದಂಬರಿ ಬರೆಯುವುದರ ಬಗ್ಗೆ ಯೋಚಿಸಿ”
  ಬಿಟ್ಟಿ ಸಲಹೆ! ಈಗಲೇ ಮಾರ್ಕ್ಸ್ ಎಲ್ಲೂ ಇಲ್ಲ, ಇನ್ನು ಕಾದಂಬರಿ ಬೇರೆ ಬರೆದು ಜನ ಅದನ್ನು ಕಸದಬುಟ್ಟಿಗೆ ಎಸೆಯಲಿ.

  ಉತ್ತರ
 4. Naveen gangotri
  ಮಾರ್ಚ್ 12 2016

  ಮಹರ್ಷಿ ಮಾರ್ಕ್ಸ್! ಅಸಹಜವಾದ ಸಮಾನತೆಯನ್ನು ಹೇಳಲು ಹೊರಟು ಆರ್ಥಿಕ ಸತ್ಯಗಳ ಮೂಲವನ್ನೇ ಕಡೆಗಣಿಸಿ ಸಂಪತ್ತಿನ ಸಮಾನ ಹಂಚಿಕೆಯಂಥ ಯುಟೋಪಿಯನ್ ಕಲ್ಪನೆ ಕೊಟ್ಟವನನ್ನು ಮಹರ್ಷಿ ಎನ್ನಲಾಗದು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments