ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 9, 2016

2

ಹೂ ಈಸ್ ಕನ್ಹಯ್ಯಾ ಕುಮಾರ್?

‍ನಿಲುಮೆ ಮೂಲಕ

-ಎಸ್.ಆರ್. ಅನಿರುದ್ಧ ವಸಿಷ್ಠ

kanhaiya-kumar_650x400_81457076102ಈ ಹುಡುಗನಿಗೆ ಆಜಾದಿ ಬೇಕಂತೆ! ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ, ಜಾತಿವಾದದಿಂದ ಆಜಾದಿ ಬೇಕಂತೆ. ಇದಕ್ಕಾಗಿ ಆತ ಮೋದಿಯನ್ನು ದೂರುತ್ತಿದ್ದಾನೆ. ಆದರೆ, ಮೋದಿ ಅಧಿಕಾರಕ್ಕೆ ಬಂದು ಎರಡು ವರ್ಷ ಕೂಡಾ ಸಂದಿಲ್ಲ. ಇವನನ್ನು ಬೆಂಬಲಿಸಿದ ರಾಹುಲ್ ಗಾಂಧಿ ಪಕ್ಷವೇ ದೇಶವನ್ನು ೬೦ ವರ್ಷ ಆಳಿದ್ದು. ಇವನು ಕೇಳುತ್ತಿರುವ ಆಜಾದಿಗಳು ೬೦ ವರ್ಷದಲ್ಲಿ ಸಿಗಲಿಲ್ಲ. ಆದರೆ, ಮೋದಿ ಬಂದ ನಂತರ ಆ ಆಜಾದಿಗಳು ಸಿಗುವ ಭರವಸೆ ಮೂಡಿವೆ. ಆದರೆ ಇವನ ಪ್ರಕಾರ ಇವನು ಕೇಳುವ ಆಜಾದಿ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಸಿಕ್ಕಿಲ್ಲವಂತೆ. ಎಂತಹ ಹಾಸ್ಯಪ್ರಜ್ಞೆ ಈ ಹುಡುಗನಿಗೆ.
ಒಂದು ಪ್ರಸಂಗ:
ದೇಶದ ಒಂದು ವಿವಿಯಲ್ಲಿ ಓರ್ವ ವಿದ್ಯಾರ್ಥಿಯಿದ್ದ. ಆತ ಒಂದು ತಿಂಗಳ ಹಿಂದಿನವರೆಗೂ ಕೇವಲ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಒಕ್ಕೂಟ ನಾಯಕನಷ್ಟೇ. ಆದರೆ, ಈಗ ಆತ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಯುವಕರ ಶಕ್ತಿ(?)ಯಾಗಿ ಮಾರ್ಪಡುತ್ತಾನೆ. ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಪರ ಪ್ರಚಾರಕ್ಕೆ ಆತನನ್ನು ಕರೆಸಲು ನಿರ್ಧಾರ ಮಾಡಲಾಗುತ್ತದೆ. ಆದರೆ, ಆ ವಿದ್ಯಾರ್ಥಿ ರಾತ್ರೋ ರಾತ್ರಿ ರಾಷ್ಟ್ರೀಯ ಮುಖಂಡ(?)ನಾದ ಪರಿ ಹೇಗೆ? ದೇಶ ಸೇವೆ ಮಾಡಿಯೇ, ದೇಶಕ್ಕಾಗಿ ಹೋರಾಡಿಯೇ, ಸಮಾಜಕ್ಕಾಗಿ ತ್ಯಾಗ ಮಾಡಿಯೇ? ಅಲ್ಲವೇ ಅಲ್ಲ, ರಾಷ್ಟ್ರದ್ರೋಹದ ಆರೋಪ ಹೊತ್ತು. ಯಾರು ಆ ವಿದ್ಯಾರ್ಥಿ ? ಅವರೇ ಈಗ ಪ್ರಚಂಡ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಕನ್ಹಯ್ಯ ಕುಮಾರ್.

ಈಗ ನೇರವಾಗಿ ವಿಚಾರಕ್ಕೆ ಬರಬೇಕೆಂದರೆ, ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಕನ್ಹಯ್ಯ ಕುಮಾರ್ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ದೆಹಲಿ ಪೊಲೀಸರು ಬಂಧಿಸಿದ್ದರು. ಈಗ ಆತ ಜಾಮೀನು ಪಡೆದು ಹೊರಬಂದಿದ್ದಾನೆ. ಇದೇ ಸಮಯದಲ್ಲಿ ಕಾಕತಳಿಯವಾಗಿ ಐದು ರಾಜ್ಯಗಳ ವಿಧಾನಸಭಾ ಚುನಾವನೆಯಲ್ಲಿ ಆಯೋಗ ನಿನ್ನೆ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ನಿನ್ನೆ ಹೇಳಿಕೆ ನೀಡಿರುವ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಕನ್ಹಯ್ಯ ಪ್ರಚಾರ ಮಾಡಲಿದ್ದು, ಎಡರಂಗ ಬೆಂಬಲಿಸುವ ಎಲ್ಲ ವಿದ್ಯಾರ್ಥಿಗಳೂ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಈಗ ಕೇಳಬೇಕಿದೆ, ಹೂ ಈಸ್ ಕನ್ಹಯ್ಯ ಕುಮಾರ್?
ರಾಷ್ಟ್ರ ದ್ರೋಹದ ಆರೋಪ ಹೊತ್ತು ಜಾಮೀನಿನ ಮೇಲೆ ಹೊರ ಬಂದಿರುವ ವ್ಯಕ್ತಿಯೊಬ್ಬ ಒಂದು ರಾಷ್ಟ್ರೀಯ ಪಕ್ಷದ ಪರ ಪ್ರಚಾರ ನಡೆಸುತ್ತಾನೆ ಎಂದರೆ ಎರಡು ಪ್ರಶ್ನೆ ಹುಟ್ಟುಕೊಳ್ಳುತ್ತದೆ.
.ವಿದ್ಯಾರ್ಥಿಯಾದ ಕನ್ಹಯ್ಯ ಕುಮಾರ್ ರಾಜಕೀಯ ಪ್ರಚಾರಕ್ಕೆ ಬರುತ್ತಾನೆಂದರೆ, ಅವನ ನಿಜವಾದ ಇರಾದೆ ರಾಜಕೀಯಕ್ಕೆ ಬರುವುದೇ ಆಗಿತ್ತೆ?
. ರಾಷ್ಟ್ರದ್ರೋಹದ ಆರೋಪ ಹೊತ್ತಿರುವ ವಿದ್ಯಾರ್ಥಿಯೊಬ್ಬನನ್ನು ಪ್ರಚಾರಕ್ಕೆ ಕರೆಸುವ ಮಟ್ಟಕ್ಕೆ ಸಿಪಿಐ(ಎಂ) ಇಳಿದಿದೆಯೇ? ಅದು ಅನಿವಾರ್ಯವೇ?
ಇನ್ನು, ಅಸಲಿಗೆ ಯಾರು ಈ ಕನ್ಹಯ್ಯ ಕುಮಾರ್? ದೇಶಕ್ಕಾಗಿ ಗಡಿಯಲ್ಲಿ ಹೋರಾಡಿದ ಸೇನಾನಿಯೇ?, ದೇಶಕ್ಕಾಗಿ ತ್ಯಾಗ ಮಾಡಿದ ಆದರ್ಶನೇ?, ಸರ್ವಶ್ರೇಷ್ಟ ಆದರ್ಶಗಳನ್ನು ಮೈಗೂಡಿಸಿಕೊಂಡು ಈ ದೇಶಕ್ಕೆ ಏನಾದರೂ ಕೊಡುಗೆ ನೀಡಿದ ಸರ್ವಶ್ರೇಷ್ಟನೇ? ಏನು? ಕೇವಲ ಒಂದು ತಿಂಗಳ ಹಿಂದೆ ಯಾರಿಗೆ ತಿಳಿದಿತ್ತು ೨೯ ವರ್ಷ ಈ ಕನ್ಹಯ್ಯನ ಬಗ್ಗೆ. ಆತನ ವಿರುದ್ಧ ದೇಶದ್ರೋಹದ ಆರೋಪ ದಾಖಲಾದ ತಕ್ಷಣ ಪಟ್ಟಭದ್ರ ಹಿತಾಸಕ್ತಿಗಳು ಸೇರಿಕೊಂಡು ಆತನನ್ನು ಹೀರೋ ಮಾಡುತ್ತಾರೆ, ಆತನನ್ನು ರಾಷ್ಟ್ರೀಯ  ಹೋರಾಟಗಾರ, ದೀನರ ದನಿ ಎಂದೆಲ್ಲಾ ಬಿಂಬಿಸುತ್ತಾರೆ. ಇಡಿಯ ಎಡಚ ಸಮುದಾಯವೇ ಆತನ ಬೆಂಬಲಕ್ಕೆ ನಿಲ್ಲುತ್ತದೆ. ಕ್ಷಣ ಮಾತ್ರದಲ್ಲಿ ಯಾರಿಗೋ ಆತ ಮಗನಾಗುತ್ತಾನೆ, ಇನ್ಯಾರಿಗೋ ಅಣ್ಣನಾಗುತ್ತಾನೆ, ಮತ್ಯಾರಿಗೋ ತಮ್ಮನಾಗುತ್ತಾನೆ. ಆ ಮೂಲಕ ಆತನನ್ನು ಈ ಯಾವುದೇ ಇತಿಹಾಸವಿಲ್ಲದೇ, ಯಾವುದೇ ಸ್ಪಷ್ಟ ಗುರಿ ಸಿದ್ದಾಂತವಿಲ್ಲದೇ ರಾಷ್ಟ್ರಮಟ್ಟದ ನಾಯಕನಾಗಿಸಲಾಗುತ್ತದೆ ಎಂದರೆ ಅದು ದುರಂತವೇ ಸೈ.
ಹಾಗೆಯೇ ಜಾಮೀನು ಪಡೆದು ಹೊರಬಂದ ನಂತರ ತಕ್ಷಣಕ್ಕೆ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾನೆ. ಅದನ್ನು ರಾಷ್ಟ್ರೀಯ ಪಕ್ಷ ಎಂದುಕೊಂಡಿರುವ ಪಕ್ಷದ ಮುಖಂಡ ಅಧಿಕೃತ(?)ವಾಗಿ ಘೋಷಿಸುತ್ತಾರೆ. ಹಾಗಾದರೆ, ರಾಜಕಾರಣಕ್ಕೆ ಬರಲು ಇಂತಹ ಸಿನಿಮೀಯ ಶೈಲಿಯ ಘಟನೆಗಳನ್ನು ಸೃಷ್ಠಿಸಬೇಕೆ ಎಂಬ ಪ್ರಶ್ನೆ ದೇಶದ ಜನತೆಯದ್ದಾಗಿದೆ.
ಬದಲಾದ ರಾಜಕೀಯ ಸಮೀಕರಣ
ಒಂದು ಕಾಲವಿತ್ತು. ರಾಜಕೀಯಕ್ಕೆ ಬರಬೇಕಾದರೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾನೆ ಎನ್ನುವ ಒಂದಷ್ಟಾದರೂ ನೈತಿಕತೆಯಿತ್ತು. ವಿಭಿನ್ನವೇ ಆದರೂ ತಮ್ಮದೇ ಆದ ಸಿದ್ದಾಂತಗಳನ್ನು ಪ್ರತಿಪಾದಿಸುವ ಮೂಲಕ ದಶಕಗಳ ಕಾಲ ಅಧ್ಯಯನ ಮಾಡಿ, ಹೋರಾಟ ಮಾಡಿ ತಾವೂ ಬೆಳೆದು ಇತರನ್ನೂ ಬೆಳೆಸಿ, ಸಮಾಜವನ್ನೂ ಬೆಳೆಸಲು ಪ್ರಯತ್ನಿಸುತ್ತಿದ್ದರು. ಭಿನ್ನ ನಿಲುವುಗಳನ್ನು ಹೊಂದಿದ್ದರೂ, ರಾಷ್ಟ್ರಮಟ್ಟದಲ್ಲಿ ರಾಮ ಮನೋಹರ ಲೋಹಿಯಾ, ಲಾಲ್ ಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಇಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಅಂತಹವರು ಒಂದೆಡೆಯಾದರೆ, ಇನ್ನು ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ದೇವೇಗೌಡ, ಬಂಗಾರಪ್ಪ ಅವರಂತಹ ನಾಯಕರು ತಮ್ಮದೇ ಆದ ರೀತಿಯಲ್ಲಿ ದಶಕಗಳ ಕಾಲ ಹೋರಾಟ ಮಾಡಿ, ರಾಜಕೀಯದ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿಯೇ ಅವರ ಎಂದಿಗೂ ಆಲದ ಮರದಂತೆ ದಶಕಗಳ ಕಾಲ ಗಟ್ಟಿಯಾಗಿ ನೆಲೆನಿಂತು ರಾಜಕೀಯಕ್ಕೆ ಒಂದು ರೀತಿಯ ವ್ಯಾಖ್ಯಾನ ನೀಡಿದ್ದಾರೆ. ಆದರೆ, ಪ್ರಸ್ತುತ ಬೆಳವಣಿಗೆಯನ್ನು ನೋಡಿದರೆ, ಸನ್ನಿವೇಶಗಳು, ಆದರ್ಶಗಳು ಬದಲಾಗುತ್ತಿದ್ದು, ರಾಜಕೀಯ ಸಮೀಕರಣವೇ ತನ್ನ ಮಜಲನ್ನು ಬದಲಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ರಾಷ್ಟೀಯ ಮಟ್ಟದ ಅನಗತ್ಯ ವಿವಾದವಾಗದೇ ಇದ್ದರೆ ಬೆಳೆಯಲು ಸಾಧ್ಯವಿಲ್ಲ ಎಂಬ ಭಾವನೆ ಮೂಡುತ್ತಿದೆ.
ಕಳೆದ ಒಂದೆರಡು ವರ್ಷಗಳ ಬೆಳವಣಿಗೆಯನ್ನು ನೋಡೋಣ.
ಜನಲೋಕ್‌ಪಾಲ್‌ಗಾಗಿ ಅಣ್ಣಾ ಹಜಾರೆ ಆರಂಭಿಸಿದ ಹೋರಾಟದಲ್ಲಿ ಸೇರಿಕೊಂಡು ಹೆಸರು ಮಾಡಿದ್ದು ಅರವಿಂದ್ ಕೇಜ್ರಿವಾಲ್. ಆದರೆ ಅದರಿಂದಲೇ ಹೆಸರು ಮಾಡಿ, ಹಜಾರೆ ತಂಡ ರೂಪಿಸಿದ್ದ ಹಾಗೂ ಅವರ ಸಿದ್ದಾಂತಕ್ಕೆ ವಿರುದ್ಧವಾಗಿ ರಾಜಕೀಯ ಪಕ್ಷ ಕಟ್ಟಿ, ದೆಹಲಿ ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್ ಅದಾವ ರೀತಿಯಲ್ಲೂ ನೋಡಿದರೂ ರಾಜಕೀಯ ಸಮೀಕರಣದ ಮಜಲನ್ನು ಅಲ್ಲೋಲ ಕಲ್ಲೋಲ ಮಾಡಿ, ಸ್ವಾರ್ಥಕ್ಕಾಗಿ ಬೆಳೆದು ಇವರಿಗೆಲ್ಲಾ ಗುರುವಾದರು. ಹಾಗೆಯೇ ನೋಡುವುದಾರೆ, ಮೀಸಲಾತಿ ಹೋರಾಟದ ಹೆಸರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಹಾರ್ಧಿಕ್ ಪಟೇಲ್ ಕೂಡಾ ರಾಜಕೀಯ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡು ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಇದೇ ಬದಲಾದ ರಾಜಕೀಯ ಸಮೀಕರಣದ ಪ್ರಣಾಳ ಶಿಶುವಾಗಿದ್ದಾನೆ. ಇಂತಹುದ್ದೇ ಸಾಲಿಗೆ, ಈಗ ಕನ್ಹಯ್ಯಾ ಸಹ ಸೇರುತ್ತಿರುವುದು ಯೆಚೂರಿ ಹೇಳಿಕೆಯಿಂದ ಸ್ಪಷ್ಟವಾಗುತ್ತಿದ್ದು, ಕನ್ಹಯ್ಯನ ಮುಖವಾಡ ಕಳಚುತ್ತಿದೆ ಎನ್ನುವುದು ಸ್ಪಷ್ಟ.
ರೋಹಿತ್ ವೆಮುಲ ನನ್ನ ಆದರ್ಶ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾನೆ. ಸಂತೋಷ. ಆದರೆ, ಈತನ ಆದರ್ಶ ರೋಹಿತ್ ಎಷ್ಟರ ಮಟ್ಟಿಗೆ ಆದರ್ಶ ವ್ಯಕ್ತಿ ಎನ್ನುವುದನ್ನೂ ನೋಡಬೇಕು. ಬಡತನದಲ್ಲಿದ್ದ ರೋಹಿತ್ ತನ್ನ ಹಕ್ಕುಗಳಿಗಾಗಿ ಹೋರಾಡಿ ಪ್ರಾಣಬಿಟ್ಟ ಎನ್ನುವುದು ಸತ್ಯ ಎನ್ನುವುದರ ಜೊತೆ ಒಬ್ಬ ಸಂಶೋಧನಾ ವಿದ್ಯಾರ್ಥಿಯನ್ನು ದೇಶ ಕಳೆದುಕೊಂಡಿದ್ದಕ್ಕೆ ದುಃಖವಿದೆ. ತನ್ನ ಸಿದ್ದಾಂತಕ್ಕಾಗಿ ಹೋರಾಡಿದ ರೋಹಿತ್ ಒಂದು ರೀತಿಯಲ್ಲಿ ನಿಜಕ್ಕೂ ಉತ್ತಮನೇ. ಆದರೆ, ಆತ ನಂಬಿದ ಸಿದ್ದಾಂತ ಆತನ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿರಲಿಲ್ಲ. ಆತ ಆತ್ಮಹತ್ಯೆಗೆ ಶರಣಾಗುವ ಮನಸ್ಥಿತಿಯನ್ನು ಹೊಂದಿದ್ದ ಎಂದರೆ, ಆತ ನಂಬಿದ್ದ ಸಿದ್ದಾಂತ ಆತನನ್ನು ಸರಿಯಾಗಿ ರೂಪಿಸಿಲ್ಲ, ಅವೆಲ್ಲಾ ಪೊಳ್ಳು ಎಂದಾಯಿತು. ಅಂಬೇಡ್ಕರ್ ಎಷ್ಟೇ ಕಷ್ಟ ಪಟ್ಟರೂ ಯಾವುದಕ್ಕೂ ಹಿಂಜರಿಯಲಿಲ್ಲ. ಹೋರಾಡಿ ಗೆದ್ದದ್ದಕ್ಕಾಗಿಯೇ ಇಂದು ಪ್ರಪಂಚದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅಂತಹ ವ್ಯಕ್ತಿತ್ವವನ್ನು ರೋಹಿತ್ ಬೆಳಸಿಕೊಳ್ಳದೇ ಹೋದುದು ವಿಷಾದನೀಯ. ಇನ್ನು, ಇಂದು ರೋಹಿತ್ ಪರ ಮಾತನಾಡುವ ಕನ್ಹಯ್ಯ,  ಅಂದು ರೋಹಿತ್ ವೆಮುಲ ಪ್ರತಿಭಟನೆ ನಡೆಸುವಾಗ ಹೋಗಿ ಬೆಂಬಲ ನೀಡಿ, ಸಮಸ್ಯೆ ಪರಿಹರಿಸ್ದಿರೆ ಆತ ಸಾಯುವ ಪ್ರಮೇಯ ಬರುತ್ತಿರಲಿಲ್ಲ. ಈಗ ಕಣ್ಣಿರು ಸುರಿಸಿ, ರೋಹಿತ್ ನನ್ನ ಆದರ್ಶ ಎನ್ನುವುದು ಈತನ ಪೊಳ್ಳುತನವೇ ಹೌದು.
ಉತ್ತರ ಬೇಕಿರುವ ಪ್ರಶ್ನೆಗಳು:
  • ಸತ್ಯ ಮೇವ ಜಯತೇ ಪ್ರಧಾನಿ ಪಾಲಿಗೆ ಮಾತ್ರವಿದೆಯೇ ಎಂದು ಪ್ರಶ್ನಿಸಿರುವ ನಿಮಗೆ, ಮೋದಿ ಹೇಳಿರುವುದು ಈ ದೇಶದ ಜನತೆಯ ಪ್ರತಿನಿಧಿಯಾಗಿ ಎನ್ನುವುದು ತಿಳಿಯಲಿಲ್ಲವೇ?
  • ರಾಜಕೀಯ ಅಸ್ತ್ರವಾಗಿ ದೇಶದ್ರೋಹ ಆರೋಪ ಹೊರಿಸಲಾಗಿದೆ ಎಂದಿರುವ ನೀವು, ನಿಮ್ಮನ್ನು ಸ್ವತಃ ಏನೆಂದು ತಿಳಿದುಕೊಂಡಿದ್ದೀರಿ? ಕೇಂದ್ರ ಸರ್ಕಾರವೊಂದು ನಿಮ್ಮನ್ನು ಹಣಿಯಲು ಯತ್ನಿಸುವುದಕ್ಕೆ ನೀವೇನು ದೊಡ್ಡ ಶಕ್ತಿಯೇ? ಆಥವಾ ನಿನ್ನನ್ನು ಮುಂದಿಟ್ಟುಕೊಂಡು ಅದಾವ ರಾಜಕಾರ್ಯ ನಡೆಸಬೇಕಿದೆ?
  • ನಿಮ್ಮ ಕಡೆ ರೈಲ್ವೆ ಸ್ಟೇಷನ್ ಬಳಿ ಜಾದೂ ಮಾಡುತ್ತಿದ್ದರು ಎಂದು ಹೋಲಿಕೆ ಮಾಡಿ ಮೋದಿಯವರನ್ನು ಗೇಲಿ ಮಾಡಿದ್ದೀರಿ. ಮೋದಿ ಎಂದಾದರೂ ಹೇಳಿದ್ದರೆ ನಾನು ಜಾದು ಮಾಡಿ ದೇಶದ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು?
  • ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಾಸ್ ತಂದರೆ ಈ ದೇಶದ ಪ್ರತಿ ಪ್ರಜೆಯ ಖಾತೆಗೆ ೧೫ ಲಕ್ಷ ಜಮಾ ಮಾಡಬಹುದು ಎಂದು ಮೋದಿ ಹೇಳಿದ್ದರೇ ಹೊರತು, ತಂದು ಪ್ರತಿಯೊಬ್ಬರಿಗೂ ೧೫ ಲಕ್ಷ ಕೊಡುತ್ತೇನೆ ಎಂದಿದ್ದಕ್ಕೆ ನಿಮ್ಮ ಬಳಿ ಸಾಕ್ಷಿಯಿದೆಯೇ?
  • ಈ ದೇಶದ ಆಡಳಿತ ಯಂತ್ರ ಯಾವಾಗೆಲ್ಲಾ ಅತ್ಯಾಚಾರ ನಡೆಸಿದೆಯೋ, ಆಗೆಲ್ಲಾ ಜೆಎನ್‌ಯುನಿಂದ ಗಟ್ಟಿಯಾದ ದನಿ ಮೊಳಗಿದೆ ಎಂದಿರುವ ನಿಮಗೆ, ಜೆಎನ್‌ಯು ಈ ದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಕಾಶಿಯೇ ಹೊರತು, ರಾಜಕೀಯ ಶಾಲೆಯಲ್ಲ ಎನ್ನುವುದರ ಅರ್ಥವಾಗಿಲ್ಲವೇ?
  • ರಾಹುಲ್‌ಗಾಂಧಿ ನೀವು ಕನ್ಹಯ್ಯಗೆ ಬೆಂಬಲ ನೀಡಿದ್ದೀರಿ? ಆದರೆ, ಅವನು ದೇಶದಲ್ಲಿ ಸ್ವಾತಂತ್ರ್ಯವಿಲ್ಲ ಎನ್ನುತ್ತಿದ್ದಾನೆ. ಹಾಗಾದರೆ ಸೋ ಕಾಲ್ಡ್ ನಿಮ್ಮ ಕುಟುಂಬ ನೇತೃತ್ವದ ಪಕ್ಷ ದೇಶಕ್ಕೆ ತಂದುಕೊಟ್ಟಿದ್ದಾದರೂ ಏನನ್ನು?
  • ಮಾತೆತ್ತಿದರೆ ಅಂಬೇಡ್ಕರ್‌ರನ್ನು ಎಳೆದು ತರುವ ನೀವುಗಳು ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಎಷ್ಟರ ಮಟ್ಟಿಗೆ ನಡೆದುಕೊಂಡಿದ್ದೀರಿ ಎಂದು ಎದೆ ಮುಟ್ಟಿಕೊಂಡು ಹೇಳುವ ಧೈರ್ಯವಿದೆಯೇ?
  • ದಲಿತರಿಗಾಗಿ ಹೋರಾಡಿದ ಅಂಬೇಡ್ಕರ್ ಹಾಗೂ ಅವರ ತತ್ವಗಳ ಎಂದೆಂದಿಗೂ ಸರ್ವ ವಿಧಿತ ಎನ್ನುವುದು ಒಪ್ಪಿತ ಸತ್ಯ. ಅದರೆ, ಅಂಬೇಡ್ಕರ್ ಹೇಳಿದ ಜಾತಿ ವ್ಯವಸ್ಥೆಯ ನಿರ್ಮೂಲನೆಯನ್ನುಮಾಡಲು ನೀವೆಷ್ಟು ಕೊಡುಗೆ ನೀಡಿದ್ದೀರಿ ಎನ್ನುವುದನ್ನು ನಿಮ್ಮ ಆತ್ಮಸಾಕ್ಷಿ ಇದ್ದರೆ  ಕೇಳಿಕೊಳ್ಳುವ ಧೈರ್ಯವಿದೆಯೇ ?
ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮಿಂದ ನಾವು ಉತ್ತರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದಂತೂ ಖಚಿತ. ಅಧಿಕಾರಕ್ಕಾಗಿ ಇಲ್ಲದ ಪ್ರಯತ್ನವನ್ನು ನಡೆಸುತಿದ್ದೀರಿ ಎಂಬುದು ಕಣ್ಣಿಗೆ ರಾಚುತ್ತಿರುವ ಸತ್ಯ.
Read more from ಲೇಖನಗಳು
2 ಟಿಪ್ಪಣಿಗಳು Post a comment
  1. shripad
    ಮಾರ್ಚ್ 11 2016

    ತನ್ನ ವಿವಿ ಕ್ಯಾಂಪಸ್ಸಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ‘ಸುಸು’ ಮಾಡುವಾಗ ಅಲ್ಲಿನ ಮಾಜಿ ವಿದ್ಯಾರ್ಥಿನಿ ಆತನ “ಕ್ರಾಂತಿಯನ್ನು” ಕಂಡು ಹೀಗೆಲ್ಲಾ ಮಾಡಬಾರದಪ್ಪಾ ಅಂದಿದ್ದಕ್ಕೆ ತನ್ನತನ ತೋರಿಸಿ, ಬೆದರಿಸಿ ವಿವಿಯಿಂದ ೩೦೦೦ ರೂ. ಜುಲ್ಮಾನೆ ಹಾಗೂ ಎಚ್ಚರಿಕೆ ಪಡೆದದ್ದು ಈತನ ‘ಸಂಶೋಧನೆಯ’ ದೊಡ್ಡ ಭಾಗ. ಇಂಥ ಎಡವಟ್ಟುಗಳನ್ನೂ ಒಂದಿಷ್ಟು ಗಲಾಟೆಗಳನ್ನೂ ಬಿಟ್ಟು ಆಫ್ರಿಕನ್ ಸ್ಟಡಿ ಸೆಂಟರ್ ನಲ್ಲಿ ಅದೇನು ಸಂಶೋಧನೆ ನಡೆಸಿ ಕಡಿದು ಕಟ್ಟೆ ಹಾಕಿದ್ದಾನೋ ಯಚೂರಿಯೇ ಬಲ್ಲ! ಬೇರೆಡೆ ಜೀವನೋಪಾಯ ಸಿಗುವವರೆಗೂ ವಿವಿಗಳಲ್ಲೇ ಝಂಡಾ ಹೊಡೆದುಕೊಂಡಿರುವ ವಿದ್ಯಾರ್ಥಿಗಳ ಪರಂಪರೆಯೊಂದು ದೇಶಾದ್ಯಂತ ಬೆಳೆದಿದೆ. ಅದಕ್ಕೂ ರಾಜಕೀಯಕ್ಕೂ ನೇರ ನಂಟು. ಈತನೂ ಅಂಥ ನಂಟಿನ ಗಂಟು ಅಷ್ಟೇ.

    ಉತ್ತರ
    • Ckvmurthy
      ಮಾರ್ಚ್ 11 2016

      I wanted to write this incident by this time you have appropriately narrated this story of so called hero.His behaviour indicates his culture.Our so called faculties of famous universities and scribes of leading dailys have supported this person who does not know where to Pi’s. This reflects the degradation of our Professors,and other social science experts.God can only save our universities from this type of aluminis and faculty.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments