ವಾಸನ್ ಐ ಕೇರ್ ಎಂಬ “ಡೋಂಟ್ ಕೇರ್” ಕಂಪೆನಿಯ ಕತೆ
_ ರೋಹಿತ್ ಚಕ್ರತೀರ್ಥ
ವಾಸನ್ ಐ ಕೇರ್ – ಹೆಸರು ಕೇಳಿಯೇ ಇರುತ್ತೀರಿ. ಟಿವಿಯಲ್ಲಿ, ಸಿನೆಮಾ ಪರದೆಗಳಲ್ಲಿ, ಮಾಲ್‍ಗಳಲ್ಲಿ, ರಸ್ತೆಬದಿಯ ಆಳೆತ್ತರದ ಹೋರ್ಡಿಂಗ್‍ಗಳಲ್ಲಿ, ಪತ್ರಿಕೆಯ ಪುಟಗಳಲ್ಲಿ – ಹೀಗೆ ಎಲ್ಲೆಂದರಲ್ಲಿ ಇದರ ಜಾಹೀರಾತು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ನಿಮ್ಮ ಕಣ್ಣುಗಳ ಕಾಳಜಿ ನಾವು ಮಾಡುತ್ತೇವೆ; ಒಮ್ಮೆ ಭೇಟಿ ಕೊಡಿ ಎಂದು ಅವರು ಪ್ರೀತಿಯಿಂದ ಕರೆದದ್ದನ್ನು ಕಂಡು ಖುಷಿಯಾಗಿ ಒಂದೆರಡು ಬಾರಿ ಭೇಟಿ ಇತ್ತಿರಲೂಬಹುದು. ಅಥವಾ ಈ ಲೇಖನವನ್ನು ನೀವು ವಾಸನ್ ಐ ಕೇರ್‍ನಲ್ಲಿ ಪರೀಕ್ಷಿಸಿ ಕೊಂಡ ಕನ್ನಡಕದ ಮೂಲಕವೇ ಓದುತ್ತಿರಲೂಬಹುದು! ಬೆಂಗಳೂರಂಥ ಸಿಟಿಗಳಲ್ಲಿ ಬೀದಿಗೊಂದರಂತೆ ತಲೆ ಎತ್ತಿರುವ ವಾಸನ್ ನೇತ್ರಾಸ್ಪತ್ರೆಗಳು ಕೇವಲ ಮೂರು ವರ್ಷಗಳ ಹಿಂದೆ ಅಪರೂಪವಾಗಿದ್ದವು. ಐದು ವರ್ಷಗಳ ಹಿಂದೆಯಂತೂ ಅವುಗಳ ಹೆಸರನ್ನೇ ಯಾರೂ ಕೇಳಿರಲಿಲ್ಲ. ಈ ಕ್ಲಿನಿಕ್ ಯಾ ಆಸ್ಪತ್ರೆ ಅಷ್ಟೊಂದು ವೇಗವಾಗಿ ಬೆಳೆಯಲು ಏನು ಕಾರಣ? ಇದರ ಹಿಂದಿನ ಪ್ರೇರಕಶಕ್ತಿ ಯಾರು? ಇವನ್ನೆಲ್ಲ ತಿಳಿದುಕೊಳ್ಳಬೇಕಾದರೆ ನಾವು ವಾಸನ್ ಚರಿತ್ರೆಯಲ್ಲಿ ನಡೆದುಹೋಗಿರುವ ಒಂದಷ್ಟು ಘಟನೆಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ, 2004ರಿಂದ 14ರವರೆಗೆ ನಮ್ಮ ದೇಶವನ್ನು ಆಳಿಹೋದ ಯುಪಿಎ ಸರಕಾರದ ಹತ್ತುಹಲವು ಹಗರಣಗಳ ಪಟ್ಟಿಯಲ್ಲಿ ವಾಸನ್ ಹೆಸರನ್ನೂ ದೊಡ್ಡದಾಗೇ ಬರೆಯಬೇಕಾಗುತ್ತದೆಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಇಡೀ ಕತೆ ಶುರುವಾಗುವುದು 2007ರಲ್ಲಿ.
ತಮಿಳುನಾಡಿನ ತಿರಿಚಿ ಎಂಬ ಸಣ್ಣ ಪಟ್ಟಣದಲ್ಲಿ ಡಾ. ಎ.ಎಮ್. ಅರುಣ್ ಮತ್ತು ಪತ್ನಿ ಮೀರಾ ಜೊತೆಯಾಗಿ 2007ರಲ್ಲಿ ಒಂದು ನೇತ್ರಾಲಯವನ್ನು ಹುಟ್ಟುಹಾಕಿದರು. ಅದೇ “ವಾಸನ್ ಐ ಕೇರ್”. ಪ್ರಾರಂಭವಾದ ಮರುವರ್ಷವೇ ಷೇರು ಮಾರುಕಟ್ಟೆ ಪ್ರವೇಶಿಸಿದ ವಾಸನ್, ನೂರು ರುಪಾಯಿ ಮುಖಬೆಲೆಯ ಷೇರುಗಳನ್ನು ಹರಿಯಬಿಟ್ಟಿತು. ಅದರಲ್ಲಿ ಸುಮಾರು ಮೂರು ಲಕ್ಷ ಷೇರುಗಳನ್ನು ಮುಖಬೆಲೆಯ ದುಪ್ಪಟ್ಟು ದುಡ್ಡು ತೆತ್ತು (ಅಂದರೆ, ಪ್ರತಿ ಷೇರಿಗೆ 200 ರುಪಾಯಿಯಂತೆ) ವಿ.ದ್ವಾರಕಾನಾಥನ್ ಎಂಬವರು 2008ರ ಅಕ್ಟೋಬರ್ 29ರಂದು ಖರೀದಿಸಿದರು. ಇವರು ಮತ್ಯಾರಲ್ಲ; ಅರುಣ್‍ರ ಮಾವ. ಖರೀದಿಸಿದ ಇಪ್ಪತ್ತನಾಲ್ಕು ಗಂಟೆಗಳೊಳಗೇ ಅವರು ಅರ್ಧದಷ್ಟು, ಅಂದರೆ ಒಟ್ಟು ಒಂದೂವರೆ ಲಕ್ಷ ಷೇರುಗಳನ್ನು, ಪ್ರತಿಯೊಂದಕ್ಕೆ ನೂರು ರುಪಾಯಿಯಂತೆ, ಎಡ್ವಾಂಟೇಜ್ ಹೋಲ್ಡಿಂಗ್ಸ್ ಆಂಡ್ ಇನ್ವೆಸ್ಟ್‍ಮೆಂಟ್ಸ್ ಎಂಬ ಕಂಪೆನಿಗೆ ಮಾರಿದರು. ಕೊಡಬೇಕಿದ್ದ ಒಟ್ಟು ಮೊತ್ತ ಒಂದೂವರೆ ಕೋಟಿ ರುಪಾಯಿಗಳನ್ನು ಎಡ್ವಾಂಟೇಜ್ ಕಂಪೆನಿ ತಕ್ಷಣಕ್ಕೇನೂ ಕೊಡಲಿಲ್ಲ. ಒಂದಷ್ಟು ಸಮಯ ಆಗಲಿ, ಆಮೇಲೆ ತೀರಿಸುವೆ ಎಂದಿತು. ಎರಡು ವರ್ಷಗಳ ನಂತರ, 2010ರ ಮಾರ್ಚ್‍ನಲ್ಲಿ ಐವತ್ತು ಲಕ್ಷ ರುಪಾಯಿ ಕೊಟ್ಟಿತು. ಒಂದು ಕೋಟಿ ರುಪಾಯಿಯನ್ನು ಬಾಕಿ ಉಳಿಸಿಕೊಂಡಿತು. ತನ್ನ ಬಳಿಯಿದ್ದ ಒಂದೂವರೆ ಲಕ್ಷ ಷೇರುಗಳಲ್ಲಿ, ಮೂವತ್ತು ಸಾವಿರ ಷೇರುಗಳನ್ನು ಅದು 2010ರ ಅಕ್ಟೋಬರ್ 26ರಂದು, ಪ್ರತಿಯೊಂದಕ್ಕೆ 7500 ರುಪಾಯಿಯಂತೆ ಸಿಕೋಯಾ ಕ್ಯಾಪಿಟಲ್ಸ್ ಎಂಬ ಕಂಪೆನಿಗೆ ಮಾರಾಟ ಮಾಡಿತು. ಇದರಿಂದ ಬಂದ ಒಟ್ಟು ದುಡ್ಡು 22.5 ಕೋಟಿ ರುಪಾಯಿ. ಕೊಂಡದ್ದು ಷೇರೊಂದಕ್ಕೆ ನೂರು ರುಪಾಯಿಯಂತೆ; ಮಾರಿದ್ದು ತಲಾ 7500 ರುಪಾಯಿಗಳಂತೆ. ಅಂದರೆ, 30,000 ಷೇರುಗಳಿಗೆ ಎಡ್ವಾಂಟೇಜ್ ಸಂಸ್ಥೆ 22.2 ಕೋಟಿ ರುಪಾಯಿಗಳಷ್ಟು ನಿವ್ವಳ ಲಾಭ ಮಾಡಿಕೊಂಡಿತು! ಲಾಭ ಮಾಡಿಕೊಳ್ಳುವ ದಾರಿ ಇಲ್ಲಿದೆ ಎಂಬುದನ್ನು ಅತ್ಯಂತ ಸುಲಭವಾಗಿ ಗುರುತಿಸಿದ್ದ ಸಂಸ್ಥೆ ಸಿಕ್ಕಿದ ಎಡ್ವಾಂಟೇಜ್‍ಅನ್ನು ಸರಿಯಾಗಿಯೇ ಬಳಸಿಕೊಂಡಿತ್ತು! ಇದೇ ಗಣಿತವನ್ನು ಸ್ವಲ್ಪ ಮುಂದುವರಿಸಿದರೆ ನಿಮಗೆ ಈ ಲೆಕ್ಕ ಸಿಗುತ್ತದೆ: ಎಡ್ವಾಂಟೇಜ್ ಸಂಸ್ಥೆಯ ಬಳಿಯಿದ್ದ ಒಟ್ಟು ಷೇರುಗಳು: ಒಂದೂವರೆ ಲಕ್ಷ. ಪ್ರತಿಯೊಂದನ್ನೂ ಏಳೂವರೆ ಸಾವಿರ ರುಪಾಯಿಗಳಿಗೆ ಮಾರಿದರೆ, ಅದರ ತಿಜೋರಿಗೆ ಬಂದುಬೀಳಲಿದ್ದ ದುಡ್ಡು 112.5 ಕೋಟಿ ರುಪಾಯಿ. ಒಂದೂವರೆ ಕೋಟಿ ರುಪಾಯಿಯ ಬಂಡವಾಳಕ್ಕೆ ಇದಕ್ಕಿಂತ ಉತ್ತಮ ರಿಟನ್ರ್ಸ್ ಎಲ್ಲಿ ಸಿಕ್ಕೀತು!
ಇದಿಷ್ಟು ಕತೆ ಅರ್ಥವಾದರೆ ಮುಂದಿನ ಹಂತಕ್ಕೆ ಬನ್ನಿ. ಎಡ್ವಾಂಟೇಜ್ ಎಂಬುದು ಮೂಲತಃ ಆಗಿನ ಯುಪಿಎ ಸರಕಾರದ ವಿತ್ತಸಚಿವರಾಗಿದ್ದ ಪಿ. ಚಿದಂಬರಂ ಅವರ ಒಂದು ಬೇನಾಮಿ ಕಂಪೆನಿ! ಅದರ ಬೋರ್ಡ್ ಆಫ್ ಡೈರೆಕ್ಟರ್ಸ್-ನಲ್ಲಿ ಇದ್ದ ಹೆಸರುಗಳೆಲ್ಲ ಅವರ ಸಂಬಂಧಿಕರವೇ. ಆದರೆ, ಎಲ್ಲೂ ಚಿದಂಬರಂ ಆಗಲೀ ಅವರ ಮಗನ ಹೆಸರಾಗಲೀ ಅಲ್ಲಿರಲಿಲ್ಲ. ಕೆಲವು ತಿಂಗಳಾದ ಮೇಲೆ, ಆಸೋಬ್ರಿಡ್ಜ್ ಎಂಬ ಇನ್ನೊಂದು ಕಂಪೆನಿ ಎಡ್ವಾಂಟೇಜ್ ಬಳಿ ಬಂತು. ತನಗೆ ಈ ಕಂಪೆನಿಯಲ್ಲಿ ಪಾಲುದಾರಿಕೆ ಬೇಕೆಂದು ಕೇಳಿತು. ವಾಸನ್ ಷೇರುಗಳನ್ನು ಗಗನದೆತ್ತರ ಬೆಲೆಗೆ ಮಾರಾಟ ಮಾಡಿ ಕೋಟ್ಯಂತರ ರುಪಾಯಿ ಜೇಬಿಗಿಳಿಸಿಕೊಂಡಿದ್ದ ಎಡ್ವಾಂಟೇಜ್‍ನ ಪ್ರತಿಷ್ಠೆ ಅದಾಗಲೇ ಊಧ್ರ್ವಮುಖಿಯಾಗಿದ್ದರಿಂದ, ಅದರ ಷೇರುಗಳಿಗೂ ಒಳ್ಳೆಯ ಬೆಲೆ ಬಂದಿತ್ತು. ಹೊರಗೆ ಮಾರುಕಟ್ಟೆಯಲ್ಲಿ ಅದರ ಪ್ರತಿ ಷೇರಿಗೆ 1220 ರುಪಾಯಿ ನಡೆಯುತ್ತಿತ್ತು. ಆದರೆ, ಆಸೋಬ್ರಿಡ್ಜ್ ಪ್ರತಿ ಷೇರನ್ನು ಕೊಂಡದ್ದು ಎಷ್ಟಕ್ಕೆ ಗೊತ್ತೆ? ಕೇವಲ ಹದಿನೈದು ರುಪಾಯಿಗೆ! ಅದರಲ್ಲೂ, ಎರಡೂವರೆ ರುಪಾಯಿ ಮಾತ್ರ ಕೊಟ್ಟು, ಮಿಕ್ಕ ದುಡ್ಡು ಆಮೇಲೆ ಕೊಡುತ್ತೇನೆ ಎಂಬ ಒಡಂಬಡಿಕೆಯೊಂದಿಗೆ. ಆದರೂ, ಎಡ್ವಾಂಟೇಜ್ ಮರುಮಾತಿಲ್ಲದೆ ತಲೆಯಾಡಿಸಿತು. ಯಾಕೆಂದರೆ ಎರಡೂ ಸಂಸ್ಥೆಗಳ ಮಾಲಿಕ ಮೂಲತಃ ಒಬ್ಬನೇ ಆಗಿದ್ದನಲ್ಲ! ಹೀಗೆ ಕೇವಲ ಐದುಲಕ್ಷ ರುಪಾಯಿ ಎಸೆದು ಚಿದಂಬರಂ ಕುಟುಂಬ, ಎಡ್ವಾಂಟೇಜ್ ಕಂಪೆನಿಯ ಒಟ್ಟು 18 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ತನ್ನ ಬುಟ್ಟಿಗಿಳಿಸಿಕೊಂಡಿತು. ಅನಾಯಾಸವಾಗಿ ಎಡ್ವಾಂಟೇಜ್‍ನ ಮೂರನೇ ಎರಡರಷ್ಟು ಪಾಲುದಾರಿಕೆ ಆಸೋಬ್ರಿಡ್ಜ್‍ನದ್ದಾಯಿತು. ಅಂದಹಾಗೆ ಆಸೋಬ್ರಿಡ್ಜ್‍ನ ಸಿಇಓ ಕುರ್ಚಿಯಲ್ಲಿ ಕೂತಿದ್ದವನು ಚಿದಂಬರಂ ಪುತ್ರರತ್ನ ಕಾರ್ತಿ. ಬೆರಳಿನ ಉಗುರು ಕಂಡರೂ ಸಾಕು, ಇಡೀ ಹಸ್ತವನ್ನು ನುಂಗಿ ನೀರುಕುಡಿಯಬಲ್ಲ ಚಾಣಾಕ್ಷನೀತ!
ಇದು ಒಂದು ಬದಿಯ ಕತೆಯಾದರೆ, ಇನ್ನೊಂದು ಕಡೆಯಲ್ಲಿ ಜೆ.ಡಿ. ಗ್ರೂಪ್ ಎಂಬ ಕಂಪೆನಿ ವಾಸನ್ ಐ ಕೇರ್‍ಗೆ ಸಾಲ ಕೊಟ್ಟಿತ್ತು. 8.14 ಕೋಟಿ ರುಪಾಯಿಗಳನ್ನು ಚೆಕ್ ಮೂಲಕ ಕೊಟ್ಟು, ಇದಕ್ಕೆ ನೀವು ಬಡ್ಡಿಯೇನೂ ಕಟ್ಟುವುದು ಬೇಡ ಎಂದು ಜೆ.ಡಿ. ಗ್ರೂಪ್‍ನವರು ಉದಾರತೆ ಮೆರೆದಿದ್ದರು. ಚೆಕ್ ಕೊಟ್ಟ ದಿನವೇ ಒಟ್ಟು ನಲವತ್ತು ಕೋಟಿ ರುಪಾಯಿಗಳನ್ನು ನಗದು ರೂಪದಲ್ಲಿ ವಾಸನ್ ಉಡಿಗೆ ಸುರಿದಿದ್ದರು. ಅಂದರೆ ಒಂದೇ ದಿನದಲ್ಲಿ 48 ಕೋಟಿಗೂ ಮಿಗಿಲಾದ ದುಡ್ಡು ವಾಸನ್‍ಗೆ ಬಂದಿತ್ತು. ಬಂದ ದುಡ್ಡು ಬಂದ ಹಾಗೆಯೇ ಚಿದಂಬರಂ ಕುಟುಂಬಕ್ಕೆ ಹೋಗಿತ್ತು. ವಾರ್ಷಿಕ ಲೆಕ್ಕಪತ್ರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ತೆರಿಗೆ ಅಧಿಕಾರಿ ಶ್ರೀನಿವಾಸ ರಾವ್ ಎಂಬವರು ಈ ವಿತ್ತವ್ಯತ್ಯಯವನ್ನು ಪತ್ತೆ ಹಚ್ಚಿ ವಾಸನ್‍ನವರಲ್ಲಿ ಪ್ರಶ್ನಿಸಿದರು. ಜೆ.ಡಿ. ಗ್ರೂಪ್ ಯಾರದ್ದು? ಅದಕ್ಕೂ ನಿಮಗೂ ಏನು ಸಂಬಂಧ? ಬಡ್ಡಿ ಇಲ್ಲದೆ ಸಾಲ ಕೊಡುವಷ್ಟು, 40 ಕೋಟಿ ರುಪಾಯಿ ನಗದು ದುಡ್ಡನ್ನು ಉಡಿಗೆ ಹಾಕುವಷ್ಟು ಅವರಿಗೆ ನಿಮ್ಮಲ್ಲಿ ಸಲಿಗೆ ಯಾಕೆ? ಹಾಗೆ ಬಂದ ದುಡ್ಡನ್ನು ನೀವು ನೇರವಾಗಿ ಚಿದಂಬರಂ ಕೈಗೆ ಕೊಡಲು ಕಾರಣವೇನು? ಲೆಕ್ಕಪಕ್ಕವಿಲ್ಲದ ಕಾಳಧನವನ್ನು ಬಿಳಿ ಮಾಡುವ ವ್ಯವಹಾರದಲ್ಲಿ ನೀವು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿಲ್ಲವೆಂದು ಹೇಗೆ ನಂಬುವುದು? ಹೀಗೆ ಬಾಣದ ಮೇಲೊಂದು ಬಾಣ ತೆರಿಗೆ ಅಧಿಕಾರಿಯಿಂದ ಬರತೊಡಗಿದವು. ಮಹಾಕಂಟಕದ ವಾಸನೆ ವಾಸನ್‍ಗೆ ಬಹುಬೇಗ ತಟ್ಟಿತು. ಅದು ಕೂಡಲೇ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಸಂಸ್ಥೆಯ ಬಾಗಿಲು ತಟ್ಟಿತು. ಹೇಗಾದರೂ ಈ ಪ್ರಾಣಕಂಟಕನನ್ನು ಗಡೀಪಾರು ಮಾಡಿ; ಇಲ್ಲವಾದರೆ ನಾವು ನೀವು ಎಲ್ಲರೂ ಬಹುದೊಡ್ಡ ಸಂಕಟದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಯುಂಟು ಎಂದು ಅಪಾಯದ ಮುನ್ಸೂಚನೆ ಕೊಟ್ಟಿತು. ತಕ್ಷಣ ಎಚ್ಚೆತ್ತ ಸಿಬಿಡಿಟಿ ಅಧಿಕಾರಿಗಳು ಪ್ರಾಮಾಣಿಕ ಶ್ರೀನಿವಾಸ ರಾಯರನ್ನು ನೀರು-ನೆರಳಿಲ್ಲದ ಜಾಗಕ್ಕೆ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದರು. ರಾಯರು ಧೃತಿಗೆಡಲಿಲ್ಲ. ನೀನಲ್ಲವಾದರೆ ನಿನ್ನಪ್ಪ ಎಂಬ ಈ ಘಾಟಿಮನುಷ್ಯ ದೆಹಲಿಯಲ್ಲಿರುವ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ (ಕ್ಯಾಟ್) ಎಂಬ ಸರಕಾರೀ ಸಂಸ್ಥೆಗೆ ಅರ್ಜಿ ಸಲ್ಲಿಸಿ ತನಗಾಗಿರುವ ಅನ್ಯಾಯದ ಬಗ್ಗೆ ವಿಸ್ತøತವಾದ ವರದಿ ಕೊಟ್ಟರು. ತನ್ನನ್ನು ದ್ವೇಷದ ಒಂದೇ ಕಾರಣದಿಂದ, ಶಿಕ್ಷೆಯೆಂಬಂತೆ ವರ್ಗಾವಣೆ ಮಾಡಲಾಗಿದೆ. ಇದನ್ನು ಕೂಡಲೇ ರದ್ದುಪಡಿಸಿ ನನಗೆ ನನ್ನ ಕರ್ತವ್ಯವನ್ನು ಸಾಂಗವಾಗಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಬೇಡಿಕೆ ಇಟ್ಟರು. ದಟ್ಟವಾದ ಭ್ರಷ್ಟಾಚಾರದ ವಾಸನೆ ಹಿಡಿದ ಕ್ಯಾಟ್ ಅಧಿಕಾರಿಗಳು ವಾಸನ್ ಸಂಸ್ಥೆಯ ಜನ್ಮ ಜಾಲಾಡತೊಡಗಿದ ಮೇಲೆ, ಅವರಿಗೆ ಗೊತ್ತಾದದ್ದು ಇದು: ಜೆ.ಡಿ. ಗ್ರೂಪ್‍ನಿಂದ ವಾಸನ್‍ಗೆ, ಮತ್ತು ಅಲ್ಲಿಂದ ಚಿದಂಬರಂ ಕಿಸೆಗೆ ಸಂದಾಯವಾದ ನಗದುಮೊತ್ತ 40 ಕೋಟಿ ಮಾತ್ರವಲ್ಲ; ಬರೋಬ್ಬರಿ 223 ಕೋಟಿ ರುಪಾಯಿ!
ಕುತೂಹಲಗೊಂಡ ಅಧಿಕಾರಿಗಳು ವಾಸನ್ ನೇತ್ರಾಲಯದ ಇತಿಹಾಸದ ಅಧ್ಯಯನಕ್ಕೆ ಕೂತುಬಿಟ್ಟರು. 2007ರಲ್ಲಿ ಪ್ರಾರಂಭವಾಗಿದ್ದ ಈ ನೇತ್ರಾಲಯ, ಮೊದಲ ವರ್ಷದಲ್ಲಿ ಅಷ್ಟೇನೂ ದೊಡ್ಡ ಸಾಧನೆ ಮೆರೆದಿರಲಿಲ್ಲ. ಆದರೆ, 2008ರಲ್ಲಿ ಚಿದಂಬರಂ ಪುತ್ರ ಕಾರ್ತಿಯ ಸಂಪರ್ಕಕ್ಕೆ ಬಂದ ಮೇಲೆ ಅದರಲ್ಲಿ ಅಗಾಧ ಬದಲಾವಣೆಗಳಾಗಿದ್ದವು. ಆತನ ಜೊತೆಗೆ ದುಡ್ಡಿನ ವ್ಯವಹಾರವಾದ ಕೇವಲ 90 ದಿನಗಳಲ್ಲೇ ವಾಸನ್‍ಗೆ ಮಾರಿಷಸ್ ಮೂಲದ ಕಂಪೆನಿಯೊಂದರಿಂದ 50 ಕೋಟಿ ರುಪಾಯಿ ಬಂಡವಾಳ ಹರಿದುಬಂದಿತ್ತು. ವಾಸನ್‍ನ ಮುಖ್ಯ ಕಚೇರಿ ತಿರಿಚಿಯಿಂದ ಚೆನ್ನೈಗೆ ಸ್ಥಳಾಂತರಗೊಂಡಿತ್ತು. ಒಂದೇ ವರ್ಷದಲ್ಲಿ ಇಪ್ಪತ್ತೈದು ಬ್ರಾಂಚ್‍ಗಳು ತೆರೆದವು. 2008-09ರಲ್ಲಿ ಅದರ ಒಟ್ಟು ವ್ಯವಹಾರ 13 ಕೋಟಿ ಇತ್ತು; ಮರುವರ್ಷ 16 ಕೋಟಿಯಾಯಿತು. 2010-11ರಲ್ಲಿ, ನಂಬಿದರೆ ನಂಬಿ, 311 ಕೋಟಿಗಳಾದವು! ಅಂದರೆ, ಕಾರ್ತಿಯ ಕೃಪೆಯಿಂದ ವಾಸನ್‍ನ ಅದೃಷ್ಟ ಖುಲಾಯಿಸಿ, ವ್ಯವಹಾರದಲ್ಲಿ 20 ಪಟ್ಟು ಅಭಿವೃದ್ಧಿ ಕಾಣಿಸಿತು. 2011-12ರಲ್ಲಿ ವಾರ್ಷಿಕ ಆದಾಯ 462 ಕೋಟಿ ರುಪಾಯಿಗಳನ್ನು ಮುಟ್ಟಿತು. ಅದರ ಮರುವರ್ಷ 604 ಕೋಟಿ ರುಪಾಯಿಯಾಯಿತು! 2014ರ ಪ್ರಾರಂಭಕ್ಕೆ ಈ ನೇತ್ರಾಲಯದ ಒಟ್ಟು ಮೌಲ್ಯ 5,500 ಕೋಟಿ ರುಪಾಯಿ ಎಂದು “ಇಂಡಿಯಾ ರೇಟಿಂಗ್ಸ್ ಆಂಡ್ ರೀಸರ್ಚ್” ಕಂಪೆನಿ ಲೆಕ್ಕಹಾಕಿತು. ಇದೇ ಲೆಕ್ಕಾಚಾರದ ಆಧಾರದ ಮೇಲೆ, ವಾಸನ್, 2014ರ ಮೇನಲ್ಲಿ 7000 ಕೋಟಿ ರುಪಾಯಿಗೆ ಬಿಡ್ ಮಾಡಿ ಕಂಪೆನಿ ಖರೀದಿಸುವವರಿದ್ದಾರೆಯೇ ಎಂಬ ತಲಾಶೆಗೆ ಇಳಿದಿತ್ತು. ಅಂಥ ಬಕರಾ ಒಬ್ಬ ಸಿಕ್ಕರೆ ಅವನ ತಲೆಗೆ ಟೋಪಿ ಹಾಕಿ ದುಡ್ಡನ್ನು ಜೇಬಿಗಿಳಿಸಿಕೊಳ್ಳುವ ಹಂಚಿಕೆಯಲ್ಲಿದ್ದರು ಎಲ್ಲರೂ. ಆದರೆ, ಅದೇ ತಿಂಗಳಲ್ಲಿ ಹೊರಬಿದ್ದ ಫಲಿತಾಂಶ ಬಿಜೆಪಿ ಪರವಾಗಿ ಬಂದು, ಕಾಂಗ್ರೆಸ್ ಮಕಾಡೆ ಮಲಗಿದ್ದರಿಂದಲೋ ಏನೋ, ವಾಸನ್ ಐ ಕೇರ್ ಕನಸುಗಳೆಲ್ಲ ನುಚ್ಚುನೂರಾದವು.
ವಾಸನ್ ಐ ಕೇರ್ ಚಿದಂಬರಂ ಕುಟುಂಬದ ಬೇನಾಮಿ ಕಂಪೆನಿ ಎಂಬುದು ತೆರಿಗೆ ಅಧಿಕಾರಿ ಶ್ರೀನಿವಾಸ ರಾವ್ ಅವರ ಬಿಚ್ಚುನುಡಿ. ಇದರ ಇಪ್ಪತ್ತೈದನೆಯ ಬ್ರಾಂಚ್ ತೆರೆಯಲು ಚಿದಂಬರಂ ಬಂದಿದ್ದರು. ನೂರನೇ ಶಾಖೆಯನ್ನು ಕಾರೈಕುಡಿಯಲ್ಲಿ ತೆರೆದಾಗ ಅದರ ಉದ್ಘಾಟನೆಗೆ ತಮಿಳುನಾಡಿನ ರಾಜ್ಯಪಾಲ ರೋಸಯ್ಯ, ವಿತ್ತಸಚಿವ ಚಿದಂಬರಂ ಮಾತ್ರವೇಕೆ, ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹಾಜರಿದ್ದರು! ವಾಸನ್ ಐ ಕೇರ್ ಸಂಸ್ಥೆ ತನ್ನ ವೆಬ್‍ಪುಟದಲ್ಲಿ, ಆರ್‍ಬಿಐ, ಎಸ್‍ಬಿಐ, ದೂರದರ್ಶನ, ಬಿಎಸ್‍ಎನ್‍ಎಲ್, ಏರ್ ಇಂಡಿಯಾ, ಆಲ್ ಇಂಡಿಯಾ ರೇಡಿಯೋ, ಏರ್‍ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯಾ ಮುಂತಾದ ಒಟ್ಟು 34 ಸರಕಾರೀ ಸಂಸ್ಥೆಗಳು ತನ್ನ ಸಹಭಾಗಿತ್ವ ಹೊಂದಿವೆ ಎಂದು ಬರೆದುಕೊಂಡಿದೆ. ಅಂದರೆ ಇಲ್ಲೆಲ್ಲ ಒಂದೋ ಉಚಿತವಾಗಿ ಇಲ್ಲವೇ ಅತ್ಯಂತ ರಿಯಾಯಿತಿ ದರದಲ್ಲಿ ವಾಸನ್ ತನ್ನ ಜಾಹೀರಾತು ಪ್ರಚುರಪಡಿಸಿಕೊಳ್ಳುತ್ತಿತ್ತು ಎಂದು ಅರ್ಥ ಮಾಡಿಕೊಳ್ಳಬಹುದು. ಯುಪಿಎ ಸರಕಾರದ ಪತನದ ನಂತರ, ಸುಮಾರು ಒಂದೂವರೆ ವರ್ಷಗಳಾದರೂ ವಾಸನ್ ಹಣಕಾಸು ಲೆಕ್ಕಪತ್ರಗಳನ್ನು ಆಡಿಟ್ ವಿಭಾಗಕ್ಕೆ ಸಲ್ಲಿಸಿಲ್ಲ. ವಿದೇಶೀ ಮೂಲಗಳಿಂದ ನೂರಾರು ಕೋಟಿ ರುಪಾಯಿ ಬಂಡವಾಳ ಪಡೆದಿರುವ ಕಂಪೆನಿ ಇಂಥದೊಂದು ಗಂಭೀರ ಲೋಪ ಎಸೆಯಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅದೂ ಅಲ್ಲದೆ, ವಾಸನ್ ಕಳೆದ ಎರಡು ವರ್ಷಗಳಲ್ಲಿ ಮೂಲದಲ್ಲಿ ತೆರಿಗೆ ಹಿಡಿದಿಡುವ (ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್ – ಟಿ.ಡಿ.ಎಸ್.) ಕ್ರಮ ಅನುಸರಿಸುತ್ತಿದ್ದರೂ ಹಾಗೆ ಸಂಗ್ರಹಿಸಿದ ಒಟ್ಟು 19.22 ಕೋಟಿ ರುಪಾಯಿಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸಿಲ್ಲ. ಈ ಘನವಾದ ಅಚಾತುರ್ಯಕ್ಕೆ ತೆರಬೇಕಾಗುವ ಬೆಲೆ ಬಹುದೊಡ್ಡದು. ಆರೋಪ ಸಾಬೀತಾದರೆ ಆ ಕ್ಷಣವೇ ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಿ ಜೈಲಿಗಟ್ಟುವ ಅವಕಾಶ ಕಾನೂನಲ್ಲಿದೆ.
ಬುದ್ಧಿವಂತರು ಚಾಪೆಯಡಿ ತೂರಿದರೆ ಅತಿಬುದ್ಧಿವಂತರು ರಂಗೋಲಿಯಡಿ ತೂರುತ್ತಾರೆಂಬ ಮಾತುಗಳನ್ನು ಕೇಳಿದ್ದೆವಷ್ಟೆ. ಈಗ ವಾಸನ್ ಕರ್ಮಕಾಂಡವನ್ನು ಬಗೆಯುತ್ತಾಹೋದಾಗ, ಹಾಗೆ ರಂಗೋಲಿಯಡಿ ತೂರುವ ಚಾಣಾಕ್ಷರು ವಾಸ್ತವಜಗತ್ತಿನಲ್ಲಿ ಇದ್ದಾರೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವಾಸನ್ ಐ ಕೇರ್ ಪ್ರಕರಣ ಹುಟ್ಟಿಸುವ ಸಂಶಯಗಳು ಹಲವು: ಜೆ.ಡಿ. ಗ್ರೂಪ್ ಎನ್ನುವ ಕಂಪೆನಿಯ ಹಿನ್ನೆಲೆ ಏನು? ಹವಾಲಾ ದುಡ್ಡನ್ನು ಕೈಯಿಂದ ಕೈಗೆ ಸಾಗಿಸುವ ಕೆಲಸ ಇಲ್ಲಿ ನಡೆಯುತ್ತಿರಬಹುದೆ? ವಾಸನ್‍ಗೆ ಐವತ್ತು-ನೂರು ಕೋಟಿ ರುಪಾಯಿಗಳ ಬಂಡವಾಳ ಹರಿಸುವ ಮಾರಿಷಸ್ ಹೂಡಿಕೆದಾರರ ಹಿನ್ನೆಲೆ ಏನು? ಆಸೋಬ್ರಿಡ್ಜ್‍ನಿಂದ ದುಡ್ಡೆತ್ತಿ ಸಿಂಗಾಪೂರ್, ಮಾರಿಷಸ್ ಮುಂತಾದೆಡೆ ಬೇರೆ ಉದ್ದಿಮೆಗಳಲ್ಲಿ ಹೂಡಲಾಗಿದೆ. ಇದು ತೆರಿಗೆ ವಂಚನೆಯ ಭಾಗವಾಗಿರಬಹುದೆ? ವಾಸನ್ ಐ ಕೇರ್ ಮತ್ತು ಎಡ್ವಾಂಟೇಜ್ ಸಂಸ್ಥೆಗಳ ಷೇರುಗಳನ್ನು ತಮಗೆ ಬೇಕೆಂದಾಗ ಹೆಚ್ಚು-ಕಡಿಮೆ ಮಾಡುವ ಕೆಲಸವನ್ನು ಕಾರ್ತಿ, ವಿತ್ತಸಚಿವರ ಮೂಲಕ ಮಾಡಿಸುತ್ತಿದ್ದರೆ? ವಾಸನ್ ಐ ಕೇರ್‍ನ ಸುತ್ತಮುತ್ತ ತಿರುಗುತ್ತಿರುವ ಈ ಹಗರಣದಲ್ಲಿ ಒಟ್ಟು ಕೈಬದಲಾಗಿರುವ ದುಡ್ಡಿನ ಪ್ರಮಾಣ ಎಷ್ಟು? ಯಾವ ಕೋನದಿಂದ ಅಳೆದರೂ ಇದು ಸರಿಸುಮಾರು ಐದು ಸಾವಿರ ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಹಗರಣವಾಗಿ ಕಾಣಿಸುತ್ತಿದೆ. ಈಗಿನ ವಿತ್ತಸಚಿವ ಅರುಣ್ ಜೇಟ್ಲಿ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೋ ಇಲ್ಲ ತಾನೂ “ಐ ಡೋಂಟ್ ಕೇರ್” ಎಂದು ಉದಾಸೀನದಿಂದ ಬದಿಗಿಟ್ಟುಬಿಡುತ್ತಾರೋ, ಕಾದು ನೋಡಬೇಕು.
ರಾಭರ್ಟ್ ವಾದ್ರಾ “ಹಗರಣ” ಗಳನ್ನ ಈ ಸರ್ಕಾರ ಏನು ಮಾಡುತ್ತಿದೆ ಗೊತ್ತೇ ಇದೆಯಲ್ಲ…..
ಪಾಪ ಆತ ಯಾವ ಜೈಲಲ್ಲಿ ರಾಗಿ ಬೀಸ್ತಾ ಇದಾನೋ..
..
Infact, detailed investigation is to be conducted here, so that the watch dog is giving a alarming call.
ಇಡೀ ದೇಶವನ್ನೇ ಹಾಳು ಮಾಡುತ್ತಿರುವ ದೇಶದ್ರೋಹಿಗಳ ಪಟ್ಟಿಯಲ್ಲಿ ಇದೊಂದು ಸೇರಿದೆ ಎಂದಾಯಿತು.
ಕೆನರಾ ಬ್ಯಾಂಕಿನ ಲೋಗೋ ಬದಲಾವಣೆಯಲ್ಲೂ ಮಾನ್ಯ ಚಿದಂಬರಂ &ಕಂ. ಬಹಳ ಹಣ ಬಾಚಿದ್ದ ಸುದ್ದಿ ಇತ್ತಲ್ಲ? ಅದೇನಾಯಿತೋ? ಈಗ ಇನ್ನೊಂದು ..