ಪರೀಕ್ಷೆಯ ಲೆಕ್ಕಾಚಾರ
– ನಾಗೇಶ ಮೈಸೂರು
ಒಲ್ಲದ ಮನಸ್ಸಿನಿಂದ ಪುಸ್ತಕ ಹಿಡಿದು ಪರೀಕ್ಷೆಗೆ ಓದಿಕೊಳ್ಳಲು ಒದ್ದಾಡುತ್ತಿದ್ದ ಮಗನನ್ನು ಸಾಮ, ದಾನ, ದಂಡ, ಭೇಧೋಪಾಯಗಳೆಲ್ಲದರ ಬಳಕೆ ಮಾಡುತ್ತ ಸಿದ್ಧಗೊಳಿಸಲು ಹೆಣಗಾಡುತ್ತಾ ಕುಳಿತಿದ್ದೆ. ಅದೇ ಹೊತ್ತಿನಲ್ಲಿ ಟೀವಿಯಲ್ಲಿ ಪ್ರವೇಶ ಪರೀಕ್ಷೆಯ ನಂತರದ ಸವಾಲು, ಮತ್ತದನ್ನೆದುರಿಸುವ ಬಗೆಯನ್ನು ಕುರಿತು ಆತಂಕಪೂರ್ಣ ಚರ್ಚೆ ನಡೆಯುತ್ತಾ ಇತ್ತು. ಒಂದು ಕಾಲದಲ್ಲಿ ನಾವೂ ಇದನ್ನೆಲ್ಲಾ ಅನುಭವಿಸಿ ಮುಂದೆ ಸಾಗಿದ್ದವರೇ. ಆದರೆ ಆ ದಿನದಲ್ಲಿ ಕಾಡಿದ್ದ ಅದೆಷ್ಟೋ ಆತಂಕ, ಒತ್ತಡಗಳು ಕೇವಲ ಆತಂಕ, ಅಜ್ಞಾನ, ನಿಖರ ಗಮ್ಯವಿಲ್ಲದ ಒದ್ದಾಟಗಳ ಕಾರಣದಿಂದ ಉಂಟಾದದ್ದು. ಇಂದು ತಿರುಗಿ ನೋಡಿದರೆ ನಾನು ಓದಿದ್ದಕ್ಕೂ, ಮಾಡುತ್ತಿರುವ ಕೆಲಸಕ್ಕೂ ನೇರ ಸಂಬಂಧವೇ ಇಲ್ಲ. ವಿದ್ಯಾರ್ಹತೆ ಕೇವಲ ಕೆಲಸ ಗಿಟ್ಟಿಸುವ ಆರಂಭದ ರಹದಾರಿಯಾಯ್ತೆಂಬುದನ್ನು ಬಿಟ್ಟರೆ ಮಿಕ್ಕೆಲ್ಲಾ ಹೊಸ ಹೋರಾಟ, ಪರೀಕ್ಷೆಗಳೇ ಎದುರಾದದ್ದು ವಾಸ್ತವ ಸತ್ಯ. ನಮ್ಮ ವಿದ್ಯಾರ್ಹತೆ, ವಿದ್ಯಾಭ್ಯಾಸ ಆ ಹೋರಾಟಕ್ಕೆ ನಮ್ಮನ್ನು ಸಿದ್ದಪಡಿಸಿರಲೇ ಇಲ್ಲ. ಆದರೂ ನಾವು ಅದೇ ಮರೀಚಿಕೆಯ ಹಿಂದೆ ನಮ್ಮ ಭವಿಷ್ಯದ ಪೀಳಿಗೆಯನ್ನು ತಳ್ಳುತ್ತ ಕುರಿಮಂದೆಗಳ ಹಾಗೆ ಸಾಗುತ್ತಿದ್ದೇವಲ್ಲ ಎಂದೆನಿಸಿ ಖೇದವೂ ಆಯ್ತು.
ಪ್ರತಿಯೊಬ್ಬ ತಂದೆ ತಾಯಿಯರಲ್ಲೂ (ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಲ್ಲಿ) ಈ ಪರೀಕ್ಷೆ ಅನ್ನುವ ಭೂತ ಕಾಡುವ ಪರಿ ಅನನ್ಯ. ಅಲ್ಲಿನ ಸಾಧನೆ ಮತ್ತು ಗಳಿಕೆಯ ಅಂಕಗಳೇ ಮುಂದಿನೆಲ್ಲಾ ಹಂತಕ್ಕೂ ಮಾನದಂಡವಾಗಿ ಬಿಡುವುದರಿಂದ ಅದು ಮಕ್ಕಳಲ್ಲಿ ಹುಟ್ಟಿಸುವ ಉದ್ವೇಗ, ಆತಂಕವೂ ಅಳತೆ ಮೀರಿದ ವ್ಯಾಪ್ತಿಯದು. ಈ ಶ್ರೇಣಿ ಅಂಕಗಳೇ ಜೀವನದ ಅಂತಿಮ ಗಮ್ಯ ಅನ್ನುವಷ್ಟರ ಮಟ್ಟಿಗೆ ಭ್ರಮೆ ಹುಟ್ಟಿಸಿ ಎಲ್ಲರನ್ನು ಆ ಒಂದು ಹುಸಿ ಗಮ್ಯದ ಹಿಂದೆ ಓಡಿಸಿಬಿಡುತ್ತವೆ – ಸದಾ ಬೆನ್ನಟ್ಟುತ್ತಾ ನಡೆಯುವ ಹಾಗೆ. ವಿದ್ಯಾರ್ಥಿ ಜೀವನ ಭವಿಷ್ಯದ ಜೀವನಕ್ಕೆ ಸಿದ್ದ ಮಾಡುವ ಕಲಿಕೆಯ ವೇದಿಕೆಯಾಗದೆ ಅಂಕಗಳಿಕೆ ಸ್ಪರ್ಧೆಯ ಪಂಥವಾಗಿ ಪರಿಣಮಿಸುವುದು ಈಗ ಎಲ್ಲೆಡೆ ಕಾಣುವ ಸತ್ಯ. ವಿಷಾದವೆಂದರೆ ಸಾಮಾಜಿಕ ಪರಿಸರದಲ್ಲಿ ಬದುಕುವ ಜನ ಇದನ್ನು ಒಪ್ಪಲಿ ಬಿಡಲಿ – ಸುತ್ತಲಿನ ಪ್ರಚಲಿತ ಪರಿಸರದ ಒತ್ತಡ ಅವರನ್ನು ಈ ಹಾದಿಯನ್ನೇ ಹಿಡಿದು ಮುನ್ನಡೆಯುವಂತೆ ಪ್ರೇರೇಪಿಸುತ್ತದೆ – ಸಹಮತದಿಂದಲಾದರೂ ಸರಿ, ವಿಧಿಯಿಲ್ಲದೇ ಅನುಕರಿಸಬೇಕಾದ ಅನಿವಾರ್ಯದಿಂದಾದರೂ ಸರಿ. ಹಿಂದಿನ ಕಾಲದಲ್ಲಿದ್ದ, ಗುರುಕುಲದಲ್ಲಿದ್ದು ಜೀವನವೆಂದರೆ ಏನೆಂದು ಮನೆಯಿಂದ ಹೊರಗೆ, ಕಾಡಿನ ಮತ್ತು ಆಶ್ರಮದಂತಹ ಕಠಿಣ ವಾತಾವರಣದಲ್ಲಿ ಕಲಿಯುವ ವ್ಯವಸ್ಥೆ ಈಗ ಇರದ ಕಾರಣ, ಸ್ವಾಭಾವಿಕ ಹಾಗೂ ನೈಸರ್ಗಿಕ ಕಲಿಕೆಯನ್ನು ಹಣ ತೆತ್ತು ಕಲಿಯುವ-ಪಡೆಯುವ ವಾಣಿಜ್ಯೀಕೃತ ಕೃತಕ ಪರಿಸರ ಈಗಿನ ನಾಗರೀಕ ಜೀವನದ ಮಾದರಿ. ಇದು ಪರಿಸ್ಥಿತಿಯ ಒಂದು ಮುಖ.
ಇನ್ನು ಈ ವ್ಯವಸ್ಥೆಯಲ್ಲಿ ಈಜಿಕೊಂಡು ಸಂಭಾಳಿಸಬೇಕಾದ ಮಕ್ಕಳನ್ನು ನೋಡಿದರೆ – ಕೆಲವರು ಈ ಪರಿಸರಕ್ಕೆ ನೀರಿಗೆ ಬಿದ್ದ ಮೀನಿನಷ್ಟೆ ಸಹಜವಾಗಿ ಹೊಂದಿಕೊಳ್ಳಬಲ್ಲ ಸಾಮರ್ಥವಿದ್ದು ಮನಃಪೂರ್ವಕವಾಗಿಯೊ, ಪರಿಶ್ರಮದ ಸಹಾಯದಿಂದಲೋ ಸುಲಲಿತವಾಗಿ ಮುನ್ನಡೆಯುತ್ತಾರೆ. ಸಮಸ್ಯೆ ಅಥವಾ ಪ್ರಶ್ನೆ ಬರುವುದು ಆ ಗುಂಪಿನಲ್ಲಲ್ಲ. ಅದೇ ಮಕ್ಕಳ ಸಮೂಹದಲ್ಲಿ ಮತ್ತೆರಡು ಗುಂಪೂ ಮಿಳಿತವಾಗಿರುತ್ತದೆ. ಮೊದಲನೆಯದು ಆ ಅಂಕಗಳಿಕೆಯ ಸಾಮರ್ಥ್ಯವಿರದ, ಆ ಮಟ್ಟದ ಸ್ಪರ್ಧಾತ್ಮಕ ಜಗದಲ್ಲಿ ಏಗಲಾರದ ದುರ್ಬಲ (ಪ್ರಾಯಶಃ ಅದರಿಂದಲೇ ಕೀಳರಿಮೆಯಿಂದ ಬಳಲುವ ) ಗುಂಪು. ಎರಡನೆಯದು ದುರ್ಬಲವಲ್ಲದಿದ್ದರೂ ಆ ಗುಂಪಿನ ಮಕ್ಕಳು ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ದೈವದತ್ತವಾಗಿ ಪಡೆದೂ ಅಂಕಗಳಿಕೆಯಂತಹ ವ್ಯವಸ್ಥೆಯಲ್ಲಿ ಹಿಂದೆ ಬಿದ್ದಿರುವವರು; ಯಾಕೆಂದರೆ ಅವರ ಕಲಿಕೆಯ ವಿಧಾನ ಮಾಮೂಲಿಗಿಂತ ವಿಭಿನ್ನವಾದದ್ದು. ಸಾಂಪ್ರದಾಯಿಕ ಕಲಿಕೆ, ಪರೀಕ್ಷೆಗಳು ಅವರ ಮನಸ್ಥಿತಿಗೆ ಹೊಂದಾಣಿಕೆಯಾಗುವಂತದ್ದಲ್ಲ. ದುರದೃಷ್ಟವಶಾತ್ ನಮ್ಮ ಶಿಕ್ಷಣದ ವ್ಯವಸ್ಥೆ ಸರಾಸರಿ ವಿದ್ಯಾರ್ಥಿ ಜನಾಂಗದ ಪರಿಗಣನೆಯಿಟ್ಟುಕೊಂಡು ವಿನ್ಯಾಸಗೊಳಿಸಿದ್ದು. ಹೀಗಾಗಿ ಬಹುತೇಕ ‘ಸರಾಸರಿ ವರ್ಗ’ ಇದರಲ್ಲೇ ಹೇಗೊ ಏಗಿ, ಕೊಸರಾಡಿ ಮೇಲೆದ್ದು ಬಂದರೂ ಈ ಮೇಲೆ ಗುರುತಿಸಿದ ಎರಡು ಗುಂಪುಗಳು ಹೊಂದಿಕೊಳ್ಳಲಾಗದ ಒದ್ದಾಡುತ್ತಲೇ ನರಳುತ್ತವೆ. ಈ ಎರಡು ವರ್ಗಗಳನ್ನು ಹತ್ತಿರದಿಂದ ನೋಡಿ, ಅವರ ಶಕ್ತಿ – ಸಾಮರ್ಥ್ಯ – ಮಿತಿಗಳನ್ನು ಗುರುತಿಸಿ ಅದಕ್ಕೆ ಸರಿಹೊಂದುವ ವಿದ್ಯಾಕ್ರಮದ ಹಾದಿಯಲ್ಲಿ ಅವರನ್ನು ಮುನ್ನಡೆಸುವ ಶಿಕ್ಷಣ ಕ್ರಮ ನಮ್ಮಲ್ಲಿ ಇಲ್ಲ. ಈ ಕಾರಣದಿಂದ ಹೋಲಿಕೆಯಲ್ಲಿ ಈ ಎರಡು ಗುಂಪುಗಳು ಹಿಂದೆ ಬಿದ್ದು ದೂಷಣೆ, ಶೋಷಣೆಗೊಳಗಾಗಿ ನರಳಬೇಕಾಗುತ್ತದೆ. ಕೆಲವರು ಹೇಗೊ ಹೆಣಗಾಡಿ ಬದುಕುತ್ತಾರಾದರೂ , ಮತ್ತೆ ಕೆಲವರು ಕೀಳರಿಮೆಯ ಕಂದರದಲ್ಲಿ ಹಾಗೆ ಮುರುಟಿಹೋಗುತ್ತಾರೆ.
ಗೊತ್ತಿದ್ದೊ ಗೊತ್ತಿಲ್ಲದೆಯೋ ಅಥವಾ ಬೇರೆ ದಾರಿಯಿಲ್ಲದ ಅನಿವಾರ್ಯತೆಯಿಂದಲೋ – ಈ ಎರಡು ಗುಂಪಿನ ಮಕ್ಕಳ ನರಳಿಕೆಗೆ ಕಾರಣಕರ್ತರಾಗುವಲ್ಲಿ ಪೋಷಕರ ಪಾತ್ರ ಗಣನೀಯ. ಸರೀಕರಲ್ಲಿ ತಲೆಯೆತ್ತಿ ನಿಲ್ಲುವ ಮರ್ಯಾದೆಯ ಪ್ರಶ್ನೆಗೊ, ತಂತಮ್ಮ ನಿಜವಾಗದ ಕನಸು ಮಕ್ಕಳಲ್ಲಿಯಾದರೂ ಸಾಕಾರವಾಗಲೆಂಬ ಹುಮ್ಮಸ್ಸಿನಲ್ಲಿಯೋ ಮಕ್ಕಳನ್ನು ವಿಪರೀತ ಒತ್ತಡಕ್ಕೊಳಪಡಿಸಿ ನಿರೀಕ್ಷೆಯ ಗಾಳಿಗೋಪುರ ಕಟ್ಟಿಬಿಡುತ್ತಾರೆ. ಅಲ್ಲೇ ಸಮಸ್ಯೆಯ ಮೂಲವಿರುವುದು – ಆ ಮಕ್ಕಳ ವೈಯಕ್ತಿಕ ಸಾಮರ್ಥ್ಯ, ಪ್ರತಿಭೆ, ಪರಿಮಿತಿ, ತೊಡಕುಗಳ ಗಣನೆಯಿಲ್ಲದೆ ನಡೆಯುವ ಈ ಪ್ರಕ್ರಿಯೆ ಅವರ ಮೇಲೆ ಅಸಾಧಾರಣ ಒತ್ತಡ ಹಾಕಿ ಕಂಗೆಡಿಸಿ ಅಸಮರ್ಥರನ್ನಾಗಿಸಿಬಿಡುವುದು ವಾಸ್ತವದ ಕ್ರೂರತೆ. ಇಷ್ಟೆಲ್ಲಾ ಚಿಂತನೆ ಮನಸ್ಸಿನ ಪಟಲದಲ್ಲಿ ಮೂಡಿದಾಗ ಓದಲು, ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ನಾವು ಹಾಕುತ್ತಿರುವ ಒತ್ತಡ (ಸರಾಸರಿ ಮಕ್ಕಳಲ್ಲೂ ಕೂಡ) ಅರ್ಥರಹಿತವಲ್ಲವೇ ಎನಿಸಿತು. ಆ ಒತ್ತಡದ ಜತೆ ಜತೆಯೇ ಅವರಿಗೆ ಮತ್ತೊಂದು ಸಂದೇಶವನ್ನು ಸತತವಾಗಿ ಕೊಡುತ್ತಲೇ ಇರಬೇಕೆನಿಸಿತು – ಅಂಕ, ಪರೀಕ್ಷೆಗಳೇ ಜೀವನದಂತಿಮ ಗಮ್ಯವಲ್ಲ ಎಂದು. ಅವರಲ್ಲಿ ಆ ನಂಬಿಕೆ ಆತ್ಮವಿಶ್ವಾಸ ಹುಟ್ಟಿದಾಗಲೆ, ಏನೋ ಓದಿ ಯಾರದೋ ಕೈ ಕೆಳಗಿನ ವ್ಯವಸ್ಥೆಯ ಕೊಂಡಿಯೊಂದರ ಕೊಂಡಿಯಾಗಿ ಎಲ್ಲೋ ಕಳೆದುಹೋಗುವುದರ ಬದಲು ತಾವೇ ಆ ರೀತಿಯ ವ್ಯವಸ್ಥೆ ನಿರ್ಮಿಸುವ ಪ್ರಭೃತಿಗಳಾಗಬಹುದು ಎಂಬ ಆತ್ಮವಿಶ್ವಾಸ ಕುದುರುವುದು. ಈಗ ದೊಡ್ಡ ದೊಡ್ಡ ಕಂಪನಿ ಕಟ್ಟಿರುವ ಎಷ್ಟೋ ಮಂದಿ ಒಂದು ಕಾಲದಲ್ಲಿ ಓದು ಬಿಟ್ಟು ತಮ್ಮ ಹುಚ್ಚು ಕನಸಿನ ಬೆನ್ನು ಹತ್ತಿದವರೇ. ನಮ್ಮಲ್ಲೂ ಆ ಪರಿಸರವಿದ್ದರೆ ಅಂತಹ ಸಾಹಸಗಳು ತಾನಾಗೆ ಅರಳುತ್ತವೆ ಅನಿಸಿದರು ಅದಕ್ಕೆ ಸಿದ್ದವಿರುವ ಪಕ್ವ ಮನಸ್ಥಿತಿ ಪೋಷಕರಾದ ನಮಗೇ ಇನ್ನು ಇಲ್ಲವೆನಿಸಿತು. ಕನಿಷ್ಠ ಆ ಕುರಿತು ಯೋಚಿಸುವುದು ಆ ದಿಸೆಯಲ್ಲಿಡಬಹುದಾದ ಮೊದಲ ಹೆಜ್ಜೆಯೆನಿಸಿದಾಗ ಮೂಡಿದ ಭಾವಕ್ಕೆ ಕೊಟ್ಟ ಪದಗಳ ರೂಪ ಈ ಕೆಳಗಿನ ಪದ್ಯ. ಅದು ಭವಿತದ ವಾಸ್ತವದಲ್ಲಿಯಾದರೂ ಸಾಕಾರವಾಗಲಿ ಎನ್ನುವುದು ಆಶಯ.
ನನ್ನ ಮಗ
__________
ಪಾಸಾಗಲಿ ನೀ ನನಗೆ ಮಗನೆ
ಫೇಲಾಗಲಿ ನೀ ನನ್ನ ಮಗನೆ
ಫೇಲುಗಳೆ ಪಾಸಿನ ಜೋಳಿಗೆ
ಹೆದರದೆ ನಡೆ – ಮಗನೆ ನೀ ನನಗೆ ||
ದರ್ಜೆ ಶ್ರೇಣಿ ಉನ್ನತಾಂಕ
ಮೂರನೆ ದರ್ಜೆ ಶೂನ್ಯಾಂಕ
ಸುಲಭವಲ್ಲ ಎರಡೂ ಸಾಧನೆ
ನೀನರಿತರೆ ಸರಿ ಬದುಕೆ ಶೋಧನೆ ||
ನೂರಕೆ ನೂರು ಬರೆದರು ಸರಿ
ಅರೆಬರೆ ಹೆಣಗಾಡಿದರು ಜಾರಿ
ಸೋಲು ಗೆಲುವು ಯುದ್ಧದ ನಿಯಮ
ಆ ಪ್ರಜ್ಞೆಯುದಿಸೆ ಮಿಕ್ಕೆಲ್ಲಾ ಕೊರಮ ||
ಬರಲಿ ಬಿಡಲಿ ಬಹುಮಾನ
ಪಾರಿತೋಷಕಗಳ ಸಮ್ಮಾನ
ಹಿಗ್ಗದೆ ಕುಗ್ಗದೆ ಬದುಕೆ ಕಲಿತರೆ
ಮಗನೆಂಬ ಹೆಮ್ಮೆ ಸಾಕೆನಗೆ ದೊರೆ ||
ಯಶಾಪಯಶ ಪರೀಕ್ಷೆಯ ಸಂತೆ
ಮಾಡಬೇಡ ಭವಿತ ಕೆಲಸದ ಚಿಂತೆ
ಯಾರು ಕೊಡದಿದ್ದರೇನು ಉದ್ಯೋಗ
ನೀನೆ ತುಂಬಿಬಿಡು ಉದ್ಯಮಿಯ ಜಾಗ ||
Trackbacks & Pingbacks