ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 21, 2016

18

ದೆವ್ವಗಳ ಊರಿನಲ್ಲಿ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Kuldhara-Source-musetheplace.com_Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.

ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ.

ಆ ಊರಿನಲ್ಲಿ ಬಾಬಾ ಬಾಲಾನಾಥ್ ಎಂಬ ಸಾಧುವೊಬ್ಬರು ವಾಸವಿದ್ದರಂತೆ. ಅವರ ಮನೆಗಿಂತ ಎತ್ತರದ ಮನೆ ಸುತ್ತ-ಮುತ್ತ ಎಲ್ಲಿಯೂ ಇರಬಾರದು. ಹಾಗೇನಾದರೂ ಯಾರಾದರೂ ಎತ್ತರದ ಮನೆ ಕಟ್ಟಿ ಅದರ ನೆರಳು ತನ್ನ ಮನೆಯ ಮೇಲೆ ಬಿದ್ದ ದಿನವೇ ಈ ಊರು ಪಾಳು ಬೀಳುತ್ತದೆ ಎಂದಿದ್ದರಂತೆ, ಅದನ್ನು ಮೀರಿದ್ದರಿಂದಾಗಿ ಈ ಊರಿಗೆ ಭೂತ ಮೆಟ್ಟಿಕೊಂಡಿದೆಯೆಂಬುದು ಒಂದು ಬದಿಯ ಕತೆ.  ಇನ್ನೊಂದು ಫೇಮಸ್ ವರ್ಶನ್ನಿನ ಪ್ರಕಾರ, ಆ ಊರಿನಲ್ಲಿದ್ದ ದುಷ್ಟ ಮಾಂತ್ರಿಕನಿಗೆ ರಾಜಕುಮಾರಿ ರತ್ನಾವತಿಯ ಮೇಲೆ ಮೋಹವಾಗುತ್ತದೆ. ಒಮ್ಮೆ ರಾಜಕುಮಾರಿ ತನ್ನ ಸಖಿಯರೊಡನೆ ವಿಹಾರಕ್ಕೆಂದು ಬಂದವಳು ಸುಗಂಧ ದ್ರವ್ಯವನ್ನು ಖರೀದಿಸಲು ಹೋಗುತ್ತಾಳೆ. ಆಗ ಈ ಮಾಂತ್ರಿಕ ಸುಗಂಧ ದ್ರವ್ಯದ ಜಾಗದಲ್ಲಿ ಆಕೆಯನ್ನು ವಶೀಕರಣ ಮಾಡಿಕೊಳ್ಳುವ ದ್ರವ್ಯವನ್ನಿರಿಸುತ್ತಾನೆ. ಸ್ವತಃ ತಂತ್ರ ವಿದ್ಯೆಗಳನ್ನು ಬಲ್ಲವಳಾಗಿದ್ದ ರಾಜಕುಮಾರಿ ಆ ದ್ರವ್ಯವನ್ನು ತೆಗೆದುಕೊಂಡು ಎದುರಿಗಿದ್ದ ಬಂಡೆಕಲ್ಲಿಗೆ ಎರಚುತ್ತಾಳೆ. ಮಾಂತ್ರಿಕನ ಮೋಹಕ್ಕೊಳಗಾದ ಬಂಡೆ ಆತನ ಮೇಲೆ ಉರುಳುತ್ತದೆ.ಸಾಯುವ ಮೊದಲು ಆ ಮಾಂತ್ರಿಕ ಈ ಊರು ನಾಶವಾಗಿ ಹೋಗಲಿ ಮತ್ತು ಈ ಕೋಟೆಯ ಒಳಗೆ ಯಾರು ವಾಸ ಮಾಡದಂತಾಗಲಿ ಎಂದು ಶಾಪವಿತ್ತನಂತೆ. ಅದಾಗಿ ಕೆಲವೇ ದಿನಗಳಲ್ಲಿ ಮೊಘಲರು ಈ ಕೋಟೆಯ ಮೇಲೆ ಆಕ್ರಮಣ ಮಾಡಿದ್ದರಂತೆ. ಈಗಲೂ ರಾಜಕುಮಾರಿ ಹಾಗೂ ಮಾಂತ್ರಿಕನ ಆತ್ಮಗಳು ಕೋಟೆಯೊಳಗಿವೆ ಮತ್ತು ರಾತ್ರಿಯ ವೇಳೆ ಅಲ್ಲಿ ಉಳಿಯಲು ಹೋದವರಿಗೆ ಉಳಿಗಾಲವಿಲ್ಲ ಎಂದೇ ಹೇಳಲಾಗುತ್ತದೆ.

ರಾಜಸ್ಥಾನದ ಪ್ರವಾಸಕ್ಕೆ ಹೊರಟಾಗ ಇಂತಹ ಭೂತದ ಕೋಟೆಯನ್ನೂ, ಭೂತಗಳನ್ನೂ ನೋಡುವ ಕಾರ್ಯಕ್ರಮ ನಮ್ಮ ಪಟ್ಟಿಯಲ್ಲಿವಲ್ಲ ಅಂತೊಂದು ಕೊರಗಿತ್ತು ನನಗೆ. ಆದರೆ ಆ ಕೊರಗು ಬೇರೆ ರೀತಿಯಲ್ಲಿ ಪರಿಹಾರವಾಗುತ್ತದೆಂದು ತಿಳಿದಿರಲಿಲ್ಲ. ಜೈಸಲ್ಮೇರಿನ ಮರಳುಗಾಡಿನಲ್ಲಿ ನಾವು ಉಳಿದುಕೊಂಡಿದ್ದ ಜಾಗದ ಮಾಲೀಕನ ಜೊತೆ ರಾತ್ರಿ ಹರಟುತ್ತ, ಇಲ್ಲೇನಾದರೂ ಭೂತಗಳಿರುವ ಸ್ಥಳವಿದೆಯೇ ಅಂತ ಕೇಳಿದೆ. ಒಂದಿಡಿ ಊರೇ ಇದೇ ಸರ್ ! ಕುಲ್ಧರ ಅಂತ ಅದರ ಹೆಸರು. ಜೈಸಲ್ಮೇರಿನಿಂದ ವಾಪಸ್ ಇಲ್ಲಿಗೆ ಬರುವಾಗ ಸಿಗುತ್ತದೆ, ನಾಳೆ ನೋಡಬಹುದು ಎಂದರು.

ಆ ಊರಿನಲ್ಲೇಕೆ ಭೂತಗಳಿವೆ ? ಏನು ಅದರ ಹಿಂದಿನ ಕತೆ ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದೆ. ಕತೆಯನ್ನು ಸಂಕ್ಷಿಪ್ತವಾಗಿ ಹೇಳತೊಡಗಿದರು. ಬಹಳ ಹಿಂದೆ ಆ ಊರಿನ ಕೆಳಜಾತಿಯ ಹುಡುಗನಿಗೂ ಮತ್ತು ಅದೇ ಊರಿನ ಶ್ರೀಮಂತನ ಮಗಳಿಗೂ ಪ್ರೇಮಾಂಕುರವಾಗಿತ್ತು. ಆದರೆ ದುರಾದೃಷ್ಟವಶಾತ್ ಈ ವಿಷಯ ಊರಿನವರಿಗೆ ತಿಳಿದು ಆ ಹುಡುಗನನ್ನು ಕೊಲೆಗೈದರು. ನಂತರ ಆ ಊರಿನಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವಂತೆ. ಇದು ಆ ಹುಡುಗನ ಪ್ರೇತಾತ್ಮದ ಕಾಟ ಎಂದು ಭಾವಿಸಿ ಹೆದರಿದ ಗ್ರಾಮಸ್ಥರು ಊರಿಗೇ ಊರನ್ನೇ ಖಾಲಿ ಮಾಡಿ ಹೊರಟುಹೋದರಂತೆ. ಈಗಲೂ ನೀವು ಪಾಳು ಬಿದ್ದ ಮನೆಗಳನ್ನು ನೋಡಬಹುದು ಎಂದರು. ಸರಿ ಎಂದೆ.

ಸ್ವಲ್ಪ ಸಮಯದ ನಂತರ, ಅಲ್ಲಿಯೇ ಇದ್ದ ಇನ್ನೊಬ್ಬರ ಬಳಿ ಕೇಳಿದಾಗ ಅವರು ಹೆಚ್ಚು ಪ್ರಚಲಿತದಲ್ಲಿರುವ ಮತ್ತೊಂದು ವರ್ಶನ್ ಹೇಳಿದರು. ಹಿಂದೆ ಇದ್ದ ಕುಲ್ಧರ ಎಂಬ ಊರು ಈಗೀನ ಜೈಸಲ್ಮೇರ್ ನಗರಕ್ಕಿಂತಲೂ ದೊಡ್ಡ ಹಾಗೂ ಮುಖ್ಯ ಊರಾಗಿತ್ತಂತೆ. ಆ ಊರಿನಲ್ಲಿದ್ದ ಪಾಲಿವಾಲ್ ಬ್ರಾಹ್ಮಣರು ವ್ಯಾಪಾರ,ಕೃಷಿಯಲ್ಲಿ ಬಹಳ ಮುಂದುವರೆದವರಾಗಿದ್ದು ಯಥೇಚ್ಚವಾದ ಸಂಪತ್ತನ್ನುಗಳಿಸಿಕೊಳ್ಳುತ್ತಾ ಕುಲ್ಧರದ ಊರನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡಿದ್ದವರಂತೆ. ಜೈಸಲ್ಮೇರಿನ ರಾಜ ಇವರಿಗೆ ದುಪ್ಪಟ್ಟು ತೆರಿಗೆ ವಿಧಿಸಿ ಕಿರುಕುಳ ನೀಡುತಿದ್ದ. ಆ ಸಮಸ್ಯೆಯ ಜೊತೆಗೆ ಭೋನಸ್ ಎಂಬಂತೆ, ಆ ರಾಜ್ಯದ ದುರುಳ ಸೇನಾಧಿಪತಿಯ ಕಣ್ಣು ಕುಲ್ಧರ ಊರಿನ ಮುಖ್ಯಸ್ಥನ ಮಗಳ ಮೇಲೆ ಬೀಳುತ್ತದೆ. ನಿಗದಿತ ಗಡುವಿನೊಳಗೆ ನಿಮ್ಮ ಮಗಳನನ್ನು ನನಗೆ ಮದುವೆ ಮಾಡಿಕೊಡಬೇಕು ಇಲ್ಲದಿದ್ದರೆ ನನ್ನ ಕೋಪಕ್ಕೆ ಇಡೀ ಊರು ಗುರಿಯಾಗಬೇಕು ಎಂದು ಧಮಕಿ ಹಾಕಿ ಮರಳಿದ್ದನಂತೆ. ಈ ವಿಷಯವನ್ನು ಗುಪ್ತವಾಗಿ ರಾಜನ ಬಳಿಗೆ ಕೊಂಡೊಯ್ದು ನ್ಯಾಯ ಕೇಳಲಾಯಿತಾದರೂ ದುರ್ಬಲನಾಗಿದ್ದ ರಾಜನಿಗೆ ಸೇನಾಧಿಪತಿಯನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿರಲಿಲ್ಲವಂತೆ. ಚಿಂತೆಗೆ ಬಿದ್ದ ಊರಿನವರೆಲ್ಲಾ ಸಭೆ ಸೇರಿ ಈ ಊರನ್ನು ತೊರೆದು ಹೋಗುವುದೇ ಮಾರ್ಗವೆಂದು ನಿರ್ಧರಿಸಿ ರಾತ್ರೋ ರಾತ್ರಿ ಆದಷ್ಟು ಸಾಮಾನು, ಸರಂಜಾಮು, ಸಂಪತ್ತುಗಳನ್ನೆಲ್ಲ ತುಂಬಿಕೊಂಡು ಹೊರಟರಂತೆ. ಹಾಗೇ ಹೊರಟವರು ನಮ್ಮ ನಂತರ ಈ ಊರಿನಲ್ಲಿ ಯಾರು ಜೀವನ ನಡೆಸದಂತಾಗಿ ಈ ಊರು ಪಾಳು ಬೀಳಲಿ ಎಂದು ಶಾಪವನ್ನೂ ಹಾಕಿ ಜೊತೆಗೆ ತಂತ್ರ ವಿದ್ಯೆಗಳಿಂದ ಆತ್ಮಗಳನ್ನು ಬಿಟ್ಟರಂತೆ. ಆಗಿನಿಂದ ಈ ಊರು ಭೂತಗಳ ಊರಾಗಿ ಪಾಳು ಬಿದ್ದಿದೆಯಂತೆ. ಈಗಲೂ ರಾತ್ರಿ ವೇಳೆ ಅಲ್ಲಿ ಯಾರೂ ಉಳಿಯುವುದಿಲ್ಲ.

ಕತೆಗಳನ್ನು ಕೇಳಿದ ನಂತರ ಈ ಊರನ್ನು ನೋಡಲೇಬೇಕು ಅಂತ ಅಂದುಕೊಂಡೆ. ಮರುದಿನ ಮಧ್ಯಾಹ್ನ ಜೈಸಲ್ಮೇರಿನ ಕೋಟೆ ನೋಡಿಕೊಂಡು ವಾಪಸ್ ಬರುವಾಗ ನಮ್ಮ ಡ್ರೈವರ್ ಅವರಿಗೆ ಕುಲ್ಧರಕ್ಕೆ ಹೋಗೋಣ ಎಂದೆ. ಜೊತೆಗಿದ್ದವರಿಗೇಕೋ ಭೂತಗಳನ್ನು ಭೇಟಿಯಾಗೋ ಮನಸ್ಸಿದ್ದಿರರಲಿಲ್ಲ. ಹಾಗಾಗಿ ಹಲವು ಸುತ್ತಿನ ಚರ್ಚೆಗಳ ನಂತರ ಕಡೆಗೂ ಅಲ್ಲಿಗೆ ಹೋದೆವು. ಭೂತಗಳನ್ನು ಹುಡುಕಿಕೊಂಡು ಬರುವವರು ಹೆಚ್ಚಾಗಿರುವ ಕಾರಣ ರಾಜಸ್ಥಾನ ಸರ್ಕಾರ ಈಗ ಆ ಊರಿನ ದೇವಸ್ಥಾನ ಮತ್ತು ಒಂದೆರಡು ದೊಡ್ಡ ಮನೆಗಳನ್ನು (ಬಹುಶಃ ಊರಿನ ಮುಖ್ಯಸ್ಥರ ಮನೆಗಳಿದ್ದಿರಬಹುದು) ರಿಪೇರಿ ಮಾಡಿದೆ. ಒಂದಷ್ಟು ಕುತೂಹಲ, ಭಂಡ ಧೈರ್ಯ , ಒಂದಷ್ಟು ಅಳುಕಿನಿಂದಲೇ ಊರಿನ ಒಳಕ್ಕೆ ಹೋದೆವು. ಈಗೀನ ಲೇ-ಔಟುಗಳಂತೆ ಪ್ಲಾನ್ ಮಾಡಿ ಇಟ್ಟಿಗೆಯಿಂದ ಕಟ್ಟಲಾಗಿರುವ ಸಾಲು ಮನೆಗಳು. ಚಾವಣಿಗಳೆಲ್ಲಾ ಕಾಲದ ಹೊಡೆತಕ್ಕೆ ಕುಸಿದು ಬಿದ್ದಿದ್ದವಾದರೂ, ಗೋಡೆಗಳು ಈಗಲೂ ಹಾಗೆ ಇವೆ. ಆ ದೊಡ್ಡ ಮನೆಗಳ ಒಳ ಹೊಕ್ಕರೇ ಕತೆ ಕೇಳಿದ್ದಕ್ಕೋ ಏನೋ ನನ್ನ ಮನಸ್ಸಿಗೆ ಅಲ್ಲೊಂದು ನೋವು, ಬೇಸರದ ಛಾಯೆ ಆವರಿಸಿರುವ ಅನುಭವವಾಯಿತು. ಹುಟ್ಟಿ ಬೆಳೆದು, ಬದುಕು ಕಟ್ಟಿಕಂಡ ಜಾಗವನ್ನು ರಾತ್ರೋರಾತ್ರಿ ಬಿಟ್ಟು ಹೊರಡುವಾಗ ಅವರಿಗೆಷ್ಟು ನೋವಾಗಿರಬಹುದು? ಬಹುಶಃ ಆ ದುಃಖದ ನಿಟ್ಟುಸಿರೇ ಅಲ್ಲಿನ ವಾತವರಣವನ್ನೆಲ್ಲಾ ಆವರಿಸಿದೆ ಎಂದೆನ್ನಿಸುತಿತ್ತು.

ಆ ಮನೆಯೊಳಗೆ ಒಂದು ಸುರಂಗವಿತ್ತು. ಇಲ್ಲಿ ಅವರ ಸಂಪತ್ತುಗಳನ್ನು ಬಚ್ಚಿಡುತಿದ್ದರಂತೆ ಎಂದರು ನಮ್ಮ ಡ್ರೈವರ್. ಇಣುಕಿ ನೋಡಿದೆ ಕಗ್ಗತ್ತಲು. ಟಾರ್ಚ್ ಬೆಳಕನ್ನು ಒಳಗೆ ಬಿಟ್ಟು ನೋಡಿ ಇಳಿಯಬಹುದು ಎನಿಸಿತು. ಇಳಿದು ನೋಡೋಣ್ವಾ ಎಂದೆ. ಜೊತೆಗಿದ್ದವರೆಲ್ಲ ತೆಪ್ಪಗೆ ಬಾ ಎಂದು ನನ್ನ ಉತ್ಸಾಹಕ್ಕೆ ತಣ್ಣೀರೆರಚಿದರು. ಅವರಿಗ್ಯಾಕೋ ಕಾರು ಬಿಟ್ಟು ಇಳಿಯುವ ಮನಸ್ಸೇ ಇರಲಿಲ್ಲ. ನನಗೋ ಪ್ರತಿ ಮನೆಯೊಳಗೆ ಹೊಕ್ಕು, ಊರಿನ ಪ್ರತಿಮೂಲೆಯನ್ನು ನೋಡುವ ಸಾದ್ಯವಿದ್ದಲ್ಲಿ ದೆವ್ವಗಳನ್ನು ಕಾಣುವ ತವಕ. ಅಲ್ಲಿಂದ ಹೊರಡುವಾಗ ಪಾಲಿವಾಲ ಬ್ರಾಹ್ಮಣರಂತೆ ನನ್ನ ಮನಸ್ಸಿನ ತುಂಬಾ ಬೇಸರದ ಭಾವನೆ ಆವರಿಸಿಕೊಂಡಿತ್ತು. ನಾವು ಉಳಿದುಕೊಂಡಿದ್ದ ಜಾಗಕ್ಕೆ ಬಂದ ನಂತರ ನಮ್ಮ ನಾಲ್ಕು ಜನರಲ್ಲಿ ಇಬ್ಬರು ಅದ್ಯಾಕೋ ಸುಸ್ತಾಗ್ತಿದೆ ಅಂತ ಮಲಗಿಕೊಂಡರೇ, ಒಬ್ಬ ಹೊರಗೇ ಹೋಗೋ ಮೂಡ್ ಇಲ್ಲ ಎಂದ. ಕೊನೆಗೂ ನನಗೆ ಭೂತ ದರ್ಶನವಾಗಲಿಲ್ಲ ಅಂತ ಬೇಸರವಾಗಿತ್ತು. ಹೋಗಿದ್ದು ಮಟ ಮಟ ಮಧ್ಯಾಹ್ನವಾಗಿದ್ದರಿಂದ ಭೂತ ದರ್ಶನವಾಗಲಿಲ್ಲ ಬಹುಶಃ ನನ್ನ ಭಾಗ್ಯದಲ್ಲಿ ಬುದ್ಧಿಜೀವಿಗಳ ದರ್ಶನ ಮಾತ್ರವೇ ಬರೆದಿರುವುದು ಎನಿಸಿತು.

ಅಲ್ಲಿಂದ ವಾಪಸ್ ಬರುವಾಗ ಡ್ರೈವರ್ ಆ ಊರಿನಲ್ಲಿ ನಡೆದ ಇನ್ನೊಂದು ಘಟನೆಯ ಬಗ್ಗೆ ಹೇಳಿದ. ಆ ಊರಿನಲ್ಲಿ ಈಗಲೂ ಪಾಲಿವಾಲ್ ಬ್ರಾಹ್ಮಣರು ಬಚ್ಚಿಟ್ಟಿರುವ ಸಂಪತ್ತಿದೆ ಎಂದು ತಿಳಿದುಕೊಂಡಿದ್ದ ವಿದೇಶಿಗನೊಬ್ಬ ಸನ್ಯಾಸಿಯ ವೇಷದಲ್ಲಿ ಇಲ್ಲಿ ಓಡಾಡುತ್ತಿದ್ದನಂತೆ. ಒಂದೆರಡು ಕಡೆ ಗುಂಡಿಯನ್ನು ತೆಗೆದಿದ್ದನಂತೆ. ಆ ನಂತರ ವಿಷಯ ಬಯಲಾಗಿ ಈಗ ಸರ್ಕಾರ ಅಲ್ಲೊಬ್ಬ ಸೆಕ್ಯುರಿಟಿ ಗಾರ್ಡ್ ನೇಮಕ ಮಾಡಿದೆ. ಇನ್ನು ಕುಲ್ಧರಲ್ಲಿ ನಿಜವಾಗಲೂ ವಿಚಿತ್ರ ಅನುಭವಗಳಾಗುತ್ತವೆಯೇ ಎಂದು ಪರಿಕ್ಷೀಸಲು ದೆಹಲಿಯ ಪಾರಾನಾರ್ಮಲ್ ಸೊಸೈಟಿಯವರು ಆಧುನಿಕ ಉಪಕರಣಗಳ ಜೊತೆಗೆ ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರಂತೆ. ಅಲ್ಲಿ ಅವರಿಗೆ ವಿಚಿತ್ರ ಅನುಭವಗಾಳಗಿದ್ದನ್ನು ಹೇಳಿಕೊಂಡಿದ್ದಾರೆ. ಯಾರೋ ಚಲಿಸಿದಂತಾಗುವುದು, ಹಿಂದಿನಿಂದ ಬಂದು ಮುಟ್ಟಿದ ಅನುಭವ, ಕಾಲಳತೆಯ ದೂರದಲ್ಲೇ ವಾತವರಣದ ವ್ಯತ್ಯಾಸವಾಗುವುದು ಇತ್ಯಾದಿ. ಕಡೆಗೂ ಅಲ್ಲಿ ದೆವ್ವವಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವಂತೆ.

ಇದನ್ನು ಓದಿದ ಮೇಲೆ ಭೂತಗಳ ಇರುವಿಕೆಯನ್ನು ನೀವು ನಂಬುತ್ತೀರಾ ಎನ್ನುವುದು ನಿಮ್ಮ ಪ್ರಶ್ನೆಯಾದರೇ, ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ ಎಂದು ನೀವು ನಂಬುವುದಾದರೇ ಕಣ್ಣಿಗೆ ಕಾಣದ ಭೂತಗಳೂ ಇವೆ ಎಂದೂ ನಂಬಬಹುದಲ್ಲವೇ? ಅಷ್ಟಕ್ಕೂ ಕೆಲ ವಿಷಯಗಳು ಅನುಭವಕ್ಕೆ ಬಂದಾಗಲೇ ಅರಿವಾಗುವುದು. ನನಗೆ ಅಂತ ಅನುಭವಗಳಾಗಿರುವುದರಿಂದ ನಮ್ಮ ಕಣ್ಣಿಗೆ ನಿಲುಕದ ಶಕ್ತಿಗಳಿವೆ ಎಂದು ನಂಬುತ್ತೇನೆ. ಬುದ್ಧಿಜೀವಿಗಳ ಕಿರುಚಾಟ, ಅರಚಾಟ, ಕಂಡೋರ ಮಕ್ಕಳನ್ನು ಹಾಳು ಬಾವಿಗೆ ತಳ್ಳುವ ಭೀಕರ ಮನಸ್ಥಿತಿಯನ್ನು ಹತ್ತಿರದಿಂದ ನೋಡಿದವರಿಗೆ ಭೂತ ಭಯಬೀಳಿಸುವುದಿಲ್ಲ ಬಿಡಿ. ಹಾಗಾಗಿ ಭೂತಗಳನ್ನು ನೋಡಬೇಕೆಂಬ ಆಸೆ ನನ್ನಲ್ಲಿನ್ನು ಉಳಿದುಕೊಂಡಿದೆ. ಹಾಗೇನಾದರೂ ಕಾಣಿಸಿದ ದಿನ ಆ ಅನುಭವಗಳನ್ನು ದಾಖಲಿಸುತ್ತೇನೆ. ಅಂದ ಹಾಗೆ ನಿಮಗೇನಾದರೂ ವಿಚಿತ್ರ ಶಕ್ತಿಗಳ ಅನುಭವಗಾಳಗಿವೆಯೇ?

ಪಾರಾನಾರ್ಮಲ್ ಸೊಸೈಟಿಯವರು ದಾಖಲಿಸಿರುವ ವೀಡಿಯೋವನ್ನು ಇಲ್ಲಿ ನೋಡಬಹುದು ( ಕುಲ್ಧಾರ ದೆವ್ವಗಳು )

18 ಟಿಪ್ಪಣಿಗಳು Post a comment
  1. Naveen kumar
    ಮಾರ್ಚ್ 21 2016

    ನನಗೆ ಸ್ವಂತ ಅನುಭವಗಳಾಗಿರುವುದರಿಂದ ಪ್ರೇತ ಪಿಶಾಚಿ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಳ್ಳುತ್ತೇನೆ… ಆದರೆ ಅವುಗಳಿಂದ ಎಷ್ಟು ಹೇಗೆ ತೊಂದರೆಗಳಾಗಬಹುದು ಎಂಬ ಬಗ್ಗೆ no idea…

    ಉತ್ತರ
    • ಕಮಲೇಶ
      ಮಾರ್ಚ್ 21 2016

      ನಿಮ ಅನುಭವ ಏನಂತ ಹೇಳಣ

      ಉತ್ತರ
  2. Gunavathi Shetty
    ಮಾರ್ಚ್ 21 2016

    nanage anubhava agide nanna hostel life alli. aduru chala bidae ade roomlil obbale ulidukondiddene manasalli baya iddaru. alliyavarege e bhuta deyvagala bagge nambike iralli. ondu sala adrsttavatha savina bayinda paragiddene. so anubhavagalu nammalli nambikegalannu huttu hakuthave

    ಉತ್ತರ
    • Santosh Ramannanavar
      ಏಪ್ರಿಲ್ 17 2016

      Ri Niu Yen Helta Idira? Educated Aagi e Tara Yella matadtiralla,,,

      Ri Namdu Krushi Kutumba Varshakke 2 Bele Tegitivi Besigeli Borwell inda Neeru Hayistivi Day time Sariyagi power irodilla bari 3 hr matra, so night nam Gaddege niru Hayistivi nam Gadde nammurininda 3km doora Hage Nammura Smashana 1.5km Doora Nammma Gaddege Hogbekandre Smashanada Darile Hogbeku Alde Namm Gadde Iro Jagadalli “Hunasikatte” anta Uritante Hinde Yavago Kere Voddu Odedu Hunasikatte Ure Sarvanasha Aytante,, Nam Urina jana Namma gadde Bhagge Nana ritiya Kate Heltare Adre Nanobne Ratri nam Gaddege Niru Hayisidini matte Ivagu Kuda Hayistane Idini Ondu Dinanu nange yavde “Devva” pisachi Aatma anta Kandilla Evella Bari Sullu Kategalu… Bari Olu,, sullu

      nim anubhavana kelbeku so 8722556556

      ಉತ್ತರ
  3. ಮಾರ್ಚ್ 22 2016

    ನಾನು ಬಹಳಷ್ಟು ಬಾರಿ ಈ ವಿಸ್ಮಯಗಳ ಹುಡುಕಾಟದಲ್ಲಿ ಇದ್ದೇನೆ, ಆದರೆ ಇಂದಿನವರೆಗು ಯಾವುದೇ ತರಹದ ಅನುಭವ ಹಾಗಿಲ್ಲ.

    ಉತ್ತರ
    • Santosh Ramannanavar
      ಏಪ್ರಿಲ್ 17 2016

      nanu Kuda Aste

      ಉತ್ತರ
  4. ಮಾರ್ಚ್ 22 2016

    ಸುಮಾರು 1982-83ರಲ್ಲಿ ನಡೆದ.ಘಟನೆ. ನಾನು ಕೆಲಸ ಮಾಡುತ್ತಿರುವ ಬ್ಯಾಂಕಿನ ಪಿಗ್ಮಿ ಕಲೆಕ್ಟರ ಒಬ್ಬರು ಕುಮಟಾದಿಂದ ಅವರ ಗೆಳೆಯನ ಜೊತೆ ಆಟೋದಲ್ಲಿ ಸಿಸಿ೯ಗೆ ರಾತ್ರಿ ಹೊರಟಿದ್ದಾರೆ. ದೇವಿಮನೆ ಘಾಟ್ ಸುಮಾರು 11-40ರ ಸಮಯ. ನಿಜ೯ನ ಪ್ರದೇಶ. ಇದ್ದಕ್ಕಿದ್ದಂತೆ ಅಟೋದ ಮುಂದೆ ಒಂದು ಕರಿ ನೆರಳು. ಆಟೋ move ಮಾಡುವುದಕ್ಕೂ ಆಗುತ್ತಿಲ್ಲ. ಇಬ್ಬರಿಗೂ ಕೈಕಾಲು ನಡುಗುತ್ತಿದೆ. ಕೂತಲ್ಲೆ ಕೂತಿದ್ದಾರೆ‌. ಆಟೋ ತನ್ನಷ್ಟಕ್ಕೆ ಮೂರೂ ಚಕ್ರ ಮೇಲೆ ಪಲ್ಟಿ ಆಯಿತು. ಇವರು ಕೆಳಗೆ ಬಿದ್ದರು. ಆಟೋ ಸರಿ ಮಾಡಲು ನೋಡುತ್ತಿದ್ದಾರೆ ಆಗುತ್ತಿಲ್ಲ. ಮನಸ್ಸಿನಲ್ಲೆ ಶ್ರೀ ಮಾರಿಕಾಂಬಾ ದೇವಿ ಸ್ಮರಿಸಿಕೊಳ್ಳುತ್ತಿದ್ದಾರೆ‌.(ಪಿಗ್ಮಿ ಕಲೆಕ್ಟರ್ ಮಾರಿಕಾಂಬಾ ಜಾತ್ರೆಯಲ್ಲಿ ದೇವಿಯ ಸನ್ನಿಧಿಯಲ್ಲಿ ಇದುವರೆಗೂ ಜಾತ್ರೆ ನಡೆಯುವ ಅಷ್ಟೂ ದಿನ ಸೇವೆ ಸಲ್ಲಿಸುತ್ತಿದ್ದಾರೆ).ದೇವಿಯ ಕಟ್ಟಾ ಭಕ್ತ. ಗಾಡಾಂಧಕಾರ. ದಿಕ್ಕೆ ತೋಚುತ್ತಿಲ್ಲ. ಸ್ವಲ್ಪ ಸಮಯದಲ್ಲಿ ಸಿಸಿ೯ ಕಡೆ ಹೋಗುವ ಬಸ್ಸು ಬರುತ್ತಿದೆ‌ ಇವರು ಕೈ ಮಾಡಿದರೂ ನಿಲ್ಲಿಸಲಿಲ್ಲ. ಆದರೆ ಬಸ್ಸಿನ ಪ್ರಕರವಾದ ಬೆಳಕು ನಿಂತವರು ಬಸ್ಸಿನಲ್ಲಿದ್ದವರಿಗೆ ಸ್ಪಷ್ಟವಾಗಿ ಕಾಣುತ್ತಿದ್ದಾರೆ. ಇವರಿಗೆ ಪರಿಚಯವಿದ್ದವರು ಒಬ್ಬರು ಬಸ್ಸಿನ ಕಿಟಕಿಯಿಂದ ಕೂಗಿ ಕರೆದಿದ್ದಾರೆ. ಕೊಂಕಣಿ ಭಾಷೆಯಲ್ಲಿ. ಇವರೂ ಕೂಗಿದ್ದಾರೆ‌ ಆದರೆ ಆ ತಡ ರಾತ್ರಿ, ಅಂಥ ಪ್ರದೇಶದಲ್ಲಿ ಯಾವೊಬ್ಬ ಡ್ರೈವರ ಸಹ ಬಸ್ ನಿಲ್ಲಿಸೋದಿಲ್ಲ. ಈಗಲೂ ನೀವು ಆ ದಾರಿಯಲ್ಲಿ ಹೋದರೆ ನೋಡಬಹುದು. ಘಾಟ ಶುರುವಾಗುವ ಸ್ಥಳದಲ್ಲಿ ಅಲ್ಲೊಂದು ದೇವಿಯ ದೇವಸ್ಥಾನವಿದೆ. ಯಾವುದೆ vehicle ಆ ದಾರಿಯಲ್ಲಿ ಹೋಗಲಿ ಅಲ್ಲಿ ನಿಲ್ಲಿಸಿ ಕಾಣಿಕೆ ಹಾಕಿ ಪ್ರಸಾದ ತೆಗೆದುಕೊಂಡೆ ಮುಂದೆ ಸಾಗುವುದು. ಬಸ್ ನಿಂತರೆ ಬಸ್ಸಿನೊಳಗೆ ಕುಂಕುಮ ತಟ್ಟೆಯಲ್ಲಿ ತರುತ್ತಾರೆ. ತಡ ರಾತ್ರಿ ಆದರೆ ಒಂದು ಕ್ಷಣ vehicle ನಿಲ್ಲಿಸಿ ಅಲ್ಲೆ ನಮಸ್ಕರಿಸಿ ಹೊರಡುತ್ತಾರೆ‌. ಬಸ್ಸು ಯಾವಾಗ ಇವರನ್ನು ದಾಟಿ ಮುಂದೆ ಹೋಯಿತೊ ಆಗ ಇವರು ಅಟೊ ಹಿಡಿದರೆ ಅಲುಗಾಡುತ್ತಿದೆ. ಕೂಡಲೆ ಸರಿ ಮಾಡಿಕೊಂಡು ಸತ್ತೆನೊ ಬಿದ್ದೆನೊ ಅಂತ ಸ್ಪೀಡಾಗಿ ಬಸ್ಸು follow ಮಾಡಿದ್ದಾರೆ. ಆದರೆ ಬಸ್ಸು ಬೇಗ ಸಿಸಿ೯ ತಲುಪಿದೆ‌‌. ಬಸ್ಸಿನಲ್ಲಿ ಇದ್ದ ಇವರ friends ತಂಡ ಇವರಿರುವ ಕಡೆ vehicleನಲ್ಲಿ ಕೂಡಲೆ ಹೊರಟಿದ್ದಾರೆ. ದಾರಿಯಲ್ಲಿ ಎದುರಾಗಿ ಎಲ್ಲರೂ ಸಿಸಿ೯ ತಲುಪಿ ‘ಬದುಕಿದೆಯಾ ಬಡ ಜೀವ’ ಎಂದು ನಿಟ್ಟುಸಿರು. ಬ್ಯಾಂಕಿಗೆ ಬಂದು ನಮಗೆಲ್ಲ ಈ ವಿಷಯ ಕೇಳಿ ಮೈ ರೋಮವೆಲ್ಲ ಸೆಟೆದುಕೊಂಡಿತು. ಇದು ನಿಜವಾಗಿ ನಡೆದ ಘಟನೆ. ಹೊರಡುವಾಗ ಗೊತ್ತಿತ್ತು ಅಮಾವಾಸ್ಯೆ ಎದುರು. ಹುಚ್ಚು ಧೈಯ೯. ತಡ ರಾತ್ರಿ ಹೊರಟಿದ್ದಾರೆ.

    ಇನ್ನೊಂದು ಘಟನೆ. ನನಗೆ ಸುಮಾರು 21ವಷ೯ವಿರಬಹುದು. ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ನನ್ನ ಗೆಳತಿಯ ಮನೆಗೆ ಹೋಗಿದ್ದೇನೆ. ನಾವಿರುವ ಹಳ್ಳಿಯಿಂದ ಒಂದೂವರೆ ಕೀ.ಮೀ. ಅವಳ ಮನೆ. ವಾಪಸ್ಸು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆ ಆಗಿದೆ. ಅದು ಕಾಲು ಹಾದಿ. ಸುತ್ತ ಮರ ಗಿಡಗಳು. ಹಳ್ಳಿ ಕಡೆ ಹುಲ್ಲು ಬೆಳೆಯುವ ಬೇಣ ಹೇಳುತ್ತಾರೆ. ಯಾರೂ ಜನ ಇಲ್ಲ. ಮೇ ತಿಂಗಳು ಬಿಸಿಲು ಜೋರಾಗಿದೆ. ನಮ್ಮನೆಗೆ ಬಂದಿದ್ದೊಂದೇ ನೆನಪು. ಸಿಕ್ಕಾಪಟ್ಟೆ ಮೈ ಸುಡುತ್ತಿದೆ. ಮನೆಯಲ್ಲಿ ಎಲ್ಲರೂ ಕಂಗಾಲು. ಬೆಳಿಗ್ಗೆ ಹೋಗುವಾಗ ಸರಿ ಇದ್ದಳಲ್ಲ? ಈಗೇನಾಯಿತು? ಆ ದಿನ ನಮ್ಮನೆಗೆ ಗೋಕಣ೯ದಿಂದ ಸಂಭಾವನೆ(ಅಡಿಕೆ ಕೊಯಿಲು ಮುಗಿದಾಗ ಪ್ರತೀ ವರುಷ ಗೋಕಣ೯ದ ಪ್ರಸಾದ ತೆಗೆದುಕೊಂಡು ಮನೆ ಮನೆಗೆ ಬಟ್ಟರು ಬರುತ್ತಾರೆ‌. ಅವರಿಗೆ ಅಡಿಕೆ ದುಡ್ಡು ಕೊಟ್ಟು ಕೊಡುವ ಪದ್ದತಿ. ಕೆಲವರ ಮನೆಯಲ್ಲಿ ಉಳಿಯುತ್ತಾರೆ ರಾತ್ರಿ ಆದರೆ, ಹಗಲಾದರೆ ಊಟ ಮಾಡಿ ಹೊರಡುತ್ತಾರೆ. ಸಂಭಾವನೆ ಭಟ್ಟರೆಂದು ಕರೆಯುವ ರೂಢಿ).ಭಟ್ಟರು ಬಂದಿದ್ದಾರೆ. ನನ್ನ ಅವಸ್ಥೆ ನೋಡಿ ಅವರು ಹೇಳಿದರು “ಇದು ಉರಿ ಬಿಸಿಲಲ್ಲಿ ಮಟ ಮಟ ಮಧ್ಯಾಹ್ನ ಬಂದಿದ್ದಾಳೆ. ಗಾಳಿ ಆಗಿದೆ. ಬೆನ್ನಿಗೆ ಬಡಿದಿದೆ. ನಾನು ಭೂದಿ ಮಂತ್ರಿಸುತ್ತೇನೆ. ಅವಳ ಬೆನ್ನು ತಿರುಗಿಸಿ ಕೂಡಿಸಿ. ಬಟ್ಟೆ ಸರಿಸಿ” ಅಂದರು. ಹಾಗೆ ಮಾಡಿದಾಗ ಕೈಯಲ್ಲಿ ಮುಸ್ಟಿ ತುಂಬಾ ಭಸ್ಮ ಹಿಡಿದು ಅದೇನೊ ಮಂತ್ರ ಜಪಿಸಿ ಫೂ ಫೂ ಫೂ ಅಂತ ಮೂರು ಬಾರಿ ಊದಿದ್ದಾರೆ. ಹಾಗೆ ಹಣೆಗೆ ಭಸ್ಮ ಹಚ್ಚಿ ನೋಡಿಲ್ಲಿ ಹಸ್ತ ಮೂಡಿದೆ ಎಂದು ಎಲ್ಲರಿಗೂ ತೋರಿಸಿದ್ದಾರೆ. ಇದ್ಯಾವುದರ ಪರಿವೆ ನನಗಿರಲಿಲ್ಲ. ಅಪ್ಪ ಅಮ್ಮ ಆ ದಿನ ನನಗೋಸ್ಕರ ನಮ್ಮನೆಯಲ್ಲೆ ಉಳಿದ ಭಟ್ಟರು ವಿವರಣೆ ನೀಡಿದಾಗ ಗೊತ್ತಾಗಿರೋದು. ಸಾಯಂಕಾಲವೆ ನಾನು ಹುಷಾರಾದೆ.

    ಇವೆರಡೂ ನಡೆದ ಸತ್ಯ ಘಟನೆ. ನಂಬುತ್ತೀರಾ. ಆ ದೆವ್ವ ಇದೆ ಅಂತ. ನಾನು ನಂಬುತ್ತೇನೆ‌. ನನಗೆ ಭಯ ಇದೆ.

    ಇತ್ತೀಚೆಗೆ ರಾಜಸ್ಥಾನಕ್ಕೆ ನನ್ನ ಮಗಳು ಹೋದಾಗ ಈ ದೆವ್ವ ದ ಊರಿಗೆ ಹೋಗಿ ಬಂದಿದ್ದಾಳೆ. ಆದರೆ ಅವಳಿಂದ ಇಷ್ಟೊಂದು ವಿವರಣೆ ಸಿಕ್ಕಿರಲಿಲ್ಲ. ತಮ್ಮ ಬರಹದಿಂದ ತಿಳಿದು ಖುಷಿ ಆಯಿತು. ನಾವು ಯಾವುದೆ ಕ್ಷೇತ್ರಕ್ಕೆ ಹೋಗಲಿ ಅಲ್ಲಿಯ ಮಹಿಮೆ ತಿಳಿದುಕೊಳ್ಳಬೇಕು. ನೀವು ಕೂಲಂಕುಷವಾಗಿ ತಿಳಿದು ಬರೆದಿದ್ದೀರಾ‌
    ಧನ್ಯವಾದಗಳು‌. ಆದರೆ ಶಕ್ತಿಯ ವಿರುದ್ಧ ಸೆಣಸಾಡುವ ಪ್ರಯತ್ನ ಬೇಡ.

    ಉತ್ತರ
    • Santosh Ramannanavar
      ಏಪ್ರಿಲ್ 17 2016

      Ri Nanu Kumta dalli Spandana Bank nalli Credit Assistant, nannuru Tilavalli Prati 2nd and 4th Saturday Ge Urige Hogbartini Adu kuda niu Helidralla Devimane Gattada mulakane Sirsi>Dasankoppa>Tilvalli,, Matte Barovaga Kuda Same ROOT alli Nivu Helidahage Yenu Illa

      ಉತ್ತರ
  5. ಮಾರ್ಚ್ 23 2016

    Yes this is truly in life.&super 🙏

    ಉತ್ತರ
  6. ಶೆಟ್ಟಿನಾಗ ಶೇ.
    ಏಪ್ರಿಲ್ 17 2016

    ಮಾನ್ಯರೇ, ಈ ದೆವ್ವ ಭೂತ ಪ್ರೇತಗಳೆಲ್ಲ ಕರ್ಮ ಸಿದ್ಧಾಂತದ ಮೇಲೆ ನಿಂತಿರುವ ಹಿಂದೂ ಸಮಾಜದ ಮೂಢನಂಬಿಕೆಗಳು. ಬಸವ ಧರ್ಮದಲ್ಲಾಗಲಿ ಬೌದ್ಧ ಧರ್ಮದಲ್ಲಾಗಲಿ ದೆವ್ವ ಭೂತ ಪ್ರೇತಗಳಿಗೆ ಮಾನ್ಯತೆ ಇಲ್ಲ. ಮಾನವನ ಘನತೆಯನ್ನು ಕುಗ್ಗಿಸುವ ಸಮಾಜಗಳಲ್ಲಿ ದೆವ್ವ ಭೂತ ಪ್ರೇತಗಳ ಪರಿಕಲ್ಪನೆ ಸಾಂಸ್ಥೀಕರಣಗೊಂಡಿರುತ್ತವೆ. ಇಂತಹ ಜೀವವಿರೋಧಿ ಪರಿಕಲ್ಪನೆಗಳು ಜನಸಾಮಾನ್ಯರನ್ನು ಭಯಭೀತರಾಗಿಸಿ ಮೂಢನಂಬಿಕೆಗಳ ದಾಸರನ್ನಾಗಿಸುತ್ತವೆ. ಶೋಷಣೆಯ ವಿರುದ್ಧ ಹೋರಾಡಲು ಅಗತ್ಯವಿರುವ ವೈಚಾರಿಕ ಶಕ್ತಿಯನ್ನು ಕುಂದಿಸುವ ಗುರಿ ಇಂತಹ ನಂಬಿಕೆಗಳಿರುತ್ತವೆ. ಇದರಿಂದ ವೈದಿಕಶಾಹಿಗಳಿಗೆ ಲಾಭವೇ ಇದೆ. ಬ್ರಾಹ್ಮಣ್ಯವೆಂಬ ನಾಣ್ಯದ ಎರಡು ಮುಖಗಳು – ವೈದಿಕತೆ ಹಾಗೂ ಮೂಢನಂಬಿಕೆಗಳು. ಇನ್ನಾದರೂ ಸತ್ಯವನ್ನು ಗ್ರಹಿಸಿ ದೆವ್ವ ಭೂತ ಪ್ರೇತಗಳನ್ನು ನಿಮ್ಮ ಮನೆಯ ಸಂಡಾಸಿಗೆ ಎಸೆದು ಫ್ಲಶ್ ಮಾಡಿ. ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಿ.

    ಉತ್ತರ
    • WITIAN
      ಏಪ್ರಿಲ್ 17 2016

      ನಿನ್ನ ಡ್ರಗ್ಗಾ ಸರ್ ನ ಧರ್ಮದಲ್ಲಿರುವ ‘ಜಿನ್’ ಗಳ ಕಲ್ಪನೆ ಏನು ಶೆಟ್ಟಿನಾಗನೇ? ಅವು ಭೌತಿಕವಾಗಿ ಅಸ್ತಿತ್ವದಲ್ಲಿವೆಯಾ? ಪವಿತ್ರ ಕುರ್’ಆನ್ ನಲ್ಲಿ ಜಿನ್ ಗಳ ಬಗ್ಗೆ ಇರುವ ವರ್ಣನೆಯನ್ನು ಕೊಂಚ ವಿವರಿಸಬಲ್ಲೆಯಾ, ಬೃಹಸ್ಪತಿ?

      ಉತ್ತರ
      • Salam Bava
        ಏಪ್ರಿಲ್ 17 2016

        “ಪವಿತ್ರ ಕುರ್’ಆನ್ ನಲ್ಲಿ ಜಿನ್ ಗಳ ಬಗ್ಗೆ ಇರುವ ವರ್ಣನೆಯನ್ನು ಕೊಂಚ ವಿವರಿಸಬಲ್ಲೆಯಾ”

        ನಿಲುಮೆಯ ಗಿಂಡಿ ಮಾಣಿಗಳು ಹಾಗೂ ಚಡ್ಡಿ ಪಂಡಿತರು ಪವಿತ್ರ ಕುರ್ ಆನ್ ಬಗ್ಗೆ ನಿಜವಾದ ಆಸಕ್ತಿ ಇರುವವರಾದರೆ ನಿಮ್ಮ ಊರಿನ ಮದ್ರಸವೊಂದಕ್ಕೆ ಭೇಟಿ ನೀಡಿ, ಅಲ್ಲಿ ಮಕ್ಕಳಿಗೆ ಧರ್ಮಬೋಧನೆ ಮಾಡುವ ಉಸ್ತಾದರಿಗೆ ಕಳಕಳಿಯಿಂದ ಈ ಪ್ರಶ್ನೆ ಕೇಳಿ. ನಾಗಶೆಟ್ಟಿಗೆ ಸವಾಲು ಹಾಕುವುದಿದ್ದರೆ ಬಸವಧರ್ಮದ ಬಗ್ಗೆ ಹಾಕಿ ಪವಿತ್ರ ಕುರ್ ಆನ್ ಬಗ್ಗೆ ಅಲ್ಲ.

        ಉತ್ತರ
        • WITIAN
          ಏಪ್ರಿಲ್ 18 2016

          ‘ಹರಾಮ್’ ಬಾವಾಗಳಿಗಿಂತ ಹೆಚ್ಚಿನ ಜ್ಞಾನ ಕುರ್’ಆನ್ ನ ವಿಷಯದಲ್ಲಿ ನನಗೆ ಇದೆ. ಪುಕ್ಕಟೆ ಸಲಹೆ ಕೇಳಿ ಮದ್ರಸಾಗಳಿಗೆ ಹೋಗಿ ಉಸ್ತಾದರನ್ನು ಕೇಳುವ ಅಗತ್ಯ ನನಗಿಲ್ಲ.

          ಉತ್ತರ
    • Ravi Shankar Sharma
      ಜೂನ್ 16 2017

      ರೀ ಸ್ವಾಮಿ ಯರು ಹೇಳಿದ್ದು ಇದ್ದ್ನನ್ನು ಒಂದು ಸಲ ಓದಿ ಇದು ವಿಕ್ಕೀಪೀಡಿಯಾದಲ್ಲಿ ಬಂದಿದೆ.

      ಬೌದ್ಧ ಧರ್ಮದಲ್ಲಿ ಒಂದು ದೆವ್ವದಂತಹ ಸಂಕೇತವನ್ನು ಮಾರ ಎಂದು ಕರೆಯುತ್ತಾರೆ. ಒಬ್ಬ ಪ್ರಲೋಭಕನಾದ ಈತ ಗೌತಮ ಬುದ್ಧನನ್ನೂ ಸಹ ಸುಂದರ ಸ್ತ್ರೀಯರನ್ನು ತೋರಿಸುವ ಮೂಲಕ ಅಪಮಾರ್ಗಕ್ಕೆ ಸೆಳೆಯಲು ಪ್ರಯತ್ನಿಸಿದ್ದ. ಹಲವು ದಂತಕಥೆಗಳಲ್ಲಿ ಈ ಸ್ತ್ರೀಯರು ಮಾರನ ಹೆಣ್ಣು ಮಕ್ಕಳೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮಾರ ಜಾಣ್ಮೆಯಿಲ್ಲದಿರುವಿಕೆ, ಆಧ್ಯಾತ್ಮಿಕ ಜೀವನದ “ಸಾವಿನ” ಸಾಕಾರರೂಪ. ಈತ ಮನುಷ್ಯರು ಆಧ್ಯಾತ್ಮಿಕ ಜೀವನವನ್ನು ರೂಢಿಸಿಕೊಳ್ಳುವುದಕ್ಕೆ ಭಂಗ ತರುತ್ತಾನೆ. ಈತ ಪ್ರಾಪಂಚಿಕತೆಯೆಡೆಗೆ ಮೋಹ ಉಂಟುಮಾಡುತ್ತಾನೆ ಅಥವಾ ನಿಷೇಧಾತ್ಮಕವನ್ನು ಧನಾತ್ಮಕವಾಗಿ ಕಾಣುವಂತೆ ಮಾಡುತ್ತಾನೆ. ಮಾರನ ಬಗೆಗಿರುವ ಮತ್ತೊಂದು ವ್ಯಾಖ್ಯಾನವೆಂದರೆ, ಈತ ಆಸೆ ಆಕಾಂಕ್ಷೆಗಳ ರೂಪದಲ್ಲಿ ಒಬ್ಬನ ಮನಸ್ಸಿನಲ್ಲಿ ಇರುವುದರ ಜೊತೆಗೆ ವ್ಯಕ್ತಿಯು ಸತ್ಯಶೋಧನೆ ಮಾಡದಂತೆ ತಡೆಗಟ್ಟುತ್ತಾನೆ. ಈ ರೀತಿಯಾಗಿ ಮಾರ ಒಂದು ಪ್ರತ್ಯೇಕ ಸ್ವರೂಪವಲ್ಲ ಆದರೆ ಒಬ್ಬನ ಮನಸ್ಸಿನಲ್ಲಿ ನೆಲೆಯೂರಿರುವ ಒಂದು ಭಾಗ, ಇದನ್ನು ಒಬ್ಬರು ಗೆಲ್ಲಲೇ ಬೇಕಾದ ಅವಶ್ಯಕತೆಯಿದೆ. ಬುದ್ಧನ ನಿತ್ಯ ಬದುಕಿನಲ್ಲಿ ದೆವ್ವದ ಪಾತ್ರವನ್ನು ದೇವದತ್ತನು ನಿರ್ವಹಿಸುತ್ತಾನೆ.

      Web Address: https://kn.wikipedia.org/wiki/%E0%B2%A6%E0%B3%86%E0%B2%B5%E0%B3%8D%E0%B2%B5#.E0.B2.B8.E0.B3.86.E0.B2.9F.E0.B2.BE.E0.B2.A8.E0.B2.BF.E0.B2.B8.E0.B2.82

      ಉತ್ತರ
  7. ರಂಜನಾ ರಾಮ್ ದುರ್ಗ
    ಏಪ್ರಿಲ್ 18 2016

    ಸಹೋದರರಾದ ಶೇಟ್ಕರರಂತ ಅಸಾಧಾರಣರು ನಮ್ಮ ನಡುವೆ ಇದುವುದೇ ಅಗೋಚರ ಶಕ್ತಿಗಳ ಇರುವಿಕೆಯ ಗುರುತಾಗಿದೆ

    ಉತ್ತರ
    • ಶೆಟ್ಟಿನಾಗ ಶೇ.
      ಏಪ್ರಿಲ್ 18 2016

      ಸಹೋದರಿ ರಂಜನಾ, ಶರಣರು ಅಗೋಚರ ಅಕಾಯ ಅನಾದಿ ಅಪೂರ್ವಿಕ ಅಂತ ಚೆನ್ನಬಸವಣ್ಣನವರು ಹೇಳಿದ್ದಾರಲ್ಲವೆ?

      ವಾಙ್ಮನಕ್ಕೆ ಗೋಚರ ಲಿಂಗ, ಅಗೋಚರ ಶರಣ.
      ಸಕಾಯ ಲಿಂಗ, ಅಕಾಯ ಶರಣ.
      ಆದಿ ಲಿಂಗ, ಅನಾದಿ ಶರಣ:ಪೂರ್ವಿಕ ಲಿಂಗ, ಅಪೂರ್ವಿಕ ಶರಣ
      ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
      ಅಚ್ಚಲಿಂಗೈಕ್ಯ ಕಾಣಾ ಪ್ರಭುದೇವರು.

      ಅಭಿನವ ಚೆನ್ನಬಸವಣ್ಣನವರಾದ ದರ್ಗಾ ಸರ್ ಅವರು ವಚನ ಸಾಹಿತ್ಯದ ಬಗ್ಗೆ ಬರೆದಿರುವ ಬರಹಗಳನ್ನು ಓದಿ ನಿಮ್ಮ ಸಂದೇಹವನ್ನು ನಿವಾರಿಸಿಕೊಳ್ಳಿ.

      ಉತ್ತರ
      • ರಂಜನಾ ರಾಮ್ ದುರ್ಗ
        ಏಪ್ರಿಲ್ 18 2016

        ನೀವು ನಾರ್ಮಲ್ ಜನರಲ್ಲ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲವಾದ್ದರಿಂದ ಓದಬೇಕಾಗದ ಅಗತ್ಯವೇ ಇಲ್ಲವಾಗಿದೆ ಸಹೋದರರೇ

        ಉತ್ತರ
        • ಶೆಟ್ಟಿನಾಗ ಶೇ.
          ಏಪ್ರಿಲ್ 18 2016

          ಸಹೋದರಿ ರಂಜನಾ, ಶರಣರ ಬಗ್ಗೆ ಸಂದೇಹ ಪಡದೆ ಪ್ರೀತಿ ವಿಶ್ವಾಸವನ್ನು ಮಾತ್ರ ಇಟ್ಟುಕೊಂಡಿರುವ ತಮ್ಮ ಬಗ್ಗೆ ಅಭಿಮಾನ ಮೂಡುತ್ತಿದೆ. ಶರಣು ಶರಣಾರ್ಥಿ.

          ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments