ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 25, 2016

ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿ, ಬಂಗಾಳಕ್ಕೆ ಸಿಕ್ಕಿದ್ದು ಕರಾಳ ರಾತ್ರಿ

‍ನಿಲುಮೆ ಮೂಲಕ

-ಶ್ರೀನಿವಾಸ ರಾವ್

bengalಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ದಾಳಿ – ಭಯೋತ್ಪಾದನೆಗೆ ಧರ್ಮವಿಲ್ಲ- ಕಮ್ಯುನಿಷ್ಟರು
26/11ರ ಮುಂಬೈ ದಾಳಿ, ದಾಳಿ ಮಾಡಿದ್ದು ಇಸ್ಲಾಮ್ ನ ಭಯೋತ್ಪಾದಕರು -ಭಯೋತ್ಪಾದನೆಗೆ ಧರ್ಮವಿಲ್ಲ- ಬುದ್ಧಿಜೀವಿಗಳು, ಕಮ್ಯುನಿಷ್ಟರು. ಉಗ್ರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ – ಭಯೋತ್ಪಾದನೆಗೆ ಧರ್ಮವಿಲ್ಲ!

ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಿ ಇಸ್ಲಾಂ ನ ಮೂಲಭೂತವಾದಿಗಳು, ಮತಾಂಧ ಉಗ್ರರು ದಾಳಿ ನಡೆಸಿದಾಗಲೆಲ್ಲಾ ’ಭಯೋತ್ಪಾದನೆಗೆ ಧರ್ಮವಿಲ್ಲ’ವೆಂಬ ಹೇಳಿಕೆ (ready made statement) ಸಿದ್ಧವಾಗಿರುತ್ತದೆ. ಇಂಥದ್ದೊಂದು ಹೇಳಿಕೆಯನ್ನು coin(ಪರಿಚಯಿಸಿದ್ದೇ)ಮಾಡಿದ್ದೇ ಈ ಕಮ್ಯುನಿಷ್ಟರು ಹಾಗೂ ಕಮ್ಯುನಿಷ್ಟರ ಕೃಪಾಪೋಷಿತ ಬುದ್ಧಿಜೀವಿಗಳು. ಭಯೋತ್ಪಾದಕರ ದಾಳಿ ನಡೆದಾಗಲೆಲ್ಲಾ ಇವರಿಂದ ಇಂಥಹ ಹೇಳಿಕೆ ಬರುವುದಾದರೂ ಯಾಕೆ ಅಂದುಕೊಂಡಿದ್ದೀರಿ? ಇಸ್ಲಾಮ್ ಗೆ ಪರ್ಯಾಯವಾದ, ಅಂಥಹದ್ದೇ ಒಂದು ಭಯೋತ್ಪಾದನೆಯನ್ನು ಇವರೂ ಪರಿಚಯಿಸಿದ್ದಾರೆ ಆದ್ದರಿಂದ…

ಇಸ್ಲಾಮ್, ಭಯೋತ್ಪಾದನೆಯ ಹೊಸ ಆವಿಷ್ಕಾರವನ್ನು ಏನಾದರೂ ಕಲಿಯುವುದಿದ್ದರೆ ಅದು ಕಮ್ಯುನಿಷ್ಟರಿಂದ ಕಲಿಯಬೇಕು, ಭಯೋತ್ಪಾದನೆಯ ನವೀನ ಮಾದರಿಯ ಬಗ್ಗೆ ಪಾಠ ಹೇಳಿಕೊಡುವ ಗುರುವಿನ ಮಟ್ಟಕ್ಕೆ ಕಮ್ಯುನಿಷ್ಟರು ಈಗ ಬೆಳೆದಿದ್ದಾರೆ. ಅಂತಹ ಭಯೋತ್ಪಾದನೆಯ ಮಾದರಿಯನ್ನು ಪಶ್ಚಿಮ ಬಂಗಾಳಕ್ಕೆ ಸತತ 20 ವರ್ಷಗಳ ಕಾಲ ಕಾಣಿಸಿರುವುದು ಕಾಮ್ರೆಡ್ ಗಳ ಹೆಗ್ಗಳಿಕೆ! ಇಸ್ಲಾಮ್ ಧರ್ಮದ ಮತಾಂಧರು ಮನುಷ್ಯತ್ವವನ್ನೇ ಮರೆತು ಕಾಫಿರರ ಕುತ್ತಿಗೆಗೆ ಕತ್ತಿ ಇಟ್ಟು ತಾನು ಹೇಳಿದಂತೆ ನಡೆಯಬೇಕೆಂದರೆ, ಕಾಮ್ರೆಡ್ ಗಳು ತಲೆ ಸವರುತ್ತಲೇ ಭಯೋತ್ಪಾದನೆ ಮಾಡುತ್ತಿರುತ್ತಾರೆ. ಮಾನವಿಯತೆಯ ಮೌಲ್ಯಗಳನ್ನು ಹೇಳಿಕೊಂಡೇ ಮಾರಣಹೋಮ ನಡೆಸುತ್ತಾರೆ. ಬಡತನದ ಹೆಸರಿನಲ್ಲೇ ಕಾಮ್ರೆಡ್ ಗಳು ತಮ್ಮ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಾರೆ. ಅವರು ಹೇಳುವುದನ್ನು ಕೇಳದೇ ಇದ್ದರೆ, ಅವರ ಪಕ್ಷಕ್ಕೆ  ಮತ ಹಾಕದೇ ಇದ್ದರೆ, ಪ್ರಜಾಪ್ರಭುತ್ವ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಕೈಯನ್ನೋ ಕಾಲನ್ನೋ ತುಂಡರಿಸುತ್ತಾರೆ. ಇವೆಲ್ಲಾ ಸುಖಾಸುಮ್ಮನೆ ಮಾಡುತ್ತಿರುವ ಆರೋಪಗಳಲ್ಲ. ಕಪೋಲಕಲ್ಪಿತವಂತೂ ಅಲ್ಲವೇ ಅಲ್ಲ. ಒಂದು ಕಾಲದಲ್ಲಿ ತಾನು ಇಂದು ಚಿಂತಿಸಿದ್ದನ್ನು ಮುಂದೊಂದು ದಿನ ಸಮಸ್ತ ಭಾರತ ಚಿಂತಿಸುತ್ತದೆ ಎಂಬ ಶ್ರೇಷ್ಠತೆ ಹೊಂದಿದ್ದ ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಕಾಣಿಸಿದ ಕರಾಳ ರಾತ್ರಿಗಳು ಇವೆಲ್ಲವನ್ನೂ ಹೇಳುತ್ತವೆ.

ಕಮ್ಯುನಿಷ್ಟ್ ಕೈಗೆ ಸಿಲುಕಿ 1970ರಲ್ಲಿ ಹತ್ಯೆಗೀಡಾದ ಬರ್ದಮಾನ್ ನ ಸೈನ್ ಬಾರಿ ಕುಟುಂಬದ ಮೂವರು ಸಹೋದರರ ರಕ್ತದ ಕಲೆಗಳು, ಪಶ್ಚಿಮ ಬಂಗಾಳಕ್ಕೆ ಕಾಮ್ರೆಡ್ ಗಳು ಹಾಗೂ ಕಾಮ್ರೆಡ್ ಗಳ ಪಟಾಲಂ ಕರುಣಿಸಿದ ಕರಾಳ ರಾತ್ರಿಗಳನ್ನು ಸಾರಿ ಹೇಳುತ್ತವೆ. ಉಗ್ರತ್ವದಲ್ಲಿ ವರ್ಣನಾತೀತ ಸಾಹಸಗಾಥೆ ಹೊಂದಿರುವವರು ತಮ್ಮ ಪಾಲನ್ನು ಬಿಟ್ಟು  ಭಯೋತ್ಪಾದನೆಯ ಹೊಣೆಯನ್ನು ಹೇಗೆ ತಾನೆ ನಿರ್ದಿಷ್ಟ ಜನರಿಗೆ ಮೀಸಲಾಗಿಸಲು ಒಪ್ಪುತ್ತಾರೆ ಹೇಳಿ?
ಅಲ್ಲದೇ ಮತ್ತೇನು?

ದಿ ಸ್ಟೇಟ್ಸ್ ಮನ್ ಹಾಗೂ ಪಶ್ಚಿಮ ಬಂಗಾಳದ ಪತ್ರಕರ್ತರಾಗಿದ್ದ ಉದಯನ್ ನಂಬೂದರಿ ಬರೆದಿರುವ ’ಬೆಂಗಾಲ್ಸ್ ನೈಟ್ ವಿತೌಟ್ ಎಂಡ್’ ಪುಸ್ತಕದಲ್ಲಿ, ಕಾಮ್ರೆಡ್ ಗಳ ಕ್ರೌರ್ಯ, ಮಾನವೀಯತೆಯೇ ಉಸಿರೆಂದು ಪೋಸು ಕೊಡುವ ಕಮ್ಯುನಿಷ್ಟರ ಕಪಟತೆ ಮುಖಕ್ಕೆ ರಾಚುತ್ತದೆ. “ಮಾನವೀಯತೆಯ ಬಗ್ಗೆ ಮಾತನಾಡುತ್ತಲೇ ಮಾರಣಹೋಮಗಳನ್ನು ನಡೆಸಿದ್ದೇವೆ, ಸಮಾನತೆ ಬಗ್ಗೆ ಮಾತನಾಡುತ್ತಲೇ ಭೂಮಿಯನ್ನು ಕಬಳಿಸಿ ಉಳ್ಳವರನ್ನೂ, ಉಳ್ಳವರ ಮೇಲೆ ಅವಲಂಬಿತರಾದ ಇಲ್ಲದವರನ್ನೂ ಬೀದಿಗೆ ತಂದಿದ್ದೇವೆ”. ನಮ್ಮ ಪಕ್ಷಕ್ಕೆ ಓಟು ಹಾಕದವರನ್ನು ಬೆದರಿಸಿದ್ದೇವೆ, ಆದ್ದರಿಂದಲೇ ಭಯೋತ್ಪಾದನೆಗೆ ಧರ್ಮವಿಲ್ಲ” ಎಂದು ಕಮ್ಯುನಿಷ್ಟ್ ಪ್ರಣೀತ ಭಯೋತ್ಪಾದನೆಯನ್ನು ನೇರಾ ನೇರವಾಗಿ ಹೇಳುತ್ತಲೇ ಇದ್ದಾರೆ. ಆದರೆ 2 ದಶಕಗಳ ಕಾಲ ಬಂಗಾಳದ ಜನತೆಗೆ ಅಸಹಾಯಕತೆಯಿಂದಲೂ ಮಂಕುಬುದ್ಧಿಯಿಂದಲೋ ಅರ್ಥವಾಗಿರಲಿಲ್ಲ, ಬಂಗಾಳದ ಹಾಗೆಯೇ ಇದು ಭಾರತದ ಜನರಿಗೂ ಅರ್ಥವಾಗುತ್ತಿಲ್ಲ.
ಕಮ್ಯುನಿಷ್ಟರ ಕ್ರೌರ್ಯವನ್ನು ವರ್ಣಿಸಲು ಸೈನ್ ಬಾರಿ ಕುಟುಂಬದ ಮೂವರು ಸಹೋದರರ ಮಾರಣಹೋಮದ ಕಥೆ, ಅಲ್ಲಿನ ಉಳುವವನಿಗೇ ಭೂಮಿ ಎಂಬ ಆದರ್ಶ ಯೋಜನೆಯಲ್ಲಿ ನಡೆದ ಅಕ್ರಮಗಳು, ಕೈಕತ್ತರಿಸಿ ಹೋಗುವ ಭಯದಿಂದ ವಿಧಿ ಇಲ್ಲದೇ ಸಿಪಿಐ(ಎಂ)ಗೆ ಓಟು ಹಾಕುವ ಮತದಾರರ ವ್ಯಥೆ, ಓಟ್ ರಿಗ್ಗಿಂಗ್ ಕಥೆಗಳೇ ಸಾಕು. ಇಸ್ಲಾಮ್ ನಲ್ಲಿ ಕಂಡುಬರುವ ಅಸಹನೆ, ತನ್ನದಲ್ಲದರ ನಾಶ, ವಿನಾಕಾರಣ ಕೆಣಕುವುದು ಇವೆಲ್ಲವೂ; ಸುಮ್ಮನೆ ವೈಶಮ್ಯ ಬೆಳೆಸುವ, ಸುಮ್ಮನೆ ಇರುವವರನ್ನು ಕೆಣಕಿ ಬಂದ್ ಮಾಡಿಸುವ, ವಿನಾಕಾರಣ ಕ್ರಾಂತಿಯ ಹೆಸರಿನಲ್ಲಿ ಕ್ರೌರ್ಯ ಮೆರೆಯುವ ಕಮ್ಯುನಿಷ್ಟ್ ಕಾಮ್ರೆಡ್ ಗಳಲ್ಲೂ ಕಂಡುಬರುತ್ತದೆ. ಇವೆಲ್ಲವೂ ಮೇಲಿನ ಅಷ್ಟೂ ಘಟನೆಗಳಲ್ಲಿ ನಡೆದಿದೆ(ಈಗಲೂ ನಡೆಯುತ್ತಿವೆ). ಒಂದು ರೀತಿಯ ಟಿಪಿಕಲ್ ಇಸ್ಲಾಮಿಕ್ ಉಗ್ರವಾದದ ಮಾನಸಿಕತೆ ಎಂದುಕೊಳ್ಳಿ.

ಅದು ಡಿ.11, 1969, ಸೈನ್ ಬಾರಿ ಕುಟುಂಬದ ಸ್ನೇಹಿತನಾಗಿದ್ದ ಇಂದುಭೂಷಣ್ ಘಾರಿಯಾ ಅವರನ್ನು ಸಿಪಿಐ(ಎಂ) ಕಾರ್ಯಕರ್ತರು ರಾಜಕೀಯ ದ್ವೇಷಕ್ಕಾಗಿ ಹತ್ಯೆ ಮಾಡಿದ್ದರು. ಈ ಮೂಲಕ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದ ಹಿರಿಯ ಪುತ್ರ ನಬಾ ಸೈನ್ ನ ಹತ್ಯೆಯ ಸುಳಿವು ಸಿಕ್ಕಿತ್ತು. ಸೈನ್ ಬಾರಿ ಕುಟುಂಬದವರು ಭಯಭೀತರಾಗಿ ತಾವಿರುವ ಮನೆಯನ್ನೇ ತೊರೆದರು. ನಂತರ ಅವರ ಕುಟುಂಬಕ್ಕೆ ಸೇರಿದ ಭೂಮಿಯನ್ನು  ಭೂ ಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಕೃಷಿ ಭೂಮಿಯ ಮಾಲಿಕನಿಂದ ಕಸಿದುಕೊಂಡು ಕಬಳಿಸಿದ್ದರು ಈ ಕಮ್ಯುನಿಷ್ಟರು. ಇತ್ತ 1970 ರ ಮಾರ್ಚ್ ವೇಳೆಗೆ ಕಮ್ಯುನಿಷ್ಟರ ಅಟಾಟೋಪಗಳಿಂದ ಬೇಸತ್ತ ಪಶ್ಚಿಮ ಬಂಗಾಳದಲ್ಲಿ ಬಂಗಾಳ ಕಾಂಗ್ರೆಸ್- ಸಿಪಿಐ(ಎಂ) ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದ ಅಜೋಯ್ ಮುಖರ್ಜಿ ಮಾ.16ರಂದು ರಾಜೀನಾಮೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಇದನ್ನೇ ನೆಪವಾಗಿಟ್ಟುಕೊಂಡ ಕಮ್ಯುನಿಷ್ಟರು ಮಾ.17ರಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದರು. ಇದೇ ದಿನ ಕಾಂಗ್ರೆಸ್ ನಾಯಕರಿದ್ದ ಸೈನ್ ಬಾರಿ ಕುಟುಂಬದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು. ಪ್ರತಿಭಟನೆಯ ನೆಪದಲ್ಲಿ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳಲು, ಶ್ರೀಮಂತವಾಗಿದ್ದ ಸೈನ್ ಬಾರಿ ಕುಟುಂಬದ ಭೂಮಿಯನ್ನು ಕಬಳಿಸಲು ಮುಂದಾದ ಮಾನವತಾವಾದಿ ಕಮ್ಯುನಿಷ್ಟರು, ಸಮಾರಂಭ ನಡೆಯುತ್ತಿದ್ದ ಮನೆಗೇ ನುಗ್ಗಿ, ಸೈನ್ ಬಾರಿ ಕುಟುಂಬದ ಮಗಳ ಮಗುವನ್ನೂ ಲೆಕ್ಕಿಸದೇ ಸಿಕ್ಕಸಿಕ್ಕವರ ಮೇಲೆಲ್ಲಾ ಹಲ್ಲೆ ನಡೆಸಿದರು. ನಬಾ ಸೈನ್ ಹಾಗೂ ಆತನ ಇಬ್ಬರು ಸಹೋದರರು, ಮನೆಯ ಅಥಿತಿಗಳಿಗೆ ರಿಕ್ಷಾ ಸೌಲಭ್ಯ ಒದಗಿಸಲು ಬಂದಿದ್ದ ಮೊಲೋಯ್ ಸೈನ್ ನನ್ನು ಹತ್ಯೆ ಮಾಡಿದ್ದರು. ಸೈನ್ ಬಾರಿ ಕುಟುಂಬದ ಸಹೋದರರ ರಕ್ತವನ್ನು ಅವರ ತಾಯಿಗೇ ಕುಡಿಸಿ ವಿಕೃತಿ ಮೆರೆದ ಚರಿತ್ರೆ ಕಮ್ಯುನಿಷ್ಟರದ್ದೇ…ಇದು ಕೇವಲ ಒಂದು ಘಟನೆ. 1968 ರಲ್ಲಿ 575, 1969 ರಲ್ಲಿ 575, 1970 ರಲ್ಲಿ 640 ಜನರು ಕಮ್ಯುನಿಷ್ಟರ ಅಧಿಕಾರವಿದ್ದ ಪಶ್ಚಿಮಬಂಗಾಳದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ!. ಇದು ಕಾಮ್ರೆಡ್ ಗಳ ರಕ್ತಪಾತದ ಕಥೆ. ತಮ್ಮ ಪಕ್ಷದ ನಾಯಕರನ್ನು ಹತ್ಯೆ ಮಾಡಿದರೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾತ್ರ ಪಶ್ಚಿಮ ಬಂಗಾಳದ ಸರ್ಕಾರದ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲ, ಇದು ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿಗೆ ಸಾಕ್ಷಿ.
ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಥವಾ ಅನ್ಯ ಪಕ್ಷಕ್ಕೆ ಮತ ನೀಡದಂತೆ ಯಾರನ್ನಾದರೂ ತಡೆಯುವ ಕೌಶಲ್ಯವೂ ಕಮ್ಯುನಿಷ್ಟರಿಗೆ ಕರತಲಾಮಲಕವಾಗಿತ್ತು.

ಇವರು ಭೂ ಸುಧಾರಣಾ ಕಾಯ್ದೆಯಲ್ಲಿ ನಡೆಸಿರುವ ಅಕ್ರಮಗಳಿಗೆ ಕೊನೆಯೇ ಇಲ್ಲ!, ಕಮ್ಯುನಿಷ್ಟರ ವಿರುದ್ಧ ಮಾತನಾಡುವವರ ಭೂಮಿಯನ್ನು ಭೂಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಬಡವರಿಗೆ ಹಂಚುತ್ತೇವೆ ಎಂದು ವಶಕ್ಕೆ ಪಡೆಯುವುದು ನಂತರ ಅದನ್ನು ಕಬಳಿಸುವುದು ಇವರಿಗೆ ಸಿದ್ಧಿಸಿರುವ  ಕಲೆ. ನೆಮ್ಮದಿಯಿಂದ ಇದ್ದ ಅದೆಷ್ಟೋ ಭೂಮಾಲಿಕರು ಇವರ ರಾಜಕೀಯ ವೈರಿ ಪಕ್ಷದ ಕಾರ್ಯಕರ್ತರೋ, ಸದಸ್ಯರೋ ಆಗಿದ್ದರೆಂದು ಅವರ ವಿರುದ್ಧ ಸುಳ್ಳು ಆರೋಪ ಹೊರೆಸಿ, ಟಿಎಂಸಿ ಸದಸ್ಯರು ಬಡವರ ಜಮೀನಿನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಭೂಮಿ ಕಬಳಿಸುತ್ತಿದ್ದರು, ಇವೆಲ್ಲವೂ ಕಮ್ಯುನಿಷ್ಟರ ಕೃಪಾಪೋಷಿತ ಅಧಿಕಾರಿಗಳ ಸಹಕಾರದಿಂದಲೇ ನಡೆಯುತ್ತಿತ್ತು.

ಪ್ರತಿ ವರ್ಷದ ಏಪ್ರಿಲ್ ನ ಕೊನೆಯ ದಿನದಂದು ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದಲ್ಲಿ ಸನ್ಯಾಸಿಗಳ ಗುಂಪೂಂದು ಮೌನ ಪ್ರತಿಭಟನಾ ಮೆರವಣಿಗೆ ನಡೆಸುತ್ತದೆ, ಈ ಪ್ರತಿಭಟನೆಯ ಕಾರಣದ ಹಿಂದಿರುವುದೂ ಕಮ್ಯುನಿಷ್ಟರ ಕೊಡುಗೆಯೇ. ಮಹಾನ್ ಮಾನವತಾವಾದಿಗಳಾಗಿರುವ ಕಮ್ಮಿನಿಷ್ಠರು ಗುಜರಾತ್ ನ ನರಮೇಧದ ಬಗ್ಗೆ ಈ ಕ್ಷಣಕ್ಕೂ ಎದೆಬಡಿದುಕೊಂಡು ಕಣ್ಣೀರಿಡುತ್ತಾರೆ, ತಪ್ಪೇ ಇಲ್ಲದವರನ್ನು ದೂಷಿಸುವುದನ್ನು ಇನ್ನೂ ಬಿಟ್ಟಿಲ್ಲ, ಹಾಗೆ ಮಾತನಾಡಿದಾಗಲೆಲ್ಲಾ  1982 ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದ ಆನಂದ್ ಮಾರ್ಗ್ ನಲ್ಲಿ ಮಾರ್ಕ್ಸ್ ವಾದಿಗಳಾಗಿದ್ದ ಒಂದಷ್ಟು ಮಂದಿ ದುರುಳರು 16 ಜನ ಸನ್ಯಾಸಿಗಳು ಹಾಗೂ ಒಬ್ಬ ಸನ್ಯಾಸಿನಿಯನ್ನು ನಡು ರಸ್ತೆಯಲ್ಲೆ ಸಜೀವ ದಹನ( ಆನಂದ್ ಮಾರ್ಗ್ ನರಮೇಧ) ಮಾಡಿ, ಅವರ ದೇಹಗಳನ್ನು ಬಿಜೋನ್ ಸೇತುವೆಯ ರೈಲ್ವೆ ಟ್ರ್ಯಾಕ್ ಮೇಲೆ ನೇತು ಹಾಕಿದ್ದ ಘಟನೆಯನ್ನು ಕಾಮ್ರೆಡ್ ಗಳು ನೆನೆಸಿಕೊಳ್ಳಲಿ ಅವರ ಸಂಘಟನೆ ಬಗ್ಗೆ, ಅವರ ಬಗ್ಗೆ ಅವರಿಗೇ ಅಸಹ್ಯ ಹುಟ್ಟುವುದು ಖಂಡಿತ. ಉಹೂ ಅದೂ ಆಗುವುದಿಲ್ಲ ಯಾಕೆ ಗೊತ್ತೇನು,  ಆನಂದ್ ಮಾರ್ಗ್ ನರಮೇಧ ನಡೆದಾಗ ಈಗಿನಂತೆ ಟಿವಿಗಳಿರಲಿಲ್ಲ. ಬ್ರೇಕಿಂಗ್ ನ್ಯೂಸ್ ಗಳಿರಲಿಲ್ಲ, ಆದರೂ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕಿದ್ದ ಮಾರ್ಕ್ಸ್ ವಾದವನ್ನು ಬೆಂಬಲಿಸುತ್ತಿದ್ದ ಸರ್ಕಾರದ ಮುಖ್ಯಸ್ಥ ಜ್ಯೋತಿ ಬಸು, “17 ಜನ ಸನ್ಯಾಸಿಗಳು ಮಕ್ಕಳ ಕಳ್ಳರೆಂಬ ವದಂತಿ ಇತ್ತು, ಆದ್ದರಿಂದ ಸನ್ಯಾಸಿಗಳನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ, ಅದೊಂದು ಸಾರ್ವಜನಿಕ ಆಕ್ರೋಶದಿಂದ ಉಂಟಾದ ಘಟನೆಯೆಂದು ನಾಚಿಕೆ ಇಲ್ಲದೇ” ಕ್ಷುಲ್ಲಕ ಘಟನೆ ಎಂಬಂತೆ ಹೇಳಿಕೆ ನೀಡಿದ್ದರು. ಗುಜರಾತ್ ಸರ್ಕಾರ ಭಯೋತ್ಪಾದಕಿ ಇಶ್ರಾತ್ ಜಹಾನ್ ಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಎದೆಬಡಿದುಕೊಂಡು ಕಣ್ಣೀರಿಡುತ್ತಾ ಪ್ರಧಾನಿಗೆ ಶಪಿಸುತ್ತಿದ್ದಾರಲ್ಲಾ, ಆನಂದ್ ಮಾರ್ಗ್ ನರಮೇಧದಂತಹ ಘಟನೆಗಳಿಗೇಕೆ ಇವರು ಕಣ್ಣೀರಿಡುವುದಿಲ್ಲ?

ಬೆಂಗಾಲ್ಸ್ ನೈಟ್ ವಿತೌಟ್ ಎಂಡ್ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ/ ಮಾಜಿ ಶಾಸಕ ಅಫ್ತಾಬುದ್ದೀನ್ ಮಂಡೋಲ್ ನೀಡಿರುವ ಮಾಹಿತಿಯ ಪ್ರಕಾರ ಕಮ್ಯುನಿಷ್ಟರು ಪಂಚಾಯತ್ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆ ವೆರೆಗೂ ಓಟ್ ರಿಗ್ಗಿಂಗ್ ಮಾಡುವುದರಲ್ಲಿ ಮಹಾನಿಸ್ಸೀಮರು! ಅಸಲಿಯತ್ತೇನೆಂದರೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಕಮ್ಯುನಿಷ್ಟರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವನ ಕೈ ಕತ್ತರಿಸಿದ ಉದಾಹರಣೆಯೂ ಇದೆ. ಹಾಗಂತ ಅವರೇನು ಭಾರಿ ಅಂತರದಿಂದ ಗೆಲ್ಲುವಂತೆ ಓಟ್ ರಿಗ್ಗಿಂಗ್ ಮಾಡುತ್ತಿರಲಿಲ್ಲ, ಯಾರಿಗೂ ಅನುಮಾನ ಬಾರದಂತೆಯೇ ಓಟ್ ರಿಗ್ಗಿಂಗ್ ಮಾಡಿ ಬಹುಮತ ಗಳಿಸುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಖಂಡುವಾ ಎಂಬ ಪ್ರದೇಶವಿದೆ ಅಲ್ಲಿ ಇರುವವರೆಲ್ಲಾ ಕಮ್ಯುನಿಷ್ಟರ ತಲೆ ಕಂಡರೆ ಆಗದವರೇ, ಆದರೂ ಗ್ರಾಮದ 5 ಕಿ.ಮಿ ಪ್ರದೇಶದಲ್ಲಿರುವ ಬೂತ್ ಗಳನ್ನು ರಿಗ್ ಮಾಡಿ ಮತ ಪಡೆಯುತ್ತಾರೆ. ಒಟ್ಟಿನಲ್ಲಿ ಓಟ್ ರಿಗ್ಗಿಂಗ್ ಮಾಡುವುದು ಕಮ್ಯುನಿಷ್ಟರ ಗೆಲುವಿನ ಗುಟ್ಟು.

ಕೊನೆಯದಾಗಿ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಎರಡೂ ರಾಜ್ಯಗಳು ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಭಾರತದಲ್ಲೇ ಅತ್ಯಂತ ಶ್ರೇಷ್ಠತೆ ಹೊಂದಿದೆ, ಭಾರತೀಯತೆಯನ್ನು ಪ್ರತಿಬಿಂಬಿಸುವ, ಪ್ರತಿನಿಧಿಸುವ ಎಲ್ಲವನ್ನೂ ಈ ರಾಜ್ಯಗಳಲ್ಲಿ ಕಾಣಬಹುದು, ಭಾರತದ ಮುಕುಟವಾಗಿರುವ ಜಮ್ಮು-ಕಾಶ್ಮೀರ ನೆಹರು ಕಪಿಮುಷ್ಟಿಗೆ ಸಿಲುಕಿ ತನ್ನತನವನ್ನೇ ಕಳೆದುಕೊಂಡಿತು, ನೆಹರು ಭಾರತೀಯತೆಯ ಪ್ರತೀಕವಾಗಿದ್ದ ರಾಜ್ಯವನ್ನು ನಿರ್ನಾಮ ಮಾಡಿದರು, ನೆಹರುವಿಗೆ ಪ್ರೀತಿಪಾತ್ರವಾಗಿದ್ದ ಕಮ್ಯುನಿಸಂ,(ಕಮ್ಮಿ ನಿಷ್ಠೆ) ಭಾರತೀಯತೆಯ ಪ್ರತೀಕವಾಗಿದ್ದ, ಹೆಮ್ಮೆಪಡಲು ಎಲ್ಲವನ್ನೂ ಹೊಂದಿದ್ದ ಪಶ್ಚಿಮ ಬಂಗಾಳವನ್ನು ನಿರ್ನಾಮ ಮಾಡಿದೆ. ಈಗ ದೇಶ ಮುನ್ನಡೆಯುತ್ತಿರುವ ಕಾರಣದಿಂದ ಅಸ್ಥಿತ್ವದ ಬಗ್ಗೆ ಚಿಂತಾಕ್ರಾಂತರಾಗಿರುವ ಕಾಂಗ್ರೆಸ್ಸಿಗರು- ಕಮ್ಯುನಿಷ್ಟರು ಪಶ್ಚಿಮ ಬಂಗಾಳದ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್- ಕಮ್ಯುನಿಷ್ಟರು ಕಾಲಿಟ್ಟಲ್ಲೆಲ್ಲಾ ಅಲ್ಲಿ ಸಿಗುವುದು ಕರಾಳ ರಾತ್ರಿಯೇ ಹೊರತು ಭರವಸೆಯ ಬೆಳದಿಂಗಳಲ್ಲ. Die soon communism…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments