ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 26, 2016

ಬಾಜಿರಾಯನ ಉತ್ತರದ ದಂಡಯಾತ್ರೆ

‍ನಿಲುಮೆ ಮೂಲಕ

-ರಂಜನ್ ಕೇಶವ

3542284598_ea990137ddಏಪ್ರಿಲ್ 9, 1737

ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆ ತೋರುವಲ್ಲೇ ಡೇರೆ ಹಾಕಿತ್ತು. ಮರಾಠರ ಖಡ್ಗಗಳನ್ನು ಹೊತ್ತ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೇ ಯಾವ ಮುನ್ಸೂಚನೆಯಿಲ್ಲದೇ ಒಂದೇ ರಭಸಕ್ಕೆ ದೆಹಲಿಯ ಸರಹದ್ದನ್ನು ತಲುಪಿತ್ತು. ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು. ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು. ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ. ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ. ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ.

ಹಾಗಂತ ದೆಹಲಿಯಲ್ಲಿ ಸೇನಾಬಲವಿಲ್ಲವೆಂದಲ್ಲ. ಹನ್ನೆರಡು ಸಾವಿರ ಮೊಘಲ್ ಮತ್ತು ರಾಜಪೂತ ಅಶ್ವದಳದ ಜೊತೆಗೆ ಬಂದೂಕುಧಾರಿಗಳ ಒಟ್ಟು ಇಪ್ಪತ್ತು ಸಾವಿರ ಸಂಖ್ಯೆಯಷ್ಟು ಸೇನೆಯಿತ್ತು. ಅದರಲ್ಲಿ ಸುಮಾರು ನಾಲ್ಕು ಸಾವಿರ ಸೇನೆ ಮೊಘಲ್ ಬಾದಷಾಹನಿಗೇ ಕಾವಲು ಕಾಯಲು ಇದ್ದವರು.

ಅಮೀರ್ ಖಾನ್ ಮೊಘಲ್ ಸೇನಾಪತಿಯಾಗಿ ಸೇನೆಯನ್ನು ಮುನ್ನಡೆಸುತಿದ್ದ. ಅವನ ಆ ಸೇನೆಯಲ್ಲಿ ಮುಖ್ಯವಾಗಿ ಅಫ್ಘಾನೀ ಪಠಾಣರು, ತುರ್ಕರು ಮತ್ತು ಮಧ್ಯ ಏಷ್ಯಾದವರಿದ್ದರು. ಏಪ್ರಿಲ್ 10 ರ ಮಧ್ಯರಾತ್ರಿಯಲ್ಲಿ ತಮ್ಮ ಡೇರೆಯನ್ನು ಮುನ್ನಡೆಸುತ್ತಾ ತಲ್ಕತೋರಾದ ಮಾರ್ಗವಾಗಿ ಮುನ್ನಡೆದರು. ತಮ್ಮ ಬಂದೂಕುಗಳನ್ನು ಮಧ್ಯ ಮಧ್ಯಗಳಲ್ಲಿ ರಕ್ಷಣೆಗೆ ಸ್ಥಾಪಿಸುತ್ತಾ ನಿಧಾನವಾಗಿ ಚಲಿಸಿದರು. ಹಾಗೆಯೇ ಮುಂಜಾನೆಯಷ್ಟರಲ್ಲಿ ಮರಾಠರನ್ನು ಎದುರಿಸಲು ಸಿದ್ಧರಾದರು. ಆದರೆ . . . ಬಾಜಿರಾಯ ಕೈಗೆ ಸಿಗಲೇ ಇಲ್ಲ. ಅಮಿರ್ ಖಾನ್ ಪುನಃ ಪರಿಸ್ಥಿತಿಯ ಅರಿವು ಬಾರದಿದ್ದರಿಂದ ರಕ್ಷಣಾತ್ಮಕವಾಗಿ ಮುಂದೆ ನಡೆಯುತ್ತಿದ್ದ. ಆದರೆ ಅವನ ಒಬ್ಬ ಮೀರ್ ಹಸನ್ ಖಾನ್ ಎಂಬ 2000 ಅಶ್ವದಳದ ಕಿರಿಯ ಅಧಿಕಾರಿ ಅದೇನೋ ದುಸ್ಸಾಹಸ ಮಾಡುವೆ ಎಂದು ಮುನ್ನುಗ್ಗಿ ರಣಾಂಗಣಕ್ಕೆ ಧುಮುಕಿದ . ಅಮಿರ್ ಖಾನ್ ಒಬ್ಬ ಹೇಡಿ ಮುದುಕ ಎಂದು ಜರಿದು ಹಸನ್ ನ ಜೊತೆಗೆ ಇನ್ನಷ್ಟು ಸರದಾರರು ಜೊತೆಗೂಡಿದರು. ಬಾಜಿರಾಯ ಅವರು ಬರುತ್ತಿದ್ದನ್ನು ದೂರದಿಂದ ಗಮನಿಸಿತ್ತಿದ್ದ. ತಮ್ಮ ಬಾಣಗಳ ಮಳೆಗೈಯುವ ಯಂತ್ರಾಯುಧದ (Swivel Guns) ಅಂತರಕ್ಕೆ ಇನ್ನಷ್ಟು ಹತ್ತಿರ ಬರಲೆಂದು ತನ್ನ ಸೇನೆಯನ್ನು ಇನ್ನಷ್ಟು ಹಿಂದೆ ತೆಗೆದುಕೊಂಡ. ಅದರಿಂದ ಹಸನ್ ತನ್ನ ಸೇನೆಯನ್ನು ತಲ್ಕತೋರಾದಿಂದ ಸುಮಾರು ಮುಕ್ಕಾಲು ಮೈಲು ಖಾಲಿ ಮೈದಾನಕ್ಕೆ ಎಳೆದುಕೊಂಡು ತಂದಿದ್ದ! ಪಾಪ, ಹಸನನಿಗೆ ಗೊತ್ತಿರಲಿಲ್ಲ, ತಾನು ನೇರ ಗುಂಡಿಗೆ ಬಿದ್ದಿದ್ದೇನೆಂದು!

 

ತಕ್ಷಣ ಮರಾಠಾ ಭರ್ಜಿದಾರೀ ಅಶ್ವಸೇನೆ ವೇಗವಾಗಿ ಅವರ ಮೇಲೆ ಮುಗಿಬಿದ್ದರು. ಮರಾಠರ ಕೆಲವು ಸಾವು ನೋವನ್ನು ಹೊರತುಪಡಿಸಿ ಮೊಘಲರನ್ನು ಸಂಪೂರ್ಣ ಪರಾಸ್ತಗೊಳಿಸಿದರು. ಹನ್ನೆರಡಕ್ಕಿಂತ ಹೆಚ್ಚು ಮೊಘಲ್ ಸಾಮಂತರನ್ನು ಕೊಂದು ಆರು ನೂರಕ್ಕಿಂತ ಹೆಚ್ಚು ಮೊಘಲ್ ಸೈನಿಕರನ್ನು ಕತ್ತರಿಸಿದರು . ಅದರ ಮೇಲೆ ಎರಡು ಸಾವಿರ ಕುದುರೆಗಳು, ಒಂದು ಆನೆ ಮತ್ತು ಅಪಾರ ಬಂದೂಕು ಶಸ್ತ್ರಾಸ್ತ್ರಗಳನ್ನು ಬಾಜಿರಾಯ ವಿಜಯದುಂದುಭಿ ಬಾರಿಸಿ ವಶಪಡಿಸಿಕೊಂಡ. ನಂತರ ಮೊಘಲ್ ಬಾದಷಾಹ ಮಾಳ್ವಾ ಪ್ರಾಂತವನ್ನು ಬಿಟ್ಟುಕೊಟ್ಟು ತನ್ನ ಅನೇಕ ಸಂಸ್ಥಾನಗಳಿಂದ ಕಾಲುಭಾಗದಷ್ಟು ಆದಾಯವನ್ನು ಬಾಜಿರಾಯನಿಗೆ ಬರೆದುಕೊಟ್ಟ. ಅಲ್ಲಿಗೆ ಮೊಘಲ್ ಸಾಮ್ರಾಜ್ಯ ಆರ್ಥಿಕವಾಗಿ ದಿವಾಳಿಯಾಯಿತು.

ಅದಾಗಿ ಮತ್ತೆ ಎರಡು ವರ್ಷಗಳ ನಂತರ ಪರ್ಷಿಯಾದ ನಾದಿರ್ ಷಾಹ್ ದೆಹಲಿಯ ಮೇಲೆ ದಾಳಿಯಿಟ್ಟ. ಅವನಿಗೆ ಕೆಲವು ಪಂಜಾಬಿನ ನಿಜಾಮರು ಮತ್ತಿನ್ನುಳಿದ ಕೆಲವು ಮೊಘಲ್ ಸರದಾರರ ಬೆಂಬಲವಿತ್ತು. ಮರಾಠರನ್ನು ದೆಹಲಿಯಿಂದ ದೂರ ಸರಿಸುವ ಸಲುವಾಗಿ ನಾದಿರ್ ಷಾಹ ಸುಮಾರು ನೂರು ಕೋಟಿಯಷ್ಟು ಲೂಟಿಗೈದು ಮೊಘಲರ ಮಯೂರ ಸಿಂಹಾಸನ ಮತ್ತು ಕೊಹಿನೂರ್ ವಜ್ರವನ್ನು ತೆಗೆದುಕೊಂಡ. ನಾದಿರ್ ಷಾಹನ ವಾರ್ತೆ ಬಾಜಿರಾಯನಿಗೆ ತಲುಪಿ ತನ್ನ ಕುದುರೆಯನ್ನು ಪುನಃ ದೆಹಲಿಯತ್ತ ಚಲಿಸುವಷ್ಟರಲ್ಲಿ ನಾದಿರ್ ಷಾಹ ಭಾರತದಿಂದ ಪರಾರಿಯಾಗಿದ್ದ. ದುರ್ದೈವವೆಂಬಂತೆ ಬಾಜಿರಾಯನು ಯಾವುದೋ ಒಂದು ವಿಲಕ್ಷಣ ಖಾಯಿಲೆಯಿಂದ ಏಪ್ರಿಲ್ 28, 1740 ಯಲ್ಲಿ ಮರಣವನ್ನೊಪ್ಪಿದ. ಎಲ್ಲಾದರೂ ಅವನು ಇನ್ನು ಹತ್ತು ವರ್ಷಗಳಷ್ಟು ಹೆಚ್ಚು ಕಾಲ ಬದುಕಿದ್ದರೆ ಇತಿಹಾಸವೇ ಬೇರೆಯಾಗಿರುತ್ತಿತ್ತು.

ಚಿತ್ರಕೃಪೆ :- ಗೂಗಲ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments