ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು
-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210
23-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಒಂದೊಮ್ಮೆ ಆತನನ್ನು ಹಾಗೇ ಹೇಳಲು ಇವರ ಬಳಿ ಇರುವ ಆಧಾರವಾದರೂ ಏನು? ಹೀಗೆಲ್ಲ ಮಾತನಾಡುವ ಇವರಿಗೆ ಈ ದೇಶದ ನೈಜ ಇತಿಹಾಸದ ಪರಿಚಯವಿದೆಯೇ? ದೇಶಭಕ್ತರೆಂದು ಹೇಳಲು ಕಾಂಗ್ರೆಸ್, ಕಮ್ಯುನಿಷ್ಟ್ ವಿಚಾರಗಳನ್ನು ಒಪ್ಪಿಕೊಂಡರೆ ಮಾತ್ರವೇ? ಈ ರೀತಿಯ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ರ ಜೀವನವನ್ನು ನಾವು ನಮ್ಮದೇ ಸರಿ ಎಂದು ನಂಬಿಕೊಂಡು ಬಂದಿರುವ ಸಿದ್ಧಾಂತಗಳನ್ನು ಒಂದಷ್ಟು ಬದಿಗೆ ಸರಿಸಿ ವಿಶ್ಲೇಷಿಸಿದರೆ ಈ ಸ್ವಾತಂತ್ರ್ಯವೀರನ ಜೀವನಗಾಥೆ ನೈಜ್ಯ ರಾಷ್ಟ್ರಪ್ರೇಮಿಯ ಮನಸ್ಸನ್ನು ಖಂಡಿತವಾಗಿ ಆವರಿಸಿಕೊಳ್ಳುತ್ತದೆ.
ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಸಾವರ್ಕರರು ಬ್ರಿಟಿಷರಿಗೆ ಬರೆದ ಪತ್ರವೊಂದನ್ನು ಆಧಾರವಾಗಿಟ್ಟುಕೊಂಡು ಈ ಮಂದಿ ಸಾವರ್ಕರರನ್ನು ಅಪಮಾನಿಸಲು ಹೊರಟಿರುವುದು ಅಪಮಾನದ ಸಂಗತಿ! ಪತ್ರ ಬರೆದಿದ್ದೇನೋ ಹೌದು. ಅದು ಒಂದಲ್ಲ ಆರು ಪತ್ರಗಳು! ಇದರ ಹಿಂದಿದ್ದ ಉದ್ದೇಶ ಸ್ಪಷ್ಟ! ಈ ಸಮಯದಲ್ಲಿ ಹಿರಿಯರೊಬ್ಬರು ಹೇಳಿದ, ಕಮ್ಯುನಿಷ್ಟ್ ಮತ್ತು ನಕ್ಸಲ್ ಒಲವಿರುವುವ ವ್ಯಕ್ತಿಯೊಬ್ಬರು ನಡೆದುಕೊಂಡ ಘಟನೆಯನ್ನೊಮ್ಮೆ ನೆನಪುಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ. ಅವರೇ ಹೇಳುವಂತೆ,-‘ಬೆಂಗಳೂರಿನ ಓರ್ವ ಗಾಂಧಿವಾದಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅಹಿಂಸಾವಾದಿ ಎಂದು ಹೇಳಿಕೊಳ್ಳುವ ಈ ವ್ಯಕ್ತಿ, ನಕ್ಸಲರನ್ನು ಜೈಲಿನಿಂದ ಬಿಡಿಸಿಕೊಂಡು ಬರುವ ಮಹಾನುಭಾವ, ಪಂಚೆ ಶಲ್ಯ ಹೊದ್ದು ಈಗಲೂ ಎಲ್ಲಾ ಹೋರಾಟದಲ್ಲೂ ಭಾಗವಹಿಸಿ, ಅವರ ಭಾಷಣದಿಂದ ಮಾಧ್ಯಮದಲ್ಲಿ ಒಳ್ಳೆಯ ಪ್ರಚಾರ ಪಡೆದುಕೊಳ್ಳುತ್ತಾರೆ. ವೀರಸಾವರ್ಕರ್ ಬರೆದಿರುವುದು ಎನ್ನಲಾದ ಪ್ರತಿಯೊಂದನ್ನು ಈಗಲೂ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅವರ ಮನೆಗೆ ಹೋದವರಿಗೆಲ್ಲರಿಗೂ ಅದನ್ನು ತೋರಿಸಿ, ಸಾವರ್ಕರರ ಬಗ್ಗೆ ಅವಹೇಳನದ ಮಾತುಗಳನ್ನಾಡುತ್ತಾರೆ. ಅವರ ಮನೆಗೆ ನಾನೊಮ್ಮೆ ಹೋದಾಗ, ಆ ಪತ್ರದ ಹಿನ್ನೆಲೆ ಏನು ಎಂಬುದು ನಿಮಗೆ ತಿಳಿದಿದೆಯೇ?! ಎಂದು ಪ್ರಶ್ನಿಸಿದೆ. “ ದೇಶದ್ರೋಹಿ ಪತ್ರದ ಹಿನ್ನೆಲೆ ಬಗ್ಗೆ ನಾನೇಕೆ ತಿಳಿದುಕೊಳ್ಳಬೇಕು” ಎಂದು ಉತ್ತರಿಸಿದರು. ಅವರ ಅಜ್ಞಾನಕ್ಕೆ ಅನುಕಂಪ ವ್ಯಕ್ತಪಡಿಸಿ ಅವರ ನಾಲ್ಕು ಕತ್ತೆಯ ವಯಸ್ಸಿಗೆ ಅಗೌರವವಾಗಿ ನಾನೇಕೆ ಮಾತಾಡಬೇಕು ಅಂತ ಭಾವಿಸಿ ಎದ್ದು ಬಂದೆ ಎನ್ನುತ್ತಾರೆ. ಸಾವರ್ಕರರು ಬರೆದ ಪತ್ರಗಳ ಉದ್ದೇಶವನ್ನು ತಿಳಿದುಕೊಳ್ಳುವ ಸೌಜನ್ಯ ಈ ವಿಚಾರವಾದಿಗಳಿಗಿಲ್ಲ! ಒಂದೊಮ್ಮೆ ಸಾವರ್ಕರ್ ಹಿಂದೂವಾದಿ ಆಗಿರದೆ ಇವರ ಪಾಳೆಯದ ವ್ಯಕ್ತಿಯಾಗಿದ್ದರೆ ಅವರ ವಿಚಾರಧಾರೆಗೆ ಇವರದೇ ವಿಶ್ಲೇಷಣೆ ನೀಡಿ, ಅವರನ್ನು ಮಹಾನ್ ಸಮಾಜ ಸುಧಾರಕನೆಂದು ಬಿಂಬಿಸಿ ಬಿಡುತ್ತಿದ್ದರೇನೋ! ಆದರೆ ಸಾವರ್ಕರ್ ಹಿಂದುತ್ವನಿಷ್ಠ ಮಹಾನ್ ಸ್ವಾಭಿಮಾನಿ ದೇಶಭಕ್ತ!
ಒಂದೊಮ್ಮೆ ಇವರ ಪತ್ರದ ಬಗ್ಗೆ ಮಾತಾಡುವುದಾದರೆ, ಸ್ವಾತಂತ್ರ್ಯವೀರ ಸಾವರ್ಕರ್ ಜೈಲಿನಿಂದ ಬಿಡುಗಡೆಗೊಂಡ ಮೇಲೇನೂ ಕಮ್ಯುನಿಷ್ಟರಂತೆ ಬ್ರಿಟಿಷರ ಏಜಂಟರಂತೆ ನಡೆದುಕೊಂಡರೇನು?! ಎನ್ನುವ ಸಾಮಾನ್ಯ ತರ್ಕ ಇವರ ತಿಳುವಳಿಕೆಗೆ ನಿಲುಕುತ್ತಿಲ್ಲ ಎಂದಾದರೇ ಇವರ ಧೋರಣೆ ಏನೆಂಬುದು ಯಾರಿಗಾದರೂ ಅರ್ಥವಾಗುವಂತದ್ದೇ! ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಈ ಕಮ್ಯುನಿಷ್ಟರು ಭಾರತದ ಪರವಾದ ನಿಲುವು ಹೊಂದಿಲ್ಲ, ಈಗಲೂ ಇಲ್ಲ ಎನ್ನುವುದನ್ನು ಇತ್ತೀಚಿನ ಘಟನೆಗಳು ಸಾಕ್ಷೀಕರಿಸುತ್ತವೆ. ಭಗತ್ ಸಿಂಗರನ್ನು ಹಾಡಿ ಹೊಗಳುತ್ತಿರುವ ಕಾಂಗೈಗಳು ಅದೇ ಕ್ರಾಂತಿವೀರರನ್ನು ‘ದಾರಿತಪ್ಪಿದ ದೇಶಭಕ್ತರು’ ಎಂದು ದೇಶಭಕ್ತಿಗೆ ಸಂಕುಚಿತ ವಿಶ್ಲೇಷಣೆ ನೀಡಿ, ಅವರನ್ನು ನೇಣುಗಂಬದಿಂದ ತಪ್ಪಿಸುವ ಅವಕಾಶವನ್ನು ಕೈಚೆಲ್ಲಿದ್ದ ಇವರ ಇತಿಹಾಸವನ್ನೊಮ್ಮೆ ನೆನಪುಮಾಡಿಕೊಳ್ಳಲಿ! ಇಂತಹ ಕುಖ್ಯಾತಿ ಹೊಂದಿರುವ ಈ ಮಂದಿ ಒಬ್ಬ ಸ್ವಾಭಿಮಾನಿ ದೇಶಭಕ್ತನ ಅಪಪ್ರಚಾರದಲ್ಲಿ ತಮ್ಮ ಅಸ್ಥಿತ್ವಕಾಣಲು ಹೊರಟಿದ್ದಾರೆ ಎಂದರೆ ಇವರು ಇತಿಹಾಸವನ್ನೇ ಅಣಕಿಸಲು ಹೊರಟಿದ್ದಾರೆ ಎಂದೆನಿಸುತ್ತದೆ!
ಐವತ್ತು ವರ್ಷಗಳ ಸೆರೆವಾಸ ಶಿಕ್ಷೆ ಘೋಷಿತವಾದ ಮೇಲೆ ಜೈಲಿನಲ್ಲಿ ಕೊಳೆತು ಕಾಲ ಕಳೆಯುವ ಚಾತಿ ಸಾವರ್ಕರದ್ದಾಗಿರಲಿಲ್ಲ! ಅವರು ಅಂಡಮಾನಿನಲ್ಲಿದ್ದಾಗ ಎರಡನೇ ವಿಶ್ವಯುದ್ಧದ ಲಾಭ ಪಡೆದು ಭಾರತವನ್ನು ಬ್ರಿಟಿಷ್ ಮುಕ್ತರನ್ನಾಗಿಸುವುದು ಅವರ ತಂತ್ರ! ಹೇಳಿ ಕೇಳಿ ಅವರು ಶಿವಾಜಿ ಮಹಾರಾಜರ ಅನುಯಾಯಿ! ಅವರು ಜೈಲಿನಿಂದ ಹೊರಬರಲು ಬ್ರಿಟಿಷರಿಗೆ ಅನೇಕ ಪತ್ರಗಳನ್ನು ಬರೆದಿದ್ದರು. ಇದನ್ನು ಕಮ್ಯುನಿಷ್ಟ್ ಕುತಂತ್ರಿಗಳು ‘ಕ್ಷಮಾಪಣಾ ಪತ್ರ’ ಎಂದು ಕರೆಯುತ್ತಾರೆ. ಆದರೆ ಅವರ ಉದ್ದೇಶವಿದ್ದದ್ದು ಹೇಗಾದರೂ ಮಾಡಿ ಜೈಲಿನಿಂದ ಹೊರಬಂದು ಕ್ರಾಂತಿಕಾರಿ ಹೋರಾಟವನ್ನು ಸಂಘಟಿಸಬೇಕೆಂಬುದಾಗಿತ್ತು. ಕಮ್ಯುನಿಷ್ಟ್ ಮತ್ತು ಕಾಂಗೈಗಳು ಇದೊಂದು ಪತ್ರವನ್ನೇ ಆಧಾರವನ್ನಾಗಿಟ್ಟುಕೊಂಡು ಸಾವರ್ಕರ್ ದೇಶದ್ರೋಹಿ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಸಾವರ್ಕರರು ಜೈಲಿನಿಂದ ಹೊರಬರಲು ಕ್ಷಮೆಯಾಚಿಸಿದರು ಎನ್ನುವ ಅತೀ ಕೆಟ್ಟ ಚಿಂತನೆಗಳನ್ನು ದೃಢಪಡಿಸಲು 1975 ರಲ್ಲಿ ಸರ್ಕಾರ Pesonal Settlement in Andaman ಎಂಬ ಪುಸ್ತಕವನ್ನು ಹೊರತಂದಿದ್ದೇ ಸಾವರರ್ಕರರನ್ನು ದೇಶದ್ರೋಹಿಯೆಂದು ನಿರೂಪಿಸಲು! ಆದರೆ, ಈ ಪತ್ರಗಳನ್ನು ಪರಿಶೀಲಿಸಿದ ನಂತರ ಬ್ರಿಟಿಷ್ ಸರ್ಕಾರದ ಅಂದಿನ ಗೃಹ ಕಾರ್ಯದರ್ಶಿ ಆರ್ ಎಚ್ ಕ್ರೆಡಾಕ್ ಸಾವರ್ಕರರ ಜೊತೆ ಎರಡು ಗಂಟೆಗಳ ನಡುವೆ ಭೇಟಿಯ ನಂತರ ಬಂದ ನಿಷ್ಕರ್ಶೆ ಏನೆಂದರೆ ‘ಸಾವರ್ಕರ್‍ದ್ದು ಬೇಡಿಕೆಯಲ್ಲ, ಅವರಿಗೆ ತಮ್ಮ ತಪ್ಪುಗಳ ಬಗ್ಗೆ ಪಶ್ಚತ್ತಾಪವಿಲ್ಲ. ಅವರನ್ನು ಭಾರತದ ಯಾವುದೇ ಜೈಲಿನಲ್ಲಿಟ್ಟರೂ ಅವರು ತಪ್ಪಿಸಿಕೊಳ್ಳುವುದು ನಿಶ್ಚಿತ! ಸೆಲ್ಯುಲರ್ ಜೈಲಿನಿಂದ ಹೊರಬಿಟ್ಟರೂ ಅವರು ತಪ್ಪಿಸಿಕೊಳ್ಳುವುದು ಖಚಿತ’ ಇದು ಕ್ರೆಡಕ್ ಸರ್ಕಾರಕ್ಕೆ ಕೊಟ್ಟ ಗುಪ್ತ ವರದಿ. ಈ ವರದಿಯನ್ನು ಮುಚ್ಚಿಟ್ಟು ಕೇವಲ ಸಾವರ್ಕರರು ಬರೆದ ಪತ್ರವೊಂದನ್ನು ಹಿಡಿದುಕೊಂಡು ಆ ಪತ್ರದ ಮೂಲಉದ್ದೇಶವನ್ನು ತಿರುಚಿ ಸಾವರ್ಕರವರನ್ನು ಹಳಿಯುವುದನ್ನು ಕಾಂಗ್ರೆಸ್ ಮತ್ತು ಕಮುನಿಷ್ಟರು ಮುಂದುವರೆಸಿಕೊಂಡು ಹೋಗುತಿದ್ದಾರೆ.
ರಾಷ್ಟ್ರೀಯ ದೃಷ್ಠಿಕೋನವಿರುವ ಇತಿಹಾಸಕಾರರು, ಯಾವ ರೀತಿ ಸ್ವರಾಜ್ಯದ ಉದ್ಘೊಷ ಮಾಡಿದ ಮೊದಲ ಮಂತ್ರದ್ರಷ್ಟಾರ ಲೋಕಮಾನ್ಯ ತಿಲಕರೋ ಹಾಗೇ ಸ್ವಾತಂತ್ರ್ಯದ ಉದ್ಘೋಷ ಮಾಡಿದ ಪ್ರಥಮ ಮಂತ್ರದ್ರಷ್ಟಾರ ಸ್ವಾತಂತ್ರ್ಯವೀರ ಸಾವರ್ಕರ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ!. ದೇಶಭಕ್ತಿಯ ಹೆದ್ದೆರೆಯಾಗಿದ್ದ ಈ ಸ್ವಾತಂತ್ರ್ಯವೀರನ –
ಜಯೋಸ್ತು ತೇ ಶ್ರೀಮಹನ್ಮಂಗಲೇ,ಶಿವಾಸ್ಪದೇ ಶುಭದೇ|
ಸ್ವತಂತ್ರ ತೇ ಭಗವತಿ ತ್ವಾಮಹಂ ಯಶೋಯುತಾಂ ವಂದೇ ||
ಇದನ್ನು ಕೇಳಿದವರಿಗೆ ಈ ದೇಶದ ಬಗ್ಗೆ ರೋಮಾಂಚನವಾಗದಿರಲೂ ಸಾಧ್ಯವೇ ಇಲ್ಲವೇನೋ! ಸ್ವತಂತ್ರ್ಯತೆಯ ಈ ಉತ್ಕಟ ರಮ್ಯೋದತ್ತ ಮತ್ತು ಧ್ಯೇಯದರ್ಶಿ ಸ್ತೋತ್ರ ಸಾವರ್ಕರರ ಪ್ರತಿಭೆಯಿಂದ ಹೊರ ಹೊಮ್ಮಿದ್ದು! ಅದ್ಭುತ ಚಡಪಡಿಕೆ, ಅಲೌಕಿಕ ಬುದ್ಧಿಮತ್ತೆ, ತೇಜಸ್ ಹಾಗೂ ಆಕರ್ಷಕ ವ್ಯಕ್ತಿತ್ವ, ನಿರ್ಭಯತೆ, ನಿರ್ವೀರ್ಯನಲ್ಲೂ ಚೈತನ್ಯ ತುಂಬುವ ಅಮೋಘ ವಾಕ್ಪಟುತ್ವ , ಮರ್ಮಗ್ರಾಹಿ ವ್ಯಾಸಂಗ, ಅಸಾಮಾನ್ಯ ಕವಿತ್ವ ಮತ್ತು ಕರ್ತೃತ್ವ ಇವರಲ್ಲಿ ಹುಟ್ಟುಗುಣಗಳಾಗಿದ್ದವು. ಜೊತೆಗೆ ಉತ್ತುಂಗವನ್ನು ತಲುಪಿದ ಅವರ ದೇಶಭಕ್ತಿ, ಅತಿ ಶ್ರೇಷ್ಠ ತ್ಯಾಗ- ಇವುಗಳಲ್ಲಿ ಅವರನ್ನು ಸರಿಗಟ್ಟುವ ಮಹಾಪುರುಷರು ನೂರಾರು ವರುಷಗಳಲ್ಲಿ ಎಲ್ಲೋ ಒಬ್ಬಿಬ್ಬರು ಹುಟ್ಟಿರಬಹುದು ಎಂದು ಅವರನ್ನು ಬಲ್ಲ ಕೆಲ ಬರಹಗಾರರು ವಿಶ್ಲೇಷಿಸಿದ್ದಾರೆ. ಸಾಹಿತ್ಯಾಚಾರ್ಯ ಬಾಳಾಶಾಸ್ತ್ರೀ ಹರದಾಸರು ಹೇಳುವಂತೆ- “ಬ್ರಿಟಿಷ್ ಶಾಸಿತ ಭಾರತದ ಪ್ರಥಮ ತತ್ವಜ್ಞ ಕ್ರಾಂತಿಕಾರಿ ಸೇನಾನಿ ಎಂದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರರ ಹೆಸರನ್ನೇ ನಿಷ್ಪಕ್ಷಪಾತಿ ಇತಿಹಾಸಕಾರರಿಗೆ ಗಣಿಸಬೇಕಾದೀತು” ಎಂದು. ಅಕಸ್ಮಾತ್ ಈ ಸ್ವಾತಂತ್ರ್ಯವೀರ ಹುಟ್ಟಿರದಿದ್ದರೆ ನಮ್ಮ ಬೌದ್ಧಿಕ ದಾಸ್ಯ ಇಂದಿಗಿಂತಲೂ ಹೀನವಾಗಿರುತ್ತಿತ್ತು. ನಮ್ಮವರ 1857 ರ ಸ್ವಾತಂತ್ರ್ಯ ಹೋರಾಟದ ನೈಜತೆಯನ್ನು ಅರಿಯುವ ಅವಕಾಶ ಮತ್ತು ಅದರಿಂದ ಭಾರತೀಯರಿಗೆ ಸಿಗಬೇಕಾದ ಪ್ರೇರಣೆ ಇವುಗಳಿಂದನಾವು ವಂಚಿತರಾಗುತ್ತಿದ್ದೆವು.
ಅಂದು ಬ್ರಿಟಿಷ್ ಇತಿಹಾಸಕಾರರೂ ಅಷ್ಟೇ ಏಕೆ ಇಂದಿನ ಎಡಪಂಥೀಯ ಇತಿಹಾಸಕಾರರ ವಿರಚಿತ ಉದ್ದೇಶಿತ ತಪ್ಪುಗ್ರಹಿಕೆಯ ಇತಿಹಾಸದ ಹಳವಂಡಗಳನ್ನೇ ಉರುಹಚ್ಚಿ ಮತ್ತಷ್ಟು ಗುಲಾಮೀ ಮಾನಸೀಕತೆಯ ದಾಸರಾಗಿಬೇಕಿತ್ತು. 1857ರ ನಮ್ಮ ವೀರಾಗ್ರಣಿಗಳ ಶೌರ್ಯ ಪರಾಕ್ರಮವನ್ನು ದೇಶವಾಸಿಗಳ ಮುಂದೆ ಅನಾವರಣಗೊಳಿಸಿದ ಕೀರ್ತಿ ಈ ಸ್ವಾತಂತ್ರ್ಯವೀರನಿಗೆ ಸಲ್ಲಬೇಕು. ಈ ವೀರ, ಬ್ರಿಟಿಷರು ದೇಶವಾಸಿಗಳ ರಾಷ್ಟ್ರೀಯ ಪ್ರಜ್ಞೆ ಮಟ್ಟಹಾಕಲು ಬಿಡಲಿಲ್ಲ. ಇಂಗ್ಲಿಷರು ನಮ್ಮವರ ಸ್ವಾತಂತ್ರ್ಯ ಹೋರಾಟವನ್ನು ಕೇವಲ ವೇತನದ ತಾರತಮ್ಯಕ್ಕೆ ಪ್ರತಿಭಟನೆ ನಡೆಸಿದ ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರ ಪ್ರತಿಭಟನೆ, ಅದು ‘ಸಿಪಾಯಿ ದಂಗೆ’ ಎನ್ನುವ ಹೆಸರಿನೊಂದಿಗೆ ನಮ್ಮ ರಾಷ್ಟ್ರೀಯತೆಯ ಬಲ ತಗ್ಗಿಸಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದಲ್ಲದೇ ಇದು ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ! ಎಂಬುದನ್ನು ಸಾಕ್ಷಿ ಸಮೇತ ದಾಖಲಿಸಿ ನಮ್ಮ ದೇಶದ ನೈಜ ಇತಿಹಾಸದ ಪುಟಗಳನ್ನಾಗಿಸಿದ ಕೀರ್ತಿ ಸಾವರ್ಕರರದ್ದು! ಅವರು‘1857 ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಗ್ರಂಥವನ್ನು ಬರೆದು, ಬ್ರಿಟಿಷರ ಕುತಂತ್ರವನ್ನು ಬಯಲಿಗೆಳೆದು ತಮ್ಮ ತಾಕತ್ತನ್ನು ಪ್ರದರ್ಶಿಸಿದ್ದರು! ಹಸ್ತಪ್ರತಿಯ ಕೆಲ ಹಾಳೆಗಳನ್ನು ಓದಿದ ಅಂದಿನ ಬ್ರಿಟಿಷ್ ರಾಜಸತ್ತೆ, ಮುದ್ರಣಕ್ಕೂ ಮುನ್ನವೇ ನಿಷೇಧಿಸಿದರು. ಹೀಗೆ ನಿಷೇಧಿಸಲ್ಪಟ್ಟ ಜಗತ್ತಿನ ಏಕೈಕ ಗ್ರಂಥ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದು ವೀರ ಸಾವರ್ಕರರ ಸಾಮರ್ಥ್ಯಕ್ಕೆ ಸಾಕ್ಷಿ! ಈ ಗ್ರಂಥ ಮುಂದೆ ಕ್ರಾಂತಿಕಾರಿಗಳ ಭಗವದ್ಗೀತೆಯಾಯಿತು.
ಸಾವರ್ಕರರ ಬಗ್ಗೆ ಹೇಳಿದ್ದಷ್ಟು ಕಡಿಮೆಯೇ! ಅವರ ಸಂಪರ್ಕಕ್ಕೆ ಬಂದವರು ಭಾರತವನ್ನು ಪ್ರೀತಿಸದಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಅವರದು ಅಯಸ್ಕಾಂತೀಯ ವ್ಯಕ್ತಿತ್ವ! ಇಂಥಹ ಮಹಾನ್ ದೇಶಭಕ್ತನನ್ನು ಸ್ವಾತಂತ್ರೋತ್ತರ ಭಾರತದಲ್ಲಿ ‘ಹಿಂದುತ್ವವಾದಿ’ ಎನ್ನುವ ಕಾರಣಕ್ಕೆ ತಮ್ಮದಲ್ಲದ ಚಿಂತನೆ ಎಂಬ ನೆಪಕ್ಕೆ ಈ ಮಹಾನ್ ಚೇತನವನ್ನು ಕಾಂಗ್ರೆಸ್ಸಿಗರು ಹಾಗೂ ಎಡಪಂಥೀಯ ವಿಚಾರವಾದಿಗಳು ದ್ವೇಷಿಸುತ್ತಲೇ ಬಂದಿರುವುದು ಇವರ ಪಕ್ಷಪಾತ ನೀತಿಗೆ ಸ್ಪಷ್ಟ ಉದಾಹರಣೆ. ಇವರು ಅವಕಾಶ ಸಿಕ್ಕಾಗಲೆಲ್ಲಾ ಅಥವಾ ಕೆಲವು ಬಾರಿ ಅವಕಾಶ ಮಾಡಿಕೊಂಡು ಸಾವರ್ಕರರನ್ನು ಅವಮಾನಿಸಿಕೊಂಡು ಬಂದಿರುವುದಕ್ಕೆ ಲೆಕ್ಕವೇ ಇಲ್ಲ. ಸಾವರ್ಕರರು ಬದುಕಿದ್ದಾಗ ಅವರನ್ನು ಅಂದಿನ ಪ್ರಧಾನಿ ನೆಹರು, ಗಾಂಧಿಜೀಯವರ ಕೊಲೆಯ ಆಪಾದನೆಯನ್ನು ಹೊರೆಸಿ, ಜೈಲಿಗೆ ತಳ್ಳುವ ಮೂಲಕ ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲಿ ಯಶಸ್ಸು ಪಡೆದರೆ, ಆ ನಂತರ ಅವರ ಆಪ್ತರು ಇದೇ ಕೆಲಸವನ್ನು ಮುಂದುವರೆಸಿದರು. ಕೆಲ ವರ್ಷಗಳ ಹಿಂದೆ ಎಡಪಂಥೀಯ ಮಸ್ತಿಷ್ಕದ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಅಂಡಮಾನಿನ ಜೈಲಿನಲ್ಲಿನ ಸಾವರ್ಕರ್‍ರ ವಿಚಾರ ಹೊಂದಿದ ಫಲಕವನ್ನು ಎಸೆದು ಅಪಮಾನಿಸಿದ್ದರು. ನಂತರ ವಾಜಪೇಯಿ ನೇತೃತ್ವದ ಎನ್ ಡಿ ಎ ಸರ್ಕಾರ ಬಂದಾಗ ಸಾವರ್ಕರರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅನಾವರಣಗೊಳಿಸುವುದನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿ ಈ ಕಾರ್ಯಕ್ರಮವನ್ನು ಭಹಿಷ್ಕರಿಸಿದ್ದರು. ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ಎ ಪಿ ಜೆ ಅಬ್ದುಲ್ ಕಲಾಂರವರಿಗೆ, ಸಾವಾರ್ಕರವರ ಭಾವಚಿತ್ರದ ಅನಾವರಣ ಮಾಡದಂತೆ ಪತ್ರ ಬರೆದಿದ್ದರು. ಇವೆಲ್ಲ ಕಾಂಗ್ರೆಸ್ಸಿನ ದ್ವೇಷದ ಸಿದ್ಧಾಂತದ ಭಾಗವೇ ! ಇತ್ತೀಚೆಗೆ ಕಾಂಗ್ರೆಸ್ಸಿಗರ ಯುವರಾಜ ರಾಹುಲ್ ಗಾಂಧಿಯವರೂ ಕೂಡ ಸಂಸತ್ತಿನಲ್ಲಿ ನಮ್ಮವರು ಮಹಾತ್ಮ ಗಾಂಧಿಯ ಕಡೆಯವರು, ನೀವೆಲ್ಲ ಸಾವರ್ಕರ್ ಕಡೆಯವರು ಎಂದು ಬಿಜೆಪಿಯನ್ನು ಅಣಕಿಸುವ ಮೂಲಕ ನನ್ನಲ್ಲಿರುವುದೂ ಸಾವರ್ಕರರನ್ನು ದ್ವೇಷಿಸುವ ರಕ್ತವೇ ಎಂದು ಖಚಿತಪಡಿಸಿದ್ದರು!
ಮಾರ್ಚ್ 23 ರ ಈ ದಿನವನ್ನು ಭಗತ್‍ಸಿಂಗ್ ಮತ್ತಿತರ ಹುತಾತ್ಮರ ದಿನವನ್ನು ಭಗತ್‍ಸಿಂಗರ ಮಾರ್ಗವನ್ನು ಒಪ್ಪದ ಈ ಮಂದಿ ಈ ಅವಕಾಶವನ್ನು ಬಳಸಿ ಸಂಬಂದವಿರದ ವಿಚಾರವನ್ನು ಎಳೆದು ತಂದು ಎಂದಿನ ತಮ್ಮ ದ್ವೇಷದ ತೀಟೆಯನ್ನು ತೀರಿಸಿಕೊಂಡಿದ್ದಾರೆ. ಈ ಮಂದಿಗೆ ಕೆಲ ವಿಚಾರಗಳನ್ನು ಹೇಳಲೇಬೇಕು! ನೆಹರು ಕುಟುಂಬವನ್ನು ವೈಭವೀಕರಿಸುವುದರಲ್ಲೇ ಜೀವಮಾನ ಸವೆಸಿದ ಭಟ್ಟಂಗಿಗಳೇ, ನಿಮಗೆ ನಿಜವಾದ ತ್ಯಾಗದ ಪರಿಚಯವಿಲ್ಲ! ನಿಮಗೆ ಗುಲಾಮಗಿರಿಯಲ್ಲೇ ಆನಂದವಿದೆ ಎನ್ನುವುದಾದರೇ ನಮ್ಮದೇನೂ ಅಭ್ಯಂತರವಿಲ್ಲ! ಅದು ನಿಮ್ಮ ಹಕ್ಕು! ಆದರೆ ನಿಮ್ಮ ತೆವಲಿಗೆ ಈ ದೇಶದ ನೈಜ ದೇಶಭಕ್ತರನ್ನು ಅಪಮಾನಿಸದಿರಿ! ವೀರ ಸಾವರ್ಕರರು ಮಾತೃಭೂಮಿಯ ಬಂಧಮುಕ್ತಿಗೆ ಜೀವಮಾನವನ್ನೇ ಸವೆಸಿದವರು! 50 ವರ್ಷಗಳ ಸೆರೆವಾಸದ ಶಿಕ್ಷೆಗೆ ಒಳಗಾಗಿ, 14 ವರ್ಷಗಳ ಕಾಲ ಅಂಡಮಾನಿನ ‘ಕಾಲಾಪಾನಿ’ ಶಿಕ್ಷೆ ಅನುಭವಿಸಿದವರು! ಭಗತ್ ಸಿಂಗ್ ಆದಿಯಾಗಿ ಈ ದೇಶದ ಆರೂವರೆ ಲಕ್ಷ ತರುಣ-ತರುಣಿಯರು ತಾಯಿ ಭಾರತಿಯ ಮುಕ್ತಿಗಾಗಿ ತಮ್ಮ ನೆತ್ತರನ್ನೇ ಧಾರೆ ಎರೆದು ಇತಿಹಾಸವಾಗಿದ್ದಾರೆ! ಆದರೆ ಸ್ವಾತಂತ್ರೋತ್ತರ ಭಾರತದಲ್ಲಿ ನೀವು ಯಾರನ್ನು ತ್ಯಾಗ ಬಲಿದಾನದ ಕತೆ ಹೆಣೆದು ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬೇಕೆಂದು ಇನ್ನಿಲ್ಲದ ಪ್ರಯತ್ನ ನಡೆಸಿದ್ದೀರೋ ಆ ನಾಯಕರು, ಈ ದೇಶಕ್ಕೆ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು! ಅದಾಗ್ಯೂ ಇಂದಿಗೂ ಇನ್ನಿಲ್ಲದ ತ್ಯಾಗ ಬಲಿದಾನದ ಕತೆ ಹೊಸೆಯುತ್ತಿದ್ದೀರಿ! ಹೇಳಿ, ವಂದೀಮಾಗಧರೇ , ನಾವು ಕೇವಲ ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಪಡೆದೆವು ಎಂದು ಊಳಿಡುವ ನೀವು, ನಿಮ್ಮ ನಾಯಕರ ಸ್ವಾತಂತ್ರ್ಯದ ಹೋರಾಟದ ಇತಿಹಾಸಲ್ಲಿ 3-4 ವರ್ಷಕ್ಕಿಂತ ಹೆಚ್ಚು ವರ್ಷ ಕಠಿಣ ಶಿಕ್ಷೆ ಬಿಡಿ, ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಿದ ನಾಯಕರೊಬ್ಬರನ್ನು ಹೆಸರಿಸಿ. ನಿಮಗಿದು ಸವಾಲು ನಿಮ್ಮಲ್ಲೊಬ್ಬ ದೇಶಕ್ಕಾಗಿ ಅಂಡಮಾನಿನ ರೌರವ ನರಕ ಯಾತನೆ ಅನುಭವಿಸಿದ ನಾಯಕನನ್ನು ದೇಶ ವಾಸಿಗಳ ಕಣ್ಮುಂದೆ ತನ್ನಿ. ಆಗ ನಿಜಕ್ಕೂ ನೀವು ಹೇಳುವ ತ್ಯಾಗ-ಬಲಿದಾನದ ಕತೆಗಳಿಗೆ ಅರ್ಥ ಬರುತ್ತದೆ! ಇಲ್ಲವಾದಲ್ಲಿ ಈ ದೇಶದ ನಿಸ್ವಾರ್ಥ ದೇಶಭಕ್ತರ ಯಶೋಗಾಥೆಗಳು ನೇಪಥ್ಯಕ್ಕೆ ಸರಿಯುತ್ತವೆ. ಈ ದೇಶ ಒಂದು ವೀರವಾರಸಿಕೆಯ ರಾಷ್ಟ್ರ ಅನ್ನುವ ಸತ್ಯ ಹುದುಗಿ ಹೋದರೆ, ಇತಿಹಾಸ ನಿಮ್ಮನೆಂದೂ ಕ್ಷಮಿಸುವುದಿಲ್ಲ! ವ್ಯಕ್ತಿಗಳ ದೇಶಭಕ್ತಿ ಈ ದೇಶಕ್ಕೆ ನಿಷ್ಠೆ ತೋರುತ್ತದಯೇ ವಿನಃ ಅದು ಸಿದ್ಧಾಂತದ ಕಂಬಳಿಯಲ್ಲಿ ಬಚ್ಚಿಟ್ಟುಕೊಳ್ಳುವುದಿಲ್ಲ ಎನ್ನುವ ಸತ್ಯ ಅರಿತರೆ, ಸಾವರ್ಕರರಂತಹ ದೇಶಭಕ್ತರನ್ನು ಅಪಮಾನಿಸುವ ಸಂದರ್ಭ ಖಂಡಿತ ಯಾರಿಗೂ ಬರುವುದಿಲ್ಲ!
ಚಿತ್ರ ಕೃಪೆ :- samvada.org