ಕಂಬಿಯಿಲ್ಲದ ರೈಲು ಹತ್ತಿದವನ ‘ದಿನಾಚರಣೆ’ಗೆ ರಾಜಾಜ್ಞೆ ಹೊರಡಿಸಿದ್ದ ಇತಿಹಾಸ ಗೊತ್ತಾ?
– ಗೋಪಾಲಕೃಷ್ಣ
ಜಾತಿ, ಧರ್ಮ, ವರ್ಣ, ಮೇಲು ಕೀಳು ಯಾವ ಗೀಳಿಗೂ ಬೀಳದೆ ಜಗತ್ತಿನಾದ್ಯಂತ ಸಮಾನತೆಯ ದ್ಯೋತಕವಾಗಿ ಆಚರಿಸಿಕೊಂಡು ಬರುತ್ತಿರುವ ಏಕೈಕ ಆಚರಣೆಯೆಂದರೆ ಅದು ‘ಮೂರ್ಖರ ದಿನಾಚರಣೆ’. ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1 ವರ್ಷದ ಮೊದಲ ದಿನವಾಗಿತ್ತು. ಪೋಪ್ ಗ್ರೆಗೋರಿ 1582ರಲ್ಲಿ ಏಪ್ರಿಲ್ ಬದಲಿಗೆ ಜನವರಿಯಿಂದ ಹೊಸವರ್ಷವೆಂದು, ಜನವರಿ 1ನ್ನು ವರ್ಷದ ಮೊದಲ ದಿನವೆಂದು ಬದಲಾಯಿಸಿದ. ಗ್ರೆಗೋರಿಯನ್ ಕ್ಯಾಲೆಂಡರ್ ಒಪ್ಪಿಕೊಳ್ಳದಿದ್ದ ಕೆಲವರು ಏಪ್ರಿಲ್ 1ರಂದು ಹೊಸವರ್ಷಾಚರಣೆ ಮಾಡುತ್ತಿದ್ದರು. ಅಂತಹವರನ್ನು ಮೂರ್ಖರೆಂದು ಗೇಲಿ ಮಾಡುತ್ತಿದ್ದುದರಿಂದ ಏಪ್ರಿಲ್ ಒಂದನೇ ತಾರೀಖು ಮೂರ್ಖರ ದಿನವಾಗಿದೆ ಎನ್ನುವುದು ಇತಿಹಾಸ.
ಆದರೆ ಇತಿಹಾಸ ತಜ್ಞರಾದ ಗೇಯ್ಲ್ ಮಾಂಟೋಸ್ಕಿ ಅವರು ತಮ್ಮ ‘ಬೀಯಿಂಗ್ ಫೂಲಿಶ್’ ಪುಸ್ತಕದಲ್ಲಿ ಮೂರ್ಖರ ದಿನದ ಇತಿಹಾಸದ ಬಗ್ಗೆ ದಾಖಲೆಗಳೊಂದಿಗೆ ಹೊಸ ರೀತಿಯ ವಾದ ಮಂಡಿಸಿದ್ದಾರೆ. ಮಾಂಟೋಸ್ಕಿಯವರ ಪ್ರಕಾರ ಏಪ್ರಿಲ್ 1ನ್ನು ಮೂರ್ಖರ ದಿನವೆಂದು ಆಚರಿಸಲು ಕಾರಣ ರಿಚರ್ಡ್ ಲೂಯಿಸ್ ಎನ್ನುವ ವ್ಯಕ್ತಿ. ಆತ ಬ್ರಿಟನ್ ರಾಜವಂಶಕ್ಕೆ ಸೇರಿದ್ದವನು. ಹುಟ್ಟಿದ್ದು 1550ರ ಏಪ್ರಿಲ್ 1ರಂದು. ಥಾಮಸ್ ಎಂಬುವವನೊಂದಿಗಿನ ಎಲಿಜಬೆತ್ ರಾಣಿಯ ಸ್ನೇಹ ಪ್ರೀತಿಗೆ ತಿರುಗಿ, ಪ್ರೀತಿಯ ಕಾಣಿಕೆಯಾಗಿ ಮಗುವೊಂದನ್ನು ಪಡೆದಿರುತ್ತಾಳೆ. ಈ ವಿಚಾರ ತನ್ನ ಕುಟುಂಬದವರಿಗೆ ತಿಳಿಯದಂತೆ ಮಗುವನ್ನು ರಹಸ್ಯವಾಗಿ ಬೆಳೆಸುತ್ತಿರುತ್ತಾಳೆ. ಆ ಮಗುವೆ ರಿಚರ್ಡ್ ಲೂಯಿಸ್. ಥಾಮಸ್ ಮತ್ತು ತನ್ನ ಪ್ರೀತಿಯನ್ನು ಮುಚ್ಚಿಡಬೇಕಾದ ಅಗತ್ಯ ಇದ್ದುದರಿಂದ ಲೂಯಿಸ್ ಬೇರೊಬ್ಬರ ಮಗನಾಗಿ ಬೆಳೆಯಬೇಕಾಗುತ್ತದೆ. ತಾಯಿಕರುಳು ಮಗುವನ್ನು ದೂರ ಮಾಡಿಕೊಳ್ಳಲಾಗದೇ, ಅರಮನೆಯ ಅಂಗಳದಲ್ಲಿಯೇ ಲೂಯಿಸ್ ಇರುವಂತೆ ವ್ಯವಸ್ಥೆ ಮಾಡಿರುತ್ತಾಳೆ. ಮುಂದೆ ಮದುವೆಯೇ ಆಗದ ಎಲಿಜಬೆತ್ ತನ್ನ ಉತ್ತರಾಧಿಕಾರಿಯಾಗಿ ಲೂಯಿಸ್‍ನನ್ನೇ ನೇಮಿಸಬೇಕೆಂದು ತೀರ್ಮಾನಿಸಿ, ಎಲ್ಲಾ ರೀತಿಯ ತರಬೇತಿಗಳೂ ಆತನಿಗೆ ಸಿಗುವಂತೆ ಮಾಡಿರುತ್ತಾಳೆ. ಆದರೆ ಸಕಲ ರೀತಿಯ ಸೌಲಭ್ಯಗಳನ್ನು ಪಡೆದಿದ್ದರೂ ಲೂಯಿಸ್, ಎಲಿಜಬೆತ್‍ಳ ನಿರೀಕ್ಷೆಯಂತೆ ಬೆಳೆದಿರುವುದಿಲ್ಲ. ಅತ್ತ ಲೂಯಿಸ್ ತನ್ನ ಮಗ ಎಂದು ಹೇಳಿ, ನೇರವಾಗಿ ಉತ್ತರಾಧಿಕಾರಿಯಾಗಿ ಘೋಷಿಸುವಂತೆಯೂ ಇಲ್ಲ, ಇತ್ತ ಲೂಯಿಸ್ ರಾಜ್ಯವಾಳುವ ಸಾಮರ್ಥ್ಯವನ್ನೂ ಹೊಂದಿಲ್ಲ ಎಂಬುದು ಎಲಿಜಬೆತ್‍ಗೆ ಚಿಂತೆಯಾಗಿರುತ್ತದೆ.
1498ರಲ್ಲಿ ವಾಸ್ಕೋಡಿಗಾಮ ಭಾರತಕ್ಕೆ ಜಲಮಾರ್ಗವನ್ನು ಕಂಡು ಹಿಡಿದ ಮೇಲೆ ಪೋರ್ಚುಗೀಸರು ಭಾರತದಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ಜೋರಾಗಿಯೇ ನಡೆಸುತ್ತಿದ್ದರು. ಇಂಗ್ಲಿಷರು ಸಹ ಭಾರತಕ್ಕೆ ಬರಲು ಹವಣಿಸುತ್ತಿದ್ದರು. ಇದಕ್ಕೆ ರಾಣಿ ಎಲಿಜಬೆತ್ ಸಹಕಾರವೂ ಇತ್ತು. ಭಾರತಕ್ಕೆ ಮಾರ್ಗ ಕಂಡು ಹಿಡಿಯುವುದನ್ನೇ ದಾಳವಾಗಿ ಮಾಡಿಕೊಂಡು ತನ್ನ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸಬಹುದು ಎಂದು ಯೋಚಿಸಿ, ಸಭೆ ಕರೆಯುತ್ತಾಳೆ. ಆ ಸಭೆಯಲ್ಲಿದ್ದವರಿಗೆಲ್ಲ ಭಾರತಕ್ಕೆ ಮಾರ್ಗ ಕಂಡು ಹಿಡಿಯುವ ಬಗ್ಗೆ ಹೇಳಿ ಒಂದು ತಂಡ ರಚಿಸಿ, ಅದಕ್ಕೆ ಲೂಯಿಸ್‍ನನ್ನು ನಾಯಕನನ್ನಾಗಿ ಮಾಡುತ್ತಾಳೆ. ಅವರೆಲ್ಲರೂ ಪೋರ್ಚುಗಿಸರು ಕಂಡು ಹಿಡಿದಿದ್ದ ಜಲಮಾರ್ಗದ ಮೂಲಕವೇ ಭಾರತಕ್ಕೆ ಬಂದು, ಇಂಗ್ಲೆಂಡ್‍ಗೆ ಹಿಂದಿರುಗುವಾಗ ಹೊಸ ಮಾರ್ಗವೊಂದನ್ನು ಅನ್ವೇಷಿಸಿಕೊಂಡು ಬರಬೇಕಾಗಿರುತ್ತದೆ. ಇದರಲ್ಲಿ ಯಶಸ್ವಿಯಾದರೆ ಲೂಯಿಸ್‍ಗೆ ಮುನ್ನಡೆಸುವ ಸಾಮರ್ಥ್ಯವಿದೆಯೆಂದು ಬಿಂಬಿಸುವ ಯೋಜನೆ ಎಲಿಜಬೆತ್‍ಳದಾಗಿರುತ್ತದೆ. 1582ರ ಏಪ್ರಿಲ್ 1ರಂದು ಅವರ ಯಾತ್ರೆ ಆರಂಭವಾಗುತ್ತದೆ. ಕೇಪ್ ಆಫ್ ಗುಡ್ ಹೋಪ್ ಮೂಲಕ ಭಾರತಕ್ಕೆ ಅವರು ಬಂದು ತಲುಪಿದಾಗ ಅಕ್ಬರ್ ಮೊಘಲ್ ಸಾಮ್ರಾಜ್ಯದ ಅಧಿಪತಿಯಾಗಿರುತ್ತಾನೆ. ಆ ವೇಳೆಗಾಗಲೇ ಭಾರತದ ದಕ್ಷಿಣ ಭಾಗ, ಪೂರ್ವ ಭಾಗಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಿ, ಪಶ್ಚಿಮದತ್ತ ತನ್ನ ಸಾಮ್ರಾಜ್ಯ ವಿಸ್ತರಿಸುವ ಚಟುವಟಿಕೆಯಲ್ಲಿರುತ್ತಾನೆ ಅಕ್ಬರ್.
ರಿಚರ್ಡ್ ಲೂಯಿಸ್ ಅಕ್ಬರ್‍ನನ್ನು ಭೇಟಿಯಾಗಿ ಇಂಗ್ಲೀಷರೊಂದಿಗೆ ವ್ಯಾಪಾರ ವಹಿವಾಟು ಆರಂಭಿಸುವ ಬಗೆಗೆ, ಅದೂ ಹೊಸದೊಂದು ಮಾರ್ಗ ಕಂಡು ಹಿಡಿದು ಆ ಮೂಲಕ ವ್ಯಾಪಾರ ಮಾಡುವ ಬಗೆಗೆ ಮಾತುಕತೆ ನಡೆಸುತ್ತಾನೆ. ಅಕ್ಬರ್ ಅದಕ್ಕೆ ಸಹಮತ ಸೂಚಿಸಿ ತನ್ನ ಮಂತ್ರಿಯಾಗಿದ್ದ ಬೀರಬಲ್‍ನೊಂದಿಗೆ ಮುಂದಿನ ಮಾತುಕತೆ ನಡೆಸುವಂತೆ ತಿಳಿಸುತ್ತಾನೆ. ಆ ವೇಳೆಗೆ ಅಕ್ಬರ್ ಸೇನೆಯ ದಾಳಿಯಿಂದ ನಲುಗಿ ಹೋಗಿದ್ದ ಆಫ್ಘಾನಿಸ್ತಾನದ ಬುಡಕಟ್ಟು ಜನರನ್ನು ಅಬ್ದುಲ್ ಕನ್ಹಾ ಎಂಬುವವನು ಒಟ್ಟುಗೂಡಿಸಿ, ದಾಂಧಲೆ ಸೃಷ್ಟಿಸುತ್ತಿರುತ್ತಾನೆ. ಬುಡಕಟ್ಟು ಜನರನ್ನು ಮಟ್ಟ ಹಾಕುವ ಜವಾಬ್ದಾರಿಯನ್ನು ಬೀರಬಲ್‍ನಿಗೆ ವಹಿಸಲಾಗಿರುತ್ತದೆ. ಬೀರಬಲ್ ಆ ಕಾರ್ಯದಲ್ಲಿರುವಾಗ ಲೂಯಿಸ್ ಭೇಟಿ ಮಾಡುತ್ತಾನೆ. ತಾನು ಬಂದ ಕಾರಣ ತಿಳಿಸಿ, ಅವನ ಜೊತೆಯಲ್ಲಿಯೇ ಕೆಲ ದಿನ ಕಳೆಯುತ್ತಾನೆ. ಕೆಲವೇ ದಿನಗಳಲ್ಲಿ ಬೀರಬಲ್‍ನೊಂದಿಗೆ ಸಲುಗೆ ಬೆಳೆಯುತ್ತದೆ. ಬೀರಬಲ್‍ನ ಬುದ್ಧಿವಂತಿಕೆಗೆ ಮಾರು ಹೋಗುವ ಲೂಯಿಸ್, ತಾನು ಹೊಸ ಮಾರ್ಗ ಕಂಡು ಹಿಡಿದರೆ ಬ್ರಿಟನ್ ಸಾಮ್ರಾಜ್ಯದ ಅಧಿಪತಿಯಾಗುವುದಾಗಿ, ಇದನ್ನು ಎಲಿಜಬೆತ್ ರಹಸ್ಯವಾಗಿ ಹೇಳಿರುವುದಾಗಿ ಬೀರಬಲ್‍ಗೆ ಹೇಳಿ, ತನಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಬೀರಬಲ್‍ನು ಸಹ ಒಪ್ಪಿಗೆ ಸೂಚಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ತಾನೇನಾದರೂ ಬ್ರಿಟನ್ ಸಾಮ್ರಾಜ್ಯದ ಸಾಮ್ರಾಟನಾದರೆ ಅಕ್ಬರ್ ಬದಲಿಗೆ ಬೀರಬಲ್ ಮೊಘಲ್ ಸಾಮ್ರಾಜ್ಯದ ದೊರೆಯಾಗುವುದಕ್ಕೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ. ಬೀರಬಲ್‍ನ ರಾಜನಿಷ್ಠೆಯನ್ನು ಗಮನಿಸದೆ ತಾನು ಚಾಣಾಕ್ಷ ಎಂದು ಸಾಬೀತುಪಡಿಸಲು ಯತ್ನಿಸುತ್ತಾನೆ.
ಹೊಸ ಮಾರ್ಗ ಕಂಡು ಹಿಡಿಯದೆಯೇ, ನೇರವಾಗಿ ವ್ಯಾಪಾರ ವಹಿವಾಟು ನಡೆಸಬಹುದಾದಂತಹ ಉಪಾಯವೊಂದನ್ನು ಬೀರಬಲ್ ಲೂಯಿಸ್‍ಗೆ ಹೇಳುತ್ತಾನೆ. ಬೀರಬಲ್‍ನ ಉಪಾಯವನ್ನು ಕೇಳಿ ಅತ್ಯುತ್ಸಾಹದಲ್ಲಿ ಪೋರ್ಚುಗೀಸರ ಜಲಮಾರ್ಗದಲ್ಲೇ ಯೂರೋಪ್‍ಗೆ ಮರಳುವ ಲೂಯಿಸ್, ಎಲಿಜಬೆತ್‍ಳನ್ನು ಭೇಟಿ ಮಾಡಿ ಮುಂದೆ ತಾನೇನು ಮಾಡುತ್ತೇನೆ ಎಂಬುದನ್ನು ಹೇಳುತ್ತಾನೆ. ಅಷ್ಟರಲ್ಲಾಗಲೇ ಲಂಡನ್ನಿನ ವ್ಯಾಪಾರಸ್ಥರು ಎಲಿಜಬೆತ್‍ಳಿಂದ ಅನುಮತಿ ಪಡೆದು, ಕೇಪ್ ಆಫ್ ಗುಡ್ ಹೋಪ್, ಮಲಯ ದ್ವೀಪ ಮುಂತಾದ ಕಡೆಗಳಿಂದ ಪ್ರಯತ್ನಿಸಿ ತಮ್ಮದೇ ಆದ ಮಾರ್ಗ ಕಂಡು ಹಿಡಿದಿರುತ್ತಾರೆ. ವ್ಯಾಪಾರಿಗಳ ಬೇಡಿಕೆಯಂತೆಯೆ 31 ಡಿಸೆಂಬರ್ 1600ರಂದು ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಗೆ ಅನುಮತಿ ನೀಡುತ್ತಾಳೆ. ಕೆಲ ತಿಂಗಳ ನಂತರ ಅಂದರೆ 1601 ಏಪ್ರಿಲ್ 1ರಂದು, ತನ್ನ ಹುಟ್ಟು ಹಬ್ಬದ ದಿನದಂದು ರಿಚರ್ಡ್ ಲೂಯಿಸ್ ಪೂರ್ವ ತಯಾರಿಯೊಂದಿಗೆ ತಾನು ಭಾರತದೊಂದಿಗಿನ ವ್ಯಾಪಾರಕ್ಕೆ ಹೊಸ ಮಾರ್ಗ ಕಂಡು ಹಿಡಿಯುವ ಕಾರ್ಯ ಆರಂಭಿಸುತ್ತಾನೆ. ರಿಚರ್ಡ್ ಲೂಯಿಸ್‍ನನ್ನು ಯಾವುದೇ ಕಾರಣಕ್ಕೂ ಉತ್ತರಾಧಿಕಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುವ ಬ್ರಿಟನ್ ಸಾಮ್ರಾಜ್ಯದ ಮಹಾರಾಣಿಯಾಗಿದ್ದ ಎಲಿಜಬೆತ್ ‘ಇನ್ನು ಮುಂದೆ ಪ್ರತಿ ವರ್ಷದ ಏಪ್ರಿಲ್ ಮೊದಲ ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಸಬೇಕು’ ಎಂದು ರಾಜಾಜ್ಞೆ ಹೊರಡಿಸುತ್ತಾಳೆ. ಅಂದಿನಿಂದ ಜಗತ್ತಿನಾದ್ಯಂತ ಮೂರ್ಖರ ದಿನ ಆಚರಣೆಗೆ ಬಂದಿದೆ.
***
ಇವು ಗೇಯ್ಲ್ ಮಾಂಟೋಸ್ಕಿ ಅವರ ಪುಸ್ತಕದಲ್ಲಿರುವ ವಿವರಗಳು. ರಾಜನಿಷ್ಠನಾಗಿದ್ದ ಬೀರಬಲ್‍ಗೆ ಇಲ್ಲಸಲ್ಲದ ಆಸೆ ಹುಟ್ಟಿಸಲು ಹೋದ ಲೂಯಿಸ್, ಬೀರಬಲ್ ಬಿಟ್ಟ ಕಂಬಿಯಿಲ್ಲದ ರೈಲಿನಲ್ಲಿ ಲಂಡನ್‍ನವರೆಗೂ ಪ್ರಯಾಣ ಮಾಡಿದ್ದ. ಹೇಗೆ ಗೊತ್ತಾ?
ನಾಲ್ಕು ಶತಮಾನಗಳ ಹಿಂದೆ ಕಂಬಿಯಿಲ್ಲದ ರೈಲು ಹತ್ತಿದವನ ನೆನಪಿಗೊಂದು ದಿನ ಮೀಸಲಿಟ್ಟರು ಎಂಬ ಕಂಬಿಯಿಲ್ಲದ ರೈಲಿನ ಕಾಲ್ಪನಿಕ ಕಥೆ ಓದಿದ್ರಲ್ಲ ಹಾಗೆ!
***
ಬೀರಬಲ್ ಲೂಯಿಸ್‍ಗೆ ‘ಭೂಮಿ ಸುತ್ತುತ್ತಲೇ ಇರುತ್ತದೆ. ನೀನು ಎತ್ತರದ ಪ್ರದೇಶದಲ್ಲಿ ಕುಳಿತು ಹಗಲಿರುಳು ನೋಡುತ್ತಿರು. ಭೂಮಿ ಸುತ್ತುವಾಗ ಯಾವಾಗಲಾದರೂ ನಾವು ಆ ಕಡೆ ಬರಬಹುದು. ಆಗ ನೇರವಾಗಿ ವ್ಯಾಪಾರ ಮಾಡೋಣವಂತೆ. ಸುಮ್ಮನೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುವ ಪ್ರಮೇಯವೇ ಇರುವುದಿಲ್ಲ’ ಎಂದು ಹೇಳಿರುತ್ತಾನೆ. ಅದರಂತೆಯೇ ರಿಚರ್ಡ್ ಲೂಯಿಸ್ ಎಲಿಜಬೆತ್‍ಗೆ ಈ ವಿಷಯ ತಿಳಿಸಿ, ಲಂಡನ್‍ನ ಅತಿ ಎತ್ತರದ ಬೆಟ್ಟದ ಮೇಲೆ ಕುಳಿತು, ಭಾರತ ತನ್ನ ಕಡೆಗೆ ಬರುತ್ತದೆ ಎಂದು ಕಾಯುತ್ತಿರುತ್ತಾನೆ.
😀 😀 😀
ತುಂಬಾ ಹಾಸ್ಯಮಯವಾಗಿದೆ..ಧನ್ಯವಾದಗಳು
ಶೀರ್ಷಿಕೆಯನ್ನು ನೋಡಿ ನಾನೇನೋ ಇದು ನಮ್ಮ ಕನ್ಹಯ್ಯ ಕುಮಾರನ ಕತೆ ಇರಬಹುದು ಅಂತ ಅಂದುಕೊಂಡೆ.