ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2016

1

ವೇಳಿ ನಾಚಿಯರ್

‍ನಿಲುಮೆ ಮೂಲಕ

– ರಂಜನ್ ಕೇಶವ

veluNachierಅದು ೧೭೭೩ ರ ಸಮಯ. ಕಪಟ ದೊರೆ ಆರ್ಕೋಟ್ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂಡಿದ್ದ. ಇದಾಗಿ ೮ ವರ್ಷಗಳು ಕಳೆದಾಗಿತ್ತು. ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ತಮ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ. ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆಯುತ್ತಾ ಕಳೆದುಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು. ಇದಕ್ಕಾಗಿ ನೆರೆಹೊರೆಯವರೆಲ್ಲರ ಸಹಾಯವನ್ನು ಜೊತೆಗೂಡಿಸುತ್ತಿದ್ದರು .

ರಾಜಮನೆತನದ ಸೆಲ್ಲಮುತು ಸೇತಪತಿ ಮತ್ತು ರಾಣಿ ಸಕಂದಿಮುತೈ ಯ ಏಕೈಕ ಮಗಳಾಗಿದ್ದ ವೇಳಿ ನಾಚಿಯರ್ ಬಾಲ್ಯದಿಂದಲೇ ಕತ್ತಿವರಸೆ, ಲಾಠಿಪ್ರಹಾರ ಮತ್ತು ರಣ ತಂತ್ರ ರಚಿಸುವ ಎಲ್ಲ ವಿದ್ಯೆಯನ್ನು ತಂದೆಯ ಕಡೆಯಿಂದ ಕಲಿತಿದ್ದರು. ಇದಲ್ಲದೇ ಇಂಗ್ಲೀಷ್, ಉರ್ದು ಮತ್ತು ಫ್ರೆಂಚ್ ಭಾಷೆಗಳಲ್ಲೂ ಪಾಂಡಿತ್ಯವಿತ್ತು. ಆದ್ದರಿಂದ ಈ ಅಪರೂಪದ ಪ್ರತಿಭೆ ಚಾಣಾಕ್ಷತೆ, ಧೈರ್ಯ, ಬಲ, ಪರಾಕ್ರಮ ಮತ್ತು ರಣಚಾತುರ್ಯದ ಅಮೋಘ ಸಂಗಮವೇ ಆಗಿತ್ತು. ಆದರೆ ಈಗ ಧೂರ್ತ ಬ್ರಿಟಿಷ್ ಮತ್ತು ನವಾಬನ ಕಪಟತನಕ್ಕೆ ಸೋತದ್ದರಿಂದ ದಾಸ್ಯಕ್ಕೆ ಒಳಗಾಗಿದ್ದ  ತನ್ನ ತಾಯ್ನಾಡನ್ನು ಮುಕ್ತಗೊಳಿಸಲು ವೇಳಿ ನಾಚಿಯರ್ ಶ್ರಮಪಡಿತ್ತಿದ್ದರು.

ಸ್ವಾಮಿ ನಿಷ್ಠ ಸೇವಕ ತಾಂಡವರ್ ಪಿಳೈ ಸಿವಗಂಗೈ ಸಂಸ್ಥಾನದ ಅಡಿಪಾಯ ಹಾಕಿದವರಲ್ಲಿ ಒಬ್ಬರು. ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಯಾರ ಸಹಾಯ ಪಡೆಯಬೇಕೆಂಬುದನ್ನು ಉಪಾಯ ಮಾಡಿದವರು ಇವರೇ. ವೇಳಿ ನಾಚಿಯರ್ ಪರವಾಗಿ ಆಗಿನ ಮೈಸೂರಿನ ದೊರೆ ಹೈದರಾಲಿಗೆ ಪತ್ರ ಬರೆದು ತಮಗೆ ೫೦೦೦ ಪದಾತಿದಳ ಮತ್ತು ೫೦೦೦ ಅಶ್ವದಳದ ಅವಶ್ಯಕತೆಯಿದೆಯೆಂದು ಬೇಡಿಕೊಳ್ಳುತ್ತಾರೆ. ಆದರೆ ಅದರ ತರುವಾಯ ತಮ್ಮ ಇಳಿವಯಸ್ಸಿನಲ್ಲಿ ತೀರಿಕೊಳ್ಳುತ್ತಾರೆ. ನಂತರ ಸ್ವತಃ ನಾಚಿಯರ್ ಹೈದರಾಲಿಗೆ ತನ್ನ ಸಮಾನ ಶತ್ರು ಈಸ್ಟ್ ಇಂಡಿಯಾ ಕಂಪನಿಯನ್ನು ಮಣಿಸಲು ಸೇನೆಯ ಅವಶ್ಯಕತೆಯಿದೆಯೆಂದು ಉರ್ದುವಿನಲ್ಲೇ ಮನವಿ ಮಾಡಿ ಕೇಳಿದ್ದರಿಂದ ಹೈದರ್ ಒಪ್ಪಿಗೆ ನೀಡಿ ಸೇನಾನೆರವಿಗೆ ಅನುಮತಿ ಕೊಡುತ್ತಾನೆ. ತಕ್ಷಣವೇ ಹೈದರನ ಆದೇಶದ ಮೇರೆಗೆ ದಿಂಡಿಗಲ್ ಕೋಟೆಯಿಂದ ನಾಚಿಯರ್ ಕೇಳಿದಷ್ಟು ಸೇನೆಯನ್ನು ಸಯ್ಯದ್ ಕರ್ಕಿ ಕಳಿಸುತ್ತಾನೆ .

ನಂತರ ಮುಂದುವರೆಯಿತು ನಾಚಿಯರ್ ನ ಮಿಂಚಿನ ಧಾಳಿಗಳು. ಆ ಸಮಯದಲ್ಲಿ ಯಾರ್ಯಾರು ನವಾಬನಿಂದ ಪರಾಸ್ತಗೊಂಡಿದ್ದರೋ ಆಯಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯೋಜನೆ ಮಾಡಿದರು. ಕೊಚಡೈ ಮಲ್ಲಾರಿರಾಯನ್, ತಿರುಪ್ಪುರನ್ ರಂಗರಾಯನ್, ಮಾಣಮಧುರೈಯ ಬ್ರೈಟನ್ ಮತ್ತು ಪೋರಿಯನ್ ಮಾರ್ಟಿಸನ್ ರನ್ನು, ಒಂದಾದರೊಂದಂತೆ ದಂಡಯಾತ್ರೆ ನಡೆಸಿ ಮಂಡಿಯೂರುವಂತೆ ಮಾಡಿದರು. ಇದರ ಜೊತೆಗೆಯೇ ಸಮರ್ಪಕವಾಗಿ ಜನಬೆಂಬಲವೂ ದೊರೆಯಿತು. ಸಾಮಾನ್ಯ ನಾಗರಿಕರು ಸಹಿತ ನೇಗಿಲನ್ನು ಬಿಟ್ಟು ಬಂದೂಕನ್ನು ಹಿಡಿದರು.

ನಾಚಿಯರ್ ತನ್ನ ಸೇನೆಯನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಮೊದಲನೆಯ ಭಾಗವನ್ನು ಚಿನ್ನಮರುದುವಿನ ಸಾರಥ್ಯದಲ್ಲಿ ೩೦೦೦ ಯೋಧರೊಂದಿಗೆ ೮ ತುಫಾಕಿಯ ಜೊತೆ ತೀರುಪತ್ತೂರಿನ ಮೇಲೆ, ದೊಡ್ಡಮರುದು ನಾಲ್ಕು ತೋಪಿನ ಜೊತೆ ಮತ್ತೊಂದು ತುಕಡಿಯಿಂದ ಶಿವಗಂಗೆಯ ಮೇಲೆ ಮತ್ತುಳಿದ ಸೇನೆ ನಾಚಿಯರ್ ನೊಡನೆ ಕೋಟೆ ಪ್ರವೇಶಿಸುವುದೆಂದು ಯೋಜನೆ. ಆದರೆ ಕೋಟೆಯ ಸನಿಹದಲ್ಲಿ ಉಮಾರದುಲ್ ಉಬಾರ್ ಖಾನನ ಸೇನೆ ಮತ್ತು ಕೋಟೆಯ ಒಳಗೊಂದು ಬ್ರಿಟಿಷರ ಸೇನಾ ತುಕಡಿ ಬೇರೆ. ಇದನ್ನು ಭೇಧಿಸಲೆಂದು ಸಿಕ್ಕ ಒಂದು ಅವಕಾಶವೆಂದರೆ ವಿಜಯದಶಮಿಯ ದಿನದಂದು ಮಹಿಳೆಯರಿಗೆ ಕೋಟೆಯೊಳಗೆ ಪೂಜೆಗಾಗಿ ವಿಶೇಷ ಪ್ರವೇಶದ ಅನುಮತಿಯಿತ್ತು. ಈ ಅವಕಾಶವನ್ನು ಬಳಸಿಕೊಂಡ ವೇಳಿ ನಾಚಿಯರ್ ತಮ್ಮ ಮಹಿಳೆಯರ ಪಡೆಯನ್ನು ಕೋಟೆಯ ಒಳಗೆ ನಡೆಸಿದರು. ಜೊತೆಗೆ ಗೌಪ್ಯವಾಗಿ ಹೂಗಳ ಬುಟ್ಟಿಗಳ ಒಳಗೆ ಶಸ್ತ್ರಗಳನ್ನು ಇರಿಸಿದ್ದರು. ಕೋಟೆಯ ಒಳಗೆ ಸ್ಥಳಾನ್ವೇಷಣೆ ಮಾಡುತ್ತಾ ಆಯುಧ ಪೂಜೆಗೆ ಒಂದು ಕಡೆ ಶಸ್ತ್ರಗಳನ್ನು ಇಟ್ಟಿದ್ದ ಸ್ಥಳಕ್ಕೆ ಬಂದಕೂಡಲೇ ನಾಚಿಯರ್ “ ವೀರವೇಲ್ ವೇಟ್ರಿವೇಲ್ ” ಎಂದು ಘೋಷಣೆ ಕೂಗಿ ಯುದ್ಧ ಘೋಷಣೆ ಮಾಡಿದರು .

ರಾಣಿಯ ಕೂಗು ಕೇಳಿದಾಕ್ಷಣ ಮಹಿಳೆಯರ ಪಡೆ ಮಿಂಚಿನಂತೆ ಶಸ್ತ್ರಗಳನ್ನು ಹಿಡಿದು ಬ್ರಿಟಿಷರ ಮೇಲೆ ಎರಗಿದರು . ಹಠಾತ್ತನೆ ನಡೆದ ಧಾಳಿಗೆ ಬ್ರಿಟಿಷ್ ಸೇನೆ ತತ್ತರಿಸಿತು. ಬ್ರಿಟಿಷ್ ಕಮ್ಯಾಂಡರ್ ಪಾಂಸೋರ್ ಎಂಬಾತ ಹತ್ತಿರದಲ್ಲೇ ಇದ್ದ ತಮ್ಮ ಶಸ್ತ್ರಾಗಾರವನ್ನು ರಕ್ಷಿಸಲು ಹವಣಿಸುತ್ತಿದ್ದ. ಆಗ ಕುವಲಿ ಎಂಬ ಒಬ್ಬಳು ನಾಚಿಯರ್ ನ ನಿಷ್ಠಾವಂತೆ ಸಖಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಮದ್ದುಗುಂಡುಗಳು ತುಂಬಿದ್ದ ಶಸ್ತ್ರಾಗಾರಕ್ಕೆ ಧುಮುಕಿ ಅವನ್ನು ನಾಶಮಾಡಿ ತಾನೂ ಸಹಿತ ಆತ್ಮಾಹುತಿಯಾದಳು. ಕುವಿಲಿಯನ್ನು ವಿಶ್ವದ ಮೊದಲ ಆತ್ಮಾಹುತಿ ಬಾಂಬರ್ ಎಂದು ಹೇಳಲಾಗುತ್ತದೆ. ಪಾಂಸೋರ್ ನನ್ನು ಬಂದಿ ಮಾಡುವುದರೊಂದಿಗೆ ಶಿವಗಂಗೈ ಕೋಟೆ ವಶವಾಯಿತು. ಚಿನ್ನಮರುದು ಸಹಿತ ತಿರುಪತ್ತೂರ್ ಕೋಟೆಯನ್ನು ಗೆದ್ದ. ಎಲ್ಲ ಮುಗಿದ ನಂತರ ನಾಚಿಯರ್ ಗೆ ಕುವಿಲಿಯ ವಿಷಯ ಗೊತ್ತಾಯಿತಂತೆ. ಇಡೀ ಶಿವಗಂಗೈ ಕುವಿಲಿಗಾಗಿ ಶೋಕಿಸಿತು.

ಮಹಾರಾಣಿ ವೇಳಿ ನಾಚಿಯರ್ ಭಾರತದ ಇತಿಹಾಸ ಕಂಡ ಮೊದಲ ಬ್ರಿಟಿಷ್ ವಿರುದ್ಧ ಹೋರಾಡಿ ಗೆದ್ದ ವೀರ ವನಿತೆ. ಆಗ ತನ್ನ ಶಿವಗಂಗೈಯನ್ನು ಗೆದ್ದು ಹತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿದರು. ಇವರ ವೀರಗಾಥೆಗಳನ್ನು ನಾವು ಬಹುತೇಕವಾಗಿ ಮರೆತಿದ್ದೇವೆ ಕೂಡ. ೨೦೦೮ ರಲ್ಲಿ ತಮಿಳುನಾಡು ಸರ್ಕಾರ ವೇಳಿ ನಾಚಿಯರ್ ರವರ ಅಂಚೆ ಚೀಟಿ ಮುದ್ರಿಸಿ ಅವರ ಹೆಸರು ಮತ್ತು ನೆನಪನ್ನುಳಿಸುವ ಪ್ರಯತ್ನವನ್ನು ಮಾಡಿದ್ದಾರೆ.

ವೇಳಿ ನಾಚಿಯರ್ ಎಂಬ ವೀರ ವನಿತೆ ಆ ಕಾಲದ ರಣಾಂಗಣದಲ್ಲಿ ಕತ್ತಿ ಹಿಡಿದರೆಂದರೆ ಮೂವತ್ತು ಯೋಧರನ್ನು ಮೂರು ನಿಮಿಷದಲ್ಲಿ ಕತ್ತರಿಸುತ್ತಿದ್ದರೆಂಬುದನ್ನು ಕೇಳಿದರೆ ಈಗಿನ ನಮಗೆ ಆ ಘಟನೆಯ ಕುರಿತ ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಾಗದು.

1 ಟಿಪ್ಪಣಿ Post a comment
  1. ಏಪ್ರಿಲ್ 2 2016

    ಇಂತಹ ಎಷ್ಟೋ ವೀರಗಾಥೆಗಳು ನಶಿಸಿಹೋಗಿವೆ!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments