ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2016

1

ಸ್ವಾಮಿ ವಿವೇಕಾನಂದರ ಒಂದು ಮರು ಓದು

‍ನಿಲುಮೆ ಮೂಲಕ

Swamijiಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

3, 4, 5 ಜೂನ್ 2016

ಸ್ಥಳ ಮತ್ತು ಆತಿಥ್ಯ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ, ಕರ್ನಾಟಕ

ಸಹ ಸಂಘಟಕರು: Vergelijkende Cultuurwetenschappen (ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ); SDM Centre for Interdisciplinary Research in Humanities and Social Sciences (ಉಜಿರೆ, ಭಾರತ) ಮತ್ತು India Platform

 ಪ್ರವೇಶ: ಉಚಿತ, ಆದರೆ ನೊಂದಾವಣೆ ಖಡ್ಡಾಯ.

ನೊಂದಾಯಿಸಿಕೊಳ್ಳಲು, ತಮ್ಮ ಪೂರ್ಣ ಹೆಸರು, ಸಂಸ್ಥೆ ಮುಂತಾದ ವಿವರಗಳೊಂದಿಗೆ ಇಲ್ಲಿಗೆ ಬರೆಯಿರಿ: revisitingvivekananda@gmail.com

ಕಡೆಯ ದಿನಾಂಕ: 10 ಮೇ 2016.

ಸಮ್ಮೇಳನದ ಚಟುವಟಿಕೆಗಳ ತಾತ್ಕಾಲಿಕ ವೆಳಾಪಟ್ಟಿ ಮತ್ತು ಇಂಗ್ಲಿಷ್ concept noteಗಾಗಿ ನೋಡಿ:  http://www.cslc.in/dharma-and-ethics/?page=Dharma_And_Ethics_8

 

ಸ್ವಾಮಿ ವಿವೇಕಾನಂದರು ಭಾರತ ಕಂಡ ಓರ್ವ ಪ್ರಸಿದ್ಧ ಚಿಂತಕರು. ರಾಮಕೃಷ್ಣ ಪರಮಹಂಸರ ಅತ್ಯಂತ ಆಪ್ತ ಶಿಷ್ಯರಾಗಿದ್ದ ಇವರು, ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳ ತಿರುಳನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಗುರಿಯನ್ನು ಹೊಂದಿರುವ ರಾಮಕೃಷ್ಣ ಮಿಷನ್ ಸಂಸ್ಥೆಯ ಸಂಸ್ಥಾಪಕರು. ಭಾರತೀಯ ರಾಷ್ಟ್ರೀಯ ಆಂದೋಲನದ ಮೇಲೆ ವ್ಯಾಪಕ ಪ್ರಭಾವವನ್ನು ಬೀರಿದ ವ್ಯಕ್ತಿ ಇವರು. ಇಂದು, ಎಡ ಬಲ ಮುಂತಾದ ಎಲ್ಲಾ ಐಡಿಯಾಲಾಜಿಕಲ್ ಪಂಥಗಳಿಗೂ ಸೇರಿದ ವಿದ್ವಾಂಸರು, ರಾಜಕಾರಣಿಗಳು, ಮತ್ತು ಸಾಮಾಜಿಕ ಕಾರ್ಯಕರ್ತರು ವಿವೇಕಾನಂದರ ಚಿಂತನೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ತಮ್ಮ ವಾದಕ್ಕೆ ವಿವೇಕಾನಂದರ ಚಿಂತನೆಗಳಲ್ಲಿ ಇವರು ಸಮರ್ಥನೆಯನ್ನು ಹುಡುಕಿಕೊಳ್ಳುತ್ತಾರೆ. ಈ ವಿಚಿತ್ರ ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಬೇಕಾದರೆ, ವಿವೇಕಾನಂದರ ಚಿಂತನೆಗಳನ್ನು ಕಳೆದ ನೂರು ವರ್ಷಗಳಲ್ಲಿ ಚಿಂತಕರು ಅರ್ಥೈಸಿಕೊಂಡಿರುವ ಪ್ರಮುಖ ರೀತಿಗಳ ಕುರಿತು ನಾವು ಚಿಂತಿಸಬೇಕು. ಅವರನ್ನು ಓರ್ವ ಸನ್ಯಾಸಿ (ಅಥವಾ ಸಂತ, ಅಥವಾ ಗುರು) ಮತ್ತು ರಾಮಕೃಷ್ಣ ಪರಮಹಂಸರ ಒಬ್ಬ ಯೋಗ್ಯ ಶಿಷ್ಯರೆಂದು ನೋಡುವ ಒಂದು ಸುದೀರ್ಘ ಸಂಪ್ರದಾಯವೇ ನಮ್ಮಲ್ಲಿದೆ. ಇದರ ಹೊರತಾಗಿ, ವಿವೇಕಾನಂದರನ್ನು ಅರ್ಥಮಾಡಿಕೊಳ್ಳಲು ನಮ್ಮಲ್ಲಿರುವ ಇತರ ಮೂರು ಪ್ರಮುಖ ದೃಷ್ಟಿಕೋನಗಳು ಹೀಗಿವೆ:

(ಅ) ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕ. (ಇದು ಹಿಂದುತ್ವ ಚಿಂತಕರು ತೆಗೆದುಕೊಳ್ಳುವ ನಿಲುವು).

(ಆ) ಜಾತಿ ವಿರೋಧಿ ಮತ್ತು ಹಿಂದೂ ಸಮಾಜ ಸುಧಾರಣಾ ಚಳುವಳಿಯ ಮುಂದಾಳು. (ಇದು ಸೆಕ್ಯುಲರ್ ಮತ್ತು ಪ್ರಗತಿಪರ ಚಿಂತಕರ ಒಂದು ನಿಲುವು).

(ಇ) ಹಿಂದೂ ಧರ್ಮವನ್ನು ಕ್ರಿಶ್ಚಿಯನೀಕೃತಗೊಳಿಸಿ, ಅದಕ್ಕೆ ತೀವ್ರಗಾಮಿ-ತನವನ್ನು ತಂದು ಕೊಟ್ಟ, ಪಶ್ಚಿಮದಿಂದ ಪ್ರಭಾವಿತರಾಗಿದ್ದ, ನವ-ವೇದಾಂತದ ವಿದ್ವಾಂಸ; ಹಿಂದೂ ಧರ್ಮಕ್ಕೆ ಅದರ ಇಂದಿನ ಸಾರ್ವತ್ರಿಕ ವಿಶ್ವ ಧರ್ಮದ ಪಟ್ಟವನ್ನು ತಂದುಕೊಡುವಲ್ಲಿ ಮೂಲಭೂತ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿ. (ಇದು ವಸಾಹತೊತ್ತರ / post-colonial ಚಿಂತಕರು ತೆಗೆದುಕೊಳ್ಳುವ ಒಂದು ನಿಲುವು).

ಈ ಮೇಲಿನ ಮೂರೂ ದೃಷ್ಟಿಕೋನಗಳನ್ನು ವಿವೇಕಾನಂದರ ಜೀವನದ ಘಟನೆಗಳನ್ನು ಅಥವಾ ಅವರ ಬರಹಗಳಿಂದ ಆಯ್ದ ಸೂಕ್ತ ಉಲ್ಲೇಖಗಳನ್ನು ಬಳಸಿಕೊಂಡು ರುಜುವಾತು ಮಾಡಬಹುದು.

ಅವರ ಬರಹಗಳ ಒಂದು ಸಂಕ್ಷಿಪ್ತ ಓದಿನ ಮೂಲಕ ವಿವೇಕಾನಂದರು ಭಾರತದ ಬಗ್ಗೆ ಪೌರಸ್ತ್ಯ (orientalist) ಚಿಂತಕರು ಬಳಸುತ್ತಿದ್ದ ಭಾಷೆ ಮತ್ತು ರೂಪಕಗಳಲ್ಲೇ ಮಾತನಾಡಿದ್ದನ್ನು ನಾವು ಖಾತ್ರಿ ಪಡಿಸಿಕೊಳ್ಳಬಹುದು. ಉದಾಹರಣೆಗೆ, ಇವರು ಹಿಂದೂ ರಿಲಿಜನ್, ಆರ್ಯ ಜನಾಂಗ, ಹಿಂದೂ ರಾಷ್ಟ್ರೀಯತೆಯ, ಅನೈತಿಕ ಜಾತಿ ವ್ಯವಸ್ಥೆ, ಹಿಂದೂ ಸ್ಕ್ರಿಪ್ಚರ್ ಗಳು, ಹಿಂದೂ ಡಾಕ್ಟ್ರಿನುಗಳು, ಹಿಂದೂ ಕಾನೂನುಗಳು, ರಿಲಿಜನ್ ಸುಧಾರಣೆ ಮುಂತಾದವುಗಳ ಕುರಿತು ಅವ್ಯಾಹತವಾಗಿ ಮಾತನಾಡುತ್ತಾರೆ. ಈ ಪ್ರತಿಯೊಂದು ಕಲ್ಪನೆಯೂ ಓರಿಯಂಟಲಿಸಮ್ ಮತ್ತು ಅದರ ಸಂಕಥನದ ಪ್ರಮುಖ ಅಂಶಗಳಾದ್ದರಿಂದ, ವಿವೇಕಾನಂದರ ಆಲೋಚನೆಗಳನ್ನು ಪೌರಸ್ತ್ಯ ಚಿಂತನೆ ಎಂದು, ಅಷ್ಟೇ ಏಕೆ ಅದನ್ನು ವಸಾಹತು ಚಿಂತನೆ ಎಂದೂ ನೋಡುವುದು ಸುಲಭ ಸಾಧ್ಯ. ಇದು ನಿಜವೇ ಆದ ಪಕ್ಷದಲ್ಲಿ, ಅವರ ಬರಹಗಳ ಒಂದು ಮರು ಓದು, ಈ ಸಮ್ಮೇಳನದ ಮೂಲ ಉದ್ದೇಶವಾದ ‘ಸಮಾಜ ವಿಜ್ಞಾನಗಳ ನಿರ್ವಸಾಹತೀಕರಣದ’ ಕಾರ್ಯದ ಕುರಿತು ಆಲೋಚಿಸಲು ನಮಗೆ ಹೇಗೆ ಸಹಾಯ ಮಾಡೀತು?

ಸಮಾಜ ವಿಜ್ಞಾನಗಳು ಮತ್ತು ಅವುಗಳು ಕೊಡುವ ಭಾರತೀಯ ಸಂಸ್ಕೃತಿಯ ಚಿತ್ರಣಗಳು ಹಲವಾರು ತಲೆಮಾರುಗಳ ಪಾಶ್ಚಾತ್ಯ ಚಿಂತಕರ ನಿರಂತರ ಶ್ರಮದ ಫಲ. ಈ ಕಾರಣದಿಂದಾಗಿ, ಸಮಾಜ ವಿಜ್ಞಾನಗಳು ಪಾಶ್ಚಾತ್ಯ ಸಂಸ್ಕೃತಿಯ ಸಾಮಾನ್ಯ ಜ್ಞಾನದ (common sense) ವಿಚಾರಗಳನ್ನೇ ಬಳಸಿಕೊಂಡು ಬೆಳೆದುಬಂದಿವೆ. ಈ ಸಾಮಾನ್ಯ ಜ್ಞಾನದ ವಿಚಾರಗಳು, ಅಲ್ಲಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಲ್ಲಿಯ ಜನರಿಗೆ ನಿಜವೆಂದು ಕಾಣುವುದರಿಂದಾಗಿ, ಅವುಗಳಿಗೆ ಕಾಲಕ್ರಮೇಣ ‘ಸತ್ಯಾಂಶ’ ಎಂಬ ಸ್ಥಾನಮಾನ ಸಿಕ್ಕಿದೆ. ಇಂದು ನಾವು ಸಮಾಜ ವಿಜ್ಞಾನಗಳು ಎಂಬ ಹೆಸರಿನಡಿ ಓದುವ ಚಿಂತನೆಗಳು ಇಂಥ ಸತ್ಯಾಂಶಗಳ ಒಂದು ಸಮೂಹ ಮತ್ತು ಅದರ ಸುತ್ತ ನಡೆದಿರುವ ವಾದವಿವಾದಗಳು. ನಾವು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ಈ ಸತ್ಯಾಂಶಗಳು ಯಾವುದೇ ವೈಜ್ಞಾನಿಕ ಸಂಶೋಧನೆಯ ಪ್ರತಿಫಲವಲ್ಲ. ಬದಲಿಗೆ, ಸೆಕ್ಯುಲರ್ ರೂಪದಲ್ಲಿ ತನ್ನನ್ನು ತಾನೇ ಪ್ರಸಾರಮಾಡಿಕೊಂಡ ಕ್ರಿಶ್ಚಿಯನ್ ರಿಲಿಜಿಯಸ್ ಚಿಂತನೆಯ ತುಣುಕುಗಳು. ಕಳೆದ ಎರಡು ಸಹಸ್ರಮಾನಗಳಲ್ಲಿ ಒಂದು ಸಾಮಾಜಿಕ-ರಾಜಕೀಯ ಘಟಕವಾಗಿ ಕ್ರಿಶ್ಚಿಯನ್ ರಿಲಿಜನ್ ಹಲವಾರು ಸಮಸ್ಯೆಗಳನ್ನು ಎದುರಿಸಿ, ಅವುಗಳಿಗೆ ಪರಿಹಾರಗಳನ್ನು ಕಂಡುಕೊಂಡಿದೆ. ತನ್ನನ್ನು ತಾನೇ ಸೆಕ್ಯುಲರ್ ಮಾಡಿಕೊಂಡಿದ್ದು ಇಂಥ ಒಂದು ಪ್ರಕ್ರಿಯೆ. ಪಶ್ಚಿಮದವರ ಸಾಮಾನ್ಯ ಜ್ಞಾನ ಕ್ರಿಶ್ಚಿಯನ್ ರಿಲಿಜನ್ ಸೆಕ್ಯುಲರ್ ಆದ ಈ ಪ್ರಕ್ರಿಯೆಯ ಒಂದು ಉತ್ಪನ್ನ. ಪಶ್ಚಿಮದ ಬುದ್ಧಿಜೀವಿಗಳು ನಾವು ಇಂದು ಸಮಾಜ ವಿಜ್ಞಾನಗಳು ಎಂದು ಕರೆಯುವ ಶಿಸ್ತಿನ ಮೂಲಾಧಾರವಾಗಿ ತೆಗೆದುಕೊಂಡದ್ದು ಪಶ್ಚಿಮದ ಕ್ರಿಶ್ಚಿಯನ್ ಸಂಸ್ಕೃತಿ ಎದುರಿಸಿದ ಈ ಸಮಸ್ಯೆಗಳು ಮತ್ತು ಅದರ ಪರಿಹಾರಗಳು. ಈ ಕಾರಣದಿಂದಾಗಿ, ಸಮಾಜ ವಿಜ್ಞಾನಗಳು ಕ್ರಿಶ್ಚಿಯನ್ ದೃಷ್ಟಿಕೋನ ಮತ್ತು ಅದರ ವಿವರಣೆಗಳನ್ನೇ ಪುನರುತ್ಪಾದಿಸುತ್ತಾ ಬಂದಿವೆ. ಸಮಾಜ ವಿಜ್ಞಾನಗಳ ನಿರ್ವಸಹತೀಕರಣ ಎಂದರೆ ಭಾರತೀಯ ಸಂಸ್ಕೃತಿಯ ಕುರಿತು ಕ್ರಿಶ್ಚಿಯನ್ ಸೆಕ್ಯುಲರ್ ವಿವರಣೆಗಳನ್ನೇ ಕಟ್ಟಿಕೊಡುವ ಬದಲು ಹೊಸ ತಿಳುವಳಿಕೆಯನ್ನು ಬೆಳೆಸಿಕೊಳ್ಳುವ ಒಂದು ಕಾರ್ಯಯೋಜನೆ.

ಈ ಕಾರ್ಯವೇ ಪ್ರೊ. ಎಸ್.ಏನ್. ಬಾಲಗಂಗಾಧರರ ‘ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ’ ಎಂಬ ಸಂಶೋಧನಾ ಯೋಜನೆಯ ಮೂಲ ಉದ್ದೇಶ. ಭಾರತೀಯ ಚಿಂತಕರು ಮತ್ತು ಜ್ಞಾನಿಗಳನ್ನು ಮತ್ತೊಮ್ಮೆ ಹೊಸದಾಗಿ ಮತ್ತು ವೈಜ್ಞಾನಿಕವಾಗಿ, ಕ್ರಿಶ್ಚಿಯನ್ ಸೆಕ್ಯುಲರ್ ಚಿಂತನೆಯ ಮಿತಿಗಳ ಆಚೆಗೆ ಅರ್ಥಮಾಡಿಕೊಳ್ಳುವ ಪ್ರಯತ್ನವು ಈ ಅಧ್ಯಯನದ ಒಂದು ಪ್ರಮುಖ ಘಟಕ. ಉದಾಹರಣೆಗೆ ವಿವೇಕಾನಂದರನ್ನೇ ತೆಗೆದುಕೊಳ್ಳಿ. ಇವರ ಬದುಕಿನ ಮತ್ತು ಬರಹಗಳ ಕುರಿತ ಕಳೆದ ಹತ್ತು, ಹನ್ನೆರಡು ದಶಕಗಳ ಅಕಾಡೆಮಿಕ್ ಬರಹಗಳು ಪೌರಸ್ತ್ಯ ಚಿಂತನೆಯೊಳಗೆ ಸಿಕ್ಕಿ ನರಳುತ್ತಿವೆ. ವಿವೇಕಾನಂದರನ್ನು ಸಾಂಪ್ರದಾಯಿಕವಾಗಿ ನಾವು ಅಧ್ಯಾತ್ಮಿಕ ಚಿಂತಕ, ಸನ್ಯಾಸಿ ಅಥವಾ ಗುರು ಎಂದು ನೋಡುವ ಪ್ರಚಲಿತ ದೃಷ್ಟಿಕೋನವನ್ನು ಈ ಚಿಂತನೆಗಳು ಸಂಪೂರ್ಣವಾಗಿ ಕಡೆಗಣಿಸುತ್ತವೆ. ಆದರೆ ವಿವೇಕಾನಂದರ ಕುರಿತ ಈ ಪ್ರಚಲಿತ ಸಾಂಪ್ರದಾಯಿಕ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಲು ಅಸಫಲರಾದರೆ, ಅವರ ಚಿಂತನೆಯನ್ನು ಅರ್ಥಮಾಡಿಕೊಳ್ಳಲೂ ನಾವು ಸೋಲುತ್ತೇವೆ. ಅಂತೆಯೇ, ಈ ಮುಂದಿನ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಳ್ಳುವುದೂ ದುಸ್ತರವಾದೀತು: ಭಾರತ ಮತ್ತು ಇಲ್ಲಿನ ಸಂಪ್ರದಾಯಗಳು ಎದುರಿಸುತ್ತಿದ್ದ ಯಾವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ವಿವೇಕಾನಂದರು ಪ್ರಯತ್ನಿಸುತ್ತಿದ್ದರು? ಅವರ ಚಿಂತನೆಗಳನ್ನು ನಮ್ಮ ಇಂದಿನ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳಲು ಸಾಧ್ಯವೇ?

ಈ ವಿಚಾರಗಳ ಕುರಿತು ನಮಗೆ ಅಸ್ಪಷ್ಟತೆ ಬೆಳೆದಷ್ಟು, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಮಗೆ ವಿವೇಕಾನಂದರು ಹೆಚ್ಚುಹೆಚ್ಚು ಅಪರಿಚಿತರಾಗುತ್ತಾ ಹೋಗುತ್ತಾರೆ. ವಿವೇಕಾನಂದರ ಹೆಸರಿನಲ್ಲಿ ದೊಂಬಿ ಜಗಳಗಳು ಹುಟ್ಟುವುದೇ ಇಂಥ ಪರಿಸ್ಥಿತಿಯಲ್ಲಿ. ವಿವೇಕಾನಂದರಂಥ ಚಿಂತಕರನ್ನು ನಾವಿಂದು ನಮಗೆ ನಿಲುಕಿಸಿಕೊಳ್ಳಬೇಕಾದರೆ, ಅವರ ಚಿಂತನೆಗಳನ್ನು ಒಂದು ವೈಜ್ಞಾನಿಕವಾದ ಮರು ಓದಿಗೆ ತೊಡಗಿಸಿಕೊಳ್ಳುವುದರ ಜೊತೆಗೆ ಮಾಡಬೇಕಾದ ಇನ್ನೊಂದು ಕಾರ್ಯವಿದೆ: ಸಾಂಪ್ರದಾಯಿಕ ಮತ್ತು 19ನೆಯ ಶತಮಾನದ ದೃಷ್ಟಿಕೋನದಿಂದ ರಚಿತವಾದ ಅವರ ಒಳನೋಟಗಳನ್ನು ನಾವು ನಮ್ಮ 21ನೆಯ ಶತಮಾನದ ಭಾಷೆಯಲ್ಲಿ ಮರುವ್ಯಾಖ್ಯಾನ ಮಾಡಿಕೊಳ್ಳ ಬೇಕು. ಈ ಕಾರ್ಯಗಳ ಕುರಿತು ಸಮಾಲೋಚಿಸುವುದು, ಮತ್ತು ಈ ಹಿನ್ನಲೆಯಲ್ಲಿ ವಿವೇಕಾನಂದರ ಆಲೋಚನೆಗಳನ್ನು ಒಂದು ಮರು ಓದಿಗೆ ಒಳಪಡಿಸುವುದೇ ಈ ಸಮ್ಮೇಳನದ ಪ್ರಯತ್ನ.

ಹಾಗಾದರೆ ವಿವೇಕಾನಂದರನ್ನು ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಗರಡಿಯಲ್ಲಿ ಪಳಗಿದ, ಭಾರತದ ವಿಭಿನ್ನ ಸಂಪ್ರದಾಯಗಳ ಕುರಿತು ಪಾಂಡಿತ್ಯವನ್ನು ಹೊಂದಿದ್ದ ಸನ್ಯಾಸಿ ಎಂಬ ದೃಷ್ಟಿಕೋನದೊಂದಿಗೆ ಆರಂಭಿಸೋಣ. ಇವರು ಭಾರತೀಯ ಸಂಸ್ಕೃತಿಯ ಭಿನ್ನತೆ, ಮಹತ್ವ ಮತ್ತು ಮಾನವ ನಾಗರಿಕತೆಗೆ ಅದರ ಕೊಡುಗೆಯನ್ನು ತಿಳಿಸಿ ಹೇಳಲು ಶ್ರಮಿಸುತ್ತಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಯ ತುಲನೆಯಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಿವೇಕಾನಂದರ ಬರಹಗಳಲ್ಲಿ ಆಳವಾದ ಒಳನೋಟಗಳಿರುವುದನ್ನು ನಾವು ನೋಡಬಹುದು. ಈ ಒಳನೋಟಗಳ ಕುರಿತು ಬರೆಯುವಾಗ ಇವರು ನಿಶ್ಚಿತವಾಗಿ ಭಾರತೀಯ ಸಂಸ್ಕೃತಿಯ ಪರಿಕಲ್ಪನೆಗಳು ಬಳಸುತ್ತಾರೆ. ಆದರೆ ಅವರು ಬಳಸುವ ಪದಗಳು ಕ್ರಿಶ್ಚಿಯನ್ ಮತ್ತು ಪೌರಸ್ತ್ಯ ಚಿಂತನೆಯಿಂದ ಬಂದಂಥವುಗಳು. ನಾವು ಸಾಂಸ್ಕೃತಿಕ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣಿಸುವುದಾದರೆ, ಇದೊಂದು ಗೊಂದಲ ಉಂಟುಮಾಡುವ ವಿಚಾರ. ವಿವೇಕಾನಂದರು ತಾವು ಬಳಸುವ ಕ್ರಿಶ್ಚಿಯನ್ ಪದ ಮತ್ತು ಪರಿಕಲ್ಪನೆಗಳನ್ನು ಅವುಗಳ ಮೂಲ ಅರ್ಥದಲ್ಲಿ, ಅಂದರೆ ಅವುಗಳನ್ನು ಪಶ್ಚಿಮದಲ್ಲಿ ಬಳಸಲಾಗುವ ಅರ್ಥದಲ್ಲಿ ಉಪಯೋಗಿಸಿದರೇ? ಅವುಗಳನ್ನು ಅವರು ವಿರೂಪಗೊಳಿಸಿದರೇ? ಹೀಗೆ ಈ ವಿರೂಪಗೊಳ್ಳುವ ಪ್ರಕ್ರಿಯೆಯಲ್ಲಿ ಒಂದು ಮಾದರಿಯನ್ನು ನೋಡಬಹುದೇ? ಈ ಮಾದರಿಯು ಸಂಸ್ಕೃತಿಗಳ ಕುರಿತ ವಿವೇಕಾನಂದರ ತಿಳುವಳಿಕೆಯ ಬಗ್ಗೆ ನಮಗೊಂದಿಷ್ಟು ಒಳನೋಟವನ್ನು ಕೊಡಬಹುದೇ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಸಮ್ಮೇಳನ ವಿವೇಕಾನಂದರ ಚಿಂತನೆಗಳಲ್ಲಿ ಕಾಣಿಸಿಕೊಳ್ಳುವ ಈ ಕೆಲವು ವಿಚಾರಗಳನ್ನು ಚರ್ಚೆಗೆ ತೆಗೆದುಕೊಳ್ಳಲಿದೆ: ನ್ಯಾಷನಲಿಸಂ, ಪಾಲಿಟಿಕ್ಸ್, ಹಿಂದೂ ಮತ್ತು ಕ್ರಿಶ್ಚಿಯನ್ ರಿಲಿಜನ್ ಹಾಗು ಧರ್ಮ, ಸಾಮಾಜಿಕ ಸುಧಾರಣೆ, ಸಾಂಸ್ಕೃತಿಕ ವ್ಯತ್ಯಾಸಗಳು ಇತ್ಯಾದಿ.

 

ಲೇಖನ ಬರೆಯಲು ಕೆಲವು ಥೀಮ್ ಗಳ ಆಯ್ಕೆಯ ಕುರಿತು
ವಿವೇಕಾನಂದರ ಬರಹಗಳನ್ನು ನಾವು ಇಂಗ್ಲೀಷ್ ನಲ್ಲಿ ಓದಲು ಹೊರಟರೆ, ಅವರು ವಸಾಹತು ಪ್ರಜ್ಞೆಯಲ್ಲಿ  ಹುದುಗಿ ಹೋದಂತೆ ಕಾಣುತ್ತಾರೆ. ಆದರೆ ಅವರ ಬರಹಗಳನ್ನು (ಮುಖ್ಯವಾಗಿ ಅವರು ಬಳಸುವ ಗಾಡ್, ರಿಲಿಜನ್, ಫೈತ್ ಮುಂತಾದ ಪದಗಳನ್ನು) ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ ಅವರು ಭಾರತೀಯ ಸಂಪ್ರದಾಯಗಳಿಗೆ ಸೇರಿದ ಚಿಂತಕರು ಎಂಬುದು ಗೋಚರಿಸತೊಡಗುತ್ತದೆ. ಭಾರತದ ಕುರಿತ ಪಾಶ್ಚಾತ್ಯ ಚಿಂತನೆಗಳನ್ನು ಇವರು ಬಳಸಲೇ ಇಲ್ಲ, ಅದರಿಂದ ಪ್ರಭಾವಿತರಾಗಲೇ ಇಲ್ಲ ಎಂದು ಘೋಷಿಸುವುದು ನಮ್ಮ ಗುರಿಯಲ್ಲ. ಆದರೆ, ಅವರ ವಿಚಾರಗಳಲ್ಲಿ ಭಾರತೀಯ ಸಂಪ್ರದಾಯಗಳಿಂದ ಬಂದ ಅರಿವು ಎಷ್ಟು? ಭಾರತದ ಕುರಿತ ಪೌರಸ್ತ್ಯ ಮತ್ತು ವಸಾಹತು ಚಿಂತನೆಯಿಂದ ಬಂದದ್ದು ಎಷ್ಟು? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಲೇಖನಗಳಿಗೆ ಸಮ್ಮೇಳನದಲ್ಲಿ ಆಧ್ಯತೆ ಕೊಡಲಾಗುವುದು. ಇಂಥ ಸಂಶೋಧನಾ ಲೇಖನವನ್ನು ಬರೆಯುವುದರ ಕುರಿತು ಕೆಲವು ಸಲಹೆ ಸೂಚನೆಗಳು ಇಲ್ಲಿವೆ.
೧. ಸಾಮಾಜಿಕ ಸುಧಾರಣೆ ಮತ್ತು ಸಮಾಜ ಸುಧಾರಕರ ಕುರಿತು ವಿವೇಕಾನಂದರ ಟೀಕೆ

  • ವಿವೇಕಾನಂದರ ಬರಹಗಳಲ್ಲಿ ‘ಸಾಮಾಜಿಕ ಸುಧಾರಣೆ’ / ‘social reform’ ಎಂಬ ಪದ ಏನನ್ನು ಸೂಚಿಸುತ್ತದೆ? ಇವರ ಪ್ರಕಾರ ‘ಸಮಾಜ ಸುಧಾರಕರು’ ಎಂದರೆ ಯಾರು? ‘ಸಾಮಾಜಿಕ ಸುಧಾರ‍‌ಣೆ’ ಮತ್ತು ‘ಸಮಾಜ ಸುಧಾರಕ’ ಇವುಗಳಿಗಿರುವ ಗುಣಲಕ್ಷಣಗಳು ಯಾವುವು? ಇವರು ಸಾಮಾಜಿಕ ಸುಧಾರಣೆಯನ್ನು ಟೀಕಿಸಿದರೆ? ಏಕೆ? ಇದಕ್ಕೆ ಪರಿಹಾರವಾಗಿ ಅಥವಾ ಪರ್ಯಾಯವಾಗಿ ಅವರು ಏನನ್ನು ಸೂಚಿಸುತ್ತಾರೆ?
  • ವಸಾಹತು ಅಥವಾ ಯುರೋಪಿಯನ್ ವಿದ್ವಾಂಸರ ಚಿಂತನೆಯಲ್ಲಿ ‘ಸಾಮಾಜಿಕ ಸುಧಾರಣೆ’ ಮತ್ತು ‘ಸಾಮಾಜಿಕ ಸುಧಾರಕ’ ಎಂಬ ಕಲ್ಪನೆಗಳು ಹೇಗೆ ಮೂಡಿಬರುತ್ತವೆ? ಇದಕ್ಕೂ ವಿವೇಕಾನಂದರ ಕಲ್ಪನೆಗೂ ಭಿನ್ನತೆ ಏನು? ಈ ಭಿನ್ನತೆಯ ಮಹತ್ವವೇನು?

 

೨. ವಿವೇಕಾನಂದರ ಬರಹಗಳಲ್ಲಿ ಸಮಕಾಲೀನ ಚಿಂತಕರು ಜಾತಿ ವಿರೋಧಿ ವಿಚಾರ ಮತ್ತು ಹಿಂದುತ್ವಕ್ಕೆ ಬೆಂಬಲಗಳೆರಡನ್ನೂ ನೋಡುತ್ತಾರೆ. ಅಂದರೆ ಇವರು ಒಬ್ಬ ಅಸಂಬದ್ಧವಾಗಿ ಮಾತನಾಡುವ ಚಿಂತಕ ಎಂದಾಯಿತು: ಒಂದೆಡೆ ಇವರು ಜಾತಿ ಪದ್ದತಿಯನ್ನು ಪುರಸ್ಕರಿಸಿದರೆ, ಇನ್ನೊಂದೆಡೆ ಜಾತಿಯನ್ನು ಹುಟ್ಟುಹಾಕುವ ಅನೈತಿಕ ‘ಹಿಂದೂ ಧರ್ಮ’ವನ್ನು ಪ್ರಚಾರ ಮಾಡುತ್ತಾರೆ.

 

  • ಈ ಎರಡು ಚಿಂತನೆಗಳಲ್ಲಿ ಸರಿಯಾದದ್ದು ಯಾವುದು? ಅಥವಾ ಇವೆರಡೂ ತಪ್ಪಾಗಿದ್ದರೆ, ಹೇಗೆ ಮತ್ತು ಯಾಕೆ ತಪ್ಪು?ಇವೆರಡನ್ನೂ ಹೊರತುಪಡಿಸಿದ ಅವರ ಬರಹಗಳ ಮತ್ತೊಂದು ಓದು ಸಾಧ್ಯವೇ? ಇವರು ಜಾತಿ, ಜಾತಿ ವ್ಯವಸ್ಥೆ (caste, caste system) ಎಂದು ನಿರ್ಧಿಷ್ಟವಾಗಿ ಏನನ್ನು ಸೂಚಿಸುತ್ತಾರೆ, ಇವುಗಳ ಕುರಿತು ಇವರ ತಕರಾರು ಏನು ಎಂಬುದನ್ನು ಸ್ಪಷ್ಟವಾಗಿ ತೋರಿಸಬಹುದೇ?
  • ವಿವೇಕಾನಂದರ ಪ್ರಕಾರ ‘ಜಾತಿ ಸಮಸ್ಯೆ’ ಎಂದರೆ ಏನು? ಈ ‘ಜಾತಿ ಸಮಸ್ಯೆ’ಯ ಗುಣಲಕ್ಷಣಗಳು ಯಾವುವು?
  • ಜಾತಿ ವ್ಯವಸ್ಥೆಯ ಕುರಿತ ವಸಾಹತುಶಾಹಿಯ ಕಥೆಯ ಬಗ್ಗೆ ಇವರಿಗೆ ಅಸಮಾಧಾನ ಇತ್ತು ಎನಿಸುತ್ತದೆ. ಈ ಕಥೆಯ ಯಾವ ಅಂಶದ ಕುರಿತು ಇವರಿಗೆ ತೊಂದರೆ ಇತ್ತು? ಯಾವ ತೊಂದರೆಗಳು? ಅವುಗಳಿಗೆ ಅವರು ಪರಿಹಾರ ಸೂಚಿಸಿದ್ದಾರೆಯೇ? ಆ ಪರಿಹಾರಗಳು ಯಾವುವು?

 

೩. ವಿವೇಕಾನಂದರು ಬಳಸುವ ರಾಷ್ಟ್ರ, ರೇಸ್, ರಾಷ್ಟ್ರೀಯತೆ ಮುಂತಾದ ಪರಿಕಲ್ಪನೆ/ಪದಗಳ ಕುರಿತು: ವಿವೇಕಾನಂದರ ಈ ಪದಗಳ ಬಳಕೆ ಅವುಗಳನ್ನು ಯುರೋಪಿನ ಚಿಂತಕರ ಬರಹಗಳಲ್ಲಿ ಬಳಸಲಾಗುವ ರೀತಿಗಿಂತ ಸಾಮಾನ್ಯವಾಗಿ ಭಿನ್ನವಾಗಿರುತ್ತವೆ ಎಂದು ತೋರುತ್ತದೆ. ನಾವು ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಬಹುದೇ? ಈ ವ್ಯತ್ಯಾಸಗಳು ನಮಗೆ ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕೃತಿಗಳ ಕುರಿತು, ಅವುಗಳ ನಡುವೆ ಇರುವ ಸಾಂಸ್ಕೃತಿಕ ಭಿನ್ನತೆಗಳ ಕುರಿತು ಏನನ್ನು ಸೂಚಿಸುತ್ತವೆ?

 

೪. ಕ್ರಿಶ್ಚಿಯನ್ ಮತ್ತು ಇಸ್ಲಾಂ ರಿಲಿಜನ್/ಧರ್ಮಗಳ ಕುರಿತು ವಿವೇಕಾನಂದರ ಚಿಂತನೆಗಳನ್ನು ನಾವಿಂದು ಮರು ಪರಿಶೀಲಿಸಬೇಕಾಗಿದೆ.

  • ಇವರು ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮದ ಅನುಯಾಯಿಗಳನ್ನು ಸಂಭೋದಿಸಿದ ರೀತಿ, ಅವರ ಕುರಿತು ಹೇಳಿದ ವಿಚಾರಗಳು ಸಮಕಾಲೀನ inter-faith ಚರ್ಚೆಯ ಮಾದರಿಗಿಂತ ಭಿನ್ನವಾಗಿದೆಯೇ? ಯಾವ ಭಿನ್ನತೆಗಳು?
  • ಈ ಕುರಿತ ವಿವೇಕಾನಂದರ ಚಿಂತನೆಗಳು ಕ್ರಿಶ್ಚಿಯನ್/ಇಸ್ಲಾಂ ಕುರಿತು ಭಾರತೀಯ ಸಂಸ್ಕೃತಿ ಬೆಳೆಸಿದ್ದ ಧೋರಣೆಯ ಬಗ್ಗೆ ಹೊಸ ಹೊಳಹುಗಳನ್ನು ಕೊಡುತ್ತವೆಯೇ?
  • ಈ ನಿಟ್ಟಿನಲ್ಲಿ ನಾವು ವಿವೇಕಾನಂದರು ಕ್ರಿಶ್ಚಿಯನ್ ಧರ್ಮ ಮತ್ತು ಯೇಸುವಿನ ಬಗ್ಗೆ ಮಾತನಾಡುವ ಪರಿಯ ಒಂದು ವಿಸ್ತೃತ ವಿವರಣೆಯನ್ನು ನೀಡಬಹುದೇ?

 

೫. ಈ ಮೇಲಿನ ವಿಚಾರಗಳ ಹೊರತಾಗಿಯೂ ಯಾವುದೇ ಇತರ ವಿಷಯವನ್ನು ಲೇಖನಗಳಿಗೆ ಬಳಸಿಕೊಳ್ಳಬಹುದು. ಉದಾಹರಣೆಗಳು: (a) ವಿವೇಕಾನಂದರು ಕಾನೂನು/law ಕುರಿತು ಮಾಡುವ ಚರ್ಚೆ. ಇವರ ಕಾನೂನು ಕುರಿತ ಚರ್ಚೆ, ಭಾರತೀಯ ಸಂಪ್ರದಾಯಗಳಲ್ಲಿ ‘ಧರ್ಮ’ ಕುರಿತ ಚರ್ಚೆಯ ಹಾದಿಯನ್ನೇ ಹಿಡಿಯುತ್ತದೆ ಎಂಬುದು ನಾವು ಗಮನಿಸಬಹುದಾದ ಒಂದು ಕುತೂಹಲಕಾರಿ ವಿಚಾರ. (b) ಶಿಕ್ಷಣ ಕುರಿತ ಇವರ ವಿಚಾರಗಳು.
ನಿಮ್ಮ ಲೇಖನವನ್ನು ಬರೆಯಲು ಈ ವಿಧಾನವನ್ನು ಅನುಸರಿಸಿ

(ಏ) ನಿಮಗೆ ಆಪ್ತವೆನಿಸುವ, ಆಸಕ್ತಿಯನ್ನುಂಟು ಮಾಡುವ ಯಾವುದಾದರು ಒಂದು ವಿಷಯವನ್ನು ಆಯ್ದುಕೊಳ್ಳಿ. (ಉದಾ. ಜಾತಿ ವ್ಯವಸ್ಥೆ.) ನೀವು ಆಯ್ದುಕೊಂಡ ವಿಚಾರಗಳ ಕುರಿತು ವಿವೇಕಾನಂದರು ಏನು ಹೇಳಿದ್ದಾರೆ ಮತ್ತು ಆ ಕುರಿತು ಸಮಾಜ ವಿಜ್ಞಾನದ ವಿದ್ವಾಂಸರು ಏನು ಹೇಳುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿ.

(ಬಿ) ಸಮಾಜ ವಿಜ್ಞಾನದ ವಿದ್ವಾಂಸರು ವಿವೇಕಾನಂದರ ಚಿಂತನೆಗಳನ್ನು ಹೇಗೆ ಅಪಾರ್ಥ ಮಾಡಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿ.

(ಸಿ) ಇದಕ್ಕೆ ಪರ್ಯಾಯವಾಗಿ ಒಂದು ಹೆಚ್ಚು ಸ್ಥಿರವಾದ, ವಿವೇಕಾನಂದರ ಬೇರೆ ಓದುವಿಕೆ ಸಾಧ್ಯ ಎಂದು ತೋರಿಸಿ. ಏಕೆ ಈ ಪರ್ಯಾಯ ಓದುವಿಕೆ ಹೆಚ್ಚು ಉಪಯುಕ್ತವಾದದ್ದು ಎಂದು ವಿವರಿಸಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments