ಭಾಷೆ – ಜಿಜ್ಞಾಸೆ : ಗಂಜಿ, ಹಿಂಡಿ, ಬೂಸಾ ಇತ್ಯಾದಿ
– ರೋಹಿತ್ ಚಕ್ರತೀರ್ಥ
ನಮ್ಮ ಮನೆಯಲ್ಲಿದ್ದ ಕಾಮಧೇನು ಎಂಬ ದನವನ್ನು ದಿನವೂ ಬಯಲಿಗೆ ಅಟ್ಟಿಸಿಕೊಂಡು ಹೋಗಿ ಸಂಜೆ ಹೊತ್ತಿಗೆ ಮರಳಿ ಹಟ್ಟಿಗೆ ತರುವ ಕೆಲಸ ಮಾಡುತ್ತಿದ್ದ ನನಗೆ, ಹಸುವಿಗೆ ಅಕ್ಕಚ್ಚು ಇಡುವುದು ಅತ್ಯಂತ ಪ್ರಿಯವಾಗಿದ್ದ ಕೆಲಸ. ಬೆಂದ ಅನ್ನವನ್ನು ಬಸಿದಾಗ ಸಿಗುವ ಗಂಜಿನೀರಿಗೆ ಒಂದಷ್ಟು ಕಲ್ಲುಪ್ಪು ಹಾಕಿ ಕರಗಿಸಿ ಅಜ್ಜಿ ಕೊಟ್ಟರೆ ಅದನ್ನು ದನದ ಮುಂದಿಟ್ಟು ಅದು ಕುಡಿಯುವ ಚಂದ ನೋಡುತ್ತ ಕೂರುತ್ತಿದ್ದೆ. ಮೂತಿ ಇಳಿಸಿದರೂ ಮೂಗೊಳಗೆ ನೀರು ಹೋಗದಂತೆ ಬಹಳ ಎಚ್ಚರಿಕೆಯಿಂದ ನಾಜೂಕಾಗಿ ಸುರ್‍ಸುರ್ರೆನ್ನುತ್ತ ಗಂಜಿ ಹೀರುವ ದನದ ಜಾಣ್ಮೆಗೆ ತಲೆದೂಗುತ್ತಿದ್ದೆ.
ಮೂಗನ್ನು ಗಂಜಿನೀರಿನ ಮೇಲಿರುವಂತೆ ನೋಡಿಕೊಂಡು ಕೇವಲ ಬಾಯಿಯನ್ನಷ್ಟೇ ಅದ್ದಿ ಗಂಜಿ ಹೀರಬೇಕಾದ್ದರಿಂದ ಹಸುವಿಗೆ ಅದನ್ನು ಸುರ್ರ್‍ಸುರ್ರೆಂದು ಸಶಬ್ದವಾಗಿ ಹೀರುವುದು ಅನಿವಾರ್ಯ. ಇದಕ್ಕೆ ತುಳುವಿನಲ್ಲಿ ‘ಸುರ್ಪ್’ ಎನ್ನುತ್ತಾರೆ. ಕಾಫಿಯೋ ಕಷಾಯವೋ ಕುಡಿಯುವಾಗ ಹಾಗೆ ಸದ್ದು ಮಾಡುತ್ತ ಹೀರಿದರೆ ಹಿರಿಯರು ಕೆಂಗಣ್ಣು ಬೀರುವುದಿದೆ. ನಮ್ಮ ನಾಡಿಂದ ತುಂಬ ದೂರ ಇರುವ ಬ್ರಿಟಿಷರಲ್ಲೂ ಕಾಫಿಯನ್ನು ಸುರ್ರೆಂದು ಸದ್ದುಮಾಡಿ ಹೀರುವುದು ಶಿಷ್ಟಾಚಾರವಲ್ಲ. ಹಾಗೆ ಮಾಡುತ್ತ ಹೀರುವುದಕ್ಕೆ ಇಂಗ್ಲೀಷಿನಲ್ಲಿ ‘Slurp’ ಎಂದು ಹೆಸರು! ಯಾರ ಕಡೆಯಿಂದ ಯಾರು ಪದ ಎರವಲು ಪಡೆದರೋ ಗೊತ್ತಿಲ್ಲ!
ಮತ್ತೆ ಗಂಜಿಯ ವಿಷಯಕ್ಕೆ ಬರೋಣ. ಹಸುವಿಗಿಡುವ ಈ ಸೂಪು ಮೂಲತಃ ಅಕ್ಕಿ ತೊಳೆದ ನೀರು. ಅಕ್ಕಿ ತೊಳೆಯುವಾಗ ಅದರ ಹೊರ ಪದರಕ್ಕೆ ಮೆತ್ತಿದ ಹೊಟ್ಟು ಈ ನೀರಿಗೆ ಬೆರೆಯುವುದರಿಂದ, ಅದಕ್ಕೊಂದು ರುಚಿ ಪ್ರಾಪ್ತವಾಗುತ್ತದೆ. ಕರಾವಳಿ ಕಡೆ ಸಿಗುವ ಕುಚ್ಚಕ್ಕಿ (ಅಥವಾ ಕಂದು ಬಣ್ಣದ, ಬೇಯಿಸಿ ಆರಿಸಿದ ಅಕ್ಕಿ)ಯನ್ನು ಸಾಕಷ್ಟು ನೀರಿಟ್ಟು ಮತ್ತೆ ಬೇಯಿಸಿ ಬಸಿದಾಗ ಸಿಗುವ ದಪ್ಪನೆ ಗಂಜಿ ಹಸುಗಳಿಗೆ ಇನ್ನೂ ಪ್ರಿಯವಂತೆ. ಸಂಜೆ ಹಟ್ಟಿ ಸೇರುವ ದಾರಿಯಲ್ಲಿ ಯಾರಾದರೂ ಒಂದು ದಿನ ಹಸುವನ್ನು ಕರೆದು ಇಂತಹ ಗಂಜಿ ಕುಡಿಯಲು ಕೊಟ್ಟರೆ, ಆ ಹಸು ಮರೆಯದೆ ಪ್ರತಿದಿನ ಅದೇ ಮನೆಯ ಮುಂದೆ ನಿಂತು ಮನೆಯಾಕೆಯನ್ನು ಕರೆಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ!
ಈ ಗಂಜಿ (ಅಥವಾ ಅಕ್ಕಿ ತೊಳೆದ) ನೀರಿಗೆ, ಕನ್ನಡದಲ್ಲಿ ಅಕ್ಕಚ್ಚು, ಕಲಗಚ್ಚು, ಗಂಜಳ, ಗಂಜಲ ಎಂಬೆಲ್ಲ ಪ್ರಯೋಗಗಳುಂಟು. ಅಕ್ಕಿಯ ನೀರು ಎಂಬುದೇ ಇವೆಲ್ಲದರ ಭಾವಾರ್ಥ. ತುಳುವಿನಲ್ಲಿ ಅರ್ತಿನ ಗಂಜಿ – ಅಂದರೆ, ಬಸಿದ ಗಂಜಿನೀರು, ಅರ್ಕಂಜಿ ಆಗಿದೆ. ಗಂಜಿನೀರು ತಿಳಿಯಾಗಿರುವುದರಿಂದ ಅದಕ್ಕೆ ‘ತೆಳಿ’, ‘ತೆಲಿ’ ಎಂಬ ಸಮಾನಾರ್ಥಕ ಶಬ್ದಗಳೂ ದ್ರಾವಿಡ ಭಾಷೆಗಳಲ್ಲಿ ಸಿಗುತ್ತವೆ. ತಾಯಿಯಿಲ್ಲದ ಮನೆಯಲ್ಲಿ ಉಣ್ಣುವ ಮೃಷ್ಟಾನ್ನಕ್ಕಿಂತ ಗಂಡನ ಮನೆಯಲ್ಲಿ ಉಣ್ಣುವ ಗಂಜಿಯೇ ಮೇಲು ಅಂತ ತುಳುವಿನಲ್ಲಿ ಒಂದು ಗಾದೆ. ಅನ್ನ – ಓಗರಗಳಿಗೆ ಪರದಾಡಬೇಕಾದ ಬಡವರ ಮನೆಗಳಲ್ಲಿ ತೆಳಿ ಊಟವೇ ಮೆನುವಿನ ಮುಖ್ಯಾಂಗ.
ಗಂಜಿ ಅಥವಾ ತೆಳಿ ಅಲ್ಲದೆ ಹಸುಗಳಿಗೆ ನಾವು ಹಿಂಡಿಯನ್ನೂ ತಿನ್ನಿಸುತ್ತೇವೆ. ಮೂಲತಃ ಹಿಂಡಿ ಎಂದರೆ ಎಣ್ಣೆಯನ್ನು ಹಿಂಡಿತೆಗೆದ ಮೇಲೆ ಉಳಿದ ಕಾಳಿನ ಚರಟ (ಅದು ಯಾವ ಕಾಳೂ ಆಗಿರಬಹುದು). ಇದಕ್ಕೆ ಒಂದು ಬಗೆಯ ಘಮ ಇರುವುದರಿಂದ, ಹಸುಗಳು ಇಷ್ಟಪಟ್ಟು ತಿನ್ನುತ್ತವೆ. ಮೂಲದಲ್ಲಿ ಎಣ್ಣೆ ತೆಗೆದುಳಿದ ಚರಟ ಎಂಬ ಅರ್ಥವಿದ್ದರೂ ಮುಂದೆ, ಹಿಂಡಿ – ಹಿಂಡಿ ತೆಗೆದ ಎಲ್ಲದಕ್ಕೂ ಬಳಕೆಯಾಗುವುದಕ್ಕೆ ಶುರುವಾಯಿತು. ತೆಂಗಿನ ಹಾಲು ತೆಗೆದ ಮೇಲೆ ಉಳಿದ ಬಿಳಿ ಚರಟವೂ ಹಿಂಡಿಯೇ. ಹೀಗೆ ಬೇರೆಬೇರೆ ಮೂಲಗಳಿಂದ ಸಿಕ್ಕಿದ ಚರಟವನ್ನು ನಾವು ಸಾಮಾನ್ಯವಾಗಿ ದನಗಳಿಗೆ ಮೇವಾಗಿ ತಿನ್ನಿಸುವುದರಿಂದ, ಪಶು ಆಹಾರಕ್ಕೆ ಹಿಂಡಿ ಎಂಬ ಸಾಮಾನ್ಯ ಅರ್ಥ ಪ್ರಾಪ್ತವಾಯಿತು.
ಕರಾವಳಿ ಕಡೆ ಹಿಂಡಿಯನ್ನು ದನಗಳು ಮಾತ್ರವಲ್ಲದೆ ಮನುಷ್ಯರೂ ತಿನ್ನುತ್ತಾರೆ! ಹಿಂಡುವುದು ಕೈಯಲ್ಲಿ ತಾನೆ? ಹಾಗೆ ಯಾವುದನ್ನಾದರೂ ಹಿಂಡುವಾಗ ನಾವು ಮುಷ್ಟಿಹಿಡಿಯುತ್ತೇವೆ ಅಲ್ಲವೆ? ಹಾಗಾಗಿಯೇ ಹಿಂಡಿಗಿಲ್ಲದ ಒಂದು ವಿಶೇಷಾರ್ಥ ತುಳುವಿನ “ಪುಂಡಿ”ಗೆ ಬಂದಿದೆ. ತುಳು ಭಾಷೆಯಲ್ಲಿ ಪುಂಡಿ ಎಂದರೆ ‘ಹಿಂಡಿದ’ ಎಂಬರ್ಥದ ಜೊತೆಗೆ ಮುಷ್ಠಿ ಬಿಗಿಹಿಡಿದ, ಎಲ್ಲ ಬೆರಳುಗಳನ್ನು ಜೊತೆಯಾಗಿ ಮಡಚಿ ಹಿಡಿದ – ಎಂಬರ್ಥವೂ ಉಂಟು. ಅಕ್ಕಿಯನ್ನು ಕಡಿಮೆ ನೀರಲ್ಲಿ ಹದವಾಗಿ ಅರೆದು, ಬಳಿಕ ಅದನ್ನು ಉಂಡೆಗಟ್ಟಿ ಹಬೆಯಲ್ಲಿ ಬೇಯಿಸುವ ಒಂದು ವಿಶಿಷ್ಟ ತಿಂಡಿಗೆ ‘ಪುಂಡಿ’ ಎಂದು ಹೆಸರು. ಹಿಂಡಿ ಮಾಡಿದ ದುಂಡಗಿನ ಕಡುಬು ಅದು.
ಪೇಟೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮ ಇದ್ದರೆ ಅಲ್ಲಿ ಜನರ ಹಿಂಡು ಸೇರುತ್ತದೆ. ಸಮಷ್ಠಿಯಲ್ಲಿ ಹೇಗೆ ಎಲ್ಲ ಬೆರಳುಗಳು ಒಟ್ಟಾಗಿ ಕೂಡಿಕೊಳ್ಳುತ್ತವೋ ಹಾಗೆ ಚದುರಿಹೋಗಿದ್ದ ಜನರೆಲ್ಲ ಹತ್ತಿರ ಬಂದು ಗುಂಪುಗೂಡುವುದಕ್ಕೆ ತುಳುವಿನಲ್ಲಿ ‘ಪುಂಡು’ ಎನ್ನುತ್ತಾರೆ. ಪುಂಡು ಎಂಬ ಪದ ನೀರಿಂದ ತೊಯ್ದ ಬಟ್ಟೆಯನ್ನು ಹಿಂಡು, ದನದ ಕೆಚ್ಚಲಿನಿಂದ ಹಾಲನ್ನು ಹಿಂಡು – ಎಂಬಂತೆ ಕ್ರಿಯಾಪದವಾಗಿಯೂ ಬಳಕೆಯಾಗುತ್ತದೆ.
ಭತ್ತವನ್ನು ಕುಟ್ಟುವಾಗ ಮೊದಲು ಅದರ ಹೊರಗಿನ ಸಿಪ್ಪೆ ಬೇರೆಯಾಗಿ ಅಕ್ಕಿ ಸಿಗುತ್ತದೆ. ಅಕ್ಕಿಯನ್ನು ಇನ್ನೊಂದು ಬಾರಿ ಪಾಲಿಶ್ ಮಾಡಿ ತೆಗೆದಾಗ, ಅದರ ಹೊರಮೈಗಂಟಿದ ದೂಳು ಬೇರೆಯಾಗುತ್ತದೆ. ಇದು ಮೂಲತಃ ಭತ್ತದ ಸಿಪ್ಪೆ ಮತ್ತು ಅಕ್ಕಿಯ ನಡುವೆ ಇರುವ, ಪೋಷಕಾಂಶಗಳಿರುವ ಭಾಗ. ಈ ದೂಳನ್ನು ಬೇರ್ಪಡಿಸಿದ ಮೇಲೆ ಆ ಅಕ್ಕಿಯನ್ನು ಅನ್ನ ಬೇಯಿಸಲು ಬಳಸುತ್ತೇವೆ. ಅನ್ನ ಉಣ್ಣುವುದು ನಮ್ಮಂತಹ ಸಾಮಾನ್ಯ ಜನ ಮಾಡುವ ಕೆಲಸವಾದರೆ, ಅವಸರ ಗಡಿಬಿಡಿಯಿಂದ ಚಡಪಡಿಸುವ ಜನ ‘ಅಕ್ಕಿ ತಿನ್ನು’ತ್ತಾರೆ! ಅಕ್ಕಿ ತಿನ್ನುವುದು – ಅವಸರ, ಗಡಿಬಿಡಿ, ಕೃಪಣತನ, ಹೊಟ್ಟೆಬಾಕತನಗಳನ್ನು ಸೂಚಿಸುವ ಪದಪುಂಜ. ಅಕ್ಕಿಯನ್ನು ತೊಳೆದು ಬೇಯಲಿಟ್ಟು ಅನ್ನ ಮಾಡುವಷ್ಟೂ ಪುರುಸೊತ್ತಿಲ್ಲದವರು ಎನ್ನುವುದು ವಾಚ್ಯಾರ್ಥ. ಸಿಕ್ಕಿದ್ದನ್ನೆಲ್ಲ ಮುಕ್ಕುವವರು, ಆಸೆಬುರುಕರು, ನುಂಗಣ್ಣರು ಎನ್ನುವುದು ಒಳಾರ್ಥ. ‘ಅರಿಮುಕ್ಕೆಲೆ ಪೋಂಡ ತೌಡುಮುಕ್ಕೆಲೆ ಬರುವೆ’ ಎಂದು ತುಳುವಿನಲ್ಲಿ ಒಂದು ಗಾದೆ ಮಾತು. ಅಕ್ಕಿ ಮುಕ್ಕುವ ಆಸೆಬುರುಕ ಕೊನೆಗೂ ಹೋದ, ಪದವಿಯಿಂದಿಳಿದ ಎಂದು ಜನ ನಿಟ್ಟುಸಿರು ಬಿಡುವ ಹೊತ್ತಿಗೆ, ಹೊಸದಾಗಿ ಹುದ್ದೆ ಅಲಂಕರಿಸಿದವನು ಅಕ್ಕಿ ಮಾತ್ರವಲ್ಲ ಅದರ ಹೊಟ್ಟನ್ನೂ ಮುಕ್ಕತೊಡಗಿದನಂತೆ! ‘ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ’ ಅನ್ನುವುದು ಇದಕ್ಕೇ!
ಉತ್ತರ ಕರ್ನಾಟಕದ ಕಡೆ ಹೋದರೆ ಅಲ್ಲಿ ‘ತೌಡು ಕುಟ್ಟೋದು’ ಅನ್ನುವ ಮಾತನ್ನು ಕೇಳಬಹುದು. ಚರ್ಚಿಸಬೇಕಾಗಿದ್ದ ಒಂದು ಮುಖ್ಯ ವಿಷಯದ ಬಗ್ಗೆ ಮಾತಾಡಿ ಮುಗಿಸಿದ ಮೇಲೂ ಸುಮ್ಮನೆ ಕಾಲಹರಣಕ್ಕಾಗಿ ಒಣ ಚರ್ಚೆಗಿಳಿದರೆ ಅದಕ್ಕೆ ಈ ಮಾತು. ಭತ್ತ ಕುಟ್ಟಿದರೆ ಅಕ್ಕಿಯಾದರೂ ಸಿಗುತ್ತದೆ, ತೌಡು ಕುಟ್ಟಿದರೆ ಏನುಂಟು? ಆಡುವ ಮಾಡು ಆಡಿದ ಮೇಲೆ ಸುಮ್ಮನೆ ಬಾಯಾಡಿಸುತ್ತ ಕೂತರೆ ಏನು ಬಂತು?
ಅಂದ ಹಾಗೆ, ನಾವಿಲ್ಲಿ ಅಕ್ಕಿಯ ಹೊಟ್ಟಿಗೆ ತೌಡು ಎಂಬ ಪದ ಬಳಸಿದೆವು. ತೌಡಿಗೆ ಉರ್ದುವಿನಲ್ಲಿ ಬೂಸಾ ಅನ್ನುತ್ತಾರೆ. ತೌಡು, ದನಗಳಿಗೆ ಮಾತ್ರವಲ್ಲದೆ ಕುದುರೆಗಳಿಗೂ ಪ್ರಿಯವಾದ ಆಹಾರವಾದ್ದರಿಂದ, ಭಾರತಕ್ಕೆ ಬಂದ ಅರೇಬಿಯನ್ ಕುದುರೆಗಳ ಜೊತೆ ಈ ಪದವೂ ಇಲ್ಲಿಗೆ ಬಂದಿತೋ ಏನೋ. ಅಲ್ಲದೆ, ನಮ್ಮ ದೇಶವನ್ನು ಅನೇಕ ಶತಮಾನಗಳ ಕಾಲ ಆಳಿದ ಮುಸ್ಲಿಮ್ ರಾಜರುಗಳ ಪ್ರಭಾವದಿಂದಾಗಿ ಅನೇಕ ಪರ್ಶಿಯನ್, ಅರೇಬಿಕ್, ಉರ್ದು ಶಬ್ದಗಳು ಭಾರತೀಯ ಭಾಷೆಗಳಲ್ಲಿ ಸ್ಥಾನ ಪಡೆದಿವೆ. ‘ಬೂಸಾ’ವನ್ನು ಇಂದು ನಾವು ಕನ್ನಡದ್ದೇ ಎಂಬಂತೆ ಬಳಸುತ್ತೇವೆ.
ಬೂಸಾದ ಮಾತು ಬಂದಾಗ ಬಸವಲಿಂಗಪ್ಪನವರನ್ನು ಮರೆಯುವುದು ಹೇಗೆ! ದೇವರಾಜ ಅರಸು ಸರಕಾರದಲ್ಲಿ ಮಂತ್ರಿಯಾಗಿದ್ದ ಬಸವಲಿಂಗಪ್ಪ ತನ್ನ ಹರಿತಮಾತಿಗೆ, ಸೂಜಿಯಂಥ ನಾಲಗೆಗೆ ಹೆಸರುವಾಸಿ. ದಲಿತರ ಬಗ್ಗೆ ಸದಾ ಕಾಳಜಿ ತೋರುತ್ತಿದ್ದ, ಬ್ರಾಹ್ಮಣ ಜಾತಿಗಳ ಮೇಲೆ ಹರಿಹಾಯುತ್ತಿದ್ದ ಅವರು, ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ‘ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯವಾಗಿದೆ’ ಎಂದು ಹೇಳಿ ಸಾಹಿತಿಗಳ ವೈರ ಕಟ್ಟಿಕೊಂಡರು. ಕನ್ನಡ ಸಾಹಿತ್ಯ ನಿಂತ ನೀರಾಗಿದೆ, ಹೊಸದೇನೂ ಹುಟ್ಟುತ್ತಿಲ್ಲ, ಕ್ರಿಯಾಶೀಲವಾದದ್ದು ಬರುತ್ತಿಲ್ಲ ಎಂದು ಹೇಳಲು ಹೋಗಿ ಬೂಸಾ ಎಂಬ ಶಬ್ದವನ್ನು ಬಳಸಿದ ಅವರಿಗೆ, ಈ ವಿವಾದ ಹೇಗೆ ಕೊರಳು ಸುತ್ತಿಕೊಂಡಿತೆಂದರೆ ಕೊನೆಗೆ ಅವರ ಹೆಸರೇ ‘ಬೂಸಾ ಬಸವಲಿಂಗಪ್ಪ’ ಎಂದು (ಕು)ಖ್ಯಾತವಾಯಿತು! ವಿಚಾರ ಮಾಡದೆ ಮಾತು ಹರಿಯಬಿಟ್ಟು ವಿನಾಕಾರಣ ಬಸವಲಿಂಗಪ್ಪ ತಮ್ಮ ಹೆಸರಿಗೆ ತೌಡು ಮೆತ್ತಿಕೊಂಡರೆಂದು ಹೇಳಬಹುದು.
ತೌಡು ಅಥವಾ ಬೂಸಾ, ಜಾನುವಾರುಗಳಿಗೆ ಅಗತ್ಯ ಪೋಷಕಾಂಶಗಳನ್ನು ಕೊಡುವ ಮುಖ್ಯ ಆಹಾರವಾದರೂ ಮನುಷ್ಯನಿಗೆ ಅದೇಕೋ ಅದರ ಮೇಲೆ ಅಸಡ್ಡೆ, ತಿರಸ್ಕಾರಗಳು ಬೆಳೆದುಬಂದಿವೆ. ಹೊಟ್ಟು ಅಕ್ಕಿಯಿಂದಲೇ ಬರಬೇಕೆಂದೇನೂ ಇಲ್ಲ. ಯಾವುದೇ ಧಾನ್ಯ ಅಥವಾ ಕಾಳಿನಿಂದ ಸಿಕ್ಕಿದ ಹೊಟ್ಟು ಅಥವಾ ಪುಡಿಗೂ ತೌಡು ಎಂದೇ ಕರೆಯುತ್ತೇವೆ. ಇನ್ನೂ ಮುಂದುವರಿದು, ಮರದ ಹೊಟ್ಟನ್ನೂ ತೌಡು ಎಂದೇ ಹೇಳುತ್ತೇವೆ. ‘ಅವನ ತಲೆಯೊಳಗೆ ತೌಡು ತುಂಬಿದೆ’ ಎಂದರೆ ಆತ ಹೆಡ್ಡ, ಮೂರ್ಖ ಎಂದು ಅರ್ಥ. ಅದೇ ಅರ್ಥ ಕೊಡುವ ಬೂಸ್, ಬೂಸು ಎಂಬ ಶಬ್ದಗಳು ತುಳುವಿನಲ್ಲಿ ಬಳಕೆಯಲ್ಲಿವೆ. ಯಾವ ಕೆಲಸಕ್ಕೂ ಆಗದ ಅಪ್ರಯೋಜಕನಿಗೆ ಬೂಸೆ ಎನ್ನುತ್ತೇವೆ. ಆದರೆ, ಬಹಳ ಹಿಂದಿನಿಂದಲೂ ಇರಬಹುದಾದ ಈ ಶಬ್ದಗಳಿಗೂ ಹನ್ನೆರಡನೆ ಶತಮಾನದಿಂದೀಚೆಗೆ ನಮಗೆ ಪರಿಚಯವಾದ ಬೂಸಾ ಶಬ್ದಕ್ಕೂ ಸಂಬಂಧವಿರಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ.
ಎಲ್ಲೋ ಚಿಕ್ಕಂದಿನಲ್ಲಿ ಇದ್ದಾಗ ಕಂಡಿದ್ದು ಕೇಳಿದ್ದು….. ಇಷ್ಟೊಂದು ವಿವರವಾಗಿ ಗೊತ್ತಿರಲಿಲ್ಲ. 🙂
ಸೊರ್ರ್ ಸೊರ್ರ್ ಎಂದು ಕಾಫೀ/ಟೀ ಕುದಿಯುವವರಿಗೆ ‘ಎರ್ಮೆ ಅರ್ಕಂಜಿ ಪರ್ಲೆಕ ಪರೊರ್ಚಿ’ (ಎಮ್ಮೆ ಮುಸುರೆ ಕುದಿದ ಹಾಗೆ ಕುಡಿಬೇಡ) ಅಂತ ಗದರಿಸುತ್ತಾರೆ. ಇನ್ನು ಕೆಲವು ಮಹಾನುಭಾವರು ತಿನ್ನುವಾಗ ಕಚ-ಪಚ ಸದ್ದು ಮಾಡಿ ತಿನ್ನಾತ್ತಾರೆ.ನನಗಂತೂ ಎರಡೂ ಶಬ್ಧ ಕೇಳಿದರೆ ಮೈ ಉರಿಯುತ್ತದೆ.ಇಲ್ಲಿ ಆಫಿಸನಲ್ಲಿ ನನ್ನ ಎದುರು ಕೂರುವವನೊಬ್ಬ ಎಮ್ಮೆ ಮುಸುರೆ ಕುಡಿದಂತೆ ಕುಡಿತಾನೆ.ಎದ್ದು ಹೇಳೋಣ ಅಂದ್ರೆ ಇದು ಕಾರ್ಪೋರೇಟ್ ಜಗತ್ತು ಪಣ್ಪಿಲೆಕ ಇಜ್ಜಿ
ರೋಹಿತ್ ಅವರೇ, ಲೇಖ ನ ಬಹಳ ಚೆನ್ನಾಗಿದೆ. ಅದರೇ …. ಗಂ ಜಳ ಅಥವಾ ಗಂಜಲ ಅಂದರೆ ಖಂಡಿತಾ ನೀವಂದಂತೆ ಕಲಗಚ್ಚು ಅಲ್ಲ!!
ಸರಿಯಾದ ಅರ್ಥಕ್ಕೆ ದಯವಿಟ್ಟು ಕನ್ನಡ ಆರ್ಥಕೋಶ ನೋಡಿ .