ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 5, 2016

4

ನಮೋ ಬ್ರಿಗೇಡ್ ಮೇಲಿನ ಕೋಪಕ್ಕೆ ನರೇಶ್ ತುತ್ತಾದರೇ?

‍ನಿಲುಮೆ ಮೂಲಕ

– ಹನುಮ೦ತ ಕಾಮತ್

11143647_10204577244893080_67827641632082198_nವಿನಾಯಕ ಪಾಂಡುರಂಗ ಬಾಳಿಗಾ, ಇತ್ತೀಚೆಗೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ.ಬಹುಶಃ ಆರು ವರ್ಷಗಳ ಹಿಂದಿನ ಒಂದು ದಿನ. ವಿನಾಯಕ ಬಾಳಿಗಾ ನನ್ನ  ಹತ್ತಿರ  ಬಂದಿದ್ದರು.  ‘ನನಗೆ ಮಾಹಿತಿ  ಹಕ್ಕು  ಕಾಯ್ದೆಯಡಿ  ಮಾಹಿತಿ ಪಡೆಯುವುದು  ಹೇಗೆ  ಎನ್ನುವುದರ  ಬಗ್ಗೆ  ಒಂದಿಷ್ಟು ಮಾಹಿತಿ  ಬೇಕು’ ಎಂದರು. ಕಾರಣ ಕೇಳಿದೆ.. ವಿನಾಯಕ ಬಾಳಿಗಾ ಅವರಿಗೆ ತನ್ನ ಮನೆಯಿಂದ ಕೊಡಿಯಾಲ್  ಬೈಲ್‌ಗೆ  ಹೋಗುವ ರಸ್ತೆಯಲ್ಲಿರುವ  ಪ್ರಖ್ಯಾತ  ಬಿಲ್ಡರ್ ರಮೇಶ್ ಕುಮಾರ್ ಅವರ ಮೌರಿಷ್ಕಾ ವಸತಿ ಸಮುಚ್ಚಯ ಮತ್ತು ಅದರ ಎದುರಿರುವ  ಶಾರದಾ ವಿದ್ಯಾಲಯದ ಮೇಲೆ  ತುಂಬಾ  ಸಿಟ್ಟಿದ್ದಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ಯಾವುದಾದರೂ  ಒಂದು  ಸಂಸ್ಥೆ ಅಥವಾ ವ್ಯವಸ್ಥೆಯಿಂದ ಸಾರ್ವಜನಿಕರ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗ ಆ ಸಂಸ್ಥೆ ಅಥವಾ ವ್ಯವಸ್ಥೆ  ಎಷ್ಟರ  ಮಟ್ಟಿಗೆ ನಿಯಮ,  ಕಾನೂನುಗಳನ್ನು ಪರಿಪಾಲಿಸುತ್ತಿದೆ, ಯಾವ ಹಂತದಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತನ್ನ ಇಚ್ಚೆ ಬಂದಂತೆ ವರ್ತಿಸುತ್ತದೆ ಎಂದು ಲಿಖಿತ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಆಗ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸುಲಭ. ಬಹುಶಃ  ಮೌರಿಷ್ಕಾ  ವಸತಿ  ಸಮುಚ್ಚಯ  ಮತ್ತು ಶಾರದಾ  ವಿದ್ಯಾಲಯದ ವಿರುದ್ಧ ಅಂತಹ ದಾಖಲೆಗಳನ್ನು ಪಡೆದು, ಕಾನೂನು ಹೋರಾಟ ಮಾಡಲು ಬಾಳಿಗಾ ತೀರ್ಮಾನಿಸಿದ್ದರು.ಮೌರಿಷ್ಕಾ ಅಪಾರ್ಟಮೆಂಟಿನಿಂದ  ಏನು  ಸಮಸ್ಯೆಯಾಗುತ್ತಿದೆ  ಎಂದು ಕೇಳಿದೆ.

ನನಗೆ ಆದಾಗಲೇ ಮೌರಿಷ್ಕಾ ಪಾಲಿಕೆಯ ನಿಯಮಗಳನ್ನು ಗಾಳಿಗೆ ತೂರಿ  ನಿರ್ಮಾಣವಾಗುತ್ತಿರುವುದು  ಗಮನಕ್ಕೆ  ಬಂದಿತ್ತು.  ಮೌರಿಷ್ಕಾ ಅಪಾರ್ಟಮೆಂಟಿನಿಂದ ಹೊರ ಬಿಡುವ ತ್ಯಾಜ್ಯ ಪಾಲಿಕೆಯ ನಾಲ್ಕು ಇಂಚು ಪೈಪಿನಲ್ಲಿ  ಹೋಗುವುದಿಲ್ಲ,  ಕಾರಣ  ಆ  ವಸತಿ  ಸಮುಚ್ಚಯದಲ್ಲಿ 150ಕ್ಕಿಂತಲೂ ಅಧಿಕ  ಮನೆಗಳಿವೆ.  ಅಷ್ಟೂ  ಫ್ಲಾಟ್  ಇರುವ  ಕಟ್ಟಡದ ನಿರ್ಮಾಣಕಾರರು ಸ್ವಂತ ಕಟ್ಟಿಕೊಡಬೇಕು. ಅವರು ಕಟ್ಟಿಕೊಟ್ಟಿಲ್ಲ. ಇದರಿಂದ ತ್ಯಾಜ್ಯ ಹೊರಬರುತ್ತಿದೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಾಲಿಕೆಗೆ ಆಗ್ರಹ ಮಾಡುತ್ತೇನೆ ಎಂದರು.

ಅದೇ ರೀತಿ ಮೌರಿಷ್ಕಾದ ಎದುರಿನ ಶಾರದಾ ವಿದ್ಯಾಲಯದ ಕಟ್ಟಡದ ಕೆಲವು ಪ್ಲೋರ್ ಅಕ್ರಮ ಮತ್ತು ಅದರ ಎದುರು ವಾಹನ ನಿಲುಗಡೆ ಮಾಡಿ ರಸ್ತೆ ಬ್ಲಾಕ್ ಮಾಡುವುದು ಸರಿಯಲ್ಲ, ಒಂದು ಖಾಸಗಿ ಶಿಕ್ಷಣ ಸಂಸ್ಥೆಯವರಿಗೋಸ್ಕರ ಪೊಲೀಸ್ ಇಲಾಖೆ ಕೂಡ ರಸ್ತೆಯನ್ನು ಏಕಮುಖ ಸಂಚಾರಕ್ಕೆ  ಅಳವಡಿಸಿರುವುದು ಕಾನೂನು  ಬಾಹಿರ  ಎಂದರು. ಅದರ ವಿರುದ್ಧ ಹೋರಾಡುತ್ತೇನೆ ಎಂದರು. ಅವರ ಕಣ್ಣಲ್ಲಿ ಆ ಎರಡು ಕಟ್ಟಡ ಗಳ  ಮಾಲೀಕರಿಗೆ  ಬುದ್ಧಿ  ಕಲಿಸಿಯೇ  ಬಿಡುತ್ತೇನೆ ಎನ್ನುವ  ಹುರುಪಿತ್ತು. ಅನ್ಯಾಯವನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಛಾತಿ ಇತ್ತು. ನನ್ನ ಹತ್ತಿರ ಹೋದರೆ  ಮಾಹಿತಿ  ಹಕ್ಕು  ಕಾಯ್ದೆಯ  ಬಗ್ಗೆ  ಗೊತ್ತಾಗುತ್ತದೆ ಎಂದು ಅಂದುಕೊಂಡಿದ್ದರು.

ನನಗೆ  ಗೊತ್ತಿದ್ದಷ್ಟು  ಮಾಹಿತಿ  ಕೊಟ್ಟೆ.  ವಿನಾಯಕ ಬಾಳಿಗಾ ಆ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದಾರೆ ಎನ್ನುವ ಮಾಹಿತಿ ನನಗೆ ಸಿಗುತ್ತಿತ್ತು.  ಸರಿ, ಏನಾದರೂ ಆಗಲಿ,  ಸಮಾಜಕ್ಕೆ  ಒಳ್ಳೆಯದು  ಮಾಡಲಿ ಎಂದು  ನಾನು  ಮನಸ್ಸಿನಲ್ಲಿಯೇ  ಹಾರೈಸುತ್ತಿದ್ದೆ.  ಒಂದು  ಹಂತದ  ತನಕ ವಿನಾಯಕ  ಬಾಳಿಗಾ  ಸರಿಯಾದ ದಿಕ್ಕಿನಲ್ಲಿಯೇ  ಹೋಗುತ್ತಿದ್ದರು.  ಅವರ ಒಳಗಿರುವ  ಆ  ಸೇಡಿನ  ಕಿಚ್ಚು,  ಭ್ರಷ್ಟರನ್ನು  ಕಂಡರೆ  ಆಕ್ರೋಶ ಎಲ್ಲವೂ ನಮ್ಮದೇ ಸಮುದಾಯದ ಕೆಲವು ವ್ಯಕ್ತಿಗಳ ಗಮನಕ್ಕೆ ಬಂತು. ವಿನಾಯಕ ಬಾಳಿಗಾರ  ಮನಸ್ಸಿನಲ್ಲಿ  ಯಾರು  ಏನು  ಬಿತ್ತಿದರೋ  ಗೊತ್ತಿಲ್ಲ, ಬಾಳಿಗಾ ನನ್ನೊಡನೆ  ಮಾತನಾಡುವುದನ್ನು  ನಿಲ್ಲಿಸಿದರು. ಎಲ್ಲಿಯಾದರೂ  ಸಿಕ್ಕಿದರೆ ಬರೀ  ಹಾಯ್  ಬಾಯ್  ಮಾತ್ರ.  ಅವರನ್ನು  ಹುಡುಕಿಕೊಂಡು  ಹೋಗಿ ಮಾತನಾಡಿಸುವಷ್ಟು  ಅಗತ್ಯ  ನನಗೂ  ಇರಲಿಲ್ಲವಾದ್ದರಿಂದ ನಾನು  ಕೂಡ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.

ನಮ್ಮಿಬ್ಬರ  ನಡುವಿನ ಸೌಹಾರ್ದ ಮಾತುಕತೆ ಅಲ್ಲಿಗೆ ಮುಗಿದಿತ್ತು. ನನ್ನ ಮನಸ್ಸಿನಲ್ಲಿ ವಿನಾಯಕ ಬಾಳಿಗಾ ವಿಷಯದಲ್ಲಿ ಯಾವ ಅಸಮಾಧಾನವೂ  ಇರಲಿಲ್ಲ. ಕೆಲಸ ಆಗುವಾಗ  ಬಂದು  ಮುಗಿದ  ನಂತರ  ಕೈತೊಳೆದುಕೊಳ್ಳುವವರನ್ನು ನಾನು ತುಂಬಾ ನೋಡಿರುವುದರಿಂದ ನನಗೆ ವಿನಾಯಕ ಬಾಳಿಗಾ ಎನ್ನುವ ವ್ಯಕ್ತಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಜರೂರತ್ತು ಇರಲಿಲ್ಲ.ಅದರ  ಬಳಿಕ ನನಗೆ  ನಾನು  ವಿನಾಯಕ  ಬಾಳಿಗಾ  ಅವರ  ಬಗ್ಗೆ  ಸುದ್ದಿ ಕೇಳಿದ್ದು  ಕಳೆದ ತಿಂಗಳ  21ನೇಯ  ದಿನದಂದು.

ಬೆಳಿಗ್ಗೆ  5.30  ಕ್ಕೆ  ಅವರ ಮನೆಯ  ಹೊರಗೆ  ಕೊಲೆಯಾಗಿದೆ  ಎಂದು  ನನಗೆ  7.30ರ  ಸುಮಾರಿಗೆ ಯಾರೋ  ಹೇಳಿದರು.  ಒಬ್ಬ  ಆರ್‌ಟಿಐ ಕಾರ್ಯಕರ್ತನಾಗಿ  ಬಾಳಿಗಾ ಕೊಲೆಯನ್ನು ನಾನು ಆವತ್ತೇ ಖಂಡಿಸಿದ್ದೇನೆ. ರಾಜ್ಯದ ಮಾಧ್ಯಮಗಳು ನನ್ನ ಅಭಿಪ್ರಾಯ ಕೇಳಿದಾಗ ವಿನಾಯಕ ಬಾಳಿಗಾ ಅವರ ಕೊಲೆಯನ್ನು ಖಂಡಿಸಿ ಮಾತನಾಡಿದ್ದೇನೆ.  ಕೊಲೆಗಡುಕರು  ಆದಷ್ಟು  ಬೇಗ  ಸಿಗಲಿ  ಎಂದು  ನನ್ನ ಮನಸ್ಸು  ಬಯಸಿತ್ತು  ಕೂಡ.  ಅಷ್ಟರಲ್ಲಿ  ಇಬ್ಬರು  ಸುಫಾರಿ ಹಂತಕರನ್ನು ಪೊಲೀಸರು  ಬಂಧಿಸಿದ್ದಾರೆ  ಎನ್ನುವ  ಸುದ್ದಿಯನ್ನು  ಮಾಧ್ಯಮಗಳಲ್ಲಿ ನೋಡಿದೆ.  ಮನಸ್ಸಿಗೆ  ಸಮಾಧಾನವಾಯಿತು.  ಆದರೆ  ಅಷ್ಟರಲ್ಲಿ  ಯಾರು ಮೊದಲು ಆ ಗಾಳಿ ಸುದ್ದಿಯನ್ನು ಹಬ್ಬಿಸಿದರೋ ಗೊತ್ತಿಲ್ಲ..

ಕೊಲೆಗಡುಕರಿಗೆ ಸುಫಾರಿ ಕೊಟ್ಟಿದ್ದು ನರೇಶ್ ಶೆಣೈ ಎನ್ನುವ ಕಥೆ ಹೆಣೆಯಲಾಯಿತು. ಆದರೆ ಕಥೆ ಹೆಣೆದ ವ್ಯಕ್ತಿಗೆ ನರೇಶ್ ಶೆಣೈ ಮೇಲೆ ಕೋಪ, ಸೇಡು ಮಾತ್ರ ಇತ್ತೆ ವಿನಃ ಚಿತ್ರಕಥೆಯಲ್ಲಿ  ಪರಿಣಿತಿ  ಇರಲಿಲ್ಲ  ಇದ್ದಿರಲಿಲ್ಲ  ಎನ್ನುವುದು  ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.ನರೇಶ  ಶೆಣೈ  ಅವರ  ಅಂಗಡಿಯಲ್ಲಿ  ಕೆಲಸ ಮಾಡುತ್ತಿರುವ  ವ್ಯಕ್ತಿ ಕೊಲೆಗಾರರಿಗೆ ಸಹಾಯ ಮಾಡಿದ್ದಾನೆ. ಕೊಲೆಯ ನಂತರ ಅವರನ್ನು ಒಂದು ಕಾರಿನಲ್ಲಿ ಬೇರೆಡೆಗೆ ಬಿಟ್ಟಿದ್ದಾನೆ. ಆ ಕಾರು ನರೇಶ್ ಅವರ ಅಂಗಡಿಯಲ್ಲಿ ಕೆಲಸ  ಮಾಡುವ  ಇನ್ನೊಬ್ಬ  ಕೆಲಸಗಾರನಿಗೆ  ಸೇರಿದ್ದು  ಎಂಬುದು  ಈಗಿನ ಆರೋಪ.  ಆದ್ದರಿಂದ  ನರೇಶ  ಶೆಣೈ  ಕೂಡ  ಇದ್ದಾರೆ  ಎಂಬ ತೀರ್ಮಾನಕ್ಕೆ ಪೊಲೀಸರು ಬಂದಂತಿದೆ.ಈ  ಕೊಲೆಯಲ್ಲಿ  ನರೇಶ್  ಶೆಣೈ  ಪಾತ್ರವಿದೆ  ಎಂದೇ  ಒಂದು  ಕ್ಷಣ ಅಂದುಕೊಳ್ಳೋಣ. ತನ್ನದೇ ಅಂಗಡಿಯ ನೌಕರರನ್ನು ಅದರಲ್ಲಿ ತೊಡಗಿಸಿ, ತನ್ನದೇ  ಕೆಲಸಗಾರನ  ಕಾರೊಂದನ್ನು  ಕೊಟ್ಟು  ಕಳುಹಿಸುವಷ್ಟು  ನರೇಶ್ ಮೂರ್ಖರಲ್ಲ ಎಂಬುದು ಪೊಲೀಸರಿಗೆ ಅರ್ಥವಾಗದಿರುವುದು ದುರಂತ.

ಇದರರ್ಥ ಅವರ ನೌಕರ ಇದರಲ್ಲಿ ಭಾಗಿಯಾಗಿರುವ ಎಳ್ಳಷ್ಟು ಸುಳಿವು ಕೂಡನರೇಶ್ ಅವರಿಗಿಲ್ಲ. ಇದ್ದಿದ್ದರೆ ಬಹುಶಃ ಕೊಲೆ ನಡೆಯುತ್ತಿರಲಿಲ್ಲ ಅಥವಾ ಅವರದ್ದೇ ಕೆಲಸಗಾರ  ಭಾಗಿಯಾಗುವುದಕ್ಕೆ  ಅವರು  ಅವಕಾಶ ನೀಡುತ್ತಿರಲಿಲ್ಲ.  ಈಗಲೂ  ಪೊಲೀಸರ  ಷಡ್ಯಂತರಕ್ಕೆ  ಬಲಿಯಾಗಬಾರದು ಎಂಬ  ಕಾರಣಕ್ಕೆ  ಅವರು ಕಾಣಿಸಿಕೊಳ್ಳದೇ  ಇರಬಹುದೇ  ಹೊರತು  ಕೊಲೆ ಮಾಡಿದ್ದಾರೆ  ಎಂಬ  ಕಾರಣಕ್ಕೆ  ಅಡಗಿಕೊಂಡಿಲ್ಲ  ಎಂಬ  ದೃಢವಾದ  ನಂಬಿಕೆ ನನಗಿದೆ.ನನಗೆ ನರೇಶ್ ಶೆಣೈ ಪರಿಚಯ ಆಗಿರುವುದು ಇವತ್ತು ನಿನ್ನೆಯಲ್ಲ. ನಾನು ನರೇಶ್  ಶೆಣೈಯನ್ನು  ಮೊದಲಿಗೆ  ನೋಡುವಾಗ  ಆತ  ಇನ್ನೂ  ಕಾಲೇಜಿಗೆ ಹೋಗುತ್ತಿದ್ದ  ಯುವಕ. ಅಂದರೆ  ಸುಮಾರು  ಇಪ್ಪತ್ತು  ವರ್ಷಗಳ  ಹಿಂದಿನ ಗೆಳೆತನ.

ಯಾರಲ್ಲಾದರೂ  ಸತ್ಯ,  ಧರ್ಮ,  ಗುರು  ಪರಂಪರೆಯ  ಬಗ್ಗೆ ಗೌರವ,  ಸೇವಾ  ಮನೋಭಾವ  ಇದ್ದಲ್ಲಿ  ಅಂಥವರು  ನರೇಶ್‌ಗೆ  ಬೇಗ ಹತ್ತಿರವಾಗುತ್ತಿದ್ದರು. ಅಂತಹ ಯುವಕರ ತಂಡ ನರೇಶ್ ಜತೆಗಿತ್ತು. ಅವನ ಪುಣ್ಯ  ಕಾರ್ಯಗಳು,  ಸಮಾಜ  ಸೇವೆಗಳಲ್ಲಿ  ನಾನು  ಕೂಡ  ನನ್ನ  ಹೆಗಲು ಕೊಟ್ಟು ಸಹಕರಿಸುತ್ತಿದ್ದೆ. ಮಂಗಲ್ಪಾಡಿ ನರೇಶ್ ಶೆಣೈನಲ್ಲಿ ನಾನು ನೋಡಿದ್ದು ಒಬ್ಬ  ಅಭೂತಪೂರ್ವ  ಸಂಘಟಕನನ್ನು.  ವೇದಿಕೆ  ಸಿಂಗಾರಗೊಂಡ  ಬಳಿಕ ಅದನ್ನು  ಹತ್ತಿ  ಮಾಧ್ಯಮಗಳ ಮುಂದೆ  ಮಿಂಚುವ  ಕೆಲಸ  ಇದ್ದರೆ  ನಿಮಗೆ ಗಲ್ಲಿಗೆ ನಾಲ್ಕು ಜನ ಸಿಗುತ್ತಾರೆ. ಆದರೆ ಬರೀ ನೆಲದಲ್ಲಿ ಗುಂಡಿ ತೋಡಿ ಅಲ್ಲಿ ವೇದಿಕೆ  ಸೃಷ್ಟಿಸಿ,  ಸಾವಿರಾರು ಜನರನ್ನು  ಸೇರಿಸಿ,  ಅವರಿಗೆ  ಸತ್ಯದ  ಪಾಠ ಹೇಳುವ  ಕೆಲಸ  ಇದೆಯಲ್ಲ,  ಅದು  ಲಕ್ಷದಲ್ಲಿ  ಒಬ್ಬರಿಂದ  ಮಾತ್ರ  ಸಾಧ್ಯ.

ನರೇಶ್  ಶೆಣೈ  ಯಾವತ್ತೂ  ತೆರೆಮರೆಯಲ್ಲಿ  ನಿಂತು  ಸಂಘಟನೆಗಳನ್ನು ಬೆಳೆಸಿದರೇ ವಿನಾ ಡೊಳ್ಳು ಬಾರಿಸುತ್ತಾ ಜನರನ್ನು ತನ್ನೆಡೆಗೆ ಆಕರ್ಷಿಸಲಿಲ್ಲ. ನರೇಂದ್ರ  ಮೋದಿ  ಪ್ರಧಾನಿಯಾಗಬೇಕು  ಎಂದು  ಕನಸು  ನರೇಶ್  ಶೆಣೈಗೆ ಯಾವಾಗ  ಬಿದ್ದಿತ್ತೊ,  ಅದನ್ನು  ಈಡೇರಿಸಿಕೊಳ್ಳುವ  ತನಕ  ಬರೀ  ನಮೋ ಮಂತ್ರ  ಬಿಟ್ಟು  ಬೇರೆ  ಪಠಿಸಲಿಲ್ಲ.  ಖ್ಯಾತ  ವಾಗ್ಮಿ  ಚಕ್ರವರ್ತಿ ಸೂಲಿಬೆಲೆಯವರನ್ನು ರಥದ ಮೇಲೆ ನಿಲ್ಲಿಸಿ ತಾನು ಕೇವಲ ಸಾರಥಿಯಾಗಿ ದುಡಿಯುತ್ತಾ, ಊರೂರು ಸುತ್ತಿ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ  ದಿನ  ನಿಟ್ಟುಸಿರು  ಬಿಟ್ಟ  ಯುವಕ  ಅವರು.  ಆವತ್ತು  ನಮೋ ಬ್ರಿಗೇಡ್ ಊರೂರಿನ ಮಾತಾಗಿದ್ದರು. ಟಿವಿ ಮಾಧ್ಯಮಗಳು ನರೇಶ್ ಶೆಣೈ ಸಂದರ್ಶನವನ್ನು ತೆಗೆದುಕೊಳ್ಳಲು ಅವರಿಗೆ ಫೋನ್ ಮಾಡಿದ್ದೇ ಮಾಡಿದ್ದು. ಆದರೆ  ನರೇಶ್  ಶೆಣೈ ಯಾವತ್ತೂ  ಟಿವಿಗಳಲ್ಲಿ  ತನ್ನ  ಬಗ್ಗೆಯಾಗಲೀ, ಸಂಘಟನೆಯ ಬಗ್ಗೆಯಾಗಲೀ ಕೊಚ್ಚಿಕೊಳ್ಳಲು ಹೋಗಲಿಲ್ಲ.

ಟಿವಿಯವರು ತುಂಬಾ ಒತ್ತಾಯ ಮಾಡಿದರೆ ತನ್ನ ತಂಡದ ಹುಡುಗರನ್ನು ಕಳುಹಿಸಿದರೇ ಹೊರತು ರಾಜ್ಯಮಟ್ಟದ ಸಂಚಾಲಕನಾಗಿ ಯಾವ ಟಿವಿಯಲ್ಲಿಯೂ ಕುಳಿತು ಆತ್ಮರತಿ  ಮಾಡಿಕೊಳ್ಳಲಿಲ್ಲ.  ನಂತರ  ಆ  ಸಂಘಟನೆ  ಯುವ  ಬ್ರಿಗೇಡ್  ಆಗಿ ರೂಪುಗೊಂಡಾಗ  ಅದರ  ಮಾರ್ಗದರ್ಶಕರಾಗಿ  ಮತ್ತೇ  ಧನ ಸುರಿದರೇ ಹೊರತು  ಅದರಿಂದ  ತನಗೇನೂ  ಲಾಭ  ಎಂದು  ಯೋಚಿಸಲಿಲ್ಲ.  ಇವರು ನಮ್ಮ ಸಮುದಾಯದ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಕೊಡುತ್ತಿರುವ ಹಣ, ಅಶಕ್ತರಿಗೆ ಪಿಂಚಣಿ, ಅರ್ಥಿಕವಾಗಿ ಕಷ್ಟದಲ್ಲಿರುವವರ ಮದುವೆಗಳಿಗೆ ಕೊಟ್ಟ ಹಣಗಳಲ್ಲಿ ಹೆಚ್ಚಿನವೂ ನನಗೆ ವೈಯಕ್ತಿಕವಾಗಿ ಗೊತ್ತು.

ತಾನಾಯಿತು, ತನ್ನ  ಕೆಲಸ,  ತನ್ನ  ಹೆಂಡತಿ,  ಮಕ್ಕಳು  ಇಷ್ಟೆ  ಎಂದು  ಬದುಕುವ  ವ್ಯಕ್ತಿಗೆ ಶತ್ರುಗಳು ಇರುವುದಿಲ್ಲ, ಇದ್ದರೂ ಕಡಿಮೆಯೆ. ಆದರೆ ತಾನು, ತನ್ನ ಕೆಲಸ, ತನ್ನ  ಕುಟುಂಬಕ್ಕಿಂತ  ಸಮಾಜ,  ದೇಶ  ಮುಖ್ಯ  ಎಂದು  ಹೊರಡುತ್ತಾರಲ್ಲ, ಅವರಿಗೆ ಒಂದೇ ರಸ್ತೆಯಲ್ಲಿ ಹತ್ತು ಜನ ಶತ್ರುಗಳು ಹುಟ್ಟಿಕೊಳ್ಳುತ್ತಾರೆ.ಹೀಗೆ ಮುಂದುವರೆದರೆ ಈತ ನಮಗೊಬ್ಬ ರಾಜಕೀಯ ಸ್ಪಧಿಯಾಗಬಲ್ಲ ಎಂದು  ಮುಂದಿನ  ವಿಧಾನಸಭಾ  ಚುನಾವಣೆಯ  ಮೇಲೆ  ಕಣ್ಣಿಟ್ಟಿರುವ ಹಲವರು ಲೆಕ್ಕ ಹಾಕಿ ಆಗಿತ್ತು. ಒಂದು ಸಣ್ಣ ಕಲ್ಲು ಸಿಕ್ಕಿದರೂ ಸಾಕು ಎಂದು ಕಾಯುತ್ತಿದ್ದವರಿಗೆ  ವಿನಾಯಕ  ಬಾಳಿಗಾ  ಕೊಲೆ  ಪ್ರಕರಣ  ಬ್ರಹ್ಮಾಸದಂತೆ ತೋರುತ್ತಿದೆ.

ಬಾಳಿಗಾ ಕೊಲೆಯಿಂದ ದೂರದೂರಕ್ಕೆ ಯಾವುದೇ ಲಾಭವಿಲ್ಲದ ನರೇಶ್ ಶೆಣೈ ನಡುವೆ ಈಗ ತಾಳೆ ಹಾಕಲು ನರೇಶ್ ಶೆಣೈ ಶತ್ರುಗಳು ಒಂದಾಗಿ ನಿತ್ಯ ಒಂದರಂತೆ ಕಥೆ ಹೆಣೆಯುತ್ತಿದ್ದಾರೆ ಅಷ್ಟೇ.

 

(ಲೇಖಕರು ಮಾಹಿತಿ ಹಕ್ಕು ಕಾರ್ಯಕರ್ತರು)

ವಿಶ್ವವಾಣಿಯಲ್ಲಿ ಪ್ರಕಟಿತ

 

4 ಟಿಪ್ಪಣಿಗಳು Post a comment
 1. suresh
  ಏಪ್ರಿಲ್ 5 2016

  ನರೇಶ್ ಶೆಣೈ, ಓಡಿಹೋಗುವ ಬದಲು ಸ್ಪಷ್ಟನೆಯನ್ನು ಕೊಟ್ಟಿದ್ದರೆ, ಗೊಂದಲಕ್ಕೆ ಪರಿಹಾರ ಸಿಕ್ಕಂತಾಗುತ್ತಿತ್ತು. ಇದೀಗ ಇದು ಬೇರೆ ರೂಪ ಪಡೆದುಕೊಳ್ಳುವುದಂತೂ ಸತ್ಯ.

  ಉತ್ತರ
 2. RAGHUVEER KAMATH
  ಏಪ್ರಿಲ್ 7 2016

  We deeply appreciate the work of Naresh Shenoy. He is a upcoming leader and had a bright future. But He should not have disappeared. He should have faced the situation. Police cannot touch a innocent person that too with the calibre of state secretary like Naresh. Any how as the sayings in sanskrith “KALAAYA THASMEY NAMAHA”. TIME ONLY DECIDES EVERY THING”
  HOPE NARESH SHENOY COME OUT WITH FYLING COLOR. AND REMOVE THE BAD NAME TO GSB COMUNITY.

  I FEEL SORRY FOR THE FAMILY OF MR.NARESH SHENOY. BECAUSE GSB COMMUNITY IS NUMBER ONE IN GOSSIP MONGERING

  ಉತ್ತರ
 3. ಕರಾವಳಿ ಕನ್ನಡಿಗ
  ಮೇ 31 2016

  ಜನ ಸಾಮಾನ್ಯನೊಬ್ಬನ ರಾಜಕೀಯ ಧೋರಣೆಗಳಿಂದಾಗಿಯೇ ಆತನ ಮೇಲೆ ಕ್ರಿಮಿನಲ್ ಕೇಸ್‌ ಹಾಕುವ ಧಾರ್ಷ್ಟ್ಯ, ಅದೂ ದಕ್ಷಿಣ ಕನ್ನಡದಂತಹ ಒಂದು ಸುಶಿಕ್ಷಿತ ಜಿಲ್ಲೆಯಲ್ಲಿ, ಪೋಲಿಸರಿಗೆ ಇದೆ ಎಂದಾದರೆ ಈ ಕಾಂಗ್ರೆಸಿನವರು ತಮ್ಮ ಸೇಡು ತೀರಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿದಾರು ಎಂದು ಸ್ಪಷ್ಟವಾಗಿ ತೋರುತ್ತದೆ. ಕೊಲೆ ಮಾಡಿಸಲು ಪ್ರಬಲ ಕಾರಣ ಇರುವ ಬಿಲ್ಡರ್‌ನನ್ನು (ಅಥವಾ ವಿದ್ಯಾಸಂಸ್ಥೆಯ ಮಾಲಿಕನನ್ನು) ವಿಚಾರಣೆ ಮಾಡುವ ಬದಲು ಅನುಕೂಲ ಶಾಸ್ತ್ರದಂತೆ ಸಾಮಾನ್ಯ ನಾಗರಿಕನಾದ ನರೇಶ್‌ರನ್ನು ಬಲಿಪಶುವನ್ನಾಗಿಸಲಾಗಿದೆ ಎಂದು ಕಾಣುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ಸತತವಾಗಿ 60 ವರ್ಷಗಳ ಕಾಲ ನಮ್ಮೆಲ್ಲರ ಮೇಲೆ ಅಧಿಕಾರ ಸ್ಥಾಪಿಸಿ ಗೊತ್ತಿರುವ ಕಾಂಗ್ರಿಸಿನವರಿಗೆ ಬಿಜೆಪಿ/ಮೋದಿ ಜನಪ್ರಿಯತೆಯ ಆಳ ಅಗಲಗಳ ಅರಿವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಬೆಂಬಲಿಗರನ್ನೆ ವೈಯಕ್ತಿಕವಾಗಿ ಶಿಕಾರಿಯ ಬಲುಪಶುಗಳನ್ನಾಗಿಸುವ ನೀಚ ಷಡ್ಯಂತ್ರ ಮಾಡಲಾಗುತ್ತಿದೆ. ಇದು ಹಿಟ್ಲರ್ ಆಡಳಿತವಲ್ಲದೇ ಇನ್ಯಾವುದು?

  ಉತ್ತರ
  • ಕರಾವಳಿ ಕನ್ನಡಿಗ
   ಮೇ 31 2016

   ನರೇಶ್‌ ಶೆಣೈ ಬಿಜೆಪಿ ಕಾರ್ಯಕರ್ತರೋ ಅಲ್ಲವೋ ಗೊತ್ತಿಲ್ಲ. ಆದರೆ ತಮ್ಮ ಪಕ್ಷದ ಧೋರಣೆಯನ್ನು ಬೆಂಬಲಿಸುವ ಒಬ್ಬ ಅಮಾಯಕ ಯುವಕನ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆಯುತ್ತಿರುವಾಗ ಯಾವೊಬ್ಬ ಬಿಜೆಪಿ ಮುಖಂಡ/ಡೆಯೂ ಸಹಾಯಕ್ಕೆ ಬಾರದಿರುವುದು ನಿಜಕ್ಕೂ ಅವಮಾನಕರ. ದೊಡ್ಡ ದೊಡ್ಡ ನಾಯಕರ ದಂಡೇ ಕರಾವಳಿ ಬಿಜೆಪಿಯಲ್ಲಿರುವಾಗ ಅವರಲ್ಲಿ ಕೆಲವರಾದರೂ ನರೇಶನ ಸಹಾಯಕ್ಕೆ ಬರಲಾರರೇ? ಯಾ ಇದಕ್ಕೂ ಚುನಾವಣೆ ಸಮಯ ಬಂದು ರಾಜಕೀಯ ಬಣ್ಣ ಬಂದಾಗಲೇ ಇದರ ದುರುಪಯೋಗ ಮಾಡಿಕೊಳ್ಳುವ ಹುನ್ನಾರವೇ?

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments