ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 8, 2016

2

ಕಮ್ಯುನಿಸ್ಟರ ರಕ್ತ ಚರಿತ್ರೆಯ ಪುಟಗಳು

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ನಕ್ಸಲ್ಇತ್ತೀಚೆಗೆ ಹೈದರಾಬಾದ್ ಯುನಿವರ್ಸಿಟಿಯ ರೋಹಿತ್ ವೆಮುಲ ಎಂಬ ಯುವಕನ ಆತ್ಮಹತ್ಯೆ ಹಾಗೂ ದೆಹಲಿಯ ಜೆ.ಎನ್.ಯು ವಿವಾದಗಳ ಸಮಯದಲ್ಲಿ ಕಾಕಗಳು (ಕಾಂಗ್ರೆಸ್+ಕಮ್ಯುನಿಸ್ಟ್) ಮೋದಿಯವರ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಉಯಿಲೆಬ್ಬಿಸಿದ್ದಾರೆ.ಕರ್ನಾಟಕದಲ್ಲಿರುವ ಇವರ ಅಣ್ತಮ್ಮಂದಿರು ದಿನ ಬೆಳಗಾದರೆ ಟೌನ್ ಹಾಲ್ ಎದುರು ನಿಲ್ಲುತ್ತಿದ್ದಾರೆ. ಆದರೆ,ಯುನಿವರ್ಸಿಟಿ,ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಕಗಳಿಗಿದೆಯೇ? ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ,ಮುಚ್ಛಿಸುವಂತೆ ಒತ್ತಡ ಹಾಕಿದ್ದು ಟೌನ್ ಹಾಲ್ ಬುದ್ಧಿಜೀವಿಗಳೇ. ಕಾಂಗ್ರೆಸ್ಸಿನವರ ಇತಿಹಾಸ ಎಲ್ಲರಿಗೂ ತಿಳಿದಿರುವುದೇ.ಆದರೆ ಈ ಕಮ್ಯುನಿಸ್ಟರ ಪುಣ್ಯ ಕಾರ್ಯಗಳ ಬಗ್ಗೆ ಸ್ವಲ್ಪ ಹೇಳಬೇಕು. (ಇದು ಕೇವಲ ಕೇರಳದ ಕಮ್ಯುನಿಸ್ಟರ ಇತಿಹಾಸ.ಬಂಗಾಳದ ಕಾಮ್ರೇಡುಗಳ ಕತೆ ಇದಕ್ಕೂ ದೊಡ್ಡದು)

ಅದು ಸೆಪ್ಟಂಬರ್ ೧೭,೧೯೯೬ರ ದಿನ.ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ‘ಅನು,ಸುಜಿತ್,ಕಿಮ್’ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು.ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ್ದು ತಪ್ಪು,ಕೇರಳದಲ್ಲಿ ಕಮ್ಯುನಿಸ್ಟರು ನಿಮ್ಮನ್ನು ಸುತ್ತುವರೆದರೆಂದರೇ ಸ್ಟಾಲಿನ್/ಮಾವೋ ಪ್ರೇತಾತ್ಮ ಮೃತ್ಯು ರೂಪದಲ್ಲಿ ನಿಮ್ಮೆದುರು ಬಂದು ನಿಂತಂತೆಯೇ ಸರಿ.ಪ್ರಾಣ ಉಳಿಸಿಕೊಳ್ಳಲು ಓಡಿದ ಈ ಹುಡುಗರು ಪಂಪಾ ನದಿಗೆ ಹಾರಿ ಈಜಲಾರಂಭಿಸಿದ್ದರು.ನೀರಿಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಕಲ್ಲು ತೂರಲಾರಂಭಿಸಿದರು. ಆಚೆ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೇ,ಮಹಿಳಾವಾದದ ಭಾಷಣ ಬಿಗಿಯುವ ಕಾಮ್ರೇಡುಗಳು ಅವರ ಮೇಲೆ ಕಲ್ಲಿನ ಮಳೆ ಸುರಿದರು.ವಿಧಿಯಿಲ್ಲದೇ ಆ ಹೆಣ್ಣುಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದರು.ಇತ್ತ ಹದಿಹರೆಯದ ವಿದ್ಯಾರ್ಥಿಗಳ ಪ್ರಾಣಕ್ಕೆ ಆಜಾದಿ ಸಿಕ್ಕಿತ್ತು.ಸ್ಟಾಲಿನ್ ಘೋರಿಯೊಳಗಿಂದಲೇ ಲಾಲ್ ಸಲಾಂ ಎಂದನೇನೋ. ಕಡೆಗೇನಾಯ್ತು.ಅವರದ್ದೇ ಸರ್ಕಾರ,ಅವರು ಮಾಡಿದ್ದೇ ಕಾನೂನು.ಯಾರೆಂದರೇ ಯಾರಿಗೂ ಶಿಕ್ಷೆಯಾಗಲಿಲ್ಲ.ಇಂದು ಅದೇ ಕಮ್ಯುನಿಸ್ಟರು ವಿದ್ಯಾರ್ಥಿಗಳ ಆಜಾದಿ ಬಗ್ಗೆ ಮಾತನಾಡುತಿದ್ದಾರೆಂದರೇ ಎಂತ ವ್ಯಂಗ್ಯವಲ್ಲವೇ?

ದೆಹಲಿ ಯುನಿವರ್ಸಿಟಿಯೊಳಗೆ ಪೋಲಿಸರು ನುಗ್ಗಿದನ್ನು ವಿರೋಧಿಸಿ ರಾಹುಲ್ ಗಾಂಧಿಯೆಂಬ ಚಿರ ಯುವನಾಯಕನೂ ಸೇರಿದಂತೆ ಕಮ್ಯುನಿಸ್ಟರು ಕರುಳು ಕಿತ್ತುಹೋಗುವಂತೆ ಅತ್ತಿದ್ದು ನಿಮಗೆ ನೆನಪಿರಬೇಕಲ್ಲವೇ? ಕಮ್ಯುನಿಸ್ಟರಿಗೆ ಕ್ಯಾಂಪಸ್ಸಿನೊಳಗೆ ಪೋಲಿಸರು ನುಗ್ಗಿದರಷ್ಟೇ ತೊಂದರೆ.ಅದೇ ಕೆಂಪು ಧ್ವಜವಿಡಿದ ರಕ್ಕಸರು ನುಗ್ಗಿದರೆ,ಅದು ಆಜಾದಿಗೋಸ್ಕರವಷ್ಟೇ.

ಡಿಸೆಂಬರ್ ೧,೧೯೯೯ರ ದಿನ.ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ೬ನೇ ತರಗತಿಯ ಮಕ್ಕಳಿಗೆ ಪಾಠ ಮಾಡುತಿದ್ದ ಮಾಸ್ಟರ್ ಜಯಕೃಷ್ಣನ್ (ಭಾರತೀಯ ಜನತಾ ಯುವಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷ) ಅವರ ಮೇಲೆ ಕಮ್ಯುನಿಸ್ಟ್ ರಕ್ತಪಿಪಾಸುಗಳು ಭೀಕರವಾಗಿ ಮುಗಿಬಿದ್ದರು.ಏಳು ಜನ ಕಮ್ಯುನಿಸ್ಟ್ ಹಂತಕರು ಮಾರಕಾಸ್ತ್ರಗಳನ್ನು ಝಳಪಿಸುತ್ತ ನೇರಾ ತರಗತಿಯೊಳಗೆ ನಡೆದು ಬಂದರು.ಹತ್ತು-ಹನ್ನೆರಡು ವರ್ಷದ ಆ ಪುಟ್ಟ ಮಕ್ಕಳಿಗೆ ಕೂತ ಜಾಗದಿಂದ ಕದಲದಂತೆ ಬೆದರಿಸಿ,ಆ ಪುಟ್ಟ ಮಕ್ಕಳ ಕಣ್ಣೆದುರಿಗೆ ಜಯಕೃಷ್ಣನ್ ಮಾಸ್ಟರ್ ಅವರನ್ನು ಭೀಕರವಾಗಿ ಕೊಲ್ಲಲಾಯಿತು,ಅವರ ದೇಹದ ಮೇಲೆ ೪೮ ಇರಿತದ ಗಾಯಗಳಿದ್ದವು.ತಮ್ಮ ನೆಚ್ಚಿನ ಶಿಕ್ಷಕ ಕಣ್ಣ ಮುಂದೆ ಹೆಣವಾಗಿದ್ದು ನೋಡಿದ ಆ ಹತ್ತು-ಹನ್ನೆರಡು ವರ್ಷದೊಳಗಿನ ಮಕ್ಕಳು ಆಘಾತಕ್ಕೊಳಗಾದರು.ಹಲವು ಮಕ್ಕಳಿಗೆ ಕೌನ್ಸೆಲಿಂಗ್ ಮಾಡಬೇಕಾಯಿತು.ಹತ್ಯೆಯ ನಂತರ ಶಾಲಾ ಬೋರ್ಡಿನಲ್ಲಿ ಸಾಕ್ಷಿದಾರರಿಗೂ ಇದೇ ಗತಿ ಎಂದು ಬರೆದ ಕಮ್ಯುನಿಸ್ಟ್ ಹಂತಕರು ಕೇಕೆ ಹಾಕುತ್ತಾ ಹೊರಬಂದರು.ಅಷ್ಟಕ್ಕೂ ಜಯಕೃಷ್ಣನ್ ಮಾಡಿದ್ದ ತಪ್ಪೇನು ಗೊತ್ತೇ ಕಮ್ಯುನಿಸ್ಟರ ಐಡಿಯಾಲಜಿಯನ್ನು ಒಪ್ಪದೇ ಆರ್.ಎಸ್.ಎಸ್ ಐಡಿಯಾಲಜಿಯನ್ನು ಒಪ್ಪಿಕೊಂಡಿದ್ದು.ಎಂತಾ ಸಹಿಷ್ಣುತೆಯಲ್ಲವೇ ಕಮ್ಯುನಿಸ್ಟರದು?

ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡಾಗ,ಕನ್ನಯ್ಯಾನನ್ನು ಬಂಧಿಸಿದಾಗ ಅವರ ಮನೆಯನ್ನು,ತಂದೆ-ತಾಯಿಯನ್ನು ಸೆಕ್ಯುಲರ್ ಮೀಡಿಯಾಗಳು ತೋರಿಸಿದ್ದೂ ಅದಕ್ಕೆ ಹಿಮ್ಮೇಳವಾಗಿ ಕಾಕಗಳು ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದು ನಿಮಗೆ ನೆನಪಿರಬೇಕಲ್ಲವೇ? ಕಮ್ಯುನಿಸ್ಟರ ಹೆತ್ತವರಿಗಾದರೇ ಮಾತ್ರ ನೋವು ಉಳಿದವರ ತಂದೆ-ತಾಯಿಗಳಲ್ಲವೇ?

೨೦೧೬ರ ಫೆಬ್ರವರಿ ತಿಂಗಳಿನಲ್ಲಿ ಕಣ್ಣೂರು ಜಿಲ್ಲೆಯ ಮನೆಯೊಂದರ ಮೇಲೆ ರಾತ್ರೋ ರಾತ್ರಿ ಕಮುನಿಸ್ಟ್ ಹಂತಕರು ನುಗ್ಗಿದರು.ಅವರು ನುಗ್ಗಿದ್ದು ೨೭ ವರ್ಷದ ಆರ್.ಎಸ್.ಎಸ್ ಕಾರ್ಯಕರ್ತ ಸುಜಿತನ ಪ್ರಾಣಕ್ಕೆ ಆಜಾದಿ ಕೊಡಲು.ಸುಜಿತನ ವಯೋವೃದ್ಧ ತಂದೆ ತಾಯಿಗಳ ಎದುರೇ ಆತನ್ನು ಕೊಚ್ಚಿ ಹಾಕಿದರು,ತಡೆಯಲು ಬಂದ ಅಣ್ಣ,ತಂದೆ-ತಾಯಿಗೂ ಮಚ್ಛಿನಿಂದಲೇ ಹೊಡೆದರು.ಸುಜಿತ್ ಅಲ್ಲೇ ಪ್ರಾಣ ಬಿಟ್ಟ.ಉಳಿದವರನ್ನು ಆಸ್ಪತ್ರೆಗೆ ದಾಖಲಿಸಿದರು.ಯಾವ ಸೆಕ್ಯುಲರ್ ಮೀಡಿಯಾದವರು ಬಂದು ವಯಸ್ಸಿಗೆ ಬಂದ ಮಗನನ್ನು ಕಣ್ಣೆದುರೇ ಕಳೆದುಕೊಂಡ ವಯೋವೃದ್ದ ತಂದೆತಾಯಿಯನ್ನು ಮಾತನಾಡಿಸಲಿಲ್ಲ.ಈ ಘಟನೆಯಾಗಿ ಮತ್ತೆ ಒಂದು ತಿಂಗಳನಂತರ ಬಿಜು ಎಂಬ ಮತ್ತೊಬ್ಬ ಸಂಘ ಪರಿವಾರದ ಕಾರ್ಯಕರ್ತನನ್ನು ಆತನ ಆಟೋದಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಬಡಿದರು.ಅಂದ ಹಾಗೇ ಆ ಸಮಯದಲ್ಲಿ ಅವನ ಆಟೋದಲ್ಲಿ ಶಾಲೆಗೆ ಹೊರಟಿದ್ದ ಪುಟ್ಟ ಪುಟ್ಟ ಮಕ್ಕಳಿದ್ದರು.ಮಾವೋ/ಸ್ಟಾಲಿನ್ ಭೂತ ಹೊಕ್ಕಿಸಿಕೊಂಡ ಕಮ್ಯುನಿಸ್ಟ್ ಕಟುಗರಿಗೆ ಮಕ್ಕಳ ಅಳು ಕೇಳಿಸಲಿಲ್ಲ.

ದೇಶದಲ್ಲೆಡೆ ಒಮ್ಮೆಲೇ ಭೂಮಿ ಬಾಯ್ತೆರೆದಿದೆ ಎಂಬಂತೆ ‘ಅಸಹಿಷ್ಣುತೆ’ಯ ಬೊಬ್ಬೆ ಕೇಳಿ ಬಂದಾಗ ಕಾಮ್ರೇಡುಗಳು ಜೊತೆ ಸೇರಿ ಬೊಬ್ಬೆ ಹಾಕಿದ್ದು ನೆನಪಿದೆ ತಾನೇ? ಈ ಕಮ್ಯುನಿಸ್ಟರ ಸಹಿಷ್ಣುತೆ ಮಟ್ಟ ಎಂತದ್ದು ಗೊತ್ತೇ? ಅವರ ಹೆಸರು ಸದಾನಂದ ಮಾಸ್ಟರ್.ಕಣ್ಣೂರಿನ ಶಾಲೆಯೊಂದರ ಶಿಕ್ಷಕ.ಒಂದು ಕಾಲದ ಕಮ್ಯುನಿಸ್ಟ್ ಆ ನಂತರ ಆರ್.ಎಸ್.ಎಸ್ ಐಡಿಯಾಲಜಿಯನ್ನು ಒಪ್ಪಿಕೊಂಡವರು.ಸಂಘದ ಜಿಲ್ಲಾ ಮಟ್ಟದ ಜವಬ್ದಾರಿಯನ್ನೂ ಹೊತ್ತಿದ್ದರು. ಒಂದು ಕಾಲದ ಕಾಮ್ರೇಡು ಹೀಗೆ ಎದುರು ಗುಂಪಿಗೆ ಹೋಗಿದ್ದನ್ನು ಸಹಿಸದ ಕಮ್ಯುನಿಸ್ಟರು ಸದಾನಂದ ಮಾಸ್ಟರ್ ಅವರ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಿದರು.ಎಂತಹ ಸಹಿಷ್ಣುತೆಯಲ್ಲವೇ?

ತೀರಾ ಮೊನ್ನೆ ಮೊನ್ನೆ ಶಾಂತವಾಗಿ ನಡೆಯುತಿದ್ದ ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಕತ್ತಿ,ಮಚ್ಚುಗಳೊಂದಿಗೆ ನುಗ್ಗಿ ರಕ್ತಪಾತ ನಡೆಸಿದ್ದರು.ಆ ರಕ್ತ ಒಣಗುವ ಮುನ್ನವೇ,ಸಂಘದ ಕಾರ್ಯಕರ್ತರ ಪ್ರಾಣಕ್ಕೆ ಆಜಾದಿ ಕೊದಲು ಹೊರಟಿದ್ದ ಮೂವರು ಕಮ್ಯುನಿಸ್ಟ್ ಕಾಮ್ರೇಡುಗಳನ್ನು ಪೋಲಿಸರು ಮಾರಕಾಸ್ತ್ರಗಳ ಸಮೇತ ಬಂಧಿಸಿದ್ದಾರೆ.ಇದು ಕೇರಳ ಕಮ್ಯುನಿಸ್ಟರ ರಕ್ತ ಚರಿತ್ರೆಯ ಆಯ್ದ ಸ್ಯಾಂಪಲ್ಲುಗಳಷ್ಟೇ.ಪೂರ್ತಿ ಸಾಧನೆಗಳನ್ನು ಬರೆದರೆ ಪತ್ರಿಕೆಯ ಬಣ್ಣವೇ ಕೆಂಪಾದೀತೂ ನನ್ನ ಬರಹವೂ ಕ್ರೈಂ ಸ್ಟೋರಿಯಂತಾದೀತೂ.

ಕಮ್ಯುನಿಸ್ಟರ ಈ ರಕ್ತ ಚರಿತ್ರೆಗೇನು ಕಾರಣ? ಮತ್ತೇನಿಲ್ಲ ಬಿಜೆಪಿಯೊಂದಿಗಿನ ರಾಜಕೀಯ ಸಂಘರ್ಷವಷ್ಟೇ.ತಮ್ಮ ರಾಜಕೀಯ ನೆಲೆ ಕಳೆದುಕೊಳ್ಳುವುದನ್ನು ಕಮ್ಯುನಿಸ್ಟರು ಸುತಾರಾಂ ಬಯಸುವುದಿಲ್ಲ.ಹಾಗಾಗಿ ರಾಜಕೀಯ ಎದುರಾಳಿಗಳನ್ನು ಕೊಂದು ಬಿಸಾಡುವುದು ಇವರು ಕಂಡುಕೊಂಡಿರುವ ವಿಧಾನ.ಹೀಗೆ ತಿಂಗಳ ಹಿಂದೆ,ಸಂಘದ ಕಾರ್ಯಕರ್ತ ಮನೋಜ್ ಹತ್ಯೆಯ ಆರೋಪದಲ್ಲಿ ಕಮ್ಯುನಿಸ್ಟ್ ನಾಯಕ ಜಯರಾಜನ್ ಶರಣಾಗಿದ್ದಾರೆ.ಇದೇ ಜಯರಾಜನ್ ಮೇಲೆಯೂ ೧೯೯೯ರಲ್ಲಿ ಹತ್ಯೆಯ ಯತ್ನವಾಗಿತ್ತು ಆಗ ಆರೋಪಿಗಳ ಪಟ್ಟಿಯಲ್ಲಿ ಮನೋಜ್ ಇದ್ದರು.ಕಮ್ಯುನಿಸ್ಟರ ರಕ್ತ ಚರಿತ್ರೆ ಉತ್ತರವಾಗಿ ಕೇಸರಿಗೂ ಕಣ್ಣೂರಿನಲ್ಲಿ ರಕ್ತ ಮೆತ್ತಿಕೊಂಡಿದೆ.ಇದೊಂದು ರಾಜಕೀಯ ಅಸ್ತಿತ್ವದ ಜಿದ್ದಾಜಿದ್ದಿ.ಶುರು ಮಾಡಿದವರು ಕಮ್ಯುನಿಸ್ಟರೇ.

ಕಮ್ಯುನಿಸ್ಟರ ರಕ್ತಚರಿತ್ರೆಯ ಇತಿಹಾಸ ಅದರ ಹುಟ್ಟಿನಿಂದಲೇ ಶುರುವಾಗಿದೆ.ಮಾತಿಗೊಮ್ಮೆ ಹಿಟ್ಲರನಿಗೆ ಬಯ್ಯುವ ಕಮ್ಯುನಿಸ್ಟರು ಅಪ್ಪಿ ತಪ್ಪಿಯೂ ಸ್ಟಾಲಿನ್,ಮಾವೋ ನಡೆಸಿದ ಹತ್ಯಾಕಾಂಡಗಲ ಬಗ್ಗೆಯಾಗಲಿ,ಚೀನಾದ ತೀಯಾನ್ಮನ್ ಸ್ಕ್ವೇರಿನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿದ್ದ ವಿದ್ಯಾರ್ಥಿಗಳ ರಕ್ತ ಹರಿಸಿದ ಬಗ್ಗೆಯಾಗಲಿ ಬಾಯಿಬಿಡುವುದಿಲ್ಲ.ಹರಿಸಿದ ರಕ್ತದ ಬಗ್ಗೆ ಅವರಿಗೆ ಪಶ್ಚಾತ್ತಾಪವಾಗಲಿ,ಬೇಸರವಾಗಲಿ ಆಗುವುದಿಲ್ಲ.

ರಾಜಕೀಯ ಎದುರಾಳಿಗಳನ್ನು ಮುಗಿಸಲು ಇವರು ನಡೆಸುವ ಸಂಚು ತಿಳಿಯಲು ಒಂದು ಕಾಲದ ಕಮ್ಯುನಿಸ್ಟ್ ಮತ್ತು ಈಗ ಕಾಂಗ್ರೆಸ್ಸಿನಲ್ಲಿರುವ ಅಬ್ದುಲ್ಲಾ ಕುಟ್ಟಿಯವರು ವರ್ಷಗಳ ಹಿಂದೆ ಬರೆದ ಲೇಖನವೊಂದನ್ನು ನೆನಪಿಸಿಕೊಳ್ಳಬೇಕು. ೨೦೦೮ರ ಮಾರ್ಚ್ ತಿಂಗಳಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ,ಬಿಜೆಪಿಯವರು ಸಂಸತ್ತಿನಲ್ಲಿ ಕೇರಳದ ಕಮ್ಯುನಿಸ್ಟ್ ರಕ್ತ ಚರಿತ್ರೆಯ ಬಗ್ಗೆ ದನಿಯೆತ್ತುತ್ತಿರುವ ವಿಷಯ ಚರ್ಚೆಗೆ ಬಂದಿತು.ಆಗ,ಸಿಪಿಎಂನ ರಾಜ್ಯ ಕಾರ್ಯದರ್ಶಿಯಾಗಿದ್ದ ಪಿನರಾಯಿ ವಿಜಯನ್ ಇತರೆ ಕಾಮ್ರೇಡುಗಳನ್ನು ಉದ್ದೇಶಿಸಿ,ನಾವು “ಬಂಗಾಳ ಮಾಡೆಲ್” ಅನ್ನು ಅನುಸರಿಸಿದರೆ ಈ ಸಮಸ್ಯೆಯಿರುವುದಿಲ್ಲ ಎಂದರಂತೆ.

ಬಂಗಾಳ ಮಾಡೆಲ್ನಲ್ಲಿ ರಕ್ತಪಾತವಿಲ್ಲ.ಬಂಗಾಳದ ಕಾಮ್ರೇಡುಗಳು ಪರಮ ದಯಾಳುಗಳು.ರಾಜಕೀಯ ಎದುರಾಳಿಗಳನ್ನು ಅನಾಮತ್ತಾಗಿ ಎತ್ತಾಕಿಕೊಂಡು ಬಂದು ಆಳವಾದ ಗುಂಡಿ ತೆಗೆದು ಜೀವಂತ ಊತು ಹಾಕುವುದೇ ಬಂಗಾಳದ ಮಾಡೆಲ್.ಹೊರ ಜಗತ್ತಿಗೆ ವ್ಯಕ್ತಿ ಮಿಸ್ಸಿಂಗ್ ಕೇಸ್.ಅಸಲಿಗೆ ಕಾಮ್ರೇಡುಗಳು ಆತನಿಗೆ ಆಜಾದಿ ಕರುಣಿಸಿರುತ್ತಾರೆ.ಬಂಗಾಳದ ಕಾಮ್ರೇಡ್ ಅನಿಲ್ ಬಸು ಅವರೇ ಖುದ್ದು ಮಾಡೆಲ್ ಬಗ್ಗೆ ಮಾಹಿತಿ ನೀಡಿದರು ಅಂತ ಬರೆಯುತ್ತಾರೆ ಅಬ್ದುಲ್.ಈಗ ದಾದ್ರಿ ಹತ್ಯೆ,ಕಲ್ಬುರ್ಗಿ ಹತ್ಯೆ ಬಗ್ಗೆ ಮಾತನಾಡುತ್ತಿರುವುದು ಇದೇ ಕಮ್ಯುನಿಸ್ಟರು ಎಂಬುದನ್ನು ಮರೆಯಬೇಡಿ!

ಇವರ ಹಿಂಸಾಚಾರದ ವಿಷಯ ಪಕ್ಕಕ್ಕಿಟ್ಟು,ಸದ್ಯಕ್ಕೆ ನಡೆಯುತ್ತಿರುವ ದೇಶ ಭಕ್ತಿಯ ಕಡೆಗೆ ಹೊರಳಿ ನೋಡಿದರೇ,ಕಮ್ಯುನಿಸ್ಟರಿಗೆ ದೇಶಕ್ಕಿಂತ ತಮ್ಮ ಐಡಿಯಾಲಜಿಯೇ ಮುಖ್ಯವೆಂಬುದು ೧೯೬೨ರ ಚೀನಾ ಯುದ್ದದ ಸಮಯದಲ್ಲಿಯೇ ಬಹಿರಂಗವಾಗಿದೆ. ಅದಕ್ಕೊಂದು ಉದಾಹರಣೆ; ಕಮ್ಯುನಿಸ್ಟರ ದೇಶ ವಿರೋಧಿ ಧೋರಣೆಯಿಂದಾಗಿ ನಾಯಕರನ್ನೆಲ್ಲ ಬಂಧಿಸಿ ಜೈಲಿಗಟ್ಟಲಾಗಿತ್ತು. ಜೈಲಿನಲ್ಲಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರು,ಭಾರತೀಯ ಸೈನಿಕರ ರಕ್ತ ನಿಧಿಗೆ ಕಮ್ಯುನಿಸ್ಟರು ರಕ್ತದಾನ ಮಾಡುವ ಪ್ರಸ್ತಾಪವೊಂದನ್ನು ಜೈಲಿನಲ್ಲೇ ನಡೆದ ಕಮ್ಯುನಿಸ್ಟರ ಸಭೆಯ ಮುಂದಿಡುತ್ತಾರೆ. ಪ್ರಸ್ತಾವನೆಗೆ ಭಾರಿ ವಿರೋಧ ವ್ಯಕ್ತವಾಗಿ ಕಡೆಗದು ಪತ್ರಿಕೆಗಳಲ್ಲೆಲ್ಲಾ ಸುದ್ದಿಯಾಗಿ,ಸೀನಿಯರ್ ಕಾಮ್ರೇಡ್ ಜ್ಯೋತಿ ಬಸು ಅವರ ಕಿವಿಗೂ ತಲುಪಿ ಕಡೆಗೆ ಅಚ್ಯುತಾನಂದನ್ ಅವರನ್ನು ಸೆಂಟ್ರಲ್ ಕಮಿಟಿಯಿಂದ ಜಿಲ್ಲಾ ಮಟ್ಟಕ್ಕಿಳಿಸುವ ತನಕ ಹೋಗುತದೆ.ಇತ್ತೀಚೆಗೆ ಈ ಘಟನೆಯ ಬಗ್ಗೆ ಮಾತನಾಡಿದ್ದ ಅಚ್ಯುತಾನಂದನ್ ಅವರು ನಾನು ಭಾರತೀಯ ಸೈನಿಕರಿಗೆ ಪಕ್ಷದ ಸೂಚನೆಯಂತೆ ರಕ್ತವನ್ನು ನೀಡಿರಲಿಲ್ಲ. ಆದರೂ ಕೆಲವರ ಸಂಚಿನಿಂದಾಗಿ ಪಕ್ಷವಿರೋಧಿ ಆರೋಪಕ್ಕೊಳಗಾದೆ ಅಂದಿದ್ದರು.ಕಮ್ಯುನಿಸ್ಟರ ವರಸೆಗಳು ಹೀಗಿರುತ್ತವೆ.ಅವರಿಗೆ ತಮ್ಮ ಐಡಿಯಾಲಜಿಯೇ ಮುಖ್ಯ ಹೊರತು ಬದುಕು ಕಟ್ಟಿಕೊಟ್ಟಿರುವ ದೇಶವಲ್ಲ,ದೇಶದ ಜನರೂ ಅಲ್ಲ.

ಇಂತಹ ಇತಿಹಾಸವುಳ್ಳ ಕಮ್ಯುನಿಸ್ಟರು ಈಗ ದೇಶದಲ್ಲಿ ಅಸಹಿಷ್ಣುತೆಯಿದೆ ಅಂತಲೂ,ವಿದ್ಯಾರ್ಥಿಗಳ ಮೇಲೆ ಕೇಂದ್ರ ದೌರ್ಜನ್ಯ ನಡೆಸುತ್ತಿದೆ ಅಂತಲೂ ಬೊಬ್ಬೆ ಹೊಡೆಯುವುದು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಕೇಳಿಸುವುದಿಲ್ಲವೇ? ಕನ್ನಡಿಗರ ಪುಣ್ಯ.ಇವರಿಗೆ ನಮ್ಮ ರಾಜ್ಯದಲ್ಲಿ ರಾಜಕೀಯ ಅಸ್ತಿತ್ವವಿಲ್ಲ.ಆದರೆ ಕೇರಳ,ಬಂಗಾಳದ ಶಾಪ ವಿಮೋಚನೆ ಯಾವಾಗ ಆಗುತ್ತದೋ ಗೊತ್ತಿಲ್ಲ.

2 ಟಿಪ್ಪಣಿಗಳು Post a comment
 1. Goutham
  ಏಪ್ರಿಲ್ 9 2016

  ರಾಕೇಶ್ ಶೆಟ್ಟರೆ, ಉಯಿಲೆಬ್ಬಿಸಿದ್ದಾರೆ ಎಂದುಬಿಟ್ಟಿರಿ. ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ ಎನ್ನುವುದೇನೋ ಸರಿ. ಆದರೆ ಇದಕ್ಕೆ ಕಾರಣವೇನು? CSLC ಎಂಬ ಸಂಶೋಧನಾ ಕೇಂದ್ರ ಯಾವ ರೀತಿ ಕಾಯ೯ ನಿವ೯ಹಿಸುತ್ತಿತ್ತು ಎಂಬುದು ತಮಗೆ ತಿಳಿದಿರುವುದೇ ಅಲ್ಲವೇ ? ಕೇರಳದಲ್ಲಿ ದೌಜ೯ನ್ಯ ನಡೆದಿದ್ದರೆ ಅಪರಾಧಿಗಳಿಗೆ ಶಿಕ್ಷೆಯಾಗಲಿ.

  ಉತ್ತರ
  • ರಾಕೇಶ್ ಶೆಟ್ಟಿ
   ಏಪ್ರಿಲ್ 11 2016

   ಯಾವ ರೀತಿ ಕಾರ್ಯ ನಿರ್ವಹಿಸುತಿತ್ತು ಹೇಳಿ?

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments