ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 8, 2016

1

ಯುಗಾದಿಯ ತಗಾದೆ

‍ನಿಲುಮೆ ಮೂಲಕ

– ನಾಗೇಶ್ ಮೈಸೂರು

ಯುಗಾದಿ ಹಬ್ಬದ ಶುಭಾಶಯಗಳುಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ ಕೂಗಾಡಿದರು ಪೂಜೆಗೆ ದೇವರ ಮೇಲೆಸೆದ ಹೂವಂತಿರುವುದನ್ನು ಮಾತ್ರ ಕಂಡಿದ್ದ ನನಗೆ, ಅವನ ಈ ಅವತಾರ ಸ್ವಲ್ಪ ಹೊಸದು. ಅದರಲ್ಲು ಮನೆಯಲ್ಲಿ ನರಸಿಂಹಿಣಿಯವತಾರದ ‘ಫುಲ್ ಟೈಮ್ ಕಾಂಟ್ರಾಕ್ಟ್’ ಅನ್ನು ಅವನ ಶ್ರೀಮತಿಯೆ ಶ್ರದ್ಧಾಪೂರ್ವಕವಾಗಿ (ಬಲಾತ್ಕಾರವಾಗಿಯೆ), ವಹಿಸಿಕೊಂಡ ಮೇಲೆ ಗುಬ್ಬಣ್ಣ ಇನ್ನೂ ತೀರಾ ಸಾಧುವಾಗಿಬಿಟ್ಟಿದ್ದ. ಅದೇ ಹಿನ್ನಲೆಯಲ್ಲೆ,

‘ ಗುಬ್ಬಣ್ಣ… ಯಾಕೊ ಮುಖವೆಲ್ಲ ಕೆಂಪಗೆ ಚೆಂಡು ಮಲ್ಲಿಗೆಯಾಗಿಬಿಟ್ಟಿದೆ ? ಜ್ವರ ಗಿರ ಬಂದುಬಿಟ್ಟಿದಿಯಾ ಹೇಗೆ ? ಹುಷಾರಾಗಿದ್ದೀಯಾ ತಾನೆ ?’ ಎಂದೆ ಒಂದೆ ಉಸಿರಲ್ಲಿ.

‘ ಈಗ ಅದೊಂದು ಬರೋದಷ್ಟೆ ಬಾಕಿ ಸಾರ್.. ಬರೋದಕ್ಕೇನು, ಈಗ ದಂಡಿಯಾಗಿ ಸೇರ್ಕೊಂಡಿವೆಯಲ್ಲಾ ? ಸ್ವೈನ್ ಪ್ಲೂ, ಮರ್ಸ್, ಸಾರ್ಸ್, ಎಬೋಲ ಅಂತ ಅಂತಃಪುರದಲ್ಲಿ ಹೆಜ್ಜೆಜ್ಜೆಗು ಸಿಕ್ಕೊ ಊಳಿಗದಾಳುಗಳ ತರಹ…’

ಅಂತಃಪುರದ ಊಳಿಗದಾಳುಗಳಿಗು ಅವನು ಹೆಸರಿಸಿದ ಜ್ವರಗಳ ಪಟ್ಟಿಗೂ ಯಾವ ಸಂಬಂಧವೆಂದು ನನಗರ್ಥವಾಗಲಿಲ್ಲ. ಆದರೆ ಅದೆ ಗುಬ್ಬಣ್ಣನ ಸ್ಪೆಷಾಲಿಟಿ. ಲಾಜಿಕ್ಕಿನ ಹಂಗಿಲ್ಲದೆ ಸರಿಯಾದ ತರ್ಕದ ಬೆಂಬಲವಿಲ್ಲದೆ ಯಾವುದಕ್ಕೆ, ಏನನ್ನಾದರೂ ಸರಿ ಜೋಡಿಸಿಬಿಡುತ್ತಾನೆ. ಅದಕ್ಕೆ ಹೊಂದಾಣಿಕೆಯಾಗುವ ಅರ್ಥ ಹುಡುಕಿ ಜೋಡಿಸಿಕೊಳ್ಳುವುದು ಕೇಳುವವರ ಹಣೆಬರಹ.

‘ ಅಯ್ಯೊ.. ಶಿವ ಶಿವಾ ಅಂತ ಶಿವರಾತ್ರಿ ಕಳೆದು, ಇದೀಗ ತಾನೆ ಯುಗಾದಿ ನಗುನಗುತ್ತಾ ಕಾಲಿಡೊ ಹೊತ್ತಲ್ಲಿ ಏನೊ ಇದು ನಿಂದು ‘ಜಗಜ್ವರ’ ಪುರಾಣ ? ನಾಳೆ ಹಬ್ಬಾ ಅಂತಾದ್ರೂ ಸ್ವಲ್ಪ ಒಳ್ಳೆ ಮಾತಾಡೊ ಗುಬ್ಬಣ್ಣ..’

‘ ಅಯ್ಯೊ ಬಿಡಿ ಸಾರ್.. ಎಳ್ಳು ತಿಂದು ಒಳ್ಳೆ ಮಾತಾಡೊ ಸಂಕ್ರಾಂತಿ ಕಳೆದು ತಿಂಗಳುಗಳೆ ಆಗೋಯ್ತು… ಊರು ಬಿಟ್ಟು ಊರು ಅಂತ ಯಾವುದೋ ಪರದೇಶಕ್ಕೆ ಬಂದು ಸೇರಿಕೊಂಡಿದ್ರು ಬಿಡದೆ ಅಷ್ಟಿಷ್ಟು ನಮ್ ಹಬ್ಬಗಳನ್ನಾದ್ರು ಆಚರ್ಸೋಣಾ ಅಂದ್ರೆ ಅದಕ್ಕು ಬಿಡಲ್ಲ ಎಡಬಿಡಂಗಿಗಳು.. ಕೋಪಕ್ಕೆ ಉರಿದು ಬೀಳೊ ಹಾಗಾಗ್ತಾ ಇರೋವಾಗ, ಇನ್ನು ಊರು ಕೇರಿಯ ಮಾರಿ ಜ್ವರಗಳು ಬರದೆ ಇನ್ನೇನಾಗುತ್ತೆ ಮತ್ತೆ..’ ಎಂದ ಮತ್ತೆ ಭುಸುಗುಟ್ಟುತ್ತಾ. ನಾನು ಕೇಳಿದ ಪ್ರಶ್ನೆಯಿಂದ ಅವನ ಮುನಿಸಿನ ಕಾರಣ ಮತ್ತೆ ನೆನಪಾಗಿಹೋಯ್ತೊ ಏನೊ ? ಮುಖವೆಲ್ಲ ಮತ್ತೆ ಬಲೂನಿನಂತೆ ಉಬ್ಬಿ ಕೆಂಪಾಗುವುದನ್ನು ಕಂಡು ಮೊದಲು ಒಳಗಿನಿಂದ ಒಂದು ಚೊಂಬು (ಅರ್ಥಾತ್ ಬಾಟಲಿ) ತಣ್ಣೀರು ತಂದು ಕೊಟ್ಟೆ – ಫ್ರಿಡ್ಜಿನ ನೀರು ಕುಡಿದಾದರು ಸ್ವಲ್ಪ ಶಾಂತವಾಗಲೆಂದು.

ಈ ದೇಶದಲ್ಲಿ ಯುಗಾದಿಯನ್ನು ಯಾರು ಕೇಳುತ್ತಾರೆ ? ಇರುವ ನಮ್ಮಂತಹ ಅಷ್ಟಿಷ್ಟು ಜನ ನಮ್ಮ ಮನೆಗಳಲ್ಲಿ ಆದಷ್ಟು ಮಟ್ಟಿಗೆ ಗುಡಿಸಿ, ಸಾರಿಸಿ, ಪೂಜೆ ಗೀಜೆ ಮಾಡಿ, ಅಷ್ಟಿಷ್ಟು ‘ಹಬ್ಬದೌತಣ’ ಮಾಡುವ ನೆಪದಲ್ಲಿ ಒಂದೆರಡು ‘ಎಕ್ಸ್ ಟ್ರಾ’ ಐಟಮ್ಮುಗಳನ್ನು ಮೆನುಗೆ ಸೇರಿಸಿಬಿಟ್ಟರೆ ಆಯ್ತು. ಇನ್ನು ಕೆಲವು ಕಿಲಾಡಿಗಳು ಅಡಿಗೆಯ ಪ್ರೋಗ್ರಾಮಿಗೆ ರಜೆ ಕೊಟ್ಟು ರೆಸ್ಟೋರೆಂಟಿನ ಹಬ್ಬದೂಟದ ಮೊರೆ ಹೋಗುವುದು ಉಂಟು – ಅದರಲ್ಲೂ ರಜೆಯಿರದ ದಿನಗಳಲ್ಲಿ. ಆದರೆ ಯಾಕೊ ಯುಗಾದಿಗೆ ಮಾತ್ರ ಹಾಗೆ ಮಾಡಲು ಮನಸು ಬರುವುದಿಲ್ಲ – ಹೇಳಿ ಕೇಳಿ ನಮ್ಮದೆ ಹೊಸ ವರ್ಷ.. ನಾವೆ ಆಚರಿಸದಿದ್ದರೆ ಮತ್ತಾರು ಆಚರಿಸಬೇಕು ? ಆ ಲಾಜಿಕ್ಕಲ್ಲೆ ಗುಬ್ಬಣ್ಣ ವರ್ಷ ವರ್ಷ ಯುಗಾದಿಯನ್ನು ಹೇಗಾದರೂ ಆಚರಿಸದೆ ಬಿಡುವುದಿಲ್ಲ – ರಜೆ ಹಾಕಿಯಾದರೂ ಸರಿ. ಆದರೆ ಈ ಬಾರಿಯ ಯುಗಾದಿ ರಜೆ ದಿನವೆ ಬಂದಿದೆ.. ಮತ್ತೇಕೆ ಇವನಿಗೆ ಟೆಂಕ್ಷನ್ ಎಂದು ಅರ್ಥವಾಗಲಿಲ್ಲ.

‘ ಅಲ್ಲವೊ ಗುಬ್ಬಣ್ಣಾ… ನಾಳೆ ಹೇಗೂ ರಜೆಯೆ ಇದೆಯಲ್ಲ ? ಆರಾಮವಾಗಿ ಹಬ್ಬ ಆಚರಿಸದೆ ಯಾಕೊ ಧುಮುಗುಟ್ಟುತ್ತಿದ್ದೀಯಾ ?’ ಎಂದೆ.

‘ ಹೌದು ಸಾರ್.. ಅದಕ್ಕೆ ತಾನೆ ಇಲ್ಲಿಗೆ ಬಂದಿದ್ದು ? ಮನೆಯಲ್ಲಿ ‘ನಮ್ಮೆಜಮಾನ್ತಿ’ ಬೇರೆ, ಈ ಸಾರಿ ಹಬ್ಬಕ್ಕೆ ಹೇಗಾದ್ರೂ ಸರಿ ಮಾವಿನ ಸೊಪ್ಪಿನ ಜತೆ ಬೇವಿನ ಸೊಪ್ಪು, ಬೇವಿನ ಹೂವು ತಂದೆ ತರಬೇಕು ಇಲ್ಲಾಂದ್ರೆ ಮನೇಗೆ ಸೇರ್ಸೋಲ್ಲ ಅಂತ ಅಲ್ಟಿಮೇಟಂ ಕೊಟ್ಬಿಟ್ಟಿದಾರೆ.. ಈ ದೇಶದಲ್ಲಿ ನಾನು ಮಾವು ಬೇವು ಅಂತ ಎಲ್ಲಿಗೆ ಹುಡುಕ್ಕೊಂಡು ಹೋಗಲಿ ಸಾರ್ ? ಮಾವಿಗೇನೊ ಅಲ್ಲಿ ಇಲ್ಲಿ ಹೊಂಚು ಹಾಕಿ ಏನಾದ್ರೂ ಮಾಡಬಹುದು, ಬೇವು ಬೇವಿನ ಹೂ ಎಲ್ಲಿ ಹುಡುಕೋದು ಸಾರ್..? ಅದಕ್ಕೆ ಹುಚ್ಚು ನಾಯಿ ತರ ಮಾರ್ಕೆಟ್ಟಿಂದ ಮಾರ್ಕೆಟ್ಟಿಗೆ ಸುತ್ತುತ್ತಾ ಇದೀನಿ ‘ಬೇವಿನೆಲೆ, ಹೂವಿದೆಯಾ’ ಅಂತ..ಭಿಕ್ಷೆ ಬೇಡ್ಕೊಂಡು… ‘

ಸಾಧಾರಣ ಮನೆಯಾಕೆ ತಮ್ಮ ಪತಿದೇವರನ್ನು ಹೆಸರು ಹೇಳದೆ ‘ಯಜಮಾನ್ರು’ ಎಂದು ಸಂಭೋಧಿಸುವುದು ವಾಡಿಕೆ. ಅದನ್ನೆ ತನ್ನ ಜೀವನದಲ್ಲಿ ನಿಷ್ಪಕ್ಷಪಾತವಾಗಿ ಅಳವಡಿಸಿಕೊಂಡು ಬಿಟ್ಟಿದ್ದಾನೆ ಮಹಾ ಸತಿವ್ರತ ಗುಬ್ಬಣ್ಣ. ಅಪ್ಪಿ ತಪ್ಪಿ ಕನಸಿನಲ್ಲೂ ಕೂಡ ಹೆಸರು ಹಿಡಿದು ಕರೆಯದೆ ‘ನಮ್ಮೆಜಮಾನ್ತಿ’ ಅನ್ನುವುದನ್ನೆ ರೂಢಿಸಿಕೊಂಡುಬಿಟ್ಟಿದ್ದಾನೆ. ನನಗಂತು ಅವನಿಗೆ ಅವನ ಹೆಂಡತಿಯ ನಿಜ ನಾಮಧೇಯವೂ ಮರೆತು ಹೋಗಿದೆಯೊ ಏನೊ ಎಂದೆ ಗುಮಾನಿ !

‘ ಊರೆಲ್ಲಾ ಯಾಕೊ ಮಾರ್ಕೆಟ್ ಸುತ್ತೋಕೆ ಹೋದೆ ? ಇಲ್ಲೆ ಲಿಟಲ್ ಇಂಡಿಯಾಗೆ ಬಂದು ನೋಡೋದಲ್ವಾ ? ಯಾವುದಾದರು ಹೂವಿನ ಅಂಗಡಿಲಿ ಸಿಕ್ತಿತ್ತೇನೊ ?’

‘ ನಾನು ಅದೇ ಲಾಜಿಕ್ಕಲ್ಲೆ ಮನೆ ಹತ್ರ ಇರೊ ವೆಟ್ ಮಾರ್ಕೆಟ್ಟು, ಹೂವಿನಂಗಡಿಗಳಲ್ಲಿ ಒಂದು ಛಾನ್ಸ್ ನೋಡೋಣ ಅನ್ಕೊಂಡು ಹೊರಟು, ಕೊನೆಗೆ ಗಲ್ಲಿ ಗಲ್ಲಿ ಸುತ್ತಿ ಸುಸ್ತಾದ ಬೀದಿ ನಾಯಿ ತರ ವಿಧಿಯಿಲ್ದೆ ನಿಮ್ ಏರಿಯಾ ಲಿಟಲ್ ಇಂಡಿಯಾಗೆ ಬಂದೆ ಸಾರ್..’

‘ಅಲ್ಲಿಗೆ ಮತ್ತಿನ್ನೇನು.. ? ಬೀದಿ ಕಂತ್ರಿ ನಾಯಿ ಅವತಾರಕ್ಕೆ ಜೈ ಅಂದುಬಿಟ್ಟು, ಬಫೆಲೊ ರೋಡಲ್ಲಿ ‘ಬಫೆಲೊ’ ಹಾಗೆ ನುಗ್ಗೊದಲ್ವ – ‘ಏ ಬುಲ್ ಇಂದ ಚೈನಾ ಟೌನ್’ ಅಂದ ಹಾಗೆ?’

ಗಾತ್ರಾಕಾರದಲ್ಲಿ ಯಾವ ಬುಲ್ಲಿಗು ಕಡಿಮೆಯಿಲ್ಲದ ಅಜಾನುಬಾಹು ಗುಬ್ಬಣ್ಣ.. ಅದಕ್ಕೆ ಏನೊ ಹೆಂಡತಿ ಹೇಳಿದ್ದಕ್ಕೆಲ್ಲ ಕೋಲೆ ಬಸವನ ಹಾಗೆ ತಲೆಯಾಡಿಸಿ ತಾಪತ್ರಯಕ್ಕೆ ಸಿಕ್ಕಿಕೊಳ್ಳುತ್ತಾನೆ. ನಾನು ಬೀದಿ ಕಂತ್ರಿ ನಾಯಿ, ಚೈನಾ ಬುಲ್ ಇತ್ಯಾದಿ ಏನೇ ಅಂದರೂ ಮುನಿಸಿಕೊಳ್ಳದೆ ನಿಭಾಯಿಸುವ ಪಕ್ಕಾ ಕನ್ಸಲ್ಟೆಂಟು… ಅವನ ಜಿಗುಟುತನವೇನಿದ್ದರು ಬರಿ ಸರಕು ಖರೀದಿ ವಿಚಾರದಲ್ಲಿ ಮಾತ್ರ. ಅದರಲ್ಲಿ ಮಾತ್ರ ಪಕ್ಕಾ ಕಾಸ್ಟ್ ಅಕೌಂಟೆಂಟಿನ ಹಾಗೆ ಕೆಲಸ ಮಾಡುವ ಗುಬ್ಬಣ್ಣ, ಚೌಕಾಸಿ ಮಾಡದೆ ಮಾಲು ಕೊಂಡವನೆ ಅಲ್ಲ. ಫಿಕ್ಸೆಡ್ ಪ್ರೈಸಿನ ಶಾಪಿಂಗ್ ಮಾಲುಗಳಿಗೆ ಹೋದರು ಬರಿ ಡಿಸ್ಕೌಂಟ್ ಇದ್ದ ಸರಕು ಮುಟ್ಟುವನೆ ವಿನಃ ಬೇರೆಯದ್ದನ್ನಲ್ಲ – ‘ಅವರನ್ನು ನೋಡಿಯಾದರೂ ಸ್ವಲ್ಪ ವ್ಯವಹಾರ ಮಾಡೊದು ಕಲ್ತುಕೊಳ್ಳಿ..’ ಎಂದು ನನ್ನ ಶ್ರೀಮತಿಯೆ ಮೂತಿ ತಿವಿಯುವಷ್ಟು… ನನ್ನ ವ್ಯಾಪಾರದಲ್ಲಿ ಚೌಕಾಸಿಯೆಲ್ಲಿ ಬಂತು ? ನನ್ನ ಮುಖ, ಮಾತು ನೋಡಿ ಒಂದಕ್ಕೆರಡು ಬೆಲೆ ಹಾಕಿ ಟೋಪಿ ಹಾಕಿ ಕಳಿಸದಿದ್ದರೆ ಅದೆ ಪುಣ್ಯ !

‘ ಅದೆ ಮಾಡಿದೆ ಸಾರ್… ಮಾವಿನೆಲೆಯೇನೊ ನಾಕಾರು ಕಡೆ ಇತ್ತು… ಬಫೆಲೊ ಬೀದಿಯನ್ನೆಲ್ಲಾ ಜಾಲಾಡಿ ಹುಡುಕಿದ ಮೇಲೆ ಕೊನೆಗೆ ಒಂದೆ ಒಂದು ಅಂಗಡಿಯಲ್ಲಿ ಮಾತ್ರ ಬೇವಿನ ಸೊಪ್ಪಿರದಿದ್ದರು ಬೇವಿನ ಹೂವು ಇಟ್ಟಿತ್ತು.. ಅದೂ ಕೊನೆಯ ಒಂದೆ ಒಂದು ಪ್ಯಾಕೆಟ್ಟು ಮಿಕ್ಕಿತ್ತು. ಅಂತೂ ಹೇಗೊ ಸಿಕ್ಕಿತಲ್ಲ ಎಂದು ಹತ್ತಿರ ಓಡುವುದಕ್ಕೆ ಸರಿಯಾಗಿ ಅತ್ತ ಕಡೆಯಿಂದ ಅದೆ ಪ್ಯಾಕೆಟ್ಟಿಗೆ ಮತ್ತೊಂದು ‘ಮನವಾಳ್ಳು’ ಗಿರಾಕಿ ಬಂದು ಕೈ ಹಾಕಿಬಿಡುವುದೆ !?’

ತೆಲುಗರಿಗು, ಕನ್ನಡಿಗರಿಗು ಯುಗಾದಿ ಒಂದೆ ಆದ ಕಾರಣ ಆಚರಣೆಯೂ ಒಂದೆ ತಾನೆ? ಆದರೂ ಗುಬ್ಬಣ್ಣನ ಕಥೆ ಕೊಂಚ ಕುತೂಹಲಕಾರಿ ಘಟ್ಟ ಮುಟ್ಟಿದೆಯೆನಿಸಿ, ‘ ಸರಿ..ಸುಮ್ಮನೆ ಒಂದ್ಸಲ ಮೈಯೆಲ್ಲಾ ಅಲ್ಲಾಡಿಸಿ, ಕೆಂಗಣ್ಣು ಬಿಟ್ಟು ಗುಟುರು ಹಾಕಿ ನೇರ ಪ್ಯಾಕೆಟ್ಟು ಎತ್ತಿಕೊಂಡು ದುಡ್ಡು ಕೊಟ್ಟು ಬರೋದಲ್ವಾ ?’ ಎಂದೆ.

ಅದನ್ನು ಕೇಳುತ್ತಿದ್ದಂತೆ ಗುಬ್ಬಣ್ಣ, ಮುಖ ಕಿವುಚಿಕೊಂಡ ದಯನೀಯ ಪೋಜಿನಲ್ಲಿ, ‘ ನಾನು ಅದೆ ಮಾಡೋಣವೆಂದು ಹೋಗಿ ಕೈ ಹಾಕುವ ಹೊತ್ತಿಗೆ ಸರಿಯಾಗಿ, ಆ ಆಸಾಮಿಯೂ ಕೈ ಹಾಕಿಬಿಡುವುದೆ ಸಾರ್..? ಹೆಚ್ಚುಕಮ್ಮಿ ನನ್ನ ಹಾಗೆಯೆ ಇದ್ದ ಆಸಾಮಿ..’ ಅಂದ,

‘ಆಳು ನೋಡಿದರೆ ಆಕಾರ, ಬಾಳು ನೋಡಿದರೆ ಭಂಡ ಬಾಳು’ ಅನ್ನುವುದರ ಅಪರವತಾರವಾದ ಗುಬ್ಬಣ್ಣ ನೋಡಲಷ್ಟೆ ‘ಗೂಳಿ’ಯಾಕಾರವಾದರು ಮಹಾ ಪುಕ್ಕಲ. ಎದುರು ಪಾರ್ಟಿಯೂ ಇವನ ತರದ ಆಳೆಂದರೆ ಗುಟುರು ಹಾಕುವುದೆಲ್ಲಿಂದ ಬಂತು ? ಪ್ಯಾಕೆಟ್ಟಿಗೆ ಕೈ ಹಾಕಿರುವುದೆ ಹೆಚ್ಚು ಎನ್ನಬೇಕು…

‘ ಕೈ ಹಾಕಿದ ಮೇಲೆ ಕಿತ್ತುಕೊಂಡು ಬರದೆ ಹೀಗ್ಯಾಕೆ ಮಂಕು ಮೂತಿ ಹೊತ್ತು ಬಂದೆ ಗುಬ್ಬಣ್ಣಾ? ‘ ಎಂದೆ

‘ ಅಯ್ಯೊ..ನಾವಿಬ್ಬರೂ ಕೈ ಹಾಕಿದ್ದು ನೋಡುತ್ತಿದ್ದ ಹಾಗೆ ಆ ಅಂಗಡಿಯವನು ಚಕ್ಕನೆ ನಡುವೆ ಕೈ ಹಾಕಿ ತೆಗೆದಿಟ್ಟುಕೊಂಡುಬಿಟ್ಟ ಸಾರ್, ನಮ್ಮಿಬ್ಬರ ನಡುವೆ ಹೂವೆಲ್ಲಿ ನಗ್ಗಿ ಹೋಗುವುದೊ ಎನ್ನುವ ಹಾಗೆ.. ಸರಿ, ನಾವಿಬ್ಬರು ಅದನ್ನು ಬೇಕೆಂದು ವಾದ ಮಾಡುತ್ತ ಇರುವುದನ್ನು ಕಂಡು ಅವನು ಕಿಲಾಡಿಯಂತೆ ,’ ಇದು ಇರುವುದೊಂದೆ ಕೊನೆ ಪ್ಯಾಕೆಟ್ಟು.. ನಿಮ್ಮಲ್ಲಿ ಯಾರು ಹೆಚ್ಚು ಬೆಲೆ ಕೊಡುತ್ತಿರೊ ಅವರಿಗೆ ಕೊಡುತ್ತೀನಿ ..ಮಾಮೂಲಿ ಬೆಲೆ ಒಂದು ಡಾಲರ್, ಈಗ ಹೇಳಿ ನೀವೆಷ್ಟು ಕೊಡುತ್ತೀರಾ..’ ಎಂದು ನಮಗೆ ಕಾಂಫಿಟೇಷನ್ ಹಚ್ಚಿಬಿಟ್ಟ..!’

ಕಾಸಿನ ವಿಷಯಕ್ಕೆ ಬಂದರೆ ಗುಬ್ಬಣ್ಣನ ಮನೋಭಾವ ಗೊತ್ತಿದ್ದ ನನಗೆ ಸೂಕ್ಷ್ಮವಾಗಿ ಅಲ್ಲೇನು ನಡೆದಿರಬಹುದೆಂಬ ಅಂದಾಜು ಸಿಗತೊಡಗಿತು.. ಅಂದರೆ ಗುಬ್ಬಣ್ಣನ ಭುಸುಗುಟ್ಟುವಿಕೆ, ದುಮುಗುಟ್ಟುವಿಕೆಯ ಮೂಲ ಅಲ್ಲಿಯದೆ ಇರಬೇಕು…

‘ ಗುಬ್ಬಣ್ಣಾ.. ಹಬ್ಬದ ದಿನ.. ಹೇಳಿ ಕೇಳಿ ಇಲ್ಲಿ ಬೇವಿನ ಹೂವಿರಲಿ ಬೇವಿನೆಲೆಯೂ ಸಿಗೋದೆ ಕಷ್ಟ ..ಅಂತಾದ್ದರಲ್ಲಿ ಒಂದು ಡಾಲರ್ ಹೆಚ್ಚಾದ್ರೂ ಸರಿ ಅಂತ ಬಿಸಾಕಿ ಎತ್ಕೊಂಡು ಬರೋದಲ್ವ..?’ ಎಂದೆ.

‘ನಾನೂ ಅದೆ ಅನ್ಕೊಂಡೆ ಅವನಿಗೂ ಮೊದಲೆ ‘ಎರಡು ಡಾಲರ್’ ಅಂತ ಕೂಗಿದೆ ಸಾರ್… ನಮ್ಮೂರಲ್ಲೂ ಹಬ್ಬಕ್ಕೆ ಈ ರೀತಿ ಬೆಲೆ ಏಮಾರಿಸೋದು ಕಂಡಿರ್ಲಿಲ್ಲ ನಾನು… ಆದ್ರೂ ಕೂಗ್ದೆ ಸಾರ್..’

ಗುಬ್ಬಣ್ಣ ಊರಲ್ಲಿ ಹಬ್ಬದ ಹೊತ್ತಿನಲ್ಲಿ ಹೂವು, ಹಣ್ಣು, ತರಕಾರಿ ಒಂದಕ್ಕೆ ನಾಕರಷ್ಟು ಬೆಲೆ ಕೊಟ್ಟು ಕೊಳ್ಳುತ್ತಿದ್ದುದ್ದನ್ನ ಮರೆತುಬಿಟ್ಟಿದ್ದಾನೆ… ಅದಿರಲಿ ಅಂದುಕೊಂಡೆ, ‘ ಸರಿ ಮತ್ತೆ ಡಬ್ಬಲ್ ಬೆಲೆಗೆ ಖುಷಿಯಾಗಿ ಕೊಟ್ಟಿರಬೇಕಲ್ಲವಾ ಅವನು?’ ಎಂದು ಕೇಳಿದೆ.

‘ ಸುಮ್ಮನಿರಿ ಸಾರ್.. ಕೊಡೊದೇನ್ ಬಂತು… ಆ ಕಾಂಫಿಟೇಷನ್ ಆಸಾಮಿ ಮಾತೂ ಆಡಲಿಲ್ಲ.. ಜೇಬಿಂದ ನೇರ ಐದು ಡಾಲರ್ ನೋಟು ತೆಗೆದಿಟ್ಟವನೆ, ಪ್ಯಾಕೆಟ್ಟನ್ನೆತ್ತಿಕೊಂಡು ಜೇಬಿಗೆ ಹಾಕಿಕೊಂಡು ಹೊರಟೆ ಹೋದ ಸಾರ್…’ ಅಳುವ ದನಿಯಲ್ಲೆ ನುಡಿದ ಗುಬ್ಬಣ್ಣ – ಹೇಳುತ್ತಲೆ ನಡೆದಿದ್ದೆಲ್ಲಾ ಮತ್ತೆ ನೆನಪಾಗಿಯೊ ಏನೊ ?

ಹತ್ತು ಗ್ರಾಮೂ ಇಲ್ಲದ ಹೂವಿಗೆ ಐದು ಡಾಲರು ನನಗೇ ಹೆಚ್ಚೆನಿಸಿತ್ತು… ಗುಬ್ಬಣ್ಣನಂತು ಅವರಪ್ಪರಾಣೆ ಅಷ್ಟೊಂದು ಕೊಡಲು ಒಪ್ಪುತ್ತಿರಲಿಲ್ಲವೆನ್ನುವುದು ಬೇರೆ ವಿಷಯ. ಆ ಕೊಂಡವನಾರೊ ನನ್ನನ್ನು ಮೀರಿಸಿದ ಗಿರಾಕಿಯೆ ಇರಬೇಕು… ಅಲ್ಲಿಗೆ ತನಗಾದ ಮೋಸ, ಅನ್ಯಾಯಕ್ಕೆ ಪರಿತಪಿಸುತ್ತಿದ್ದಾನೆ ಗುಬ್ಬಣ್ಣ ಎಂದರಿವಾಗಿ ಅವನ ಸ್ಥಿತಿಗೆ ಮರುಕವೂ ಆಯ್ತು.

‘ ನೋಡು, ನೀನು ಊರೆಲ್ಲ ಸುತ್ತದೆ ನೇರ ಇಲ್ಲಿಗೆ ಬಂದಿದ್ದರೆ ಸ್ಟಾಕು ಖಾಲಿಯಾಗುವ ಮೊದಲೆ ಆರಾಮವಾಗಿ ಸಿಗುತ್ತಿತ್ತೇನೊ? ನಿನ್ನ ಅತಿ ಬುದ್ಧಿವಂತಿಕೆಯಿಂದ ಈಗ ಎಲ್ಲಾ ಕೇಡು..’

‘ ಸಾರ್..ನೀವು ಉರಿವ ಗಾಯಕ್ಕೆ ಉಪ್ಪೆರಚಬೇಡಿ… ಈಗ ಬೇವಿನ ಹೂವಿಲ್ಲದೆ ನಾನು ಮನೆಗೆ ಹೋಗುವಂತಿಲ್ಲ. ನಮ್ಮ ಯಜಮಾನ್ತಿ ಬಿಲ್ಕುಲ್ ಒಳಗೆ ಸೇರ್ಸೋಲ್ಲ.. ಅದಕ್ಕೇನಾದ್ರೂ ಐಡಿಯಾ ಕೊಡಿ..’ ಎಂದ ಗುಬ್ಬಣ್ಣ. ಅದೇನು ದನಿ ಗದ್ಗದವಾಗುತ್ತಿತ್ತೊ ಅಥವಾ ಮನೆಯಲ್ಲಿ ಸಿಗಬಹುದಾದ ‘ಸೇವೆಯ’ ನೆನಪಾಗಿ ಭೀತಿಯಿಂದ ಉಂಟಾದ ನಡುಕಕ್ಕೆ ಅದುರುತ್ತಿತ್ತೊ ಅಂದಾಜು ಸಿಕ್ಕದಿದ್ದರು ಮ್ಯಾಟರು ಮಾತ್ರ ಸೀರಿಯಸ್ಸು ಎಂದು ಅರಿವಾಯ್ತು. ಏನು ಮಾಡಬಹುದೆಂದು ತಲೆ ಕೆರೆದುಕೊಂಡೆ, ಇರುವ ಒಂದೆರಡು ಕೂದಲನ್ನೆ ನಯವಾಗಿ ನೇವರಿಸುತ್ತಾ. ಆಗ ತಟಕ್ಕನೆ ನೆನಪಾಗಿದ್ದು ನಾನು ವಾಕಿಂಗ್ ಹೋಗುವ ಬೂನ್ ಕೆಂಗ್ ಹತ್ತಿರದ ಟೌನರ್ ರೋಡಿನ ಬದಿಯಲ್ಲಿದ್ದ ಪಾರ್ಕಿನ ಮಾವಿನ ತೋಪು… ಅಲ್ಲಿಗೆ ಹೋಗುವ ಹಾದಿಯಲ್ಲಿ ಉದ್ದಕ್ಕು ಇದ್ದ ನೀರ್ಗಾಲುವೆಯ ದಡಕ್ಕೆ ಅಂಟಿಕೊಂಡಂತೆ ಇದ್ದ ಒಂದೆ ಒಂದು ಬೇವಿನ ಮರ ಚಕ್ಕನೆ ಕಣ್ಣೆದುರು ಬಂದು ನಿಂತಿತ್ತು.

‘ ಗುಬ್ಬಣ್ಣ… ಒಂದು ಎಕ್ಸಲೆಂಟು ಐಡಿಯಾ ಇದೆ ನೋಡು.. ಚೂರು ಕಾಸು ಖರ್ಚಿಲ್ಲದೆ ಬೇವಿನ ಸೊಪ್ಪು ಹೂವು ಎರಡೂ ಸಿಗುವ ದಾರಿ…..’

ಆ ಹೊತ್ತಲ್ಲಿ ಬೇವಿನ ಹೂವಿಗಾಗಿ ಬಾವಿಗೆ ಬೀಳಲೂ ಸಿದ್ದನಾಗಿದ್ದ ಗುಬ್ಬಣ್ಣನ ಕಣ್ಣು ನೂರು ಕ್ಯಾಂಡಲ್ ಬಲ್ಬಿನಂತೆ ಜಗ್ಗನೆ ಹೊಳೆಯಿತು… ‘ಹೌದಾ ಸಾರ್.. ಏನ್ಸಾರ್ ಅದು ಐಡಿಯಾ? ‘ … ಪುಕ್ಕಟೆ ಎಂದಿದ್ದಕ್ಕೆ ನೂರು ಕ್ಯಾಂಡಲ್ಲಾಗಿರಬೇಕು… ಇರದಿದ್ದರೆ ಜೀರೊ ಕ್ಯಾಂಡಲೊ, ನಲವತ್ತು ಕ್ಯಾಂಡಲ್ಲೊ ಅಗಿರುತ್ತಿತ್ತೇನೊ….

‘ ನಾನು ವಾಕಿಂಗ್ ಹೋಗೊ ದಾರಿಯ ಕಾಲುವೆಗೆ ಅಂಟಿಕೊಂಡ ಹಾಗೆ ಒಂದು ಬೇವಿನ ಮರ ನೋಡಿದ್ದೀನಿ…’

‘ ಅಲ್ಲಿ ಹೋದ್ರೆ ಹೂವು ಸಿಗೊ ಛಾನ್ಸ್ ಇದೇ ಅಂತೀರಾ ?’ ಅರಳಿದ ಆಸೆಯ ಕಣ್ಣಲ್ಲಿ ಗುಬ್ಬಣ್ಣನ ಪ್ರಶ್ನೆ..

‘ ನಮ್ಮ ಹಾಗೆ ಯೋಚಿಸಿ, ಯಾರೂ ಕಿತ್ತುಕೊಂಡು ಹೋಗಿಲ್ಲಾಂದ್ರೆ ಗ್ಯಾರಂಟಿ ಸಿಗುತ್ತೆ.. ಹೊರಗೆ ಆ ಮರದ ಸುತ್ತ ಬೇರೆ ಮರ ಗಿಡ ಬೆಳೆದಿರೊದ್ರಿಂದ ಸುಲಭದಲ್ಲಿ ಕಾಣೋದಿಲ್ಲ.. ಆದ್ರೆ ಮರ ನೀರ ಕಡೆ ವಾಲಿರೋದ್ರಿಂದ ಸ್ವಲ್ಪ ರಿಸ್ಕೀ… ಇಲ್ಲೆಲ್ಲ ಗ್ರಿಲ್ ಬೇಲಿ ಹಾಕಿಬಿಟ್ಟು ಒಳಗಿಂದ ಬರೋಕೆ ದಾರಿಯೂ ಇರೊಲ್ಲಾ…’

ಗುಬ್ಬಣ್ಣ ಅದನ್ನೆಲ್ಲ ಈಗ ಕೇಳಿಸಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. ಬೇವಿನ ಹೂವು ಸಿಗುವುದೆಂದರೆ ಸೀದಾ ನರಕಕ್ಕಾದರು ಸಿದ್ದ ಎನ್ನುವಂತಿತ್ತು ಅವನ ಮನಸ್ಥಿತಿ.

ಮುಂದಿನ ಹತ್ತದಿನೈದೆ ನಿಮಿಷದಲ್ಲಿ ಇಬ್ಬರು ಎರಡು ಟ್ರೈನ್ ಸ್ಟೇಷನ್ ದಾಟಿ, ಹೆಚ್ಚುಕಡಿಮೆ ಓಡುತ್ತಲೆ, ನಾನು ನೋಡಿದ್ದ ಮರದತ್ತ ಬಂದು ನಿಂತುಬಿಟ್ಟಿದ್ದೆವು. ನಾವಿಬ್ಬರೂ ಮರ ಹತ್ತುವುದರಲ್ಲಿ ನರ್ಸರಿ ಕ್ಲಾಸೆ ಆಗಿದ್ದರೂ, ಯಾವುದಾದರೂ ಕೈಗೆಟಕುವ ಕೊಂಬೆಯನ್ನೆಳೆದು ಸಿಕ್ಕಷ್ಟು ಕಿತ್ತುಕೊಂಡು ಹೋಗಬಹುದೆನ್ನುವ ಆಸೆಯಿತ್ತು. ಜತೆಗೆ ಗುಬ್ಬಣ್ಣನ ಜತೆಯಲ್ಲಿ ನನಗೂ ಒಂದಷ್ಟು ಬೇವಿನ ಹೂವು ಸಿಗುವುದಲ್ಲ ಎನ್ನುವ ಸ್ವಕಾರ್ಯದ ಚಿಂತನೆ ಬೇರೆ… ಆದರೆ ಮರದ ಹತ್ತಿರ ಬಂದಂತೆ ನಮ್ಮಿಬ್ಬರಿಗು ಅರಿವಾಗಿತ್ತು – ಹೂವಿದ್ದ ಬಹುಪಾಲು ಕೊಂಬೆಗಳೆಲ್ಲ ನಮಗೆ ಸುಲಭದಲ್ಲೆಟುಕದಂತೆ ನೀರಿನ ಕಡೆ ವಾಲಿಕೊಂಡಿತ್ತೆಂದು. ಕಬ್ಬಿಣದ ಗ್ರಿಲ್ಲಿನ ಬೇಲಿಯನ್ನು ನೆಗೆದು ಅದರ ಕೆಳಗಿದ್ದ ಇಕ್ಕಾಟ್ಟಾದ ಕಟ್ಟೆಯ ಕಡೆಯಿಂದ ಬರದ ಹೊರತು ಆ ಕೊಂಬೆಗಳು ಕೈಗೆಟುಕುತ್ತಿರಲಿಲ್ಲ. ನಾವಿಬ್ಬರೂ ಇರುವ ಸೈಜಿಗೆ ಅದು ಸುರಕ್ಷಿತ ವಿಧಾನವಾಗಿಲ್ಲದ ಕಾರಣ ಇತ್ತ ಕಡೆಯೆ ಏನಾದರೂ ಚಿಗುರೊ, ಕೊಂಬೆಯೊ ಇರುವುದೆ ಎಂದು ನೋಡಲು ಆ ಮರಗಳ ಗುಂಪಿನ ಪೊದೆಯಲ್ಲೆ ನುಗ್ಗಿ ಪರಿಶೀಲಿಸಿದೆ. ಅದೃಷ್ಟಕ್ಕೆ ಕೈಗೆಟಕುವ ಎತ್ತರದಲ್ಲಿದ್ದ ಒಂದು ಚಿಗುರಿನ ಕವಲು ಇತ್ತ ಕಡೆಯೆ ಚಾಚಿಕೊಂಡು ನಿಂತಿದ್ದು ಕಂಡಿತ್ತು – ಅಲ್ಲಲ್ಲಿ ಹೂವಿನ ಗೊಂಚಲ ಕವಲನ್ನು ಸೇರಿಸಿಕೊಂಡು.

‘ಗುಬ್ಬಣ್ಣ ನಿನ್ನ ಅದೃಷ್ಟ ನೆಟ್ಟಗಿದೆ ಕಣೊ.. ಇಲ್ಲೊಂದು ಎಳೆ ಚಿಗುರು, ಒಂದಷ್ಟು ಹೂವಿನ ಗೊಂಚಲ ಜತೆ ನೇತಾಡ್ತಿದೆ.. ಅದನ್ನೆ ಕಿತ್ಕೊಂಡ್ರೆ ಇಬ್ಬರಿಗೂ ಆಗುತ್ತೆ.. ಬೇವಿನ ಹೂವೇನು, ಎರಡೆರಡು ಕಡ್ಡಿ ಸಿಕ್ಕಿದ್ರೂ ಸಾಕು; ಬೇವು ಬೆಲ್ಲದಲ್ಲಿ ಸೇರ್ಸೋದಕ್ಕೆ ಅಷ್ಟೆ ಸಾಕು..’ ಹಾಗೆನ್ನುತ್ತಲೆ ಅಲ್ಲಿದ್ದ ಚಿಗುರನ್ನು ತೊಟ್ಟಿನ ಸಮೇತ ಮುರಿದೆತ್ತಿಕೊಂಡು ಬಂದೆ. ಅದರಲ್ಲೆ ಅರ್ಧ ಮಾಡಿ ಗುಬ್ಬಣ್ಣನಿಗೆ ನೀಡಬೇಕೆಂದು ಹೊರಟಾಗಲೆ ಗುಬ್ಬಣ್ಣ, ‘ ಸಾರ್.. ಇದ್ಯಾವ ಮೂಲೆಗೆ ಸಾಕಾಗುತ್ತೆ ? ಆ ಕಡೆ ನೋಡಿ ಸಾರ್..ಎಷ್ಟೊಂದಿದೆ…’ ಎಂದ.

‘ಗುಬ್ಬಣ್ಣ.. ಅತಿಯಾಸೆ ಬೇಡ ಕಣೊ… ಆ ಕಡೆ ತುಂಬಾ ರಿಸ್ಕಿ, ಹೋಗೋಕಾಗಲ್ಲಾ.. ಇಷ್ಟೆ ಸಾಕು ಬಾ.. ಸಿಕ್ಕಿದ್ದೆ ಸೌಭಾಗ್ಯ ಅನ್ನೋದು ಬಿಟ್ಟು ಎಡವಟ್ಟು ಮಾಡಿಕೊಳ್ಳೋಕೆ ಹೋಗೋದು ಬೇಡಾ’ ಎಂದೆ ಎಚ್ಚರಿಸುವ ದನಿಯಲ್ಲಿ. ಆದರೆ ಗುಬ್ಬಣ್ಣ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ… ಆ ಕಡೆಯಿಂದ ಗೊಂಚಲು ಗೊಂಚಲಲ್ಲಿ ತೂಗಾಡುತ್ತಿದ್ದ ಪ್ರಲೋಭನೆ ಅವನಿಗೂ ಮಂಕು ಹಿಡಿಸಿಬಿಟ್ಟಿತ್ತೇನೊ..

‘ ಇಲ್ಲಾ ಸಾರ್.. ಆ ತುದಿಗೆ ಹೋದರೆ, ನೋಡಿ ಅಲ್ಲೊಂದು ಸಂದಿಯಿದೆಯಲ್ಲಾ? ಅಲ್ಲಿಂದ ಹುಷಾರಾಗಿ ಒಳಗೆ ಬಂದರೆ ಸಾಕು ಸಾಕೆನಿಸೊವಷ್ಟು ಸೊಪ್ಪು, ಹೂವೂ ಎಲ್ಲಾ ಸಿಕ್ಕಿಬಿಡುತ್ತೆ..ಮುಂದಿನ ಯುಗಾದಿಗೂ ಸಾಕಾಗೋವಷ್ಟು…’

‘ ಗುಬ್ಬಣ್ಣಾ ಕತ್ತಲಾಗೊ ಹೊತ್ತು.. ಜಾರಿ ನೀರಿಗೆ ಬಿದ್ರೆ, ಅಧ್ವಾನ ಈ ಯುಗಾದಿಗು ಅಟಕಾಯಿಸಿಕೊಂಡುಬಿಡುತ್ತೆ ಕಣೊ… ಇದೇ ಸಾಕು ಬಾ..’ ಎಂದೆ ಗಾಬರಿಯಿದ್ದರೂ ಲಲ್ಲೆಗರೆಯುವ ದನಿಯಲ್ಲಿ.

ನನ್ನ ಮಾತು ಮುಗಿಯುವ ಮೊದಲೆ ಏನೊ ನಿರ್ಧರಿಸಿದವನಂತೆ ಆಗಲೆ ಗುಬ್ಬಣ್ಣ ಅತ್ತ ಸರಸರನೆ ಹೋಗಿಬಿಟ್ಟಿದ್ದ. ನಾನು ಅರ್ಧ ಆತಂಕ, ಕುತೂಹಲದಲ್ಲಿ ಅವನು ಗ್ರಿಲ್ಲಿನ ಸರಳನ್ನು ಹಿಡಿದುಕೊಂಡೆ ತೆವಳಿದಂತೆ ಹೆಜ್ಜೆ ಹಾಕುತ್ತ ಬರುವುದನ್ನು ನೋಡುತ್ತಿದ್ದೆ. ತನ್ನ ಆ ದಢೂತಿ ದೇಹವನ್ನು ಹೊತ್ತುಕೊಂಡೆ ಹಾಗೂ ಹೀಗೂ ಬೇವಿನ ಮರದ ಕೆಳಗೆ ಬಂದವನೆ, ಕಾಲಿನ ತುದಿಬೆರಳಲ್ಲಿ ನಿಲ್ಲುತ್ತ ಹತ್ತಿರದ ಕೊಂಬೆಯೊಂದನ್ನು ಎಟುಕಿಸಿಕೊಳ್ಳಲು ಯತ್ನಿಸಿದ ಗುಬ್ಬಣ್ಣ. ಕೈಯ ಬೆರಳ ತುದಿಗೆ ಗೊಂಚಲು ಗೊಂಚಲು ಹೂವೆ ತುಂಬಿಕೊಂಡಿದ್ದ ಟೊಂಗೆಯೇನೊ ಎಟುಕಿದರು, ಬಲವಾಗಿ ಹಿಡಿದೆಳೆಯುವಷ್ಟು ಹಿಡಿತಕ್ಕೆ ಸಿಕ್ಕಿರದ ಕಾರಣ ಮತ್ತಷ್ಟು ಮೇಲೆ ಕೈ ಚಾಚುವ ಪ್ರಯಾಸದಲ್ಲಿ ತೊಡಗಿದ್ದ ಗುಬ್ಬಣ್ಣ. ಹಾಗೂ ಹೀಗು ಎಟುಕಿದ ಟೊಂಗೆಯನ್ನು ಬುಡದಿಂದ ಮುರಿದುಕೊಳ್ಳಲು ಜೋರಾಗಿ ಎಳೆದ ರಭಸಕ್ಕೊ ಏನೊ – ಏನಾಯ್ತು, ಹೇಗಾಯ್ತು ಎಂದರಿವಾಗುವ ಮೊದಲೆ ಮುರಿದ ಟೊಂಗೆಯ ಸಮೇತ ಜರ್ರೆಂದು ಜಾರಿಕೊಂಡು ಕೆಳಗೆ ಹೋಗಿಬಿಟ್ಟಿದ್ದ ಗುಬ್ಬಣ್ಣ, ನೀರಿನ ಕಾಲುವೆಯ ಇಳಿಜಾರಿನಲ್ಲಿ…!

ಅವನ ಗಾಬರಿಯಿಂದ ಅರಚಿಕೊಂಡ ಸದ್ದನ್ನೆ ಹಿಂಬಾಲಿಸಿಕೊಂಡು ಓಡಿಹೋಗಿ, ಇತ್ತ ಕಡೆಯಿಂದ ಸಾಧ್ಯವಾಗುವಷ್ಟು ಬಗ್ಗಿ ಗುಬ್ಬಣ್ಣನೇನಾದರೂ ಕಾಣುವನೆ? ಎಂದು ನೋಡಿದೆ. ಆಳವೂ ಗೊತ್ತಿರದ ಕಾಲುವೆಯ ನೀರಿಗೇನಾದರೂ ಬಿದ್ದಿದ್ದರೆ ಏನು ಕಥೆ ಎಂದುಕೊಂಡೆ, ಹೆದರುತ್ತಲೆ ಇಣುಕಿದೆ – ಸುದೈವಕ್ಕೆ ಜಾರಿ ಬಿದ್ದ ಗುಬ್ಬಣ್ಣ ನೀರಿನ ಹತ್ತಿರ ಹತ್ತಿರವೆ ಹೋಗಿದ್ದರೂ, ಅದರ ನಡುವೆ ಬೆಳೆದುಕೊಂಡಿದ್ದ ಗಿಡದ ಬುಡವೊಂದು ಜುಟ್ಟಂತೆ ಸಿಕ್ಕಿ ಅದನ್ನೆ ಹಿಡಿದುಕೊಂಡು ತೂಗಾಡುತ್ತಿದ್ದ. ಬಲದ ಕೈಯಲ್ಲಿದ್ದ ಬೇವಿನ ಟೊಂಗೆ ಮಾತ್ರ ಹಾಗೆಯೆ ಇದ್ದರೂ, ಕಾಲುಗಳೆರಡು ನೀರಿಗೆ ಇಳಿದಿದ್ದರಿಂದ ಆ ಗಿಡದ ಆಧಾರ ಕಳಚಿದರೆ ಅವನು ಪೂರ್ತಿ ಜಾರಿ ನೀರಿಗೆ ಬೀಳುವುದು ಖಚಿತವೆನಿಸಿ, ಅಲ್ಲೆ ಹತ್ತಿರವಿದ್ದ ‘ಲೈಫ್ ಸೇವಿಂಗ್ ಟ್ಯೂಬ್’ ಮತ್ತು ಅದಕ್ಕೆ ಸುತ್ತಿದ್ದ ಹಗ್ಗದ ನೆನಪಾಗಿ ಅತ್ತ ಓಡಿದೆ. ಅಷ್ಟರಲ್ಲಿ ಅವನ ದನಿ ಕೇಳಿ ಬಂದ ಅಲ್ಲಿ ನೆರೆದಿದ್ದ ಮತ್ತೊಬ್ಬಿಬ್ಬರ ನೆರವಿನಿಂದ ಗುಬ್ಬಣ್ಣ ಹಾಗೂ ಹೀಗೂ ಮೇಲೆದ್ದು ಬಂದರೂ ಮಾಮೂಲಿಯಾಗಿ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಕುಂಟುತ್ತ ಕುಂಟುತ್ತ ನಡೆವ ರೀತಿಯಲ್ಲೆ ಏನೊ ಸಿರಿಯಸ್ಸಾಗಿ ಎಡವಟ್ಟಾಗಿದೆಯೇನೊ ಅನಿಸಿ, ಅಲ್ಲೆ ಮೊದಲೊಂದು ರೇಡಿಯೊ ಟ್ಯಾಕ್ಸಿ ಬುಕ್ ಮಾಡಿ ಮನೆಗೆ ಕಳಿಸಿದೆ, ಅವನು ಮುರಿದುಕೊಂಡಿದ್ದ ಟೊಂಗೆಯ ಗೊಂಚಲ ಸಮೇತ…!

ನನ್ನ ಕೈಲಿದ್ದ ಪುಟಾಣಿ ಗೊಂಚಲಿನ ಬೇವಿನ ಸೊಪ್ಪು, ಹೂವನ್ನು ಹೊಯ್ದು ನನ್ನವಳಿಗಿತ್ತಾಗ ಅವಳಿಗೆ ಅಚ್ಚರಿಯೊ, ಅಚ್ಚರಿ.. ‘ ಏನ್ರಿ ಇದು ಈ ಸಾರೀ ಸೂರ್ಯನೆಲ್ಲೊ ದಿಕ್ಕು ತಪ್ಪಿ ಹುಟ್ಟಿದ ಹಾಗಿದೆ.. ಯಾವ ಯುಗಾದಿಗೂ ಇಲ್ಲಾ, ಈ ಯುಗಾದಿಗೆ ಬೇವು, ಬೇವಿನ ಹೂವೂ.? ‘ ಎಂದಳು.

ನಾನು, ‘ಎಲ್ಲಾ ಗುಬ್ಬಣ್ಣ ದೇವರ ಕೃಪೆ ಕಣೆ…’ ಎಂದು ಒಳನಡೆದೆ.

ಅಂತೂ ಇಂತು ಗುಬ್ಬಣ್ಣನೇನೊ ಅವನ ‘ಯಜಮಾನ್ತಿಯ’ ಕೆಂಗಣ್ಣಿಗೆ ಗುರಿಯಾಗದೆ ಬೇವೂ ಬೆಲ್ಲದ ಜತೆಗೆ ಸಂಭ್ರಮದ ಯುಗಾದಿ ಆಚರಿಸಿಕೊಂಡನಂತೆ ಈ ಬಾರಿ – ಹೊಸದಾಗಿ ಕೊಂಡ ವ್ಹೀಲ್ ಚೇರಿನ ಮೇಲೆ ಕುಳಿತೆ…!

ಕನಿಷ್ಠ ಎರಡು ವಾರವಾದರು ವ್ಹೀಲ್ ಚೇರಿನಲ್ಲೆ ಕೂತಿರಬೇಕೆಂದು ಡಾಕ್ಟರ ಅಣತಿಯಾಗಿದೆಯೆಂದು ಗೋಳಿಡುತ್ತ ಗುಬ್ಬಣ್ಣ ಪೋನಿನಲ್ಲಿ ಹಬ್ಬದ ದಿನವೆ ಅಲವತ್ತುಗೊಂಡಾಗ, ನಾನೆ ಸಮಾಧಾನಿಸಿದೆ..

‘ ಹೋಗಲಿ ಬಿಡೊ ಗುಬ್ಬಣ್ಣಾ… ಏನಾದರೂ ಸರಿ, ನೀನೆಂತಹ ಸತಿವ್ರತ ಅಂಥ ಪ್ರೂವ್ ಮಾಡೋಕಾದರೂ ಹೆಲ್ಪ್ ಆಯ್ತಲ್ಲಾ.. ಈ ವರ್ಷದ ಬೇವೆಲ್ಲಾ ಈ ಆಕ್ಸಿಡೆಂಟಲ್ಲೆ ಕಳೆದುಹೋಯ್ತು ಅನ್ಕೊ..ಇನ್ನು ಮಿಕ್ಕಿದ್ದೆಲ್ಲ ಬರಿ ಬೆಲ್ಲವೆ ಇರುತ್ತೆ ವರ್ಷ ಪೂರ್ತಿ… ಹ್ಯಾಪಿ ಯುಗಾದಿ ಗುಬ್ಬಣ್ಣ..’ ಎಂದೆ

ಗುಬ್ಬಣ್ಣನಿಗು ಏನೊ ಸಮಾಧಾನವಾದಂತಾಗಿ, ‘ ನಿಮಗೂ ಯುಗಾದಿಯ ಶುಭಾಶಯಗಳು ಸಾರ್..ಹ್ಯಾಪೀ ಯುಗಾದೀ..ಮೋರ್ ಬೆಲ್ಲ , ಲೆಸ್ ಬೇವು’ ಎಂದ – ಬಹುಶಃ ನಾನು ಕೊಂಡೊಯ್ದ ಬೇವಿನ ಗೊಂಚಲು ನೆನಪಾಗಿಯೊ ಏನೊ.

ನಾನೂ ನಕ್ಕು, ‘ ಯೆಸ್… ಲೆಸ್ ಬೇವು, ಮೋರ್ ಬೆಲ್ಲಾ..’ ಎನ್ನುತ್ತಾ ಪೋನಿಟ್ಟೆ.

(ಸರ್ವರಿಗು ೨೦೧೬ರ ಯುಗಾದಿ-ಹೊಸವರ್ಷದ ಹಾರ್ದಿಕ ಶುಭಾಶಯಗಳು)

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ಚಿತ್ರಕೃಪೆ : ಕನ್ನಡ ಗ್ರೀಟಿಂಗ್ಸ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments