ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 11, 2016

12

ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

rigvedaಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.

ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ ||

ಇಲ್ಲಿ ಮೂರನೇ ಪಾದದಲ್ಲಿ ವಿರೋಧಿಗಳು ಹೇಳಿದಂತೆ “ಅಘಾಸು ಹನ್ಯಂತೇ ಗಾವಃ” ಎಂಬ ವಾಕ್ಯವೇನೋ ಇತ್ತು. ಹನ್ ಶಬ್ದಕ್ಕೆ ಕಡಿಯುವದು ಎಂಬ ಅರ್ಥವೂ ಇದೆ. ಮೊನಿಯರ್-ವಿಲಿಯಮ್ಸ್ ಶಬ್ದಕೋಶವನ್ನೂ ಉದ್ಧರಿಸಬಹುದು. ಹೀಗಾಗಿ ಅಘಾ (ಮಘಾ ನಕ್ಷತ್ರ)ದಲ್ಲಿ ಆಕಳುಗಳನ್ನು ಕಡಿಯಲಾಗುತ್ತದೆ ಎಂಬ ಅರ್ಥವೇನೋ ಮೇಲ್ನೋಟಕ್ಕೆ ಹೊರಡುತ್ತಿತ್ತು. ಆದರೆ ನನಗೆ ಇಲ್ಲೊಂದು ಸಮಸ್ಯೆ ಕಂಡುಬಂದಿತು. ಇಂದ್ರನು ಅಸುರರನ್ನು ಮತ್ತು ದಸ್ಯುಗಳನ್ನು ಸಂಹರಿಸಿ ಅವರು ಅಪಹರಿಸಿದ್ದ ಆಕಳುಗಳನ್ನು ರಕ್ಷಿಸಿದ ಕಥೆಗಳು ಹೇರಳವಾಗಿ ಕಂಡು ಬರುವ ಋಗ್ವೇದದಂಥ ಸಾಹಿತ್ಯವನ್ನು ಪ್ರಮಾಣವೆಂದು ನಂಬುವ ಪರಂಪರೆಗಳಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಆಕಳುಗಳನ್ನು ಕಡಿಯುವ ಸಂಪ್ರದಾಯಗಳು ಕಂಡು ಬರಬಹುದೇ? ಇದೇ ನನಗೆ ಬಂದ ಸಮಸ್ಯೆಯಾಗಿತ್ತು.

ಋಗ್ವೇದಕ್ಕೆ ಸಾಯಣಾಚಾರ್ಯರು ಬರೆದಿರುವ ಭಾಷ್ಯವನ್ನು ಓದಲಾರಂಭಿಸಿದೆ. ಸಾಯಣ ಭಾಷ್ಯ ಹೀಗಿದೆ

ಸೋಮಾಯ ಪ್ರದಿಪ್ಸಿತಾಯಾಃ ಸೂರ್ಯಾಯಾ ವಹತುಃ | ಕನ್ಯಾಪ್ರಿಯಾರ್ಥಂ ದಾತವ್ಯೋ ಗವಾದಿ ಪದಾರ್ಥೋ ವಹತುಃ | ಸ ಚ ಪ್ರಾಗಾತ್ | ತಸ್ಯಾ ಅಪಿ ಪೂರ್ವಮಗಚ್ಛತ್ | ಯಂ ವಹತುಃ ಸವಿತಾಸ್ಯಾಃ ಪಿತಾವಾಸೃಜತ್ ಅವಸೃಷ್ಟವಾನ್ | ಪ್ರಾದಾದಿತ್ಯರ್ಥಃ | ಕದಾ ಸಾಗಚ್ಛತ್ ಕದಾ ವಹತುರಿತ್ಯುಭಯೋಃ ಕಾಲ ಉಚ್ಯತೇ | ಅಘಾಸು | ಮಘಾಸ್ವಿತ್ಯರ್ಥಃ | ಮಘಾ ನಕ್ಷತ್ರೇಷು ಗಾವಃ ಸವಿತ್ರಾ ದತ್ತಾ ಗಾವಃ  ಸೋಮಗೃಹಂ ಪ್ರತಿ ಹನ್ಯಂತೇ | ದಂಡೈಸ್ತಾಡ್ಯಂತೇ ಪ್ರೇರಣಾರ್ಥಂ | ಅರ್ಜುನ್ಯೋಃ ಫಲ್ಗುನ್ಯೋಃ ಇತ್ಯರ್ಥಃ | ತಯೋರ್ನಕ್ಷತ್ರಯೋಃ ಸವಿತುಃ ಸಕಾಶಾತ್ ಪರಿಸೋಮಗೃಹಂ ಪ್ರತ್ಯುಹ್ಯತೇ | ನೀಯತೇ ರಥೇನ ||

ಇದರ ಒಟ್ಟೂ ಭಾವಾರ್ಥವೇನೆಂದರೆ:

ಪತಿಗೃಹಕ್ಕೆ ಹೋಗುವ ಸೂರ್ಯೆಗಾಗಿ ಯಾವ ಗವಾದಿ ಸಂಪತ್ತುಗಳ ಬಳುವಳಿಗಳನ್ನು ಸೂರ್ಯನು ಪ್ರಥಮತಃ ಕಳುಹಿಸಿದನೋ, ಆ ಬಳುವಳಿಗಳ ಮೆರವಣಿಗೆಯು, ಸೂರ್ಯಾದೇವಿಗಿಂತಲೂ ಮೊದಲೇ ಬಂದಿತು. ಸೂರ್ಯನಿಂದ ಕಳುಹಿಸಲ್ಪಟ್ಟ ಗೋವುಗಳು ಮಘಾ ನಕ್ಷತ್ರಗಳ ಗುಂಪುಗಳಲ್ಲಿ ಮುಂದೆ ಹೋಗಲು ಪ್ರೇರೇಪಿಸಲ್ಪಡುತ್ತವೆ. ಸೂರ್ಯೆಯು ಫಲ್ಗುನೀ ನಕ್ಷತ್ರಗಳ ಗುಂಪುಗಳ ಮೂಲಕ ಪತಿಗೃಹಕ್ಕೆ ಒಯ್ಯಲ್ಪಡುತ್ತಾಳೆ.

ಇಲ್ಲಿ ನಮಗೆ ಗೊತ್ತಾಗುವದಿಷ್ಟು. ಮದುವೆಯಾದ ಹೆಣ್ಣು ತನ್ನ ತಂದೆ ನೀಡಿದ ಆಕಳುಗಳ ಬಳುವಳಿಯೊಂದಿಗೆ ಗಂಡನ ಮನೆಗೆ ಹೊರಡುತ್ತಾಳೆ. ಆಕಳುಗಳು ಆ ಹೆಣ್ಣಿಗಿಂತ ಮೊದಲೇ ಬಂದು ಗಂಡನ ಮನೆಗೆ ಸೇರುತ್ತವೆ. ಆಕಳುಗಳು ಮಘಾ ನಕ್ಷತ್ರದ ಸಮಯದಲ್ಲಿ ಗಂಡನ ಮನೆ ಸೇರಿದರೆ, ಮದುವೆಯಾದ ಹೆಣ್ಣು ಫಲ್ಗುಣೀ (ಉತ್ತರಾ) ನಕ್ಷತ್ರದಲ್ಲಿ ಮನೆ ಸೇರುತ್ತಾಳೆ. ಇಲ್ಲಿ ಆಕಳನ್ನು ಕಡಿದು ತಿನ್ನುವ ಪ್ರಸ್ತಾಪವೇ ಇಲ್ಲ. ಇದು ಹೇಗೆ?

ಸಾಯಣ ಭಾಷ್ಯವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಅಲ್ಲೊಂದು ವಾಕ್ಯ ಸಿಗುತ್ತದೆ. ಗಾವಃ ಹನ್ಯಂತೇ ಎಂಬುದನ್ನು ಅವರು ಗಾವಃ ದಂಡೈಸ್ತಾಡ್ಯಂತೇ ಪ್ರೇರಣಾರ್ಥಂ ಎಂದು ಅರ್ಥಾನ್ವಯ ಮಾಡಿದ್ದಾರೆ. ಅಂದರೆ ಆಕಳುಗಳು ಮುಂದೆ ಹೋಗುವಂತೆ ಪ್ರೇರೇಪಿಸಲು ಹೊಡೆಯುವ ಅರ್ಥದಲ್ಲಿ “ಹನ್ಯಂತೇ” ಶಬ್ದವನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಗೀತೆಯಲ್ಲಿ ಕೃಷ್ಣನ ವಾಕ್ಯ “ನ ಹನ್ಯತೇ ಹನ್ಯಮಾನೇ ಶರೀರೇ” ಎಂದು ಹೇಳುವಾಗ ಹನ್ ಶಬ್ದಕ್ಕೆ ಯಾವ ಅರ್ಥವನ್ನು ಇಟ್ಟುಕೊಳ್ಳಲಾಗಿದೆಯೋ ಆ ಅರ್ಥವನ್ನು ಸಾಯಣರು ಇಟ್ಟುಕೊಂಡಿಲ್ಲ.

ಅದಕ್ಕಿಂತ ಮುಖ್ಯವಾಗಿ, ಒಬ್ಬ ಭಾಷ್ಯಕಾರ ಒಂದು ಶಬ್ದಕ್ಕೆ ಪ್ರಸಿದ್ಧವಲ್ಲದ ವಿಶೇಷ ಅರ್ಥವನ್ನು ಕಲ್ಪಿಸಬೇಕಾದರೆ ಅದಕ್ಕೆ ಸಾಕಷ್ಟು ಆಧಾರಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಉಪನಿಷತ್ತುಗಳಲ್ಲಿ ಬರುವ ಆತ್ಮನ್ ಶಬ್ದಕ್ಕೆ ಮಧ್ವಾಚಾರ್ಯರು ಆತ್ಮಾ ಇತಿ ನಾರಾಯಣಃ ಎಂದು ಅರ್ಥ ಮಾಡಿದ್ದಾರೆ. ಅಂದರೆ ಉಪನಿಷತ್ತುಗಳಲ್ಲಿ ಬರುವ ಆತ್ಮನ್ ಶಬ್ದವು ನಾರಾಯಣನನ್ನೇ ಕುರಿತು ಹೇಳುತ್ತದೆ ಎಂದರ್ಥ. ಆದರೆ ಹಾಗೆ ಹೇಳುವಾಗ ಅವರು ಪುರಾಣ, ಭಾರತಗಳಿಂದ ಶ್ಲೋಕಗಳನ್ನು ಉದ್ಧರಿಸಿ ತಮ್ಮ ಅಭಿಪ್ರಾಯವನ್ನು ಸಾಧಿಸುತ್ತಾರೆ. ಅಂದರೆ ಸಾಕಷ್ಟು ಪುರಾವೆಗಳನ್ನು ನೀಡಿ ಅಭಿಪ್ರಾಯ ಸರಿ ಎಂದು ಸಾಬೀತುಪಡಿಸುತ್ತಾರೆ. ಆದರೆ ಸಾಯಣರು ಹನ್ಯತೇ ಶಬ್ದಕ್ಕೆ ಕೊಲ್ಲುವದು ಎಂದು ಅರ್ಥ ಮಾಡದೇ ಬೇರೆ ಅರ್ಥ ಮಾಡಿದ್ದಕ್ಕೆ ಯಾವ ಚರ್ಚೆಯ ಆಧಾರವನ್ನೂ ನೀಡಿಲ್ಲ. ಕೊನೇ ಪಕ್ಷ ಆ ರೀತಿ ಅರ್ಥೈಸಿದ್ದಕ್ಕೆ ಒಂದು ಆಧಾರವಾಗಲೀ, ಉದ್ಧರಣವಾಗಲೀ, ಏನನ್ನು ಕೂಡ ಕೊಟ್ಟಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಹನ್ಯತೇ ಶಬ್ದಕ್ಕೆ ಕೊಲ್ಲುವದು ಎಂಬ ಅರ್ಥವೂ ಇದೆ ಎಂಬುದೇ ಗೊತ್ತಿಲ್ಲದವರಂತೆ ಸಾಯಣರು ಸಹಜವಾಗಿ “ದಂಡೈಸ್ತಾಡ್ಯಂತೇ ಪ್ರೇರಣಾರ್ಥಂ” ಎಂದು ಅರ್ಥೈಸಿದ್ದಾರೆ.

ಇದಕ್ಕಿಂತಲೂ ಆಶ್ಚರ್ಯಕರ ಸಂಗತಿಯೆಂದರೆ, ಪ್ರತಿಯೊಬ್ಬ ಭಾಷ್ಯಕಾರನ ಸಿದ್ಧಾಂತವನ್ನೂ ಪ್ರಶ್ನಿಸುವ ಪೂರ್ವಪಕ್ಷಿಯೂ ಈ ನಿಲುವನ್ನು ಪ್ರಶ್ನಿಸಿದಂತೆ ಕಾಣುವದಿಲ್ಲ. ಬೌದ್ಧರು ಮತ್ತು ಜೈನರು ವೇದಪ್ರಾಮಾಣ್ಯವನ್ನು ಒಪ್ಪದಿದ್ದರೂ, ಗೋಹತ್ಯೆಯನ್ನು ಅವರೂ ಅನುಮೋದಿಸಿದಂತೆ ಕಾಣುವದಿಲ್ಲ. ಒಂದು ವೇಳೆ ಗೋಹತ್ಯೆ ಏಕೆ ಬೇಡ ಎಂಬ ಪ್ರಶ್ನೆ ಸ್ವಲ್ಪವಾದರೂ ಇದ್ದಿದ್ದರೆ ಅದು ಖಂಡಿತ ಇಲ್ಲಿ ಚರ್ಚೆಗೆ ಒಳಗಾಗಲೇಬೇಕಿತ್ತು. ವೇದಗಳಲ್ಲಿ ಗಾವಃ ಹನ್ಯಂತೇ ಎಂದಿದೆ, ಹೀಗಾಗಿ ವೇದಗಳಲ್ಲಿ ಗೋ ಹತ್ಯೆ ಇದೆ ಎಂದು ವೇದಪ್ರಾಮಾಣ್ಯವನ್ನು ಒಪ್ಪದ ಒಬ್ಬನಾದರೂ ತೋರಿಸಬಹುದಾಗಿತ್ತು. ಅಂದರೆ ವೇದಪ್ರಾಮಾಣ್ಯದ ವಿರೋಧಿಗಳೂ ಕೂಡ ಗಾವಃ ಹನ್ಯಂತೇ ಎಂಬುದನ್ನು ಕೊಲ್ಲುವ ಅರ್ಥದಲ್ಲಿ ತೆಗೆದುಕೊಂಡಿಲ್ಲ. ಸಾಯಣರ ಈ ಅಭಿಪ್ರಾಯಕ್ಕೆ ಯಾರೂ ಆಕ್ಷೇಪವನ್ನೂ ಸಹ ವ್ಯಕ್ತಪಡಿಸಿಲ್ಲ. ಒಂದು ರೀತಿಯಲ್ಲಿ ಈ ಋಗ್ವೇದದ ಋಚವನ್ನು ಗೋಹತ್ಯೆಯ ಸಮರ್ಥನೆಯಲ್ಲೂ ಬಳಸಬಹುದು ಎಂಬುದರ ಕುರಿತು ಯಾರಿಗೂ ಸುಳಿವೇ ಇಲ್ಲವೋ ಏನೋ?. ಗಾವಃ ಹನ್ಯಂತೇ ಎಂಬುದನ್ನು ಎಲ್ಲರೂ ಗಾವಃ ದಂಡೈಸ್ತಾಡ್ಯಂತೇ ಪ್ರೇರಣಾರ್ಥಂ ಎಂಬ ಅರ್ಥದಲ್ಲಿಯೇ ಆ ಋಕ್ಕನ್ನು ಅರ್ಥೈಸಿಕೊಂಡಿದ್ದರು ಎಂಬುದು ಇಲ್ಲಿ ನಮಗೆ ಸ್ಪಷ್ಟವಾಗುತ್ತದೆ.

ಈ ಸಮಸ್ಯೆಯ ಕಗ್ಗಂಟನ್ನು ಅರ್ಥಮಾಡಿಕೊಳ್ಳಲು, ಸದ್ಯಕ್ಕೆ ಚರ್ಚೆಯನ್ನು ಬದಿಗಿಟ್ಟು ಸ್ವಲ್ಪ ಗತಕಾಲದ ಹಳ್ಳಿಯ ಜೀವನದ ಕುರಿತು ಮೆಲುಕು ಹಾಕೋಣ. ನಮ್ಮ ಹಳ್ಳಿಗಳ ಕಡೆ “ದನ ಹೊಡೆಯುವದು” ಎಂಬ ಶಬ್ದವಿದೆ. “ಆ ಹುಡುಗ ಪಾಪ, ಯಾರೂ ಇಲ್ಲ ಅವನಿಗೆ ಎಲ್ಲರ ಮನೆಯ ದನ ಹೊಡ್ಕೊಂಡು ಇರ್ತಾನೆ” ಎಂದೆಲ್ಲ ಜನ ಮಾತಾಡುತ್ತಾರೆ. ಇಲ್ಲಿ ದನಗಳನ್ನು ಕಾಡಿಗೆ ಹೋಗಿ ಮೇಯಿಸಿ ಪುನಃ ಸಂಜೆಗೆ ಮನೆಗೆ ತರುವ ಕಾಯಕವೇ “ದನ ಹೊಡೆಯುವದು” ಎಂಬರ್ಥದಲ್ಲಿ ಪ್ರಯೋಗವಾಗಿದೆ. ಯಾವ ಹಳ್ಳಿಗನಿಗೂ ಕೂಡ “ದನ ಹೊಡೆಯುವದು” ಎಂದಾಕ್ಷಣ ಅಲ್ಲಿ ಆತ ದ್ವಂದ್ವಾರ್ಥಗಳನ್ನು ಕಲ್ಪಿಸಿಕೊಳ್ಳುವದಿಲ್ಲ. ನೇರವಾಗಿ ದನ ಮೇಯಿಸುವದು ಎಂದೇ ಅರ್ಥ ಕಲ್ಪಿಸುತ್ತಾನೆ. “ಇಲ್ಲ ಇಲ್ಲ. ದನ ಹೊಡೆಯುವದು ಎಂದರೆ ಕೊಲ್ಲುವದಲ್ಲ. ಮೇಯಿಸುವದು” ಎಂದು ಯಾರೂ ಭಾಷ್ಯವನ್ನು ಬರೆದು ಹಳ್ಳಿಗರಿಗೆ ತಿಳಿಸುವ ಪ್ರಮೇಯವೇ ಬರುವದಿಲ್ಲ.

ಹಾಗೆಯೇ ಚಕ್ಕಡಿ ಹೊಡೆಯುವದು, ಜಟಕಾ ಹೊಡೆಯುವದು ಶಬ್ದಗಳೂ ನಮ್ಮಲ್ಲಿವೆ. ಇವೆಲ್ಲವೂ ಚಾಲನೆಯ ಅರ್ಥದಲ್ಲಿ ಪ್ರಯೋಗವಾಗಿವೆ. ಎಷ್ಟರ ಮಟ್ಟಿಗೆ ಎಂದರೆ ನಾವು ಕಾರು, ಬೈಕು ಮುಂತಾದ ಗಾಡಿಗಳನ್ನೂ ಕೂಡ “ಹೊಡೆ”ಯುತ್ತೇವೆ. ಡ್ರೈವಿಂಗ್ ಶಬ್ದಕ್ಕೆ ಹೊಡೆಯುವದು ಎಂದೇ ಅರ್ಥ ಕಲ್ಪಿಸುತ್ತೇವೆ. ಈಗ ಅಮೇರಿಕಾದಲ್ಲಿ ಹುಟ್ಟಿ, ಬೆಳೆದು, ಕನ್ನಡ ಸಂಸ್ಕೃತಿಯ ಗಂಧವೇ ಇಲ್ಲದವನೊಬ್ಬ, ಶಬ್ದಕೋಶಗಳ ಮೂಲಕ ಕನ್ನಡ ಕಲಿತವನು “ದನ ಹೊಡೆಯುವದು” ಎಂಬುದನ್ನು ಹೇಗೆ ಅರ್ಥೈಸುತ್ತಾನೆ? ಅಲ್ಲಿಗೆ “ಹನ್ಯಂತೇ ಗಾವಃ” ಶಬ್ದವು ಸೃಷ್ಟಿಸಿರುವ ಸಮಸ್ಯೆಯ ಕಗ್ಗಂಟು ತಾನಾಗಿಯೇ ಬಿಚ್ಚಿಕೊಳ್ಳುತ್ತದೆ.

ಆದರೆ ರಾಲ್ಫ್ ಟಿ. ಎಚ್. ಗ್ರಿಫಿಥ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ಋಗ್ವೇದವನ್ನು ಅನುವಾದಿಸುವಾಗ ಈ ಋಕ್ಕಿಗೆ, “In Magha days are oxen slain” ಎಂದು ಅನುವಾದಿಸಿ ವೇದಾರ್ಥವನ್ನೇ ಹತ್ಯೆಗೈದಿದ್ದಾರೆ. ವೇದಗಳನ್ನು ಇಂಗ್ಲೀಷಿಗೆ ಭಾಷಾಂತರಿಸುವಾಗ ಯಾರೆಲ್ಲ ಇಂಥ ಸೂಕ್ಷ್ಮ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಅರ್ಥವ್ಯತ್ಯಾಸವಾಗದಂತೆ ಅನುವಾದಿಸಿದರೋ ಗೊತ್ತಿಲ್ಲ. ಆದರೆ ಒಂದಂತೂ ಸ್ಪಷ್ಟ. ನಮ್ಮ ಸಂಸ್ಕೃತಿ, ಸಂಪ್ರದಾಯ ಅಥವಾ ಪರಂಪರೆಗಳ ಹಿನ್ನೆಲೆಯಲ್ಲಿ ಬೆಳೆದರೆ ಮಾತ್ರ ನಾವು ನಮ್ಮ ವೇದಗಳನ್ನು ಸರಿಯಾಗಿ ಅರ್ಥೈಸಲು ಸಾಧ್ಯ.

ನಾವು ಚಿಕ್ಕವರಿದ್ದಾಗ ಯಾರಾದರೂ ನಿಮ್ಮ ಅಜ್ಜನ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂದರೆ ಅಜ್ಜ, ಅಜ್ಜಿ, ದೊಡ್ಡಪ್ಪ… ಎಂದು ಲಿಸ್ಟು ಮಾಡುತ್ತ ಅದರಲ್ಲಿ ಗಂಗೆ, ಗೌರಿ ಎಂದು ಆಕಳುಗಳನ್ನೂ ಸೇರಿಸುತ್ತಿದ್ದೆವು. ಬೆಳಿಗ್ಗೆ ಎದ್ದು ಆಕಳ ಹಾಲು ಹಿಂಡುವ ಅಜ್ಜಿ ತನ್ನ ಪಕ್ಕ ಬಂದು ಕೂತ ಪುಟ್ಟ ಮೊಮ್ಮಗುವಿಗೆ ಆಕಳ ಕುರಿತು ಯಾವ ದೃಷ್ಟಿಕೋನವನ್ನು ಬೆಳೆಸುತ್ತಾಳೆ? ಆ ದೃಷ್ಟಿಕೋನವನ್ನೇ ಎಳೆ ವಯಸ್ಸಿನಲ್ಲಿ ಕಲಿತ ಮಗು ಆಕಳನ್ನು ತಿನ್ನುವದರ ಕುರಿತು ಹೇಗೆ ತಾನೇ ಯೋಚಿಸಲು ಸಾಧ್ಯ? ಆ ಕಾಲದಲ್ಲಿ, ನೀವು ವೇದಪ್ರಾಮಾಣ್ಯ ಒಪ್ಪುವ ಬ್ರಾಹ್ಮಣರೇ ಆಗಿರಿ, ಇಲ್ಲವೇ ವೇದಪ್ರಾಮಾಣ್ಯ ಒಪ್ಪದ ಬೌದ್ಧ ವಿದ್ವಾಂಸರೇ ಆಗಿರಿ, ಸಸ್ಯಾಹಾರಿ ಬ್ರಾಹ್ಮಣನಾಗಿರಿ ಇಲ್ಲವೇ ಮಾಂಸಾಹಾರಿ ಬ್ರಾಹ್ಮಣನಾಗಿರಿ, ನಿಮ್ಮ ಮನೆಯಲ್ಲಿ ಆಕಳುಗಳಂತೂ ಇದ್ದೇ ಇರುತ್ತಿದ್ದವು. ಅದರ ಹಾಲೇ ನಿಮ್ಮ ಅಡುಗೆ ಮನೆಯಲ್ಲಿ ಬಳಸಲ್ಪಡುತ್ತಿತ್ತು. ನೀವು ಅಂಬೆಗಾಲಿಕ್ಕಲಾರಂಭಿಸಿದಾಗಿಂದ ದನಗಳ ಕೊಟ್ಟಿಗೆಯೆಡೆಗೆ ನಿಮ್ಮ ಸೆಳೆತವೂ ಆರಂಭವಾಗುತ್ತಿತ್ತು. ಈ ವಾತಾವರಣದಲ್ಲಿ ಬೆಳೆದ ಕನ್ನಡಿಗ ಹೇಗೆ “ದನ ಹೊಡೆಯುವದು” ಎಂಬುದಕ್ಕೆ ಕೊಲ್ಲುವುದು ಎಂದು ಅರ್ಥ ಮಾಡಲಾರನೋ, ಹಾಗೆಯೇ ಒಬ್ಬ ಸಂಸ್ಕೃತ ವಿದ್ವಾಂಸನೂ “ಅಘಾಸು ಹನ್ಯಂತೇ ಗಾವಃ” ಎಂಬ ಋಕ್ಕಿನ ಸಾಲನ್ನು ಆಕಳನ್ನು ಕೊಲ್ಲುವದು ಎಂದು ಅರ್ಥೈಸಲಾರ. ಆ ರೀತಿ ಯೋಚಿಸಲೂ, ಊಹಿಸಲೂ ಆತನಿಂದ ಸಾಧ್ಯವಿಲ್ಲ.

ಸಾವಿರಾರು ವರ್ಷಗಳಿಂದ ವೇದಗಳು ಅಸ್ತಿತ್ವದಲ್ಲಿದ್ದರೂ, ಹನ್ ಶಬ್ದಕ್ಕೆ ಕೊಲ್ಲು ಎಂಬ ಅರ್ಥವೇ ಪ್ರಧಾನವಾಗಿದ್ದರೂ ಈ ಋಕ್ಕಿನ ಕುರಿತು ಯಾವ ವಿದ್ವಾಂಸರೂ ತಲೆಕೆಡಿಸಿಕೊಳ್ಳದಿರುವದಕ್ಕೆ ಇದಿಷ್ಟೇ ಕಾರಣ. ನಮ್ಮ ಸಂಸ್ಕೃತಿಯ ಪರಿಚಯವೇ ಇಲ್ಲದವರು ಮನಬಂದಂತೆ ಅನುವಾದಿಸಿದ್ದರಿಂದ ನಮಗೆ ವೇದಗಳಲ್ಲಿ ಗೋಮಾಂಸ ಇತ್ತೇ ಇಲ್ಲವೇ ಎಂಬ ಅನಗತ್ಯ ಚರ್ಚೆ ಇಂದು ನಡೆಯುತ್ತಿದೆ. ನಮ್ಮ ಸಂಸ್ಕೃತಿಯು ಆಕಳುಗಳನ್ನು ಮನೆಮಂದಿಯಂತೆ ಪ್ರೀತಿಸುವದನ್ನು ಕಲಿಸುತ್ತದೆ. ಆದ್ದರಿಂದಲೇ ಆಕಳುಗಳನ್ನು ಇಂದ್ರನು ರಕ್ಷಿಸುವ ಕಥೆಗಳು ನಮ್ಮಲ್ಲಿ ಹೇರಳವಾಗಿ ಋಗ್ವೇದದಲ್ಲಿ ಕಂಡುಬರುತ್ತವೆ. ನಮ್ಮ ಸಂಸ್ಕೃತಿಯನ್ನು ಅನುಭವಿಸದ ಹೊರತು ನಮ್ಮ ಆಧ್ಯಾತ್ಮಿಕ ಸಾಹಿತ್ಯವನ್ನು ಸರಿಯಾಗಿ ಅರ್ಥೈಸಲಾಗದು.

12 ಟಿಪ್ಪಣಿಗಳು Post a comment
 1. Krishna Kulkarni
  ಏಪ್ರಿಲ್ 11 2016

  ನನ್ನನ್ನು ತುಂಬಾ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಉತ್ತಮ ಪರಿಹಾರ ನೀಡಿದ್ದೀರಿ. ಧನ್ಯವಾದಗಳು. ನಮ್ಮ ಸಮಸ್ಯೆ ಎಂದರೆ, ನಮಗೆ ಸಂಸ್ಕೃತದ ಜ್ಞಾನವಿಲ್ಲ. ಭಾಷಾಂತರ ಸಮಸ್ಯೆಗಿಟ್ಟುಕೊಳ್ಳುತ್ತದೆ. ವೇದದ ನಿಜ ಅರ್ಥಗೊತ್ತಾಗ ಬೇಕಿದ್ದರೆ, ಮೊದಲು ಸಂಸ್ಕೃತವನ್ನು ಚೆನ್ನಾಗಿ ಕಲಿಯ ಬೇಕು. ಬರಿ ಬ್ರಾಹ್ಮಣ ಭಾಷೆ ಎಂದು ಎಲ್ಲೊ ಓದಿದಿ ತುಣುಕುಗಳನ್ನು ಮನಬಂದಂತೆ ಅರ್ಥೈಸುವುದುದನ್ನೂ ಈಗ ನಿಲ್ಲಿಸ ಬೇಕಿದೆ.

  ಉತ್ತರ
 2. Simha SN
  ಏಪ್ರಿಲ್ 11 2016

  ಧನ್ಯವಾದಗಳು

  ಉತ್ತರ
 3. abcd
  ಏಪ್ರಿಲ್ 11 2016

  “ವೇದಗಳಲ್ಲಿ ಗೋಮಾಂಸ ಇತ್ತೇ ಇಲ್ಲವೇ ಎಂಬ ಅನಗತ್ಯ ಚರ್ಚೆ ಇಂದು ನಡೆಯುತ್ತಿದೆ”. ಎಂದಿರಿ. ನನಗೊಂದು ಪ್ರಶ್ನೆ. ನೀವು ಮಾಡಿದ್ದು ಅನಗತ್ಯ ಚರ್ಚೆ ಅಲ್ಲವೆ? ವೇದಗಳ ಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರಬಹುದು ಎಂದು ಒಪ್ಪಿಕೊಳ್ಳಲು ಅಷ್ಟು ನೋವೇಕೆ? ಮನೆಯಲ್ಲೇ ಸಾಕಿದ ಪ್ರೀತಿಯ ಕೋಳಿಯನ್ನು ಕಡಿದು ತಿಂದರೆ ತಪ್ಪಿಲ್ಲ, ಆಕಳು ತಿಂದರೆ ತಪ್ಪೇ? ಇಂಥ ಅಜ್ಞಾನ ಭರಿತ ಒಣ ಚರ್ಚೆಯೇ ಜಾಕೀರ ನಾಯ್ಕರಂಥ ದಡ್ಡ ಪ0ಡಿತರನ್ನು ಹುಟ್ಟುಹಾಕುವುದು. ಅಂದರೆ, ವೇದಗಳನ್ನು ತಪ್ಪುತಪ್ಪಾಗಿ ಅರ್ಥಮಾಡಿಕೊಳ್ಳಲು ಈ ರೀತಿಯ ಲೇಖನಗಳೇ ಕಾರಣ.

  ಉತ್ತರ
  • ಏಪ್ರಿಲ್ 11 2016

   “ವೇದಗಳಲ್ಲಿ ಗೋಮಾಂಸ ಇತ್ತೇ ಇಲ್ಲವೇ ಎಂಬ ಅನಗತ್ಯ ಚರ್ಚೆ ಇಂದು ನಡೆಯುತ್ತಿದೆ”. ಎಂದಿರಿ. ನನಗೊಂದು ಪ್ರಶ್ನೆ. ನೀವು ಮಾಡಿದ್ದು ಅನಗತ್ಯ ಚರ್ಚೆ ಅಲ್ಲವೆ? => ಅಲ್ಲ. ನಾನು ಇಲ್ಲಿ ವೇದಗಳಲ್ಲಿ ಗೋಮಾಂಸ ಇತ್ತೇ ಇಲ್ಲವೇ ಎಂಬ ಚರ್ಚೆ ಮಾಡಿಲ್ಲ. ಋಗ್ವೇದದ ವಾಕ್ಯವೊಂದನ್ನು ಹೇಗೆ ಪಾಶ್ಚಾತ್ಯರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದನ್ನು ಹೇಳಿದ್ದೇನೆ.

   ವೇದಗಳ ಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರಬಹುದು ಎಂದು ಒಪ್ಪಿಕೊಳ್ಳಲು ಅಷ್ಟು ನೋವೇಕೆ? => ವೇದಕಾಲದಲ್ಲಿ ಗೋಮಾಂಸ ಭಕ್ಷಣೆ ಇತ್ತು ಎನ್ನುವದಕ್ಕೆ ಐತಿಹಾಸಿಕ ಆಧಾರಗಳೇನಾದರೂ ಇವೆಯೇ? ಇಲ್ಲ ಎಂಬುದಕ್ಕೆ ಪರಂಪರಾಗತ ಸಂಪ್ರದಾಯಸ್ಥರು ವೇದಗಳಿಗೆ ಮಾಡಿರುವ ಭಾಷ್ಯಗಳೇ ಸಾಕ್ಷಿ ಎಂಬುದನ್ನು ಮೇಲಿನ ಲೇಖನದಲ್ಲಿ ವಿವರಿಸಿದ್ದೇನೆ.

   ಮನೆಯಲ್ಲೇ ಸಾಕಿದ ಪ್ರೀತಿಯ ಕೋಳಿಯನ್ನು ಕಡಿದು ತಿಂದರೆ ತಪ್ಪಿಲ್ಲ, ಆಕಳು ತಿಂದರೆ ತಪ್ಪೇ? => ಈ ಪ್ರಶ್ನೆ ಪಾಶ್ಚಿಮಾತ್ಯರು ಬಂದ ಮೇಲೆಯೇ ಹುಟ್ಟಿಕೊಂಡಿದ್ದು. ಅದರ ಮೊದಲು ಗೋಮಾಂಸ ಬೇಕು ಎಂಬುದರ ಕುರಿತು ಯಾವ ಚರ್ಚೆಯೂ ನಿಮಗೆ ಸಿಗುವದಿಲ್ಲ.

   ವೇದಗಳನ್ನು ತಪ್ಪುತಪ್ಪಾಗಿ ಅರ್ಥಮಾಡಿಕೊಳ್ಳಲು ಈ ರೀತಿಯ ಲೇಖನಗಳೇ ಕಾರಣ. => ವೇದಗಳನ್ನು ಸಾಯಣರು ಹೇಗೆ ಅರ್ಥಾನ್ವಯ ಮಾಡಿದ್ದಾರೋ ಅದನ್ನು ಹಾಗೆಯೇ ಬರೆದಿದ್ದೇನೆ. ಸಾಯಣರ ಅರ್ಥಾನ್ವಯವು ಪಾಶ್ಚಾತ್ಯ ವಿದ್ವಾಂಸರ ಅನುವಾದಕ್ಕಿಂತ ಏಕೆ ಭಿನ್ನವಾಗಿವೆ? ಪಾಶ್ಚಾತ್ಯರ ಅನುವಾದ ಏಕೆ ನಮಗೆ ಅನುಭವ ವಿರುದ್ಧವಾಗಿ ಕಾಣುತ್ತದೆ ಎನ್ನುವದನ್ನೂ ವಿವರಿಸಿದ್ದೇನೆ. ನಿಮಗೆ ಒಂದು ವೇಳೆ ಸಾಯಣರ ಅರ್ಥಾನ್ವಯವೇ ತಪ್ಪು, ಪಾಶ್ಚಿಮಾತ್ಯರದ್ದೇ ಸರಿ ಎಂದಾದರೆ ಅದಕ್ಕೆ ತಕ್ಕ ಆಧಾರಗಳನ್ನು ನೀಡಬೇಕಾಗುತ್ತದೆ. ಯಾವ ಸಂಪ್ರದಾಯಸ್ಥ ಭಾಷ್ಯಕಾರ ಈ ಋಕ್ಕನ್ನು ಗೋಹತ್ಯೆ ಎಂಬರ್ಥದಲ್ಲಿ ಬಳಸಿದ್ದಾನೆ?

   ಉತ್ತರ
 4. ಭೀಮಗುಳಿ ಶ್ಯಾಮ್
  ಏಪ್ರಿಲ್ 11 2016

  ನನಗೂ ಈ ಬಗ್ಗೆ ಸಂಶಯ ಇತ್ತು . ಅಂತಹ ಶ್ಲೋಕಗಳ ನಿಜವಾದ ಅರ್ಥ ಯಾವುದು .ಈಗ ಅರ್ಥವಾಯ್ತು. ಭಾಷೆಯ ಜೊತೆಗೆ ಸಂಸ್ಕೃತಿಯ ಬಗ್ಗೆ ತಿಳಿದರೆ ಮಾತ್ರ ಇಂತಹ ಗೊಂದಲಗಳಿಗೆ ಉತ್ತರ ತಿಳಿಯುತ್ತದೆ. ಉತ್ತಮ ವಿವರಣೆ .

  ಉತ್ತರ
 5. ರಂಜನಾ ರಾಮ್ ದುರ್ಗ
  ಏಪ್ರಿಲ್ 11 2016

  ದನ ಹೊಡೆಯುವ ಉದಾಹರಣೆಯ ಮೂಲಕ ಪಾಶ್ಚಾತ್ಯರ ಸಮಸ್ಯೆಯನ್ನು ಸುಲಭವಾಗಿ ನಿರೂಪಿರುವಿರಿ ವಿನಾಯಕ ಸರ್

  ಉತ್ತರ
 6. vasu
  ಏಪ್ರಿಲ್ 11 2016

  ವೇದಗಳು ಗೋವಿನ ಬಗ್ಗೆ ಏನು ಹೇಳುತ್ತದೆ ಎಂದು ಸಂಕ್ಷಿಪ್ತವಾಗಿ ತಿಳಿಯೋಣ.
  1. ಯಜಮಾನಸ್ಯ ಪಶೂನ್ಪಾಹಿ [ ಯಜು 1.1] ಯಜ್ಞ ಕರ್ತನ ಪಶುಗಳನ್ನು ಪಾಲಿಸು.
  2. ಅಶ್ವಂ ಮಾ ಹಿಂಸೀಃ, ಗಾಂ ಮಾಂ ಹಿಂಸೀಃ [ ಯಜು 13.43] ಅಶ್ವಗಳನ್ನು ಹಿಂಸಿಸಬೇಡ, ಗೋವನ್ನು ಹಿಂಸಿಸಬೇಡ,
  3. ಉತ್ಸಂ ಮಾ ಹಿಂಸೀಃ [ ಯಜು 13.49 ] ಎತ್ತನ್ನು ಹಿಂಸಿಸಬೇಡ
  4. ಅನಾಗೋ ಹತ್ಯಾ ವೈ ಭೀಮಾಃ [ಅಥರ್ವ 10.129] ನಿಷ್ಪಾಪವಾದ ಯಾವುದೇ ಪ್ರಾಣಿಯನ್ನು ಕೊಲ್ಲುವುದು ಮಹಾ ಪಾಪ
  ಇವೆಲ್ಲವೂ ಪ್ರಾಣಿಗಳನ್ನು ಕೊಲ್ಲದಂತೆ ಇರುವ ನಿಷೇಧಾತ್ಮಕ ಆದೇಶವನ್ನು ಕೊಡುವ ಮಂತ್ರಗಳು. ವೇದಗಳಲ್ಲಿ ಗೋ ರಕ್ಷಣೆ ಕುರಿತಂತೆ ಅನೇಕ ನಿರ್ದಿಷ್ಟ ಮಂತ್ರಗಳೂ ಇವೆ. ವಿಸ್ತಾರದ ಭಯದಿಂದ ಕೆಲವೊಂದು ಮಂತ್ರಗಳನ್ನೇ ಇಲ್ಲಿ ನೀಡಿದೆ.
  1 ಸ್ತೋತಾ ಮೇ ಗೋ ಸಖಾ ಸ್ಯಾತ್ [ ಋಗ್ವೇದ8.14.1 ಯಾರು ನನ್ನನ್ನು ಸ್ತುತಿಸುವರೋ ಅವರು ಗೋವಿನ ಮಿತ್ರರೇ ಆಗಿರುತ್ತಾರೆ. ಎಂದರೆ ಪರಮಾತ್ಮನ ಭಕ್ತನು ಗೋ ಭಕ್ತನೂ ಆಗಿರುತ್ತಾನೆ.
  2.ಪ್ರಣು ವೋಚಂ ಚಿಕಿತ್ಸೇಷು ಜನಾಯಾ ಮಾ ಗಾಮಾನಾಗಾಮದಿತಿಂ ವಧಿಷ್ಠ [ಋಗ್ವೇದ8.101.5] ಎಲ್ಲಾ ವಿವೇಕಶಾಲಿ ವೈಕ್ತಿಗಳು ಗೋವನ್ನು ಕೊಲ್ಲಬಾರದು. ಏಕೆಂದರೆ ಅವು ನಿಷ್ಪಾಪಿಗಳು ಮತ್ತು ಕೊಲ್ಲಲಾಗದು.
  3. ಗಾಂ ಮಾ ಮಾವೃಕ್ತ್ ಮತ್ಯೋಂ ದಮ್ರಚೇತಾ [ಋಗ್ವೇದ 8.101.16] ಯಾವುದೇ ಕಠಿಣ ಹೃದಯವಂತನೂ ಗೋವನ್ನು ಕೊಲ್ಲಬಾರದು.
  ಸಾಮವೇದ ಮತ್ತು ಅಥರ್ವವೇದಗಳಲ್ಲೂ ಸಹ ಗೋರಕ್ಷಣೆ ಭೋದಿಸುವ ಮತ್ತು ಹಂತಕರಿಗೆ ಶಿಕ್ಷೆಯನ್ನು ನೀಡವಂತೆ ಭೋದಿಸುವ ಅನೇಕ ಮಂತ್ರಗಳಿವೆ.
  ಇನ್ನು ಗೋಹಂತಕರಿಗೆ ಶಿಕ್ಷೆಯನ್ನೂ ವೇದಗಳು ವಿಧಿಸಿವೆ. ಉದಾಹರಣೆಗೆ,
  1. ಅಂತಕಾಯ ಗೋಘತಮ್ [ ಯಜುರ್ವೇದ 30.18] ಯಾರು ಗೋವನ್ನು ಕೊಲ್ಲುತ್ತಾರೋ ಅವರನ್ನು ಮರಣ ದಂಡನೆಗೆ ಒಳಪಡಿಸಬೇಕು.
  2. ಯೋ ಅಘನ್ಯಾ ಭರತಿ ಕ್ಷೀರಮಾಘ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ [ ಋಗ್ವೇದ 10.87.16] ರಾಜನೇ!, ಯಾರು ಗೋವನ್ನು ಕೊಲ್ಲುತ್ತಾರೋ,ಮತ್ತು ಅದರ ಹಾಲನ್ನು ಅಪಹರಿಸುತ್ತಾರೋ, ಅವರಿಗೆ ತಲೆತೆಗೆಯುವ ಶಿಕ್ಷೆಯನ್ನು ವಿಧಿಸು.
  ವೇದಗಳಲ್ಲಿ ಗೋವನ್ನು ಅಘ್ನ್ಯಾ ಎಂದು ಸಂಭೋದಿಸಿದೆ. ಅಘ್ನ್ಯಾ ಎಂದರೆ ಕೊಲ್ಲಬಾರದು ಎಂದು. ಮತ್ತು ಗೋವನ್ನು ಕೊಲ್ಲಬಾರದು ಎಂದ ಮೇಲೆ ಸಹಜವಾಗಿ ಗೋವನ್ನು ಕೊಲ್ಲುವವರಿಗೆ ದಂಡನೆಯನ್ನೂ ವಿಧಿಸಿದೆ. ಇನ್ನು ಕೆಲವರು ಗೋಮೇಧ ಮತ್ತು ಅಶ್ವಮೇಧ ಎಂಬ ಪದಗಳಲ್ಲಿ ಗೋವನ್ನು ಮತ್ತು ಅಶ್ವವನ್ನು ವಧಿಸುವುದು ಎಂದು ಅರ್ಥ್ಯಸುತ್ತಾರೆ. ಇವರಿಗೆ ಗೋ ಎಂದರೆ ಕೇವಲ ಹಸು ಮತ್ತು ಅಶ್ವವೆಂದರೆ ಕೇವಲ ಕುದುರೆ ಎಂಬ ಬಾವನೆ ಇದೆ. ಇದು ತಪ್ಪು. ಸಂದರ್ಬೋಚಿತವಾಗಿ ಅದರ ಅರ್ಥವನ್ನು ವಿಶ್ಲೇಷಿಸಿದರೆ ಅವುಗಳ ಅರ್ಥ ಇಂದ್ರಿಯಗಳು ಮತ್ತು ರಾಷ್ಟ್ರ ಎಂದಾಗುತ್ತದೆ. ಇವುಗಳ ನಿಯಂತ್ರಣವೇ. ಮೇಧ.. ಯಜ್ಞಗಳಲ್ಲಿ ಹಿಂಸೆ ಅಸಮರ್ಥನೀಯವಾದುದು. ಯಜ್ಞ ವೆಂದರೆ ಅಧ್ವರ ಎಂದರೆ ಅಹಿಂಸನೀಯವಾದುದು. ಹಾಗಾಗಿ ಯಜ್ಞಗಳು ಅಹಿಂಸನೀಯವಾದುದು. ಹಿಂಸಾತ್ಮಕ ಯಜ್ಞ ಯಜ್ಞವೇ ಅಲ್ಲ. ಈ ಹಿನ್ನೆಲೆಯಲ್ಲಿ ಗೋವನ್ನು ಕೊಲ್ಲಬಾರದು ಮತ್ತು ಗೋಹತ್ಯೆ ನಿಷೇಧ ಜಾರಿಯಾಗಬೇಕು ಎಂದು ಆರ್ಯ ಸಮಾಜದ ಖಚಿತ ನಿಲುವಾಗಿದೆ.

  ಉತ್ತರ
 7. srivathsa agnihothri
  ಏಪ್ರಿಲ್ 11 2016

  ವೇದ ಪದಗಳಿಗೆ ಅರ್ಥ ಹೇಳುವಾಗ ಎಚ್ಚರ ಇರಬೇಕು ಎಂದು ಶ್ರೀ ಮಧ್ವಚಾರ್ಯರು ಮತ್ತು ಪರಂಪರೆಯಲ್ಲಿ ಬಂದ ಅಪರೋಕ್ಷ ಜ್ಞಾನಿಗಳು ಹೇಳಿದ್ದರೆ ಕಾರಣ ವೇದ ಉಪನಿಷತ್ತು ಮಹಾಭಾರತ ರಾಮಯಣಗಳಲ್ಲಿ ಗೌಪ್ಯವಾದ ಅರ್ಥಗಳಿವೆ ಅವುಗಳನ್ನು ಸಾಮಾನ್ಯವಾಗಿ ಕಾಣಬಾರದು ಮತ್ತು ಅರ್ಥೈಸಿಸಬಾರದು ಇದರಿಂದ ಅನಾರ್ಥವಾಗುತ್ತದೆ…ವಿಷ್ಣುಸಹಸ್ರನಾಮದ ಒಂದು ಪದಕ್ಕೆ ೧೦೦.ಮಹಾಭಾರತ ರಾಮಯಣ ಪದಗಳಿಗೆ ಹತ್ತು ಮತ್ತು ಒಂದು ವೇದಪದಗಳಿಗೆ ಮೂರು ಅರ್ಥಗಳನ್ನು ಹೇಳಿದ್ದಾರೆ ಅಪರೋಕ್ಷ ಜ್ಞಾನಿಗಳು ಅವರು ಕೊಟ್ಟ ಅರ್ಥ ಟಿಪ್ಪಣಿಗಳು ಅಧ್ಯಾಯನ ಮಾಡಿ ಅದರ ಸಹಾಯದಿಂದ ವೇದ ಹಾಗು ಾಸ್ತ್ರರ್ಥಾ ಮಾಡಿದರೆ ಯಾವ ಅನರ್ಥಾವು ಹಾಗುವುದಿಲ್ಲ

  ಉತ್ತರ
 8. Sudeep Shetty
  ಏಪ್ರಿಲ್ 11 2016

  Hello

  Apologizing for replying in English , i have couple of things to say it on your article

  Either i am confused or you are saying some thing different , Kindly help me to understand this
  1. Are you saying all of the Books ( Be it Veda , Upanishads etc) forbidden the Beef Eating?
  2. Or Are you saying wherever it stated it was all distorted by West or our poor Understanding on Sanskrit ??

  Because if you see Jakir Naik any Video on Beef Eating he gives this nonsensical way of argument by quoting Verses wither in Veda or in Upanishads or in any other text , He has to do it because he has the only way of defending it , because he doesn’t have any alternative way of thinking about human being , If he does whole Islamic Foundation or to say in simple terms whole religion Foundation will collapse .

  So If you are defending Only this Verse of Rigveda by saying this was Distorted by our poor understanding on Sanskrit or west its fine , If you are defending this is the reason i mean because it was written in some scripture that’s why we Hindus not eating Beef i have very serious problem and contradiction on your view .

  Because i believe we certainly shouldn’t have any issue in accepting that in Scripture specially in Veda Beef eating is mentioned , But that certainly not the reason why we eat or not eat , As Balagangadhar says we didn’t eat COW because we didn’t feel like its eatable. As tradition doesn’t need any reason we not eat because our father mother didnt eat it .

  Regards

  Sudeep

  ಉತ್ತರ
  • vinayak hampiholi
   ಏಪ್ರಿಲ್ 12 2016

   Hi Sudeep,

   We never considered or felt cows are edibles. I agree with this point of Balagangadhara and I have conveyed the same in my article. (ಆ ದೃಷ್ಟಿಕೋನವನ್ನೇ ಎಳೆ ವಯಸ್ಸಿನಲ್ಲಿ ಕಲಿತ ಮಗು ಆಕಳನ್ನು ತಿನ್ನುವದರ ಕುರಿತು ಹೇಗೆ ತಾನೇ ಯೋಚಿಸಲು ಸಾಧ್ಯ?)

   I am not saying here, that we do not eat beef just because it is prohibited in Veda. In fact, it is the other way around. We do not think cows are edible. Hence the same culture is reflected in the Veda. Rigweda contains lot of stories where Indra protects cows from deamons. These stories have promoted Vedic people to protect cows like the way ಪುಣ್ಯಕೋಟಿ promoting us to love the cows today.

   When a kannadiga says “ದನ ಹೊಡೆಯುವದು” a person born and brought up in Vedic traditions will never take its meaning as beating or killing the cow. It is perfectly normal to use this word as taking care of the cow. It is possible to grasp in this meaning only because we do not think that cows are edible. But a western who does not have the background of our culture will automatically translate this as hitting or killing the cow.

   The same analogy works here. The word ಹನ್ಯತೇ means to kill or to beat or to cut. But the word ಗಾವಃ ಹನ್ಯಂತೇ is not taken in the meaning of killing the cows by the traditional people like Sayana. Sayana did not translate this as killing the cow. Instead he translated it as forcing the cows to move ahead. Why did he translated so? It is only because he never considered cows are edible. so ಗಾವಃ ಹನ್ಯಂತೇ can never be taken as killing of cows by a sanskrit scholar with proper Vedic traditional background. If we do not have that background, then we will end up in translating it as “slaying of cows.”

   ಉತ್ತರ
 9. Anil Talikoti
  ಏಪ್ರಿಲ್ 12 2016

  ಒಳ್ಳೆಯ ಲೇಖನ.
  ‘ತಬ್ಬಲಿಯು ನೀನಾದೆ ಮಗನೆ’ ಯ ಕಾಳಿಂಗಜ್ಜನ ಪಾತ್ರ ನೆನಪಿಸಿಕೊಂಡರೆ ಇದರ ಬಗ್ಗೆ ಯಾವ ಗೊಂದಲವೂ ಇರುವದಿಲ್ಲ.
  ಈ ಕಲ್ಪನೆಗಿಂತ ಭಿನ್ನವಾದ ಕಲ್ಪನೆ ಬರಲದೆಂತು ಸಾಧ್ಯ?

  ಉತ್ತರ
 10. Rohini
  ಡಿಸೆ 29 2017

  ಅನೇಕ ಬಾರಿ ಭಾಷೆಗಳನ್ನು ಸರಿಯಾಗಿ ಅರಿಯದೆ ಬರೇ copy ಮಾಡುವ ಜನರಿಂದ ಪ್ರಾಚೀನದಲ್ಲಿ ಹಲವು ತಪ್ಪುಗಳು ಉಂಟಾಗುತ್ತಲೇ ಇದ್ದವು. ಅಂತಹುದರಲ್ಲಿ ಮೇಲಿನ ಲೇಖನದಲ್ಲಿ ಉಲ್ಲೇಖಿಸಿದ ಅನೇಕ ಸಂಶಯಗಳು copy ಮಾಡಿದ ಜನರಿಂದಲೂ ಆಗಿರುವ ಸಂಭವವಿರುತ್ತದೆ. ಸಂಸ್ಕೃತವಂತೂ ಸಣ್ಣ ತಪ್ಪಾದರೂ ವಿಪರೀತಾರ್ಥವನ್ನು ಕೊಡುವ ಭಾಷೆಯಾಗಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments