ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 13, 2016

7

ಇದೊಂದು ಸಣ್ಣ ಸಂಗತಿ ತಿಳಿದಿದ್ದರೆ ಆ ಸಾವನ್ನು ಯಾರಾದರೂ ತಪ್ಪಿಸಬಹುದಿತ್ತು

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

harishjpg-08-1457415172ಫೆಬ್ರವರಿ 17ನೇ ತಾರೀಖು ಬುಧವಾರದ ಪತ್ರಿಕೆಯಲ್ಲಿ ಪ್ರಕಟವಾದ ಆ ವರದಿಯನ್ನು ಹಾಗ್‍ಹಾಗೇ ಕೊಡುವುದಾದರೆ ಅದು ಹೀಗಿದೆ: ಹುಟ್ಟೂರಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಯಲ್ಲಿ ಓಟು ಹಾಕಲೆಂದು ಹರೀಶ್ ಶನಿವಾರ ಊರಿಗೆ ತೆರಳಿದ್ದರು. ತನ್ನ ಕುಟುಂಬದ ಜತೆ (ತಾಯಿ ಮತ್ತು ಅಣ್ಣ) ಒಂದಷ್ಟು  ಹೆಚ್ಚಿನ  ಸಮಯ  ಕಳೆಯುವ   ಉದ್ಧೇಶದಿಂದ  ಸೋಮವಾರ   ರಜೆ   ಹಾಕಿದ್ದರು. ಮಂಗಳವಾರ  ಆಫೀಸಿದ್ದುದರಿಂದ  ಊರಿಂದ  ಮುಂಜಾನೆ  ಬೇಗನೇ  ಹೊರಟಿದ್ದರು.  ಬೈಕು ಚಲಾಯಿಸುತ್ತ  ಬರುತ್ತಿದ್ದಾಗ,  ತಿಪ್ಪಗೊಂಡನಹಳ್ಳಿಯ  ಸಮೀಪ,  ಹಿಂದಿನಿಂದ  ಒಂದು   ಲಾರಿ ಅವರನ್ನು ಓವರ್‍ಟೇಕ್ ಮಾಡುವ ಯತ್ನದಲ್ಲಿತ್ತು. ಲಾರಿ ಅತಿ ವೇಗದಲ್ಲಿದ್ದುದರಿಂದ, ಅದು ತನ್ನ ತೀರಾ ಹತ್ತಿರ ಬಂದಾಗ ಹರೀಶ್ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದರು. ಆದರೆ, ಲಾರಿ ಮಾತ್ರ ನಿಲ್ಲುವ ಸೂಚನೆ ತೋರಿಸಲಿಲ್ಲ. ಅದು, ಯಮವೇಗದಲ್ಲಿ ಮುಂದುವರಿದು ಹರೀಶರ  ದೇಹದ  ಮೇಲೆಯೇ  ಹಾದುಹೋಯಿತು.  ಲಾರಿಯ   ಮುಂಭಾಗದ  ಚಕ್ರಗಳು ಅವರ ಸೊಂಟದ ಮೇಲೆ ಹರಿದುಹೋದದ್ದರಿಂದ ದೇಹ ಇಬ್ಭಾಗವಾಯಿತು. ಸೊಂಟಕ್ಕಿಂತ ಮೇಲಿನ ಭಾಗ ರಸ್ತೆಯ ಒಂದು ಬದಿಗೆ ಬಿದ್ದರೆ ಕಾಲುಗಳು ಇನ್ನೊಂದು ಕಡೆಗೆ ಚಿಮ್ಮಿದವು.  ಕ್ಷಣಮಾತ್ರದಲ್ಲಿ  ನಡೆದುಹೋದ  ಈ  ರುದ್ರಭೀಕರ  ಅಪಘಾತವನ್ನು   ನೋಡಿ ಜನ ಗುಂಪುಗೂಡುವುದಕ್ಕೆ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ. ಆದರೆ, ತುಂಡಾಗಿಬಿದ್ದ ನತದೃಷ್ಟನ ಸಹಾಯಕ್ಕೆ ಧಾವಿಸುವ ಬದಲು ಗುಂಪುಗೂಡಿದ್ದ ಜನ ಆ ದೃಶ್ಯವನ್ನು ತಮ್ಮ  ಮೊಬೈಲುಗಳಲ್ಲಿ  ಸೆರೆ  ಹಿಡಿಯುವುದರಲ್ಲಿ  ನಿರತರಾದರು.  ಕೆಲವರು  ಫೋಟೋ ಹೊಡೆದರು, ಇನ್ನು ಕೆಲವರು ಆ ಯಾತನಾ ಕ್ಷಣಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡರು. ಘಟನೆ ನಡೆದು ಕಾಲುಗಂಟೆಯ ನಂತರವಷ್ಟೇ ನೆಲಮಂಗಲದಿಂದ ಪೊಲೀಸ್ ಜೀಪು ಮತ್ತು ಅಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದವು. ಅದೇ ಸಮಯದಲ್ಲಿ ಯಾವುದೋ ವಿವಿಐಪಿ ಆ ದಾರಿಯಲ್ಲಿ ಹೋಗುವ ಕಾರ್ಯಕ್ರಮವಿದ್ದುದರಿಂದ, ಇಡೀ ರಸ್ತೆ ಟ್ರಾಫಿಕ್‍ನಿಂದ ತೊನೆದಾಡುತ್ತಿತ್ತು. ಅಂಥ ಕಿಷ್ಕಿಂಧೆಯಲ್ಲಿ ದಾರಿ ಮಾಡಿಕೊಂಡು ಅಂಬ್ಯುಲೆನ್ಸ್ ಆಸ್ಪತ್ರೆ ತಲುಪಿದಾಗ 9 ಗಂಟೆ. ಅಷ್ಟು ಹೊತ್ತು ಕಾಯುವ ವ್ಯವಧಾನ ಹರೀಶ್ ಪ್ರಾಣಪಕ್ಷಿಗೆ ಇರಲಿಲ್ಲ.

ಹರೀಶ್ ತೀರಿಕೊಂಡರು. ಹಸಿಹಸಿ ಇಪ್ಪತ್ತನಾಲ್ಕರ ಯುವಕ ಹೀಗೆ ರಸ್ತೆಯಲ್ಲಿ ಇಬ್ಭಾಗವಾಗಿ ಬಿದ್ದು ಸಾಯುವುದು ಅದೆಷ್ಟು ದೊಡ್ಡ ದುರಂತ! ಹೇಡಿಗಳಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಿಗಾಗಿ ಶ್ರದ್ಧಾಂಜಲಿ ಅರ್ಪಿಸಲು, ದಿನರಾತ್ರಿ ಎಂಬಂತೆ ತಿಂಗಳಿಡೀ ಸುದ್ದಿ ಬಿತ್ತರಿಸಲು, ಪುಂಖಾನುಪುಂಖವಾಗಿ ಕಾವ್ಯ ಹೊಸೆಯಲು ನಮಗೆ ಪುರುಸೊತ್ತಿದೆ, ಆಸಕ್ತಿಯೂ ಇದೆ. ಆದರೆ ತನ್ನ ಸಾಯುವ ಕೊನೇಕ್ಷಣದಲ್ಲೂ ಕೈಯೆತ್ತಿ “ನನ್ನ ದೇಹವನ್ನು ದಾನ ಮಾಡಿ, ಕಣ್ಣುಗಳನ್ನು ದಾನ ಮಾಡಿ” ಎಂದು ಬೇಡಿಕೊಳ್ಳುತ್ತಿದ್ದ ಹರೀಶ್, ಅದ್ಯಾಕೋ ನಮ್ಮ ಮಾಧ್ಯಮದಲ್ಲೂ ಎಲ್ಲೋ ಒಂದೆರಡು ಕಾಲಮ್ ಸುದ್ದಿಗಷ್ಟೇ ಸೀಮಿತರಾಗಿ ಹೋಗುತ್ತಾರೆ. ಅವರ ಜಾತಿ ಯಾವುದು ಗೊತ್ತಿಲ್ಲ; ಯಾವ ಪಕ್ಷಕ್ಕೆ ನಿಷ್ಠರಾಗಿದ್ದರು ಗೊತ್ತಿಲ್ಲ; ಆದರೂ ಇತ್ತೀಚೆಗೆ ಸುಖಾಸುಮ್ಮನೆ ಹೀರೋಗಳಾದ ಹತ್ತಾರು ವ್ಯಕ್ತಿಗಳಿಗಿಂತ ಹರೀಶ್ ನೂರು ಪಾಲು ಎತ್ತರದ ವ್ಯಕ್ತಿತ್ವದವರು ಎಂಬುದರಲ್ಲಿ ಎರಡು ಮಾತೇ ಇಲ್ಲ. ಇಂಥ ಒಬ್ಬ ಯುವಕ ನಮ್ಮ ರಾಜ್ಯದ ಹೆದ್ದಾರಿಯಲ್ಲಿ ಅನ್ಯಾಯವಾಗಿ ಸಾವಿಗೀಡಾದಾಗ ಮುಖ್ಯಮಂತ್ರಿಗಳು ತನ್ನ ಎರಡು ಹನಿ ಕಣ್ಣೀರು ಸುರಿಸಿದ್ದರೆ, ಒಂದೆರಡು ಸಾಲುಗಳನ್ನು ಜಾಲತಾಣದಲ್ಲಿ ಬರೆದುಕೊಂಡಿದ್ದರೆ ಏನನ್ನು ಕಳೆದುಕೊಳ್ಳುತ್ತಿದ್ದರು? ರೋಹಿತ್ ವೇಮುಲನ ಸಾವಿಗೆ ಮರುಗಿದವರಿಗೆ ಹರೀಶ್‍ಗಾಗಿ ಅಷ್ಟೂ ಮಾಡಲು ಸಾಧ್ಯವಿರಲಿಲ್ಲವೆ? ಅವರ ವಿಷಯ ಬಿಡಿ; ನಮ್ಮ ಜನರಿಗೇನಾಗಿದೆ? ಹೆದ್ದಾರಿಯಂಥ ಜಾಗದಲ್ಲಿ ಜನರ ಓಡಾಟವೇನೂ ವಿರಳವಿರುವುದಿಲ್ಲ. ಮನಸ್ಸು ಮಾಡಿದ್ದರೆ ರಸ್ತೆಯಲ್ಲಿ ಚೆಲ್ಲಿಬಿದ್ದ ಹರೀಶ್ ದೇಹವನ್ನು ಆ ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಬಹುದಿತ್ತು. ಆದರೆ, ತಂತಮ್ಮ ಮೊಬೈಲು ಹಿಡಿದು ಇದೇನೋ ಆಟವಿರಬೇಕೆಂಬಂತೆ ವಿಡಿಯೋ ಚಿತ್ರೀಕರಿಸುತ್ತಿದ್ದ ಜನರಿಗೆ ಅದೇ ಕೈಗಳಿಂದ ಕಣ್ಣೆದುರಲ್ಲಿ ನೀಗಿಹೋಗುತ್ತಿದ್ದ ಜೀವವನ್ನು ಉಳಿಸಬೇಕೆಂಬ ಪ್ರಜ್ಞೆ ಮಾತ್ರ ಕೆಲಸ ಮಾಡದೆ ಹೋಯಿತು. ಇದನ್ನು ನೋಡಿದಾಗ, 1964ರಲ್ಲಿ ನಡೆದುಹೋದ ಕಿಟ್ಟಿ ಜಿನೋವೀಸ್ ಪ್ರಕರಣ ನೆನಪಿಗೆ ಬರುತ್ತದೆ.

ನ್ಯೂಯಾರ್ಕ್ ನಗರದಲ್ಲಿ ಕೆಲಸ ಮಾಡುತ್ತಿದ್ದ ಕಿಟ್ಟಿ ಜಿನೋವೀಸ್ ಎಂಬ 28ರ ಯುವತಿ 1964ರ ಮಾರ್ಚ್ 13ರಂದು ಮನೆಗೆ ಬರುತ್ತಿದ್ದ ದಾರಿಯಲ್ಲಿ ವಿನಾಕಾರಣ ಒಬ್ಬನ ಆಕ್ರಮಣಕ್ಕೆ ಒಳಗಾದಳು. ಅನಿರೀಕ್ಷಿತ ದಾಳಿಯಿಂದ ಬೆಚ್ಚಿಬಿದ್ದ ಕಿಟ್ಟಿ ಸಹಾಯಕ್ಕಾಗಿ ಕಿರುಚಿದಳು. ಆದರೆ ಅಷ್ಟರಲ್ಲಿ ಆ ವ್ಯಕ್ತಿ ಈಕೆಯನ್ನು ಹೊಟ್ಟೆ, ಎದೆ, ಮುಖಗಳಲ್ಲಿ ಇರಿಯಲು ತೊಡಗಿಯಾಗಿತ್ತು. ಆಕೆಯನ್ನು ಎಲ್ಲೆಂದರಲ್ಲಿ ಚಾಕುವಿನಿಂದ ಚುಚ್ಚಿ ಅರೆಜೀವ ಮಾಡಿದ ಮೇಲೆ ಆತ ಮರೆಗೆ ಹೋದ. ಹತ್ತು ನಿಮಿಷಗಳ ನಂತರ ಮರಳಿ ಬಂದು, ಮತ್ತಷ್ಟು ಭೀಕರವಾಗಿ ಇರಿದು ಆಕೆ ಕೊನೆಯುಸಿರೆಳೆಯುವುದನ್ನು ನೋಡಿ ಸಮಾಧಾನಗೊಂಡು ಪರಾರಿಯಾದ. ದುರಂತವೆಂದರೆ, ಈ ಘಟನೆ ನಡೆಯುತ್ತಿದ್ದಾಗ ಅದನ್ನು ಸುಮಾರು 38 ಜನ ನೋಡುತ್ತನಿಂತಿದ್ದರು! ಕಿಟ್ಟಿ ಒಬ್ಬಳೇ ರಕ್ತದ ಮಡುವಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾಗಲೂ ಅವರಲ್ಲಿ ಯಾರೊಬ್ಬರೂ ಸಹಾಯಕ್ಕೆ ಮುಂದೆ ಬರಲಿಲ್ಲ. ಮರುದಿನ ಈ ಘಟನೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದಾಗಿ ಒಂದು ವಾರ ಹತ್ತುಹಲವು ಪತ್ರಿಕೆಗಳಲ್ಲಿ ವಿಸ್ತಾರವಾದ ವಿವರಗಳುಳ್ಳ ವರದಿಗಳು ಬಂದವು. ಈ ಘಟನೆ ಆ ಕಾಲಕ್ಕೆ ಅದನ್ನು ಓದಿದವರ ರಕ್ತವನ್ನು ಹೇಗೆ ಕುದಿಸಿತ್ತೆಂದರೆ ಪ್ರಸಿದ್ಧ ಕತೆಗಾರ ಹರ್ಲಾನ್ ಎಲ್ಲಿಸನ್, ಕೃತ್ಯವನ್ನು ನೋಡುತ್ತ ನಿಂತಿದ್ದವರನ್ನು “ಮೂವತ್ತೆಂಟು ಸೂಳೆಮಕ್ಕಳು” ಎಂದೇ ಜರೆದಿದ್ದ. ಈ ವ್ಯಕ್ತಿಗಳನ್ನು ಘಟನೆಯ ಬಳಿಕ ಮಾತಾಡಿಸಿದಾಗ ಅವರ ಪ್ರತಿಕ್ರಿಯೆಗಳು ಹೆಚ್ಚುಕಡಿಮೆ ಒಂದೇ ಇದ್ದವು. ಅವರಿಬ್ಬರೂ ಪ್ರೇಮಿಗಳು, ಜಗಳಾಡುತ್ತಿರಬೇಕೆಂದು ಭಾವಿಸಿದೆವು; ಆಕೆಗೆ ಸಹಾಯ ಬೇಕೆಂದು ನಮಗೆ ಗೊತ್ತಿರಲಿಲ್ಲ; ಬೇರೆ ಯಾರಾದರೂ ಸಹಾಯಹಸ್ತ ಚಾಚಬಹುದೆಂದು ಕಾದೆವು; ಯಾರೂ ಮುಂದೆ ಬರದ ಕಾರಣ ಈ ಘಟನೆಯಲ್ಲೇ ಏನೋ ತೊಂದರೆ ಇದ್ದಿರಬೇಕೆಂದು ಬಗೆದೆವು – ಹೀಗೆ ನಾನಾ ಪ್ರತಿಕ್ರಿಯೆಗಳು ಬಂದವು. ಇದು, ಸಾರ್ವಜನಿಕರ ಸಮ್ಮುಖದಲ್ಲಿ ದುರ್ಘಟನೆಯೊಂದು ನಡೆದುಹೋದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಗಂಭೀರವಾಗಿ ಅಧ್ಯಯನ ಮಾಡಲು ಮನಃಶಾಸ್ತ್ರಜ್ಞರನ್ನು ಪ್ರೇರೇಪಿಸಿತು.

ಮುಂದಿನ ಹಲವು ವರ್ಷಗಳ ಕಾಲ ಮನಃಶಾಸ್ತ್ರಜ್ಞರು, ಗುಂಪುಗಳಲ್ಲಿ ಅನಾಹುತಗಳು ನಡೆದಾಗ ಕಂಡುಬರುವ ಮನುಷ್ಯ ವರ್ತನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಹೆಚ್ಚಿನೆಲ್ಲ ಪ್ರಕರಣಗಳಲ್ಲಿ ಅವರಿಗೆ ಒಂದೇ ಬಗೆಯ ಫಲಿತಾಂಶ ಸಿಕ್ಕಿದೆ ಎನ್ನುವುದು ವಿಚಿತ್ರ! ಅದೇನೆಂದರೆ, ಯಾವುದೇ ದುರಂತ ಹಲವಾರು ಮಂದಿಯ ಸಮ್ಮುಖದಲ್ಲಿ ನಡೆದಾಗ, ಅವರಲ್ಲಿ ಯಾರೂ ಸಹಾಯಕ್ಕೆ ಧಾವಿಸದೇ ಇರುವ ಸಂಭವವೇ ಹೆಚ್ಚು. ಇದಕ್ಕೆ ಕಾರಣಗಳು ಹಲವು: ಒಬ್ಬ ವ್ಯಕ್ತಿ ಒಬ್ಬಂಟಿಯಾಗಿದ್ದಾಗ ಅವನೆದುರಲ್ಲಿ ಏನಾದರೂ ಅವಘಡ ನಡೆದರೆ ಅದಕ್ಕೆ ತಕ್ಕ ಸಹಾಯ ಒದಗಿಸುವುದು ತನ್ನ ಕರ್ತವ್ಯ ಎಂದು ತಿಳಿಯುತ್ತಾನೆ. ಆದರೆ, ಒಬ್ಬನ ಬದಲು ಇಬ್ಬರಿದ್ದರೆ ಅವರ ಜವಾಬ್ದಾರಿಗಳು ಕೂಡಲೇ ಹಂಚಿಹೋಗುತ್ತವೆ. ಆ ಇನ್ನೊಬ್ಬನೂ ಬರುವುದಾದರೆ ಮಾತ್ರ ನಾನು ಈ ಕೆಲಸ ಎತ್ತಿಕೊಂಡೇನು ಎಂದು ಮನಸ್ಸು ಹೇಳತೊಡಗುತ್ತದೆ. ಹಾಗೆಯೇ, ಘಟನೆಯಲ್ಲಿ ಇಪ್ಪತ್ತು ಜನ ಇದ್ದರೆ ಪ್ರತಿಯೊಬ್ಬನ ಮೇಲೆ ಹಂಚಿಹೋಗುವ ಜವಾಬ್ದಾರಿ ಕೇವಲ 5% ಮಾತ್ರ. ಹಾಗಾಗಿ, ಆತ ಬಹುತೇಕ ಅನಾಸಕ್ತನಾಗುತ್ತಾನೆ, ನಿಷ್ಕ್ರಿಯನಾಗುತ್ತಾನೆ. ಎಲ್ಲರೂ ಜೊತೆಯಾಗಿ ಕೈಜೋಡಿಸಿದರಷ್ಟೇ ತನ್ನ ಪಾಲಿನ ಕರ್ತವ್ಯವನ್ನು ಮಾಡಬಹುದು ಎಂದು ಯೋಚಿಸಲು ತೊಡಗುತ್ತಾನೆ. ಉಳಿದವರು ಯಾರೂ ಇಲ್ಲದಿದ್ದಾಗ್ಯೂ ತನಗೆ ಸಹಾಯ ಮಾಡುವ ಅವಕಾಶ ಇತ್ತು ಮತ್ತು ಅಷ್ಟೇ ಅವಕಾಶ ಈಗಲೂ ಇದೆ ಎಂಬ ತರ್ಕವನ್ನೇಕೋ ಆ ಸಮಯದಲ್ಲಿ ಮಿದುಳು ಉದ್ಧೇಶಪೂರ್ವಕ ಮಾಡುವುದಿಲ್ಲ! ಇನ್ನು ಎರಡನೆಯದಾಗಿ, ಅನಾಹುತಗಳು ಸಂಭವಿಸಿದಾಗ ಸುತ್ತಲಿನ ಸನ್ನಿವೇಶ ಗೊಂದಲಮಯವಾಗಿರುತ್ತದೆ. ಏನು ನಡೆಯಿತು ಎಂಬ ಸರಿಯಾದ ಚಿತ್ರಣ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ತಾನು ಮುನ್ನುಗ್ಗಿ ಇಲ್ಲಸಲ್ಲದ ಅಪಾಯ, ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳಬೇಕೆ ಎಂದು ಮಿದುಳು ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಲು ಯತ್ನಿಸುತ್ತದೆ. ಈ ಎಲ್ಲ ಅಂಶಗಳಿಂದಾಗಿ ಗಣಿತದಲ್ಲಿ “ಪ್ರತ್ಯಕ್ಷದರ್ಶಿಗಳ ಸಂಖ್ಯೆ ಹೆಚ್ಚಾದಂತೆ ಕಿಟ್ಟಿಯ ಬದುಕುವ ಸಂಭಾವ್ಯತೆ ಕುಗ್ಗುತ್ತದೆ” ಎಂಬ ಮಾತು ಚಲಾವಣೆಗೆ ಬಂತು. ಮನಃಶಾಸ್ತ್ರದಲ್ಲಿ “ಮೂಕಪ್ರೇಕ್ಷಕ ಪರಿಣಾಮ” (Bystander Effect) ಎಂಬ ಪದಪುಂಜ ಸೃಷ್ಟಿಯಾಯಿತು.

ರಸ್ತೆಯಲ್ಲಿ ಏನೋ ತೊಂದರೆಯಲ್ಲಿ ಸಿಕ್ಕಿಬಿದ್ದಾಗ ಉಳಿದವರೆಲ್ಲ ಮೂಕಪ್ರೇಕ್ಷಕರಷ್ಟೇ ಆಗಿರುತ್ತಾರೆ ಎಂಬುದನ್ನು ಮನಃಶಾಸ್ತ್ರ, ಗಣಿತ ಇತ್ಯಾದಿ ಬಳಸಿಕೊಂಡು ಸಾಧಿಸಿ ಏನು ಉಪಯೋಗ ಎಂದು ನೀವು ಕೇಳಬಹುದು. ಇಂದು ಹರೀಶ್ ಅವರಿಗೊದಗಿದ ದುರ್ಗತಿ ನಾಳೆ ನಮಗೇ ಬರುವುದಿಲ್ಲ ಎಂದು ಹೇಗೆ ಹೇಳುವುದು? ಆಗ ಈ ಗಣಿತದ ವಿಚಾರ ಗೊತ್ತಿದ್ದರೆ ಒಂದಷ್ಟು ಉಪಯೋಗವಾಗಬಹುದೇನೋ. ಮೊದಲನೆಯದಾಗಿ, ನಾಳೆ ನಮ್ಮಲ್ಲೇ ಒಬ್ಬರು ಇಂಥದೊಂದು ದುರ್ಘಟನೆಯನ್ನು ಕಣ್ಣೆದುರು ನೋಡಬೇಕಾಗಿ ಬಂತು ಎಂದಿಟ್ಟುಕೊಳ್ಳಿ. ಕೂಡಲೇ “ಮೂಕಪ್ರೇಕ್ಷಕ ಪರಿಣಾಮ”ವನ್ನು ಮನಸ್ಸಿಗೆ ತಂದುಕೊಳ್ಳಿ. ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿ ಯಾರೂ ಮುನ್ನುಗ್ಗುವುದಿಲ್ಲ; ಹಾಗಾಗಿ ನಾನಾಗಿ ಸಹಾಯಕ್ಕೆ ಧಾವಿಸಬೇಕು ಎಂಬ ಒತ್ತಡವನ್ನು ಸೃಷ್ಟಿಸಿಕೊಂಡು ಮುಂದುವರಿಯಿರಿ. ನಿಮ್ಮನ್ನು ನೋಡಿ ಧೈರ್ಯ ತಂದುಕೊಂಡು ಕೈಜೋಡಿಸುವವರು ಇರುತ್ತಾರೆ. ಹಾಗಾಗಿ ಮೂಕಪ್ರೇಕ್ಷಕ ಪರಿಣಾಮವನ್ನು ಸರಿಯಾಗಿ ಅರಿತುಕೊಂಡಿರುವುದೇ ಅದನ್ನು ಒಡೆಯಲು ಸೂಕ್ತ ವಿಧಾನ. ಇನ್ನು, ದುರದೃಷ್ಟ ಕೆಟ್ಟು ನಾವೇ ಘಟನೆಯ ಕೇಂದ್ರಬಿಂದುವಾಗಬೇಕಾದ ಸಂದರ್ಭ ಸೃಷ್ಟಿಯಾದರೆ ಮಾಡುವುದೇನು? ರಸ್ತೆ ಅಪಘಾತದಲ್ಲಿ ಬಿದ್ದಿದ್ದೀರಿ. ಅಥವಾ ಯಾರೋ ನಾಲ್ವರು ದಾಂಡಿಗರು ನಿಮ್ಮನ್ನು ಹೊಡೆದುರುಳಿಸಿ ಹೋಗಿದ್ದಾರೆ. ಜನರ ಓಡಾಟವಿರುವ ಜಾಗದಲ್ಲಿ ಎಲ್ಲರ ನಡುವೆ ಅಸಹಾಯಕರಾಗಿ ಬಿದ್ದಿದ್ದೀರಿ ಎನ್ನೋಣ. ಮೊಬೈಲುಗಳಲ್ಲಿ ಫೋಟೋ ಹೊಡೆಯುತ್ತ ನಿಂತವರು ಅಲ್ಲೊಂದು ಬಲವಾದ ಪ್ರೇರಣೆ ಹುಟ್ಟದೆ ನಿಮಗೆ ಸಹಾಯ ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತು. ಹಾಗಾಗಿ, ಆ ಗುಂಪಿನಲ್ಲಿ ಯಾರಾದರೊಬ್ಬರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಸಹಾಯ ಮಾಡಿ ಎಂದು ಕೇಳಿಕೊಳ್ಳಿ. ಇದು ಗುಂಪಿನಿಂದ ಒಬ್ಬನನ್ನಷ್ಟೇ ಪ್ರತ್ಯೇಕಿಸಿ, ಸಹಾಯ ಮಾಡಬೇಕೆಂಬ ಎಲ್ಲ ಜವಾಬ್ದಾರಿಯನ್ನೂ ಆತನ ಮೇಲೆ ಹೊರಿಸಿ, ಒತ್ತಡ ಸೃಷ್ಟಿಸಿ, ಮುಂಬರಲು ಪ್ರಚೋದಿಸುವ ಕ್ರಮ. ದೃಷ್ಟಿಗೆ ದೃಷ್ಟಿ ತಾಗಿಸಿ ಸಂವಹಿಸುವುದು ಸಾಧ್ಯವಾದರೆ ಆತನಿಗೆ ನಿಮ್ಮ ಬೇಡಿಕೆಯನ್ನು ತಳ್ಳಿ ಹಾಕುವುದು ಕಷ್ಟವಾಗುತ್ತದೆ. ಒಬ್ಬ ಬಂದರೆ ಮುಂದೆ ಇಡೀ ಮಂದೆಯೇ ಸಹಾಯಕ್ಕೆ ಬಂದರೂ ಬಂದೀತೇ.

ಸಾವಿನ ಬಾಗಿಲಲ್ಲೂ ಸಮಚಿತ್ತ ಮೆರೆದು ಹರೀಶ್ ಕಣ್ಣುಮುಚ್ಚಿದ್ದಾರೆ. ಅವರ ಸಾವು ಜಡವಾಗಿ ನಿಂತು ಆಟ ನೋಡುತ್ತಿದ್ದ ಅಸೂಕ್ಷ್ಮ ಜನರನ್ನು ಕನಲಿಸಬೇಕಿತ್ತು. ಅದಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಇಂಥ ಸಂದರ್ಭ ಮತ್ತೊಮ್ಮೆ ಬರಬಾರದು; ಮತ್ತೊಬ್ಬ ಅಮಾಯಕ ಹೀಗೆ ದಾರುಣ ಸಾವಿಗೆ ಪಕ್ಕಾಗಬಾರದು ಎಂಬ ಕಾಳಜಿಯಿಂದಷ್ಟೇ ಗಣಿತ, ವಿಜ್ಞಾನಗಳೆಲ್ಲ ಇಲ್ಲಿ ಬಂದಿವೆ. ಅದಕ್ಕೆ ಓದುಗರ ಕ್ಷಮೆ ಇರಲಿ.

7 ಟಿಪ್ಪಣಿಗಳು Post a comment
  1. Mallappa
    ಏಪ್ರಿಲ್ 13 2016

    ರೋಹಿತ ಅವರೇ,ಈ ಘಟನೆ ದುರಾದೃಷ್ಟಕರ. ಇಂತಹ ಘಟನೆಗಳು ನಡೆದಾಗ ನನ್ನ ಅನಿಸಿಕೆ ಯಾರು ಮುಂದೆ ಬಂದು ಸಹಾಯ ಮಾಡುತ್ತಾರೆ ಪೋಲಿಸ ವ್ಯವಸ್ಥೆಯಲ್ಲಿ ಅವರೇ ಮೊದಲ ಸಸ್ಪೆಕ್ಟ. ಅವರಿಗೆ ಇಲ್ಲದ ತೊಂದರೆ ಕೊಡುತ್ತಾರೆ. ಅವರನ್ನಸಸ್ಪೆಕ್ಟ ಆಗಿ ನೋಡುವುದು ತಪ್ಪು ಅಲ್ಲ. ಆದರೆ ತನಿಖೆ ಮಾಡಿ ಅವರ ಅಪರಾಧಕ್ಕೆ ತಕ್ಕ ಸಾಕ್ಷಿ ಹುಡುಕಿ, ನಂತರ ತೊಂದರೆ ಕೊಟ್ಟರೆ ಪರವಾ ಇಲ್ಲ. ಆದರೆ ಪ್ರ್ಯಾಕ್ಟಿಕಲ್ಲ್ಲಿ ಹಾಗಿಲ್ಲ. ಸಹಾಯ ಮಾಡಿದ್ದಲ್ಲದೆ ತೊಂದರೆ ಎದರಿಸಲು ಹಿಂದೇಟು.

    ಉತ್ತರ
  2. ಏಪ್ರಿಲ್ 13 2016

    Adaru Naavu Manujaru Maanaviyathe inda mereyabeku…………Aste…………Naanu Aa staladalle iddiddare kanditha sahayakke mundaagutidde………I want be a Hero on that situation not the audience….

    ಉತ್ತರ
  3. K.satyanarayana.
    ಏಪ್ರಿಲ್ 13 2016

    A very moving article with practical suggestions which shows positive mind frame of Rohith.Yashawantha chit tala has also written written a touching essay on the same topic.

    ಉತ್ತರ
  4. LINGARAJU D.S
    ಏಪ್ರಿಲ್ 13 2016

    ರೋಹಿತ್‍ರವರೆ ಹರೀಶ್ ಸಾವು ಬಹಳ ದಿನ ನನ್ನನ್ನು ಕಾಡಿತ್ತು. ಆ ದುರಂತದ ಸಂದರ್ಭದಲ್ಲಿ ಆತನ ಮನಸ್ಥಿತಿ ಹೇಗಿದ್ದಿರಬಹುದು ? ಜನರ ಷಂಡತನ, ಗಾಯಾಳುವಿನ ಮನ್ನಸ್ಸಿಗೆ ಇನ್ನೆಷ್ಟು ಘಾಸಿ ಮಾಡಿರಬೇಕು ! ವ್ಯವಸ್ಥೆಗೆ ಹೆದರುವ ಜನ ಇದ್ದಾಗ ಹೀಗೆಯೇ ಆಗುತ್ತದೆ.

    ಉತ್ತರ
  5. ಏಪ್ರಿಲ್ 14 2016

    ಪ್ರಿಯ ರೋಹಿತ್ ಚಕ್ರತೀರ್ಥರಿಗೆ, ಸ್ವಾಮಿ ಇಡೀ ಲೋಕ ವಿದ್ಯಾವಂತ ಮೂರ್ಖರು, ಅವಿದ್ಯಾವಂತ ಮುಠ್ಠಾಳರಿಂದ ತುಂಬಿ ಹೋಗಿರುವಾಗ ಅಂತಹ ಯಃಕಶ್ಚಿತ್ ಜನರಿಂದ ನೀವು ಇನ್ನೆಂತಹ ನಡೆವಳಿಕೆಯನ್ನು ಅಪೇಕ್ಷಿಸಲಾದೀತು? ಹಾಗೆಯೇ ಮಾನವ ನಿರ್ಮಿತ ಜೀವಂತ ಭೂನರಕಗಳಾದ ಆಸ್ಪತ್ರೆಗಳು, ನ್ಯಾಯಾಲಯಗಳು, ಮತ್ತು ಪೋಲೀಸ್ ಇಲಾಖೆ. ಈ ಇಲಾಖೆಗಳಲ್ಲಿ ಮಾನವ ರೂಪದ ಯಮದೂತರುಗಳು/ನರ ರಾಕ್ಷಸರು ಕೆಲಸ ಮಾಡುತ್ತಿದ್ದಾರೆ. ಇವರ ಕೈಯ್ಯಲ್ಲಿ ಯಾರಾದರೂ ಸಿಕ್ಕಿಕೊಂಡರೋ ಅವರ ಆಯಸ್ಸು ಅಂದಿಗೇ ಮುಗಿಯಿತೆಂದು ಅರ್ಥ. ನಮ್ಮವರೇ ನಮ್ಮನ್ನು ನಿರ್ಲಕ್ಷಿಸುವ ಹಂತ ತಲುಪಿರುವಾಗ, ಇನ್ನು ಆ ಪಾಪದ ವ್ಯಕ್ತಿ ಹರೀಶ್ ರವರನ್ನು ಈ ಜನ ಕಾಪಾಡಲು ಹೋಗುತ್ತಾರೆಯೆ? ಸ್ವಾಮಿ ನಾವು ಭ್ರಮಾಲೋಕದಲ್ಲಿ ಜೀವಿಸುತ್ತಿದ್ದೇವೆ. ನಾವೆಷ್ಟು ದಿನ ಬದುಕಿರುತ್ತೇವೋ ಅಷ್ಟು ದಿನಗಳು ಮಾತ್ರವೇ ಪ್ರಕೃತಿ ಮಾತೆ ನಮಗಿತ್ತಿರುವ ಕೊಡುಗೆ ಎಂದು ತಿಳಿದು ಬದುಕಿರಬೇಕಷ್ಟೆ. ತಪ್ಪು ನೆಪ್ಪುಗಳನ್ನು ತಿಳಿದುಕೊಳ್ಳಲಾಗಲೀ, ಸರಿಪಡಿಸಿಕೊಳ್ಳುವುದಾಗಲೀ ಯಾರಿಗೂ ಬೇಕಿಲ್ಲ. ಸ್ವಾಮಿ, ಈ ಲೋಕದಲ್ಲಿ ಎಲ್ಲರೂ ಸ್ವಾರ್ಥಿಗಳೇ, ಯಾರಿಗೆ ಯಾರೂ ಬೇಕಿಲ್ಲ. ಹಿರಿಯ ನಾಗರೀಕನಾಗಿದ್ದು ಸಾಲದೇ, ಮೇಲೆ ಕೆಳಗೆ, ಹಿಂದೆ ಮುಂದೆ, ಅಕ್ಕ ಪಕ್ಕ, ಜನರಿದ್ದರೂ ಅನಾಥ ಪ್ರೇತವಾಗಿ ಬದುಕು ಸಾಗಿಸುತ್ತಿರುವ ನನ್ನಂಥವರು ಏನು ಮಾಡಬೇಕು? ನೀವೇ ಹೇಳಿ. ಇಲ್ಲೇ ಸ್ವರ್ಗ- ಇಲ್ಲೇ ನರಕ, ಬೇರೇನಿಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೇ ಮೂರು ದಿನದ ಬಾಳು. ಬೇಕೋ ಬೇಡವೋ, ಹೊಟ್ಟೆ ಹಸಿಯುತ್ತೆ, ಮೂರು ಸಲ ತಿನ್ನಲೇಬೇಕು. ತಿನ್ನಲು ಆಹಾರ ಬೇಕು. ಆಹಾರ ತರಲು ಹಣವಿರಬೇಕು. ಹಣವಿಲ್ಲದೇ ಕಷ್ಟಪಡುವವರು ಲಕ್ಷಾಂತರ ಜನರಿದ್ದಾರೆ. ಆದರೆ ಹಣವನ್ನೇ ತಿನ್ನುವವರು ಹೆಚ್ಛಾಗುತ್ತಿದ್ದಾರೆ. ಇಂತಹವರಿಗೆ ಏನೆನ್ನುತ್ತೀರಿ? ಹೇಳಲು ಹೊರಟರೆ ಸಮಯವೇ ಸಾಲುವುದಿಲ್ಲ. ಇದುವೆ ಜೀವ – ಇದು ಜೀವನ.

    ಉತ್ತರ
  6. ಏಪ್ರಿಲ್ 15 2016

    good article

    ಉತ್ತರ
  7. ಏಪ್ರಿಲ್ 15 2016

    ಉತ್ತಮ ಲೇಖ್ಹನ. ಮನ ಕಲಕುತ್ತೆ, ಇದನ್ನು ಓದಿದವರು ಮೂಕ ಪ್ರೇಕ್ಷಕರಾಗಲಾರರು ಅನಿಸುತ್ತೆ.
    ಆದರೆ ಒಂದು ಸತ್ಯ ಸಂಗತಿ.ಕಟ್ಟುಕತೆಯಲ್ಲ, ನಾನು ಹತ್ತಿರದಿಂದ ಬಲ್ಲ ಸಂಗತಿ.
    ೧೯-೨೦ರ ಹರೆಯದ ನಾಲ್ಕೈದು ಕಾಲೇಜು ಹುಡುಗಿಯರು ರೈಲು ಬರುವಾಗ ಸೆಲ್ಫಿ ತೆಗೆಯಲು ಯತ್ನಿಸಿ ಒಬ್ಬಳು ರೈಲಿನಡಿ ಬಿದ್ದಳು. ಇನ್ನೊಬ್ಬಳು ಕೈಮುರಿದುಕೊಂಡಳು.ಉಳಿದವರ ಪೈಕಿ ಒಬ್ಬಳು ಬಾಲ್ಯದಿಂದಲೇ ಸಹಪಾಠಿಯಾಗಿದ್ದ ಮತ್ತು ಹತ್ತಿರದಲ್ಲೇ ಪೇಯಿಂಗ್ ಗೆಸ್ಟ್ ಆಗಿದ್ದ ಹುಡುಗನಿಗೆ ಕರೆಮಾಡಿದಳು.ಆಸುಪಾಸಿನವರು ಯಾರೂ ಬರಲಿಲ್ಲ. ಅವನು ಬಂದು ರೈಲಿನಡಿ ಬಿದ್ದು ಜೀವ ಹೋಗುವ ಸ್ತಿತಿಯಲ್ಲಿದ್ದವಳನ್ನು ರಿಕ್ಷಾದಲ್ಲಿ ಹಾಕಿ ಆಸ್ಪತ್ರೆಗೆ ಕೊಂಡುಹೋಗಿ ಆಗುವಾಗ ಅಥವಾ ಮೊದಲೇ , ಅಂತೂ ಜೀವ ಹೋಗಿತ್ತು. ಮೃತ ಹುಡುಗಿ ತಂದೆ ಮಾತ್ರ ಇತರ ಹುಡುಗಿಯರು ದೂಡಿ ಹಾಕಿದ್ದು ಅಂತ ದೂರು ಕೊಟ್ಟರು. ಪೋಲಿಸು ತನಿಖೆ ಆಗಿ ಇವರ ನಿರಪರಾಧಿತ್ವ ಸಾಬೀತಾಯಿತು. ಆದರೆ ನಂತರ ಆ ತಂದೆ ಖಾಸಗಿ ದೂರು ಸಲ್ಲಿಸಿ ಒಬ್ಬಳು ಹುಡುಗಿ ಮತ್ತು ಈ ಸಹಾಯ ಮಾಡಿದ ಹುಡುಗ ಈಗ, ಐ ರಿಪೀಟ್ ಈಗ್ಲೂ ಕ್ರಿಮಿನಲ್ ಕೇಸು ಎದುರಿಸುತ್ತಿದ್ದಾರೆ. ಏನೆನ್ನಲಿ? ಕೇಸು ನಿಲ್ಲೊಲ್ಲ ಅಂತ ಎಲ್ಲರಿಗೂ ಗೊತ್ತು . ಆದರೂ ಅಂತಿಮ ಪದವಿಯಲ್ಲಿ ಕಲಿವ ಹುಡುಗ ಕೇಸು ಯಾವಾಗ ಮುಗಿಯುತ್ತೆ ಅಂತ ಕಾಯುತ್ತಿದ್ದಾನೆ. ಏನೆನ್ನುವಿರಿ? ಆದರೆ, ಇನ್ನೂ ಮುಖ್ಯ ಸಂಗತಿಯೆಂದರೆ ಇಷ್ಟಾದ ನಂತರವೂ ಕೆಲವೇ ದಿನಗಳ ನಂತರ ಇನ್ನೊಮ್ಮೆ ಒಂದು ವಾಹನ ಡಿಕ್ಕಿಯಾಗಿ ಹೇಂಗಸೊಬ್ಬರು ಒದ್ದಾಡುತ್ತಿದ್ದಾಗ ಅದೇ ಹುಡುಗ ಅವರನ್ನು ರಿಕ್ಶಾದಲ್ಲಿ ಹಾಕಿ ಆಸ್ಪತ್ರೆಗೆ ಒಯ್ದ.– ಅಜಕ್ಕಳ ಗಿರೀಶಭಟ್

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments