ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 14, 2016

17

ಬಾಬಾಸಾಹೇಬ್ ಅಂಬೇಡ್ಕರ್ : ಇದ್ದದ್ದು ಇದ್ದ ಹಾಗೆ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

images (2)ಇದು ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಸಪಾದ ಜನ್ಮಶತಮಾನೋತ್ಸವದ ವರ್ಷ. ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಹುಟ್ಟಿದ ಅಂಬೇಡ್ಕರ್ ಆ ಕಾಲದ ಅನಕ್ಷರತೆ, ಜಾತಿ ತಾರತಮ್ಯ, ಶೋಷಣೆ, ನಿರುದ್ಯೋಗ, ಸ್ವಾತಂತ್ರ್ಯ ಹೋರಾಟ ಮುಂತಾದ ಎಲ್ಲ ಪರಿಸ್ಥಿತಿಗಳನ್ನೂ ನೋಡಬೇಕಾಯಿತು, ಸ್ವತಃ ಅನುಭವಿಸಬೇಕಾಯಿತು. ಹುಡುಗ ಚೂಟಿ, ಬುದ್ಧಿವಂತ. ಜಾತಿಯ ಕಾರಣವೊಂದೇ ಮುಂದಾಗಿ ಆತನ ಭವಿಷ್ಯವನ್ನು ಕಮರಿಸಬಾರದೆಂಬ ಎಚ್ಚರದಿಂದ ಬ್ರಾಹ್ಮಣ ಗುರು ಮಹಾದೇವ ಅಂಬೇಡ್ಕರ್, ತನ್ನ ಈ ಪ್ರೀತಿಯ ಶಿಷ್ಯನಿಗೆ ಅಂಬಾವಾಡೇಕರ್ ಎಂಬ ಕುಲಸೂಚಕವನ್ನು ತಿದ್ದಿ ಅಂಬೇಡ್ಕರ್ ಎಂಬ ನಾಮಕರಣ ಮಾಡಿದರು. ಅಲ್ಲಿಂದ ಮುಂದಕ್ಕೆ ಹುಡುಗ, ಹುಟ್ಟಿದೂರು ಸತಾರದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಮುಂಬಯಿಯ ಪ್ರತಿಷ್ಠಿತ ಎಲ್ಫಿನ್‍ಸ್ಟನ್ ಹೈಸ್ಕೂಲು, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್ ಪ್ರವಾಸಗಳನ್ನು ಮಾಡಿದ್ದೆಲ್ಲ ನಂಬಲಸಾಧ್ಯವೆನಿಸುವ ವಾಸ್ತವ.ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪಡೆದಾಗ ಅಂಬೇಡ್ಕರರಿಗೆ 26 ವರ್ಷ. ನಂತರದ ಪ್ರಯಾಣ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಡೆಗೆ. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಬ್ಯಾರಿಸ್ಟರ್-ಎಟ್-ಲಾ ಎಂಬ ಕಾನೂನು ಪದವಿ ಪಡೆದು, ತನ್ನ 32ನೇ ವಯಸ್ಸಿಗೆ ಡಿಎಸ್‍ಸಿ ಗಳಿಸಿ ಭಾರತಕ್ಕೆ ಮರಳಿದರು. ದಲಿತರ ಹುಡುಗನೊಬ್ಬ ಹೀಗೆ ಅಖಂಡ 28 ವರ್ಷ ವ್ಯಾಸಂಗವೊಂದರಲ್ಲೇ ಮುಳುಗಿ, ವಿದೇಶದ ಹೆಸರುವಾಸಿ ಸಂಸ್ಥೆಗಳಲ್ಲಿ ಡಿಗ್ರಿಯ ಮೇಲೆ ಡಿಗ್ರಿಯನ್ನು ಸಂಪಾದಿಸಿದ ಕತೆ ರೋಮಾಂಚನಗೊಳಿಸುವಂಥಾದ್ದು.

ಜಾತ್ಯಾಧಾರಿತ ಚಳವಳಿಯ ಟ್ರೆಂಡ್‍ಸೆಟ್ಟರ್

ಭಾರತಕ್ಕೆ ವಾಪಸು ಬಂದ ಮೇಲೆ ಅಂಬೇಡ್ಕರ್ ಇಲ್ಲಿನ ಶೋಷಿತ ಸಮುದಾಯದ ಉದ್ಧಾರಕ್ಕೆ ಪಣ ತೊಟ್ಟರು. ತಳಸಮುದಾಯದ ಜನರಿಗೆ ಮೊದಲು ಶಿಕ್ಷಣ ಕೊಡಬೇಕು. ಅವರಿಗೆ ಈ ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ಪರಿಚಯ ಮಾಡಿಕೊಡಬೇಕು ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಅಮೆರಿಕಾದಲ್ಲಿ ಅದೇ ಸಮಯದಲ್ಲಿ ಕಪ್ಪು ಜನರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರಿಗೆ ಯಾವ ನಾಗರಿಕ ಸವಲತ್ತುಗಳನ್ನೂ ಕೊಡಲಾಗುತ್ತಿರಲಿಲ್ಲ. ಹೊಟೇಲುಗಳಲ್ಲಿ ರೂಮು ಸಿಗುತ್ತಿರಲಿಲ್ಲ; ರೆಸ್ಟಾರೆಂಟುಗಳಲ್ಲಿ ಒಳ ಬರಗೊಡುತ್ತಿರಲಿಲ್ಲ. ಕಪ್ಪು ಜನರೆಂದರೆ ಮನುಷ್ಯರೇ ಅಲ್ಲ; ಅವರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಬೇಕು ಎಂದು ಬಿಳಿಯರು ಭಾವಿಸಿದಂತಿತ್ತು. ಅದೇ ಹೊತ್ತಿನಲ್ಲಿ ಇಂಗ್ಲೆಂಡಿನಲ್ಲಿ ಪರಿಸ್ಥಿತಿ ಉತ್ತಮವಾಗಿತ್ತೆಂದು ಹೇಳುವಂತಿಲ್ಲ. ಅಲ್ಲೂ ಸಮಾಜದ ಕೆಳವರ್ಗದ ಜನರನ್ನು ಅತ್ಯಂತ ತುಚ್ಛವಾಗಿ ನೋಡಿಕೊಳ್ಳಲಾಗುತ್ತಿತ್ತು. ಇಂಗ್ಲೆಂಡಿನ ವರ್ಗಭೇದದ ಆಳ-ಕರಾಳತೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದೇ ನಾಡಿನವನಾಗಿಯೂ ಅಸಮಾನತೆಯ ಬೆಂಕಿಯಲ್ಲಿ ಬಿದ್ದು ನರಳಿದ ಜಾರ್ಜ್ ಆರ್ವೆಲ್‍ನ “ಸಚ್ ಸಚ್ ವೇರ್ ದ ಜಾಯ್ಸ್” ಪ್ರಬಂಧವನ್ನು ಓದಬೇಕು. ಹೀಗೆ ಅಮೆರಿಕಾ, ಯುರೋಪ್, ಆಫ್ರಿಕಾ ಮುಂತಾದ ಎಲ್ಲ ಖಂಡಗಳಲ್ಲೂ ಇದ್ದ ಅಸಮಾನತೆಯ ವಿಷಗಾಳಿ ಭಾರತದಲ್ಲೂ ಹರಡಿದ್ದುದರಲ್ಲಿ ಆಶ್ಚರ್ಯವಿಲ್ಲ. ಅಮೆರಿಕಾದಲ್ಲಿ ಮೂಲನಿವಾಸಿಗಳ ಮೇಲೆ, ಆಫ್ರಿಕದಲ್ಲಿ ನೀಗ್ರೋ ಜನರ ಮೇಲೆ, ಯುರೋಪಿನಲ್ಲಿ ಕೆಳವರ್ಗದ ಜನರ ಮೇಲೆ ನಡೆದ ದಬ್ಬಾಳಿಕೆಗಿಂತ ಕಡಿಮೆ ತೀವ್ರತೆಯ ಶೋಷಣೆ ಭಾರತದಲ್ಲೂ ನಡೆದಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಜಗತ್ತಿನ ಬೇರೆ ಭಾಗಗಳಲ್ಲಿ ನಡೆದ ಶೋಷಣೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿದ ಹೋರಾಟಗಳನ್ನು ಕಂಡ ಅಂಬೇಡ್ಕರ್, ಅಂಥದೊಂದು ಬದಲಾವಣೆಯ ಗಾಳಿ ಭಾರತದಲ್ಲೂ ಹುಟ್ಟಬೇಕೆಂದು ಕನಸು ಕಂಡರು. ಇಲ್ಲಿನ ದಲಿತರನ್ನು ಒಗ್ಗೂಡಿಸುವ ಸಂಕಲ್ಪ ತೊಟ್ಟರು.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟ ಪಡಿಸಬೇಕು. ಅಂಬೇಡ್ಕರ್ ಭಾರತದಲ್ಲಿ ಶೋಷಿತ ಜನರ ಕಲ್ಯಾಣಕ್ಕೆನಾಂದಿ ಹಾಡಿದ ಮೂಲಪುರುಷ ಎಂಬಂತೆ ಕೆಲವರು ಇತಿಹಾಸ ಬರೆದಿದ್ದಾರೆ. ಇದು ನಿಜವಲ್ಲ. ಅಂಬೇಡ್ಕರ್ ದಲಿತರ ಉದ್ಧಾರಕ್ಕಾಗಿ ಅವಿರತವಾಗಿ ದುಡಿದ ಮಹಾಪುರುಷ ಎಂಬುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಆದರೆ, ಹಿಂದೂ ಧರ್ಮದೊಳಗೆ ಸೇರಿಕೊಂಡಿದ್ದ ಹಲವಾರು ಅರ್ಥಹೀನ ಆಚರಣೆಗಳನ್ನು ಹೋಗಲಾಡಿಸಿ, ಅದನ್ನು ಪರಿಶುದ್ಧಗೊಳಿಸುವ ಕೆಲಸವನ್ನು ಅಂಬೇಡ್ಕರ್‍ಗಿಂತ ಮೊದಲೇ ಬ್ರಹ್ಮೋಸಮಾಜದ ಮೂಲಕ ರಾಜಾ ರಾಮ್ ಮೋಹನ್ ರಾಯ್, ರವೀಂದ್ರನಾಥ ಟಾಗೋರ್, ಕೇಶಬ್ ಚಂದ್ರ ಸೇನ್ ಮುಂತಾದವರು ಪ್ರಾರಂಭಿಸಿದ್ದರು. ಹಾಗೆಯೇ ಬಾಂಬೆ ಪ್ರಾರ್ಥನಾ ಸಮಾಜ, ಆರ್ಯ ಸಮಾಜ, ಸತ್ಯ ಸಾಧಕ ಸಮಾಜ ಮುಂತಾದವು ದೇಶದ ಹಲವು ಭಾಗಗಳಲ್ಲಿ ಅದಾಗಲೇ ಕ್ರಿಯಾಶೀಲವಾಗಿದ್ದವು. ಇವೆಲ್ಲ ಭಾರತದಲ್ಲಿ ಹರಡುತ್ತಿದ್ದ ಕ್ರಿಶ್ಚಿಯಾನಿಟಿಗೆ ಪ್ರತಿಕ್ರಿಯೆಯೆಂಬಂತೆ ಹುಟ್ಟಿಕೊಂಡವು ಎನ್ನುವುದೂ ಸತ್ಯ. ಬ್ರಿಟಿಷ್ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಜಾರಿಯಿದ್ದ ಸಮಯದಲ್ಲೇ ಸಮಾನಾಂತರವಾಗಿ, ಕ್ರಿಶ್ಚಿಯನ್ ಮಿಷನರಿಗಳ ಮತಾಂತರ ಕಾರ್ಯವೂ ಅವ್ಯಾಹತವಾಗಿ ನಡೆಯುತ್ತಿತ್ತು. ಅವರು ಹಿಂದೂಗಳ ಧರ್ಮಗ್ರಂಥಗಳನ್ನೂ ಶಾಸ್ತ್ರಗ್ರಂಥಗಳನ್ನೂ ಅಧ್ಯಯನ ಮಾಡಿ, ಅದರೊಳಗಿದ್ದ ಹುಳುಕುಗಳನ್ನು ಎತ್ತಿತೋರಿಸಿ; ಕೆಲವೊಮ್ಮೆ ಅರ್ಥಗಳನ್ನು ತಿರುಚಿ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಮತಾಂತರದ ಬಲೆ ಬೀಸುತ್ತಿದ್ದರು. ಹೀಗಾಗಿ ಹಿಂದೂ ಧರ್ಮ ಪ್ರಶ್ನಾತೀತವಲ್ಲ; ಅದರೊಳಗೆ ಹಲವು ಕೆಟ್ಟ ಸಂಗತಿಗಳು ಸೇರಿಕೊಂಡಿವೆ, ಅವನ್ನು ತೆಗೆದುಹಾಕಿ ಧರ್ಮವನ್ನು ಶುದ್ಧೀಕರಿಸಬೇಕು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತು. ಬ್ರಹ್ಮೋಸಮಾಜ, ಆರ್ಯಸಮಾಜಗಳೆಲ್ಲ ಅಂಥ ನೆಲೆಯಿಂದಲೇ ತಮ್ಮ ಕೆಲಸಕಾರ್ಯಗಳನ್ನು ಶುರು ಮಾಡಿದವು. ಧರ್ಮದೊಳಗಿನ ಹುಳುಕುಗಳನ್ನು ಸರಿಪಡಿಸಬೇಕಾದರೆ ಕಾನೂನಿನ ಬೆತ್ತ ಹಿಡಿಯಬೇಕು; ಶಿಕ್ಷೆಯ ಭಯ ಹುಟ್ಟಿಸಬೇಕು ಎಂಬುದನ್ನು ಮೊದಲು ಪ್ರತಿಪಾದಿಸಿದವರು ರಾಜಾ ರಾಮ್ ಮೋಹನ್ ರಾಯ್. ಅಂಬೇಡ್ಕರ್ ಈ ಮಾತುಗಳನ್ನು ತನ್ನ ಕೃತಿಗಳಲ್ಲೂ ಬಲವಾಗಿ ಪ್ರತಿಪಾದಿಸಿದರು. ಆ ಕಾಲದ ಉಳಿದ ಸಮಾಜ ಸುಧಾರಕರಿಗೂ ಅಂಬೇಡ್ಕರರಿಗೂ ಕಾಣುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಉಳಿದವರು ಇಡಿಯ ಹಿಂದೂ ವ್ಯವಸ್ಥೆಯಲ್ಲಿರುವ ಎಲ್ಲ ದುರಾಚಾರಗಳನ್ನು ಜಾತಿಭೇದವಿಲ್ಲದೆ ಅಳಿಸಬೇಕು ಎಂದು ಹೇಳಿದರೆ, ಅಂಬೇಡ್ಕರ್, ಹಿಂದೂಗಳಲ್ಲಿ ಜಾತಿತಾರತಮ್ಯವೇ ಅತ್ಯಂತ ಪ್ರಮುಖ ಸಮಸ್ಯೆ ಎಂಬ ವಾದವನ್ನು ಎತ್ತಿಹಿಡಿದರು. ಉದಾಹರಣೆಗೆ ಸತಿ ಹೋಗುವಂಥ ಪದ್ಧತಿಗಳು ಆ ಕಾಲದಲ್ಲಿ ಎಲ್ಲ ಜಾತಿಗಳಲ್ಲೂ ಇದ್ದವು; ಮೇಲ್ಜಾತಿಯೆಂದು ಗುರುತಿಸಿಕೊಂಡ ಬ್ರಾಹ್ಮಣರಲ್ಲೂ ಇದ್ದವು. ಬ್ರಹ್ಮೋಸಮಾಜದ ಚಳವಳಿಕಾರರಿಗೆ ಇಂಥ ಸಂದರ್ಭಗಳಲ್ಲಿ ಸಮಸ್ಯೆಗೆ ತುತ್ತಾದವರ ಜಾತಿಗಳು ಮುಖ್ಯವಾಗುತ್ತಿರಲಿಲ್ಲ. ಆದರೆ, ಅಂಬೇಡ್ಕರ್, ಸಮಸ್ಯೆಯನ್ನು ಹೀಗೆ ಸ್ಥೂಲವಾಗಿ ನೋಡುವುದಕ್ಕಿಂತ ಜಾತಿಯ ನೆಲೆಯಿಂದ ವಿಶ್ಲೇಷಣೆಗೆ ತೊಡಗಬೇಕು; ಒಂದು ನಿರ್ದಿಷ್ಟ ಜಾತಿಗೆ ಸಮಾಜದಿಂದ ಯಾವೆಲ್ಲ ಬಗೆಯಲ್ಲಿ ಅವಮಾನ ಅನ್ಯಾಯಗಳಾಗಿವೆ ಎನ್ನುವುದನ್ನು ನೋಡಿದರೆ ಹೋರಾಟದ ದಾರಿ ಸುಲಭವಾಗುತ್ತದೆ ಎಂದು ಬಗೆದರು. ಯಾರ ಚಿಂತನೆ ಸರಿ, ಯಾರದು ತಪ್ಪು ಎಂಬುದನ್ನು ನಾನಿಲ್ಲಿ ಚರ್ಚಿಸಹೊರಡುತ್ತಿಲ್ಲ. ಆದರೆ, ಹೋರಾಟದ ದಾರಿಯಲ್ಲಿ ಮಾಡಿಕೊಂಡ ಈ ಒಂದು ಸಣ್ಣ ಪರಿವರ್ತನೆ ಮುಂದೆ ಭಾರತದ ಸಾಮಾಜಿಕ ಹೋರಾಟಗಳ ದಿಕ್ಕನ್ನೇ ಬದಲಿಸಿತು ಎಂದು ಹೇಳುವುದಷ್ಟೇ ನನ್ನ ಉದ್ಧೇಶ. ಭಾರತದಲ್ಲಿ ಜಾತ್ಯಾಧಾರಿತ ಹೋರಾಟಗಳು ಶುರುವಾಗಲು ಒಂದು ರೀತಿಯಲ್ಲಿ ಅಂಬೇಡ್ಕರ್ ಕಾರಣಕರ್ತರಾದರು.

ಮನುಸ್ಮೃತಿಗೆ ಅಗ್ನಿಸ್ಪರ್ಶ
ಅಂಬೇಡ್ಕರ್ ಯಾವುದೇ ಜಾತಿ/ಧರ್ಮಗಳ ಸಮಸ್ಯೆಯನ್ನು ವಿಸ್ತೃತವಾಗಿ ಚರ್ಚಿಸಬೇಕಾದರೆ ಪ್ರಾಚೀನ ಸಾಹಿತ್ಯ ಅಥವಾ ಧರ್ಮಗ್ರಂಥಗಳಲ್ಲಿ ಏನೇನು ವಿಷಯಗಳು ದಾಖಲಾಗಿವೆ ಎನ್ನುವುದನ್ನು ನೋಡತೊಡಗುತ್ತಾರೆ. ಇದನ್ನು ನಾವು ಅವರ “ಅಸ್ಪೃಶ್ಯರು ಯಾರು?” ಮತ್ತು “ಭಾರತದ ವಿಭಜನೆ” ಕೃತಿಗಳಲ್ಲಿ ನೋಡಬಹುದು. ಭಾರತದಲ್ಲಿ ಅಸ್ಪೃಶ್ಯತೆ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ವಿಶ್ಲೇಷಿಸುತ್ತ ಅವರು, ಭಾರತದ ಶಾಸ್ತ್ರಗ್ರಂಥಗಳಲ್ಲಿ ಇಂಥದೊಂದು ಕಟ್ಟುಪಾಡು ಇದ್ದಿರಬೇಕು ಎಂದು ಊಹಿಸುತ್ತಾರೆ. ಅವರ ಊಹೆಗೆ ಆಧಾರವಾಗಿ ಸಿಗುವುದು ಮನುಸ್ಮೃತಿ. ವಿಲಿಯಂ ಜೋನ್ಸ್ ಅದನ್ನು ಸಂಸ್ಕೃತದಿಂದ ಇಂಗ್ಲೀಷಿಗೆ ಅನುವಾದಿಸುವವರೆಗೂ ಭಾರತದಲ್ಲಿ ಆ ಕೃತಿಯನ್ನು ಓದಿಕೊಂಡವರೇ ನಾಲ್ಕೈದು ಶತಮಾನಗಳಿಂದ ಇರಲಿಲ್ಲ. ಆದರೆ, ಭಾರತದ ಜಾತಿ ಅಪಸವ್ಯಗಳಿಗೆಲ್ಲ ಮನುಸ್ಮೃತಿಯೇ ಕಾರಣ ಎಂದು ಹೇಳುವುದಕ್ಕೆ ಅಂಬೇಡ್ಕರ್ ಅವರಿಗೆ ಬೇಕಾದಷ್ಟು ಸರಕು ಆ ಕೃತಿಯಲ್ಲಿ ಸಿಕ್ಕಿತು. ಮನುಸ್ಮೃತಿಯಲ್ಲಿ ಬರೆದಿರುವುದೆಲ್ಲವೂ   ಮೂಲದಲ್ಲಿರುವ ಅಂಶಗಳಲ್ಲ; 50%ಕ್ಕಿಂತಲೂ ಹೆಚ್ಚಿನ ಭಾಗ ಪ್ರಕ್ಷಿಪ್ತ (ಸೇರಿಸಿದ್ದು) ಎನ್ನುವುದನ್ನಾಗಲೀ ಈ ಕಾಲದಲ್ಲಿ ಆ ಕೃತಿಯನ್ನು ಯಾರೂ ಮಾನ್ಯ ಮಾಡುವುದಿಲ್ಲ ಎಂಬ ಸಂಗತಿಯನ್ನಾಗಲೀ ಪರಿಗಣಿಸದೆ ಅಂಬೇಡ್ಕರ್ ಮನುಸ್ಮೃತಿಯ ಮೇಲೆ ಯುದ್ಧ ಸಾರಿಬಿಟ್ಟರು. ಬ್ರಾಹ್ಮಣರ ವಿರುದ್ಧ ಪ್ರತಿಭಟನೆ ಮಾಡಲು ಸಂಕೇತಕ್ಕಾಗಿ ಹುಡುಕುತ್ತಿದ್ದವರಿಗೆ ಮನುಸ್ಮೃತಿ ಅನಾಯಾಸವಾಗಿ ಸಿಕ್ಕಿತು! ಅಂಬೇಡ್ಕರ್ ಈ ಕೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿ, ತನ್ನ ಹೋರಾಟಗಳಿಗೆ ಬಲ ಬರುವಂತೆ ನೋಡಿಕೊಂಡರು. ಅಂಬೇಡ್ಕರ್ ಜಗತ್ತು ಕಂಡ ಅತ್ಯಂತ ಮುಖ್ಯ ಸಾಮಾಜಿಕ ಹೋರಾಟಗಾರ ಎಂಬುದನ್ನು ನಿಸ್ಸಂಶಯವಾಗಿ  ಒಪ್ಪಿಕೊಂಡರೂ, ದೇಶ-ವಿದೇಶಗಳಲ್ಲಿ ಉನ್ನತಾಧ್ಯಯನ ಮಾಡಿದ್ದ ಮತ್ತು ಸಂಸ್ಕೃತವನ್ನು ಓದಿ ಅರ್ಥೈಸಿಕೊಳ್ಳಬಲ್ಲ ವಿದ್ವಾಂಸರಾಗಿದ್ದ ಅವರು ಪುಸ್ತಕವನ್ನು ಸುಡುವುದರಲ್ಲಿ ಹೆಮ್ಮೆ ಪಟ್ಟದ್ದನ್ನು ಮಾತ್ರ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಗ್ರಂಥವಿರಲಿ, ಅದನ್ನು ಸುಡುವುದರಿಂದ ಅಥವಾ ಜನರು ಓದದಂತೆ ನಿಷೇಧಿಸುವುದರಿಂದ ಹೋರಾಟಗಳಿಗೆ ಯಾವ ನೈತಿಕ ಬಲವೂ ಸಿಗುವುದಿಲ್ಲ.

ಗಾಂಧಿ ವರ್ಸಸ್ ಅಂಬೇಡ್ಕರ್
ಅಂಬೇಡ್ಕರ್ 1930ರ ದಶಕದಲ್ಲಿ ಭಾರತದಲ್ಲಿ ಪ್ರಮುಖ ದಲಿತ ನಾಯಕರಾಗಿ ಹೊಮ್ಮಿದರು. ಹಿಂದೂ ಧರ್ಮದ ಕಟುವಿಮರ್ಶಕರಾಗಿ ಕಾಣಿಸಿಕೊಂಡ ಅಂಬೇಡ್ಕರ್ ಚಿಂತನೆಗಳಿಗೂ ಮೋಹನದಾಸ ಗಾಂಧಿಯ ಚಿಂತನೆಗಳಿಗೂ ತಿಕ್ಕಾಟ ಶುರುವಾಯಿತು. ಇಬ್ಬರೂ ಕೆಳವರ್ಗದ ಉದ್ಧಾರವನ್ನು ಬಯಸುವವರೇ ಆಗಿದ್ದರೂ, ಗಾಂಧಿ ಟಂಕಿಸಿದ “ಹರಿಜನ” ಎಂಬ ಪದವನ್ನು ಅಂಬೇಡ್ಕರ್ ಸಾರಾಸಗಟಾಗಿ ತಿರಸ್ಕರಿಸಿ “ದಲಿತ” ಎಂಬ ಪದವನ್ನು ಚಲಾವಣೆಗೆ ತಂದರು. ಕೆಳವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕಾದರೆ ಜನರ ಮನಃಪರಿವರ್ತನೆಯಾಗಬೇಕು ಎಂಬುದು ಗಾಂಧಿಯ ನಿಲುವಾಗಿದ್ದರೆ, ಅಂಥ ಮ್ಯಾಜಿಕ್ ನಡೆಯುವುದಿಲ್ಲ; ಕೆಳವರ್ಗದವರೇ ಸಿಡಿದೆದ್ದು ಪ್ರತಿಭಟನೆ ಮಾಡಿ ತಮ್ಮ ಹಕ್ಕುಗಳನ್ನು ಒತ್ತಾಯಪಡಿಸಿ ವಶಪಡಿಸಿಕೊಳ್ಳಬೇಕು ಎಂಬುದು ಅಂಬೇಡ್ಕರ್ ಚಿಂತನೆಯಾಗಿತ್ತು. ಜೊತೆಗೆ, ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳು ಭಾರತದ ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನು ಅಲುಗಾಡಿಸುತ್ತಿವೆ ಎನ್ನುವುದು ಗಾಂಧಿಯ ವಾದವಾದರೆ, ಬ್ರಿಟಿಷರು ಇಂದಲ್ಲ ನಾಳೆ ಹೋಗುವವರೇ; ಆದರೆ ದಲಿತೋದ್ಧಾರ ಈಗಲೇ ಶುರುವಾಗಬೇಕು ಎಂಬುದು ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು. ಇವರಲ್ಲಿ ಯಾರು ಸರಿ, ಯಾರು ತಪ್ಪು ಎಂಬುದನ್ನು ಕಪ್ಪು-ಬಿಳಿ ಎಂಬಷ್ಟು ಕರಾರುವಾಕ್ಕಾಗಿ ವಿಂಗಡಿಸಿ ಹೇಳುವುದು ಸಾಧ್ಯವಿಲ್ಲ. ಇಬ್ಬರ ಚಿಂತನೆಗಳೂ ಜೊತೆಯಾಗಿ ಮಧ್ಯಮಮಾರ್ಗವೊಂದು ನಿರ್ಮಾಣವಾಗಿದ್ದರೆ ಒಳ್ಳೆಯದಿತ್ತೇನೋ. ಆದರೆ, ಅಂಬೇಡ್ಕರ್ ಮತ್ತು ಗಾಂಧಿ ಪರಸ್ಪರರ ಅತ್ಯಂತ ಕಟುವಿಮರ್ಶಕರಾಗಿ ಹೋದದ್ದರಿಂದ ಭಾರತದ ಭವಿಷ್ಯಕ್ಕೆ ಬಹುದೊಡ್ಡ ನಷ್ಟವಾಯಿತೆಂದೇ ಭಾವಿಸಬೇಕಾಗುತ್ತದೆ.

ಅರ್ಥೈಸುವುದು ಕಷ್ಟವೇಕೆಂದರೆ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಭಾಗವಹಿಸಲಿಲ್ಲ ಎಂಬ ಆರೋಪವೊಂದಿದೆ. ದೇಶದೊಳಗಿನ ಶೋಷಿತ ಸಮುದಾಯಕ್ಕೆ ನ್ಯಾಯವಾಗಿ ದಕ್ಕಬೇಕಿದ್ದ ಅಧಿಕಾರಗಳನ್ನೂ ಹಕ್ಕುಗಳನ್ನೂ ಮರಳಿ ದೊರಕಿಸಿಕೊಡುವುದು ಕೂಡ ಸ್ವಾತಂತ್ರ್ಯ ಹೋರಾಟ ಎಂದು ಬಗೆಯುವುದಾದರೆ, ಅಂಬೇಡ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರೇ ಹೌದು. ಅಲ್ಲದೆ 12 ನವೆಂಬರ್ 1930ರಲ್ಲಿ ನಡೆದ ಮೊದಲ ದುಂಡು ಮೇಜಿನ ಸಭೆಯಲ್ಲಿ ಅವರೂ ಭಾಗವಹಿಸಿದ್ದರು. ಅಂಬೇಡ್ಕರ್ ಮತ್ತು ರಾವ್ ಬಹದ್ದೂರ್ ಶ್ರೀನಿವಾಸನ್ ಇಬ್ಬರೂ ಭಾರತದಲ್ಲಿ ತುಳಿತಕ್ಕೊಳಗಾದ ವರ್ಗದ ಜನರ ಪರವಾಗಿ ಸಭೆಯಲ್ಲಿ ಮಾತನಾಡಿದರು. ಆ ಕಾಲಕ್ಕಾಗಲೇ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ನಾಯಕನಾಗಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಾಗಿತ್ತು. “ಬ್ರಿಟಿಷರು ಕೆಳವರ್ಗದ ಜನರ ಕಲ್ಯಾಣಕ್ಕಾಗಿ ಕಾರ್ಯಪ್ರವೃತ್ತರಾಗಲೇಬೇಕು. ಅವರ ಹಲವು ಯುದ್ಧಗಳಲ್ಲಿ ಪರಿಶಿಷ್ಟ ಜಾತಿಯ ಜನ ಸೈನಿಕರಾಗಿ, ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದಾರೆ. ಈ ಋಣವನ್ನು ಬ್ರಿಟಿಷರು ತೀರಿಸಬೇಕಾಗುತ್ತದೆ” ಎಂದು ಅಂಬೇಡ್ಕರ್, ಬ್ರಿಟಿಷ್ ಕ್ಯಾಬಿನೆಟ್ ಸದಸ್ಯನಾಗಿದ್ದ ಎ.ವಿ. ಅಲೆಕ್ಸಾಂಡರ್‍ಗೆ 14 ಮೇ 1946ರಲ್ಲಿ ಬರೆದ ಪತ್ರದಲ್ಲಿ ವಾದಿಸಿದ್ದಾರೆ. ಆ ಕಾಲಕ್ಕೆ ಸುಸಂಬದ್ಧವೆನಿಸಿದರೂ ಕಾಲಘಟ್ಟದ ಹಿನ್ನೆಲೆಯನ್ನು ಅಳಿಸಿ ನೋಡಿದಾಗ ಇದು ಅರ್ಥಹೀನ ವಾದದಂತೆ ಕಾಣುತ್ತದೆ. ಹಾಗೆಯೇ ಒಂದು ಭಾಷಣದಲ್ಲಿ ಅವರು, “ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಚಾರದಲ್ಲಿ ಪರಿಶಿಷ್ಟ ಜಾತಿಯ ಜನರ ಅಭಿಪ್ರಾಯವೇನು ಎಂದು ಕೇಳುತ್ತೀರಾ? ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ಹೇಳುವುದಾದರೆ ನಮಗೆ, ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವುದು ಇಷ್ಟವಿಲ್ಲ. ಭಾರತಕ್ಕೆ ರಾಜಕೀಯ ಅಧಿಕಾರವನ್ನು ಬ್ರಿಟಿಷರು ಹಸ್ತಾಂತರಿಸುವುದನ್ನು ನಾವು ಅತ್ಯಂತ ಸ್ಪಷ್ಟವಾಗಿ ವಿರೋಧಿಸುತ್ತೇವೆ” ಎನ್ನುತ್ತಾರೆ. ಬ್ರಿಟಿಷ್ ಅಧಿಕಾರಿ ಲಾರ್ಡ್ ವಾರೆಲ್‍ನಿಗೆ ಬರೆಯುವ ಪತ್ರದಲ್ಲಿ “ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟದ್ದೇ ಆದರೆ ಅದೊಂದು ಅತ್ಯಂತ ದೊಡ್ಡ ದುರಂತವಾಗಿ ಪರಿಣಮಿಸಲಿದೆ” ಎಂಬ ಮಾತುಗಳನ್ನು ಅಂಬೇಡ್ಕರ್ ಬರೆಯುತ್ತಾರೆ. ಇಲ್ಲಿ ಎರಡು ವಿಷಯಗಳನ್ನು ನಾವು ಗಮನಿಸಬೇಕು. ಒಂದು-ಸ್ವದೇಶಾಭಿಮಾನಿಯಾಗಿದ್ದರೂ ಅಂಬೇಡ್ಕರ್ ಭಾರತಕ್ಕೆ ಬ್ರಿಟಿಷರಿಂದ ಅಧಿಕಾರ ಪಡೆಯುವ ಪ್ರಬುದ್ಧತೆ ಬಂದಿಲ್ಲ ಎಂಬುದನ್ನು ಪ್ರತಿಪಾದಿಸುತ್ತಿದ್ದರು. ಭಾರತ ಸ್ವತಂತ್ರವಾದರೆ ಇಲ್ಲಿನ ದಲಿತರು ಮೇಲ್ಜಾತಿಯ ನಾಯಕರ ಕೈಯಲ್ಲಿ ಆಳಿಸಿಕೊಳ್ಳಬೇಕಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಬ್ರಾಹ್ಮಣಶಾಹಿಯ (ಇದು ಅವರೇ ಟಂಕಿಸಿದ ಪದ) ಕೈಯಲ್ಲಿ ಆಳಿಸಿಕೊಳ್ಳುವುದಕ್ಕಿಂತ ಬಿಳಿಯರ ಕೈಕೆಳಗೆ ಬದುಕುವುದು ಒಳ್ಳೆಯದು ಎಂದು ಅವರಿಗೆ ಅನಿಸಿದ್ದಿರಬೇಕು. ಎರಡನೆಯದಾಗಿ, ಅಂಬೇಡ್ಕರ್ ಭಾರತದ ಕೆಳವರ್ಗದ ಜನರ ಧ್ವನಿಯ ವಕ್ತಾರರಾಗಿದ್ದರು. ಭಾರತದ ಪರಿಶಿಷ್ಟ ಜಾತಿಯ ಜನ ಏನು ಯೋಚಿಸಬೇಕು, ಯಾವ ಅಭಿಪ್ರಾಯ ಹೊಂದಿರಬೇಕು ಎಂಬುದನ್ನೆಲ್ಲ ನಿರ್ದೇಶಿಸುವ ಅಧಿಕಾರ ತನಗಿದೆ ಎಂದು ಅಂಬೇಡ್ಕರ್ ಭಾವಿಸಿದ್ದರು. ಹಾಗಾಗಿ, ಅವರ ಹೆಚ್ಚಿನ ಭಾಷಣಗಳು “ನಾವು ಭಾವಿಸುವುದೇನೆಂದರೆ..” ಎಂದೇ ಶುರುವಾಗುತ್ತಿದ್ದವು. ಒಂದಿಡೀ ಸಮುದಾಯದ ಒಟ್ಟಭಿಪ್ರಾಯವನ್ನು ಹೇಳುವ ಶಕ್ತಿ ಮತ್ತು ಅಧಿಕಾರವನ್ನು ಅಂಬೇಡ್ಕರ್ ತನ್ನಲ್ಲಿ ಉಳಿಸಿಕೊಂಡಿದ್ದರು. ಬಹುಶಃ ಈ ಎಲ್ಲ ಕಾರಣಗಳಿಂದಾಗಿ, ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿಯಿರಲಿಲ್ಲ ಎಂಬ ಜನಾಭಿಪ್ರಾಯ ಮೂಡಿರಬಹುದು.

ಅಂಬೇಡ್ಕರರನ್ನು ಅರ್ಥ ಮಾಡಿಕೊಳ್ಳುವುದು ಯಾಕೆ ಕಷ್ಟವಾಗುತ್ತದೆಂದರೆ, ಅವರು ಕಮ್ಯುನಿಸ್ಟರು, ದಲಿತರು, ಬ್ರಾಹ್ಮಣರು, ಮುಸ್ಲಿಮರು, ಕಾಂಗ್ರೆಸಿಗರು – ಹೀಗೆ ಯಾರಿಗೂ ಪೂರ್ತಿಯಾಗಿ ದಕ್ಕದ ವ್ಯಕ್ತಿತ್ವ ಎನ್ನುವುದಕ್ಕಾಗಿ. ಮೇಲ್ನೋಟಕ್ಕೆ ವಿರೋಧಾಭಾಸಗಳೆನ್ನಿಸುವ ಕೆಲವು ವಿಚಿತ್ರಗಳನ್ನು ನೋಡಿ:

  • ಕೆಳವರ್ಗ, ದುಡಿಯುವ ವರ್ಗಗಳ ಬಗ್ಗೆ ಅಪಾರವಾದ ಕಕ್ಕುಲಾತಿ ಇದ್ದರೂ ಅಂಬೇಡ್ಕರ್ಮಾಕ್ರ್ಸಿಸಂ ಅನ್ನು ವಿರೋಧಿಸಿದರು! ಇದಕ್ಕೆ ಒಂದು ಕಾರಣ, ಸಮಾಜವೆನ್ನುವುದು ಉಳ್ಳವರುಮತ್ತು ಬಡವರು ಎಂದು ಒಡೆದಿದೆ – ಎನ್ನುತ್ತಾನೆ ಮಾಕ್ರ್ಸ್. ಆದರೆ ಅಂಬೇಡ್ಕರ್, ಸಮಾಜ ಒಡೆದಿರುವುದು ಮುಖ್ಯವಾಗಿ ಜಾತಿಗಳಿಂದ, ಆರ್ಥಿಕ ಅಸಮಾನತೆ ಎಂಬುದು ಅದರ ಬೈಪ್ರಾಡಕ್ಟ್ ಅಷ್ಟೇ ಎಂದು ವಾದಿಸುತ್ತಾರೆ. ಹಾಗಾಗಿ, ಮಾಕ್ರ್ಸ್, ಆರ್ಥಿಕ ಸಮಾನತೆ ತಂದೊಡನೆ ಸಮಾಜ ಉದ್ಧಾರವಾಗುತ್ತದೆಂದು ಬಗೆದರೆ ಅಂಬೇಡ್ಕರ್ ಹೇಳುವುದು – ಜಾತಿ ಸಮಾನತೆಯೇ ಎಲ್ಲದಕ್ಕೂ ಪರಿಹಾರ.
  • ಆದರೆ ಅದೇ ಅಂಬೇಡ್ಕರ್, ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಜಾತಿಯಾಧಾರಿತಮೀಸಲಾತಿಗೆ ಸಂಪೂರ್ಣ ಒಪ್ಪಿಗೆ ಕೊಡುವುದಿಲ್ಲ. ಐದು ವರ್ಷಗಳಲ್ಲಿ ಎಲ್ಲ ಜಾತಿಗಳ ನಡುವೆಸಮಾನತೆ ಮೂಡಲಿ, ಆಮೇಲೆ ಮೀಸಲಾತಿಯನ್ನು ಕಡಿಮೆಗೊಳಿಸುತ್ತ ಬಂದು ನಂತರ ಸಂಪೂರ್ಣವಾಗಿ ತೆಗೆದುಬಿಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
  • 1945ರಲ್ಲಿ ಭಾರತ ಇಬ್ಭಾಗವಾಗಬೇಕೆ ಬೇಡವೇ ಎಂಬ ಚರ್ಚೆ ಎದ್ದಾಗ, ಭಾರತ ಅಖಂಡವಾಗಿಉಳಿಯಬೇಕು ಎಂದು ಆರೆಸ್ಸೆಸ್ ಮತ್ತು ಕಾಂಗ್ರೆಸ್ ಎರಡೂ ವಾದಿಸಿದವು. ಇಬ್ಭಾಗವಾಗಲಿ ಎಂದುಅಂಬೇಡ್ಕರ್ ಹೇಳಿದರು! ಆದರೆ ಅಷ್ಟಕ್ಕೇ ಅವರನ್ನು ದೇಶವಿರೋಧಿ ಎಂದು ಹೇಳುವುದಕ್ಕಾಗುವುದಿಲ್ಲ. ದೇಶವಿಭಜನೆಗೆ ಅವರು ಕೊಡುವ ಕಾರಣಗಳು ಜಿನ್ನಾರ ಕಾರಣಗಳಿಗೆ ಪೂರ್ತಿ ವಿರುದ್ಧವಾಗಿವೆ! ಮುಸ್ಲಿಮರನ್ನು ಅಖಂಡ ಭಾರತದಲ್ಲಿ ಉಳಿಸಿಕೊಂಡರೆ ಏನೆಲ್ಲ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬುದನ್ನು ಅತ್ಯಂತ ನಿರ್ಭೀತವಾಗಿ ಅವರು “ಭಾರತದ ವಿಭಜನೆ” ಕೃತಿಯಲ್ಲಿ ಹೇಳುತ್ತಾ ಹೋಗಿದ್ದಾರೆ. ಭಾರತದಲ್ಲಿ ಎರಡು ಧರ್ಮಗಳಿವೆ ಎಂದು ಎಲ್ಲರೂ ಹೇಳುತ್ತಾರೆ; ಆದರೆ ಇಲ್ಲಿರುವುದು ಎರಡು ಪ್ರತ್ಯೇಕ ರಾಷ್ಟ್ರಗಳು – ಎಂಬ ಮಾತನ್ನು ಅಂಬೇಡ್ಕರ್, ವಿಭಜನೆಗೆ ಹತ್ತು ವರ್ಷಗಳ ಮುನ್ನವೇ ಹೇಳಿಬಿಟ್ಟಿದ್ದರು!
  • ಮುಂದೆ ದೇಶ ಎರಡಾಗಿ, ಎರಡು ತುಂಡುಗಳೂ ಸ್ವತಂತ್ರವಾಗಿ, ಕಾಶ್ಮೀರ ಭಾರತಕ್ಕೆ ಸೇರಿದ ಮೇಲೆಆ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನ ಕೊಡಬೇಕೆಂಬ ಕೂಗು ಎದ್ದಿತು. ಆಗ ಅಂಬೇಡ್ಕರ್ ಸ್ವತಂತ್ರಭಾರತದ ಪ್ರಥಮ ಕಾನೂನು ಮಂತ್ರಿ. ಅವರು, ಶೇಕ್ ಅಬ್ದುಲ್ಲನಿಗೆ ಉತ್ತರ ಕೊಡುತ್ತ, “ನೀವು ನಿಮ್ಮ ಗಡಿರೇಖೆಯನ್ನು ಭಾರತ ರಕ್ಷಿಸಬೇಕೆಂದು ಬಯಸುತ್ತೀರಿ. ನಿಮ್ಮಲ್ಲಿ ರಸ್ತೆಗಳನ್ನು ನಿರ್ಮಿಸಬೇಕಾದ್ದು ನಾವು. ನಿಮಗೆ ಬೇಕಾದ ಆಹಾರ ಸರಬರಾಜು ಮಾಡಬೇಕಾದವರು ನಾವು. ಭಾರತದ ಉಳಿದೆಲ್ಲ ಭಾಗಗಳಲ್ಲಿ ಏನು ಅಭಿವೃದ್ಧಿ ಕಾರ್ಯವಾಗುತ್ತದೋ ಅದೆಲ್ಲವೂ ನಿಮಗೂ ಬೇಕೆನ್ನುತ್ತೀರಿ. ಆದರೆ, ಭಾರತ ಸರಕಾರಕ್ಕೆ ನಿಮ್ಮ ಮೇಲೆ ನಿಯಂತ್ರಣ ಇರಬಾರದು ಎನ್ನುತ್ತೀರಿ. ಭಾರತೀಯರಿಗೆ ಕಾಶ್ಮೀರದಲ್ಲಿ ಯಾವ ಅಧಿಕಾರಗಳೂ ಇರಬಾರದೆನ್ನುತ್ತೀರಿ. ಇಂಥದೊಂದು ಬೇಡಿಕೆಗೆ ಸಮ್ಮತಿ ಸೂಚಿಸುವುದು ಭಾರತದ ಹಿತಾಸಕ್ತಿಗಳಿಗೆ ಧಕ್ಕೆ ಮಾತ್ರವಲ್ಲ, ದೇಶದ ಸ್ವಾಭಿಮಾನಕ್ಕೇ ಕೊಡಲಿಯೇಟು ಕೊಟ್ಟಹಾಗೆ. ಇಂಥ ಬೇಡಿಕೆಯನ್ನು ಕಾನೂನು ಸಚಿವನಾಗಿ ನಾನು ನೆರವೇರಿಸಲು ಖಂಡಿತಾ ಸಾಧ್ಯವಿಲ್ಲ” ಎಂದು ಹೇಳಿ 370ನೇ ವಿಧಿಯ ಬೇಡಿಕೆಯನ್ನು ತಿರಸ್ಕರಿಸಿದರು.
  • ಅಂಬೇಡ್ಕರ್ ಐದು ವರ್ಷ ಇರಲಿ ಎಂದ ಮೀಸಲಾತಿಯನ್ನು ಐದು ದಶಕಗಳಿಗೆಳೆದು, ಅಂಬೇಡ್ಕರ್ವಿರೋಧಿಸಿದ್ದ 370ನೇ ವಿಧಿಯನ್ನು ಜಾರಿಗೆ ತಂದು ಕಾಂಗ್ರೆಸ್ ಸರಕಾರ ಅವರಿಗೆ ಅಂತಿಮ ನಮನಸಲ್ಲಿಸಿತು! ಹಿಂದೂ ಕಾಯ್ದೆಯ ವಿಷಯದಲ್ಲಿ ಅಂಬೇಡ್ಕರ್ ಮತ್ತು ನೆಹರೂ ಮಧ್ಯೆ ಮೂರು ವರ್ಷ ಮುಸುಕಿನ ಗುದ್ದಾಟ ನಡೆದು ಕೊನೆಗೆ 1951ರಲ್ಲಿ ಅಂಬೇಡ್ಕರ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ಅಂಬೇಡ್ಕರ್ ಬದುಕಿದ್ದಾಗಲೀ ಸತ್ತ ಮೇಲಾಗಲೀ ಭಾರತ ರತ್ನ ಸಿಗದಂತೆ ಕಾಂಗ್ರೆಸ್ ನೋಡಿಕೊಂಡಿತು. ಅಂಥದೊಂದು ಗೌರವ ಸಿಗಬೇಕಾದರೆ ಎಮರ್ಜೆನ್ಸಿಯ ನಂತರ ಅಧಿಕಾರಕ್ಕೆ ಬಂದ ಜನತಾ ಸರಕಾರ ಮನಸ್ಸು ಮಾಡಬೇಕಾಯಿತು.

ಸ್ಥೈರ್ಯ ಕುಂದಿಸಿದ ಸೋಲುಗಳು
ಅಂಬೇಡ್ಕರ್, ರಾಜಕೀಯ ಮಹತ್ವಾಕಾಂಕ್ಷೆಗಳಿದ್ದ ಮನುಷ್ಯ ಎಂಬುದರಲ್ಲಿ ಸಂಶಯವಿಲ್ಲ. 1936ರಲ್ಲಿ ಅವರು ಭಾರತೀಯ ಲೇಬರ್ ಪಾರ್ಟಿಯನ್ನು ಹುಟ್ಟುಹಾಕಿದರು. ಆಗಲೇ ಹೇಳಿದಂತೆ, ಕಾರ್ಮಿಕರ ಪಕ್ಷ ಎಂಬ ಹೆಸರಿದ್ದರೂ ಇದಕ್ಕೂ ಕಮ್ಯುನಿಸ್ಟ್ ಪಕ್ಷಕ್ಕೂ ಸಂಬಂಧವಿಲ್ಲ! ಇದು ಸಂಪೂರ್ಣವಾಗಿ ದಲಿತರಿಗಾಗಿ ಮೀಸಲಾದ ಪಕ್ಷ. ಬ್ರಿಟಿಷ್ ಭಾರತದಲ್ಲಿ ನಡೆಯುತ್ತಿದ್ದ ಪ್ರಾಂತೀಯ ಚುನಾವಣೆಗಳಲ್ಲಿ ಇದು ಸ್ಪರ್ಧಿಸುತ್ತಿತ್ತು. ಬಾಂಬೆ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟರಿಗೆ ಮೀಸಲಾದ ಕ್ಷೇತ್ರಗಳಲ್ಲಿ 13 ಸೀಟುಗಳನ್ನು ಕೂಡ ಗೆದ್ದಿತು. ಈ ಯಶಸ್ಸುಗಳ ಫಲವೋ ಏನೋ, 1942ರಲ್ಲಿ ಅಂಬೇಡ್ಕರ್, ವೈಸರಾಯ್‍ನ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವನಾಗಿ ಸೇರಿದರು. ನಾಲ್ಕು ವರ್ಷ ಕೆಲಸ ಮಾಡಿ 1946ರಲ್ಲಿ ನಿವೃತ್ತರಾದರು. 1942ರಲ್ಲೇ ಅವರು ಕಾರ್ಮಿಕ ಪಕ್ಷವನ್ನು ತಳಮಟ್ಟದಿಂದ ಪುನಾರಚಿಸಿ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್ (ಎಸ್‍ಸಿಎಫ್) ಎಂಬ ಹೊಸ ರಾಜಕೀಯ ಪಕ್ಷಕ್ಕೆ ಜನ್ಮ ಕೊಟ್ಟರು. ಇದು 1946ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಒಂದೂ ಸೀಟು ಗಳಿಸದೆ ನಾಮಾವಶೇಷವಾಯಿತು. ಈ ಸೋಲು ಅಂಬೇಡ್ಕರ್‍ರ ಮನಸ್ಥೈರ್ಯವನ್ನು ಕುಗ್ಗಿಸಿತು.

ಮುಂದೆ ಭಾರತ ಸ್ವತಂತ್ರವಾದ ಮೇಲೆ ಅವರು ಹಿಂದೂ ಕೋಡ್ ಬಿಲ್ ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನಿಸಿದರೂ ಅದು ನೆಹರೂ ಮತ್ತು ಉಳಿದ ಸಂಸದರ ವಿರೋಧದಿಂದಾಗಿ ಜಾರಿಯಾಗಲಿಲ್ಲ. ಭಾರತಕ್ಕೆ ಸಂವಿಧಾನ ಸಂಕಲಿಸಿ ಕೊಟ್ಟ ಮತ್ತು ಕಾಶ್ಮೀರದ ಅಖಂಡತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದ ಇದೇ ಅಂಬೇಡ್ಕರ್, ಭಾರತದಲ್ಲಿ ಜಾತಿಯಾಧಾರಿತ ಚುನಾವಣಾ ಪದ್ಧತಿ ಇರಬೇಕು; ಪರಿಶಿಷ್ಟ ಜಾತಿಗಳವರಿಗೆ ಪ್ರತ್ಯೇಕ ಪ್ರಾತಿನಿಧ್ಯ ಬೇಕು ಎಂದೂ ಪ್ರತಿಪಾದಿಸಿದರು! ಈ ಬೇಡಿಕೆ ಕೂಡ ನೆರವೇರಲಿಲ್ಲ. ಹೀಗೆ, ಜೀವಿತದ ಕೊನೆಯ ಕಾಲದಲ್ಲಿ ಹಲವು ಸೋಲುಗಳು ಮೇಲಿಂದ ಮೇಲೆ ಬಂದು ಅವರ ವ್ಯಕ್ತಿತ್ವದ ಗಟ್ಟಿತನವನ್ನು ಪರೀಕ್ಷೆಗೊಡ್ಡಿದವು ಎಂದು ಹೇಳಬಹುದು. ಅಂಬೇಡ್ಕರ್ ಭಾರತದಲ್ಲಿ ಜಿನ್ನಾ ಮಾದರಿಯಲ್ಲಿ ಪರಿಶಿಷ್ಟ ಜಾತಿಯನ್ನು ಪ್ರತ್ಯೇಕ ರಿಲಿಜನ್ನಿನಂತೆ ಬೆಳೆಸುವ ಕನಸು ಕಂಡರು ಎಂದು ಕೆಲ ವಿಮರ್ಶಕರು ಹೇಳುತ್ತಾರೆ. ಅವರ ಒಟ್ಟು ಸಾಧನೆಗಳ ಪಟ್ಟಿಯನ್ನು ನೋಡಿದಾಗ, ಈ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. 1927ರಿಂದ 1956ರವರೆಗಿನ ಒಟ್ಟು ಮೂವತ್ತು ವರ್ಷಗಳ ಅವರ ಹೋರಾಟದ ಜೀವನವನ್ನು ನೋಡಿದರೆ, ಅಲ್ಲಿ ಕಾಣುವ ಏಕೈಕ ಮಹದುದ್ಧೇಶ – ಪರಿಶಿಷ್ಟ ಜಾತಿಯ ಉದ್ಧಾರ. ಭಾರತ ಬ್ರಿಟಿಷರ ಆಡಳಿತದಲ್ಲಿದ್ದಾಗಲೂ ಅವರು ಒತ್ತಿ ಹೇಳುವ ಮಾತು ಅದೊಂದೇ. ಪರಿಶಿಷ್ಟ ಜಾತಿಯನ್ನು ಪ್ರತ್ಯೇಕವಾಗಿ ಬೆಳೆಸಲು ಅವರು ಮಾಡದ ಪ್ರಯತ್ನಗಳೇ ಇಲ್ಲ ಎನ್ನಬಹುದು. ರಾಜಕೀಯವಾಗಿ, ಸಾಮಾಜಿಕವಾಗಿ , ಧಾರ್ಮಿಕವಾಗಿ ಅದನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿ ದೊಡ್ಡ ಶಕ್ತಿಯಾಗಿ ಬೆಳೆಸಲು ಅಂಬೇಡ್ಕರ್ ಪ್ರಯತ್ನಿಸಿದರು. ದಲಿತರು ಸಂಘಟಿತರಾದರೆ ಮಾತ್ರ ಅವರ ಮಾತು ಸಮಾಜಕ್ಕೆ ಕೇಳುತ್ತದೆನ್ನುವುದು ಅಂಬೇಡ್ಕರರಿಗೆ ಚೆನ್ನಾಗಿ ಗೊತ್ತಿತ್ತು.

ನಡೆಯಲ್ಲಿ ಎಡವಿದರೇ?
ಆದರೆ, ದಲಿತರನ್ನು ಸಂಘಟಿಸುವಲ್ಲಿ ಅಂಬೇಡ್ಕರ್ ಎಡವಿದರೇ ಎಂಬ ಪ್ರಶ್ನೆಯನ್ನು ಈಗ, ಅವರು ತೀರಿಕೊಂಡು ಅರುವತ್ತು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ. ನೆನಪಿಡಿ: ಅಮೆರಿಕಾದಲ್ಲಿ ಕಪ್ಪು ಜನರ ಮೇಲಿದ್ದ ವರ್ಣದ್ವೇಷದ ವಿರುದ್ಧ ಆಂದೋಲನಗಳು ನಡೆದದ್ದು, ಕಾನೂನುಗಳು ಬಂದದ್ದು 1950ರ ನಂತರ. ಹಿಂದೊಮ್ಮೆ ಅಮೆರಿಕಾದ ಸಂವಿಧಾನದಲ್ಲೇ “ಒಬ್ಬ ನೀಗ್ರೋ  ಅಥವಾ ಒಂದು ಹೆಂಗಸು ಬಿಳಿಯ ಗಂಡಸಿನ 0.6ರಷ್ಟಕ್ಕೆ ಮಾತ್ರ ಸಮ. ಹಾಗಾಗಿ ಅವರಿಬ್ಬರಿಗೂ ಚುನಾವಣೆಯಲ್ಲಿ ಓಟು ಹಾಕುವ ಹಕ್ಕು ಇಲ್ಲ” ಎಂಬ ಮಾತುಗಳಿದ್ದವು! ಯುರೋಪಿನಲ್ಲಿ ಕೆಳವರ್ಗದ ಜನರ ಹಿತಾಸಕ್ತಿ ಕಾಪಾಡುವ ಕಾನೂನುಗಳು ಬಂದದ್ದು ಕೂಡ 50ರ ದಶಕದ ನಂತರವೇ. ಇಂದು ಈ ಎರಡು ಖಂಡಗಳನ್ನು ನೋಡಿದರೆ, ಅಲ್ಲಿನ ತಳಸಮುದಾಯ ಬಹಳಷ್ಟು ಮುಂದುವರಿದಿರುವುದು ಮಾತ್ರವಲ್ಲ, ಸಮಾಜದ ಮುಖ್ಯವಾಹಿನಿಯ ಜೊತೆ ಬೆರೆತಿರುವುದನ್ನು ನಾವು ನೋಡುತ್ತೇವೆ. ಆದರೆ, ಭಾರತದಲ್ಲಿ ಮಾತ್ರ ದಲಿತರು ಇನ್ನೂ ಮೀಸಲಾತಿಯಿಲ್ಲದೆ ಬೆಳವಣಿಗೆ ಸಾಧ್ಯವಿಲ್ಲ ಎಂಬ ಹಂತದಲ್ಲೇ ಇದ್ದಾರೆ. ಇದಕ್ಕೆ ಮುಖ್ಯ ಕಾರಣ, ದಲಿತರು ಮೀಸಲಾತಿ ಪಡೆಯುವುದು ಸಮಾಜದಲ್ಲಿ ಉಳಿದವರ ಸರಿಸಮಕ್ಕೆ ಬಂದು ನಿಲ್ಲುವುದಕ್ಕಲ್ಲ; ಅದು ಅವರ ಹಕ್ಕು ಎಂಬ ಉಪದೇಶವನ್ನು ನಮ್ಮ ಸರಕಾರಗಳ ಪರೋಕ್ಷವಾಗಿ ಮತ್ತು ನಿರಂತರವಾಗಿ ಮಾಡಿರುವುದು. ದಲಿತರ ಸ್ವಾವಲಂಬನೆಯ ಕಸುವನ್ನು ಮೀಸಲಾತಿ ಕಿತ್ತುತಿಂದಿದೆ. ಮೀಸಲಾತಿಗೂ ಅದನ್ನು ಪಡೆಯುವವರ ಆರ್ಥಿಕ ಪರಿಸ್ಥಿತಿಗೂ ತಳುಕು ಹಾಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಜಾತಿಯೊಂದೇ ಮಾನದಂಡ ಎಂದು ಹೇಳಲು ಹೋಗಿ ಮೀಸಲಾತಿ ಎಂಬ ಅತ್ಯಂತ ಸುಸಂಬದ್ಧ ವ್ಯವಸ್ಥೆಯನ್ನು ಕೂಡ ನಮ್ಮ ದೇಶದಲ್ಲಿ ಹಾದಿ ತಪ್ಪಿಸಿ ಹಳ್ಳ ಹಿಡಿಸಲಾಯಿತು. ಇಂದು, ಸಮಾಜದ ಮೇಲ್ವರ್ಗ ಎನ್ನಿಸಿಕೊಳ್ಳುವ ಹಲವರಿಗೆ ದಲಿತರ ಮೇಲೆ ಸಿಟ್ಟಿದೆ. ತಮ್ಮ ಸಹಜ ಅವಕಾಶಗಳನ್ನು ದಲಿತರು ಕಸಿದುಕೊಂಡಿದ್ದಾರೆಂಬ ಭಾವನೆ ಆಳವಾಗುತ್ತಿದೆ. ಒಂದಾಗಬೇಕಿದ್ದ ಸಮಾಜ ವಿಘಟನೆಯತ್ತ ಸಾಗುತ್ತಿದೆ. ಶಿಕ್ಷಣದಲ್ಲಿ ಮೀಸಲಾತಿಯನ್ನು ಒಪ್ಪೋಣ. ಆದರೆ ಉದ್ಯೋಗ, ಭಡ್ತಿ ಎಲ್ಲದರಲ್ಲೂ ಮೀಸಲಾತಿ ತರುವುದು ಅಂಬೇಡ್ಕರ್ ನಿಲುವಾಗಿತ್ತೇ? ಹೌದೇ ಆಗಿದ್ದರೆ, ಅದು ಅಂಬೇಡ್ಕರ್ ಅವರ ಚಿಂತನೆಯ ಸೋಲು ಎನ್ನಬೇಕಾಗುತ್ತದೆ.

ಇನ್ನು, ಎರಡನೆಯದಾಗಿ, ಅಂಬೇಡ್ಕರ್ ಸ್ವಲ್ಪಮಟ್ಟಿಗೆ ದೇಶದಲ್ಲಿ ಜಾತಿಯಾಧಾರದ ಧ್ರುವೀಕರಣವಾಗಲಿಕ್ಕೂ ಕಾರಣವಾದರು. ಭಾರತದಲ್ಲಿದ್ದ ಅಸಮಾನತೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪ್ರೇಕ್ಷೆ ಮಾಡಿ, ಇಲ್ಲಿನಷ್ಟು ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಜಗತ್ತಿನ ಬೇರೆಲ್ಲೂ ಇಲ್ಲ ಎಂಬಂತೆ ತೋರಿಸಲಾಯಿತು. ಇದನ್ನು ಅಂಬೇಡ್ಕರ್ ಕೂಡ ತನ್ನ ಭಾಷಣ ಮತ್ತು ಬರಹಗಳ ಮೂಲಕ ನಿರಂತರವಾಗಿ ಮಾಡಿದರು. ಇದರಿಂದ ಭಾರತ ಬೌದ್ಧಿಕವಾಗಿ ಹಿಂದುಳಿದ ದೇಶ; ಇಲ್ಲಿನ ಜನರಿಗೆ ಸಾಮಾಜಿಕ ಪ್ರಜ್ಞೆ ಇಲ್ಲ ಎಂಬ ಸಂದೇಶ ಹೊರಜಗತ್ತಿಗೆ ಹೋಯಿತು. ಜೊತೆಗೆ, ಭಾರತದೊಳಗಿದ್ದ ತಳಸಮುದಾಯದ ಜನರಿಗೂ ತಾವು ಅತ್ಯಂತ ಭೀಕರವಾದ ಶೋಷಣೆಗೊಳಗಾಗಿದ್ದೇವೆ; ಜಗತ್ತಿನ ಅತ್ಯಂತ ದುರ್ಭಾಗ್ಯಶಾಲಿಗಳು ತಾವು ಎಂಬ ಮನಸ್ಥಿತಿ ಹುಟ್ಟಿಕೊಂಡಿತು. ಅಮೆರಿಕಾ ಅಥವಾ ಆಫ್ರಿಕಾದಂಥ ದೇಶಗಳಲ್ಲಿ ಗುಲಾಮರ ಕೈಕಾಲುಗಳಿಗೆ ದೊಡ್ಡ ಸರಪಳಿ ಹಾಕಿ ಬೀಗ ಜಡಿದು ಅಮಾನವೀಯವಾಗಿ ನಡೆಸಿಕೊಂಡಂತೆ ಭಾರತದಲ್ಲಿ ಎಂದೂ ಶೋಷಣೆ ನಡೆಯಲಿಲ್ಲ. ಆದರೆ, ಅಂಬೇಡ್ಕರ್ ಭಾರತದ ಶೋಷಣೆಯ ಚಿತ್ರವನ್ನು ಘನಘೋರವಾಗಿ ಬಿಂಬಿಸಿದರು. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯ ಬೆಳೆಯಲು ಕೂಡ ಇದೇ ಪ್ರಮುಖ ಕಾರಣ. ಗಾಂಧಿ, ಹರಿಜನರು ದೇವಸ್ಥಾನ ಪ್ರವೇಶಿಸಬೇಕೆಂದು ಬಯಸಿದರೂ, ಅಂಬೇಡ್ಕರ್, ಹಾಗಾಗದೆ ಹೋದರೆ ನಾವು ಜಾತಿ ಬಿಟ್ಟು ಬೇರೆ ಧರ್ಮವನ್ನು ಸ್ವೀಕರಿಸುತ್ತೇವೆ ಎಂದು ಹೇಳಿಬಿಟ್ಟರು. ಮಹಾರಾಷ್ಟ್ರದಲ್ಲಿ ಮಹಾರ್ ಜನಾಂಗದ ಕೆಲವರು ದಲಿತ ಜಾತಿಯಿಂದ ಮುಸ್ಲಿಂ ರಿಲಿಜನ್ನಿಗೆ ಮತಾಂತರವಾಗಿ ಹಿಂದೂಗಳಿಗೆ ಭೀತಿ ಹುಟ್ಟಿಸಲಿಕ್ಕೂ ನೋಡಿದರು. ಕೂಡಲೇ ಮುಸ್ಲಿಂ ಮುಲ್ಲಾಗಳೂ ಕ್ರೈಸ್ತ ಮಿಷನರಿಗಳೂ ಅಂಬೇಡ್ಕರ್ ಮನೆಮುಂದೆ ಕಾಯುವ ಪರಿಸ್ಥಿತಿ ಉದ್ಭವವಾಯಿತು. ಯಾಕೆಂದರೆ, ಅಂಬೇಡ್ಕರ್ ಹಿಂದೂ ಧರ್ಮವನ್ನು ಬಿಟ್ಟು ಯಾವ ರಿಲಿಜನ್ ಸ್ವೀಕರಿಸುತ್ತಾರೋ ಅದಕ್ಕೆ ಸಹಸ್ರಾರು ಸಂಖ್ಯೆಯ ಹೊಸ ಮತಾಂತರಿಗಳ ಸೇರ್ಪಡೆಯಾಗುತ್ತದೆ ಎಂಬುದು ಅವರಿಗೆಲ್ಲ ತಿಳಿದುಹೋಗಿತ್ತು. ಒಟ್ಟಿನಲ್ಲಿ, ತಮ್ಮದು ಅತ್ಯಂತ ಹೀನಾಯ ಬದುಕು ಎಂದು ದಲಿತರು ತಮ್ಮನ್ನು ತಾವೇ ನಂಬಿಸಿಕೊಳ್ಳುವಂತೆ ಇವೆಲ್ಲ ಸನ್ನಿವೇಶಗಳು ಸೃಷ್ಟಿಯಾದವು.

ಮೂರನೆಯದಾಗಿ, ಅಂಬೇಡ್ಕರ್ ಅವರ ಮತಾಂತರ ದೇಶದ ಲಕ್ಷಾಂತರ ದಲಿತರನ್ನು ಅಭದ್ರರನ್ನಾಗಿ ಮಾಡಿತು. ಸುಮಾರು ಇಪ್ಪತ್ತು ವರ್ಷಗಳ ಕಾಲ ವಿವಿಧ ರಿಲಿಜನ್ನುಗಳನ್ನು ಅಭ್ಯಾಸ ಮಾಡಿದ ಅಂಬೇಡ್ಕರ್ ಕೊನೆಗೆ ಬೌದ್ಧ ಮತವನ್ನು ಆಯ್ದುಕೊಂಡರು. ಹಾಗೆ ಬೌದ್ಧನಾಗುವುದು ಖಚಿತವಾದ ಮೇಲೆ ಅವರು 1948ರಲ್ಲಿ ಒಂದು ಹೊಸ ಸಿದ್ಧಾಂತವನ್ನು ಮಂಡಿಸಿದರು. ಅದರ ಪ್ರಕಾರ, ಭಾರತದ ದಲಿತರು ಅಸ್ಪೃಶ್ಯರೆಂದು ಕರೆಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಬ್ರಾಹ್ಮಣರು. ಬುದ್ಧ ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ತನ್ನ ಬೋಧನೆಗಳನ್ನು ಮಾಡಿದಾಗ ಈ ದೇಶದ ಮೂಲನಿವಾಸಿಗಳು ಆತನತ್ತ ಆಕರ್ಷಿತರಾದರು. ಮುಂದೆ, ಆತನಿಂದ ಒದಗಿದ ಅಪಾಯ ಅರಿತ ಬ್ರಾಹ್ಮಣರು ಅನುಯಾಯಿಗಳಾಗಿ ಹೋಗಿ ಸೇರಿಕೊಂಡಿದ್ದ ಎಲ್ಲರನ್ನೂ ಬಲಾತ್ಕಾರದಿಂದ ಈಚೆ ತಂದರು. ಆದರೆ ಬ್ರಾಹ್ಮಣರ ಬಲವಂತಕ್ಕೂ ಜಗ್ಗದೆ ಬುದ್ಧನ ಜೊತೆ ಉಳಿದವರು ದಲಿತರು ಮಾತ್ರ. ತಮ್ಮ ಧಾರ್ಮಿಕ ವಿಧಿವಿಧಾನಗಳಲ್ಲಿ, ಸಂಪ್ರದಾಯಗಳಲ್ಲಿ ಬ್ರಾಹ್ಮಣರನ್ನು ದೂರವಿಟ್ಟಿದ್ದರಿಂದಲೇ ಅವರ ಮೇಲೆ ಬ್ರಾಹ್ಮಣರು ಹಗೆ ಬೆಳೆಸಿಕೊಂಡರು. ತಮ್ಮ ಪ್ರಯತ್ನವನ್ನೂ ಮೀರಿ ದಲಿತರು ಬುದ್ಧನ ಜೊತೆ ಉಳಿದುಕೊಂಡಿದ್ದರಿಂದ ಬ್ರಾಹ್ಮಣರು ಅವರನ್ನು ಅಸ್ಪೃಶ್ಯರು ಎಂದು ಕರೆದರು – ಇದು ಅಂಬೇಡ್ಕರ್ ಅಸ್ಪೃಶ್ಯತೆಯ ಕುರಿತು ಬೆಳೆಸಿದ ಸಿದ್ಧಾಂತ. ಅಂಬೇಡ್ಕರ್, ಮತಾಂತರವಾಗುವುದು ಖಚಿತವಾದ ಮೇಲೆ ಸಿಖ್ ಮತವನ್ನೂ ಪರಿಗಣಿಸಿದ್ದರು. ಒಂದು ವೇಳೆ, ಸಿಖ್ ಮತಕ್ಕೆ ಹೋಗುವುದೆಂದು ನಿರ್ಧಾರವಾಗಿದ್ದರೆ, ಅವರ ಸಿದ್ಧಾಂತ ಸಿಖ್ಖರನ್ನೂ ಬ್ರಾಹ್ಮಣರನ್ನೂ ವೈರಿಗಳಾಗಿ ಚಿತ್ರಿಸುತ್ತಿತ್ತು. ಈ ಸಿದ್ಧಾಂತದಿಂದ ಅತಂತ್ರರಾದವರು ಯಾರು ಎಂದರೆ ದಲಿತರು ಮಾತ್ರ. ಇಂದಿಗೂ ದೇಶದ ಕೋಟ್ಯಂತರ ದಲಿತರಿಗೆ ತಾವು ಬುದ್ಧನ ಮತಕ್ಕೆ ಯಾಕೆ     ಹೋಗಬೇಕು ಎಂದು ಗೊತ್ತಿಲ್ಲ. ಅಸಲಿಗೆ ಬೌದ್ಧಮತ ಬ್ರಾಹ್ಮಣ ವಿರೋಧಿ ಎಂಬ ಸಿದ್ಧಾಂತವೇ 1948ರ ಹಿಂದೆ ಇರಲಿಲ್ಲ! ಇಂದಿಗೂ ಉತ್ತರ ಭಾರತದಲ್ಲಾಗಲೀ ಚೀನಾ ಕೊರಿಯಾ ಜಪಾನ್ ಥೈಲ್ಯಾಂಡ್ ಬರ್ಮಾಗಳಲ್ಲಾಗಲೀ ಬೌದ್ಧಮತ ಬ್ರಾಹ್ಮಣ್ಯಕ್ಕೆ ವಿರೋಧಿಯಾಗಿತ್ತು ಎಂಬ ಸಿದ್ಧಾಂತವಿಲ್ಲ. ಭಾರತದಲ್ಲಿ ದಲಿತರು ಅತಂತ್ರರಾಗಿ ಉಳಿಯುವುದಕ್ಕೆ ಈ ಸಿದ್ಧಾಂತವೂ ಕಾರಣವಾಯಿತು ಎಂಬುದನ್ನು ನಾವು
ಒಪ್ಪಿಕೊಳ್ಳಬೇಕಾಗಿದೆ. ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಏಕೈಕ ಅನುಕೂಲತೆ ಬಿಟ್ಟರೆ ಇಂದಿಗೂ ಬೌದ್ಧಮತ ದಲಿತರನ್ನು ತನ್ನ ಜನರು ಎಂದು ಒಪ್ಪಿಕೊಂಡಿಲ್ಲ. ಅದೊಂದು ಮತವಲ್ಲ; ಹಿಂದೂ (ಅಥವಾ ಸನಾತನ) ಧರ್ಮದೊಳಗಿನ ದರ್ಶನವಷ್ಟೇ ಎಂಬುದು ತಿಳಿಯುವುದು, ಬೌದ್ಧಮತದ ಒಳಹೊಕ್ಕು ನೋಡಿದಾಗಲಷ್ಟೇ. ಸಂಪ್ರದಾಯಗಳ ಆಚರಣೆಗಳ ವಿಷಯದಲ್ಲಿ ಅದು ಹಿಂದೂ ಧರ್ಮಕ್ಕಿಂತ ಹೆಚ್ಚು ಸನಾತನಿಯಾಗಿದೆ.

ಸಂವಿಧಾನದ ಹುಟ್ಟು
ಜಗತ್ತಿನ ಎಲ್ಲ ಸಂವಿಧಾನಗಳ ಪೈಕಿ ಭಾರತದ್ದೇ ದೊಡ್ಡದು. ಅದೇ ಕಾರಣಕ್ಕೆ ನಮ್ಮ ದೇಶವನ್ನು ಜಗತ್ತಿನ ಅತಿದೊಡ್ಡ ಸಾಂವಿಧಾನಿಕ ಪ್ರಜಾಪ್ರಭುತ್ವ ಎಂದೂ ಕರೆಯುತ್ತಾರೆ. ಜಗತ್ತಿನ ಹತ್ತುಹಲವು ಸಂವಿಧಾನಗಳನ್ನು ಪರಾಮರ್ಶಿಸಿ ಅವುಗಳ ಅತ್ಯುತ್ತಮ ಅಂಶಗಳನ್ನೆಲ್ಲ ಅಳವಡಿಸಿಕೊಂಡ ದೇಶವಿದು. ಸಂವಿಧಾನ ಸಮಿತಿಯ ಮುಖ್ಯಸ್ಥರಾಗಿದ್ದವರು ಅಂಬೇಡ್ಕರ್. ಇದರ ನೆನಪಿಗಾಗಿ ಸಂಸತ್ತಿನ ಹೊರಭಾಗದಲ್ಲಿ, ಸಂವಿಧಾನವನ್ನು ತನ್ನ ಕೈಯಲ್ಲಿ ಹಿಡಿದು ಗತ್ತಿನಿಂದ ನಿಂತ ಅಂಬೇಡ್ಕರರ ಶ್ಯಾಮವರ್ಣದ ಪ್ರತಿಮೆಯೂ ಇದೆ. ಮೂಲತಃ ಸಂವಿಧಾನದ ಕರಡನ್ನು ರಚಿಸಿಕೊಟ್ಟವರು ನಮ್ಮ ಕರ್ನಾಟಕದವರೇ ಆದ ಬೆನಗಲ್ ನರಸಿಂಗ ರಾಯರು. ಬ್ರಿಟಿಷರ ಕೈಯಿಂದ ಇನ್ನೊಂದು ವರ್ಷದಲ್ಲಿ ಭಾರತಕ್ಕೆ ಅಧಿಕಾರ ಹಸ್ತಾಂತರ ಖಚಿತ ಎನ್ನುವುದು ಅಧಿಕೃತವಾದ ಮೇಲೆ, 1946ರಲ್ಲಿ, ಭಾರತದ ಸಂವಿಧಾನ ಸಮಿತಿ ನೇಮಿಸಲಾಯಿತು. ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದ ನರಸಿಂಗ ರಾಯರು ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದ ಸಂವಿಧಾನದ ಕರಡನ್ನು ತಯಾರಿಸಿ ಸಮಿತಿಯ ಮುಂದಿಟ್ಟರು. ಈ ಮೂಲವನ್ನಿಟ್ಟುಕೊಂಡು ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಸಂವಿಧಾನ ಕರಡು ರಚನಾ ಸಮಿತಿ ಮಾಡಿತು. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಎನ್. ಮಾಧವ ರಾವ್, ಸಯ್ಯದ್ ಮೊಹಮದ್ ಸಾದುಲ್ಲಾ, ಡಿ.ಪಿ. ಖೈತಾನ್ ಮುಂತಾದ ಅತಿರಥ ಮಹಾರಥರೆಲ್ಲ ಇದ್ದರೆನ್ನುವುದು ನಮ್ಮ ಹೆಮ್ಮೆ. ಹೀಗೆ ಸುಮಾರು ಮೂರು ವರ್ಷಗಳ ಕಾಲ ಅವಿರತವಾಗಿ ನಡೆದ ಕೆಲಸ ಕೊನೆಮುಟ್ಟಿದಾಗ ಅದರಲ್ಲಿ ಒಟ್ಟು 315 ವಿಧಿಗಳು ಮತ್ತು 8 ಅನುಚ್ಛೇದಗಳಿದ್ದವು. ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ, ಅವುಗಳ ಸಂಖ್ಯೆ 395ಕ್ಕೇರಿತು. ಹೀಗೆ ಬೆನಗಲ್ ನರಸಿಂಗ ರಾಯರು ರಚಿಸಿದ ಮೂಲ ಸಂವಿಧಾನವನ್ನು ಪರಿಷ್ಕರಿಸಿ ಇಂದಿನ ರೂಪಕ್ಕೆ ಬೆಳೆಸಿದ ಕೀರ್ತಿ ಸಂವಿಧಾನ ಸಮಿತಿಯ ಸದಸ್ಯರು ಮತ್ತು ಸಮಿತಿಯ ಅಧ್ಯಕ್ಷ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.

ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾದ ಒಂದಷ್ಟು ಸಂಗತಿಗಳಿವೆ. ಅಂಬೇಡ್ಕರರು ತನ್ನ ದಲಿತ ಅನುಯಾಯಿಗಳ ಜೊತೆಗೆ ಬೇರೆ ಧರ್ಮವನ್ನು ಸೇರುವ ಮಾತು 1930ರಿಂದಲೂ ಜಾರಿಯಲ್ಲಿತ್ತು. “ನಾನು ಹಿಂದೂವಾಗಿ ಹುಟ್ಟಿದೆ. ಆದರೆ ಹಿಂದೂ ಆಗಿ ಸಾಯಲಾರೆ” ಎಂಬ ಘೋಷಣೆಯನ್ನು ಅಂಬೇಡ್ಕರ್ ಅದಾಗಲೇ ಮಾಡಿದ್ದರು. 1947ರ ಮೇ ತಿಂಗಳಲ್ಲಿ, ಸಂವಿಧಾನದ ಕರಡು ರಚನೆಯಾಗುತ್ತಿದ್ದ ಸಂದರ್ಭದಲ್ಲಿ, ಕೆ.ಎಂ. ಮುನ್ಷಿ, ಸಂವಿಧಾನದಲ್ಲಿ ಮತಾಂತರ ನಿಷೇಧ ಕಾಯಿದೆಯೂ ಇರಬೇಕೆಂದು ಹೇಳಿ ಅದಕ್ಕೆ ಸಂಬಂಧಿಸಿದ ವಿಧಿಗಳನ್ನು ಸೇರಿಸಿದರು. ಆದರೆ, ಇದಕ್ಕೆ ಅಂಬೇಡ್ಕರರಿಂದ ತೀವ್ರ ವಿರೋಧ ಬಂತು. ಹಾಗೆಯೇ, ಭಾರತದ ಧ್ವಜದಲ್ಲಿ ಅಶೋಕ ಚಕ್ರ ಸೇರಿಸಲು, ರಾಷ್ಟ್ರೀಯ ಚಿಹ್ನೆಯಲ್ಲಿ ಸಾರಾನಾಥದ ಸಿಂಹಗಳ ಚಿತ್ರ ಸೇರಿಸಲು ಅಂಬೇಡ್ಕರರು ಪ್ರಮುಖ ಕಾರಣೀಭೂತರು ಎಂಬ ಮಾತೂ ಇದೆ. ಗುಪ್ತರು, ಮೌರ್ಯರು, ಶಾತವಾಹನರು, ವಿಜಯ ನಗರದ ಅರಸರು ಮುಂತಾದ ಸಾಮ್ರಾಜ್ಯಗಳ ಸಾಧನೆಗಳನ್ನು ಬದಿಗಿಟ್ಟು ಅಶೋಕನಿಗೆ ಸಂಬಂಧಿಸಿದ ಎರಡು ಪ್ರತೀಕಗಳನ್ನು ನಾವು ಬಳಸಿಕೊಂಡದ್ದು ನಿಜಕ್ಕೂ ವಿಚಿತ್ರವಾಗಿ ಕಾಣಿಸುತ್ತದೆ. ಅಲ್ಲದೆ, ಭಾರತೀಯ ಕ್ಯಾಲೆಂಡರಿನಲ್ಲಿ ಬುದ್ಧಜಯಂತಿಯನ್ನು ರಜಾದಿನವಾಗಿ ಘೋಷಿಸುವ ಹಿಂದೆಯೂ ಅಂಬೇಡ್ಕರ್ ಪ್ರಭಾವ ಬೀರಿದರು ಎಂಬ ಮಾತುಗಳು ಕೇಳಿಬರುತ್ತವೆ. ಇವೆಲ್ಲ
ವಿವಾದಾತ್ಮಕ ಮತ್ತು ಚರ್ಚಾಸ್ಪದ ವಿಷಯಗಳು. ಅಂಬೇಡ್ಕರ್ ನಡೆಗೆ ಬೇರೆ ಕಾರಣಗಳಿರಲಿಕ್ಕೂ ಸಾಕು. ವೈಯಕ್ತಿಕ ಹಿತಾಸಕ್ತಿಗಳಿಗಾಗಿ ರಾಷ್ಟ್ರದ ಹಿತವನ್ನು ಬಲಿಕೊಡುವ ಅಥವಾ ತಿದ್ದುವ ಕೆಲಸಗಳನ್ನು ಮಾಡುವಷ್ಟು ಅಂಬೇಡ್ಕರ್ ಕೆಳಮಟ್ಟದಲ್ಲಿರಲಿಲ್ಲ ಎಂದು ನಂಬಬಹುದು.

ಮೊದಲೇ ಹೇಳಿದ ಹಾಗೆ ಅಂಬೇಡ್ಕರ್ ಸರಳರಲ್ಲ. ಯಾವುದೇ ಕಾಲಘಟ್ಟದಲ್ಲಿ ಬದುಕಿದ ರಾಷ್ಟ್ರೀಯ ನೇತಾರರಂತೆ ಅವರ ವ್ಯಕ್ತಿತ್ವ, ಬದುಕು, ಚಿಂತನೆಗಳು ಕೂಡ ನಿಗೂಢ ಮತ್ತು ಸಂಕೀರ್ಣ. ಹಾಗಾಗಿಯೇ ಅಂಬೇಡ್ಕರ್ ವಿಷಯದಲ್ಲಿ ಹಲವಾರು ಗೊಂದಲಗಳು ಇನ್ನೂ ಉಳಿದುಕೊಂಡಿವೆ. ಆದರೆ ಈ ಎಲ್ಲ ಗೊಂದಲಗಳಿಗೆ ಅತೀತವಾದ ಹಲವು ಜನಾನುರಾಗಿ ಕೆಲಸಗಳನ್ನು ಅವರು ಮಾಡಿದ್ದಾರೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆಗೊಳ್ಳುವುದರ ಹಿಂದೆ ಅಂಬೇಡ್ಕರರ ಆಳವಾದ ಚಿಂತನೆ ಕೆಲಸ ಮಾಡಿದೆ. 1955ರಲ್ಲೇ ಅವರು ಮಧ್ಯಪ್ರದೇಶ ಮತ್ತು ಬಿಹಾರಗಳನ್ನು ಒಡೆದು ಎರಡು ರಾಜ್ಯಗಳನ್ನು ಮಾಡುವ ಪ್ರಸ್ತಾಪ ಮುಂದಿಟ್ಟಿದ್ದರು. ಅವರ ಮಾತು ಸರಿಯೆಂದು ಸರಕಾರಕ್ಕೆ ಅನ್ನಿಸಲು 45 ವರ್ಷಗಳು ಬೇಕಾದವು! 2000ನೇ ಇಸವಿಯಲ್ಲಿ ಈ ರಾಜ್ಯಗಳನ್ನು ತುಂಡರಿಸಿ ಛತ್ತೀಸಗಡ ಮತ್ತು ಜಾರ್ಖಂಡ್ ರಾಜ್ಯಗಳನ್ನು ಸ್ಥಾಪಿಸಲಾಯಿತು. ಏಳನೇ ಕಾರ್ಮಿಕ ಸಮಾವೇಶದಲ್ಲಿ ಅಂಬೇಡ್ಕರ್, ಕಾರ್ಮಿಕರ ಕೆಲಸದ ಸಮಯವನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದರು. ಅದಕ್ಕಾಗಿ ದೇಶಾದ್ಯಂತ ಇರುವ ಕೋಟ್ಯಂತರ ಕಾರ್ಮಿಕರು ಅವರಿಗೆ ಋಣಿಗಳಾಗಿರಬೇಕು. ಭಾರತದಲ್ಲಿ ಹಿರಾಕುಡ್, ದಾಮೋದರ ಮುಂತಾದ ನದಿ ಅಣೆಕಟ್ಟುಗಳ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಪರಿಶಿಷ್ಟ ಜಾತಿಯ ಜನರಿಗೆ ಧ್ವನಿ ಕೊಟ್ಟು, ವೇದಿಕೆಯೊದಗಿಸಿದ; ಅವರ ಕಷ್ಟ ತಳಮಳಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತೆ ನೋಡಿಕೊಂಡ ಶೋಷಿತ ಸಮುದಾಯದ ನಾಯಕ ಅಂಬೇಡ್ಕರ್. ದಲಿತರೂ ಮುಖ್ಯವಾಹಿನಿಗೆ ಬರುವಂತಾಗಬೇಕು; ಎಲ್ಲರೂ ಸಮಾನತೆ ಸಾಧಿಸಬೇಕು ಎಂದು ಅವರು ಕನಸಿದರು. ಆದರೆ ಅಂಬೇಡ್ಕರ್ ಸಂಘಟಿಸಿದ ದಲಿತ ಎಂಬ ಮಹಾಶಕ್ತಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳುವ ಬದಲು ನಮ್ಮ ರಾಷ್ಟ್ರೀಯ ಪಕ್ಷಗಳು ಮತ್ತು ಸರಕಾರಗಳು ವೋಟ್‍ಬ್ಯಾಂಕ್ ಎಂಬಂತೆ ಬೆಳೆಸುತ್ತಿವೆ, ಬಳಸುತ್ತಿವೆ ಎಂಬುದು ಇತಿಹಾಸದ ಕ್ರೂರ ವ್ಯಂಗ್ಯ.

 

17 ಟಿಪ್ಪಣಿಗಳು Post a comment
  1. ಏಪ್ರಿಲ್ 14 2016

    ಡಾಕ್ಟರ್ ಬಿ. ಆರ್. ಅಂಬೆಡ್ಕರರ 125ನೇ ಜನ್ಮದಿನದ ಶುಭಾಷಯಗಳೊಂದಿಗೆ,
    ಪೂಜ್ಯ ಅಂಬೆಡ್ಕರರ ಧ್ಯೇಯೋಧ್ಧೇಷಗಳನ್ನು ಅರಿತುಕೊಂಡು ಸಕಲರೊಡನೆ ಬಾಂಧವ್ಯ ಬೆಸೆಯುವ ಶಕ್ತಿಯನ್ನು ಪರಮಾತ್ಮ ನಮಗೆಲ್ಲಾ ಕರುಣಿಸಲಿ
    ಜೈ ಸಮತೆಯ ಶಿಲ್ಪಿ
    ಜೈ ಜೈ ಮಹಾತ್ಮಾ ಅಂಬೆಡ್ಕರ್

    ಉತ್ತರ
  2. ನಾಗೇಂದ್ರ
    ಏಪ್ರಿಲ್ 14 2016

    ಚಕ್ರತೀರ್ಥ,, ನಿಮ್ಮ ಲೇಖನ ಸುಳ್ಳಿನಿಂದ ಕೂಡಿದೆ ಮತ್ತು ನಿಮ್ಮದು ಕೊಳಕು ಮನಸ್ಸು.

    ಉತ್ತರ
    • ಮೃತ್ಯುಂಜಯ
      ಏಪ್ರಿಲ್ 14 2016

      ಅತ್ಯಂತ ಕೀಳು ಮನಸ್ಸು ಮತ್ತು ಅಭಿರುಚಿಯಿಂದ ಬರೆದಿದ್ದಾರೆ. ಬಹುಶಃ ಅಂಬೇಡ್ಕರ್ ಬುದ್ಧಿ ಮತ್ತೆ ಯನ್ನು ಒಪ್ಪಲು ಸಹಲೇಖಕರ ಬ್ರಾಹ್ಮಣ್ಯ ಅಡ್ಡಿಪಡಿಸಿದೆ.ಇಂಥವರಿದ ಲೇ ರಾಷ್ಟ್ರೀಯ ತೆಗೂ ಧಕ್ಕೆ…. ದೇಶಭಕ್ತಿಗೂ ಅಪಮಾನ

      ಉತ್ತರ
  3. sagar
    ಏಪ್ರಿಲ್ 14 2016

    Your article looks immature and you tried to enforce your thoughts by taking the incidents of a great Leader. Better you read enough and understand the facts.

    ಉತ್ತರ
  4. ಶೆಟ್ಟಿನಾಗ ಶೇ.
    ಏಪ್ರಿಲ್ 14 2016

    ನಿಲುಮೆಯ ಆತ್ಮೀಯ ಗೆಳೆಯರೇ, ತಮಗೆಲ್ಲರಿಗೂ ಬಾಬಾಸಾಹೇಬ್ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಮ್ಮ ನೆಚ್ಚಿನ ಕ್ರಾಂತಿಕಾರಿ ಶರಣ ದರ್ಗಾ ಸರ್ ಅವರು ಭಾರತದ ನಾಗರಿಕ ಸಮಾಜದ ಆದರ್ಶಪ್ರಾಯ ನಾಯಕರಾದ ಬಸವಣ್ಣನವರು ಮತ್ತು ಬಾಬಾಸಾಹೇಬ್ ಅವರು ಇಬ್ಬರ ಬಗ್ಗೂ ಆಳವಾದ ಅಧ್ಯಯನ, ಸಂಶೋಧನೆ ಹಾಗೂ ಚಿಂತನೆ ಮಾಡಿದವರು. ಈಗ ಅವರ ಪರಿಶ್ರಮದ ಫಲ ಒಂದು ಮಹಾನ್ ಸಂಶೋಧನಾ ಗ್ರಂಥದ ರೂಪದಲ್ಲಿ ಮೈತಾಳಿದೆ. ಸದರಿ ಗ್ರಂಥದ ಲೋಕಾರ್ಪಣೆ ಸದ್ಯ್ದದಲ್ಲೇ ನಡೆಯಲಿದೆ. ತಾವೆಲ್ಲರೂ ತಪ್ಪದೆ ಬರತಕ್ಕದ್ದು, ಕನಿಷ್ಠ ಒಂದೆರಡು ಪ್ರತಿಗಳನ್ನು ಖರೀದಿಸತಕ್ಕದ್ದು, ಬಂಧುಬಾಂಧವರಿಗೆ ಮಿತ್ರಿಗೆ ಹಂಚತಕ್ಕದ್ದು, ನಿಲುಮೆಯಲ್ಲೂ ಚರ್ಚೆ ಮಾಡತಕ್ಕದ್ದು. ಹೆಚ್ಚಿನ ಮಾಹಿತಿಗೆ ನೋಡಿ: _http://ladaiprakashanabasu.blogspot.in/2016/04/14.html

    ಜೈ ಭೀಮ್! ಜೈ ಬುದ್ಧ! ಜೈ ಬಸವಣ್ಣ!

    ಉತ್ತರ
    • ಶೆಟ್ಟಿನಾಗ ಶೇ.
      ಏಪ್ರಿಲ್ 15 2016

      ಹೆಪ್ಪುಗಟ್ಟಿದ ದುಃಖ ಕರಗುವಾಗ
      ಮೌನಹರಿಗೋಲಲ್ಲಿ ಹರಿದಾಡುತ್ತಾ
      ಬಿಕ್ಕುವವರ ಭಿಕುವೆ ನಿನಗೆ ನಮನ.

      ಚಿಂತೆಯ ಕಂತೆ ಹೊತ್ತು
      ಶತಮಾನಗಳಿಂದ ಮುನ್ನಡೆದವರ
      ದಾರಿದೀಪವೇ ಹರಿಸುವೆ ಗಮನ.

      ಲೋಕದ ಸುಖದ ಮೂಲ
      ಹುಡುಕಿಕೊಂಡು ಹೋರಾಟ ಸಾಧಕನೆ
      ಅರಲಿಲ್ಲ ಇನ್ನೂ ಪ್ರೀತಿ ಸುಮನ.

      ಭರತವರ್ಷದ ತುಂಬಾ
      ಬಾರಿಸಿದರೂ ಎಚ್ಚರಿಕೆಯ ಘಂಟೆ
      ನಿಲ್ಲಲಿಲ್ಲ ದಲಿತರ ದಮನ.

      ನಿನ್ನ ಒಳಗಣ್ಣಿಲ್ಲದ ಪ್ರಜಾಪ್ರಭುತ್ವದಲ್ಲಿ
      ಓಟಿನ ಬಲಿಗಳ ಮೇಲೆ ಕಾಲಿಡಲು
      ಸದಾ ಸಿದ್ಧ ಜಾತಿ ವಾಮನ.

      ಇಂಥ ಮನುಸ್ಮೃತಿಯ ಕಾಡಲ್ಲಿ
      ಮುಟ್ಟಿದರೆ ಮುನಿಯುವ ಮುಳ್ಳು ತುಳಿದ
      ಅರಿವೇ ಕೊಡುವೆ ನನ್ನ ಹೂಮನ.

      ‘ಅಂಬೇಡ್ಕರ್ಗೆ ನಮನ’, ರಂಜಾನ ದರ್ಗಾ.

      ಉತ್ತರ
  5. ಶೆಟ್ಟಿನಾಗ ಶೇ.
    ಏಪ್ರಿಲ್ 14 2016

    ರೋಹಿತ್ ಸಾಹೇಬರೇ, ಬಾಬಾಸಾಹೇಬ್ ಅವರ ಜನ್ಮದಿನ ಇಂದು. ಅನೇಕ ಸಂಘಟನೆಗಳು ಅಂಬೇಡ್ಕರ್ ಅವರ ಹೋರಾಟವು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ ಅಂತ ಅನೇಕ ಕಡೆ ದಲಿತ ಕೇರಿಗಳಲ್ಲಿ ಸಹಪಂಕ್ತಿ ಭೋಜನವನ್ನು ಏರ್ಪಡಿಸಿವೆ. ದೊಡ್ಡ ದೊಡ್ಡ ಮಾತುಗಳನ್ನು ಆಡುವ ನೀವು ಹಾಗೂ ನಿಮ್ಮಂತಹ ಪಡ್ಡೆ ಹುಡುಗರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆ ನಿಮ್ಮ ಮಾತಿಗೆ ಅರ್ಥವಿರುತ್ತಿತ್ತು. ಹೋಗಲಿ ನಾಳೆ ರಾಮ ನವಮಿಗೆ ದಲಿತ ಕೇರಿಯ ಜನರನ್ನು ನಿಮ್ಮ ಮನೆಗೆ ಕರೆಸಿ ಸವರ್ಣೀಯರಿಗೆ ನೀಡುವ ಮರ್ಯಾದೆ ಸತ್ಕಾರ ನೀಡಿ ಒಟ್ಟಿಗೆ ಬೇಲದ ಪಾನಕವನ್ನು ಜೊತೆಗೆ ಕುಡಿಯಿರಿ. ಆಗಬಹುದಾ?

    ಉತ್ತರ
    • ಏಪ್ರಿಲ್ 14 2016

      ನಾಗಶೆಟ್ಟಿ ಎಂಬ ಎಡಬಿಡಂಗಿಯು ಮೊದಲೊಮ್ಮೆ ಕುಚೋದ್ಯದ ಮಾತನಾಡಿ witian ಅವರ ಈಟಿಯಿಂದಲೂ,ಸುದರ್ಶನ ಚಕ್ರದಿಂದಲೂ ಸರಿಯಾಗಿ ಇಕ್ಕಿಸಿಕೊಂಡು ತಲೆಯು ಬಾಲದ ಜಾಗಕ್ಕೂ, ಬಾಲ ತಲೆಯ ಜಾಗಕ್ಕೂ ಸೇರಿ ಶೆಟ್ಟಿನಾಗ ಆದ ಈ ಪರಿಯ ನೋಡಾ ದರ್ಬೇಸಿ ದರ್ಗೇಸ್ವರಾ.

      ಉತ್ತರ
    • ಶೆಟ್ಟಿನಾಗ ಶೇ.
      ಏಪ್ರಿಲ್ 15 2016

      ಇಂದು ರಾಮನವಮಿ. ಈ ಸಂದರ್ಭದಲ್ಲಿ ನಿಲುಮೆಯ ಗೆಳೆಯರೆಲ್ಲರೂ ಬಾಬಾಸಾಹೇಬ್ ಅವರ THE RIDDLE OF RAMA AND KRISHNA ಎಂಬ ಪ್ರಬಂಧವನ್ನು ಓದತಕ್ಕದ್ದು. ಬಳಿಕ ನಿಲುಮೆಯಲ್ಲಿ ಇದರ ಚರ್ಚೆ ಮಾಡತಕ್ಕದ್ದು. ಅಂಬೇಡ್ಕರ್ ಅವರ ಬರಹಗಳ ಗಂಭೀರ ಅಧ್ಯಯನದಿಂದ ಉತ್ಸಾಹಿ ತರುಣ ಬರಹಗಾರ ರೋಹಿತ್ ಚಕ್ರತೀರ್ಥ ಅವರಿಗೆ ಅಸಲಿ ಸಂಸ್ಕೃತಿ-ವಿಸ್ಮೃತಿಯ ಅರಿವು ಮೂಡಲಿ ಎಂದು ಆಶಿಸೋಣವೇ?

      ಉತ್ತರ
      • ರಂಜನಾ ರಾಮ್ ದುರ್ಗ
        ಏಪ್ರಿಲ್ 15 2016

        ಓ ಸಹೋದರರೇ ನೀವು ಇನ್ನೂ ಇದ್ದೀರಿ ಎಂಬುದನ್ನು ನಿಮ್ಮ ಕಮೆಂಟಿನ ಮೂಲಕ ಸಾಬೀತುಪಡಿಸಿರುವುದು ಆನಂದದಾಯಕವಾದುದಾಗಿದೆ

        ಉತ್ತರ
        • ಶೆಟ್ಟಿನಾಗ ಶೇ.
          ಏಪ್ರಿಲ್ 15 2016

          ಸಹೋದರಿ ರಂಜನಾ, ತಾವೂ ಕೂಡ ಬಾಬಾಸಾಹೇಬ್ ಅವರ ಬರಹಗಳನ್ನು ಗಂಭೀರವಾಗಿ ಓದತಕ್ಕದ್ದು ಹಾಗೂ ತಮ್ಮ ಮಿತ್ರ ಮಾರ್ಕ್ಸ್ ಮಂಜು ಅವರೂ ಕೂಡ ಓದತಕ್ಕದ್ದು. ಬಾಬಾಸಾಹೇಬ್ ಅವರು ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ಬರೆದಿರುವ ಬರಹವನ್ನು ದ್ವಿತೀಯ ಪಿ. ಯು. ಸಿ. ಟೆಕ್ಸ್ಟ್ ಪುಸ್ತಕಕ್ಕೆ ಅಡಕಗೊಳಿಸಿ ಕಡ್ಡಾಯವಾಗಿ ಬೋಧಿಸತಕ್ಕದ್ದು ಅಂತಹ ನಾವೆಲ್ಲರೂ ಶಿಕ್ಷಣ ಸಚಿವರನ್ನು ಆಗ್ರಹಿಸೋಣ ರಾಮನವಮಿಯ ಈ ದಿನದಂದು.

          ಉತ್ತರ
      • vasu
        ಏಪ್ರಿಲ್ 15 2016

        The riddle of Ram and Krishna ಗ್ರಂಥ ರಾಮ ಮತ್ತು ಕೃಷ್ಣರನ್ನು ಅವಮಾನಿಸಬೇಕೆಂದೇ ಬರೆದ ಗ್ರಂಥವಾಗಿದೆ. ರಾಮನನ್ನು ದೂಷಿಸುವ ಈ ಗ್ರಂಥ ಕ್ಕೆ ಮೂಲಾಧಾರ ಉತ್ತರ ರಾಮಾಯಾಣ. ಇದು ವಾಲ್ಮೀಕಿ ಕೃತ ರಾಮಾಯಣವಲ್ಲ. ಮೂಲದಲ್ಲಿ ಲಂಕೆಯಿಂದ ಬಂದ ರಾಮ ಮತ್ತೆ ಪಟ್ಟಾಭಿಷೇಕಗೊಳ್ಳುವತನಕವಿದೆ. ಸೀತೆಯ ವನವಾಸ ಲವ, ಕುಶ ರ ಜನನ, ಭೂಮಾತೆಯಲ್ಲಿ ಅವಳು ವಿಲೀನ ವಾದದ್ದು. ಶೂದ್ರ ಶಂಭೂಕನ ಹತ್ಯೆ ಇತ್ಯಾದಿಗಳು ವಾಲ್ಮೀಕಿ ರಾಮಾಯಣದಲ್ಲಿಲ್ಲ. ಬಹುಶಃ ಸ್ತ್ರೀ ಮತ್ತು ಶೂದ್ರರ ಪರಿಸ್ಥಿತಿ ಬಿಗಡಾಯಿಸಿದ ಸಂದರ್ಭದಲ್ಲಿ ಜಾತಿ ದುರಭಿಮಾನವನ್ನಿಟ್ಟು ಕೊಂಡು ಬರೆದ ಕಲ್ಪಿತ ಉತ್ತರ ರಾಮಾಯಣವನ್ನು ಆಧರಿಸಿ, ಡಾ|| ಅಂಬೇಡ್ಕರ್ ಈ ಘಟನೆಗಳ ಸತ್ಯಾ ಸತ್ಯತೆಯನ್ನು ವಿವೇಚಿಸುವ ಕೆಲಸ ಮಾಡದೇ ರಾಮನ ಹೆಸರಿಗೆ ಕಲಂಕ ಬರುವಂತೆ ಪ್ರಯತ್ನಿಸಿದ್ದಾರೆ. ಮಹಾಭಾರತವೂ ಅಷ್ಟೇ. ಮಹಾಭಾರತದಲ್ಲಿ ಬರುವ ಕೃಷ್ಣ ಒಬ್ಬ ಆದರ್ಶ. ಮಹಾ ಸಂಯಮಿಯಾಗಿ, ಪರಾಕ್ರಮಿಯಾಗಿ, ಸತ್ಯಕ್ಕಾಗಿ ಹೋರಾಡಿದ ವೈಕ್ತಿಯನ್ನು ಕೆಲವು ಪುರಾಣಗಳು ಅವನನ್ನು ಕುರಿತು ಮತ್ತು ಅವನ ಚಾರಿತ್ರ್ಯಕ್ಕೆ ಧಕ್ಕೆ ತರುವ ಘಟನೆಗಳನ್ನು ಬರೆದಿರುವುದನ್ನು ಆಧಾರವಾಗಿಟ್ಟು ಕೊಂಡು ಕೃಷ್ಣನ ಮೇರು ಆದರ್ಶಕ್ಕೆ ಭಂಗ ತರುವ ಪ್ರಯತ್ನವನ್ನು ಡಾ}} ಅಂಬೇಡ್ಕರ್ ಮಾಡಿದರು. ಡಾ|| ಅಂಬೇಡ್ಕರ್ ಗಿಂತ ಸುಮಾರು ವರ್ಷಗಳ ಹಿಂದೆ ಜನಿಸಿ ಸಮಾಜಸುಧಾರಣೆ ಕಾರ್ಯವನ್ನು ಕೈಗೊಂಡ ಆರ್ಯಸಮಾಜದ ಸಂಸ್ಥಾಪಕರು ಈ ಪುರಾಣಗಳನ್ನು ಖಂಡಿಸಿ, ಕೇವಲ ಮಹಾಭಾರತದಲ್ಲಿ ಕಾಣುವ ಶ್ರೀಕೃಷ್ಣ ಮಾತ್ರ ಆದರ್ಶವ್ಯಕ್ತಿ, ಕಪೋಲ ಕಲ್ಪಿತ ಆಧಾರದ ಮೇಲೆ ಬರೆದಿರುವ ಪುರಾಣಗಳು, ಭಾಗವತ ಇತ್ಯಾದಿ ಗ್ರಂಥಗಳನ್ನು ತಿರಸ್ಕರಿಸಬೇಕೆಂಬ ಕರೆಯನ್ನು ಕೊಟ್ಟರು. ಈ ವಿಷಯಗಳು ಅವರು ಬರೆದ ಸತ್ಯಾರ್ಥ ಪ್ರಕಾಶದಲ್ಲಿ ಕಾಣಬಹುದು. ಆದರೆ ಇದಾವುದನ್ನೂ ಅಂಬೇಡ್ಕರ್ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಜನ್ನಾಧಾರಿತ ಜಾತಿಭೇದ, ಸ್ತ್ರೀ ಮತ್ತು ಶೂದ್ರರ ಅನಾದರ, ಸತಿ, ಅಸ್ಪೃಶ್ಯತೆ, ಕುರುಡು ನಂಬಿಕೆಗಳು ಇವುಗಳ ವಿರುದ್ಧ ಘೋರ ಹೋರಾಟ ಮಾಡಿರುವುದು ಆರ್ಯಸಮಾಜ. ಸ್ತ್ರೀ ಮತ್ತು ಶೂದ್ರರಿಗೆ ವೇದಗಳನ್ನು ಓದುವ ಅವಕಾಶವಿಲ್ಲದಿದ್ದಾಗ ಈ ಸಮೂಹಕ್ಕೆ ವೇದಾಧಿಕಾರವಿದೆ ಎಂದು ಪ್ರತಿಪಾದನೆ ಮಾಡಿ ಅವರನ್ನು ಸಾಮಾಜಿಕವಾಗಿ ಮೇಲೆತ್ತುವ ಕೆಲಸವನ್ನು ಆರ್ಯಸಮಾಜ ಮಾಡಿದೆ. ಒಂದು ಚಾರಿತ್ರಿಕ ಘಟನೆ. ಆರ್ಯಸಮಾಜದ ಗುರುಕುಲದಲ್ಲಿ ಓದಿದ್ದಿ ಒಬ್ಬ ದಲಿತ ಮೂಲದ ವ್ಯಕ್ತಿ ಪಂ ನರೇಂದ್ರ ಸ್ನಾತಕ. ಅವರು ಬುದ್ಧಿವಂತಿಕೆ, ವಾಕ್ಚಾತುರ್ಯ ಮತ್ತು ವೈದಿಕ ಸಂಸ್ಕಾರಗಳನ್ನು ಅವರು ಮಾಡಿಸುತ್ತಿದ್ದ ರೀತಿಯಿಂದ ಅವರು ಸಮಾಜದಲ್ಲಿ ಬಹು ಪ್ರತಿಷ್ಠಿತ ವೈಕ್ತಿಯಾಗಿ ಮಾರ್ಪಟ್ಟರು. ಚುನಾವಣೆಗಳು ಬಂದಿತು. ಅವರ ಹುಟ್ಟಿನ ಮೂಲವನ್ನುಪತ್ತೆ ಹಚ್ಚಿ ಕಾಂಗ್ರೆಸ್ಸಿನವರು ಅವರನ್ನು ಮೀಸಲಾತಿ ಚುನಾವಣೆ ಕ್ಷೇತ್ರದಿಂದ ಸ್ಪರ್ದಿಸುವಂತೆ ಮಾಡಿದರು. ಚುನಾವಣೆ ನಡೆಯಿತು. ಅವರು ಸೋತರು. ಈ ಘಟನೆಯನ್ನು ದೂರದಿಂದಲೆ ನೋಡಿದ ಮತ್ತೊಬ್ಬ ಸಂಸದ್ ಸದಸ್ಯರಾದ ಪ್ರಕಾಶ್ ವೀರ್ ಶಾಸ್ತ್ರಿಯವರು ಈ ಸಂದರ್ಬದಲ್ಲಿ ಹೇಳಿದುದು ಮನನೀಯವಾಗಿದೆ.
        ” ಆರ್ಯಸಮಾಜ ಒಬ್ಬ ದಲಿತನನ್ನು ಬ್ರಾಹ್ಮಣನನ್ನಾಗಿ ಮಾಡಿತು. ಆದರೆ ಈ ಮೀಸಲಾತಿ ರಾಜಕೀಯ ಒಬ್ಬ ಬ್ರಾಹ್ಮಣನನ್ನು ದಲಿತನನ್ನಾಗಿ ಮಾರ್ಪಡಿಸಿತು.”
        ಡಾ|| ಅಂಬೇಡ್ಕರ್ ಶ್ರೇಷ್ಠರು ನಿಜ. ಆದರೆ ಅವರು ಬರೆದ ಮೇಲಿನ ಪುಸ್ತಕ ಮತ್ತು ಕಲಬೆರೆಕೆಗೊಂದ ಶ್ಲೋಕಗಳನ್ನು ಆಧರಿಸಿ ಮನುಸ್ಮೃತಿಗೆ ಬರೆದ ಟಿಪ್ಪಣಿ ಖಂಡಿತಾ ಸತ್ಯಕ್ಕೆ ಹತ್ತಿರವಿಲ್ಲ. ಆದರೆ, ಅವರು ತಂದ ಹಿಂದೂ ಕೋಡ್ ಬಿಲ್ ಮತ್ತು , ಈಗಿರುವ ಸಂವಿಧಾನ ಇವು ಶ್ಲಾಘನೀಯವಾಗಿದೆ.

        ಉತ್ತರ
        • ಶೆಟ್ಟಿನಾಗ ಶೇ.
          ಏಪ್ರಿಲ್ 15 2016

          “ರಾಮ ಮತ್ತು ಕೃಷ್ಣರನ್ನು ಅವಮಾನಿಸಬೇಕೆಂದೇ ಬರೆದ ಗ್ರಂಥವಾಗಿದೆ”

          ಪೂರ್ವಾಗ್ರಹಗಳಿಂದ ಮುಕ್ತಿ ಪಡೆದು ಬಾಬಾಸಾಹೇಬ್ ಅವರ ಬರಹಗಳನ್ನು ವೈಚಾರಿಕ ಸತ್ಯಾನ್ವೇಷಕನ ದೃಷ್ಟಿಯಿಂದ ಸ್ಟಡಿ ಮಾಡಿ. ಬಾಬಾಸಾಹೇಬ್ ಅವರದ್ದು ೧೦೦% ವೈಜ್ಞಾನಿಕ ಅಪ್ರೋಚ್. ರಾಮ ಹಾಗೂ ಕೃಷ್ಣ ಇಬ್ಬರೂ ಮೇಲ್ಜಾತಿಯ ಹಿಂದೂಗಳ ಆದರ್ಶ ಪುರುಷರು. ಆದರೆ ದಲಿತರು, ಶೂದ್ರರು ಹಾಗೂ ಸ್ತ್ರೀಯರು ರಾಮ ಕೃಷ್ಣರನ್ನು ಆದರ್ಶ ಎಂದು ಸ್ವೀಕರಿಸಲು ವೈಚಾರಿಕ ನೆಲೆ ಇದೆಯೇ? ಇದರ ಜಾಡನ್ನು ಹಿಡಿದು ಬಾಬಾಸಾಹೇಬ್ ಅವರು ನಡೆಸಿದ ಸಂಶೋಧನೆಯ ಫಲವೇ ಈ ಗ್ರಂಥ.

          ಉತ್ತರ
  6. Santrupt
    ಏಪ್ರಿಲ್ 15 2016

    ತಾವು ಪೊಸ್ಟ ಮಾಡಿದ ಲೇಖನ ಹಲವು ವಿರೊಧಾಭಾಸಗಳಿಂದ ಕುಡಿರುವುದಲ್ಲದೆ, ಅಂಬೇಡ್ಕರವರ ನಿರ್ಧಾರ ಪ್ರಶ್ನಿಸುತ್ತ ಅವರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಕಲ್ಪನೆ ಬಿತ್ತರಿಸುವ ಪ್ರಯತ್ನ ಮಾಡಲಾಗಿದೆ. ಇದು ದುರುದ್ದೇಶದಿಂದ ಕುಡಿದ ನಡೆ, ಕುತ್ಸಿತ ಮೆದುಳು ಕೆಲಸ ಮಾಡಿದೆ ಎಂಬ ಭಾವನೆ ಮೂಡುತ್ತಿದೆ.
    ತಮ್ಮ ಸ್ವಾರ್ಥ ಸಾದನೆಗಾಗಿ ಅಂಬೇಡ್ಕರ್ ಕುರಿತು, ಅವರ ವಿರೋಧಿಗಳಿಂದ ಮಾತ್ರ ಇಂಥ ತಪ್ಪು ಸಂದೇಶ, ಲೇಖನಗಳ ಮೂಲಕ ಬಿತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ತಪ್ಪು ಮಾಹಿತಿ ನೀಡಿ ಜನರ ಭಾವನೆ ಕೆರಳಿಸ ಕೂಡದು ಎಂದು ಮನವಿ.
    ಜೈ ಭೀಮ

    ಉತ್ತರ
  7. Nityanand
    ಏಪ್ರಿಲ್ 15 2016

    ತಾವು ಪೊಸ್ಟ ಮಾಡಿದ ಲೇಖನ ಹಲವು ವಿರೊಧಾಭಾಸಗಳಿಂದ ಕುಡಿರುವುದಲ್ಲದೆ, ಅಂಬೇಡ್ಕರವರ ನಿರ್ಧಾರ ಪ್ರಶ್ನಿಸುತ್ತ ಅವರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಕಲ್ಪನೆ ಬಿತ್ತರಿಸುವ ಪ್ರಯತ್ನ ಮಾಡಲಾಗಿದೆ. ಇದು ದುರುದ್ದೇಶದಿಂದ ಕುಡಿದ ನಡೆ, ಕುತ್ಸಿತ ಮೆದುಳು ಕೆಲಸ ಮಾಡಿದೆ ಎಂಬ ಭಾವನೆ ಮೂಡುತ್ತಿದೆ.
    ತಮ್ಮ ಸ್ವಾರ್ಥ ಸಾದನೆಗಾಗಿ ಅಂಬೇಡ್ಕರ್ ಕುರಿತು, ಅವರ ವಿರೋಧಿಗಳಿಂದ ಮಾತ್ರ ಇಂಥ ತಪ್ಪು ಸಂದೇಶ, ಲೇಖನಗಳ ಮೂಲಕ ಬಿತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ತಪ್ಪು ಮಾಹಿತಿ ನೀಡಿ ಜನರ ಭಾವನೆ ಕೆರಳಿಸ ಕೂಡದು ಎಂದು ಮನವಿ.
    ಜೈ ಭೀಮ

    ಉತ್ತರ
  8. WITIAN
    ಏಪ್ರಿಲ್ 17 2016

    ಶೆಟ್ಟಿನಾಗನ ಹಿಂದೆ ಬಿದ್ದು ನಾಲ್ಕೈದು ಬಾರಿ ಕುಂಡೆಗೆ ಝಾಡಿಸಿದಾಗ ಸ್ವತಃ ನಾಶೆಶೇ ಎಂಬಹೆಸರಿನಲ್ಲಿ ಈ ಹಿಂದೆ ಬರೆದ ಹಲವಾರು “ಸಭ್ಯ ಪದ”ಗಳ ಯಾದಿ ದೊಡ್ಡದಿದೆ. ಈಗ ದೊಡ್ಡದಾಗಿ ವಡ್ಡಗೆರೆ ಎಂಬ ಒಬ್ಬ ಮೂರ್ಖನಿಗೆ “ನೂರು ಇಲಿ ತಿಂದು ಬೆಕ್ಕು ಕಾಶೀಯಾತ್ರೆಗೆ ಹೋದಂತೆ” ಉಪದೇಶ ಕೊಡುತ್ತಾನೆ. ಜತೆಗೆ ಇವನ ಚೋರಗುರು ಡ್ರಗ್ಗಾ ಸರ್ ಬಗ್ಗೆ ತುತ್ತೂರಿ ಕೂಡಾ…

    ಉತ್ತರ
  9. Salam Bava
    ಏಪ್ರಿಲ್ 17 2016

    ” ರೋಹಿತ್ ಅವರ ಬಾಯಿಗೆ ಅವರು ಇಷ್ಟ ಪಟ್ಟರೆ ಬೀಫ್ ಬೇಡವೆಂದರೆ ಹಾಲು ಬೀಳಲಿ ಎಂದೇ ಹಾರೈಸೋಣ”

    LOL

    “ನಿಮ್ಮ ಬೊಜ್ಜದೂಟಕ್ಕೆ ಪಿಂಡದ ಜೊತೆಗೆ ವಡೆಪಾಯಸ ಮಾಡಿ ಇವರನ್ನು ಕರೆಯಿರಿ. ಆಗ ನವವೈದಿಕರ ಅಸಲಿ ಯೋಗ್ಯತೆಯ ಅರಿವು ನಿಮಗಾಗುತ್ತದೆ.”

    ROFL

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments