ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 15, 2016

4

ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು…!!

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

The-Eyes-Have-It-Postರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೇ. ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು. ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದ ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ. ರೈಲು ಬಿಡುವವರೆಗೂ ಅವಳಿಗೆ ನಿಮಿಷಕ್ಕೊಂದು ಎಚ್ಚರಿಕೆ ಕೊಡುತ್ತ ನಿಂತಿದ್ದ ಆಕೆಯ ಪೋಷಕರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಬ್ಯಾಗುಗಳನ್ನು ಕಾಲ ಬಳಿಯೇ ಇರಿಸಿಕೋ, ಕಿಟಕಿಯಿಂದ ಕೈ ಹೊರಗೆಹಾಕಬೇಡ, ಹುಶಾರು, ಅಪರಿಚಿತರೊಡನೆ ಮಾತನಾಡಬೇಡ” ಹೀಗೆ ಕೆಲವು ಸಲಹೆಗಳನ್ನು ಆಕೆಯ ಹೆತ್ತವರು ನೀಡುತ್ತಿರುವಂತೆಯೇ ರೈಲು ಹೊರಟಿತು. ಮೊದಲೇ ನಾನು ಕುರುಡ. ಬೆಳಕು ಮತ್ತು ಕತ್ತಲುಗಳನ್ನು ಹೊರತುಪಡಿಸಿ ಇನ್ನೇನನ್ನೂ ಗುರುತಿಸಲು ನನ್ನಿಂದಾಗುತ್ತಿರಲಿಲ್ಲ. ಹಾಗಾಗಿ ಆ ಹುಡುಗಿ ನೋಡಲು ಹೇಗಿರಬಹುದೆಂದು ಊಹಿಸುವುದು ನನ್ನಿಂದ ಶಕ್ಯವಾಗಲಿಲ್ಲ. ಆಕೆಯ ಚಪ್ಪಲಿಯಿಂದ ಬರುತ್ತಿದ್ದ ಸಪ್ಪಳದಿಂದಾಗಿ ಆಕೆ ಹವಾಯಿ   ಚಪ್ಪಲಿಗಳನ್ನು   ಧರಿಸಿರಬೇಕೆನ್ನುವುದನ್ನು   ಅರಿತೆ.   ಆಕೆಯದ್ದೋ ಕೋಗಿಲೆಯಂತಹ ಮಧುರ ಧ್ವನಿ.  ಹೇಗಾದರೂ  ಸರಿ,  ಆಕೆಯ  ರೂಪವನ್ನು ಗ್ರಹಿಸಬೇಕೆಂದುಕೊಂಡೆನಾದರೂ  ನನ್ನ ಸಹಾಯಕ್ಕೆ ಅಲ್ಲಿ ಯಾರೂ ಇರದಿದ್ದದ್ದು ನನಗೆ ಕೊಂಚ ಬೇಸರವನ್ನುಂಟು ಮಾಡಿತ್ತು.

ಸುಮ್ಮನೆ ಆಕೆಯನ್ನು ಮಾತಿಗೆಳೆಯಲೆಂದು “ನೀವು ದೆಹ್ರಾಕ್ಕೆ ಹೋಗುತ್ತಿದ್ದೀರಾ..”? ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ಆಕೆ ಬೆಚ್ಚಿಬಿದ್ದದ್ದು ಆಕೆಯ ಭಾವದಿಂದ ನಾನು ಗ್ರಹಿಸಿದೆ. ಬಹುಶಃ ನಾನು ಬೋಗಿಯ ಮೂಲೆಯಲ್ಲಿ ಕುಳಿತಿದ್ದಿರಬೇಕು. “ಕ್ಷಮಿಸಿ, ಬೋಗಿಯಲ್ಲಿ ಇನ್ನೊಬ್ಬರು ಇರುವುದು ನನ್ನ ಗಮನಕ್ಕೆ ಬರಲಿಲ್ಲ ’ಎಂದು ನುಡಿದಳಾಕೆ. ಅದು ಅಸಹಜವೇನಲ್ಲ ಬಿಡಿ. ಅನೇಕ ಸಲ ಹಾಗಾಗುತ್ತದೆ. ಎಲ್ಲ ಸರಂಜಾಮುಗಳೊಂದಿಗೆ ರೈಲು ಹತ್ತಿ ಕುಳಿತ ತರಾತುರಿಯಲ್ಲಿ ಕೆಲವೊಮ್ಮೆ ನಾವು ನಮ್ಮ ಸುತ್ತಲಿನ ಪರಿಸರವನ್ನು ಮರೆತೇಬಿಡುತ್ತೇವೆ. ಅವಳಿಗೂ ಹಾಗೇ ಆಗಿರಲಿಕ್ಕೆ ಸಾಕು. ನಾನೂ ಸಹ ನಿಮ್ಮನ್ನು ನೋಡಲಿಲ್ಲ, ಆದರೆ ನೀವು ರೈಲು ಹತ್ತಿ ಬೋಗಿಗೆ ಬಂದ ಸದ್ದಿಗೆ ನಿಮ್ಮ ಇರುವಿಕೆಯ ಪರಿಚಯ ನನಗಾಯಿತು’ಎಂದೆ. ಸುಂದರಿಯರೆದುರು ನಾನೊಬ್ಬ ಕುರುಡ ಎಂದು ಗುರುತಿಸಿಕೊಳ್ಳಲು ನನಗೆ ಅಹಮಿಕೆಯ ಅಡ್ಡಿ. ಆದರೆ ಹೀಗೆ ಎದುರುಬದುರು ಕುಳಿತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ. “ನಾನು ಸಾಹ್ರನಪೂರಿಗೆ ಹೋಗ್ತಿದ್ದೇನೆ. ಅಲ್ಲಿ ನನ್ನನ್ನು ಕರೆದೊಯ್ಯಲು ನನ್ನ ಸೋದರತ್ತೆ ಬರುತ್ತಿದ್ದಾರೆ” ಎಂದಳವಳು. ಹೌದಾ..? ಹಾಗಿದ್ದರೆ ನಿಮ್ಮೊಂದಿಗೆ ತುಂಬ ಆತ್ಮೀಯವಾಗಿ ಮಾತನಾಡುವುದು ಕಷ್ಟವೇ, ಅತ್ತೆಯಂದಿರು ಎಂದರೆ ನನಗೆ ಭಯ ನೋಡಿ ಎನ್ನುತ್ತ ನಾನು ಸಣ್ಣದ್ದೊಂದು ಪೆದ್ದು ತಮಾಷೆಗೆ ಪ್ರಯತ್ನಿಸಿದೆ. ಅದರತ್ತ ಹೆಚ್ಚಾಗಿ ಲಕ್ಷ್ಯಿಸದ ಆಕೆ “ನೀವು ಎಲ್ಲಿಗೆ ಹೋಗುತ್ತಿದ್ದೀರಿ ? ” ಎಂದು ನನ್ನನ್ನು ಕೇಳಿದಳು.

“ಇಲ್ಲಿಂದ ದೆಹ್ರಾಕ್ಕೆ ತೆರಳಿ ಅಲ್ಲಿಂದ ಮಸ್ಸೂರಿಗೆ ಹೋಗಲಿದ್ದೇನೆ” ಎನ್ನುವ ಉತ್ತರ ನನ್ನದು. “ಓಹ್..!! ನೀವೆಷ್ಟು ಅದೃಷ್ಟವಂತರು. ನನಗೆ ಮಸ್ಸೂರಿಯ ಗಿರಿಧಾಮವೆಂದರೆ ತುಂಬ ಇಷ್ಟ. ಅದರಲ್ಲೂ ಈ ಅಕ್ಟೋಬರ್ ತಿಂಗಳಿನಲ್ಲಿ ! ಎಂದವಳ ದನಿಯಲ್ಲಿ ಶಿಶುಸಹಜ ಸಂತಸದ ಭಾವ. ಹೌದು! “ಮಸ್ಸೂರಿಗೆ ತೆರಳಲು ನಿಜಕ್ಕೂ ಇದು ಅದ್ಭುತ ಸಮಯ” ಎಂದ ನಾನು ನನ್ನ ನೆನಪುಗಳನ್ನು ಕೆದಕತೊಡಗಿದೆ. “ಈಗ ಇಡಿಯ ಗಿರಿಧಾಮವೇ ಡೇರೆ ಹೂವುಗಳಿಂದ ತುಂಬಿಹೋಗಿರುತ್ತದೆ. ಹಗಲಲ್ಲಿ ಮಧುರವೆನಿಸುವ ಸೂರ್ಯ, ಸಂಜೆಯ ಚಳಿಗೆ ಬೆಂಕಿಕಾಯಿಸುತ್ತ ಕೊಂಚ ಬ್ರಾಂಡಿ ಹೀರುತ್ತ ಆರಾಮಾಗಿ ಕುಳಿತರೆ ಮಸ್ಸೂರಿಯೇ ಧರೆಗಿಳಿದ ಸ್ವರ್ಗ” ಎಂದು ನುಡಿದ ನನ್ನನ್ನು ಕಂಡ ಆಕೆಗೆ ಇವನೊಬ್ಬ ಮೂರ್ಖ ಭಾವುಕ ಎಂದೆನಿಸಿರಲಿಕ್ಕೂ ಸಾಕು. ಒಂದು ಅನಿರೀಕ್ಷಿತ ಪ್ರಮಾದವೆನ್ನುವಂತೆ “ಕಿಟಕಿಯ ಹೊರಗೆ ಏನು ಗೋಚರಿಸುತ್ತಿದೆ..”? ಎಂಬ ಪ್ರಶ್ನೆ ನನ್ನ ಬಾಯಿತಪ್ಪಿ ಹೊರಬಿದ್ದಿತ್ತು. ಥತ್,ಹಾಗೆ ಕೇಳಬಾರದಿತ್ತು ನಾನು, ನಾನು ಕುರುಡನೆಂದು ಆಕೆಗೀಗ ಗೊತ್ತಾಗಿ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಆಕೆ “ನೀವೇ ಏಕೆ ನೋಡಿ ಹೇಳಬಾರದು? ” ಎಂದು ನನ್ನನ್ನೇ ಪ್ರಶ್ನಿಸಿದಳು. ಅದರರ್ಥ ನಾನೊಬ್ಬ ಅಂಧ ಎನ್ನುವುದು ಆಕೆಗಿನ್ನೂ ಅರಿವಾಗಿಲ್ಲ.

ನಾನು ಕುಳಿತೆಡೆಯಿಂದ ಜರುಗುತ್ತಾ ನಿಧಾನವಾಗಿ ಬೋಗಿಯ ಕಿಟಕಿಯನ್ನು ಸಮೀಪಿಸಿದೆ. ಕಿಟಕಿಯ ಸರಳುಗಳನ್ನು ಹಿಡಿದುಕೊಂಡು ಕ್ಷಣಕಾಲ ಹೊರಗೆ ದಿಟ್ಟಿಸುವವಂತೆ ನಟಿಸಿದೆ. ಹಳಿಗಳ ಮೇಲೆ ಸುತ್ತುತ್ತಿದ್ದ ರೈಲಿನ ಚಕ್ರಗಳ ನಿರಂತರ ಚಲನೆ, ಆಗೊಮ್ಮೆ ಈಗೊಮ್ಮೆ ಕೇಳುತ್ತಿದ್ದ ರೈಲಿನ ಅರಚುವಿಕೆಯ ಹೊರತಾಗಿ ನಾನು ಇನ್ನೇನನ್ನೂ ಗ್ರಹಿಸದವನಾಗಿದ್ದೆ. ಕೊಂಚ ಧೈರ್ಯವಹಿಸಿ “ನೀವು ಒಂದು ವಿಷಯ ಗಮನಿಸಿದ್ದೀರಾ.? ರೈಲಿನ ಕಿಟಕಿಯ ಹೊರಗೆ ಗಿಡಮರಗಳೇ ಓಡುತ್ತಿರುವಂತೆ ಗೋಚರಿಸಿದರೆ, ನಾವುಗಳು ತಟಸ್ಥವಾಗಿ ಕುಳಿತುಕೊಂಡಿರುವಂತೆ ಗೋಚರಿಸುತ್ತದಲ್ಲವೆ.. ? “ಎಂದೆ. “ಅದು ತೀರ ಸಹಜ ವಿಷಯ. ಆದರೆ ನಿಮ್ಮ ಕಣ್ಣಿಗೆ ಯಾವುದಾದರೂ ಕಾಡುಪ್ರಾಣಿ ಕಂಡಿತಾ..?”  ಎಂದು ಕೇಳಿದಳಾಕೆ. “ಊಹುಂ, ಒಂದು ಪ್ರಾಣಿಯೂ ಇಲ್ಲ” ಎಂದ ನನಗೆ ದೆಹ್ರಾದ ಕಾಡಿನಲ್ಲಿ ಹೆಚ್ಚು ಕಡಿಮೆ ಪ್ರಾಣಿಗಳೇ ಇಲ್ಲವೆನ್ನುವುದು ಗೊತ್ತಿತ್ತು. ಕಿಟಕಿಯತ್ತ ನೋಡುತ್ತ ಕುಳಿತಿದ್ದ ನಾನು ಹುಡುಗಿಯ ಎದುರಿಗೆ ತಿರುಗಿ ಕುಳಿತುಕೊಂಡೆ. ಕೆಲಕಾಲದ ಮೌನ ನಮ್ಮಿಬ್ಬರ ನಡುವೆ ಆವರಿಸಿತ್ತು. “ತುಂಬ ಆಸಕ್ತಿ ಮೂಡಿಸುವ ಮುಖಚರ್ಯೆ ನಿಮ್ಮದು” ಎಂದವನ ಎದೆಬಡಿತ ಕೊಂಚ ಜೋರಾಗಿತ್ತು. ಕೆಲವು ಹುಡುಗಿಯರಿಗೆ ಹೊಗಳಿಕೆ ಇಷ್ಟವಾಗುತ್ತದೆನ್ನುವುದನ್ನು ನಾನು ಬಲ್ಲೆ. ನನ್ನ ಹೊಗಳಿಕೆ ಆಕೆಗೂ ಇಷ್ಟವಾಗಿತ್ತು ಎನ್ನುವುದಕ್ಕೆ ಆಕೆಯ ನಿಷ್ಕಲ್ಮಷ ನಗುವೇ ಸಾಕ್ಷಿಯಾಗಿತ್ತು.

“ಹೌದಾ..?, ನನಗೆ ನನ್ನ ಮುಖ ತುಂಬಾ ಮುದ್ದಾಗಿದೆ ಎಂದು ಕೇಳಿ ಕೇಳಿ ಸಾಕಾಗಿ ಹೋಗಿತ್ತು ನೋಡಿ” ಎಂದವಳ ಉತ್ತರ ಕೇಳಿ ಆಕೆ ನಿಜಕ್ಕೂ ಮುದ್ದಾಗಿದ್ದಾಳೆನ್ನುವುದನ್ನು ನಾನು ಅರ್ಥೈಸಿಕೊಂಡೆ. ಆದರೂ ನನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುತ್ತ ,” ಆಸಕ್ತಿ ಮೂಡಿಸುವ ಮುಖಚರ್ಯೆ ಮುದ್ದಾಗಿ ಇರಬಾರದು ಎಂದೇನಿಲ್ಲ ಅಲ್ಲವೇ.”? ಎಂದು ಪ್ರಶ್ನಿಸಿದೆ. ಕೊಂಚ ಹೊತ್ತು ಮೌನವಾದ ಆಕೆ “ನಿಮ್ಮ ಮಾತುಗಳನ್ನು ಕೇಳಿದಾಗ ನೀವೊಬ್ಬ ಸುಸಂಸ್ಕೃತ ವ್ಯಕ್ತಿ ಎನ್ನಿಸುತ್ತದೆ. ಆದರೆ ನೀವೇಕೆ ಇಷ್ಟು ಗಂಭೀರರಾಗಿ ಕುಳಿತಿದ್ದೀರಿ..?” ಎಂದು ಕೇಳಿದಳು. ನನ್ನ ಗಂಭೀರತೆಯನ್ನು ತೊಲಗಿಸಲು ನಾನು ಕೊಂಚ ನಗಬೇಕೆಂದುಕೊಂಡೆ. ಅದೇಕೋ ಏನೋ ನಗಬೇಕು ಎನ್ನುವ ಆಲೋಚನೆಯೇ ನನ್ನನ್ನು ಇನ್ನಷ್ಟು ಗಂಭೀರನಾಗಿಸಿತು. “ನಿಮ್ಮ ಸ್ಟೇಷನ್ ಇನ್ನೇನು ಬಂತು ನೋಡಿ”ಎಂದು ನುಡಿದೆ. “ಅಬ್ಭ..! ಇದೊಂದು ಸಣ್ಣ ಪ್ರಯಾಣವೆನ್ನುವುದು ನನ್ನ ಅದೃಷ್ಟವೇ ಸರಿ. ರೈಲಿನಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚಿನ ಸಮಯ ಕುಳಿತುಕೊಳ್ಳುವುದು ನನ್ನಿಂದ ಸಾಧ್ಯವೇ ಇಲ್ಲ”ಎಂದವಳ ಸಹಜಮಾತುಗಳು ನನಗಂತೂ ಬೇಸರ ತರಿಸಿತ್ತು. ನಾನು ಆಕೆಯೊಂದಿಗೆ ಒಂದಿಡೀ ದಿನವನ್ನಾದರೂ ಕಳೆಯಲು ಸಿದ್ದನಾಗಿದ್ದೆ. ಗಿರಿಧಾಮದಿಂದ ಹರಿಯುವ ಸಣ್ಣ ಝರಿಯೊಂದರ ಜುಳುಜುಳುವಿನಲ್ಲಿ ಕಾಣಬಹುದಾದ ಮಧುರ ನಿನಾದ ಆಕೆಯ ದನಿಯಲ್ಲಿತ್ತು
ಎನ್ನುವುದನ್ನು ನಾನಾಕೆಗೆ ಹೇಳದಾಗಿದ್ದೆ. ರೈಲು ಇಳಿದ ಮರುಕ್ಷಣವೇ ಆಕೆ ನನ್ನನ್ನು ಮರೆತುಹೋಗಬಹುದು. ಆದರೆ ನಾನು ಮಾತ್ರ ಆಕೆಯನ್ನು ಅಷ್ಟು ಸುಲಭವಾಗಿ ಮರೆಯುವುದು ಶಕ್ಯವಿರಲಿಲ್ಲ.

ಅಷ್ಟರಲ್ಲಿ ರೈಲಿನ ಇಂಜಿನ್ನು ಒಮ್ಮೆ ಜೋರಾಗಿ ಊಳಿಟ್ಟಿತು. ರೈಲಿನ ಚಕ್ರಗಳಲ್ಲಿನ ವೇಗ ಕಡಿಮೆಯಾಗಿ ರೈಲು ನಿಲ್ದಾಣದ ಮೇಲೆ ಸ್ಥಬ್ದವಾಗತೊಡಗಿತು. ನಿಧಾನವಾಗಿ ತನ್ನ ಸೀಟಿನಿಂದ ಮೇಲೆದ್ದ ಹುಡುಗಿ, ಒಂದೊಂದಾಗಿ ತನ್ನ ಸರಂಜಾಮುಗಳನ್ನು ಜೋಡಿಸಿಕೊಳ್ಳತೊಡಗಿದಳು. ನನಗೆ ಕನಿಷ್ಟ ಪಕ್ಷ ಆಕೆಯ ಕೂದಲುಗಳನ್ನಾದರೂ ಮುಟ್ಟಿ ನೋಡುವ ಆಸೆ. ಆಕೆ ತನ್ನ ಕೇಶರಾಶಿಯನ್ನು ಮೇಲಕ್ಕೆತ್ತಿ ಮುಡಿಕಟ್ಟಿರಬಹುದಾ ಅಥವಾ ಆಕೆಯದ್ದು ಬಾಬಕಟ್ ಮಾದರಿಯ ಕೇಶವಿನ್ಯಾಸವೇ ಎನ್ನುವುದು ತಿಳಿಯಲಿಲ್ಲ. ಕೆಲವೇ ಕ್ಷಣಗಳಲ್ಲಿ ರೈಲು ಹಳಿಗಳ ಮೇಲೆ ಸಂಪೂರ್ಣವಾಗಿ ಮೌನವಾಗಿತ್ತು. ನಿಲ್ದಾಣದ ಮೇಲೆ ಕೂಲಿಕಾರರ, ಸಣ್ಣಪುಟ್ಟ ವ್ಯಾಪಾರಿಗಳ ಕಲರವ ಜೋರಾಗಿತ್ತು. ಅಷ್ಟರ ನಡುವೆ ಹೆಣ್ಣು ಧ್ವನಿಯೊಂದು ದೊಡ್ಡದಾದ ಸ್ವರದಲ್ಲಿ ಮಾತನಾಡುತ್ತಿರುವುದು ಕೇಳುತ್ತಿತ್ತು. ಅದು ನನ್ನ ಚೆಲುವೆಯ ಸೋದರತ್ತೆಯ ಕಂಠವಿರಬಹುದು.  “ಮತ್ತೆ ಸಿಗೋಣ,ನಮಸ್ಕಾರ”ಎನ್ನುತ್ತ ಹೊರಟ ಆಕೆ ತೀರ ನನ್ನ ಸಮೀಪದಲ್ಲಿಯೇ ನಿಂತಿದ್ದಳೆನ್ನುವುದನ್ನು ಆಕೆಯ ಕೂದಲಿಗೆ ಪೂಸಿದ್ದ ಸುಗಂಧದ್ರವ್ಯದ ಪರಿಮಳವೇ ಸಾರುತ್ತಿತ್ತು. ಹಿತವಾದ ಸುಂಗಧ ನನ್ನಲ್ಲಿ ಅವ್ಯಕ್ತ ಆಸೆಯೊಂದನ್ನು ತಡವಿತ್ತು. ಆಕೆಯ ಕೂದಲುಗಳನ್ನು ಮುಟ್ಟಿಯೇ ಬಿಡಬೇಕೆನ್ನುವ ನನ್ನ ಆಸೆಯನ್ನು ಬಲವಂತವಾಗಿ ತಡೆದುಕೊಂಡಿದ್ದೆ. ಅಷ್ಟರಲ್ಲಿ ಆಕೆ ಹೊರಟುಹೋಗಿದ್ದಳು.

ರೈಲಿನ ಬಾಗಿಲ ಬಳಿ ಸಣ್ಣದ್ದೊಂದು ಗೊಂದಲವುಂಟಾಗಿದ್ದನ್ನು ನಾನು ಗಮನಿಸಿದೆ. ರೈಲಿನ ಬೋಗಿಯೊಳಕ್ಕೆ ಪ್ರವೇಶಿಸುತ್ತಿದ್ದ ವ್ಯಕ್ತಿಯೊಬ್ಬ ಯಾರದ್ದೋ ಕ್ಷಮೆ ಬೇಡುತ್ತಿದ್ದ. ಆತ ಬೋಗಿಯನ್ನು ಪ್ರವೇಶಿಸುತ್ತಲೇ ರೈಲು ಜೋರಾಗಿ ಅರಚುತ್ತ ನಿಧಾನವಾಗಿ ಚಲಿಸಲಾರಂಭಿಸಿತ್ತು. ನಾನು ಭಾರವಾದ ಮನಸ್ಸಿನೊಂದಿಗೆ ನನ್ನ ಸೀಟಿನಲ್ಲಿ ಕುಳಿತುಕೊಂಡೆ. ಮತ್ತೊಬ್ಬ ಹೊಸ ಪ್ರಯಾಣಿಕನೊಂದಿಗೆ ನನ್ನ ಪ್ರಯಾಣ ಮುಂದುವರೆಯಿತು. ಕೆಲವೇ ಕ್ಷಣಗಳಲ್ಲಿ ರೈಲು ವೇಗವನ್ನು ಪಡೆದುಕೊಂಡಿತ್ತು. ಕಿಟಕಿಯತ್ತ ಕುಳಿತಿದ್ದ ನಾನು ರೈಲಿನ ಹೊರಗೆ ಏನೆಲ್ಲ ನಡೆಯುತ್ತಿರಬಹುದೆನ್ನುವುದನ್ನು ಊಹಿಸಿಕೊಳ್ಳಲು ಪ್ರಯತ್ನಿಸುತ್ತ ಯೋಚನಾ ಮಗ್ನನಾಗಿದ್ದೆ. “ನೀವು ನಿಜಕ್ಕೂ ನಿರಾಶರಾಗಿರಬಹುದು”ಎಂಬ ಸಹಪ್ರಯಾಣಿಕನ ಮಾತುಗಳು ನನ್ನ ಆಲೋಚನೆಯನ್ನು ಭಂಗವಾಗಿಸಿದ್ದವು. “ಈಗಷ್ಟೇ ಇಳಿದುಹೋದ ಹುಡುಗಿಯಷ್ಟು ಆಸಕ್ತಿಕರ ಸಹಪ್ರಯಾಣಿಕ ನಾನಲ್ಲ , ಆಕೆ ನಿಜಕ್ಕೂ ಸುಂದರಿಯಾಗಿದ್ದಳು” ಎಂದು ನುಡಿದ ಸಹಪ್ರಯಾಣಿಕ ಮಾತುಗಳು ನನ್ನಲ್ಲಿ ಮಡುವುಗಟ್ಟಿದ್ದ ಬೇಸರವನ್ನು ಇನ್ನಷ್ಟು ಹೆಚ್ಚಿಸಿತ್ತು. ಅದನ್ನು ಮುಖದಲ್ಲಿ ತೋರ್ಪಡಿಸದೇ, ಕೃತಕ ನಗೆಯೊಂದನ್ನು ತುಟಿಯಲ್ಲಿಟ್ಟುಕೊಂಡು, “ಹಾಗೇನೂ ಇಲ್ಲ ಸರ್, ಆದರೆ ಒಂದು ಮಾಹಿತಿ ಬೇಕಿತ್ತು. ಇಳಿದು ಹೋದಳಲ್ಲ ಹುಡುಗಿ, ಆಕೆಯದ್ದು ನೀಳವಾದ ಕೇಶರಾಶಿಯಾಗಿತ್ತಾ ಅಥವಾ ಆಕೆ ತನ್ನ ಕೂದಲುಗಳನ್ನು ಕೊಂಚ
ಚಿಕ್ಕದಾಗಿ ಕತ್ತರಿಸಿಕೊಂಡು ಸಹಜವಾಗಿ ಇಳಿಬಿಟ್ಟಿದ್ದಳಾ..?” ಎಂದು ನಾನು ಆತನನ್ನು ಪ್ರಶ್ನಿಸಿದೆ. “ನಾನು ಆಕೆಯ ಕೂದಲುಗಳನ್ನು ಗಮನಿಸಲೇ ಇಲ್ಲ”ಎಂದವನ ಮಾತಿನಲ್ಲೊಂದು ಸಣ್ಣ ಗೊಂದಲ. “ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು. ಎಂಥಹ ಸುಂದರ ಕಣ್ಣುಗಳು ಗೊತ್ತಾ..?? ಆದರೇನು ಮಾಡುವುದು ಪಾಪ,ಅವುಗಳಿಂದ ಆಕೆಗೇನೂ ಪ್ರಯೋಜನವಿಲ್ಲ, ಆಕೆಗೆ ಕಣ್ಣು ಕಾಣುವುದಿಲ್ಲ, ಆಕೆ ನೇತ್ರ ಹೀನಳು. ಜೊತೆಯಲ್ಲಿಯೇ ಪಯಣಿಸಿಯೂ ಆಕೆ ದೃಷ್ಟಿಹೀನಳು ಎನ್ನುವುದು ನಿಮಗೆ ತಿಳಿಯಲಿಲ್ಲವೇ..?”ಎಂದು ಆತ ನನ್ನನ್ನೇ ಪ್ರಶ್ನಿಸಿದ.!

ರೈಲು ಪ್ರಯಾಣದಂತಹ ಒಂದು ಸಾಮಾನ್ಯ ಘಟನೆಯ ವಸ್ತುವನ್ನಿರಿಸಿಕೊಂಡು ಹೀಗೊಂದು ನವಿರಾದ ಪ್ರೇಮಕತೆಯನ್ನು ಬರೆದವರು ಬ್ರಿಟಿಷ್ ಇ೦ಡಿಯಾದ ಸಂಜಾತ ಲೇಖಕ ರಸ್ಕಿನ್ ಬಾಂಡ್. ದೈನಂದಿನ ಬದುಕಿನ ಸಹಜ ಘಟನೆಗಳನ್ನಿಟ್ಟುಕೊಂಡು ತಮ್ಮದೇ ಆದ ವಿಶಿಷ್ಟ ಮತ್ತು ಸರಳವಾದ ಶೈಲಿಯಲ್ಲಿ ಪರಿಣಾಮಕಾರಿಯಾದ ಕತೆಗಳನ್ನು ರಚಿಸುವಲ್ಲಿ ರಸ್ಕಿನ್ ನಿಸ್ಸೀಮರು. “The Eyes Have It”ಎನ್ನುವ ಅವರ ಈ ಸಣ್ಣಕತೆಯನ್ನು ಓದಿದ ಮರುಕ್ಷಣವೇ ಇದನ್ನು ನಿಮಗೂ ಉಣಬಡಿಸಬೇಕೆನ್ನಿಸಿತು. ನಿಮ್ಮೆದುರಿಗಿಟ್ಟಿದ್ದೇನೆ. ಓದುವ ಸಂತಸ ನಿಮ್ಮದಾಗಲಿ.

4 ಟಿಪ್ಪಣಿಗಳು Post a comment
  1. laxmikanth
    ಏಪ್ರಿಲ್ 15 2016

    ಕಡಿಮೆಯೆಂದರೂ ಇಪ್ಪತ್ತು ಬಾರಿ ಇಂಗ್ಲಿಷ್ ನಲ್ಲಿರುವ ಈ ಮೂಲ ಕತೆಯನ್ನು ಓದಿರುವ ನನ್ನಿಂದ ಇದನ್ನ “ಸಹಜ” ವಾಗಿ ಕನ್ನಡ ದಲ್ಲಿ ಓದಿಸಿದಿರಿ…..ಕೆಲವೊಮ್ಮೆ ಉತ್ತರದಲ್ಲಿ ಈ ಕತೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ “ಆ ಹುಡುಗಿ” ಯನ್ನು ಅಕ್ಕಪಕ್ಕದ ಪ್ರಯಾಣಿಕರಲ್ಲಿ ಹುಡುಕಲು ಪ್ರಯತ್ನಸಿದ್ದೆ….

    ಈಗನ್ನಿಸುತ್ತಿದೆ…..ಅವಳು ನಿಮ್ಮ ಅನುವಾದದಷ್ಟೇ ಸುಂದರವಾಗಿ ಸರಳವಾಗಿ ಸಹಜವಾಗಿ ದ್ಧಿರಬಹುದು ಅಂತ…..

    ಉತ್ತರ
  2. ಸ್ಪಂದನ ರಾಮ್
    ಏಪ್ರಿಲ್ 15 2016

    ಅಧ್ಬುತ ನಿರೂಪಣೆ.ಈ ಕಾರಣದಿಂದಾಗಿಯೇ ಗುರುರಾಜ್ ಕೊಡ್ಕಣಿಯವರು ನಿಲುಮೆಯ ಬರಹಗಾರರಲ್ಲಿ ನನಗೆ ನೆಚ್ಚಿನವರು

    ಉತ್ತರ
  3. ಏಪ್ರಿಲ್ 15 2016

    ನಿಮ್ಮ ಬರಹ ಓದುತ್ತ ಇದು ನೀವು ಪ್ರಯಾಣಿಸುವಾಗ ನಡೆದ ಘಟನೆ ಅಂದುಕೊಂಡೆ. ತಲೆಗೆ ಹೊಳಿಲೆ ಇಲ್ಲ ಕಣ್ಣಿಲ್ಲದವರು ಇಲ್ಲಿ ಬರೆಯೋಕೆ ಸಾಧ್ಯವಾ. ಕೊನೆಯಲ್ಲಿ ಇದೊಂದು ಕಥೆ. ಚೆನ್ನಾಗಿದೆ ಬರೆದ ಒಕ್ಕಣೆ. ಧನ್ಯವಾದಗಳು.

    ಉತ್ತರ
  4. ಪ್ರವೀಣ್ ಹೆಗಡೆ
    ಏಪ್ರಿಲ್ 15 2016

    ಕತೆ ಮೂಲ ಭಾಷೆಯಿಂದ ಭಾಷಾಂತರವಾಗುವಾಗ ಮುಖ್ಯವಾಗಿ ಬೇಕಾಗುವುದು.ಮೂಲ ಕತೆಯ ಭಾವ.ಹಾಗೆ ಭಾವ ಸಮೇತ ಅನುವಾದಿಸುವವರು ತುಂಬ ಕಮ್ಮಿ..ಗುರುರಾಜ ಅಂಥಹ effective translator ಗಳ ಪೈಕಿ ಒಬ್ಬರು..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments