ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 15, 2016

10

ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…

‍ನಿಲುಮೆ ಮೂಲಕ

ನಾಗೇಶ ಮೈಸೂರು

Ram-Vs-Ravan-14

ಶ್ರೀ ರಾಮ ಸೀತೆಯ ಕಥೆ ನಮಗೇನು ಹೊಸದಲ್ಲ ಬಿಡಿ.. ಎಲ್ಲಾ ಭಾಷೆಗಳಲ್ಲಿ ಖಂಡುಗಗಟ್ಟಲೆ ಕಥೆ, ಕಾವ್ಯಗಳು ಸಿಕ್ಕುತ್ತವೆ. ಆದರಿದು ಆಧುನಿಕ ವೇಗದ ಜಗ.. ಎಲ್ಲಾ ಸಂಕ್ಷಿಪ್ತದಲ್ಲಿ, ಫಾಸ್ಟ್ ಪುಡ್ಡಿನ ಹಾಗೆ ಶೀಘ್ರಗತಿಯಲ್ಲಿ ಸಿಗುವಂತಿದ್ದರೆ ಅದನ್ನೇ ಬಯಸುವ ಗ್ರಾಹಕ ವರ್ಗವೂ ಸಾಕಷ್ಟು ದೊಡ್ಡದಿದೆ. ಇನ್ನು ಮಿಕ್ಕವರಿಗೆ ದೊಡ್ಡದು, ಚಿಕ್ಕದು ಎನ್ನುವ ಜಿಜ್ಞಾಸೆಗಿಂತ ಸಮಯದ ಅಭಾವ. ಇನ್ನು ಕಿರಿಯರ ವಿಷಯಕ್ಕೆ ಬಂದರೆ ಅವರಿಗೆ ತೀರಾ ಭಾರವಾಗದ ರೀತಿಯಲ್ಲಿ ಅರುಹಬೇಕಾದ ಅನಿವಾರ್ಯ.. ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಹೆಣೆದ ನೂರು ಸಾಲಿನ, ಚತುಷ್ಪಾದಿ ಅವತಾರದಲ್ಲಿರುವ ಕಾವ್ಯರೂಪಿ ರಾಮಾಯಣ ಸಾರ – ಈ ಶ್ರೀರಾಮ ಚರಿತ. ನರಮಾನವನಾಗಿ ಪಡಿಪಾಟಲು ಪಟ್ಟನೆನ್ನುವ ಹಿನ್ನಲೆಯನ್ನು ಅಂತರ್ಗತವಾಗಿಸಿಕೊಂಡು ಮೂಡಿಬಂದ ಕಥಾಲಹರಿ. ಸರಳ ಲಹರಿ ಹಿತವಾಗಿ ನುಡಿವಂತಿದ್ದು ಮುದ ತಂದರೆ ಧನ್ಯ .

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು

ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು

ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ

ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||

ಸೇವಕರ ತಪ್ಪಿಗೆ ಮಾಲೀಕನೆ, ಹೊತ್ತಂತೆ ಹೊಣೆ ಯಾತನೆ

ಭೂಭಾರವಿಳಿಸೆ ಅವತಾರವನೆತ್ತೋ, ಅಪೂರ್ವ ಸಂಘಟನೆ

ದುಷ್ಟರಾದರು ಸರಿ ದೂರವಿರಲಾರೆವೆಂದಾ ಜಯ ವಿಜಯ

ಅವರ ಕರ್ಮಕೆ ಭೂಲೋಕದಲಿ ಜನಿಸಿದ ಅದ್ಭುತ ವಿಷಯ || ೦೨ ||

 

ಸ್ಥಿತಿಕರ್ತನ ತಪ್ಪೇನಿಲ್ಲಿ, ಕರುಣೆಯ ಕ್ಷೀರಸಾಗರ ಹೊನಲು

ಭಕ್ತರಂತೆ ಕೈಂಕರ್ಯದವರಿಗು ಹೃದಯ ವೈಶಾಲ್ಯ ಕಡಲು

ಮುಕ್ತರನಾಗಿಸಲವರನೆ ಪಡಬಾರದ ಪಾಡು ಭೂಲೋಕದೆ

ಭುವಿ ಮನುಜರ ಹಾಗೆ ನೋವು,ಬವಣೆ,ವಿಷಾದ,ಬೇಸರದೆ || ೦೩ ||

 

ಅವತಾರವ ಹೊರುವ ಕರ್ಮಕೆ ಮಾನವ ಜನ್ಮವೇ ಬೇಕಿತ್ತಾ

ದುಷ್ಟರ ದಮನಿಸಿ ಹಣಿಯೆ, ಬರಿಗಾಲಲೆ ಹೊಸಕೆ ಸಾಕಿತ್ತ

ಮಾದರಿಯಾಗುತ ಸೂಕ್ತ ಆದರ್ಶಗಳ ಬೆಂಬಲಿಸುವ ಧರ್ಮ

ನಿಭಾಯಿಸೆ ಹಡೆದನೆ ಸಂಕಟ ಮರ್ಯಾದಾಪುರುಷೋತ್ತಮ || ೦೪ ||

 

ಪುತ್ರಕಾಮೇಷ್ಟಿಯಾಗ ರಾಜ ದಶರಥನಿಗೆ ಸಿಕ್ಕಿ ಸುಯೋಗ

ಹರಿಯೆ ಹಿರಿ ಮಗನಾಗಿ ಹುಟ್ಟಿದಪರೂಪ ಯೋಗಾಯೋಗ

ಹುಟ್ಟಿದರೇನು ಬಂತು ಪಟ್ಟಕೆ ಕೂರಲು ಬಿಡದೆಲೆ ಕಿರಿಯಮ್ಮ

ಕಾನನ ವಾಸಕೆ ಅಟ್ಟಿದರೂ, ನಗುನಗುತಲೇ ಕರ್ತವ್ಯಕೆ ರಾಮ || ೦೫ ||

 

ಬಿಡಲುಂಟೆ ಬರುವೆನೆಂದವಳ ಹಿಂದೆ, ಸತಿ ಧರ್ಮಕೆ ಮನ್ನಣೆ

ಕಷ್ಟವೋ ಸುಖವೋ ನಿಭಾಯಿಸಲೆ ಜತೆಗಣುಗದಮ್ಮ ಲಕ್ಷ್ಮಣನೇ

ನಾರುಮಡಿಯನುಟ್ಟು ಒಡವೆ ವಸ್ತ್ರ ಕಳಚಿಡುವ ಕರ್ಮಕಾಂಡ

ಭಗವಂತನ್ಹಣೆಯಲೆ ಯಾರು ಬರೆದರೊ ಬರಹದೀ ಹಳವಂಡ || ೦೬ ||

 

ಆದದ್ದಾಯಿತು ವಿಧಿ ಚಿತ್ತ, ಎಂದು ನಡೆದವರ ಕಾಡಿದಾ ಭೂತ

ಕಾನನ ಕುಟೀರದಿ ನಿರಾಳ ಬಿಡದೆ ಶೂರ್ಪನಖಿಯಾಗಿ ಕಾಡಿತ್ತ

ಮೋಹಿಸಿ ಬಂದವಳ ಮೋಹವೆ ಕುತ್ತು ಮೋಸವಾಗಿ ಹೋಯ್ತ

ಕೋಪದಲಿ ಕತ್ತರಿಸಿದ ಕಿವಿ ಮೂಗು ಶಾಪವಾಗಿ ಬೆನ್ಹತ್ತಿದ ಕಾಟ || ೦೭ ||

 

ಮುಂಗೋಪದಲಿ ಕೊಯ್ದವ ಲಕ್ಷ್ಮಣ, ಸಂಕಟದ ಪಾಲಿಗೆ ರಾಮ

ಶೂರ್ಪಿಣಿ ತಂತ್ರಕೆ ಬಲಿಯಾದ ರಾವಣ, ಸೀತಾಪಹರಣ ಕ್ರಮ

ತಪ್ಪೆಸಗದೆಲೆ ತಪ್ಪಿತಸ್ತನ ಸ್ಥಾನ, ವಿಚಾರಣೆಗೂ ಮೊದಲೇ ಶಿಕ್ಷೆ

ಅನುಭವಿಸುವಂತೆ ಮಾಡಿದ ದುಷ್ಟನ, ಹೇಡಿತನ ಬಿಡಿಸಿದ ನಕ್ಷೆ || ೦೮ ||

 

ಪಾಪ ಪುಣ್ಯದ ಲೆಕ್ಕ ಮನ್ನಿಸುವ ಪ್ರಭುವಿಗೂ ಬಿಡದೆಲೆ ಕರ್ಮ

ಮನುಜ ರೂಪದಿ ಸ್ವಯಂ ನಡೆದು ತೋರಿಸಲೆಂದೇನು ಮರ್ಮ

ಧರ್ಮದ ಹೊರೆಯನ್ಹೊತ್ತು ಕಳುವಾದ ಸೀತೆಗ್ಹುಡುಕಾಡಿದಾಟ

ಜಗದೋದ್ದಾರಕನಾಗಿಯೂ ತಾನೆ ಅನುಭವಿಸಿ ವಿರಹ ಸಂಕಟ || ೦೯ ||

 

ದಾರಿಯಲಿ ಸಖ್ಯ ಸುಗ್ರೀವ ಹನುಮ, ವಾಲಿ ವಧೆ ಸಮಾಗಮ

ವಾಲಿಯನ್ಹಿಡಿದಿದ್ದರೆ ರಾವಣನನೊಂದೇ ಏಟಿಗ್ಹಿಡಿವ ಪರಾಕ್ರಮ

ಅಲ್ಲೂ ಕಾಡಿತ್ತೆ ರಾಮನ ಗ್ರಹಚಾರ ಸಂಕಟಕೆ ಕೊನೆಯೆ ಇರದೆ

ಬೇಡವಿತ್ತೆ ವಾಲಿರಾಮಸಖ್ಯ ಮುಗಿಸದಿರೆ ರಾಮಾಯಣ ವೇಗದೆ || ೧೦ ||

 

ಕೂಡಿಡುತ ಕಪಿ ಸೈನ್ಯ ಹತ್ತರ ಘಾತ ಅರವತ್ಮೂರರ ಮಹೌಘ

ಅಟ್ಟಬೇಕಾಯ್ತೆ ಕಪಿದೂತರ ಹುಡುಕೆ ಸೀತಾಮಾತೆ ವಿಯೋಗ

ಗುರುತಿಲ್ಲದವರಿಗು ಗುರುತು ಹೇಳುತ ಮುದ್ರೆಯುಂಗುರ ನೀಡಿ

ಚೂಡಾಮಣಿ ಕಾಕಾಸುರ ಕಣಿ ಬಿಚ್ಚಿಡಬೇಕಾಯ್ತೆ ಅಂತರಂಗವಿಡಿ || ೧೧ ||

 

ಸಾಲದಂತೆ ಕಾಯುವ ಮನದೂರ ಸಾಗರದಾಚೆಗಾಚಿನಾ ತೀರ

ಕಾಡು ಮೇಡು ಕಲ್ಲು ಮುಳ್ಳು ಬೆಟ್ಟಾ ಗುಡ್ಡ, ಹತ್ತಿಳಿದ ವ್ಯಾಪಾರ

ಹಾರಿದವರಷ್ಟಿಷ್ಟು ಹನುಮಂತರು ಲಂಘಿಸಿ ದೂರದ ಆಲಿಂಗನ

ಕಂಡು ಹಿಡಿಯಬೇಕಾಯ್ತೆ ಸೀತಾ ಮಾತೆಯನಿಟ್ಟ ಅಶೋಕ ವನ || ೧೨ ||

 

ವರ್ಷಾಂತರ ಕಾನನ ವಾಸ ಘೋರ, ವಚನ ವನವಾಸದ ಭಾರ

ಹೊತ್ತದ್ದು ಸಾಲದಿತ್ತೆ ಸುಸ್ಥಿತಿ ಹೊರೆ, ಬೇಕಿತ್ತೇಕೊ ಅಗಲಿಕೆ ತೆರ

ಶಾಪ ಮರ್ಮ ಅವತಾರ ಕರ್ಮ ಲೋಕಕಲ್ಯಾಣ ಕಾರ್ಯಕಾರಣ

ಜಗನ್ನಾಟಕದ ಹೆಸರಲಿ ಹಗರಣ, ಏನೆಲ್ಲ ನೆಪ ನೀತಿ ಸಂಘಟನ || ೧೩ ||

 

ರಾಜ್ಯ ಸೈನ್ಯದೊಡೆತನ ಕಳಚಿಟ್ಟೆ, ದೂರಿಟ್ಟು ಬಂಧು ಜನರ ನಿಷ್ಠೆ

ಕಾಡಿಗೆ ಬಂದರು ತಪ್ಪದ ಶಿಕ್ಷೆ, ವಿಯೋಗದೀ ಕೊನೆಗು ಎಡವಟ್ಟೆ

ಮನುಜರಿಲ್ಲದ ಕಾನನ, ಕಪಿ ಕೋತಿ ಕರಡಿ ವಾನರಗಳ ಪಾಲಿನ

ಸೇನೆ ಕಟ್ಟುವ ಗ್ರಹಚಾರ, ಯಾರಿಗ್ಹೇಳುವುದೊ ಸಂಕಟ ಗೋಳನ್ನ || ೧೪ ||

 

ಜಗ ಸೂತ್ರಧಾರನ ಮುಕುಟ ಧರಿಸಿದ್ದರು ಮಾನವನಾಗಿ ಅಕಟ

ಏಗಬೇಕಾಯ್ತೆ ಭೂಲೋಕದಲಿ ದಿಟ ಹುಲು ಮನುಜತೆಯ ಕಾಟ

ಅರಮನೆಯಲಿಲ್ಲದ ಸುಖ ಭೋಗ, ಕಾನನದಲು ಇರದ ಸರಾಗ

ಬಾಲ್ಯದಿಂದಲೆ ತೀರದಾ ಬವಣೆ, ಹೆಸರಿಗಷ್ಟೆ ಕಲ್ಯಾಣದ ಸೊಬಗ || ೧೫ ||

 

ಕಡೆಗು ಕಂಡು ಹಿಡಿದನೆ ಹನುಮ ಸೀತೆಯನಡಗಿಸಿಟ್ಟಾ ನಿಲ್ದಾಣ

ಮಾತೆಗಿತ್ತ ವಚನ ಸೂಕ್ಷ್ಮ, ರಾಮ ಬರಲಿಹ ಬಿಡಿಸೊ ಜೋಪಾನ

ತೊರೆದನ್ನಾಹಾರ ಬಿಚ್ಚಿಟ್ಟ ಮುಡಿಯಲಿ, ಕುಳಿತವಳಾ ನೆನೆನೆನೆದೆ

ಭಾರದ ಕಂಬನಿ ಕಾಣಿಸದಂತೆ, ಮುಡಿ ಕಚ್ಚಿ ಸಹನೆ ಪುರುಷನೆದೆ || ೧೬ ||

 

ಅಂತೂ ದಂಡಯಾತ್ರೆಗೆ ಗಮನ, ಲಂಕೆಯತ್ತಾ ಹೊರಟ ಪಯಣ

ಹೇಳಿದ ಮಾತ ಕೇಳನೆ ರಾವಣ, ಹೇಳಿ ಸೋತನಲ್ಲವೆ ವಿಭೀಷಣ

ಕದ್ದಾಯಿತು ಬಿದ್ದ ಮೇಲೆಂತ ಗುನುಗು, ಹೆಣ್ಣೆ ಮಾಯೆಯ ಸೆರಗು

ಗೆಲ್ಲೆ ಸುಂದರಿ ವಶದೆ ಜಗ ಬೆರಗು, ಸೋಲೆ ವೀರ ಸ್ವರ್ಗ ಮೆರುಗು || ೧೭ ||

 

ವಿಧಿಯಿಲ್ಲದೆ ಮಾಡುತ ಯುದ್ಧ, ಸಕಾರಣ ವಿಶ್ಲೇಷಣೆ ಅಸಂಬದ್ಧ

ನೀರಿಗಿಳಿಸಿದವನಾರೊ ದಾನವ, ಈಜಿ ಮುಳುಗಿಸಬೇಕೆ ಪ್ರಬುದ್ಧ

ಮಾಯಾ ಜಗದ ಸೂತ್ರಧಾರಿ, ಆಗಿದ್ದೂ ಬ್ರಹ್ಮಾಂಡ ಸ್ಥಿತಿಗಧಿಕಾರಿ

ಹೊರಿಸಬೇಕಾಯ್ತೆ ಬಂಡೆ ಕಲ್ಲು, ಮುಳುಗದ ಸೇತುವೆ ಕಟ್ಟೊ ಬಾರಿ || ೧೮ ||

 

ಸಹಕರಿಸದ ಸಾಗರಾಕ್ರೋಶ ಘನ, ದಾಟಿ ಬಂದು ಮೆಟ್ಟಿ ವರುಣನ

ಬೀಡು ಬಿಟ್ಟು ದಡದಲಿ ಜತನ, ಸುದ್ದಿ ಮುಟ್ಟಿ ಅಲುಗಿಸೆ ರಾವಣನ

ಶುರುವಾಯ್ತೆ ಘನಘೋರಯುದ್ಧ, ಇಂದ್ರಜಿತು ಕುಂಭಕರ್ಣನು ಬಿದ್ದ

ಭೀತಿ ಬಿಡದೆ ಕಾಡಿತ್ತಲ್ಲಾ ಸಮೃದ್ಧ, ಸಂಜೀವಿನಿಗೆ ಲಕ್ಷ್ಮಣ ಬದುಕಿದ || ೧೯ ||

 

ಪಡಬಾರದ ಪಾಡ ಪಡುತಲೆ ರಾಮ, ಕೊನೆಗೂ ರಾವಣನ ಆಗಮ

ಕತ್ತರಿಸಿ ತರಿದರು ತಲೆ ತೋಳು, ಮರಳಿ ಚಿಗುರುವ ದೈತ್ಯ ಮರ್ಮ

ಕೊನೆಗರಿವಾಗುತೆ ಜೀವ ರಹಸ್ಯ, ಗುರಿಯಿಡುತಲೆ ಹೃದಯ ಕಲಶ

ಧರೆಗುರುಳಿದ ರಾವಣ ಪೌರುಷ, ಶಾಪವಿಮೋಚನೆ ಹೆಸರಲಿ ಕ್ಲೇಷ || ೨೦ ||

 

ಗೆದ್ದರಾಯ್ತೆ ಸೀತೆಗೆ ಬಿಡುಗಡೆ, ಪಾಲಿಸಬೇಕಾಯ್ತಲ್ಲ ಲೋಕದ ನಡೆ

ಪರಪುರುಷನಡಿಯಾಳಾದ ನೆಪ ಕಾಡೆ, ಒಪ್ಪಿಕೊಳ್ಳದ ಜಗದಡೆತಡೆ

ಲೋಕ ನೀತಿಯ ಪಾಲಿಸೆ ಶುದ್ಧ, ಬರಬಾರದಲ್ಲವೆ ಲೋಕಾಪವಾದ

ಮರ್ಯಾದಾ ಪುರುಷೋತ್ತಮನ ಬಾಯಿಂದ, ಬರಿಸಿತೆ ಕಠಿಣ ಪದ || ೨೧ ||

 

ಅಗ್ನಿ ಪರೀಕ್ಷೆ ಮುನ್ನುಗ್ಗಿರೆ ಸೀತೆ, ಗೊತ್ತಿದ್ದು ಮೌನವ್ರತ ಹಿಡಿವ ವ್ಯಥೆ

ಪುಟಕಿಟ್ಟ ಬಂಗಾರವಾಗುವಂತೆ, ದೂಷಣೆಗೆಲ್ಲ ಮೌನ ಉತ್ತರಿಸುತೆ

ನಿರೂಪಿಸುತ ಮಾತೆ ಪರಿಶುದ್ಧತೆ ಜಗದೆ, ಅಪ್ಪಿಕೊಂಡನಲ್ಲಾ ಮುಗ್ದ

ಬೇಯುತಿದ್ದಾ ಸೀತೆ ಜತೆಗೆ ಬೆಂದೆ, ಅನುಭವಿಸಿ ದಿನನಿತ್ಯ ಸಂದಿಗ್ದ || ೨೨ ||

 

ಹರ್ಷೋಲ್ಲಾಸ ಮರಳಿ ರಾಜ್ಯ ಪಟ್ಟ, ರಾಜನಾಗೂ ಮುಗಿಯದಾಟ

ಅಗಸನ ಮಾತೆಂದು ಅಲಕ್ಷಿಸದೆ ಕೆಟ್ಟ, ಪ್ರಜೆಯಾಡಿದ ನುಡಿ ದಿಟ್ಟ

ತಿಳಿದಿದ್ದೂ ಸೀತೆ ಗರ್ಭಿಣಿಯೆಂದು, ಕಾಡಿಗಟ್ಟುವ ಗತಿ ವಿಧಿ ತಂದು

ನೋವೆಷ್ಟಿತ್ತೊ ಮತ್ತೆ ಸಖ್ಯ ಸಿಗದು, ಸೌಖ್ಯವೆಲ್ಲಿತ್ತು ಮಹಲಿನಲಿದ್ದು || ೨೩ ||

 

ವಿಧಿ ವಿಪರ್ಯಾಸ ಅಗಣಿತ, ವಿಯೋಗದಲಿದ್ದೂ ಬಿಡದೆ ಕಾಡಿತ್ತ

ಮರೆತೆಲ್ಲ ಹೇಗೊ ಮುಗಿಸಲೆತ್ತಾ, ಲವ ಕುಶ ರೂಪದಲವತರಿಸಿತ್ತ

ಅಶ್ವಮೇಧಕುದುರೆ ಪುತ್ರರ ಸೇರೆ, ಕದನದಂಗಳ ಸಂಬಂಧಿಗಳಾರೆ

ಸಹಿಸಲಿನ್ನೆಷ್ಟು ಭೂಮಾತೆ ಪಾಲಾಗಿರೆ, ಸುತಪಿತ ಜತೆ ನೆಮ್ಮದಿಗಿರೆ || ೨೪ ||

 

ಅಂತು ರಾಮಾಯಣ ಪ್ರಕರಣ, ರಾಮನಾಗುವ ಸಂಕಟವೆ ದ್ರೋಣ

ನರನವತಾರದ ನಾಟಕ ಕಣ, ಅನುಭವಿಸಿದ್ದೆಲ್ಲ ಪರಿ ವಿನಾಕಾರಣ

ಬರಿ ಹೆಸರಿದ್ದರಾಯ್ತೆ ರಾಮ, ಬದುಕುವುದಷ್ಟು ಸುಲಭವೆ ಪಾಮರ

ಶ್ರೀರಾಮನ ಬದುಕೆ ಅನನ್ಯ, ಬದುಕಿ ತೋರಿದ ನರ ಬದುಕುವ ತರ || ೨೫ ||

10 ಟಿಪ್ಪಣಿಗಳು Post a comment
  1. Shubha
    ಏಪ್ರಿಲ್ 15 2016

    ನೂರು ಸಾಲಿನಲ್ಲಿ ರಾಮಾಯಣ….ಅದ್ಭುತವಾಗಿ ಮೂಡಿಬಂದಿದೆ.

    ಉತ್ತರ
    • ಏಪ್ರಿಲ್ 15 2016

      ಥ್ಯಾಂಕ್ಸ್ ! ಆಡುಗನ್ನಡದಲ್ಲಿ ಆದಷ್ಟು ಸರಳವಾಗಿ ಇರಲೆಂದು ‘ಫ್ರೀ ಲ್ಯಾನ್ಸ್’ ಸ್ಟೈಲಿನಲ್ಲಿ ಬರೆದದ್ದು. ನಿಮಗೆ ಮೆಚ್ಚುಗೆಯಾಗಿದ್ದು ತುಂಬಾ ಖುಷಿ 😊

      ಉತ್ತರ
  2. ಏಪ್ರಿಲ್ 15 2016

    ಪ್ರಬುದ್ಧವಾಗಿದೆ.. 🙂 ಕೆಳಗಿನ ಪದಗಳ meaning ಹೇಳ್ತಿರ please 🙂
    ಮಹೌಘ
    ಚೂಡಾಮಣಿ ಕಾಕಾಸುರ ಕಣಿ ಬಿಚ್ಚಿಡಬೇಕಾಯ್ತೆ ಅಂತರಂಗವಿಡಿ
    ಸುತಪಿತ

    ಉತ್ತರ
    • ಏಪ್ರಿಲ್ 15 2016

      ಧನ್ಯವಾದಗಳು ಸಂಜೋತಾರವರೆ. ನೀವು ಕೇಳಿದ ವಿವರಣೆ ಕೆಳಗಿದೆ ನೋಡಿ.

      ೧. ಮಹೌಘ:
      ನಿಮ್ಮ ಪ್ರಶ್ನೆಗೆ ಅದೇ ಸಾಲಿನಲ್ಲಿ ಉತ್ತರವಿದೆ ನೋಡಿ – “ಹತ್ತರ ಘಾತ ಅರವತ್ಮೂರರ” – ಅಂದರೆ ಹತ್ತನ್ನು ೬೩ ಬಾರಿ ಗುಣಿಸಿದಾಗ ಬರುವ ಸಂಖ್ಯೆ. (ಈ ಮಾಹಿತಿ ಸಂಪದದ ಲೇಖನವೊಂದರಿಂದ ಆಯ್ದುಕೊಂಡಿದ್ದು). ಆದರೆ ಅದೇ ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶದಲ್ಲಿ ನೋಡಿದಾಗ ಈ ಕೆಳಕಂಡ ಉತ್ತರ ಕಾಣುತ್ತದೆ.

      ಇದು ಕಪಿ ಸೈನ್ಯದ ಲೆಕ್ಕಾಚಾರ. ರಾವಣನ ಕಡೆಯ ಚಾರನೊಬ್ಬನು ಕಪಿಸೈನ್ಯದ ಸಂಖ್ಯೆಯನ್ನು ವಿವರಿಸುತ್ತ, ಆ ಸಂಖ್ಯಾ ಕ್ರಮವನ್ನೂ ತಿಳಿಸುತ್ತಾನೆ.ಲಕ್ಷ, ಕೋಟಿ, ಶಂಖ, ಮಹಾಶಂಖ, ಮುಂತಾಗಿ ಸಂಖ್ಯಾಕ್ರಮವು ಮಹೌಘದವರೆಗೂ ಹೋಗಿದೆ. ಆಧುನಿಕ ಸಂಕೇತದಲ್ಲಿ ಒಂದು ಮಹೌಘ = 1055 (ಒಂದರ ಮುಂದೆ 55 ಸೊನ್ನೆಗಳು). ಹೆಚ್ಚಿನ ವಿವರಣೆಗೆ ಈ ಕೊಂಡಿ ನೋಡಿ: https://kn.m.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಅಂಕಿಗಳು_(ಇತಿಹಾಸ)

      ೨. ಚೂಡಾಮಣಿ ಕಾಕಾಸುರ ಕಣಿ ಬಿಚ್ಚಿಡಬೇಕಾಯ್ತೆ :
      ರಾಮ ಕಪಿಸೈನ್ಯವನ್ನು ಸೀತಾಮಾತೆಯ ಹುಡುಕಾಟಕ್ಕೆ ಕಳಿಸಿದಾಗ ಹನುಮಂತನ ಹತ್ತಿರ ತನಗೆ ಮತ್ತು ಸೀತಾಮಾತೆಗೆ ಮಾತ್ರ ಗೊತ್ತಿದ್ದ, ಏಕಾಂತದಲ್ಲಿದ್ದಾಗ ನಡೆದ ಸೀತೆಯ ಮೇಲಿನ (ಕಾಗೆಯ ರೂಪಿನಲ್ಲಿ ) ಕಾಕಾಸುರನೆಂಬ ಅಸುರನ ಧಾಳಿಯ ವಿಷಯವನ್ನು ತಿಳಿಸುತ್ತಾನೆ ಮತ್ತೆ ಜತೆಗೆ ಚೂಡಾಮಣಿಯನ್ನು ಭೌತಿಕ ಸಾಕ್ಷ್ಯವಾಗಿ ಕಳಿಸುತ್ತಾನೆ. ರಾವಣನ ವಶದಲ್ಲಿದ್ದ ಸೀತೆ ಹನುಮನ ಮಾತು ನಂಬಬೇಕಾದರೆ ಏನಾದರೂ ಆಧಾರವಿರಬೇಕಲ್ಲ? ಇಲ್ಲದಿದ್ದರೆ ಅದೂ ರಾವಣನ ಕುತಂತ್ರವೆಂದು ಸೀತೆಗೆ ಸಂಶಯ ಬರುವ ಕಾರಣದಿಂದಾಗಿ. ಹನುಮ ಸೀತೆಯ ಕಂಡಾಗ ಈ ಖಾಸಗಿ ವಿಷಯಗಳೆರಡರ ಕಣಿ ಬಿಚ್ಚಾಬೇಕಾಯ್ತು ಅವಳನ್ನು ನಂಬಿಸಲು ಎನ್ನುವ ಅರ್ಥದಲ್ಲಿ ಪ್ರಯೋಗಿಸಿದ್ದೇನೆ.

      ೩. ಅಂತರಂಗವಿಡಿ:

      ಇದು ಮೇಲಿನ ಕಾಕಾಸುರ ಘಟನೆಗೆ ಸಂಬಂಧಿಸಿದ್ದು. ಏಕಾಂತದಲ್ಲಿದ್ದಾಗ ಕೊಕ್ಕಿನಿಂದ ಸೀತೆಯ ವಕ್ಷದತ್ತ ಧಾಳಿ ನಡೆಸಿದಂತಹ ಘಟನೆಯೂ ಸೇರಿದಂತೆ ತನ್ನ ಅಂತರಂಗದ ರಹಸ್ಯವನ್ನೆಲ್ಲ (ಅಂತರಂಗವಿಡಿ) ಬಂಟನಾದ ಹನುಮನಲ್ಲಿ ಬಿಚ್ಚಿಡುವಂತ ಅನಿವಾರ್ಯಕ್ಕೊಳಗಾಗಬೇಕಾಯಿತು ರಾಮ – ಸೀತೆಯನ್ನು ಹೇಗಾದರು ಕಂಡುಕೊಳ್ಳುವ ಪ್ರಯತ್ನದಲ್ಲಿ ಎಂಬ ಅರ್ಥ.

      ೪. ಸುತಪಿತ : ಸೀತಾಮಾತೆ ಭೂಮಾತೆಯ ಮಡಿಲು ಸೇರಿದ ಮೇಲೆ ಲವ-ಕುಶರು (ಸುತ), ಶ್ರೀ ರಾಮನ (ಪಿತ) ಜತೆಗೂಡಿ ನೆಮ್ಮದಿಯಿಂದ ರಾಜ್ಯವಾಳಿಕೊಂಡಿದ್ದರು ಎನ್ನುವ ಅರ್ಥದಲ್ಲಿ ಪ್ರಯೋಗಿಸಿದ್ದು (ತಾಯಿಯಿಲ್ಲದೆ ನೆಮ್ಮದಿಯೇ ಅನ್ನುವ ಪ್ರಶ್ನೆ ಬರಬಹುದು , ಅವಳ ಸ್ಥಾನ ಕಳುವಾದರು ಅಲ್ಲಿ ತಂದೆಯ ಸ್ಥಾನ ಸಿಕ್ಕಿ ತುಸು ನೆಮ್ಮದಿಯಾಯ್ತು)

      (ಸೂಚನೆ: ಅಂದಹಾಗೆ ರೀಡೂ ಕನ್ನಡದಲ್ಲಿ ಈ ಪದ್ಯಗಳ ಜತೆ ಸುಧೀರ್ಘ ಟಿಪ್ಪಣಿಯ ಜತೆ ಐದು ಕಂಣ್ತುಗಳಲ್ಲಿ ಬರುತ್ತಿದೆ (೧೪.೦೪.೨೦೧೬ ರಿಂದ) . ಆಸಕ್ತಿಯಿದ್ದರೆ ಓದಿ ನೋಡಿ. ನನ್ನ ಬ್ಲಾಗಿನಲ್ಲೂ ಲಿಂಕ್ ಇದೆ.)

      ಧನ್ಯವಾದಗಳು
      – ನಾಗೇಶ ಮೈಸೂರು

      ಉತ್ತರ
      • ಏಪ್ರಿಲ್ 15 2016

        ಅಬ್ಭ.!! Deep Meaning, thanks for explaining neatly.. ಹೀಗೆ ಕಷ್ಟವಾದ ಪದಗಳಿಂದ ಬರೆಯುತ್ತಿರಿ.. ನನ್ನ ಕನ್ನಡ ಜ್ಞಾನ improve ಆಗುತ್ತೆ ನಿಮ್ಮ ಹತ್ತಿರ doubts ಗೆ ಪರಿಹಾರ ಕೇಳುತ್ತ 🙂

        ಉತ್ತರ
        • ಏಪ್ರಿಲ್ 15 2016

          ಆಳವಾದ ಅರ್ಥ ಅನ್ನೊದಕ್ಕಿಂತ ಸಂಕ್ಷಿಪ್ತವಾಗಿರೊದ್ರಿಂದ ಎಲ್ಲಾ ಗ್ರಹಿಕೆಗೆ ಸಿಗೋಲ್ಲ – ರಾಮಾಯಣ ಚೆನ್ನಾಗಿ ಗೊತ್ತಿರದ ಹೊರತು. ಖಂಡಿತ – ಹೀಗೆ ಪ್ರಶ್ನೆ ಕೇಳ್ತಾ ಇರಿ, ನಾನು ಸ್ವಲ್ಪ ತಡಕಾಡಿ, ತಲೆ ಕೆರೆದು ಉತ್ತರ ಕಂಡುಹಿಡಿದು, ಬರೆದ ಮೇಲೆ ಮರೆತಿದ್ದನ್ನ ನೆನಪಿಸಿಕೊಳ್ಳಲು ಅನುಕೂಲವಾಗುತ್ತೆ 😀

          ಉತ್ತರ
  3. Sunil Tarun
    ಏಪ್ರಿಲ್ 16 2016

    Amazing words

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments