ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 16, 2016

3

ಬಗೆಬಗೆಯಾಗಿ ಕಾಡುವ ನಗೆಗಾರ: ಚಾಪ್ಲಿನ್

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Tom Wilson (le policeman), Charlie Chaplin (le vagabond) et Jackie Coogan (le gosse)

Tom Wilson (le policeman), Charlie Chaplin (le vagabond) et Jackie Coogan (le gosse)

ನನಗಾಗ ಹದಿನಾಲ್ಕು ವರ್ಷ. ಪ್ರೈಮರಿ ದಾಟಿ ಆಗಷ್ಟೇ ಹೈಸ್ಕೂಲಿಗೆ ಕಾಲಿಟ್ಟಿದ್ದೆ. ಮನೆಯಲ್ಲಿ ನಡೆಯಲಿದ್ದ ಒಂದು ಮದುವೆ ಸಮಾರಂಭಕ್ಕಾಗಿ ವಿಸಿಆರ್ ಬಾಡಿಗೆ ಪಡೆದಿದ್ದರು. ಎರಡೇ ಎರಡು ದಿನ ಮನೆಯಲ್ಲಿರುವ ಈ ಭಾಗ್ಯದ ಪೂರ್ಣ ಸದುಪಯೋಗ ಪಡೆಯಬೇಕಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಪಿಚ್ಚರ್ ಹಾಕಿ ಓಡಿಸಬೇಕು ಎಂಬುದು ನಮ್ಮ ನಿಲುವು. ಹಾಗೆ ಬಾಡಿಗೆಗೆ ತಂದಿದ್ದ ಮೂರ್ನಾಲ್ಕು ಚಿತ್ರಗಳ ಪೈಕಿ ಒಂದು – ಗೋಲ್ಡ್ ರಶ್. ದೂರ ದೇಶವೊಂದರಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂಬ ಸುದ್ದಿಯ ಜಾಡು ಹಿಡಿದು ಹೊರಡುವ ಮನುಷ್ಯರು ಎಂತೆಂಥ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾರೆ; ಕೊನೆಗೂ ಮನುಷ್ಯನಿಗೆ ಮುಖ್ಯವಾಗುವುದು ಚಿನ್ನವೋ ಜೀವನವೋ ಎಂಬುದನ್ನು ತೋರಿಸುವ ಆ ಚಿತ್ರ ಕಪ್ಪುಬಿಳುಪಿನದ್ದು. ಅದನ್ನು ಒಮ್ಮೆ ನೋಡಿ ತೃಪ್ತಿಯಾಗದೆ ಮನೆಗೆ ಬಂದುಹೋದವರಿಗೆಲ್ಲ ತೋರಿಸಿ ಟೇಪು ಕಿತ್ತು ಬರುವಷ್ಟು ಸಲ ಬಳಸಿ ಮರಳಿಸಿದ್ದು ಅಚ್ಚಳಿಯದ ನೆನಪು ನನಗೆ. ಅದುವೇ ನನ್ನ ಮತ್ತು ಚಾಪ್ಲಿನ್ನನ ಪ್ರಥಮ ಚುಂಬನ. ಬಿದ್ದೂಬಿದ್ದೂ ನಕ್ಕು ದಂತಭಗ್ನವಾಗುವುದೊಂದು ಬಾಕಿ ಇತ್ತು ಅಷ್ಟೆ!

ಹಲವು ವರ್ಷಗಳ ನಂತರ ಮನೆಗೆ ಕಂಪ್ಯೂಟರು ಬಂದಾಗ ನಾನು ಮಾಡಿದ ಮೊದಲ ಕೆಲಸ ಚಾರ್ಲಿ ಚಾಪ್ಲಿನ್‍ನ ಎಲ್ಲ ಸಿನೆಮಾಗಳ ಸಿಡಿ ತಂದು ಕಂಪ್ಯೂಟರಿಗೆ ತುರುಕಿದ್ದು. ರಿಂಕ್, ಕ್ಯೂರ್, ಸರ್ಕಸ್, ದ ಕಿಡ್, ಮಾಡ್ರನ್ ಟೈಮ್ಸ್ ಇತ್ಯಾದಿ ಸಿನೆಮಗಳನ್ನು ನೋಡನೋಡುತ್ತ ನಾನು “ಬೆಳೆದೆ”. ಒಂದನೇ ಕ್ಲಾಸಿಂದಲೂ ಕನ್ನಡ ಮೀಡಿಯಮ್ಮಲ್ಲಿ ಕಲಿತ ನನ್ನಂಥವರಿಗೆ ಇರುವ – ಹೇಗಾದರೂ ಹಾಲಿವುಡ್ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕೆಂಬ ಹಪಹಪಿಯನ್ನು ತಣಿಸಿದ ಮಹಾನುಭಾವ ಚಾಪ್ಲಿನ್. ಯಾಕೆಂದರೆ ಅವನ ಚಿತ್ರಗಳಲ್ಲಿ, ಅರ್ಥ ಮಾಡಿಕೊಳ್ಳಲು ತಲೆ ಚಚ್ಚಿಕೊಳ್ಳಬೇಕಾದಂಥ ಇಂಗ್ಲೀಷ್ ಸಂಭಾಷಣೆಯೇ ನಾಸ್ತಿ! ಸರ್ವಂ ಮೂಕಮಯಂ. ಹಾಗಾಗಿ ಈ ಮಹರಾಯ ಯಾರಿಗಾದರೂ ಅರ್ಥವಾಗದೇ ಹೋಗುವುದಕ್ಕೆ ಕಾರಣವೇ ಇರಲಿಲ್ಲ! ಒಮ್ಮೆ ಅವನೂ ವಿಜ್ಞಾನಿ ಐನ್‍ಸ್ಟೈನರೂ ಒಟ್ಟಿಗೆ ಸಾರ್ವಜನಿಕ ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ, ಐನ್‍ಸ್ಟೈನ್ ಮುಗಿಬೀಳುತ್ತಿದ್ದ ಜನರ ದಂಡನ್ನು ಕಂಡು “ನಮ್ಮಿಬ್ಬರನ್ನೂ ಜನ ಅದೆಷ್ಟೊಂದು ಪ್ರೀತಿಸುತ್ತಾರಲ್ಲ” ಎಂದು ಅಚ್ಚರಿಪಟ್ಟರಂತೆ. ಆಗ ಚಾಪ್ಲಿನ್ ತುಸುವೂ ತಡವರಿಸದೆ, “ಹೌದು ಮಿಸ್ಟರ್ ಐನ್‍ಸ್ಟೈನ್, ನಾನು ಅವರಿಗೆ ಅರ್ಥವಾಗಿದ್ದೇನೆಂದು ಜನಪ್ರಿಯ; ನೀವು ಅರ್ಥವಾಗಿಲ್ಲವೆನ್ನುವ ಕಾರಣಕ್ಕೆ ಜನಪ್ರಿಯ” ಎಂದನಂತೆ.

ಜಗತ್ತಿನೆಲ್ಲ ಕತೆಗಳನ್ನೂ ಮಾತಿಲ್ಲದೆಯೇ ಹೇಳಿಬಿಡಬೇಕೆಂಬ ನಿಷ್ಠೆ ಮತ್ತು ಧಾಷ್ಟ್ರ್ಯ ಅವನದ್ದು. ಸಿಟಿ ಲೈಟ್ಸ್ ಎಂಬ ಜಗತ್ತಿನ ಅದ್ಭುತ ಮಹಾಕಾವ್ಯದಂಥ ಚಿತ್ರದಲ್ಲೂ ಅವನು ತುಟಿ ಬಿಚ್ಚುವುದಿಲ್ಲ. “ಮಾತನಲ್ಲೇನುಂಟು ಮಣ್ಣಾಂಗಟ್ಟಿ! ಭಾಷೆಯ ಮೂಲಕ ಹೇಳಬಹುದಾದ ಅತಿದೊಡ್ಡ ಶಬ್ದ ಎಂದರೆ ಎಲಿಫೆಂಟ್ ಅಷ್ಟೆ. ಮೌನದಲ್ಲಿ ಅರಮನೆಯೇ ಕಟ್ಟಬಹುದು” ಎನ್ನುತ್ತಿದ್ದನಾತ. ಇಂಥ ಮೌನಪ್ರೇಮಿ ಚಾಪ್ಲಿನ್ ತನಗೆ ಮಾತಿನ ಚಿತ್ರ ನಿರ್ಮಿಸಲಿಕ್ಕೂ ಬರುತ್ತದೆ ಎಂಬುದನ್ನು ತೋರಿಸಲಿಕ್ಕೋ ಎಂಬಂತೆ “ದ ಗ್ರೇಟ್ ಡಿಕ್ಟೇಟರ್” ಚಿತ್ರವನ್ನೂ ತಂದ. ಹಿಟ್ಲರ್ ಎಂದರೆ ಸಾಕು ಜಗತ್ತಿನ ನಾಯಕರೆಲ್ಲ ಒಂದಾ-ಎರಡಾ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಚಾಪ್ಲಿನ್, ಅವನನ್ನು ವಿಡಂಬಿಸುತ್ತ ಎರಡು ಗಂಟೆಗಳ ಭರ್ಜರಿ ಸಿನೆಮಾ ಮಾಡಿದ. ಹಿಟ್ಲರ್‍ನ ತಾಕಲಾಟಗಳು, ಅವನ ನಾಝಿ ಸೇನೆಯ ಪೀಕಲಾಟಗಳು, ಯುದ್ಧದ ನಿರರ್ಥಕತೆ, ಸರ್ವಾಧಿಕಾರದ ಟೊಳ್ಳುತನ, ಜಗತ್ತನ್ನು ಗೆಲ್ಲಹೊರಡುವ ಲಾಲಸೆಯ ಲೊಳಲೊಟ್ಟೆತನ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಅದರಲ್ಲಿ ವಿವರಿಸಿ “ಮನುಕುಲದ ಮಹಾಭಾಷಣ” ಎಂದೇ ಪ್ರಸಿದ್ಧಿ ಪಡೆದ ಒಂದು ಅದ್ಭುತವಾದ ಭಾಷಣವನ್ನು ಅದರಲ್ಲಿ ಹಿಟ್ಲರ್ ಬಾಯಿಯಿಂದ ಮಾಡಿಸಿದ! ಡಿಕ್ಟೇಟರ್ ಸಿನೆಮಾದಲ್ಲಿ ಬರುವ ಕುರ್ಚಿಗಳ ವಿನಿಮಯ, ರೈಲ್ವೇ ನಿಲ್ದಾಣದಲ್ಲಿ ಮುಸಲೋನಿಯನ್ನು ಎದುರುಗೊಳ್ಳುವ ದೃಶ್ಯ, ಸೆಲೂನ್ ದೃಶ್ಯ, ವಿಶ್ವವೆಂಬ ಬಲೂನಿನೊಂದಿಗೆ ಹಿಟ್ಲರ್ ಆಟವಾಡುವುದು, ದೊಡ್ಡ ಸೇನೆಯ ನಡುವಲ್ಲಿ ಬಂದೂಕು ಹಿಡಿಯಲಿಕ್ಕೂ ಬರದ ನರಸಾಮಾನ್ಯನೊಬ್ಬ ಸೇರಿಕೊಂಡು ಪಡುವ ಫಜೀತಿ – ಇವೆಲ್ಲವನ್ನೂ ಚಾಪ್ಲಿನ್ ಅದೆಷ್ಟು ತನ್ಮಯತೆಯಿಂದ ಕಟ್ಟಿಕೊಟ್ಟನೆಂದರೆ ಸ್ವತಃ ಹಿಟ್ಲರ್ ಆ ಚಿತ್ರವನ್ನು ಮೂರ್ನಾಲ್ಕು ಸಲ ನೋಡಿ ಮೈ ಪರಚಿಕೊಂಡಿದ್ದನಂತೆ. ತಮಾಷೆಯೆಂದರೆ ಹಿಟ್ಲರ್‍ನಿಗೂ ಚಾಪ್ಲಿನ್‍ಗೂ ವಯಸ್ಸಿನಲ್ಲಿ ಕೇವಲ ನಾಲ್ಕು ದಿನಗಳ ಅಂತರವಷ್ಟೇ! 1889ರ ಎಪ್ರೀಲ್ 16ರಂದು ಚಾಪ್ಲಿನ್ ಹುಟ್ಟಿದರೆ ಹಿಟ್ಲರ್ ಭೂಮಿಗೆ ಬಂದದ್ದು 20ರಂದು! ಇವರಿಬ್ಬರ ಚಹರೆಯೂ ಬಹುತೇಕ ಒಂದೇ ಎಂಬುದು ಇನ್ನೊಂದು ವಿಚಿತ್ರ. ಹಿಟ್ಲರನಿಗೆ ಬೋಗುಣಿ ಟೋಪಿ ಹಾಕಿ ಕೈಗೆ ಬಿದಿರುಕೋಲು ಕೊಟ್ಟರೆ ಚಾಪ್ಲಿನ್ ಪ್ರತಿರೂಪ ಸಿದ್ಧ!

ಚಾಪ್ಲಿನ್ ಬಹುತೇಕ ಎಲ್ಲ ಹಾಸ್ಯ ಕಲಾವಿದರಂತೆ ಕಡುಬಡತನದಲ್ಲಿ ಹುಟ್ಟಿದ. ಅಪ್ಪ ಮಹಾ ಕುಡುಕ. ಮಕ್ಕಳನ್ನು ಹುಟ್ಟಿಸಿ ಈ ಲೋಕಕ್ಕೆ ತಂದುಬಿಡುವುದಷ್ಟೇ ತನ್ನ ಕರ್ತವ್ಯವೆಂದು ನಂಬಿದ್ದವನು. ಅವನು ಸತ್ತ ಮೇಲೆ ಹೆಂಡತಿಗೆ ಮಾನಸಿಕ ಕಾಯಿಲೆ ಹಿಡಿಯಿತು. ತಂದೆತಾಯಿಯರಿಬ್ಬರಿಂದಲೂ ಪತಿತನಾಗಿ ಬೀದಿಗೆ ಬಿದ್ದ ಚಾಪ್ಲಿನ್‍ನಿಗೆ ಜಗವೇ ನಾಟಕರಂಗವಾಯಿತು. ಎಂತೆಂಥದೋ ಹಾಳುಮೂಳು ಆರುಕಾಸಿನ ನಾಟಕ ಮಾಡಿಕೊಂಡು ಹೊಟ್ಟೆ ಹೊರೆದ. ನಾಟಕಗಳಲ್ಲಿ ಪಾರ್ಟು ಕೊಡಿ ಎಂದು ಗೋಗರೆಯುತ್ತ ಊರಿಂದ ಊರಿಗೆ ಅಲೆದ. ತನ್ನ ಸೋದರ ಸಿಡ್ನಿಯ ಜೊತೆ ಸಿಕ್ಕಸಿಕ್ಕ ನಾಟಕ ಕಂಪೆನಿಗಳಲ್ಲಿ ಜುಜುಬಿ ಪಾತ್ರಗಳನ್ನು ಮಾಡುತ್ತ ಪ್ರೇಕ್ಷಕರ ಚಪ್ಪಾಳೆಯನ್ನೇ ಮಹಾಪ್ರಸಾದವೆಂದು ಸ್ವೀಕರಿಸುತ್ತ ಬೆಳೆಯುತ್ತಿದ್ದ ಚಾರ್ಲಿಗೆ ಒಂದು ದಿನ ಶೆರ್ಲಾಕ್ ಹೋಮ್ಸ್ ಮೇಲೆ ನಡೆಯುತ್ತಿದ್ದ ನಾಟಕವೊಂದರಲ್ಲಿ ಸಿಕ್ಕಿದ ಪೇಪರ್ ಹುಡುಗನ ಚಿಕ್ಕ ಪಾರ್ಟು ಒಂದಷ್ಟು ಜನಪ್ರಿಯತೆ ತಂದುಕೊಟ್ಟಿತು. 1908ರಲ್ಲಿ ಆತ ನಾಟಕ ಕಂಪೆನಿಯೊಂದಿಗೆ ಅಮೆರಿಕಾ ಪ್ರವಾಸ ಮಾಡಿದ. ಮಾತಿಲ್ಲದೆ ಕೇವಲ ಆಂಗಿಕಾಭಿನಯದಿಂದಲೇ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಅವನ ಬಗೆ ಪ್ರಸಿದ್ಧವಾಯಿತು. ಎಲ್ಲರೂ ಕೋತಿ ಚೇಷ್ಟೆಯನ್ನೇ ಹಾಸ್ಯವೆಂದು ಗಣಿಸಿದ್ದರೆ ಚಾರ್ಲಿಯ ಅಭಿನಯದಲ್ಲಿ ಹಾಸ್ಯದ ಮುಖವಾಡ ಹೊತ್ತ ನಿಜಜೀವನದ ದುರಂತ ಕತೆಗಳಿರುತ್ತಿದ್ದವು.

1914ರಲ್ಲಿ, ಅಂದರೆ ಇಪ್ಪತ್ತೈದನೇ ವಯಸ್ಸಿನಲ್ಲಿ, ಅವನ ಜೀವನ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿತು. ಕೀಸ್ಟೋನ್ ಪಿಕ್ಚರ್ಸ್ ಎಂಬ ಕಂಪೆನಿಯ ಜೊತೆ ಒಡಂಬಡಿಕೆಯಾಗಿ ಚಿತ್ರನಿರ್ಮಾಣ ಕ್ಷೇತ್ರಕ್ಕೆ ಕಾಲಿರಿಸುವಂತಾಯಿತು. “ಮೇಬಲ್ಸ್ ಸ್ಟ್ರೇಂಜ್ ಪ್ರೆಡಿಕಮೆಂಟ್” ಎಂಬ ಚಿತ್ರದ ಮೂಲಕ ಅವನ ಜಗದ್ವಿಖ್ಯಾತ ಪಾತ್ರ “ಟ್ರ್ಯಾಂಪ್”ನ ಜನನವಾಯಿತು. ಅಲ್ಲಲ್ಲಿ ಹರಿದ, ಮಾಸಿದ ದೊಗಳೆ ಕೋಟು, ಗಾತ್ರ ಮೀರಿದ ಬೂಟು, ಕೈಯಲ್ಲೊಂದು ಬೆತ್ತದ ಊರುಗೋಲು, ಬೋಗುಣಿಯಂಥ ಟೋಪಿ, ಟೂಥ್‍ಬ್ರಷ್ ಮೀಸೆ ಹೀಗೆ ನೋಡಿದರೆ ಅಸಡ್ಡಾಳವೆನ್ನಿಸುವ ವಿಚಿತ್ರ ವೇಷಭೂಷಣ – ಇದು ಟ್ರ್ಯಾಂಪ್‍ನ ಹೊರಚಹರೆ. ಈತ ಜಗತ್ತಿನ ಎಲ್ಲ ಮಧ್ಯಮ ವರ್ಗದ ಪಾಪಚ್ಚಿಗಳ ಪ್ರತಿನಿಧಿ. ಭೋಳೇಶಂಕರ. ಪರರಿಗೆ ಒಳ್ಳೆಯದನ್ನು ಬಯಸುವವ. ಮೋಸ ಹೋದಾಗ ಮೌನವಾಗಿ ರೋಧಿಸುವವ. ಈ ಕ್ಷಣಕ್ಕೆ ಏನನ್ನಿಸುತ್ತದೋ ಅದನ್ನು ಯಾರಪ್ಪಣೆಗೆ ಕಾಯದೆ ಮಾಡಿ ಮುಗಿಸುವವ. ಎಲ್ಲರಿಂದ ಬಡಿಸಿಕೊಂಡೂ ಬದುಕುಳಿದ ಬೀದಿನಾಯಿಯಂಥ ಅನಾಮಧೇಯ ದೈನೇಸಿ ನರಪ್ರಾಣಿ. ಈತ ಸತ್ತರೆ ಕಾರ್ಪೊರೇಷನ್ನಿನ ಗಾಡಿ ಎತ್ತಿಹಾಕಿಕೊಂಡು ಹೋಗುತ್ತದೆ. ಪತ್ರಿಕೆಯಲ್ಲಿ ನಾಲ್ಕು ಸಾಲಿನ ವರದಿಯೂ ಆಗದ ಇವನ ಜೀವನ ಈ ಜಗತ್ತಿಗೆ ಕೊಟ್ಟದ್ದೇನು ಎಂಬುದನ್ನು ಯಾರೂ ನೋಡುವುದಿಲ್ಲ. ಪ್ರಪಂಚದಲ್ಲಿ ಹುಟ್ಟಿ ಸತ್ತಿರುವ ಲಕ್ಷಾಂತರ ಗರಿಕೆಹುಲ್ಲಿನ ಎಸಳುಗಳಂತೆ, ಕಾಡಿನಲ್ಲಿ ಹುಟ್ಟಿ ಹಾರಾಡಿ ಮರೆಯಾದ ಮಿಂಚುಹುಳದಂತೆ, ಹಡಗಿನ ಯಾವುದೋ ಬದಿಯಲ್ಲಿ ಅಂಟಿಕೂತ ಒಂಟಿ ಮೊಳೆಯಂತೆ ಇವನ ಜೀವನ. ಇಂಥ ಅನಾಮಿಕನನ್ನು ಚಾರ್ಲಿ ಚಾಪ್ಲಿನ್ ಮುಖ್ಯಭೂಮಿಕೆಗೆ ತಂದು ಜಗತ್ತಿಗೆ ತೋರಿಸಿದ. ತಮ್ಮ ಪ್ರತಿಬಿಂಬವೇ ಅಲ್ಲಿ ತೆರೆಯಲ್ಲಿ ಚಲಿಸುವುದನ್ನು ಕಂಡು ಜನ ಹುಚ್ಚೆದ್ದು ಚಪ್ಪಾಳೆ ತಟ್ಟಿದರು. ಚಾಪ್ಲಿನ್ ಪ್ರಯೋಗ ಯಶಸ್ವಿಯಾಗಿತ್ತು!

ಹೀಗೆ ಬದುಕಿನ ಎಲ್ಲ ಪಾಠಗಳನ್ನೂ ಬಡತನವೆಂಬ ಮೇಷ್ಟ್ರ ಬಳಿ ಕಲಿತ ಚಾಪ್ಲಿನ್ ಕಲಿತ ಪಾಠಗಳನ್ನು ಬದುಕಿನುದ್ದಕ್ಕೂ ಮರೆಯಲಿಲ್ಲ. ದುಃಖವೆಂಬ ಗುಳಿಗೆಗೆ ಹಾಸ್ಯವೆಂಬ ಸಕ್ಕರೆಯ ಲೇಪ ಹಚ್ಚಿ ಜನರಿಗೆ ಕೊಟ್ಟ. ನಿರ್ಮಿಸಿದ ಪ್ರತಿ ಸಿನೆಮದಲ್ಲೂ ಜೀವನ ಸಂದೇಶವನ್ನಿಟ್ಟ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಕತೆಯೊಳಗೇ ಹೊಟ್ಟೆ ತೊಳೆಸುವಷ್ಟು ದುಃಖವನ್ನೂ ತುರುಕಿದ. ತನ್ನ ಸಿನೆಮಗಳ ಒಂದೊಂದು ದೃಶ್ಯವನ್ನೂ ಹಾದಿಬೀದಿಯಲ್ಲಿ ಓಡಾಡುವ ಜನಕ್ಕೆ ತೋರಿಸಿ ಅವರ ಮುಖದ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದ ಚಾಪ್ಲಿನ್, ಜನ ನಗದೇ ಹೋದರೆ ದೃಶ್ಯಗಳನ್ನು ಬದಲಿಸುತ್ತಿದ್ದ. ತನ್ನ ಆರು ದಶಕಗಳ ಭರ್ಜರಿ ಸಿನೆಮಾ ಯಾತ್ರೆಯ ಯಶಸ್ಸಿನ ಉತ್ತುಂಗದಲ್ಲಿದ್ದರೂ ನಾಲ್ಕು ಹೆಂಡತಿಯರು ಹನ್ನೊಂದು ಮಕ್ಕಳ ಸಂಸಾರವಂದಿಗ ಚಾಪ್ಲಿನ್, “ಯಶಸ್ಸೆಂಬುದು ಪರ್ವತದ ತುತ್ತತುದಿಯಲ್ಲಿ ನಿಂತ ಮರದ ಒಂಟಿತನದಂತೆ” ಎಂದ.

1932ರಲ್ಲಿ ಚಾಪ್ಲಿನ್ ಜೀವನದಲ್ಲಿ ಮರೆಯಲಾರದ ಘಟನೆಯೊಂದು ನಡೆಯಿತು. ಜಪಾನ್ ದೇಶಕ್ಕೆ ಭೇಟಿಕೊಟ್ಟಿದ್ದ ಸಮಯವದು. ಆದರೆ ಆ ಹೊತ್ತಿಗೆ ಜಪಾನಿನೊಳಗೆ ಪ್ರಜಾಪ್ರಭುತ್ವ ಸರಕಾರದ ನಿಷ್ಕ್ರಿಯತೆಯ ಬಗ್ಗೆ ಜನಕ್ಕೆ ರೋಸಿಹೋಗಿತ್ತು. ಪ್ರಜಾಪ್ರಭುತ್ವ ಸರಕಾರವನ್ನು ಕಿತ್ತೊಗೆದು ಮತ್ತೆ ರಾಜನ ಕೈಗೆ ದೇಶದ ಅಧಿಕಾರ ಕೊಡಬೇಕೆಂದು ಹಲವರು ಬಯಸುತ್ತಿದ್ದರು. ಅದಕ್ಕಾಗಿ ಹನ್ನೊಂದು ಜನ ಸೈನಿಕರು ಸೇರಿ ಪ್ರಧಾನಿಯನ್ನು ಕೊಲೆ ಮಾಡುವ ಹಂಚಿಕೆ ಹಾಕಿದರು. ಯೋಜನೆಗೆ ಸರಿಯಾಗಿ ಮೇ 15ನೇ ತಾರೀಖು ಪ್ರಧಾನಿಯ ಕೊಲೆಯೂ ಆಯಿತು. ಕೂಡಲೇ ದೇಶದ ನಿಯಂತ್ರಣವನ್ನು ತಮ್ಮ ಕೈಗೆತ್ತಿಕೊಂಡು, ಅತಿಥಿಯಾಗಿ ಅಲ್ಲಿಗೆ ಭೇಟಿಕೊಟ್ಟಿದ್ದ ಚಾರ್ಲಿ ಚಾಪ್ಲಿನ್‍ನನ್ನೂ ಕೊಂದು ಅಮೆರಿಕದ ಮೇಲೆ ಯುದ್ಧಕ್ಕೆ ಹೋಗಬೇಕೆಂಬುದು ಅವರ ಮುಂದಿನ ಪ್ಲ್ಯಾನ್ ಆಗಿತ್ತು! ಆದರೆ, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಧಾನಿಯ ಕೊಲೆಗಾರರನ್ನು ಬಂಧಿಸಿದ್ದರಿಂದಾಗಿ ಚಾಪ್ಲಿನ್ ಕೂದಲೆಳೆಯ ಅಂತರದಲ್ಲಿ ಮೃತ್ಯುವಿನಿಂದ ತಪ್ಪಿಸಿಕೊಂಡ! ಜಗತ್ತನ್ನೆಲ್ಲ ನಗಿಸುತ್ತಿದ್ದ ಈ ಹಾಸ್ಯಚಕ್ರವರ್ತಿಯ ಹೆಸರು ಹಿಟ್ಲರ್‍ನ ಹಿಟ್ ಲಿಸ್ಟ್‍ನಲ್ಲಿಯೂ ಇತ್ತೆನ್ನುವ ಗುಟ್ಟು ಬಹಳ ವರ್ಷಗಳ ನಂತರ ಬಯಲಾಯಿತು.

ಪ್ರತಿಯೊಬ್ಬ ನಗೆಗಾರನ ಬಿಚ್ಚುನಗೆಯ ಹಿಂದೆ ಮುಚ್ಚಿಟ್ಟ ನೂರಾರು ನೋವಿನ ಕತೆಗಳಿರುತ್ತವೆ ಎನ್ನುತ್ತಾರೆ. ಚಾಪ್ಲಿನ್ ಬದುಕು ಕೂಡ ಇದಕ್ಕೆ ಹೊರತಲ್ಲ. ಬಡತನದ ದಿನಗಳಲ್ಲಿ ಪಟ್ಟ ಪಡಿಪಾಟಲು ಅವನನ್ನು ಬದುಕಿನುದ್ದಕ್ಕೂ ಕಾಡಿತು. ಜೊತೆಗೆ ಬಾಲ್ಯದಲ್ಲಿ ಹೆತ್ತವರ ಅಪ್ಪುಗೆಯಿಂದ ವಂಚಿತನಾದ ಚಾಪ್ಲಿನ್ ಜೀವನದುದ್ದಕ್ಕೂ ಪ್ರೀತಿಯ ಅನ್ವೇಷಣೆಯಲ್ಲಿದ್ದನೆಂದು ಕಾಣುತ್ತದೆ. ನಾಲ್ಕು ಸಲ ಮದುವೆಯಾದ. ಆದರೆ ಮೊದಲ ಮೂರು ಮದುವೆಗಳು ಒಂದಿಲ್ಲೊಂದು ಕಾರಣಕ್ಕೆ ಮುರಿದುಬಿದ್ದವು. ಮೊದಲ ಮದುವೆಯಾದಾಗ ಅವನಿಗೆ 29 ವರ್ಷ; ಪತ್ನಿಗಿನ್ನೂ 16ರ ಹರೆಯ. ಎರಡನೆಯ ಬಾರಿ ಮದುವೆಯಾದಾಗ ಅವನಿಗೆ 35. ಪತ್ನಿ ಲೀಟಾ ಗ್ರೇ-ಗೆ ಮತ್ತೆ ಹದಿನಾರೇ! ಅಲ್ಲದೆ ಇದು ಅವಸರದಲ್ಲಿ ನಡೆದುಹೋದ ಮದುವೆಯೂ ಹೌದು. ಆತನ ಚಿತ್ರವೊಂದರಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದ ಲೀಟಾ ಒಂದು ದಿನ ಇದ್ದಕ್ಕಿದ್ದಂತೆ, ತಾನು ಮಗುವೊಂದನ್ನು ಹೊಟ್ಟೆಯಲ್ಲಿ ಹೊತ್ತಿದ್ದೇನೆಂದು ಪತ್ರಿಕೆಗಳಿಗೆ ಸುದ್ದಿ ಬಿಡುಗಡೆ ಮಾಡಿದಳು. ಅಪ್ರಾಪ್ತೆಯಾಗಿದ್ದ ಆಕೆಯನ್ನು ತಾಯಿಯಾಗಿಸಿದ ತಪ್ಪಿಗೆ ಚಾಪ್ಲಿನ್ ಜೈಲಿನ ಕಂಬಿ ಎಣಿಸಬೇಕಾಗಿತ್ತು. ಅದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ ಅವಳನ್ನು ಕೂಡಕೂಡಲೇ ಮದುವೆಯಾಗಿಬಿಟ್ಟ. ಆದರೆ ಮುಂದೆ ಅವರಿಬ್ಬರ ನಡುವೆ ದೊಡ್ಡ ತ್ಸುನಾಮಿಯೇ ಎದ್ದು ಎರಡು ವರ್ಷಗಳ ಕಹಿದಾಂಪತ್ಯ ಕೊನೆಗೆ ವಿಚ್ಛೇದನದಲ್ಲಿ ಕೊನೆಗೊಂಡಿತು. ಮೂರನೆಯವಳಾದ ಪೌಲೆಟ್ ಆತನ ಜೀವನಕ್ಕೆ ಪ್ರವೇಶಿಸಿದಾಗ ಅವಳಿಗೆ 28, ಆತನಿಗೆ 47 ವರ್ಷ. ಕೊನೆಗೆ ತನ್ನ 54ನೇ ವಯಸ್ಸಿನಲ್ಲಿ ಚಾಪ್ಲಿನ್ 18 ವರ್ಷವಷ್ಟೇ ಆಗಿದ್ದ ಊನಾ ಓನೈಲ್‍ಳನ್ನು ಮದುವೆಯಾದ. ಅವಳ ಜೊತೆಗಿನ ದಾಂಪತ್ಯದಲ್ಲಿ ಅವನಿಗೆ ಎಂಟು ಮಕ್ಕಳು ಹುಟ್ಟಿದರು. ಇವೆಲ್ಲದರ ಹೊರತಾಗಿ ಚಾಪ್ಲಿನ್ ಸುತ್ತ ಮತ್ತೂ ಹಲವು ವಿವಾಹೇತರ ಸಂಬಂಧಗಳ ಸುಳಿಗಾಳಿ ಸುತ್ತುತ್ತಲೇ ಇತ್ತು. ಮತ್ತು ಅವುಗಳಲ್ಲಿ ಹಲವು ನಿಜವೂ ಆಗಿದ್ದವು. ತೆರೆಯ ಮೇಲಿನ ಟ್ರ್ಯಾಂಪ್‍ನಷ್ಟು ಚಾಪ್ಲಿನ್ ಮುಗ್ಧನಾಗಿರಲಿಲ್ಲ ಎನ್ನುವುದು ನಂಬಲು ಕಷ್ಟವಾದರೂ ಸತ್ಯ.

ವೈಯಕ್ತಿಕ ಬದುಕಿನಲ್ಲಿ ಎಷ್ಟೆಲ್ಲ ಏರುಪೇರುಗಳಿದ್ದರೂ ಚಾಪ್ಲಿನ್ ಅವು ವೃತ್ತಿಬದುಕನ್ನು ದಿಕ್ಕೆಡಿಸದಂತೆ ತನ್ನನ್ನು ಕಾಪಾಡಿಕೊಂಡ. “ಎ ಡಾಗ್ಸ್ ಲೈಫ್” ಚಿತ್ರದಿಂದ ಮೊದಲುಗೊಂಡು “ಎ ಕೌಂಟೆಸ್ ಫ್ರಂ ಹಾಂಗ್‍ಕಾಂಗ್” ಚಿತ್ರದವರೆಗೂ ಚಾಪ್ಲಿನ್ ತನ್ನ ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಷ್ಟೇ ಅಲ್ಲ, ಅವುಗಳ ನಿರ್ದೇಶಕ, ನಟ, ಕತೆಗಾರ, ಚಿತ್ರಕತೆಗಾರ, ಸಂಗೀತ ನಿರ್ದೇಶಕ ಎಲ್ಲವೂ ಆಗಿದ್ದ. ಇಂಥದೊಂದು ಬಹುಮುಖ ಪ್ರತಿಭೆಯನ್ನು ಹಾಲಿವುಡ್ ಮಾತ್ರವಲ್ಲ ಜಗತ್ತಿನ ಬೇರಾವ ಚಿತ್ರರಂಗದಲ್ಲೂ ಕಾಣುವುದು ಕಷ್ಟ. “ಮಾಡ್ರನ್ ಟೈಮ್ಸ್” ಚಿತ್ರವನ್ನು ನಿರ್ಮಿಸುತ್ತಿದ್ದಾಗ ಆತ ಪ್ರಪಂಚ ಪ್ರವಾಸ ಮಾಡಿದ್ದರ ಜೊತೆಗೆ ಹಲವು ದೇಶಗಳ ಆರ್ಥಿಕ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಬೇಕಾಗಿ ಬಂತು. ಕೈಗಾರಿಕಾ ಕ್ರಾಂತಿಯ ಫಲವಾಗಿ ಎಲ್ಲೆಲ್ಲೂ ಫ್ಯಾಕ್ಟರಿಗಳು ಕಣ್ಣುಬಿಡುತ್ತಿದ್ದ ಆ ಸಂದರ್ಭದಲ್ಲಿ ಮನುಷ್ಯನ ಭವಿಷ್ಯವೇನು ಎನ್ನುವುದನ್ನು ಯೋಚಿಸಿದ ಜಾಗತಿಕ ಮಟ್ಟದ ಚಿಂತಕ ಅವನು. ಮಾಕ್ರ್ಸ್ ಹೇಳಿದ ಸಂಪತ್ತಿನ ಸಮಾನ ಹಂಚಿಕೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಈ ಜಗತ್ತಲ್ಲಿ ಶ್ರಮದ ಸಮಾನ ಹಂಚಿಕೆಯೂ ಆಗಬೇಕು ಎಂಬ ಸಂದೇಶವನ್ನು ಅವನು ತನ್ನ ಚಿತ್ರದ ಮೂಲಕ ಕೊಟ್ಟ. ಈತನೊಬ್ಬ ಕಮ್ಯುನಿಸ್ಟ್. ಅಮೆರಿಕಾದಲ್ಲಿದ್ದುಕೊಂಡು ರಷ್ಯಕ್ಕೆ ಅನುಕೂಲವಾಗುವ ಹಾಗೆ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪ ಅಮೆರಿಕಾದಲ್ಲಿ ಎದ್ದಾಗ ಅವನನ್ನು ದೇಶಭ್ರಷ್ಟಗೊಳಿಸುವ ಬಗ್ಗೆ ಅಲ್ಲಿನ ಸಂಸತ್ತು ಯೋಚಿಸತೊಡಗಿತು! “ಲೈಮ್‍ಲೈಟ್” ಚಿತ್ರದ ಪ್ರೀಮಿಯರ್‍ಗಾಗಿ ಚಾಪ್ಲಿನ್ ಯುರೋಪಿಗೆ ಹೋದ ಸಂದರ್ಭ ನೋಡಿ ಅಮೆರಿಕಾ ಸರಕಾರ ತನ್ನ ದೇಶಕ್ಕೆ ಆತನ ಮರುಪ್ರವೇಶವನ್ನು ನಿರ್ಬಂಧಿಸಿಬಿಟ್ಟಿತು. ಇದು ಪ್ರಪಂಚಕ್ಕೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಬಿಟ್ಟಿ ಉಪದೇಶ ಮಾಡುತ್ತ “ಲ್ಯಾಂಡ್ ಆಫ್ ಫ್ರೀಡಂ” ಎಂದು ಹೆಸರಾಗಿದ್ದ ಅಮೆರಿಕಾದ 1952ರ ಸ್ಥಿತಿಗತಿ! ಅಮೆರಿಕಾದಿಂದ ಹೊರಹಾಕಿಸಿಕೊಂಡ ಚಾಪ್ಲಿನ್ ಸ್ವಿಜರ್‍ಲ್ಯಾಂಡಿನಲ್ಲಿ ವಾಸವಾದ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಆತ ಅಮೆರಿಕಾದ ನಿರ್ಬಂಧಕ್ಕೊಳಗಾಗಿದ್ದ. 1972ರಲ್ಲಿ ಜೀವಮಾನದ ಸಾಧನೆಯನ್ನು ಪರಿಗಣಿಸಿ ಆಸ್ಕರ್ ಪ್ರಶಸ್ತಿ ಘೋಷಣೆಯಾದಾಗಷ್ಟೇ ಅವನಿಗೆ ಅಮೆರಿಕಾದ ಬಾಗಿಲು ತೆರೆಯಿತು. 1975ರಲ್ಲಿ ಅವನಿಗೆ ಬ್ರಿಟಿಷ್ ಸರಕಾರ ನೈಟ್‍ಹುಡ್ ಪದವಿಯನ್ನು ಪ್ರದಾನಿಸಿತು. 1977ರಲ್ಲಿ ಚಾಪ್ಲಿನ್ ಸ್ವಿಜರ್‍ಲ್ಯಾಂಡಿನಲ್ಲಿ ತನ್ನ ಎಂಬತ್ತೆಂಟನೆ ವಯಸ್ಸಿನಲ್ಲಿ ನಿಧನನಾದ.

ಚಾಪ್ಲಿನ್ ಒಂದು ಜನರೇಷನ್ನನ್ನು ಎಷ್ಟೊಂದು ಪ್ರಭಾವಿಸಿದನೆಂದರೆ ಸುಮಾರು ಐವತ್ತು ವರ್ಷಗಳ ಕಾಲ ಅವನ ಮೂಕಿಚಿತ್ರಗಳು ಬೆಳ್ಳಿತೆರೆಯನ್ನಾಳಿದವು. ಜಗತ್ತಿನಾದ್ಯಂತ ಚಾಪ್ಲಿನ್ ಫ್ಯಾನ್ ಕ್ಲಬ್‍ಗಳು ಹುಟ್ಟಿಕೊಂಡವು. ಚಾಪ್ಲಿನ್ನನ ನಗೆಯ ಅಲೆ ಸಮುದ್ರಗುಂಟ ಹಾದುಬಂದು ಭಾರತದ ನೆಲವನ್ನೂ ಗಾಢವಾಗಿಯೇ ತಟ್ಟಿದೆ. ಗುಜರಾತ್‍ನ ಸಮುದ್ರ ತೀರದಲ್ಲಿ ಕಛ್ ರಣಭೂಮಿಯ ಪಕ್ಕ ಆದಿಪುರವೆಂಬ ಸಣ್ಣ ಊರಿದೆ. ಇಲ್ಲಿ ಕಳೆದ 44 ವರ್ಷಗಳಿಂದ ಊರಿಗೂರೇ ಚಾಪ್ಲಿನ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತ ಆಚರಿಸಿಕೊಂಡು ಬಂದಿದೆ! ಎಪ್ರೀಲ್ 16ರಂದು ಇಲ್ಲಿನ ಹುಡುಗರು, ಯುವಕರು, ಮುದುಕರು ಬೋಗುಣಿ ಕ್ಯಾಪ್ ಹಾಕಿ, ಒಂದಂಗುಲದ ಮೀಸೆ ಇಟ್ಟು, ಚಾಪ್ಲಿನ್ ಕೋಟು ಧರಿಸಿ, ಬೆತ್ತದ ಕೋಲು ಹಿಡಿದುಕೊಂಡು, ಚಾಪ್ಲಿನ್ ನಡಿಗೆಯಲ್ಲಿ ಊರೆಲ್ಲ ಕುಪ್ಪಳಿಸುತ್ತಾರೆ. ಅಂದು ಆತನ ನೆನಪಿನಲ್ಲಿ ಮೂಕಾಭಿನಯದ ಸ್ಪರ್ಧೆಗಳು ನಡೆಯುತ್ತವೆ. ಚಾಪ್ಲಿನ್‍ನ ಸಿನೆಮಾಗಳ ಸಾರ್ವಜನಿಕ ಪ್ರದರ್ಶನವಿರುತ್ತದೆ. ಇಂಥದೊಂದು ಹುಚ್ಚನ್ನು ಊರಿಗೆಲ್ಲ ಹಚ್ಚಿದವನು ಅಲ್ಲಿನ ಆಯುರ್ವೇದ ವೈದ್ಯ ಅಶೋಕ್ ಅಸ್ವಾನಿ ಎಂಬಾತ. ತನ್ನ ಯೌವನದ ದಿನಗಳಲ್ಲೊಮ್ಮೆ ಅಕಾಸ್ಮಾತ್ತಾಗಿ ಚಾಪ್ಲಿನ್‍ನ ಸಿನೆಮಾವೊಂದನ್ನು ನೋಡಿ ರೋಮಾಂಚಿತನಾದ ಆತ ತನ್ನ ಬಳಿ ಬಂದುಹೋಗುವ ರೋಗಿಗಳಿಗೆಲ್ಲ ಚಾಪ್ಲಿನ್ ಸಿನೆಮಾಗಳನ್ನು ಹಂಚುತ್ತ ಊರೇ ಚಾಪ್ಲಿನ್‍ಜ್ವರ ಹಿಡಿಸಿಕೊಳ್ಳುವಂತೆ ಮಾಡಿಬಿಟ್ಟ!
ಚಾಪ್ಲಿನ್‍ನಿಗೆ ಭಾರತದ ಮೇಲೆ ಅಪಾರವಾದ ಪ್ರೀತಿ ಗೌರವಾದರಗಳಿದ್ದವು. ಆತ ಗಾಂಧಿಯನ್ನು ಭೇಟಿಯಾಗಿದ್ದ. ಭಾರತೀಯರನ್ನು ಬಹಳಷ್ಟು ತೀವ್ರವಾಗಿ ಪ್ರಭಾವಿಸಿದ. ಆತನ, ಅಕಾಡೆಮಿ ಪ್ರಶಸ್ತಿ ವಿಜೇತ “ಸರ್ಕಸ್” ಸಿನೆಮದ ಪಡಿಯಚ್ಚೋ ಎಂಬಂತೆ ರಾಜಕಪೂರನ “ಮೇರಾ ನಾಮ್ ಜೋಕರ್” ಬಂತು. ಚಾಪ್ಲಿನ್ ಪ್ರಭಾವ ಸ್ವಲ್ಪಮಟ್ಟಿಗೆ ನಮ್ಮ ಕನ್ನಡದ ಹಾಸ್ಯನಟ ನರಸಿಂಹರಾಜು ಅವರ ಮೇಲೂ ಆಗಿತ್ತೆಂದು ಹೇಳಬೇಕು. ಇನ್ನೋರ್ವ ಹಾಸ್ಯನಟ ದ್ವಾರಕೀಶ್ ಕೂಡ ಚಾಪ್ಲಿನ್‍ನ ನಟನೆಯನ್ನು ಆಗಾಗ ಅನುಕರಿಸಿದ್ದುಂಟು. ಕನ್ನಡದ ನಟ ರಂಗಕರ್ಮಿ ಸಿ.ಆರ್. ಸಿಂಹ ತನ್ನ ಮನೆ “ಗುಹೆ”ಯಲ್ಲಿ ಚಾಪ್ಲಿನ್‍ನ ಆಳೆತ್ತರದ ಪ್ರತಿಮೆಯನ್ನು ಕೆತ್ತಿಸಿ ನಿಲ್ಲಿಸಿದ್ದರು. ಹಿಂದಿಯಲ್ಲಿ ಜಾನಿ ವಾಕರ್, ಜಾನಿ ಲಿವರ್‍ನಂಥ ಹಾಸ್ಯನಟರಿಗೆ ಆತನ ಪ್ರಭಾವಳಿಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. 1950ರಿಂದ 90ರ ದಶಕದವರೆಗೂ ಕಾಲೇಜುಗಳ ಮೂಕಾಭಿನಯದ ಸ್ಪರ್ಧೆಗಳಲ್ಲಿ ಚಾಪ್ಲಿನ್ ಅನಿವಾರ್ಯವೆಂಬಂತೆ ಬಂದುಹೋಗುತ್ತಿದ್ದ. ಆತನ ಸಿನೆಮಾಗಳು ಆ ಕಾಲಘಟ್ಟದಲ್ಲಿ ಭಾರತದಲ್ಲಿ ವ್ಯಾಪಕವಾಗಿ ಪ್ರಸಾರವಾದದ್ದೇ ಅದಕ್ಕೆ ಮುಖ್ಯ ಕಾರಣವಿರಬಹುದು. 1999ರಲ್ಲಿ ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಅವನನ್ನು ಸಿನೆಮಾ ಜಗತ್ತಿನ ಹತ್ತು ಅಗ್ರಮಾನ್ಯ ಪ್ರತಿಭಾವಂತರಲ್ಲಿ ಒಬ್ಬನೆಂದು ಘೋಷಿಸಿತು. ಚಾಪ್ಲಿನ್ ಅದೆಷ್ಟೊಂದು ಪ್ರಸಿದ್ಧಿಯ ಉತ್ತುಂಗಕ್ಕೇರಿದನೆಂದರೆ ಸತ್ತ ಮೇಲೂ ಅವನನ್ನು ಜನ ಬಿಡಲಿಲ್ಲ! ಚಾಪ್ಲಿನ್‍ನ ಶವಪೆಟ್ಟಿಗೆಯನ್ನು ಗೋರಿಯಿಂದ ಹೊರತೆಗೆದು ಕಳ್ಳರು ಬಹಳ ದೊಡ್ಡ ಮೊತ್ತದ ಬೇಡಿಕೆ ಇಟ್ಟು ಜಗತ್ತನ್ನೆಲ್ಲ ಕಂಗಾಲು ಮಾಡಿದ್ದರು. ನಂತರ ಪೊಲೀಸರು ಬಹುಪ್ರಯಾಸ ಪಟ್ಟು ಅವರನ್ನು ಬಂಧಿಸಿ ಶವವನ್ನು ವಾಪಸು ತಂದು ಮತ್ತೆ ಹೂತು ಎರಡುಪಟ್ಟು ದಪ್ಪದ ಕಾಂಕ್ರೀಟ್ ಹಾಕಿ ಮುಚ್ಚಬೇಕಾಯಿತು! ಪೆಟ್ಟಿಗೆ ಮುಚ್ಚಿದರೇನಂತೆ, ಬಡಪೆಟ್ಟಿಗೆ ಮುಚ್ಚಿಹೋದಾನೇ ಈ ಮಹಾನುಭಾವ? ಜಗತ್ತಿನಲ್ಲಿ ನಗು ಇರುವಷ್ಟು ಕಾಲ ಈ ನಗೆಗಾರ ನಮ್ಮನ್ನು ಬಗೆಬಗೆಯಾಗಿ ಕಾಡುತ್ತ ಬದುಕಿರುತ್ತಾನೆ.

3 ಟಿಪ್ಪಣಿಗಳು Post a comment
  1. RAJKUMAR
    ಏಪ್ರಿಲ್ 17 2016

    ಚಾಪ್ಲಿನ್ ವಿಷಾದ ಮತ್ತು ವಾಸ್ತವವನ್ನು ಚೆನ್ನಾಗಿ ಬೆರೆಸಿ ವಿಶಿಷ್ಟ ವ್ಯಂಗದಿಂದ ಜಗತ್ತನ್ನು ತಿವಿದ ಅನನ್ಯ ಕಲಾವಿದ.

    ಉತ್ತರ
  2. ಏಪ್ರಿಲ್ 17 2016

    ಅತ್ಯುತ್ತಮವಾಗಿ ರೂಪಿಸಿರುವ ಬ್ಲಾಗ್ ಪೋಷ್ಟ್. ಇದರ ಜೊತೆ ಅವರ ಫಿಲ್ಮೊಗ್ರಫಿಯನ್ನೂ ಕೂಡ ಸೇರಿಸಿದ್ದರೆ, ಚೆನ್ನಾಗಿರುತಿತ್ತು ಅನ್ನಿಸುತ್ತದೆ.

    ಉತ್ತರ
  3. ಏಪ್ರಿಲ್ 19 2016

    Chaplin ಅವರ ಹಾಸ್ಯದ ಅರಿವಿತ್ತೆ ಹೊರತು Behind the Scenes story ಬಗ್ಗೆ ಅರಿವಿರಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಓದಿದ ಈ ದಿನ ಪಾವನ 🙂

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments