ಬ್ಯಾಟಲ್ ಆಫ್ ಅಸಲ್ ಉತ್ತರ್
– ರಂಜನ್ ಕೇಶವ
ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್, ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ. ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿ ಮುಖಾಂತರ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದರೂ ಸೇತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೂಹವನ್ನು ಪುನರ್ ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬಂದು ಸೇರಿದರು.
ಪಾಕಿಸ್ತಾನಿಯರ ಒಂದು ಮಹತ್ವ ಯೋಜನೆಯ ಪ್ರಕಾರ ಇದೇ ಹಾದಿಯ ಸೇತುವೆಗಳನ್ನು ಆಕ್ರಮಿಸಿ ಮುನ್ನಡೆದು ಅಮೃತಸರ , ಜಲಂಧರ್ ಮತ್ತು ದೆಹಲಿಯನ್ನೇ ಆಕ್ರಮಿಸುವುದಾಗಿತ್ತು . ಆ ಕಾಲದ ಅತ್ಯಾಧುನಿಕ 2 ಕಿ ಮೀ ಫೈರಿಂಗ್ ಸಾಮರ್ಥ್ಯ ಇದ್ದ ಅಮೇರಿಕದ ಕಾಣಿಕೆಯಾದ ಫ್ಯಾಟನ್(M-47, M-48) ಟ್ಯಾಂಕ್ ಗಳು ಅವರ ಬಳಿ ಇತ್ತು. ನಮ್ಮ ಯೋಧರ ಬಳಿ ಕೇವಲ 800 ಮೀ ದೂರ ಫೈರ್ ಮಾಡುವ ಶರ್ಮನ್ ಟ್ಯಾಂಕ್ ಗಳಿದ್ದವಷ್ಟೇ . ಇದಕ್ಕಿಂತ ಸಮಸ್ಯೆಯೆಂದರೆ ಭಾರತೀಯ ಸೇನೆಗೆ ಪಾಕಿ ಟ್ಯಾಂಕ್ ಗಳ ಆರ್ಮರ್ ಡಿವಿಝನ್ ನ ಸ್ಥಳದ ಮಾಹಿತಿ ಇರಲಿಲ್ಲ .
ಅದರ ಮಾರನೇ ದಿನವೇ (ಸೆಪ್ಟೆಂಬರ್ 7) ಪಾಕಿಗಳು ತಮ್ಮ ಧಾಳಿಯನ್ನು ಮಾಡುವವರಿದ್ದರು. ಆದರೆ ರೋಹಿ ನಾಲಾ ಸೇತುವೆಯನ್ನು ದ್ವಂಸ ಗೊಳಿಸಿದ್ದರಿಂದ ಅದರ ಮಾರನೇ ದಿನಕ್ಕೆ(ಸೆಪ್ಟೆಂಬರ್ 8) ಮುಂದೂಡಲಾಗಿತ್ತು . ಆ ಒಂದು ದಿನದ ಅಂತರದಲ್ಲಿ ಭಾರತೀಯ ಸೇನೆ ರಕ್ಷಣಾತ್ಮಕವಾಗಿ ನೆಲಬಾಂಬುಗಳ ಸ್ಥಾಪಿಸುವಿಕೆ ವಾಲ್ತೂಹಾ ಎಂಬಲ್ಲಿ ಅವರು ಬಾರದಂತೆ ಜಲಪ್ರವಾಹ ತಂದು ಇನ್ನಿತರ ಯೋಜನೆ ಮಾಡಿದರು . ನಂತರ . . .
ಸೆಪ್ಟೆಂಬರ್ 8 1965, ಖೇಮ್ ಖರನ್ ಸೆಕ್ಟರ್ ಬೆಳಗ್ಗೆ 9 ಗಂಟೆ . (4th Grenadier)
ಕಬ್ಬಿನ ಹುಲುಸಾದ ಬೆಳೆ ತುಂಬಿದ್ದ ಪ್ರದೇಶ. ಅಬ್ದುಲ್ ಹಮೀದ್ ತನ್ನ 106 mm Recoilless Rifle (Anti Tank Gun) ಅನ್ನು ಅಳವಡಿಸಿದ ಜೀಪಿನ ಹಿಂದಿನ ಸೀಟಿನಲ್ಲಿ ಕುಳಿತಿರುತ್ತಾನೆ . ಜೀಪ್ ಚೀಮಾ ಹಳ್ಳಿಯ ಮಣ್ಣಿನ ಹಾದಿಯಲ್ಲಿ ರಭಸದಿಂದ ಸಾಗುವಾಗ ದೂರದಲ್ಲಿ ಪಾಕಿ ಟ್ಯಾಂಕ್ ಒಂದು ನೇರವಾಗಿ ಬರುವುದನ್ನು ಕಾಣುತ್ತಾನೆ. ತಕ್ಷಣ ಕಬ್ಬಿನ ಮರೆಯಲ್ಲಿ ಅಡಗಿ ತನ್ನ ಗನ್ನನ್ನು ಆ ದಿಕ್ಕಿಗೆ ಗುರಿಯಿಟ್ಟು ಕಾಯುತ್ತಾನೆ . ಟ್ಯಾಂಕ್ 30 ಯಾರ್ಡ್ ನಷ್ಟು ಸಮೀಪ ಬಂದಾಗ ತನ್ನ ಸಹೋದ್ಯೋಗಿಯ ಬಳಿ ಷೆಲ್ಲನ್ನು ಲೋಡ್ ಮಾಡಿಸಿ ಗುರಿಯಿಟ್ಟು ಹಾರಿಸಿದ. ಷೆಲ್ ಧಾಳಿಯಾಗುತ್ತಿದ್ದಂತೇ ಟ್ಯಾಂಕ್ ಢಮ್ಮನೆ ಸ್ಫೋಟಗೊಂಡಿತು. ಹಮೀದ್ ನ ತಂಡ “ಶಹಬ್ಬಾಷ್” ಎಂದು ಹರ್ಷೋದ್ಗಾರ ಮಾಡಿದರು. ನಂತರ ಪಾಕಿಗಳ ಎರಡು ಪದಾತಿದಳದ ತಂಡ ಅದನ್ನು ಹಿಂಬಾಲಿಸಿದರು. Anti Tank ಗನ್ನನ್ನು ಹಿಡಿದ ತಂಡ ಇನ್ಫೆಂಟ್ರಿಯನ್ನು ಎದುರಿಸುವುದಾಗುವುದಿಲ್ಲವೆಂದು ಜೀಪನ್ನು ರಿವರ್ಸ್ ತೆಗೆದು ಸಾಗಿದರು.
ಸುಮಾರು 11:30 ರ ಹೊತ್ತಿಗೆ ಶತ್ರು ಕಡೆಯಿಂದ ಷೆಲ್ ಧಾಳಿ ಶುರುವಾಯಿತು. ಅದರ ಜೊತೆಗೆಯೇ ಮತ್ತೆ ಟ್ಯಾಂಕ್ ಗಳ ಆಗಮನದ ರವರವ ಸದ್ದು ಕೇಳಿಬಂದಿತು. ಹಮೀದ್ ತನ್ನ ಬೈನಾಕ್ಯೂಲರ್ ನಲ್ಲಿ ಮೂರು ಫ್ಯಾಟನ್ ಟ್ಯಾಂಕ್ ಗಳು ಬರುವುದನ್ನು ಕಂಡ. ಮತ್ತೊಮ್ಮೆ ತನ್ನ ರೈಫಲ್ ನಿಂದ ಒಂದನ್ನು ಹೊಡೆದು ಸಿಡಿಸುತ್ತಾನೆ. ಅನಿರೀಕ್ಷಿತವಾಗಿ ಆ ಆಘಾತಕ್ಕೆ ಮತ್ತೆರಡು ಟ್ಯಾಂಕ್ ಗಳನ್ನು ಪಾಕಿಗಳು ಹೆದರಿ ಅಲ್ಲೇ ಬಿಟ್ಟು ಪಲಾಯನಗೈದರು . ಆ ದಿನ ಕಳೆಯುವಷ್ಟರಲ್ಲಿ ಹಮೀದ್ ಆ ಎರಡು ಟ್ಯಾಂಕನ್ನು ಹೊಡೆದು ಉಳಿದ ನಾಲ್ಕು ಟ್ಯಾಂಕ್ ಗಳನ್ನು ಪಾಕಿಗಳು ತ್ಯಜಿಸಿ ಓಡುವಂತೆ ಮಾಡಿದ್ದ . ಆ ದಿನದ ಕೊನೆಯಲ್ಲಿ ಇಂಜಿನಿಯರುಗಳ ಜವಾಬ್ದಾರಿ ಹೆಚ್ಚಿತು, ಏಕೆಂದರೆ ಅದೇ ಪ್ರದೇಶದಲ್ಲಿ ಪಾಕಿಗಳು ಧಾಳಿಮಾಡುವುದೆಂದೇ ಸ್ಪಷ್ಟವಾಗಿ ಕಂಡುಬಂತು. ನೆಲ ಬಾಂಬುಗಳನ್ನು ನೆಡುವುದರಲ್ಲಿ ಗಮನವಿತ್ತರು . ಬ್ರಿಗೇಡ್ ಹಂತದಲ್ಲಿ ಪಾಕಿಗಳು ಆರ್ಮರ್ ಧಾಳಿ ಮಾಡುವವರಿದ್ದರು ಆದರೆ ಪಾಕಿಗಳಿಗೆ ಭಾರತೀಯ ಸೇನೆಯ RCL ಗನ್ ಗಳ ರುಚಿ ಗೊತ್ತಿರಲಿಲ್ಲ.
ಮಾರನೇ ದಿನವೂ ಹಮೀದ್ ನ ತಂಡ ತಮ್ಮ RCL ಗನ್ನಿನಿಂದ ಮತ್ತೆರಡು ಟ್ಯಾಂಕುಗಳನ್ನು ಸಿಡಿಸಿದ. ಇನ್ನೆರಡು ಟ್ಯಾಂಕ್ ಗಳು ಲ್ಯಾಂಡ್ ಮೈನ್ ಗಳಿಗೆ ಬಲಿಯಾಯಿತು. ಮತ್ತೊಂದು ಬದಿಯಿಂದ ಮುತ್ತುವರೆದು ಯತ್ನಿಸಬಂದ ಪಾಕ್ ಆರ್ಮರ್ ಗೆ ವಾಲ್ತೋಹಾದ ಪ್ರವಾಹ ಅಡ್ಡಿಯಾಯಿತು . ನಂತರ ಭಾರತೀಯ ಬೆಟ್ಯಾಲಿಯನ್ ಗೆ ಪಾಕಿಗಳ ಸೈಬರ್ ಜೆಟ್ ಗಳ ಧಾಳಿಯಾದರೂ ಅಂಥಹ ಏನೂ ಸಮಸ್ಯೆ ಆಗಲಿಲ್ಲ. ಹಮೀದನ ಸಾಧನೆ ಪರಮ ವೀರ ಚಕ್ರಕ್ಕೆ ಶಿಫಾರಸ್ಸಾಯಿತು . ನಾಲ್ಕು ಟ್ಯಾಂಕನ್ನು ಹೊಡೆದ ಸಾಧನೆಗೆ ಹಮೀದ್ ಆ ದಿನದ ರಾತ್ರಿಯಲ್ಲಿ ನೆಮ್ಮದಿಯ ನಿದ್ದೆ ಮಾಡಿದ.
ಮಾರನೇ ದಿನ, ಅಂದರೆ ಸೆಪ್ಟೆಂಬರ್ 10. ಹಮೀದ್ ಪುನಃ ರಣಾಂಗಣಕ್ಕೆ ಸಿದ್ಧನಾಗಿದ್ದ. ಆ ದಿನ ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್ ಗೆ ಶತ್ರು ಪಡೆಯಿಂದ ತೀವ್ರತರದ ಷೆಲ್ ಧಾಳಿ ಆರಂಭವಾಯಿತು. ಅದರ ಹಿಂದೆಯೇ 3 ಫ್ಯಾಟನ್ ಟ್ಯಾಂಕ್ ಗಳ ಮುನ್ನಡೆ. ಹಮೀದ್ ಧೃತಿಗೆಡದೆ ಸಸ್ಯಗಳ ಮರೆಯಲ್ಲಿ ಗನ್ನಿನ ಅಂತರಕ್ಕೆ ಬರುವಲ್ಲಿಗೆ ಕಾದುಕುಳಿತಿದ್ದ. ಮೊದಲ ಟ್ಯಾಂಕ್ ತನ್ನ ಗುರಿಗೆ ಸಿಕ್ಕಿದಾಕ್ಷಣ ಅದರ ಬಲಿ ತೆಗೆದುಕೊಂಡ. ತಕ್ಷಣ ಡ್ರೈವರ್ ಗೆ ಜೀಪನ್ನು ಬೇರೆಡೆ ಕೊಂಡೊಯ್ಯಲು ತಿಳಿಸಿದ. ಅಲ್ಲಿಂದ ತೆರಳುತ್ತಿದ್ದಂತೆ ಒಂದು ಷೆಲ್ ಕೆಲವೇ ಕ್ಷಣಗಳಲ್ಲಿ ಸಿಡಿಯಿತು. ಸ್ವಲ್ಪದರಲ್ಲಿಯೇ ಪಾರಾದರು. ಹಮೀದ್ ಧೈರ್ಯದಿಂದ ಮತ್ತೊಂದೆಡೆ ಸ್ಥಳಾಂತರಿಸಿ ಮತ್ತೊಂದು ಟ್ಯಾಂಕಿಗೆ ರೇಂಜ್ ಮತ್ತು ದಿಕ್ಕನ್ನು ಗುರಿಯಿಟ್ಟು ಆ ಟ್ಯಾಂಕನ್ನೂ ಬ್ಲ್ಯಾಸ್ಟ್ ಮಾಡಿದ .
ಆಗ ಶತ್ರುಗಳ ಷೆಲ್ ಧಾಳಿ ಇವನ ಜೀಪನ್ನೇ ಗುರಿಯಾಗಿಟ್ಟುಕೊಂಡು ಮೆಷಿನ್ ಗನ್ ಗಳ ಧಾಳಿಯನ್ನೂ ಆರಂಭಿಸಿದರು. ಆದರೂ ಹಮೀದ್ ತನ್ನ ಜೀಪನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸ್ಥಳ ಬದಲಾಯಿಸುತ್ತಾ ಅವರ ಗುರಿ ತಪ್ಪಿಸುತ್ತಿದ್ದ. ಅದರ ನಡುವೆ ಮತ್ತೊಂದು ಟ್ಯಾಂಕ್ ಇವನೆಡೆಯೇ ದೌಡಾಯಿಸುತ್ತಿತ್ತು ! ಈಗ ಹಮೀದನಿಗೆ ತಪ್ಪಿಸಿಕೊಳ್ಳಲಾಗಲಿಲ್ಲ, ಏಕೆಂದರೆ ಇಬ್ಬರೂ ಎದುರುಬದುರಾದರು. ಆ ಟ್ಯಾಂಕ್ ಒಂದು ಷೆಲ್ಲನ್ನು ಸಿಡಿಸಿತು, ಅದೇ ಕ್ಷಣದಲ್ಲಿ ಹಮೀದನ ರೈಫಲ್ಲಿನಿಂದಲೂ ಸಹಿತ. ಇಬ್ಬರದ್ದೂ ತಮ್ಮ ಗುರಿ ತಲುಪಿತು . ಹಮೀದ್ ಆ ಮೂರನೇ ಟ್ಯಾಂಕಿನ ಬಲಿ ತೆಗೆದುಕೊಂಡಿದ್ದ. ಜೊತೆಗೆ ಅವನೂ ತನ್ನ ಬಲಿದಾನಗೈದ.
ಆದರೆ ಆ ದಿನದ ಮುಗಿಯುವಷ್ಟರಲ್ಲಿ ಪಾಕ್ ಸೇನೆ ಯ ಸ್ಥಿತಿ ಚಿಂತಾಜನಕವಾಯಿತು. ಪಶ್ಚಿಮ ಪಾರ್ಶ್ವದಿಂದ ಮುತ್ತುವರೆಯಲು ಬಂದ ಫ್ಯಾಟನ್ ಮತ್ತು ಚೆಫ್ಫಿ ಮೊಟೊರೈಸ್ಡ್ ಡಿವಿಜನ್ ಅನ್ನು ಭಾರತೀಯ ಟ್ಯಾಂಕ್ ಗಳ ಕ್ಯಾವಲ್ರಿ ಡಿವಿಜನ್ (Deccan Horse) ಕಬ್ಬಿನ ಮರೆಯಲ್ಲಿನಿಂದ ಹೊಡೆದು ನೆಲಸಮಗೊಳಿಸಿದರು. ಹಮೀದನ ದಳವನ್ನು ಮುಂದುವರೆದು ಮೊಹಮ್ಮದಪುರ ತಲುಪಿದ ಪಾಕಿಗಳ ಸೇನೆಯನ್ನು ಭಾರತೀಯ ಸೆಂಚೂರಿಯನ್ ಆರ್ಮರ್ ವಿಭಾಗ ಸಂಪೂರ್ಣ ನಾಶಗೊಳಿಸಿತು. ಅಷ್ಟರಲ್ಲಿ ಪಾಕಿಗಳ ಮೊದಲ ಆರ್ಮರ್ ವಿಭಾಗ ಸಂಪೂರ್ಣವಾಗಿ ಭಾರತೀಯ ಸೇನೆಯಿಂದ ನಾಶವಾಯಿತು. ಇದರೊಂದಿಗೆ ಜೀವಂತವಾಗಿ ಉಳಿದ ಕೆಲವು ಪಾಕಿ ಯೋಧರು ಮತ್ತು ಅಧಿಕಾರಿಗಳನ್ನು ಸೆರೆ ಹಿಡಿಯಲಾಯಿತು.
ಅಸಲ್ ಉತ್ತರ್ ಅಂದರೆ ಮೂಗು ಮುರಿಯುವಂತೆ ಉತ್ತರ ಕೊಡುವುದು ಅಂತ ಅರ್ಥ. ಇದು ಸೇನೆಗೆ ಸಿಕ್ಕ ಮಹಾಜಯ. ಭಾರತೀಯ ಸೇನೆ ಪಾಕಿಗಳ 97 ಟ್ಯಾಂಕ್ ಗಳನ್ನು ನಾಶಮಾಡಿ 32ನ್ನು ವಶಪಡಿಸಿಕೊಂಡಿದ್ದರು. ಇದರ ವಿರುದ್ಧವೆಂಬಂತೆ ಕೇವಲ 5 ಟ್ಯಾಂಕನ್ನು ಭಾರತೀಯ ಸೇನೆ ಕಳೆದುಕೊಂಡಿತು. ಇದು ಎರಡನೇ ಮಹಾಯುದ್ಧದ(Battle of Kursk) ನಂತರ ನಡೆದ ಅತಿ ದೊಡ್ಡ ಟ್ಯಾಂಕ್ ಸಮರ. ಆಗಿನ ಕಾಲಕ್ಕೆ ಆಧುನಿಕ ಶಸ್ತ್ರಾಸ್ತ್ರ ಹೊತ್ತ ಪಾಕಿಗಳ ಶತ್ರು ಪಡೆಗಳನ್ನು ಚಾಣಾಕ್ಷತೆ ಮತ್ತು ಪರಾಕ್ರಮದಿಂದ ಮಣಿಸಿದ ಅತ್ಯುನ್ನತ ಉದಾಹರಣೆಯೇ ಈ ಅಸಲ್ ಉತ್ತರ್.
ಅಸಲ್ ಉತ್ತರ್ ಪ್ರದೇಶದಲ್ಲಿ ಪಾಕಿಗಳ ಟ್ಯಾಂಕ್ ಗಳು ಶವದಂತೆ ಬಿದ್ದಿದ್ದರಿಂದ ಆಲ್ಲಿನ ಆ ಪ್ರದೇಶವನ್ನು ‘ಫ್ಯಾಟನ್ ನಗರ್ ’ ಎಂದು ಮರುನಾಮಕರಣ ಮಾಡಲಾಗಿದೆ. ಕೇವಲ ಒಂದು Anti Tank ರೈಫಲ್ ಹಿಡಿದು ಒಂದು ಆರ್ಮರ್ ಡಿವಿಜನ್ ಗೆ ಸಮವೆಂಬಂತೆ ಏಳು ಟ್ಯಾಂಕ್ ಗಳನ್ನು ಹೊಡೆದ ಹಮೀದನಿಗೆ ಮರಣೋತ್ತರ ಪರಮ ವೀರ ಚಕ್ರ ಸಿಕ್ಕಿತು.
ಜೈ ಹಿಂದ್