ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2016

ಸೋಸುಕ (ಫಿಲ್ಟರ್)

‍ನಿಲುಮೆ ಮೂಲಕ

– ಎಸ್ ಎನ್ ಸಿಂಹ, ಮೇಲುಕೋಟೆ

man-on-seesaw-with-heart-and-brainಕೋಪದ ಭರದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿರುತ್ತವೆ ಎಂದು ನೀವು ಈಗಲೂ ಭಾವಿಸುತ್ತೀರಾ? ಎಂದ.
ದೂರಾನ್ವಯದೋಷದಿಂದ ಕೂಡಿದೆಯೆಂಬಂತೆ ಭಾಸವಾಗುವ ಇಂತಹ ವಾಕ್ಯಗಳು ಸಾಮಾನ್ಯ ಜನರಿಗೆ ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ.
ಅವಳಿಗೂ ಹಾಗೇ ಆಯಿತು. ರೈಲು ನಿಲ್ದಾಣದ ಸಿಮೆಂಟು ಬೆಂಚಿನ ಮೇಲೆ ಮಗುವಿನೊಂದಿಗೆ ಕುಳಿತಿದ್ದ ಅವಳು ಗಲಿಬಿಲಿಗೊಂಡು, ಏನು? ಎಂದಳು.
ಸಿಟ್ಟಿನಲ್ಲಿ ತಗೋಳೋ ತೀರ್ಮಾನಗಳು ಸರಿಯಾಗಿರುತ್ವೆ ಅಂತೀರಾ? ಅಂದ.
ಅದಕ್ಕೇನೂ ಉತ್ತರಿಸದೆ, ‘ಊಟದ ಪಾರ್ಸೆಲ್ ಜೊತೆ ಚಾಕಲೇಟೂ ಬೇಕಂತೆ ಅಂತ ಡ್ಯಾಡಿಗೆ ಹೇಳಿ ತೆಗೆಸ್ಕೊಂ ಬಾ’ ಎಂದು ತನ್ನ ಮಗುವಿಗೆ ಹೇಳಿ ಕಳಿಸಿದಳು. ಖುಷಿಯಿಂದ ಓಡಿತು ಮಗು.
ಇವನ ಕಣ್ಣುಗಳಲ್ಲಿ ಮಾತ್ರ ಅದೇ ಪ್ರಶ್ನೆ ಸ್ಥಾಯಿಯಾಗಿ ನಿಂತಿದೆ.
ಬಲವಂತವಾಗಿ ನಗುತ್ತಾ, ನೀವು ಈಗಲೂ ಹಾಗೇ ಒಗಟಾಗಿಯೇ ಮಾತಾಡುತ್ತೀರಿ ಅಂದಳು.
ಅವನ ಕಣ್ಣುಗಳಲ್ಲಿದ್ದ ಪ್ರಶ್ನೆ ಸತ್ತುಹೋಗಿ, ತರ್ಪಣ ಜಲ ಕವರಿಕೊಂಡಿತು!
‘ಅತಿಭಾವುಕತೆಯು ಒಳ್ಳೆಯದಲ್ಲ’ ಎಂದು ಅವನ ಗೆಳತಿಯೊಬ್ಬಳು ತುಂಬ ಸಾರಿ ಎಚ್ಚರಿಸುತ್ತಿದ್ದಳು.
ಎಷ್ಟೇ ಪ್ರಶಸ್ತವಾದ ಪಾಠಗಳಾದರೂ, ಎಲ್ಲವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂಬ ನಿಯಮವೇನೂ ಲೋಕದಲ್ಲಿಲ್ಲವಲ್ಲ!
ಕಂಪಿಸುವ ದನಿಯಲ್ಲಿ, ‘ನೀವು ನನ್ನನ್ನು ಇಷ್ಟಪಡಲಿಲ್ಲ ಅನ್ನೋದಕ್ಕಿಂತ ನನ್ನನ್ನು ನಂಬಲಿಲ್ಲ ಅನ್ನೋದೇ ನನ್ನನ್ನು ತುಂಬಾ ಬಾಧಿಸ್ತಿದೆ’ ಅಂದ.
ಕಂಪನದ ಪರಿಣಾಮವೋ ಏನೋ, ತರ್ಪಣದ ಹನಿಗಳು ಕೆಳಗೆ ಉದುರಿಯೇ ಬಿಟ್ಟವು!
‘ಅಳುವ ಗಂಡಸನ್ನು ನಂಬಬಾರದು’ ಎನ್ನುವುದು ಕೂಡ ಒಂದು ಪ್ರಶಸ್ತವಾದ ಪಾಠವೇ!
ಆದರೆ ಹೆಂಗಸರಿಗೆ, ಅದರಲ್ಲೂ ಮದುವೆಯಾದ ಹೆಂಗಸರಿಗೆ ಈ ಪಾಠ ರುಚಿಸುವುದಿಲ್ಲ.
ಸಾಧಾರಣವಾಗಿ ಹೆಂಗಸರು ಇಂತಹ ಮಾತುಗಳಿಗೆ ಬಹಿರಂಗವಾಗಿ ಪ್ರತಿಕ್ರಿಯಿಸುವುದಿಲ್ಲ.
ಆದರೆ, ಅಷ್ಟು ಚೆಂದದ ಗಂಡಸು ತನ್ನನ್ನು ಇನ್ನೂ ಆರಾಧಿಸುತ್ತಿದ್ದಾನೆ ಎಂಬ ಅಂಶ ಅವಳಂಥವಳ ಅಹಂ ಅನ್ನು ಕೂಡ ಸಾವಿರಾರು ಪಟ್ಟು ಹೆಚ್ಚಿಸಿಬಿಟ್ಟಿತು!
‘ನೋಡು, ಇವಳೇ ನಾನು ಮೊಟ್ಟಮೊದಲು ಪ್ರೀತಿಸಿದ ಹುಡುಗಿ’ ಎಂದು ಪಕ್ಕದಲ್ಲಿದ್ದ ಹೆಂಡತಿಗೆ ಅವಳನ್ನು ಪರಿಚಯಿಸಿದ! ಅವನ ಹಳವಂಡಗಳನ್ನು ತನ್ನ ಚೂಪು ಕಣ್ಣುಗಳಿಂದ ನೋಡಿಯೂ ನೋಡದಂತೆ ಕುಳಿತಿದ್ದ ಅವನ ಧರ್ಮಪತ್ನಿ, ಆ ಹೆಂಗಸಿನ ಮುಖವನ್ನು ನೋಡುತ್ತಿದ್ದಂತೆ ಇನ್ನಷ್ಟು ಚಕಿತಳಾದಳು. ತನ್ನ ಕಾಲುಪಾಲೂ ಸುಂದರಿಯಲ್ಲದ, ಅಂತಹ ಹೆಂಗಸನ್ನು ಪ್ರೀತಿಸಿದ ತನ್ನ ಗಂಡನ ಅಭಿರುಚಿಯ ಬಗ್ಗೆ ಅವಳಿಗೆ ಮೊದಲಬಾರಿಗೆ ತೀರ ನಿಕೃಷ್ಟ ಭಾವನೆ ಉಂಟಾಯಿತು.
ನಿದ್ದೆಯಲ್ಲಿ ನಾನು ನಿಮ್ಮ ಹೆಸರನ್ನು ತುಂಬಸಾರಿ ಕನವರಿಸುತ್ತಿರುತ್ತೇನೆ ಎಂದು ಇವಳು ಆಗಾಗ ಹೇಳುತ್ತಿರುತ್ತಾಳೆ ಎಂದ.
ಈ ಮಾತಿನಿಂದ ಅವಳ ಹೃದಯದಲ್ಲಿ ಉಂಟಾದ ಕಲ್ಲೋಲವನ್ನು ವ್ಯಕ್ತಪಡಿಸುವ ಶಕ್ತಿ, ಶಬ್ದಗಳಿಗೆ ಖಂಡಿತವಾಗಿಯೂ ಇಲ್ಲ.
ರೈಲು ಕೂಗಿತು. ನಿಂತ ನಿಲ್ದಾಣ, ಏರಿದ ಬಂಡಿ ಒಂದೇ ಆದರೂ, ಎಲ್ಲರ ಗಮ್ಯವೂ ಒಂದೇ ಆಗಿರಬೇಕಿಲ್ಲ!
ಆ ರಾತ್ರಿ ಅವನು, ತುಂಬ ವರ್ಷಗಳಿಂದ ಕಳೆದುಕೊಂಡಿದ್ದ, ಒಂದು ನೆಮ್ಮದಿಯ ನಿದ್ದೆಯನ್ನು ಮತ್ತೆ ಪಡೆದ. ಅಂದು ನಿದ್ದೆಯಲ್ಲಿ ಅವನೇನಾದರೂ ಕನವರಿಸಿಕೊಂಡನೋ ಇಲ್ಲವೋ ಎಂದು ಗಮನಿಸಲು ಇವಳೂ ಇಲ್ಲ ಎಂಬುದು ಅವನಿಗಿನ್ನೂ ಗೊತ್ತಾಗಿಲ್ಲ.

ನೀತಿ: ಹೃದಯ ಮತ್ತು ಬುದ್ಧಿಗಳ ನಡುವೆ ಫಿಲ್ಟರ್ ಇಲ್ಲದಿದ್ದರೂ ಪರವಾಗಿಲ್ಲ ಆದರೆ ಹೃದಯ ಮತ್ತು ಬಾಯಿಗಳ ನಡುವೆ ಒಂದು ಸೋಸುಕ ಇರಲೇಬೇಕು!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments