ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 20, 2016

3

ಮೆಲ್ಲುಸಿರೆ ಸವಿಗಾನ….!

‍ನಿಲುಮೆ ಮೂಲಕ

– ನಾಗೇಶ ಮೈಸೂರು

ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ ಆಶಯ..

veera kesari

ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೇ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೇ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ – ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ.

 
ತಾರಸಿಯ ಮೇಲಿನ ಹಾಸೊಂದರ ಮೇಲೆ, ಬೆನ್ನು ಹಾಕಿ ತಲೆಗೆ ಮಡಿಚಿದ ತೋಳಿನಾಸರೆ ಕೊಟ್ಟು ಆಕಾಶವನ್ನೆ ದಿಟ್ಟಿಸುತ್ತಾ ಮಲಗಿರುತ್ತಿದ್ದರೆ, ಪಕ್ಕದಲ್ಲಿರುತ್ತಿದ್ದ ಟ್ರಾನ್ಸಿಸ್ಟರಿನಿಂದ ಎಲ್ಲಿಂದಲೊ ಸುಳಿದು ಗಂಧರ್ವ, ಕಿನ್ನರಗಾನದಂತೆ ಹರಿದುಬರುತ್ತಿದ್ದ ಗಾನ ಮಾಧುರ್ಯದ ಶೃಂಗಾರ ಲಹರಿಯ ಆಕಾಶವಾಣಿ…ಕೇಳುಗರ ಕೋರಿಕೆಯೊ ಅಥವ ಆಯ್ಕೆ ಮಾಡಿ ಹಾಕುವ ನಿರೂಪಕನ ಕೈಚಳಕವೊ – ತುಸು ಮೆಲುವಾಗಿ ಕಣ್ಮುಚ್ಚಿದರೆ ಸಾಕು, ಆ ಆಸ್ವಾದನೆಯ ತನ್ಮಯತೆಗೆ ತೂಕಡಿಕೆಯನ್ನೂ ಮೀರಿದ ಮಂಪರಿನ ಹೊದಿಕೆಯೊದಿಸಿ, ಯಾವುದೊ ದೇವಲೋಕಕ್ಕೆ ಕೊಂಡೊಯ್ಯುತ್ತಿದ್ದ ಮಂದಾರ ಕುಸುಮದಾ ಗಾನಗಳು….
 
ತಟ್ಟನೆ ದೇವಲೋಕದಿಂದ ಬಂದಂತೆ ತೆರೆದುಕೊಳ್ಳುತ್ತದೆ ಘಂಟಸಾಲನ ಕಂಠದಲ್ಲಿ, ಸುರಲೋಕದ ಗಾಯನವೊ ಎಂಬಂತೆ!
 
ಮೆಲ್ಲುಸಿರೆ ಸವಿಗಾನ
ಎದೆ ಜಲ್ಲನೆ ಹೂವಿನ ಬಾಣ…
 
ಬಹುಶಃ ಪ್ರೇಮಿಗಳಿಬ್ಬರ ಕಾತರ ತವಕ ವಿರಹ ತುಡಿತ ವೇದನೆ ನಿವೇದನೆಗಳನ್ನು ಇದಕ್ಕಿಂತಲೂ ಸರಳವಾಗಿ , ಸುಂದರವಾಗಿ , ಮಧುರವಾಗಿ ಹಾಗು ಸುಲಲಿತವಾಗಿ ಹೇಳಲು ಸಾಧ್ಯವೆ ಇಲ್ಲವೆಂಬಷ್ಟು ಸೊಗಸಾಗಿರುವ ಹಾಡಿದು. ಕಾಲನ ಅಗ್ನಿ ಪರೀಕ್ಷೆಯಲಿ ಗೆದ್ದು ದಶಕ ದಶಕಗಳಿಂದಾಚೆಗೂ ಅದೇ ಸೊಗಡು, ಮಾಧುರ್ಯ, ಮಾರ್ದವತೆಗಳನ್ನುಳಿಸಿಕೊಂಡು ಜತೆಗೆ ಒಂದೇ ಬಗೆಯ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಂತಹ ಹಾಡಿದು.
 
ಏನೀ ಜನಪ್ರಿಯತೆಯ ಗುಟ್ಟು? ಯಾಕೀ ಹಾಡು ( ಇದೇ ತರಹದ ಎಷ್ಟೋ ಹಳೆ ಹಾಡುಗಳು) ಇಂತಹ ಗಾಂಭಿರ್ಯ, ಸೌಂದರ್ಯ, ತೇಜಸ್ಸುಗಳನ್ನುಳಿಸಿಕೊಂಡು ಕಾಲಾತೀತವಾಗಿ ನೆಲೆ ನಿಲ್ಲಲು ಸಾಧ್ಯವಾಯ್ತು?
 
ಮೊಟ್ಟ ಮೊದಲಿಗೆ ಹೊಳೆವ ಸರಳ ಮತ್ತು ಸುಲಭದ ಕಾರಣ – ಈ ಗೀತೆಯ ಸರಳಾತಿಸರಳ ಮತ್ತು ಅಷ್ಟೇ ಉತ್ಕೃಷ್ಟತಮ ಸಾಹಿತ್ಯ. ನನಗೆ ಮಸುಕಾಗಿ ನೆನಪಿದ್ದಂತೆ, ಈ ಗೀತೆ ಕು.ರಾ.ಸಿ. ಲೇಖನಿಯಿಂದ ಹೊರಬಿದ್ದ ಬಂಗಾರ. ಆದರೆ ಸಾಹಿತಿ ಯಾರು ಏನೆಂದರಿವಾಗುವ ಮೊದಲೆ ತನ್ನ ಸ್ವಯಂಬಲದಲ್ಲೆ ಎಲ್ಲರ ಮನದಾಳದಲ್ಲಿ ಮನೆ ಮಾಡಿಕೊಂಡ ಹಾಡಿದು. ಸರಳ ಸುಂದರ ಪದಗಳಲಿ ಕಟ್ಟಿದ ಈ ಗೀತಮಾಲೆ ಅದೆಷ್ಟು ಸೊಗಡಿನದೆಂದರೆ – ತೀರಾ ಕೆಳವರ್ಗದ ಅವಿದ್ಯಾವಂತ ಪಾಮರ ಕೂಲಿ – ಕಾರ್ಮಿಕರಿಂದಿಡಿದು, ಉನ್ನತ ಶ್ರೇಣಿ ವರ್ಗದ, ಶ್ರೀಮಂತರ, ಪಂಡಿತರವರೆಗು – ಎಲ್ಲರೆದೆಯಲ್ಲೂ ಒಂದೇ ಬಗೆಯ ಝಲಕನ್ನು ಹುಟ್ಟುಹಾಕಿದ, ಒಂದೇ ರೀತಿಯ ಭಾವೋನ್ಮಾದ ಮೂಡಿಸಿದ, ಒಂದೆ ರೀತಿಯಲಿ ಮೈ “ಜುಂ” ಅನಿಸುವಂತೆ ಮಾಡಿದ ಸೊಗಸಾದ ಸಾಹಿತ್ಯವಿದು. ವರ್ಗ ಶ್ರೇಣಿಗಳ ಅಂತರವನೆಲ್ಲ ಮೀರಿದ ಸಾಹಿತ್ಯವೊಂದರ ರಚನೆ ಅಷ್ಟು ಸುಲಭವಲ್ಲ. ಅದರಲ್ಲೂ ಜನಪ್ರಿಯ ಸಾಹಿತ್ಯ ಪ್ರಕಾರದಲ್ಲಿ ಅದನ್ನು ರಚಿಸುವುದೆಂದರೆ, ಇನ್ನು ದೊಡ್ಡ ಪಂಥಾಹ್ವಾನವೆ ಸರಿ. ಅಂತಹ ಬೆರಳೆಣಿಕೆಯ ಸಾಹಿತ್ಯದ ಕೆಲವೇ ಗೀತೆಗಳಲ್ಲಿ ಇದು ಒಂದೆಂದು ನನ್ನನಿಸಿಕೆ.
 
ಇನ್ನು ಸಂಗೀತದ ವಿಷಯಕ್ಕೆ ಬಂದರೆ – ನನಗಿನ್ನು ಸೋಜಿಗ; ಈಗೆಲ್ಲಾ ಎಷ್ಟೊಂದು ಬಗೆಯ ಹೊಸತರದ ನಾವಿನ್ಯತೆಯ ವಾದ್ಯೋಪಕರಣಗಳು, ತಾಂತ್ರಿಕತೆ ಬೆರೆಸಿದ ಸಲಕರಣೆಗಳು ಬಂದಿವೆ. ಆ ಕಾಲದಲ್ಲಿ ಇವ್ಯಾವುದು ಇರಲೇ ಇಲ್ಲ. ಹೆಚ್ಚು ಕಡಿಮೆ ಹಾರ್ಮೋನಿಯಂ, ತಬಲ, ಕೊಳಲು, ಶಹನಾಯಿ, ವೀಣಾ, ಸಿತಾರದಂತಹ ಸಾಂಪ್ರದಾಯಿಕ ವಾದ್ಯಗಳೆ ಬಳಕೆಯಲಿದ್ದ ಕಾಲ. ಇದ್ದವುಗಳಷ್ಟನ್ನೆ ಮೆಲುವಾಗಿ, ಬರಿ ಹಿನ್ನಲೆಯಾಗಿ ಮಾತ್ರ ಬಳಸಿ ಸದಾಕಾಲಕ್ಕು ನೆಲೆನಿಲ್ಲುವಂತಹ ಸಂಗೀತ ನೀಡುವುದು ಹೇಗೆ ಸಾಧ್ಯವಾಯ್ತೆಂಬುದು ನಿಜಕ್ಕೂ ಸೋಜಿಗವೆ ಸರಿ. ಈ ಗೀತೆಯನ್ನು ಹಾಡಿದ್ದ ಘಂಟಸಾಲರೆ ಈ ಚಿತ್ರ (ವೀರ ಕೇಸರಿ) ಮತ್ತು ಹಾಡಿಗೆ ಸಂಗೀತ ನಿರ್ದೇಶಕರಾಗಿದ್ದರೆಂದು ಬಹುಶಃ, ಬಹಳ ಜನಕ್ಕೆ ತಿಳಿಯದೇನೊ..
 
ಇಷ್ಟು ನಿಯಮಿತ ವಾದ್ಯ, ಸಲಕರಣೆಗಳ ನಡುವೆಯು ಇಂತಹ ಸದಾಕಾಲ ಮನದಲುಳಿಯುವ ಸಂಗೀತ ನೀಡಲು ಅದೆಂತು ಸಾಧ್ಯವಾಯಿತೊ, ನಮಗೆ ಊಹಿಸಲು ಕಷ್ಟಸಾಧ್ಯ. ಅದು ಪ್ರತಿಭೆಯೊ, ಸರಳತೆಯೊ ಅಥವ ಎರಡರ ಮಿಲನವೊ ಇದ್ದಿರಬಹುದೇನೊ. ಅವುಗಳ ಶಕ್ತಿಯ ಅರಿವಾಗುವುದು, ಅವನ್ನು ಹೊಸದರ ಜತೆ ತುಲನೆ ಮಾಡಿ ನೋಡಿದಾಗ ಮಾತ್ರವೇ ಸಾಧ್ಯ. ಉದಾಹರಣೆಗೆ ಹಸನ್ ರಾಜನ “ಹವಾ, ಹವಾ” ಅಥವ ‘ತೇಜಾಬ್’ ಚಿತ್ರದ “ಏಕ್ ದೋ ತೀನ್” ನೆನೆಸಿಕೊಳ್ಳಿ? ಅವು ಬಿಡುಗಡೆಯಾದ ಹೊಸತರಲ್ಲಿ ಗಲ್ಲಿ ಗಲ್ಲಿ ಬೀದಿಗಳಲ್ಲೆಲ್ಲಾ ಬರಿ ಅದೇ ಹಾಡುಗಳು. ಈಗ? ಹುಡುಕಿದರು ಕಾಣುವುದು ಕಷ್ಟ. ಅದರ ನಡುವೆ “ಮೆಲ್ಲುಸಿರೆ ಸವಿಗಾನ” ಎನ್ನಿ. ನಿಮ್ಮ ಹೃದಯದಲ್ಲೊಂದು ಮಧುರ ಪಲುಕು ಸುಳಿದು, ಮುಖದ ಮೇಲೊಂದು ಮಾಸದ ಮುಗುಳ್ನಗೆ ತೀಡಿಯೆ ಅದು ಮಾಯವಾಗುವುದು. ಅಂತಹ ಸರಳ ಸಂಗಿತಗಾರಿಕೆ ಈ ಜನಪ್ರಿಯತೆಗೆ ಮತ್ತೊಂದು ಕಾರಣ.
 
ಕೊನೆಯದಾಗಿ, ಹಾಡುಗಾರ, ಹಾಡುಗಾರ್ತಿ. ಆ ಗೀತೆಗಳಿಗೆ ಜೀವ ತುಂಬಿ , ಎದೆಯಾರೆ ಭಾವ ತುಂಬಿ, ಮನಸಾರೆ ಅನುಭವಿಸಿ, ಅನುಭಾವಿಸಿ ಮಧುರ ಕಂಠದಲಿ ಹಾಡಿದ ಕೋಗಿಲೆಗಳ ಸುಸ್ವರದ ಸೊಬಗನ್ನು ಹೇಗೆ ತಾನೆ ಮರೆಯಲು ಸಾಧ್ಯ? ಬಹುಶಃ ಈ ಅಂಶವಿರದಿದ್ದರೆ, ಒಳ್ಳೆಯ ಹಾಡೂ ಹಾಗೂ ಸಾಹಿತ್ಯವಿದ್ದೂ, ಗೀತೆ ಪ್ರೇಕ್ಷಕನನ್ನು ತಲುಪಲು ವಿಫಲವಾಗುತ್ತಿತ್ತೆಂಬುದು ನನ್ನ ಭಾವನೆ. ಘಂಟಸಾಲ, ಪಿ.ಸುಶೀಲಾರಂತ ಗಾಯಕರ ಕಂಠಸಿರಿಯಿಂದ ಈ ಹಾಡುಗಳೆ ಅಜರಾಮರವಾಗಿ ಹೋದವು.
 
ಇದರರ್ಥ ಈಗ ಅಂತಹ ಪ್ರತಿಭೆಗಳಿಲ್ಲ ಅಂತಲೆ? ಅಥವ ಅಂಥಾ ಸಂಗೀತ ಸಂಯೋಜನೆ ಅಪರೂಪ ಅಂತಲೆ? ಹೇಗೆ, ಹಳತಿನ ವನಸಿರಿ ಈಗಲೂ ಹೊಸತಿನ ಐಸಿರಿಗೆ ಸಡ್ಡು ಹೊಡೆದು ನಿಂತು ಅಷ್ಟೆ ಜನಪ್ರಿಯತೆ ಉಳಿಸಿಕೊಳ್ಳಲು ಸಾಧ್ಯವಾಯ್ತು? ಇದಕ್ಕೆ ನನಗನಿಸುವ ಒಂದು ಮುಖ್ಯ ಕಾರಣ – ಹಳೆಹಾಡಿನಲ್ಲಿರುತ್ತಿದ್ದ ಮೂರು ಅಂಶಗಳ ಪರಿಪೂರ್ಣ, ಪರಿಪಕ್ವ , ವಿವೇಚನಾಯುಕ್ತ ಜೋಡಣೆ. ಸಂಗೀತ, ಸಾಹಿತ್ಯ, ಕಂಠ ಸಿರಿ ಎಲ್ಲವು, ಸರಿಯಾದ ಹದದಲ್ಲಿ, ಅಬ್ಬರವಿಲ್ಲದೆ, ಸರಿಯಾದ ಅನುಪಾತದಲ್ಲಿ ಮಿಶ್ರ ಮಾಡಿ ರುಚಿಕಟ್ಟಾಗಿ ಬಡಿಸುತ್ತಿದ್ದ ಪರಿ. ಅತಿಯು ಅಲ್ಲದ, ಮಿತಿಯು ಇರದ ಪರಿಪೂರ್ಣ ನಳಪಾಕ. ಇದು ಎಷ್ಟರಮಟ್ಟಿಗೆ ಇರುತ್ತಿತ್ತೆಂದರೆ, ಎಷ್ಟೊ ಹಾಡುಗಳನ್ನು ಚಿತ್ರ ನೋಡದೆ ಬರಿ ಕೇಳುತ್ತಲೆ ಚೆಂದವಿದೆಯೆನಿಸುವಷ್ಟರ ಮಟ್ಟಿಗೆ. ಚಿತ್ರದಲ್ಲಿ ನೋಡಿದರೆ, ಊಹಾಜಗತ್ತಿಗು, ಚಿತ್ರಣಕ್ಕೂ ನಡುವಿರುವ ಕಂದಕ ಎದ್ದು ತೋರಿ, ಹಾಡಿನ ಮಾಧುರ್ಯವನ್ನು ನುಂಗಿ ಹಾಕಿಬಿಡುತ್ತಿತ್ತೊ, ಏನೊ. ಆದರೆ ಈ ಹಾಡು ಆ ವಿಷಯದಲ್ಲೂ ನಿವಾಳಿಸುವಂತಿಲ್ಲ. ಕಪ್ಪು, ಬಿಳುಪಲ್ಲಾದರೂ ಹಾಡಿನ ಭಾವವನ್ನು ಅಷ್ಟೆ ಶ್ರೇಷ್ಟತಮವಾಗಿ ಚಿತ್ರಿಸಲ್ಪಟ್ಟ ಅಪರೂಪದ ಚಿತ್ರವಿದು.
 
..ಮತ್ತೆ ಮೋಡಗಳ ರಾಶಿ ಮುತ್ತಿಕೊಂಡು ಕಪ್ಪಾಗುತ್ತ ಶಶಾಂಕನ ಸುತ್ತ ಅವರಿಸುತ್ತಿವೆ. ಬಹುಶಃ ಮಳೆಯಾಗುವ ಮುನ್ಸೂಚನೆ. ಇದೇ ತಾನೆ ಮೆಲ್ಲುಸಿರೆಯ, ಕೊನೆ ಚರಣದ ಸಾಲುಗಳು ಹರಿದು ಬರುತ್ತಾ ಇದೆ. ಮಂಪರು ಜಾರಿ ಲಘುನಿದ್ದೆಯಾಗಿ, ನಿದಿರ ದೇವಿಯ ಮಡಿಲಲ್ಲಿ ಇನ್ನೇನ್ನು ಪೂರ್ತಿ ಶರಣಾಗುವ ಹೊತ್ತಿಗೆ ಟಪ್ಪಟಪ್ಪನೆಂದು ದಪ್ಪ ಹನಿಗಳು ಬೀಳಲಾರಂಭಿಸುತ್ತವೆ, ತೆರೆದ ಕೈ, ಮುಖದ ಮೇಲೆ. ತಡಬಡಾಯಿಸಿ ಎದ್ದು, ಆತುರಾತುರವಾಗಿ ಚಾಪೆ ಸುತ್ತಿ, ಟ್ರಾನ್ಸಿಸ್ಟರು ಮತ್ತೆಲ್ಲ ಹೊತ್ತು ಕೆಳಗಿಳಿಯಲಾರಂಭಿಸಿದ ಹೊತ್ತಲೂ, ಮನದಲದೆ ಮಧುರಗಾನ, ಎದೆಯಲದೆ ರಿಂಗಣ…!
 
ಮನದಾಚೆ ಮೂಡಿದ ಬಯಕೆ
ಕನಸಾಗಿ ಕಾಡುವುದೇಕೊ
…..
ಮಧು ಮಂಚಕೆ ವಿಧಿ ಹಂಚಿಕೆ
ಅದಕೇಕೆ ಅಂಜಿಕೆ ಶಂಕೆ?
……
ಈ ಸ್ನೇಹ ರಸಮಯ ಸದನ
ಈ ದೇಹ ಮಧು ಸಂಗ್ರಹಣ
……
ಚಿರನೂತನ ರೊಮಾಂಚನ
ದಾಂಪತ್ಯದನುಸಂಧಾನ…!
ಹಾಡನ್ನು ಕೇಳಲು ಈ ಕೆಳಗಿನ ಕೊಂಡಿಯನ್ನು ಬಳಸಿ
ಅಡಿ ಟಿಪ್ಪಣಿ: 
——————
 
ಹಳೆಯ ಹಾಡುಗಳ ಮಾಧುರ್ಯದ ಪ್ರತಿನಿಧಿಯಾಗಿ ಈ ‘ ಮೆಲ್ಲುಸಿರೆ ಸವಿಗಾನ’ ಪ್ರತಿಮೆಯ ರೂಪದಲಿ ಬಳಕೆಯಾಗಿದೆ. ಆಳವಾಗಿ ಹೊಕ್ಕು ನೋಡಿದರೆ ಅದೆಷ್ಟೊಂದು ಇದೇ ತರಹದ ಮಧುರ ಹಾಡುಗಳು ಕನ್ನಡದಲ್ಲೆಷ್ಟೊಂದಿವೆ ಎಂದೆನಿಸಿ ಅಚ್ಚರಿಯಾಗುತ್ತದೆ. ನಂಬಿಕೆ ಬರದಿದ್ದರೆ ಕೆಳಗಿನ ಕೆಲವು ಹಾಡುಗಳನ್ನೆ ಗಮನಿಸಿ..ಮೆಲುವಾದ ತೆಳು ಸಂಗೀತ ಲಹರಿಯಲಿ, ಅದೆಲ್ಲೋ ಕಿನ್ನರ ಲೋಕದಿಂದ ತೇಲಿ ಬಂದಂತೆ ಕಿವಿಯಿಂದ ನೇರ ಎದೆಗೆ ಗುನುಗುವ ‘ಹೃದಯ ದೇವಿಯೆ ನಿನ್ನ ಅಧರ ರಸವನೂ ಪೀರೆ, ತವಕದಿಂ ಕಾದಿಹೆನೂ..ಬಾ ಚೆಲ್ವ ನೀರೆ…’ , ಸಾಹಿತ್ಯಿಕ ಸಂಪದವನ್ನು ಸಿನಿಮಾಗಾಯನ ಲೋಕದಲ್ಲೂ ಸುಶ್ರಾವ್ಯವಾಗಿ, ರಸಿಕರ ಮನದಲಿ ಶಾಶ್ವತವಾಗಿ ನಿಲುವಂತೆ ಮಾಡಬಹುದೆನ್ನುವ ಜ್ವಲಂತ ಉದಾಹರಣೆಯಾಗಿ, ಹೆಣ್ಣೊಬ್ಬಳ ವರ್ಣನೆಯನ್ನು ಸಭ್ಯತೆಯ ಅಳತೆ ಮೀರದ ಅತಿಶಯದಿಂದ, ಲಾಲಿತ್ಯದಿಂದ ವರ್ಣಿಸುವ ‘ಇವಳು ಯಾರು ಬಲ್ಲೆಯೇನೂ, ಇವಳ ಹೆಸರ ಹೇಳಲೇನೂ, ಇವಳ ದನಿಗೆ ತಿರುಗಲೇನೂ, ಇವಳು ಏತಕೊ ಬಂದು ನನ್ನ ಸೆಳೆದಳೂ….’, ಛೇಡನೆಯ ದನಿಯಲ್ಲಿ, ಕುದುರೆಯೇರಿ ಕಾಡಿನ ಹಾದಿಯಲಿ ಸಾಗುತ್ತ, ತೂಗುವ ಬಿಳಲನ್ಹಿಡಿದು ತೂಗಾಡುತ್ತ, ನೇತಾಡಿಕೊಂಡೆ ಪ್ರಾಯದ ಹೆಣ್ಣನ್ನು ಹಾಡಿ, ಕೊಂಡಾಡುವ ವೀರ ಕೇಸರಿಯ ‘ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ, ಹೊರಗೆ ಸಾಧನೆ, ಒಳಗೆ ವೇದನೆ ಇಳಿದು ಬಾ ಬಾಲೆ…’ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಕೆಲವು ಅದೇ ತರಹದ ಸೌಂದರ್ಯ ರಾಶಿಗಳ, ವೈಡೂರ್ಯಗಳ ನೆನಕೆ ಈ ಕೆಳಗಿದೆ ನೋಡಿ:
 
– ಒಲವಿನ ಪ್ರಿಯಲತೆ ಅವಳದೆ ಚಿಂತೆ, ಅವಳ ಮಾತೆ ಮಧುರ ಗೀತೆ ಅವಳೆ ನನ್ನ ದೇವತೆ
– ಬಿಂಕದ ಸಿಂಗಾರಿ, ಮೈ ಡೊಂಕಿನ ವೈಯಾರಿ, ಈ ಸವಿಗಳಿಗೆ, ರಸ ದೀವಳಿಗೆ, ನಿನ್ನಂದ ಚಂದ ಮಕರಂದ
– ವೈದೇಹಿ ಏನಾದಳೂ, ವೈದೇಹಿ ಏನಾದಳೂ
– ಬೆಳ್ಳಿ ಹಕ್ಕಿ ನಾವಾಗುವ, ಬೆಳ್ಳಿ ಮೋಡ ನಾವೇರುವ
– ನಿನ್ನಿಂದ ನಾನಿಂದೂ ಹಗಲಿರುಳು ಹಂಬಲಿಸಿ ಕೈ ಹಿಡಿದು ಬರಸೆಳೆದು ಒಲವಿನ ಕಾಣಿಕೆ ಬಯಸಿಹೆನು
– ಬಾರೆ.. ನೀ ಚೆಲುವೆ, ನಿನ್ನಂದ ಚಂದ ಮಕರಂದ
– ಕಲ್ಲೂ ಕವಿತೆಯ ಹಾಡುವುದು, ಮುಳ್ಳು ಹೂವ್ವಾಗಿ ಅರಳುವುದು, ನೀ ಬಳಿಯಿರಲು , ನಗುನಗುತಿರಲು ಹರುಷದಿ ಹೃದಯ ತೂಗುವುದೂ…
– ಧರಣಿಗೆ ಗಿರಿ ಭಾರವೆ, ಗಿರಿಗೆ ಮರವು ಭಾರವೆ, ಬಳ್ಳಿಗೆ ಕಾಯಿ ಭಾರವೆ, ಹೆತ್ತ ತಾಯಿಗೆ ಮಗುವು ಭಾರವೆ…
– ಕಿವಿ ಮಾತೊಂದ ಹೇಳೆ ನಾ ಓಡಿ ಬಂದೆ
– ಹಾಯಾದ ಈ ಸಂಗಮ, ಹೊಸ ಬಾಳಿನಾ ಆಶಾಸುಮ ಅರಳಿತು ನಮ್ಮ ಈ ಪ್ರೇಮ
– ನಲಿವ ಮನಾ ಒಂದೀ ದಿನ
– ಮೌನವೆ ಅಭರಣ ಮುಗುಳ್ನಗೆ ಶಶಿ ಕಿರಣ, ನೋಟವೆ ಹೂ ಬಾಣ
– ರಾಧಾ ಮಾಧವ ವಿನೋದ ಹಾಸ
– ಬಾಳೊಂದು ನಂದನ, ಅನುರಾಗ ಬಂಧನ
– ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟ ಗಾಳಿಯಲಿ ತೇಲಿ
– ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
– ನವಿಲೆ ನವಿಲೆ ಹೆಣ್ಣವಿಲೆ
– ಹಾಯಾಗಿದೆ ಈ ದಿನ ಮನ ಹಗುರಾಗಿದೆ, ಹೂವ್ವಾಗಿದೆ ತನೂ..
– ಏಕಾಂತವಾಗಿ ಮಾತಾಡೆ ಬಂದೆ ನಾನು, ನಿನ್ನಿಂದ ನಾನೆಂದೂ ಬೇರೆ ಆಗೆನು
– ಬಳ್ಳಿ ಹಂಗೆ ಬಳುಕುತಲಿ, ಮಳ್ಳಿ ಹಂಗೆ…
– ಯಾರಿಗೆ ಯಾರುಂಟು, ಎರವಿನ ಸಂಸಾರ, ನೀರ ಮೇಲಣ ಗುಳ್ಳೆ, ನಿಜವಲ್ಲಾ ಹರಿಯೆ
– ಆಲಿಸು ಓ ಇನಿಯ, ನನ್ನೆದೆಯಾ ಕರೆಯಾ, ಕಂಬನಿ ಭಾರ, ಇಳಿಸಲು ಬಾರ, ಕಾದಿಹೆ ನಾ ರಾಜ
– ನಗು ನಗು ನಗು ನಗು ನನ ಹೂವ್ವೆ
– ನಲ್ಲೆ ಬಳಿಗೆ ಬಾರೆ..
– ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
– ಸಿರಿವಂತನಾದರೂ ಕನ್ನಡ ನಾಡಲ್ಲೆ
– ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂಧಿಸಿಹುದೊ
– ಬಾಗಿಲನು ತೆರೆದು , ಸೇವೆಯನು ಕೊಡೊ ಹರಿಯೆ
– ತೂಗಿರೆ ರಂಗನ, ತೂಗಿರೆ ಕೃಷ್ಣನಾ
– ಹಾಡೊಂದ ಹಾಡುವೆ, ನೀ ಕೇಳು ಮಗುವೆ
– ಆಡುತಿರುವ ಮೋಡಗಳೆ, ಹಾರುತಿರುವ ಹಕ್ಕಿಗಳೆ
– ಕಮಲದ ಹೂವ್ವಿಂದ, ಕೆನ್ನೆಯ ಮಾಡಿದನೊ, ಮುಂಗುರುಳಂದ ಆ ದುಂಬಿಗಳಿಂದ ನಿನಗೆ ತಂದನೊ
– ಕನ್ನಡತಿ, ನಮ್ಮೊಡತಿ, ಕಣ್ಣು ತೆರೆದು ನೋಡು, ನೀನೆಮಗೆ ವರವ ನೀಡು
– ಶರಣು ಕಾವೇರಿ ತಾಯೆ, ಸಿರಿಯೆ ಕರುನಾಡ ಜೀವನದಿಯೆ, ತಾಯೆ
– ಇದೆ ಚಕ್ರತೀರ್ಥ
 
ಹೀಗೆ ಇನ್ನೆಷ್ಟೋ ………. ಎಲ್ಲವನ್ನು ಕೇಳಿ ಆನಂದಿಸಿ.
3 ಟಿಪ್ಪಣಿಗಳು Post a comment
  1. Krishna Kulkarni
    ಏಪ್ರಿಲ್ 20 2016

    ಹಾಡು ಕೇಳುವಷ್ಟೇ ಮಧುರವಾಗಿ ನಿರ್ಮಲವಾಗಿ ನೀವು ಬರೆದಿದ್ದೀರಿ, ಓದಲು ಸಮ್ತೋಷವೆನಿಸಿತು. ನನಗೂ ಇವೆ ಭಾವನೆಗಳಿದ್ದವು, ಆದರೆ ಶಬ್ದ ಚಮತ್ಕಾರದ ಸಾಧನೆ ಇರಲಿಲ್ಲ. “ಪ್ರೀತಿನೇ ಆ ದೇವ್ರು ತಂದ” ಮತ್ತು “ನನೇ ವೀಣೆ ನೀನೆ ತಂತಿ” ಕೆಲವು ಮರೆತ ಹಾಡುಗಳು.

    ಉತ್ತರ
    • ಏಪ್ರಿಲ್ 20 2016

      ಧನ್ಯವಾದಗಳು, ನೆನೆಯದೆ ಬಿಟ್ಟ ಇನ್ನೂ ಎಷ್ಟೊ ಹಾಡುಗಳಿವೆ – ನೀವು ಹೆಸರಿಸಿದ ಹಾಡುಗಳೂ ಸೇರಿದಂತೆ. ಯಾವಾಗ ಕೇಳಿದರೂ ಅದೇ ಮಧುರ ಅನುಭೂತಿ ನೀಡುವ ಈ ಹಾಡುಗಳು ಕಾಲಾತೀತ ಎನ್ನುವುದಂತೂ ನಿಸ್ಸಂಶಯ 🙂

      ಉತ್ತರ

Trackbacks & Pingbacks

  1. ಮೆಲ್ಲುಸಿರೆ ಸವಿಗಾನ….! – ಮನದಿಂಗಿತಗಳ ಸ್ವಗತ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments