ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2016

2

‘ಹೊಸ ತಲೆಮಾರಿನ ತಲ್ಲಣ’ ಕೃತಿ ಪರಿಚಯ

‍ನಿಲುಮೆ ಮೂಲಕ

ಮು.ಅ ಶ್ರೀರಂಗ ಬೆಂಗಳೂರು

hosa talemarina tavaka tallanagalu0001ಡಾ. ರಹಮತ್ ತರೀಕೆರೆ ಅವರ ಸಂಪಾದಕತ್ವದಲ್ಲಿ  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಅವರು ೨೦೦೮ರಲ್ಲಿ ಪ್ರಕಟಿಸಿರುವ ‘ಹೊಸ ತಲೆಮಾರಿನ ತಲ್ಲಣ’ ಕೃತಿಯ ಒಂದು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕೃತಿಯಲ್ಲಿ ಒಟ್ಟು   ೩೮ ಲೇಖನಗಳಿವೆ. ಸಂಪಾದಕರಾದ  ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ‘ಈ ಸಂಕಲನವು ಬರಹದಲ್ಲಿ ತೊಡಗಿಕೊಂಡಿರುವವರಿಗೂ, ಸಾಹಿತ್ಯ ಅಧ್ಯಯನ ಮಾಡುವವರಿಗೂ, ಸಾಹಿತ್ಯದಲ್ಲಿ ಸಾಮಾನ್ಯ ಆಸಕ್ತಿ ಇರಿಸಿಕೊಂಡಿರುವ ಓದುಗರಿಗೂ ಉಪಯುಕ್ತ ಆಗಬಹುದು’.   ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ  ಹೊಸತಲೆಮಾರಿನ ಲೇಖಕರ ಆತ್ಮ ಕಥಾನಾತ್ಮಕ ಮಾದರಿಯ ಬರಹಗಳಿವೆ. ಎರಡನೇ ಭಾಗದ ಬರಹಗಳು ಸಂಪಾದಕರ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿ ಮೂಡಿಬಂದ ಲೇಖನಗಳಿವೆ. ಮೂರನೇ ಭಾಗದಲ್ಲಿ ಈ ಎರಡೂ  ಭಾಗದ ಬರಹಗಳಿಗೆ ಸಂಪಾದಕರು ಮಾಡಿರುವ   ‘ತಲ್ಲಣಗಳ ಸ್ವರೂಪ’ ಎಂಬ ಉತ್ತಮ  ವಿಶ್ಲೇಷಣೆ ಇದೆ.

ಸಂಪಾದಕರ ಮಾತಿನಲ್ಲಿ ರಹಮತ್ ತರೀಕೆರೆ ಅವರು ಈ ಪುಸ್ತಕದಲ್ಲಿ ಸಂಕಲಿತವಾಗಿರುವ  ಬರಹಗಳ ಬಗ್ಗೆ ಹೀಗೆ ಹೇಳಿದ್ದಾರೆ, ಕನ್ನಡ ವಿಶ್ವವಿದ್ಯಾಲಯದ  ‘ಕನ್ನಡ ಅಧ್ಯಯನ ‘ ಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ‘ಹೊಸ ತಲೆಮಾರಿನ ಲೇಖಕರ ಹಂಬಲಗಳು’ ಎಂಬ ವಿಷಯ ಕುರಿತು ಲೇಖಕರಿಂದ ಬರಹಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿತ್ತು. ನಂತರ ನಮ್ಮ ವಿಭಾಗವು ಯುವ ಲೇಖಕರಿಗಾಗಿ ಒಂದು ಕಮ್ಮಟವನ್ನು ನಡೆಸಿತು. ಅದು ಲೇಖಕರು ತಮ್ಮ ಬರಹದ ಅನುಭವವನ್ನು ಹಂಚಿಕೊಳ್ಳುವ ಕಮ್ಮಟವಾಗಿತ್ತು. ಈ ಕಮ್ಮಟದ ಹಿನ್ನೆಲೆಯಲ್ಲಿ ಮತ್ತಷ್ಟು ಲೇಖಕರಿಂದ ‘ಬರಹ: ನನ್ನ ಅನುಭವ’ ಎಂಬ ವಿಷಯ ಕುರಿತು ಬರಹಗಳನ್ನು ಆಹ್ವಾನಿಸಲಾಯಿತು. ಪ್ರಸ್ತುತ ಸಂಕಲನವು ಈ ಎರಡೂ ಹಂತದ ಆಹ್ವಾನಿತ ಬರಹಗಳನ್ನು ಒಳಗೊಂಡಿದೆ”.

ಈ ಕೃತಿಯಲ್ಲಿನ ಮೊದಲೆರೆಡು ಭಾಗಗಳಲ್ಲಿನ  ಒಟ್ಟು ಮೂವತ್ತೆಂಟು ಲೇಖನಗಳ ಸ್ವರೂಪದ, ದೃಷ್ಟಿಯ  ಆಧಾರದ ಮೇಲೆ  ಅವುಗಳ ಬರಹಗಾರರನ್ನು   ಮೂರು  ಭಾಗಗಳಾಗಿ ವಿಂಗಡಿಸಬಹುದು. (೧) ಪತ್ರಿಕೆಗಳಿಂದ, ವಿಮರ್ಶಕರಿಂದ  ಮತ್ತು ತಮ್ಮ ಕೃತಿಯ ಪ್ರಕಟಣೆಯಿಂದ/ಪ್ರಕಟಣೆಗಾಗಿ ಪ್ರಕಾಶಕರಿಂದ ಕಹಿ ಅನುಭವ ಪಡೆದವರು. (೨) ತಮ್ಮ ಕೆಲಸದ ದೆಸೆಯಿಂದಲೇ (ಪ್ರಸಿದ್ಧ ಪತ್ರಿಕೆಗಳ ವರದಿಗಾರರು, ಉಪಸಂಪಾದಕರು, ದೃಶ್ಯ ಮಾಧ್ಯಮವಾದ ಟಿ ವಿಯಲ್ಲಿ ಇರುವವರು, ಕಾಲೇಜು, ವಿ ವಿ ಗಳಲ್ಲಿ  ಉಪನ್ಯಾಸಕ , ಪ್ರಾಧ್ಯಾಪಕರಾಗಿದ್ದು ಕೊಂಡಿರುವ ಕಾರಣದಿಂದ) ತಮ್ಮ ಬರಹಗಳಿಗೆ ಪ್ರಕಟಣೆಯ ಕಷ್ಟವನ್ನು ಅಷ್ಟಾಗಿ  ಅನುಭವಿಸದವರು  (೩) ಸದ್ಯದ ಪರಿಸ್ಥಿತಿಯಿಂದ ಬೇಸತ್ತವರು.  ಈ ವಿಂಗಡಣೆ ಈ ಕೃತಿಯ ಹಿಂಬದಿಯಲ್ಲಿ ಕೊಟ್ಟಿರುವ (ಆ ಕಾಲದಲ್ಲಿದ್ದಂತೆ) ಬರಹಗಾರರ ವಿಳಾಸಗಳು, ಅವರ ಬರಹಗಳು /ಸಂಪಾದಕರ ವಿಶ್ಲೇಷಣೆಯಿಂದ ತಿಳಿದುಬರುವ ಆಧಾರದ ಮೇಲೆ    ನಾನು  ನನ್ನ ಈ ಲೇಖನದ ಮಟ್ಟಿಗೆ ಮಾಡಿಕೊಂಡಿರುವಂತಹುದು ಅಷ್ಟೇ.  ಕಳೆದ ಎಂಟು  ವರ್ಷಗಳಲ್ಲಿ ಈ ಮೂರೂ ವಿಂಗಡಣೆಗಳಲ್ಲಿನ ಬರಹಗಾರರ  ಜೀವನ , ಬರಹ ಮತ್ತು ದೃಷ್ಟಿಕೋನದಲ್ಲಿ   ಸಾಕಷ್ಟು ಬದಲಾವಣೆಗಳಾಗಿರಬಹುದು. ಅವರ ಆಗಿನ ಅಭಿಪ್ರಾಯಗಳಲ್ಲಿ ಕೆಲವು/ಪೂರ್ತಿ ಬದಲಾವಣೆಗಳಾಗಿರಬಹುದು.  ಆದರೂ ಸಹ ಈಗ ಬರೆಯಲು ಪ್ರಾರಂಭಿಸಿರುವ ಹೊಸಲೇಖಕರ ಪರಿಸ್ಥಿತಿಯಲ್ಲಿ  ‘ಎದ್ದು ಕಾಣುವಂತಹ’ ಬದಲಾವಣೆ ಏನೂ ಆಗಿಲ್ಲ ಎಂಬ ವಾಸ್ತವ ನಮ್ಮೆದುರಿಗಿದೆ. ಈ ಕೃತಿಯ ಮಟ್ಟಿಗೆ ಆಗಿನ ಹೊಸ ತಲೆಮಾರಿನವರು ಅನುಭವಿಸಿದ ತಲ್ಲಣ ಹಾಗೂ  ಸಂಕಟಗಳೂ  ಈಗಿನ ಹೊಸ ತಲೆಮಾರಿನವರ ತಲ್ಲಣ, ಸಂಕಟಗಳೂ ಒಂದೇ ಆಗಿವೆ. ಬದಲಾವಣೆಯ ಗಾಳಿ ಬೀಸಬೇಕಿದೆ. ಆದರೆ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?’

ಈ ಕೃತಿಯಲ್ಲಿ (ಆಗಿನ) ‘ಹೊಸ ತಲೆಮಾರಿನ ಬರಹಗಾರರು ಹಿರಿಯ ಸಾಹಿತಿಗಳು, ವಿಮರ್ಶಕರು ಮತ್ತು ಪತ್ರಿಕೆಗಳ ಬಗ್ಗೆ   ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕಟುವಾಗಿವೆ; ನೇರವಾಗಿದೆ. ಆದರೆ  ಅದು ಕೇವಲ ತಮ್ಮ ಕಹಿಯನ್ನು ಹೊರಹಾಕುವ ಕಾರಣಕ್ಕೆ ಮಾತ್ರ ಎಂದು ಓದುಗರು ತಪ್ಪು ತಿಳಿಯಬಾರದು.  ಆಯ್ದ ಕೆಲವು ಲೇಖನಗಳನ್ನು ಪರಿಶೀಲಿಸುವ ಮೂಲಕ  ಕಳೆದ ಎಂಟು  ವರ್ಷಗಳ ಹಿಂದಿನ ವ್ಯಥೆಯೇ ಈಗಲೂ ಮುಂದುವರಿದಿದೆ ಎಂಬುದನ್ನು ನಾವು ಅರಿಯಬಹುದು.

(೧) ಎನ್ಕೆ. ಹನುಮಂತಯ್ಯ:- (ಸಾಹಿತ್ಯದಲ್ಲಿ ಪರಂಪರೆ ಮತ್ತು ವರ್ತಮಾನಗಳ ಪ್ರವಾಹದ ಸಮಸ್ಯೆ ಬಗ್ಗೆ ಬರೆಯುತ್ತಾ) … ‘ ನಾವು ಬರೆದ ಸಾಲುಗಳನ್ನು ಬಲವಾಗಿ ಹಿಂಡಿದರೆ, ಅವುಗಳಲ್ಲಿ ಈಗಾಗಲೇ ಆಗಿಹೋದವರ ದನಿಗಳು ಕೇಳಿಸಿ ಅಣಕಿಸುವುದುಂಟು. ಸ್ವಂತಿಕೆ, ಸ್ವದರ್ಶನಗಳಿಲ್ಲದ  ಅನುಕರಣಾತ್ಮಕ ಬರಹ ನಮ್ಮ ಹೆಸರಿನಲ್ಲಿ ತಲೆಯೆತ್ತಿ ಬರಹಗಾರನ ಭ್ರಮೆ ಹುಟ್ಟಿಸುವ ಸಾಧ್ಯತೆಗಳು ಅಪಾರ , ಸಮಕಾಲೀನ ಸಂದರ್ಭದ ಇನ್ನೊಂದು ಸವಾಲೆಂದರೆ; ಬರಹಗಳನ್ನು ವಿಮರ್ಶಿಸಿ ಪ್ರಕಟಿಸುವಂಥ ಹೊಣೆಗಾರಿಕೆಯಿಲ್ಲದ ಮಾಧ್ಯಮಗಳು, ಮುದ್ರಣ ಕ್ಷೇತ್ರದ ಪರಿಚಯವಿರುವವರು, ಸಾಹಿತ್ಯಲೋಕದ ಸ್ನೇಹವಿರುವವರು ಹೇಗೋ ಹೊಸೆದ ಬರಹಗಳು ಪುಸ್ತಕಗಳಾಗುತ್ತಿವೆ. ಇವು ಅಂದು ಹುಟ್ಟಿ ಅಂದೇ ಸತ್ತರೂ ಬರೆದ ವ್ಯಕ್ತಿಗಳು ಮಾತ್ರ ರಾರಾಜಿಸುವ ಸಾಂಸ್ಕೃತಿಕ ರಾಜಕಾರಣ ದಟ್ಟವಾಗುತ್ತಿದೆ…’ ‘ಬರಹಗಾರ ಮತ್ತು ಆತನ ಬರಹದ ಪ್ರಸ್ತುತತೆ ಬಗ್ಗೆಯೂ ಚಿಂತಿಸಬೇಕಾಗಿದೆ. ಒಂದು ದಿನಪತ್ರಿಕೆಯ ಓದುಗರ ಪತ್ರ ಉಂಟುಮಾಡುವ ಪರಿಣಾಮಗಳು ಒಂದು ಪದ್ಯಕ್ಕಿಲ್ಲದಿದ್ದಾಗ ಯೋಚಿಸುವುದು ಅಗತ್ಯ. ..’

(೨)ಕಲಿಗಣನಾಥ ಗುಡದೂರು:-‘… ಕಥೆಗಳಲ್ಲಿ ಚಿತ್ರಿತವಾಗುವ ಬಹುತೇಕ ಪಾತ್ರಗಳಂಥ ವ್ಯಕ್ತಿಗಳು ಕಥೆ ಆಸ್ವಾದಿಸುವುದು ಮತ್ತು ಅವರನ್ನು ತಲುಪುವುದು ತೀರಾ ಕಡಿಮೆ. ಕಥೆಗಳನ್ನು ಓದುವ ವರ್ಗ ಬೇರೆಯೇ ಇರುತ್ತದೆ. ಏಕಾಂತ ಕಳೆಯಲು, ಬದುಕನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ವಿವಿಧ ಸ್ತರಗಳ ಜನವರ್ಗಗಳ ತಲ್ಲಣಗಳನ್ನು ಸಾಮಿಪ್ಯದಿಂದ ಕಾಣಲು ಓದುಗರು ಬಯಸುತ್ತಾರೆ ಎಂಬ ಊಹೆ ನನ್ನದು. ‘…. ನನ್ನ ಕಥೆಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳು ಪ್ರಕಟಿಸದೆ ವಿಷಾದದ ಪತ್ರವಿಟ್ಟು ವಾಪಸ್ ಕಳಿಸಿದವು…. ನಾನು ಬರೆದ ‘ಮತಾಂತರ’ ಕಥೆಯನ್ನು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಕಳಿಸಿದೆ. ಒಂದೆರೆಡು ತಿಂಗಳುಗಳವರೆಗೆ ಪತ್ರಿಕೆಯಿಂದ ಸಣ್ಣ ಪ್ರತಿಕ್ರಿಯೆ ಕೇಳಿಬರಲಿಲ್ಲ. ಒಂದು ದಿನ ನಾನೇ ಕೇಳಿದ್ದಕ್ಕೆ ‘ಇಲ್ಲ ಇಂಥ ವಸ್ತುವಿರುವ ಕಥೆಯನ್ನು ಪ್ರಕಟಿಸಲು ಸಾಧ್ಯವಿಲ್ಲ. ಬೇರೆಡೆ ಬೇಕಾದರೆ ಕಳಿಸಿ ಎಂಬ ಉತ್ತರ ಬಂತು. ಅನಂತರ ಆ ಕಥೆಯನ್ನು ಪಾಪು ಕಥಾ ಸ್ಪರ್ಧೆ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ದಿ. ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಗೆ ಕಳುಹಿಸಿದೆ. ಎರಡೂ ಕಡೆ ‘ಮತಾಂತರ ಕಥೆ ಪ್ರಥಮ ಬಹುಮಾನಗಳಿಸಿತು. ಕಥೆ ವಾಪಸ್ ಕಳಿಸಿದ ಪತ್ರಿಕೆಯವರಿಗೆ ಫೋನ್ ಮಾಡಿ ನೀವು ಆ ಕಥೆ ವಾಪಸ್ ಮಾಡಿ ಒಳ್ಳೆಯದೇ ಮಾಡಿದಿರಿ.  ನೀವು ಪ್ರಕಟಿಸಿದ್ದರೆ ೩೫೦ರೂ ಬರುತ್ತಿತ್ತು. ಈಗ ೩೦೦೦ರೂ , ಚಿನ್ನದ ಪದಕ, ನಾಲ್ಕಾರು ಕಡೆ ಸನ್ಮಾನ ದೊರೆಯಿತು’ ಎಂದು ಸೌಜನ್ಯದಿಂದ ಹೇಳಿದೆ.

(೩) ವೆಂಕಟ್ರಮಣ ಗೌಡ:-‘ … ದೊಡ್ಡ ಪ್ರತಿಭೆಗಳಿಲ್ಲವೆಂಬ ಮಾತು ಕೇಳಿಬರುತ್ತಿರುವ ಇಂದಿನ ಸಂದರ್ಭಕ್ಕೆ ನನ್ನ ಪ್ರಶ್ನೆ ಇದು: ದೊಡ್ಡ ಪ್ರತಿಭೆಗಳಾಗಿರುವವರೆಲ್ಲ ಬರವಣಿಗೆಯ ಆರಂಭದ ದಿನಗಳಿಂದಲೇ ದೊಡ್ಡ ಪ್ರತಿಭೆಗಳಾಗಿ ಹೊಮ್ಮಿದವರೇ? ಈಚಿನ ವರ್ಷಗಳಲ್ಲಿ ಬರೆಯುತ್ತಿರುವ ಎಷ್ಟು ಮಂದಿಯನ್ನು ವಿಮರ್ಶಕರು ಬಲ್ಲರು? ಎಷ್ಟು ಮಂದಿಯ ಬರವಣಿಗೆಯನ್ನು ಅವರು ಓದಿದ್ದಾರೆ?  ಎಷ್ಟರ ಬಗ್ಗೆ ಪ್ರಾಮಾಣಿಕವಾಗಿ ಮುಟ್ಟಿ ಬರೆದಿದ್ದಾರೆ? ವಿಮರ್ಶಕರು ಒಂದು ವಿಚಾರವನ್ನಂತೂ ನೆನಪಿಟ್ಟುಕೊಳ್ಳಲಿ. ತಾವು ಹೇಳಿದ್ದೆಲ್ಲಾ ಮಾತು, ತಮ್ಮ ಪೆನ್ನಿನಿಂದ ಕನ್ನಡ ಸಾಹಿತ್ಯವನ್ನು ಅಡಿಸುತ್ತೇವೆ ಎಂದೆಲ್ಲಾ ಅವರು ಭ್ರಮಿಸುವ ಕಾಲ ಇದಲ್ಲ. ಆ ಭ್ರಮೆಗಳೆಲ್ಲಾ ಅವರವರ ‘ಪಿ ಎಚ್ ಡಿ ‘ಗಳಲ್ಲೇ ಹೂತುಹೋದಷ್ಟೂ ಒಳ್ಳೆಯದು….’

(೪) ಕಂನಾಡಿಗಾ ನಾರಾಯಣ:’ ವಿಪರ್ಯಾಸವೆಂದರೆ, ಈವತ್ತಿನ ಸಂದರ್ಭದಲ್ಲಿ ಸಾಹಿತ್ಯವನ್ನು ಸೃಷ್ಟಿಸುವ ಕ್ರಿಯೆಯಲ್ಲಿ ತೊಡಗಿದ ಅನೇಕ ಜನ ಜೀವನಕ್ಕೋಸ್ಕರವಾದರೂ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿದ್ದಾರೆ. ಆದರೆ ವಿಮರ್ಶಕರು ಮಾತ್ರ ಅಕಾಡೆಮಿಕ್ ವಲಯದವರೇ ಆಗಿರುತ್ತಾರೆ. ಅಕಾಡೆಮಿಕ್ ವಲಯದಲ್ಲಿರುವ ಕೆಲವರು ನಾನ್-ಅಕಾಡೆಮಿಕ್ ಮಂದಿ ಬರೆಯುವ ಸಾಹಿತ್ಯದಲ್ಲಿ ಹುರುಳಿಲ್ಲ ಎಂದು ಸ್ವಯಂ ಘೋಷಿಸಿ ಅಥವಾ ಸಂಪರ್ಕದ ಕೊರತೆಯಿಂದಾಗಿ, ಕೃತಿಯೊಂದನ್ನ ಸೀರಿಯಸ್ ಆಗಿ ಓದುವ ಗೋಜಿಗೂ ಹೋಗದೆ, ಕಣ್ಣೋಟದಲ್ಲೇ ಮೌಲ್ಯವನ್ನು ಅಳೆದು ಬಿಡುತ್ತಿರುವುದು ಈವತ್ತಿನ ಅಪಾಯಗಳಲ್ಲಿ ಒಂದು. ಪತ್ರಿಕೆಗಳೂ ಸಹ, ಇಂದು ಜನಪ್ರಿಯ ಸಾಹಿತ್ಯಕ್ಕೆ ಮರುಳಾಗಿ ಬೇಕಿದ್ದೋ ಬೇಕಿಲ್ಲದೆಯೋ  ಅಗ್ಗದ  ಪ್ರಚಾರಕ್ಕೆ ಕೈಚಾಚಿ ನಿಂತುಕೊಂಡಿವೆ. ಅವರಿಗೂ ಗಂಭೀರ ಸಾಹಿತ್ಯ ಬೇಕಾಗಿಲ್ಲ. ಪತ್ರಿಕೆಗಳ ಓದುಗರಲ್ಲಿ ಬಹುಪಾಲು ಮಹಿಳೆಯರು ಮತ್ತು ಹದಿವಯಸ್ಸಿನವರು. ಅವರಿಗೆ ರೋಮಾಂಚನ ಬೇಕು, ಥ್ರಿಲ್ ಬೇಕು ಅಷ್ಟೇ.  ಹೀಗಾಗಿ ಸೀರಿಯಸ್  ಆಗಿ ಬರೆಯಬೇಕೆಂದಿರುವ ಲೇಖಕ ಪ್ರಕಾಶನದ ಕೊರತೆಯನ್ನು ಅನುಭವಿಸುತ್ತಾನೆ. ತಾನು ಬರೆದದ್ದು ಎಲ್ಲೂ ಪ್ರಕಟವಾಗದೇ ಇದ್ದಾಗ ಆತ ಆತಂಕಗೊಂಡು ತನ್ನ ಬರವಣಿಗೆಯಲ್ಲಿ ಶಕ್ತಿ ಇಲ್ಲವೇನೋ ಎಂದುಕೊಂಡು ಬರೆಯಲಿಕ್ಕೇ ಹಿಂಜರಿಯುತ್ತಾನೆ. ಕ್ರಮೇಣ ಆತನ ಸೃಜನಶೀಲ ಮನಸ್ಸೇ ಸತ್ತು ಹೋಗುವ ಸಾಧ್ಯತೆ ಹೆಚ್ಚಾಗಿದೆ………. ಕೆಲವು ಪತ್ರಿಕೆಗಳಲ್ಲಿನ ವಿಮರ್ಶೆಗಳು ಈ ಲೇಖಕನ ವಾಕ್ಯರಚನೆ ಸರಿಯಿಲ್ಲವೆಂದೋ ಯಾವುದೋ ಮೂಲೆಯ ಸಣ್ಣ ಸಣ್ಣ ತಪ್ಪುಗಳನ್ನೇ ದೊಡ್ಡದು ಮಾಡಿ ಲೇಖಕನ ಮೂಲಸೆಲೆಯನ್ನೇ ಬತ್ತಿಸಿಬಿಡುತ್ತವೆ. ಹೀಗೆ ತಪ್ಪು ಹುಡುಕುತ್ತಿದ್ದ ಲಂಕೇಶ್ ರಂತವರೇ, ನಿಜವಾಗಿಯೂ ಕಾಗುಣಿತ ಮತ್ತು ವಾಕ್ಯರಚನೆ ಗೊತ್ತಿಲ್ಲದಂತಹವರನ್ನೂ ದೊಡ್ಡ ಸಾಹಿತಿಗಳಂತೆ ಪ್ರತಿಬಿಂಬಿಸಿದ್ದಾರೆ. ಲಂಕೇಶ್ ಬೆಳೆಸಿದ್ದ ಇಂಥ ಅನೇಕ ಪ್ರತಿಭೆಗಳು ಅವರೊಂದಿಗೇ ಸತ್ತು ಹೋದದ್ದು ಮತ್ತೊಂದು ವಿಪರ್ಯಾಸ.. ಈ ಮಧ್ಯೆ ಸಾಹಿತ್ಯದಲ್ಲೂ ಮೀಸಲಾತಿ ತಾಂಡವವಾಡುತ್ತಿದೆ. ಮಹಿಳೆ, ದಲಿತ, ಅಲ್ಪಸಂಖ್ಯಾತ, ಇಂತಿಂಥವರ ಮಗ ಮಗಳು ಅಳಿಯ ಅಥವಾ ಸೊಸೆ ಎಂಬ ಕಾರಣಕ್ಕೆ ಆಯಾ ಗುಂಪುಗಳನ್ನು ಒಲೈಸಲಾಗುತ್ತಿದೆ. ಅವರು ಬರೆಯುತ್ತಾರೆ ಎಂಬುದೇ ಮಹಾ ಸೋಜಿಗ ಎಂಬಂತೆ!!.

(೫) ಹರಿಯಪ್ಪ ಪೇಜಾವರ:- ಕೆಲವು ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಕಾವ್ಯ ಕಥೆಗಳನ್ನು ನೋಡಿದರೆ ಕನ್ನಡದಲ್ಲಿ ಹೊಸತಾಗಿ ಸಾಹಿತ್ಯ ಸೃಷ್ಟಿಸುವವರಿಗೆ ನಿರಾಶಾದಾಯಕವಾದ ಗೊಂದಲಮಯ ವಾತಾವರಣವಿದೆ ಎನಿಸುವುದು ನಿಜ. ತರುಣ ಲೇಖಕರನ್ನು ಗುರುತಿಸುವ ಇರಾದೆಯೇ ಪತ್ರಿಕೆಗಳ ಸಂಪಾದಕರಿಗೆ ಇದ್ದಂತೆ ಅನಿಸುವುದಿಲ್ಲ. ಪ್ರಖ್ಯಾತರು ಸಂತೆಗೊಂದು ಮೊಳನೆಯ್ದ ಬರಹಗಳನ್ನು ಕೂಡ ಅವರು ಪ್ರಖ್ಯಾತರು ಅನ್ನುವ ಒಂದೇ ಕಾರಣಕ್ಕೆ ಪತ್ರಿಕೆಗಳು ತಮ್ಮ ವಿಶೇಷ ಸಂಚಿಕೆ-ಪುರವಣಿಗಳಲ್ಲಿ ಪ್ರಕಟಿಸುತ್ತಾರೆ. ನಾನು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಪ್ರಖ್ಯಾತ ಪತ್ರಿಕೆಯ ಕಚೇರಿಗೆ ಹೋಗಿ ನನ್ನದೊಂದು ಕವಿತೆಯನ್ನು ಪ್ರಕಟಣೆಯ ಅವಗಾಹನೆಗಾಗಿ ಕೊಟ್ಟಾಗ ‘ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ನಿಮ್ಮ ಬರಹ ಪ್ರಕಟವಾಗಿದೆಯೇ?’ ಎಂಬ ಪ್ರಶ್ನೆ ಕೇಳಿದರು. ಇಲ್ಲ ಎಂದೆ. ಆ ಕವಿತೆ ಪ್ರಕಟವಾಗಲಿಲ್ಲ. ನಿಜವಾದ ಬರಹಗಾರರಿಗೆ ಸಲ್ಲಬೇಕಾದ ಎಲ್ಲ ಗೌರವಕೊಟ್ಟೂ ಹೇಳಬಹುದಾದ ಮಾತೆಂದರೆ ಎಂದೋ ಒಮ್ಮೆ  ‘ಜೀವಂತ’ವಾಗಿದ್ದು ಈಗ ಸತ್ತು ನಾರುತ್ತಿರುವ ಎಷ್ಟೋ ಹಿರಿಯ ಲೇಖಕರ ಕಳಪೆ ಬರಹಗಳು  ‘ಪ್ರತಿಷ್ಠಿತ’ ಅನ್ನಿಸುವ ದಿನಪತ್ರಿಕೆ , ಮಾಸಪತ್ರಿಕೆ ಮತ್ತು ಅವುಗಳ  ವಿಶೇಷ ಸಂಚಿಕೆಗಳಲ್ಲಿ ಹೆಣವಾಗಿ ತೇಲಿ ಬರುವ ಕರುಣಾಜನಕ ದೃಶ್ಯ ಕಂಡಾಗ, ನನಗೆ ಎಷ್ಟೋ ಬಾರಿ ‘ಛೆ!’ ಅನಿಸಿದ್ದಿದೆ. ಇಂಥ ಲೇಖಕರು ಈ ಸಂಪಾದಕರ ಒಳ  ವೃತ್ತದಲ್ಲಿರುವುದಕ್ಕೆ /ರಾಜಧಾನಿ ಅಥವಾ ಪ್ರತಿಷ್ಟಿತ ವಿವಿ ಕೇಂದ್ರಿತ ಸ್ಥಳಗಳಲ್ಲಿ ಇರುವುದರಿಂದಲೇ  ಹೀಗಾಗುತ್ತಿದೆಯೇ? ಅಥವಾ ಯಾವುದಾದರೊಂದು ಸಾಹಿತ್ಯಿಕ ಚಳುವಳಿ, ಪಥ, ಪಂಥಗಳ ಮಂಚೂಣಿಯಲ್ಲಿಯೋ ಸೈಡ್ ವಿಂಗ್ ಗಳಲ್ಲೋ ನಿಂತಿದ್ದು ಈಗ ಚಲಾವಣೆಯಲ್ಲಿಲ್ಲದ ಈ ಸದರಿ ಹೀರೋಗಳ ಬಗೆಗಿನ ಭ್ರಮೆ ಭಯಗಳು ಇವಕ್ಕೆ ಕಾರಣವೇ? ಅಥವಾ ಪ್ರತಿಷ್ಠಿತ ಪತ್ರಿಕೆಯ ಸಂಪಾದಕನೋರ್ವ ಜಾತಿ ಲಿಂಗ ಕೋಮುಗಳ ಆಧಾರದಲ್ಲಿ ತನ್ನ ಖಯಾಲಿಗೆ ತಕ್ಕಂತೆ ಬರೆಯುವ ಲೇಖಕ ಲೇಖಕಿಯರ ‘ಹೊಸ ಶೋಧ’ ನಡೆಸಿದಾಗ ‘ಶಂಖದಿಂದ ಬಂದದ್ದು ತೀರ್ಥ’ ಎಂಬಂತೆ ಉಳಿದ ಪತ್ರಿಕೆಗಳೂ ಇಂಥ ಲೇಖಕ ಲೇಖಕಿಯರನ್ನು ಅವಿಮರ್ಶಾತ್ಮಕವಾಗಿ ವೈಭವೀಕರಿಸುವುದರಿಂದ ಹೀಗಾಗುತ್ತಿದೆಯೇ?

ಇನ್ನು ಹೊಸ ಬರಹಗಾರರ ಬಗೆಗೆ ಹಾಲಿ ವಿಮರ್ಶಕರ ಧೋರಣೆ ಇದಕ್ಕಿಂತ ಭಿನ್ನವೇನಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ಲೇಖಕರ ಬಗೆಗೆ ಪತ್ರಿಕೆಗಳಲ್ಲಿ ಪುಟಗಟ್ಟಲೆ ವಿಮರ್ಶೆ ಮರುವಿಮರ್ಶೆ  ಮಾಡಬಲ್ಲ ಇವರು ಹೊಸ ಬರಹಗಾರರನ್ನು ಅಷ್ಟೇ ‘ಮುಕ್ತ’ವಾಗಿ ಓದಿ ವಿಮರ್ಶೆ ಮಾಡುವುದಕ್ಕೆ ಹಿಂಜರಿಯುತ್ತಾರೆ……… ಹಿರಿಯ ಬರಹಗಾರರಾದ ತೇಜಸ್ವಿ,ಅನಂತಮೂರ್ತಿ ಮುಂತಾದವರು ಇತರ ಸಾಹಿತಿಗಳಿಂದ ಪ್ರೇರಿತರಾಗಿ ಬರೆದರೆ ಅದು ‘ಮರುಸೃಷ್ಟಿ’! ಅದೇ ಹೊಸಬರಹಗಾರರದ್ದು ‘ಅನುಕರಣೆ’!

(೬) ಪಿ ಬಿ ಪ್ರಸನ್ನ:- ‘ದೊಡ್ಡ ಪ್ರತಿಭೆ’ ‘ದೈತ್ಯ ಪ್ರತಿಭೆ’ ‘ಸೃಜನಶೀಲತೆ’ ಮುಂತಾದ ಶಬ್ದಗಳನ್ನು ಹುಟ್ಟು ಹಾಕಿದ್ದು ನವೋದಯ ಮತ್ತು ನವ್ಯದವರು. ನೆಲದ ಬದಲು ಆಕಾಶ ನೋಡಲು ಯುವ ಸಾಹಿತಿಗಳಿಗೆ ಕಲಿಸಿದವರೇ ನವ್ಯದವರು. ಬಂಡಾಯ-ದಲಿತ ಚಳುವಳಿಯ ರೂಪ ತಳೆದಾಗ ಒಂದು ರೀತಿ ಖುಷಿ ಕೊಟ್ಟಿತು.. ಯಾವಾಗ ಅದರ ನೇತಾರರು ವಿವಿಧ ಸರ್ಕಾರಿ ಕೃಪಾಪೋಷಿತ ಹುದ್ದೆಗಳನ್ನು ಅಲಂಕರಿಸತೊಡಗಿದರೋ ಅಲ್ಲಿಗೆ ಬಣ್ಣ ಬಯಲಾಗತೊಡಗಿತು.  ಒಂದು ಒಳ್ಳೆಯ ಪುಸ್ತಕ ಬಂದರೆ ಆ ಬಗ್ಗೆ ವಿಮರ್ಶೆ ಸರಿಯಾಗಿ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ಒಂದೋ ಬಡಿದು ತೆಗೆಯುವ, ಜಾತ್ಯಾಧಾರಿತ ಬೈಗುಳದ ವಿಮರ್ಶೆಗಳಾದರೆ, ಕೇವಲ ಮುಖಪುಟ ಹಿಂಬದಿಯ ಪುಟಗಳನ್ನು ಗಮನಿಸಿ ನಾಲ್ಕು ಸಾಲು ಬರೆಯುವ ವಿಮರ್ಶೆ ಇನ್ನೊಂದು ಕಡೆ.  ಪತ್ರಿಕೆಗಳ ಸಂಪಾದಕರಿಗೆ ಪುಸ್ತಕ ವಿಮರ್ಶೆಯ ಪುಟ ‘ಲಾಭದಾಯಕ’ ಅಲ್ಲ…

(೭) ಎಲ್ ಜಿ  ಮೀರಾ :-

(ಅ) ಕಥೆ, ಕಾವ್ಯದ ಸೃಜನ ಕ್ಷೇತ್ರಕ್ಕಿಂತ ಅನುವಾದ, ವಿಮರ್ಶೆಗಳು ಸಾಹಿತ್ಯದ ಅರಮನೆಯನ್ನು ಪ್ರವೇಶಿಸಲು ಸಹಾಯ ಮಾಡುತ್ತವೆ.

(ಆ) ಯುವ ಲೇಖಕರ ಬಗ್ಗೆ ಹಿರಿಯ ಲೇಖಕರಲ್ಲಿ ತೀರಾ ನಿರುತ್ಸಾಹವಿಲ್ಲವಾದರೂ ಅತಿ ಉತ್ಸಾಹವೂ ಇಲ್ಲ. ಇವತ್ತಿನ ಲೇಖಕರಲ್ಲಿ ಭಾಷೆಯನ್ನು ಕುರಿತು ಶ್ರದ್ಧೆ     ಇಲ್ಲ. ಕೀರ್ತಿಯ ಆಕಾಂಕ್ಷೆ ಹೆಚ್ಚು ಎಂದು ಹಿರಿಯರು ದೂರುವುದನ್ನು ತುಂಬಾ ಕೇಳಿದ್ದೇನೆ. ಹಿರಿಯರು ಕಿರಿಯರ ಬಗ್ಗೆ ಇನ್ನಷ್ಟು ಉತ್ಸಾಹ ತೋರಿಸಬೇಕು     ಅಂತ ನನ್ನ ಅಭಿಪ್ರಾಯ.

(ಇ) ನಾಲ್ಕಾರು ಕವನಗಳನ್ನು ಹೇಗೋ ಗೀಚಿ ‘ನನ್ನದೂ ಒಂದು ಕವನ ಸಂಕಲನ ಬಂತು’ ಎಂದು ಬೀಗುವ ನನ್ನ ಕೆಲವು ಸಮಕಾಲೀನರನ್ನು ಕಂಡರೆ ಬೇಸರವಾಗುತ್ತದೆ. ಕಾವ್ಯವು ಕಾಲದ ಪರೀಕ್ಷೆಯಲ್ಲಿ ಗೆಲ್ಲಬೇಕು ಎಂದು ನಾನು ನಂಬುತ್ತೇನೆ .

(ಈ) ಕಾವ್ಯವು ಆದಷ್ಟೂ ಕಡಿಮೆ ಶಬ್ದಗಳಲ್ಲಿ ಹೆಚ್ಚಿನದನ್ನು ಹೇಳಬೇಕು. ಭಾಷೆಯು ಈವರೆಗೂ ಯಾವುದನ್ನು ಮುಟ್ಟಿಲ್ಲವೋ ಅದನ್ನು ಮುಟ್ಟಬೇಕು ಎಂದು ನನ್ನ ಭಾವನೆ. ಆದರೂ ಕಾವ್ಯದ ಅಡಿಗೆ ಮನೆಯಲ್ಲಿ ಎಲ್ಲವೂ ಎಷ್ಟು ಬೇಗ ಹಳಸುತ್ತದೆ!

ಸಂಪಾದಕರ ವಿಶ್ಲೇಷಣೆ: ತಲ್ಲಣಗಳ ಸ್ವರೂಪ: ಈ ಕೃತಿಯ ಸಂಪಾದಕರಾದ ಡಾ. ರಹಮತ್ ತರೀಕೆರೆಯವರು ತಮ್ಮ ವಿಶ್ಲೇಷಣೆಗಾಗಿ ಹೊಸತಲೆಮಾರಿನ ಲೇಖಕರು ರಚಿಸಿರುವ ಸಾಹಿತ್ಯದ ಸಾಕಷ್ಟು ವಿಸ್ತೃತ ಅಧ್ಯಯನ ಮಾಡಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯದ ಸದ್ಯದ ಪ್ರವೃತ್ತಿಗಳನ್ನು  ಅನುಭವ ಮಂಡನೆ, ಭಾಷೆಯ ಬಳಕೆ, ಪ್ರಕಾರ ಆಯ್ಕೆ, ಪರಂಪರೆ ಪ್ರಜ್ಞೆ, ಸಿದ್ಧಾಂತ ಶಂಕೆ ಮತ್ತು ಮಾಧ್ಯಮ ಸೆಳೆತ ಎಂಬ ಆರು ವಿಭಾಗಗಳಲ್ಲಿ ಉತ್ತಮವಾಗಿ ಚರ್ಚಿಸಿದ್ದಾರೆ. ಆ ಆರೂ ವಿಷಯಗಳನ್ನು ಇಡಿಯಾಗಿ ಓದಬೇಕು. ಸಂಕ್ಷೇಪಿಸುವುದು ತರವಲ್ಲ. ಆದರೆ  ಹೊಸಕನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗನಾಗಿ ನನ್ನ ಆಸಕ್ತಿಯ ವಿಷಯವಾದ ಅನುಭವ ಮಂಡನೆ, ಭಾಷೆಯ ಬಳಕೆ ಮತ್ತು ಪ್ರಕಾರ ಆಯ್ಕೆಯ ವಿಭಾಗದಲ್ಲಿ ಇರುವ ವಿಮರ್ಶೆಯ ಬಗ್ಗೆ ಮಾತ್ರ  ರಹಮತ್ ತರೀಕೆರೆ ಅವರ ವಿಶ್ಲೇಷಣೆಯನ್ನು ಸ್ವಲ್ಪದರಲ್ಲಿ ತಿಳಿಸುವ ಪ್ರಯತ್ನ ಮಾಡುತ್ತೇನೆ. .

೧. ಅನುಭವ ಮಂಡನೆ:- ಈಚೆಗೆ ಸಾಹಿತ್ಯದ ವಿಶಿಷ್ಟತೆಯನ್ನು ಗುರುತಿಸಲು, ಅದು ಹೊಸ ಅನುಭವಲೋಕವನ್ನು ಪ್ರವೇಶಗೊಳ್ಳುವಂತೆ ಮಾಡಿತು ಎಂಬುದನ್ನು, ಒಂದು ಮಾನದಂಡವೆಂಬಂತೆ ಬಳಸುವ ರೂಢಿಯಿದೆ. ಸಾಹಿತ್ಯವು ಹಾಗೆ ಹೊಸ ಹೊಸ ಅನುಭವ ಲೋಕಗಳನ್ನು ಒದಗಿಸುವ ಮಾಹಿತಿ ಮಾಧ್ಯಮವಲ್ಲ. ಸಾಹಿತ್ಯದಲ್ಲಿ ಅನುಭವದ ಹೊಸತನ-ಹಳತನಗಳು, ಪರಿಚಿತತೆ-ಅಪರಿಚಿತತೆಗಳು ಕೆಲಮಟ್ಟಿಗೆ ಮುಖ್ಯ ಸಂಗತಿಗಳಾಗಬಹುದು. ಆದರೆ ಅವು ಅಂತಿಮವಲ್ಲ…… ಬಹುಶಃ ಈ ಮಾನದಂಡವು ದಲಿತ ಮುಸ್ಲಿಂ ಮಹಿಳೆಯರ ಬರಹಗಳ ಸಂದರ್ಭದಲ್ಲಿ ಹೆಚ್ಚು ಚಾಲ್ತಿಗೆ ಬಂದಿತು. ಇದು ಕನ್ನಡದ ಓದುಗರು ಮತ್ತು ವಿಮರ್ಶಕರು ಸೇರಿ ಲೇಖಕರ ಮೇಲೆ ಹಾಕಿರುವ ವಿಚಿತ್ರ ಒತ್ತಡವಾಗಿದೆ. ಕೆಲವು ಸೈಬರ್ ಪತ್ರಿಕೆಗಳಲ್ಲಿ ಕೆಳಜಾತಿ ಮತ್ತು ಬುಡಕಟ್ಟುಗಳಿಂದ ಬಂದ ಲೇಖಕರಿಂದ ಜನಾಂಗ ವಿಶಿಷ್ಟವಾದ ‘ಹೊಸ’ ಅನುಭವಗಳನ್ನು ಕಕ್ಕಿಸಲಾಗುತ್ತಿದೆ ಎಂಬುದನ್ನು ಗಮನಿಸಬೇಕು. …….. ‘

೨. ಭಾಷೆಯ ಬಳಕೆ:- ಗ್ರಾಮೀಣ ನೆಲೆಯಿಂದ ಬಂದ ಕೆಲವು ಲೇಖಕರು, ತಮ್ಮ ವಿಶಿಷ್ಟ ಅನುಭವ ಮತ್ತು ಪ್ರಾದೇಶಿಕ ಭಾಷೆಯನ್ನು ನಾಗರಿಕ ಲೋಕದೆದುರು ಮಂಡಿಸಿ ರೋಮಾಂಚನ ಹುಟ್ಟಿಸುವ ಯತ್ನದಲ್ಲಿರುವುದು. ನಗರ ಮೂಲದ ಮಧ್ಯಮವರ್ಗದ ಓದುಗರಿಗೆ ಅವರ ಯಾಂತ್ರಿಕ ಬದುಕಿನಿಂದಾದ ಜಡತೆಯನ್ನು ತೊಡೆದು ಬೆರಗು ಹುಟ್ಟಿಸುವ ಕಾರಣಕ್ಕಾಗಿ ಬಳಸುತ್ತಿರುವುದು. ಈ ಸೆಳೆತವು ದೇವನೂರರ ಭಾಷಾ ಬಳಕೆಯನ್ನು ತಪ್ಪಾಗಿ ಗ್ರಹಿಸಿದ್ದರಿಂದ ಬಂದಿದ್ದು ಅನಿಸುತ್ತದೆ. ……… ‘

೩. ಪ್ರಕಾರ ಆಯ್ಕೆ(ವಿಮರ್ಶೆ):-  ಸಾಹಿತ್ಯ ವಿಮರ್ಶೆಗೆ ಮೇಷ್ಟರುಗಳಿಂದ ಸದ್ಯಕ್ಕೆ ಬಿಡುಗಡೆಯಿಲ್ಲವೆಂದು ತೋರುತ್ತದೆ. ಆದರೆ ಜೋಗಿಯವರು ಜಾನಕಿ ಎಂಬ ಹೆಸರಿನಲ್ಲಿ ಬರೆದಿರುವ ವಿಮರ್ಶಾತ್ಮಕ ಟಿಪ್ಪಣಿಗಳು, ಕನ್ನಡ ವಿಮರ್ಶೆಯ ಉಜ್ವಲ ಬರಹಗಳಾಗಿವೆ. ಅವುಗಳ ಸಾಹಿತ್ಯಿಕ ಸಂವೇದನೆ ಸೂಕ್ಷ್ಮವಾಗಿದೆ ಮತ್ತು ಅದರ ಹಿಂದಿನ  ವ್ಯಾಪಕ ಓದು ಪಾಂಡಿತ್ಯದ ಜಡತೆಯಾಗದೆ ಲವಲವಿಕೆಯ ಸ್ರೋತವಾಗಿದೆ.  ಇತರ ಪ್ರಕಾರಗಳಿಗೆ ಹೋಲಿಸಿದರೆ, ಹೆಚ್ಚು ಬಿಕ್ಕಟ್ಟಿನಲ್ಲಿರುವುದು ಸಾಹಿತ್ಯ ವಿಮರ್ಶೆ; ಕಾವ್ಯದಲ್ಲಿರುವಂತೆ ಇಲ್ಲಿ ಹೊಸ ಮುಖಗಳ ನುಗ್ಗು ಕಡಿಮೆ. ಇದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ. ಕನ್ನಡದ ವಿಮರ್ಶೆಗೆ ಆವರಿಸಿರುವ ಅನೇಕ ಜಡತೆ ಮತ್ತು ಇಕ್ಕಟ್ಟುಗಳಿಗೆ ಬಹುಶಃ ಮದ್ದೆಂದರೆ, ಬರಹ ಮಾಡುವ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಬರೆಯುವುದು. ವಿಮರ್ಶೆ ಮಾಡಲೆಂದೇ ಇರುವ ಒಂದು ತಜ್ಞ ವೈದ್ಯರ ಮೀಸಲು ಪಡೆಯ ಕಲ್ಪನೆಯನ್ನು ನಾಶಮಾಡುವುದು. ಆಗ ಸಾಹಿತ್ಯ ವಿಮರ್ಶೆ ಹೊಸಹೊಸ ಭಾಷೆ ಮತ್ತು ಚಿಂತನೆಯಿಂದ ಬಹುತ್ವವನ್ನು ಪಡೆಯುತ್ತದೆ. ಕೆಲವರು ಕನ್ನಡ ಸಾಹಿತ್ಯ ಪರಂಪರೆಯ ಗ್ರೇಟ್ ಮಾಸ್ಟರುಗಳನ್ನು ಓದುತ್ತಿರುವ ಬಗ್ಗೆಯೇ ಗುಮಾನಿಯಿದೆ. ಹೀಗಾಗಿ ಆಳವಾದ ಅಧ್ಯಯನ ಸಾಧ್ಯವಾಗುವ ಸಾಹಿತ್ಯ ವಿಮರ್ಶೆಯು ಹೊಸ ತಲೆಮಾರಿನವರ ಬರಹದಲ್ಲಿ ಅಷ್ಟೊಂದು ಪ್ರಿಯವಾದ ಪ್ರಕಾರವಾಗಿಲ್ಲವೋ ಏನೋ? ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಯ ಕೆಲಸವನ್ನು ಅನೇಕರು ಮಾಡುತ್ತಿರುವರು. ಆದರೆ ಇದು ವಿಮರ್ಶೆ, ಪ್ರಕಾರವನ್ನು ಬಹಳ ದೂರ ಕರೆದುಕೊಂಡು ಹೋಗುವುದಿಲ್ಲ. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ ಮುಂತಾದ ದೊಡ್ಡ ಪ್ರತಿಭೆಗಳನ್ನು ಅನುಸಂಧಾನ ಮತ್ತು ಮೌಲ್ಯಮಾಪನ ಮಾಡುವ ತನಕ ಹೊಸ ತಲೆಮಾರಿನವರ ವಿಮರ್ಶೆಗೆ ಗಟ್ಟಿಯಾಗಿ ನಿಲ್ಲಲು ನೆಲ ದಕ್ಕುವುದು ಕಷ್ಟ.

2 ಟಿಪ್ಪಣಿಗಳು Post a comment
  1. ಶೆಟ್ಟಿನಾಗ ಶೇ.
    ಏಪ್ರಿಲ್ 21 2016

    ಉತ್ತಮ ಪುಸ್ತಕವೊಂದರ ಉತ್ತಮ ಕೃತಿ ಪರಿಚಯ. ರಹಮತ ಸರ್ ಅವರಿಗೂ ಶ್ರೀರಂಗ ಅವರಿಗೂ ಧನ್ಯವಾದಗಳು.

    ಉತ್ತರ
  2. ಫೆಬ್ರ 1 2022

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments