ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 22, 2016

16

ಕನ್ನಡ ಎನೆ ಕಿವಿ ನಿಮಿರಬೇಕಿರುವುದು ಪರರದ್ದು!

‍ನಿಲುಮೆ ಮೂಲಕ

-ಸಂಕೇತ್ ಡಿ ಹೆಗಡೆ, ಸಾಗರ

images (7)ಕೋರಾ ಅಂತ ಒಂದು ಸಾಮಾಜಿಕ ಜಾಲತಾಣವಿದೆ. ಮೊನ್ನೆ ಹೀಗೆ ಜಾಲಾಡುತ್ತಿದ್ದಾಗ ಒಂದು ಭಲೇ ಬುದ್ಧಿವಂತಿಕೆಯ ಪ್ರಶ್ನೆ ಎದುರಾಯಿತು. ಪುಣ್ಯಾತ್ಮನೊಬ್ಬ ಬೆಂಗಳೂರಿನ ರಸ್ತೆಯೊಂದರ ಮೇಲೆ ಕಾರಿನಲ್ಲಿ ಕುಳಿತು ಪೋಸ್ಟ್ ಮಾಡಿದ್ದು. “ನಾನೀಗ ಬೆಂಗಳೂರಿನಲ್ಲಿದ್ದೇನೆ. ಕರ್ನಾಟಕ ಇಲ್ಲಿಂದ ಎಷ್ಟು ಕಿಲೋಮೀಟರ್ ಪ್ರಯಾಣಿಸಿದರೆ ಸಿಗುತ್ತೆ” ಅಂತ! ಹಾಗೆ ಕೇಳಿದವನ ಕಂಡು ಮತ್ತೊಬ್ಬ ಉತ್ತರ ಬರೆದಿದ್ದ. “೧೦೮ಕ್ಕೆ ಕರೆಮಾಡಿ ’ನಾನು ಬೆಂಗಳೂರಿನಲ್ಲಿದ್ದೇನೆ, ನನಗೆ ಕರ್ನಾಟಕಕ್ಕೆ ಕರೆದುಕೊಂಡುಹೋಗಿ’ ಅಂತ ಹೇಳಿ. ಅವರು ವಿಲ್ಸನ್ ಗಾರ್ಡನ್ ಅನ್ನುವ ಸ್ಥಳದಲ್ಲಿರುವ ನಿಮ್ಹಾನ್ಸ್ ಅನ್ನುವ ಕಟ್ಟಡದ ಬಳಿ ಇಳಿಸುತ್ತಾರೆ” ಅಂತ. ಇವರ ಪ್ರಶ್ನೋತ್ತರಗಳ ನೋಡಿ ಉಕ್ಕಿಬಂದ ನಗು, “ತಪ್ಪು ಅವನದಲ್ಲ” ಎಂದು ಅನಿಸಿದಾಗ ಮುಚ್ಚಿಕೊಂಡು ಹಿಂದೆಹೋಗಿಬಿಟ್ಟಿತು. ಎಂತಹ ಸ್ಥಿತಿಗೆ ಬೆಂಗಳೂರನ್ನು ತಂದಿಟ್ಟುಬಿಟ್ಟಿದ್ದೇವೆ ಅನ್ನುವುದು ನೆನಪಾಗಿ ಹೃದಯದ ಒಂದು ಮೂಲೆಯಲ್ಲಿರುವ ಭಾಷಾಭಿಮಾನಕ್ಕೆ ಅತೀವ ವೇದನೆಯಾಯಿತು. ಪಾಪ ಆ ಕಾರಿನವನದೇನು ತಪ್ಪು? ಬೆಂಗಳೂರಿನ ಗಾಳಿಯನ್ನು ಪ್ರಥಮ ಬಾರಿಗೆ ಕುಡಿಯುತ್ತಿರುವ ಯಾವನಿಗೆ ಕರ್ನಾಟಕದ “ರಾಜಧಾನಿ”ಯ ಗಾಳಿ ಕುಡಿದ ಅನುಭವವಾಗುತ್ತೆ? ಅವನೋ ಕನ್ನಡಿಗರ ನಾಡಾಗಿರುವ, ಕನ್ನಡವನ್ನು ಉಸಿರಾಗಿಸಿಕೊಂಡಿರುವ, ಕನ್ನಡತನದ ಬೀಡಾಗಿರುವ ಪ್ರದೇಶವೊಂದು ಸಿಕ್ಕಾಗ ಇಳಿದುಕೊಂಡುಬಿಡೋಣ ಅಂದುಕೊಂಡಿದ್ದ. ಅವನಿಗೇನು ಗೊತ್ತು, “ದಿಸ್ ಇಸ್ ಕರ್ನಾಟಕಾಸ್ ಕ್ಯಾಪಿಟಲ್, ಫಾರ್ ಯು” ಅಂತ. ಬೆಂಗಳೂರು ಕರ್ನಾಟಕದಲ್ಲಿದೆ, ಅದೇ ಅದರ ರಾಜಧಾನಿ ಅಂತ ಅವನಿಗೆ ಗೊತ್ತಿಲ್ಲದಿರುವ ಅವನ ಸಾಮಾನ್ಯ ಜ್ನಾನಕ್ಕೆ ವಿಷಾದಿಸೋಣ. ಆದರೆ ಅವನಿಗೆ ಬೆಂಗಳೂರಿನಲ್ಲಿದ್ದರೂ ಇದು ಕರ್ನಾಟಕವೆನ್ನುವುದು ಗೊತ್ತಾಗದ ಮಟ್ಟದಲ್ಲಿ ನಾವು ಬೆಂಗಳೂರನ್ನು ಕಾಪಾಡಿಕೊಂಡಿದ್ದೇವೆ ಎಂಬ ಕಟುವಾಸ್ತವಕ್ಕೆ, ಕೇವಲ ವಿಷಾದಿಸಿದರೆ ಸಾಕೇನು?

ಜಗತ್ತಿನಲ್ಲಿ ಹೀಬ್ರೂ ಅಂತ ಕರೆಸಿಕೊಂಡ ಭಾಷೆಯೊಂದು ಕ್ರಿಸ್ತ ಪೂರ್ವದಲ್ಲೇ ಜನಿಸಿತ್ತು. ಇಪ್ಪತ್ತನೆಯ ಶತಮಾನದ ಹೊತ್ತಿಗೆ ಅದು ಕುರುಹೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಸತ್ತು ಬಿದ್ದಿತ್ತು. ಆದರೆ ಆ ಭಾಷೆಯ ಬೆನ್ನಿಗಿದ್ದ ಏಕೈಕ ಪುಣ್ಯವೆಂದರೆ, ಅದು ಮೂಲತಃ ಯಹೂದಿಗಳ ಮಾತೃಭಾಷೆಯಾಗಿತ್ತು. ಭಾರತೀಯರದ್ದಲ್ಲ. ಇಸ್ರೇಲಿನಲ್ಲಿ ಜನಿಸಿತ್ತು, ಭಾರತದಲ್ಲಿ ಅಲ್ಲ. ಇತಿಹಾಸದಲ್ಲೇ ನಡೆದ ಯಾವುದೋ ಪರಕೀಯ ಆಕ್ರಮಣದಿಂದ, ಹೀಬ್ರೂ ಕೃಶವಾಗಿ, ಅರೇಬಿಕ್ ತಳಿಗೆ ಸೇರಿದ ಮತ್ತೊಂದು ಭಾಷೆ ಅಲ್ಲಿಯ ಆಡುಭಾಷೆಯಾಗಿಬಿಟ್ಟಿತ್ತು! ಯಾವಾಗ ಇಸ್ರೇಲ್ ಅರ್ಧ ಶತಮಾನದ ಹಿಂದೆ ಸ್ವತಂತ್ರ್ಯವಾಯಿತೋ, ಅದು ತನ್ನನ್ನು ಸಂಪೂರ್ಣವಾಗಿ ಮರುನಿರ್ಮಾಣಮಾಡಿಕೊಳ್ಳುವ ಶಪಥ ತಟ್ಟಿತು. ಆ ಶಪಥದ ಅತಿಮುಖ್ಯ ಭಾಗ, ಹೀಬ್ರೂ ಮರುನಿರ್ಮಾಣ! ಸತ್ತೇಹೋದೇ ಎನ್ನುತ್ತಿದ್ದ ಭಾಷೆ ನೋಡುನೋಡುತ್ತಾ ಪ್ರಬಲವಾಗಿಬಿಟ್ಟಿತು. ಮಾತಾಡುವವರೇ ಇಲ್ಲ ಅಂತಿದ್ದ ಭಾಷೆಗೆ ಸದೃಢ ಲಿಪಿ ಚಾಲ್ತಿಗೆ ಬಂತು. ಇಸ್ರೇಲಿನ ಮನೆಗಳ ಗೋಡೆಗಳಿಗೆ ಕಿವಿತಾಕಿದರೆ ಹೀಬ್ರೂ ಕೇಳಿಸತೊಡಗಿತು. ಇಸ್ರೇಲ್ ಸಾರ್ವಭೌಮತ್ವದ ಪ್ರದೇಶದಲ್ಲಿ ಹೀಬ್ರೂ ಅಧಿಕೃತ ಭಾಷೆ ಅನಿಸಿಕೊಂಡಿತು. ಇಸ್ರೇಲ್ ನ ರಸ್ತೆಗಳ ಅಕ್ಕಪಕ್ಕದಲ್ಲಿ, ಹೆದ್ದಾರಿಗಳ ನೆತ್ತಿನಲ್ಲಿ ಬರೆದಿಡುತ್ತಿದ್ದ ಫಲಕಗಳಲ್ಲಿ ಹೀಬ್ರೂ ರಾಜನಂತೆ ಮೆರೆಯತೊಡಗಿತು. ಒಂದು ಕಾಲದಲ್ಲಿ ಐಸಿಯುನಲ್ಲಿದ್ದ ಭಾಷೆಯಲ್ಲಿ ಅಗಾಧ ಸಾಹಿತ್ಯವೆಲ್ಲ ಹೊರಬರತೊಡಗಿತು. ಹೀಬ್ರೂ ಸಾಹಿತಿಗಳಿಗೆ ನೋಬೆಲ್ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಬರತೊಡಗಿದವು. ಪ್ರಪಂಚದಲ್ಲಿ ಅದ್ಯಾವ ಭಾಷೆಯೇ ಇರಲಿ, ಅದರಲ್ಲಿ ಅತ್ಯುತ್ತಮ ಪುಸ್ತಕಗಳು ಬಂದರೆ, ಅವು ಹೀಬ್ರೂವಿಗೆ ಅನುವಾದವಾಗತೊಡಗಿದವು! ಇಸ್ರೇಲಿ ಪುಸ್ತಕ ಮಳಿಗೆಗಳಲ್ಲಿ ಆಂಗ್ಲ-ಅರೇಬಿಕ್ ಪುಸ್ತಕಗಳೆಲ್ಲ ಒಂದೊಂದೇ ರ್ಯಾಕ್ ಹಿಂದೆ ಸರಿಯುತ್ತಾ, ಕಡೆಗೆ ಕೊನೆಯ ಹಲಗೆಯಲ್ಲೂ ಜಾಗಕಾಣದೇ ನಿರ್ಗತಿಕರಾಗಿಬಿಟ್ಟವು. ಅವು ಹಿಂದೆಸರಿದಂತೆಲ್ಲಾ ಹೀಬ್ರೂ ಹೊತ್ತಿಗೆಗಳು ಮಳಿಗೆಗಳನ್ನು ಆವರಿಸತೊಡಗಿದವು. ಯಹೂದಿಗಳು “ಹೀಬ್ರೂ ನಮ್ಮ ಉಸಿರು. ನಮಗೆ ದೇಶ ಬೇರೆಯಲ್ಲ, ಭಾಷೆ ಬೇರೆಯಲ್ಲ. ಹೀಬ್ರೂ ಇಲ್ಲದಿದ್ದರೆ ಇಸ್ರೇಲಿಗೆ ಅಸ್ತಿತ್ವವೇ ಇಲ್ಲ” ಅಂತ ಹೆಮ್ಮೆಯಿಂದ ಸಾರತೊಡಗಿದರು. ವಿಜ್ನಾನಿಗಳು, ಸಾಹಿತಿಗಳು ಪ್ರತಿಷ್ಠಿತ ವೇದಿಕೆಗಳ ಮೇಲೆ ಹೀಬ್ರೂವಿನಲ್ಲಿ ಮಾತನಾಡತೊಡಗಿರು, ಪ್ರಬಂಧಗಳನ್ನ ಮಂಡಿಸತೊಡಗಿದರು. ತಾಯಿನೆಲದಲ್ಲಿ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲೂ ಹೊರದೇಶೀಯರ ಬಗ್ಗೆ ಕಿಂಚಿತ್ತೂ ಕರುಣೆ ಇಟ್ಟುಕೊಳ್ಳದೇ, ಹೀಬ್ರೂವಿನಲ್ಲೇ ಮಾತನಾಡತೊಡಗಿದರು. ದುಭಾಷಿಗಳ ಮೂಲಕವೋ, ತಂತ್ರಜ್ನಾನದ ಮೂಲಕವೋ ಸಭಿಕರಿಗೆ ಅರ್ಥವಾಗುವಂತೆ ಮಾಡಲಾಗುತ್ತಿತ್ತು. ಆದರೆ ಹೀಬ್ರೂ ಸಭಾಂಗಣದಲ್ಲಿ ರಣರಣಿಸುತ್ತಿತ್ತು!

ಯುದ್ಧ ತಂತ್ರಜ್ನಾನದಲ್ಲಿ, ಕೃಷಿ ತಂತ್ರಜ್ನಾನದಲ್ಲಿ ಪ್ರತ್ಯಕ್ಷ ಕಂಡರೂ ನಂಬಲಾಗದಂತಹ ಸಾಧನೆಗೈದ ಅಂಗೈಯಗಲದ ದೇಶವೊಂದು, ತನ್ನ ಭಾಷಾಭಿಮಾನದಲ್ಲೂ ಜಗತ್ತಿನ ಮುಂದೊಂದು ಮಾದರಿಯಾಗಿ ನಿಂತಿತು! ನಮ್ಮ ಬೆಂಗಳೂರಿನ ಜನಸಂಖ್ಯೆ ಯಾವತ್ತೋ ಕೋಟಿಮೀರಿಬಿಟ್ಟಿದೆ. ಇಸ್ರೇಲಿಗಳು ಕೇವಲ ತೊಂಬತ್ತು ಲಕ್ಷ ಕಣ್ರೀ! ಒಂದು ಮಹಾನಗರಿಯಾಗಿ ಭಾರತದಲ್ಲೇ ಅತೀ ಹೆಚ್ಚು ಸಾಫ಼್ಟ್ವೇರ್ ಕಂಪನಿಗಳನ್ನು ಹೊಂದಿರುವ, ವಿಶ್ವದಲ್ಲೇ ಅತಿಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ಹಿರಿಮೆ ಬೆಂದಕಾಳೂರಿನದ್ದು. ಇಂಜಿನಿಯರ್ ಆಗಿ ಕೆಲಸ ಮಾಡಲು ಅಥವಾ ಅದಕ್ಕಿಂತ ಮೊದಲು ಇಂಜಿನಿಯರಿಂಗ್ ಓದಲು ಪರಭಾಷೀಯರು ತೀರಾ ಹೆಚ್ಚು ಅನ್ನುವ ಪ್ರಮಾಣದಲ್ಲಿ ಬರುತ್ತಾರೆ. ಎಷ್ಟರ ಮಟ್ಟಿಗೆ ಅಂದರೆ, ಇವತ್ತು ಬೆಂಗಳೂರಿನ ಜನಸಂಖ್ಯೆಯಲ್ಲಿ ಕನ್ನಡಿಗರ ಪಾಲು ಕೇವಲ ೪೮ ಶೇಕಡ. ಇವತ್ತು ಬೆಂಗಳೂರಿನಲ್ಲಿ ಅಲ್ಲೂಬ್ಬ ಇಲ್ಲೊಬ್ಬ ಅಂತ ಕರಕೊಂಡುಬಂದು ಒಂದು ನೂರುಜನರ ಗುಂಪು ಮಾಡಿದರೆ, ಅದರಲ್ಲಿ ೫೨ ಜನ ಪರಭಾಷೀಯರಾಗಿರುತ್ತಾರೆ! ನನ್ನದು ಅಸಹಿಷ್ಣುತೆ ಅಂತ ನೀವು ಧಾರಾಳವಾಗಿ ಅಂದುಕೊಳ್ಳಬಹುದು, ಆದರೆ ಇದು ಖಂಡಿತ ರಾಜಧಾನಿಗೆ ಆರೋಗ್ಯಪೂರ್ಣವಲ್ಲ. ನನ್ನನ್ನು ಸಾಧ್ಯವಾದರೆ ನಂಬಿ, ನನಗೆ ನನ್ನ ಕಾಲೇಜಿನಲ್ಲಿ ಕನ್ನಡ ಕಿವಿತಾಕಿದರೆ ಸಂತಸಪಡುವಂಥ, ಕನ್ನಡ ಮಾತನಾಡುವ ಪ್ರಾಧ್ಯಾಪಕರು ಕಂಡರೆ ಖುಷಿಪಡುವಂತ, ಸಭಾಂಗಣದಲ್ಲಿ ಯಾರಾದರೂ ಕನ್ನಡದಲ್ಲಿ ಭಾಷಣ ಮಾಡಿದರೆ ರೋಮಾಂಚನ ಪಟ್ಟುಕೊಳ್ಳುವಂತ ಪರಿಸ್ಥಿತಿಯಿದೆ. ನನ್ನ ಕಾಲೇಜಿನ ರಂಗಕೂಟ ಅಭ್ಯಾಸ ಸಡೆಸುವಾಗ “ನಾಟಕ ಮಾಡಿಸುವುದಾದರೆ ಇಂಗ್ಲೀಷಿನಲ್ಲಿ ಮಾಡಿಸು, ಇಲ್ಲ ಹಿಂದಿಯಲ್ಲಿ ಮಾಡಿಸು, ಬಟ್ ನಾಟ್ ಇನ್ ಕನ್ನಡ” ಅಂದರೆ ಜೀರ್ಣಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. “ಓ, ನಿಮ್ಮ ಕಾಲೇಜು ಹಂಗಾ?” ಅಂತ ನನ್ನ ಮೇಲೆ ಕರುಣೆಯನ್ನಾಗಲೀ, ಅಥವಾ ನನ್ನ ಕಾಲೇಜಿನ ಮೇಲೆ ವಿಶೇಷ ಸಿಟ್ಟನ್ನಾಗಲಿ ತೋರಿಸಬೇಡಿ. ಬೆಂಗಳೂರಿನಲ್ಲಿ ಇರುವ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳೂ ದಿಟ್ಟೋ ಹಿಂಗೇ! ಅಥವಾ ಇದಕ್ಕಿಂತ ಒಂದು ಪಾಲು ಹೆಚ್ಚೇ. ಬೆಂಗಳೂರು ಅಂತಲ್ಲ, ಕರ್ನಾಟಕದ ಇತರ ಸ್ಥಳಗಳಲ್ಲಿರುವ ಸಾಧಾರಣ ಪ್ರಸಿದ್ಧಿ ಹೊಂದಿರುವ ಕಾಲೇಜುಗಳ ಸ್ಥಿತಿಯೂ ಇದೇ. ಮೊದಲೇ ಮಲೆನಾಡು ಹುಡುಗನಾಗಿರುವ ನನಗೆ, ಇಂಥದ್ದೊಂದು ಜಗತ್ತು ಇರುತ್ತೆ ಎಂಬುದೇ ಗೊತ್ತಿರಲಿಲ್ಲ.

ಕನ್ನಡ ಚೆನ್ನಾಗೇ ಬರುವ ಯಾವುದೋ ಒಬ್ಬ ತೆಲುಗು ಹಲಗಣ್ಣನಿಗೆ ಕೋಲಾರದವನೋ, ಪಾವಗಡದವನೋ, ಬಳ್ಳಾರಿಯವನೋ ಕನ್ನಡಿಗನೊಬ್ಬ ಸಿಕ್ಕ ಅಂದಿಟ್ಟುಕೊಳ್ಳಿ. ಅವನಿಗೆ ತೆಲುಗು ಬರುತ್ತೆ ಅಂತ ತೆಲುಗುದವನಿಗೆ ಗೊತ್ತಾಗಿಹೊಗುತ್ತೆ. ಆದರೂ ಔಪಚಾರಿಕವಾಗಿ ಇರಲಿ ಅಂತ “ತೆಲ್ಗು ವಸ್ತುಂದಾ?” ಅನ್ನುತ್ತಾನೆ. ನಮ್ಮ ಕನ್ನಡದವನೂ ಎನೋ ಸಾರ್ಥಕ್ಯವನ್ನು ಕಂಡವನಂತೆ, ಆ ಕಿವಿಯಿಂದ ಹಿಡಿದು ಈ ಕಿವಿಯವರೆಗೂ ಹಲ್ಲು ಕಿರಿದು “ವಸ್ತುಂದಿ, ವಸ್ತುಂದಿ” ಅಂತ ಎಕ್ಸೈಟ್ ಮೆಂಟ್ ಅಲ್ಲಿ ಎರೆಡೆರಡು ಸಲ ಹೇಳಿಬಿಡುತ್ತಾನೆ. ಮುಗಿಯಿತು, ಇನ್ನವರು ಕನ್ನಡದಲ್ಲಿ ಯಾವಾಗಾದರೂ ಮಾತನಾಡಿಕೊಳ್ಳುತ್ತಾರೆ ಅಂತ ಕನಸು-ಮನಸಿನಲ್ಲಿಯೂ ಆಸೆ ಇಟ್ಟುಕೊಳ್ಳಬೇಡಿ. ತೆಲುಗು, ತಮಿಳು, ಹಿಂದಿ, ಇಂಗ್ಲೀಷು ಮಾತನಾಡಬಲ್ಲ ನಮ್ಮ ಕನ್ನಡಿಗ ತನ್ನ ಆಯಾ ಭಾಷೆಯ ಮಿತ್ರರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಾನೆ ಅಂತ ಮನಸ್ಸಿನಲ್ಲಿದ್ದರೆ, ಅದನ್ನೂ ಕಿತ್ತು ಹಾಕಿಬಿಡಿ. ನಾಳೆಯಿಂದ ನಗರದ ಬಿಎಂಟಿಸಿ ಬಸ್ಸುಗಳ ಕಂಡಕ್ಟರುಗಳು, ಆಟೋದವರು, ಊಬರ್, ಒಲಾಗಳ ಕನ್ನಡಿಗ ಚಾಲಕರು ತಮ್ಮ ಅನ್ಯಭಾಷೀಯ ಗ್ರಾಹಕರಿಗೆ ಕನ್ನಡದಲ್ಲೇ ಉತ್ತರಿಸಲು ಶುರು ಮಾಡಿದರೂ ಸಾಕು, ಇನ್ನೊಂದು ತಿಂಗಳಲ್ಲಿ ಉತ್ತರಭಾರತೀಯರ ಬಾಯಲ್ಲೂ ತೊದಲು ಕನ್ನಡ ನಲಿಯತೊಡಗುತ್ತದೆ.

ಇತ್ತೀಚಿಗೆ ಇಸ್ರೇಲ್ ಪ್ರವಾಸದಲ್ಲಿದ್ದ ಪತ್ರಕರ್ತರಾದ ವಿಶ್ವೇಶ್ವರ ಭಟ್ಟರ ಬರಹವೊಂದನ್ನು ಓದುತ್ತಿದ್ದೆ. ಅವರು ಇಸ್ರೇಲಿನವನೊಬ್ಬನ ಬಳಿ “ನೀವ್ಯಾಕೆ ಅಂಗಡಿಗಳ ಫಲಕಗಳನ್ನು ಹೀಬ್ರೂವಿನಲ್ಲಿ ಮಾತ್ರ ಹಾಕುತ್ತೀರಿ? ಕೆಳಗೆ ಸಣ್ಣಕೆ ಇಂಗ್ಲೀಷಿನಲ್ಲೂ ಬರೆಯಬಾರದೇ?” ಅಂತ ಕೇಳಿದರಂತೆ. ಅದಕ್ಕಾತ ” ನಾವು ಆಂಗ್ಲರಾಷ್ಟ್ರಗಳಿಗೆ ಬಂದಾಗ ನಮಗೆ ಅನುಕೂಲವಾಗುತ್ತದೆಂದು ಕೆಳಗೆ ಹೀಬ್ರೂವಿನಲ್ಲಿ ಬರೆದಿರುತ್ತೀರೇನು?” ಅಂದನಂತೆ. ಆ ಕ್ಷಣಕ್ಕೆ ಸ್ವಲ್ಪ ಅತಿಯಾಯಿತು ಅನ್ನಿಸಿದರೂ, ಮರುಕ್ಷಣ ಅವರ ಸ್ವಾಭಿಮಾನದ ಬಗ್ಗೆ ನಮಗೊಂದು ಅಭಿಮಾನ ಮೂಡುತ್ತೆ! ಭಟ್ಟರಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ನಾಲ್ಕು ಪುಸ್ತಕದಂಗಡಿಗಳಲ್ಲಿ ಕನ್ನಡ ಪುಸ್ತಕ ಸಿಗಲಿಲ್ಲವಂತೆ, ಟೆಲ್ ಅವೀವ್ ವಿಮಾನ ನಿಲ್ದಾಣದ ಮಳಿಗೆಯಲ್ಲಿ ಯಾವುದೋ ಒಂದು ಮೂಲೆಬಿದ್ದ ರ್ಯಾಕಿನಲ್ಲಿ ನಾಲ್ಕಾರು ಆಂಗ್ಲ ಪುಸ್ತಕಗಳು ಕಂಡವಂತೆ. ನಮ್ಮ ಭಾಷಾಭಿಮಾನದ ಬಗ್ಗೆ  ಒಮ್ಮೆ ಹಂಗೇ ಸುಮ್ನೇ ಯೋಚಿಸಿಕೊಳ್ಳಿ.

ಕನ್ನಡ ಉಳಿಸಲು ಅದು ಮಾಡಿ ಇದು ಮಾಡಿ ಅನ್ನುವ ಸಲುವಾಗಿ ಈ ಬರಹವನ್ನು ಬರೆಯುತ್ತಿಲ್ಲ. ಇದನ್ನೋದಿದ ಮೇಲೆ ನಮ್ಮೊಳಗಿನ ಕನ್ನಡ ಪ್ರೀತಿ ಎದ್ದರೆ, ಕನ್ನಡವ ಪೋಷಿಸಲು ಸಹಕಾರಿಯಾದರೆ ಬರಹದ ಆಶಯ ಪೂರ್ಣವಾದೀತು. ಯಾರೋ ಬರೆದ ಮಾತ್ರಕ್ಕೆ, ಅಥವಾ ಭಾಷಣ ಬಿಗಿದ ಮಾತ್ರಕ್ಕೆ, ಅದು ಕಾರ್ಯರೂಪಕ್ಕೆ ಬಂದುಬಿಡುವುದಿಲ್ಲ. ಅಥವಾ ಸರ್ಕಾರ ಅದೇನೋ ಕಾನೂನು ತಂದು ಕನ್ನಡವ ಎತ್ತಿನಿಲ್ಲಿಸಲು ಸಾಧ್ಯವಾಗುವುದಿಲ್ಲ! ಸಾಮಾನ್ಯಾತಿ ಸಾಮಾನ್ಯರು ನಿಶ್ಚಯಿಸಿ ತಮ್ಮ ದೈನಂದಿನ ಜೀವನದಲ್ಲಿ ಕನ್ನಡಕ್ಕೆ ಒತ್ತುಕೊಟ್ಟರೆ ಸಾಕು. ಅನ್ಯಭಾಷೀಯರ ಜೊತೆ ಮಾತನಾಡುವಾಗ ಸಾಧ್ಯವಾದಷ್ಟು ಕನ್ನಡ ಬಳಸಿ. ಅವರಿಗೆ ಅರ್ಥಮಾಡಿಸಲೋಸುಗ ಮಧ್ಯೆ ಸ್ವಲ್ಪವೇ ಇಂಗ್ಲೀಷಿನದ್ದೋ, ಹಿಂದಿಯದ್ದೋ ಪದ ಟಂಕಿಸಿ ಅಷ್ಟೇ. ವೇದಿಕೆಗಳ ಮೇಲೆ ಕನ್ನಡದಲ್ಲಿ ಮಾತಾಡಿ. ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸಿ. ಕನ್ನಡ ಬರದವರ ಜೊತೆಯೂ ಕನ್ನಡ ಕಲಿಸುವ ನೆಪದಲ್ಲಿ ನಯವಾಗಿ ಸಾಧ್ಯವಾದಷ್ಟು ಕನ್ನಡದಲ್ಲಿ ವ್ಯವಹರಿಸಿ. ವಾಸ್ತವದಲ್ಲಿ ಕನ್ನಡ ಕಲಿಸುತ್ತೇನೆ ಬಾ ಅಂದರೆ ಅನೇಕ ಉತ್ತರ ಭಾರತೀಯರು ಆಸಕ್ತಿ ತೋರಿಸುತ್ತಾರೆ. “ಭಾಷೆಯೋದನ್ನು ಕಲಿಯಬೇಕಾದರೆ, ಮತ್ತೊಂದು ಭಾಷೆಯ ಸಹಕಾರ ಪಡೆಯಬಾರದು, ನಾವು ಮಗುವಾಗಿದ್ದಾಗ ಮಾತೃಭಾಷೆ ಕಲಿಯಬೇಕಾದರೆ ಯಾವುದಾದರೂ ಭಾಷೆಯ ಸಹಾಯ ಪಡೆದಿದ್ದೆವಾ?” ಅಂತ ನಮ್ಮ ಸಂಸ್ಕೃತ ಮೇಷ್ಟ್ರು ಹೇಳುತ್ತಿದ್ದರು. ಸುತ್ತಲಿನ ವಾತಾವರಣವನ್ನು ಕನ್ನಡಮಯಮಾಡಿಬಿಟ್ಟರೆ, ಪರಭಾಷೀಯರು ಬಹಳ ಬೇಗ ಕಲಿತುಬಿಡುತ್ತಾರೆ. ನಮ್ಮ ರಾಜಧಾನಿಯಲ್ಲಿ ಹೆಸರಿಗಷ್ಟೇ ಕನ್ನಡ ಅಧಿಕೃತ ಭಾಷೆ. ಎಷ್ಟೋ ಕಛೇರಿಗಳಲ್ಲಿ ನಡೆಯುವುದು ಬೇರೆ ಭಾಷೆ! ನಾವು ಏನನ್ನು ನಿರ್ಧರಿಸಿದ್ದೇವೋ ಅದನ್ನು ಜಾರಿಗೆ ತರಬೇಕು. ಕಡತಗಳಲ್ಲಿನ ಆಫೀಷಿಯಲ್ ಲಾಂಗ್ವೇಜ್ ಪಟ್ಟ ಕೆಲಸಕ್ಕೆ ಬರುವುದಿಲ್ಲ. ಕಛೇರಿಗಳಲ್ಲಿ ವ್ಯವಹಾರ ಕನ್ನಡದಲ್ಲಿ ನಡೆಯಬೇಕು. ಪಾನ್ ಅಂಗಡಿಯಿಂದ ಹಿಡಿದು ಲೀಲಾ ಪ್ಯಾಲೇಸ್ ವರೆಗೆ ನಾಮಫಲಕಗಳು ಮೊದಲು ದೊಡ್ಡಕ್ಷರಗಳಲ್ಲಿ ಕನ್ನಡದಲ್ಲಿರಬೇಕು. ಬಿಎಂಟಿಸಿ ಬಸ್ಸಿನ ಫಲಕಗಳಲ್ಲಿ ಮೊದಲು ಕನ್ನಡಾಕ್ಷರಗಳು ಹಾದುಹೋಗಬೇಕು. ರಸ್ತೆ ಸೂಚಿಸುವ ಫಲಕಗಳು, ಜಾಹೀರಾತು ಫಲಕಗಳು ಕನ್ನಡದಲ್ಲಿ ಎದ್ದು ನಿಲ್ಲಬೇಕು. ಕಾರ್ಪೋರೇಟ್ ಜಗತ್ತಿನಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಕನ್ನಡಕ್ಕೊಂದು ಅತ್ಯುನ್ನತ ಸ್ಥಾನವನ್ನು ಒದಗಿಸಿಕೊಡಬೇಕು. ಜರ್ಮನಿ, ಫ್ರಾನ್ಸ್ ಗಳ ಮಾದರಿಯಲ್ಲಿ ಇಲ್ಲಿ ಕಲಿಯಲು, ದುಡಿಯಲು ಬಯಸುವವರಿಗೆ ಕನ್ನಡದ ಮೂಲಭೂತ ಜ್ನಾನವಾದರೂ ಇದೆಯಾ ಅಂತ ಪರೀಕ್ಷಿಸಿ ಒಳಬಿಟ್ಟುಕೊಳ್ಳಬೇಕು. ಅತೀಮುಖ್ಯವಾಗಿ ಕನ್ನಡ ಮಾತನಾಡುವುದು ಸ್ಥಾನಕ್ಕೆ ಧಕ್ಕೆ ಅನ್ನುವ ವಿಕೃತ ಕೀಳರಿಮೆಯನ್ನು ತೊಲಗಿಸಿಹಾಕಬೇಕು. ಕನ್ನಡ ಭಾಷಾಭಿಮಾನವನ್ನು ಆತ್ಮಸಾಕ್ಷಿಯ ಮುಂದಿಟ್ಟುಕೊಂಡು ಸ್ವಲ್ಪ ಹೊತ್ತು ಕನ್ನಡವ ಪೋಷಿಸುವುದು ಹೇಗೆಂದು ಯೋಚಿಸಿ, ಅಳವಡಿಸಿ. ನಾವು ಬದಲಿಸಬಹುದು, ಪರಿಸ್ಥಿತಿಯನ್ನ, ಒಂದು ದಿನ.

ಭಾಷೆಯ ಜನನದ ಮೂಲಭೂತ ಉದ್ದೇಶ ಸಂವಹನವಷ್ಟೇ ಇರಬಹುದು. ಭಾಷೆ ಬೆಳೆದು ಗಟ್ಟಿಯಾಗಿ ತಳವೂರಿ ನಿಂತಾಗ, ಅದು ಶಬ್ದಪುಂಜವಾಗಷ್ಟೇ ಉಳಿಯುವುದಿಲ್ಲ. ನಾಗರೀಕತೆ ಮತ್ತು ಭಾಷೆಯ ನಡುವೆ ಅವಿನಾಭಾವವಾದ ಸಂಬಂಧವೊಂದು ಬೆಳೆದುಬಿಟ್ಟಿರುತ್ತೆ. ಭಾಷೆ ನಮಗೆ ಅನ್ನ ಕೊಟ್ಟಿದೆ. ಜನಾಂಗವೊಂದರ ನಿಜವಾದ ಅಸ್ಮಿತೆ ಅಂದರೆ, ಅದು ಮಾತನಾಡುವ ಭಾಷೆ. ಇದು ಅನ್ಯಭಾಷೀಯರ ಬಗ್ಗೆ ಅಸಹಿಷ್ಣುತೆಯ ಆಂದೋಲನವಲ್ಲ. ಅವರಿಗೆ ಒಂದು ಹಿಡಿ ಹೆಚ್ಚು ಪ್ರೀತಿ ತೋರಿಸೇ ನಮ್ಮ ಹೆಮ್ಮೆಯ ಭಾಷೆಯನ್ನು ಕಲಿಸುವ ಆಶಯ. ಮೂರನೇ ಅತೀ ಪ್ರಾಚೀನವಾದ ಭಾಷೆ ಆನಿಸಿಕೊಂಡ ನಮ್ಮ ಮಾತೃಭಾಷೆಯನ್ನು ಉಳಿಸುವ ಕೈಂಕರ್ಯ! ಧನ್ಯವಾದ.

16 ಟಿಪ್ಪಣಿಗಳು Post a comment
  1. ಏಪ್ರಿಲ್ 22 2016

    ನಿಮ್ಮ ಬರಹ ಅತ್ಯಂತ ಸಮಪ೯ಕವಾಗಿದೆ. ನಿಮಗೆ ಒಂದು ವಿಷಯ ಗಮನಕ್ಕೆ ತರಲು ಬಯಸುತ್ತೇನೆ.
    ನಮ್ಮ ಹವ್ಯಕ ಭಾಷೆನೂ ಕನ್ನಡವೆ. ಮೊದಲೆ ನಮ್ಮ ಹವ್ಯಕ ಸಂತತಿ ಕಡಿಮೆ ಆಗುತ್ತಿದೆ. ಇರೊ ಹವ್ಯಕರೆಲ್ಲರು ಇದೆ ಭಾಷೆ ಮಾತಾಡುತ್ತಿರುವರೆ? ಎಷ್ಟೋ ಜನ ವಿದೇಶದಲ್ಲಿ ನೆಲೆಸಿದ್ದಾರೆ ನಮ್ಮ ಹವ್ಯಕರು. ಅವರಲ್ಲಿ ಯಾವ ಭಾಷೆ ಮಾತನಾಡುತ್ತಿದ್ದಾರೆ? ಅವರ ಮಕ್ಕಳಿಗೆ ಯಾಕೆ ಎಲ್ಲೊ ಕೆಲವರು ಬಿಟ್ಟರೆ ಕನ್ನಡ ಯಾಕೆ ಮಾತನಾಡಲು ಕಲಿಸುತ್ತಿಲ್ಲ? ಅದಿರಲಿ ಈಗ ಪೇಟೆ ಸೇರಿರೊ ಹುಡುಗ ಹುಡುಗಿಯರು ಕನ್ನಡದವರೆ ಆದರೂ ಯಾಕೆ ಕನ್ನಡ ಮಾತಾಡದೆ ಜಾಸ್ತಿ ಇಂಗ್ಲೀಷ್ ಅಥವಾ ಗೆಳೆಯರ ಭಾಷೆ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ? ನಮ್ಮ ಆಚರಣೆ ಸಂಪ್ರದಾಯ ಇಲ್ಲಿರಲಿ ಅಥವಾ ಬೇರೆ ದೇಶದಲ್ಲೆ ಇರಲಿ ಯಾಕೆ ಕಲಿಸುತ್ತಿಲ್ಲ? ಯಾಕೆ ಭಾಷೆ ಬಗ್ಗೆ ಕೀಳರಿಮೆ? ಕೇವಲ ಕನ್ನಡದಲ್ಲಿ ಮಾತ್ರ ಬರೆಯಬಲ್ಲ ನನ್ನಂಥವಳಿಗೆ ಇವೆಲ್ಲ ಯೋಚಿಸಿದಾಗ ಬರೆಯುವುದನ್ನೇ ನಿಲ್ಲಿಸಿಬಿಡೋಣ ಅನ್ನುವಷ್ಟು ದುಃಖವಾಗುತ್ತದೆ. ಸಂತತಿ ಮುಂದುವರೆದಂತೆ ಕನ್ನಡ ಭಾಷೆ, ಬರಹಗಳ ಗತಿ ಏನು ಅಂತ ಯೋಚನೆಯಾಗುತ್ತಿದೆ.

    ಉತ್ತರ
    • ಏಪ್ರಿಲ್ 22 2016

      ಹವ್ಯಕ ಭಾಷೆಯೂ ಖಂಡಿತ ಕನ್ನಡವೇ. ತುಳು ಅಥವಾ ಕೊಡವದಂತೆ ಹತ್ತಿರ ಸಂಬಂಧದ ಭಾಷೆ ಕೂಡ ಅಲ್ಲ. ಚೂರೆ ಬದಲಾವಣೆಯಿರುವ ಯಥಾವತ್ ಕನ್ನಡವೇ. ” ಕರೆ ಹೇಳವು ಅಂದರೆ, ನಂಗಳ ಭಾಷೆ ಹೊಸಗನ್ನಡಕ್ಕಿಂತ ಮುಂಚೇದು 🙂 “! ಹಳಗನ್ನಡದ ಹತ್ತಿರ ಸಂಬಂಧಿ. ಮಕ್ಕಳಿಗೆ ಹವಿಗನ್ನಡ ಕಲಿಸದ, ಮನೆಯಲ್ಲಿ ಅದನ್ನು ಮಾತನಾಡದ ಹವ್ಯಕರ ಬಗ್ಗೆ ಅಸಮಧಾನವನ್ನು ನಾನು ಖಂಡಿತ ಬೆಂಬಲಿಸುತ್ತೇನೆ. ಹವಿಗನ್ನಡ ಹೋಗ್ಲಿ, ಕನ್ನಡನಾದ್ರೂ ಕಲಿಸ್ರೋ ಅಂದ್ರೆ, ತೊದಲುವ ಪುಟಾಣಿಗಳ ಬಾಯಲ್ಲಿ ಇಂಗ್ಲೀಷ್ ತುಂಬ್ತಾರ್ರೀ!

      ಉತ್ತರ
      • ಏಪ್ರಿಲ್ 23 2016

        ಸರ್ ಫೇಸ್ ಬುಕ್ನಲ್ಲಿ ಕನ್ನಡ ಅಕ್ಷರ ಎಂತಕ್ಕೆ ಅಷ್ಟು ತಪ್ಪಾಗಿರ್ತು. ಗಮನಿಸಿ ಬರಿರಿ ಒಂದು ಒಕ್ಕಣೆ.

        ಉತ್ತರ
        • ಏಪ್ರಿಲ್ 23 2016

          ಅರ್ಥ ಆಜಿಲ್ಲೆ ಮೇಡಂ, ನೀವು ಎಂತ ಹೇಳಿದ್ರಿ ಹೇಳಿ. ಫೇಸ್ಬುಕ್ ನಲ್ಲಿ ಎಂತ ತಪ್ಪಾಗಿರ್ತು?

          ಉತ್ತರ
          • ಏಪ್ರಿಲ್ 23 2016

            ಅಲ್ಲಿ ಕನ್ನಡ ಟೈಪಿಂಗ ತಪ್ಪಾಗಿರ್ತು. ಉದಾ: ಇಲ್ಲ- ಇಲ್ಲ

            ಉತ್ತರ
          • ಏಪ್ರಿಲ್ 23 2016

            ಎಲ್ ಲಾ ಪುಟಗಳನ್ ನು ನೋಡಿ ಹೀಗೆ ಒತ್ತಕ್ಷರಗಳ ತಪ್ಪು ಬರಹ ತುಂಬಾ ಇದೆ

            ಉತ್ತರ
            • ಏಪ್ರಿಲ್ 24 2016

              ಫೇಸ್ ಬುಕ್ ಕನ್ನಡ ವರ್ಷನ್ ಬಗ್ಗೆ ಹೇಳ್ತಾ ಇದ್ರ?

              ಉತ್ತರ
              • ಏಪ್ರಿಲ್ 24 2016

                ಹೌದು. ಗೂಗಲ್ ಟ್ರಾನ್ನ್ಸೇಷನ್ ತಪ್ಪಾ ಹೆಂಗೆ?

                ಉತ್ತರ
                • ಏಪ್ರಿಲ್ 24 2016

                  ಗೂಗಲ್ ಟ್ರಾನ್ಸ್ ಲೇಟರ್ ಗೆ ಕನ್ನಡ ವಾಕ್ಯಗಳನ್ನೆಲ್ಲ ಟ್ರಾನ್ಸ್ ಲೇಟ್ ಮಾಡಲೇ ಬತ್ತಿಲ್ಲೆ. ಒಂದು ಪದ ಕೊಟ್ರೆ ಸುಮಾರಿಗೆ ಮಾಡ್ಗು. ಫೇಸ್ ಬುಕ್ ಕನ್ನಡ ವರ್ಷನ್ ಬಗ್ಗೆ ನಂಗೆ ಗೊತ್ತಿಲ್ಲೆ. ಸಾಧ್ಯವಾದ್ರೆ Report a problem ಅಥವಾ Feedback ಅಲ್ಲಿ ಅವ್ಕೆ ದೂರು ಕೊಟ್ಟು ಪ್ರಯತ್ನಿಸಿ.

                  ಉತ್ತರ
  2. Goutham
    ಏಪ್ರಿಲ್ 22 2016

    ಉತ್ತಮ ಬರಹ. ಅಭಿನಂದನೆಗಳು

    ಉತ್ತರ
    • ಏಪ್ರಿಲ್ 23 2016

      ಮೊದಲ ಬಾರಿಗೆ ನನ್ನ ಬರಹವನ್ನು ಮೆಚ್ಚಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು :):)

      ಉತ್ತರ
  3. harisha
    ಏಪ್ರಿಲ್ 23 2016

    ಸಂಕೇತ್, ಉತ್ತಮವಾದ ಲೇಖನ.
    “ಸಾಮಾನ್ಯಾತಿ ಸಾಮಾನ್ಯರು ನಿಶ್ಚಯಿಸಿ ತಮ್ಮ ದೈನಂದಿನ ಜೀವನದಲ್ಲಿ ಕನ್ನಡಕ್ಕೆ ಒತ್ತುಕೊಟ್ಟರೆ ಸಾಕು. ಅನ್ಯಭಾಷೀಯರ ಜೊತೆ ಮಾತನಾಡುವಾಗ ಸಾಧ್ಯವಾದಷ್ಟು ಕನ್ನಡ ಬಳಸಿ”. ನಾವೆಲ್ಲರೂ ಇಷ್ಟು ಮಾಡಿದರೆ ಸಾಕು, ನಮ್ಮ ಮಾತೃಭಾಷೆ ಬೆಳವಣಿಗೆ ಕಾಣುತ್ತದೆ. ದಯವಿಟ್ಟು ಮತ್ತಷ್ಟು ಲೇಖನಗಳು ನಿಮ್ಮಿಂದ ಮೂಡಿಬರಲಿ.
    ಧನ್ಯವಾದಗಳು,
    ಹರೀಶ, ಮೈಸೂರು

    ಉತ್ತರ
    • ಏಪ್ರಿಲ್ 23 2016

      ನನ್ನ blog sphatikamatu.blogspot.in ಗೆ ಭೇಟಿ ಕೊಡಿ. ನಾನು ಬರೆದಿದ್ದೆಲ್ಲ ಲಭ್ಯವಿರುತ್ತೆ. ಧನ್ಯವಾದಗಳು 🙂

      ಉತ್ತರ
  4. Pradyumna K S
    ಏಪ್ರಿಲ್ 23 2016

    Kanndadigas in bengaluru will never leave kannada. The outsiders are main reason. Outsiders who are staying in Bengaluru and govt officers from other states for long time should learn kannada. In our college also some bilingual students who know kannada and telugu or tamil or malyalam or hindi or tulu or konkani will talk with other bilingual person same as him in other language, but not in kannada even though they are kannadigas. I think they want to showoff infront of others.

    ****I could have commented in kannada. But I have difficulty in typing kannada in Nudi.

    ಉತ್ತರ
    • ಏಪ್ರಿಲ್ 26 2016

      I disagree. Any language is killed by the neglect of its own people.

      ಉತ್ತರ
      • ಏಪ್ರಿಲ್ 27 2016

        Really? ನಾವೂ ಅದನ್ನೇ ಬರೆದಿದ್ದು.ಸ್ವಲ್ಪ ಕರೆಕ್ಟಾಗಿ ಓದಿ ಸರ್.

        ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments