ಮನುಷ್ಯನಾಗುವುದೆಂದರೇನು?
-ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಮೊನ್ನೆ ನನ್ನೂರಿನ ಆ ಹಳ್ಳಿಗೆ ಹೋಗಿದ್ದೆ. ಊರ ಹೆಬ್ಬಾಗಿಲಲ್ಲಿ ಪರಿಚಿತರೋರ್ವರು ಭೇಟಿಯಾದರು. ಅದು ಇದು ಮಾತನಾಡುತ್ತ ತಮ್ಮ ಅಣ್ಣನ ಮಗನಿಗೆ ಸರ್ಕಾರಿ ಕೆಲಸ ಸಿಕ್ಕ ವಿಷಯ ತಿಳಿಸಿದರು. ವಿಷಯ ಕೇಳಿ ತುಂಬ ಸಂತೋಷವಾಯಿತು. ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಹುಡುಗ ಪರಿಶ್ರಮ ಪಟ್ಟು ಓದಿ ಡಿಪ್ಲೋಮ ಡಿಗ್ರಿ ಸಂಪಾದಿಸಿದ್ದ. ಆತನ ಅರ್ಹತೆಗೆ ತಕ್ಕುದಾದ ಹುದ್ದೆ ಲೋಕೋಪಯೋಗಿ ಇಲಾಖೆಯಲ್ಲಿ ಲಭಿಸಿತ್ತು. ನನ್ನ ಪರಿಚಿತರು ತಮ್ಮ ಅಣ್ಣನ ಮಗನ ಕುರಿತು ಅಭಿಮಾನದಿಂದ ಮಾತನಾಡಿದರು. `ನೋಡ್ರಿ ಅವ್ನಿಗಿ ಭಾಳ ಛಲೋ ಡಿಪಾರ್ಟ್ಮೆಂಟ್ ಸಿಕ್ಕಾದ. ಇನ್ನ ಮುಂದ ಅವ್ನಿಗಿ ಯಾರೂ ಹಿಡಿಯೋ ಹಂಗಿಲ್ಲ. ಯಾಕಂದ್ರ ಮುಂದ ಸುರಿಯೋದೆಲ್ಲ ರೊಕ್ಕದ ಮಳಿನಾ. ಬ್ಯಾಡ ಅಂದ್ರೂ ಮಂದಿ ಮನಿಗಿ ಬಂದು ರೊಕ್ಕ ಕೊಡ್ತಾರ. ರೊಕ್ಕ ಎಣಿಸಾಕ ಅಂವ ಒಂದು ಆಳ ಇಟ್ಕೊಬೇಕಾಗ್ತದ. ಎರ್ಡ ವರ್ಷದಾಗ ಅಂವ ಹ್ಯಾಂಗ ಮನಷ್ಯಾ ಆಗ್ತಾನ ನೋಡ್ರಿ’ ಒಂದು ಕ್ಷಣ ಕಾಲ ಸ್ತಬ್ಧವಾದಂತಾಯಿತು. ಹಾಗಾದರೆ ಅವರ ದೃಷ್ಟಿಯಲ್ಲಿ ಮನುಷ್ಯನಾಗುವುದೆಂದರೇನು. ಸರ್ಕಾರಿ ನೌಕರಿಗೆ ಸೇರಿ ಲಂಚ ಹೊಡೆಯುತ್ತ, ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುತ್ತ ಐಷಾರಾಮಿ ಬದುಕು ನಡೆಸುವಾತನೇ ನಿಜವಾದ ಮನುಷ್ಯ ಎನ್ನುವ ಅವರ ಯೋಚನಾ ಲಹರಿ ಅರೇ ಕ್ಷಣ ನನ್ನನ್ನು ನಾನು ಯಾರು? ಎನ್ನುವ ಯೋಚನೆಗೆ ಹಚ್ಚಿತು. ಒಂದಿಷ್ಟು ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆಯ ನೆರಳಲ್ಲಿ ಬದುಕು ನೂಕುತ್ತಿರುವ ಜನ ಮನುಷ್ಯರೇ ಅಲ್ಲ ಎನ್ನುವ ಅಭಿಪ್ರಾಯ ಅವರ ಮಾತಿನುದ್ದಕ್ಕೂ ಇಣುಕುತ್ತಿತ್ತು.
ಈ ಮೇಲಿನ ಪರಿಚಿತರು ಹೇಳಿದ ರೀತಿಯಲ್ಲಿ ಮನುಷ್ಯರಾಗುವ ಧಾವಂತಕ್ಕೆ ಕಟ್ಟು ಬಿದ್ದ ವಿದ್ಯಾವಂತರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸರ್ಕಾರಿ ಕೆಲಸವನ್ನು ಆಶ್ರಯಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಕಡಿಮೆ ಕೆಲಸ, ಅಧಿಕ ಸಂಬಳ, ವಿಶೇಷ ಸೌಲಭ್ಯಗಳು, ಆದಾಯದ ಅನೇಕ ಮೂಲಗಳು ಈ ಎಲ್ಲ ಕಾರಣಗಳಿಂದ ಸರ್ಕಾರಿ ಉದ್ಯೋಗಕ್ಕೆ ಸೇರುವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇವರ ದೃಷ್ಟಿಯಲ್ಲಿ ಸರ್ಕಾರಿ ನೌಕರಿ ಎಂದರೆ ಅದು ಸಾರ್ವಜನಿಕ ಸೇವೆಯಲ್ಲ. ಆ ಹುದ್ದೆಯ ಮೂಲಕ ಅಪಾರ ಸಂಪತ್ತು ಗಳಿಸಿ ಸಮಾಜದ ದೃಷ್ಟಿಯಲ್ಲಿ ಮನುಷ್ಯರೆಂದು ಕರೆಯಿಸಿಕೊಳ್ಳುವ ತುಡಿತ. ಸರ್ಕಾರಿ ಇಲಾಖೆಯಲ್ಲಿ ನೌಕರಿ ದೊರೆತರೆ ಜೀವನ ಪಾವನವಾದಂತೆ. ಸರ್ಕಾರಿ ಹುದ್ದೆಯ ನೇಮಕಾತಿಗಾಗಿ ಲಕ್ಷಾಂತರ ರೂಪಾಯಿಗಳ ಬಕ್ಷೀಸು ನೀಡಿ ಜೊತೆಗೆ ನಿರ್ಧಿಷ್ಟ ಇಲಾಖೆಗೆ ಸೇರಲು ಒಂದಿಷ್ಟು ಕೈ ಬೆಚ್ಚಗೆ ಮಾಡಿ ಆಯಕಟ್ಟಿನ ಜಾಗದಲ್ಲಿ ಕುಳಿತರೆ ಭವಿಷ್ಯ ಬಂಗಾರವಾದಂತೆ. ಹೀಗೆ ಲಕ್ಷಾಂತರ ರೂಪಾಯಿಗಳನ್ನು ಸುರಿದು ಸರ್ಕಾರಿ ಕೆಲಸಕ್ಕೆ ಸೇರುವ ನಮ್ಮ ವಿದ್ಯಾವಂತ ಯುವಕರು ಅದಕ್ಕೆ ನೂರರಷ್ಟು ಸಂಪತ್ತನ್ನು ಕೊಳ್ಳೆ ಹೊಡೆಯುವರು. ಲೋಕಾಯುಕ್ತರು ದಾಳಿ ಮಾಡಿದಾಗ ಗುಮಾಸ್ತನೋರ್ವನ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೇಜಿಗಟ್ಟಲೇ ಚಿನ್ನ, ಬೆಳ್ಳಿ ದೊರೆಯುತ್ತದೆ. ಸರ್ಕಾರಿ ನೌಕರಿ ದೆಸೆಯಿಂದ ಅಕ್ರಮವಾಗಿ ಸಂಪತ್ತು ಗಳಿಸುವುದು ನಮ್ಮ ವಿದ್ಯಾವಂತ ನಾಗರಿಕರಿಗೆ ತಪ್ಪಾಗಿ ಕಾಣಿಸುವುದಿಲ್ಲ.
ಆತನೊಬ್ಬ ಸಾಹಿತ್ಯದ ಪರಮಭಕ್ತ. ತನ್ನ ಕಾಲೇಜು ದಿನಗಳಲ್ಲಿ ಅನ್ಯಾಯ, ಅಕ್ರಮ, ಅನೀತಿಯನ್ನು ಉಗ್ರವಾಗಿ ಖಂಡಿಸುತ್ತ ಸಾಹಿತ್ಯ ರಚಿಸುತ್ತಿದ್ದ. ಊರೂರು ಅಲೆಯುತ್ತ ಜನರ ಮನಸ್ಸಿನಲ್ಲಿ ಬಂಡಾಯದ ಬೀಜ ಬಿತ್ತುತ್ತಿದ್ದ. ದೇಹಕ್ಕೆ ವಯಸ್ಸಾದಂತೆ ಆತನ ಮನಸ್ಸೂ ಪಕ್ವಗೊಂಡಿದೆ. ಸಾಹಿತ್ಯ ಸಮಾಜ ತಿದ್ದುವುದಕ್ಕಲ್ಲ ಎಂದು ಅರ್ಥ ಮಾಡಿಕೊಂಡವನಂತೆ ವರ್ತಿಸುತ್ತಿದ್ದಾನೆ. ಬರವಣಿಗೆಯಿಂದಲೂ ಸಂಪತ್ತು ಗಳಿಸಬಹುದೆಂದು ತೋರಿಸಿ ಕೊಟ್ಟಿದ್ದಾನೆ. ಹೊಡಿ ಬಡಿ ಎಂದು ಬರೆಯುತ್ತಿದ್ದವನು ಈಗ ವ್ಯವಸ್ಥೆಯನ್ನೇ ಹೊಗಳಲು ಪ್ರಾರಂಭಿಸಿದ್ದಾನೆ. ದಿನದ ಹೆಚ್ಚಿನ ಸಮಯ ಶ್ರೀಮಂತ ಕುಳಗಳ ಇಲ್ಲವೆ ರಾಜಕಾರಣಿಗಳ ಸಹವಾಸದಲ್ಲಿ ಕಳೆಯುತ್ತಿರುವಾತ ಒಂದರ್ಥದಲ್ಲಿ ಆಸ್ಥಾನದ ಹೊಗಳು ಭಟ್ಟನಾಗಿ ತನ್ನನ್ನು ತಾನು ಬದಲಾಯಿಸಿಕೊಂಡಿದ್ದಾನೆಂದರೂ ಅಡ್ಡಿಯಿಲ್ಲ. ಪ್ರಶಸ್ತಿ, ಗೌರವಗಳೆಂದರೆ ಮಾರು ದೂರ ಸರಿದು ನಿಲ್ಲುತ್ತಿದ್ದವನ ಮನೆಯ ಷೋಕೇಸಿನಲ್ಲಿ ಈಗ ಹಲವಾರು ಪ್ರಶಸ್ತಿ ಫಲಕಗಳು ರಾರಾಜಿಸುತ್ತಿವೆ. ಅಕಾಡೆಮಿಗಳ ಸದಸ್ಯತ್ವಕ್ಕಾಗಿ, ಸಮ್ಮೇಳನದ ಅಧ್ಯಕ್ಷಗಿರಿಗಾಗಿ ದಿನಗಟ್ಟಲೇ ಪ್ರಭಾವಿಗಳ ಎದುರು ಕೈ ಕಟ್ಟಿ ನಿಲ್ಲುತ್ತಾನೆ.
ಈ ಮನುಷ್ಯನಾಗಬೇಕೆನ್ನುವ ಮೋಹ ನನ್ನೂರಿನ ಅನಕ್ಷರಸ್ಥ ರುಕ್ಮ್ಯಾನನ್ನೂ ಕಾಡದೇ ಬಿಟ್ಟಿಲ್ಲ. ಎರಡು ವರ್ಷಗಳ ಹಿಂದೆ ಎಮ್ಮೆ ಕಾಯುತ್ತ ಹೊಲದಲ್ಲಿ ಕೆಲಸ ಮಾಡಿಕೊಂಡು ಅಪ್ಪಟ ಹಳ್ಳಿಯ ಮುಗ್ಧ ಗಮಾರನಾಗಿದ್ದ ರುಕ್ಮ್ಯಾ ಇವತ್ತು ಸಾಕಷ್ಟು ಬದಲಾಗಿದ್ದಾನೆ. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿದ್ದ ತನ್ನ ನಾಲ್ಕೆಕರೆ ಹೊಲವನ್ನು ಮಾರಿ ಅದರಿಂದ ಬಂದ ಹಣದಿಂದ ಕ್ರಿಮಿನಾಶಕ ಮತ್ತು ರಸಗೊಬ್ಬರದ ವ್ಯಾಪಾರ ಪ್ರಾರಂಭಿಸಿದ ರುಕ್ಮ್ಯಾ ಇವತ್ತು ಹಲವಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಮನುಷ್ಯ. ಪಟ್ಟಣದಲ್ಲಿ ಬಂಗ್ಲೆ, ಓಡಾಡಲು ಕಾರು, ಕೈಗೊಬ್ಬ ಕಾಲಿಗೊಬ್ಬ ಆಳು ಒಟ್ಟಿನಲ್ಲಿ ಅವನ ಬದುಕು ಹಸನಾಗಿದೆ. ಊರಿನ ಅದೆಷ್ಟೋ ರೈತರ ಮಕ್ಕಳು ಅವನಲ್ಲಿ ದುಡಿತಕ್ಕೆ ಸೇರಿಕೊಂಡಿದ್ದಾರೆ. ಮನುಷ್ಯನಾಗುವ ರುಕ್ಮ್ಯಾನ ವೇಗಕ್ಕೆ ಹಲವಾರು ಅಮಾಯಕ ರೈತರ ಬದುಕು ಬಲಿಯಾಗಿದೆ. ಬಡ ರೈತರ ಸಮಾಧಿಯ ಮೇಲೆ ನಿಂತು ಸಂಭ್ರಮಿಸುತ್ತಿರುವ ರುಕ್ಮ್ಯಾ ಇವತ್ತು ಇಡೀ ಊರಿಗೇ ಆದರ್ಶ. ಶುಭ್ರ ಬಿಳಿಯ ಗರಿಗರಿಯಾದ ಖಾದಿ ಬಟ್ಟೆ ಅವನ ಮೈಯನ್ನು ಅಲಂಕರಿಸಿದೆ. ಇದು ಇನ್ನು ಕೆಲವೇ ದಿನಗಳಲ್ಲಿ ಆತ ರಾಜಕೀಯಕ್ಕೆ ಕಾಲಿಡುವುದರ ಸಂಕೇತ. ಮುಂದೊಂದು ದಿನ ಅವನು ರಾಜ್ಯದ ಮಂತ್ರಿಯಾದರೂ ಅಚ್ಚರಿ ಪಡಬೇಕಿಲ್ಲ. ರುಕ್ಮ್ಯಾನ ಇಷ್ಟೆಲ್ಲ ಅಗಾಧ ಬೆಳವಣಿಗೆ ಎದುರು ಪಿತ್ರಾರ್ಜಿತ ಆಸ್ತಿಯನ್ನು ಕಳೆದು ಕೊಳ್ಳಬಾರದೆಂದು ಇರುವ ಆ ಐದೆಕರೆ ಜಮೀನಿನಲ್ಲಿ ಹೊಟ್ಟೆಯನ್ನು ಬೆನ್ನಿಗಂಟಿಸಿಕೊಂಡು ದುಡಿಯುತ್ತಿರುವ ನನ್ನ ಅಪ್ಪ ಊರಿನವರ ದೃಷ್ಟಿಯಲ್ಲಿ ಮೂರ್ಖನೆಂದು ಬಿಂಬಿತರಾಗುತ್ತಾರೆ. ಏಕೆಂದರೆ ರುಕ್ಮ್ಯಾನದು ಮನುಷ್ಯನಾಗಿ ಆಕಾಶಕ್ಕೆ ಜಿಗಿಯುವ ಆಕಾಂಕ್ಷೆಯಾದರೆ ನನ್ನ ತಂದೆಯದು ರೈತನಾಗಿಯೇ ಉಳಿದು ಮಣ್ಣಿನಲ್ಲಿ ಮಣ್ಣಾಗಿ ಸೇರಬೇಕೆನ್ನುವ ಹಂಬಲ. ರುಕ್ಮ್ಯಾನನ್ನು ನೋಡಿದಾಗಲೆಲ್ಲ `ಅಂವ ಹ್ಯಾಂಗ ಮನಷ್ಯಾ ಆದ ನೋಡ್ರಿ’ ಎನ್ನುವುದು ನನ್ನೂರಿನ ಜನರ ಸಾಮಾನ್ಯ ಉದ್ಗಾರ.
ಇಲ್ಲಿ ನಮ್ಮದೂ ನೂರೆಂಟು ತಪ್ಪುಗಳಿವೆ. ಮನುಷ್ಯರನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ವ್ಯಕ್ತಿತ್ವ ಮತ್ತು ಸಾಧನೆಗಳಿಗಿಂತ ಒಣ ಪ್ರತಿಷ್ಠೆ ಮತ್ತು ಆಡಂಬರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ವೈಯಕ್ತಿಕ ಬದುಕನ್ನು ಪಕ್ಕಕ್ಕೆ ತಳ್ಳಿ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಉಜ್ವಲ್ ನಿಕ್ಕಂ ಅವರಂಥ ವ್ಯಕ್ತಿಗಳು ನಮಗೆ ಯಾವತ್ತೂ ಸೆಲಿಬ್ರಿಟಿಯಾಗಿ ಕಾಣಿಸುವುದೇ ಇಲ್ಲ. ಗುಂಡಾಗಳ, ಭೂಗಳ್ಳರ, ದೇಶ ದ್ರೋಹಿಗಳ ಪರ ವಾದಿಸುವ ವಕೀಲರುಗಳು ನಮಗೆ ಆದರ್ಶಪ್ರಾಯರಾಗುತ್ತಾರೆ. ಅಂಥವರನ್ನು ನಾವು ಸ್ತುತಿಸುತ್ತೇವೆ, ಅನುಕರಿಸಲು ಪ್ರಯತ್ನಿಸುತ್ತೇವೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಅಂಥವರೇ ನಿಜವಾದ ಮನುಷ್ಯರು. ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಸಮಾಜ ಸೇವಕನಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಅದೇ ಒಬ್ಬ ಅಪ್ರಾಮಾಣಿಕ ರಾಜಕಾರಣಿ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರೆ ಪುಳಕಗೊಳ್ಳುತ್ತೇವೆ. ಮೈ ಮನಗಳಲ್ಲಿ ರೋಮಾಂಚನವಾಗುತ್ತದೆ. ಅದನ್ನೆ ದೊಡ್ಡ ವಿಷಯ ಮಹತ್ಸಾಧನೆ ಎನ್ನುವಂತೆ ಇತರರ ಎದುರು ಹೇಳಿ ಸುಖಿಸುತ್ತೇವೆ. ಏಕೆಂದರೆ ಅಪ್ರಾಮಾಣಿಕತೆಯಿಂದ ಅಪಾರ ಸಂಪತ್ತು ಗಳಿಸಿದವನೇ ನಮ್ಮ ದೃಷ್ಟಿಯಲ್ಲಿ ನಿಜವಾದ ಮನುಷ್ಯ. ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೇ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕ ಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಸಿಕೊಳ್ಳುತ್ತಾನೆ. ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.
ಚಿತ್ರಕೃಪೆ :- www.saddahaq.com
ಈ ರೀತಿಯ ” ಮನುಷ್ಯ “ರಾಗುವ ಕಲೆಯಿಂದ ಸ್ವಾರ್ಥ ಸಾಧನೆಯ ಹೊರತು ಬೇರೆ ಯಾರಿಗೂ ಪ್ರಯೋಜನವಿಲ್ಲ. ಇಂಥವರಿಂದ ಸಮಾಜಕ್ಕೆ ಮಾರಕವೇ ಹೆಚ್ಚು.
ಉತ್ತಮ ಲೇಖನ. ಪ್ರಸ್ತುತ ಸಮಾಜದ ಮನಃಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಎಂದಿನಂತೆ ಗಂಭೀರ ಬರಹ ಸರ್.ಮನುಷ್ಯರಾಗುವ ಭರದಲ್ಲಿ ಪಾಪ ಕಾರ್ಯಗಳಲ್ಲಿ ಎಗ್ಗಿಲ್ಲದೆ ಪಾಲ್ಗೊಳ್ಳುತ್ತಿದ್ದೇವೆ.ೈದಕ್ಕೆ ಮೂಲ ಕಾರಣ ನಮ್ಮ ಸಮಾಜವು ಆಧ್ಯಾತ್ಮದಿಂದ ವಿಮುಖವಾಗಿರುವುದೇ ಆಗಿರುವುದು.ಅದೊಂದೇ ದಾರಿ ಎಂಬುದನ್ನು ನಮ್ಮ ಅಜ್ನಾನವು ಮರೆಮಾಚಿರುವುದು
thanku sir
a good article
ಮನುಷ್ಯನಾಗುವುದೆಂದರೆ ಗೌತಮ ಬುದ್ಧನಾಗಿಬಿಡುವುದು. ಇನ್ಯಾವ ರೀತಿಯಲ್ಲೂ ಸಾಧ್ಯವಿಲ್ಲ.