ತಮ್ಮನ ಪುನರ್ಮಿಲನ
– ರಂಜನ್ ಕೇಶವ
ಪ್ರತಾಪನು ಚೇತಕ್ ನೊಡನೆ ರಣಭೂಮಿಯಿಂದ ತೆರಳಿದಾಗ ಹಲ್ದೀಘಾಟಿಯ ಯುದ್ಧ ಭಾಗಶಃ ಮುಗಿದಿತ್ತು. ಪ್ರತಾಪನಿಗೆ ಒಂದುಕಡೆ ಯುದ್ಧದಲ್ಲುಂಟಾದ ಸೋಲಿನ ನಿರಾಶೆ ಮತ್ತೊಂದೆಡೆ ಮೊಘಲ್ ಸೇನೆಯನ್ನು ಮುಂದೆ ತಡೆಯುವುದು ಹೇಗೆಂಬ ಚಿಂತೆ. ತರಾತುರಿಯಲ್ಲಿ ತೆರಳಿದ್ದಕ್ಕಾಗಿ ಪ್ರತಾಪನು ಏಕಾಂಗಿಯಾಗಿದ್ದ, ಜೊತೆಗೆ ಯಾವೊಬ್ಬ ಸಹಚರನೋ ಸರದಾರರೋ ಇರಲಿಲ್ಲ. ವ್ಯಾಕುಲಗೊಂಡ ಮನಸ್ಸಿನ ಕಾರಣ ಏಕಾಂಗಿತನದ ಅರಿವೂ ಇಲ್ಲ.
ಹೀಗೆ ಸಾಗುತ್ತಿದ್ದ ಪ್ರತಾಪನನ್ನು ಅವನ ಅರಿವಿಗೆ ಬಾರದಂತೆ ಇಬ್ಬರು ಮೊಘಲ್ ಸವಾರರು ಹಿಂಬಾಲಿಸುತಿದ್ದರು ! ಇಬ್ಬರಲ್ಲೂ ಪ್ರತಾಪನನ್ನು ಕೊಂದು ಷೆಹಂಷಾಹ್ ನಿಂದ ಪುರಸ್ಕಾರ ಪಡೆಯುವ ಆಕಾಕ್ಷೆಯಿತ್ತು.
ಚೇತಕ್ ಕುದುರೆ ತನ್ನ ಸ್ವಾಮಿಯನ್ನು ರಕ್ಷಿಸಲೆಂದು ನೆಲದ ಏರಿಳಿತ, ಕಲ್ಲು ಬಂಡೆ ಮತ್ಯಾವ ಅಡೆತಡೆಗಳಿಗೂ ಸ್ವಲ್ಪವೂ ವೇಗ ಕುಗ್ಗಿಸದೇ ಒಂದೇ ರಭಸದಲ್ಲಿ ಓಡುತ್ತಿತ್ತು. ಕಾಲಿನ ಗಾಯದ ರಕ್ತಸ್ರಾವದಲ್ಲೂ ಯಾವ ಬಾಧೆಯನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಹೀಗೆ ಸಾಗುತ್ತಾ ಒಂದು ನದಿಯ ಕವಲನ್ನು ಚೇತಕ್ ಒಂದೇ ನೆಗೆತಕ್ಕೆ ದಾಟಿತು. ಆದರೆ ಆ ಮೊಘಲ್ ಸೈನಿಕರ ಕುದುರೆಗಳಿಗೆ ದಾಟಲಾಗದೆಯೇ ಅಲ್ಲೇ ನಿಂತವು.
ಹಾಗೆಯೇ ಮುಂದೆ ಸಾಗುತ್ತಾ ಪ್ರತಾಪನಿಗೆ ಯಾರದೋ ಧ್ವನಿ ಕೂಗಿದ ಹಾಗೆ ಭಾಸವಾಯಿತು ” ಓಯೇ ನೀಲಾ ಘೋಢಾರಾ ಅಸವಾರ್” . ಏನೋ ಮನದ ಲೋಕದಲ್ಲಿ ವಿಹರಿಸುತ್ತಿದ್ದ ಪ್ರತಾಪನ ಮನ ಈ ಧ್ವನಿಯಿಂದ ಪುನಃ ವಾಸ್ತವಕ್ಕೆ ಬಂದಿಳಿಯಿತು. ನಿಧಾನ ಹಿಂದಿರುಗಿ ನೋಡಿದಾಗ ಯಾರೋ ಒಬ್ಬ ಕುದುರೆ ಸವಾರ ವೇಗವಾಗಿ ಇವನತ್ತ ಸಾಗಿ ಬರುತ್ತಿದ್ದ. ಸ್ವಲ್ಪ ಕ್ಷಣದಲ್ಲೇ ಪ್ರತಾಪನಿಗೆ ತಿಳಿಯಿತು ಅವನು ತನ್ನ ತಮ್ಮನಾದ ಶಕ್ತಿಸಿಂಗ್ ! ( ಶಕ್ತಿಸಿಂಗ್ ಒಂದು ಕಾಲದಲ್ಲಿ ಅಣ್ಣನ ಮೇಲಿನ ಮಾತ್ಸರ್ಯಕ್ಕಾಗಿ ದೇಶತ್ಯಾಗ ಮಾಡಿ ಅಕ್ಬರನೊಂದಿಗೆ ಕೈ ಜೋಡಿಸಿದ್ದ ! ).
ಶಕ್ತಿಯನ್ನು ನೋಡಿ ಪ್ರತಾಪನ ಮನ ಮತ್ತಷ್ಟು ಚಿಂತೆಗೀಡಾಯಿತು. ಈ ದುರ್ದಿನದಲ್ಲಿ ಇವನೂ ಕೂಡಾ ತನ್ನ ಸೇಡು ತೀರಿಸಿಕೊಳ್ಳಲು ಬಂದನೋ ? ತನ್ನನ್ನೇ ಕೊಂದು ಅಕ್ಬರನ ಅಡಿಯಲ್ಲಿ ಮೇವಾಡನ್ನು ವಶಪಡಿಸಿಕೊಳ್ಳ ಬಯಸಿದನೆಯೇ ? ನಾನಾ ಚಿಂತನೆಗಳು ಹೃದಯವನ್ನು ಕಾಡತೊಡಗಿದವು . ಅದರಲ್ಲೂ ಅಣ್ಣ – ತಮ್ಮಂದಿರ ರಾಜ್ಯದಾಹಕ್ಕೆ ನಡೆಯುವ ಕಲಹ ಮಧ್ಯಯುಗೀನ ಭಾರತದಲ್ಲಿ ಸರ್ವೇಸಾಮಾನ್ಯ. ಅದರಲ್ಲೂ ಶಕ್ತಿಸಿಂಗ್ ಮೊಘಲ್ ಸೇನೆಯ ದಳದಲ್ಲೇ ಶ್ಯಾಮೀಲಾಗಿದ್ದ. ಆದರೆ ಶಕ್ತಿ ಯಾವುದೇ ಕೊಲ್ಲುವ ಮನೋಭಾವನೆಯಿಂದಿರಲಿಲ್ಲ. ಆತನ ಮುಖದಲ್ಲಿ ಉಲ್ಲಾಸವಿಲ್ಲದೇ ದುಃಖಜರ್ಝಿತ ನಾಗಿದ್ದ.
ವಾಸ್ತವದಲ್ಲಿ ಶಕ್ತಿ ಅಕ್ಬರನೊಂದಿಗೆ ಸೇನೆಯಲ್ಲಿದ್ದರೂ ತನ್ನ ಜನರೇ ಆದ ರಾಜಪೂತರು ಅಕ್ಬರನೊಂದಿಗೆ ಪ್ರತಾಪನ ವಿರುದ್ಧ ನಿಂತಿದ್ದನ್ನು ಕಂಡು ಮನದಾಳದಲ್ಲಿ ಎಲ್ಲೋ ತಳಮಳವಿತ್ತು. ಪ್ರತಾಪನಿಗಾಗಿ ಆತ್ಮಾರ್ಪಣೆ ಮಾಡಿದ ಅನೇಕ ಯೋಧರನ್ನು ಕಣ್ಣಾರೆ ಕಂಡು ಮರುಗುತ್ತಿದ್ದ. ತನ್ನ ಸೋದರನಲ್ಲದೇ ಇದ್ದರೂ ಝಾಲಾ ಪ್ರತಾಪನಿಗೆ ಆತ್ಮಾಹುತಿ ನೀಡಿದ್ದನ್ನು ಕಂಡು ಅವನ ಅಂತರಾಳ ಚಿಮ್ಮಿತು. ಜೊತೆಗೆ ಅಣ್ಣ ಪ್ರತಾಪನ ಪರಿಶ್ರಮ, ಪಟ್ಟ ಕಷ್ಟಗಳು ಮತ್ತವನಲ್ಲಿ ಕಂಡ ಅಗಾಧ ದೇಶಪ್ರೇಮಕ್ಕೆ ಮನ ಸೋತಿತು. ಇದೆಲ್ಲಾ ಸನ್ನಿವೇಶಗಳು ಅವನ ಹೃದಯದಲ್ಲಿ ಎಂಥಹ ಪ್ರಭಾವ ಬೀರಿತೆಂದರೆ ಪರೋಕ್ಷವಾಗಿ ದೇಶಕ್ಕಾಗಿ ಸೇವೆಮಾಡಲೇ ಬೇಕೆಂಬ ಬಯಕೆ ಹುಟ್ಟಿಸಿತು. ಯಾವಾಗ ಪ್ರತಾಪನು ಸಂಖ್ಯಾಕೊರತೆಯಿಂದ ಸೇನೆಯನ್ನು ಹಿಂದೆ ಸರಿಸುವ ಆಜ್ಞಾ ಹೊರಡಿಸಿದನೋ ಆಗ ಶಕ್ತಿಗೆ ಉದ್ವೇಗ ತಡೆಯಲಾಗಲಿಲ್ಲ. ತನ್ನನ್ನು ತಾನೆಯೇ ಒಬ್ಬ ಶತ್ರು ಸೇನೆಯಲ್ಲಿದ್ದೇನೆಂದು ಮರೆತು ಪ್ರತಾಪನ ಸಹಾಯಕ್ಕೆ ದಳವನ್ನು ಬಿಟ್ಟು ಮುನ್ನುಗ್ಗಿದ ! .
ಪ್ರತಾಪನನ್ನು ಅಟ್ಟಿಸುತ್ತಿದ್ದ ಆ ಇಬ್ಬರನ್ನು ಶಕ್ತಿಸಿಂಗನೇ ತನ್ನ ಈಟಿಯಿಂದ ಯಮಸದನಕ್ಕಟ್ಟಿದ ! ನಂತರ ಅಣ್ಣನ ಮುಂದೆ ಖಿನ್ನನಾಗಿ ಬಂದು ನಿಂತ. ಅಣ್ಣನ ಕಾಲಿಗೆ ಮಸ್ತಕವನ್ನಿಟ್ಟು ಮಾಡಿದ ತಪ್ಪಿಗೆ ಗೋಗರೆದು ಕ್ಷಮೆ ಕೇಳಿದ. ತನ್ನ ತಮ್ಮನ ನಮ್ರವಾದ ಮಾತುಗಳು, ಮಾಡಿದ ಪ್ರಾರ್ಥನೆ ಮತ್ತು ಲಜ್ಜಿತ ಮುಖಮಂಡಲವನ್ನು ಕಂಡು ಕಣ್ಣಲ್ಲಿ ಆನಂದಾಶ್ರು ಬಂದಿತು. ಈ ಆನಂದದಲ್ಲಿ ಯುದ್ಧದ ಪರಾಜಯ ಮರತೇ ಹೋಯಿತು. ತಮ್ಮನಿಗೆ ಆಲಿಂಗನಗೈದು ಪ್ರೀತಿಯಿಂದ ಕುಶಲೋಪಚರಿಯನ್ನು ವಿಚಾರಿಸತೊಡಗಿದ.
ಇದೇ ಸಮಯದಲ್ಲಿ ಚೇತಕ್ ಧರೆಗುರುಳಿ ಅಸುನೀಗಿತು. ಪ್ರತಾಪನ ಈ ಅಶ್ವರತ್ನ ಎಷ್ಟೋ ಸಮರಗಳಲ್ಲಿ ಜೊತೆನೀಡಿ ಪ್ರಾಣರಕ್ಷಣೆ ಮಾಡಿದ ಮೂಕಪ್ರಾಣಿ ಜೀವನದ ಕೊನೆ ಕಂಡಿತು. ಶಕ್ತಿಸಿಂಗ್ ತರಾತುರಿಯಲ್ಲಿ ಸೇನೆ ಬಿಟ್ಟು ಬಂದಿದ್ದಕ್ಕಾಗಿ ಮತ್ತೆ ಮರಳಿ ಸೇನೆಗೆ ಸೇರಬೇಕಾಗಿತ್ತು. ಸ್ವಲ್ಪ ಸಮಯದಲ್ಲೇ ಸ್ವದೇಶಕ್ಕೆ ಮರಳುತ್ತೇನೆಂದು ಅಣ್ಣನನ್ನು ಬೀಳ್ಕೊಟ್ಟು ನಡೆದ. ಆ ಇಬ್ಬರು ಮೊಘಲ್ ಸೈನಿಕರಲ್ಲಿ ಒಬ್ಬ ಖುರಾಸಾನಿ ಮತ್ತೊಬ್ಬ ಮುಲ್ತಾನಿ ಎಂದು ಹೇಳಲಾಗಿದೆ. ಶಕ್ತಿ ಇಬ್ಬರನ್ನೂ ಕೊಂದು ಖುರಾಸಾನಿಯ ಕುದುರೆಯನ್ನೇ ಏರಿ ಅಲ್ಲಿಂದ ತೆರಳಿದ.
ಶಕ್ತಿ ಸಲೀಂ ಖಾನ್ ತುಕಡಿಯಲ್ಲಿದ್ದ. ಯಾವುದೋ ಕಾರಣಕ್ಕೆ ಸಲೀಂ ರಣ ಭೂಮಿಗೆ ಬಂದಿರಲಿಲ್ಲ. ಶಕ್ತಿ ಖುರಾಸನಿಯ ಕುದುರೆಯನ್ನೇರಿ ಬಂದಿದ್ದನ್ನು ಕಂಡು ಮೊಘಲ್ ಸೇನಾಪತಿಗೆ ಸಂದೇಹ ಬಂದಿತು. ಕಾರಣ ಕೇಳಿದ್ದಕ್ಕೆ ಶಕ್ತಿ ತನ್ನ ಅಣ್ಣನನ್ನು ರಕ್ಷಿಸುವುದು ಕರ್ತವ್ಯವೆಂದು ತಿಳಿದೆ ಆದ್ದರಿಂದ ಅವನ ಸಹಾಯಕ್ಕೆ ಧಾವಿಸಿದ್ದಾಗಿ ಸತ್ಯವನ್ನು ಚಾಚೂತಪ್ಪದೇ ಒಪ್ಪಿಸಿದ. ಮೊಘಲ್ ಸೇನಾಪತಿ ಶಕ್ತಿಗೆ ಯಾವ ದಂಡವನ್ನು ನೀಡದೇ ಸೇನೆಯಿಂದ ಪದಚ್ಯುತಿಗೊಳಿಸಿದ. ಇವನಿಗೂ ಅದೇ ಬೇಕಾಗಿತ್ತು.
ಇನ್ನು ಮತ್ತೆ ಅಣ್ಣನೊಂದಿಗೆ ಸೇರಬೇಕೆಂದು ನಡೆದ. ಖಾಲಿ ಕೈಯಿಂದ ಹೋಗುವುದು ಸೂಕ್ತವಲ್ಲವೆಂದು ಅರಿತು ತನ್ನ ದಳದೊಂದಿಗೆ ಭಾಯಿನಸೋರ್ ಎಂಬ ಮೊಘಲರ ಕಿಲ್ಲೆಯನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡು ಪ್ರತಾಪನಿಗೆ ಒಪ್ಪಿಸಿದ. ಪ್ರತಾಪನು ತಮ್ಮನನ್ನು ಪ್ರೀತ್ಯಾದರದಿಂದ ಬರಮಾಡಿಕೊಂಡು ಆ ಕೋಟೆಯನ್ನು ಅವನಿಗೇ ನೀಡಿದ. ಆ ದುರ್ಗವನ್ನು ಶಕ್ತಾವತೋ ಎಂದು ಕರೆಯಲಾಗುತ್ತದೆ. ಪ್ರತಾಪ ತಾಯಿ ಜಯವಂತಾ ಭಾಯಿಗೂ ಶಕ್ತಿಸಿಂಗ್ ನ ಮೇಲೆ ವಿಶೇಷ ಮಮತೆ. ( ಶಕ್ತಿಸಿಂಗ್ ಉದಯಸಿಂಗನ ಮತ್ತೊಬ್ಬ ರಾಣಿಯಾಗಿದ್ದ ಸಜ್ಜಾ ಭಾಯಿಯ ಮಗನಾಗಿದ್ದ ). ಜಯವಂತಾ ಶಕ್ತಿಯೊಡನೆ ಶಕ್ತಾವತೋನಲ್ಲಿ ವಾಸಿಸತೊಡಗಿದಳು.
ಶಕ್ತಿಸಿಂಗ್ ಖುರಾಸನೀ ಮತ್ತು ಮುಲ್ತಾನೀ ಸೈನಿಕರನ್ನು ಕೊಂದಿದ್ದಕ್ಕಾಗೆ ಅವನ ಮನೆತನಕ್ಕೆ “ ಖುರಾಸನೀ ತಥಾ ಮುಲ್ತಾನೀ ಕಾ ಅಗ್ಗಲ್ “ ಎಂಬ ಹೆಸರಿನಿಂದ ವಿಖ್ಯಾತಿಗೊಂಡಿತು. ಶಕ್ತಿಯ ಸೇರುವಿಕೆಯಿಂದ ಪ್ರತಾಪನ ಶಕ್ತಿ ಮತ್ತಷ್ಟು ಹೆಚ್ಚಿತು. ಇದು ಭಾರತದ ಇತಿಹಾಸದಲ್ಲಿ ಕಂಡುಬಂದ ಒಂದು ಅಪರೂಪದ ಆದರ್ಶನೀಯ ಕಥೆ. ಎಷ್ಟೋ ಜನ ದೇಶದ್ರೋಹಿಗಳು ಶತ್ರುಗಳೊಡನೆ ಕೈಜೋಡಿಸಿದ್ದನ್ನು ನೋಡಿದ್ದವೆ. ಅದರಲ್ಲಿ ಎಷ್ಟು ಜನ ಶತ್ರುಪಕ್ಷವನ್ನು ತೊರೆದು ಮಾತೃಭೂಮಿಯ ಸೇವೆಗೆ ಬಂದಿದ್ದಿದೆ ? ಶಕ್ತಿಸಿಂಗ್ ನಂತಹ ವ್ಯಕ್ತಿ ಅಪರೂಪವಲ್ಲವೇ ?