ಸಹಿಷ್ಣುತೆ-ಅಸಹಿಷ್ಣುತೆಗಳ ಸುತ್ತಾ…..
– ಸಂಗೀತಾ ದೀಪಕ್
ಕಳೆದ ವರ್ಷವೆಲ್ಲಾ ಸುದ್ದಿ ಮಾಡಿದ, ದೇಶ ವಿದೇಶಗಳಲ್ಲಿ ತೀರ್ವ ಸಂಚಲನವನ್ನು ಉಂಟು ಮಾಡಿದ ಪದ ಅಸಹಿಷ್ಣುತೆ. ಇದಕ್ಕೆ ಅದೆಷ್ಟೋ ಪ್ರಶಸ್ತಿ, ಪುರಸ್ಕಾರಗಳ ಮರ್ಯಾದೆ ಬಲಿಯಾದವು, ಅದೆಷ್ಟೋ ತಾರಾಮಣಿಯರ, ವಿದ್ವಜ್ಜನರ ಪರ-ವಿರೋಧ ಹೇಳಿಕೆಗಳು ವಿವಾದಕ್ಕೀಡಾದವು. ಒಂದು ರಾಜ್ಯದ ರಾಜಕೀಯ ಭವಿಷ್ಯವನ್ನು ತಕ್ಕ ಮಟ್ಟಿಗೆ ಬದಲಾಯಿಸಿದ ಪದ ಅದು. ಅಸಹಿಷ್ಣುತೆ ಬಗ್ಗೆ ಬರೆಯುತ್ತಿರುವ ಲೇಖನವೆಂದರೆ, ಯಾವುದೋ ರಾಜಕೀಯ ಪಕ್ಷದ ಪರ ಅಥವ ವಿರುದ್ಧವಾಗಿಯೇ ಈ ಲೇಖನವೆಂದು ಎಲ್ಲಾ ಭಾವಿಸುವುದು ಸಹಜ, ಆದರೆ ಅಸಹಿಷ್ಣುತೆ ಮತ್ತು ಮಾನವನ ನಡುವಿನ ಸಂಬಂಧವನ್ನು ತಿಳಿಸುವುದಷ್ಟೇ ಈ ಲೇಖನದ ಉದ್ದೇಶ. ಇಲ್ಲಿ ಅಸಹಿಷ್ಣುತೆ, ಅದೂ ಭಾರತೀಯರಲ್ಲಿ ಎಂಬ ವಿಷಯವಂತೂ ರಾಜ್ಯ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿ ದಿನಗಟ್ಟಲೇ ಪತ್ರಿಕೆಗಳಿಗೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಆಹಾರವನ್ನು ಒದಗಿಸಿದ್ದವು. ಈ ವಿಷಯದಲ್ಲಿ ಸಾಮಾಜಿಕ ತಾಣಗಳು ಕೂಡ ಹಿಂದೆ ಬಿದ್ದಿರಲಿಲ್ಲ, ತಾವೇನೂ ಕಡಿಮೆಯಿಲ್ಲವನ್ನುವಂತೆ ಜನರೂ ಮನಸೋ ಇಚ್ಛೆ ತಮ್ಮ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದರು.
ಇಷ್ಟೆಲ್ಲಾ ಹೇಳಿದ್ದು ಏಕೆಂದರೆ ಈ ಅಸಹಿಷ್ಣುತೆ ಎಂಬುದು ಮಾನವನ ವಿಕಾಸ ಕಾಲದಿಂದಲೇ ಅವನೊಡನೆ ವಿಕಾಸವಾಗುತ್ತಾ ಬಂದಿದೆ. ಮಾನವ ವಿಕಾಸ ಹೊಂದುತ್ತಲೇ ಪರಿಸರವನ್ನು ತನ್ನ ಅನುಕೂಲಕ್ಕಾಗಿ ಬದಲಾಯಿಸಿಕೊಳ್ಳಲಾರಂಭಿಸಿದಾಗಲೇ, ಮಾನವ ತನ್ನ ಪರಿಸರಕ್ಕೆ ಹಾಗೂ ಇನ್ನಿತರ ಜೀವಜಂತುಗಳ ಪಾಲಿಗೆ ಅಸಹಿಷ್ಣುವಾದ, ಇಡೀ ಭೂಮಂಡಲದ ಮೇಲೇ ತನ್ನ ಶ್ರೇಷ್ಠತೆಯನ್ನು ಸಾಧಿಸುತ್ತಾ ಅನೇಕ ಕೋಟಿ, ಕೋಟಿ ಜೀವ ಸಂಕುಲಗಳ ನಾಶಕ್ಕೆ ಕಾರಣನಾದ. ಇದೂ ಕೂಡ ಒಂದು ರೀತಿಯ ಅಸಹಿಷ್ಣುತೆಯೇ. ಸಕಲ ಜೀವರಾಶಿಗಳೆಡೆಗೆ ಈ ಪರಿಯ ಅಸಹಿಷ್ಣುತೆ ಇನ್ನೂ ಕಡಿಮೆಯಾಗಿಲ್ಲ, ಭೂತಾಯಿಯ ಮೇಲಿನ ಅನ್ಯಾಯ ಇನ್ನೂ ನಿಂತಿಲ್ಲ. ಈ ಭೂಮಿ ಮೇಲೆ ಜೀವಿಸುವ ಎಲ್ಲಾ ಪ್ರಾಣಿ ಪಕ್ಷಿಗಳಿಗೂ, ಮರಗಿಡಗಳಿಗೂ ಸಮಸ್ತ ಜೀವಜಂತುಗಳಿಗೂ ನಮ್ಮಂತೆಯೇ ಸಮಾನ ಹಕ್ಕಿದೆ ಎಂಬ ಸಾಮಾನ್ಯ ಮಟ್ಟದ ನಿಲುವನ್ನು ಇನ್ನೂ ಮಾನವ ಹೊಂದಲು ಆಗಿಲ್ಲ ಎಂಬುದು ಭೂಮಿ ಮೇಲಿನ ಇತರ ಜೀವಿಗಳ ಬಗ್ಗೆ ಅವನ ಅಸಹಿಷ್ಣುತೆಯನ್ನು ಸಾರಿ ಸಾರಿ ಹೇಳುತ್ತದೆ. ಮನುಷ್ಯ “ಬದುಕು ಬದುಕಲು ಬಿಡು” ಎಂದು ಯೋಚಿಸಲಾರಂಭಿಸಿದಾಗಲೇ, ಪರಿಸರದ ಉಳಿವು ಸಾಧ್ಯವಾಗಬಹುದೇನೋ.
ಇನ್ನು ಮನು ಕುಲದ ಚರಿತ್ರೆಯನ್ನು ನೋಡಿದರೆ, ಮಾನವ ಜನಾಂಗಗಳ ಮಧ್ಯೆ ನಡೆದ ಯುದ್ದಗಳು ಹಲವಾರು, ಅದು ಗ್ರೀಕ್, ರೋಮನ್, ಈಜಿಪ್ಶಯನ್, ಪರ್ಶಿಯನ್ ಅಥವಾ ಭಾರತೀಯ ಇತಿಹಾಸ ಯಾವುದೇ ಇರಬಹುದು, ಜಾಗತಿಕ ಮಹಾಯುದ್ಧಗಳೇ ಆಗಿರಬಹುದು, ಅಸಹಿಷ್ಣುತೆಯೇ ಪರಮ ಕಾರಣ. ನಮ್ಮ ಮಹಾಭಾರತವನ್ನೇ ತೆಗೆದುಕೊಂಡರೆ, ಅಲ್ಲೂ ದುರ್ಯೋಧನನ ಅಧಿಕಾರ ದಾಹ, ಧೃತರಾಷ್ಟ್ರನ ಕುರುಡು ಪುತ್ರ ಪ್ರೇಮದ ನಡುವೆಯೂ ನಮಗೆ ಢಾಳಾಗಿ ಕಾಣುವುದು, ಕೌರವರಿಗೆ ಪಾಂಡವರ ಬಗ್ಗೆ ಇದ್ದ ಅಸಹಿಷ್ಣುತೆಯೇ….! ಇಲ್ಲಿ ಪಾಂಡವರ ಉನ್ನತಿಯ ಬಗ್ಗೆ ಅಸಹಿಷ್ಣುತೆ, ಕೌರವರಿಗೆ. ಇಷ್ಟೆಲ್ಲಾ ಮುನ್ನುಡಿ ಏಕೆಂದರೆ ಅಸಹಿಷ್ಣುತೆ ಎಂಬುದು ಈಗ ಒಂದು ವರ್ಷದಲ್ಲಿ ಇದ್ದಕ್ಕಿದ್ದಂತೆ ಉಧ್ಬವಿಸಿರುವ ಅದರಲ್ಲೂ ಭಾರತೀಯರಲ್ಲಿ ಮಾತ್ರ ಮೂಡಿರುವ ಮನೋಭಾವ ವಲ್ಲವೆಂದು ತಿಳಿಸಲು.
ಅಸಹಿಷ್ಣುತೆ ಎಂಬುದೇ ಒಂದು ಮನೋಭಾವ (ಮೆಂಟಲ್ ಕಂಡೀಶನ್), ತಮಗೆ ಸರಿ ತೋರದದನ್ನು, ತಮ್ಮಂತೆ ಇರದವರನ್ನು ಸಹಿಸದ ಮನೋಭಾವ. ಅದು ಒಂದು ಸಮಾಜದಲ್ಲಿ ಅಭಿವ್ಯಕ್ತವಾಗುವುದು, ಆ ಸಮಾಜದ ನಾಗರಿಕರ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ನೈತಿಕ ಸ್ಥಿತಿಗತಿಗಳನ್ನು ಆಧರಿಸಿ ಎಂದು ಸ್ಥೂಲವಾಗಿ ಹೇಳಬಹುದು. ಈ ಅಸಹಿಷ್ಣುತೆಯನ್ನು ನಾವು ರಾಜಕೀಯವಾಗಿ, ಕೋಮುವಾದಿಗಳಾಗಿ, ಜಾತಿವಾದಿಗಳಾಗಿ ನೋಡುವ ಮೊದಲು ವ್ಯಕ್ತಿಗಳ ವೈಯಕ್ತಿಕ ನೆಲೆಗಟ್ಟಿನಲ್ಲಿ ನೋಡಿದರೆ, ಇಂದಿನ ಜೀವನ ಶೈಲಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಅಸಹಿಷ್ಣುವಾಗಿರುವುದನ್ನು ನೋಡಬಹುದು. ಪರಂಪರಾಗತವಾಗಿ ನಾವು ಭಾರತೀಯರು ನಿಧಾನಿಗಳೂ, ಸಹಿಷ್ಣುಗಳೂ, ತಾಳ್ಮೆಯುಳ್ಳವರಾಗಿದ್ದೆವು. ಆದರೆ ಇಂದು ಸಣ್ಣ ಮಕ್ಕಳಲ್ಲೂ ತಾಳ್ಮೆ ಎಂಬುದು ಇಲ್ಲವಾಗಿದೆ. ಇಂದಿನ ಮಕ್ಕಳು ಅಸಹಿಷ್ಣುಗಳಾಗುತ್ತಿದ್ದಾರೆ. ಇದಕ್ಕೆ ಮನೆಯಲ್ಲಿ ಬಹುತೇಕ ಒಂದೋ ಎರಡೋ ಮಕ್ಕಳಿರುವುದು ಹಾಗೂ ಪುಟ್ಟ ಮಕ್ಕಳು ದೈಹಿಕ ಶ್ರಮ ಬೇಡುವ ಕ್ರೀಡೆಗಳನ್ನು ಆಡುವ ಬದಲು ಮೊಬೈಲು, ಕಂಪ್ಯೂಟರ್ ಆಟಗಳಲ್ಲೇ ಹೆಚ್ಚು ಹೊತ್ತು ಕಳೆಯುವುದು ಆಗಿರಬಹುದು. ಈ ಆಟಗಳೆಲ್ಲ ವೇಗಾಧಾರಿತ (ಫಾಸ್ಟ್ ಫೇಸ್ಡ) ಆಗಿದ್ದು ಹಾಗೂ ಒಂದು ರೀತಿಯ (ಇನ್ಸ್ಟಂಟ ಗ್ರಾಟಿಫಿಕೇಶನ್) ಶೀಘ್ರವಾಗಿ ಪ್ರತಿ ಫಲ ಕೊಡುವಂತಹದ್ದಾಗಿರುತ್ತದೆ. ಆದ್ದರಿಂದಲೇ ಮಕ್ಕಳಲ್ಲಿ ಕಾಯುವಿಕೆ, ತಾಳ್ಮೆ, ಇಲ್ಲವಾಗುತ್ತಿದೆ. ಬೇರೆ ಮಕ್ಕಳೊಡನೆ ಆಟ ಆಡಿ ಸೋತಾಗ, ಆ ಸೋಲನ್ನು ಭರಿಸುವ ಶಕ್ತಿ -ಸಹಿಷ್ಣುತೆ ಮಕ್ಕಳಲ್ಲಿ ಲುಪ್ತವಾಗುತ್ತಿದೆ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಅನೇಕ ಮಕ್ಕಳು ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ಇಲ್ಲಿ ಜೀವನದ ಬಗ್ಗೆ ಅಸಹಿಷ್ಣುತೆಯ ಕಿಡಿಯನ್ನು ನೋಡಬಹುದು. ಕಂಡದ್ದೆಲ್ಲ ಬೇಕೆನ್ನುವುದು, ದೊರಕದೆ ಹೋದಾಗ ಎಲ್ಲವನ್ನು ಧಿಕ್ಕರಿಸಿ ನಿಲ್ಲುವುದು……ಇವೆಲ್ಲಾ ನಡವಳಿಕೆಗಳು ಅಸಹಿಷ್ಣುತೆಯ ದ್ಯೋತಕಗಳೇ.
ಇನ್ನು ಕಿಶೋರಾವಸ್ಥೆಯಲ್ಲೂ ಮುಂದುವರಿಯುವ ಈ ಅಸಹಿಷ್ಣುತೆ, ವಿನಾಕಾರಣ ತಂದೆ ತಾಯಿಯನ್ನು, ಗುರು ಹಿರಿಯರನ್ನು ದೂಷಿಸುವುದು, ಒಳ್ಳೆಯದನ್ನೂ ವಿರೋಧಿಸುವುದು, ಶಾಲಾಕಾಲೇಜುಗಳಲ್ಲಿ ಬಂಡಾಯ ವೇಳುವುದು, ಹೀಗೆ ಒಟ್ಟಿನಲ್ಲಿ ಸಮಾಜದ ಬಗ್ಗೆ ಸಣ್ಣ ಮಟ್ಟದಲ್ಲಿ ಒಂದು ರೀತಿಯಲ್ಲಿ ಅಸಹಿಷ್ಣುತೆ ಜಾಗೃತವಾಗಿ ಬಿಟ್ಟಿರುತ್ತದೆ. ಇದನ್ನು ನಮ್ಮ ಇಂದಿನ ಪೀಳಿಗೆಯ ನಡೆ ನುಡಿಯಲ್ಲಿ ನೋಡಬಹುದು. ಇಂದಿನ ಮಾಹಿತಿ ಯುಗದ ಕೊಡುಗೆಯಿಂದ ನಮ್ಮ ಯುವಕರು ಅಂಗೈಯಲ್ಲಿ ಮಾಹಿತಿ ಉಳ್ಳವರಾಗಿದ್ದಾರೆ, ಅದರೆ ತಾಳ್ಮೆ, ವಿವೇಚನೆ ಕಡಿಮೆಯಾಗಿದೆ. ತಮಗೆಲ್ಲಾ ಗೊತ್ತು, ಬೇಕಾದ ಮಾಹಿತಿ ಕ್ಷಣಾರ್ಧದಲ್ಲಿ ದೊರಕುತ್ತದೆ ಎಂಬ ಅಹಂನಿಂದ ಗುರುಹಿರಿಯರ ಬಗ್ಗೆ ಅವರ ಅಸಹಿಷ್ಣುತೆಯನ್ನು ಇಂದು ಶಾಲಾಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ನೋಡಬಹುದಾಗಿದೆ.
ಇನ್ನು ಈ ಅಸಹಿಷ್ಣುತೆ ನಮ್ಮ ಕೌಟುಂಬಿಕ ಜೀವನದ ಮೇಲೆ ಬೀರುತ್ತಿರುವ ಪರಿಣಾಮಗಳು ಘನಘೋರವಾಗಿದೆ. ಇಂದಿನ ಯುವಕ ಯುವತಿಯರು ಪ್ರೇಮಪಾಶದಲ್ಲಿ ಬೀಳುವದು, ಮುರಿದು ಕೊಳ್ಳುವುದು (ಬ್ರೇಕ್ ಅಪ್) ಬಹು ಬೇಗ. ಈ ಬ್ರೇಕ್ ಆಫ್ ಗಳಿಗೆ ಅಂತಹ ಘನವಾದ ಕಾರಣಗಳೇನು ಇರುವುದಿಲ್ಲ, ಇಲ್ಲಿ ಕೂಡ ಸಂಗಾತಿಯ ಬಗ್ಗೆ ಇರುವ ಸಣ್ಣ ಅಸಹಿಷ್ಣುತೆಯೇ ಕೆಲಸ ಮಾಡುವುದು. ವಿಚ್ಛೇದನಗಳು ಕೂಡ ತ್ವರಿತಗತಿಯಲ್ಲಿ ಏರುತ್ತಿದೆ. ಗಂಡ ಹೆಂಡತಿಯ ನಡುವೆ ಸಣ್ಣ ಸಣ್ಣ ಮಾತಿಗೂ ಜಗಳ ವೈಮನಸ್ಯ, ಇವೆಲ್ಲವೂ ಕೂಡ ಅಸಹಿಷ್ಣುತೆಯೇ, ಗಂಡನ ಪರಿಧಿಯೊಳಗೆ ಹೆಂಡತಿಗೆ, ಹೆಂಡತಿಯ ಪರಿಧಿಯಲ್ಲಿ ಗಂಡನಿಗೆ ಪ್ರವೇಶವಿರುವುದಿಲ್ಲ. ಇನ್ನು ಕೂಡು ಕುಟುಂಬವಂತು ಇಲ್ಲವೇ ಇಲ್ಲವಾಗಿದೆ. ಅಣ್ಣ ತಮ್ಮಂದಿರ ಸಂಸಾರ ತಂದೆ ತಾಯಿಯರೊಂದಿಗೆ ಒಟ್ಟಾಗಿ ಒಂದೇ ಮನೆಯಲ್ಲಿ ಬಾಳುತ್ತಿದ್ದದ್ದು ಹಿಂದಿನ ಯುಗದ ಮಾತೇನೋ ಎನ್ನುವಂತಾಗಿದೆ. ವಯಸ್ಸಾದ ತಂದೆ ತಾಯಿಗೆ ಇಂದು ವ್ರದ್ಧಾಶ್ರಮಗಳೇೆ ಆಸರೆಯಾಗಿದೆ. ಇಲ್ಲಿ ಪರಸ್ಪರ ಪ್ರೀತಿ ಮಮತೆಗಳು ಇಲ್ಲವೆಂದಲ್ಲ, ಆದರೆ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಗುಣ ಮಾಯವಾಗಿದೆ. ಪರಸ್ಪರ ಹೊಂದಾಣಿಕೆ, ಸೈರಣೆ ಯಾರಲ್ಲಿಯೂ ಇಲ್ಲವಾಗಿದೆ. ಮತ್ತೊಬ್ಬರನ್ನು ಸಹಿಸಿಕೊಂಡು ಬಾಳುವುದು ದುಸ್ತರವಾಗಿದೆ. ಎಲ್ಲರಲ್ಲಿಯೂ ಸ್ವಾರ್ಥ, ಲೋಭಗಳೇ ಮನೆ ಮಾಡಿದೆ, ಅಸಹಿಷ್ಣುತೆ ರಾಜ್ಯವಾಳುತ್ತಿದೆ. ಅಷ್ಟೇಕೆ, ಇಂದು ನಾವು ಎಷ್ಟರಮಟ್ಟಿಗೆ ಅಸಹಿಷ್ಣುಗಳಾಗಿದ್ದೇವಂದರೆ, ಐದು ದಿನಗಳ ಕಾಲ ನಡೆಯುವ ಟೆಸ್ಟ್ ಕ್ರಿಕೆಟ್ ನೋಡಿ ಆನಂದಿಸುವ ತಾಳ್ಮೆ ನಮ್ಮಲ್ಲಿ ಇಲ್ಲವಾಗಿದೆ. ಏನಿದ್ದರೂ ೨೦-೨೦ ಹೊಡಿ ಬಡಿ ಕ್ರಿಕೆಟ್‌ನಲ್ಲೇ ಎಲ್ಲರ ಆಸಕ್ತಿ. ಏಕೆಂದರೆ ಇಲ್ಲಿ ತ್ವರಿತ ಫಲಿತಾಂಶ, ರೋಚಕತೆ ಇದೆ. ಇವೆ ನಮಗಿಂದು ಬೇಕಾಗಿರುವುದು. ಐದು ದಿನಗಳ ತಾಳ್ಮೆ ಯ ಆಟ, ನೀರಸ ಡ್ರಾ ಯಾರಿಗೂ ಬೇಡ. ಇಲ್ಲೂ ನಮ್ಮ ಅಸಹಿಷ್ಣು ಮನದ ಅನಾವರಣವಾಗುತ್ತದೆ.
ಆಟವೊಂದೇ ಅಲ್ಲ, ಇಂದಿನ ನಮ್ಮ ಮನೆಗಳ ಅಡಿಗೆಮನೆ ಹೊಕ್ಕರೂ ನಮಗಿದು ವೇದ್ಯವಾಗುತ್ತದೆ. ಹಿಂದಿನ ಕಾಲದಂತೆ, ಹೆಚ್ಚಿನ ಸಮಯ, ಶ್ರಮ ಬೇಡುವ ತಿನಿಸುಗಳ ತಯಾರಿಕೆ ಬಹುತೇಕ ನಿಂತು ಹೋಗಿದೆ. ಇದು ಏನಿದ್ದರೂ ಇನ್ಸ್ಟಂಟ್, ರೆಡಿ ಟು ಈಟ್ ಯುಗ. ಕಡುಬು, ಒಬ್ಬಟ್ಟು, ಚಕ್ಕುಲಿ, ಹಪ್ಪಳ ಸಂಡಿಗೆ ಮೊದಲಾದ ತಿನಿಸುಗಳು ಮನೆಯಲ್ಲಿ ತಯಾರಾಗುವುದು ನಿಂತು ಎಷ್ಟೋ ಕಾಲವಾಯಿತು. ಹೊರಗೆ ದುಡಿಯುವ ಮಹಿಳೆಯರಾದರೋ ಸರಿ, ಆದರೆ ಮನೆಯಲ್ಲಿ ಇರುವ ಗೃಹಿಣಿಯರು ಕೂಡ ದೋಸೆ, ಇಡ್ಲಿಗಳ ತಯಾರಾದ ಮಿಶ್ರಣದ ಮೊರೆ ಹೊಕ್ಕಿದ್ದಾರೆ. ಇನ್ನು ‘ಮ್ಯಾಗಿ’ನಿಂತು ಹೋದಾಗ ಕಂಗಾಲಾದವರು ಅದೆಷ್ಟೋ ಮಂದಿ. ಇಲ್ಲೂ ನಮಗೆ ಗೋಚರಿಸುವ ಅಂಶವೆಂದರೆ ದಿನ ನಿತ್ಯ ಆರೋಗ್ಯವಂತರಾಗಿ ಜೀವಿಸಲು ಸೇವಿಸುವ ಆಹಾರ ತಯಾರಿಕೆಯಲ್ಲಿ ನಮಗೆ ತ್ವರಿತವಾದ, ಸುಲಭ ದಾರಿಯೇ ಬೇಕು. ಯಾರಿಗೂ ಕಷ್ಟ ಪಡಲು, ತಾಳ್ಮೆಯಿಂದ ಕಾಯಲು, ಸಮಯ ವ್ಯಯಿಸಲು ಮನಸ್ಸಿಲ್ಲ. ಇಲ್ಲೂ ಸೂಕ್ಷ್ಮವಾಗಿ ನಮ್ಮನ್ನು ನಿಯಂತ್ರಿಸುತ್ತಿರುವುದು ನಮ್ಮ ಅಸಹಿಷ್ಣು ಮನವೇ ಎಂದನ್ನಿಸುತ್ತದೆ.
ಎತ್ತ ನೋಡಿದರೂ ಇಂದು ಜಗತ್ತು ಬಹು ಮಟ್ಟಿಗೆ ಅಸಹಿಷ್ಣುತೆಯಿಂದ ಕೂಡಿದೆ. ಎಲ್ಲರೂ ಕೆಲ ಮಟ್ಟಿಗೆ ಅಸಹಿಷ್ಣುತಾವಾದಿಗಳಾಗಿದ್ದೇವೆ. ಈ ಅಸಹಿಷ್ಣುತೆ ಎಂಬುದು ಕೇವಲ ಎರಡು ಕೋಮುಗಳ ನಡುವೆಯೋ, ಇಲ್ಲ ಜಾತಿಗಳ ನಡುವೆಯೋ ಇರುವುದಂತಹದಲ್ಲ. ಮಾನವನ ಸ್ವಭಾವದಲ್ಲೇ ಸುಪ್ತವಾಗಿರುವಂತಹದ್ದು. ಇಂದಿನ ನಮ್ಮ ಜೀವನ ಶೈಲಿಯಿಂದಾಗಿ, ಮನುಷ್ಯ – ಮನುಷ್ಯನ ನಡುವೆ ಅಸಹಿಷ್ಣುತೆ ತಲೆ ಎತ್ತಿದೆ. ಇದನ್ನು ಬಡಿದೋಡಿಸುವುದು ನಮ್ಮ ಕೈಯಲ್ಲೇ ಇದೆ ಧಾವಂತದ, ಯಾಂತ್ರಿಕ ಬದುಕನ್ನು ತ್ಯಜಿಸಿ ಎಲ್ಲರೂ ಸರಳವಾಗಿ, ಸಜ್ಜನಿಕೆಯಿಂದ ಕೂಡಿದವರಾಗಿ ಧ್ಯಾನ, ಯೋಗ, ಪರೋಪಕಾರ ಹಾಗೂ ಮನಸ್ಸನ್ನು ಉಲ್ಲಾಸಗೊಳಿಸುವ ಹವ್ಯಾಸ ಚಟುವಟಿಕೆಗಳನ್ನು ಜೀವನದಲ್ಲಿ ಆದಷ್ಟು ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು. ವಿಶ್ವಕ್ಕೇ ಶಾಂತಿ ಮಂತ್ರವನ್ನು ಕೊಟ್ಟ ನಮ್ಮ ಋಷಿಗಳ ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯ ವಾಕ್ಯವನ್ನು ಆದರ್ಶವಾಗಿಟ್ಟುಕೊಂಡು ನಮ್ಮ ಮುಂದಿನ ಪೀಳಿಗೆಯನ್ನು ಸಚ್ಚಾರಿತ್ರ್ಯವಂತರನ್ನಾಗಿ, ಉದಾರಿಗಳಾಗಿ, ಸಹಿಷ್ಣುಗಳಾಗಿ ಬೆಳಸಬೇಕಾಗಿರುವುದು ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿಯಾಗಿದೆ. ಗೀತಾಚಾರ್ಯನಾದ ಭಗವಾನ್ ಶ್ರೀ ಕೃಷ್ಣ, ಶಂಕರ, ಬುದ್ಧ, ಮಹಾವೀರ, ವಿವೇಕಾನಂದ ಇಂತಹ ಜಗದ್ಗುರುಗಳ ಆದರ್ಶವನ್ನೂ, ನಮ್ಮ ಉದಾತ್ತ ಸಂಸ್ಕೃತಿಯ ಪರಿಚಯವನ್ನು ಮಕ್ಕಳಿಗೆ, ಯುವ ಪೀಳಿಗೆಗೆ ಮಾಡಿಕೊಟ್ಟು ಅವರಲ್ಲಿ ದೇಶಾಭಿಮಾನ ಜಾಗೃತಗೊಳಿಸಿ ಯಾವ ರೀತಿಯಿಂದಲೂ ಅಸಹಿಷ್ಣುಗಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.